೩.೨ ಉಪಪಂಗಡಗಳು

೧೭ನೆಯ ಶತಮಾನದ ಆರಂಭದ ಕಾಲದಲ್ಲಿ ಮಾತೃದೇವತೆಯಾದ ಅಂಬಾಭವಾನಿಯನ್ನು ಡಕ್ಕನೆ ಪ್ರದೇಶದ ಜನ ಅತ್ಯಂತ ಶ್ರದ್ಧೆ ಭಕ್ತಿಯಿಂದ ಪೂಜಿಸತೊಡಗಿದರು. ಈ ಮಾತೃದೇವತೆ ಈ ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ದೇವತೆಯಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಪೂಜೆಗೊಳ್ಳತೊಡಗಿದಳು. ಈ ಸಂದರ್ಭದಲ್ಲಿ ಮಾತೃ ದೇವತೆಯ ಆರಾಧಕರಾದ ಗೊಂದಲಿಗರ ಸ್ಥಾನಮಾನಗಳು ಅತ್ಯಂತ ಉನ್ನತ ಸ್ಥಿತಿಗೇರಿದವು. ಗೊಂದಲಿಗರ ಗೊಂಧಳ ಮೇಳ, ಅವರ ಹಾಡು, ಕಥೆ, ಪೂಜಾ ವಿಧಿ ವಿಧಾನಗಳನ್ನು ಇಲ್ಲಿಯ ಜನ ಭಕ್ತಿಯಿಂದ ಅಲಿಸುತ್ತಿದ್ದರು. ಈ ಶತಮಾನ ಆರಂಭದ ಕಾಲದಲ್ಲಿ ಮುಸಲ್ಮಾನರ ದಾಳಿಯಿಂದ ಜನ ತತ್ತರಿಸಿ ಹೋಗಿದ್ದರು. ಶಾಂತಿ ನೆಮ್ಮದಿ ಎಲ್ಲವನ್ನು ಕಳೆದುಕೊಂಡು ತಮ್ಮನ್ನು ರಕ್ಷಿಸುವರು ಯಾರು ಎಂದು ಚಿಂತಿಸುತ್ತಿದ್ದರು. ಆ ಸಂದರ್ಭದಲ್ಲಿ ಅಂಬಾಭವಾನಿ ಅವರಿಗೆ ದಿವ್ಯ ಚೇತನವಾಗಿ ಕಾಣಿಸಿಕೊಳ್ಳುತ್ತಾಳೆ. ಪ್ರಾರ್ಥನೆಗೆ ಗಂಡು ದೇವರಿಗಿಂತ ಹೆಣ್ಣು ದೇವತೆ ಬೇಗನೆ ಒಲಿಯುತ್ತಾಳೆಂಬ ನಂಬಿಕೆಯೂ ಜನರಲ್ಲಿ ಗಾಢವಾಗಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ಈ ಪ್ರದೇಶದ ಜನ ಅಂಬಾಭವಾನಿಯನ್ನು ಮೊರೆ ಹೋಗುತ್ತಾರೆ. ಈ ದೇವತೆ ಅನೇಕರ ಕನಸಿನಲ್ಲಿ ಕಂಡು ಅವರ ಬೇಡಿಕೆಗಳನ್ನು ಈಡೇರಿಸುತ್ತಾಳೆ. ಈ ದೇವಿ ಗೊಂದಲಿಗರಿಗೆ ಎಲ್ಲಕ್ಕಿಂತ ಹೆಚ್ಚಿನದನ್ನು ಕರುಣಿಸುತ್ತಾಳೆ ಗೊಂದಲಿಗರು ಗೊಂದಲ ನೃತ್ಯದಲ್ಲಿ ತೊಡಗಿಕೊಂಡಾಗ ದೇವಿ ಅವರಲ್ಲೊಬ್ಬರ ಮೈಯಲ್ಲಿ ಆಗಮಿಸಿ ಭೂತ ಭವಿಷ್ಯಗಳ ಘಟನೆಗಳನ್ನು ಹೇಳತೊಡಗುತ್ತಾಳೆ ಮತ್ತು ಅವರ ಮೂಲಕ ಅನೇಕ ಪವಾಡಗಳನ್ನು ಮಾಡಿಸುತ್ತಾಳೆ.

ಒಂದು ಕಾಲದಲ್ಲಿ ಉತ್ತಮ ಸ್ಥಾನಕ್ಕೇರಿದ ಗೊಂದಲಿಗರು ಜಾತಿ ಜಾತಿಯೊಳಗಿನ ಅನೇಕ ಕಾರಣಗಳಿಂದ ವೃತ್ತಿಯ ಪೈಪೋಟಿಯಿಂದ, ಸಾಮಾಜಿಕ, ಆರ್ಥಿಕ ಸ್ಥಾನಮಾನಗಳಿಂದ ಭಿನ್ನಾಭಿಪ್ರಾಯಗಳು ಉಂಟಾಗಿ ಗೊಂದಲಿಗರಲ್ಲಿ ಅನೇಕ ಉಪಪಂಗಡಗಳಾದವು. ವಿವಿಧ ವೃತ್ತಿಗಳನ್ನು ಅನುಸರಿಸಿಕೊಂಡ ಈ ಉಪಪಂಗಡಗಳು ಆಚಾರ ವಿಚಾರ, ಆಹಾರ ಉಡುಗೆ ತೊಡುಗೆಗಳಲ್ಲಿ ಭಿನ್ನತೆ ಇರುವುದು ಕಂಡು ಬರುತ್ತದೆ.

ಗೊಂದಲಿಗರಲ್ಲಿಯ ಉಪ ಪಂಗಡಗಳು

೧. ಗೊಂದಲ ವೃತ್ತಿಗಾಯಕರು
ಅ) ಕಥೆಗಾರರು (ಕಥೋಪಜೀವಿಗಳು) ಆ) ಬೀದಿಹಾಡುಗಾರರು

೨. ಭೂತೇಯರು (ಎಣ್ಣೆ ಜೋಗಿಗಳು)

೩. ಸಿಂಗದವರು

೪. ಬುಡಬುಡಕೆಯವರು

೫. ವಾಸುದೇವರು

೬. ಜ್ಯೋತಿಷಿಗಳು
ಅ) ಹಸ್ತ ಸಾಮುದ್ರಿಕ ಜ್ಯೋತಿಷಿಗಳು ಆ) ಗಿಳಿಶಾಸ್ತ್ರ ಜ್ಯೋತಿಷಿಗಳು

೭. ಭಾಟರು

೮. ಚಿತ್ರಪಟದವರು

ಈ ವೃತ್ತಿಯಿಂದ ಉಪಪಂಗಡಗಳು ಬೇರೆ ಬೇರೆಯಾಗಿದ್ದರೂ ವೈವಾಹಿಕ ಸಂಬಂಧವನ್ನು ಬೆಳೆಸುತ್ತಲೇ ಬಂದಿವೆ. ಕೆಲವರಲ್ಲಿ ನಾವು ಹೆಚ್ಚಿನವರು ಉಳಿದವರು ಕಡಿಮೆ ದರ್ಜೆಯವರು ಎಂದು ಹೇಳುವುದುಂಟು. ಇಂದು ರಾಜ್ಯ ಮಟ್ಟದಲ್ಲಿ ಗೊಂದಲಿಗರ ಸಮಾವೇಶಗಳು ನಡೆಯುತ್ತಿರುವುದರಿಂದ ಸರ್ಕಾರದ ಮುಂದೆ ಶಕ್ತಿ ಪ್ರದರ್ಶನ ನೀಡುವ ಸಂದರ್ಭದಲ್ಲಿ ವೃತ್ತಿಯ ಮೂಲಕ ಭಿನ್ನ ಭಿನ್ನವಾಗಿ ಗುರುತಿಸಿಕೊಂಡಿರುವ ನಾವೆಲ್ಲ ಒಂದೇ ಎಂಬ ಭಾವನೆ ಒಡಮೂಡುತ್ತಿದೆ.

