ದೇಶದ ಆಹಾರ ಸುರಕ್ಷತೆಗೆ ತಮ್ಮ ಸಿಂಹ ಪಾಲು ನೀಡಿರುವ ಗೆಡ್ಡೆಗಳ ರಾಜ್ಯಕ್ಕೆ ಮತ್ತೊಂದು ಹೊಸ ಸೇರ್ಪಡೆ ‘ಯಾಮ್ ಬೀನ್’. ಎರೆಡು ವರ್ಷಗಳ ಹಿಂದೆ  ಈ ಗೆಡ್ಡೆಯನ್ನು ಕರ್ನಾಟಕಕ್ಕೆ ಪರಿಚಯಿಸಿದ ಶ್ರೇಯ ಕೃಷಿ ಪತ್ರಿಕೆಯದು.(ಅಡಿಕೆ ಪತ್ರಿಕೆ) ಹತ್ತಾರು ಆಸಕ್ತ ಕೃಷಿಕರಿಗೆ ಬೀಜಗಳನ್ನೂ ಹಂಚಲಾಗಿತ್ತು. ಯಶಸ್ವಿಯಾಗಿ ಬೆಳೆದು ಗೆಡ್ಡೆಯ ರುಚಿ ನೋಡಿದ ಜನ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮತ್ತೆ ಈ ಬೆಳೆಯನ್ನು ಬೆಳೆದು ಬೀಜ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.

‘ಯಾಮ್ ಬೀನ್’ ಗೆ ಮತ್ತೊಂದು ಹೆಸರು ‘ಜಿಕಾಮ’. ತನ್ನ ಸಿಹಿಯಾದ ರುಚಿಗೆ, ರೋಗ ನಿರೋಧಕತೆಗೆ, ಬರ ತಡೆಯುವ ಶಕ್ತಿಗೆ ಮತ್ತು ಹೆಚ್ಚು ದಿನ ತಾಳಿಕೆ ಬರುವ ಗುಣಗಳಿಂದಾಗಿ ಈ ಬೆಳೆ ಕೃಷಿಕರ ಮನ ಗೆದ್ದಿದೆ. ಇಂಗ್ಲೀಷಿನಲ್ಲಿ ‘ಮೆಕ್ಸಿಕನ್ ಬಟಾಟ’ ಎಂದು ಕರೆಸಿಕೊಳ್ಳುವ ಈ ಗೆಡ್ಡೆಗೆ ಹಿಂದಿಯಲ್ಲಿ ‘ಮಿಸ್ರಿ ಖಂಡ್’ ಎಂಬ ಹೆಸರು. ಮೂಲತ: ಮೆಕ್ಸಿಕೋ ದೇಶದ್ದಾದರೂ, ನಮ್ಮ ದೇಶದ ಬಿಹಾರ್, ಪಶ್ಚಿಮ ಬಂಗಾಳ, ಹಾಗೂ ನೇಪಾಳ ರಾಜ್ಯಗಳಲ್ಲಿ ಈಗಾಗಲೇ ನೆಲೆ ಕಂಡಿರುವ ಯಾಮ್ ಬೀನ್ ಕರ್ನಾಟಕದ ಉದ್ದಗಲಕ್ಕೂ ಹರಡುವ ದಿನ ದೂರವಿಲ್ಲ.

ಉಪಯೋಗ:

ಆಲೂಗೆಡ್ಡೆಯ ಮೇಲಿರುವ ಹಾಗೇ ತೆಳುವಾದ ಸಿಪ್ಪೆ. ಸಿಹಿಯಾಗಿ, ಬೆಳ್ಳಗೆ, ಕ್ರಿಸ್ಪ್ ಆಗಿರುವ ಒಳಭಾಗ. ಹಸಿಯಾಗೇ ‘ಸಲಾಡ್’ ತರಹ ತಿನ್ನ ಬಹುದು. ತನ್ನದೇ ಆದ ಯಾವ ವಿಶೇಷ ವಾಸನೆಯೂ ಇಲ್ಲದಿರುವುದರಿಂದ ಎಲ್ಲ್ಲಾರೀತಿಯ ಅಡಿಗೆಗಳಲ್ಲೂ ಉಪಯೋಗಿಸ ಬಹುದು. ರುಚಿಯಾದ ಹಲ್ವ, ಚಿಪ್ಸ್, ಪೂರಿ, ಮೊಸರೊಡೆ, ಹಾಗೂ ಹಪ್ಪಳಗಳನ್ನು ಮಾಡ ಬಹುದು. ಪೌಷ್ಟಿಕಾಂಶ ಭರಿತ ‘ಮಿಲ್ಕ್ ಶೇಕ್’ಎಲ್ಲರಿಗೂ ಪ್ರಿಯವಾದ ಪಾನೀಯ.

