ಸುಮಾರು ನಾಲ್ಕುನೂರು ವರ್ಷಗಳ ಹಿಂದೆ ಇಂಗ್ಲಿಷರು ನಮ್ಮ ದೇಶಕ್ಕೆ ವ್ಯಾಪಾರ ಮಾಡಲು ಬಂದರು. ಆದರೆ ಅವರು ಮಾಡಿದ ಕೆಲಸ ಏನು? ವ್ಯಾಪಾರವನ್ನು ಮುಂದುವರಿಸಿದರೇ? ಇಲ್ಲ. ನಮ್ಮ ದೇಶದಲ್ಲಿದ್ದ ಒಳಜಗಳವನ್ನು ಉಪಯೋಗಿಸಿಕೊಂಡು ನಿಧಾನವಾಗಿ ಒಂದೊಂದು ರಾಜ್ಯವನ್ನಾಗಿ ಹಿಡಿದು ತಮ್ಮದಾಗಿಸಿಕೊಂಡರು. ಕಡೆಗೆ ನಮ್ಮ ದೇಶವೆಲ್ಲಾ ಒಂದು ದಿನ ಅವರ ಹಿಡಿತಕ್ಕೆ ಬಂದುಬಿಟ್ಟಿತು.

ಆಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಇಂಗ್ಲಿಷರ ವಿರುದ್ಧ ಭಾರತೀಯರು ಸಿಡಿದು ನಿಂತರು. ರಾಜರು, ವೀರಪುರುಷರು, ವೀರವನಿತೆಯರು ಇಂಗ್ಲಿಷರ ಆಳ್ವಿಕೆಯನ್ನು ಎದುರಿಸಿ ಹೋರಾಡಿದರು. ಆಗ ನಮ್ಮ ನಾಡಿನಲ್ಲಿ ಒಗ್ಗಟ್ಟು ತಕ್ಕಷ್ಟಿಲ್ಲದಿದ್ದರೂ ಶೌರ್ಯ ಸಮೃದ್ಧವಾಗಿತ್ತು. ಇಂಗ್ಲಿಷರನ್ನು ಭಾರತದಿಂದ ಓಡಿಸಿ ಸುಂದರ ಸ್ವತಂತ್ರ ಭಾರತವನ್ನು ಕಟ್ಟುವ ಕನಸನ್ನು ಭಾರತೀಯರು ಕಂಡರು.

ಸ್ವಾತಂತ್ರ್ಯದ ಯೋಧರು

ಈ ಶತಮಾನದ ಆರಂಭದ ಸಮಯ. ತಾಯಿ ಭಾರತಿಯನ್ನು ವಿದೇಶಿಯರ ದಾಸ್ಯದಿಂದ ಬಿಡಿಸಲು ನವಯುಕವರು ಸಿದ್ಧರಾಗಿ ನಿಂತರು. ಈ ವೀರ ದೇಶಾಭಿಮಾನಿಗಳು ಜೈಲಿಗೆ ಹೋಗುತ್ತಿದ್ದರು. ಕಠಿಣ ಶಿಕ್ಷೆ ಅನುಭವಿಸುತ್ತಿದ್ದರು. ನೇಣುಗಂಬ ಏರಿ ಸಂತೋಷದಿಂದ ಸಾಯುತ್ತಿದ್ದರು.

ಆಗಲೇ ದೇಶದ ಚರಿತ್ರೆಯಲ್ಲಿ ಮತ್ತೊಂದು ಮಹತ್ವ ಪೂರ್ಣ ಅಧ್ಯಾಯ ಪ್ರಾರಂಭವಾಯಿತು. ಸ್ವಾತಂತ್ರ್ಯದ ಕಿಡಿ ಹಾರಿಸಿದ ಯುವಕರು ಕೆಟ್ಟ ಇಂಗ್ಲಿಷ್‌ ಅಧಿಕಾರಿಗಳನ್ನು ಕೊಲ್ಲಲು ಸಿದ್ಧರಾಗಿದ್ದರು. ಶಸ್ತ್ರಗಳನ್ನೂ ಬಾಂಬುಗಳನ್ನು ಉಪಯೋಗಿಸಿ ಇಂಗ್ಲಿಷರ ಎದೆ ನಡುಗಿಸುವುದು ಇವರ ಉದ್ದೇಶ. ಈ ಬಿಸಿರಕ್ತದ ಜನಕ್ರಾಂತಿಗಳು ಎಂದು ಚರಿತ್ರೆಯಲ್ಲಿ ಪ್ರಸಿದ್ಧರಾದರು. ಇಂಗ್ಲಿಷ್‌ ಸರ್ಕಾರಕ್ಕೆ ಸಿಂಹಸ್ವಪ್ನರಾದರು.

ಅನೇಕ ಕ್ರಾಂತಿಕಾರಿಗಳು ಇಂಗ್ಲಿಷರ ಹದ್ದುಗಣ್ಣಿನಿಂದ ತಪ್ಪಿಸಿಕೊಂಡು ಬದುಕಿದ್ದುದ್ದು ಸ್ವಲ್ಪ ವರ್ಷಗಳು ಮಾತ್ರ. ಅವರ ಆಗಿನ ಮಂತ್ರ “ಗುಂಡಿಕ್ಕಿ ಓಡು” ಅಥವಾ “ಎದುರಿಸಿ ಸಾಯಿ”, ಸೆರೆಸಿಕ್ಕರೆ ನೇಣು, ಇಲ್ಲದಿದ್ದರೆ ಹೋರಾಟದಲ್ಲಿ ಸಾವು. ಅವರು ನಗುನಗುತ್ತಾ ಸಂತೋಷದಿಂದ ಸಾಯುತ್ತಿದ್ದರು. “ನಾವು ಸಾಯುತ್ತೇವೆ; ದೇಶ ಎಚ್ಚರಗೊಳ್ಳುತ್ತದೆ” ಎಂಬ ಅನಿಸಿಕೆ ಅವರದು.

ಚಂಬಲ್‌ ಕಣಿವೆಯ ದರೋಡೆಗಾರರು

ಭಾರತ ಮಾತೆಯ ಇಂತಹ ಅಪೂರ್ವ ಮಕ್ಕಳಲ್ಲಿ ಒಬ್ಬ ಪಂಡಿತ ಗೇಂದಾಲಾ‌ಲ್‌ ದೀಕ್ಷಿತ್‌.

ಮಧ್ಯಪ್ರದೇಶದ ಗ್ವಾಲಿಯರ್‌ ಪ್ರದೇಶದಲ್ಲಿರುವ ಭಿಂಡ್‌ ಕಾಡುಗಳು ಬಹು ಭೀಕರ. ಅಲ್ಲಿ ಚಂಬಲ್‌ ನದಿ ಹರಿಯುತ್ತದೆ. ಚಂಬಲ್‌ ಕಣಿವೆಯಲ್ಲಿ ಪ್ರಸಿದ್ಧ ದರೋಡೆಕಾರರು ವಾಸ ಮಾಡುತ್ತಾರೆ. ಈಗಲೂ ಆ ಸ್ಥಳಗಳಲ್ಲಿ ಹಗಲು ಪ್ರಯಾಣವೇ ಅತ್ಯಂತ ಕಷ್ಟಕರವಾಗಿರುತ್ತದೆ. ಯಾವಾಗ ಬೇಕಾದರೂ ದರೋಡೆಗಾರರು ಮೇಲೆ ಬಿದ್ದು ಸರ್ವಸ್ವವನ್ನೂ ದೋಚಬಹುದು. ಪ್ರಾಣ ತೆಗೆಯಬಹುದು ಎನ್ನುವ ಭಯವಿದೆ. ಅತ್ಯಂತ ಸಾಹಸಿಗಳೂ ಕಷ್ಟ ಸಹಿಷ್ಣುಗಳೂ ಆಗಿರುವ ಈ ಜನ ಪೋಲಿಸಿನವರ ಕಣ್ಣು ತಪ್ಪಿಸಿ ತಮ್ಮ ಸಾಹಸ ಕೃತ್ಯಗಳಲ್ಲಿ ಪ್ರತಿದಿನ ತೊಡಗಿರುತ್ತಾರೆ.

ಈ ಪ್ರದೇಶದ ಸುತ್ತಮುತ್ತಲಿರುವ ಗ್ರಾಮಗಳ ಜನರೆಲ್ಲರೂ ಸಹ ಚೆಂಬಲ್‌ ದರೋಡೆಗಾರರಂತೆ ಸಾಹಸಿಗಳೂ ಕಷ್ಟ ಸಹಿಷ್ಣುಗಳೂ ಮತ್ತು ಪರಿಶ್ರಮಿಗಳೂ ದಟ್ಟವಾದ ಕಾಡುಗಳಿರುವ ನೆಲ. ಜನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಬೇಕಾದರೆ ಕಾಲು ನಡಿಗೆಯಲ್ಲೇ ಹೋಗಬೇಕು. ಪ್ರತಿದಿನ ಹಲವು ಬಾರಿ ಗುಡ್ಡಗಳನ್ನು ಹತ್ತಿ ಇಳಿಯುತ್ತಿರಬೇಕು. ಕಾಡುಗಳನ್ನು ಹಾದು ಮುಂದೆ ಹೋಗಬೇಕು.

ಮಯೀ ಗ್ರಾಮದ ಹುಡುಗ

ಇಂತಹ ಪ್ರದೇಶವಾದ, ಆಗ್ರಾ ಜಿಲ್ಲೆಯ ಮಯೀ ಎಂಬ ಗ್ರಾಮದಲ್ಲಿ ಜಮೀನುದಾರರ ಕುಟುಂಬವೊಂದರಲ್ಲಿ ಪಂಡಿತ ಗೇಂದಾಲಾಲ್‌ ದೀಕ್ಷಿತ್‌ ಹುಟ್ಟಿದ. ಅವನ ತಂದೆ ಬೋಲಾನಾಥ್‌ ದೀಕ್ಷಿತ್‌ ಹುಟ್ಟಿದ. ಅವರ ತಂದೆ ಬೋಲಾನಾಥ್‌ ದೀಕ್ಷಿತ್‌ ಆ ಊರಿನಲ್ಲಿ ದೊಡ್ಡ ಮನುಷ್ಯ. ಅವನ ತಾಯಿಯ ಹೆಸರು ವಿಚಿತ್ರಾದೇವಿ. ಗೇಂದಾಲಾಲ್‌ ಹುಟ್ಟಿದ್ದು ೧೮೯೦ನೇ ವರ್ಷ ನವೆಂಬರ್‌ ೩೦ನೇ ದಿವಸ.

ಮಯೀ ಹತ್ತಿರದಲ್ಲಿ ಬಟೇಶ್ವರ ಎಂಬ ಪ್ರಸಿದ್ಧ ಸ್ಥಳವಿದೆ. ಬಟೇಶ್ವರದಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಯಮುನಾ ನದಿ ತೀರದಲ್ಲಿ ಒಂದು ದೊಡ್ಡ ಜಾತ್ರೆ ನಡೆಯುತ್ತದೆ. ಈ ಜಾತ್ರೆ ಸುತ್ತಮುತ್ತಲಿನವರಿಗೆಲ್ಲಾ ಸಂಭ್ರಮದ ಸಮಯ.

ಗ್ರಾಮದ ಜನರ ಮುಖ್ಯ ಕಸುಬು ವ್ಯವಸಾಯ. ಅಲ್ಲಲ್ಲಿ ನೂರಾರು ಅಡಿ ಆಳದ ಬಾವಿಗಳು ಇದ್ದವು. ಈ ಬಾವಿಗಳಿಂದ ನೀರು ಮೇಲಕ್ಕೆ ತೆಗೆಯಲು ತುಂಬಾ ಶಕ್ತಿಬೇಕು.

ಚಿಕ್ಕಮಕ್ಕಳಿಗಂತೂ ಸುತ್ತಮುತ್ತಲಿನ ಮರಗಿಡಗಳು, ಕಾಡುಪ್ರದೇಶ, ಗುಡ್ಡಗಳನ್ನು ಕಂಡು ಖುಷಿಯೋ ಖುಷಿ. ಓದು ಪ್ರಾರಂಭಿಸುವವರೆಗೂ ಅವರು ಅಲ್ಲೆಲ್ಲಾ ಓಡಾಡುತ್ತಿದ್ದರು. ಸಣ್ಣಪುಟ್ಟ ಗುಡ್ಡಗಳಿಂದ ಹಾರಿ ಕೆಳಗೆ ಧುಮುಕುವ ಆಟವನ್ನು ಆಡುತ್ತಿದ್ದರು. ದೊಡ್ಡದೊಡ್ಡ ಮರಗಳನ್ನು ಮಂಗಗಳ ಹಾಗೆ ಸುಲಭವಾಗಿ ಹತ್ತಿಬಿಡುತ್ತಿದ್ದರು. ಆ ಹುಡುಗರಿಗೆ ಯಾವ ಹೆದರಿಕೆಯೂ ಇರಲಿಲ್ಲ. ತಮ್ಮ ತಮ್ಮ ಮನೆಯ ದನಕರುಗಳನ್ನು ಅಟ್ಟಿಕೊಂಡು ಗುಡ್ಡ ಹತ್ತಿ ಪ್ರತಿದಿನ ಅಲೆದಾಡುತ್ತಿದ್ದರು. ದಿನವೆಲ್ಲಾ ಅಲ್ಲಿಯೇ ಇದ್ದುಬಿಡುತ್ತಿದ್ದರು. ಊಟದ ಹೊತ್ತಿಗೆ ಅವರಲ್ಲಿ ಒಬ್ಬ ಹುಡುಗ ಕೆಳಗಿಳಿದು ಗ್ರಾಮಕ್ಕೆ ಹೋಗಿ ಎಲ್ಲರಿಗೂ ರೊಟ್ಟಿ ತರುತ್ತಿದ್ದ. ಎಲ್ಲರೂ ತಿನ್ನುತ್ತಿದ್ದರು. ದಿನವೆಲ್ಲಾ ಆಟವಾಡುತ್ತಿದ್ದರು. ಓಡುತ್ತಿದ್ದರು. ಬೀಳುತ್ತಿದ್ದರು. ಕುಸ್ತಿಯಾಡುತ್ತಿದ್ದರು. ಈ ಆಟ-ಕೆಲಸಗಳಿಂದ ಅವರ ಮೈ ಮನಸ್ಸೆಲ್ಲಾ ಗಟ್ಟಿಯಾಗುತ್ತಿದ್ದವು. ಹುಡುಗರೆಲ್ಲಾ ದೊಡ್ಡವರ ಸಹಾಯವಿಲ್ಲದೆಯೇ ಸ್ವತಂತ್ರರಾಗಿ ತಮ್ಮತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು.

