೨.೧ ಪುರಾಣ

ಸಮುದಾಯದ ಸೃಷ್ಟಿ ಹೇಗಾಯಿತು? ವಿಶ್ವದ ಸೃಷ್ಟಿ ಹೇಗಾಯಿತು? ಯಾರಿಂದಾಯಿತು ಎಂದು ತಿಳಿಸುವ ಪುರಾಣಗಳು ಜಗತ್ತಿನ ಅನೇಕ ಸಮುದಾಯಗಳಲ್ಲಿವೆ. ಸಮುದಾಯಗಳಲ್ಲಿವೆ. ಸಮುದಾಯಗಳ ಪ್ರಕಾರ ವಿಶ್ವದಸೃಷ್ಟಿ ಒಂದೇ ತೆರನಾಗಿರಲು ಸಾಧ್ಯವಿಲ್ಲ, ಸಮುದಾಯದಿಂದ ಸಮುದಾಯಕ್ಕೆ ಅದು ಭಿನ್ನವಾಗಿರುತ್ತದೆ. ಪ್ರತಿಯೊಂದು ಸಮುದಾಯ ತನ್ನ ಸಮುದಾಯದ ಮೂಲ ಪುರುಷನ ಸೃಷ್ಟಿ. ಆರಾಧಿಸುವ ದೈವ, ಆಚರಿಸುವ ಧರ್ಮ ನಂಬಿದ ತತ್ವ, ಎಲ್ಲಕ್ಕೂ ಸಮರ್ಥನೆ ಮಾಡಿಕೊಳ್ಳಲು ಮತ್ತು ನಂಬಿಕೆ ಹುಟ್ಟಿಸಲು ಅನೇಕ ಪುರಾಣಗಳನ್ನು ಸೃಷ್ಟಿಸಿದೆ. ‘ಒಂದು ಕಾಲಕ್ಕೆ ಪುರಾಣಗಳೆಂದರೆ ಅದು ಕಟ್ಟು ಕಥೆ, ಅದು ವಿಜ್ಞಾನ ಪೂರ್ವಯುಗದ ಪ್ರಾಗೈತಿಹಾಸಿಕ ಕಾಲದ ಅವಿದ್ಯಾವಂತ, ಅನಾಗರಿಕ ಜನ ಸಮುದಾಯಗಳ ಕಾಲ್ಪನಿಕ ಸೃಷ್ಟಿ ಎಂಬ ಅಭಿಪ್ರಾಯ ಇತ್ತು. ಇಂದು ಪ್ರತಿಯೊಂದು ಸಮುದಾಯದ ಅಧ್ಯಯನ ಮಾಡಬೇಕಾದರೆ ಆ ಸಮುದಾಯಗಳಲ್ಲಿರುವ ಪುರಾಣಗಳ ಅಧ್ಯಯನ ಅತ್ಯಂತ ಅವಶ್ಯಕ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಪುರಾಣಗಳೆಂದರೆ ಅವು ಕಟ್ಟು ಕಥೆಗಳಲ್ಲ ಅಥವಾ ವಿಜ್ಞಾನ ಪೂರ್ವ ಯುಗದ ಪ್ರಾಗೈತಿಹಾಸಿಕ ಕಾಲದ ಅನಕ್ಷರಸ್ತ ಜನ ಸಮುದಾಯಗಳ ಕಾಲ್ಪನಿಕ ಸೃಷ್ಟಿಯೂ ಅಲ್ಲ. ಒಂದು ಸಮುದಾಯದ ಸಂದೇಶ, ಘಟನೆ, ಇತಿಹಾಸ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆಯಾ ಸಮುದಾಯಗಳ ಇತಿಹಾಸ, ಪರಂಪರೆ, ಸಂಸ್ಕೃತಿ, ಸಮುದಾಯದಲ್ಲಿನ ವಿಶಿಷ್ಟ ನಂಬಿಕೆಗಳು ಮತ್ತು ನಂಬಿಕೆಯ ಪಾತಳಿಯಲ್ಲಿ ರೂಪಗೊಂಡ ಸೃಜನಶೀಲ ಸೃಷ್ಟಿಗಳು. ಸುತ್ತಲ ಜಗತ್ತನ್ನು ಕುರಿತು ಆ ಸಮುದಾಯ ಕಂಡುಕೊಂಡ ದರ್ಶನ. ಅವರು ಕಾಪಾಡಿಕೊಂಡು ಬಂದ ಮೌಲ್ಯಗಳಿಗೆಲ್ಲ ಪುರಾಣಗಳೇ ಮೂಲ ಆಕರಗಳಾಗಿರುತ್ತದೆ ಎಂಬುದನ್ನು ಗಮನಿಸಬಹುದು. ‘ಪುರಾಣವೆಂಬುದು ಕೇವಲ ಕಟ್ಟುಕಥೆಯಲ್ಲ, ಕಥನವಲ್ಲ. ಅಲೌಕಿಕ ಅತಿಮಾನುಷ ವ್ಯಕ್ತಿಗಳ ಸಾಹಸವನ್ನು ನೈಸರ್ಗಿಕ ಘಟನೆಗಳ ಪ್ರಧಾನ ಉದ್ದೇಶವೆನೆಂದರೆ ಪ್ರಕೃತಿಯಲ್ಲೋ ಸಮಾಜದಲ್ಲೋ ಸ್ಥಾಪಿತವಾದ ಕಟ್ಟು ಕಟ್ಟಳೆಗಳನ್ನು ಸ್ಥಿರಗೊಳಿಸುವುದು ನಂಬಿಕೆಗಳನ್ನು ದೃಢಪಡುಸುವುದು, ದೇವ ದೇವತೆಗಳ ಉಪಾಸನೆಯ ಸಮರ್ಪಕತೆ ಸಾರ್ಥಕತೆಗಳನ್ನು ಸಮರ್ಥಿಸುವುದು ಹಾಗೂ ಸಾಂಪ್ರದಾಯಿಕ ವ್ಯವಸ್ಥೆ ವರ್ತನೆಗಳನ್ನು ಅಲೌಕಿಕ ಆದರ್ಶ ಮತ್ತು ದಂಡನೆಗಳ ಮೂಲಕ ಸುಗಮವಾಗಿ ಕಾಪಾಡುವುದು’.

