ತಂದಾನ ತಾನನ ತಂದಾನುವೋ ತಾನ |ತಂದಾನ|
ದಶರತುವೋ ಮಾರಾಜ ಎಂಬುವುನು ಈಗಿನ್ನು
ಚಂದೂದಿಂದೂಲೇ ಇರುವೊನಲ್ಲಾ ತಾನ |ತಂದಾನ|
ಚಂದೂದಿಂದೂಲೇ ಇರುವೊನಲ್ಲಾ ಈಗಿನ್ನು
ಸುಖುದಲ್ಲೂ ಕಾಲಾನೇ ಕಳುವಂಗಾ ತಾನ |ತಂದಾನ|
ಲವುನೀಗೂ ಇರುವೋರು ಮೂರುಮಂದ್ಯೋ |ತಂದಾನ|
ಲವುನೀಗಿರುವೋರು ಮೂರುಮಂದಿ ಈಗಿನ್ನು
ಕೈಕೇ ಕೌಸಲ್ಯೆ ಕೌಮಿತ್ರಾ ತಾನ |ತಂದಾನ|
ಕೈಕೇ ಕೌಸಲ್ಯೆ ಕೌಮಿತ್ರಾ ಎಂಬೋರು
ಮೂರೂ ಮಂದೀನೆ ಹೆಂಡಿರಾಲಾ ತಾನ |ತಂದಾನ|
ಸುಖುದಲೂ ಕಾಲಾನೇ ಕಳುವಂಗೂ ಈಗಿನ್ನು
ಒಂದಲ್ಲವೊಂದೇ ದಿನದಲ್ಲೀ ತಾನ |ತಂದಾನ|
ಒಂದಲ್ಲವೊಂದೆ ದಿನದಲೂ ಈಗಿನ್ನು |
ದಶರತು ಮಾರಾಜ ಎಂಬೋನೂ ತಾನ |ತಂದಾನ|
ಮಡುದೀ ಕೂಡೊಂದೆ ನುಡುದನಲ್ಲ ಈಗಿನ್ನು|
ನಾನೂ ಈಗೊಂದೆ ಹೋಗುಬೇಕಾ ತಾನ |ತಂದಾನ|
ನಾನೂ ಈಗೊಂದೆ ಹೋಗುಬೇಕು ಈಗಿನ್ನು
ಮಾಸುದೂ ಮಾನುಬಾಳು ಮನುಸಾಲಾ ಈಗಿನ್ನೂ
ಮಾಸುಲುದೀಬಾಳು ಮನುಸಾಲಾ ತಾನ |ತಂದಾನ|
ಮಾಸುಲುದೀಬಾಳು ದಿವುಸಾದುವೀಗಿನ್ನು
ಮುರುಗುನು ಬ್ಯಾಟೀಗು ಹೋಗುಬೇಕಾ ತಾನ |ತಂದಾನ|
ಮುರುಗುನು ಬ್ಯಾಟೀಗು ಹೋಗುಬೇಕುವೀಗಿನ್ನು
ಮಾಸಾಮಾಡಿ ನಾನೆ ಬರುಬೇಕಾ ತಾನ |ತಂದಾನ|
ಮೊಡುದೀ ಕೂಡೊಂದೆ ನುಡಿತವನೆ ಏನೆಂದು
ಬ್ಯಾಟಿ ಅಡುಗೇನೆ ಮಾಡುಬೇಕಾ ತಾನ |ತಂದಾನ|
ಲಂದೂ ತಾನೀಗು ನುಡ್ದವನಾಲೋವೀಗಿನ್ನು
ದಶುರತು ಮಾರಾಜ ಎಂಬುವನಲಾ ತಾನ |ತಂದಾನ|
ಬ್ಯಾಟೀ ಅಡುಗೇನೆ ಮಾಡಿದುರುವೀಗಿನ್ನು
ದಶುರತಾ ಮಾರಾಜರಿರುವರಾಲಾ ತಾನ |ತಂದಾನ|
ಸಾನಾ ಜಪುವನೆ ಮಾಡಿದುರು ಈಗಿನ್ನು
ಊಟಾಉಳ್ಳೇನೆ ಮಾಡಿದುರಾ ತಾನ |ತಂದಾನ|
ಊಟಾಉಳ್ಳೆನೆ ಮಾಡುಗೊಂಡು ಈಗಿನ್ನು
ಮೂಡಿನೂ ಕಾಡೀಗೆ ಹೋದನಾ ತಾನ |ತಂದಾನ|
ಮೂಡಿನೂ ಕಾಡೀಗು ಹೋಗಿದುನುವೀಗಿನ್ನು
ಚಣ್ಣಾಗುಂಡೀನ ಕೋವಿಯಾಲಾ ತಾನ |ತಂದಾನ|
ಚಣ್ಣಾಗುಂಡೀನ ಕೋವಿಯಲೋವೀಗಿನ್ನು
ಲದುರು ತಾನೀಗೆ ತುಂಬಿದನೋ ತಾನ |ತಂದಾನ|
ಮದ್ದೂ ಗುಂಡೊಂದೆ ತುಂಬಿದುನೊವೀಗಿನ್ನು