ಈ ಸಾಹಸೀ ಮಕ್ಕಳೊಂದಿಗೆ ಗೇಂದಾಲಾಲ್‌ ಬೆಳೆದ. ಅವರ ಹಾಗೆಯೇ ಸದೃಢನೂ, ಪರಿಶ್ರಮಿಯೂ ಆಗಿ ತಯಾರಾದ. ಗುಡ್ಡಗಾಡುಗಳು ಅವನಿಗೆ ಅತಿ ಪರಿಚಿತ ಪ್ರದೇಶಗಳಾದವು. ಯಾವ ಹೆದರಿಕೆಯೂ ಇಲ್ಲದೆ, ಯಾರ ಹಂಗೂ ಇಲ್ಲದೆ, ಶಕ್ತಿಶಾಲಿ-ಸ್ವತಂತ್ರ ಪ್ರವೃತ್ತಿಯ ಹುಡುಗನಾದ ಅವನು.

ಪಾಠ ಕಲಿತ, ಕಲಿಸಲು ಪ್ರಾರಂಭಿಸಿದ

ಗೇಂದಾಲಾ‌ಲ್ ಮೂರು ವರ್ಷದವನಿದ್ದಾಗಲೇ ಅವನ ತಾಯಿ ವಿಚಿತ್ರಾದೇವಿ ತೀರಿಕೊಂಡಳು. ತಂದೆ ಅವನನ್ನು ಚೆನ್ನಾಗಿ ಬೆಳೆಸಿದ. ಓದುಬರಹ ಕಲಿಯುವ ವಯಸ್ಸಾಗುತ್ತಿದ್ದಂತೆಯೇ ಅವನಿಗೆ ಮಯೀ ಗ್ರಾಮದಲ್ಲೇ ಹಿಂದಿಪಾಠ ಪ್ರಾರಂಭವಾಯಿತು. ಪಾಠ ಕಲಿಯುವುದರಲ್ಲಿ ಅವನು ಆಸಕ್ತಿ ತೋರಿಸಿದ. ಬುದ್ದಿವಂತನೆನಿಸಿಕೊಂಡ. ಇಟಾವಾ ಎಂಬ ಸ್ಥಳದಲ್ಲಿ ಶಾಲೆ ಸೇರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಓದು ಮುಗಿಸಿದ. ಮುಂದೆ ಅಗ್ರಾಕ್ಕೆ ಬಂದು ಹೈಸ್ಕೂಲು ಸೇರಿದ. ಅಲ್ಲಿ ಬಹು ಚೆನ್ನಾಗಿ ಓದಿ, ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ಉತ್ತಮ ತರಗತಿಯಲ್ಲಿ ಪಾಸು ಮಾಡಿದ. ಮುಂದೆ ಕಾಲೇಜು ಸೇರಿ ತುಂಬಾ ಓದಬೇಕೆಂದು ಅವನಿಗೆ ಆಸೆಯಿತ್ತು. ಡಾಕ್ಟರು ಪರೀಕ್ಷೆ ಮಾಡಬೇಕೆಂಬ ಯೋಚನೆಯಿತ್ತು. ಆದರೆ ಅದು ಪೂರೈಸಲಿಲ್ಲ. ಕೆಲವಾರು ಕಾರಣಗಳಿಂದ ಓದು ನಿಲ್ಲಿಸಬೇಕಾಯಿತು.

ಸರಿ, ಓದು ಮುಗಿಯಿತು. ಇನ್ನು ಒಂದು ಉದ್ಯೋಗ ಬೇಕಲ್ಲ? ಒಡೈಯಾ ಎಂಬಲ್ಲಿ ದಯಾನಂದ ಆಂಗ್ಲೋ-ವೇದಿಕ್‌ ಸ್ಕೂಲ್‌ ಎಂಬ ಶಾಲೆಯಲ್ಲಿ ಗೇಂದಾಲಾಲ್‌ ಉಪಾಧ್ಯಾಯನಾಗಿ ಸೇರಿದ. ಮಕ್ಕಳಿಗೆ ಪಾಠ ಹೇಳುವುದೆಂದರೆ ಅವನಿಗೆ ಬಹಳ ಸಂತೋಷ.

ಬಂಗಾಳದ ವಿಭಜನೆ

೧೯೦೫ನೆಯ ವರ್ಷದಲ್ಲಿ ಭಾರತೀಯರೆಲ್ಲಾ ರೊಚ್ಚಿಗೇಳುವಂತಹ ಘಟನೆಯೊಂದು ನಡೆಯಿತು. ಇಂಗ್ಲಿಷ್‌ ಸರ್ಕಾರ ಅಖಂಡ ಬಂಗಾಳ ಪ್ರಾಂತವನ್ನು ಎರಡು ತುಂಡು ಮಾಡಲು ನಿರ್ಧರಿಸಿತು. ಬಂಗಾಳದವರಿಗಾಗಲಿ ಅಥವಾ ಇತರ ಪ್ರಾಂತಗಳವರಿಗಾಗಲಿ ಇದು ಸ್ವಲ್ಪವೂ ಇಷ್ಟವಾಗಲಿಲ್ಲ. ಒಂದೇ ಭಾಷೆ ಮಾತನಾಡುವವರು, ಒಂದೇ ಸಂಸ್ಕೃತಿಯನ್ನು ಉಳ್ಳವರು, ಎಷ್ಟೋ ವರ್ಷಗಳಿಂದ ಅಣ್ಣ ತಮ್ಮಂದಿರ ಹಾಗೆ ಇದ್ದವರು ಈಗ ಇದ್ದಕ್ಕಿದ್ದ ಹಾಗೆಯೇ ಬೇರೆ ಬೇರೆ ಬದುಕಲು ಹೇಗೆ ತಾನೇ ಒಪ್ಪುತ್ತಾರೆ? ಒಂದು ಸಂಸಾರ ಒಡೆದ ಹಾಗಾಯಿತು ಇದು. ಬಂಗಾಳದವರು ರೋಷದಿಂದ ಸರ್ಕಾರದ ವಿರುದ್ಧ ದಂಗೆ ಎದ್ದರು.

ಬಂಗಾಳದಲ್ಲಿ ಜನರ ಕೋಪ ಹೆಚ್ಚಾಯಿತು. ಹುಡುಗರು ಶಾಲಾ ಕಾಲೇಜುಗಳನ್ನು ಬಿಟ್ಟರು. ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಜನ ಹೊರಬಂದರು. ವಿದೇಶಿ ವಸ್ತುಗಳಿಗೆ ಬೆಂಕಿ ಹಚ್ಚಿದರು. ವಿದೇಶಿ ಅಧಿಕಾರಕ್ಕೆ ಬಹಿಷ್ಕಾರ ಹಾಕಿದರು. ಸರ್ಕಾರ ವಿಭಜನೆಯನ್ನು ಅಧಿಕೃತವಾಗಿ ಪ್ರಕಟಪಡಿಸಿದ ೧೯೦೫ರ ಅಕ್ಟೋಬರ್‌ ೧೬ನೆಯ ದಿವಸವನ್ನು ಶೋಕದಿನವೆಂದು ಕರೆದರು. ಎಲ್ಲೆಲ್ಲೂ ಅಂಗಡಿ, ಶಾಲೆ, ಕಚೇರಿಗಳನ್ನು ಮುಚ್ಚಿಸಿ ಜನ ಹರತಾಳ ಆಚರಿಸಿದರು. ಅಲ್ಲಲ್ಲಿ ಜನ ಉಪವಾಸವನ್ನು ಆರಂಭಿಸಿದರು. ಗಂಡಸರೆಲ್ಲ ನದಿಯಲ್ಲಿ ಮಿಂದು “ಇಂಗ್ಲಿಷರನ್ನು ಭಾರತದಿಂದ ತೊಲಗಿಸುವ” ಪ್ರತಿಜ್ಞೆ ಮಾಡಿ ಕೈಗೆ ಕಂಕಣ (ರಾಖಿ ಎಂದು ಉತ್ತರ ಭಾರತದಲ್ಲಿ ಕರೆಯುತ್ತಾರೆ) ಕಟ್ಟಿಕೊಂಡರು. ಜನ ಗುಂಪುಗುಂಪಾಗಿ ರಾಷ್ಟ್ರೀಯ ಗೀತೆಗಳನ್ನು ಹಾಡುತ್ತಾ ರಸ್ತೆಗಳಲ್ಲಿ ಮೆರವಣಿಗೆ ಹೋದರು. ಎಲ್ಲರ ಹೃದಯದಲ್ಲೂ ದ್ವೇಷದ ಕಿಡಿ ಎದ್ದಿತ್ತು “ವಂದೇ ಮಾತರಂ” ಎಂಬುದು ಮೊದಲು ಬಂಗಾಳದಲ್ಲಿ ಕೇಳುತ್ತಿದ್ದುದ್ದು ಈಗ ರಾಷ್ಟ್ರೀಯ ಘೋಷಣೆ ಆಯಿತು. ಎಲ್ಲೆಲ್ಲೂ ಸ್ವರಾಜ್ಯದ ದಾಹ ಹುಟ್ಟುಕೊಂಡಿತು. ಈ ರೀತಿ ಬ್ರಿಟಿಷ್‌ ಸರ್ಕಾರ ಮಾಡಿದ ಒಂದು ಅವಿವೇಕದ ಕೆಲಸದಿಂದ ಭಾರತದಲ್ಲೆಲ್ಲಾ ಸ್ವದೇಶೀ ಚಳುವಳಿ ಬೆಂಕಿಯಂತೆ ಹೊತ್ತಿಕೊಂಡಿತು.

ದೇಶಪ್ರೇಮದ ಕಿಚ್ಚು

ನಾಲ್ಕೂ ಕಡೆ ಸ್ವದೇಶೀ ಆಂದೋಲನ ಥಟ್ಟನೆ ಪ್ರಾರಂಭವಾದಾಗ ಗೇಂದಾಲಾಲ್‌ ದೀಕ್ಷಿತ್‌ನ ಹೃದಯದಲ್ಲೂ ದೇಶಪ್ರೇಮದ ಕಿಚ್ಚು ಹತ್ತಿಕೊಂಡಿತು. ಇಂಗ್ಲಿಷರ ರಾಜ್ಯಭಾರದಲ್ಲಿ ದೇಶ ತುಂಬಾ ಹೀನಾವಸ್ಥೆಯಲ್ಲಿದೆ ಎಂದು ಅವನಿಗೆ ಅರಿವಾಯಿತು. ತಮ್ಮಿಷ್ಟ ಬಂದಂತೆ ಇಂಗ್ಲಿಷ್‌ನವರು ಮಾಡುತ್ತಿರುವುದನ್ನು ಕಂಡು ಅವನಿಗೆ ತಡೆಯಲಾರದ ಕೋಪ ಬಂದಿತು. ಜನ ಸುಮ್ಮನೆ ಕೈಕಟ್ಟಿ ಕುಳಿತಿರಬಾರದು. ಒಂದಾಗಿ ಸೇರಿ ಇಂಗ್ಲಿಷಿನವರ ಮೇಲೆ ನುಗ್ಗಿ ಅವರನ್ನು ಧ್ವಂಸಮಾಡಬೇಕು; ಅವರನ್ನು ನಮ್ಮನೆಲದಿಂದ ಹೊಡೆದು ಓಡಿಸಬೇಕು; ಅವರ ದಬ್ಬಾಳಿಕೆಯನ್ನು ತಡೆಗಟ್ಟಬೇಕು ಎನಿಸಿತು.