೩.೩ ಬೆಡಗುಗಳು

‘ಗೊಂದಲ ಹಾಕುವುದು ಇದು ಅಂಬಾಭವಾನಿ ದೇವತೆಯ ಹೆಸರಿನಲ್ಲಿ ಇಡೀ ರಾತ್ರಿ ನಡೆಯುವ ಒಂದು ಧಾರ್ಮಿಕ ಪೂಜಾ ವಿಧಾನ. ಇಲ್ಲಿ ದೇವಿಯ ಹಾಗೂ ದೇವ ದೇವತೆಗಳ ಕಥೆ ಹೇಳುತ್ತ, ಸ್ತುತಿ ಮಾಡುತ್ತ, ಕುಣಿಯುವ ಆಚರಣೆ. ಒಂದು ಕಾಲಕ್ಕೆ ಈ ಗೊಂದಲವನ್ನು ಯಾವ ಜಾತಿಯವರಾದರೂ ಹಾಕಬಹುದಾಗಿತ್ತು. ಇಂದು ಈ ಆಚರಣೆ ಒಂದು ಸೀಮಿತ ಸಮುದಾಯಕ್ಕೆ ಮಾತ್ರ ಮೀಸಲಾಗಿದೆ. ಗೊಂದಲ ಎಂಬ ಪೂಜಾ ವಿಧಾನವನ್ನು ನಡೆಸಿಕೊಡುವವರಿಗೆಲ್ಲ ಗೊಂದಲಿಗರು ಎಂಬ ಹಣೆಪಟ್ಟಿ ಬಂದಿತು. ಕಾಲನಂತರ ಒಂದು ವರ್ಗ ಗೊಂದಲ ಹಾಕುವುದನ್ನೇ ತನ್ನ ಪ್ರಮುಖ ವೃತ್ತಿಯನ್ನಾಗಿ ಮಾಡಿಕೊಂಡಿತು. ಈ ವರ್ಗವನ್ನು ಗೊಂದಲಿಗರು ಎಂಬ ಪ್ರತ್ಯೇಕ ಜಾತಿಯಾಗಿ ಮಾರ್ಪಟ್ಟಿತು.

೧. ಗೊಂದಲಿಗರನ್ನು ಅಧ್ಯಯನ ಮಾಡಿದ ಡಾ. ನಿಂಗಣ್ಣ ಸಣ್ಣಕ್ಕಿ ಅವರು ಅವರ ಕುಲ ಬಳಿಗಳನ್ನು ಕುರಿತಾದ ಅಭಿಪ್ರಾಯಗಳನ್ನು ಹೀಗೆ ವ್ಯಕ್ತಪಡಿಸಿದ್ದಾರೆ. ‘ಗೊಂದಲಿಗರಲ್ಲಿಯೂ ಇತರರಂತೆ ಬೆಡಗುಗಳಿದ್ದವು ಮತ್ತು ಈಗಲೂ ಇವಎ. ಅವುಗಳನ್ನು ಮರಾಠಿಯಲ್ಲಿ ಹೇಳುತ್ತಿದ್ದಾರೆ. ಕರ್ನಾಟಕ, ಚಾಲುಕ್ಯ, ಕಲಚೂರಿ, ಕದಂಬ ಇವು ವಂಶಾವಳಿಯಲ್ಲಿ ಇವೆ. ಆದುದರಿಂದ ಗೊಂದಲಿಗರು ಮೂಲದಲ್ಲಿ ಕನ್ನಡ ನೆಲದಲ್ಲಿಯೇ ವಾಸವಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶಗಳಲ್ಲಿ ವಾಸವಾಗಿರುವ ಮತ್ತು ಸಂಚಾರಿಗಳಾಗಿರುವ ಗೊಂದಲ ಸಮಾಜದ ಹಿರಿಯರನ್ನು ‘ಬೆಡಗಿ’ನ ಬಗೆಗೆ ಕೇಳಿದಾಗ, ಮೂಲದಲ್ಲಿ ತಮಗೆ ಬೆಡಗುಗಳಿದ್ದವು. ಅವು ಭಿನ್ನ ಬೆಡಗುಗಳಾದರೆ, ನಮಗೆ ರಕ್ತ ಸಂಬಂಧವುಂಟಾಗುತ್ತಿದ್ದವು. ಆದರೆ ಈಗ ತಾವು (ಗೊಂದಲಿಗರು) ಕೆಲವರು (ಕುಳಿ) ಮತ್ತು ಕೆಲವರು ‘ಗೋತ್ರ’ದ ಮನೆತನದವರೆಂದು ಹೇಳಿಕೊಳ್ಳುತ್ತಿದ್ದಾರೆ.

ಈಗ ‘ಬೆಡಗು’ ಹೊಂದಿದ ಮನೆತನದ ಗೊಂದಲಿಗರೂ ಇದ್ದಾರೆ. ಗೊಂದಲಿಗರಿಗೆ ಮೂಲದಲ್ಲಿ ಒಂದು ನೂರು ಎಂಟು ಬೆಡಗುಗಳಿದ್ದವು. ಕೆಲವು ಹಿರಿಯರಿಗೆ ಇನ್ನು ಅವುಗಳ ಬಗ್ಗೆ ‘ಗೊತ್ತುಂಟು’ ಎಂದು ತಿಳಿಸುತ್ತಾ ಅವುಗಳ ವಿವರಗಳನ್ನು ಹೀಗೆ ನೀಡಿದ್ದಾರೆ.

