೩.೧ ಸಾಮಾಜಿಕ ಸಂರಚನೆ

ಒಂದು ಸಮುದಾಯದ ಆಚಾರ ವಿಚಾರ, ನಂಬಿಕೆ, ಪದ್ಧತಿ, ಅವರು ಬದುಕುವ ರೀತಿ ನೀತಿ, ಉಡುವ ವಸ್ತ್ರ ಆಹಾರ ಪದ್ಧತಿ ಮುಂತಾದ ಅವರಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಅಧ್ಯಯನಕ್ಕೆ ಅಳವಡಿಸಿಕೊಂಡಾಗ ಅದನ್ನು ಆ ಸಮುದಾಯದ ‘ಸಂಸ್ಕೃತಿ’ ಅಧ್ಯಯನ ಎಂದೇ ಹೇಳುತ್ತೇವೆ. ಅಲೆಮಾರಿ ಬುಡಕಟ್ಟು ಸಮುದಾಯದವರಾದ ಗೊಂದಲಿಗರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಅವರ ಸಮುದಾಯದಲ್ಲಿ ಹುಟ್ಟಿನಿಂದ ಸಾಯುವವರೆಗಿನ ಸಂಸ್ಕಾರಗಳು ಇತರ ಬುಡಕಟ್ಟುಗಳಂತೆ ಭಿನ್ನವಾಗಿಲ್ಲವಾದರೂ ನಾಗರಿಕ ಸಮಾಜದ ಪ್ರಭಾವ ಮತ್ತು ಪ್ರೇರಣೆಯಿಂದ ಹೊಸ ರೂಪ ಪಡೆದುಕೊಂಡಿವೆ ಎಂಬುದನ್ನು ಇಲ್ಲಿ ಗಮನಿಸಬೇಕಾಗುತ್ತದೆ.

ಹುಟ್ಟು

ಗೊಂದಲಿಗರಲ್ಲಿಯೂ ಇತರೆ ಬುಡಕಟ್ಟುಗಳಂತೆ ಮೊದಲ ಹೆರಿಗೆ ತವರು ಮನೆಯಲ್ಲಿಯೇ ಆಗಬೇಕೆಂಬ ನಿಯಮವಿದೆ. ಸದಾ ಗಂಡನ ಹಿಂದೆ ಅಲೆಮಾರಿಯಾಗಿರುವ ಬಸುರಿ ಹೆಣ್ಣಿಗೆ ಅಲ್ಲಲ್ಲಿ ಅವಕಾಶ ಸಿಕ್ಕಾಗಲೆಲ್ಲ ಗಂಡ ಅವಳ ಬಯಕೆ ತೀರಿಸುತ್ತಿರುತ್ತಾನೆ. ಗೊಂದಲಿಗರ ಹೆಣ್ಣು ಮಕ್ಕಳು ಬಹಳ ಗಟ್ಟಿಗರು. ಗರ್ಭಿಣಿಗೆ ಒಂಭತ್ತು ತಿಂಗಳು ತುಂಬುವುದಕ್ಕಿಂತ ಮೊದಲೇ ಅವಳನ್ನು ತವರು ಮನೆಗೆ ಕಳಿಸುವುದುಂಟು. ಅವಳನ್ನು ಕಳಿಸುವಾಗ ಉಡಿ ತುಂಬಿ ಹೊಸ ಸೀರೆ ಉಡಿಸಿ ಕಳಿಸಿಕೊಡುತ್ತಾರೆ. ತವರು ಮನೆಯವರು ಅಲೆಮಾರಿಗಳೇ ಆಗಿದ್ದರೆ ಅವಳನ್ನು ಎಲ್ಲಿಯೂ ತಿರುಗಾಡಲು ಕಳಿಸುವುದಿಲ್ಲ. ಗೊಂದಲಿಗರಲ್ಲಿಯೂ ನುರಿತ ಸೂಲಗಿತ್ತಿಯರಿದ್ದಾರೆ. ಇವರು ತಮ್ಮ ಸಮುದಾಯದ ಸ್ತ್ರೀಯರಿಗೆ ಮಾತ್ರ ಹೆರಿಗೆ ಮಾಡಿಸಲು ಮೀಸಲಾಗಿಲ್ಲ.

ಮಗು ಹುಟ್ಟಿದ ಐದನೆಯ ದಿನ ‘ಐದೇಶಿ’ ಎಂಬ ಆಚರಣೆ ಮಾಡುವರು. ಈ ಐದೇಶಿಯ ದಿನ ಶೆಟ್ಟೆವ್ವ ತಾಯಿ ಆ ಮಗುವಿನ ಹಣೆ ಬರಹ ಬರೆಯುತ್ತಾಳೆಂಬ ನಂಬಿಕೆ ಇದೆ. ಅಂದು ಹೊಸ ಮೊರ ಮತ್ತು ಹೊಸದಾಗಿ ಶೆಟ್ಟವ್ವನ ಕಟ್ಟಿಗೆ ಮೂರ್ತಿಯನ್ನು ತರುತ್ತಾರೆ. ಮೊರದಲ್ಲಿ ಹೊಸ ಬಟ್ಟೆ ಹಸಿ ಅದರಲ್ಲಿ ಶೆಟ್ಟವ್ವನ ವಿಗ್ರಹವಿಟ್ಟು ಅದನ್ನು ದೇವರ ಜಗಲಿಯ ಮೇಲಿಟ್ಟು ಮುತ್ತೈದೆಯರು ಪೂಜಿಸುತ್ತಾರೆ. ಅಂದು ಮನೆಯಲ್ಲಿ ಸಿಹಿ ಅಡುಗೆ ಮಾಡಿ ಶೆಟ್ಟವ್ವನಿಗೆ ನೈವೇದ್ಯ ಹಿಡಿಯುವರು. ಓಣಿಯ ಜನರಿಗೆ ಬೆಲ್ಲ, ಕೊಬ್ಬರಿ, ನೆನಗಡಲೆ ಕೊಡುತ್ತಾರೆ. ಸಮುದಾಯದ ಕೆಲಸ್ತ್ರೀಯರನ್ನು ಮತ್ತು ಮಕ್ಕಳನ್ನು ಕರೆದು ಊಟಕ್ಕೆ ಹಾಕುವರು. ಹೀಗೆ ಶೆಟ್ಟವ್ವನ ಪೂಜೆಯನ್ನು ಸಂತೃಪ್ತಿಯಿಂದ ಮಾಡಿದರೆ ಅವಳು ಆ ಮಗುವಿನ ಹಣೆ ಬರಹವನ್ನು ಚೆನ್ನಾಗಿ ಬರೆಯುತ್ತಾಳೆಂಬ ಬಲವಾದ ನಂಬಿಕೆ ಇವರಲ್ಲಿದೆ.

ಮಗು ಹುಟ್ಟಿದ ಹನ್ನೆರಡನೆಯ ದಿನ ಮಗುವಿಗೆ ನಾಮಕರಣ ಮಾಡುತ್ತಾರೆ. ಇದನ್ನು ತೊಟ್ಟಿಲಶಾಸ್ತ್ರ ಎಂದೂ ಹೇಳುತ್ತಾರೆ. ಮಗುವಿನ ಹೆಸರನ್ನು ಸೋದರತ್ತೆಯೇ ಇಡುವ ಪರಂಪರೆ ಇವರಲ್ಲಿದೆ. ಇವಳು ಇಲ್ಲದಿದ್ದರೆ ಇತರರು ಆ ಮಗುವಿಗೆ ಅತ್ತೆಯಾಗುವವರು ಹೆಸರನ್ನಿಡುತ್ತಾರೆ. ಅತ್ತೆಯಾದವಳು ಹೊಸ ಬಟ್ಟೆಯಲ್ಲಿ ಮಗುವನ್ನು ಹಾಕಿ ತನ್ನ ಎರಡೂ ಕೈಗಳಿಂದ ಮಗುವನ್ನು ಎತ್ತಿಕೊಂಡು ಅಂಗಾತವಾಗಿ ಜೋಳಿಗೆ ಅಥವಾ ತೊಟ್ಟಿಲಲ್ಲಿ ಹಾಕಿ ಐದು ದೇವರ ಹೆಸರುಗಳನ್ನು ಆ ಮಗುವಿನ ಕಿವಿಯಲ್ಲಿ ಹೇಳಿ ಕುರ್ರ ಕುರ್ರ ಕಟ್ಟಟ್ಟೆ ಕುರ್ರ ಎಂದು ನಿಧಾನವಾಗಿ ಕೂಗುತ್ತಾಳೆ. ಹೆಸರಿಡಲು ಬಂದ ಹೆಂಗಸರಿಗೆ ಐದು ಧಾನ್ಯಗಳಿಂದ ತಯಾರಿಸಿದ ಗುಗ್ಗುರಿಯನ್ನು ತಿನ್ನಲು ಕೊಡುವರು. ಈ ಸಂದರ್ಭದಲ್ಲಿ ಮಗುವಿನ ಮತ್ತು ತಾಯಿಗೆ ಕಾಣೆಕೆಯನ್ನು ಕೊಡುವುದುಂಟು.