ತಿಲಕರ ಮಾರ್ಗ

ಅದೇ ಸಮಯದಲ್ಲಿ ಬಂಗಾಲದಲ್ಲಿದ್ದಂತೆ ಮಹಾರಾಷ್ಟ್ರದಲ್ಲೂ ಸ್ವದೇಶೀ ಚಳವಳಿ ದೊಡ್ಡದಾಗಿ ಪ್ರಾರಂಭವಾಗಿತ್ತು. ಪ್ರಸಿದ್ಧ ನಾಯಕರಾದ ಲೋಕಮಾನ್ಯ ತಿಲಕರ ಮುಂದಾಳುತನದಲ್ಲಿ ದೇಶದ ಅಭಿಮಾನಿಗಳೆಲ್ಲಾ ಒಂದಾಗಿದ್ದರು. ತಿಲಕರು ಪತ್ರಿಕೆಗಳಲ್ಲಿ ತಮ್ಮ ಬರವಣಿಗೆಯ ಮೂಲಕ ತಮ್ಮ ಜನರಲ್ಲಿ ದೇಶಪ್ರೇಮವನ್ನು ಹೊಡೆದೆಬ್ಬಿಸಿದ್ದರು. ಮಹಾರಾಷ್ಟ್ರದ ವೀರಪುರುಷನಾದ ಶಿವಾಜಿಯ ಜೀವನವನ್ನು ಜನರಿಗೆ ಹೇಳಿ ವೀರತ್ವವನ್ನು ತುಂಬುತ್ತಿದ್ದರು. ಅಲ್ಲಲ್ಲಿ “ಶಿವಾಜಿ ಉತ್ಸವ” ಎಂದು ಆಚರಿಸಿ ಜನರನ್ನು ಸೇರಿಸುತ್ತಿದ್ದರು. ತಮ್ಮ ಭಾಷಣಗಳಲ್ಲಿ ಇಂಗ್ಲಿಷರ ಆಳ್ವಿಕೆಯ ಅನ್ಯಾಯಗಳನ್ನು ವಿವರಿಸಿ ಅವರಲ್ಲಿ ದೇಶಾಭಿಮಾನವನ್ನೂ ಧೈರ್ಯವನ್ನೂ ಉಕ್ಕಿಸುತ್ತಿದ್ದರು.

ಗೇಂದಾಲಾಲ್‌ ಯುವಕರ ಗುಂಪನ್ನು ಸಿದ್ಧಗೊಳಿಸುತ್ತಿದ್ದ.

ದೇಶಸೇವೆಯ ಪ್ರಾರಂಭ

ಪಂಡಿತ ಗೇಂದಾಲಾಲ್‌ ದೀಕ್ಷಿತ್‌ನಿಗೆ ಲೋಕಮಾನ್ಯ ತಿಲಕರ ರೀತಿ ತುಂಬಾ ಹಿಡಿಸಿತು. ಅವರು ಬರೆಯುತ್ತಿದ್ದ ಲೇಖನಗಳು ಅವನ ಮೇಲೆ ತುಂಬಾ ಪರಿಣಾಮವನ್ನುಂಟು ಮಾಡಿದವು. ಶಿವಾಜಿಯ ಬದುಕು ಅವನಿಗೆ ಆದರ್ಶವೆನಿಸಿತು. ಶಿವಾಜಿಯ ಹಾಗೆ ಶತ್ರುಗಳನ್ನು ಎಲ್ಲ ಉಪಾಯಗಳಿಂದಲೂ ಎದುರಿಸಿ ನಾಶಪಡಿಸಬೇಕು ಎನ್ನುವುದು ಅವನ ಮನಸ್ಸಿನಲ್ಲಿ ಚೆನ್ನಾಗಿ ಬೇರೂರಿತು.

ತಾನೊಬ್ಬನೇ ಸರ್ಕಾರವನ್ನು ಎದುರಿಸುವುದು ಸಾಧ್ಯವಿಲ್ಲ. ತನ್ನೊಂದಿಗೆ ಯುವಕರನ್ನು ಸೇರಿಸಿಕೊಂಡು ಒಂದು ಸಂಸ್ಥೆ ಕಟ್ಟಿ ಇಂಗ್ಲಿಷರನ್ನು ಎದುರಿಸಿ ಹೋರಾಡಬೇಕು. ಅವರ ಆಡಳಿತವನ್ನು ಅಲ್ಲೋಲಕಲ್ಲೋಲ ಮಾಡಬೇಕು ಎಂದವನು ನಿರ್ಧರಿಸಿದ. ಶಿವಾಜಿಯ ಹೆಸರಿನಲ್ಲಿ ಕೆಲಸ ಮಾಡಿದರೆ ಮೇಲೆ ವಿಶೇಷ ಪ್ರಭಾವ ಬೀರಬಹುದು ಎಂದು ಅವನಿಗೆ ಅನ್ನಿಸಿತು. ಕೂಡಲೇ ಒಂದು ಸಂಸ್ಥೆ ಸ್ಥಾಪಿಸಿ ಅದಕ್ಕೆ “ಶಿವಾಜಿ ಸಮಿತಿ” ಎಂದು ಹೆಸರಿಟ್ಟ. ನವಯುವಕರಲ್ಲಿ ದೇಶಭಕ್ತಿ-ಪ್ರೇಮ ಹುಟ್ಟಿಸುವುದೇ ಅವನ ಪ್ರಾರಂಭದ ಯೋಚನೆ.

ಜೊತೆಗೆ ಯಾರು?

ಗೇಂದಾಲಾಲ್‌ ವಿದ್ಯಾವಂತರು ಮತ್ತು ಹಣ ಉಳ್ಳವರು ದೇಶಸೇವೆಯಲ್ಲಿ ತನ್ನ ಕೆಲಸಕ್ಕೆ ಬೆಂಬಲವಾಗುತ್ತಾರೆ ಎಂದು ನಿರೀಕ್ಷಿಸಿದ್ದ. ವಿದ್ಯಾವಂತರಿಗೆ ದೇಶದ ಸ್ಥಿತಿ ಅರ್ಥವಾಗಿರುತ್ತದೆ. ಅವರು ಯೋಚನೆ ಮಾಡಬಲ್ಲರು, ಆದುದರಿಂದ ಅವರಿಂದ ತನ್ನ ಕೆಲಸಕ್ಕೆ ಬೆಂಬಲ ಸಿಕ್ಕುತ್ತದೆ; ಹಣವಂತರಿಗೆ ಹೊಟ್ಟೆಪಾಡಿನ ಯೋಚನೆ ಇರುವುದಿಲ್ಲ. ಅವರು ತಮ್ಮ ಕಾಲವನ್ನೂ ಶಕ್ತಿಯನ್ನೂ ದೇಶದ ಸೇವೆಗೆ ವಿನಿಯೋಗಿಸುತ್ತಾರೆ ಎಂದು ಅವನ ನಂಬಿಕೆ. ಅವರ ಬೆಂಬಲ ಸಿಕ್ಕರೆ ತನ್ನ ಕೆಲಸಕ್ಕೂ ಬೆಲೆ ಬರುತ್ತದೆ, ಗೌರವ ಬರುತ್ತದೆ ಎಂದು ಅವನ ನಿರೀಕ್ಷಣೆ.

ಆದರೆ ಅವನ ನಿರೀಕ್ಷೆ ಸುಳ್ಳಾಯಿತು. ಈ ಮೇಲ್ಮಟ್ಟದ ಜನ ಗೇಂದಾಲಾ‌ಲ್‌ನ ಕ್ರಾಂತಿಕಾರಿ ಯೋಚನೆಗಳಿಗೆ ಬೆಂಬಲಕೊಡಲಿಲ್ಲ.

ಈ ಜನ ಇಲ್ಲದ್ದಿದ್ದರೆ ಬೇಡ, ಸಾಹಸದ ಕೆಲಸಕ್ಕೆ ಧೈರ್ಯ ಮಾಡುವವರ ಬೆಂಬಲ ಸಾಕು ಎಂದುಕೊಂಡ ಗೇಂದಾಲಾಲ್‌. ಅಂತಹ ಸಾಹಸವಂತರಿಗಾಗಿ ಹುಡುಕಿದ. ಅಲ್ಲೂ ಅವನಿಗೆ ನಿರಾಶೆ ಕಾದಿತ್ತು. ನೂರಾರು ವರ್ಷಗಳ ಗುಲಾಮಗಿರಿಯ ದಾಸ್ಯದ ಫಲವಾಗಿ ಜನ ಕುಗ್ಗಿದ್ದರು. ತಮ್ಮಿಂದ ಸಾಹಸದ ಕಾರ್ಯಗಳಾಗುವುದು ಸಾಧ್ಯ ಎಂಬುದನ್ನೇ ಮರೆತಿದ್ದರು. ಬಹುಮಂದಿಗೆ ತಮ್ಮ ಸಂಸಾರದ ಯೋಚನೆ, ತಾವು ನೆಮ್ಮದಿಯಾಗಿರುವ ಯೋಚನೆ, ದೇಶಕ್ಕೆ ಸ್ವಾತಂತ್ರ್ಯವಿಲ್ಲ, ಹೋರಾಡಬೇಕು, ಸ್ವಾತಂತ್ರ್ಯವನ್ನು ಗಳಿಸಬೇಕು ಎಂಬ ಯೋಚನೆಯೇ ಇರಲಿಲ್ಲ. ಈ ನಿಲುವನ್ನು ಕಂಡು ಗೇಂದಾಲಾಲ್‌ನಿಗೆ ಬಹಳ ದುಃಖವಾಯಿತು. ಯಾರ ಭರವಸೆಯಿಂದ ದೇಶದ ಕೆಲಸ ಆರಂಭಿಸುವುದು ಎಂಬ ಯೋಚನೆ ಹುಟ್ಟಿತು.

ಡಕಾಯಿತರೇ ಏಕಾಗಬಾರದು?

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು ಎಂದು ಗೇಂದಾಲಾಲ್‌ನಂತೂ ಸ್ಥಿರಸಂಕಲ್ಪ ಮಾಡಿಕೊಂಡಿದ್ದ. ತಾನು ನೆಚ್ಚಿದವರ ಔದಾಸೀನ್ಯ, ಹೆದರಿಕೆ, ಸ್ವಾರ್ಥ ಕಂಡು ಬೇಸರವಾಯಿತು, ದುಃಖವಾಯಿತು. ಆದರೆ ದೇಶದ ಕೆಲಸ ನಿಲ್ಲಬಾರದು ಎಂದು ಅವನ ವಜ್ರ ಸಂಕಲ್ಪ. ಹಾಗಾದರೆ ಯಾರ ನೆರವು ಪಡೆಯಬಹುದು?

ಚಿಂತೆಯಲ್ಲಿದ್ದವನಿಗೆ ಚಂಬಲ್‌ ಕಣಿವೆಯ ಡಕಾಯಿತರ ನೆನಪಾಯಿತು.

ಅವರು ಸಾಹಸವಂತರು ಎನ್ನುವುದರಲ್ಲಿ ಸಂಶಯವೇ ಇಲ್ಲ. ಸರ್ಕಾರಕ್ಕೆ ಹೆದರದೆ, ಪೊಲೀಸರಿಗೆ ಹೆದರದೆ, ಪ್ರಯಾಣಿಕರಲ್ಲಿ ಇರಬಹುದಾದ ಕತ್ತಿ ಚಾಕು ರಿವಾಲ್ವರುಗಳಿಗೆ ಹೆದರದೆ ಇಡೀ ಪ್ರದೇಶವನ್ನು ತಮ್ಮ ಕೈಯಲ್ಲಿಟ್ಟುಕೊಂಡಿದ್ದರು.

ಡಕಾಯಿತರಿಗೆ ಸಮಾಜದಲ್ಲಿ ಗೌರವವಿಲ್ಲ. ಸಹಜವೇ; ಅವರು ಇತರರಿಗೆ ಪೀಡೆಯನ್ನು ಮಾಡುತ್ತಿದ್ದವರು.

ಆದರೆ ಅವರೆಲ್ಲ ಕೆಟ್ಟವರಿರಲಾರರು. ಕೆಲವರಾದರೂ ಈ ರೀತಿಯ ಜೀವನಕ್ಕೆ ಬೇಸರಪಟ್ಟಿರಬೇಕು. ಸದಾ ಅಪಾಯವೇ ಅಲ್ಲವೆ ಅವರಿಗೆ? ಮರಗಳ ಹಿಂದೆ, ಬಂಡೆಗಳ ಹಿಂದೆ ಬಚ್ಚಿಟ್ಟುಕೊಳ್ಳಬೇಕು. ಯಾವಾಗ ಪೋಲಿಸರ ಕೈಗೆ ಸಿಕ್ಕುತ್ತೇವೆಯೋ ನೇಣು ಹಾಕುತ್ತಾರೊ ಎಂದೇ ಯೋಚನೆ. ಇಷ್ಟು ಅಪಾಯ ಎದುರಿಸಿಯೂ ಅವರಿಗೆ ಗೌರವವಿಲ್ಲ. ತಮ್ಮ ಊರುಗಳಿಂದ ದೂರ ಬಂದಿದ್ದಾರೆ. ತಮ್ಮ ಹೆಂಡತಿ ಮಕ್ಕಳನ್ನು, ನೆಂಟರನ್ನು, ಸ್ನೇಹಿತರನ್ನು ಮತ್ತೆ ನೋಡಬೇಕು ಎಂದರೆ ಸಾಧ್ಯವಿಲ್ಲ. ಇತರರ ಜೊತೆಗೆ ಸೇರಬೇಕು, ಎಲ್ಲರಂತೆ ಇರಬೇಕು ಎಂದು ಆಸೆಪಟ್ಟರೆ ಸಾಧ್ಯವಿಲ್ಲ. ಇದರಿಂದ ಅವರಿಗೂ ಬೇಸರ, ದುಃಖ ಆಗಿರುತ್ತದೆ. ಡಕಾಯಿತರಲ್ಲಿ ಕೆಲವರ ಸ್ಥಿತಿಯಾದರೂ ಹೀಗಿರಬೇಕು.

