ರಾಮುನ ಬಳಿಗೊಂದೆ ಹೋಗಬೇಕಾ ಈಗಿನ್ನು
ಈ ರೂಪ ನೀನೇ ಬಿಡಬೇಕಾ ತಾನ |ತಂದಾನ|
ಈ ರೂಪ ನೀನೇ ಬಿಡಬೇಕು ಈಗಿನ್ನು
ಸೂಳಿ ಸುಂಗಾರನೆ ತಾಳಬೇಕಾ ತಾನ |ತಂದಾನ|
ಸೂಳಿ ಸುಂಗಾರುನೆ ಮಾಡಿಕೊಂಡು ಈಗಿನ್ನು
ರಾಮುನ ಬಳಿಗೊಂದೆ ಹೋಗಬೇಕಾ ತಾನ |ತಂದಾನ|
ರಾಮುನ ಬಳಿಗೊಂದೆ ಹೋಗಬೇಕು ಈಗಿನ್ನು
ರಾಮುಗೂ ಮಳ್ಳೊಂದೆ ಮಾಡಬೇಕಾ ತಾನ |ತಂದಾನ|
ರಾಮುಗೂ ಮಳ್ಳೊಂದೆ ಮಾಡಬೇಕಾ ಈಗಿನ್ನು
ರಾಮಗು ಲಗ್ಗಿನ ಆಗಲೇಬೇಕಾ ತಾನ |ತಂದಾನ|
ರಾಮಗು ಲಗ್ಗಿನುನೆ ಆಗಲೇಬೇಕಾ ಈಗಿನ್ನು
ರಾಮನು ಸೀತಿ ನಾನು ಆಳಬೇಕಾ ತಾನ |ತಂದಾನ|
ಅಂದು ತಾನೀಗು ಹೇಳಿದನು ಈಗಿನ್ನು
ಲಂಕಾ ಪಟ್ನಾದ ರವಣಾನು ತಾನ |ತಂದಾನ|
ಲಂಕಾ ಪಟ್ನಾದ ರವಣಾನು ಈಗಿನ್ನು
ತಂಗಿಗೂ ಬುದ್ದೀನೆ ಹೇಳಿದನಾ ತಾನ |ತಂದಾನ|
ತಂಗಿಗೂ ಬುದ್ದಿನೆ ಹೇಳಿದನು ಈಗಿನ್ನು
ತಂಗಿಗೂ ಮಳ್ಳೂಂದೆ ಮಾಡಿದುನಾ ತಾನ |ತಂದಾನ|
ತಂಗಿ ತಾನೀಗೂ ಇರುವವಳು ಈಗಿನ್ನು
ಸೂರ್ಪನಕ್ಕೀನೆ ಅವಳಾಲ ತಾನ |ತಂದಾನ|
ಸೂರ್ಪನಕ್ಕೀನೆ ಎಂಬುವಳು ಈಗಿನ್ನು
ರಾಕಾಸು ಮಾಯವೆ ಬುಟ್ಟಳಾಲಾ ತಾನ |ತಂದಾನ|
ರಾಕಾಸು ಮಾಯವೆ ಬುಟ್ಟಿದುಳು ಈಗಿನ್ನು
ಸುಂದರ ಹೆಣ್ಣೊಂದೆ ಆಗಿದಳೂ ತಾನ |ತಂದಾನ|
ಸೂಳಿ ಸುಂಗಾರನೇ ತಾಳಿದಳು ಈಗಿನ್ನು
ಎಲ್ಲಿಗಾಗೊಂದೆ ಹೋಗುವವಳಾ ತಾನ |ತಂದಾನ|
ಎಲ್ಲಿಗಾಗೊಂದೆ ಹೋಗುವವಳಾ ಈಗಿನ್ನು
ರಾಮನ ಬಳಿಗೊಂದೆ ಬಂದಳಾಲಾ ತಾನ |ತಂದಾನ|
ರಾಮನ ಬುಡಕೊಂದೇ ಬಂದಿದಳು ಈಗಿನ್ನು
ರಾಮುಗು ಮಳ್ಳೊಂದೆ ಮಾಡುತಾಳಿಯೋ ತಾನ |ತಂದಾನ|
ರಾಮಗು ಮಳ್ಳೊಂದೆ ಮಾಡುತಾಳಿಯೋ ಈಗಿನ್ನು
ನನ್ನ ಲಗುನನೆ ಆಗುಬೇಕಾ ತಾನ |ತಂದಾನ|
ನನ್ನ ಲಗ್ಗುನನೆ ಆಗುಬೇಕು ಈಗಿನ್ನು
ಅಂದು ತಾನೀಗು ಹೇಳುವಳಾಲಾ ತಾನ |ತಂದಾನ|
ರಾಮಾಸ್ವಾಮಿನೆ ಕೇಳಿದುನು ಈಗಿನ್ನು