ಋತುಮತಿ

ಶಿವಮೊಗ್ಗ, ಹಳೇಮೈಸೂರು, ಮತ್ತು ಹಾಸನ ಜಿಲ್ಲೆಗಳಲ್ಲಿ ಹೆಣ್ಣು ಋತುಮತಿಯಾದಾಗ ಮಾಡುವ ಶಾಸ್ತ್ರಕ್ಕೆ ‘ಗುಡ್ಲುಕೂಡೋಶಾಸ್ತ್ರ’ ಎನ್ನುವರು. ಅಲೆಮಾರಿಗಳಾದ ಗೊಂದಲಿಗರು ಹೆಣ್ಣು ಋತುಮತಿಯಾದರೆ ಅವರು ವಾಸಿಸುವ ಗುಡಿಸಲು ಪಕ್ಕಕ್ಕೆ ಓರೆಯಾಗಿ ಮತ್ತೊಂದು ಗುಡಿಸಲು ಹಾಕಿ ಅದರ ಮೇಲೆ ವಿವಿಧ ಗಿಡದ ಹಸಿರು ಸೊಪ್ಪನ್ನು ಹಾಕುತ್ತಾರೆ. ‘ಇದಕ್ಕೆ ಗುಡ್ಲು’ ಎನ್ನುವರು. ಅವಳಿಗೆ ಸಿಹಿ ಊಟ, ಅನ್ನ, ತುಪ್ಪ, ಬೆಳ್ಳುಳ್ಳಿ ಮಾತ್ರ ಸೇವಿಸಲು ಕೊಡುತ್ತಾರೆ. ಆ ಗುಡಿಸಲು ಸುತ್ತಲೂ ದೇವ ದೇವತೆಗಳ ಚಿತ್ರಪಟಗಳನ್ನು ಹಾಕುತ್ತಾರೆ. ಋತುಮತಿಯಾದವಳಿಗೆ ಮುತ್ತೈದೆಯರು ಎಣ್ಣೆ ಹಚ್ಚಿ ಎರೆದು ಹೊಸ ಸೀರೆ ಉಡಿಸುವರು. ಮೈನೆರೆದ ಹುಡುಗಿ ಎಷ್ಟು ದಿನ ಗುಡಿಸಲಿನಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ಅವರ ಹಿರಿಯರು ನಿರ್ಧರಿಸುವರು. ಸಾಮಾನ್ಯವಾಗಿ ಐದು, ಏಳು, ಒಂಭತ್ತು ಮತ್ತು ಹನ್ನೊಂದು ದಿನಗಳವರೆಗೆ ಕೂಡ್ರಿಸುವುದುಂಟು. ಪ್ರತಿ ದಿನವೂ ಮೈನೆರೆದ ಹುಡುಗಿಗೆ ಹೋಳಿಗೆ, ಉಂಡಿ, ಜಿಲೇಬಿ, ಅನ್ನ ಹುಗ್ಗಿ ಮುಂತಾದ ವಸ್ತುಗಳನ್ನು ಅವಳಿಗೆ ತಂದು ಕೊಡುವರು. ಮೈನೆರೆದ ಹೆಣ್ಣಿಗೆ ಪ್ರತಿದಿನವೂ ಸ್ನಾನ ಮಾಡಿಸುತ್ತಾರೆ. ಅವಳಿಗೆ ಆರತಿ ಮಾಡುವ ದಿನ ಅರಿಷಿಣ, ಎಣ್ಣೆ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಿಸಿ ಅವಳಿಗೆ ಹಸಿರು ಬಳೆ, ಹೂವು ಮುಡಿಸಿ ಹೊಸ ಬಟ್ಟೆ ತೊಡಿಸುವರು. ಊರವರೆಗೆ ಊಟ ಹಾಕಿಸುವ, ತೀರ ಬಡವರಾಗಿದ್ದರೆ ಚುರುಮುರಿ ಹಂಚುತ್ತಾರೆ. ಊಟ ಮಾಡಿದ ಮೇಲೆ ಅವಳಿಗೆ ಮುಯ್ಯಿ ಮಾಡುವರು.

ಹೆಣ್ಣು ದೊಡ್ಡವಳಾಗುವುದಕ್ಕಿಂತ ಮೊದಲೇ ಅವಳಿಗೆ ಮದುವೆಯಾಗಿದ್ದರೆ ಆಕೆಯ ಗಂಡನಿಗೆ ಬಣ್ಣ ಎರಚುವುದುಂಟು. ಮೈನೆರೆದ ಹೆಣ್ಣಿಗೆ ಉಡಿ ಆರತಿ ಮಾಡುವವರೆಗೆ ಬಣ್ಣ ಎರಚಿಕೊಂಡ ಬಟ್ಟೆಗಳನ್ನೇ ಗಂಡನಾದವನು ಹಾಕಿಕೊಳ್ಳಬೇಕೆಂಬ ಪದ್ಧತಿ ಇದೆ. ಸುದ್ದಿ ತಿಳಿದು ಮೊದಲು ಬಣ್ಣ ಹಾಕಿದವನಿಗೆ ಗಂಡನಾದವನು ಅವನಿಗೆ ಆತಿಥ್ಯ ನೀಡಬೇಕು. ಕೊನೆಯದಿನ ಆರತಿ ಮಾಡುವ ಸಂದರ್ಭದಲ್ಲಿ ಅವಳಿಗೆ ಉಡಿ ತುಂಬುವ ಪದ್ಧತಿ ಇದೆ.

ಮದುವೆ

ಗೊಂದಲಿಗರ ಸಮುದಾಯದಲ್ಲಿ ವೃತ್ತಿಯ ಮೂಲಕ ಅನೇಕ ಉಪಪಂಗಡಗಳು ಉಂಟಾಗಿವೆ. ಬೀದಿ ಹಾಡುಗಾರರು, ಗೊಂದಲ ಹಾಕುವವರು ಬುಡಬುಡಕಿಯವರು, ಭಾಟರು, ಸಿಂಗದರು, ವಾಸುದೇವರು, ಚಿತ್ರಪಟದವರು ಗಿಳಿಶಾಸ್ತ್ರದವರು, ಎಣ್ಣೆ ಜೋಗಿ ಅಥವಾ ಭೂತೇರು, ಜ್ಯೋತಿಷಗಳು ಈ ಎಲ್ಲ ಉಪಪಂಗಡದವರು ಪರಸ್ಪರ ವೈವಾಹಿಕ ಸಂಬಂಧ ಬೆಳೆಸುತ್ತ ಬಂದಿದ್ದಾರೆ. ಇವರು ಬೆಡಗು ಅಥವಾ ಬಳಿಗೆ ‘ಗೋತಾ’ ಎಂದು ಕರೆಯುತ್ತಾರೆ. ಈ ಗೋತಾಗಳು ಭಿನ್ನವಾಗಿದ್ದರೆ ವೈವಾಹಿಕ ಸಂಬಂಧ ಬೆಳೆಸಬಹುದು. ಸಗೋತ್ರದಲ್ಲಿ ವಿವಾಹ ನೆರವೇರಿಸುವುದು ಇವರಲ್ಲಿ ನಿಷೇದ. ಸಾಮಾನ್ಯವಾಗಿ ಇವರ ಅಡ್ಡ ಹೆಸರುಗಳೇ ಅವರ ‘ಗೋತಾ’ ನಿರ್ಧರಿಸುತ್ತಿರುತ್ತವೆ.

ಇತರೆ ಬುಡಕಟ್ಟುಗಳಲ್ಲಿರುವಂತೆ ಇವರಲ್ಲಿಯೂ ಹೆಣ್ಣಿಗೆ ತೆರವು ಕೊಡುವ ಪದ್ಧತಿ ಪರಂಪರಾನುಗತವಾಗಿ ನಡೆದುಕೊಂಡು ಬಂದಿದೆ, ಗೊಂದಲಿಗರಲ್ಲಿ ಹೆಣ್ಣಿಗೆ ೫೦ ರೂಪಾಯಿಗಳಿಂದ ೫೦೦ ರೂಗಳವರೆಗೆ ತೆರವು ಕೊಡುವ ಸಂಪ್ರದಾಯವಿದೆ. ದಿನಾಂಕ ೧೬-೫-೧೯೪೫ರಲ್ಲಿ ನವಲಗುಂದದಲ್ಲಿ ಗೊಂದಳಿ ಸಮಾಜದ ೩ನೆಯ ಮೀಟಿಂಗನಲ್ಲಿ ತೆಗೆದುಕೊಂಡ ನಿರ್ಣಯಗಳಲ್ಲಿ ಹೆಣ್ಣಿಗೆ ತೆರವು ಕೊಡುವ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಹೆಣ್ಣಿಗೆ ೫೦ ರೂ ತೆರವು ಮತ್ತು ೧೦ ರೂಪಾಯಿಗಳನ್ನು ದೈವಕ್ಕೆ ಕೊಡಬೇಕೆಂಬ ಠರಾವು ಮಾಡಿದ್ದನ್ನು ಅನುಬಂಧದಲ್ಲಿರುವ ಜಾಹೀರಾತನ್ನು ಗಮನಿಸಿ.

