. ಕೂಲಿ ನೇಯುವ ನೇಕಾರ : ಈ ನೇಕಾರ ಹತ್ತಿರ ದುಡಿಯುವ ಬಂಡವಾಳ ಇರುವುದಿಲ್ಲ. ಆ ಕಾರಣದಿಂದಾಗಿ ಇವರು ಬೇರೆಯವರ ಕಡೆಗೆ ಹೋಗಿ ಅವರ ಮನೆಯಲ್ಲಿ ನೇಯಬೇಕಾಗುತ್ತದೆ. ಇಲ್ಲವೆ ತನ್ನ ಮನೆಗೆ ಜ್ವಾಕಿ ತಂದು ನೇಯಬೇಕಾಗುತ್ತದೆ. ಹೀಗೆ ದುಡಿಯಿಸಿಕೊಳ್ಳುವವರನ್ನು ಯಜಮಾನ್‌ ನೇಕಾರನೆಂದು ಹಾಗೂ ‘ಧಣಿ’, ಸಾಹುಕಾರನೆಂದು ಗುರುತಿಸುತ್ತಾರೆ. ಈ ಬಗೆಯ ಉತ್ಪಾದನೆಯಲ್ಲಿ ದುಡಿಯುವ ನೇಕಾರನಿಗಿಂತ ದುಡಿಯಿಸಿಕೊಳ್ಳುವ ಸಾಹುಕಾರನಿಗೆ ಹೆಚ್ಚು ಆದಾಯ ‘ಧಣಿ’ಯು ನೇಕಾರನಿಗೆ ಎಲ್ಲ ಹಂತಗಳಲ್ಲಿ ತಯಾರಿಸಿದ ಜೇಡಕಿಯ ಎಲ್ಲ ಸರಕುಗಳನ್ನು ಒದಗಿಸಿಕೊಡುತ್ತಾನೆ. ಅದರ ಸಹಾಯದಿಂದ ನೇಕಾರ ನೇಯ್ದು ಪಕ್ಕಾ ಮಾಲು (ಖಣಗಳು) ಮಾಡಿ ಒಂದು ಹೊರಿಗೆ ರೂ. ಇಂತಿಷ್ಟು ಎಂದು ಕೂಲಿ ಪಡೆಯುತ್ತಾನೆ. ಈ ನೇಕಾರನ ಮೇಲೆ ಯಜಮಾನನು ಮಗ್ಗಕ್ಕೆ ಅವನು ನೇಯುವ ಶಕ್ತಿಯ ಮೇಲೆ ಹೆಚ್ಚಾಗಿ ವಿಶ್ವಾಸದ ಮೇಲೆ ಕನಿಷ್ಟ ಪಕ್ಷ ಹತ್ತು ಸಾವಿರ ರೂಪಾಯಿಯಿಂದ ಹದಿನೈದು ಸಾವಿರ ರೂಪಾಯಿಗಳವರೆಗೆ ಬಾಕಿ (ಸಾಲ) ಕೊಟ್ಟಿರುತ್ತಾನೆ.

. ಮುಂಗಡ ನೇಕಾರ : ಈ ಪದ್ಧತಿಯಲ್ಲಿ ಇಲ್ಲಿಯೂ ಕೂಡ ಯಜಮಾನ ನೇಕಾರ ಅಥವಾ ‘ಧಣಿ’ಯ ಪಾತ್ರವೇ ಇರುತ್ತದೆ. ಈ ಬಗೆಯ ಉತ್ಪಾದನೆಯಲ್ಲಿ ಮೇಲು ನೋಟಕ್ಕೆ ಸಾಹುಕಾರ ನೇಕಾರರಿಗೆ ಎಲ್ಲ ಕಚ್ಚಾ ಮಾಲನ್ನು ಮುಂಗಡ (ಅಡ್ವಾನ್ಸ್‌) ಕೊಟ್ಟು ಕೂಲಿಯ ನೇಕಾರನಿಗಿಂತಲು ಹೆಚ್ಚು ಬಾಕಿ ಕೊಟ್ಟಿರುತ್ತಾನೆ. ಕನಿಷ್ಟ ಒಂದು ಮಗ್ಗದ ಮೇಲೆ ರೂಪಾಯಿ ಇಪ್ಪತ್ತು ಸಾವಿರ ಸಾಲ ಕೊಟ್ಟಿರುತ್ತಾನೆ. ಒಂದು ಕುಟುಂಬಕ್ಕೆ ಒಂದರಿಂದ ನಾಲ್ಕು ಮಗ್ಗಗಳವರೆಗೆ ಮುಂಗಡ ಕೊಡುತ್ತಾನೆ. ಇತ್ತಿತ್ತಲಾಗಿ ಈ ಹಣದ ಭದ್ರತೆಗಾಗಿ ನೇಕಾರರು ವಾಸವಾಗಿರುವ ಮನೆಯನ್ನು ಮಾಲಿಕ ತನ್ನ ಹೆಸರಿನಲ್ಲಿ ಬರೆಯಿಸಿಕೊಂಡಿರುತ್ತಾನೆ. ನೇಯಿಸಿಕೊಳ್ಳುವ ಮಾಲಿಕ ಮನೆ ಅಥವಾ ಹೊಲ ಇದ್ದವರಿಗೆ ಮಾತ್ರ ಮುಂಗಡ ಮಗ್ಗಗಳನ್ನು ಕೊಡುತ್ತಾನೆ.

ಕೂಲಿ ನೇಕಾರನಿಗಿಂತ ಸ್ವಲ್ಪ ಪ್ರಮಾಣದಲ್ಲಿ ಅವನಿಗೆ ಕಚ್ಚಾ ಮಾಲಿನಲ್ಲಿ ಉಳಿತಾಯವಾಗುವಂತೆ ಮತ್ತು ಜೇಡಕಿ ಕೂಲಿಯನ್ನು ಮುಂಗಡವಾಗಿ ಕೊಟ್ಡಿರುತ್ತಾನೆ ನಂತರ ಅವನಿಂದ ಪಕ್ಕಾ ಮಾಲು (ಖಣಗಳು) ಹೊರಿಗಳನ್ನು ಪಡೆಯುತ್ತಾನೆ. ಇದಕ್ಕೆಲ್ಲ ತನ್ನಲ್ಲಿ ಹಾಗೂ ಮುಂಗಡ ನೇಯುವ ನೇಕಾರನಲ್ಲಿ ಪಟ್ಟಿಕಾಗದ (ಪಾಸಬುಕ್‌) ಇಟ್ಟಿರುತ್ತಾನೆ. ಒಂದು ವರ್ಷಕ್ಕೊಮ್ಮೆ ಅಂದರೆ ಪ್ರತಿವರ್ಷ (೧ನೇ ಏಪ್ರಿಲ್‌ದಿಂದ ೩೧ ಮಾರ್ಚ್‌‌ದವರೆಗೆ)ಕ್ಕೊಮ್ಮೆ ಲೆಕ್ಕ ಪತ್ರ ಮಾಡಿ ಹಾಗೂ ಅವನಿಂದ ಬಂದ ಪಕ್ಕಾ ಮಾಲು ಎಷ್ಟು ಎಂಬುದನ್ನು ನೋಡುತ್ತಾನೆ. ಅಲ್ಲದೇ ಅವನಿಗೆ ಕೊಟ್ಟ ಸಾಲದಲ್ಲಿ ಎಷ್ಟು ಮುಟ್ಟಿದೆ ಎಂದು ತಾನು ತಿಳಿದು ಅವನಿಗೂ ತಿಳಿಸುತ್ತಾನೆ. ಈ ಸ್ಥಿತಿಯಲ್ಲಿಯೂ ನೇಕಾರರು ಉದ್ಧಾರವಾಗುವುದಿಲ್ಲ. ಅವರು ಅಭಿವೃದ್ಧಿ ಹೊಂದುವುದಂತೂ ತಿರುಕನ ಕನಸಿನ ಮಾತು.

