ಸೆಪ್ಟೆಂಬರ್ ಮಾಹೆಯ ಒಂದು ದಿವಸ. ಎಂದಿನಂತೆ ಅಂದೂ ಕೆಲಸಕ್ಕೆ ಹೊರಟು ನಿಂತಿದ್ದೆ. ಇನ್ನೇನ್ನು ಅಂಗಳದಲ್ಲಿದ್ದ ನನ್ನ ಬೈಕಿನ ಸ್ಟ್ಯಾಂಡ್ ತೆಗೆಯಬೇಕೆನ್ನುವಷ್ಟರಲ್ಲಿ ದೃಷ್ಟಿ ನೆಲದ ಮೇಲೆ ಹರಡಿದ್ದ, ಒಣಗಿದ ನಾರಿನ ಕಡ್ಡಿಗಳೆಡೆಗೆ ಹರಿಯಿತು. ‘ಅರೇ! ಇಷ್ಟೊಂದು ಹುಲ್ಲಿನ/ನಾರಿನ ಕಡ್ಡಿಗಳು ಇಲ್ಲಿ ಬಿದ್ದಿವೆ?’ಎಂದು ಯೋಚಿಸುತ್ತಲೇ ಮೇಲೆ ನೋಡಿದೆ. ಮಾವಿನ ಗಿಡದ ಟೊಂಗೆಯ ಕವಲಿನಲ್ಲಿ ದುಂಡಗಿನ ಗಾತ್ರದ ಒಣಗಿದ ನಾರಿನ ಮುದ್ದೆ. ಅನುಮಾನವೇ ಬೇಡ, ಅದು ಹಕ್ಕಿಯ ಗೂಡು! ಒಮ್ಮೆಲೇ ನನ್ನಲ್ಲಿ ಖುಷಿ, ರೋಮಾಂಚನ. ನನ್ನ ಬಹುದಿನಗಳ ಕನಸೊಂದು ಈಡೇರುವ ಘಳಿಗೆ ಸಮೀಪಿಸಿದಂತೆ ಭಾಸವಾಗತೊಡಗಿತು. ಹಕ್ಕಿಯ ಸಂಸಾರವೊಂದನ್ನು ವೀಕ್ಷಿಸುವ ಆಶೆ ಬಹುದಿನಗಳಿಂದ ಇತ್ತು. ಬೈಕ್‌ನ್ನು ಅಲ್ಲಿಯೇ ಬಿಟ್ಟು, ಅಡಗಿ ಗೂಡನ್ನು ನೋಡುತ್ತಾ ನಿಂತೆ.

ಒಂದೈದು ನಿಮಿಷವಾಗಿರಬೇಕು. ಪುರ್ರನೆ ಹಕ್ಕಿಯೊಂದು ಗೂಡಿನಿಂದ ಹಾರಿಹೋಯಿತು.  ಒಂದೆರಡು ನಿಮಿಷ; ಮತ್ತೊಂದು ಹಕ್ಕಿ ಗೂಡಿನೊಳಗೆ ಸೇರಿಕೊಂಡಿತು. ಗಂಡು, ಹೆಣ್ಣು ಪಕ್ಷಿಗಳೆರಡೂ ಗೂಡು ನಿರ್ಮಾಣದಲ್ಲಿ ತೊಡಗಿಕೊಂಡಿವೆ ಎಂಬುದು ದೃಢಪಟ್ಟಿತು. ಪಕ್ಷಿ ಯಾವುದೆಂದು ಖಚಿತಗೊಳ್ಳದೇ ಹೋಯಿತು. ಕೆಲಸ ಮುಗಿಸಿ ಮರಳಿ ಬಂದ ನಂತರ ವಿಚಾರಿಸಿಕೊಂಡರಾಯಿತು ಅಂದುಕೊಂಡು ಹೋದೆ. ಸಾಯಂಕಾಲ ಮರಳಿ ಬಂದಾಗ ಗೂಡು ಇನ್ನೇನು ಮುಗಿಯುವ ಹಂತಕ್ಕೆ ಬಂದಿತ್ತು. ಹಕ್ಕಿಯನ್ನೇ ವೀಕ್ಷಿಸುತ್ತಾ ಅದರ ಲಕ್ಷಣಗಳನ್ನು ಗುರುತು ಹಾಕಿಕೊಳ್ಳಲು ಪೇಪರ್, ಪೆನ್ನು ಹಿಡಿದುಕೊಂಡು ಕುಳಿತೆ. ನಸು ಕಂದು ಬಣ್ಣದ ಪುಕ್ಕ, ಉದ್ದವಾದ ಬಾಲ, ಎದೆ ಬಿಳಿಯ ಬಣ್ಣ, ಗುಬ್ಬಚ್ಚಿಗಿಂತ ಚಿಕ್ಕ ಗಾತ್ರ, ನೋಡಿದೊಡನೆ ದರ್ಜಿ (ಟೇಲರ್ ಬರ್ಡ್) ಹಕ್ಕಿಯೆನಿಸಿಬಿಟ್ಟಿತು.