ಕರ್ನಾಟಕದ ಇತರೆ ಬುಡಕಟ್ಟುಗಳಂತೆ ಇವರಲ್ಲಿಯೂ ಹೆಣ್ಣಿನ ಮನೆಯಲ್ಲಿಯೇ ಮದುವೆ ಕಾರ್ಯ ನಡೆಯಬೇಕೆಂಬ ಪದ್ಧತಿ ಇದೆ. ಒಂದು ಘಟ್ಟದಲ್ಲಿ ಗೊಂದಲಿಗರಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿದ್ದವು. ಈ ಮಕ್ಕಳು ತೊಟ್ಟಿಲಿನಲ್ಲಿರುವಾಗಲೇ ಮದುವೆ ಮಾಡುವ ಪರಂಪರೆ ಇತ್ತು. ಇಂದು ಈ ಸಮುದಾಯದಲ್ಲಿ ಬಾಲ್ಯ ವಿವಾಹ ನಡೆಯುತ್ತಿರಲಿಲ್ಲ ಎಂದು ಹೇಳುತ್ತಾರಾದರೂ ಹೆಣ್ಣು ಋತುಮತಿಯಾಗುವುದಕ್ಕಿಂತ ಮೊದಲೇ ಮದುವೆ ಮಾಡುವುದು ಇವರಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸಮಾಜದ ಮುಖಂಡರು ಬಾಲ್ಯ ವಿವಾಹಗಳನ್ನು ನಿರ್ಬಂಧಿಸಿದ್ದಾರೆ. ಇದರಿಂದ ‘ಬಾಲ್ಯ ವಿವಾಹ ಪದ್ಧತಿ’ ಸಂಪೂರ್ಣವಾಗಿ ನಿಂತಿಲ್ಲ. ಆದರೆ ಅದರ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಬಹುದು. ಗೊಂದಲಿಗರ ಎಲ್ಲ ವೃತ್ತಿಯವರು ಅಲೆಮಾರಿಗಳಾಗಿದ್ದುದರಿಂದ ಇವರಿಗೆ ಸಾಮಾನ್ಯವಾಗಿ ಎಲ್ಲ ವೃತ್ತಿಯವರ ಕುಟುಂಬಗಳ ಬಗ್ಗೆ ಪರಿಚಯವಿರುತ್ತದೆ. ಹೆಣ್ಣು ಗಂಡುಗಳ ಬಗ್ಗೆ ಹಿರಿಯರಿಗೆ ಮಾಹಿತಿ ಇರುತ್ತದೆ. ಮನೆಯ ಹಿರಿಯರಿಗೆ ಹೆಣ್ಣು ಒಪ್ಪಿಗೆಯಾದರೆ ಸಮಾಜದ ಹಿರಿಯರನ್ನು ಕರೆದುಕೊಂಡು ಹೆಣ್ಣಿನ ಮನೆಗೆ ಹೋಗುವರು. ಹೆಣ್ಣು ಗಂಡಿನವರಿಗೆ ಇಷ್ಟವಾದರೆ ಪರಸ್ಪರ ಒಪ್ಪಿಕೊಂಡರೆ ಸಮಾಜದ ಹಿರಿಯ ಮುಖಂಡರು, ಪಂಚರು ಸೇರಿ ತೆರವು, ವಸ್ತ್ರಾಭರಣ, ಮತ್ತು ಇತರೆ ಬಳುವಳಿಗಳ ಬಗ್ಗೆ ನಿರ್ಧರಿಸುತ್ತಾರೆ. ಇವರು ನವೆಂಬರ್ ನಿಂದ ಜೂನ್ ತಿಂಗಳು ಮದುವೆಗೆ ಪ್ರಶಸ್ತವಾದ ಕಾಲ ತಿಳಿದುಕೊಂಡಿದ್ದಾರೆ. ಮದುವೆ ಮುಹೂರ್ತ ಸಾಮಾನ್ಯವಾಗಿ ಸಂಜೆ ವೇಳೆ ಇರುತ್ತದೆ. ಈಗ ಮಧ್ಯಾಹ್ನದ ಹೊತ್ತಿನಲ್ಲಿ ಮುಹೂರ್ತ ಇಟ್ಟುಕೊಳ್ಳುತ್ತಿದ್ದಾರೆ. ಗೊಂದಲಿಗರ ಮೇಲೆ ನಾಗರಿಕ ಸಮಾಜದ ಪ್ರಭಾವ ಬೀರಿದ್ದರ ಪರಿಣಾಮವಾಗಿ ಇವರಲ್ಲಿಯೂ ಕೆಲವು ಕಡೆ ವರದಕ್ಷಿಣೆ ವ್ಯವಹಾರಗಳು ನಡೆದವು. ಆದರೆ ಈ ವಿಷಯ ಸಮಾಜದ ಮುಖಂಡರ ಗಮನಕ್ಕೆ ಬಂದಾಗ ಈ ವರದಕ್ಷಿಣೆ ಪಿಡುಗು ಕಡಿಮೆಯಾಯಿತು. ಇದಕ್ಕೆ ಅವರಲ್ಲಿರುವ ನ್ಯಾಯ ನಿರ್ಣಯವೇ ಕಾರಣ.

ಒಂದು ಕಾಲದಲ್ಲಿ ಗೊಂದಲಿಗರಲ್ಲಿ ಐದು ದಿನಗಳವರೆಗೆ ಮದುವೆ ಸಮಾರಂಭ ನಡೆಯುತ್ತಿತ್ತು. ನಂತರ ಮೂರು ದಿನಕ್ಕೆ ಅನಂತರ ಎರಡು ದಿನಕ್ಕೆ ಈಗ ಒಂದೇ ದಿನದಲ್ಲಿ ಮದುವೆ ಮಾಡುವ ಪರಂಪರೆ ಉಳಿದುಕೊಂಡಿದೆ.

ಪುರೋಹಿತರು ಅಥವಾ ಸಮುದಾಯದ ಹಿರಿಯರು ಮದುವೆ ಮುಹೂರ್ತವನ್ನು ಗಟ್ಟಿಗೊಳಿಸುತ್ತಾರೆ. ಗೊಂದಲಿಗರು ಮದುವೆ ದಿನಕ್ಕಿಂತ ಮೊದಲು ಒಂದು ಶುಭದಿನದಲ್ಲಿ ‘ದೇವರ ಕಾರ್ಯ’ ಮಾಡುತ್ತಾರೆ. ಗಂಡಿನವರು ಮದುವೆಗೆ ಮುಂಚೆ ಸಮಾಜದವರಿಗೆ ಒಂದು ಸಲ ಮಾಂಸದೂಟವನ್ನು ಹಾಕಬೇಕೆಂಬ ನಿಯಮವಿದೆ. ಇಂದು ಈ ಪದ್ಧತಿಯನ್ನು ಕೆಲವರು ಆಚರಿಸುತ್ತಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರದ ಈ ಭಾಗದ ಗೊಂದಲಿಗರು ಮದುವೆ ಪೂರ್ವದ ಗಂಡಿನ ಮನೆಯಲ್ಲಿ ನಡೆಯುವ ಊಟವನ್ನು ‘ಚಪ್ಪರದೂಟ’ವೆಂದೇ ಕರೆಯುವರು. ಇಲ್ಲಿ ಶಕ್ತಿ ದೇವಿಯ ಹೆಸರಿನಲ್ಲಿ ಕುರಿ ಅಥವಾ ಮೇಕೆ ಬಲಿ ಕೊಟ್ಟು ಅದರ ಮಾಂಸದಿಂದ ಅಡುಗೆ ಸಿದ್ಧಪಡಿಸಿ ಸಮುದಾಯದವರಿಗೆಲ್ಲ ಊಟ ಹಾಕಿಸುತ್ತಾರೆ. ಕರ್ನಾಟಕದಲ್ಲಿ ವಾಸಿಸುವ ಅನೇಕ ಗೊಂದಲಿಗರು ಹೆಚ್ಚಾಗಿ ಈ ಪರಂಪರೆಯನ್ನು ಪಾಲಿಸುತ್ತಿರುವುದು ಕಂಡು ಬರುತ್ತದೆ.

ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಗುಲಬರ್ಗಾದ ಕೆಲವು ಪ್ರದೇಶಗಳಲ್ಲಿ ವಾಸಿಸುವ ಗೊಂದಲಿಗರ ಮದುವೆ ಸಂಪ್ರದಾಯ ಭಿನ್ನವಾಗಿದೆ. ಲಗ್ನಕ್ಕಿಂತ ಪೂರ್ವ ಒಂದು ದಿನ ದೇವತಾ ಕಾರ್ಯ ಮಾಡುತ್ತಾರೆ. ಇವರು ಹೊರಗಿನ ದೇವರು ಮತ್ತು ಒಳಗಿನ ದೇವರು ಎಂದು ಎರಡು ರೀತಿಯಲ್ಲಿ ದೇವತಾ ಕಾರ್ಯ ಮಾಡುವುದುಂಟು. ಹೊರಗಿನ ದೇವರ ಕಾರ್ಯ ಮಾಡುದ ದಿನ ಅವರು ದೇವತೆಗೆ ಬಲಿ ಕೊಡುವುದುಂಟು, ಊರಿನಿಂದ ೫-೬ ಕಿ.ಮೀ ದೂರದಲ್ಲಿ ಕಂಡು ಬರುವ ಹೊನ್ನಿ ಗಿಡದ ಸುತ್ತಲೂ ಸ್ವಚ್ಫಗೊಳಿಸಿ, ಮಣ್ಣಿನಿಂದ ಸ್ತ್ರೀ ದೇವತೆಯನ್ನು ನಿರ್ಮಿಸಿ, ಆ ಮೂರ್ತಿಯನ್ನು ಗಿಡದ ಪೂರ್ವಕ್ಕೆ ಕುಳ್ಳರಿಸಿ ಆ ಗಿಡಕ್ಕೆ ೫ ಸುತ್ತು ಹಂಗನೂಲನ್ನು ಸುತ್ತುತ್ತಾರೆ. ಹೊನ್ನಿಗಿಡಕ್ಕೆ ಮತ್ತು ಮಣ್ಣಿನ ಮೂರ್ತಿಗೆ ಅರಿಷಿಣ, ಕುಂಕುಮಗಳನ್ನು ಹಚ್ಚಿ ಪೂಜಿಸುತ್ತಾರೆ. ಈ ವಿಗ್ರಹದ ಪಕ್ಕದಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿಡುತ್ತಾರೆ. ಈ ಪೂಜೆಯ ಕೆಲಸ ಮುಗಿದ ಮೇಲೆ ಮೇಕೆ ಅಥವಾ ಕುರಿಯನ್ನು ಆ ದೇವಿಯ ಹೆಸರಿನಲ್ಲಿ ಬಲಿಕೊಡುತ್ತಾರೆ. ಬಲಿಕೊಟ್ಟ ಪ್ರಾಣಿಯ ಒಂದು ಕಾಲನ್ನು ಅದರ ಬಾಯಿಯಲ್ಲಿ ಇಡುತ್ತಾರೆ. ನಂತರ ಬಲಿಯಾದ ಪ್ರಾಣಿಯ ರಕ್ತವನ್ನು ಆ ದೇವಿಗೆ ಮತ್ತು ಗಿಡಕ್ಕೆ ಸಿಂಪಡಿಸಿ ನಂತರ ಮಾಂಸದ ಅಡುಗೆ ಸಿದ್ಧ ಪಡಿಸಿ ದೇವಿಗೆ ನೈವೇದ್ಯ ಮಾಡುವರು. ನಂತರ ಬಲಿ ಕೊಟ್ಟ ಪ್ರಾಣಿಯ ರುಂಡವನ್ನು ಪೂರ್ವ ದಿಕ್ಕಿಗೆ ಉರುಳಿಸುತ್ತಾರೆ. ಈ ರುಂಡವನ್ನು ಬೀಗರು ಮಾತ್ರ ತೆಗೆದುಕೊಳ್ಳಬೇಕೆಂದು ನಿಯಮವಿದೆ. ಆ ರುಂಡವನ್ನು ತೆಗೆದುಕೊಂಡವರು ಬೇರೆಡೆಗೆ ಒಯ್ದು ಅದರ ಅಡುಗೆ ಮಾಡಿ ತಿಂದು, ಮನೆಗೆ ಬರುವಾಗ ಸ್ನಾನ ಮಾಡಿ ಬರಬೇಕೆಂಬ ನಿಯಮವಿದೆ.

ಉಳಿದವರಿಗೆ ಹೊನ್ನಿ ಗಿಡದ ಕೆಳಗೆ ಊಟಕ್ಕೆ ಹಾಕುತ್ತಾರೆ. ಎಲ್ಲರ ಊಟದ ನಂತರ ಅಲ್ಲಿ ಹಚ್ಚಿರುವ ದೀಪ ಮತ್ತು ಮೂರ್ತಿಯನ್ನು ಒಡೆದು ಮನೆಗೆ ಬರುತ್ತಾರೆ. ಈ ಹೊರಗಿನ ದೇವತಾಕಾರ್ಯವನ್ನು ಮದುವೆಯಾದ ಗಂಡಸರು ಮಾತ್ರ ನಿರ್ವಹಿಸಬೇಕು ಎಂಬ ಕಟ್ಟುಪಾಡುಗಳಿವೆ. ಈ ಸಮಾರಂಭದಲ್ಲಿ ಹೆಂಗಸರು ಯಾರೂ ಭಾಗವಹಿಸುವಂತಿಲ್ಲ. ಮನೆಗೆ ಬಂದಾಗ ಈ ಕಾರ್ಯದಲ್ಲಿ ಭಾಗವಹಿಸಿದ ಎಲ್ಲ ಗಂಡಸರಿಗೂ ನೀರು ಸಿಂಪಡಿಸಿ ಅವರನ್ನು ಒಳಗೆ ಕರೆದೊಯ್ಯುತ್ತಾರೆ. ಮಾರನೆಯ ದಿನ ಒಳಗಿನ ದೇವತಾ ಕಾರ್ಯ ಮಾಡುತ್ತಾರೆ. ಇಲ್ಲಿ ಹೆಂಗಸರೇ ಈ ಕಾರ್ಯದ ಉಸ್ತುವಾರಿಯನ್ನು ಹೊತ್ತು ಕೊಂಡಿರುತ್ತಾರೆ. ಈ ದಿನ ಸಿಹಿ ಊಟವಿರುತ್ತದೆ. ಊರಿನ ಮತ್ತು ಮನೆಯ ದೇವತೆಗಳನ್ನು ಈ ಸಂದರ್ಭದಲ್ಲಿ ಪೂಜಿಸಿ ಅವರಿಗೆ ಹಣ್ಣು, ಕಾಯಿ ನೈವೇದ್ಯ ಮಾಡಿ ಅವರನ್ನು ಶಾಂತಗೊಳಿಸುತ್ತಾರೆ.

ಇಂದು ಗೊಂದಲಿಗರಲ್ಲಿ ಐದು, ಮೂರು ಮತ್ತು ಎರಡು ದಿನಗಳ ಮದುವೆಯ ಪರಂಪರೆ ಕಂಡು ಬರುವುದಿಲ್ಲ. ಆದರೆ ಹಿಂದಿನ ಕಾಲದಲ್ಲಿ ಐದು ದಿನಗಳವರೆಗೆ ನಡೆಯುತ್ತಿದ್ದ ಮದುವೆ ಸಮಾರಂಭ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳುವುಕ್ಕೋಸ್ಕರ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಮೊದಲನೆಯ ದಿನದ ಕಾರ್ಯ

ಗಂಡಿನವರು ಹೆಣ್ಣಿನ ಮನೆಗೆ ಬಂದಾಗ ಅವರನ್ನು ಎದುರುಗೊಂಡು ಕರೆ ತಂದು ಪಂಚರ ಸಮ್ಮುಖದಲ್ಲಿ ವೀಳ್ಯೆಶಾಸ್ತ್ರ ಮಾಡಿ ಗಂಡು ಹೆಣ್ಣಿಗೆ ಅರಿಷಿಣ ಹಚ್ಚಿ ನೀರು ಹಾಕಿ ಕೆಂಪು ವಸ್ತ್ರದಲ್ಲಿ ತೆಂಗಿನ ಕಾಯಿ ಇಟ್ಟು ಅದನ್ನು ವರನ ಬಲಗೈಗೆ ಕಟ್ಟುತ್ತಾರೆ. ಇದಕ್ಕೆ ‘ಕಟಾರಿಕಾಯಿ’ ಎನ್ನುವರು. ಗಂಡಿನ ಮೇಲೆ ಹೊಚ್ಚಿದ ಶಲ್ಯದ ಒಂದು ತುದಿಗೆ ಲಿಂಬೆಹಣ್ಣನ್ನೂ, ಹೆಣ್ಣಿನ ಸೆರಗಿನ ತುದಿಯಲ್ಲಿ ಅಡಿಗೆ ಬೆಟ್ಟವನ್ನೂ ಕಟ್ಟುವರು. ಹೆಣ್ಣಿಗೆ ಈ ಸಂದರ್ಭದಲ್ಲಿ ಅರಿಷಿಣ ವಸ್ತ್ರ ಹೊದಿಸಿರುತ್ತಾರೆ. ಗಂಡು ಮತ್ತು ಹೆಣ್ಣಿನ ಬಲಗೈಗೆ ಕೊಂಬಿರುವ ಅರಿಷಿಣದ ಬೇರು ಮತ್ತು ವೀಳ್ಯದೆಲೆಯನ್ನು ದಾರದ ಸಹಾಯದಿಂದ ಕಟ್ಟುವರು.