“The Master weavers are exploiting the ignorance of the poor weavers”, ಈ ಬಗೆಯ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ನೇಕಾರರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಬೇರೆ ಮಾರ್ಗವನ್ನು ಅನುಸರಿಸುವುದು ಉಚಿತ. ಒಟ್ಟಾರೆ ಇವರ ಸ್ಥಿತಿ “ಮುಂಜಾನೆ ಸತ್ತರೆ ಮಣ್ಣಿಗಿಲ್ಲ ಸಂಜೆ ಸತ್ತರೆ ಎಣ್ಣೆಗಿಲ್ಲ” ಎನ್ನುವಂತೆ ಇದೆ. ಇವರಿಗೆ ಯಾವ ಭದ್ರತೆಯೂ ಇರುವುದಿಲ್ಲ.

. ನೇಕಾರನ ಸ್ವಂತ (ರೋಖಡಿ) ಉತ್ಪಾದನೆ : ಈ ಬಗೆಯ ಉತ್ಪಾದನೆಯಲ್ಲಿ ನೇಕಾರರು ಸ್ವಂತ ಬಂಡವಾಳ ಹೊಂದಿರಬೇಕು. ತಾವೇ ಎಲ್ಲ ಬಗೆಯ ಕಚ್ಚಾ ಮಾಲುಗಳನ್ನು ಖರೀದಿಸಿ ಎಲ್ಲ ಹಂತಗಳಲ್ಲಿ ತಾವೇ ಸ್ವತಃ ದುಡಿದು ಇಲ್ಲವೆ ಬೇರೆಯವರಿಗೆ ಕೊಟ್ಟು ಅವುಗಳನ್ನು ತಾನು ತಂದು ಖಣಗಳು ಉತ್ಪಾದನೆಯನ್ನು ಮಾಡುತ್ತಾನೆ. ಅಲ್ಲದೇ ತಾನೇ ಮಾರಾಟದ ವ್ಯವಸ್ಥೆಯಲ್ಲಿ ತರುವ ಕೊಡುವ ಜವಾಬ್ದಾರಿ ಹೊರಬೇಕಾಗುತ್ತದೆ. ಇದಕ್ಕೆಲ್ಲ ಅವನ ಸಾಂಪತ್ತಿಕ ಸ್ಥಿತಿ ಮಾತ್ರ ಚೆನ್ನಾಗಿ ಇರಬೇಕಾಗಿರುವುದು ಅನಿವಾರ್ಯ. ವರ್ಷದಲ್ಲಿ ಕೆಲವು ಕಾಲ ಬಿನ್‌ಸೀಝನ್‌ದಲ್ಲಿ ತಾನು ತಯಾರಿಸಿದ ಖಣಗಳನ್ನು ಹಾಗೂ ಅದಕ್ಕೆ ಬೆಲೆ ಬರುವವರೆಗೆ ತನ್ನಲ್ಲಿ ಕಾಯ್ದಿರಿಸಿಕೊಂಡಿರಬೇಕಾಗುತ್ತದೆ. ಅಲ್ಲದೇ ತನ್ನ ಎಂದಿನ ಉತ್ಪಾದನೆಯನ್ನು ಕುಂಠಿತಗೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲ ಮಾರುಕಟ್ಟೆಯ ಕಚ್ಚಾ ಮಾಲುಗಳ ಧಾರಣೆ ಏರಿಳಿತ ಹಾಗೂ ತಯಾರಿಸಿದ ಸರಕಿಗೆ ಬೆಲೆ ಬಾರದೇ ಇದ್ದಾಗ ಮತ್ತು ದೈನಂದಿನ ಉತ್ಪಾದನೆ ಮಾಡಬೇಕಾಗುವುದರಿಂದ ಎಲ್ಲ ರೀತಿಯ ಹೊಡೆತಗಳನ್ನು ತಾಳಿಕೊಳ್ಳಲಾರದೇ ಇಂಥ ಸ್ವಂತ ಉತ್ಪಾದನೆ ಮಾಡುವ ನೇಕಾರರು ಹಾನಿಗೊಳಗಾಗುವುದೇ ಹಚ್ಚು. ಇಂಥ ಉತ್ಪಾದಕರನ್ನು ರೋಖಡಿ ನೇಯುವ ಅಥವಾ ಸ್ವಂತ ಉತ್ಪಾದನೆ ಮಾಡುವ ನೇಕಾರನೆಂದು ಗುರುತಿಸುತ್ತಾರೆ.

. ಅರೆ ಸರ್ಕಾರಿ ತೀವ್ರ ಅಭಿವೃದ್ಧಿ ಯೋಜನೆ ಅಡಿ ಹಾಗೂ ಸಹಕಾರ ಸಂಘಗಳಲ್ಲಿ ದುಡಿಯುವ ನೇಕಾರರು : ಇದೊಂದು ಸರಕಾರಿ ಸ್ವಾಮ್ಯದ ಉದ್ದಿಮೆ ಈ ನಿಗಮದ ಉತ್ಪಾದನೆಯು ಕೂಡ ಸಹಕಾರಿ ಸಂಘಗಳ ವಿಧಾನದಂತೆ ನಡೆಯುತ್ತದೆ. ಇಲ್ಲಿಯೂ ನೇಕಾರನಿಗೆ ಕಚ್ಚಾ ಮಾಲನ್ನು ಮರಳಿ ಪಡೆದುಕೊಂಡು ಮಜೂರಿಯನ್ನು ಕೊಡುತ್ತಾರೆ. ಹತ್ತಿ ಬಟ್ಟೆ, ರೇಷ್ಮೆ, ಚಮಕ, ಪಾಲಿಸ್ಟರ್ ಬಟ್ಟೆಗಳನ್ನು ಇಲ್ಲಿ ಉತ್ಪಾದನೆ ಮಾಡಲಾಗುತ್ತದೆ. ನಿಗಮವು ತಾನು ತಯಾರಿಸಿದ ಬಟ್ಟೆಗಳನ್ನು ಮಾರಾಟ ಮಾಡುವುದಕ್ಕಾಗಿ ನಗರ ಪಟ್ಟಣಗಳು ‘ಪ್ರಿಯದರ್ಶಿನಿ’ ಎಂಬ ಹೆಸರಿನಲ್ಲಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಿ ಮಾರುಕಟ್ಟೆ ಮಾಡುತ್ತವೆ.