೧. ಕುಳಿ ಚಾಲುಕ್ಯ (ಚಾಲುಕೆ)

(ಸೂರ್ಯ, ಸೋಮ, ಬ್ರಹ್ಮಶೇಷ, ವಂಶಿಯಾಂಚಿತ ಉತ್ಪತ್ತಿ ವಂಶಾವಳಿ ಚಾನಂದ ಕುಳಿ ಹಾ ಗ್ರಂಥ ಬಾಳಾಜಿ ನಾಫೂಜಿ ಗಾವಂಡ ತುಕಾರಾಮ ಪಂಢರಿಶೇಟ ಯಾನಿ ಮುಂಬಯಿ ಹಾ ಶಕೆ ೧೮೫೫ ಕ್ರಿ.ಶ. ೧೯೨೩)

ತಕ್ತಗಾದಿ – ಬಾದಾಮಿ, ದುಸರಿಗಾದಿ – ಕಲ್ಯಾಣ

೧. ಢವಳ ಸಿಂಹಾಸನ, ಢವಳ ನಿಶಾನಾ, ಢವಳ ಛತ್ರ ಢವಳಾವಾರು, ಧ್ವಜಸ್ಥಂಬ, ಗಣಪತಿ ಕುಳ ದೈವತ ಖಂಡೇರಾವ್, ಎಂಬಿರ ಅಥವಾ ಶಂಖಗುರು ದಾಲಭ್ಯ ಋಷಿ, ಗೋತ್ರ ಚಾಲುಕ್ಯ, ಗಾಯತ್ರಿ ಮಂತ್ರ, ಕುಳೆ ನೀಲವರ್ಣ ಯಾಣಿ ಪ್ರಮಾಣೆ ಚಾಲುಕ್ಯ ಕುಳಿ ವಿವರವನ್ನು ಶ್ರೀ ಗ್ಯಾನಬಾ ಚಿನ್ನಪ್ಪ ಪಾಚಂಗೆ ಹುಬ್ಬಳ್ಳಿ ಇವರಲ್ಲಿರು ಕುಳಿ (ಬೆಡಗು)ಗಳ ವಿವರ

೨. ಕುಳಿ (ಕುಳೆ) ಕಲಚೂರಿ (ಕಚರೆ) ಕಲಚೂರಿ ಮನೆತನ ‘ಕಲ್ಯಾಣಿ’

೩. ಕುಳಿ (ಬೆಡಗು) ಕದಮ (ಕದಂಬರು) ಗಾದೆ ಗೋವೆ, ಧ್ವಜಸ್ಥಂಭ ಸೂರ್ಯ

೪. ನಿಕಮ ‘ಸಗರ ಕರ್ನಾಟಕ’ ಧ್ವಜಸ್ಥಂಬ ಹನುಮಾನ (ಹನುಮನು ಹುಟ್ಟಿದ ನಾಡು) ಕುಳಿ ದೈವತ ಜೋಗೇಶ್ವರ

೫. ಕುಳಿ ತೋವರ ತಕ್ತಗಾದೆ ಕರ್ನಾಟಕ ಧ್ವಜಸ್ಥಂಬ ಹನುಮಾನ (ಹನುಮನು ಉದಸಿದ ಭಾಗ)

೬. ಕುಳಿ ಭೋಗಲೆ ತಕ್ತಗಾದೆ ಬಾಗಲಕೋಟೆ ಭಗವಾ ನಿಶಾನಾ ಕುಳಿದೈವ ಮಹಾದೇವ

೭. ಕುಳಿ ಮ್ಹಾಡಿಕ: ತಕ್ತ ಗಾದೆ ಬಾಗಲಕೋಟೆ ಕುಳೀದೇವ ‘ರುದ್ರ’

೮. ಕುಳಿ ಚವ್ಹಾಣ ತಕ್ತಗಾದೆ, ವಿಜಾಪುರ ಕುಳಿ ಲಾಡ ವಿಜಾಪುರ

೯. ಕುಳಿ ವಾಮ ನಾಯಕ (ವೈನಯಕ) ಮಹಾಕುಳೆ ತಕ್ತಗಾದೆ ಜಮಖಂಡಿ ಮತ್ತು ಬೆಳಗಾವಿ

ಕಥಾವಟೆ ಸೊಲ್ಲಾಪೂರ

೧೦. ಕುಳಿ ಯಾದವ ಮುಧೋಳ ಮತ್ತು ಜಮಖಂಡಿ ಸಂಸ್ಥಾನ

೧೧. ಕುಳಿ ಸಾಬಳೆ ಜಮಖಂಡಿ ವ ತೋರಗಲ್ಲ

೧೨. ಕುಳಿ ಧರ್ಮರಾಜ ತೋರಗಲ್ಲ

೧೩. ಕುಳಿ ಸುರ್ವೆ ನಾಯಕ ಜಿಲ್ಲೆ ಬೆಳಗಾವಿ

೧೪. ಕುಳಿ ಕಾಪಡೆ ಬೆಳಗಾವಿ ಜಿಲ್ಲೆ

ಗೊಂದಲಿಗರು ಪ್ರಾಚೀನ ಕನ್ನಡದ ನೆಲದವರೆನ್ನುವುದಕ್ಕೆ ‘ಎ’ ಕಾರಾಂತ ಪದಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ.

ಮನೆತನದ ಹೆಸರುಗಳು ಕಂಬಳಿ=ಕಂಬಳೆ, ಸುಗತಿ=ಸುಗತೆ, ಬಿಸಿ-ಬಿಸೆ (ಭಿಸೆ) ಕುಲ-ಕುಲಿ (ಕುಳಿ), ಸುಂಬಳಿ=ಸುಂಬಳಿ, ಗೋಕಾವಿ=ಗೋಕಾವೆ ಇತ್ಯಾದಿ. ಕುಳಿಗಳ ಜೊತೆ ವಿವರಗೊಂಡಿರುವ ಗೊಂದಲಿಗರ ಕೆಲವು ಪಂಥ ಗೊಂದಲಿಗರು ಸಂಚರಿಸಲು ಹಂಚಿಕೊಂಡಿರುವ ಹಾಗೂ ಕಲಾ ಪ್ರದರ್ಶನದ ಕನ್ನಡ ನೆಲದ ಪ್ರದೇಶಗಳು ಕೆಳಗಿನಂತಿವೆ.

೧. ದೇಶಕ

೧. ಬಂಕಾಪೂರ ವಿಭಾಗ ೨. ೧೬ ಜನ ಹಳಬರು

೨. ಕಲ್ಯಾಣ ಬೀದರ, ಗುಲಬರ್ಗಾ ಜಿಲ್ಲೆಗಳು

೩. ಅಳ್ಳೋಳ-ಕಳ್ಳೋಳ, ಸೊಲ್ಲಾಪೂರ ವಿಭಾಗ

೪. ಗುಳ್ಳೊಳ – ಗುಳಗುಳ

೫. ಕಾನೂಲಿ

೬. ತೊರಸಾಲ ದಾವಣಗೆರೆಯಿಂದ ಮೈಸೂರು ಭಾಗ

ಪೂರ್ವದಲ್ಲಿ ಒಂದನೂರಾ ಎಂಟು ಬೆಡಗುಗಳಿದ್ದವು. ಈಗ ಅವುಗಳಲ್ಲಿ ನವನವ (೬೨) ಕುಳಿ ‘ಒಪ್ಪಿಗೆಯಾಗಿವೆ’ ಎಂದು ಡಾ ನಿಂಗಣ್ಣ ಸಣ್ಣಕ್ಕಿ ಅವರು ತಮ್ಮ ಗೊಂದಲಿಗರ ಸಂಸ್ಕೃತಿ ಎಂಬ ಪುಸ್ತಕದಲ್ಲಿ ತಿಳಿಸಿದ್ದಾರೆ.

