ಗೊಂದಲಿಗರ ಹಬ್ಬಗಳು

ಗೊಂದಲಿಗರು ಹಿಂದೂ ಧರ್ಮದವರು ಆಚರಿಸುವರು. ಯುಗಾದಿಯಿಂದ ಪ್ರಾರಂಭವಾಗುವ ಎಲ್ಲ ಹಬ್ಬಗಳನ್ನು ಗೊಂದಲಿಗರು ‘ಬೇವಿನ ಹಬ್ಬ’ ಎಂದು ಆಚರಿಸುತ್ತಾರೆ. ಯುಗಾದಿಯ ದಿನ ಮನೆಯನ್ನು ಸ್ವಚ್ಫಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಿ ನೀರಿನಲ್ಲಿ ಬೇವಿನ ಸೊಪ್ಪು ಬೆರೆಸಿ ಸ್ನಾನ ಮಾಡಿ ಬೆಲ್ಲದಲ್ಲಿ ಬೇವಿನ ಹೂವುಗಳನ್ನು ಸೇರಿಸಿ ತಿಂದು ಅನಂತರ ಸಿಹಿ ಊಟವನ್ನು ಮಾಡುತ್ತಾರೆ. ಸಾಮಾನ್ಯವಾಗಿ ಅಲೆಮಾರಿಗಳಾಗಿರುವ ಗೊಂದಲಿಗರು ಯುಗಾದಿ, ದೀಪಾವಳಿ, ನವರಾತ್ರಿ ಈ ಹಬ್ಬಗಳಲ್ಲಿ ತಮ್ಮ ಮೂಲ ನೆಲೆಗೆ ಬಂದು ಹಬ್ಬಗಳನ್ನು ಆಚರಿಸುತ್ತಾರೆ. ಯುಗಾದಿಯ ದಿನ ಸಾಯಂಕಾಲ ಎಲ್ಲ ಗೊಂದಲಿಗರು ಸೇರಿ ತಮ್ಮ ತಮ್ಮ ವೃತ್ತಿಗಳ ಮತ್ತು ವೈಯಕ್ತಿಕ ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಳ್ಳುತ್ತಾರೆ. ತಂಟೆ, ನ್ಯಾಯಗಳಿದ್ದರೆ ಅಂದು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವಯಸ್ಸಿಗೆ ಬಂದ ಗಂಡು ಹೆಣ್ಣು ಮಕ್ಕಳ ಮದುವೆಗೆ ಸಂಬಂಧಿಸಿದ ವಿಚಾರಗಳನ್ನು ಈ ದಿನ ಮಾತನಾಡುವುದುಂಟು.

ನವರಾತ್ರಿ ಹಬ್ಬವನ್ನು ಗೊಂದಲಿಗರು ಶ್ರದ್ಧೆ ಭಕ್ತಿಯಿಂದ ಆಚರಿಸುವುದುಂಟು. ವಿವಿಧ ವೃತ್ತಿಗಳ ಗೊಂದಲಿಗರು ತಮ್ಮ ನೆಲೆಗಳಿಗೆ ಬರುವುದುಂಟು. ನವರಾತ್ರಿ ಶಕ್ತಿ ದೇವತೆಗಳ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಹಬ್ಬ ಎಂದು ಗೊಂದಲಿಗರು ತಿಳಿದು ಕೊಂಡಿದ್ದಾರೆ. ನವರಾತ್ರಿ ಹಬ್ಬವನ್ನು ಮನೆ ಮತ್ತು ದೇವಸ್ಥಾನಗಳಲ್ಲಿ ಆಚರಿಸುತ್ತಾರೆ. ಅನೇಕರು ಈ ಸಂದರ್ಭದಲ್ಲಿ ಗೊಂದಲ ಪೂಜೆಯನ್ನು ಮಾಡುವುದುಂಟು. ಈ ನವರಾತ್ರಿಯಲ್ಲಿ ನಡೆಯುವ ‘ಗೊಂದಲ’ ಪೂಜೆಗಳೆಲ್ಲ ಸಾಮಾನ್ಯವಾಗಿ ‘ಹರಕೆ’ ಯ ಪೂಜೆಗಳಾಗಿರುತ್ತಿವೆ. ಈ ನವರಾತ್ರಿಯಲ್ಲಿ ಭತ್ತ, ಗೋಧಿ, ಜೋಳ, ರಾಗಿ, ನವಣೆ ಈ ಐದು ಧಾನ್ಯಗಳನ್ನು ದೊಡ್ಡ ದೊಡ್ಡ ಮಣ್ಣಿನ ಕುಂಡಗಳಲ್ಲಿ ಬಿತ್ತಿ, ಅದರ ಮಧ್ಯ ಕಲಶ ಸ್ಥಾಪಿಸಿ ಅದನ್ನು ದೇವರ ಮುಂದೆ ಇಟ್ಟು ಪೂಜಿಸುತ್ತಾರೆ. ಇದಕ್ಕೆ ‘ಘಟಸ್ಥಾಪನೆ’ ಎನ್ನುವರು. ಈ ಹಬ್ಬದಲ್ಲಿ ಅಂಬಾಭವಾನಿ ಅಥವಾ ಎಲ್ಲಮ್ಮ, ಪ್ರಮುಖವಾಗಿ ಪೂಜೆಗೊಳ್ಳುವ ದೇವತೆಗಳಾಗಿದ್ದಾರೆ. ನವರಾತ್ರಿಯ ಎಲ್ಲ ದಿನಗಳಲ್ಲಿ ಪ್ರತಿನಿತ್ಯ ಸ್ನಾನ, ದೇವಿಯ ಪೂಜೆ ಮತ್ತು ಒಂದೊಪತ್ತು ಊಟ ಮಾಡುತ್ತಾರೆ. ಕೊನೆಯ ದಿನ ದೇವಿಗೆ ಕುರಿ ಅಥವಾ ಹೋತವನ್ನು ಬಲಿಕೊಟ್ಟು ಮಾಂಸದ ಅಡುಗೆ ಮಾಡಿ ದೇವಿಗೆ ನೈವೇದ್ಯ ಮಾಡುತ್ತಾರೆ. ಬನ್ನಿ ಮುಡಿಯುವ ದಿನ ಊರಿನಿಂದ ದಕ್ಷಿಣ ದಿಕ್ಕಿನಲ್ಲಿರುವ ಬನ್ನಿ ಗಿಡಕ್ಕೆ ಹೋಗಿ ಬನ್ನಿ ಪೂಜೆ ಮಾಡಿ. ಬನ್ನಿ ಗಿಡದ ಸೊಪ್ಪನ್ನು ತಂದು ಎಲ್ಲರಿಗೂ ಕೊಟ್ಟು ‘ನಾವು ನೀವು ಬಂಗಾರದ ಹಾಗೆ ಇರೋಣ’ ಎಂದು ಹೇಳಿ ಬರುತ್ತಾರೆ.

ದೀಪಾವಳಿಯನ್ನು ಗೊಂದಲಿಗರು ಸಡಗರದಿಂದ ಆಚರಿಸುವುದುಂಟು ದೀಪಾವಳಿಗೆ ಸುಣ್ಣ ಬಣ್ಣ, ಕೆಂಪು ಮಣ್ಣಿನಿಂದ ಮನೆಯನ್ನು ಸಾರಿಸುವುದುಂಟು ಈ ಹಬ್ಬದಲ್ಲಿ ಶಕ್ತಿ ದೇವತೆಯಾದ ಲಕ್ಷ್ಮಿಯನ್ನು ಆರಾಧಿಸುವರು. ಇವರು ಹೆಣ್ಣು ಮಕ್ಕಳನ್ನು ಈ ಹಬ್ಬಕ್ಕೆ ಕರೆತರುವುದುಂಟು.

ನರಕ ಚತುರ್ದಶಿ ಮತ್ತು ಪಾಡ್ಯದ ದಿನ ಅಣ್ಣ ತಮ್ಮಂದಿರ ಸ್ನಾನದ ನಂತರ ಅಕ್ಕ ತಂಗಿಯರು ಅವರಿಗೆ ಆರತಿ ಬೆಳಗುವ ಸಂಪ್ರದಾಯವಿದೆ. ಪಾಡ್ಯದ ದಿನ ಆಕಳು ಪೂಜೆ ಇವರಲ್ಲಿ ಕಡ್ಡಾಯವಾಗಿ ಮಾಡುವುದು ಕಂಡು ಬರುತ್ತದೆ ಅಂದು ಗೊಂದಲ ಪೂಜೆ, ಜ್ಯೋತಿಷ್ಯ, ಬುಡಬುಡಕೆ ವಿದ್ಯೆ ಕಲಿಯುವವರಿಗೆ ಅವರಿಂದ ಆಕಳು ಪೂಜೆ ಮಾಡಿಸಿ ಆ ವಿದ್ಯೆಗಳನ್ನು ಹೇಳಿಕೊಡುವುದುಂಟು.