ಕೇಳು ಕೇಳು ಎಲೆ ಹೆಣ್ಣೆ ನೀನಾರಾ ತಾನ |ತಂದಾನ|
ಕೇಳು ಕೇಳು ಎಲೆ ಹೆಣ್ಣೆ ಕೇಳುವಾಲೆ ಈಗಿನ್ನು
ನಿನ್ನ ಲಗ್ಗಿನನೆ ಆಗುವುದಕಾ ತಾನ |ತಂದಾನ|
ನಿನ್ನ ಲಗ್ಗಿನನೆ ಆಗುವುದಕೆ ಈಗಿನ್ನು
ನನಗೊಬ್ಬಳು ಮಡುದಿ ಇದ್ದಳಾಲಾ ತಾನ |ತಂದಾನ|
ನನಗೊಬ್ಬಳು ಮಡುದಿ ಇದ್ದಾಳೆ ಈಗಿನ್ನು
ಸೀತಾದೇವಿಯೆಂಬ ಹೆಸರಾಲಾ ತಾನ |ತಂದಾನ|
ನಾನು ಲಗ್ಗಿನುನೆ ಆಗುದಿಲ್ಲ ವೀಗಿನ್ನು
ನನ್ನ ತಮ್ಮನೆ ಇರುವನಲ್ಲಾ ತಾನ |ತಂದಾನ|
ನನ್ನ ತಮ್ಮನೆ ಇರುವವನು ಈಗಿನ್ನು
ಲಚ್ಚುಮಣ್ಣಾನೆ ಎಂಬುವವನು ತಾನ |ತಂದಾನ|
ಲಚ್ಚುಮಣ್ಣಾನೆ ಎಂಬುವವನು ಈಗಿನ್ನು
ಬ್ರಹ್ಮಚಾರಿನೆ ಅವನಾಲಾ ತಾನ |ತಂದಾನ|
ಬ್ರಹ್ಮಚಾರಿನೆ ಇರುವನಲ್ಲ ಈಗಿನ್ನು
ಅಂವ ಲಗ್ಗಿನನೆ ಆಗುನಿಲ್ಲಾ ತಾನ |ತಂದಾನ|
ಅಂವ ಲಗ್ಗಿನನೆ ಆಗುನಿಲ್ಲಾ ವೀಗಿನ್ನು
ನಿನ್ನಾವಿಗೊಂದೆ ಕಂಡಿದುರಾ ತಾನ |ತಂದಾನ|
ನಿನ್ನಾವಿಗೊಂದೆ ಕಂಡಿದುರಾ ವೀಗಿನ್ನು
ಅಂವ ಈಗೊಂದೆ ಬಿಡುವುದಿಲ್ಲಾ ತಾನ |ತಂದಾನ|
ಅಂವ ನಿನ್ನೀಗ ಬಿಡುವುದಿಲ್ಲಾ ವೀಗಿನ್ನು
ನಿನ್ನ ಲಗ್ಗಿನನೆ ಆಗುತಾನೆಯೋ ತಾನ |ತಂದಾನ|
ಅಂದು ತಾನೀಗೂ ನುಡಿದಿದುನೋ ಈಗಿನ್ನು
ರಾಮಾಸ್ವಾಮಿನೇ ನುಡಿದಿದುನೊ ತಾನ |ತಂದಾನ|
ರಾಮಸ್ವಾಮಿನೇ ನುಡಿದಿದುನು ಈಗಿನ್ನು
ಸೂರ್ಪನಕ್ಕಿನೇ ಕೇಳಿದಳೋ ತಾನ |ತಂದಾನ|
ಸೂರ್ಪನಕ್ಕಿನೇ ಕೇಳಿದಳೊ ಈಗಿನ್ನು
ಕೇಳು ಕೇಳು ರಾಮಸ್ವಾಮಿ ನೀನಾಲಾ ತಾನ |ತಂದಾನ|
ಕೇಳು ಕೇಳು ರಾಮಸ್ವಾಮಿ ನೀ ಕೇಳು ವೀಗಿನ್ನು
ನಿನ್ನಾ ಗುರುತಾನೇ ಕೊಡುಬೇಕಾ ತಾನ |ತಂದಾನ|
ನಿನ್ನಾ ಗುರುತಾನೇ ಕೊಟ್ಟಿದರೂ ಈಗಿನ್ನು
ಲಚ್ಚುಮಣ್ಣ ಲಗ್ಗಿನನೆ ಆಗುತಾನೆ ತಾನ |ತಂದಾನ|
ಲಾಗುತಾನಿಗೂ ಇರುವನು ವೀಗಿನ್ನು
ರಾಮಸ್ವಾಮಿನೇ ನುಡಿದಿದುರಾ ತಾನ |ತಂದಾನ|