‘ಪ್ರತಿಯೊಂದು ಸಮುದಾಯಲ್ಲಿರುವ ಪುರಾಣಗಳೆಲ್ಲ ಆಯಾ ಸಮುದಾಯವನ್ನು ಪ್ರತಿಯೊಂದು ಹಂತದಲ್ಲಿ ರೂಪಿಸುತ್ತಿರುತ್ತದೆ. ನಂಬಿಕೆ, ಆಚಾರ, ವಿಚಾರ, ಸಂಪ್ರದಾಯಗಳಿಗೆ ಪುರಾಣ ಸಮರ್ಥನೆ ನೀಡುತ್ತದೆ. ಬುಡಕಟ್ಟು ಸಮುದಾಯಗಳಲ್ಲಿ ಪುರಾಣಗಳು ಎಲ್ಲಿಯವರೆಗೆ ಜೀವಂತವಾಗಿರುವುದೋ ಅಲ್ಲಿಯವರೆಗೆ ತನ್ನ ಸಮಾಜದ ಅಥವಾ ಬುಡಕಟ್ಟಿನ ಸಂಘಟನೆಯನ್ನು ಉಂಟು ಮಾಡುತ್ತದೆ. ತನ್ನ ಸಮಾಜ ಅಥವಾ ಬುಡಕಟ್ಟಿನ ಜನರಲ್ಲಿ ಏಕತೆಯನ್ನು ಉಂಟು ಮಾಡುತ್ತದೆ. ಈ ದೃಷ್ಟಿಯಿಂದ ಪುರಾಣ ತನ್ನ ಸಮಾಜದಲ್ಲಿ ಅಥವಾ ಬುಡಕಟ್ಟಿನಲ್ಲಿ ಸಕ್ರಿಯವಾದ ಪಾತ್ರ ವಹಿಸುತ್ತದೆ. ಜೀವಂತ ಶಕ್ತಿಯಾಗಿರುತ್ತದೆ ಪುರಾಣಗಳು ಒಂದು ಸಮಾಜದ ಜನರಿಗೆ ಪರಮ ಪವಿತ್ರವಾದವುಗಳಾಗಿವೆ. (ತೀ. ನಂ. ಶಂಕರನಾರಾಯಣ, ೧೯೮೨ ಪು. ೫೩).

ಗೊಂದಲಿಗರ ಸಮುದಾಯದಲ್ಲಿ ಗೊಂದಲದ ಸೃಷ್ಟಿ ಕುರಿತಾದ ಪುರಾಣ ಕಥೆಯಿದೆ. ‘ರೇಣುಕಾ ಮಹಾತ್ಮೆಯಲ್ಲಿರುವ’ ಗೊಂದಲದ ಕಥೆ ಹೀಗಿದೆ ‘ಸವದತ್ತಿಯ ಎಲ್ಲಮ್ಮ (ರೇಣುಕಾದೇವಿ) ದೇವಿಯ ಮಗನಾದ ಪರಶುರಾಮನು ಆ ಪರಿಸರದಲ್ಲಿದ್ದ ಬೆಟ್ಟಾಸುರ ಎಂಬ ರಾಕ್ಷಸನನ್ನು ಸಂಹರಿಸಿ ಅವನ ತಲೆಯನ್ನು ಕತ್ತರಿಸಿದ. ಆಗ ಆ ದೈತ್ಯನ ಶಿರಚ ಬ್ರಹ್ಮರಂಧ್ರದಿಂದ ತಂತುವೊಂದು ಹೊರಬರುತ್ತದೆ. ಆ ದೈತ್ಯನ ದೇಹವನ್ನೇ ಚೌಡಕಿಯನ್ನು ಮಾಡಿ ಆ ತಂತುವನ್ನು ಮಿಡಿದಾದ ಅದರಿಂದ ‘ತಿಂತೃಣ ತಿಂತೃಣ’ ಎಂಬ ನಾದ ಹೊರಡುತ್ತದೆ. ಪರಶುರಾಮ ಚೌಡಕಿಯನ್ನು ನುಡಿಸುತ್ತ ತಾಯಿಯ ಹತ್ತಿರ ಬಂದು ಅವಳಿಗೆ ನಮಸ್ಕರಿಸುತ್ತಾನೆ. ಪರಶುರಾಮ ಆ ತೃಣ ತೃಣ ನಾದ ಮಾಡುತ್ತ ಉದೋ ಉದೋ ಎಂಬ ನಾದಘೋಷ ಮಾಡುತ್ತ ಆನಂದಮಯವಾಗಿ ಗೊಂದಲ ರೂಪದಿಂದ ಸ್ತುತಿಸಿದ ವಾಕ್ಯವೇ ಗೋಂಧಳವು. ಇಲ್ಲಿಂದಲೇ ಗೊಂದಲ, ಗೊಂದಲಿಗರು ಹುಟ್ಟಿದರೆಂದು ಸಮರ್ಥ ರಾಮದಾಸರ ಶಿಷ್ಯರಾದ ದಿನಕರ ಸ್ವಾಮಿಯು ‘ಸ್ವಾನುಭವ ದಿನಕರ’ ಎಂಬ ಮರಾಠಿಪುಸ್ತಕದಲ್ಲಿದೆ. ‘ಜಮದಗ್ನಿ ಋಷಿ ಅವನ ಪತ್ನಿ ರೇಣುಕಾದೇವಿ ನಮ್ಮ ಜಾತಿಯನ್ನು ಸೃಷ್ಟಿಸಿದವರೆಂದು ಹೇಳಿಕೊಳ್ಳುತ್ತಾರೆ’.

ಬುಡಬುಡಕೆ ವಾದ್ಯದ ಸೃಷ್ಟಿ ಕುರಿತಾದ ಪುರಾಣ

‘ಬುಡಬುಡಕೆ ವಾದ್ಯ ಇದು ಶಿವನ ಕೈಯಲ್ಲಿರುವ ಪವಿತ್ರವಾದ ವಾದ್ಯ. ಈ ವಾದ್ಯ ಸೃಷ್ಟಿಯಾಗಲು ಶ್ರೀ ಕೃಷ್ಣನೇ ಕಾರಣ. ಒಂದು ಕಾಲದಲ್ಲಿ ತಾರಕಾಸುರ ಮಕಾಸುರ ಮತ್ತು ಯುದ್ಧಮಾರಿ ಎಂಬ ರಾಕ್ಷಸರು ದೇವ ದೇವತೆಗಳಿಗೆ, ಋಷಿಗಳಿಗೆ, ಮಾನವರಿಗೆ ಅನೇಕ ತೊಂದರೆಗಳನ್ನು ಕೊಡುತ್ತಿದ್ದರು. ಆ ಮೂರು ಜನ ರಾಕ್ಷಸರನ್ನು ಕೊಲ್ಲುವ ಸಲುವಾಗಿ ಶ್ರೀ ಕೃಷ್ಣ ಪರಮಾತ್ಮನೇ ನೀನೇ ಒಂದು ಉಪಾಯ ಹೂಡಬೇಕೆಂದು ದೇವತೆಗಳು ಕೇಳಿಕೊಳ್ಳುತ್ತಾರೆ. ಆಗ ಕೃಷ್ಣನು ಆ ರಾಕ್ಷಸರನ್ನು ಸಂಹರಿಸುವುದಕ್ಕಾಗಿ ಮೊದಲು ಶಿವನ ಕೈಯಲ್ಲಿರುವ ಢಮರುಗವನ್ನು ಸಣ್ಣ ವಾದ್ಯವಾಗಿ ರಮ್ಯವಾದ ನಿನಾದವು ಹೊರಡುವಂತೆ ಮಾಡಬೇಕಾಗಿತ್ತಂತೆ ಆ ರಮ್ಯ ನಿನಾದ ಬುಡು ಬುಡು ಬುಡು ಎಂಬುದಾಗಿ ಶಬ್ದ ಬಂದುದರಿಂದ ಈ ವಾದ್ಯಕ್ಕೆ ‘ಬುಡಬುಡಕೆ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಆ ನಾದದಿಂದಲೇ ನಾವು ಮನುಷ್ಯ ಜೀವನದಲ್ಲಿಯ ಆಗು ಹೋಗುಗಳನ್ನು ಅರಿತುಕೊಂಡು ಭವಿಷ್ಯ ಹೇಳುತ್ತೇವೆಂದು ಕಥೆ ಹೇಳುತ್ತಾರೆ. (ಡಾ. ನಿಂಗಣ್ಣ ಸಣ್ಣಕ್ಕಿ, ಗೊಂದಲಿಗರ ಸಂಸ್ಕೃತಿ)