ಪಂಚಮಿ ಅಮಾವಾಸ್ಯೆಯ ದಿನ ಗೊಂದಲಿಗರು ದುರ್ಗಾದೇವಿಗೆ ಬಲಿ ಕೊಡುತ್ತಾರೆ. ಈ ಕುರಿಯನ್ನು ‘ಕೆಂಗುರಿ ಕುರಿ’ ಎಂದು ಕರೆಯವುದುಂಟು. ದೀಪಾವಳಿಯ ಪಾಡ್ಯದ ರಾತ್ರಿ ಶಕ್ತಿ ದೇವತೆಗಳ ಮಹಿಮೆಯನ್ನು ಕೊಂಡಾಡುವ ಹಾಡುಗಳನ್ನು ಹಾಡುತ್ತಾರೆ.

‘ಆಷಾಢ ಮಾಸದ ಕೊನೆ ಅಥವಾ ಶ್ರಾವಣ ಮಾಸದ ಮೊದಲ ವಾರದ ಮಂಗಳವಾರ ಗೊಂದಲಿಗರು ವಿಶೇಷವಾಗಿ ದುರ್ಗವ್ವನ ಹಬ್ಬವನ್ನು ಆಚರಿಸುವವರು. ಈ ಹಬ್ಬದಲ್ಲಿ ಊರ ನಡುವೆ ವರ್ಷಕ್ಕೊಂದು ತಾತ್ಕಾಲಿಕ ಗುಡಿ ಅಂದರೆ ಚಿಕ್ಕ ಬಂಡಿಯನ್ನು ನಿರ್ಮಿಸಿ, ಅದರಲ್ಲಿ ದೇವತೆಯನ್ನು ಸ್ಥಾಪಿಸುತ್ತಾರೆ. ಪ್ರತಿವಷವೂ ಹೊಸ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವುದುಂಟು. ಈ ದೇವತೆಯನ್ನು ಹೋತ ಅಥವಾ ಉಣ್ಣೆಕುರಿಯನ್ನು ಮಾತ್ರ ಬಲಿಕೊಡುವುದುಂಟು. ಬಲಿ ಕೊಡುವ ವಿಧಾನ ಬೇರೆಯಾಗಿರುತ್ತದೆ. ಇಲ್ಲಿ ಹೋತ ಅಥವಾ ಉಣ್ಣೆಯ ಕುರಿಯ ತಲೆಯನ್ನು ಕತ್ತರಿಸದೇ ಅದರ ನಡುದೇಹವನ್ನು ಒಂದೇ ಸಲಕ್ಕೆ ಕಡಿಯಬೇಕೆಂಬ ನಿಯಮವಿದೆ. ಅದರ ತಲೆ ಮತ್ತು ಮುಂಗಾಲುಗಳು ಒಂದು ಕಡೆ ಬಿದ್ದರೆ, ಉಳಿದ ದೇಹ ಮತ್ತು ಹಿಂದಿನ ಕಾಲುಗಳು ಬೇರೆಡೆ ಬೀಳುವಂತೆ ಬಲಿ ಕೊಡಬೇಕಾಗುತ್ತದೆ. ಬಲಿ ಕೊಡುವ ಕಾರ್ಯ ಮುಗಿದ ಮೇಲೆ ದುರ್ಗವ್ವನ ಮೂರ್ತಿಯನ್ನು ಹೊತ್ತ ಚಕ್ಕಡಿಯನ್ನು ಊರ ಹೊರಗಿರುವ ದುರ್ಗವ್ವನ ದೇವಸ್ಥಾನದಲ್ಲಿ ಬಿಟ್ಟು ಅಲ್ಲಿಯೂ ಬಲಿ ಕೊಡುತ್ತಾರೆಂದು ತಿಳಿಯುತ್ತದೆ. (ಅದೇ ಪು ೩೨)

ಕೆಲ ಪ್ರದೇಶಗಳಲ್ಲಿ ಕುರಿಯ ತಲೆಯನ್ನು ಮಾತ್ರ ಕಡೆದು ಅದರ ಹಿಂದಿನ ಕಾಲನ್ನು ಕತ್ತರಿಸಿ ಅದರ ಬಾಯಿಯಲ್ಲಿಟ್ಟು ಆ ರುಂಡವನ್ನು ದೇವಿಯ ಎದುರಿಗೆ ಇಡುವುದುಂಟು. ನಂತರ ಮಾಂಸದ ನೈವೇದ್ಯವನ್ನು ದೇವಿಗೆ ಅರ್ಪಿಸುವುದುಂಟು ಮತ್ತು ದೇವಸ್ಥಾನದಲ್ಲಿ ಅರಿಷಿಣ ಕುಂಕುಮ ತೂರುತ್ತಾರೆ. ದೇವಿಗೆ ತೆಂಗು, ಲಿಂಬೇಹಣ್ಣಿನಿಂದ ಉಡಿ ತುಂಬುತ್ತಾರೆ. ಸಾಯಂಕಾಲ ಗೊಂದಲಿಗರೆಲ್ಲ ಸೇರಿ ತಮ್ಮಲ್ಲಿರುವ ನ್ಯಾಯಗಳನ್ನು ಬಗೆಹರಿಸುವುದುಂಟು. ಬೆಳತನಕ ಕಥೆಗಳನ್ನು ಹೇಳುವುದುಂಟು.

ಗೊಂದಲಿಗರು ಮೊಹರಂ ಹಬ್ಬವನ್ನೂ ಆಚರಿಸಿ. ಕೊನೆಯ ದಿನ ವಿಶೇಷವಾದ ಅಡುಗೆ ಪೂಜಿಸುವುದುಂಟು. ಹೋಳಿ ಹಬ್ಬದಲ್ಲಿ ‘ಸೋಗಿನ ವೇಷ’ ಹಾಕಿಕೊಂಡು ಈ ಹಬ್ಬ ಆಚರಿಸುವರು.

ಸಾವು

ಗೊಂದಲಿಗರಲ್ಲಿ ಮದುವೆಯಾದವರಿಗೆ ಮತ್ತು ಮದುವೆಯಾಗದವರಿಗೆ ಸಂಬಂಧಿಸಿದಂತೆ ಎರಡು ರೀತಿಯ ಶವ ಸಂಸ್ಕಾರಗಳನ್ನು ಮಾಡುವುದುಂಟು. ಮದುವೆಯಾಗಿದ್ದರೆ ಹೆಣವನ್ನು ಸಿದಗಿಯಲ್ಲಿ ಕಳ್ಳಿರಿಸಿ ಸ್ಮಶಾನಕ್ಕೆ ಹೊತ್ತುಕೊಂಡು ಹೋಗಿ ಸಂಸ್ಕಾರ ಮಾಡುತ್ತಾರೆ. ಇವರಲ್ಲಿ ಸಾಮಾನ್ಯವಾಗಿ ಸುಡುವ ಪದ್ಧತಿ ಇದೆ. ಮದುವೆಯಾಗದೇ ಸತ್ತಿದ್ದರೆ ಮೊದಲು ಆ ಹೆಣಕ್ಕೆ ಎಕ್ಕಿಯ ಗಿಡದೊಂದಿಗೆ ಮದುವೆ ಮಾಡಿಸಿ ನಂತರ ಹೂಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿದ್ದರೂ ಅಂತವರನ್ನು ಸುಡುವ ಸಂಪ್ರದಾಯ ಇವರಲ್ಲಿದೆ. ಶಿವಮೊಗ್ಗ ಪ್ರದೇಶದಲ್ಲಿ ಬಾಣಂತಿ ಮತ್ತು ತೊನ್ನು ಇರುವವರನ್ನು ಮಾತ್ರ ಸುಡುವುದು ಕಂಡು ಬರುತ್ತದೆ. ಉಳಿದವರನ್ನೆಲ್ಲ ಹೂಳುತ್ತಾರೆ.

