ಒಂದೆಡೆ ತರಕಾರಿ, ಇನ್ನೊಂದೆಡೆ ಮಸಾಲೆಯಾಗಿ ಉಪಯೋಗವಾಗುವ ಈರುಳ್ಳಿ ಬಡವ ಬಲ್ಲಿದರೆಂಬ  ಬೇಧವಿಲ್ಲದೆ ಉಪಯೋಗವಾಗುವಂತಹುದು. ಈ ಸಂಬಾರ ಪದಾರ್ಥವನ್ನು ವಿವಿಧ ರೀತಿಗಳಲ್ಲಿ, ಬೆಳೆಯ ವಿವಿಧ ಹಂತಗಳಲ್ಲಿ ಉಪಯೋಗಿಸುತ್ತಾರೆ. ಹಸಿಯಾಗಿ, ಬೇಯಿಸಿ, ಸಲಾಡ್ ಆಗಿ ಉಪಯುಕ್ತ. ಬೇಕರಿ ಪದಾರ್ಥಗಳಲ್ಲಿ, ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಇತ್ತೀಚೆಗೆ ಯತೇಚ್ಛವಾಗಿ ಬಳಕೆಯಾಗುತ್ತ್ತಿದೆ. 

ನಮ್ಮ ದೇಶದಲ್ಲಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಎಲ್ಲ ವಿಧದ ಮಣ್ಣಿನಲ್ಲೂ ಬೆಳೆಯ ಬಹುದು. ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ. ಮರಳು ಹೆಚ್ಚಾಗಿರುವ ಭೂಮಿಯಾದರೆ ನೀರು ಬಸಿದು ಹೋಗುವುದರಿಂದ ಮೇಲಿಂದ ಮೇಲೆ ನೀರು ಕೊಡಬೇಕಾಗ ಬಹುದು. ಬೇರು ಸರಿಯಾಗಿ ಇಳಿಯದ ಮಣ್ಣಿನಲ್ಲಿ ಗೆಡ್ಡೆಗಳು ಆಕಾರ ಕಳೆದುಕೊಳ್ಳುತ್ತವೆ.

ಮೂರೂ ಹಂಗಾಮಿನಲ್ಲಿ ಬೆಳೆಯಬಹುದಾದ ಬೆಳೆ ಈರುಳ್ಳಿ. ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ್, ಜನವರಿ-ಫೆಬ್ರವರಿ ತಿಂಗಳುಗಳು ಅತ್ಯಂತ ಸೂಕ್ತ .ಹೆಚ್ಚು ಬಿಸಿಲೂ ಅಲ್ಲದ ಛಳಿಯೂ ಅಲ್ಲದ ತಂಪಾದ ಹವಾಮಾನದಲ್ಲಿ ಬೆಳೆಯುವ ಗೆಡ್ಡೆಗಳು ಗಾತ್ರ ಮತ್ತು ಆಕಾರದಲ್ಲಿ ಉತ್ತಮವಾಗಿರುತ್ತವೆ.

ಸಸಿಮಡಿಗಳಲ್ಲಿ ಬೀಜ ಬಿತ್ತನೆ ಮಾಡಿ ನಂತರ ನಾಟಿ ಮಾಡ ಬಹುದು. ಅಥವ ಕೂರಿಗೆಯಿಂದ ನೇರ ಬಿತ್ತನೆ ಮಾಡ ಬಹುದು. ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ಮುಂದೆ ಕುಡಿ ಒಣಗುವುದನ್ನು ತಪ್ಪಿಸ ಬಹುದು. ೬ರಿಂದ ೮ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. ಎರೆಡು ಸಾಲುಗಳ ನಡುವೆ ೬ಇಂಚು, ಗಿಡದಿಂದ ಗಿಡಕ್ಕೆ ೩ಇಂಚು ಅಂತರ ಸಾಕು. ನಾಟಿ ಮಾಡಿದ ಒಂದುವರೆ ತಿಂಗಳ ನಂತರ ಮೇಲುಗೊಬ್ಬರ ಕೊಡಬೇಕು.