ದರ್ಜಿ ಹಕ್ಕಿಯಾಗಿದ್ದರೆ (ಟುವ್ವಿ ಹಕ್ಕಿಯೆಂತಲೂ ಹೆಸರು) ಎಲೆಗಳನ್ನು ಜೋಡಿಸಿ, ರಂಧ್ರಕೊರೆದು, ಎಲೆಗಳನ್ನು ಹೊಲೆದು ಗೂಡು ನಿರ್ಮಿಸಿಕೊಳ್ಳುತ್ತದೆ. ಆದರೆ ಇದು ಹುಲ್ಲಿನಿಂದ ಗುಂಡಗಿನ ಗೂಡು ರಚಿಸಿದೆ. ಹಾಗಾದರೆ ಇದು ದರ್ಜಿ ಹಕ್ಕಿಯಾಗಿರಲಾರದು ಎಂಬ ಗೊಂದಲ ಕಾಡತೊಡಗಿತು. ಸಲೀಮ್ ಆಲಿ ಅವರು ಬರೆದ ‘ಇಂಡಿಯನ್ ಬರ್ಡ್ಸ್’ ಪುಸ್ತಕ ಕೈಗೆತ್ತಿಕೊಂಡೆ. ನಾನು ಪಟ್ಟಿ ಮಾಡಿದ ಲಕ್ಷಣಗಳಿಗೆ ಹೋಲುವ ಹಕ್ಕಿಯ ಹೆಸರು ಕೊನೆಗೂ ಸಿಕ್ಕಿತು. ಅದು ‘ಪ್ಲೈನ್ ಪ್ರೀನಿಯ’. ನೋಡಲು ಥೇಟು ದರ್ಜಿ ಹಕ್ಕಿಯ ಹಾಗೇನೇ, ಒಂದೇ ವ್ಯತ್ಯಾಸವೆಂದರೆ ದರ್ಜಿಹಕ್ಕಿ ಬಾಲವನ್ನು ಮೇಲಕ್ಕೆತ್ತುತ್ತಿರುತ್ತದೆ. ಆದರೆ ಪ್ಲೈನ್ ಪ್ರೀನಿಯಾ ಬಾಲವನ್ನು ಮೇಲಕ್ಕೆತ್ತುವುದಿಲ್ಲ (ಕುಳಿತಾಗ).