ಸಿದಗಿಯನ್ನು ಸತ್ತ ವ್ಯಕ್ತಿಯ ಮನೆಯ ಮುಂದೆಯೇ ಕಟ್ಟಲಾಗುತ್ತದೆ. ಮನೆಯ ಅಂಗಳದ ಒಂದು ಮೂಲೆಯಲ್ಲಿ ಬೆಂಕಿ ಮಾಡಿ ಗಡಿಗೆಯಲ್ಲಿ ನೀರು ಕಾಯಿಸುತ್ತಾರೆ. ನೀರು ಕಾದ ಮೇಲೆ ಆ ನೀರಿನಿಂದ ಹೆಣಕ್ಕೆ ಸ್ನಾನ ಮಾಡಿಸಿ ಹೊಸ ಬಟ್ಟೆಗಳನ್ನು ತೊಡಿಸುತ್ತಾರೆ. ಮುತ್ತೈದೆ ಸತ್ತಿದ್ದರೆ ತವರು ಮನೆಯವರ ಹೊಸ ಸೀರೆ ಉಡಿಸಿ ತಲೆಗೆ ದಂಡೆ ಕಟ್ಟುತ್ತಾರೆ. ಹೆಣವನ್ನು ತೆಗೆದುಕೊಂಡು ಮಗ ಅಥವಾ ಅಣ್ಣತಮ್ಮಂದಿರು ಅದನ್ನು ಹಿಡಿದುಕೊಂಡು ಸ್ಮಶಾನಕ್ಕೆ ಸಿದಿಗೆಯ ಜೊತೆ ಹೋಗುವರು. ಸ್ಮಶಾನದಲ್ಲಿ ಹೆಣವನ್ನು ಸಿದಗಿಯಿಂದ ಇಳಿಸಿದ ಮೇಲೆ ಬೆಂಕಿಯ ಗಡಿಗೆಯನ್ನು ಹಿಡಿದುಕೊಂಡವ ಹೆಣದ ತೊಡೆಯ ಮೇಲೆ ಮೊಳಕೈ ಇಟ್ಟು ಕುಳಿತುಕೊಳ್ಳುತ್ತಾನೆ. ಆಗ ಕ್ಷೌರಿಕ ಅವನ ತಲೆಗೂದಲನ್ನು ಬೋಳಿಸುತ್ತಾನೆ. ಶವಸಂಸ್ಕಾರ ಮುಗಿದ ಮೇಲೆ ಎಲ್ಲರೂ ಸ್ನಾನ ಮಾಡಿಕೊಂಡು ಗರಿಕೆ ತೆಗೆದುಕೊಂಡು ಸತ್ತವರ ಮನೆಗೆ ಹೋಗಿ ಸತ್ತ ಸ್ಥಳದಲ್ಲಿ ಚರಿಗೆಯಲ್ಲಿ ನೀರು ತುಂಬಿಟ್ಟ ಸ್ಥಳದಲ್ಲಿ ಗರಿಕೆಯನ್ನು ಎದ್ದಿ, ಅದರ ನೀರನ್ನು ಕಾಲಿಗೆ ಸಿಂಪಡಿಸಿಕೊಂಡು ಆ ಗರಿಕೆಯನ್ನು ಚರಿಗೆಯಲ್ಲಿ ಹತ್ತಿರ ಇಟ್ಟು ಸ್ವಲ್ಪ ಕುಳಿತು, ಕುಟುಂಬದವರಿಗೆ ಸಮಾಧಾನ ಹೇಳಿ ಹೋಗುತ್ತಾರೆ. ಕೂದಲನ್ನು ತೆಗೆಸಿಕೊಂಡು ಶವ ಸಂಸ್ಕಾರದ ವಿಧಿ ವಿಧಾನಗಳನ್ನು ಪೂರೈಸಿದ ವ್ಯಕ್ತಿ ಹನ್ನೊಂದು ದಿನಗಳ ವರೆಗೆ ಯಾರನ್ನೂ ಮುಟ್ಟಿಸಿಕೊಳ್ಳಬಾರದೆಂಬ ನಿಯಮವಿದೆ. ಇವನು ಈ ಸಮಯದಲ್ಲಿ ಗೋಧಿ ರೊಟ್ಟಿ, ಸಪ್ಪನ ಬೇಳೆ, ಬದನೆಕಾಯಿ ಪಲ್ಯವನ್ನು ಮಾತ್ರ ತಿನ್ನಬೇಕು ಮತ್ತು ಊರು ಬಿಟ್ಟು ಎಲ್ಲಿಯೂ ಹೋಗಬಾರದು ಎಂಬ ಕಟ್ಟಳೆಗಳಿವೆ.

‘ಶಿವಮೊಗ್ಗ ಪ್ರದೇಶದ ಗೊಂದಲಿಗರಲ್ಲಿ ಶವ ಸಂಸ್ಕಾರ ಮಾಡಿ ಸ್ನಾನ ಮಾಡಿ ಬರುವಾಗ ‘ಸೂತಕ ಶಾಂತಿ’ ಮಾಡಲು ಬಂದವರಿಗೆಲ್ಲ ಹೆಂಡ ಕುಡಿಸಬೇಕೆಂಬ ನಿಯಮವಿದೆ. ಆರ್ಥಿಕವಾಗಿ ದುರ್ಬಲರಾದವರು ಚಹಾದ ಅಂಗಡಿಗಳಲ್ಲಿ ಚಹಾ ಕುಡಿಸುವುದುಂಟು. ನಂತರ ಸಾವು ಸಂಭವಿಸಿದವರ ಮನೆಗೆ ಒಂದು ಚರಿಗೆಯಲ್ಲಿ ತುಂಬಿಟ್ಟ ನೀರಿನಲ್ಲಿ ಗರಿಕೆ ಎದ್ದಿ ತಲೆಗೆ ನೀರು ಸಿಂಪಡಿಸಿಕೊಂಡು. ತಮ್ಮ ಮನೆಗಳಿಗೆ ಹೋಗುವರು. ಚಿಕ್ಕ ಮಕ್ಕಳು ಸತ್ತರೆ ಎರಡು ಕೈಗಳಲ್ಲಿ ಎತ್ತಿಕೊಂಡು ಸ್ಮಶಾನದಲ್ಲಿ ಹೂಳದೇ ಇತರೆ ಸ್ಥಳಗಳಲ್ಲಿ ಸಂಸ್ಕಾರ ಮಾಡುತ್ತಾರೆ’ (ಅದೇ ಪು ೩೩)

ಶವ ಸಂಸ್ಕಾರದ ದಿನದಿಂದ ಮೂರು ದಿನಗಳವರೆಗೆ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ನಂತರ ಒಳಗೆ ಮಾಡುವರು. ಸತ್ತವರು ಇಷ್ಟ ಪಡುತ್ತಿದ್ದ ವಸ್ತುಗಳನ್ನು ತೆಗೆದುಕೊಂಡು ಸ್ಮಶಾನಕ್ಕೆ ಹೋಗಿ ಸಂಸ್ಕಾರ ಮಾಡಿದ ಸ್ಥಳದಲ್ಲಿ ಪೂಜೆ ಸಲ್ಲಿಸಿ ಎಲ್ಲ ವಸ್ತುಗಳನ್ನು ಅಲ್ಲಿಟ್ಟು, ಹಾಲು ತುಪ್ಪ ಧಾರೆ ಎರೆದು ದೂರ ಕುಳಿತು ಕೊಳ್ಳುವರು. ಕಾಗೆ ಬಂದು ಆ ತಿನಿಸುಗಳನ್ನು ತಿಂದ ಮೇಲೆ ಅವರು ಅಲ್ಲಿಂದ ಹೊರಡುತ್ತಾರೆ. ಖಾಲಿ ಗಡಿಗೆಯಲ್ಲಿ ಅಸ್ತಿಗಳನ್ನು ತುಂಬಿ ನದಿಗೆ ಅಥವಾ ಕೆರೆಗೆ ಬಿಡುವರು. ಮೂರನೆಯ ಅಥವಾ ಹನ್ನೊಂದನೆಯ ದಿನಕ್ಕೆ ಅವರವರ ಪದ್ಧತಿಯಲ್ಲಿ ಅವರು ರೂಢಿಸಿಕೊಂಡಂತೆ ಕುರಿ ಬಲಿ ಕೊಡುವರು. ಅದರ ಮಾಂಸದ ಅಡುಗೆ ಮಾಡಿ ಸಂಸ್ಕಾರದ ಸ್ಥಳದಲ್ಲಿ ಎಡೆ ಮಾಡುವರು. ಆ ಎಡೆಯನ್ನು ಕಾಗೆ ತಿಂದ ಮೇಲೆ ಮನೆಗೆ ಹೋಗಿ ಬಂಧು ಬಳಗದವರಿಗೆ ಊಟ ಹಾಕುವರು. ಸತ್ತ ದಿನದಿಂದ ಸರಿಯಾಗಿ ಒಂದು ತಿಂಗಳಾದ ಮೇಲೆ ಸತ್ತವರ ಹೆಸರಿನಲ್ಲಿ ಬೆಳ್ಳಿ, ಅಥವಾ ಬಂಗಾರದ ಗೊಂಬಿಯನ್ನು ತಂದು ದೇವರ ಗೂಡಿನಲ್ಲಿಟ್ಟು ಕುರಿ ಬಲಿಕೊಟ್ಟು ಮಾಂಸದ ಅಡುಗೆ ತಯಾರಿಸಿ ಎಡೆ ಹಿಡಿಯುತ್ತಾರೆ. ಇದಕ್ಕೆ ಮಾಳ ಪಕ್ಷ ಎನ್ನುವರು. ೩ ವರ್ಷಕ್ಕಿಂತ ಚಿಕ್ಕವರು ಸತ್ತರೆ ಹಾಲು ತುಪ್ಪ ಬಿಡುತ್ತಾರೆ. ಈ ಎಲ್ಲ ವಿಧಿ ವಿಧಾನಗಳು ೩ ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಸತ್ತರೆ ಮಾತ್ರ ಆಚರಿಸುತ್ತಾರೆ.

