ನಿನ್ನ ನಿಟ್ಟುಸಿರು ಕಣ್ಣೀರಿನಾಷಾಢದಲಿ
ನನ್ನೆಲ್ಲ ಗರಿತೊಯ್ದು, ಗಾಳಿಗದುರುವ
ಕೊಂಬೆಗೂಡಿನಲಿ ಕುಳಿತು ಕೊರಗಿದ್ದಾಯ್ತು.
ಒಮ್ಮೊಮ್ಮೆ ಹೂಬಿಸಿಲು ಹರಡಿ, ಮೇಲಿನ ನೀಲಿ
ನಸುನಕ್ಕು ಬಾ ಎಂದು ಕೈಬೀಸಿ ಕರೆದಾಗ
ಗರಿಗೆದರಿದಾನಂದದರೆಚಣದ ಬರಿನೆನಪೆ
ನನ್ನ ಪಾಲಿನ ಪುಣ್ಯ. ಗರಿತೆರೆದು ಹಾರಾಡಿ
ಹಾಡಿಬಂದೆನೊ, ಮತ್ತೆ ಮುಂದಿನ ಕ್ಷಣವೆ
ಮುತ್ತುವುದು ಗೂಡಿನ ಸುತ್ತ ಮೋಡದ ಬೀಡು,
ಕರಗಿ ಕಣ್ಮರೆಯಾಗಿ ಕರುಳಿರಿಯುವುದು
ಕರೆದ ನೀಲಿಯ ಹಾಡು, ಸುಯ್‌ಗಾಳಿಗದುರುವುದು
ತೊಪ್ಪನೆ ತೊಯ್ದ ಕೊಂಬೆಮೇಲಿನ ಗೂಡು.