ಲಾಗೂ ತಾನೀಗೂ ಎದ್ದಾನಾಲಾ ವೀಗಿನ್ನು
ಹಂಡಾ ನಾಯೊಂದೆ ಕರಕೊಂಡಾ ತಾನ |ತಂದಾನ|
ಹಂಡಾನಾಯೊಂದೆ ಕಕರೊಂಡುವೀಗಿನ್ನು
ಮುರುಗುನೂ ಬ್ಯಾಟೀಗೂ ಎದ್ದನಾಲಾ ತಾನ |ತಂದಾನ|
ಮುರುಗುನೂ ಬ್ಯಾಟೀಗೂ ಎದ್ದನಾವೀಗಿನ್ನು
ದಶುರತು ಮಾರಾಜ ಎಂಬವನಾಲಾ ತಾನ |ತಂದಾನ|
ಬಡುಗೀನ ಹೊಲಕಾಗಿ ನಡೆದಿದುನುವೀಗಿನ್ನು
ಬಡಗೀನ ಹೊಲವೊಂದೆ ತಿರುಗಾನ್ಯಾಲ ತಾನ |ತಂದಾನ|
ಬಡಗೀನ ಹೊಲವೊಂದೆ ತಿರುಗಿದುನುವೀಗಿನ್ನು
ಹಾರುವ ಹಕ್ಕೀಯ ಹೊಡುಲಿಲ್ಲಾ ತಾನ |ತಂದಾನ|
ಆ ಹೊಲುನು ತಾನೆ ಬಿಟ್ಟನಲೋವೀಗಿನ್ನು
ತೆಂಕೀನೊಲುಕಾಗಿ ಬಂದಾನ್ಯಾಲಾ ತಾನ |ತಂದಾನ|
ಕೊಡುವೂಕಂಡೊಲನೆ ಹೋಕ್ದಾನೆವೀಗಿನ್ನು
ಹೊಕ್ಕನಾಲ ಹೊಲನ ಇಟ್ಟನ್ಯಾಲಾ ತಾನ |ತಂದಾನ|
ಆ ಹೊಕ್ಕನಾಲ ಹೊಲನ ಇಟ್ಟನ್ಯಾಲ್ಲೋವೀಗಿನ್ನು
ಮೆರೆವು ತುಂಬೀ ಹುಳುಲಿಲ್ಲಾ ತಾನ |ತಂದಾನ|
ಆ ಹೊಲುನು ತಾನೆ ಬಿಟ್ಟೆನೆಲ್ಲೋವೀಗಿನ್ನು
ಮೂಡೀನೊಲಕಾಗಿ ನಡೆದನ್ಯಾಲಾ ತಾನ |ತಂದಾನ|
ಕೊಡುವೂ ಕಂಡಲುನೆ ಹೊಕ್ಕನಾಲವೀಗಿನ್ನು
ಹೊಕ್ಕು ಹೊಕ್ಕೀಗೂ ಹದನಾದೂ ತಾನ |ತಂದಾನ|
ಅಲ್ಲೂವಿಗೊಂದೆ ಇರುವುದಲ್ಲೊವೀಗಿನ್ನು
ಆ ಕೆರೆಯಲು ನೀರೇ ಇರುವುದಾಲಾ ತಾನ |ತಂದಾನ|
ಮದದಲ್ಲಿ ತುರವುಂಥ ಮದ್ದಾನೀವೀಗಿನ್ನು
ನೀರು ಕುಡಕೊಂಡೆ ಬಂದದ್ಯಾಲಾ ತಾನ |ತಂದಾನ|
ಕೆರೆಯಲ್ಲಿ ನೀರೊಂದೆ ಕುಡುವಂಗಾವೀಗಿನ್ನು
ದಶುರತು ಮಾರಾಜ ಕಂಡನಲಾ ತಾನ |ತಂದಾನ|
ದಶುರತು ಮಾರಾಜ ಕಂಡಿದುನೋವೀಗಿನ್ನು
ಚೆಣ್ಣಾ ಗುಂಡೀನ ಕೋವಿಯಾಲಾ ತಾನ |ತಂದಾನ|
ಲದರೂ ತಾನೀಗೂ ವಿಡಿದುದುನುವೀಗಿನ್ನು
ಮದ್ಹಾನೆಗೂ ಗುಂಡು ತಗಲದ್ಯಾಲಾ ತಾನ |ತಂದಾನ|
ಕೇಳು ಕೇಳು ನರಮನುಷ್ಯ ನೀ ಕೇಳವೀಗಿನ್ನು
ನನ್ನಾ ಹೊಡೆದು ನೀನೆ ಕೊಂದಿಯೇನೊ ತಾನ |ತಂದಾನ|
ನನ್ನಾ ಹೊಡೆದು ನೀನೆ ಕೊಂದಿಯೇನೊವೀಗಿನ್ನು
ನೀನಾದುರೀಗಾ ಸಾಯ್ತಿಯಾಲಾ ತಾನ |ತಂದಾನ|
ನೀನಾದುರೀಗಾ ಸಾಯ್ತಿಯಲಾವೀಗಿನ್ನು
ಪುತ್ತುರುನಾ ಶಾಪುದಿಂದು ಸಾಯ್ತಿಯಾಲಾ ತಾನ |ತಂದಾನ|