ಬೇಸಾಯ ಕ್ರಮ:

ಜೂನ್ ಹದಿನೈದರ ನಂತರ ನಾಟಿ ಮಾಡುವದು ಸೂಕ್ತ. ಬೀಜದಿಂದ ಬೀಜಕ್ಕೆ ಎರೆಡು ಅಡಿ ಅಂತರ ಬೇಕು. ಏರು ಮಡಿಯಲ್ಲಿ ಬಿತ್ತನೆ ಮಾಡಿದಾಗ ಗೆಡ್ಡೆಗಳು ದಪ್ಪವಾಗಿ ಬೆಳೆದಿರುವುದು ಕಂಡು ಬಂದಿದೆ. ಬೇರೆ ಬೆಳೆಗಳಿಗೆ ಹಾಕುವ ಗೊಬ್ಬರಕಿಂತ ಹೆಚ್ಚೇನು ಹಾಕ ಬೇಕಿಲ್ಲ. ಬಳ್ಳಿಯಂತೆ ಬೆಳೆಯುವ ಗಿಡವಾದ್ದರಿಂದ ಹಬ್ಬಲು ಅನುವು ಮಾಡಿ ಕೊಡಬೇಕು.

ನಾಟಿ ಮಾಡಿದ ಎರೆಡು ತಿಂಗಳೊಳಗೆ ಗಿಡದಲ್ಲಿ ಹೂವು ಕಾಣಿಸಿಕೊಳ್ಳುತ್ತದೆ.  ನೀಲಿ ಬಣ್ಣದ ಹೂವುಗಳು ದುಂಬಿಗಳನ್ನು ಆಕರ್ಶಿಸುತ್ತದೆ. ಪರಾಗ ಸ್ಪರ್ಶ ಸರಾಗವಾಗಿ ಆಗುವುದರಿಂದ ಗೊಂಚಲು ಗೊಂಚಲಾಗಿ ಕಾಯಿಗಳು ಬಿಡುತ್ತವೆ.

ಬಳ್ಳಿಯಲ್ಲಿ ಹೂಗಳು.

ಕಾಯಿಗಳಲ್ಲಿ ಒಂದು ಬಗೆಯ ‘ಟಾಕ್ಸಿನ್’ ಇರುವುದರಿಂದ (ರೋಟೋನಾನ್) ತಿನ್ನ ಬಾರದು. ಮುಂದಿನ ಹಂಗಾಮಿನ ಬಿತ್ತನೆಗೆ ಮಾತ್ರ ಉಪಯುಕ್ತ. ಆರು ತಿಂಗಳ ನಂತರ  ಗಿಡ ಒಣಗಲಾರಂಭಿಸಿದಾಗ ಗೆಡ್ಡೆ ಕೀಳಲು ಸಿದ್ಧ ಎಂದರ್ಥ.

ದ್ವಿದಳ ಧಾನ್ಯದ ಗುಂಪಿಗೆ ಸೇರಿದ ಗಿಡವಾದ್ದರಿಂದ ಬೇರುಗಳಲ್ಲಿ ಸಾರಜನಕ ಸಂಗ್ರಹವಾಗಿ ಮುಂದಿನ ಬೆಳೆಗೆ ಸಹಕಾರವಾಗುತ್ತದೆ.

ಬಿಹಾರದಲ್ಲಿರುವ ರಾಜೇಂದ್ರ ಕೃಷಿ ವಿಶ್ವ ವಿದ್ಯಾಲಯದಿಂದ ಬಿಡುಗಡೆಯಾದ ಆರ್.ಎಮ್.೧. (ರಾಜೇಂದ್ರ ಮಿಶ್ರಿಖಂಡ್) ಯಾಮ್ ಬೀನ್ ತಳಿಯನ್ನು ಛತ್ತೀಸ್‌ಗಡ್, ಜಾರ್‌ಖಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ್ ಗಳಲ್ಲಿ ಬೆಳೆಯುತ್ತಿದ್ದಾರೆ. ೪ರಿಂದ ೫ ಕ್ವಿಂಟಾಲ್ ಬೀಜ ಉತ್ಪಾದಿಸುತ್ತಿದ್ದು, ದೂರದ ನೇಪಾಲ್ ನಿಂದ ಸಹ ಬೇಡಿಕೆ ಹೆಚ್ಚಾಗುತ್ತಿದೆ. ಕರ್ನಾಟಕದ ರೈತರೂ ಈ ಬೆಳೆಯತ್ತ ಒಲವು ತೋರಿಸಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸುತ್ತಾರೆ ಸಂಶೋಧನ ವಿಜ್ಞಾನಿ ಡಾ: ಸಿಂಗ್.