ಸಮಾಜದಿಂದ ದೂರಾದವರೇ ಎಂದಲ್ಲ, ಪರಿಸ್ಥಿತಿಯಿಂದ ಕೆಲವರು ಈ ಸ್ಥಿತಿಗೆ ಬಂದವರು, ಇಂಗ್ಲಿಷರ ಪ್ರಭುತ್ವದ ಕಾಲದಲ್ಲಿ ಸರ್ಕಾರದ ವಿರುದ್ಧ ಎಲ್ಲಾದರೂ ಒಂದಿಷ್ಟು ಗಲಾಟೆಯಾದರೆ ಸಾಕು, ಪೊಲೀಸರು ತಮ್ಮೂರಿನ ಬಲಶಾಲಿಗಳ ಮೇಲೆ ಅನುಮಾನ ಪಡುತ್ತಿದ್ದರು. ಊರಿನ ಪೈಲ್ವಾನರುಗಳನ್ನು ಕರೆಸಿ ವಿಚಾರಿಸುತ್ತಿದ್ದರು. ಅವರಿಗೆ ಹಿಂಸೆ ಕೊಡುತ್ತಿದ್ದರು. ಪೈಲ್ವಾನರುಗಳಿಗೆ ಕೋಪ ಬರುತ್ತಿತ್ತು. ಪೊಲೀಸಿನವರೊಂದಿಗೆ ಕುಸ್ತಿಗಿಳಿಯುತ್ತಿದ್ದರು. ಇಂತಹವರನ್ನು ಪೊಲೀಸರು ಹಿಡಿದು ಜೈಲಿಗೆ ಹಾಕುತ್ತಿದ್ದರು.ಮೊದಲೇ ಕೋಪಗೊಂಡಿದ್ದ ಪೈಲ್ವಾನರು ಸೇಡಿಗಾಗಿ ಚಡಪಡಿಸುತ್ತಿದ್ದರು. ಶಿಕ್ಷೆ ಮುಗಿಸಿ ಜೈಲಿನಿಂದ ಬಂದ ಕೂಡಲೇ ಸಮಾಜದಿಂದ ಸಿಡಿದು ನಿಲ್ಲುತ್ತಿದ್ದರು. ಒಳ್ಳೆಯವರು ಇಷ್ಟಪಡದ ರೀತಿ ವರ್ತಿಸುತ್ತಿದ್ದರು. ಸರ್ಕಾರವನ್ನೂ – ಪೊಲೀಸಿನವರನ್ನೂ ಹೆದರಿಸಲು ದರೋಡೆಗಳನ್ನು ಮಾಡುತ್ತಿದ್ದರು.

ಇಂತಹ ಜನ ಸುತ್ತಮುತ್ತಲಿನ ಕಾಡುಗಳಲ್ಲಿ, ಗುಡ್ಡಗಳಲ್ಲಿ ಸೇರಿಕೊಂಡಿದ್ದ ಕಳ್ಳರ ಜೊತೆ, ಡಕಾಯಿತರ ಜೊತೆ ಒಂದಾಗಿ, ತಮ್ಮ ಸಾಹಸ ಪ್ರದರ್ಶನ ಮಾಡುತ್ತಿದ್ದರು.

ದೇಶಸೇವೆಗೆ ಸಾಹಸಿಗಳು ಬೇಕು ಅನ್ನಿಸಿದಾಗ ಗೇಂದಾಲಾಲ್‌ನಿಗೆ ಈ ಡಕಾಯಿತರ ನೆನಪು ಬಂದಿತು. ಅವರು ಒಳ್ಳೆಯ ದಾರಿಯಲ್ಲಿ ಇಲ್ಲದಿರಬಹುದು. ಸಮಾಜದಿಂದ ದೂರವಿರಬಹುದು. ಆದರೆ ಅವರ ಯುಕ್ತಿ-ಶಕ್ತಿಗಳನ್ನು ದೇಶದ ಸ್ವಾತಂತ್ರ್ಯ ಚಳುವಳಿಗೆ ಏಕೆ ಉಪಯೋಗಿಸಿಕೊಳ್ಳಬಾರದು? ಇದರಲ್ಲಿ ತಪ್ಪೇನೂ ಇಲ್ಲ ಎನಿಸಿತು ಅವನಿಗೆ. ಸಾಹಸಿಗಳ ಜೊತೆ ಸೇರಿಕೊಂಡು ಶಕ್ತಿ-ಶಸ್ತ್ರಗಳ ಸಂಗ್ರಹಣೆ ಮಾಡಬಹುದು. ಈ ಸಂಪತ್ತಿನ ಮೂಲಕ ಸರ್ಕಾರಕ್ಕೆ ಬೇಕಾದಷ್ಟು ತೊಂದರೆ ಕೊಡಬಹುದು. ದೇಶದವರೆಲ್ಲರ ಗಮನ ಸೆಳೆಯಬಹುದು ಎಂದು ಗೇಂದಾಲಾಲ್‌ ನಿರ್ಧರಿಸಿದ.

ಡಕಾಯಿತ ಭೇಟಿಗಾಗಿ

ದೇಶಸೇವೆಗೆ ಡಕಾಯಿತರ ಸಾಹಸ, ಶಕ್ತಿಗಳನ್ನು ಬಳಸಿಕೊಳ್ಳಬೇಕು ಎಂದುಕೊಳ್ಳುವುದು ಸುಲಭ, ಅದನ್ನು ಕಾರ್ಯಗತ ಮಾಡುವುದು ಹೇಗೆ? ಮೊದಲು ಅವರನ್ನು ಭೇಟಿ ಮಾಡಬೇಕು, ಅವರಿಗೆ ದೇಶಸೇವೆಯ ಕೆಲಸದ ಅಗತ್ಯವನ್ನು ವಿವರಿಸಿ ಹೇಳಬೇಕು, ಅವರ ಮನ ಒಲಿಸಬೇಕು.

ಆದರೆ, ಮೊದಲು ಅವರನ್ನು ಭೇಟಿ ಮಾಡುವುದು ಹೇಗೆ?

ಅವರಿರುವುದು ಎಲ್ಲಿ ಎಂದೇ ಯಾರಿಗೂ ಸರಿಯಾಗಿ ತಿಳಿಯದು. ಗುಡ್ಡಗಾಡು ಪ್ರದೇಶಗಳಲ್ಲಿ ಹುಡುಕಿಕೊಂಡು ಹೋಗಬೇಕು. ಅವರೂ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುತ್ತಾರೆ. ಯಾರಾದರೂ ಅಪರಿಚಿತರು ಬಂದರೆ ಅನುಮಾನ. ಅವರು ಯಾರು ಎಂದು ವಿಚಾರಿಸಿದೆಯೇ ಗುಂಡಿಟ್ಟು ಕೊಂದರೂ ಕೊಂದರೇ!

ಗೇಂದಾಲಾಲ್‌ನೂ ಲಕ್ಷ್ಮಣಾನಂದನೂ ವೀರಾವೇಶದಿಂದ ಕಾದಿದರು.

ಆದರೆ ಗೇಂದಾಲಾಲ್‌ನಿಗೆ ಯಾವ ಭಯವೂ ಇರಲಿಲ್ಲ. ಗುಡ್ಡ ಗಾಡುಗಳೆಲ್ಲಾ ಅವನಿಗೆ ಚಿಕ್ಕಂದಿನಿಂದಲೂ ಚೆನ್ನಾಗಿ ಗೊತ್ತಿದ್ದ ಪ್ರದೇಶಗಳು. ಧೈರ್ಯವಾಗಿ ಆ ಸ್ಥಳಗಳಲ್ಲಿ ಓಡಾಡಿದ. ಡಕಾಯಿತರನ್ನು ಭೇಟಿ ಮಾಡುವವರೆಗೂ ಹಗಲು ರಾತ್ರಿಯನ್ನದೆ ಗುಡ್ಡ ಗಾಡುಗಳನ್ನು ಹತ್ತಿ ಇಳಿದ.

ವೀರ ಸೈನಿಕರ ನಿರ್ಮಾಣ

“ಶಿವಾಜಿ ಸಮಿತಿ”ಯಲ್ಲಿ ನಿಧಾನವಾಗಿ ಗೇಂದಾಲಾಲ್‌ ಯುವಕರನ್ನು ಸೇರಿಸಿದ. ಪ್ರತಿದಿನ ಅವರಿಗೆ ಪಿಸ್ತೂಲು ಗುರಿಯಿಟ್ಟು ಹೊಡೆಯುವುದು, ಕೆಲಸ ಮಾಡಿದ ಮೇಲೆ ಸಿಕ್ಕಿಕೊಳ್ಳದೆ ತಪ್ಪಿಸಿಕೊಳ್ಳುವುದು ಎಲ್ಲವನ್ನೂ ಹೇಳಿಕೊಟ್ಟ. ಹೆಚ್ಚು ಪ್ರಚಾರವಿಲ್ಲದೆ ಹಿಂದೂ ಸುಸಂಘಟಿತ ಯುವಕ ವೀರರ ಗುಂಪು ಅವನ ಗ್ರಾಮದಲ್ಲಿ ತಯಾರಾಗುತ್ತಿತ್ತು.

ಬಂಗಾಳದಲ್ಲಿ ಕ್ರಾಂತಿಕಾರಿಗಳು ಬಾಂಬ್‌ ಮಾಡಲು ಕಲಿತುಕೊಂಡಿದ್ದರು. ಪ್ರಾಣದ ಆಸೆ ಬಿಟ್ಟು ಬಾಂಬ್‌ಗಳನ್ನು ಅವರು ನಿರ್ದಿಷ್ಟವಾದ ಸ್ಥಳಗಳಲ್ಲಿ ಉಪಯೋಗಿಸುತ್ತಿದ್ದರು. ರಹಸ್ಯ ಸ್ಥಳಗಳಲ್ಲಿ ಬಾಂಬುಗಳು ತಯಾರಾಗುತ್ತಿದ್ದವು.

ಗೇಂದಾಲಾಲನಿಗೂ ಬಾಂಬ್‌ ತಯಾರಿಕೆ ಕಲಿತುಕೊಳ್ಳಬೇಕೆಂದು ಯೋಚನೆ ಬಂದಿತು. ಬಾಂಬ್‌ನಿಂದ ಸರ್ಕಾರವನ್ನು ಬೆದರಿಸಬಹುದು ಅನ್ನಿಸಿತು ಅವನಿಗೆ. ತುಂಬಾ ಉತ್ಸಾಹದಿಂದ ಇಬ್ಬರು ಯುವಕರನ್ನು ಜೊತೆ ಮಾಡಿಕೊಂಡು ತಾನೇ ಕಲ್ಕತ್ತೆಗೆ ಹೋದ. ಆದರೆ ಅವನಿಗೆ ಅಲ್ಲಿ ನಿರೀಕ್ಷಿಸಿದ ಉಪಯೋಗ ಆಗಲಿಲ್ಲ. ನಿರಾಸೆಯಿಂದ ಊರಿಗೆ ಹಿಂತಿರುಗಿದ.

“ಶಿವಾಜಿ ಸಮಿತಿ”ಯಲ್ಲಿ ನಾಲ್ಕು ರೀತಿಯ ಕೆಲಸ ನಡೆಯುತ್ತಿತ್ತು. ರಹಸ್ಯವಾಗಿ ಕೆಲಸ ಮಾಡುವ ಯೋಚನೆಗಳು, ಸಮಿತಿಯ ಜನ ಸೈನ್ಯದಲ್ಲಿ ಭರ್ತಿಯಾಗಿ ಅಲ್ಲಿನ ರಹಸ್ಯಗಳನ್ನೂ-ಶಸ್ತ್ರಾಸ್ತ್ರಗಳ ಉಪಯೋಗವನ್ನೂ ಚೆನ್ನಾಗಿ ಕಲಿತುಕೊಳ್ಳುವ ಪ್ರಯತ್ನ ಮಾಡುವುದು, ಧನ ಸಂಗ್ರಹಣೆ ಮತ್ತು ಲೇಖನಗಳ ಮೂಲಕ ಪ್ರಚಾರ.

ಲಕ್ಷ್ಮಣಾನಂದ – ಪಂಚಮಸಿಂಗ್‌

ಸಾಹಸಿಗಳನ್ನು ಸೇರಿಸುವ ಕಾಲದಲ್ಲಿ ಗೇಂದಾಲಾಲ್‌ನಿಗೆ ಬ್ರಹ್ಮಚಾರಿ ಲಕ್ಷ್ಮಣಾನಂದ ಎಂಬ ಭೀಮಕಾಯದ ಯುವಕ ಸಿಕ್ಕಿದ. ಲಕ್ಷ್ಮಣಾನಂದ ಯಾವುದಕ್ಕೂ ಹೆದರದವ. ಪ್ರಾಣಭಯವಿಲ್ಲದೆ ಎಲ್ಲ ಕೆಲಸಗಳಿಗೂ ಮುಂದೆ ನುಗ್ಗುತ್ತಿದ್ದ. ಗೇಂದಾಲಾಲ್‌ನಿಗೆ ಇವನ ಸ್ನೇಹದಿಂದ ಭೀಮಶಕ್ತಿ ಬಂದಿತು. ಹೊಸ ಯುವಕರನ್ನು ಸೇರಿಸುವುದು, ಅವರಿಗೆ ಶಿಕ್ಷಣ ಕೊಡುವುದು ಮೊದಲಾದವುಗಳನ್ನು ಲಕ್ಷ್ಮಣಾನಂದ ಚೆನ್ನಾಗಿ ನಿರ್ವಹಿಸಿದ.