೨.೨ ಗೊಂದಲಿಗರ ಸೃಷ್ಟಿ ಪುರಾಣ ಕುರಿತಾದ ದಂತ ಕಥೆಗಳು

೧. ಗೊಂದಲಿಗರು ತಾವು ಮಚ್ಫಗಂಧಿನಿ ಸಂಜಾತರೆಂದು ಹೇಳಿಕೊಳ್ಳುತ್ತಾರೆ. ಕಾರ್ತಿವೀರಾರ್ಜುನನು ಕಾಮಧೇನುವನ್ನು ಬಂಧಿಸಿದಾಗ ಕಾಮಧೇನುವಿನ ಗೋಮೂತ್ರದಿಂದ ಉದ್ಭವಿಸಿದ ದ್ರಾವಿಡರೆಂದೂ ಹೇಳಿಕೊಳ್ಳುತ್ತಾರೆ. ಈ ದ್ರಾವಿಡರು ಕಾರ್ತವೀರಾರ್ಜುನನ ಸಂಹಾರ ಕಾಲದಲ್ಲಿ ನೆರವಾದರೆಂದೂ ಬೆಟ್ಟಾಸುರನನ್ನು ಸಂಹರಿಸಿದಾಗ ಆತನ ತಲೆ ಒಡೆದು ಚೌಡಿಕೆಯ ಮಾಡಿ ಶ್ರೀದೇವಿಯ ಸ್ತುತಿ ಮಾಡುತ್ತ ರೇಣುಕಾಗಿರಿಯಲ್ಲಿ ಉಧೋ ಉಧೋ ಎಂದು ಉಗ್ಗಡಿಸಿ ಗೊಂದಲ ಹಾಕಿದಾಗ ಗೊಂದಲಿಗರೆಂದು ‘ಗೊಂದಲಿ’ ಎಂದು ದುರು ಎಂದು ಹೇಳುತ್ತಾರೆ.

೨. ‘ಒಮ್ಮೆ ಶಿವಪಾರ್ವತಿಯರು ತಮ್ಮ ಭಕ್ತರಿಗೆ ವರಗಳನ್ನು ನೀಡುತ್ತಾ ಇದ್ದರಂತೆ. ಬಂದ ಬಡವರಿಗೆ ಅವರು ಬೇಡಿದ್ದನ್ನು ದಾನ ಮಾಡಿದರು. ಕೊನೆಗೆ ಇವರ ಕೈಯಲ್ಲಿದ್ದದೆಲ್ಲಾ ಮುಗಿದಾಗ ಬುಡಬುಡಕೆಯ ಜನಾಂಗದವರು ಬಂದು ಬೇಡತೊಡಗಿದರು. ಆಗ ಪಾರ್ವತಿ ಅವರನ್ನು ಬರಿಗೈಯಲ್ಲಿ ಕಳುಹಲೊಪ್ಪದೆ ಶಿವನ ಕೈಯಲ್ಲಿದ್ದ ಢಮರುವನ್ನೇ ಅವರಿಗೆ ದಾನ ಮಾಡಿಸಿದಳಂತೆ’ ಇದನ್ನೇ ತಮ್ಮ ಉಪಜೀವನದ ಆಧಾರವಾಗಿಟ್ಟುಕೊಂಡು ಇವರು ಬದುಕುತ್ತಿದ್ದಾರೆ ಎಂದು ಕಥೆ ಹೇಳುತ್ತಾರೆ’.

೩. ‘ಪೂರ್ವದಲ್ಲಿ ತಾರಕಾಸುರ, ಮಕರಾಸುರ ಮತ್ತು ಯುದ್ದಮಾರಿ ಎಂಬ ರಾಕ್ಷಸ ಅಣ್ಣ ತಂಗಿಯರಿದ್ದರು. ಯುದ್ದಮಾರಿ ತಂಗಿಯಾಗಿದ್ದು, ಅವಳು ಭೂಮಿಗೂ ಆಕಾಶಕ್ಕೂ ನಡುವೆ ಹೆಬ್ಬಟ್ಟಿನ ಮೇಲೆ ಇವರ ಪಟ್ಟಣವನ್ನು ಹಿಡಿದುಕೊಂಡಿದ್ದಳು. ತಾರಕಾಸುರ ಮತ್ತು ಮಕರಾಸುರರಿಗೆ ಮಾಲಿ ಮತ್ತು ಸುಮಾಲಿ ಎಂಬುವರು ಹೆಂಡತಿಯರು. ಇವರು ದೇವಾನು ದೇವತೆಗಳನ್ನೆಲ್ಲಾ. ಬಂಧನದಲ್ಲಿಟ್ಟು ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದ್ದರು. ತ್ರಿಮೂರ್ತಿಗಳು ಮಾತ್ರ ಇವರ ಕೈಗೆ ಸಿಕ್ಕಿರಲಿಲ್ಲ. ಇವರಿಗೆ ಇಷ್ಟೊಂದು ಬಲ ಸಾಮರ್ಥ್ಯಗಳಿದ್ದುದು ಅವರ ಹೆಂಡತಿಯರ ಪತಿವ್ರತಾ ಬಲದಿಂದ. ಒಮ್ಮೆ ನಾರದನು ತ್ರಿಮೂರ್ತಿಗಳ ಹತ್ತಿರ ಬಂದು ರಾಕ್ಷಸರನ್ನು ಹೀಗೆ ಬೆಳೆಯಬಿಟ್ಟರೆ, ದೇವತೆಗಳಿಗೆ ತುಂಬಾ ಕಷ್ಟವಾಗುತ್ತದೆ. ಎಲ್ಲಿ ನೋಡಿದರೂ ಅವರ ಹಾವಳಿಯೇ. ಏನಾದರೂ ಮಾಡಿ ನಾಶ ಮಾಡಲೇಬೇಕೆಂದು ಹೇಳಿದಾಗ, ತ್ರಿಮೂರ್ತಿಗಳು ಅದಕ್ಕೊಂದು ಪರಿಹಾರವನ್ನು ಸೂಚಿಸುವಂತೆ ಆತನಿಗೆ ಹೇಳುತ್ತಾರೆ. ಅದಕ್ಕೆ ನಾರದ, ಅವರ ಹೆಂಡತಿಯರ ಪತಿವ್ರತಾ ಧರ್ಮಕ್ಕೆ ಭಂಗ ತರುವಂತೆ ಮಾಡಿದರೆ ರಾಕ್ಷಸರ ಶಕ್ತಿ ಕುಂದುತ್ತದೆ ಎಂದು ಹೇಳಿ, ಶ್ರೀಕೃಷ್ಣನಿಗೆ ನೀನು ಪಟ್ಟಣಕ್ಕೆ ಹೋಗು ಎಂದು ಹೇಳುತ್ತಾನೆ. ಪಟ್ಟಣದ ಮುಂಭಾಗದಲ್ಲಿ ಹೊತ್ತು ಹುಟ್ಟುವುದಕ್ಕೆ ಮುಂಚೆ ಅಶ್ಚತ್ಥವೃಕ್ಷ ಹುಟ್ಟುತ್ತದೆಂದು, ಶಕುನ ನುಡಿಯಲು ಹೇಳುತ್ತಾನೆ, ಅದರಂತೆ ಕೃಷ್ಣ ಬುಡಬುಡಕೆ ವೇಷಧರಿಸಿ ರಾಕ್ಷಸರ ಪಟ್ಟಣಕ್ಕೆ ಹೋಗಿ ಶಕುನ ನುಡಿಯುತ್ತಾನೆ. ಇದನ್ನು ಕೇಳಿದ ಮಾಲಿ ಸುಮಾಲಿಯರು ಶಕುನವನ್ನು ಪರೀಕ್ಷ ಮಾಡಲು ಅವನು ಹೇಳಿದಂತೆ ಬೆಳಗಾಗುವುದರೊಳಗಾಗಿ ಬೆಳೆದುನಿಂತಿದ್ದ ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಿ ತಬ್ಬಿಕೊಂಡಿದ್ದರಿಂದ ಪಾತಿವ್ರತ್ಯಕ್ಕೆ ಭಂಗ ಉಂಟಾಗಿ ರಾಕ್ಷಸರು ನಾಶವಾದರು. ಅವರನ್ನೆಲ್ಲಾ ಸಂಹರಿಸಿ, ಕೃಷ್ಣ ಬುಡಬುಡಕೆಯ ವೇಷದಲ್ಲಿ ಬರುತ್ತಿದ್ದಾಗ ಒಬ್ಬ ವ್ಯಕ್ತಿ ಬಂದು ‘ಸ್ವಾಮಿ ಬುಡಬುಡಕೆಯನ್ನು ನನಗೆ ಕೊಡಿ ನಿಮ್ಮ ಹೆಸರು ಹೇಳಿಕೊಂಡು ಜೀವನ ನಡೆಸುತ್ತೇನೆ’ ಎಂದು ಕೇಳಿದಾಗ ಕೃಷ್ಣ ಅವನ ಇಷ್ಟದಂತೆ ವೇಷಭೂಷಣವನ್ನೆಲ್ಲಾ ಕೊಟ್ಟು ‘ನೀನು ಭೂಮಿಯಲ್ಲಿ ಸೂರ್ಯ ಚಂದ್ರರಿರುವವರೆಗೂ ಈ ವೃತ್ತಿಯನ್ನು ಸಾಗಿಸು, ನಿನ್ನ ವಂಶದವರಿಗೆ ಬುಡಬುಡಕೆಯವರೆಂದೇ ಹೆಸರಾಗಲಿ, ಇದಕ್ಕೆ ನೀವು ತಪ್ಪಿದರೆ ನಿಮಗೆ ದರಿದ್ರಾಂಶ ಬರಲಿ’ ಎಂದು ಹೇಳಿದ. ಹೀಗೆ ಶ್ರೀಕೃಷ್ಣ ಕೊಡುಗೆಯಿಂದ ಬುಡಬುಡಕೆಯ ಪರಂಪರೆಯು ಬೆಳೆದು ಬಂದಿತು.