೨. ಗೊಂದಲಿಗರ ಅಧ್ಯಯನ ಮಾಡಿದ ಡಾ. ಕ್ಯಾತನಹಳ್ಳಿ ರಾಮಣ್ಣ ಅವರು ಗೊಂದಲಿಗರ ಜಾತಿ ಮತ್ತು ಗೋತ್ರಗಳನ್ನು ಕುರಿತು ಹೀಗೆ ವ್ಯಕ್ತಪಡಿಸಿದ್ದಾರೆ. ‘ಒಂದು ಕಾಲಕ್ಕೆ ಯಾವುದೇ ಜಾತಿಯವರಾದರೂ ಅವರು ದೀಕ್ಷೆ ಪಡೆದು ಗೊಂದಲಿಗರಾಗುವ ಅವಕಾಶವಿತ್ತು. ಅದು ಶೀಘ್ರಗತಿಯಲ್ಲಿ ಅಂಥವರ ಸಂಖ್ಯೆ ಬೆಳೆದು, ಗೊಂದಲ ನೃತ್ಯದ ಕಾರ್ಯಕ್ರಮಗಳು ಬಹುಬೇಗ ಜನಪ್ರಿಯವಾಗಿ, ಗೊಂದಲಿಗ ದೀಕ್ಷೆ ಪಡೆದವರನ್ನೆಲ್ಲ ಅವರವರ ಮೂಲ ಜಾತಿಯ ಪ್ರಸ್ತಾಪವೆತ್ತದೆ ಗೊಂದಲಿಗರೆಂದೇ ಗುರುತಿಸುತ್ತ ಬರಲಾಯಿತು. ಜನಪ್ರಿಯಂತೆ ಹೆಚ್ಚಿದಂತೆಲ್ಲ ಅದರಿಂದ ಜೀವನೋಪಾಯದ ಮಾರ್ಗವೂ ಸುಲಭವೆನ್ನಿಸತೊಡಗಿತು. ಹೀಗಾಗಿ, ದೀಕ್ಷೆ ಪಡೆದ ಬಹುಪಾಲು ಮಂದಿಯೆಲ್ಲ ಗೊಂದಲವನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡರು. ಅನಂತರ ಗೊಂದಲಿಗರದೇ ಒಂದು ಪ್ರತ್ಯೇಕ ಜಾತಿಯೆಂಬಂತೆ ಪರಿಗಣಿಸಲ್ಪಡಲು ಮೊದಲಾದಾಗ ಹೊಸ ಹೊಸ ಮಂದಿ ಬಂದು ಸೇರುವುದನ್ನು ಆ ಸಮಾಜ ಪ್ರತಿಭಟಿಸಿತು. ಗೊಂದಲ ಹಾಕುವ ವಿಧಿ, ಅಷ್ಟು ಹೊತ್ತಿಗಾಗಲೇ ಜಾತಿಯೆಂದು ಅಂಬಾಭವಾನಿಯ ಭಕ್ತರಿಗೆಲ್ಲ ಗೊಂದಲದ ದೀಕ್ಷೆ ಕೊಡುವ ನಿರ್ದಿಷ್ಟ ವಿಧಿ ಸಹಜವಾಗಿಯೇ ತನ್ನ ವ್ಯಾಪ್ತಿಯನ್ನು ಸಂಕುಚಿತಗೊಳಿಸಿಕೊಂಡು ಸೊರಗಿ ಕೇವಲ ಜಾತಿಯೆಂಬ ಆವರಣದೊಳಗಿನ ಮೂಲೆ ಸೇರಿಕೊಂಡಿತು ಪರಿಣಾಮವಾಗಿ ಹೊಸ ಸೇರ್ಪಡೆಗಳು ಸಂಪೂರ್ಣವಾಗಿ ಇಲ್ಲದಂತಾದವು. (ಅದೇ ಪು.೧೧)

ಈ ಗೊಂದಲಿಗರ ಸಮೂಹದ ಜಾತಿಯೊಳಗೆ ಬೇರೆ ಬೇರೆ ಕಾರಣಗಳಿಗಾಗಿ ಬಹುಶಃ ಸಾಮಾಜಿಕ, ಆರ್ಥಿಕ ಸ್ಥಾನಮಾನಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ತಲೆದೋರಿ, ಗೊಂದಲಿಗ ಜಾತಿ ಉಪ ವಿಭಾಗಗಳಾಗಿ ಒಡೆಯುತ್ತ ಆ ಮೂಲಕ ಒಂದು ರೀತಿಯಿಂದ ವ್ಯಾಪ್ತಿಯನ್ನು ವಿಸ್ತಾರಗೊಳಿಸುತ್ತ ಸಾಗಿತು. ನಡೆ ನುಡಿ, ಆಚಾರ ವಿಚಾರ, ಆಹಾರ, ಉಡುಗೆ ತೊಡುಗೆಗಳಲ್ಲಿ ಭಿನ್ನತೆಯನ್ನು ಗಳಿಸಿಕೊಳ್ಳುತ್ತ ನಡೆಯಿತು.

‘ಪ್ರಾದೇಶಿಕ, ಆರ್ಥಿಕ, ಸಾಮಾಜಿಕ ಇತ್ಯಾದಿ ಕಾರಣಗಳಿಂದ ಗೊಂದಲಿಗ ಜಾತಿ ಅನೇಕ ವಿಭಾಗಗಳನ್ನೂ ಉಪವಿಭಾಗಗಳನ್ನೂ ಪಡೆದುಕೊಳ್ಳುತ್ತ ಬಂದಿತು. ಸ್ವಗೋತ್ರ ಭಿನ್ನ ಗೋತ್ರ ಎಂಬ ಎರಡು ಮುಖ್ಯ ವಿಭಾಗಗಳಡಿಯಲ್ಲಿ ಅವನ್ನೆಲ್ಲ ಹೀಗೆ ವಿಂಗಡಿಸಲಾಗಿದೆ.

ಸ್ವಗೋತ್ರದ ಎಂಟು ವಿಭಾಗಗಳಲ್ಲಿ ಗುರುತಿಸಲ್ಪಟ್ಟಿದೆ.

೧. ಬ್ರಾಹ್ಮಣ, ೨. ಧನಗಾರ ೩. ಮರಾಠಾ ೪. ಕುಂಬಾರ ೫. ಕದಮರಾಯ್ ೬. ರೇಣುಕ್‌ರಾಯ್ ಅಥವಾ ಪಿಚಾತಿ ೭. ಮಾಲಿ ೮. ಅಕರಮಾಸೆ

ಮೇಲೆ ಸೂಚಿಸಿರುವ ಪಂಗಡಗಳಲ್ಲಿ ಪರಸ್ಪರ ತಿನ್ನುವಿಕೆಯಾಗಲೀ, ಕೊಡುಕೊಳ್ಳುವಿಕೆಯಾಗಲೀ ಇಲ್ಲ. ಅಕರಮಾಸೆ ಅವರನ್ನು ಬಿಟ್ಟರೆ ಉಳಿದ ಎಲ್ಲ ೭ ಪಂಗಡದ ಜಾತಿಯವರು ಗೊಂದಲವನ್ನು ಆಚರಿಸುತ್ತಾರೆ.