ಎರಡನೆಯ ದಿನ

ಈ ದಿನ ಮಧ್ಯಾಹ್ನದ ಹೊತ್ತಿಗೆ ವಧುವರರಿಗೆ ಸೊಲಿಗೆ ನೀರಿನ ಸ್ನಾನ ಮಾಡಿಸುವ ಕಾರ್ಯಕ್ರಮವಿರುತ್ತದೆ. ಮನೆಯ ಮುಂದಿರುವ ಸ್ಥಳದಲ್ಲಿ ಪೂರ್ವಕ್ಕೆ ಮುಖಮಾಡಿ ಸುತ್ತಲೂ ಚೌಕಾಕಾರದಲ್ಲಿ ನಾಲ್ಕು ತಂಬಿಗೆಗಳನ್ನು ನೆಲದ ಮೇಲಿಟ್ಟು ಅದನ್ನು ಹಿಡಿದುಕೊಳ್ಳಲು ಐದು ಜನ ಮುತ್ತೈದೆಯರನ್ನು ನೇಮಿಸಿ ಅದಕ್ಕೆ ಐದುಸುತ್ತ ದಾರವನ್ನು ಸುತ್ತಿರುತ್ತಾರೆ. ಇದಕ್ಕೆ ಸುರಗೆ ಸುತ್ತುವುದು ಎಂದು ಹೇಳುವುದುಂಟು. ಮುತ್ತೈದೆಯರು ಆರತಿ ಅರಿಷಿಣ ಮತ್ತು ಎಣ್ಣೆಯನ್ನು ತೆಗೆದುಕೊಂಡು ಐದು ಸಲ ಆ ಸುರುಗೆಯನ್ನು ಸುತ್ತಿ ಸುರುಗೆಯ ಒಳಗೆ ಪ್ರವೇಶಿಸುತ್ತಾರೆ. ಇವರನ್ನು ಹಿಂಬಾಲಿಸಿ ವಧು-ವರರು ಮತ್ತು ಅವರ ತಂದೆ ತಾಯಿಯರು ಬರುತ್ತಾರೆ. ಈ ಸುರಗಿಯ ಒಳಗೆ ವಧು ವರರು ಮತ್ತು ಅವರ ತಂದೆ ತಾಯಿಗಳು ಪೂರ್ವಕ್ಕೆ ಮುಖಮಾಡಿ ಕುಕ್ಕುರಗಾಲಿನಿಂದ ಕುಳಿತುಕೊಳ್ಳಲು ಹಲಗೆ ಅಥವಾ ಮಣೆಗಳನ್ನು ಹಾಕಿರುತ್ತಾರೆ. ಮೊದಲ ಸಾಲಿನಲ್ಲಿ ವಧುವರರು ಕುಳಿತುಕೊಂಡಿರುತ್ತಾರೆ. ಅವರ ಹಿಂದಿನ ಸಾಲಿನಲ್ಲಿ ಹೆಣ್ಣಿನ ಹಿಂದೆ ಅವಳ ತಂದೆ ತಾಯಿಗಳು, ಗಂಡಿನ ಹಿಂದೆ ಅವನ ತಂದೆ ತಾಯಿಗಳು ಕುಳಿತುಕೊಂಡಿರುತ್ತಾರೆ. ಮುತ್ತೈದೆಯರು ಮೊದಲಿಗೆ ಗಂಡ ಹೆಣ್ಣಿಗೆ ನಂತರ ಅವರ ತಂದೆ ತಾಯಿಗಳಿಗೆ ಅರಿಷಿಣ ಎಣ್ಣೆ ಹಚ್ಚಿ ನೀರು ಹಾಕುತ್ತಾರೆ. ಈ ಸಂದರ್ಭದಲ್ಲಿ ಮದುವೆಯಾಗದ ಗಂಡು ಹೆಣ್ಣುಗಳಿಗೆ ಬೇಗ ಮದುವೆಯಾಗಲಿ ಎಂದು ಆಶಿಸಿ ಅಲ್ಲಿ ಸೇರಿದವರಿಗೆ ಅರಿಷಿಣ ಹಚ್ಚುವ ಸಂಪ್ರದಾಯವಿದೆ. ಈ ಸೊಲಿಗೆ ಸ್ನಾನದ ನಂತರ ಮೈ ಒರೆಸಿಕೊಂಡು ಹೊಸ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ. ಮುತ್ತೈದೆಯರು ಅವರಿಗೆ ಆರತಿ ಮಾಡುವರು.

ಮೂರನೆಯ ದಿನ

ಈ ದಿನ ಸಾಯಂಕಾಲದ ಸಮಯಕ್ಕೆ ತಾಳಿಕಟ್ಟುವ ಶಾಸ್ತ್ರ ಇರುತ್ತದೆ.

ನಾಲ್ಕನೆಯ ದಿನ

ಮದುಮಕ್ಕಳ ಆಟ, ಈ ಆಟಗಳಲ್ಲಿ ಬೇವಿನ ಸೊಪ್ಪಿನಿಂದ ತಯಾರಿಸಿದ ಚಂಡಿನ ಆಟ, ಅರಿಷಿಣ ಕೊಂಬಿನ ಆಟ, ಅಡಿಕೆ, ಉಂಗುರ ಕೂಸಾಡಿಸುವ ಮುಂತಾದ ಆಟಗಳನ್ನು ಆಡಿಸುತ್ತಾರೆ. ಅಂದು ರಾತ್ರಿ ಗೊಂದಲ ಹಾಕಿಸುವ ಕಾರ್ಯಕ್ರಮವಿರುತ್ತದೆ.

ಐದನೆಯ ದಿನ

ಗೊಂದಲ ಮುಗಿದ ತಕ್ಷಣ ದೇವಿಯ ಹೆಸರಿನಲ್ಲಿ ಬಲಿ ಕೊಟ್ಟು ಅಂದು ಬೀಗರಿಗೆ ಮತ್ತು ಕುಲಬಾಂಧವರಿಗೆ ಮಾಂಸದೂಟ ಹಾಕುತ್ತಾರೆ.

ಒಂದು ದಿನ ಮದುವೆ

ಮದುವೆಯ ಹಿಂದಿನ ದಿನ ಸೋದರ ಮಾವ ಹೊಸಬಟ್ಟೆಗಳನ್ನು ಹಾಕಿಕೊಂಡು ಹಾಲುಗಂಬ ತಂದು ಮನೆಯ ಚಪ್ಪರದ ಬಲಭಾಗಕ್ಕೆ ನೆಡುತ್ತಾನೆ ನಂತರ ಚಪ್ಪರ ಹಾಕುತ್ತಾರೆ. ಮದುವೆಯ ದಿನ ಐದು ಜನ ಮುತ್ತೈದೆಯರು ಆರತಿಯನ್ನು ತೆಗೆದುಕೊಂಡು ವಾದ್ಯದವರೊಂದಿಗೆ ಹಾಡುತ್ತ ಕುಂಬಾರನ ಮನೆಗೆ ಹೋಗಿ ಅವರಿಗೆ ಉಲುಪಿ ಕೊಟ್ಟು ಐದು ಐರಾಣಿಗಳನ್ನು (ಕುಂಭಗಳನ್ನು) ತಲೆಯ ಮೇಲೆ ಹೊತ್ತುಕೊಂಡು ಮದುವೆ ಮನೆಗೆ ತರುವರು. ಈ ಕುಂಭಗಳನ್ನು ದೇವರ ಜಗಲೆಯ ಹತ್ತಿರ ಇಟ್ಟು ಪೂಜಿಸುತ್ತಾರೆ. ನಂತರ ಮದುಮಕ್ಕಳಿಗೆ ಮತ್ತು ಅವರ ತಂದೆ ತಾಯಿಗಳಿಗೆ ನೆಯ್ಯೇರಿಸುವ ಸೊಲಿಗೆ ನೀರು ಹಾಕುವ ಕಾರ್ಯಕ್ರಮವಿರುತ್ತದೆ.

ಹಂದರದಲ್ಲಿ ಸುಮಾರು ಹತ್ತು ಅಡಿ ಭಾಗದಲ್ಲಿ ನಾಲ್ಕೂ ದಿಕ್ಕುಗಳಿಗೆ ನಾಲ್ಕು ತಂಬಿಗೆಗಳನ್ನು ಇಟ್ಟು ಆ ನಾಲ್ಕೂ ತಂಬಿಗೆಗಳಿಗೆ ಐದು ಸುತ್ತು ನೂಲು ಸುತ್ತುತ್ತಾರೆ. ಆ ತಂಬಿಗೆಗಳ ಮುಂದೆ ಮುತ್ತೈದೆಯರು ಕುಳಿತಿರುತ್ತಾರೆ. ಮದುಮಕ್ಕಳು ಅವರ ತಂದೆ ತಾಯಂದಿರು ಸುರುಗೆಯನ್ನು ಐದು ಸಲ ಸುತ್ತಿ, ಸುರುಗೆ ಒಳಗೆ ಬಂದು ಕುಳಿತುಕೊಳ್ಳುತ್ತಾರೆ. ಅವರಿಗೆ ವೀಳ್ಯೆದೆಲೆಯನ್ನು ಎಣ್ಣೆಯಲ್ಲಿ ಎದ್ದಿ ತಲೆಗೆ ಮೈಗೆ ಎಣ್ಣೆ ಮತ್ತು ಅರಿಷಿಣ ಹಚ್ಚವರು ಅನಂತರ ಅವರಿಗೆ ನೀರು ಹಾಕುತ್ತಾರೆ. ಈ ಸೊಳಿಗೆ ಸ್ನಾದ ನಂತರ ಅವರನ್ನು ಮದುವೆ ಮಂಟಪಕ್ಕೆ ಕರೆತಂದು ವರನಿಗೆ ಕಟಾರಿ ಕಾಯಿ ಮತ್ತು ಕಂಕಣ ಕಟ್ಟುತ್ತಾರೆ. ವಧುವಿಗೆ ಅರಿಷಿಣ ಬೇರು ಮತ್ತು ಎಲೆಯ ಕಂಕಣ ಕಟ್ಟಿ ಆರತಿ ಮಾಡುವರು. ನಂತರ ಮದುವಕ್ಕಳು ಮನೆಯೊಳಗೆ ಹೋಗಿ ಹೊಸ ಬಟ್ಟೆಗಳನ್ನು ಧರಿಸಿ ಹಂದರದಲ್ಲಿ ಕುಳ್ಳರಿಸಿದಾಗ ಗಂಡು ಹೆಣ್ಣಿನವರು ಪರಸ್ಪರ ತಾವುಗಳು ಮಾತನಾಡಿಕೊಂಡಂತೆ ವಧುವರರಿಗೆ ಕೊಡಬೇಕಾದ ವಸ್ತುಗಳನ್ನು ಕೊಡುವರು. ಗೊಂದಲಿಗರ ಹಿರಿಯ ಅಥವಾ ಪುರೋಹಿತ ಮಂತ್ರಗಳನ್ನು ಹೇಳುತ್ತಾರೆ. ಮಂತ್ರ ಮುಗಿದ ಮೇಲೆ ಅಲ್ಲಿ ಸೇರಿದವರೆಲ್ಲ ಮದುಮಕ್ಕಳಿಗೆ ಅಕ್ಕಿಕಾಳು ಹಾಕುವರು. ಅಕ್ಕಿ ಕಾಳು ಬಿದ್ದ ತಕ್ಷಣ ಗಂಡು ಹೆಣ್ಣಿಗೆ ತಾಳಿ ಕಟ್ಟುತ್ತಾನೆ. ನಂತರ ಮುತ್ತೈದೆಯರು ನವದಂಪತಿಗಳಿಗೆ ಆರತಿ ಬೆಳಗಿ ಸುಭ ಹಾರೈಸಿ ಗಂಡ ಹೆಂಡತಿಯ ಹೆಸರು ಕೇಳುತ್ತಾರೆ. ಮದುವೆಗೆ ಬಂದವರೆಲ್ಲ ಮಧುಮಕ್ಕಳಿಗೆ ಆರತಿ ಮಾಡಿ ಮುಯ್ಯಿ ಕೊಡುತ್ತಾರೆ. ಒಂದು ಕಡೆ ಮದುವೆಗೆ ಬಂದವರಿಗೆ ಊಟ, ಇನ್ನೊಂದು ಕಡೆ ತಾಳಿಯ ನಂತರದ ಶಾಸ್ತ್ರಗಳು ಮುಂದುವರೆಯುತ್ತಿರುತ್ತವೆ.