ರಾಮಸ್ವಾಮಿನೇ ನುಡಿದಿದುನು ಈಗಿನ್ನು
ಬೆನ್ನು ಹಾಕು ನೀನು ನಿಲುಬೇಕಾ ತಾನ |ತಂದಾನ|
ಬೆನ್ನು ಹಾಕು ನೀನು ನಿಲುಬೇಕು ಈಗಿನ್ನು
ಬೆನ್ನ ಮ್ಯಾಲೆ ನಾನೇ ಬರೀತೀನಾ ತಾನ |ತಂದಾನ|
ಬೆನ್ನು ಮ್ಯಾಲೆ ನಾನೇ ಬರಿತೀದೆ ಈಗಿನ್ನು
ನನ್ನಾ ಗುರುತಾನೆ ಬರಿತೀನಿ ತಾನ |ತಂದಾನ|
ಸೂರ್ಪನಕ್ಕಿನೇ ಕೇಳಿದಳು ಈಗಿನ್ನು
ರಾಮಗೂ ಬೆನ್ನೊಂದೆ ಕೊಟ್ಟಳಾಲಾ ತಾನ |ತಂದಾನ|
ರಾಮಗೂ ಬೆನ್ನೊಂದೆ ಕೊಟ್ಟದಳು ವೀಗಿನ್ನು
ರಾಮಸ್ವಾಮಿನೇ ಬರೆದಿದುನೋ ತಾನ |ತಂದಾನ|
ಕೇಳು ಕೇಳು ನನ್ನ ತಂಮ ಲಚ್ಚಮಣ್ಣ ನೀನಿನ್ನು
ಸೂರ್ಪನಕ್ಕಿನೆ ಎಂಬಳಾಲಾ ತಾನ |ತಂದಾನ|
ಸೂರ್ಪನಕ್ಕಿನೆ ಎಂಬುವಳು ವೀಗಿನ್ನು
ಮಾಯಾದಿಂದವ್ಳೆ ಬಂದವ್ಳೆ ತಾನ |ತಂದಾನ|
ನಿನ್ನ ಬುಡುಕೊಂದೆ ಬರುತಾಳೆ ಈಗಿನ್ನು
ನಿನ್ನ ಕೂಡ ಲಗುನೆನೆ ಆಗಬೇಕು ಎನುತಾಳೆ
ನೀನು ಲಗ್ಗುನ ಆಗಬೇಡ ತಾನ |ತಂದಾನ|
ನೀನು ಲಗ್ಗುನ ಆಗಬೇಡ ಈಗಿನ್ನು
ಅವ್ಳ ಮೂಗು ಮೊಲಿನೇ ಕೊಯ್ಯಬೇಕಾ ತಾನ |ತಂದಾನ|
ಮೂಗು ಮೊಲಿಯೊಂದೇ ಕೊಯ್ಯಬೇಕು ಈಗಿನ್ನು
ಮಾನುಭಂಗನೆ ಕಳಿಬೇಕಾ ತಾನ |ತಂದಾನ|
ಮಾನುಭಂಗನೇ ಕಳೀಬೇಕಾ ಈಗಿನ್ನು
ಕೋಪಾದಲ್ಲವಳ ಬಿಡುಬೇಕಾ ತಾನ |ತಂದಾನ|
ಅಂದು ಬೆನ್ನ ಮೇಲೆ ಬರೆದಿದನು ಈಗಿನ್ನು
ರಾಮಸ್ವಾಮಿನೆ ಬರೇದಿದುನೋ ತಾನ |ತಂದಾನ|
ಸೂರ್ಪನಕ್ಕಿ ಎಂಬುವಳು ವೀಗಿನ್ನು
ಎಲ್ಲಿಗೂವಿಗೂ ಓಡಿದಳೋ ತಾನ |ತಂದಾನ|
ಕಾಡಿನೊಳಗೊಂದೆ ಓಡುತಾಳೆಯೋ ತಾನ |ತಂದಾನ|
ಕಾಡಿನೊಳಗೊಂದೆ ಓಡುತಾಳೆಯೋ ಈಗಿನ್ನು
ಲಚುಮಣ್ಣನೇ ಇರುವನಾಲಾ ತಾನ |ತಂದಾನ|
ಲಚ್ಚಮಣ್ಣನೇ ಇರುವನು ಈಗಿನ್ನು
ಕಾಡಿನಲ್ಲಿ ಇರುವನಾಲಾ ತಾನ |ತಂದಾನ|
ಅಲ್ಲಿಗೂ ಇವ್ಳ ಓಡಿದಳು ಈಗಿನ್ನು
ಲಚ್ಚುಮಣ್ಣನ ಬುಡಕೇ ಓಡಿದಳಾ ತಾನ |ತಂದಾನ|
ಲಾಗುತಾನಿಗೂ ಕಂಡಿದನೋ ಈಗಿನ್ನು