ನನಗೇ ಪುತ್ತುರಾನೆ ಹುಟ್ಟುಲಿಲ್ಲವೀಗಿನ್ನು
ಪುತ್ತುರುನಾ ಶಾಪದಿಂದೆ ಸಾವುದಿಲ್ಲಾ ತಾನ |ತಂದಾನ|
ದಶುರತಾ ಮಾರಾಜ ನುಡಿದನ್ಯಾಲ್ಲೋವೀಗಿನ್ನು
ಲಷ್ಟೊಂದು ಮಾತೆ ಹೇಳಿದುರಾ ತಾನ |ತಂದಾನ|
ಹಿಂದೂ ತಿರುಗುವೊಂದೆ ಬಂದನಾಲಾವೀಗಿನ್ನು
ತನ್ನಾಲರುಮನಿಗೂ ಬಂದನಾಲಾ ತಾನ |ತಂದಾನ|
ತನ್ನಾಲರುಮನಿಗೂ ಬಂದನಲ್ಲೋವೀಗಿನ್ನು
ಮಾಸುಲದ ಮನಿಗೂ ಬಂದನಾಲಾ ತಾನ |ತಂದಾನ|
ದಶುರಥು ಮಾರಾಜ ಎಂಬುವುನುವೀಗಿನ್ನು
ನಾನೂವಿಗೊಂದೆ ಕರೆಸಬೇಕಾ ತಾನ |ತಂದಾನ|
ನಾನೂವಿಗೊಂದೆ ಕರೆಸಬೇಕುವೀಗಿನ್ನು
ಮಾಯುದು ರಥವೊಂದೇ ಕರೆಸಬೇಕಾ ತಾನ |ತಂದಾನ|
ಮಾಯಾದು ರಥವೊಂದೇ ಕರೆಸಬೇಕಾವೀಗಿನ್ನು
ಇಂದುರು ಲೋಕಾಕ್ಕೆ ಹೋಗುಬೇಕಾ ತಾನ |ತಂದಾನ|
ಇಂದುರು ಲೋಕಾಕು ಹೋಗಬೇಕಾವೀಗಿನ್ನು
ಚಂದುರು ಲೋಕಾಕೂ ಹೋಗಬೇಕಾ ತಾನ |ತಂದಾನ|
ಚಂದುರು ಲೋಕಾಕೂ ಹೋಗಬೇಕೋವೀಗಿನ್ನು
ದೇವುಪಟ್ಟುಣವೆ ನೋಡಬೇಕಾ ತಾನ |ತಂದಾನ|
ಲಂದು ಗ್ಯಾನಾನೆ ಮಾಡಿದುನೋವೀಗಿನ್ನು
ದಶುರಥು ಮಾರಾಜ ಎಂಬುವುನಾಲಾ ತಾನ |ತಂದಾನ|
ಮಾಯುದು ರಥವೊಂದೇ ಕಡುಸಿದುನೋವೀಗಿನ್ನು
ಲಾಗುತಾನಿಗು ಇರುವನಲಾ ತಾನ |ತಂದಾನ|
ಲಾಗುತಾನೀಗು ಇರುವನಾಲಾವೀಗಿನ್ನು
ತಾನೂವಿಗೊಂದೇ ಎದ್ದನಾಲಾ ತಾನ |ತಂದಾನ|
ತನ್ನ ಮಡುದೇರು ಕರೆದಿದುನೋವೀಗಿನ್ನು
ಕೇಳಿ ಕೇಳಿ ಮಡುದ್ಹೀರೇ ನಿವಾಲಾ ತಾನ |ತಂದಾನ|
ಕೈಕೆ ಕೈಸಲ್ಯ ಕಾಮಿತುರೆ ನೀವಾಲ
ನೀವು ಮೂರುಜನಾ ಕೇಳುಬೇಕಾ ತಾನ |ತಂದಾನ|
ಅರುಮನಿಯಲು ನೀವೇ ಉಳಿತೀರಿ ನೀವಿನ್ನು
ನಾನೂವಿಗೊಂದೆ ಹೋಗುಬೇಕಾ ತಾನ |ತಂದಾನ|
ನಾನೂವಿಗೊಂದೆ ಹೋಗುಬೇಕುವೀಗಿನ್ನು
ಇಂದರುಲೋಕ ಚಂದರುಲೋಕ ತಿರುಗಬೇಕಾ ತಾನ |ತಂದಾನ|
ಇಂದರುಲೋಕ ಚಂದರುಲೋಕ ತಿರುಗುಬೇಕುವೀಗಿನ್ನು
ದೇವುಲೋಕ ದೇವುಪಟ್ನುವೆ ನೋಡು ಬೇಕಾ ತಾನ |ತಂದಾನ|
ಎಂದು ತಾನೀಗೂ ಹೇಳಿದುನೋವೀಗಿನ್ನು
ಊಟ ವೀಳ್ಳೇನೆ ಮಾಡಿದುನೋ ತಾನ |ತಂದಾನ|
ಊಟ ವೀಳ್ಳೆನೆ ಮಾಡಿದುನೋವೀಗಿನ್ನು
ಮಾಯುದು ರಥವೊಂದೆ ಏರಿದುನೋ ತಾನ |ತಂದಾನ|