ಗೊಂದಲ ಆಚರಣೆಯಲ್ಲಿ ಇತರೆ ಗೊಂದಲಿಗರು ಬಳಸುವ ‘ದೀವಟಿಗೆ’ಗೆ ಸಂವಾದಿಯಾಗಿ, ಬ್ರಾಹ್ಮಣ ಗೊಂದಲಿಗರು ಹೊತ್ತಿಸಿಟ್ಟ ಉರಿಯಬಲ್ಲ ವಸ್ತುಗಳಿಂದೊಡಗೂಡಿದ ‘ಭಡೆನ್’ ಎಂದು ಕರೆಯಲಾಗುವ ಮಣ್ಣಿನ ಪಾತ್ರೆಯ ಕೆಳ ಅರ್ಧ ಭಾಗದ ವಸ್ತುವನ್ನು ಬಳಸುತ್ತಾರೆ. ಕದಮ್‌ರಾಯ್ ಮತ್ತು ರೇಣುಕಾರಾಯ್ ಗೊಂದಲಿಗರು ತಾವು ಮಾತ್ರ ವಂಶಪಾರಂಪರ‍್ಯ ಗೊಂದಲಿಗರೆಂದು ಇತರ ಪಂಗಡಗಳೆಲ್ಲ ಇತರೆ ಜಾತಿಗಳಿಗೆ ಸೇರಿದ ಕೇವಲ ವಾದ್ಯಗಾರರೆಂದೂ ಹೇಳಿಕೊಳ್ಳುತ್ತಾರೆ. ಸಾಮಾಜಿಕವಾಗಿ ಕದಮ್‌ರಾಯ್‌ಗಳು ರೇಣುಕರಾಯ್‌ಗಳಿಗಿಂತ ಮೇಲ್ಪಟ್ಟವರು.

ಗೊಂದಲಿಗರಲ್ಲಿನ ಭಿನ್ನ ಗೋತ್ರದ ಉಪವಿಭಾಗಗಳು ಉಪನಾಮಗಳಿಂದ ಗುರುತು ಹಿಡಿಯಲ್ಪಡುತ್ತವೆ. ೧. ಕುಂಬಾರ್ ಗೊಂದಲಿಗರ ಉಪನಾಮಗಳು, ಬಡ್ಗೆ, ಧೆಂಬೆ, ಗಂಗಾವನ್, ಗರುಡ್, ಜುಗಲ್, ಜಾದವ್, ಪಂಚಾಂಗಿ, ಫೈಟ್, ವಾಯಿದ್ ಮತ್ತು ವರಾದೆ.

ರೇಣುಕ್‌ರಾಯ್ ಮತ್ತು ಕದಮ್‌ರಾಯ್ ಗೊಂದಲಿಗರ ಉಪನಾಮಗಳು

ಬೆಕ್ರೆ, ಭಂಡಾರೆ, ಧಮಾಲ್, ದುಂಗು, ಗಾಯಿಕ್ ವಾಡ್, ಘಾಡೇಕರ್, ಗುರಾಡ್ಕರ್, ಜಾಧವ್, ಶಿಂದೆ, ಜಗ್ತಾಪ್, ಕಾಳೆ, ಕೊಲ್ಹಾತಕರ್, ಮರಾಠೆ, ಮಾಹೆದ್ಕರ್ ಪಲಸ್ಕರ್, ಠೆಂಕೆ, ಸುಪಲಕರ್, ತಾರ್ಟೆ, ಫೈಟ್, ತಿಫ್ಕೆ ಮತ್ತು ಉಬ್ಲೆ ಧಾರವಾಡದಲ್ಲಿ ಅವರು ಈ ಉಪನಾಮಗಳನ್ನು ಹೊಂದಿದ್ದಾರೆ. ಗರೊಡ್, ಗುರ‍್ಕೆ, ಪಂಚಾಂಗಿ ಮತ್ತು ವುಗ್ಡೆ

ಒಂದೇ ಬಗೆಯ ಉಪನಾಮವುಳ್ಳವರೂ ಪರಸ್ಪರ ಮದುವೆಯಾಗಲಾರರು, ‘ದೇವಕ್’ರು ಒಂದೇ ಬಗೆಯಾಗಿದ್ದರೂ ಅದು ಕೂಡ ಪರಸ್ಪರ ಮದುವೆಗೆ ಅಡ್ಡಿಯೇ, ಗೊಂದಲಿಗರಲ್ಲಿನ ‘ದೇವಕ’ ರೂ ಮರಾಠಿಯಲ್ಲಿನ ‘ದೇವಕ’ರೂ ಒಂದೇ, ಆದರೆ ‘ಪಾಂಚ್ ಪಾಲ್ವಿ’ ಅಥವಾ ಐದು ಬಗೆಯ ಮರದ ಎಲೆಗಳು ಮಾವು ಬನ್ನಿ (ಶಮೀ) ಮುತ್ತು, ಅತ್ತಿ ಎಕ್ಕ ಬಹುಪಾಲು ಸಾಮಾನ್ಯವಾಗಿರುತ್ತವೆ. ಮದುವೆಗೆ ಮುಂಚೆ ಇದ್ದಿರಬಹುದಾದ ಸಂಬಂಧಗಳನ್ನು ಗುರುತಿಸಲು ಸಾಧ್ಯವಿಲ್ಲದಿದ್ದಾಗ ಕೂಡ ಆ ಎರಡು ವ್ಯಕ್ತಿಗಳ ಮದುವೆ ನಿಷಿದ್ಧವೆನಿಸುತ್ತದೆ (ಅದೇ ಪು ೧೨ ಮತ್ತು ೧೩)

ನಾನು ಕ್ಷೇತ್ರಕಾರ್ಯ ಮಾಡಿದ ಸಂದರ್ಭದಲ್ಲಿ ಗೊಂದಲಿಗರಲ್ಲಿಯ ಉಪಪಂಗಡಗಳಾದ ಬುಡಬುಡಕೆ, ಅರೆಪಂಚಾಂಗ, ಸಿಂಗದವರು, ಭೂತೇರು, ಚಿತ್ತವೃತ್ತಿಯವರು, ಭಾಟರು ಮತ್ತು ವಾಸುದೇವ ಈ ಏಳು ಉಪಪಂಗಡಗಳಲ್ಲಿ ಒಟ್ಟು ೬೨ ಬೆಡಗುಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. (ಮಾಹಿತಿ ನೀಡಿದವರು ಶ್ರೀ ಶಿವಾನಂದ ಪಾಚಂಗಿ, ನಲಗುಂದ) ಒಟ್ಟು ೯೬ (ಚಾನ್ನವೆ) ಬೆಡಗುಗಳಿದ್ದು ಅದರಲ್ಲಿ ಸುಮಾರು ೬೨ ಬೆಡಗಿನವರು ಕಾರ್ನಟಕದಲ್ಲಿ ವಾಸಿಸುತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಗೊಂದಲಿಗರು ಈ ಬೆಡಗುಗಳಿಗೆ ‘ಗೋತಾ’ ಎಂದು ಕರೆಯುತ್ತಾರೆ.