ಮನೆ

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಂಡು ಬರುವ ಗೊಂದಲಿಗರು ತಮ್ಮ ಇಡೀ ಜೀವನವನ್ನು ಅಲೆಮಾರಿತನದಲ್ಲಿಯೇ ಕಳೆಯುವುದರಇಂದ ಇವರಿಗೆ ಸ್ವಂತ ಮನೆಯ ಕಲ್ಪನೆ ಅದರ ರಚನೆಯ ಬಗ್ಗೆ ತಿಳುವಳಿಕೆ ಇರುವುದನ್ನು ಕಾಣುವುದಿಲ್ಲ. ಊರಿನ ಬಯಲು ಪ್ರದೇಶ, ಛತ್ರ ಗುಡಿ ಗುಂಡಾರಗಳಲ್ಲಿ ಶಾಲೆಯ ಆವರಣಗಳಲ್ಲಿ, ಹೊಲ ಗದ್ದೆಗಳಲ್ಲಿ ತಾಡುಪಾಲು ಅಥವಾ ದೊಡ್ಡ ಪ್ಲಾಸ್ಟಿಕ್ ಹೊದಿಕೆಗಳಿಂದ ಈ ಗುಡಿಸಲುಗಳನ್ನು ಕಟ್ಟಿಕೊಳ್ಳುತ್ತಾರೆ. ಸುಮಾರು ೭ ಅಡಿ ಉದ್ದ ೪ ಅಡಿ ಅಗಲದಷ್ಟು ಜಾಗದಲ್ಲಿ ಟೆಂಟ ಹಾಕುವುದುಂಟು. ಗುಡಿಸಲಿನ ಮುಂಭಾಗದಲ್ಲಿ ಮೂರು ಗುಂಡು ಕಲ್ಲುಗಳನ್ನಿಟ್ಟು ಅದರೊಳಗೆ ಬೆಂಕಿ ಹೊತ್ತಿಸಿ, ಅಡುಗೆ ಮಾಡಿಕೊಳ್ಳುವರು. ಗುಡಿಸಲಿನಲ್ಲಿರುವ ಸ್ಥಳವನ್ನು ಮಲಗಿಕೊಳ್ಳಲು ಮತ್ತು ತಮ್ಮ ವಸ್ತುಗಳನ್ನು ಸಂಗ್ರಹಿಸಲು ಬಳಸುವರು. ಚಿಕ್ಕ ಮಕ್ಕಳಿದ್ದರೆ ಗುಡಿಸಲಿನ ಒಳಗೆ ಜೋಳಿಗೆ ಕಟ್ಟುತ್ತಾರೆ.

ಅಲೆಮಾರಿತನಕ್ಕೆ ವಿದಾಯ ಹೇಳಿದ ಕೆಲ ಗೊಂದಲಿಗರಿಗೆ ಸರ್ಕಾರ ಆಶ್ರಯ ಮನೆಗಳನ್ನು ನೀಡಿದೆ. ಇನ್ನೂ ಕೆಲವರು ಸ್ವಂತ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಸ್ವಂತ ಮನೆ ಕಟ್ಟಿಕೊಂಡವರಲ್ಲಿ ಆರ್.ಸಿ.ಸಿ. ಮನೆಗಳು ಸಿಗುವುದು ಅಪರೂಪ. ಹಂಚಿನ ಮನೆಗಳೇ ಹೆಚ್ಚಾಗಿ ಕಂಡುಬರುತ್ತವೆ. ಮನೆಯ ಹೊರಗೆ ಒಂದು ಕಟ್ಟೆ ಕಟ್ಟುವುದು ಇವರ ಮನೆಯ ಮಾದರಿಯಲ್ಲಿ ಕಂಡು ಬರುತ್ತದೆ. ಪಡಸಾಲೆ ಅಡುಗೆ ಮನೆ ದೇವರ ಮನೆ, ಬಚ್ಚಲು ಮನೆ ಒಂದು ಚಿಕ್ಕದಾದ ಹಾಲ್ ಇರುವುದುಂಟು. ಹೆಂಗಸರು ಕಟ್ಟೆಯ ಮೇಲೆ ಕುಳಿತುಕೊಂಡು ಕವದಿ ಹೊಲಿಯುವುದನ್ನು ಕಾಣುತ್ತೇವೆ.

ಒಳ ಆಡಳಿತ

ಗೊಂದಲಿಗರಲ್ಲಿರುವ ಉಪ ಪಂಗಡಗಳಾದ ಗೊಂದಲ ವೃತ್ತಿಗಾಯಕರು (ಕಥೆಗಾರರು, ಬೀದಿ ಹಾಡುಗರರು) ಭೂತೇಯರು, (ಎಣ್ಣೆ ಜೋಗಿಗಳು) ಸಿಂಗದವರು, ಬುಡುಬುಡಕಿಯವರು, ವಾಸುದೇವರು ಮತ್ತು ಜ್ಯೋತಿಷಿಗಳು (ಹಸ್ತ ಸಾಮುದ್ರಿಕ ಮತ್ತು ಗಿಳಿಶಾಸ್ತ್ರ) ಬಾಹ್ಯ ನೋಟಕ್ಕೆ ಇವರು ಬೇರೆ ಬೇರೆಯಾಗಿ ಕಂಡರೂ ಇವರೆಲ್ಲರೂ ಸಾಂಸ್ಕೃತಿಕವಾಗಿ ಇವರೆಲ್ಲರೂ ಒಂದೆ. ಪ್ರಾದೇಶಿಕವಾಗಿ ಭಿನ್ನತೆ ಕಂಡುಬರುತ್ತದೆ. ಕೆಲ ಪ್ರದೇಶಗಳಲ್ಲಿ ಗೊಂದಲಿಗ ಸಮುದಾಯದವರು ಒಂದೇ ಸ್ಥಳದಲ್ಲಿ ನೆಲೆ ಕಂಡು ಕೊಂಡದ್ದುನ್ನು ನೋಡುತ್ತೇವೆ. ‘ಗೊಂದಳಿ ಗಲ್ಲಿ’. ‘ಗೊಂದಳಿ ಓಣಿ’ ಎಂಬ ಹೆಸರುಗಳಿಂದ ಗುರುತಿಸಿಕೊಂಡಿರುವುದುಂಟು. ಅಲೆಮಾರಿಗಳು ತಾವು ಊರೂರು ಅಲೆಯುತ್ತಿದ್ದಾಗಲೂ ತಮ್ಮ ಸಮುದಾಯದವರೆಲ್ಲ ಒಂದೇ ಕಡೆ ಇರಬೇಕೆಂದು ಬಯಸುವುದುಂಟು. ಗೊಂದಲಿಗರು ಅಲೆಮಾರಿ ಅರೆ ಅಲೆಮಾರಿ ಮತ್ತು ನೆಲೆ ಕಂಡುಕೊಂಡವರು ವಾಸಿಸುವ ಎಲ್ಲ ಸ್ಥಳಗಳಲ್ಲಿ ಸಮಾಜದ ಹಿರಿಯರಿರುತ್ತಾರೆ. ಗೌಡ, ಓಲೇಕಾರ, ಚೇರಮನ್ ಎಂಬ ಹುದ್ದೆಗಳು ಇವರ ಸಮುದಾಯದಲ್ಲಿವೆ. ಗೊಂದಲಿಗರ ಓಣಿಗಳಿದ್ದರೆ ಒಂದೊಂದು ಓಣಿಯಿಂದ ಮೂರು ಜನ ನಾಯಕರಿರುತ್ತಾರೆ.

