ಗೊಂದಲಿಗರ ಹೆಂಗಸರ ಕಸಬುಗಳು

ಗೊಂದಲಿಗರ ಹೆಂಗಸರು ಗಂಡಂದಿರ ಜೊತೆಗೆ ಇವರು ಅಲೆಮಾರಿಗಳಾಗಿದ್ದಾರೆ. ಗಂಡಸರು ಬುಡಬುಡಕೆ, ಗೊಂದಲ, ಶಾಸ್ತ್ರ, ಶಕುನ ಹೇಳುತ್ತ ಅಲೆದಾಡುತ್ತಿದ್ದರೆ. ಹೆಣ್ಣು ಮಕ್ಕಳು ಊರಿನಲ್ಲಿಹಾಕಿಕೊಂಡಿರುವ ಜೋಪಡಿ ಕಾಯುವ ಅಡುಗೆ ಸಿದ್ಧಪಡಿಸುವ ಮತ್ತು ಮಕ್ಕಳನ್ನು ಸಾಕುವುದು ಜೊತೆಗೆ ಗುಡಿಸಲುಗಳಲ್ಲಿ ಅಥವಾ ಮನೆಗಳಲ್ಲಿ ‘ಕೌದಿ’ ಹೊಲಿಯುವ ವೃತ್ತಿಯನ್ನು ಮಾಡುತ್ತಾರೆ. ಸಾಮಾನ್ಯವಾಗಿ ಗೊಂದಲಿಗರ ಎಲ್ಲ ಹೆಂಗಸರೂ ಈ ಕೌದಿ ಹೊಲಿಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ. ಕೌದಿ ಹೊಲಿಯುವುದನ್ನು ಹೆಂಗಸರು ತಮ್ಮ ಮನೆಯ ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಶಹರಗಳಲ್ಲಿ ವಾಸಿಸುವ ಹೆಂಗಸರಲ್ಲಿ ಸುಮಾರು ಶೇ. ೬೦ರಷ್ಟು ಮಹಿಳೆಯರು ಈ ವೃತ್ತಿಯನ್ನು ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಕಲಾತ್ಮಕವಾಗಿ ಹೊಲಿಯುತ್ತಿದ್ದ ಕೌದಿಗಳಿಗೆ ಒಂದು ಕಾಲಕ್ಕೆ ಗ್ರಾಮೀಣ ಪ್ರದೇಶದಲ್ಲಿ ಬಹಳ ಬೇಡಿಕೆ ಇತ್ತು. ಇಂದು ಆ ಬೇಡಿಕೆ ಇಲ್ಲ. ‘ಕೌದಿ’ ಇದು ಹರಿದ, ಕತ್ತರಿಸಿದ ನೂಲಿನ ಬಟ್ಟೆಗಳಿಂದ ತಯಾರಿಸಿದ ದಪ್ಪವಾದ ಹೊದಿಕೆ. ಕೌದಿಯನ್ನು ಹೊದಿಯಲಿಕ್ಕೆ ಮತ್ತು ಹಾಸಲಿಕ್ಕೆ ಬಳಸುವುದುಂಟು. ಈ ಕೌದಿಯ ಮಹತ್ವ ಶಹರದ ನಾಗರಿಕ ಸಮುದಾಯದವರಿಗೆ ಅಷ್ಟಾಗಿ ಗೊತ್ತಿಲ್ಲ. ಕೌದಿಯಲ್ಲಿರುವ ಸುಖವನ್ನು ಗ್ರಮೀಣ ಜನತೆ ಅನುಭವಿಸಿದ್ದಾರೆ. ಗ್ರಾಮೀಣ ಭಾಗದ ಯುವ ಪೀಳಿಗೆ ಈ ಕೌದಿಯನ್ನು ಇಂದು ತುಚ್ಛವಾಗಿ ಕಾಣುತ್ತಿರುವುದು ಕಂಡುಬರುತ್ತದೆ.