ಆಗಲೇ ಗೇಂದಾಲಾಲ್‌ನಿಗೆ ಪಂಚಮಸಿಂಗ್‌ನೆಂಬ ಡಕಾಯಿತನ ಪರಿಚಯ ಆಯಿತು. ಪಂಚಮಸಿಂಗ್‌ನಲ್ಲಿ ತುಂಬಾ ಶಕ್ತಿಯಿತ್ತು. ಸಾಹಸಿಗಳಾದ ಜೊತೆಗಾರರಿದ್ದರು. ಬೇಕಾದಷ್ಟು ಶಸ್ತ್ರಾಸ್ತ್ರಗಳಿದ್ದವು. ಅವನ ಸಹಾಯದಿಂದ ಅನೇಕ ಡಕಾಯಿತರು ಗೇಂದಾಲಾಲ್‌ನ ಜೊತೆ ಕೆಲಸ ಮಾಡಲು ಒಪ್ಪಿಕೊಂಡರು.

ಗೇಂದಾಲಾಲ್‌ ನಿಧಾನವಾಗಿ ಲಕ್ಷ್ಮಣಾನಂದ ಮತ್ತು ಪಂಚಮಸಿಂಗರ ಸಹಾಯದಿಂದ ಒಂದು ದೊಡ್ಡ ವೀರರ ದಳ ಕಟ್ಟಿದ. ಅವನ ದಳದಲ್ಲಿ ಐನೂರು ಜನ ಇದ್ದರು. ಗ್ವಾಲಿಯರ್‌ ಸಂಸ್ಥಾನದ ಕೆಲವು ಪ್ರದೇಶಗಳು ಅತಿ ದುರ್ಗಮ. ಆ ಸಂಸ್ಥಾನದಲ್ಲಿ ರಾಜರ ಆಳ್ವಿಕೆ ಇತ್ತು. ಬ್ರಿಟಿಷರ ಹಿಡಿತ ಅಷ್ಟಾಗಿ ಇರಲಿಲ್ಲ. ಗ್ವಾಲಿಯರ್‌ನಿಂದಲೇ ಗೇಂದಾಲಾಲ್‌ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ. ಸರ್ಕಾರದ ಕೆಲಸ ಸರಿಯಾಗಿ ನಡೆಯದಂತೆ ದಳದವರು ಅಡ್ಡಿ ಮಾಡಲಾರಂಭಿಸಿದರು. ಬ್ರಿಟಿಷರ ವಿರುದ್ಧ ಜನರನ್ನು ಪ್ರಚೋದಿಸಲು ತೊಡಗಿದರು. ಸರ್ಕಾರ ಗ್ವಾಲಿಯರ್‌ನಲ್ಲಿ ಪೊಲೀಸರನ್ನೂ, ಸೈನಿಕರನ್ನೂ ಹೆಚ್ಚಿಸಿತು. ಸೈನಿಕರಿಗೂ, ದಳದವರಿಗೂ ಆಗಾಗ್ಗೆ ಗುಂಡಿನ ಕಾಳಗ ನಡೆಯುತ್ತಿತ್ತು. ಗೇಂದಾಲಾಲ್‌ನ ಶಿಕ್ಷಿತ ದಳವನ್ನು ಸದೆಬಡಿಯಲು ಸರ್ಕಾರಕ್ಕೆ ಕಷ್ಟವಾಯಿತು.

ಮೈನಪುರಿ ಷಡ್ಯಂತ್ರ

ದಿನೇದಿನೇ ಗೇಂದಾಲಾಲ್‌ನ ದಳದ ಕಾರ್ಯಾಚರಣೆ ಬೆಳೆಯಿತು. ಹೊಸಹೊಸ ಯುವಕರು ಸೇರಿಕೊಂಡರು. ಒಳ್ಳೆಯ ಶಿಕ್ಷಣ ಪಡೆದುಕೊಂಡರು. ಧನ ಸಂಗ್ರಹಣೆಗೆ ಹೊಸ ದಾರಿಗಳನ್ನು ಹುಡುಕುತ್ತಿದ್ದರು.

ಗ್ವಾಲಿಯರ್‌ ಸುತ್ತಮುತ್ತಲಿನ ಪ್ರದೇಶಗಳಾದ ಮೈನಪುರಿ, ಎಟ್ವಾ, ಪಾರಾ, ಸಂಧಾಖೇರ ಮೊದಲಾದ ಸ್ಥಳಗಳಲ್ಲಿ ದಳದ ಚಟುವಟಿಕೆ ದೊಡ್ಡದಾಗಿ ಬೆಳೆಯಿತು. ಸರ್ಕಾರದ ಹಣವನ್ನು ದಳದವರು ದೋಚಿದರು.

ಎಲ್ಲ ಕಡೆಗಳಲ್ಲೂ ಕಾರ್ಯಾಚರಣೆ ವ್ಯವಸ್ಥಿತವಾಗಿ ನಡೆಯುವುದಕ್ಕೋಸ್ಕರ ಗೇಂದಾಲಾಲ್‌ ದಳವನ್ನು ಎರಡು ಮೂರು ಗುಂಪುಗಳನ್ನಾಗಿ ವಿಂಗಡಿಸಿದ. ಪಂಚಸಿಂಗ್‌ನನ್ನೂ ಲಕ್ಷ್ಮಣಾನಂದನನ್ನೂ ನಾಯಕರನ್ನಾಗಿ ನೇಮಿಸಿದ. ತಾನು ನೇತೃತ್ವ ವಹಿಸಿ ಎಲ್ಲ ರೀತಿಯ ಸೂಚನೆಗಳನ್ನು ಕೊಡಲಾರಂಭಿಸಿದ. ಸಮುದ್ರದ ಅಲೆಗಳಂತೆ ಭೋರ್ಗರೆಯುತ್ತ ಇವರ ಚಟುವಟಿಕೆ, ಪ್ರವಾಹ ಮುನ್ನುಗ್ಗುವಂತೆ ನುಗ್ಗಿ ಹರಡಿಕೊಂಡಿತು. “ಇಂಗ್ಲಿಷರನ್ನು ಕೊಲ್ಲಿ” ಎಂಬ ದಳದ ಕೂಗು ಎಲ್ಲೆಡೆಯೂ ಪ್ರತಿಧ್ವನಿಸಿತು. ಒಂದೊಂದು ಸಾಹಸದಿಂದಲೂ ಅವರ ಪ್ರಚಂಡ ಧೈರ್ಯ ಹೆಚ್ಚಾಗುತ್ತಾ ಹೋಯಿತು.

ಗೇಂದಾಲಾಲ್‌ನ ಚಟುವಟಿಕೆ ಸುತ್ತಮುತ್ತಲಿನ ಜನ ಜೀವನವನ್ನು ಅಲುಗಾಡಿಸಿಬಿಟ್ಟಿತು. ಈ ಕಾರ್ಯಾಚರಣೆ “ಮೈನಪುರಿ ಷಡ್ಯಂತ್ರ” ಎಂದು ಪ್ರಸಿದ್ಧವಾಯಿತು. ಈ ಚಟುವಟಿಕೆ ದಿನದಿನಕ್ಕೆ ಬೆಳೆಯುತ್ತಿದ್ದ ರೀತಿಯನ್ನು ಕಂಡು ಸರ್ಕಾರಕ್ಕೆ ಆತಂಕವಾಯಿತು. ಸರ್ಕಾರದ ಅಧಿಕಾರ-ಪ್ರತಿಷ್ಠೆಗಳಿಗೇ ಸವಾಲಾಗಿತ್ತು. ಗೇಂದಾಲಾಲ್‌ನ ಗುಂಪಿನ ಕೆಲಸ. ಈ ಪಿತೂರಿಯಲ್ಲಿ ಭಾಗವಹಿಸಿದವರನ್ನೆಲ್ಲಾ ಸರ್ಕಾರ ದೇಶದ್ರೋಹಿಗಳೆಂದು ಸಾರಿತು. ಅವರನ್ನು ಹಿಡಿಯಲು ಸರ್ವಪ್ರಯತ್ನವನ್ನೂ ಮಾಡಲು ಪ್ರಾರಂಭಿಸಿತು. ಒಂದುಕಡೆ ಪೊಲೀಸಿನವರು ಮತ್ತು ಸೈನಿಕರು ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದವರನ್ನು ಹುಡುಕುತ್ತಿದ್ದರು. ಮತ್ತೊಂದು ಕಡೆ ದಳದ ಜನರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಸರ್ಕಾರ ಎಲ್ಲ ವಿಧದಲ್ಲೂ ಹೊಂಚು ಹಾಕುತ್ತಿತ್ತು.

ದ್ರೋಹ

೧೯೧೮ರ ಜನವರಿ ೩೧ನೇ ದಿವಸ. ಗ್ವಾಲಿಯರ್‌ನ ಭಿಂಡ್‌ ಕಾಡುಗಳಲ್ಲಿ ಗೇಂದಾಲಾಲ್‌ನ ದೊಡ್ಡ ಗುಂಪೊಂದು ಹೋಗುತ್ತಿತ್ತು. ಎರಡು-ಮೂರು ದಿವಸ ನಡೆದರೂ ಕಾಡು ಮುಗಿದಿರಲಿಲ್ಲ. ಈ ಮೂರು ದಿವಸಗಳೂ ದಳದವರಿಗೆ ಊಟ ತಿಂಡಿಯಿಲ್ಲ. ಹಸಿವೆಯಿಂದ ಎಲ್ಲರೂ ಚಡಪಡಿಸುತ್ತಿದ್ದರು. ಮುಂದೆ ಒಂದು ಕಡೆ ನಡೆಯಲಾರದೆ ಎಲ್ಲರೂ ಕುಳಿತುಬಿಟ್ಟರು. ಎಲ್ಲರಿಗೂ ತುಂಬಾ ಸುಸ್ತು. ಹಸಿವು ನೀರಡಿಕೆ. ಯಾರಾದರೂ ತಿನ್ನಲು ಕೊಟ್ಟರೆ ಸಾಕಪ್ಪಾ ಅನಿಸಿಬಿಟ್ಟಿತ್ತು ಅವರಿಗೆ.

ಆಗ ಹಿಂದೂಸಿಂಗ್‌ ಎನ್ನುವನೊಬ್ಬ ಹತ್ತಿರದಿಂದ ತಿಂಡಿ ಹುಡುಕಿ ತರುತ್ತೇನೆ ಎಂದು ಹೇಳಿ ಹೊರಟ. ಎಲ್ಲರೂ ಅವನಿಗಾಗಿ ಕಾದರು. ಸ್ವಲ್ಪ ಹೊತ್ತಾದ ಮೇಲೆ ಹಿಂದೂಸಿಂಗ್‌ ಎಲ್ಲರಿಗೂ ಬಿಸಿಬಿಸಿ ಪೂರಿ ತಂದ. ಎಲ್ಲರೂ ಪೂರಿ ಹಾಕಿಸಿಕೊಂಡು ಗಬಗಬನೆ ತಿನ್ನಲಾರಂಭಿಸಿದರು. ಎಲ್ಲರಿಗೂ ಅಷ್ಟೊಂದು ಹಸಿವು. ಸಾಮಾನ್ಯವಾಗಿ ಹೊರಗೆ ಏನನ್ನೂ ತಿನ್ನದಿದ್ದ ಲಕ್ಷ್ಮಣಾನಂದನೂ ಒಂದೆರಡು ಪೂರಿ ತಿಂದ.

ಹೆಚ್ಚು ಪೂರಿಗಳನ್ನು ತಿನ್ನುತ್ತಿದ್ದವರು ತಲೆ ತಿರುಗುವಂತಾಗುತ್ತಿದೆ ಎಂದರು.

ಲಕ್ಷ್ಮಣಾನಂದನಿಗೆ ಅನುಮಾನ ಬಂದಿತು. ಏನೋ ಮೋಸವಾಗಿದೆ ಎನಿಸಿತು. ಪೂರಿಯಲ್ಲಿ ಏನಾದರೂ ಬೆರೆಸಿರಬಹುದು ಎನಿಸಿತು.

ಪೂರಿಗಳನ್ನು ತಂದವನು ಹಿಂದೂಸಿಂಗ್‌ ಅಲ್ಲವೆ? ಅವನನ್ನೇ “ಪೂರಿಗಳನ್ನು ಎಲ್ಲಿಂದ ತಂದೆ? ಯಾರ ಹತ್ತಿರ ತಂದೆ?” ಎಂದು ಕೇಳಬೇಕು ಎಂದು ಲಕ್ಷ್ಮಣಾನಂದ ತಿರುಗಿದ. ಎಲ್ಲರಿಗೂ ನೀರು ತರಲು ಹಿಂದೂಸಿಂಗ್‌ ಹೋಗುತ್ತಿರುವುದು ಅವನಿಗೆ ಕಾಣಿಸಿತು.

ಕಾಳಗ

ಮುಂದಿನ ಕ್ಷಣದಲ್ಲಿ ಲಕ್ಷ್ಮಣಾನಂದನಿಗೆ ಎಲ್ಲವೂ ಅರ್ಥವಾಯಿತು. ತಮ್ಮಲ್ಲಿದ್ದುಕೊಂಡು, ತಮ್ಮವನ ಹಾಗೆಯೇ ನಟಿಸುತ್ತಿದ್ದ ಹಿಂದೂಸಿಂಗ್‌ ದ್ರೋಹ ಮಾಡಿದ್ದಾನೆಂದು ತಿಳಿಯಿತು. ಕೂಡಲೇ ಪಿಸ್ತೂಲನ್ನು ಹಿಂದೂಸಿಂಗನ ಕಡೆಗೆ ಗುರಿಮಾಡಿ ಗುಂಡುಹಾರಿಸಿದ. ಗುಂಡಿನ ಶಬ್ದ ಕಾಡಿನಲ್ಲೆಲ್ಲಾ ಪ್ರತಿಧ್ವನಿಸಿತು.