ಸಮುದಾಯದಲ್ಲಿ ಜರಗುವ ಪ್ರತಿಯೊಂದು ವಿಷಯವನ್ನು ಈ ನಾಯಕರ ಗಮನಕ್ಕೆ ತರಲೇಬೇಕೆಂಬ ನಿಯಮವಿದೆ. ನ್ಯಾಯ ನಿರ್ಣಯಕ್ಕೆ ಇವರು ಇರಲೇಬೇಕು ಗೊಂದಲ, ಮದುವೆ, ಜಾತ್ರೆ, ಹೆಣ್ಣು ಗಟ್ಟಿ ಮಾಡುವಾಗ ಹಬ್ಬ, ಹುಣ್ಣಿಮೆ, ಹುಟ್ಟು ಸಾವು ಪ್ರತಿಯೊಂದು ಕಾರ್ಯಗಳಿಗೂ ಹಿರಿಯರು ಇರಲೇಬೇಕು. ಸಾಮಾಜಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳೆಲ್ಲ ಇವರ ಮುಂದಾಳತ್ವ ಮತ್ತು ಮಾರ್ಗದರ್ಶನದಲ್ಲೇ ನಡೆಯುತ್ತವೆ.

ಗೊಂದಲಿಗರ ನ್ಯಾಯ ಪದ್ಧತಿ

ಆಧುನಿಕ ಯುಗದಲ್ಲಿ ಸಣ್ಣ ಪುಟ್ಟ ತಂಟೆ ತಕರಾರುಗಳನ್ನೂ ಕೋರ್ಟು ಕಚೇರಿಗಳ ಮೂಲಕವೇ ಬಗೆಹರಿಸಿಕೊಳ್ಳುದನ್ನೇ ಎಲ್ಲ ಕಡೆ ಕಾಣುತ್ತೇವೆ. ಆದರೆ ಅತ್ಯಂತ ಹಿಂದುಳಿದ ಸಮುದಾಯದವರಾದ ಗೊಂದಲಿಗರು ಸಣ್ಣ ಪುಟ್ಟ ವ್ಯಾಜ್ಯಗಳಿಂದ ಹಿಡಿದು ದೊಡ್ಡ ದೊಡ್ಡ ಸಮಸ್ಯೆಗಳನ್ನು ಕೋರ್ಟು, ಕಚೇರಿ, ಪೋಲೀಸ್ ಸ್ಪೇಶನ್ ವರೆಗೆ ತೆಗೆದುಕೊಂಡು ಹೋಗದೇ ಸಮುದಾಯದ ಪಂಚರ ಮೂಲಕ ಬಗೆಹರಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ವ್ಯವಸ್ಥೆಗೆ ಸಮಾಜದ ಮುಖಂಡರು ಮತ್ತು ಅವರಲ್ಲಿರು ಒಕ್ಕಟ್ಟೇ ಕಾರಣವಾಗಿದೆ. ಹೀಗಾಗಿ ಗೊಂದಲಿಗರು ಕೋರ್ಟುಕಚೇರಿಗಳ ಮೆಟ್ಟಿಲು ಹತ್ತಿ ಹಣ ಕಳೆದುಕೊಂಡು ಸುಸ್ತಾಗುವುದನ್ನು ತಪ್ಪಿಸಿಕೊಂಡಿದ್ದರು. ಆದರೆ ಇತ್ತಿತ್ತಲಾಗಿ ಅವರು ಸಹ ನ್ಯಾಯಾಲಯ, ಪೋಲೀಸ್ ಕಛೇರಿಗಳನ್ನು ಅಲೆಯುತ್ತಿರವುದನ್ನು ಕಾಣುತ್ತೇವೆ.

ಗೊಂದಲಿಗರು ವರ್ಷಕ್ಕೆ ಒಂದೆರಡು ಸಲ ಹಬ್ಬಗಳಲ್ಲಿ ತಮ್ಮ ನೆಲೆಗಳಿಗೆ ಮತ್ತು ಅಲೆಮಾರಿಗಳು ಗೊಂದಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಸ್ಥಳಗಳಿಗೆ ಹೋಗುವರು. ಊರೂರು ತಿರುಗುತ್ತಿರುವಾಗ ಅಲ್ಲಿ ತಂಟೆ ತಕರಾರುಗಳು ಬಂದಿದ್ದರೆ ಅವುಗಳನ್ನೆಲ್ಲ ಅಲ್ಲಿ ಬಗೆಹರಿಸಿಕೊಳ್ಳುವುದುಂಟು. ಎಲ್ಲ ತಂಟೆಗಳ ತನಿಖೆ ಮತ್ತು ನಿರ್ಣಯವನ್ನು ತಮ್ಮ ಆರಾಧ್ಯ ದೈವಗಳ ಎದುರಿನಲ್ಲಿಯೇ ನಡೆಸುವುದುಂಟು. ತಮ್ಮ ಆರಾಧ್ಯ ದೈವಗಳಿಗಿಂತ ದೊಡ್ಡವರು ಯಾರೂ ಇಲ್ಲ ಅದಕ್ಕಾಗಿ ನಾವು ಕೋರ್ಟಿಗೆ ಹೋಗುವುದಿಲ್ಲ ಎನ್ನುವರು. ಗೊಂದಲಿಗರಿಗೆ ಪೋಲೀಸ್ ಮತ್ತು ನ್ಯಾಯಲಯಗಳ ಬಗ್ಗೆ ಗೌರವ ಇದೆ. ಆದರೆ ಸಣ್ಣ ಪುಟ್ಟ ಜಗಳಗಳನ್ನು ನ್ಯಾಯಲಯಗಳಿಗೆ ಮತ್ತು ಪೋಲೀಸ್ ಹತ್ತಿರ ತೆಗೆದುಕೊಂಡು ಹೋದರೆ ಮತ್ತು ಅದರ ಪರಿಹಾರಕ್ಕಾಗಿ ನಾವು ನಮ್ಮ ವೃತ್ತಿಯನ್ನು ಬಿಟ್ಟು ಅಲೆದಾಡುತ್ತಿದ್ದರೆ ನಮ್ಮ ಸಂಸಾರದ ಗತಿ ಏನು? ನಮ್ಮ ಹೆಂಡಿರ ಮಕ್ಕಳ ಸ್ಥಿತಿಗಳೇನು? ಜೊತೆಗೆ ನಮ್ಮ ವೃತ್ತಿಗೂ ಮಣ್ಣು ಬೀಳುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ನಮ್ಮ ನಮ್ಮ ನ್ಯಾಯಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಅಭಿಪ್ರಾಯ ಪಡುತ್ತಾರೆ.