೪. ಮೂರು ಮಂದಿ ರಾಕ್ಷಸ ಅಣ್ಣ ತಮ್ಮಂದಿರು ವಿಧ್ಯಂಸಕ ಶಕ್ತಿಯಲ್ಲಿ ಎಲ್ಲರನ್ನು ಮೀರಿಸಿದ್ದರು. ಆ ದರ್ಪದಿಂದ ಎಲ್ಲರನ್ನು ಹಿಂಸಿಸಿ ಪೀಡಿಸುತ್ತಿದ್ದರು. ನರರು, ಸುರರೂ, ಇವರ ಹಾವಳಿಯಿಂದ ಕಂಗಾಲಾಗಿದ್ದರು. ಇಷ್ಟು ಸಾಲದುದಕ್ಕೆ ಇವರ ಶಕ್ತಿ ಎಷ್ಟು ಪ್ರಬಲವಾಗಿತ್ತೆಂದರೆ ಇವರು ದೇವ ದೇವತೆಗಳನ್ನೂ ಕಾಡಿ ಪೀಡಿಸತೊಡಗಿದರು. ಈ ಉಪದ್ರವದಿಂದ ಪರಿಹಾರವನ್ನು ಹುಡುಕುತ್ತಿದ್ದರು. ಹುಡುಕುತ್ತಿದ್ದಾಗ, ನಾರದನು ಒಂದು ಸಲಹೆ ಕೊಟ್ಟನಂತೆ. ಇದನ್ನು ತಡೆಯಬೇಕಾದರೆ ಅದು ಕೃಷ್ಣನೊಬ್ಬನಿಂದಲೇ ಸಾಧ್ಯ ಎಂದು ಸೂಚಿಸಿದನಂತೆ. ಆಗ ದೇವದೇವತೆಗಳೆಲ್ಲ ಕೃಷ್ಣನ ಮೊರೆ ಹೊಕ್ಕರು. ಇವರ ರಕ್ಷಣೆಗಾಗಿ ಕೃಷ್ಣನು ಬುಡುಬುಡಕೆಯವನ ವೇಷ ಹಾಕಿಕೊಂಡು ಬುಡಬುಡಕೆಯನ್ನು ಬಾರಿಸುತ್ತಾ ಬಂದು, ಈ ಕಂಟಕಿಗಳಾದ ದೈತ್ಯರ ಪತ್ನಿಯರಿಗೆ ಅವರ ಬಂಜೆತನವನ್ನು ನಿವಾರಿಸುವ ದಾರಿಯನ್ನು ಮತ್ತು ಅವರ ಭವಿಷ್ಯವನ್ನೂ ಹೇಳಿದನಂತೆ, ಆತನ ಸಲಹೆಯ ಪ್ರಕಾರ ನಡೆದಾಗ ಅವರ ಪಾತಿವ್ರತ್ಯ ಕೆಟ್ಟು ಹೋಯಿತು. ಅವರ ಗಂಡಂದಿರ ಶಕ್ತಿ ಬಲಗಳೆಲ್ಲಾ ಇವರ ಪಾತಿವ್ರತ್ಯದ ಆಧಾರದ ಮೇಲೆ ಅವಲಂಬಿಸಿಕೊಂಡಿದ್ದುವಾದ್ದರಿಂದ, ಇವರ ಪಾತಿವ್ರತ್ಯ ನಾಶವಾದಂತೆಯೇ ಅವರ ಬಲವೂ ಉಡುಗಿ ಹೋಯಿತು. ಆ ಮೇಲೆ ಕೃಷ್ಣನು ಅವರನ್ನು ಸುಲಭವಾಗಿ ಧ್ವಂಸಮಾಡಿ ಜಯಭೇರಿ ಹೊಡೆದು ಹಿಂತಿರುಗುತ್ತಿದ್ದನು. ಆಗ ದಾರಿಯಲ್ಲಿ ಆತನಿಗೆ ಈ ಜನಾಂಗದವರು ಎದುರಾದವರು ಮಾತ್ರವಲ್ಲ, ಆತನ ಕೈಯಲ್ಲಿದ್ದ ಆ ಪುಟ್ಟ ಢಮರುಗವನ್ನೂ ಬೇಡಿ ಪಡೆದರು. ಕೃಷ್ಣನು ಅದನ್ನು ಅವರಿಗೆ ದಾನ ಮಾಡಿದನು ಮತ್ತು ಇನ್ನು ಮುಂದೆ ತಾನು ಪ್ರಾರಂಭಿಸಿದ ಭವಿಷ್ಯ ಹೇಳುವ ವೃತ್ತಿಯನ್ನು ಅವರು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕೆಂದೂ ಕಟ್ಟಪ್ಪಣೆ ಮಾಡಿದನಂತೆ. ಅಂದಿನಿಂದ ಇವರು ತಮ್ಮ ಉಪಜೀವನಕ್ಕಾಗಿ ಹಕ್ಕಿ ಶಕುನ ಹೇಳುವ ವೃತ್ತಿಯನ್ನು ನಡೆಸುತ್ತಾ ಬಂದಿದ್ದಾರೆ’. (ಡಾ. ನಿಂಗಣ್ಣ ಸಣ್ಣಕ್ಕಿ. ಗೊಂದಲಿಗರ ಸಂಸ್ಕೃತಿ)