ನಿಗಮವು ತನ್ನಲ್ಲಿ ದುಡಿಯುವ ನೇಕಾರನಿಗೆ ವಸತಿ ಸೌಲಭ್ಯವನ್ನು ‘ಡಚ್‌’ ಅಥವಾ ‘ಹುಡ್ಕೋ’ದ ನೆರವಿನಿಂದ ಮಾಡುತ್ತದೆ. ಹೀಗೆ ವಸತಿ ನಿರ್ಮಾಣಕ್ಕಾಗಿ ಮಾಡಿದ ವೆಚ್ಚವನ್ನು ನೇಕಾರರಿಗೆ ದೀರ್ಘಾವಧಿ ಸಾಲವನ್ನಾಗಿ ಪರಿಗಣಿಸಿ ನೇಕಾರರಿಂದ ಪ್ರತಿ ಸೀರೆಗೆ ಅಥವಾ ಖಣದ ಹೊರೆಗಳಿಗೆ ಇಂತಿಷ್ಟು ರೂಪಾಯಿಗಳೆಂದು ಸಾಲ ಮರುಪಾವತಿ ಮಾಡಿಕೊಳ್ಳುತ್ತದೆ. ಸಹಕಾರಿ ಸಂಘಗಳಲ್ಲಿರುವ ಸೌಲಭ್ಯಗಳು ಇಲ್ಲಿ ದುಡಿಯುವ ನೇಕಾರನಿಗೆ ದೊರೆಯುವುದಿಲ್ಲ. ಇಲ್ಲಿ ಮಜೂರಿಯು ಕಡಿಮೆ ಸಕಾಲಕ್ಕೆ ಸರಿಯಾಗಿ ಕಚ್ಚಾ ಮಾಲನ್ನು ಪೂರೈಸುವುದಿಲ್ಲ. ಇದರಿಂದ ನೇಕಾರರ ಉತ್ಪಾದನೆ ಕುಂಠಿತಗೊಂಡು ಆದಾಯ ಕಡಿಮೆಯಾಗುತ್ತದೆ. ಇಲ್ಲಿ ತಾಂತ್ರಿಕ ತಜ್ಞರೇ ಹೆಚ್ಚಾಗಿ ಇರುವುದರಿಂದ ಪ್ರಾತ್ಯಕ್ಷಿಕವಾಗಿ ಉತ್ಪಾದನೆಯಲ್ಲಿ ತೊಡಗುವ ನೇಕಾರ ಕುಂದು ಕೊರತೆಗಳನ್ನು ನಿವಾರಿಸುವ ಸಲುವಾಗಿ ಮಾಡುವ ಪ್ರಯತ್ನ ಕಡಿಮೆ. ಇಲ್ಲಿ ಎಲ್ಲವೂ ಪ್ರಧಾನ ಕಚೇರಿಯಿಂದಲೇ ನಡೆಯುತ್ತಿರುವುದರಿಂದ ಪ್ರೊಜೆಕ್ಟ್‌ ಆಫೀಸರುಗಳ ಅಧಿಕಾರ ಕಡಿಮೆ ಇರುವುದರಿಂದ ಇದರ ನೇರ ಪರಿಣಾಮ ನೇಕಾರರ ಮೇಲೆ ಆಗುತ್ತದೆ. ಇಲ್ಲಿ ಪ್ರಮುಖವಾಗಿ ಉತ್ಪಾದನಾ ವೆಚ್ಚಕ್ಕಿಂತಲೂ ಆಡಳಿತಾತ್ಮಕ ವೆಚ್ಚವೇ ಅಧಿಕ ಕಡಿಮೆ ಇರುವುದರಿಂದ ದುಡಿಯುವ ಕೈಗಳು ಪುನಃ ಬರಿದಾಗುತ್ತವೆ. ಇದರಿಂದ ನಮ್ಮ ಜಿಲ್ಲೆಯ ನೇಕಾರರಿಗಷ್ಟೇ ಅಲ್ಲ ರಾಜ್ಯದ ಇತರ ನೇಕಾರರಿಗೂ ಲಾಭವಾಗುವುದಿಲ್ಲ ಇಲ್ಲಿಯೂ ನೇಕಾರರು ಅಭಿವೃದ್ಧಿ ಕಾಣುವುದೂ ಕಷ್ಟವಾಗಿದೆ.

ಒಟ್ಟಾರೆ ನೇಕಾರ ಸಹಕಾರಿ ಸಂಘಗಳು ತನ್ನ ಸದಸ್ಯ ನೇಕಾರರಿಗೆ ಮುಂಗಡವಾಗಿ ಕಚ್ಚಾ ಮಾಲನ್ನು ಪೂರೈಸಿ ಉತ್ಪಾದಿಸಿದ ಸರಕುಗಳನ್ನು ಮರಳಿ ಪಡೆದುಕೊಂಡು ಕೂಲಿ ಕೊಡುತ್ತವೆ. ಇದರಿಂದ ನೇಕಾರನಿಗೆ ಉತ್ಪಾದನೆಯಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಲಿಕ್ಕೆ ಅನುಕೂಲವಾಗುತ್ತದೆ. ಮತ್ತು ಸರಕಾರಗಳು ಸಕಾಲಕ್ಕೆ ರೂಪಿಸುವ ಸೌಲಭ್ಯಗಳು ದೊರಕಲು ಸಾಧ್ಯವಾಗುತ್ತದೆ. ಇದರಿಂದ ನೇಕಾರನಿಗೆ ಮುಪ್ಪಾವಸ್ಥೆಯಲ್ಲಿ ಪ್ರಯೋಜನವಾಗುತ್ತದೆ.

ಸಹಕಾರಿ ಸಂಘಗಳು ಕೂಡ ಉತ್ಪಾದನೆಗೆ ಬೇಕಾಗುವ ಕಚ್ಚಾ ಮಾಲನ್ನು ತೆರೆದ ಮಾರುಕಟ್ಟೆಯಲ್ಲಿಯೇ ಖರೀದಿಸಬೇಕಾಗುತ್ತದೆ. ವ್ಯಾಪಾರಸ್ಥರೂ ಹಾಗೂ ಮಿಲ್ಲುಗಳಿಂದ ದೊರೆಯುವ ಕಮೀಶನ್‌ ತಾವೇ ಪಡೆದುಕೊಂಡು ಮಾರಾಟದ ಬೆಲೆಯಲ್ಲಿ ಇತರ ಕರ (ಟ್ಯಾಕ್ಸ್‌) ಹಾಗೂ ತಮ್ಮ ಲಾಭಾಂಶವನ್ನು ಸೇರಿಸುವುದರಿಂದ ಮಾರಾಟದ ಬೆಲೆ ಹೆಚ್ಚಾಗುತ್ತದೆ. ಇದರಿಂದ ಕಚ್ಚಾ ವಸ್ತುಗಳ ಬೆಲೆಗಳೂ ಹೆಚ್ಚಾಗಿ ಹಾಗೂ ಉತ್ಪಾದನಾ ವೆಚ್ಚವೂ ಹೆಚ್ಚಾಗಿ ಸಹಕಾರಿ ಸಂಘಗಳಿಗೆ ಕಡಿಮೆ ಲಾಭವಾಗುತ್ತದೆ. ಇಲ್ಲವೇ ಹಾನಿಯಾಗುವುದು ಹೆಚ್ಚುತ್ತದೆ. ಸರಿಯಾದ ಮಾರುಕಟ್ಟೆಯ ವ್ಯವಸ್ಥೆ ಇಲ್ಲದಿರುವುದರಿಂದ ಮಾರಾಟ ಕಡಿಮೆಗೊಂಡು ಪಕ್ಕಾ ಮಾಲು ಶೇಖರಣೆಗೊಂಡು ಸಹಕಾರಿ ಸಂಘಗಳು ತೀವ್ರ ಆರ್ಥಿಕ ತೊಂದರೆಗೊಳಗಾಗುತ್ತವೆ. ನೇಕಾರ ಕಾರ್ಮಿಕರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಬೇಕು ವಿನಃ ಸರಕಾರದಿಂದ ಪುಕ್ಕಟೆ ಸೌಲಭ್ಯಗಳು ಹಾಗೂ ಯೋಜನೆಗಳು ದೊರಕಕೂಡದು. ದುಡಿಯುವ ಕೈಗಳಿಗೆ ಕೆಲಸಗಳು ದೊರೆಯುವಂತಿರಬೇಕು. ಇಲ್ಲಿ ಸಂಘದ ಆಡಲಿತದಲ್ಲಿ ದಕ್ಷತೆ, ಪ್ರಮಾಣಿಕತೆ, ನಿಸ್ವಾರ್ಥ ಸೇವಾ ಮನೋಭಾವನೆ, ಸಮರ್ಪಣಾ ಭಾವ ಇದ್ದಾಗ ಅಂಥ ನೇಕಾರ ಸಹಕಾರಿ ಸಂಘಗಳು ಬದುಕಬಲ್ಲವು. ಪ್ರತಿಯೊಂದು ಸಂಘದ ಸದಸ್ಯನಿಗೆ ತನ್ನ ಸಹಕಾರಿ ಸಂಘದ ಕುರಿತಾಗಿ ಅಭಿಮಾನವಿರಬೇಕು. ಇಲ್ಲಿ ದಕ್ಷ ಆಡಳಿತಾಧಿಕಾರಿ ಅಥವಾ ಅಧಿಕಾರಿಗಳು ಸೂಕ್ತ ಮಾರ್ಗದರ್ಶನವಿಲ್ಲದ ಕಾರಣ ಅಪ್ರಾಮಾಣಿಕತೆಯಿಂದಾಗಿ ಹುಟ್ಟಿದ ಸಂಘ-ಸಂಸ್ಥೆಗಳು ಬೇಗನೇ ಕಣ್ಣು ಮುಚ್ಚುತ್ತವೆ.