ಗೊಂದಲಿಗರು ನ್ಯಾಯ ನಿರ್ಣಯವನ್ನು ನಿಷ್ಪಕ್ಷಪಾತವಾಗಿ ಮಾಡುವುದುಂಟು. ತಪ್ಪಿತಸ್ಥರನ್ನು ಸೂಕ್ಷ್ಮವಾದ ತನಿಖೆ ಮತ್ತು ಹೇಳಿಕೆಗಳ ಮೂಲಕ ಗುರುತಿಸುತ್ತಾರೆ. ಪಂಚರು ನೀಡಿದ ನಿರ್ಣಯವನ್ನು ಅಪರಾಧಿ ಒಪ್ಪಲೇಬೇಕು. ಒಂದು ವೇಳೆ ಅವನು ಒಪ್ಪದಿದ್ದರೆ. ‘ಮುಂದಿನ ಮನೆ, ಗೊಂದಲಿಗರ ಮೇಲ್ಮನೆ ನ್ಯಾಯಾಲಯಕ್ಕೆ ಆ ವ್ಯಾಜ್ಯವನ್ನು ಕಳಿಸಿಕೊಡಬೇಕಾಗುತ್ತದೆ. ಮೇಲ್ಮನೆ ನ್ಯಾಯಾಲಯ ಅಥವಾ ಮುಂದಿನ ಮನೆ ಎಂದರೆ, ತಮಗಿಂತಲೂ ಗೊಂದಲಿಗರ ದೊಡ್ಡ ಸಮಾಜವಿರುವ ಹಿರಿಯರನ್ನು ಬೇರೆ ಬೇರೆ ಸ್ಥಳಗಳಿಂದ ಕರೆಸುತ್ತಾರೆ. ಆ ಹಿರಿಯರ ಎಲ್ಲ ಖರ್ಚುಗಳನ್ನು ತಪ್ಪಿತಸ್ಥರೇ ಕೊಡಬೇಕಾಗುತ್ತದೆ. ಗೊಂದಲಿಗರಲ್ಲಿ ನ್ಯಾಯ ನಿರ್ಣಯ ಪಾರದರ್ಶಕವಾಗಿರುತ್ತದೆ. ಅಪರಾಧಿ ಈ ಪಂಜರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಪರಾಧಿ ಸಮುದಾಯದ ನ್ಯಾಯ ನಿರ್ಣಯವನ್ನು ಒಪ್ಪದಿದ್ದರೆ. ಅಂಥವರನ್ನು ಕುಲದಿಂದ ಹೊರಗೆ ಇಡುತ್ತಾರೆ. ಇಂಥವರಿಗೆ ಸಮಾಜದಿಂದ ಯಾವ ಸಹಾಯ ಸಹಕಾರಗಳೂ ಸಿಗುವುದಿಲ್ಲ. ಮಾತು ಕಥೆ, ಕೊಡು ಕೊಳ್ಳುವಿಕೆ, ಸಾವು ನೋವು, ಯಾವ ಕೆಲಸಕ್ಕೂ ಇವರನ್ನು ಸೇರಿಸಿಕೊಳ್ಳುವುದಿಲ್ಲ. ಗೊಂದಲಿಗರ ನ್ಯಾಯ ನಿರ್ಣಯದಲ್ಲಿ ಅಪರಾಧಿಗಳನ್ನು ಕ್ಷಮಿಸುವ ಪರಂಪರೆಯೇ ಇಲ್ಲ. ತಪ್ಪಿತಸ್ಥರು ಹಿರಿಯರು ಹೇಳುವ ದಂಡ ನೀಡಿ ಕ್ಷಮೆ ಕೇಳಿದನಂತರವೇ ಸಮುದಾಯದ ಒಳಗೆ ಪ್ರವೇಶ ಅಲ್ಲಿಯವರೆಗೆ ನಿಷೇಧ.

‘ಗೊಂದಲಿಗರು ತಮ್ಮ ಸಮುದಾಯದ ಯಾವುದೇ ವ್ಯಾಜ್ಯವಿದ್ದರೂ ಅದನ್ನು ತಮ್ಮಲ್ಲಿ ಬಗೆಹರಿಸಿಕೊಳ್ಳುವಾಗ ನಾಲ್ಕು ಬಗೆಯ ನಿರ್ಣಯಗಳನ್ನು ಕೈಗೊಳ್ಳುವರು

೧. ಬೇವಿನ ಕಡ್ಡಿ ನ್ಯಾಯ

೨. ಕವಡೆ ನ್ಯಾಯ

೩. ಅಡಕೆ ನ್ಯಾಯ

೪. ಮೀಸೆಯ ನ್ಯಾಯ

ಬೇವಿನ ಕಡ್ಡಿ ನ್ಯಾಯ

ಗೊಂದಲಿಗರ ಸಮುದಾಯದ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಗೆ ಅಥವಾ ಅವನ ಕುಟುಂಬದವರಿಗೆ ಅನ್ಯಾಯ ಮಾಡಿದರೆ, ತೊಂದರೆ ಕೊಟ್ಟರೆ, ಅನ್ಯಾಯಕ್ಕೊಳಗಾದವರು ಒಂದು ಬೇವಿನ ಕಡ್ಡಿಯನ್ನು ತೆಗೆದುಕೊಂಡು ಅದನ್ನು ಉಂಗುರದಾಕಾರದಲ್ಲಿ ಸುತ್ತಿಕೊಂಡು ಹಿರಿಯರ ಹತ್ತಿರ ಹೋಗಿ ತಮಗಾದ ಅನ್ಯಾಯವನ್ನು ತೋಡಿಕೊಳ್ಳುವರು. ಹೀಗೆ ಕಡ್ಡಿಯ ಮೂಲಕ ತಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ನ್ಯಾಯ ನಿರ್ಣಯಿಸುವ ಹಿರಿಯರು ಬೇಗನೆ ಸೇರಿ ನ್ಯಾಯ ನಿರ್ಣಯಿಸುವರು.

ಕಡ್ಡಿಯ ಬದಲಾಗಿ ಕವಡಿಯನ್ನು ಇಟ್ಟರೆ ಕವಡಿ ನ್ಯಾಯವೆಂದು, ಅಡಕೆ ಇಟ್ಟರೆ ಅಡಕೆ ನ್ಯಾಯವೆಂದು, ಮೀಸೆ ಕಿತ್ತು ಗಂಟಿನಲ್ಲಿಟ್ಟರೆ ಮೀಸೆ ನ್ಯಾಯವೆಂದೂ ಕರೆಯುವುದುಂಟು. ಗೊಂದಲಿಗರ ಹಿರಿಯರೆಲ್ಲ ಗುಡಿ, ಕಟ್ಟೆ ಬಯಲು ಅಥವಾ ಗುಡಿಸಲು ಮುಂದೆ ಸೇರುವರು. ಅವರು ಸೇರುವ ಸ್ಥಳವೇ ನ್ಯಾಯಾಲಯ ವಾದಿ ಪ್ರತಿವಾದಿಗಳನ್ನು ಕರೆಸುತ್ತಾರೆ. ಈ ನ್ಯಾಯಾಲಯದಲ್ಲಿ ಗಂಡಸರು ಹೆಂಗಸರು ಸರಿಸಮಾನವಾಗಿ ಕುಳಿತುಕೊಳ್ಳುವ ಹಾಗಿಲ್ಲ. ನ್ಯಾಯ ನಿರ್ಣಯಕ್ಕೆ ಹೆಂಗಸರು ಸಾಕ್ಷಿ ಹೇಳುತ್ತಾರೆ. ಸಾಕ್ಷಿ ಹೇಳುವವರು ಹಿರಿಯರ ಎದುರಿಗಿಟ್ಟಿ ಬೇವಿನ ಕಡ್ಡಿ, ಅಡಿಕೆ, ಕವಡೆ ಮುಟ್ಟಿ ಅಥವಾ ಶಕ್ತಿದೇವತೆಗಳ ಮೇಲೆ ಆಣೆ ಮಾಡಿ ಸಾಕ್ಷಿ ಹೇಳುವುದುಂಟು, ವಾದಿ ಪ್ರತಿವಾದಿ ಮತ್ತು ಸಾಕ್ಷಿಗಳ ವಿಚಾರಣೆ ನಂತರ ಹಿರಿಯರು ತೀರ್ಪು ನೀಡುವರು.

ಹೆಣ್ಣುಗಳು ತಮ್ಮ ಗಂಡಂದಿರಿಗೆ ಅನ್ಯಾಯವೆಸಗಿದರೆ, ಅವರನ್ನು ತಿರಸ್ಕರಿಸಿದರೆ, ಹೀಯಾಳಿಸಿ, ಮಾತನಾಡಿದರೆ ಅವಳಿಗೆ ಕೊರಳಲ್ಲಿ ಕಲ್ಲು ಕಟ್ಟಿ ಗುಡಿ ಸುತ್ತಲು ಹೇಳುವರು. ಗಂಡು ತನ್ನ ಹೆಂಡತಿಗೆ ಕಿರುಕುಳ ಕೊಡುತ್ತಿದ್ದರೆ ಅಂತವರಿಗೆ ಬೆನ್ನಿನ ಮೇಲೆ ಕಲ್ಲು ಹೇರಿ ನಿಲ್ಲಿಸಿ ಕ್ಷಮೆ ಕೋರುವಂತೆ ಹಿರಿಯರು ಹೇಳುತ್ತಾರೆ. ಮತ್ತೆ ಈ ರೀತಿ ತೊಂದರೆ ಕೊಡುವುದಿಲ್ಲವೆಂದು ದೇವಿಯ ಮೇಲೆ ಆಣೆ ಮಾಡಿಸುವರು ಇಷ್ಟಲ್ಲದೆ ತಪ್ಪಿತಸ್ಥ ದಂಡವನ್ನು ಕೊಡಬೇಕಾಗುತ್ತದೆ. ಈ ದಂಡ ಐದು ರೂಪಾಯಿಗಳಿಂದ ೧೦೦೦ರೂಗಳ ವರೆಗೆ ಇರುತ್ತದೆ. ದಂಡದ ಹಣವನ್ನು ಸಮಾಜದ ಕೆಲಸಕ್ಕೆ ಬಳಸುವುದುಂಟು. ಅಪರಾಧ ಕೃತ್ಯ ಎಸಗಿದವನು ನ್ಯಾಯವನ್ನು ಮುಂದೆ ಹಾಕುತ್ತ ಹೋದರೆ ನ್ಯಾಯ ನಿರ್ಣಯವಾಗುವವರೆಗೆ ನಡೆಯುವ ಹಿರಿಯರ ಖರ್ಚನ್ನು ಅವನೇ ಭರಿಸಬೇಕಾಗುತ್ತದೆ.