ಲಚ್ಚಮಣ್ಣ ಸ್ವಾಮಿ ಕಂಡಿದುನಾ ತಾನ |ತಂದಾನ|
ಸೂರ್ಪನಕ್ಕಿನೇ ಎಂಬುವಳು ವೀಗಿನ್ನು
ಏನು ತಾನೀಗ ನುಡಿತಾಳೆಯೋ ತಾನ |ತಂದಾನ|
ಕೇಳು ಕೇಳು ಲಚ್ಚುಮಣ್ಣ ನೀ ಕೇಳು ಈಗಿನ್ನು
ನಿನ್ನ ಅಣ್ಣಾನೇ ಸಿಕ್ಕಿ ನಾಲಾ ತಾನ |ತಂದಾನ|
ನಿನ್ನ ಅಣ್ಣಾನೇ ಸಿಕ್ಕಿನಾಲಾ ಈಗಿನ್ನು
ರಾಮಸ್ವಾಮಿನೇ ಸಿಕ್ಕಿದುನಾ ತಾನ |ತಂದಾನ|
ನನ್ನ ಇಲ್ಲಿಗೇ ಕಳುಸವನೆ ಈಗಿನ್ನು
ನಿನ್ನ ಕೂಡು ಲಗ್ಗಿನ ಆಗಬೇಕಾ ತಾನ |ತಂದಾನ|
ಅಂದ್ಹೇಳಿ ನನ್ನಾನಾ ಕಳುಸಿದನೋ ಈಗಿನ್ನು
ಇಲ್ಲಿಗೂ ಓಡೊಂದೆ ಬಂದಿದನೋ ತಾನ |ತಂದಾನ|
ಕೇಳು ಕೇಳೆಣ್ಣೆ ನೀ ಕೇಳು ಈಗಿನ್ನು
ನನ್ನಣ್ಣಾನ ಗುರುತಾನೇ ತಂದಿದುರಾ ತಾನ |ತಂದಾನ|
ನನ್ನಣ್ಣಾನ ಗುರುತು ತಂದಿದುರು ಈಗಿನ್ನು
ನಿನ್ನಾ ಲಗ್ಗಿನನೇ ಆಗುತಿದಾ ತಾನ |ತಂದಾನ|
ಅಣ್ಣಾನು ಗುರುತೊಂದೆ ತಂದಿದುನೋ ಈಗಿನ್ನು
ನನ್ನ ಬೆನ್ನೊಂದೆ ನೋಡುವಳಾ ತಾನ |ತಂದಾನ|
ಲಚಮಣ್ಣಗೂ ಬೆನ್ನು ತೋರಿಸಿದಳು ಈಗಿನ್ನು
ಬೆನ್ನು ಮ್ಯಾಲೊಂದು ಓದಿದುನೋ ತಾನ |ತಂದಾನ|
ಬೆನ್ನು ಮ್ಯಾಲೊಂದು ಓದಿದುನು ಕಂಡಿದನು
ಅಣ್ಣಾ ಈಗೊಂದೆ ಬರೆದನಾಲಾ ತಾನ |ತಂದಾನ|
ಕೇಳು ಕೇಳು ನನ್ನ ತಂಮ್ಮ ನೀ ಕೇಳು ಈಗಿನ್ನು
ಇವ್ಳ ಲಗ್ಗಿನನೇ ಆಗುಬೇಡಾ ತಾನ |ತಂದಾನ|
ಇವ್ಳ ಲಗ್ಗಿನನೆ ಆಗುಬೇಡಾ ಈಗಿನ್ನು
ಮೂಗು ಮೊಲೆಯೊಂದೆ ಕೊಯ್ಯಬೇಕಾ ತಾನ |ತಂದಾನ|
ಮೂಗು ಮೊಲೆಯೊಂದೆ ಕೊಯ್ಯಬೇಕಾ ವೀಗಿನ್ನು
ಮಾನಭಂಗ ನೀ ಕಳಿಬೇಕಾ ತಾನ |ತಂದಾನ|
ಮೂಗು ಮೊಲೆಯೊಂದೇ ಕೊಯ್ಯೂಬೇಕಾ ವೀಗಿನ್ನು
ಮಾನಭಂಗಾನೇ ಕಳೀಬೇಕಾ ತಾನ |ತಂದಾನ|
ಮಾನಭಂಗಾನೇ ಕಳಿಬೇಕಾ ಈಗಿನ್ನು
ಕೋಪಾದಲ್ಲವಳಬಿಡಬೇಕಾ ತಾನ |ತಂದಾನ|
ಅಂದೂವಿಗೊಂದೆ ಕಂಡಿದನೋ ವೀಗಿನ್ನು
ಬೆನ್ನೂವಿಗೊಂದೆ ನೋಡಿದುರಾ ತಾನ |ತಂದಾನ|