ಮೊದಲಿನ ಮೂರು ವರ್ಗಗಳ ಜನ ನೇಕಾರರು ಅಸಂಘಟಿತ ವಲಯದಲ್ಲಿ ತಮ್ಮ ಬದುಕು ಸಾಗಿಸುವವರು. ನಾಲ್ಕನೇ ವರ್ಗದ ನೇಕಾರರು ಸಂಘಟಿತ ವಲಯದಲ್ಲಿ ಇರುವರು. ನಮ್ಮಲ್ಲಿ ಅಸಂಘಟಿತ ವಲಯದಲ್ಲಿಯೇ ಶೇಕಡಾ ೯೮ ಜನ ಇರುತ್ತಾರೆ. ೨ ಪ್ರತಿಶತ ನೇಕಾರರು ಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಸಂಘಟಿತ ವಲಯದಿಂದ ಗುಳೇದಗುಡ್ಡದ ದಿ. ಶರಣಪ್ಪ ಹಟ್ಟಿ, ಹನುಮಂತಪ್ಪ ಬೆಣಕಲ್ಲ ಹಾಗೇ ಅಸಂಘಟಿತ ವಲಯದಿಂದ ಶ್ರೀ ಟೋಪಣ್ಣಾ ತಾಳದ ಇವರು ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಜರುಗಿದ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಈ ನೇಕಾರಿಕೆಯ ಸೂಕ್ಷ್ಮತೆಯನ್ನು ಪಣಕ್ಕಿಟ್ಟು ನೇಕಾರಿಕೆಯ ಈ ಕಲೆಯನ್ನು ಪ್ರದರ್ಶಿಸಿ ಬಂದಿದ್ದಾರೆ. ಅಲ್ಲದೇ ದೆಹಲಿ ಹತ್ತಿರವಿರುವ ಸೂರಜ್‌ ಕುಂಡದಲ್ಲಿ ರಾಷ್ಟ್ರ ಕೈಗಾರಿಕಾ ಮೇಳದಲ್ಲಿ ಭಾಗವಹಿಸಿ ಗುಳೇದಗುಡ್ಡ ಕೈಮಗ್ಗದ ಖಣಗಳ ಖ್ಯಾತಿ ಹೆಚ್ಚಿಸಲು ಮತ್ತು ಪ್ರದರ್ಶಿಸಲು ಶ್ರಮಿಸಿದ್ದಾರೆ.

ಗುಳೇದಗುಡ್ಡ ಒಂದೇ ನಗರದಲ್ಲಿ ೧೯೮೩ರಲ್ಲಿ ೮ ಸಾವಿರ ಕೈಮಗ್ಗಗಳು ಇದ್ದವೆಂದು ಸರಕಾರಿ ಅಧಿಕಾರಿಗಳ ಲೆಕ್ಕ. ಈ ಉದ್ಯೋಗದಲ್ಲಿ ತೊಡಗಿಸಿಕೊಂಡವರು ೫೦ ಸಾವಿರ ಈ ಕಾಯಕದಲ್ಲಿ ಯಾವುದೇ ಜಾತಿ, ಮತ, ಪಂಥ, ಕುಲ, ಗೋತ್ರ ಇವಾವುದರ ಪ್ರಭಾವ ಇಲ್ಲದೇ ಬೇಧ ಭಾವವಿಲ್ಲದೆ ಇಲ್ಲಿಯ ಪ್ರಮುಖ ನೇಕಾರ ಜನಾಂಗಗಳೆಂದರೆ ಕುರುಹಿನಶೆಟ್ಟಿ, ದೇವಾಂಗ, ಸಾಳಿ, ಸ್ವಕುಳಸಾಳಿ, ಸಾಮಾಸಾಳಿ, ಪದ್ಮಸಾಳಿ ಹಾಗೂ ಪಟ್ಟಗಾಳಿ, ಪಟ್ಟೇಗಾರ, ಮುಸ್ಲಿಂ, ಕ್ರಿಶ್ಚಿಯನ್‌, ಭಜಂತ್ರಿ, ವಾಲ್ಮೀಕಿ ಹಾಗೂ ಇತರೆ ಲಿಂಗಾಯಿತ ಜನಾಂಗದವರು. ಈ ಎಲ್ಲ ವರ್ಗದ ಜನ ತಮ್ಮ ಮೂಲ ವೃತ್ತಿ ನೇಕಾರಿಕೆ ಎನ್ನುವಷ್ಟು ಹೊಂದಾಣಿಕೆಯ ಸಹಬಾಳ್ವೆ ಮಾಡುತ್ತಿದ್ದಾರೆ.

ಒಟ್ಟಾರೆ ನೇಕಾರ ವೃತ್ತಿಯವರು ಹುಟ್ಟಿದ್ದು ಸಾಲದಲ್ಲಿ ಸಾಯುವುದೂ ಸಾಲದಲ್ಲಿ ಎನ್ನುವ ಸತ್ಯ ಸಂಗತಿ ವಾಡಿಕೆಯಾಗಿದೆ. ಇತ್ತೀಚೆಗೆ ಕೆಲವೇ ಜಾಣ ನೇಕಾರರು ಧಣಿಗಳ ಕಪಿಮುಷ್ಟಿಯಿಂದ ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯತೆ ಅನುಭವಿಸುತ್ತಿದ್ದಾರೆ. ಹೆಚ್ಚು ಜನ ಇನ್ನೂ ಜೀತದಾಳುಗಳಂತೆ ತಲೆ ತಲಾಂತರದಿಂದ ಧಣಿಗಳ ಆಶ್ರಯದಲ್ಲಿ ನಿರಾಶ್ರಿತರಾಗಿದ್ದಾರೆ.

ಇಲ್ಲಿನ ಚಿಕ್ಕ ಕುಟುಂಬಗಳಲ್ಲಿ ಕನಿಷ್ಠ ಒಂದು ಮಗ್ಗವಿದ್ದರೆ ಮಧ್ಯಮ ವರ್ಗದ ಕುಟುಂಬಗಳಲ್ಲಿ ೨ ಅಥವಾ ೩ ಮಗ್ಗಗಳು ಹಾಗೂ ದೊಡ್ಡ ಕುಟುಂಬಗಳಲ್ಲಿ ೪ ಅಥವಾ ೬ ಮಗ್ಗಗಳು ಇರುವುದು ಒಂದು ವಾಡಿಕೆ. ಅಲ್ಲದೇ ಉತ್ತಮ ದುಡಿಮೆಯ ನೇಕಾರರ ಕುಟುಂಬದ ಸದಸ್ಯರನ್ನು ಧಣಿಗಳು ತಮ್ಮ ಆಶ್ರಯಕ್ಕೆ ಸೆಳೆದುಕೊಳ್ಳಲು ಇಲ್ಲವೆ ಬಂಡವಾಳ ಶಾಹಿಗಳ ಮಧ್ಯ ಸ್ಪರ್ಧೆಯೂ ನಡೆಯುತ್ತದೆ. ಇಲ್ಲಿ ಧಣಿಗಳದ್ದೇ ಕೈಮಗ್ಗ ಹಾಗೂ ಪಾವರಲೂಮ್‌ಗಳ ಸಂಘವು ಇದೆ. ಆದರೆ ಇಲ್ಲಿ ಖಣಗಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಲು ಮಾತ್ರ ಇದರ ಬಾಗಿಲು ತೆರೆದಿರುತ್ತದೆ. ನೇಕಾರರ ಮೊದಲಿನ ಸಾಲಕ್ಕಿಂತ ಇಪ್ಪತ್ತು ಇಪ್ಪತ್ತೈದು ಸಾವಿರ ಹೆಚ್ಚಿಗೆ ಕೊಟ್ಟು ಮೊದಲು ತಮ್ಮ ಆಶ್ರಯಕ್ಕೆ ಸೆಳೆದುಕೊಳ್ಳುತ್ತಾರೆ. ಇಲ್ಲಿಯ ತಮ್ಮ ಧಣಿಗಳ ಹೆಚ್ಚುಗಾರಿಕೆಯ ಪ್ರದರ್ಶನಗೊಳ್ಳುತ್ತದೆ. ನೇಕಾರರಿಗೆ ಅನು-ತನುಗಳಿಗೆ ಸ್ಪಂದಿಸಿ ಅವರ ಕಷ್ಟಗಳಿಗೆ ದುಡ್ಡು ಕೊಟ್ಟು ಅವರನ್ನು ಇನ್ನೂ ಜೀತದಾಳುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಇವರನ್ನು ನಂಬಿದ ನೇಕಾರರು ತಮ್ಮ ಹಾಗೂ ಹೆಂಡತಿ ಮಕ್ಕಳ ನರಗಳನ್ನು ಎಳೆದು ಸೆಳೆದು ರೇಷ್ಮೆ ಎಳೆಗಳಿಗಿಂತಲೂ ಸಣ್ಣ ಮಾಡಿಕೊಂಡು ಅವರ ಸಾಲ ಮುಟ್ಟಿಸಬೇಕು. ಇಲ್ಲವೆ ಊರು ಬಿಟ್ಟು ಬೆಂಗಳೂರು, ಮಂಗಳೂರು, ಈಚಲಕರಂಜಿಗಳಿಗೆ ದುಡಿದು ತಿನ್ನಲು ಗುಳೇ ಕಿತ್ತಬೇಕು.