೨.೩ ಗೊಂದಲಿಗರಲ್ಲಿ ಪ್ರಚಲಿತವಿರುವ ಕಥೆಗಳು

‘ಮಹಾರಾಷ್ಟ್ರದಲ್ಲಿ ಸುಮಾರು ಮುನ್ನೂರು ವರ್ಷಗಳ ಹಿಂದೆ ಶಿವಾಜಿಯು ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ವಿಜಾಪುರ ಮೊಘಲರ ರಾಜ್ಯವಾಗಿತ್ತು. ಅಕ್ಕಪಕ್ಕದ ಈ ಆಳ್ವಿಕೆಯಲ್ಲಿ ಆಗಾಗ ಸಣ್ಣಪುಟ್ಟ ಕಲಹಗಳು ತಲೆದೋರುತ್ತಿದ್ದುದರಿಂದಲೂ ಆ ರಾಜ್ಯವನ್ನು ಕಸಿದುಕೊಳ್ಳಲು ಎರಡೂ ಕಡೆಯಿಂದಲೂ ಹೊಂಚುಗಳು ನಡೆಯುತ್ತಿದ್ದುದರಿಂದಲೂ ಎರಡೂ ರಾಜ್ಯಗಳಿಲ್ಲೂ ಗೂಢವಾರರ ಸಂಚಾರ ಇದ್ದೇ ಇರುತ್ತಿತ್ತು. ಗೊಂದಲಿಗರು ಶಿವಾಜಿಯ ಗೂಢಚಾರರಾಗಿ ಭಿಕ್ಷುಕರ ವೇಷಧರಿಸಿ ಮೊಘಲರ ರಾಜ್ಯಕ್ಕೆ ಬರುತ್ತಾರೆ. ಮಹಾರಾಷ್ಟ್ರದಲ್ಲಿ ಗೂಢಚಾರ ವೃತ್ತಿ ಮಾಡುತ್ತಿದ್ದ ಗೊಂದಲಿಗರಿಗಾಗಿಯೇ ಶಿವಾಜಿ ಮಹಾರಾಜ ಭೂಮಿಯನ್ನು ದತ್ತಿ ಬಿಟ್ಟಿದ್ದ. ಈ ದತ್ತಿ ಭೂಮಿಯನ್ನು ಸ್ವತಃ ಗೂಢಚಾರರು ಸಹಜವಾಗಿ ಅನುಭವಿಸಲಾಗದೆ ಅವರನ್ನು ನಂಬಿದವರು ಮಾತ್ರ ಅನುಭವಿಸುವಂತಾಯಿತು. ಗೂಢಚಾರರಾಗಿದ್ದ ಕೆಲ ಗೊಂದಲಿಗರು ಬಿಜಾಪುರದಲ್ಲಿ ಅವರು ತಮ್ಮ ವೇಷವನ್ನೇ ಜೀವನಾಧಾರವನ್ನಾಗಿ ಮಾಡಿಕೊಳ್ಳುವುದು ಅನಿವಾರ್ಯವಾಯಿತು. ಗೊಂದಲ ಹಾಕುವ ನೆಪದಲ್ಲಿ ಇವರು ಮುಸಲ್ಮಾನರ ರಾಜ್ಯದಲ್ಲಿ ಸಂಗ್ರಹಿಸುತ್ತಿದ್ದ ಸುದ್ದಿಯನ್ನು ಮರಾಠಿಯಲ್ಲಿ ಕಥೆಯಾಗಿ ಹಾಡುತ್ತಿದ್ದರು. ಭಿಕ್ಷಾಟನೆಯ ನೆಪದಲ್ಲಿ ಗೊಂದಲಿಗರು ಮನೆಯ ಮುಂದೆ ನಿಂತು ಹಾಡತೊಡಗಿದರೆ ಆ ಸುದ್ದಿ ಮನೆಯೊಳಗಿದ್ದವರಿಗೆಲ್ಲ ಗುಪ್ತವಾದ ಸುದ್ದಿಗಳು ತಿಳಿಯುತ್ತಿದ್ದವು. ಮರಾಠಿಗರಾದ ಲಮಾಣಿಗಳು ಮತ್ತು ಅವರಂತರಯೇ ಅಲೆಮಾರಿ ಮರಾಠಿಗಳಾದ ‘ಮಾವಳೆ’ ಮಂದಿ ಇರುವಲ್ಲೆಲ್ಲ ಹೋಗಿ ಗೊಂದಲ ಹಾಕಿ ಆ ಮೂಲಕ ಮುಸಲ್ಮಾನರ ಮಸಲತ್ತುಗಳನ್ನು ತಿಳಿಸಿ ಒಗ್ಗಟ್ಟನ್ನು ಸಾಧಿಸಲು ಸಲಹೆ ನೀಡುತ್ತಿದ್ದರು. ಅವರೆಲ್ಲ ಅಂಬಾಭವಾನಿಯ ಭಕ್ತರೇ ಆಗಿದ್ದುದರಿಂದ ಆ ದೇವತೆಯ ಹೆಸರಿನಲ್ಲೇ ಹಾಡುತ್ತಿದ್ದ ಕಥೆಗಳು ಇವರ ಸಲಹೆಗಳನ್ನು ಸುದ್ದಿಗಳನ್ನು ಯಶಸ್ವಿಗೊಳಿಸುತ್ತಿದ್ದವು’.