ತಾಳಿ ನಂತರ ಚಂಡಿನಾಟ, ಅರಿವೆಯಾಟ, ಅಡಕಿಯಾಟ, ಅಕ್ಕಿಯಲ್ಲಿ ಉಂಗುರ ಹುಡುಕುವ ಆಟ, ಇವುಗಳನ್ನು ನವದಂಪತಿಗಳಿಂದ ಮಾಡಿಸುತ್ತಾರೆ. ಕೂಸಿನ ಆಟ ಈ ಪಂದ್ಯದ ಕೊನೆಯ ಆಟವಾಗಿರುತ್ತದೆ. ಗೊಂದಲ ಹಾಕುವ ಸಂಪ್ರದಾಯ ಅವರ ಮನೆಯಲ್ಲಿದ್ದರೆ ಅಂದು ರಾತ್ರಿ ಬೀಗರಲ್ಲೆರೂ ಗೊಂದಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಳತನಕ ಗೊಂದಲ ನೋಡುತ್ತಾರೆ. ಇಲ್ಲದಿದ್ದರೆ ಅಂದೇ ರಾತ್ರಿ ಗಂಡಿನವರು ಹೆಣ್ಣನ್ನು ಉಡಕ್ಕಿ ಹಾಕಿಸಿಕೊಂಡು ಕರೆದುಕೊಂಡು ಹೋಗುತ್ತಾರೆ. ತವರು ಮನೆಯವರು ಮಗಳನ್ನು ಗಂಡನ ಮನೆಗೆ ಕಳಿಸುವಾಗ ಅವಳನ್ನು ಪೂರ್ವದಿಕ್ಕಿಗೆ ಮುಖ ಮಾಡಿ ನಿಲ್ಲಿಸಿ ಅವಳ ಕಾಲನ್ನು ಅಣ್ಣ ತಮ್ಮಂದಿರು ತೊಳೆದು ನಮಸ್ಕರಿಸುತ್ತಾರೆ.

ಗೊಂದಲಿಗರ ಮದುವೆಗಳಲ್ಲಿ ಪ್ರಾದೇಶಿಕವಾದ ಭಿನ್ನತೆ ಇರುವುದು ಕಂಡು ಬರುತ್ತದೆ. ಉದಾಹರಣೆಗೆ ಧಾರವಾಡ ಮತ್ತು ಗದಗ ಜಿಲ್ಲೆಗಳ ಕೆಲಭಾಗಗಳಲ್ಲಿ ಕಂಡು ಬರುವ ಗೊಂದಲಿಗರ ಮದುವೆ ವಿಶಿಷ್ಟ ಸಂಪ್ರದಾಯದಿಂದ ಕೂಡಿದೆ.

ಮದುಮಕ್ಕಳನ್ನು ಎರಡು ಬಿದಿರು ಬುಟ್ಟಿಯಲ್ಲಿ ಎದುರು ಬದುರು ನಿಲ್ಲಿಸಿ ಸ್ವಸ್ತಿಕ ಬರೆದ ತೆಳುವಾದ ಬಟ್ಟೆಯನ್ನು ಅವರಿಬ್ಬರ ನಡುವೆ ಹಿಡಿದು, ಪುರೋಹಿತರು ಮಂತ್ರ ಹೇಳುತ್ತಾರೆ. ನಂತರ ವಧು ವರರು ಪರಸ್ಪರ ಹೂ ಮಾಲೆಯನ್ನು ಹಾಕುತ್ತಾರೆ. ನಂತರ ಎಲ್ಲರೂ ಜೋಳ ಮತ್ತು ಅಕ್ಕಿ ಬೆರೆಸಿದ ಅಕ್ಷತೆಯನ್ನು ಹಾಕುವರು. ಆ ನಂತರ ಬುಟ್ಟಿಯಿಂದ ಈಚೆ ಬಂದು ಬುಟ್ಟಿಯಲ್ಲಿ ನಿಲ್ಲುವರು ಕೆಲವರು ಮದುವೆಗಳಲ್ಲಿ ತಾಳಿ ಕಟ್ಟಿದ ಮೇಲೆ ಸುರಗಿ ನೀರಿನ ಸ್ನಾನ ಮಾಡಿಸುವರು ಹಸಿ ಮಣೆಯ ಮೇಲೆ ಕುಳಿತ ವಧುವರರು ಮೈ ಮೇಲೆ ಬಿದ್ದ ಸುರಗಿ ನೀರನ್ನು ಒರಿಸಿಕೊಳ್ಳುವ ಮುಂಚೆ ಚಂಡಿನಾಟ ಆಡುವ ಶಾಸ್ತ್ರ ಮಾಡಿಸುವುದನ್ನು ಕಾಣುತ್ತೇವೆ. ಈ ಮದುವೆಯ ಕೊನೆಯ ಶಾಸ್ತ್ರ ಕಣಕದ ದೀಪದ ದರ್ಶನ. ಬಿದಿರಿನ ಬುಟ್ಟಿಯ ಅಂಚಿಗೆ ಅರ್ಧ ಅಡಿ ಎತ್ತರದ ೫ ಕಡ್ಡಿಗಳನ್ನು ಚುಚ್ಚಿರುತ್ತಾರೆ. ಈ ಐದೂ ಕಡ್ಡಿಗಳನ್ನು ಸೇರಿಸಿ ಅವುಗಳ ತುದಿಯಲ್ಲಿ ದಾರ ಕಟ್ಟಿರುತ್ತಾರೆ. ಬುಟ್ಟಿಯ ಒಳಗೆ ಕಣಕದ ಪಣತಿಯಲ್ಲಿ ತುಪ್ಪದ ದೀಪ ಹಚ್ಚಿರುವರು. ಆ ಬುಟ್ಟಿಯನ್ನು ವಧುವಿನ ಸೋದರ ಮಾವನ ಕೈಯಲ್ಲಿ ಕೊಡುತ್ತಾರೆ. ಅವನಿಗೂ ಬುಟ್ಟಿಗೂ ದೊಡ್ಡದಾದ ಬಿಳಿ ಬಟ್ಟೆಯನ್ನು ಮುಚ್ಚಿರುತ್ತಾರೆ. ಇಬ್ಬರ ಸಹಾಯದಿಂದ ಆತ ನಿಧಾನವಾಗಿ ವಧುವರರಿದ್ದಲ್ಲಿಗೆ ಬರುತ್ತಾನೆ. ವಧುವರರಿಬ್ಬರೂ ಮುಸುಕನ್ನು ತೆಗೆದು ಬುಟ್ಟಿಯೊಳಗಿನ ದೀಪದ ದರ್ಶನ ಪಡೆಯುತ್ತಾರೆ. ಸೋದರ ಮಾವ ವಧುವರರಿಗೆ ನೀಡುವ ರಕ್ಷಣೆಯ ಸಂಕೇತ ಎಂದು ಭಾವಿಸಲಾಗುತ್ತದೆ. ಗೊಂದಲಿಗರು ಇದಕ್ಕೆ ‘ರಕೋತ ಬುಟ್ಟಿ’ ಎಂದು ಕರೆಯುತ್ತಾರೆ.