ಹೀಗೆ ಕವಲು ದಾರಿಯಲ್ಲಿ ಇವರ ಬದುಕು ಜಟಕಾ ಬಂಡಿಗಿಂತಲೂ ಕಡೆಯಾಗಿ ಹಗಲು ರಾತ್ರಿಗಳೆನ್ನದೇ ದುಡಿದು ಮಾಲಿಕನಿಗೆ ಲಾಭ ಮಾಡಿಕೊಡುವುದು ಅನಿವಾರ್ಯವಾಗುತ್ತದೆ. ಅವನಿಗೆ ಸಿಗುವ ಮಜೂರಿಯಲ್ಲಿಯೇ ಹಣಗಿ ಕೆಚ್ಚಲು ಕಂಡರೆ ಸುತ್ತಲು ಪಾಗಡಿಗಳನ್ನು ಸ್ವಚ್ಛಗೊಳಿಸಿ ಅಂಟು ಹಾಕಿಕೊಡಲು ಇವೆಲ್ಲವುಗಳ ಜೊತೆ ಧಣಿಯ ಸಾಲ ಮುರಿದು ಅವನ ಕೈಗೆ ಸಿಗುವ ಮೊತ್ತ ಬಹಳ ಕಡಿಮೆಯಾಗಿ ಉಳಿದುದರಲ್ಲಿಯೇ ಹೊಟ್ಟೆ-ಬಟ್ಟೆ-ಔಷಧಿ-ಮಕ್ಕಳ ವಿದ್ಯಾಭ್ಯಾಸ, ಸಮಾಜದ ಋಣ, ಸ್ವಾಮಿ ಋಣ ತೀರಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಹಗಲು ರಾತ್ರಿಗಳನ್ನದೇ ಮಗ್ಗದ ಕುಣಿಯಲ್ಲಿ ಕುಳಿತು ಎಳೆಯೊಂದಿಗೆ ಎಳೆಗಿಂತಲೂ ಜೀವ ಸಣ್ಣ ಮಾಡಿಕೊಂಡು ಬಾಹ್ಯ ಪ್ರಪಂಚವನ್ನು ಮರೆತು ತನ್ನ ಮುಗ್ಧತೆಯಲ್ಲಿಯೇ ಜೀವನ ಸಾಗಿಸುತ್ತಾನೆ. ಅದಕ್ಕಾಗಿಯೇ “ಏಳಿಗೆ ಅಂಜಿದವನು ಜಾಡನಲ್ಲ ಮಳಿಗೆ ಅಂಜಿದವನು ರೈತನಲ್ಲ” ಎಂಬ ಗಾದೆ ಹುಟ್ಟಿಕೊಂಡಿರಲು ಸಾಕು. ಇಷ್ಟೆಲ್ಲದರ ನಡುವೆ ಮಕ್ಕಳಿಗೆ ಕಾಲೇಜು ಶಿಕ್ಷಣ ಕೊಡಿಸಬೇಕೆಂದರೆ ಡೊನೇಶನ್‌ದ ಹಾವಳಿ ಹೆಚ್ಚಾಗಿ ನೇಕಾರ ಮಕ್ಕಳಿಗೆ ಹೆಚ್ಚಿನ ಅಥವಾ ಉನ್ನತ ಶಿಕ್ಷಣವು ಒಂದು ಮರೀಚಿಕೆಯಾಗುತ್ತಿದೆ.

ಇವರ ನಿತ್ಯದ ಆಹಾರವೆಂದರೆ ಕಟಗರೊಟ್ಟಿ-ಖಾರಾ ಹಾಗೂ ಕಾರಬೇಳೆ ರೊಟ್ಟಿಯ ಮೇಲೆ ಕಲ್ಲಾನ ಹಿಂಡಿ ಅದಕ್ಕೆ ಎಣ್ಣೆ ಕೂಡ ಇರುವುದಿಲ್ಲ. ಹಸಿಮೆಣಸಿನಕಾಯಿ ಇವೆಲ್ಲ ಇವರಿಗೆ ಪೌಷ್ಟಿಕ ಆಹಾರವಾಗಿರುತ್ತದೆ. ನೇಕಾರನ ಮನೆಯಲ್ಲಿ ಹೆಂಡತಿ ಅಥವಾ ಮಕ್ಕಳು ಹೆತ್ತರೆ, ಔಷಧಿಗಾಗಿ ಅತ್ತರೆ ಇದೂ ಸಿಗದೇ ಸತ್ತರೆ ಸಾಹುಕಾರನ ಮನೆಯ ಹೊಸಲಿಯನ್ನೇ ಕಾಯಬೇಕು. ಹೀಗಾಗಿ ಇವರು ಹೊಟ್ಟೆಗೆ ಪರಮಾತ್ಮನನ್ನು ಹಾಕಿಕೊಳ್ಳುತ್ತಾರೆ. ಅಂತೆಯೇ “ನೇಕಾರ ಮಾಡುವುದು ಹೆಂಡಕ್ಕೆ ರೈತ ಮಾಡುವುದು ದಂಡಕ್ಕೆ ಬ್ರಾಹ್ಮಣ ಮಾಡುವುದು ಪಿಂಡಕ್ಕೆ” ಎಂಬ ಗಾದೆಯೂ ಹುಟ್ಟಿಕೊಂಡಿರಬೇಕು. ನೇಕಾರ ತಮ್ಮ ಮನೆಯಲ್ಲಿ ಮಕ್ಕಳ ನಾಮಕರಣಕ್ಕೆ, ತೊಟ್ಟಿಲ-ಬಟ್ಟಲ ಕಾರಣಕ್ಕೆ ಸೀಮಂತ ಕಾರಣಕ್ಕೆ ಪ್ರತಿಯೊಂದಕ್ಕೂ ಸಾಹುಕಾರನ ಹತ್ತಿರ ತಮ್ಮ ಜೀವ ಒತ್ತೆ ಇಟ್ಟು “ಸಾಲ ಮಾಡಿ ತುಪ್ಪ” ತಿನ್ನುವ ನೀತಿಯಾಗಿರುವ ಚಾರ್ವಾಕನ ಸಿದ್ಧಾಂತಕ್ಕೆ ಯಾವುದೇ ರಾದ್ಧಾಂತ ಮಾಡದೇ ಸದಾ ರಾಜೀ ಮಾಡಿಕೊಂಡಿರುತ್ತಾರೆ.