ಮಾಯುದು ರಥವೊಂದೇ ಏರಿದುನೋ ವೀಗಿನ್ನು
ಮಡುದೀನೆ ಎಂಬುವಳಾಲಾ ತಾನ |ತಂದಾನ|
ಕೈಕೆ ಎಂಬೋ ಮಡುದಿಯಲ್ಲೋ ಈಗಿನ್ನು
ರಥುದು ಗಾಲೀನೇ ಹಿಡಿದಳ್ಯಾಲಾ ತಾನ |ತಂದಾನ|
ಗಂಡುನು ಜೊತೆಯಲ್ಲೇ ಹೋಗಳಲ್ಲೋವೀಗಿನ್ನು
ಮಾಯುದು ರಥುದಲ್ಲಿ ಹೋಗಳ್ಯಾ ತಾನ |ತಂದಾನ|
ದಶುರಥು ಮಾರಾಜ ಎಂಬುವುನು ಈಗಿನ್ನು
ಹಿಂದೆ ತಿರುಗೊಂದೆ ಕಂಡಿಲ್ಲಾ ತಾನ |ತಂದಾನ|
ಲಾಗೂತಾನಿಗೂ ಹೋಗನಲ್ಲೋವೀಗಿನ್ನು
ದೇವು ಲೋಕ ದೇವು ಪಟ್ಟುಣಾ ಕಂಡನ್ಯಾಲಾ ತಾನ |ತಂದಾನ|
ಚಂದುರು ಲೋಕಾಕು ಹೋದನಲ್ಲೋವೀಗಿನ್ನು
ಚಂದುರು ಲೋಕಾನೆ ಕಂಡನ್ಯಾಲಾ ತಾನ |ತಂದಾನ|
ಇಂದುರು ಲೋಕಾಕೆ ಹೋದನಲ್ಲೋವೀಗಿನ್ನು
ಇಂದುರು ಲೋಕಾನೆ ಕಂಡನಲ್ಲೋ ತಾನ |ತಂದಾನ|
ಇಂದುರು ಲೋಕಾನೆ ಕಂಡನಲ್ಲೋವೀಗಿನ್ನು
ಎಲ್ಲಾ ತಿರುಗೀಗೂ ಬಂದನ್ಯಾಲಾ ತಾನ |ತಂದಾನ|
ಎಲ್ಲಾ ತಿರುಗೀಗೂ ಬಂದನಲ್ಲೋವೀಗಿನ್ನು
ಹಿಂದೂ ತಿರುಗೀಗೂ ಬರುವಾಗ ತಾನ |ತಂದಾನ|
ಹಿಂದೂ ತಿರುಗೊಂದೆ ಬರುವಂಗೋವೀಗಿನ್ನು
ಅಲ್ಲೊಂದು ನದೀನೆ ಕಂಡನ್ಯಾಲಾ ತಾನ |ತಂದಾನ|
ಅಲ್ಲೊಂದು ನದೀನೇ ಕಂಡನ್ಯಾಲವೀಗಿನ್ನು
ಬಾಳ ಬಾಯುರಿಕೆ ಅವನಿಗಾಲಾ ತಾನ |ತಂದಾನ|
ನದಿಯಲು ನೀರೇ ಕುಡಿಬೇಕು ಎಂದೇಳಿ
ಮಾಯುದು ರಥವೊಂದೇ ಇಳಿಸನ್ಯಾಲಾ ತಾನ |ತಂದಾನ|
ಮಾಯುದು ರಥವೊಂದೇ ಇಳಿಸಿದುನೋವೀಗಿನ್ನು
ಹಿಂದೆ ತಿರುಗೊಂದೆ ಕಂಡಿದುನಾ ತಾನ |ತಂದಾನ|
ಕಿರಿಯ ಮಡುದೀನೆ ಅವುಳಿಗಾಲಈಗಿನ್ನು
ಕೇಳು ಕೇಳು ನನ್ನ ಮಡದೀ
ನೀನಾಲಾ ತಾನ |ತಂದಾನ|
ಇಂತಾ ಕೆಲುಸಾನೆ ಮಾಡುಬ್ಯಾಡ ಈಗಿನ್ನು
ನಿನ್ನ ಪ್ರಾಣವೇ ತೆಗಿದಿನಾಲಾ ತಾನ |ತಂದಾನ|
ನನ್ನಾ ಕೈಯಿಂದನೇ ತೆಗದೀನಾಲಾವೀಗಿನ್ನು
ಈ ಕೆಲಸ ನೀನೇ ಮಾಡಿದೇನೇ ತಾನ |ತಂದಾನ|
ಕೇಳಿ ಕೇಳಿ ನನ್ನ ಸ್ವಾಮಿ ಪತಿಯವುರೆ ನೀವಿನ್ನು
ನೀವು ಈಗೊಂದೆ ಕೇಳುರ್ಯಾಲಾ ತಾನ |ತಂದಾನ|
ನಿಮ್ಮಾ ಬೆನ್ನೀಗೂ ಬರುದಿದುರೆ ಈಗಿನ್ನು
ನಿಮ್ಮಾ ಪ್ರಾಣಾನೆ ಉಳುವದಿಲ್ಲಾ ತಾನ |ತಂದಾನ|