ನನಗೆ ದೊರೆತಿರುವ ೬೨ ಬಳಿಗಳನ್ನು ಅವರು ನಾಲ್ಕು ಪಂಥಗಳಲ್ಲಿ ವಿಂಗಡಿಸಿದ್ದಾರೆ.

೧. ದೇಶಕಪಂಥ

ಈ ಪಂಥದಲ್ಲಿ ನಾಲ್ಕು ವಿಭಾಗಗಳನ್ನು ಮಾಡಿದ್ದಾರೆ.

೧ನೇ ಗುಂಪು ೨ನೇ ಗುಂಪು ೩ನೇ ಗುಂಪು ೪ನೇ ಗುಂಪು
೧. ವಾಸ್ಟರ್ ೧. ವಾಕೋಡೆ ೧. ಮುಖ್ಯೆ ೧. ಕಾಕಡೆ
೨. ನಾಯ್ಕಲ್ ೨. ಗೊಗರೆ ೨. ಬೋಡ್ಲಾಸ್ ೨. ದುಮಾಳೆ
೩. ದಸಗುಂಟೆ ೩. ಸಾಳುಂಕೆ ೩. ಏಡೆ ೩. ವಿಷ್ಣು
೪. ವಾಡಗನ್ ೪. ರೇಣಕೆ ೪. ಸಿಂಗನಾಥ ೪. ಗೋತ್ತಾಳೆ
೫. ಲಾಖೆ(ಲಾಗವೆ) ೫. ಮತಟಕರ್ ೫. ಚೋರಗೆ (ದುರವೆ)  

ಈ ನಾಲ್ಕು ಗುಂಪಿನ ಮುಖ್ಯಸ್ಥರು ದೇಶಕ ಪಂಥದ ಪ್ರಮುಖ ವ್ಯಕ್ತಿಗಳಾದ ವಾಸ್ಟರ್, ವಾಕೋಡೆ, ಮುಖ್ಯೆ ಮತ್ತು ಕಾಕಡೆ ಇವರಿಗೆ ಅವರು ಮಾನದಾರ ಎಂದೂ ಕರೆಯುವರು. ಈ ಮೇಲೆ ಸೂಚಿಸಿದ ನಾಲ್ಕೂ ಗುಂಪಿನ ಬೆಡಗಿವನರು ಅನ್ಯಾಯ ಆಕ್ರಮಗಳನ್ನೆಸಗಿದರೆ ಅವರಿಗೆ ನ್ಯಾಯ ನಿರ್ಣಯ ಮೋಕ್ಷ ನೀಡುವ ಹಿರಿಯರು ಇವರಿಗೆ ರಾಜರೆಂದೂ ಅವರಲ್ಲಿ ಕರೆಯುವುದುಂಟು. ಈ ಗುಂಪಿನಲ್ಲಿರುವ ಮೊದಲನೆಯ ಬೆಡಗಿನ ವ್ಯಕ್ತಿಗಳಿಗೆ ಗುರುಸ್ಥಾನವನ್ನು ಈ ಸಮುದಾಯ ಕಲ್ಪಿಸಿಕೊಟ್ಟಿದೆ. ಮೇಲಿನ ೧ನೇ ಗುಂಪಿನಲ್ಲಿ ನಾಯ್ಕರ್, ದಸಗುಮಟೆ, ವಾಡಗನ್ ಲಾಖೆ (ಲಾಗವೆ) ಈ ಬೆಡಗಿನವರಿಗೆ ವಾಸ್ಟರ್ ಬೆಡಗಿವರು ಗುರುಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುತ್ತಾರೆ. ಹಾಗೆಯೇ ಎರಡನೆಯ ಗುಂಪಿನಲ್ಲಿ ವಾಕೋಡೆ ಮೂರನೆಯ ಗುಂಪಿನಲ್ಲಿ ಮುಖ್ಯೆ ನಾಲ್ಕನೆಯ ಗುಂಪಿನಲ್ಲಿ ಕಾಕಡೆ ಇವರುಗಳು ಗುರುಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಉಳಿದವರನ್ನು ಅವರ ಶಿಷ್ಯರೆಂದು ಪರಿಗಣಿಸಲ್ಪಡುತ್ತಾರೆ.

೨. ಕಲ್ಯಾಣಪಂಥ

ಕಲ್ಯಾಣ ಪಂಥದ ಪ್ರಮುಖರಾದ ಬೋರಾತ್ ಗುರುರಾತ್, ಕಂಬಳರಾತ್, ಇಂಗಳೆ ಇವರನ್ನು ಮಾನದಾರ ಎಂದು ಕರೆಯುತ್ತಾರೆ.

ಈ ಪಂಥದಲ್ಲಿಯೂ ನಾಲ್ಕು ಭಾಗಗಳಿವೆ.

೧ನೇ ಗುಂಪು ೨ನೇ ಗುಂಪು ೩ನೇ ಗುಂಪು ೪ನೇ ಗುಂಪು
೧ ಬೋರಾತ್ ೧ ಗುರುರಾತ್ ೧ ಕಂಬಳರಾತ್ ೧ ಇಂಗಳೆ
೨ ಗುಡಕರ್ ೨ ದುರವೆ ೨ ಉಗಡೆ ೨ ಅಟಕ್
೩ ಬಡಗಿ ೩ ಸುಗತೆ ೩ ಕಾಳೆ ೩ ಹಿರೇಹಳ್ಳಿ (ಹಿರಳ್ಳಿ)
೪ ಟೀಕೆ ೪ ಪಾಚಂಗೆ ೪ ಬೋಳೆ ೪ ಸಾಗರ
೫ ಗಾಗಲೆ (ಗಾಗಡೆ)      

ಕಲ್ಯಾಣ ಪಂಥದಲ್ಲಿಯಂಥ ಬೋರಾತ್, ಗುರುರಾತ್, ಕಂಬಳರಾತ್, ಮತ್ತು ಇಂಗಳೆ ಇವರುಗಳು ಗುರುಸ್ಥಾನವನ್ನು ಪಡೆದುಕೊಂಡವರಾಗಿದ್ದಾರೆ.

೩. ತೋರಸಲ್‌ಪಂಥ

ಈ ಪಂಥದಲ್ಲಿಯೂ ನಾಲ್ಕು ವಿಭಾಗಗಳಿವೆ

೧ನೇ ಗುಂಪು ೨ನೇ ಗುಂಪು ೩ನೇ ಗುಂಪು ೪ನೇ ಗುಂಪು
೧ ಉದಟೊಲೆ ೧ ಮೊರಕರ್   ೧ ಸಿಂದಗಾನ್
೨ ಬಾಗಡೆ ೨ ಚವ್ಹಾಣ ೨ ದವಡತೆ ೨ಗಾಯಕವಾಡ್
೩ ವಾಡೇಕರ್ ೩ ದಡೆ (ಜಾದವ) ೩ ಪವಾರ ೩ ಬಾಗಲೆ
೪ ಠಾಕೂರ್ ೪. ಕಾವಡೆ ೪ ಭಂಡಾರಿ  

ತೊರಸಲ್ ಪಂಥದಲ್ಲಿ ಉದಟೋಲೆ, ಮೊರಕರ್, ಪಾರಗೆ ಮತ್ತು ಸಿಂದಗಾನ್ ಬಳಿಯವರು ಗುರುಸ್ಥಾನದಲ್ಲಿದ್ದ ಮಾನದಾರರು.