ನೇಕಾರರ ಕುಟುಂಬದ ವ್ಯವಸ್ಥೆಯನ್ನು ಮಗ್ಗದ ಮೂಲಕ ಅಳೆಯುತ್ತಿದ್ದಂತೆ ಅವರ ಕುಟುಂಬದಲ್ಲಿ ಮದುವೆಯ ವಯಸ್ಸಿಗೆ ಬಂದ ಮಗ ಅಥವಾ ಮಗಳಿಗೆ ವರ-ಕನ್ಯಾ ಕೂಡುವಾಗ ತರುವಾಗ ನೇಕಾರರ ಮನೆಯ ಇತರ ಸದಸ್ಯರು ಅಥವಾ ಅವನ ಬಂಧುಗಳು ಕೇಳುವ ಮೊದಲನೇ ಪ್ರಶ್ನೆ ನಿಮಗೆ ಗಂಡು ಹಾಗೂ ಹೆಣ್ಣು ಮಕ್ಕಳು ಎಷ್ಟು? ಅವರಿಗೆ ನೇಕಾರಿಕೆಯ ಉದ್ಯೋಗ ಬರುತ್ತದೆಯೇ? ಬಣ್ಣದ ಮನೆಯಲ್ಲಿ ನೆರವಾಗಲು ಬರುತ್ತದೆಯೇ? ನಿಮಗೆ ಮಗ್ಗಗಳು ಎಷ್ಟು? ಹೀಗೆಲ್ಲ ಪ್ರಶ್ನಿಸಿ ವರ-ಕನ್ಯಾಗಳನ್ನು ಗೊತ್ತು ಪಡಿಸುತ್ತಾರೆ. ಕಾರಣ ಮುಂದೆ ಅವರ ಸಾಲದ ಬದುಕನ್ನು ನಿಭಾಯಿಸಬೇಕಲ್ಲವೆ! ಒಂದು ವೇಳೆ ಹೆಣ್ಣು ಮಗಳು ತವರು ಮನೆಯಲ್ಲಿ ಏನೂ ಕಲಿಯದಿದ್ದರೆ ಗಂಡನ ಮನೆಗೆ ಬಂದು ಆರು ತಿಂಗಳಲ್ಲಿಯೇ ಈ ನೇಕಾರಿಕೆಯ ಉದ್ಯೋಗದಲ್ಲಿ ಪರಿಣಿತಳಾಗುತ್ತಾಳೆ. ಆಗ ಮನೆಯ ಹಿರಿಯರು ಮೀನಿಗೆ ನೀರಿನಲ್ಲಿ ಈಜು ಕಲಿಸಬೇಕೆ? ಎನ್ನುತ್ತಾರೆ. ನೇಕಾರರು ಹೆಚ್ಚಾಗಿ ತಮ್ಮ ಊರಲ್ಲಿಯೇ ಹಳೆಯ ರಕ್ತಸಂಬಂಧಿಗಳಲ್ಲಿಯೇ ಸಂಬಂಧ ಬೆಳೆಸುತ್ತಾರೆ. ಹೆಚ್ಚೆಂದರೆ ತಮ್ಮ ಊರಿಗೆ ಸಮೀಪವಿರುವ ಕಮತಗಿ, ಅಮೀನಗಡ, ಇಳಕಲ್ಲ, ಸೂಳೆಭಾವಿ, ಕೊಂಕಣಕೊಪ್ಪ, ಬೇಲೂ, ಜಾಲಿಹಾಳ, ಕೆರೂರ, ಹೆಬ್ಬಳ್ಳಿ, ಸುಳ್ಳಗೋವಿನ ಕೊಪ್ಪ, ಕಿತ್ತಲಿ, ಹಲಗತ್ತಿ, ರಾಮದುರ್ಗ, ಬನಹಟ್ಟಿ, ರಬಕವಿ, ರಾಂಪೂರ, ಮಹಾಲಿಂಗಪೂರ, ಗಿರಿಸಾಗರ, ಹುನ್ನೂರ, ಇಲ್ಲಿಯ ನೇಕಾರರ ಕುಟುಂಬದೊಂದಿಗೆ ತಮ್ಮ ಸಂಬಂಧ ಕುದಿರುಸುತ್ತಾರೆ.

ಗುಳೇದಗುಡ್ಡವು ಕೈಮಗ್ಗದ ಖಣಗಳಿಗೆ ಪ್ರಸಿದ್ಧಿ ಹೊಂದಲು ಹತ್ತು ಹಲವು ಕಾರಣಗಳಿವೆ ಅವುಗಳೆಂದರೆ ಪ್ರಮುಖವಾಗಿ:

೦೧. ಇಲ್ಲಿಯ ನೇಕಾರರ ಬದುಕು ಸಾಂಘಿಕವಾಗಿ ಇದ್ದು ಓಣಿಗೊಂದು ಮ್ಯಾಳ, ಜಾತ್ರೆ ಈ ಎಲ್ಲವುಗಳೊಂದಿಗೆ ಕಲಾರಸಿಕರಾಗಿ, ಕಲಾಕಾರರಾಗಿ ಕುರುಡು ನಂಬಿಕೆಗಳು, ದೇವರು-ದಿಂಡರು, ಆಧ್ಯಾತ್ಮಕ ಜೀವನದಿಂದ ಆಧುನಿಕತೆಗೆ ಹೊಂದಿಕೊಳ್ಳುವ ಮನಸ್ಸುಗಳು ಇರದೇ ಇರುವುದರಿಂದ ಸೀರೆ ಖಣಗಳನ್ನು ಸಾಂಪ್ರದಾಯಿಕ ಉಡಿಗೆ-ತೊಡಿಗೆ ಎಂದು ಪರಿಗಣಿಸಿರುವುದು.

೦೨. ಇಲ್ಲಿಯ ನೆಲ (ಭೂಮಿ) ಜಲ (ನೀರು) ಇವರು ತಯಾರಿಸುವ ಖಣಗಳಿಗೆ ಬೇಕಾಗುವ ಬಣ್ಣಗಳನ್ನು ಸ್ವಾಭಾವಿಕ (ನ್ಯಾಚುರಲ್‌) ಬಣ್ಣಗಳನ್ನಾಗಿ ಪರಿವರ್ತಿಸುತ್ತಿವೆ. ಇದೊಂದು ಪ್ರಕೃತಿಯ ಬಹು ದೊಡ್ಡ ಕೊಡುಗೆಯಾಗಿ ವರವಾಗಿದೆ.

೦೩. ಇವರು ನೇಕಾರಿಕೆಯನ್ನು ಯಾವುದೇ ವ್ಯಾಪಾರಿ ಮನೋಭಾವನೆಯನ್ನು ಹೊಂದದೇ ಎಷ್ಟೇ ಕಷ್ಟ ನಷ್ಟಗಳು ಬಂದರೂ ಇದೊಂದು ಕಾಯಕವೆಂದು ನಂಬಿ ಸ್ವೀಕರಿಸಿರುವುದು.

೦೪. ನೇಯುವ ಹೊಕ್ಕಿಗೆ ಬೇಕಾಗುವ ನೀಲಿ ಬಣ್ಣವನ್ನು ನ್ಯಾಚರಲ್‌ ಬಣ್ಣವಾಗಿ ಪರಿವರ್ತಿಸಿಕೊಳ್ಳುವ ಅನುಭವ ಅದನ್ನು ಬಹು ಹಂತದಲ್ಲಿ ಶ್ರಮದಿಂದ ಸಾರ್ಥಕಗೊಳಿಸಿಕೊಂಡು ಇಂದಿಗೂ “ಟ್ರೇಡ್‌ ಸೀಕ್ರೇಟ್‌” ಆಗಿ ಇಂದಿಗೂ ಇರಿಸಿಕೊಂಡಿರುವುದು ಕೂಡ ಇವರು ಗ್ಯಾರಂಟಿ ಬಣ್ಣ ಮಾಡಿ ಖಣ, ಸೀರೆಗಳಿಗೆ ಹೊಕ್ಕು ಹಾಕುವುದು.

೦೫. ಒಮ್ಮೆ ಈ ಖಣಗಳನ್ನು ಯಾವುದೇ ಹೆಣ್ಣು ಮಗಳು ಖರೀದಿಸಿ ಕುಪ್ಪಸ (ಕುಬಸ) ಹೊಲಿಸಿ ತೊಡಲು ಪ್ರಾರಂಭಿಸಿದರೆ ಆಯಿತು ಬೇರೆ ಬೇರೆ ಬಟ್ಟೆಯ ಕುಪ್ಪಸ ತೊಡಲು ಮನಸ್ಸು ಮಾಡದೇ ಇರುವುದು.