ಪುನರ್ ವಿವಾಹ : ಗೊಂದಲಿಗರಲ್ಲಿ ಬಹುಪತ್ನಿತ್ವ ಮತ್ತು ವಿಧವಾ ವಿವಾಹಕ್ಕೆ ಇವರಲ್ಲಿ ಅವಕಾಶವಿರುವುದು ಕಂಡು ಬರುತ್ತದೆ. ವಿಧವಾ ವಿವಾಹಕ್ಕೆ ‘ಉಡಕಿ’ ಪದ್ಧತಿ ಎಂದು ಕರೆಯುವುದುಂಟು. ಈ ಸಮುದಾಯದ ಸ್ತ್ರೀ ಮೂರನೆಯ ಸಲ ಮತ್ತು ಪುರುಷ ನಾಲ್ಕನೆಯ ಸಾರಿ ಲಗ್ನವಾಗುವಂತಿಲ್ಲ. ಈ ನಿಯಮವನ್ನು ಅವರು ಕಡ್ಡಾಯವಾಗಿ ಪಾಲಿಸಲೇಬೇಕು. ಒಂದು ವೇಳೆ ಈ ಕಟ್ಟಳೆಯನ್ನು ಮೀರಿ ಹೆಣ್ಣು ಮೂರನೆಯ, ಗಂಡು ನಾಲ್ಕನೆಯ ಮದುವೆಯನ್ನು ಮಾಡಿಕೊಂಡು ಸಂತಾನ ಪಡೆದರೆ ಆ ಸಂತಾನಕ್ಕೆ ‘ಎಳೆಕುಲದ ಎಳಗುಲ ಸಂತಾನ’ ಎಂದು ಎಣಿಸುವ ಪದ್ಧತಿ ಗೊಂದಲಿಗರಲ್ಲಿದೆ. ಇಂಥವರು ಸಮಾಜಕ್ಕೆ ಯಾವ ರೀತಿಯ ದಂಡ ಕಟ್ಟಿದರೂ ಅದರ ಪಾಪ ಪರಿಹಾರವಾಗುವುದಿಲ್ಲ ಎಂಬ ನಂಬಿಕೆ ಇದೆ. ಈ ಸಂತಾನದವರ ಜೊತೆ ಇತರರು ವೈವಾಹಿಕ ಸಂಬಂಧ ಬೆಳೆಸುವಾಗ ಹಿಂದು ಮುಂದೆ ನೋಡುತ್ತಾರೆ. ಅತೀ ದೂರದ ಸಂಬಂಧಗಳನ್ನು ಮಾತ್ರ ಇವರ ಬೆಳೆಸಬಹುದು. ವಿಚ್ಫೇದಿತ ಹೆಣ್ಣು ತನ್ನ ಮೊದಲಿನ ಗಂಡ ಬದುಕಿರುವವರೆಗೆ ಮರು ಮದುವೆಯಾಗಬಾರದೆಂಬ ನಿಯಮವೂ ಇವರಲ್ಲಿದೆ.

ಉಡುಗೆ ತೊಡುಗೆಗಳು

ಗಂಡಸರು : ವಯಸ್ಸಾದವರು ಧೋತರ ಉಟ್ಟು ತಲೆಗೆ ರುಮಾಲು ಧರಿಸುವರು. ಕಲಾವಿದರು ತಲೆಗೆ ರುಮಾಲು, ಕೋಟು ಧರಿಸಿ ಹೆಗಲ ಮೇಲೆ ಜರಿ ಪಟ್ಟಿ ಇರುವ ಶಲ್ಯೆ ಹಾಕುವರು. ಬುಡಬುಡಕೆ ವೃತ್ತಿಯವರು ಸಾಮಾನ್ಯವಾಗಿ ಎಲ್ಲರೂ ಕೋಟು ಧರಿಸುತ್ತಾರೆ. ಯುವಕರು ಆಧುನಿಕ ಉಡುಪುಗಳನ್ನು ಧರಿಸುತ್ತಿದ್ದಾರೆ.

ಹೆಂಗಸರು : ಸೀರೆ ರವಿಕೆ ಉಟ್ಟುಕೊಳ್ಳುವರು. ಮಹಾರಾಷ್ಟ್ರದಲ್ಲಿರುವ ಹೆಣ್ಣು ಮಕ್ಕಳು ಕಚ್ಚೆ ಹಾಕಿದ ಸೀರೆ ಉಡುವರು. ಮತ್ತು ವಯಸ್ಸಾದವರು ಮದ್ಯ ವಯಸ್ಸಿನವರು ಬೆಳ್ಳಿಯ ನಡು ಪಟ್ಟಿ ಹಾಕಿಕೊಳ್ಳುವುದು ಉಂಟು. ಹಣೆಗೆ ಕುಂಕುಮ ಮತ್ತು ಭಂಡಾರ ಹಚ್ಚಿಕೊಳ್ಳುವರು. ಕಿವಿಯಲ್ಲಿ ಹೂಬೆಂಡವಾಲಿ, ಬುಗುಡಿ, ಮೂಗನತ್ತು, ಕೈಗೆ ತೋಳಬಂದಿ, ಬೋರಮಾಳ ಸರ ಧರಿಸುವುದುಂಟು, ಕೂದಲುಗಳಿಂದ ತುರುಬ ಕಟ್ಟಿಕೊಳ್ಳುತ್ತಾರೆ. ಮೈನೆರೆದ ಹೆಣ್ಣು ಕಡ್ಡಾಯವಾಗಿ ಸೀರೆ ಜಂಪರ ತೊಡಬೇಕೆಂಬ ನಿಯಮವಿದೆ. ಋತುಮತಿಯಾಗದ ಹುಡುಗಿಯರು ಫರಕಾರ ದೊಡ್ಡದಾದ ಅಂಗಿಯಂತಿರುವ ಜಂಪರ ತೊಡುತ್ತಾರೆ. ಇತ್ತಿತ್ತಲಾಗಿ ಗೊಂದಲಿಗರು ಆಧುನಿಕ ಜಗತ್ತು ಬಳಸುತ್ತಿರುವ ಎಲ್ಲ ಉಡುಗೆ ತೊಡುಗೆಗಳನ್ನು ಬಳಸುತ್ತಿದ್ದಾರೆ.

ಊಟೋಪಚಾರ : ಗೊಂದಲಿಗರು ಮೂಲತಃ ಮಾಂಸಾಹಾರಿಗಳು, ಅಲೆಮಾರಿಗಳಾದ ಇವರು ಒಂದು ಕಾಲದಲ್ಲಿ ಮೊಲ, ಕಾಡು ಹಂದಿ, ಜಿಂಕೆ ಬೇಟೆಯಾಡುತ್ತಿದ್ದರು. ಈಗ ಬೇಟೆಯಾಡುವುದನ್ನು ನಿಷೇಧಿಸಿದ ಮೇಲೆ ಬೇಟೆಯಾಡುವುದನ್ನು ಕೈ ಬಿಟ್ಟಿದ್ದಾರೆ. ಮೀನು ಹಿಡಿಯಲು ಹೋಗುತ್ತಾರೆ. ಮಾಂಸಾಹಾರವೆಂದರೆ ಇವರಿಗೆ ಪಂಚಪ್ರಾಣ, ಗುಬ್ಬಿ, ಕವಜುಗ, ಮೊಲ, ಕೋಳಿ, ಕುರಿ, ಆಡು ಮುಂತಾದ ಪ್ರಾಣಿಗಳ ಮಾಂಸವನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಬುಡಬುಡಕಿಯವರು ಶಕುನ ಹೇಳಿ ಕುರಿ, ಕೋಳಿ, ಆಡು ಕಾಣಿಕೆಯಾಗಿ ಕೇಳುವುದುಂಟು. ಸಾಮಾನ್ಯವಾಗಿ ಇವರು ಮಾಂಸಾಹಾರಕ್ಕೆ ಬಳಸುವ ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದು ಅಪರೂಪ. ಮಾಂಸದ ಅಡುಗೆಯನ್ನು ಒಂದು ಕಾಲದಲ್ಲಿ ಮಣ್ಣಿನ ಮಡಿಕೆಗಳಲ್ಲಿ ತಯಾರಿಸುತ್ತಿದ್ದರು. ಇಂದು ಪಾತ್ರೆಗಳಲ್ಲಿ ಮಾಡುವುದು ಕಂಡು ಬರುತ್ತದೆ.

ಗೊಂದಲಿಗರು ಭಿಕ್ಷೆಗೆ ಹೋದಾಗ ಸಿದ್ಧಪಡಿಸಿದ ಯಾವ ಆಹಾರವನ್ನು ಸ್ವೀಕರಿಸುವುದಿಲ್ಲ. ಜೋಳ, ಅಕ್ಕಿ, ಭತ್ತ, ಗೋಧಿ, ಗೊಂಜಾಳ, ರಾಗಿ, ಅಲಸಂದಿ, ಹೆಸರು ಮುಂತಾದ ಕಾಳುಗಳನ್ನು ಸ್ವೀಕರಿಸುತ್ತಾರೆ. ಮನೆಯಲ್ಲಿ ಅನ್ನ, ರೊಟ್ಟಿ, ಮುದ್ದೆ, ರಾಗಿ, ಅಂಬಲಿ, ನುಚ್ಚು, ಮುಂತಾದವುಗಳನ್ನು ತಯಾರಿಸುತ್ತಾರೆ. ಹಬ್ಬ ಹುಣ್ಣಿಮೆಗಳಲ್ಲಿ ಪಾಯಸ, ಹೋಳಿಗೆ ಕರಿಗಡಬು ಮಾಡುವುದುಂಟು.