ಲಚ್ಚುಮಣ್ಣ ಸ್ವಾಮಿ ಎಂಬುವನು ಈಗಿನ್ನು
ತನ್ನ ಚಂದ್ರಾಯ್ದ ತೆಗೆದಿದುನಾ ತಾನ |ತಂದಾನ|
ತನ್ನ ಚಂದ್ರಾಯ್ದ ತೆಗೆದಿದುನು ವೀಗಿನ್ನು
ಮೂಗು ಮೊಲೆಯೊಂದೆ ಕೊಯ್ದಿದುನಾ ತಾನ |ತಂದಾನ|
ಮೂಗು ಮೊಲೆಯೊಂದೆ ಕೊಯ್ದಿದನು ಈಗಿನ್ನು
ಮಾನಾಭಂಗನೇ ಕಳೆದಿದನಾ ತಾನ |ತಂದಾನ|
ಮಾನಾಭಂಗನೇ ಕಳೆದಿದನು ಈಗಿನ್ನು
ಕೋಪದಲ್ಲವಳ ಬಿಟ್ಟನಾಲಾ ತಾನ |ತಂದಾನ|
ಶೂರ್ಪನಕ್ಕೀ ಎಂಬೌಳು ಈಗಿನನ್ನು
ಎಲ್ಲಿಗೋವಳು ಓಡಿದಳಾ ತಾನ |ತಂದಾನ|
ಎಲ್ಲಿಗೋವಳು ಓಡಿದಳು ಈಗಿನ್ನು
ಅಣ್ಣನ ಬುಡಕೊಂದೆ ಹೋದಳಾಲಾ ತಾನ |ತಂದಾನ|
ಅಣ್ಣನ ಬುಡಕೊಂದೆ ಹೋದಳಲ್ಲಾ ವೀಗಿನ್ನು
ಅಣ್ಣಾ ರವಣಾನೇ ಇರುವನಲ್ಲಾ ತಾನ |ತಂದಾನ|
ಅಣ್ಣಾ ರವಣಾನು ಎಂಬುವನು ಈಗಿನ್ನು
ಲಂಕಾ ಪಟ್ನದ ರವಣಾನೇ ತಾನ |ತಂದಾನ|
ಅಲ್ಲೂವಿಗೊಂದೆ ಇರುವವನು ಈಗಿನ್ನು
ಅಣ್ಣುನುಬುಡಕೊಂದೆ ಹೋದಳಾಲಾ ತಾನ |ತಂದಾನ|
ಅಣ್ಣುನು ಬುಡುಕೊಂದೆ ಹೋದಳಾಲಾ ಈಗಿನ್ನು
ಅಣ್ಣು ಕೂಡೊಂದು ಹೇಳುತಾಳೆಯೋ ತಾನ |ತಂದಾನ|
ಅಣ್ಣು ಕೂಡೊಂದು ಹೇಳುತಾಳೆ ಏನೆಂದು
ಕೇಳು ಕೇಳು ನನ್ನಣ್ಣ ನೀನಾರಾ ತಾನ |ತಂದಾನ|
ಕೇಳು ಕೇಳು ನನ್ನಣ್ಣ ನೀ ಕೇಳು ಈಗಿನ್ನು
ರಾಮನ ಸೀತೀನೇ ತರಬೇಕಾ ತಾನ |ತಂದಾನ|
ರಾಮನ ಸೀತೀನೇ ಆಳಬೇಕಾ ಈಗಿನ್ನು
ರಾಮಸ್ವಾಮಿನೆ ಎಂಬುವನಾಲಾ ತಾನ |ತಂದಾನ|
ನನ್ನ ಮೂಗುಮೊಲಿನೆ ಕೊಯ್ದುವನೆ ಈಗಿನ್ನು
ಮಾನುಭಂಗನೇ ಕಳುದವನೆಯೋ ತಾನ |ತಂದಾನ|
ಮಾನುಭಂಗನೇ ತಗುದವನೆಯೋ ಈಗಿನ್ನು
ಅವನು ಸೀತಿಗೂ ಬಿಡುಬೇಡಾ ತಾನ |ತಂದಾನ|
ಅವನು ಸೀತಿಗೂ ಬಿಡುಬೇಡಾ ಈಗಿನ್ನು
ನಮ್ಮ ಕುಲಕೆಸರೆ ಬಂತಾಲಾ ತಾನ |ತಂದಾನ|
ನಮ್ಮ ಕುಲಕೆಸರೆ ಬಂತಲ್ಲಾ ವೀಗಿನ್ನು
ಅವನು ಸೀತೀನೇ ಆಳುದಿದುರಾ ತಾನ |ತಂದಾನ|
ಅಂದು ತಾನೀಗ ನುಡಿದುದುಳು ಈಗಿನ್ನು