ಮಾಯುದು ರಥವೊಂದೆ ಇವುರುದಾಲಾವೀಗಿನ್ನು
ರಥುದು ಕೀಲಾನೆ ಹೋಗದ್ಯಾಲಾ ತಾನ |ತಂದಾನ|
ನನ್ನಾ ಕೈ ಬಿಟ್ಟು ವರಸ್ತುಗೊಂಡುವೀಗಿನ್ನು
ಇಲ್ಲಾರೆ ನಿಮ್ಮಾ ಪ್ರಾಣಾ ತಡದನ್ಯಾಲಾ ತಾನ |ತಂದಾನ|
ಕೇಳು ಕೇಳು ನನ್ನ ಮಡುದಿ ನೀ ಕೇಳು ಈಗಿನ್ನು
ನನ್ನಾ ಪ್ರಾಣಾನೇ ಉಳಿಸಿದ್ಯಾಲಾ ತಾನ |ತಂದಾನ|
ನನ್ನಾ ಪ್ರಾಣಾನೆ ಉಳಿಸಿದ್ಯಾಲ್ಲೇ ಈಗಿನ್ನು
ನೀ ಬೇಡಿದೊರುವೆ ಕೊಡುತೆಂಬಾ ತಾನ |ತಂದಾನ|
ನೀ ಬೇಡಿದೊರುವೆ ಕೊಡುತೆಂಬವೀಗಿನ್ನು
ಮಡುದಿ ಕೂಡೊಂದೆ ನುಡುದನ್ಯಾಲಾ ತಾನ |ತಂದಾನ|
ಕೇಳಿ ಕೇಳಿ ನನ್ನ ಸ್ವಾಮಿ ನೀವು ಕೇಳಿ ಈಗಿನ್ನು
ಬೇಡೀದ ವರುವೆ ಕೊಡುತೆಂದಾ ತಾನ |ತಂದಾನ|
ಬಾಯಲ್ಲಿ ಹೇಳಿದುರು ಅಲ್ಲುವಾಲಾ ಈಗಿನ್ನು
ಕೈ ಮ್ಯಾಲೆ ಭಾಷೆ ಕೊಡುಬೇಕಾ ತಾನ |ತಂದಾನ|
ಕೇಳು ಕೇಳು ನನ್ನ ಮಡುದಿ ನೀ ಕೇಳೆವೀಗಿನ್ನು
ಬೇಡಿದು ವರುವೆ ಕೊಡುತೆಂಬಾ ತಾನ |ತಂದಾನ|
ಬೇಡಿದು ವರವೆ ಕೊಡುತೆಂಬಾವೀಗಿನ್ನು
ಬಲಗೈಲಿ ಭಾಷೆಯ ಕೊಡ್ಹನೆಂಬಾ ತಾನ |ತಂದಾನ|
ಅಲ್ಲಿಂದವೀಗೂ ಬಂದರಲ್ಲವೀಗಿನ್ನು
ಗಂಡಾಹೆಂಡಾರು ಇಬ್ಬುರಾಲಾ ತಾನ |ತಂದಾನ|
ಗಂಡಾ ಹೆಂಡಾರು ಇಬ್ಬುರಾಲೋವೀಗಿನ್ನು
ತಮ್ಮಾಲರುಮನಿಗೂ ಬಂದಿದುರು ತಾನ |ತಂದಾನ|
ತಮ್ಮಾಲರುಮನಿಗೂ ಬಂದಾರಾಲಾ ಈಗಿನ್ನು
ಸುಖುದಲು ಕಾಲಾನೆ ಕಳುವಂಗಾ ತಾನ |ತಂದಾನ|
ಸುಖದಲು ಕಾಲಾನೆ ಕಳುವಂಗೋ ಈಗಿನ್ನು
ಒಂದಲ್ಲ ಒಂದೇ ದಿನುವಲ್ಲಾ ತಾನ |ತಂದಾನ|
ಅವನಿಗಿರುವೋರು ಮೂರುಂದಿ ಮಡುದೀರು ಈಗಿನ್ನು
ಕೈಕಿ ಕೌಸಲ್ಯೆ ಕೌಮಿತ್ತುರಾ ತಾನ |ತಂದಾನ|
ಕೈಕಿ ಕೌಸಲ್ಯೆ ಕೌಮಿತ್ರೆ ಈಗಿನ್ನು
ಮೂರು ಜನರೀಗೂ ಹೊತ್ತರ್ಯಾಲಾ ತಾನ |ತಂದಾನ|
ಮೂರು ಜನರೀಗೂ ಹೊತ್ತರ್ಯಾಲ್ಲೋ ಈಗಿನ್ನು
ಲವುರು ಗರುಬಿಣೆನೆ ಲಾದರಾಲಾ ತಾನ |ತಂದಾನ|
ಲವುರು ಗರುಬಿಣೆನೆ ಲಾದಾರಲ್ಲೋ ಈಗಿನ್ನು
ರಾಮಾ ಲಕ್ಷುಮಣ್ಣ ಎಂಬವುರಾಲಾ ತಾನ |ತಂದಾನ|
ರಾಮಾ ಲಕ್ಷುಮಣ್ಣ ಎಂಬವುರು ಈಗಿನ್ನು
ಒಂದೇ ತಾಯಿಗೆ ಹಡದಳಲ್ಲಾ ತಾನ |ತಂದಾನ|