ಹೂ ಗೊಂಚಲು.

ಈಗಾಗಲೇ ಎರೆಡು ವರ್ಷಗಳಿಂದ ಯಾಮ್ ಬೀನ್ ಬೆಳೆಯುತ್ತಿರುವ ಮರಸರ ಹಳ್ಳಿಯ ಎನ್.ಆರ್.ಶೆಟ್ಟಿ, ಈ ಬಾರಿ ಹೆಚ್ಚು ಬೀಜಗಳನ್ನು ನಾಟಿ ಮಾಡಿದ್ದಾರೆ. ಅತ್ಯಂತ ರುಚಿಕರವಾದ ಗೆಡ್ಡೆ ಇದೆಂದು ಅವರ ಅಭಿಪ್ರಾಯ. ಒಣ ಬೇಸಾಯ ಪದ್ಧತಿಯಲ್ಲೂ ಒಂದು ಗೆಡ್ಡೆಯ ತೂಕ ೩೦೦ಗ್ರಾಂಗಿಂತ ಕಡಿಮೆ ಇಲ್ಲದಿರುವುದು ಹೆಚ್ಚು ಖುಷಿ ತಂದ ವಿಚಾರ.

ಒಣಗಿಸಲು ಹಾಕಿದ್ದ ಬೀಜಗಳು ಹಾರಿ ಬಿದ್ದ ಜಾಗಗಳಲ್ಲೆಲ್ಲ ಗಿಡ ಹುಟ್ಟಿರುವುದು. ಋತುಪರ್ಣ ಸಾವಯವ  ತೋಟದ ಶರ್ಮ ಅವರಿಗೆ ಸಂತಸ ತಂದಿದೆ. ಹಾಗೆ ಹುಟ್ಟಿದ ಗಿಡಗಳಿಗೆ ಹಬ್ಬಲು ಅವಕಾಶ ಮಾಡಿ ಕೊಟ್ಟಿದ್ದೇ ತಡ ಸರ ಸರನೆ ಮೇಲೇರಿವೆ. ಗೆಡ್ಡೆಗಳೂ ಸಾಕಷ್ಟು ದೊಡ್ಡದಾಗಿ ಬೆಳೆದಿದೆ. ಹೆಚ್ಚು ಕಷ್ಟವಿಲ್ಲದೇ ಬೆಳೆಯುವ ಗೆಡ್ಡೆ ಇದು. ಬಹು ರುಚಿಕರವಾದ, ಪೌಷ್ಟಿಕ ತರಕಾರಿ ಇದಾಗಿದೆ ಎನ್ನುತ್ತಾರೆ ಶರ್ಮ. ಬೆಂಗಳೂರಿನ ತಾರಸಿ ತೋಟಗಳಲ್ಲಿ ಈ ಗೆಡ್ಡೆ ಬೆಳೆದವರೂ ತುಂಬ ಖುಷಿ ಪಟ್ಟಿದ್ದಾರೆ. ಕಾರಣ ಕುಂಡಗಳಲ್ಲಿ ಸಹ ಈ ಗೆಡ್ಡೆ ಬೆಳೆಯುವ ಸಾಧ್ಯತೆ ಮತ್ತು ಹೆಚ್ಚು ಶ್ರಮ ವಿಲ್ಲದೆ ಇರುವುದು. ಆಲೂಗೆಡ್ಡೆಯಂತೆ ಹೆಚ್ಚು ನೀರು ಗೊಬ್ಬರದ ಅವಶ್ಯಕತೆ ಇಲ್ಲ. ಆರೋಗ್ಯವಾಗಿ ಬೆಳೆಯುವ ಗಿಡವಾದ್ದರಿಂದ ಕೀಟನಾಶಕಗಳ ಖರ್ಚಿಲ್ಲ. ಹಸಿಯಾಗಿಯೇ ತಿನ್ನ ಬಹುದು. ಈ ಎಲ್ಲ ಗುಣಗಳಿಂದಾಗಿ ಗೆಡ್ಡೆಗಳ ಕುಟುಂಬಕ್ಕೆ ಇದೊಂದು ಉತ್ತಮ ಸೇರ್ಪಡೆಯಾಗ ಬಹುದು.