ಸುರ್ಪಾನ್ನಕ್ಕೀ ಎಂಬುವಳಾ ತಾನ |ತಂದಾನ|
ಅಷ್ಟ ಮಾತೊಂದ ಕೇಳಿದನು ಈಗಿನ್ನು
ರಾವಣನಿಗೂ ಕೇಳಿದುನಾ ತಾನ |ತಂದಾನ|
ರಾವಣನಿಗೂ ಅಂದೆಲಿರುವವನು ಈಗಿನ್ನು
ಹತ್ತು ತಲೆಯೊಂದು ಅವನಿಗಾಲಾ ತಾನ |ತಂದಾನ|
ಹತ್ತು ತಲೆಯೊಂದು ಅವನಿಗಾಲಾ ಈಗಿನ್ನು
ಇಪ್ಪತ್ತು ಭುಜವು ಇದ್ದವಾಲಾ ತಾನ |ತಂದಾನ|
ಇನ್ನು ಏನು ಭಯ ಮಾಡಬೇಕು ಈಗಿನ್ನು
ರಾಮನು ಸೀತಿಯೆ ತರಬೇಕಾ ತಾನ |ತಂದಾನ|
ರಾಮನು ಸೀತಿಯೆ ತರಬೇಕು ಈಗಿನ್ನು
ಅಲ್ಲೂವಿಗೊಂದೆ ಇರುವನಾಲಾ ತಾನ |ತಂದಾನ|
ಮಾರೀಚ ಎಂಬ ಹೆಸರುಲಾ ಈಗಿನ್ನು
ಅವನವಿಗೊಂದು ಕರೆದಿದುನೋ ತಾನ |ತಂದಾನ|
ಕೇಳು ಕೇಳು ನನ್ನ ಬಾವ ನೀವಾಲು ಈಗಿನ್ನು
ನಿನ್ನಿಂದು ನನ್ನ ಮಾನ ಉಳಿಯಬೇಕಾ ತಾನ |ತಂದಾನ|
ನಿನ್ನಿಂದು ನನ್ನ ಮಾನ ಉಳಿಬೇಕಾ ಲೊಂದಿದನು
ಈಗು ನೀನೊಂದೆ ಹೋಗಬೇಕಾ ತಾನ |ತಂದಾನ|
ನೀನು ಈಗೊಂದೆ ಹೋಗುಬೇಕು ಈಗಿನ್ನು
ಎಲ್ಲಿಗೊ ನೀನೊಂದೆ ಹೋಗುಬೇಕು ತಾನ |ತಂದಾನ|
ಎಲ್ಲಿಗೂ ನೀನೊಂದೆ ಹೋಗುಬೇಕು ಈಗಿನ್ನು
ರಾಮನು ಬಳಿಯೊಂದೆ ಹೋಗಬೇಕು ತಾನ |ತಂದಾನ|
ರಾಮನು ಬಳಿಯೊಂದೆ ಹೋಗಬೇಕಾ ಈಗಿನ್ನು
ನೀವೊಂದು ರೂಪ ಅಲ್ಲೇನಾ ತಾನ |ತಂದಾನ|
ಯಾವೂರೂಪಾನೇ ತಾಳುಬೇಕು ಈಗಿನ್ನು
ರಾಕಾಸ ರೂಪ ಮರಿಬೇಕಾ ತಾನ |ತಂದಾನ|
ಮಾಯಾದ ಮುರುಗಾನೇ ಆಗಬೇಕು ಈಗಿನ್ನು
ಅಲ್ಲಿಗೂ ನೀನೊಂದೆ ಹೋಗುಬೇಕಾ ತಾನ |ತಂದಾನ|
ಅಲ್ಲಿಗೂ ನೀನೊಂದೆ ಹೋಗುಬೇಕು ಈಗಿನ್ನು
ನವುಲಾ ಕುಣಿತಾನೇ ಕುಣಿಬೇಕಾ ತಾನ |ತಂದಾನ|
ನವುಲಾ ಕುಣಿತಾನೇ ಕುಣಿಬೇಕಾ ಈಗಿನ್ನು
ರಾಮನ ಸೀತೀನೇ ಇರುವಳಾಲಾ ತಾನ |ತಂದಾನ|
ರಾಮುನ ಸೀತೀನೇ ಇರುವಳಾಲಾ ಈಗಿನ್ನು
ನಿನ್ನಾ ಈಗೊಂದು ಕಂಡಿದುರಾ ತಾನ |ತಂದಾನ|
ನಿನ್ನಾ ಈಗೊಂದು ಕಂಡಿದುರಾ ಈಗಿನ್ನು
ಅವಳು ಮಳ್ಳೊಂದೆ ಆಗುತಾಳಾ ತಾನ |ತಂದಾನ|