ಒಂದೆ ತಾಯಿಗೆ ಹಡುದಳಲ್ಲಾ ಈಗಿನ್ನು
ಕೈಕಾ ದೇವೀನೆ ಹಡುದಿದುಳು ತಾನ |ತಂದಾನ|
ಕೈಕಾ ದೇವೀನೆ ಹಡುದಿದುಳು ಈಗಿನ್ನು
ಎಲ್ಡು ಗಂಡೂ ಪುತ್ರನಾಲಾ ತಾನ |ತಂದಾನ|
ಬಾರ್ತ ಸಸ್ತ್ರಾವೆ ಎಂಬುವುರು ಈಗಿನ್ನು
ಕೈಕಿ ಕೌಸಲ್ಯೆಗೆ ಹುಟ್ಟಿದರಾಲಾ ತಾನ |ತಂದಾನ|
ಒಟ್ಟಿಗವುರು ನಾಕು ಜನುರಲ್ಲೋ ಈಗಿನ್ನು
ಉದ್ದು ದೊಡ್ಡಾನೆ ಮಾಡುದರಾಲಾ ತಾನ |ತಂದಾನ|
ಉದ್ದು ದೊಡ್ಡಾನೆ ಮಾಡುದುರು ಈಗಿನ್ನು
ಹುಸುನೀರು ಬಿಸಿಮಾಡು ಹುಯ್ದರಾಲಾ ತಾನ |ತಂದಾನ|
ಹುಸುನೀರು ಬಿಸಿಮಾಡು ಹುಯ್ದಿದುರು ಈಗಿನ್ನು
ಎಣ್ಣೆಲು ಬೇಣ್ಣೇಲಿ ಉಜ್ಜರಾಲಾ ತಾನ |ತಂದಾನ|
ಎಣ್ಣೆಲು ಬೆಣ್ಣೇಲಿ ಉಜ್ಜರಾಲಾ ವೀಗಿನ್ನು
ಉದ್ದೊದೊಡ್ಡಾನೆ ಮಾಡರ್ಯಾಲಾ ತಾನ |ತಂದಾನ|
ಉದ್ದೊದೊಡ್ಡಾನೆ ಮಾಡ್ಯರಲ್ಲೋ ಈಗಿನ್ನು
ಬುದ್ದು ಬಲುವಾಗು ಬಂದರಾಲಾ ತಾನ |ತಂದಾನ|
ಬುದ್ದಿ ಬಲುವಾಗಿ ಬಂದರ್ಯಾಲೋ ಈಗಿನ್ನು
ಒಳ್ಳೆ ಬುದ್ದೀನೆ ಕಲಸ್ಯರಾಲೋ ತಾನ |ತಂದಾನ|
ಒಳ್ಳೆ ಬುದ್ದೀನೆ ಕಲಸ್ಯರಾಲೋ ಈಗಿನ್ನು
ಇದ್ದಿ ಬುದ್ದೀನೆ ಕಲಸರ್ಯಾಲಾ ತಾನ |ತಂದಾನ|
ಇದ್ದಿ ಬುದ್ದೀನೆ ಕಲುಸರ್ಯಾಲಾ ಈಗಿನ್ನು
ಸಾಧುಕು ಸಂಪತ್ತೆ ಕಲುಸರ್ಯಾಲಾ ತಾನ |ತಂದಾನ|
ಸಾಧುಕು ಸಂಪತ್ತೆ ಕಲುಸರ್ಯಾಲಾ ಈಗಿನ್ನು
ಜಾದು ವಿದ್ದೀನೆ ಕಲಿಸಿದುರೋ ತಾನ |ತಂದಾನ|
ಎಲ್ಲಾ ವಿದ್ದೀನೆ ಕಲಿಸಿದುರೋವೀಗಿನ್ನು
ಒಂದೆ ಗೇವೀಲಿ ಹೋಗುವಾಲಾ ತಾನ |ತಂದಾನ|
ಒಂದೆ ಗೇವೀಲಿ ಹೋಗುವುರೆ ಈಗಿನ್ನು
ಒಂದೆ ಗೇವೀಲಿ ಬರುವವುರಾ ತಾನ |ತಂದಾನ|
ಒಂದೆ ಗೇವೀಲಿ ಬರುವವರು ಈಗಿನ್ನು
ಒಂದೆ ತೋಳೀನ ತೊಡಿಯವರಾ ತಾನ |ತಂದಾನ|
ಒಂದೇ ತೋಳೀನ ತೊಡಿಯವರು ಈಗಿನ್ನು
ಒಂದೇ ಮುದ್ದೀನ ಮುಖದವರಾ ತಾನ |ತಂದಾನ|
ಒಂದೇ ಮುದ್ದೀನ ಮುಖದವರಾ ಈಗಿನ್ನು
ಒಂದೇ ಗೇವೀಲಿ ಹೋಗುವಾರಾ ತಾನ |ತಂದಾನ|
ಒಂದೆ ಗೇವೀಲಿ ಹೋಗುವಾರಾ ಈಗಿನ್ನು
ರಾಮ ಲಚ್ಚುಮಣ್ಣ ಎಂಬುವರು ತಾನ |ತಂದಾನ|
ರಾಮ ಲಚ್ಚುಮಣ್ಣ ಎಂಬುವರು ಈಗಿನ್ನು