೪. ಗುಳಗುಳಿಪಂಥ

ಈ ಪಂಥದಲ್ಲಿಯೂ ಎರಡು ವಿಭಾಗಗಳಿವೆ

೧ನೇ ಗುಂಪು ೨ನೇ ಗುಂಪು ೩ನೇ ಗುಂಪು ೪ನೇ ಗುಂಪು
೧ ಮರವಂಟಿ ೧ ಚಾಲವಂಟಿ ೧ ಹುಚ್ಚಣೆ ೧ ಉಬಾಳೆ
೨ ಧೋತೆ ೨ ಅವಧೂತ ೨ ಸಸಾನೆ ೨ ಪಾಡ್ರಮಿಸೆ

ಗುಳುಗುಳಿ ಪಂಥದಲ್ಲಿ ಮರವಂಟಿ, ಹುಚ್ಚಣೆ ಮತ್ತು ಉಬಾಳೆ ಬಳಿಯವರು ಗುರುಸ್ಥಾನದಲ್ಲಿದ್ದ ಮಾನದಾರರು. ಕರ್ನಾಟಕದಲ್ಲಿರುವ ಎಲ್ಲ ಗೊಂದಲಿಗರು ಇಂದು ಮಹಾರಾಷ್ಟ್ರದ ಪ್ರಭಾವದಿಂದ ಮತ್ತು ರಾಜ್ಯದಲ್ಲಿ ಸಂಘಟನೆ ಮಾಡುವುದಕ್ಕಾಗಿ ಈ ಸಮುದಾಯದವರೆಲ್ಲ ‘ಗೋಂಧಳಿ’ ಎಂಬ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಗೊಂದಲಿಗರಲ್ಲಿ ಸಾಮಾನ್ಯವಾಗಿ ತಮ್ಮ ಬಳಿಯ ಹೆಸರನ್ನೇ ಮನೆತನದ ಹೆಸರಾಗಿ (ಅಡ್ಡಹೆಸರಾಗಿ) ಬಳಸುವುದು ಕಂಡು ಬರುತ್ತದೆ. ಆದರೆ ಇಂದು ಅನೇಕ ಸಮುದಾಯಗಳು ತಮ್ಮ ಮನೆ ಹೆಸರನ್ನೂ ಗೋಂಧಳಿ ಎಂದು ಇಟ್ಟುಕೊಂಡಿರುವುದು ಕಂಡು ಬರುತ್ತದೆ. ವೈವಾಹಿಕ ಸಂಬಂಧ ಬೆಳೆಸಲು ಅನುಕೂಲವಾಗಲೆಂದು ತಮ್ಮ ಬಳಿಯ ಹೆಸರನ್ನೇ ಮನೆ ಹೆಸರಾಗಿ ಗುರುತಿಸಿಕೊಂಡಿದ್ದ ಗೊಂದಲಿಗರು ಸಂಘಟನೆಯ ದೃಷ್ಟಿಯಿಮದ ಗೋಂಧಳಿ ಎಂದು ಸಾಮೂಹಿಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

೩.೪ ವರ್ತಮಾನದ ಸಾಮಾಜಿಕ ಸ್ಥಿತಿಗತಿಗಳು

ಗೊಂದಲಿಗರು ತಮ್ಮ ಮೂಲ ಉದ್ಯೋಗದಿಂದ ಹೊಟ್ಟೆ ಹೊರೆದುಕೊಳ್ಳಲು ಸಾಧ್ಯವೇ ಇಲ್ಲ ಎಂಬುದನ್ನು ಕಂಡು ಕೊಂಡಿದ್ದಾರೆ. ಅನೇಕ ಕುಟುಂಬಗಳು ಪೂರ್ಣ ಪ್ರಮಾಣದ ಅಲೆಮಾರಿತನದಿಂದ ಮುಕ್ತಿ ಪಡೆದುಕೊಂಡಿವೆ. ಅರೆ ಅಲೆಮಾರಿತನ ಇನ್ನೂ ಉಳಿದುಕೊಂಡಿದೆ. ಹಿರಿಯ ವೃತ್ತಿ ಕಲಾವಿದರಾದ ಬುಡಬುಡಕೆಯವರು, ಜ್ಯೋತಿಷಿಗಳು ಗಿಳಿಶಾಸ್ತ್ರದವರು ಅಲೆಮಾರಿ ಕಥೆಗಾರರು, ಸಿಂಗದವರು, ಭೂತೇರ ಇವರು ಮಾತ್ರ ತಮ್ಮ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಬುಡಬುಡಕೆಯವರ ಸ್ಥಿತಿಗತಿಗಳು ತೀರ ದುಸ್ಥಿತಿಯಲ್ಲಿವೆ. ಆದರೂ ಈ ಬುಡಬುಡಕೆಯವರು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದಾರೆ. ಕಿತ್ತೂರಿನಲ್ಲಿ ಶ್ರೀ ರಾಮಣ್ಣ ಎಂಬ ಹಣ್ಣಾದ ಮುದುಕ ಪ್ರತಿ ದಿನವೂ ಏಳುತ್ತ ಬೀಳುತ್ತ ವೃತ್ತಿಯನ್ನು ಮುಂದುವರಿಸಿದ್ದಾನೆ. ಗೊಂದಲಿಗರು ಆದಾಯವೇ ಇಲ್ಲದ ಪಾರಂಪರಿಕ ವೃತ್ತಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಸಾಮಾಜಿಕವಾಗಿ ಬಡತನ ಸ್ಥಿತಿಯಲ್ಲಿಯೇ ಉಳಿಯುವಂತಾಗಿದೆ. ಶಿಕ್ಷಣ ಪಡೆದು ಸರಕಾರಿ ಹುದ್ದೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಇವರು ಸಾಧನೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಬೆರಳೆಣಿಕೆಯಷ್ಟು ಜನ ಸತತ ಪರಿಶ್ರಮದಿಂದ ಪಾತ್ರೆ ವ್ಯಾಪಾರದ ಮೂಲಕ ಆರ್ಥಿಕವಾಗಿ ಉನ್ನತ ಸ್ಥಿತಿಯನ್ನು ತಲುಪಿ ಸಾಮಾಜಿಕವಾಗಿ ಸ್ಥಾನಮಾನಗಳನ್ನು ಹೊಂದಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಜ್ಯೋತಿಷಿ ವೃತ್ತಿಯವರು ಉತ್ತಮ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಆದರೆ ಶೇಕಡಾ ೬೦ ರಷ್ಟು ಜನ ಅಲೆಮಾರಿ ಅರೆ ಅಲೆಮಾರಿತನದಲ್ಲಿಯೇ ಬದುಕುತ್ತಿದ್ದಾರೆ. ತಲೆಯ ಮೇಲೆ ಪಾತ್ರೆ ಹೊತ್ತುಕೊಂಡು ಊರಿಂದೂರು ಅಲೆದಾಡುವ ಗೊಂದಲಿಗರು ಸಣ್ಣ ಪುಟ್ಟ ವ್ಯಾಪಾರಸ್ಥರು ‘ಭಿಕ್ಷೆ ಬೇಡುವುದಕ್ಕಿಂತ ಈ ವೃತ್ತಿ ಎಷ್ಟೋವಾಸಿ. ಈ ವೃತ್ತಿಯಿಂದಾದರೂ ನಮಗೆ ಸಮಾಜದಲ್ಲಿ ಸ್ಥಾನಮಾನಗಳು ಸಿಗಬಹುದು’ ಎಂಬ ನಂಬಿಕೆಯನ್ನು ಇವರು ಇಟ್ಟುಕೊಂಡಿದ್ದಾರೆ. ಕವದಿ ಹೊಲಿಯುವ ವೃತ್ತಿ ಶೇಕಡಾ ೯೦ ರಷ್ಟು ಕ್ಷೀಣಿಸಿದೆ. ಈ ಕವದಿಗಳನ್ನು ಗ್ರಾಮೀಣ ಜನರು ಒಂದು ಕಾಲಕ್ಕೆ ಆಸಕ್ತಿಯಿಂದ ಹೊಲಿಸಿ ಹೊತ್ತುಕೊಳ್ಳುತ್ತಿದ್ದರು. ಇಂದು ಹಳ್ಳಿಯ ಜನರಲ್ಲಿ ಕವದಿಗಳ ಮೇಲಿನ ವ್ಯಾಮೋಹ ಕಡಿಮೆಯಾಗಿದೆ. ಇದರಿಂದ ಗೊಂದಲಿಗರ ಹೆಂಗಸರ ಕವದಿ ಹೊಲಿಯುವ ವೃತ್ತಿಗಳು ಮಾಯವಾಗುತ್ತಿವೆ.