ಅವಳು ಮಳ್ಳೊಂದೆ ಮಾಡಬೇಕು ಈಗಿನ್ನು
ರಾಮನು ಸೀತೀನ ತರಬೇಕಾ ತಾನ |ತಂದಾನ|
ಅಂದು ಈಗೊಂದೆ ಹೇಳುವನಾಲಾ ಈಗಿನ್ನು
ಲಂಕಾ ಪಟ್ನಾದ ರವಣಾ ತಾನ |ತಂದಾನ|
ಲಂಕಾ ಪಟ್ನಾದ ರವಣಾನು ಈಗಿನ್ನು
ಬಾವನು ಕೂಡೊಂದ ನುಡಿತಾನೆಯಾ ತಾನ |ತಂದಾನ|
ಬಾವಾ ಮಾರೀಚ ಎಂಬುವನು ಈಗಿನ್ನು
ಕೇಳಿ ಕೇಳಿ ನನ್ನ ಬಾವ ನೀವಾಲಾ ತಾನ |ತಂದಾನ|
ಕೇಳಿ ಕೇಳಿ ನನ್ನ ಬಾವಾ ನೀವಾಲ ಈಗಿನ್ನು
ರಾಮುನು ಬಳಿ ನಾನು ಹೋಗುವುದಿಲ್ಲ ತಾನ |ತಂದಾನ|
ರಾಮುನು ಬಳಿ ನಾನು ಹೋಗುವುದಿಲ್ಲ ಈಗಿನ್ನು
ರಾಮಸ್ವಾಮಿನೇ ಅಂದುರಾಲಾ ತಾನ |ತಂದಾನ|
ರಾಮಸ್ವಾಮಿನೇ ಅಂದುರಾಲಾ ಈಗಿನ್ನು
ರಾಮುನು ಬಾಣುಕೂ ಹುಸಿಯೆಲ್ಲ ತಾನ |ತಂದಾನ|
ರಾಮುನು ಬಾಣುಕು ಹುಸಿಯೆಲ್ಲ ಈಗಿನ್ನು
ನನ್ನಾವಿಗೊಂದೆ ಇಡುವುದಲ್ಲಾ ತಾನ |ತಂದಾನ|
ನಾನುವಿಗೊಂದೆ ಇಡುವುದಿಲ್ಲ ಈಗಿನ್ನು
ನಾನುವಿಗೊಂದೆ ಹೋಗುಲಾರೆ ತಾನ |ತಂದಾನ|
ನಾನುವಿಗೊಂದೆ ಹೋಗುಲಾರೆ ಈಗಿನ್ನು
ರವಾಣಾನಿಗೊಂದು ಹೇಳುತಾನಿಯೋ ತಾನ |ತಂದಾನ|
ರವಣಾನಿಗೊಂದೆ ಹೇಳುತಾನಿಯೋ ಈಗಿನ್ನು
ನನ್ನ ಮಾತೊಂದ ಕೇಳಿದಿದುರಾ ತಾನ |ತಂದಾನ|
ನನ್ನ ಮಾತೊಂದು ಕೇಳಿದಿದುರಾ ಈಗಿನ್ನು
ನಾನು ಹೇಳಿದಂಗೆ ಮಾಡದಿದುರಾ ತಾನ |ತಂದಾನ|
ನಾನು ಹೇಳಿದಂಗೆ ಮಾಡದಿದುರಾ ಈಗಿನ್ನು
ನಿನ್ನ ದಾರಿಗೂ ಇಡುವುದಿಲ್ಲಾ ತಾನ |ತಂದಾನ|
ನಿನ್ನ ದಾರಿಗೂ ಇಡುವುದಿಲ್ಲಾ ಈಗಿನ್ನು
ಕುಲೂ ಕುಟುಂಬವೀಗೂ ಇಡುವುದಿಲ್ಲಾ ತಾನ |ತಂದಾನ|
ನಿನ್ನ ಕುಡಿಯೊಂದೆ ಇಡುದಿಲ್ಲ ವೀಗಿನ್ನು
ಭಾವನು ಕೊಡೆಂದು ನುಡಿದನಾಲಾ ತಾನ |ತಂದಾನ|
ಭಾವ ಮಾರೀಚ ಎಂಬುವನು ಈಗಿನ್ನು
ಲಾಗು ತಾನೀಗು ನುಡಿತಾನಿಯೋ ತಾನ |ತಂದಾನ|
ನಿನ್ನ ಕೂಡು ಸತ್ತಿದರೂ ಸ್ವರ್ಗವಿಲ್ಲೋ ಈಗಿನ್ನು