ಗೂಢಚರ್ಯ ಕೆಲಸ ಮುಗಿದ ಮೇಲೆ ಈ ಗೊಂದಲಿಗರು ತಮ್ಮ ಮೂಲ ಸ್ಥಳಗಳಿಗೆ ಹೋಗಲು ಆಶೆಪಡಲಿಲ್ಲ. ಇಲ್ಲಿಯೇ ಭಿಕ್ಷಾಟನೆ ಮಾಡುತ್ತ ಕನ್ನಡದ ನೆಲದಲ್ಲಿಯೇ ಉಳಿದುಕೊಂಡರು. ‘ಕ್ಯಾತನಹಳ್ಳಿ ರಾಮಣ್ಣ ೧೯೮೨, ಪು ೧೪ ಮತ್ತು ೧೫)

೨. ‘ಗೊಂದಲಿಗರು ಎಂಬ ಹೆಸರು ಬರುವುದಕ್ಕಿಂತ ಮೊದಲು ಇವರು ‘ಮಾವಳೆ ಜನಾಂಗ’ ಎಂಬ ಹೆಸರಿನ ಕಾಡುಕುರುಬರಾಗಿದ್ದರಂತೆ. ದೇವಿಯ ಹೆಸರಿನಲ್ಲಿ ತಿಳಿದಂತೆ ಹಾಡುವುದು ಕುಣಿಯುವುದು ಮಾಡುತ್ತಿದ್ದರು. ಮುಸಲ್ಮಾನರ ಕುತಂತ್ರಗಳಿಂದ ಬೇಸತ್ತಿದ್ದ ಶಿವಾಜಿ ಮಹಾರಾಜ ಇವರನ್ನು ಕರೆದು ದೇವಿಯ ಹೆಸರಿನಲ್ಲಿ ಮುಸಲ್ಮಾನರ ಮನೆಗಳಿಗೆ ಹೋಗಿ ಗೊಂದಲ ಮಾಡಿ ಪ್ರಸಾದ ಕೊಡುವ, ಭಂಡಾರ ಹಚ್ಚುವ ನೆಪದಿಂದ, ಅವರ ಮನೆಯೊಳಗೆ ಪ್ರವೇಶಿಸಿ ಅವರ ರಹಸ್ಯಗಳನ್ನು ತಿಳಿದು ವರದಿ ಮಾಡಬೇಕೆಂದು ಅಪ್ಪಣೆ ಮಾಡಿದ. ದೇವಿಯ ಹೆಸರನ್ನು ಕೇಳಿದರೆ ತೆಪ್ಪಗೆ ನಿಲ್ಲುವಂತೆ ಮಾಡಿ, ಮನೆಯೊಳಗೆ ಪ್ರವೇಶ ಮಾಡಿ ಮುಸಲ್ಮಾನರ ಮನೆಯಲ್ಲಿ ಅಡಗಿಸಿಟ್ಟ ಮತ್ತು ಶೇಖರಿಸಿಡುತ್ತಿದ್ದ ಶಸ್ತ್ರಾಸ್ತ್ರಗಳನ್ನೂ, ಅಲ್ಲಲ್ಲಿ ಅಡಗಿದ್ದ ಗುಪ್ತಯೋಧರನ್ನೂ ಕಂಡುಹಿಡಿದು ಶಿವಾಜಿಗೆ ತಿಳಿಸುತ್ತಿದ್ದರು. ಇವರ ಯಶಸ್ವೀ ಗೂಢಚರ್ಯದಿಂದ ಸಂತೃಪ್ತನಾದ ಶಿವಾಜಿ ಮಹಾರಾಜ ನೆರೆ ರಾಜ್ಯವಾದ ಬಿಜಾಪೂರ ಸಂಸ್ಥಾನಕ್ಕೂ ಗೊಂದಲಿಗರನ್ನು ಗೂಢಚಾರರನ್ನಾಗಿ ನೇಮಿಸುತ್ತಾನೆ.

೩. ಶಿವಾಜಿ ಮಹಾರಾಜ ಒಮ್ಮೆ ತುಂಬಾ ಕಷ್ಟಕ್ಕೆ ಸಿಕ್ಕಿಕೊಂಡು ಚಿಂತಾಕ್ರಾಂತನಾಗಿ ಕುಳಿತಾಗ ಶಿವಾಜಿಯ ಆಸ್ಥಾನದಲ್ಲಿ ಪ್ರಧಾನಿಗಳಾಗಿದ್ದ ತಾನಾಜಿ ಮತ್ತು ಮಾನಾಜಿ ಬಂದು ‘ದೇವಿ ಅಂಬಾಭವಾನಿಯ ಹೆಸರಿನಲ್ಲಿ ಗೊಂದಲ ಹಾಕಿಸಿದರೆ ಬಂದಿರುವ ಕಷ್ಟಗಳೆಲ್ಲ ಮಾಯವಾಗುತ್ತವೆ ಎಂದು ತಿಳಿಸುತ್ತಾರೆ. ಹಿರಿಯರ ಮಾತನ್ನು ಮೀರಬಾರದೆಂದು ಅವರ ಮೇಲೆ ನಂಬಿಕೆ ಇಟ್ಟು ಗೊಂದಲ ಪೂಜೆ ನೆರವೇರಿಸುತ್ತಾನೆ. ಈ ಪೂಜೆಯ ನಂತರ ಶಿವಾಜಿಗೆ ಬಂದೊದಗಿದ ಕಷ್ಟಗಳೆಲ್ಲ ಹಂತ ಹಂತವಾಗಿ ಕಡಿಮೆಯಾಗುತ್ತವೆ. ಶಿವಾಜಿ ಗೊಂದಲ, ಗೊಂದಲಿಗರ, ಅಂಬಾಭವಾನಿಯ ಮೇಲೆ ಭಕ್ತಿ ಶ್ರದ್ಧೆಯಿಂದ ಅನೇಕ ಗೊಂದಲ ಕಾರ್ಯಕ್ರಮಗಳನ್ನು ತನ್ನ ಅರಮನೆಯಲ್ಲಿ ಏರ್ಪಡಿಸುವುದರ ಮೂಲಕ ಅನೇಕ ಕಷ್ಟಗಳಿಂದ ಪಾರಾಗುತ್ತಾನೆ. ಮುಸಲ್ಮಾನರ ಕಿರುಕುಳಗಳು ಎದುರಾದಾಗ ಕೇವಲ ಗೊಂದಲದ ಭಕ್ತಿಗೆ ತನ್ನ ಪರಿಹಾರ ಮಾರ್ಗವನ್ನು ಸೀಮಿತಗೊಳಿಸಿಕೊಳ್ಳದೇ ಲೌಕಿಕ ತಂತ್ರಗಳಿಗಾಗಿಯೂ ಗೊಂದಲಿಗರನ್ನು ಬಳಸಿಕೊಳ್ಳಲು ಆಯೋಜಿಸಿದನಂತೆ. ಇದರಿಂದ ಯಶಸ್ಸಿನ ಸರಮಾಲೆಗಳೇ ಶಿವಾಜಿಯ ಕೊರಳಿಗೆ ಬೀಳತೊಡಗಿದಾಗ ಅವನು ಅಂಬಾಭವಾನಿಯನ್ನು ತನ್ನಮನೆದೇವರನ್ನಾಗಿ ಸ್ವೀಕರಿಸಿದನಂತೆ’. (ಅದೇ ಪು ೧೮)