ಮರು ದಿವಸದಿಂದ ಗೂಡಿನ ವೀಕ್ಷಣೆಯ ಕಾರ್ಯ ಮುಂದುವರೆಯಿತು. ನನ್ನ ಕೋಣೆಯಲ್ಲಿ ಕುಳಿತು ಕಿಟಕಿಯಿಂದ ನೋಡಿದರೂ ಗೂಡು ಕಾಣುವಂತಿತ್ತು. ಎರಡು ಮೂರು ದಿನಗಳು ಕಳೆದಿರಬೇಕು. ಹಕ್ಕಿಗಳ ಕಲರವ, ಉತ್ಸಾಹ, ಅಲವತ್ತು ಎಂದಿಗಿಂತ ಹೆಚ್ಚಿತ್ತು. ಬಹುಶಃ ಮರಿಗಳು ಹೊಸ ಜಗತ್ತಿಗೆ ಬಂದಿರಬೇಕು ಎಂದು ಇನ್ನಿಷ್ಟು ಗಮನಕೊಟ್ಟು ಗೂಡನ್ನು ವೀಕ್ಷಿಸಿದೆ. ಉಹುಂ, ಮರಿಗಳ ಇರುವಿಕೆ ಕಂಡುಬರಲಿಲ್ಲ. ಮತ್ತೆರಡು ದಿನಗಳು ಉರುಳಿದವು;ಬೆಳಗಿನ ಹೊತ್ತು, ನನ್ನ ಕೋಣೆಯಲ್ಲಿ ಓದುತ್ತಾ ಕುಳಿತಿದ್ದೆ. ‘ಪ್ಲೈನ್ ಪ್ರೀನಿಯಾ’ಗಳ ಕಿರುಚಾಟ ತಾರಕಕ್ಕೆ ಏರಿತ್ತು. ಕಿಟಕಿಯಿಂದ ಇಣುಕಿ ನೋಡಿದೆ. ‘ಅರೇ! ಎರಡೇಪ್ಲೈನ್ ಪ್ರೀನಿಯಾ ಹಕ್ಕಿಗಳಿರಲಿಲ್ಲ. 10 – 12ಪ್ಲೈನ್ ಪ್ರೀನಿಯಾ ಹಕ್ಕಿಗಳು ನೆರೆದಿದ್ದವು. ಎಲ್ಲವೂ ಏಕಕಾಲಕ್ಕೆ ಕಿರುಚಾಟ ನಡೆಸಿದ್ದವು. ಏನೋ ವಿಶೇಷವಿರಬೇಕು ಎಂದುಕೊಂಡು ಕೋಣೆಯಿಂದ ಹೊರಬಂದು ಗಿಡದ ಹತ್ತಿರ ಬಂದು ನಿಂತೆ;ನೋಡಿದರೆ ಕೆಂಬೂತ (ಕ್ರೋಪೆಸೆಂಟ್/ರತ್ನಪಕ್ಷಿ)ವೊಂದು ಬಂದು ಕುಳಿತಿದೆ… ಅದೂ ಗೂಡಿನ ಹತ್ತಿರವೇ!  ಗೂಡನ್ನು ನೋಡಿದೆ… ಮೇಲ್ಭಾಗದ ಗೂಡು ಕಿತ್ತು ಹೋಗಿದೆ…. ‘ಗೂಡೇ ನಾಶವಾದೀತು’ಅಂದುಕೊಂಡು ಕೆಂಬೂತವನ್ನು ಅಲ್ಲಿಂದ ಹಾರುವಂತೆ ಮಾಡಿದೆ. ಪ್ಲೈನ್ ಪ್ರೀನಿಯಾಗಳ ಕಿರುಚಾಟ ಕಮ್ಮಿಯಾಯಿತು. ನಾನು ನಿಟ್ಟುಸಿರು ಬಿಡುತ್ತಾ, ಕೋಣೆಯೊಳಗೆ ಬಂದು ತಿಂಡಿ ತಿಂದು ಕೆಲಸಕ್ಕೆ ಹೊರಡಲು ಅನುವಾಗುತ್ತಿದ್ದೆ. ಮತ್ತೆ ಪ್ಲೈನ್ ಪ್ರೀನಿಯಾಗಳ ಕಿರುಚಾಟ, ಓಡಿ ಬಂದು ನೋಡಿದರೆ…