ಮಣ್ಣಿನ ತೇವಾಂಶ ನೋಡಿಕೊಂಡು ನೀರು ಕೊಡ ಬೇಕು. ಕಳೆಗಳಿಲ್ಲದಂತೆ ನೋಡಿಕೊಂಡರೆ ಒಳ್ಳೆಯದು. ಬೇರು ಹೆಚ್ಚು ಆಳಕ್ಕೆ ಇಳಿಯುವುದಿಲ್ಲ. ಮೇಲಿನ ಹಸಿರು ಎಲೆಗಳು ಕೊಳವೆಯಾಕಾರದಲ್ಲಿ ಇರುತ್ತವೆ. ಕೆಳಗಿನ ಗೆಡ್ಡೆ ಸಣ್ಣದಾಗಿರುವಾಗ ಕಾವಿನೊಡನೆ ಮಾರಾಟ ಮಾಡಬಹುದು. ಇದರಿಂದ ಹಲವಾರು ಅಡಿಗೆಗಳನ್ನು ರುಚಿಕರವಾಗಿ ಮಾಡ ಬಹುದು. ಅಲ್ಲದೆ ಬೆಳೆದ ಈರುಳ್ಳಿಯಲ್ಲಿ ಇರುವ ಗಾಢವಾದ ವಾಸನೆ ಇದರಲ್ಲಿರುವುದಿಲ್ಲ. ಹಸಿರು ಕಾವಿನಲ್ಲಿ ಪೋಷಕಾಂಶಗಳೂ ಜಾಸ್ತಿ. ಈರುಳ್ಳಿಯ ವಾಸನೆ ಹಿಡಿಸದವರೂ ಸಹ ಈ ಕಾವನ್ನು ಉಪಯೋಗಿಸ ಬಹುದು. ಮಾರುಕಟ್ಟೆಯಲ್ಲಿ ಈ ಸಣ್ಣ ಈರುಳ್ಳಿಗೆ ಬಹು ಬೇಡಿಕೆ.

ಈರುಳ್ಳಿಯಲ್ಲೂ ಹಲವಾರು ಔಷಧೀಯ ಗುಣಗಳಿವೆ. ವಿಟಮಿನ್ ಎ ಬಿ ಸಿ ಅನ್ನಾಂಗಗಳೂ ಇವೆ. ಅಲ್ಲದೆ ಕ್ಯಾಲಿಸಿಯಂ, ಸೋಡಿಯಂ, ಮತ್ತು ಪೊಟ್ಯಾಸಿಯಂ ಲವಣಗಳಿವೆ. ಇಷ್ಟೆಲ್ಲ ಇದ್ದರೂ ರುಚಿ ಮತ್ತು ವಾಸನೆಗಾಗಿ ಇದರ ಉಪಯೋಗ ಜಾಸ್ತಿಯೇ ಹೊರತು ಮುಖ್ಯ ಆಹಾರವಾಗಿ ಅಲ್ಲ.

ಈರುಳ್ಳಿ ಕತ್ತರಿಸುವಾಗ ಬರುವ ಗಂಧಕದ ಘಾಟಿನಿಂದಾಗಿ ಕಣ್ಣಲ್ಲಿ ನೀರು ಬರುವುದುಂಟು. ಅಡ್ಡ ಕತ್ತರಿಸಿ ನೀರಿನಲ್ಲಿ ಹಾಕಿದರೆ ಸುಲಭವಾಗಿ ಕತ್ತರಿಸ ಬಹುದು.

ಬಲಿತ ಮಾವಿನ ಕಾಯಿಗಳನ್ನು ನೈಸರ್ಗಿಕವಾಗಿ ಹಣ್ಣು ಮಾಡಲು  ಹುಲ್ಲಿನಲ್ಲಿ ಅಡೆ ಹಾಕಿದ ಕಾಯಿಗಳ ಮಧ್ಯೆ ಈರುಳ್ಳಿ ಇಡುವ ಪ್ರಯೋಗ  ಹುಲಿಕೋಟಿಯ ವಿಜ್ಞಾನ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆದಿದೆ. ಯಾವದೇ ರಾಸಾಯನಿಕಗಳ ಗೊಡವೆ ಇಲ್ಲದೆ ಹಣ್ಣು ಬಂಗಾರದ ಬಣ್ಣ ಪಡೆಯುತ್ತದೆ ಎನ್ನುತ್ತಾರೆ ಸಾವಯವ ಕೃಷಿಕರು.