೪. ‘ಛತ್ರಪತಿ ಶಿವಾಜಿ ಸಿಂಹಗಡ ಕೋಟೆಯನ್ನು ವಶಪಡಿಸಿಕೊಳ್ಳಬೇಕೆಂದು ಛಲತೊಟ್ಟಿದ್ದ. ಆಗ ಆ ಸಿಂಹಗಡದ ಕೋಟೆಯು ಉದಯಭಾನು ಎಂಬ ಮೊಗಲ ಸರದಾರನ ವಶದಲ್ಲಿತ್ತು. ಅವನು ಅತ್ಯಂತ ಬಲಿಷ್ಠನೂ ಶೂರನೂ ಆಗಿದ್ದನು. ಅವನ ಹತ್ತಿರ ಒಂದು ಮದಿಸಿದ ಆನೆಯಿತ್ತು. ಆ ಆನೆಯೊಂದೇ ಅನೇಕ ಸೈನಿಕರನ್ನು ಕೊಲ್ಲುವಷ್ಟು ಭಯಂಕರವಾಗಿತ್ತು. ಇಂತಹ ಭದ್ರಕೋಟೆಯನ್ನು ಹೇಗೆ ವಶಪಡಿಸಿಕೊಳ್ಳುವುದು ಎಂಬ ಚಿಂತೆ ಶಿವಾಜಿಯನ್ನು ಆವರಿಸಿಕೊಂಡಿತ್ತು ಮತ್ತು ಆ ಕೋಟೆಯನ್ನು ಅಷ್ಟು ಸುಲಭವಾಗಿ ವಶಪಡಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಅವನಿಗೆ ಗೊತ್ತಿತ್ತು. ಆದರೂ ಶಿವಾಜಿ ಆ ಕೋಟೆಯನ್ನು ವಶಪಡಿಸಿಕೊಳ್ಳುತ್ತೇನೆಂದು ಛಲ ತೊಟ್ಟಿದ್ದ. ಈ ವಿಷಯ ಶಿವಾಜಿಗೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಇಂತಹ ಕಠಿಣವಾದ ಕೆಲಸವನ್ನು ನಿಭಾಯಿಸಲು ಅತ್ಯಂತ ವಿಶ್ವಾಸಿಕನೂ, ಶೂರನೂ ಮತ್ತು ಚತುರನೂ ಆದ ತನ್ನ ಮಿತ್ರನಾದ ತಾನಾಜಿ ಮಾಲಸುರೆಯೊಬ್ಬನೇ ಶಕ್ತನಾಗಿದ್ದಾನೆಂದು ನಿಶ್ಚಯಿಸಿದನು. (ಈ ತಾನಾಜಿ ಮಾಲಸುರೆ ಗೊಂದಲಿಗ ಸಮುದಾಯದ ಶೂರ ಸೈನಿಕ) ತಕ್ಷಣವೇ ತಾನಾಜಿಗೆ ತುರ್ತು ಸಂದೇಶ ಕಳುಹಿಸುತ್ತಾನೆ. ಶಿವಾಜಿ ಮಹಾರಾಜನ ಸಂದೇಶ ಬಂದಾಗ ತಾನಾಜಿ ತನ್ನ ಮಗನ ಮದುವೆಯ ಸಂಭ್ರಮದಲ್ಲಿರುತ್ತಾನೆ. ಮಹಾರಾಜರ ಸಂದೇಶವನ್ನು ತೆಗೆದುಕೊಂಡು ಮದುವೆ ಕಾರ್ಯವನ್ನು ಇತರರಿಗೆ ಮುಂದುವರೆಸುವಂತೆ ಹೇಳಿ ತನ್ನ ಸ್ವಾಮಿಯ ಕೆಲಸಕ್ಕೆ ಅರಮನೆಗೆ ಹೋಗುತ್ತಾನೆ. ಶಿವಾಜಿ ತನ್ನ ಬಾಲ್ಯ ಮಿತ್ರನಾದ ತಾನಾಜಿಯನ್ನು ಪ್ರೀತಿಯಿಂದ ಬರಮಾಡಿಕೊಂಡು ಶಿವಾಜಿ ತನ್ನ ತಲೆಯಲ್ಲಿ ಕೊರೆಯುತ್ತಿದ್ದ ಸಿಂಹಗಡದ ಕೋಟೆಯ ಬಗ್ಗೆ ಪ್ರಸ್ತಾಪಿಸುತ್ತಾನೆ. ಸಿಂಹಗಡದ ಕೋಟೆಯನ್ನು ನೀನು ಹೇಗಾದರೂ ಮಾಡಿ ಅದನ್ನು ವಶಪಡಿಸಿಕೊಳ್ಳಲೇಬೇಕೆಂದು ತಿಳಿಸುತ್ತಾನೆ. ತಾನಾಜಿಯ ಜೊತೆಗೆ ಹನ್ನೆರಡು ಸಾವಿರ ಅತ್ಯಂತ ಶೂರ ಸೈನಿಕರನ್ನು ಶಿವಾಜಿ ಕಳುಹಿಸಿ ಕೊಡುತ್ತಾನೆ. ಸಿಂಹಗಡದ ಕೋಟೆಯ ಹೆಸರಿಗೆ ತಕ್ಕಂತೆ ಅದು ಅತ್ಯಂತ ದುರ್ಗಮವಾದ ಕೋಟೆಯಾಗಿತ್ತು. ಏರಿ ಅದನ್ನು ವಶಪಡಿಸಿಕೊಳ್ಳಲೇಬೇಕಾಗಿದ್ದ ಅನಿವಾರ್ಯತೆಯೂ ಇತ್ತು. ತಾನಾಜಿ ಅನೇಕ ಕಷ್ಟಗಳನ್ನು ಎದುರಿಸಿ ತನ್ನ ಸೈನ್ಯದೊಂದಿಗೆ ಸಿಂಹಗಡದ ಕೋಟೆಯನ್ನು ತಲುಪುತ್ತಾನೆ. ಕೋಟೆಯನ್ನು ನೋಡಿದಾಗ ಅದನ್ನು ಅಷ್ಟು ಸುಲಭವಾಗಿ ಯಾರಿಂದಲೂ ಹತ್ತಲು ಸಾಧ್ಯವಿಲ್ಲ ಎಂದು ತಾನಾಜಿ ತಿಳಿದುಕೊಳ್ಳುತ್ತಾನೆ. ತನ್ನ ಸೈನ್ಯದಲ್ಲಿದ್ದ ಉತ್ಸಾಹಿ ಚತುರ ಸೈನಿಕ ಮತ್ತು ಸೇನಾಧಿಪತಿಗಳೊಂದಿಗೆ ಈ ಕೋಟೆಯನ್ನು ಹೇಗೆ ಹತ್ತುವುದು’ ಎಂಬ ವಿಷಯ ಕುರಿತು ಚರ್ಚಿಸುತ್ತಾನೆ. ಕೊನೆಗೆ ಹಗ್ಗದ ಸಹಾಯದಿಂದ ಈ ಕೋಟೆಯನ್ನು ಏರುವ ಬಲಶಾಲಿ ಸೈನಿಕರು ಯಾರಾದರೂ ಇದ್ದರೆ ಮುಂದೆ ಬನ್ನಿ ಎಂದು ಆಹ್ವಾನಿಸುತ್ತಾನೆ. ಯಾವ ಸೈನಿಕರೂ ಆ ಕೋಟೆಯನ್ನು ಏರುವ ಧೈರ್ಯ ಮಾಡಿ ಮುಂದೆ ಬರುವುದಿಲ್ಲ. ಆಗ ತಾನಾಜಿ ತಾನೇ ಧೈರ್ಯಮಾಡಿ ಒಂದು ಉಡದ ನಡಕ್ಕೆ ಹಗ್ಗ ಕಟ್ಟಿ ಆ ಉಡವನ್ನು ಕೋಟೆಯ ಮೇಲ್ತುದಿಗೆ ಒಗೆಯುತ್ತಾನೆ. ಉಡ ಗೋಡೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಲಾರದೇ ಕೆಳಕ್ಕೆ ಬೀಳುತ್ತದೆ. ಆಗ ಅಲ್ಲಿರುವ ಅನೇಕ ಸೈನಿಕರು ಉಡ ಗೋಡೆಯನ್ನು ಹಿಡಿದುಕೊಳ್ಳದೇ ಕೆಳಕ್ಕೆ ಬಿದ್ದಿರುವುದು ಅಪಶಕುನ ಎಂದು ತಿಳಿಸುತ್ತಾ ಈ ಕಾರ್ಯವನ್ನು ಇಲ್ಲಿಗೆ ನಿಲ್ಲಿಸಿ ಹೊರಟು ಹೋಗೋಣ ಎನ್ನುತ್ತಾರೆ. ತಾನಾಜಿ ಯಾರ ಮಾತನ್ನು ಕೇಳುವುದಿಲ್ಲ. ಹಗ್ಗಕಟ್ಟಿದ ಉಡವನ್ನು ಮತ್ತೊಂದು ಸಲ ಕೋಟೆ ಗೋಡೆಯ ತುದಿಗೆ ಒಗೆಯುತ್ತಾನೆ. ಆಗ ಉಡವು ಗೋಡೆಯನ್ನು ಗಟ್ಟಿಯಾಗಿ ಕಚ್ಚಿ ಹಿಡಿದುಕೊಳ್ಳುತ್ತದೆ. ಆಗ ತಾನಾಜಿ ಉಡಕ್ಕೆ ಕಟ್ಟಿದ ಹಗ್ಗದ ಸಹಾಯದಿಂದ ಕೋಟೆಯನ್ನು ಹತ್ತತೊಡಗುತ್ತಾನೆ. ಉಳಿದ ಸೈನಿಕರು ತಾನಾಜಿಯನ್ನು ಅನುಸರಿಸಿಕೊಂಡು ಹಗ್ಗದ ಸಹಾಯದಿಂದ ಕೋಟೆ ಏರುತ್ತಿರುತ್ತಾನೆ. ಐವತ್ತು ಜನ ಸೈನಿಕರು ಕೋಟೆಯನ್ನು ಏರಿರುತ್ತಾರೆ. ಉಳಿದ ಸೈನಿಕರು ಹಗ್ಗದ ಸಹಾಯದಿಂದ ಕೋಟೆ ಹತ್ತುತ್ತಿರುವಾಗ ಅವರ ಭಾರಕ್ಕೆ ಹಗ್ಗ ಪಿಸಿದು ತುಂಡಾಗುತ್ತದೆ.