ಇದ್ದಕ್ಕಿದ್ದ ಹಾಗೆಯೇ ಅವರ ಸುತ್ತಮುತ್ತಲೆಲ್ಲಾ ಗುಂಡಿನ ಶಬ್ದ ಕೇಳಿಬಂತು. ಸೈನಿಕರ-ಪೊಲೀಸರ ಬೂಟಿನ ಶಬ್ದ ಕೇಳಿಸಿತು. ಲಕ್ಷ್ಮಣಾನಂದ ಕ್ಷಣಾರ್ಧದಲ್ಲಿ ಪಿಸ್ತೂಲು ಹಿಡಿದು ಸಿದ್ಧನಾಗಿ ನಿಂತ.

ತಮ್ಮ ಸುತ್ತಲೂ ತನ್ನ ಗೆಳೆಯರಿಗಾಗಿರುವ ಅವಸ್ಥೆ ಕಂಡು ಅವನಿಗೆ ದುಃಖ-ರೋಷ ಉಕ್ಕಿಬಂತು. ಹೊಟ್ಟೆ ತುಂಬಾ ಚೆನ್ನಾಗಿ ಪೂರಿ ತಿಂದಿದ್ದವರು ಮೈಮರೆತು ಸುಸ್ತಾಗಿ ನೆಲಕ್ಕೊರಗಿದ್ದರು. ಅರ್ಧಂಬರ್ಧ ತಿಂದಿದ್ದವರು ಹಾಗೇ ತೂರಾಡುತ್ತಿದ್ದರು. ಒಬ್ಬಿಬ್ಬ ಧೀರರು ಆಗಲೇ ಪಿಸ್ತೂಲು ಹಿಡಿದು ಸಿದ್ಧರಾಗಿ ನಿಂತಿದ್ದರು. ಮಾತೃದೇವಿಯನ್ನು ಸ್ವತಂತ್ರಗೊಳಿಸಲು ತಮ್ಮ ಸರ್ವಸ್ವವನ್ನೂ ತ್ಯಾಗಮಾಡಲು ತಯಾರಾಗಿ ನಿಂತ ಆತ್ಮೀಯ ಸ್ನೇಹಿತರನ್ನು ನೋಡಿ ಲಕ್ಷ್ಮಣಾನಂದನಿಗೆ ಹೆಮ್ಮೆಯೂ ಆಯಿತು. ದುಃಖವೂ ಆಯಿತು.

ಲಕ್ಷ್ಮಣಾನಂದ ಅಂದುಕೊಂಡಿದ್ದು ನಿಜವಾಗಿತ್ತು. ಹಿಂದೂಸಿಂಗ್‌ ಸರ್ಕಾರದ ಸಹಾಯಕನಾಗಿ ದಳದ ದ್ರೋಹಿಯಾದ. ಗೇಂದಾಲಾಲ್‌ನ ದೊಡ್ಡ ಈ ಗುಂಪು ದಿವಸ ಎಲ್ಲಿರುತ್ತದೆ ಎಂದು ಸುಳಿವನ್ನು ಸರ್ಕಾರಕ್ಕೆ ಕೊಟ್ಟುಬಿಟ್ಟ. ಐನೂರ ಮಂದಿ ಸೈನಿಕರ ಮತ್ತು ಪೊಲೀಸರ ದೊಡ್ಡಗುಂಪೊಂದು ಗೇಂದಾಲಾಲ್‌ನ ದಳವನ್ನು ಸುತ್ತುವರಿದಿತ್ತು.

ಮುಂದಿನ ಕ್ಷಣದಲ್ಲಿ ಆ ಸ್ಥಳ ರಣರಂಗವಾಗಿ ಹೋಯಿತು. ಎರಡು ಕಡೆಗಳಿಂದಲೂ ಗುಂಡುಗಳ ಸುರಿಮಳೆಯಾಯಿತು. ಗೇಂದಾಲಾಲ್‌ನ ದಳದವರು ಶಕ್ತಿಮೀರಿ ಹೋರಾಡಿದರು. ಆದರೆ ಪಾಪ, ನೂರಾರು ಸಶಸ್ತ್ರ ದಳದವರ ಮುಂದೆ ಅವರು ಏನು ತಾನೇ ಮಾಡಿಯಾರು? ಎಷ್ಟು ಹೊತ್ತು ಹೊಡೆದಾಡಿಯಾರು? ಅದರಲ್ಲಿಯೂ ಅವರಲ್ಲಿ ಎಷ್ಟೋ ಮಂದಿ ವಿಷ ಬೆರೆಸಿದ ಪೂರಿ ತಿಂದವರು.

ನಿಧಾನವಾಗಿ ಸೈನಿಕರು-ಪೊಲೀಸಿನವರು ಮೇಲುಗೈಯಾಯಿತು. ದಳದ ಅನೇಕರು ಸತ್ತುಬಿದ್ದರು. ಲಕ್ಷ್ಮಣಾನಂದನೂ ಗೇಂದಾಲಾಲ್‌ನೂ ವೀರಾವೇಶದಿಂದ ಕಾದಾಡಿದರು. ಇಬ್ಬರಿಗೂ ತುಂಬಾ ಗಾಯಗಳಾದವು. ಲಕ್ಷ್ಮಣಾನಂದ ಸತ್ತೇಹೋದ. ಗೇಂದಾಲಾಲ್‌ನ ಒಂದು ಕಣ್ಣು ಹೋಯಿತು. ಗೇಂದಾಲಾಲ್‌ನನ್ನೂ ಸೇರಿ ಬದುಕಿದ್ದವರನ್ನೆಲ್ಲಾ ಪೊಲೀಸರು ಸೆರೆಹಿಡಿದರು.

ಸೆರೆ

ಸೆರೆಸಿಕ್ಕವರನ್ನೆಲ್ಲಾ ಪೊಲೀಸರು ಗ್ವಾಲಿಯರ್‌ಗೆ ಕರೆದುಕೊಂಡು ಹೋದರು. ಕೈಕಾಲಿಗೆ ಬೇಡಿ ಹಾಕಿ ಜೈಲಿನಲ್ಲಿ ದೂಡಿದರು. ಎಲ್ಲರಿಗೂ ಬಹಳ ಪೆಟ್ಟು ಬಿದ್ದಿತ್ತು. ಜೈಲಿನಲ್ಲಿ ಸರಿಯಾಗಿ ಆಹಾರ ಕೊಡಲಿಲ್ಲ. ಪ್ರತಿದಿನವೂ ಅವರಿಗೆ ಪೊಲೀಸರು ಪ್ರಶ್ನೆಗಳನ್ನು ಹಾಕುತ್ತಿದ್ದರು. ಎಲ್ಲ ವಿಷಯಗಳನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಪೊಲೀಸರು ಚಿತ್ರಹಿಂಸೆ ಮಾಡಿದರೂ ಯಾರೂ ಬಾಯಿಬಿಡಲಿಲ್ಲ. ಪೊಲೀಸರಿಗೆ ಯಾವ ವಿಷಯವೂ ತಿಳಿಯಲಿಲ್ಲ. ಆದ್ದರಿಂದ ಮೊಕದ್ದಮೆಯನ್ನೂ ಹೂಡದೆ ಇವರನ್ನೆಲ್ಲಾ ಜೈಲಿನಲ್ಲೇ ಕೂಡಿಹಾಕಿದರು.

ಮೈನಪುರಿ, ಆಗ್ರಾಗಳಲ್ಲಿ ನಾಯಕರ ದಸ್ತಗಿರಿಯಿಂದ ದಳದ ಸದಸ್ಯರಲ್ಲಿ ಅಶಾಂತಿ ತಲೆದೋರಿತು. ಅವರಿಗೆ ಏನು ಮಾಡಬೇಕೆಂಉ ತೋರಲಿಲ್ಲ. ಕೆಲವರು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಪೊಲೀಸರಿಗೆ ಸಿಕ್ಕಿಹಾಕಿಕೊಂಡರು. ಶಿಕ್ಷೆಗೆ ಹೆದರಿ ತಮಗೆ ಗೊತ್ತಿದ್ದುದನ್ನೆಲ್ಲಾ ಒದರಿಬಿಟ್ಟರು.

ಗುರುತು ಸಿಕ್ಕಿತು

ಗೇಂದಾಲಾಲ್‌ ಸೆರೆಸಿಕ್ಕಿದ್ದ. ಪೊಲೀಸರು ಅವನನ್ನು ಗ್ವಾಲಿಯರ್‌ ಸೆರೆಮನೆಯಲ್ಲಿ ಹಾಕಿದ್ದರು. ಅದರೆ ಅನೇಕ ಮಂದಿಯ ಜೊತೆಗೆ ಅವನು ಸಿಕ್ಕಿದ್ದ. ಅವನು ಯಾರು ಎಂದು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ನಿಜವಾದ ನಾಯಕರಿಗಾಗಿ ಪೊಲೀಸರು ಹುಡುಕುತ್ತಲೇ ಇದ್ದರು. ಮೈನಪುರಿ ಜೈಲಿನಲ್ಲಿದ್ದ ಕೆಲವರು “ಮಾಫಿ ಸಾಕ್ಷಿ” ಆಗಿಬಿಟ್ಟರು. ಮಾಫಿ ಸಾಕ್ಷಿಗಳೆಂದರೆ, ಕ್ಷಮೆ ಕೇಳಿ ಎಲ್ಲ ವಿಷಯಗಳನ್ನೂ ಪೊಲೀಸರಿಗೆ ಅನುಕೂಲವಾಗುವಂತೆ ಹೇಳಿಬಿಡುವವರು. “ಮೈನಪುರಿ ಷಡ್ಯಂತ್ರ”ದ ಬಹು ವಿಷಯಗಳು ಪೊಲೀಸರಿಗೆ ತಿಳಿದುಹೋದವು.

ತಿಂಗಳುಗಟ್ಟಲೆ ಜೈಲಿನಲ್ಲಿದ್ದುದರಿಂದ ಗೇಂದಾಲಾಲ್‌ನ ಆರೋಗ್ಯ ಕೆಟ್ಟುಹೋಯಿತು. ಸರಿಯಾಗಿ ಅಹಾರ ಇಲ್ಲದಿದ್ದುದರಿಂದ ಆಯಾಸ ಜಾಸ್ತಿಯಾಯಿತು. ಅವನು ತುಂಬಾ ನಿತ್ರಾಣನಾಗಿಬಿಟ್ಟ. ನಿಧಾನವಾಗಿ ಅವನಿಗೆ ಕ್ಷಯರೋಗ ಆವರಿಸಿಕೊಂಡಿತು.

ಅಷ್ಟರಲ್ಲಿ ಮೈನಪುರಿ ಜೈಲಿನಲ್ಲಿದ್ದ ಸೋಮನಾಥ ಎಂಬ ಕ್ರಾಂತಿಕಾರಿ ಪೊಲೀಸರಿಗೆ ಸಾಕ್ಷಿ ಹೇಳಿ, ಗೇಂದಾಲಾಲ್‌ ಗ್ವಾಲಿಯರ್‌ ಜೈಲಿನಲ್ಲಿದ್ದಾನೆಂದು ಸುದ್ದಿಕೊಟ್ಟು ಬಿಟ್ಟ. ಅಷ್ಟು ಸಾಲದೆಂಬಂತೆ ಪ್ರಾಣಕ್ಕೆ ಪ್ರಾಣ ಕೊಡುವ ಮಿತ್ರನಾಗಿದ್ದ ಪಂಚಮಸಿಂಗ್‌ನೂ ಸಹ ಶಿಕ್ಷೆಗೆ ಹೆದರಿ ಪೊಲೀಸರಿಗೆ ಸಾಕ್ಷಿಯಾಗಿಬಿಟ್ಟ. ಅವನಿಗೆ ತಿಳಿಯದ ವಿಷಯ ಏನಿತ್ತು?

ಗೇಂದಾಲಾಲ್‌ನನ್ನು ಗ್ವಾಲಿಯರ್‌ ಜೈಲಿನಲ್ಲಿ ಪೊಲೀಸರು ಗುರುತಿಸಿದರು. “ಮೈನಪುರಿ ಷಡ್ಯಂತ್ರ”ದ ನಾಯಕ ಅವನು ಎಂದು ತಿಳಿಯುತ್ತಲೂ ಅವನನ್ನು ಮೈನಪುರಿಗೆ ಕರೆತಂದರು. ಗೇಂದಾಲಾಲ್‌ನಿಗೆ ನಡೆಯುವುದಕ್ಕೂ ಶಕ್ತಿಯಿರಲಿಲ್ಲ. ಗ್ವಾಲಿಯರ್‌ನಿಂದ ಹೊರಟು ಮೈನಪುರಿಯಲ್ಲಿಳಿದಾಗ ರೈಲ್ವೆ ನಿಲ್ದಾಣದಿಂದ ಜೈಲಿನವರೆಗೆ ನಡೆಯುವುದೇ ಅವನಿಗೆ ಕಷ್ಟವಾಯಿತು. ಏಳೆಂಟು ಸಲ ಅಲ್ಲಲ್ಲಿ ಕುಳಿತು ಮುಂದೆ ನಡೆಯಬೇಕಾಯಿತು.