೦೬. ಈ ಖಣಗಳು ರೇಷ್ಮೆ (ಹಾಸು) ಹೊಕ್ಕು (ನೂಲು) ಹಾಗೂ ನ್ಯಾಚರಲ್‌ ಬಣ್ಣದಿಂದ ಸಿದ್ಧಗೊಳ್ಳುವುದರಿಂದ ಈ ನಮ್ಮ ಗುಳೇದಗುಡ್ಡ ಖಣಗಳನ್ನು ಯಾವುದೇ ಹೆಣ್ಣು ಮಕ್ಕಳು ತೊಟ್ಟು ಎಂಥ ಬಿಸಿಲಿನಲ್ಲಿಯೂ ಕೂಡ ಅವಳ ಮೈ ಚರ್ಮಕ್ಕೆ ಹಾಗೂ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲದಿರುವುದರಿಂದ ಇವುಗಳನ್ನೇ ತೊಡಲು ಬಯುಸುತ್ತಾರೆ.

೦೭. ಈ ಖಣದ ಕುಪ್ಪಸ ತೊಡುವ ಹೆಣ್ಣು ಮಗಳದು ಉಪ್ಪಿನ ಮೈ ಇದ್ದರೂ ಬಣ್ಣದ ಅಂದ ಕೆಡುವುದಿಲ್ಲ.

೦೮. ಇಲ್ಲಿಯ ೪, ೮, ೧೨, ೧೬, ೨೦, ೩೨, ಇಲ್ಲವೆ ೪೧ ಖಣಗಳ ಒಂದು ಹೊರಿಗೆ ಪ್ರತಿಯೊಂದು ಖಣಕ್ಕೂ ತಮ್ಮದೇ ಆಗಿರುವ ಹಿರಿಯರ ಸಿಕ್ಕಾ ಹಾಕಿ ಅಂದವಾಗಿ ಮಡಚಿ (ಗಳಿಗೆ ಹಾಕಿ) ಆಯಾ ತುಕಡಿಗಳಿಗೆ “ರಂಗ ಪಕ್ಕಾ ಮಾಲ ಗ್ಯಾರಂಟಿ” ಎಂಬ ಲೇಬಲ್‌ ಅಂಟಿಸಿ ಗ್ರಾಹಕರಿಗೆ ಅಥವಾ ರಿಟೇಲ್‌ ಹಾಗೂ ಹೋಲ್‌ಸೇಲ್‌ ಖರೀದಿಸುವ ಗಿರಾಕಿಗಳಿಗೆ ಆತ್ಮವಿಶ್ವಾಸದಿಂದ ಮಾರಾಟ ಮಾಡುತ್ತಾರೆ.

೦೯. ಈ ಇಳಕಲ್ಲ ಸೀರೆ ಹಾಗೂ ಗುಳೇದಗುಡ್ಡದ ಖಣಗಳನ್ನು ತೊಡುವ ಮಹಿಳೆಯರನ್ನು ನೋಡುವುದೇ ಒಂದು ಅಂದ ಆ ಮಹಿಳೆಯರನ್ನು ಅತ್ಯಂತ ಗೌರವಪೂರ್ಣಕವಾಗಿ ಕಾಣುತ್ತಾರೆ.

೧೦. ಪ್ರೀತಿಯಿಂದ ನೇಯ್ದ, ವಿಶ್ವಾಸದಿಂದ ಮಾರುವ, ಗೌರವದಿಂದ ಕೊಂಡು ಕೊಳ್ಳುವುದರಿಂದ ಈ ಸ್ಪರ್ಧಾತ್ಮಕ ದಿನಗಳಲ್ಲಿ ನ್ಯಾಯ ಬೆಲೆ ಖಣಗಳಿಗೆ ಬೇಡಿಕೆ ಹೆಚ್ಚಾಗಿರುವುದು.

೧೧. ಕೇಂದ್ರ ಸರಕಾರವು ಈ ಖಣಗಳ ಗುಣಮಟ್ಟ ವಿನ್ಯಾಸಗಳಿಗೆ ಅನುಗುಣವಾಗಿ ಬಣ್ಣ ಮಾಡುವ ತಂತ್ರಗಾರಿಕೆ (ಪದ್ಧತಿ) ಮನದಟ್ಟು ಮಾಡಿಕೊಂಡು ಭೌಗೋಳಿಕವಾಗಿ ಗುರುತಿಸಿ ಟ್ರೇಡ್‌ ಮಾರ್ಕ್ ಕೊಟ್ಟಿದೆ.

ನೇಕಾರರ ಬದುಕನ್ನು ಎತ್ತರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೆಲವು ಯೋಜನೆಗಳನ್ನು ಕೈಗೊಂಡಿವೆ. ಅವುಗಳಲ್ಲಿ :

. ಜಿಲ್ಲಾ ವಲಯ ಯೋಜನೆಗಳು : ಕೈಮಗ್ಗ ಉದ್ದಿಮೆಗೆ ಈ ಯೋಜನೆಯಡಿ ಸಹಕಾರ ಸಂಘಗಳ ಮೂಲಕ ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ವಾರ್ಷಿಕ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುತ್ತದೆ.

) ನಿರುದ್ಯೋಗಿ ಯುವಕರನ್ನು ನೇಕಾರಿಕೆಯಲ್ಲಿ ತೊಡಗಿಸಿ ವಿವಿಧ ನಮೂನೆಯ ಬಟ್ಟೆ ನೇಯುವಿಕೆ ಯಾರ ವಯಸ್ಸು ೧೮ ರಿಂದ ೩೫ನೇ ವಯಸ್ಸಿನವರಿಗೆ ಪ್ರತಿ ತಿಂಗಳು ರೂ. ೩೫೦/- ಶಿಷ್ಯವೇತನ ಕೊಡಲಾಗುವುದು.

) ಸಾಮೂಹಿಕ ನೇಯ್ಗೆ ಕೇಂದ್ರಗಳಲ್ಲಿ ನೇಕಾರರನ್ನು ಗುಂಪುಗೂಡಿಸಿ ಕೆಲಸ ಮಾಡಲು ಅವಕಾಶ. ಮಗ್ಗ ಪೂರ್ವ ಸೌಲಭ್ಯಗಳನ್ನು ಒದಗಿಸಿ ಮಗ್ಗಗಳಲ್ಲಿ ತರಬೇತಿ ಕೊಡುವುದು.

) ಬಣ್ಣದ ಮನೆ ಕಟ್ಟಿಸಿಕೊಳ್ಳಲು ಸಂಘದವರಿಗೆ ಸ್ವಂತ ಜಾಗ ಇರಬೇಕು. ವಿವಿದ ಬಣ್ಣದ ನೂಲು, ಗುಣಮಟ್ಟ ಕಾಪಾಡುವುದು. ಸಂಘಗಳಿಗೆ ಸ್ವಂತ ಬಣ್ಣ ಹಾಕುವ ಘಟಕ ಹೊಂದಲು ನೆರವು ನೀಡವುದು.

) ಸ್ವಂತ ಜಾಗ ಇದ್ದ ನೇಕಾರರಿಗೆ ಮನೆ ಕಟ್ಟಿಕೊಳ್ಳಲು ಹಾಗೂ ಸಂಘದ ನಿವೇಶನದಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ ಅಲ್ಲಿಯೇ ಮಗ್ಗಗಳನ್ನು ಹಾಕಿಕೊಂಡು ಮಗ್ಗದ ಪೂರ್ವಭಾವಿ ಅನುಕೂಲ.

) ಪುರಾತನ ಕಾಲದಿಂದ ಬಂದಿರುವ ಕುಣಿ ಮಗ್ಗಗಳನ್ನು ಆಧುನಿಕರಿಸಿ ಹೊಸ ನಮೂನೆಯ ಬಟ್ಟೆಗಳನ್ನು ಉತ್ಪಾದಿಸಲು ಮತ್ತೆ ಮಗ್ಗಗಳಿಲ್ಲದವರಿಗೆ ನೇಕಾರ ಸಂಘಗಳ ಮೂಲಕ ಮಗ್ಗಗಳನ್ನು ಒದಗಿಸುವುದು.

