ಹಗಲ ಬೆಳಕು ನಂದಲು
ತಿರೆಗೆ ಇರುಳು ಮರಳಲು
ಆಮೆ ತನ್ನ ಅಂಗಾಂಗವ
ಚಿಪ್ಪಿಗೆಳೆವ ತೆರದಿ ಲೋಕ
ಚಲನೆಯುಡುಗಿ ನಿಲ್ಲಲು.
ಹಗಲಿನ ಬೆಳಕೆಲ್ಲ ಕರಗಿ
ಒಂದೆ ಚಿಕ್ಕೆಯಾಯಿತೆನಲು
ಬೆಳ್ಳಿಯೊಂದೆ ಮಿರುಗಲು-
ಸಾಲುಗುಡ್ಡ ಪಿಸುಗುಟ್ಟಿತು:
ಬೆಳಕೊಂದೇ ಗೆಲುವುದು !

ಮೌನ ಚಕ್ರ ತಿರುಗುತ್ತಿತ್ತು,
ಇರುಳ ವೀಣೆ ಮಿಡಿಯುತ್ತಿತ್ತು
ನಕ್ಷತ್ರದ ಗಾನವ !
ಮೊಗ್ಗಿನೆದೆಯ ಗರ್ಭಗುಡಿಯ
ಅತಿನಿಗೂಢ ಗಹನದಲ್ಲಿ
ಚೆಲುವು ಶಿಲ್ಪ ಕೆತ್ತುತಿರಲು
ಬಾನ ಕಮಂಡಲುವಿನಿಂದ
‘ಓಂ ಸ್ವಸ್ತಿ’ ತುಳುಕಲು-
ಅರಳಿ ನಿಂತ ಹೂವೆಂದಿತು:
ಚೆಲುವೊಂದೇ ಗೆಲುವುದು !

ಹರಿಣಿಯ ಹೊಡೆಯುಂಡ ಹುಲಿ
ರಕ್ತ ಸಿಕ್ತ ತೃಪ್ತಿಯಲಿ
ಗುಹೆಗೆ ಮರಳಿ ಮುದ್ದು ಮರಿಗೆ
ಮೊಲೆಯೂಡುತ ಮಲಗಲು,
ಕರುವಿಗೆ ಹಸು ಮಿದುಗೆಚ್ಚಲ
ತುಂಬೊಲವನು ಉಣಿಸಲು,
ತಾಯೊಲವಿನ ತೆರದಿ ಅರುಣ
ಕಿರಣ ತೋಳ ಚಾಚಲು-
ಬಾನು ಬುವಿಗೆ ನುಡಿಯಿತಿಂತು:
ಒಲವೊಂದೇ ಗೆಲುವುದು !