ಬಾರ್ತ ಸಸ್ರಾನೆ ಎಂಬುವುರಾಲಾ ತಾನ |ತಂದಾನ|
ಬಾರ್ತ ಸಸ್ತ್ರಾನೆ ಎಂಬುವುರು ಈಗಿನ್ನು
ಚಂದಾದಿಂದವುರ ಇರುವರಾಲಾ ತಾನ |ತಂದಾನ|
ಚಂದಾದಿಂದವುರು ಇರುವರಾಲಾ ಈಗಿನ್ನು
ಉಳುವಂಗ ಕಾಲ ಕಳುವಾಂಗಾ ತಾನ |ತಂದಾನ|
ಉಳುವಂಗ ಕಾಲ ಕಳುವಂಗಾ ಈಗಿನ್ನು
ದಶರಥು ಮಾರಾಜ ಎಂಬವನಾಲಾ ತಾನ |ತಂದಾನ|
ದಶರಥು ಮಾರಾಜ ಎಂಬವನಲ್ಲೋ ಈಗಿನ್ನು
ಏನು ಗ್ಯಾನಾನೇ ಮಡಿದುನೋ ತಾನ |ತಂದಾನ|
ಏನು ಗ್ಯಾನಾನೇ ಮಾಡಿದುನೋ ಈಗಿನ್ನು
ನನಗೂವಿಗೊಂದೆ ಬಂದದ್ಯಾಲಾ ತಾನ |ತಂದಾನ|
ನನಗೂವಿಗೊಂದೆ ಬಂದದಲ್ಲೋ ಈಗಿನ್ನು
ಮುಪ್ಪೀನ ಕಾಲ ಸಂದುದ್ಯಾಲಾ ತಾನ |ತಂದಾನ|
ಮುಪ್ಪೀನ ಕಾಲ ಸಂದದಲ್ಲೋ ಈಗಿನ್ನು
ರಾಮುಗೂ ಪಟ್ಟವೊಂದೆ ಕಟ್ಟಬೇಕಾ ತಾನ |ತಂದಾನ|
ರಾಮುಗು ಪಟ್ಟವೊಂದೆ ಕಟ್ಟಬೇಕು ಈಗಿನ್ನು
ಪಟ್ಟಾಲಬುಷೇಕ ಮಾಡುಬೇಕಾ ತಾನ |ತಂದಾನ|
ಪಟ್ಟಾಲುಬುಷೇಕ ಮಾಡುಬೇಕಾ ಈಗಿನ್ನು
ರಾಮುಗು ಪಟ್ಟುವೊಂದೆ ಕೊಡಬೇಕಾ ತಾನ |ತಂದಾನ|
ಲಂದೂ ಗ್ಯಾನಾನೇ ಮಾಡಿಕೊಂಡುವೀಗಿನ್ನು
ಅವರವರಿಗೂ ಹೇಳನ್ಯಾಲಾ ತಾನ |ತಂದಾನ|
ಬರುವ ಸೋಮವಾರ ದಿನದಲ್ಲು ಈಗಿನ್ನ
ರಾಮುಗು ಪಟ್ಟವೊಂದು ಕೊಡಬೇಕಾ ತಾನ |ತಂದಾನ|
ಲಂದೂ ಗ್ಯಾನಾನೇ ಮಾಡಿಕೊಂಡು ಈಗಿನ್ನು
ಊರಾವರಿಗೆಲ್ಲಾ ಹೇಳನ್ಯಾಲಾ ತಾನ |ತಂದಾನ|
ಊರಾವರಿಗೆಲ್ಲಾ ಹೇಳನ್ಯಾಲಾ ಈಗಿನ್ನು
ಡೋಳಿಗು ಡಂಗೂರು ಸಾರನ್ಯಾಲಾ ತಾನ |ತಂದಾನ|
ಡೋಳಿಗು ಡಂಗೂರು ಸಾರಿದನು ಈಗಿನ್ನು
ಪುರೋತು ಭಟ್ಟರಿಗೂ ಹೇಳಿದುನಾಲಾ ತಾನ |ತಂದಾನ|
ಪುರೋತು ಭಟ್ಟರಿಗೂ ಹೇಳಿದುನಾ ಈಗಿನ್ನು
ಭಟ್ಟ ಬ್ರಾಹ್ಮಣಂಗೂ ಹೇಳಿದುನಾ ತಾನ |ತಂದಾನ|
ಭಟ್ಟ ಬ್ರಾಹ್ಮಣರಿಗೂ ಹೇಳಿದುನು ಈಗಿನ್ನು
ಹಾದಿ ಹಂಜ್ರಾನ ಅಗುಸಿದುನೋ ತಾನ |ತಂದಾನ|
ಹಾದಿ ಹಂಜ್ರಾನೆ ಅಗುಸಿದುನೋ ಈಗಿನ್ನು
ಬೀದಿಗು ಚಪ್ಪುರಾನೆ ಹಾಕಿಸಿದುನೋ ತಾನ |ತಂದಾನ|
ಊರು ನೆರೆಯುವುರೆ ಕೂಡಿದುರು ಈಗಿನ್ನು
ಒಕ್ಕುಲು ಮಕ್ಕೋಳು ಕೂಡಿದುರಾ ತಾನ |ತಂದಾನ|
ಒಕ್ಕುಲು ಮಕ್ಕೋಳು ಕೂಡಿದುರು ಈಗಿನ್ನು