) RAP : RIP ಯೋಜನೆಗಳಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಜವಳಿ ಕ್ಷೇತ್ರದಲ್ಲಿ ವಿವಿಧ ತರಬೇತಿ, ಉಪಕರಣಗಳ ವಿತರಣೆ, ಯಂತ್ರೋಪಕರಣಗಳ ಮೇಲಿನ ೩೩.೩೩ ಅಥವಾ ಗರಿಷ್ಠ ರೂ. ೩೦೦೦/- ಸಹಾಯಧನ ನೀಡಲಾಗುವುದು. ಅಧ್ಯಯನ ಪ್ರವಾಸದ ಅವಕಾಶವಿದೆ.

) ಕೈಮಗ್ಗ ಹೊಂದಿರುವ ನೇಕಾರರು ಹಳೆಯ ಮಗ್ಗಗಳನ್ನು ಆಧುನೀಕರಿಸಿ ಮಾರುಕಟ್ಟೆಯ ಬೇಡಿಕೆಗಳಿಗೆ ಸ್ಪಂದಿಸಲು ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗುವುದು. ಇದಕ್ಕೆ ರಾಜ್ಯ ಸರ್ಕಾರದಿಂದ ಪೂರ್ಣ ಅನುದಾನವಿದೆ. ಸುಧಾರಿತ ಮಗ್ಗಗಳ ಖರೀದಿಗೆ ಸಹಕಾರಿ ಸಂಘದ ಮೂಲಕ ಸಹಾಯಧನದ ಅವಕಾಶವಿದೆ.
) ಕೈಮಗ್ಗ ಸಹಕಾರ ಸಂಘಗಳು ಉತ್ಪಾದನೆಯಲ್ಲಿ ತೊಡಗಲು ಸರ್ಕಾರದಿಂದ ದುಡಿಮೆ ಬಂಡವಾಳ ಬಡ್ಡಿ ಸಮೇತ ಸಾಲ ನೀಡಲಾಗುವುದು. ಇಲ್ಲಿ ನೋಂದಾಯಿತ ಸದಸ್ಯರುಗಳಿಗೆ ಸಂಘದ ಮುಖಾಂತರ ಪ್ರತಿ ಲೂಂ ಸ್ಕೇಲ್‌ ದರದಂತೆ ನಬಾರ್ಡಿನಿಂದ ಅರ್ಹ ಮಗ್ಗಗಳಿಗೆ ಸಾಲ ಮಂಜೂರಾತಿ.

) ಕೈಮಗ್ಗ ನೇಕಾರರಿಗೆ ಸಹಕಾರಿ ಸಂಘಗಳಲ್ಲಿ ಹೊಸತಾಗಿ ಸದಸ್ಯರಾಗಲು ಒಂದು ಷೇರಿನ ಮುಖ ಬೆಲೆ ರೂ. ೧೦೦/- ಇದ್ದು ಇದರಲ್ಲಿ ನೇಕಾರರು ರೂ. ೧೦/- ತೊಡಗಿಸಿ ಉಳಿದ ರೂ. ೯೦/-ನ್ನು ಸರ್ಕಾರ ಜಿಲ್ಲಾ ಪಂಚಾಯಿತಿ ಮೂಲಕ ಸಾಲವಾಗಿ ಕೊಟ್ಟು ಸದರಿ ಹಣವನ್ನು ೧೦ ವರ್ಷಗಳ ಸಮ ವಾರ್ಷಿಕ ಕಂತುಗಳಲ್ಲಿ ಬಡ್ಡಿ ಸಮೇತ ತುಂಬ ಬೇಕಾಗುತ್ತದೆ.

. ನೇಕಾರ ಸಹಕಾರ ಸಂಘಗಳಿಗೆ ಷೇರು ಮೊತ್ತ ಬಂಡವಾಲ ಹೂಡಿಕೆಗೆ ಅನುಕೂಲ : ಉತ್ಪಾದನಾ ಮತ್ತು ಮಾರಾಟ ಚಟುವಟಿಕೆಗಳನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಇದು ರಾಜ್ಯ ಸರ್ಕಾರದ ಕಾರ್ಯಕ್ರಮ ಆಗಿರುವುದರಿಂದ ನೇಕಾರ ಸಹಕಾರ ಸಂಘಗಳಲ್ಲಿ ಸದಸ್ಯರ ಪಾಲು ಬಂಡವಾಳದಷ್ಟು ಸರಕಾರ ಷೇರು ನೀಡುತ್ತದೆ. ಸಂಘವು ತನ್ನ ಲಾಭದಲ್ಲಿ ಸದಸ್ಯರಿಗೆ ಮಂಡಳಿ ನಿರ್ಧರಿಸಿದಂತೆ ಲಾಭಾಂಶ ನೀಡಬೇಕು.

. ಕೇಂದ್ರ ಪುರಸ್ಕೃತ ಮಿತವ್ಯಯ ಯೋಜನೆ ಅಡಿಯಲ್ಲಿ ಸಹಕಾರ ಸಂಘಗಳು : ಉತ್ಪಾದನೆಯಲ್ಲಿ ತೊಡಗಿರುವ ಸದಸ್ಯರುಗಳ ಮಜೂರಿಯಲ್ಲಿ ೮% ರಷ್ಟು ಕಡಿಮೆ ಇಲ್ಲದಂತೆ ೧೦%ಕ್ಕೆ ಮೀರದಂತೆ ಸರ್ಕಾರದ ಖಜಾನೆಗೆ ಪ್ರತಿ ತಿಂಗಳು ಕಟ್ಟಬೇಕು. ಸಂಘಗಳು ಪ್ರಸ್ತಾವನೆ ಸಲ್ಲಿಸಿದ ನಂತರ ಚಂದಾ ರೂಪದಲ್ಲಿ  ೮% ರಷ್ಟು ಮಂಜೂರು ಮಾಡಿ ಬಡ್ಡಿ ನಿಗದಿ ಮಾಡಲಿಕ್ಕೆ ರಾಜ್ಯ ಸರ್ಕಾರಕ್ಕೆ ಪಾವತಿಸಿ ಈ ಯೋಜನೆಯಯಡಿ ಹಾಗೂ ಕೇಂದ್ರ ೫೦:೫೦ ಅನುಪಾತದ ಮೇಲೆ ಕೊಡುತ್ತದೆ. ಈ ಸದಸ್ಯರ ಮತ್ತು ಸರ್ಕಾರದ ವಂತಿಕೆಯನ್ನು ೧೫ ವರ್ಷ ಅವಧಿ ಮುಗಿದ ಮೇಲೆ ಮರು ಸಂದಾಯ ಮಾಡಲಾಗುವುದು. ಸಂಘವು ನೊಂದಣಿಯಾದ ಮೇಲೆ ಒಂದು ವರ್ಷ ಅವಧಿ ಮುಗಿದ ಮೇಲೆ ಇದರಲ್ಲಿ ಪಾಲ್ಗೊಳ್ಳಬಹುದು.

ಈ ಕೈಮಗ್ಗ ನೇಕಾರರು ಕೆಲಸದ ಹಾಗೂ ವಾಸದ ಸ್ಥಳಾವಕಾಶಕ್ಕಾಗಿ ಕನಿಷ್ಠ೫೦.೫೭ಚ. ಅ. ಹಾಗೂ ಕಾರ್ಯಗಾರ ಕನಿಷ್ಠ ೨೦೦.೨೪೦ ಚ. ಅ. ಈ ಘಟಕಗಳಿಗೆ  ಸ್ಥಳೀಯ ಸಹಕಾರ ಬ್ಯಾಂಕ್ ಅಥವಾ ರಾಜೀವ್ ಗಾಂಧಿ ಗೃಹ ನಿರ್ಮಾಣ ನಿಗಮದಿಂದ ಹಣಕಾಸು ಪಡೆಯಬಹುದು. ಇದು ಕೇಂದ್ರ ವಲಯದ ವಸತಿ ಕಾರ್ಯಗಾರ ಯೋಜನೆಯಾಗಿದೆ.