ಈರುಳ್ಳಿಯನ್ನು ಬಳಸಿ ಮಾಡುವ ಮದ್ದೂರು ವಡೆ (ಮಸಾಲೆ ವಡೆ) ಜಗತ್ ಪ್ರಸಿದ್ಧ. ಹಾಗೇ ಸಣ್ಣಗೆ ಹೆಚ್ಚಿದ ಈರುಳ್ಳಿ, ಕಾಬೂಲ್ ಕಡಲೆ ಹಾಕಿ ಮಾಡುವ ‘ಛೋಲೆ’ ಜನರ ಬಾಯಲ್ಲಿ ನೀರೂರಿಸುವಂತಹುದು. ಉತ್ತರ ಇಂಡಿಯದವರ ‘ಚನ ಬಟೂರ’ ದ ಮಸಾಲೆಯಲ್ಲೂ ಈರುಳ್ಳಿಯದೇ ಪ್ರಮುಖ ಪಾತ್ರ.

ಈರುಳ್ಳಿ ಹಾಕಿ ಮಾಡುವ ‘ಪಕೋಡ’ ಜಗತ್ಪ್ರಸಿದ್ಧ. ಹೋಟೆಲ್ ಗಳಲ್ಲಿ ಮಾಡುವ ಈರುಳ್ಳಿಮಸಾಲೆ ತಿನ್ನಲು ಜನ ಕ್ಯೂ ನಿಲ್ಲುತ್ತಾರೆ. ಬಿಸಿಬೇಳೆ ಬಾತ್ ಗೆ ಈರುಳ್ಳಿ ಮೊಸರು ಪಚಡಿಯಾದರೆ, ಚಕ್ರಾಕಾರ ಕತ್ತರಿಸಿರುವ ಈರುಳ್ಳಿ ಸಲಾಡ್ ಗೆ. ದಿನ ನಿತ್ಯ ಬಳಸುವ ಈರುಳ್ಳಿ ಇಲ್ಲದೆ ಅಡಿಗೆ ಮಾಡಲು ಸಾಧ್ಯವೇ ಇಲ್ಲ ಎನ್ನುವವರೂ ಇದ್ದಾರೆ. ನಾವೇ ಬೆಳೆದು ಕೊಂಡರೆ, ರಾಸಾಯನಿಕ ಮುಕ್ತ ಈರುಳ್ಳಿ ನಮ್ಮ ಬಳಕೆಗೆ.

ಹೆಚ್ಚಿದಾಗ ಮಾತ್ರ ಕಣ್ಣೀರು ತರಿಸುವ ಈರುಳ್ಳಿ, ಬೆಳೆಯುವ ಕೃಷಿಕರ ಪಾಲಿಗೂ ಅದೇ ಆಗಿದೆ. ಬೆಳೆದ ಎಲ್ಲ ಈರುಳ್ಳಿಯೂ ಒಂದೇ ಬಾರಿಗೆ ಮಾರುಕಟ್ಟೆಗೆ ಬಂದರೆ, ಬೆಲೆ ಇಳಿತ ಖಂಡಿತ. ಅಲ್ಲದೆ ಹೆಚ್ಚು ದಿನ ದಾಸ್ತಾನು ಮಾಡುವ ವ್ಯವಸ್ತೆ ಎಲ್ಲೆಡೆಯೂ ಇಲ್ಲದಿರುವುದು ಹೆಚ್ಚಿನ ತೊಂದರೆಗೆ ಕಾರಣವಾಗುತ್ತಿದೆ. ಹಾಗೆಯೇ ಹೆಚ್ಚು ದಿನ ಇಟ್ಟರೆ ಮೊಳಕೆ ಬರುತ್ತದೆ. ಅದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಕಮ್ಮಿ. ಈ ಎಲ್ಲ ಸಮಸ್ಯೆಗಳೂ ರೈತರ ಕಣ್ಣೀರಿಗೆ ಕಾರಣವಾಗಿ, ಬೆಂಬಲ ಬೆಲೆಗಾಗಿ ಸರ್ಕಾರದತ್ತ ಮುಖ ಮಾಡುವಂತಾಗಿದೆ. ಅಂತೂ ಈ ಈರುಳ್ಳಿ ಬೆಳೆದರೂ ಕಣ್ಣೀರು, ಹೆಚ್ಚಿದರೂ ಕಣ್ಣೀರು.

– ಚಿತ್ರಗಳು : ಆರ್ ಎಸ್ ಶರ್ಮ