ಗೆಡ್ಡೆಯೊಂದಿಗೆ ಗಿಡ

ಈ ಗೆಡ್ಡೆಯ ಹೆಚ್ಚುಗಾರಿಕೆ ಎಂದರೆ ಬಹಳ ದಿನ ತನ್ನ ತಾಜಾತನವನ್ನು ಉಳಿಸಿಕೊಳ್ಳುತ್ತದೆ. ರೆಫ್ರಿಜರೇಟರ್ ನಲ್ಲಿ ಇಡಬೇಕಾದ ಅವಶ್ಯಕತೆ ಇಲ್ಲ. ರಕ್ಷಕ ದ್ರವ್ಯಗಳ ಆಸರೆ ಬೇಕಿಲ್ಲ. ಒಮ್ಮೆ ರುಚಿ ನೋಡಿದರೆ ಬಹಳ ಸಮಯದ ವರೆಗೆ ಉಳಿಯುತ್ತದೆ. ಆಲೂಗೆಡ್ಡೆ ಬಳಸುವ ಎಲ್ಲ ಅಡಿಗೆಗಳಲ್ಲಿ ಬದಲಿಗೆ ಯಾಮ್ ಗೆಡ್ಡೆ ಉಪಯೋಗಿಸ ಬಹುದು. ಕೆಲವೊಂದು ವಿಧಾನಗಳು ನಿಮಗಾಗಿ.

ಅಡಿಕೆ ಪತ್ರಿಕೆಯ ಯಾಮ್ ಬೀನ್ ಲೇಖನ ಓದಿದ ಮೇಲೇ ತಿಳಿದಿದ್ದು ಇದು ತಿನ್ನುವ ಬೀನ್ಸ್ ಅಲ್ಲ ಅಂತ. ಜೂನ್ ನಲ್ಲಿ ನಾಟಿ ಮಾಡಿದ ಬೀಜ ಮೊಳೆತು ಸಸಿಯಾಗಿ, ಗಿಡದ ತುಂಬ ತಿನ್ನಲಾಗದ  ಕಾಯಿಗಳು. ಗೆಡ್ಡೆ ಬರುವವರೆಗೆ ಕಾಯುವುದು ದುಸ್ತರವಾದರೂ, ಬಂದ ಅಷ್ಟೊಂದು ಗೆಡ್ಡೆಗಳನ್ನು ನೋಡಿದಾಗ ಆದ ಸಂತೋಷ ಮುಚ್ಚಿಟ್ಟು ಕೊಳ್ಳ ಬೇಕಿಲ್ಲ.

ಗಿಡದಲ್ಲಿ ಬೀಜ-ಗೆಡ್ಡೆ

ಆದರೆ ಮಾಡುವುದೇನು? ಯಕ್ಷ ಪ್ರಶ್ನೆ ಏನಲ್ಲ. ಶುರು ಮಾಡು ನಿನ್ನ  ‘ನಳಪಾಕ’ ಪ್ರಯೋಗ, ಶರ್ಮರ ಹಾಸ್ಯ ಎಂದಿನಂತೆ. ಅದರಲ್ಲಿ ಮಾಡಿ ನೋಡೋಣ ವೆಂಬ ಕುತೂಹಲ ಸಹ ಇಣುಕುತ್ತಿದ್ದುದು ಸ್ಪಷ್ಟವಾಗಿತ್ತು. ಎಲ್ಲ ಗೆಡ್ಡೆಗಳಂತೆ ಪಲ್ಯ ಹುಳಿಗೆ ಬಳಸಿಯಾಯಿತು. ಹೇಳಿಕೊಳ್ಳುವ ವಿಶೇಷ ರುಚಿ ಏನಿರಲಿಲ್ಲ. ಹಸಿಯದನ್ನೇ ಬಿಲ್ಲೆ ತೆಗೆದು ತಿಂದಾಗ ಮಾತ್ರ ರಸ ತುಂಬಿದ ಸಿಹಿ. (ಸ್ಟೀವಿಯವನ್ನು ನಾಚಿಸುವಷ್ಟು) ಸಲಾಡ್ ಗೆ ಹೇಳಿ ಮಾಡಿಸಿದ ಗೆಡ್ಡೆ.

