ಗೆಲಿಲಿಯೊ ಗೆಲಿಲೈ

 

 

(ಕ್ರಿ. ಶ. ೧೫೬೪-೧೬೪೨) (ಲೋಲಕ ನಿಯಮ, ಥರ್ಮಾಮೀಟರ್, ದೂರದರ್ಶಕ ಲೆನ್ಸುಗಳು)

 

ಆಧುನಿಕ ಭೌತಶಾಸ್ತ್ರದ ಸಂಸ್ಥಾಪಕನೆಂದು ವಿಶ್ವವಿಖ್ಯಾತಿಯನ್ನು ಪಡೆದ ಗೆಲಿಲಿಯೊ ಗೆಲಿಲೈ ೧೫೬೪ರಲ್ಲಿ ಇಟಲಿಯ ಪೀಸಾ ನಗರದಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದರು. ಈತ ಪೀಸಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು. ಆದರೆ ಈತ ಭೌತಶಾಸ್ತ್ರದಲ್ಲಿ ಮಾಡಿದ ಸಂಶೋಧನೆಗಳು ಜಗದ್ವಿಖ್ಯಾತಗವಾಗಿವೆ.

ತನ್ನ ೧೯ನೆಯ ವಯಸ್ಸಿನಲ್ಲೇ ಗೆಲಿಲಿಯೊ ಲೋಲಕ ನಿಯಮಗಳನ್ನು ಕಂಡು ಹಿಡಿದರು. ಈ ಸಂಶೋಧನೆಗೆ ಒಂದು ಘಟನೆ ಕಾರಣವಾಗಿತ್ತು. ಒಮ್ಮೆ ಅವರು ಕೆತೆಡ್ರಲ್ ಚರ್ಚಿನಲ್ಲಿ ದೀಪವೊಂದು ಲೋಲಕದಂತೆ ಅತ್ತಿಂದ ಇತ್ತ ಇತ್ತಿಂದ ಅತ್ತ ಅಲ್ಲಾಡುತ್ತಿದ್ದುದನ್ನು ಗಮನಿಸಿದರು. ಅಲ್ಲಿ ಅವರ ವೈಜ್ಞಾನಿಕ ಪರಿಕಲ್ಪನೆ ಕಾರ್ಯ ಮಾಡಿತು. ಹೀಗೆ ಅತ್ತಿಂದ ಇತ್ತ ಇತ್ತಿಂದ ಅತ್ತ ಬೀಸುವ ಲೋಲಕವನ್ನು ಸಮಯ ಅಳೆಯಲು ಏಕೆ ಬಳಸಬಾರದು ಎಂದು ಆಲೋಚಿಸಿದರು. ಅವರ ಈ ಆಲೋಚನೆಯೇ ಆಧುನಿಕ ಗಡಿಯಾರಗಳ ಸಂಶೋಧನೆಗೆ ಹಾದಿಯನ್ನು ಹಾಕಿಕೊಟ್ಟಿತು.

ಬೇರೆ ಬೇರೆ ತೂಕದ ವಸ್ತುಗಳು ಒಂದೇ ವೇಗದಿಂದ ಬೀಳುತ್ತವೆ ಎಂಬುದನ್ನು ಗೆಲಿಲಿಯೊ ಪೀಸಾದ ವಾಲುತ್ತಿರುವ ಗೋಪುರದಿಂದ ವಸ್ತುಗಳನ್ನು ಕೆಳಗೆ ಬೀಳಿಸುವ ಮೂಲಕ ತೋರಿಸಿಕೊಟ್ಟರು. ತನ್ನ ಪ್ರತಿಭೆಯ ಬಲದಿಂದಲೇ ಗೆಲಿಲಿಯೊ ಪಡುವಾ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕ ಹುದ್ದೆಯನ್ನು ಪಡೆದರು. ಗೆಲಿಲಿಯೊ ತನ್ನ ಪ್ರಯೋಗಗಳ ಮೂಲಕ ಚನಶಾಸ್ತ್ರದ ಕೆಲವು ಮೂಲಭೂತ ಪರಿಕಲ್ಪನೆಗಳನ್ನು ಸಿದ್ಧಗೊಳಿಸಿದನು. ವಿಜ್ಞಾನ ಅಧ್ಯಯನದಲ್ಲಿ ಪ್ರಯೋಗಶಿಲತೆಯು ಅತಿಮುಖ್ಯವೆಂದು ಪ್ರತಿಪಾದಿಸಿದ ಗೆಲಿಲಿಯೊವನ್ನು ಆಧುನಿಕ ವಿಜ್ಞಾನದ “ಪಿತಾಮಹ”ನೆಂದು ಪರಿಗಣಿಸಲಾಗಿದೆ.

೧೫೯೨ರಲ್ಲಿ ಅವರು ಗ್ಯಾಸ್ ಥರ್ಮಾಮೀಟರನ್ನು ಕಂಡು ಹಿಡಿದರು. ೧೬೦೯ರಲ್ಲಿ ಅವರು ಆಕಾಶಸ್ಥ ಕಾಯಗಳ ಗಾತ್ರವನ್ನು ದೊಡ್ಡದಾಗಿ ತೋರಿಸುವ ಲೆನ್ಸ್ ಗಳನ್ನು ಬಳಸಿದ ಜಗತ್ತಿನ ಮೊತ್ತ ಮೊದಲನೆಯ ವಿಜ್ಞಾನಿಯಾದರು. ಮುಂದೆ ಈ ಲೆನ್ಸುಗಳ (ಮಸೂರ) ಬಳಕೆಯೇ ಟೆಲಿಸ್ಕೋಪ್ಗಳ ಸಂಶೋಧನೆಗೆ ಮಾರ್ಗವಾಯಿತು. ಭೂಮಿ ತನ್ನ ಅಕ್ಷದ ಸುತ್ತ ತಿರುಗುತ್ತಾ ಸೂರ್ಯನ ಸುತ್ತ ತಿರುಗುತ್ತದೆ ಎಂಬ ಕೋಪರ್ನಿಕಸ್ ನ ಸಿದ್ಧಾಂತ ಸರಿ ಎಂದು ಆತ ತನ್ನ ವೀಕ್ಷಣೆಗಳ ಆಧಾರದ ಮೇಲೆ ಪ್ರತಿಪಾದಿಸಿದರು. ಆದರೆ ಆ ಪ್ರತಿಪಾದನೆ ಚರ್ಚಿನ ಪರಿಕಲ್ಪನೆಗಳಿಗೆ ವಿರುದ್ಧವಾಗಿತ್ತು. ಅದಕ್ಕಾಗಿ ಆತ ಗೃಹಬಂಧನದಲ್ಲಿ ಉಳಿಯಬೇಕಾಯಿತು.

ಗೆಲಿಲಿಯೊ ೧೬೪೨ರಲ್ಲಿ ಗೃಹ ಬಂಧನದಲ್ಲಿ ಇದ್ದಾಗಲೇ ನಿಧನರಾದರು.

 

ಪರಿಷ್ಕರಿಸಿದವರು: ಡಾ. ಎಸ್.ಕೆ. ನಟರಾಜು

 

This page was last modified on 22 March 2010 at 10:33.