ಲಾಗುತಾನೀಗೂ ಲಿರುವರಾಲಾ ತಾನ |ತಂದಾನ|
ಲಾಗುತಾನೀಗೂ ಲಿರುವರಾಲಾ ಈಗಿನ್ನು
ಭಟ್ಟ ಬ್ರಾಹ್ಮಣರೇ ಬಂದರ್ಯಾಲಾ ತಾನ |ತಂದಾನ|
ಮೂರುತುವೀಗ ಬರಲಿಲ್ಲ ವೀಗಿನ್ನು
ರಾಮುಗು ಚಡ್ಡಂಗ ಗೆಯಿತಾರಿಯಾ ತಾನ |ತಂದಾನ|
ರಾಮುಗು ಚಡ್ಡಂಗ ಗೆಯಿತಾರೆ ಈಗಿನ್ನು
ಏನು ಚಡ್ಡಂಗ ಮಾಡುತಾರಿಯೋ ತಾನ |ತಂದಾನ|
ಏನು ಚಡ್ಡಂಗ ಮಾಡುತಾರಿಯೋ ಈಗಿನ್ನು
ಚಿನ್ನದ ಕಿರೀಟೊಂದೆ ಕಟ್ಟುತಾರಿಯೋ ತಾನ |ತಂದಾನ|
ಚಿನ್ನದ ಕಿರೀಟೊಂದೆ ಕಟ್ಟುತಾರೆಯೋ ಈಗಿನ್ನು
ಚಿನ್ನದು ಬಳೆಯೊಂದೆ ಹಾಕುತಾರಿಯೊ ತಾನ |ತಂದಾನ|
ಚಿನ್ನದ ಬಳೆಯೊಂದೆ ಹಾಕುತಾರಿಯೋ ಈಗಿನ್ನು
ರಾಮುನು ಕಾಡೀಗಿ ಹಾಕುತಾರೆಯೋ ತಾನ |ತಂದಾನ|
ರಾಮನು ಕಾಡೀಗಿ ಹಾಕುತಾರೆಯೋ ಈಗಿನ್ನು
ಮೂರುತುವೀಗ ಬಂದದ್ಯಾಲಾ ತಾನ |ತಂದಾನ|
ಮೂರುತುವೀಗ ಬಂದದ್ಯಾಲಾ ಈಗಿನ್ನು
ಎಷ್ಟು ಹೊತ್ತೀಗೂ ಬಂದಳಾಲಾ ತಾನ |ತಂದಾನ|
ಎಷ್ಟು ಹೊತ್ತೀಗೂ ಬಂದಳಲ್ಲೋ ಈಗಿನ್ನು
ಕಿರಿಯೋ ಮಡುದೀನೆ ಬಂದಳಾಲಾ ತಾನ |ತಂದಾನ|
ಕಿರಿಯೋ ಮಡುದೀನೆ ಬಂದಳಾಲಾ ಈಗಿನ್ನು
ಕೈಕಿ ಎಂಬ ಮಡುದಿಯಾಲಾ ತಾನ |ತಂದಾನ|
ಕೈಕಿ ಎಂಬ ಮಡುದಿಯಾಲ್ಲೋ ಈಗಿನ್ನು
ತಾನೂವಿಗೊಂದೆ ಬಂದಳ್ಯಾಲಾ ತಾನ |ತಂದಾನ|
ಕೇಳಿ ಕೇಳಿ ನನ್ನ ಸ್ವಾಮಿ ಪತಿಯವ್ರೆ ಈಗಿನ್ನು
ನಾನೊಂದು ಮಾತು ಕೇಳುತೀದಾ ತಾನ |ತಂದಾನ|
ನಾನೊಂದು ಮಾತು ಕೇಳುತೀದೆ ವೀಗಿನ್ನು
ನನಗೊಂದು ವರುವೇ ಕೊಟ್ಟಿರಾಲಾ ತಾನ |ತಂದಾನ|
ನನಗೊಂದು ವರುವೇ ಕೊಟ್ಟಿರಾಲ್ಲೋ ಈಗಿನ್ನು
ಇಂದು ನಾನೀಗು ಕೇಳುತೀನಾ ತಾನ |ತಂದಾನ|
ನನಗೂ ಆ ವರುವೇ ಕೊಡುಬೇಕೊವೀಗಿನ್ನು
ಅಂದೂ ತಾನೀಗರಾ ನುಡಿದಳಾಲಾ ತಾನ |ತಂದಾನ|
ದಶುರಥು ಮಾರಾಜ ಎಂದಾನು ಈಗಿನ್ನು
ಕೇಳೇ ನನ್ನ ಮಡುದಿ ಅಂದನಾಲಾ ತಾನ |ತಂದಾನ|
ಮತ್ತೇನುವೀಗೂ ಅಲ್ಪಲ್ಲೋವೀಗಿನ್ನು
ರಾಮ ಲಚ್ಚಮಣ್ಣ ಎಂಬವುರಾ ತಾನ |ತಂದಾನ|
ರಾಮ ಲಚ್ಚುಮಣ್ಣರು ಎಂಬವುರು ಈಗಿನ್ನು
ಆರಣ್ಣೇಕ್ಕೀಗೂ ಹೋಗುಬೇಕಾ ತಾನ |ತಂದಾನ|