ತಿಳಿದವರಿಗೆಲ್ಲ ಹಂಚಿದ ಮೇಲೂ ಹತ್ತಾರು ಗೆಡ್ಡೆ ಉಳಿದಾಗ ಎರೆಡು ಗೆಡ್ಡೆ ಅದರ ತಾಳಿಕೆ(ಶೆಲ್ಫ್ ಲೈಫ್) ಪರೀಕ್ಷಿಸಲು ಇಟ್ಟಾಯಿತು. ಒಂದು ಗೆಡ್ಡೆ ತುರಿದು ತುಪ್ಪ ಸಕ್ಕರೆ ಏಲಕ್ಕಿ, ದ್ರಾಕ್ಷಿ ಗೋಡಂಬಿ ಬೆರೆಸಿ ಮಾಡಿದ ಹಲ್ವ ನಿಮಿಶದಲ್ಲಿ ಖಾಲಿ. ಗೆಳೆಯ ಶ್ರೀಕಂಠ ಚಪ್ಪರಿಸಿ ತಿಂದರು.

ಹೊಸದೊಂದು ‘ಮೆನು’ ಲಿಸ್ಟಿಗೆ. ವಾಟ್ ನೆಕ್ಸ್ಟ್? ಶರ್ಮರ ಕಣ್ಣಲ್ಲಿ ಪ್ರಶ್ನೆ? ಚಿಪ್ಸ್ ಮತ್ತು ಡ್ರೈ ಫ್ರೈ. ಪ್ರಯತ್ನ ಸಫಲ. ಎಲ್ಲರಿಗೂ ಇಷ್ಟವಾಯಿತೆಂದು ಬೇರೆ ಹೇಳ ಬೇಕಿಲ್ಲ.

ಇದನ್ನು ಏನು ಮಾಡಿದರೆ ಬಹಳ ದಿನ ಇಡಬಹುದು? ಕೆಡದಂತೆ? ಎರೆಡು ದಿನದ ಚಿಂತೆಗೆ ಉತ್ತರ ದೊರೆತಿದ್ದು ಬೆಂಗಳಿಯ ಪದ್ಮ ಅವರೊಡನೆಯ ಸಂಭಾಷಣೆಯ ನಂತರ. ಅವರು ‘ಕೋವೆಕಾಯಿಯಲ್ಲಿ ಹಪ್ಪಳ ಮಾಡುವುದು ಸಾಧ್ಯವಾದರೆ ನಾವು ಇದರಲ್ಲೇಕೆ ಮಾಡಬಾರದು? ಮೊದಲ ಪ್ರಯತ್ನ ದಲ್ಲಿ ಮಾಡಿದ ೧೫ ಹಪ್ಪಳ ಫಸ್ಟ್ ಕ್ಲಾಸ್. ಆ ಹಿಟ್ಟಿಗೆ ಒಂದು ಚಮಚ ಗೋಧಿ ಹಿಟ್ಟು ಬೆರೆಸಿ ಪೂರಿ ಹಾಳೆ ಲಟ್ಟಿಸಿ ಕರಿದರೆ ಬಿಸಿ ಬಿಸಿ ಪೂರಿ ಸಿದ್ಧ.

ಬಸಿ ಬಿಸಿ ಯಾಮ್ ವಡ.

ತುಂಬ ಗೆಡ್ಡೆಗಳನ್ನು ಬೆಳೆದಾಗ ಸ್ವಲ್ಪ ಖಾರ ಹಾಕಿ ಹಪ್ಪಳ ಮಾಡಿ ಒಣಗಿಸಿ ಇಟ್ಟು ಕೊಂಡರೆ ಮಳೆಗಾಲಕ್ಕೆ ‘ಕುರು ಕುರೆ’ ಕೊಳ್ಳ ಬೇಕಿಲ್ಲ ಬಿಸಿ ಬಿಸಿ ಚಹದ ಜೊತೆಗೆ ಗರಿ ಗರಿ ಹಪ್ಪಳ ಸಹ. .

ಸ್ವಲ್ಪ ತೊಳೆದ ಅಕ್ಕಿ ಹಿಟ್ಟು, ಉಪ್ಪು,ಇಂಗು, ಹಸಿ ಮೆಣಸಿನ ಕಾಯಿಯನ್ನು  ಬೇಯಿಸಿದ ‘ಯಾಮ್’ ಹಿಟ್ಟಿಗೆ ಬೆರೆಸಿ ಉಂಡೆ ಮಾಡಿ ಚಕ್ಕುಲಿ ಒರಳಲ್ಲಿ ಫೇಣಿ ಬಿಲ್ಲೆ ಹಾಕಿ ಒತ್ತಿ ಬಿಸಿಲಲ್ಲಿ ಒಣಗಿಸಿ ಇಟ್ಟರೆ, ಬೇಕೆಂದಾಗ ಸೊಪ್ಪಿನ ಹುಳಿಯ ಜೊತೆ ತಿನ್ನಲು ಸಂಡಿಗೆ ರೆಡಿ.