ಗೇಂದಾಲಾಲ್‌ ಸೋಲನ್ನು ಒಪ್ಪಿದನೇ!

ಮೈನಾಪುರಿ ಜೈಲಿನಲ್ಲಿ ಗೇಂದಾಲಾಲ್‌ನ ಆರೋಗ್ಯ ತುಂಬಾ ಕೆಟ್ಟುಹೋಯಿತು. ತಾನು ಜೈಲಿನಲ್ಲಿ ಕೊಳೆತು, ಜೀವನ ವ್ಯರ್ಥಮಾಡಿಕೊಳ್ಳುತ್ತಿದ್ದೇನೆ ಅನಿಸಿತು. ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋಗಬೇಕು ಎಂಬ ಯೋಚನೆ ಬಂತು.

ಆಗ ಅವನಿಗೆ ಶಿವಾಜಿಯ ನೆನಪು ಬಂತು. ಮೊಗಲ್‌ ಚಕ್ರವರ್ತಿ ಮೋಸದಿಂದ ಶಿವಾಜಿಯನ್ನು ಸೆರೆಹಿಡಿದಾಗ, ಶಿವಾಜಿ ಯುಕ್ತಿಯಿಂದ ಸೆರೆಯಿಂದ ತಪ್ಪಿಸಿಕೊಂಡು ಬಂದ ಕಥೆ ನೆನಪಿಗೆ ಬಂದಿತು.

ಪೊಲೀಸರಿಗೆ ಮೋಸಮಾಡಿ ತಪ್ಪಿಸಿಕೊಂಡು ಹೋಗಬೇಕು ಎಂದು ಯೋಚಿಸಿದ ಗೇಂದಾಲಾಲ್‌.

ಪೊಲೀಸ್‌ ಅಧಿಕಾರಿಗಳು ಮತ್ತೆ ಮತ್ತೆ ಗೇಂದಾಲಾಲ್‌ನ ಬಳಿ ಬರುತ್ತಲೇ ಇದ್ದರು. ಪ್ರಶ್ನೆ ಮಾಡುತ್ತಲೇ ಇದ್ದರು. ಪಿತೂರಿಗೆ ಇನ್ನು ಯಾರು ಯಾರು ಸೇರಿದ್ದರು ಎಂದು ತಿಳಿದುಕೊಂಡು ಅವರನ್ನೆಲ್ಲ ಹಿಡಿದು ಹಾಕಬೇಕು ಎಂದು ಅವರ ಅಪೇಕ್ಷೆ.

ಒಂದು ದಿನ ಪೊಲೀಸ್‌ ಅಧಿಕಾರಿ ಗೇಂದಾಲಾಲ್‌ನನ್ನು ನೋಡಲು ಬಂದಾಗ, “ನೀವು ಸಂಬಂಧ ಪಡದ ಹುಡುಗರನ್ನೆಲ್ಲಾ ಹಿಡಿದು ಜೈಲಿನಲ್ಲಿ ಹಾಕಿದ್ದೀರಿ. ಈ ಪಿತೂರಿಗೊಳಪಟ್ಟವರ ಹೆಸರುಗಳು, ಅವರಿರುವ ಸ್ಥಳಗಳು ಎಲ್ಲಾ ನನಗೆ ಗೊತ್ತು. ಆ ಜನಗಳ್ಯಾರೂ ಇಲ್ಲಿಲ್ಲ. ಅವರೆಲ್ಲಾ ಬಂಗಾಳ, ಮುಂಬಯಿ, ಪಂಜಾಬ್‌, ರಾಜಾಸ್ಥಾನ, ಅಹಮದಾಬಾದ್‌ಗಳಲ್ಲಿ ಸೇರಿಕೊಂಡಿದ್ದಾರೆ” ಎಂದು ಹೇಳಿದ. ಅಧಿಕಾರಿಗೆ ಇವನ ಮಾತಿನಲ್ಲಿ ನಂಬಿಕೆ ಬಂದಿತು. ಜೈಲಿನ ಕಷ್ಟ ಅನುಭವಿಸಲಾರದೆ ಇವನು “ಮಾಫಿ ಸಾಕ್ಷಿ” ಆಗಲು ಯೋಚಿಸಿದ್ದಾನೆ ಅಂದುಕೊಂಡ.

"ನಾನು ಸತ್ತರೂ ನನ್ನ ಆತ್ಮ ಪುನಃ ಈ ನೆಲದಲ್ಲಿ ಹುಟ್ಟಬೇಕು."

ಗೇಂದಾಲಾಲ್‌ನಿಗೆ ಜೈಲಿನಿಂದ ಬಿಡುಗಡೆಯಾಯಿತು. ಕೈಕಾಲಿನ ಬಂಧನಗಳೆಲ್ಲಾ ತೆಗೆಯಲ್ಪಟ್ಟವು. ಅವನನ್ನು ಇತರ ಸಾಕ್ಷಿಗಳು ಜೊತೆಗೆ ಪೊಲೀಸ್‌ ಅಧಿಕಾರಿಯ ಮನೆಯಲ್ಲಿ ಗೃಹಬಂಧನದಲ್ಲಿ ಇಡಲಾಯಿತು.

ಗೇಂದಾಲಾಲ್‌ ಈ ಮನೆಯಿಂದ ತಪ್ಪಿಸಿಕೊಂಡು ಹೋಗುವ ಯೋಚನೆ ಮಾಡಿದ. ಜೊತೆಯವರನ್ನು ಒಪ್ಪಿಸಬೇಕಾಗಿತ್ತು. ರಾಮನಾರಾಯಣ ಪಾಂಡೆ ಎನ್ನುವವ ಇವನ ಮಾತಿಗೆ ಒಪ್ಪಿಕೊಂಡ.

ಗೇಂದಾಲಾಲ್‌ ಅಧಿಕಾರಿಗಳಿಗೆ ನೆರವಾಗುವವನ ಹಾಗೆಯೇ ನಡೆದುಕೊಳ್ಳುತ್ತಿದ್ದ. ಅವನಲ್ಲಿ ಅವರಿಗೆ ನಂಬಿಕೆ ಹೆಚ್ಚಾಯಿತು. ಕ್ರಮೇಣ ಕಾವಲುಗಾರರು ಅವನನ್ನು ಅಷ್ಟು ಎಚ್ಚರಿಕೆಯಿಂದ ಕಾಯುತ್ತಿರಲಿಲ್ಲ.

ತಪ್ಪಿಸಿಕೊಂಡ, ಆದರೆ – ?

ಒಂದು ರಾತ್ರಿ ಪಹರೆಯವರು ಬದಲಾಗುವ ವೇಳೆಗೆ ಗೇಂದಾಲಾಲ್‌, ರಾಮನಾರಾಯಣನೊಂದಿಗೆ ಬಂಗಲೆಯಿಂದ ಪರಾರಿಯಾದ. ಇಂಗ್ಲಿಷ್‌ ಅಧಿಕಾರಕ್ಕೂ, ಸೈನಿಕರಿಗೂ, ಪೊಲೀಸರಿಗೂ ಮೋಸಮಾಡಿ ಪಂಜರದಿಂದ ಬಿಡಿಸಿಕೊಂಡಿದ್ದೂ ಅಲ್ಲದೆ, ಇನ್ನೊಬ್ಬ ಸಾಕ್ಷಿಯನ್ನೂ ಹಾರಿಸಿಕೊಂಡು ಹೋಗಿಬಿಟ್ಟ. ಮೈನಪುರಿಯನ್ನು ಬಿಟ್ಟು ಇನ್ನೊಂದು ಊರಿಗೆ ಬಂದು ಸ್ವಲ್ಪ ದಿವಸ ನೆಂಟನೊಬ್ಬನ ಮನೆಯಲ್ಲಿ ವಾಸಿಸಿದ.

ಸ್ವಲ್ಪ ದಿವಸಗಳಾದ ಮೇಲೆ ಅದೇ ಊರಿನಲ್ಲಿ ಕೊಠಡಿಯೊಂದನ್ನು ತೆಗೆದುಕೊಂಡು ಇಬ್ಬರೂ ಇರತೊಡಗಿದರು. ಆದರೆ ಒಂದು ದಿವಸ ಏನನ್ನಿಸಿತೋ ಏನೋ ರಾಮನಾರಾಯಣ ಕೊಠಡಿಯೊಳಗಿದ್ದ ಬಟ್ಟೆ ಹಣವನ್ನೆಲ್ಲಾ ದೋಚಿಕೊಂಡು, ನಿದ್ರಿಸುತ್ತಿದ್ದ ಗೇಂದಾಲಾಲ್‌ನನ್ನು ಒಳಗೇ ಬಿಟ್ಟು, ಬೀಗ ಹಾಕಿಕೊಂಡು ಓಡಿಹೋಗಿಬಿಟ್ಟ. ಮೂರು ದಿವಸ ಗೇಂದಾಲಾಲ್‌ ಅನ್ನ-ನೀರು ಇಲ್ಲದೆ ಕೊಠಡಿಯೊಳಗೆ ಬಂದಿಯಾಗಿದ್ದ. ಯಾರೋ ಬಂದು ಸೆರೆ ಬಿಡಿಸಿದರು. ಅವನಿಗೆ ಶಕ್ತಿ ಉಡುಗಿಹೋಗಿತ್ತು. ನಡೆಯುವುದಕ್ಕೂ ಆಗುತ್ತಿರಲಿಲ್ಲ. ಹೇಗೋ ಕಷ್ಟಪಟ್ಟು ಆಗ್ರಾಕ್ಕೆ ಬಂದು ಸೇರಿಕೊಂಡ. ಅನಾಥನಂತೆ ತಲೆತಪ್ಪಿಸಿಕೊಂಡು ಅಲ್ಲಿ ಇಲ್ಲಿ ಕಾಲ ಕಳೆದ.

ಮೊಕದ್ದಮೆ – ತೀರ್ಪು

ಪೊಲೀಸರು ಗೇಂದಾಲಾಲ್‌ ಮತ್ತು ಅವನ ದಳದವರ ಮೇಲೆ ದೊಡ್ಡ ಪಿತೂರಿಯ ಕೇಸೊಂದನ್ನು ದಾಖಲು ಮಾಡಿಕೊಂಡರು. ೧೯೧೯ರ ಫೆಬ್ರವರಿ ೧೩ರಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಕ್ರಾಂತಿಕಾರಕ ಸಾಹಿತ್ಯದ ಸೃಷ್ಟಿ. ಜೊತೆಗಾರರಿಗೆ ಮಿಲಿಟರಿ ಶಿಕ್ಷಣ ಕೊಟ್ಟು ಹಣ ಮತ್ತು ಶಸ್ತ್ರಾಸ್ತ್ರಗಳ ದರೋಡೆ ಮಾಡಿ, “ಇಂಗ್ಲಿಷರನ್ನು ಭಾರತದಿಂದ ಓಡಿಸುವ ಪ್ರಯತ್ನ” ನಡೆಸಿದನೆಂದು ಆರೋಪ ಹೊರಿಸಲಾಯಿತು.

೧೯೧೯ರ ಜೂನ್‌ ೩ರಂದು ವಿಚಾರಣೆ ಪ್ರಾರಂಭವಾಯಿತು. ಆದರೆ ಜೂನ್‌ ೫ರಂದು ಗೇಂದಾಲಾಲ್‌ನ ಆಪ್ತನಾಗಿದ್ದ ಶಿವಕೃಷ್ಣ ಎಂಬುವನು ಜೈಲಿನಿಂದ ತಪ್ಪಿಸಿಕೊಂಡು ಹೋದ, ಪುನಃ ಪೊಲೀಸರ ಕೈಗೆ ಸಿಕ್ಕಲೇ ಇಲ್ಲ.

೧೯೧೯ರ ಜುಲೈ ೨೭ರಂದು ತೀರ್ಪು ಹೊರಬಿತ್ತು. “ಮುಖ್ಯವಾದ ನಾಯಕರೆಲ್ಲಾ ತಪ್ಪಿಸಿಕೊಂಡು ಹೋಗಿರುವುದರಿಂದ ದುರದೃಷ್ಟವಶಾತ್‌ ಕೋರ್ಟಿನ ಮುಂದೆ ಅವರು ಯಾರೂ ಹಾಜರಿಲ್ಲ. ಅವರನ್ನು ಹಿಡಿದು ಇಲ್ಲಿ ನಿಲ್ಲಿಸಿದ್ದಲ್ಲಿ, ಅವರಿಗೆಲ್ಲಾ ಕಠಿಣ ಶಿಕ್ಷೆ ವಿಧಿಸಬಹುದಾಗಿತ್ತು” ಎಂದು ನ್ಯಾಯಾಧೀಶರು ಹೇಳಿದರು. ಪೊಲೀಸರ ಕೈಗೆ ಸಿಕ್ಕವರಿಗೆ ವಿವಿಧ ರೀತಿಯಲ್ಲಿ ಕೆಲವು ವರ್ಷಗಳಂತೆ ಜೈಲುವಾಸ ಶಿಕ್ಷೆ ವಿಧಿಸಿಬಿಟ್ಟರು.