ಗೊಂದಲಿಗರ ಕೌಟುಂಬಿಕ ವ್ಯವಸ್ಥೆ

ಗೊಂದಲಿಗರು ಮಾತೃ ಪ್ರಧಾನ ಕುಟುಂಬದವರು. ಇವರು ಶಕ್ತಿಯ ಆರಾಧಕರು. ಇವರಲ್ಲಿ ಮೊದಲು ತಾಯಿಗೆ ನಂತರ ತಂದೆಗೆ ಪ್ರಾಧಾನ್ಯತೆ ಇರುವುದು ಕಂಡು ಬರುತ್ತಿತ್ತು. ಈಗ ಈ ಸಂಪ್ರದಾಯ ಕಡಿಮೆಯಾಗಿದೆ ಅಂದುಕೊಂಡರೂ ಕುಟುಂಬದ ಎಲ್ಲ ಜವಾಬ್ದಾರಿಯನ್ನು ಇವಳೇ ನಿರ್ವಹಿಸುತ್ತಿರುವುದು ಕಂಡು ಬರುತ್ತದೆ. ಅಲೆಮಾರಿ ಜನಾಂಗವಾದ ಗೊಂದಲಿಗರಲ್ಲಿ ಮದುವೆಯಾದ ಮೇಲೆ ಹೆಂಡತಿ ಸದಾ ಗಂಡ ಸುತ್ತುವಲ್ಲೆಲ್ಲ ಹೋಗಲೇಬೇಕಾಗುತ್ತದೆ. ಹೆಣ್ಣು ಮನೆಯಲ್ಲಿ ಅಡುಗೆ ಮಾಡಿಕೊಂಡು ಹಿರಿಯರ, ಮಕ್ಕಳ ಪಾಲನೆ ಪೋಷಣೆ ಮಾಡುವುದರ ಜೊತೆಗೆ ಕವದಿ ಹೊಲೆಯುವ ಅಥವಾ ಸಣ್ಣ ಪುಟ್ಟ ವ್ಯಾಪಾರ ಮಾಡುವುದನ್ನು ಕಾಣುತ್ತೇವೆ. ಅಲೆಮಾರಿಗಳಾದ ಇವರ ಸಂಸಾರಗಳು ಅವಿಭಕ್ತ ಕುಟುಂಬಗಳೇ ಆಗಿರುತ್ತವೆ. ವರ್ಷಕ್ಕೆ ಎರಡು ಸಲ ನವರಾತ್ರಿ ಮತ್ತು ದೀಪಾವಳಿಗೆ ತಮ್ಮ ಬಂಧು ಬಳಗದವರಿರುವ ಸ್ಥಳಗಳಿಗೆ ಹೋಗಿ ಅಲ್ಲಿಯೇ ಹಬ್ಬವನ್ನು ಆಚರಿಸುತ್ತಾರೆ. ಸುಮಾರು ೨ ಸಾವರಿ ಕುಟುಂಬಗಳ ಕ್ಷೇತ್ರ ಕಾರ್ಯ ಮಾಡಿದರೂ ಇವರಲ್ಲಿ ವಿಭಕ್ತ ಕುಟುಂಬದವರು ಕಂಡು ಬರುವುದು ಅಪರೂಪ. ತಾವು ಸಂಚರಿಸುವ ಅಥವಾ ವಾಸಿಸುವ ಸ್ಥಳದಲ್ಲಿ ತಮ್ಮ ಸಮುದಾಯ ಯಾವುದೇ ಪಂಗಡದವರನ್ನು ಕಂಡರೂ ಇವರಿಗೆ ಬಹಳ ಸಂತೋಷ. ತಮ್ಮ ಸಮುದಾಯದ ಕಲಾ ವೃತ್ತಿಯವರನ್ನು ಬಿಟ್ಟು ಇತರೆ ಯಾವ ಸಮುದಾಯದವರನ್ನು ಇವರು ಹಚ್ಚಿಕೊಳ್ಳುವುದಿಲ್ಲ. ಕಥೋಪಜೀವಿಗಳೂ, ಬುಡಬುಡಕೆಯವರು, ಹಸ್ತಸಾಮುದ್ರಿಕೆ, ಗಿಳಿಶಾಸ್ತ್ರ, ಅರೆ ಪಂಚಾಂಗ ಹೀಗೆ ಎಲ್ಲರೂ ಗುಂಪು ಗುಂಪಾಗಿ ಸಂಚರಿಸುವುದು ಕಂಡು ಬರುತ್ತದೆ. ಗ್ರಾಮ, ಪಟ್ಟಣದ, ವಿಶಾಲವಾದ ಸ್ಥಳದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಊರುಗಳನ್ನು ಆಯ್ಕೆ ಮಾಡಿಕೊಂಡು ಭಿಕ್ಷೆ ಬೇಡುವುದು ಕಂಡು ಬರುತ್ತದೆ.

ಗೊಂದಲಿಗರಲ್ಲಿ ಸುಮಾರು ೫೦ ರಿಂದ ೬೦ ರಷ್ಟು ಜನ ಗಂಡಸರು ಸೇಂದಿ, ಸರಾಯಿ ಕುಡಿಯುವ ಚಟವನ್ನು ಅಂಟಿಸಿಕೊಂಡಿದ್ದಾರೆ. ಎಲೆ, ಅಡಿಕೆ ತಂಬಾಕು ತಿನ್ನುವ ಗಂಡಸರು ಹೆಂಗಸರು ಸಾಮಾನ್ಯವಾಗಿ ಕಂಡು ಬರುತ್ತಾರೆ. ಇಂತಹ ಗಂಡಸರನ್ನು ನಿಯಂತ್ರಿಸಲು ಹೆಂಗಸರು ಪ್ರತಿದಿನವೂ ಜಗಳವಾಡುವುದುಂಟು. ಪ್ರತಿನಿತ್ಯ ಜಗಳವಾದರೂ ವಿಚ್ಫೇದನದವರೆಗೆ ಅಥವಾ ಗಂಡ ಹೆಂಡಿರು ಖಾಯಂ ಆಗಿ ಬೇರೆ ಬೇರೆಯಾಗಿ ಉಳಿಯುವ ಸಂದರ್ಭಗಳು ತೀರ ಕಡಿಮೆ. ಇದಕ್ಕೆಲ್ಲ ಇವರಲ್ಲಿರುವ ನ್ಯಾಯ ಪದ್ಧತಿಯೇ ಕಾರಣ. ಗೊಂದಲಿಗರಲ್ಲಿಯ ಸ್ತ್ರೀಯರು ಬಹಳ ಸಹನಶೀಲರು, ವಿಶಾಲವಾದ ಮನಸ್ಸುಳ್ಳವರು. ಗಂಡನ ಜೊತೆಗೆ ಎಷ್ಟೇ ತಂಟೆ ತಕಾರಾರು ಮಾಡಿದರೂ ಅದನ್ನು ಕೆಲವೇ ಗಂಟೆಗಳಲ್ಲಿ ಮರೆತು ಬಿಡುವ ಸ್ವಭಾವದವರು.

ಗೊಂದಲಿಗರು ಶಕ್ತಿ ದೇವತೆಗಳ ಜೊತೆಗೆ ಪಾಂಡುರಂಗನನ್ನು ತಮ್ಮ ಆರಾಧ್ಯ ದೈವವಾಗಿ ಪೂಜಿಸುತ್ತಿದ್ದಾರೆ. ಪ್ರತಿ ವರ್ಷ ‘ದಿಂಡಿಯು’ ಮೂಲಕ ಪಂಢರಾಪುರಕ್ಕೆ ಹೋಗಿ ವಿಠ್ಠಲನ ದರ್ಶನ ಪಡೆಯುವುದುಂಟು. ತುಳಸಿಮಾಲೆಯನ್ನು ಧರಿಸಿದವರು ಮಾಂಸ ಮದ್ಯ ಸೇವಿಸುವಂತಿಲ್ಲ. ಅನ್ಯಾಯ, ವಂಚನೆ, ಮೋಸ, ಮಾಡಬಾರದೆಂಬ ನಿಯಮವೂ ಇದೆ. ಇದಕ್ಕೆ ತಪ್ಪಿದರೆ ಸಮಾಜದ ಮುಖಂಡರು ದಂಡ ಮತ್ತು ಬಹಿಷ್ಕಾರ ಹಾಕುತ್ತಾರೆ. ಕೆಲವರು ಅಯ್ಯಪ್ಪನ ಭಕ್ತರಾಗಿರುವುದು ಕಂಡುಬರುತ್ತದೆ. ಈ ಧಾರ್ಮಿಕ ಸಂಪ್ರದಾಯದಿಂದ ಗೊಂದಲಿಗರಲ್ಲಿ ಮಾಂಸಹಾರ ಮತ್ತು ಹೆಂಡ ಮತ್ತಿತ್ತರ ದುಶ್ಚಟಗಳ ಸಂಖೆಯ ಕಡಿಮೆಯಾಗುತ್ತದೆ.

ಒಂದು ಕಾಲಕ್ಕೆ ಗೊಂದಲಿಗರ ಮದುವೆಗಳಲ್ಲಿ ಊಟಕ್ಕೆ ಮಾಂಸಾಹಾರವೇ ಆಗಬೇಕಾಗಿತ್ತು. ಇಂದು ಅವರು ತಮ್ಮ ಮದುವೆಗಳಿಗೆ ಇತರೆ ಸಮುದಾಯದವರನ್ನು ಆಹ್ವಾನಿಸುತ್ತಿರುವುದರಿಂದ ಸಸ್ಯಾಹಾರ ಸಿದ್ಧಪಡಿಸುತ್ತಿರುವ ಚಿತ್ರಣ ಸಾಮಾನ್ಯವಾಗಿ ಎಲ್ಲ ಕಡೆ ಕಂಡು ಬರುತ್ತಿದೆ. ಸವದತ್ತಿ ಎಲ್ಲಮ್ಮನ ಭಕ್ತರಾಗಿ ಗೊಂದಲಿಗರು ಎಲ್ಲಮ್ಮನಿಗೆ ಪ್ರಿಯವಾದ ಹೂರಣದ ಅಡುಗೆಯನ್ನೇ ಮಾಡಿ ನೈವೇದ್ಯ ಮಾಡುವುದು ಕಂಡು ಬರುತ್ತಿದೆ.