ರುದ್ರಭೂಮಿಯ ನಿಶ್ಶಬ್ದಗಳಲ್ಲಿ
ನಾನೊಬ್ಬನೇ.
ಸುತ್ತಲೂ ನಿಂತ ಮರಗಳಿಂದು-
ದುರುತ್ತಲಿವೆ ಎಲೆ
ಒಂದೊಂದೇ
ಗಾಳಿ ಬೀಸಿದ ಹಾಗೆ.

ಒಳಗೆ ಮಲಗಿದ್ದಾರೆ ನಿನ್ನೆ-ಮೊನ್ನೆಯ
ಮತ್ತೆ ಅದರಾಚೆ ವರ್ಷಗಳ
ನೆಲವ ತುಳಿದವರು,
ಉಸಿರಾಗಿ ಹೆಸರಾಗಿ
ಅವರಿವರ ಜತೆಯಾಗಿ
ಬದುಕಿದವರು,
ತಮ್ಮ ಕಾಲದ ಜತೆಗೆ
ಹೊಡೆದಾಡಿದವರು,
ಮಲಗಿದ್ದಾರೆ ನಿಶ್ಶಬ್ದವಾಗಿ, ಕರಗಿ
ನೆಲದಾಳದಲ್ಲಿ ಅರಗಿ
ಮತ್ತೆ ಸುತ್ತಲು ನಿಂತ ಈ
ಮರಗಿಡಗಳಲ್ಲಿ ಹಸುರಾಗಿ
ಹೂವಾಗಿ, ಹಕ್ಕಿದನಿಯಾಗಿ
ನೆಲವ ತಬ್ಬಿರುವ ಹುಲ್ಲಾಗಿ, ಕಲ್ಲಾಗಿ
ಇನ್ನೂ ಏನೇನೋ ಆಗಿ
ಗುರುತು ಸಿಗದಾಗಿ.

ನಾನು ಕೂತಿದ್ದೇನೆ, ಈ ನಡುವೆ
ಆಕಾರವಾಗಿ
ಉಸಿರಾಡುತ್ತ, ಇದನೆಲ್ಲ ನೋಡುತ್ತ
ನನಗು-ಅವರಿಗು ನಡುವೆ
ವ್ಯತ್ಯಾಸವೇನೆಂದು ಚಿಂತಿಸುತ್ತ
ಒಳಗು-ಹೊರಗಿನ ಗೆರೆಯ
ಗುರುತಿಸುತ್ತ.