ಅಜ್ಞಾತವಾಸ

ಗೇಂದಾಲಾಲ್‌ ಪೊಲೀಸರ ಕೈಗೆ ಸಿಕ್ಕದೆ ಊರೂರು ಸುತ್ತುತ್ತಿದ್ದ. ಅವನನ್ನು ಆದರದಿಂದ ನೋಡುವವರೇ ಇಲ್ಲವಾಯಿತು. ಅವನ ಆಪ್ತಮಿತ್ರರಿಗೂ ಹೆದರಿಕೆ-ಅವನಿಗೆ ಸಹಾಯ ಮಾಡಿದರೆ ಎಲ್ಲಿ ಪೊಲೀಸರಿಗೆ ತಿಳಿಯುತ್ತದೆಯೋ, ತಮಗೆ ಏನು ಕಷ್ಟ ಬರುತ್ತಿದೆಯೋ ಎಂದು ಅವರೂ ಅವನನ್ನು ದೂರ ಇಟ್ಟರು. ಕಡೆಗೆ ಗೇಂದಾಲಾಲ್‌ ತನ್ನ ಮನೆಗೆ ಹೋದ. ಅವನ ಮನೆಯವರೇ ಅವನನ್ನು ಸರಿಯಾಗಿ ಮಾತನಾಡಿಸಲಿಲ್ಲ. ಪ್ರೀತಿ ತೋರಿಸಲಿಲ್ಲ. ಅವನ ತಂದೆಯೇ ಅವನ ಮೇಲೆ ಬಹಳ ಕೋಪ ಮಾಡಿಕೊಂಡ. ಬಹುದೊಡ್ಡ ತಪ್ಪನ್ನು ಮಾಡಿ ಮಗ ತನಗೂ ಕಷ್ಟವನ್ನು ತಂದಿಟ್ಟ ಎನ್ನುವಂತೆ ಮಾತನಾಡಿದ. ಜನ್ಮದಾತೆಯ ದಾಸ್ಯವನ್ನು ಹರಿಸಲು ಬಯಸಿದ ಒಳ್ಳೆಯ ಪುತ್ರನಿಗೆ ದಕ್ಕಿದ ಫಲ ಇದು!

ಹುಟ್ಟಿದ ಮನೆಯಲ್ಲಿ ಆದರ ಸಿಕ್ಕದಿದ್ದ ಮೇಲೆ ಗೇಂದಾಲಾಲ್‌ ಮನೆ ಬಿಟ್ಟುಬಿಟ್ಟ. ಹೊಟ್ಟೆಗಿಲ್ಲದೆ ಊರೂರು ಅಲೆದ. ಯಾವುದೋ ಊರಿನಲ್ಲಿ, ದೇವಾಲಯವೊಂದರಲ್ಲಿ ವಾಸಮಾಡಿದ. ಹೊಟ್ಟೆಹೊರೆಯಲು ನೀರು, ನೀರುಮಜ್ಜಿಗೆ ನೀಡುವ ಒಂದು ಅರವಟ್ಟಿಗೆಯಲ್ಲಿ ಕೆಲಸ ಮಾಡಿದ.

ಸೆರೆಮನೆಯಲ್ಲೆ ಗೇಂದಾಲಾಲ್‌ನಿಗೆ ಕ್ಷಯರೋಗ ಪ್ರಾರಂಭವಾಗಿತ್ತಲ್ಲವೆ? ಆನಂತರ ಅವನು ಪಟ್ಟ ಕಷ್ಟ ಎಷ್ಟು! ಮನಸ್ಸಿಗೆ ಚಿಂತೆ, ಬೇಸರ ಎಷ್ಟು! ರೋಗ ಉಲ್ಬಣಿಸಿತು. ಯಾತನೆ ಅಸಹ್ಯವಾಯಿತು. ತನ್ನ ಕೊನೆಗಾಲ ಹತ್ತಿರವಾಗುತ್ತಿದೆಯೆಂದು ಅವನಿಗನ್ನಿಸಿತು. ಕೂಡಲೇ ಮಿತ್ರನೊಬ್ಬನಿಗೆ ತನ್ನ ಸ್ಥಿತಿ ತಿಳಿಸಿ ಕಾಗದ ಬರೆದ.

ಪುನಃ ಈ ನೆಲದಲ್ಲಿ ಹುಟ್ಟಬೇಕು!”

ಗೇಂದಾಲಾಲ್‌ನ ಸ್ನೇಹಿತನಿಗೆ ಕಾಗದ ನೋಡಿ ಪ್ರಾಣ ಬಾಯಿಗೆ ಬಂದಂತಾಯಿತು. ಕಾಗದದ ವಿಷಯ ಗೇಂದಾಲಾಲ್‌ನ ಹೆಂಡತಿಗೆ ತಿಳಿಸಿದ. ಆಕೆಗೂ ದುಃಖ ಕಟ್ಟೊಡೆಯಿತು. ಇಬ್ಬರೂ ಗೇಂದಾಲಾಲ್‌ನಿದ್ದ ಸ್ಥಳಕ್ಕೆ ಓಡಿ ಬಂದರು. ಆ ಊರನ್ನು ಬದಲಾಯಿಸಿ ಮೂವರೂ ದೆಹಲಿಗೆ ಹೋದರು. ಹೆಂಡತಿ ಗಂಡನ ಸೇವೆಯನ್ನು ಮಾಡಲು ಪ್ರಾರಂಭಿಸಿದಳು. ಗಂಡನ ಸ್ಥಿತಿಯನ್ನು ನೋಡಿ ಹೆಂಡತಿಗೆ ದುಃಖ ತಡೆಯುವುದಕ್ಕಾಗಲಿಲ್ಲ.

ಹೆಂಡತಿ ಅಳುತ್ತಿರುವುದನ್ನು ನೋಡಿ ಗೇಂದಾಲಾಲ್‌ ಕ್ಷೀಣ ನಗೆ ನಕ್ಕ. ಹೆಂಡತಿಯನ್ನು ನೋಡಿ ಕೇಳಿದ: “ಏಕೆ ಅಳುತ್ತಿ? ನಾನು ಸಾಯುತ್ತೇನೆ ಎಂದು ನನಗೆ ದುಃಖವಿಲ್ಲ. ನನ್ನ ಧ್ಯೇಯ ಸಾಧಿಸಲು ನಾನು ಎಷ್ಟೋ ಕಷ್ಟಪಟ್ಟೆ. ಆಗಲಿಲ್ಲ. ಅದೇ ನನಗೆ ದುಃಖದ ವಿಷಯ.”

“ಮುಂದೆ ನನಗೆ ಯಾರಿದ್ದಾರೆ?”, ಎಂದು ಅಳುತ್ತಲೇ ದುಃಖದಿಂದ ಕೇಳಿದಳು ಅವನ ಹೆಂಡತಿ.

ಸಾವಿನ ಅಂಚಿನಲ್ಲಿದ್ದರೂ ಗೇಂದಾಲಾಲ್‌ನ ಮುಖ ಬೆಳಗಿತು.

ಗೇಂದಾಲಾಲ್‌ ಸಮಾಧಾನದ ಧ್ವನಿಯಲ್ಲಿ ಹೇಳಿ: “ಈ ದಿನ ಲಕ್ಷಾಂತರ ಬಡವರಿಗೆ ಯಾರಿದ್ದಾರೆ? ಹಸಿವಿನಿಂದ ಸಾಯುತ್ತಿರುವವರಿಗೆ ಯಾರಿದ್ದಾರೆ? ಕೊಟ್ಯಾಂತರ ಜನರನ್ನು ಕಷ್ಟಗಳಿಂದ ಕಾಪಾಡುವವರು ಯಾರು? ದೇಶದ ಸ್ಥಿತಿ ನೋಡು, ಸ್ವಾತಂತ್ರ್ಯವಿಲ್ಲದೆ ನರಳುತ್ತಿದೆ. ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡುವವರು ಯಾರು? ಯೋಚಿಸು. ದೇಶದ ಲಕ್ಷಾಂತರ ಬಡವರಿಗೆ ಯಾರು ದಿಕ್ಕೋ ನಿನಗೂ ಅವರೇ ದಿಕ್ಕು. ನಾನು ಶತ್ರುಗಳ ಕೈಗೆ ಸಿಕ್ಕದೆ ದೇಶಪ್ರೇಮದ ಬೆಂಕಿಯಲ್ಲಿ ಬೆಂದು ಭಸ್ಮ ಹೊಂದುತ್ತಿದ್ದೇನೆ, ಅದು ನಿನ್ನ ಅದೃಷ್ಟ ಅಲ್ಲವೆ? ಅಳಬೇಡ. ನಾನೀಗ ಸಾಯುತ್ತಿದ್ದೇನೆ. ನನಗೆ ಮೋಕ್ಷ ಬೇಡ. ನಾನು ಸತ್ತರೂ ನನ್ನ ಆತ್ಮ ಪುನಃ ಈ ನೆಲದಲ್ಲಿ ಹುಟ್ಟಬೇಕು. ಪ್ರತಿಸಲವೂ, ನನ್ನ ತಾಯಿ ಸ್ವತಂತ್ರಳಾಗುವವರೆಗೂ ನಾನು ಇಂಗ್ಲಿಷರನ್ನು ಕಾಡುತ್ತಲೇ ಇರಬೇಕು. ಹೋರಾಡಿ ಮಡಿಯಬೇಕು. ಇದೊಂದೇ ನನ್ನ ಆಸೆ!”

ಗೇಂದಾಲಾಲ್‌ನ ದೇಹ ಕ್ಷೀಣಿಸುತ್ತಾ ಬಂದಿತು. ಪತ್ನಿಯ ಸೇವೆ ಮುಂದುವರಿಯಿತು. ಪೊಲೀಸರು ಅವನಿಗಾಗಿ ಹುಡುಕುತ್ತಲೇ ಇದ್ದರು. ಗೇಂದಾಲಾಲ್‌ ಈ ರೀತಿ ಸತ್ತರೆ ಅವನನ್ನು ಸಂಸ್ಕಾರ ಮಾಡುವುದು ತುಂಬಾ ಅಪಾಯದ ಕೆಲಸವಾಗಿತ್ತು. ಇದನ್ನು ಯೋಚಿಸಿದ ಮಿತ್ರ ಗೇಂದಾಲಾಲ್‌ನನ್ನು ಅನಾಥ ರೋಗಿಯೆಂದು ದೆಹಲಿಯ ಇರ್ವಿನ್‌ ಆಸ್ಪತ್ರೆಗೆ ಸೇರಿಸಿ, ಅವನ ಹೆಂಡತಿಯನ್ನು ಊರಿಗೆ ಕಳುಹಿಸಿಬಿಟ್ಟ.

ಮಹಾನ್‌ ಆತ್ಮ ಆರಿಹೋಯಿತು

೧೯೨೦ರ ಡಿಸೆಂಬರ್‌ ೨೧ರಂದು ಗೇಂದಾಲಾಲ್‌ ಆ ಸರ್ಕಾರೀ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಆಗ ಅವನಿಗೆ ಮೂವತ್ತು ವರ್ಷ ವಯಸ್ಸು. ಅನಾಥ ದೇಹವೆಂದು ಆಸ್ಪತ್ರೆಯ ಅಧಿಕಾರಿಗಳು ತಾವೇ ಅದಕ್ಕೆ ಶವಸಂಸ್ಕಾರ ಮಾಡಿಸಿದರು.

ತನಗೆ ಈ ರೀತಿಯ ಸಾವು ಬರುತ್ತದೆ ಎಂದು ಗೇಂದಾಲಾಲ್‌ ಭಾವಿಸಿರಲಿಲ್ಲ. ಶತ್ರುಗಳಾದ ಇಂಗ್ಲಿಷರ ಜೊತೆಗೆ ಹೋರಾಡುತ್ತ ಗುಂಡು ತಗುಲಿ ಸಾಯಬೇಕೆಂಬುದೇ ಅವನ ಪ್ರಬಲ ಇಚ್ಛೆಯಾಗಿತ್ತು. ಇಂಗ್ಲಿಷರ ವಿರುದ್ಧ ದೇಶದ ಪ್ರಮುಖ ಪಿತೂರಿಯೊಂದರ ಪ್ರಮುಖ ನಾಯಕ, ದೇಶಪ್ರೇಮಿ, ಸಾಹಸಿ ಅನಾಥನಂತೆ ದೆಹಲಿ ಆಸ್ಪತ್ರೆಯಲ್ಲಿ ಕರುಣಾಜನಕ ಸ್ಥಿತಿಯಲ್ಲಿ ಕ್ಷಯರೋಗ ಪೀಡಿತನಾಗಿ ಸತ್ತ.

ಪಂಡಿತ ಗೇಂದಾಲಾಲ್‌ ಸತ್ತದ್ದು ಯಾರಿಗೂ ತಿಳಿಯಲಿಲ್ಲ-ದೂರದಲ್ಲಿದ್ದ ಸ್ನೇಹಿತ, ಹೆಂಡತಿ ಇಬ್ಬರನ್ನು ಬಿಟ್ಟು ಯಾರೂ ಈ ಸಾವಿಗಾಗಿ ಅಳಲಿಲ್ಲ. ವೀರ ಪುರುಷನ ದೇಹಕ್ಕೆ ಯಾವ ಪುಷ್ಟಮಾಲೆಯೂ ಬೀಳಲಿಲ್ಲ.

ಅವನಾದರೂ ದೇಶಸೇವೆಯೇ ತನಗೆ ತಕ್ಕ ಪ್ರತಿಫಲ ಎಂದೇ ಬದುಕಿದ, ಬೇರೇನನ್ನೂ ಬಯಸಿರಲಿಲ್ಲ.