ಗೊಂದಲಿಗರ ಭಾಷೆ

ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ಸಂಸ್ಕೃತಿ, ಶಿಕ್ಷಣ, ಆರ್ಥಿಕ ಸ್ಥಿತಿಗತಿಗಳು, ಸಾಹಿತ್ಯ ಕಲೆ ಮುಂತಾದವುಗಳ ಅಧ್ಯಯನ ಎಷ್ಟು ಮುಖ್ಯವಾಗಿರುತ್ತದೆಯೋ, ಅವರು ಬಳಸುವ ಭಾಷೆಯ ಅಧ್ಯಯನವೂ ಅಷ್ಟೇ ಮುಖ್ಯವಾಗಿರುತ್ತದೆ. ಬುಡಕಟ್ಟುಗಳ ಲಕ್ಷಣಗಳನ್ನು ಗುರುತಿಸುವಾಗ ಅವರ ಭಾಷೆಯನ್ನು ಮುಖ್ಯವಾದ ಸಂಗತಿಯಾಗಿ ಪರಿಗಣಿಸಬೇಕಾಗುತ್ತದೆ. ಗೊಂದಲಿಗರು ಮಾತನಾಡುವ ಭಾಷೆಯನ್ನು ಇಲ್ಲಿಯವರೆಗೆ ಮರಾಠಿ ಭಾಷೆ ಎಂದೇ ಹೇಳುತ್ತ ಬಂದಿದ್ದಾರೆ. ಗೊಂದಲಿಗರು ಆರಂಭದ ಕಾಲದಿಂದ ತಮ್ಮದೇ ಆದ ಉಪಭಾಷೆಯನ್ನು ಮಾತನಾಡುತ್ತಿದ್ದಾರೆ. ಗೊಂದಲಿಗರು ಮಾತನಾಡುವ ಭಾಷೆಯನ್ನು ‘ಖಿವಾರಿ’ ಭಾಷೆ ಎಂದು ಕರೆಯುತ್ತಾರೆ. ಈ ಖಿವಾರಿ ಭಾಷೆಗೆ ಲಿಪಿ ಇಲ್ಲ. ಇದು ಆಡುಭಾಷೆಯಲ್ಲಿಯೇ ಉಳಿದುಕೊಂಡಿದೆ. ಖಿವಾರಿ ಮತ್ತು ಮರಾಠಿ ಭಾಷೆಯ ಧ್ವನಿಗಳು ಒಂದೇ ರೀತಿಯಾಗಿರುವುದು ಕಂಡುಬರುತ್ತದೆ.

ಗೊಂದಲಿಗರು ಮಾತನಾಡುವ ಖಿವಾರಿ ಭಾಷೆ ಇದು ಒಂದು ಪ್ರತ್ಯೇಕ ಬುಡಕಟ್ಟಿನ ಭಾಷೆಯಾಗಿ ಕಂಡುಬರುತ್ತದೆ. ಖಿವಾರಿ ಭಾಷೆ ಬುಡಕಟ್ಟು ಭಾಷೆಯ ಎಲ್ಲ ಲಕ್ಷಣಗಳನ್ನು ಹೊಂದಿರುವುದು ಕಂಡುಬರುತ್ತದೆ. ಖಿವಾರಿ ಭಾಷೆಯ ಬಳಕೆ ಇಂದು ಗೊಂದಲಿಗರಲ್ಲಿ ಮಾಯವಾಗುತ್ತಿದೆ. ಅಲ್ಲಲ್ಲಿ ಬೆರೆಳೆಣಿಕೆಯಷ್ಟು ಜನ ಮಾತ್ರ ಈ ಭಾಷೆಯನ್ನು ಮಾತನಾಡುವವರು ಕಾಣಸಿಗುತ್ತಾರೆ. ಖಿವಾರಿ ಭಾಷೆ ಆಡು ಭಾಷೆ ಮಾತ್ರ ಆಗಿದ್ದರಿಂದ ಅದು ಮರಾಠಿ ಭಾಷೆಯಲ್ಲಿ ಬೆರೆತು ಹೋಗಿದೆ. ಮರಾಠಿಯ ಪ್ರಭಾವ ಈ ಖಿವಾರಿ ಭಾಷೆಯ ಮೇಲೆ ತೀವ್ರವಾದ ಪರಿಣಾಮ ಬೀರಿದ್ದರಿಂದ ಇದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಖಿವಾರಿ ಭಾಷೆಯ ಕೆಲ ಉದಾಹರಣೆಗಳನ್ನು ಇಲ್ಲಿ ಗಮನಿಸಿ. ಖಿವಾರಿ ಶಬ್ದಗಳಿಗೆ ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಅರ್ಥವನ್ನು ಕೊಡಲಾಗಿದೆ. (ಈ ಕೆಳಗಿನ ಶಬ್ದಗಳ ಬಗೆಗೆ ಶ್ರೀ ಶಿವಾನಂದ ಪಾಚಂಗಿ ಅವರು ಮಾಹಿತಿಯನ್ನು ನೀಡಿದ್ದಾರೆ).