ಗೊಂದಲ ಪೂಜೆ ನೆರವೇರಿಸುವ ಕಥೆಗಾರರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಗೊಂದಲ ಹಾಕುವುದು ಇದೊಂದು ಧಾರ್ಮಿಕ ಪರಂಪರೆಯಾಗಿದ್ದರೂ ಅದು ಕೂಡ ಇಂದು ಜನರಿಂದ ದೂರ ಹೋಗಿದೆ. ಗೊಂದಲಿಗರು ದಿಂಡಿ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಪಂಢರಪುರಕ್ಕೆ ಹೋಗಿ ತುಳಸಿ ಮಾಲೆ ಹಾಕಿಸಿಕೊಂಡು ಸಂತರಾಗುತ್ತಿರುವುದರಿಂದ ಅನೇಕರು ದುಶ್ಚಟಗಳಿಂದ ದೂರವಾಗುತ್ತಿದ್ದಾರೆ. ೨೧ನೆಯ ಶತಮಾನದಲ್ಲಿಯೂ ಇವರ ಪಾರಂಪರಿಕ ನ್ಯಾಯ ಪದ್ಧತಿ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದೆ. ಸಣ್ಣ ಪುಟ್ಟ ವ್ಯಾಜ್ಯಗಳಿಗೆ ಕೋರ್ಟು ಕಚೇರಿಗೆ ಅಲೆದಾಡುವ ಇಂದಿನ ಸಮಾಜದಲ್ಲಿ ಗೊಂದಲಿಗರು ತಮ್ಮ ವ್ಯಾಜ್ಯಗಳನ್ನು ತಮ್ಮದೇ ಆದ ನ್ಯಾಯಾಲದಲ್ಲಿ ಬಗೆಹರಿಸಿಕೊಳ್ಳುವುದನ್ನು ಇಂದೂ ಕಾಣುತ್ತೇವೆ. ಪಾರಂಪರಿಕ ಆಚರಣೆಗಳನ್ನು ಇನ್ನೂ ಇವರು ತಮ್ಮ ನೆಲೆಗಳಿಗೆ ಹೋಗಿ ಆಚರಿಸುವುದನ್ನು ಕಾಣುತ್ತೇವೆ.

ಬುಡಬುಡಕೆ, ಗಿಳಿಶಾಸ್ತ್ರ, ಎಣ್ಣೆ ಜೋಗಿ ಅರೆಪಂಚಾಂಗ ಮುಂತಾದವರನ್ನು ಅವರ ವೇಷಭೂಷಣ, ಭಿಕ್ಷಾಟನೆ ಕಂಡು ಇನ್ನೂ ಹಳ್ಳಿಗಳಲ್ಲಿ ಅವರನ್ನು ಅಸ್ಪೃಶ್ಯರಂತೆ ಕಾಣುತ್ತಿರುವುದು ಕಂಡು ಬರುತ್ತದೆ. ಇವರು ನೀರು ಕೇಳಿದರೆ ನೀರನ್ನು ಎತ್ತರಿಸಿ ಬೊಗಸೆಯಲ್ಲಿ ಹಾಕುತ್ತಾರೆ. ಭಿಕ್ಷೆಯನ್ನು ಎತ್ತರದಿಂದ ಹಾಕುವರು. ಇವರನ್ನು ಮನೆಯೊಳಗೆ ಬಿಟ್ಟುಕೊಳ್ಳುವುದು ಅಪರೂಪ. ಚಹಾದ ಅಂಗಡಿಗಳಲ್ಲಿ ಇವರಿಗಾಗಿಯೇ ಮೀಸಲಾದ ಕಪ್ಪು ಬಸಿ, ಲೋಟಗಳಿರುತ್ತವೆ. ಅದರಲ್ಲಿಯೇ ಇವರು ಚಹಾ ಕುಡಿದು ಅದನ್ನು ತೊಳೆದಿಡಬೇಕು. ಬುಡಬುಡಕೆಯವರು ಮಾಟ ಮಂತ್ರ ಮಾಡಬಹುದೆಂಬ ಅಂಜಿಕೆಯಿಂದ ಅವರನ್ನು ದೂರವಿಡುತ್ತಿದ್ದಾರೆ.

ಆರ್ಥಿಕವಾಗಿ ಭದ್ರತೆಯನ್ನು ಹೊಂದಿ ಶಹರಗಳಲ್ಲಿ ವ್ಯಾಪಾರ ಮಾಡುತ್ತಿರುವ ಕುಟುಂಬಗಳ ಜೊತೆ ಇತರೆ ಸಮುದಾಯದವರು ಅವರನ್ನು ಗೌರವಾದರಗಳಿಂದ ಕಾಣುತ್ತಿರುವುದು ಕಂಡು ಬರುತ್ತದೆ.