ದಿಗ್ಭ್ರಮೆಗೊಂಡು ನಿಂತುಬಿಟ್ಟೆ…. ಗೂಡಿನ ಸಮೀಪ ಹಾವು!…ಹೊಂಚು ಹಾಕಿ ಕುಳಿತಿದೆ.  ಓಡುತ್ತಾ ರೂಮಿನೊಳಗೆ ಬಂದವನೇ ಕ್ಯಾಮೆರಾ ಹಿಡಿದು ಹೊರ ಓಡಿ ಬಂದೆ.  ಕುರ್ಚಿಯೊಂದನ್ನು ಇಟ್ಟುಕೊಂಡು ಅದರ ಮೇಲೆ ನಿಂತು ಕ್ಯಾಮೆರಾದಲ್ಲಿ ಕಣ್ಣಿಟ್ಟು ಗೂಡಿನೆಡೆಗೆ ನೋಡಿದರೆ…. ಅಷ್ಟರಲ್ಲಿ ಹಾವಿನ ಮೂತಿ ಸಂಪೂರ್ಣಗೊಡಿನೊಳಗೆ ಮುಳುಗಿಬಿಟ್ಟಿತ್ತು. ಹಾವಿನ ‘ಮೊಟ್ಟೆ ಭೋಜನ’ಸಾಗಿದೆ ಎನ್ನಲಿಕ್ಕೆ ಮೊಟ್ಟೆಯ ಕವಚಗಳ ಚೂರುಗಳು ನೆಲಕ್ಕೆ ಬಂದು ಬೀಳತೊಡಗಿದವು. ಕ್ಯಾಮೆರಾ ಕ್ಲಿಕ್ಕಿಸುತ್ತಾ ನಿಂತರೆ ಹಾವು ಹೆದರಿ ಗೂಡಿನಿಂದ ಸರಿದೀತು ಎಂಬ ನನ್ನ ಹಂಚಿಕೆ ವಿಫಲವಾಯಿತು. ಬಹುಶಃ ಹಾವಿನ ಭೋಜನ ಮುಗಿದಿರಬೇಕು, ಇನ್ನೇನು ಹಾವು ಗೂಡಿನಿಂದ ಸರಿಯುತ್ತ ಹೋಗಬೇಕು ಅಂದುಕೊಳ್ಳುವಷ್ಟರಲ್ಲಿ ಅದಕ್ಕೆ ಆಯತಪ್ಪಿರಬೇಕು, ನನ್ನ ಮುಂದೆಯೇ ಧೊಪ್ಪೆಂದು ನೆಲಕ್ಕೆ ಬಂದು ಬಿತ್ತು. ನಾನೂ ಸಂಪೂರ್ಣ ಬೆವತುಬಿಟ್ಟೆ. ಬಿದ್ದಹಾವು ಸರಸರನೆ ಪಕ್ಕದ ಮೈದಾನದೊಳಕ್ಕೆ ಹೋಯಿತು. ಕತ್ತೆತ್ತಿ ಗೂಡಿನೆಡೆಗೆ ನೋಡಿದೆ. ಅಲ್ಲೇನಿದೆ?ಸೈನಿಕರನ್ನು ಚೆಂಡಾಡಿದ ಅನಂತರದ ಕೋಟೆಯಂತಿತ್ತು. ಹುಲ್ಲಿನ ಕಡ್ಡಿಗಳೆಲ್ಲಾ ಚೆಲ್ಲಾಪಿಲ್ಲಿ, ಮೊಟ್ಟೆಯ ಅವಶೇಷಗಳು ಅಲ್ಲಲ್ಲಿ ಹರಡಿಕೊಂಡಿದ್ದವು. ಅಷ್ಟು ಹೊತ್ತಿಗೆ ಪ್ಲೈನ್ ಪ್ರೀನಿಯಾ ಹಕ್ಕಿಗಳು ಗಿಡದಿಂದ ನಾಪತ್ತೆಯಾಗಿದ್ದವು. ‘ತಾಯಿ ಹಕ್ಕಿ ಮರಿಗಳಿಗೆ ಆಹಾರ ನೀಡುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕು ಎಂದು ಅಂದುಕೊಡವನಿಗೆ, ಆ ಪ್ರಸಂಗವೇ ಬರಲಾರದ್ದಕ್ಕೆ ನಿರಾಶೆಯಿಂದ ವಿಷಾದದ ಭಾವತುಂಬಿಕೊಂಡಿತು.’ ಒಂದನ್ನು ತಿಂದು ಇನ್ನೊಂದು ಬದುಕುವ ನಿಸರ್ಗದ ನಿಯಮವೇ ಅಂಥದ್ದು ಅಂದುಕೊಂಡು ಭಾರವಾದ ಮನಸ್ಸಿನಿಂದ ಕೆಲಸಕ್ಕೆ ತೆರಳಿದೆ.