ಖಿವಾರಿ

ಮರಾಠಿ ಕನ್ನಡ
೧ ಮಾನವ ಗಾಸಗಲಾ ೧ ಪೋಲಿಸ್ ಆಲ ೧ ಪೋಲಿಸ ಬಂದಾ
೨ ತಿತಚಠಾಲ ೨ ತಿತಚ ತಾಮ ೨ ಅಲ್ಲಿಯೇ ನಿಂತುಕೊ
೩ ಗಾವಂಡಿ ಗ್ಯಾಚಿ ೩ ಪರಜಾತಿ ಚೆ ೩ ಪರಜಾತಿ ಹೆಣ್ಣು
ಮಾನವಿ ಗಾಸಗಿಲಿ ಮೂಲಗಿ ಎ ತಾಹೆ ಮಗಳುಬರುತ್ತಿದ್ದಾಳೆ
೪ ಚಿಬಾವೊನ ಚಲಾವ ೪ ಗಾಬರೂನ ತಾಲೈಲಾ ಪಾಯಜೆ ೪ ಹೆದರಿ ನಡಯಬೇಕು
೫ ಬೈದಾ ಲೌಕಿಕ ವಿಬಳುವಾ ೫ ಲೌಕಿರ್ ಚಾವುಯಾ ೫ ಬೇಗ ಹೋಗೋಣ
೬ ಖಾಪಾ ೬ ಪೈಸಾ, ಧನ ೬ ಹಣ
೭ ನಾಚಾಲ ನಿಬಳ ೭ ಗರಿ ಬಾವು ಯಾ ೭ ಮನೆಗೆ ಹೋಗು
೮ ಕಪಳ ೮ ಪಳ ೮ ಓಡು
೯ ಭೈರ ಬಾಸ್ವಾಡ ೯ ಬಾಹೇರ ಘಾಲ ೯ ಹೊರಗೆ ಹಾಕು (ಹೊರಗೆ ಇಡು)
೧೦ ಸಂಖ್ಯೆಲುಗು ೧೦ ಡೊಳೆ ಮಾರ ೧೦ ಕಣ್ಣಸನ್ನೆ ಮಾಡು
೧೧ ಕಿಸಬ್ ೧೧ ಗಪ್ ಬಸ್ ೧೧ ಸುಮ್ಮನಿರು
೧೨ ಮೆಕೆಳ್ಯಾ ೧೨ ಮಾಸೋಳಿ/ಮಾಸ ೧೨ ಮೀನಿ
೧೩ ಚುವಾನಿ ೧೩ ಚಹಾ ೧೩ ಚಹಾ/ಪಾನಿ
೧೪ ಕೊಯ್ತ ೧೪ ಜೀವನ ಕರ್ ೧೪ ತಿನ್ನು ಅಥವಾ ಊಟ ಮಾಡು
೧೫ ನೇಮಾನ ೧೫ ಮಟನ್ ೧೫ ಮಟನ್
೧೬ ಗುಗ್ಗರ‍್ಯಾ ನಿಜಲೆ ೧೬ ಸಮಜತೆ ೧೬ ಅರ್ಥ ಆಗುತ್ತದೆ
೧೭ ನೆಕಳಿ ೧೭ ದಾಳಬಾಜಿ/ವರಣ್ ೧೭ ಸಾರ
೧೮ ಖನ್ನ ೧೮ ಬಾತ ೧೮ ಅನ್ನ
೧೯ ಟೆಪ್ಯಾ ಚೋಲ ೧೯ ಬಾಕರಿ ದ್ಯಯಿಲಾ ಸಾಂಗ ೧೯ ರೊಟ್ಟಿ ಕೊಡುವಂತೆ ಹೇಳು
೨೦ ಏಕ ಭಂಗಿ ೨೦ ಏಕ ರುಪಯಾ ೨೦ ಒಂದು ರೂಪಾಯಿ
೨೧ ಫತ್ರೆ ೨೧ ಅಂಡಾ ೨೧ ತತ್ತಿ
೨೨ ಮಕರೆ ೨೨ ತಾಂದೂಳ್ ೨೨ ಅಕ್ಕಿ
೨೩ ಟೆಡಕ ೨೩ ಬಗ ೨೩ ನೋಡು
೨೪ ತಿಜಾ ನರಗಾ ೨೪ ತಿಚಾ ನವರಾ ೨೪ ಆಕೆಯ ಗಂಡ
೨೫ ತಿಜಾ ನರಗಿ ೨೫ ತ್ಯೇಚಿ ಬಾಯಿಕೊ ೨೫ ಅವನ ಹೆಂಡತಿ
೨೬ ಖೊಂಬಡ ೨೬ ತೊಂಡ/ಚಹರಾ ೨೬ ಮುಖ
೨೭ ಚಿಬರಲಿ ಖೋಟಗ ೨೭ ಪೋಟ ಬರಲ ೨೭ ಹೊಟ್ಟೆ ತುಂಬಿತೆ
೨೮ ಚೋಮಾ ೨೮ ಹವಾಲ್ದಾರ ೨೮ ಪಿಎಸ್‌ಐ ಹವಾಲ್ದಾರ
೨೯ ಕಾಳ್ಯಾಂಗಿಟಾ/ಕಾವಳ ೨೯ ಪೋಲಿಸ್ ೨೯ ಪೋಲಿಸ್
೩೦ ಕಾಳಕಿ ೩೦ ದಾರು ೩೦ ಶೆರೆ
೩೧ ಜುಂಗರ ೩೧ ಮುಲಗಾ/ಮುಲಗಿ ೩೧ ಮಕ್ಕಳು
೩೨ ದುಕವಾನ ಬಾಸ್ವಾಡ ೩೨ ಘವನಜಾ ೩೨ ತೆಗೆದುಕೊಂಡು ಹೋಗು
೩೩ ಕೆಪಡ್ಲ ೩೩ ಕಾಲಿ ಪಡ್ಲ ೩೩ ಕೆಳಗೆ ಬಿದ್ದಿತು
೩೪ ಚೋಲ ೩೪ ಬೋಲ ೩೪ ಹೇಳು
೩೫ ಖಂಗಳ ೩೫ ಏಡಾ/ವೇಡಾ ೩೫ ಅರಹುಚ್ಚು
೩೬ ಖೈಕ ೩೬ ಐಕ್ ೩೬ ಕೇಳು
೩೭ ಮಕಾಟ ೩೭ ತೊಂಡ ೩೭ ಮುಖ
೩೮ ಧಾಗಾಳಿಕರ ೩೮ ತಾಲಿಸ ೩೮ ಮಸಗಾಮಾಡು
೩೯ ಮಾನ್ವಿ ಖಪಡಿ ಸರಕ ದಿಸ್ತ ೩೯ ಜಾಳ್ಯಾತ್ ಪಡಲಿ ೩೯ ಬಲಿಗೆ ಬಿದ್ದಂಗ ಕಾಸ್ತಾಳ
೪೦ ಬೆಂಗ್ಯಾ ಚನಾಜಾತ್ ೪೦ — ೪೦ ಮಸಲ್ಮಾನರ ಮನೆಯಲ್ಲಿ
೪೧ ಖಡಿಗ್ಯಾಚೆ ೪೧ ಮಡಾರ್ ೪೧ ವಡ್ಡರು
೪೨ ಖಮ್ರಾಚಿ ೪೨ ಮರಾಠಿ ೪೨ ಮರಾಠಿ
೪೩ ಲೈಘಾಡತಿ ಮಾನ್ವಿ ೪೩ ವೈಟ ಮುಲಗಿ ೪೩ ಬಹಳ ಕೆಟ್ಟ ಹೆಣ್ಣು ಮಗಳು
೪೪ ಲೈಘಾಡತಿ ಮಾನ್ವಾ ೪೪ ವೈಟ ಮುಲಗಾ ೪೪ ಬಹಳ ಕೆಟ್ಟ ಮನುಷ್ಯ
೪೫ ಟುಂಗಲಾ ೪೫ ಮೇಲಾ ೪೫ ಸತ್ತನು
೪೬ ಜಿಗಾಚಾಘಡತಿ ೪೬ ಜಗಾತಿತ್ ವೈತ್ ಮಾನುಸ್ ೪೬ ಜಗತ್ತಿನಲ್ಲಿಯ ಕೆಟ್ಟ ಮನುಷ್ಯ
೪೭ ಫಂಕಲಿದುಕುವಾ ೪೭ ಕೊಂಬಡಾಗ್ಯಾ ೪೭ ಕೋಳಿ ತೆಗೆದುಕೊ
೪೮ ನರಗ್ಯಾಲಾ ಮಾನ್ತಿ ಲುಗುತಿ ೪೮ ನವರ‍್ಯಾಲಾ ಬಾಯಿಕೊ ಮಾಕ್ತಿ ೪೮ ಗಂಡನಿಗೆ ಹೆಂತಿ ಹೊಡೆಯುತ್ತಾಳೆ
೪೯ ಜುಕಲ್ಯಾ ಸರಕ ಗಪ್‌ಕಬಸ್ ೪೯ ಕುತ್ತಾ ಸರಕ ಗಪ್‌ಚುಪಬಸ್ ೪೯ ನಾಯಿಯಂತೆ ಸುಮ್ಮನೆ ಕುಳಿತುಕೊ
೫೦ ಖಟಾಳ ಮಾನ್ವ ೫೦ ಬೆರೆಕ ಮನು ಮಾನುಸ್ ೫೦ ಬೆರಕಿ ಮನುಷ್ಯ
೫೧ ಖೆತಾಡಾ ಲೌಕರ ಟುಂಗಲಾ ೫೧ ಮತಾರಾ ಲೌಕರ ಮಾನುಸ್ ೫೧ ಮುದುಕ ಬೇಗನೆ ಸತ್ತನು
೫೨ ರಾಕೋಳಿ ಮಾಂಗೆ ೫೨ ಬಾಕರಿ ದ್ಯಯಿಲಾ ಸಾಂಗ ೫೨ ರೊಟ್ಟಿ ಇಸಿದುಕೊ
೫೩ ಬೆಂಗಾಳಿ ೫೩ ಬೀಡಿ ಸಿಗರೇಟ್ ೫೩ ಬೀಡಿ, ಸಿಗರೇಟ್

ಬುಡಕಟ್ಟು ಸಮುದಾಯವಾದ ಗೊಂದಲಿಗರು ತಮ್ಮದೇ ಆದ ಭಾಷೆಯನ್ನು ಹೊಂದಿದ್ದು ಇಂದು ಕೆಲವರು ಆ ಭಾಷೆಯ ಮೂಲಕವೇ ಅವರು ವ್ಯವಹರಿಸುತ್ತಿದ್ದುದರ ಬಗ್ಗೆ ಮಾಹಿತಿ ದೊರೆಯುತ್ತದೆ.