ರಾಮುನ ಕೈಯಲ್ಲು ಸತ್ತಿದರಾ ತಾನ |ತಂದಾನ|
ನನಗೂ ಸ್ವರ್ಗೊಂದೆ ಸಿಕ್ಕುತದೆಯೋ ಈಗಿನ್ನು
ಅಂದೇಳು ಮಾರೀಚ ನುಡಿದನಲಾ ತಾನ |ತಂದಾನ|
ರಾವಣನ ಬಾವ ಎಂಬುವನು ಈಗಿನ್ನು
ಮಾರೀಚ ಎಂಬ ಹೆಸರಾಲಾ ತಾನ |ತಂದಾನ|
ಮಾರೀಚ ಎಂಬ ಹೆಸರಾಲಾವನು ಈಗಿನ್ನು
ಯಾವ ರೂಪಾನೇ ತಾಳಾನೇ ತಾನ |ತಂದಾನ|
ಯಾವ ರೂಪಾನೇ ತಾಳಿದನು ಈಗಿನ್ನು
ಮಾಯುದ ಮುರುಗಾನೇ ಆದನಲ್ಲಾ ತಾನ |ತಂದಾನ|
ಮಾಯುದ ಮುರುಗಾನೇ ಅದನಲ್ಲಾ ಈಗಿನ್ನು
ಬಾಳು ಚಂದಾದ ಮುರುಗಾನಾಲಾ ತಾನ |ತಂದಾನ|
ಬಾಳು ಚಂದಾದ ಮುರುಗಾನು ಈಗಿನ್ನು
ಮಾಯಿಂದಿಂದಾಲೆ ಹೋಗುತದೆಯೋ ತಾನ |ತಂದಾನ|
ಮಾಯಿಂದಿಂದಾನೆ ಹೋಗುತದೆಯೋ ಈಗಿನ್ನು
ಎಲ್ಲಿಗೋವಿಗೋ ಹೋಗುತದೆಯೋ ತಾನ |ತಂದಾನ|
ಎಲ್ಲಿಗೂವಿಗೂ ಹೋಗುತದೆಯೋ ಈಗಿನ್ನು
ರಾಮನ ಬಳಿಗಾಗಿ ಹೋಗಬೇಕಾ ತಾನ |ತಂದಾನ|
ಗೋರು ಅರಣ್ಯದಲ್ಲಾಲು ವೀಗಿನ್ನು
ಸೊಪ್ಪಿನ ತುಂಡೀಲರಮನೆಯಾ ತಾನ |ತಂದಾನ|
ಸೊಪ್ಪಿನ ತುಂಡೀಲರಮನೆಯು ಈಗಿನ್ನು
ರಾಮ ಸೀತೀನೆ ಇರುವನಾಳ ತಾನ |ತಂದಾನ|
ರಾಮ ಸೀತೀನೇ ಇರುವವಳು ಈಗಿನ್ನು
ಅಲ್ಲಿಗೂವಿಗೂ ಹೋದನಾಲಾ ತಾನ |ತಂದಾನ|
ಮಾಯುದು ಮುರುಗಾನೆ ಹೋಗುತದೆಯೋ ಈಗಿನ್ನು
ಅಲ್ಲಿಗೂವಿಗೊಂದೆ ಹೋಗುತದೆಯೋ ತಾನ |ತಂದಾನ|
ಅಲ್ಲಿಗೂವಿಗೊಂದೆ ಹೋಗುತದೆಯೋ ಈಗಿನ್ನು
ನವಿಲಾ ಕುಣಿತಾನೇ ಕುಣಿತದೆಯೋ ತಾನ |ತಂದಾನ|
ನವಿಲಾ ಕುಣಿತಾನೇ ಕುಣಿತದೆಯೋ ಈಗಿನ್ನು
ಬಾಳು ಚಂದಾದ ಮುರುಗಾನು ತಾನ |ತಂದಾನ|
ಬಾಳು ಚಂದಾದ ಮರುಗಾನು ಈಗಿನ್ನು
ರಾಮನು ಸೀತೀನೆ ಎಂಬುವಳಾ ತಾನ |ತಂದಾನ|
ರಾಮನ ಸೀತೀನೆ ಎಂಬುವಳು ಈಗಿನ್ನು
ಹೊರಗೂ ಬಂದೊಂದೆ ಕಂಡಿದಳಾ ತಾನ |ತಂದಾನ|
ಹೊರಗೂ ಬಂದೊಂದೆ ಕಂಡಿದಳು ಈಗಿನ್ನು
ಬಾಳ ಚಂದಾನೆ ನೋಡುತದೆಯೋ ತಾನ |ತಂದಾನ|
ಬಾಳ ಚಂದಾನೇ ಕಂಡಿದಳು ಈಗಿನ್ನು