ಬೇಯಿಸಿದ ಯಾಮ್ ಹಿಟ್ಟಿಗೆ ಸ್ವಲ್ಪಕಡಲೆ ಹಿಟ್ಟು, ಉಪ್ಪು. ಓಂ ಕಾಳು ಬೆರೆಸಿ ಕಾದ ಎಣ್ಣೆಗೆ ಓಂಪುಡಿ ಬಿಲ್ಲೆಯಲ್ಲಿ ಒತ್ತಿ ಕರಿದರೆ ಸಂಜೆಯ ಚಹ ವೇಳೆಗೆ ಗರಿ ಗರಿ ಓಂಪುಡಿ ಸಿದ್ಧ.

ಸೀಮೆಅಕ್ಕಿ(ಸಬ್ಬಕ್ಕಿ) ನೆನೆಸಿದ್ದು, ಉಪ್ಪು, ಜೀರಿಗೆ, ಕತ್ತರಿಸಿದ ಮೆಣಸಿನಕಾಯಿ ಕೊತ್ತಂಬರಿ ಸೊಪ್ಪು  ಬೇಯಿಸಿದ ಯಾಮ್ ಬೀನ್ ಹಿಟ್ಟಿಗೆ ಸೇರಿಸಿ ಕಲೆಸಿ. ಸಣ್ಣ ಉಂಡೆಮಾಡಿ ಅಂಗೈಯಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿ ಯಾಮ್ ಬೀನ್ ವಡ (ಮಹಾರಾಷ್ಟ್ರದಲ್ಲಿ ಪ್ರಸಿದ್ಧವಾದ ಸಾಬುದಾನ ವಡೆಯಂತೆಯೇ ಇರುತ್ತೆ.) ಸಂಜೆಯ ತಿಂಡಿಗೆ ರೆಡಿ.

ಯಾಮ್ ಹಪ್ಪಳ

ಯಾಮ್ ನಿಂದ ಎಲ್ಲರೀತಿಯ ಖಾದ್ಯಗಳನ್ನು ಮಾಡಬಹುದಲ್ಲದೆ, ಬಹಳ ಸಮಯ ದಾಸ್ತಾನಿಡ ಬಹುದಾದ ಹಪ್ಪಳ ಸಂಡಿಗೆ ಮಾಡಿ ಇಟ್ಟುಕೊಳ್ಳ ಬಹುದು.

ಮನೆಯಲ್ಲೇ ಮಾಡಿದ್ದರಿಂದ ಶುಚಿ ರುಚಿ ಎರೆಡೂ ಇರುತ್ತೆ. ಯಾಮ್ ಬೆಳೆಯಿರಿ, ಬಗೆ ಬಗೆಯ ಖಾದ್ಯ ಮಾಡಿ ಸವಿಯಿರಿ ಎಂಬುದು ಕೊನೆ ಹನಿ ಹಾಗೂ ಕಿವಿ ಮಾತು

ಅಡಿ ಟಿಪ್ಪಣಿ : ಆಲೂಗೆಡ್ಡೆಯಂತೆ ಹೆಚ್ಚು ನೀರು ಗೊಬ್ಬರದ ಅವಶ್ಯಕತೆ ಇಲ್ಲ. ಆರೋಗ್ಯವಾಗಿ ಬೆಳೆಯುವ ಗಿಡವಾದ್ದರಿಂದ ಕೀಟನಾಶಕಗಳ ಖರ್ಚಿಲ್ಲ. ಹಸಿಯಾಗಿಯೇ ತಿನ್ನ ಬಹುದು. ಈ ಎಲ್ಲ ಗುಣಗಳಿಂದಾಗಿ ಗೆಡ್ಡೆಗಳ ಕುಟುಂಬಕ್ಕೆ ಇದೊಂದು ಉತ್ತಮ ಸೇರ್ಪಡೆಯಾಗ ಬಹುದು.

(ಚಿತ್ರಗಳು : ಎ ಆರ್ ಎಸ್ ಶರ್ಮ)