ಕೇವಲ ಐವತ್ತು ಜನ ಸೈನಿಕರು ಉದಯಭಾನುವಿನ ಹನ್ನೆರಡುನೂರು ಜನ ವೈರಿ ಸೈನಿಕರನ್ನು ಎದುರಿಸಿದರು. ಉದಯಭಾನುವಿನ ಹನ್ನೆರಡು ಜನ ಮಕ್ಕಳೂ ಈ ಹೋರಾಟದಲ್ಲಿ ಸಾವನ್ನಪ್ಪುತ್ತಾರೆ. ಈ ಸುದ್ದಿಯನ್ನು ಕೇಳಿದ ಉದಯಭಾನು ಸಿಂಹದಂತೆ ಘರ್ಜಿಸುತ್ತ ಕೈಯಲ್ಲಿ ಖಡ್ಗಹಿಡಿದು ಶಿವಾಜಿಯ ಸೈನಿಕರನ್ನು ಸದೆ ಬಡಿಯುತ್ತ ತಾನಾಜಿಯ ಜೊತೆ ಮುಖಾಮುಖಿಯಾಗಿ ಹೋರಾಡುತ್ತಾನೆ. ಬಹಳ ಹೊತ್ತಿನವರೆಗೆ ಕಾದಾಡಿ ಇಬ್ಬರೂ ಖಡ್ಗಗಳ ಏಟಿನಿಂದ ಮಾರಣಾಂತಿಕವಾದ ಗಾಯಗಳಿಂದ ಕೆಳಕ್ಕೆ ಬೀಳುತ್ತಾರೆ. ತಾನಾಜಿ ಕುಸಿದು ಭೂಮಿಯ ಮೇಲೆ ಬೀಳುತ್ತಿದ್ದುದನ್ನು ಕಂಡ ಅವನ ತಮ್ಮನಾದ ಸೂರ‍್ಯಾಜಿಯು ಕೋಟೆಯ ಮೇಲೆ ಮಿಂಚಿನ ದಾಳಿ ಮಾಡಿ ವೈರಿಗಳನ್ನು ಸದೆಬಡಿದು ಕೋಟೆಯನ್ನು ವಶಪಡಿಸಿಕೊಂಡು, ಮರಾಠರ ಭಗವಾ ಧ್ವಜವನ್ನು ಸಿಂಹಗಡದ ಕೋಟೆಯ ಮೇಲೆ ಹಾರಿಸುತ್ತಾನೆ. ಕೋಟೆಯ ಹೊರಗೆ ಶಿವಾಜಿಯ ವಿಜಯದ ಸಂಕೇತವಾಗಿ ಬೆಂಕಿ ಹೊತ್ತಿಸುತ್ತಾರೆ.

ಸಿಂಹಗಡದ ಕೋಟೆಯನ್ನು ವಶಪಡಿಸಿಕೊಂಡ ಸುದ್ದಿ ಶಿವಾಜಿ ಮಹಾರಾಜನಿಗೆ ತಲುಪಿದಾಗ, ಶಿವಾಜಿ ಆ ಕೋಟೆಗೆ ಬರುತ್ತಾನೆ. ಅಲ್ಲಿ ಕೋಟೆಯನ್ನು ವಶಪಡಿಸಿಕೊಂಡ ಸಂತಸದ ಸುದ್ದಿ ಒಂದು ಕಡೆಯಾದರೆ, ತನ್ನ ಬಾಲ್ಯ ಸ್ನೇಹಿತ ಶೂರ ತಾನಾಜಿಯನ್ನು ಕಳೆದುಕೊಂಡ ಶೋಕ ಇನ್ನೊಂದೆಡೆ. ತನ್ನ ಪ್ರಿಯ ಮಿತ್ರನನ್ನು ಕಳೆದುಕೊಂಡ ಶಿವಾಜಿ ಕಣ್ಣೀರು ಹಾಕುತ್ತ ‘ಈ ಸಿಂಹಗಡದ ಕೋಟೆಯೇನೋ ನಮ್ಮ ಕೈಗೆ ಬಂತು. ಅದನ್ನು ಗೆದ್ದ ಸಿಂಹವು ನಮ್ಮ ಕೈ ಬಿಟ್ಟು ಹೋಯಿತು’ (ಮರಾಠಿಯಲ್ಲಿ ಗಡ ಆಲ ಪಣಸಿಂಹ ಗೇಲ) ಎಂದು ರೋಧಿಸುತ್ತಾನೆ’.