ಗೊಂದಲಿಗರ ಹೆಂಗಸರು ತಾವು ಉಳಿದುಕೊಂಡಿರುವ ಊರಿನ ಮನೆ ಮನೆಗಲಿಗೆ ಹೋಗಿ ಕೌದಿ ಹೊಲಿದು ಕೊಡುತ್ತೇನೆ ಕೊಡಿ ಎಂದು ಕೇಳಿ ಅವರಿಂದ ಸೀರೆ, ಕುಬ್ಬಸ, ಧೋತರ, ಶಲ್ಯ, ಅಂಗಿ, ರುಮಾಲು ಇತರೆ ಚಿಂದಿ ಬಟ್ಟೆಗಳನ್ನು ಮನೆಗೆ ತರುತ್ತಾರೆ. ಇಂದು ಒಂದು ಕೌದಿ ಹೋಲಿಯಲಿಕ್ಕೆ ೧೦೦ ರೂಗಳಿಂದ ೧೫೦ ರೂಗಳವರೆಗೆ ಕೂಲಿ ಪಡೆಯುತ್ತಾರೆ. ಈ ಬಟ್ಟೆಗಳನ್ನೆಲ್ಲ ಸ್ವಚ್ಛಗೊಳಿಸಿ ಒಣಗಿಸಿ ಅವುಗಳನ್ನು ಕಲಾತ್ಮಕವಾಗಿ ಹೊಂದಿಸಿದಪ್ಪದಾದ ದಾರ ಮತ್ತು ಸೂಜಿಯನ್ನು ಉಪಯೋಗಿಸಿ ಹೊಲಿಯುತ್ತಾರೆ. ಒಂದು ಕೌದಿ ತಯಾರಿಸಲು ಕನಿಷ್ಟ ೧೦ ದಿನಗಳ ಕಾಲವಕಾಶ ಬೇಕಾಗುತ್ತದೆ.ಗೊಂದಲಿಗರ ಈ ಹೆಂಗಸರ ಕೌದಿ ಹೊಲಿಯುವ ವೃತ್ತಿಯನ್ನು ಕಂಡ ಗ್ರಾಮೀಣ ಜನತೆ ‘ದೋಷಿಗ್ಯಾನ ಹೆಂಡತಿ ಹಾಸಿಗ್ಯಾನ ಅಂತ’ ಎಂಬ ಗಾದೆ ಮಾತು ಹೇಳಿದ್ದಾರೆ. ಈ ಹೆಂಗಸರು ಮನೆಯ ಅಡುಗೆ ಕಸ ಮುಸುರಿ ಮುಗಿದ ತಕ್ಷಣವೇ ಈ ಕೌದಿ ಹೊಲಿಯುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಸಣ್ಣ ಸಣ್ಣ ಮಕ್ಕಳಿಗೂ ಇರುವ ಕೌದಿ ಹೊಲಿಯುವುದುಂಟು. ಇದಕ್ಕೆ ‘ದುಬಟಿ’ ಎಂಬ ಶಬ್ದದಿಂದಲೂ ಕರೆಯುವುದುಂಟು. ಸಿಂಪಿಗರ ಅಂಗಡಿಯಲ್ಲಿ ಕತ್ತರಿಸಿ ಉಳಿದ ತುಂಡು ತುಂಡಾದ ಬಣ್ಣ ಬಣ್ಣದ ಬಟ್ಟೆಗಳನ್ನು ತಂದು ಅದರಿಂದ ಕೌದಿ ತಯಾರಿಸುತ್ತಾರೆ. ಸುಮಾರು ೫೦ ರಿಂದ ೭೫ ರೂ.ಗಳವರೆಗೆ ಈ ಕೌದಿಗಳನ್ನು ಗೊಂದಲಿಗರು ಮಾರಾಟ ಮಾಡುತ್ತಾರೆ.

ಈಗ ಈ ಕೌದಿ ಹೊಲಿಯುವ ವೃತ್ತಿ ಕೂಡ ಅವರಿಂದ ದೂರವಾಗುತ್ತಿದೆ. ಗ್ರಾಮೀಣ ಜನತೆ ಈ ಕೌದಿಗಳಿಂದ ದೂರವಾಗುತ್ತಿದ್ದರಾ. ಅಂಗಡಿಗಳಲ್ಲಿ ದೊರೆಯುವ ರಗ್ಗು, ಕಂಬಳಿ, ದರಗಳನ್ನು ಹೆಚ್ಚಾಗಿ ಖರೀದಿಸುತ್ತಿರುವುದರಿಂದ ಗೊಂದಲಿಗರ ಹೆಂಗಸರ ವೃತ್ತಿ ಇಂದು ಮಾಯವಾಗುತ್ತಿದೆ.

ಕೌದಿ ಹೊಲಿಯುವ ವೃತ್ತಿ ಸುಲಭವೇನಲ್ಲ ದಿನಕ್ಕೆ ೧೦ ರಿಂದ ೧೨ ಗಂಟೆಯವರೆಗೆ ನೆಲದ ಮೇಲೆ ಕುಳಿತು ಸದಾ ಬಾಗಿಕೊಂಡೇ ಈ ವೃತ್ತಿಯನ್ನು ನಿರ್ವಹಿಸಬೇಕಾಗುತ್ತದೆ. ಇದರಿಂದ ಗೊಂದಲಿಗರ ಸ್ತ್ರೀಯರಲ್ಲಿ ಸುಮಾರು ಅವರ ೪೦ನೇ ವರ್ಷಕ್ಕೆ ಬೆನ್ನು ನೋವು ಪ್ರಾರಂಭವಾಗುತ್ತದೆ. ಈ ವೃತ್ತಿ ಕೈಕೊಂಡವರೆಲ್ಲ ವಯಸ್ಸಾದ ಮೇಲೆ ಬೆನ್ನು ಡೂಗವಾಗಿ ಕೋಲು ಹಿಡಿದು ಬಗ್ಗಿ ನಡೆಯುತ್ತಿರುವುದನ್ನು ಕಾಣುತ್ತೇವೆ. ಕಣ್ಣು ಅತೀ ಕಡಿಮೆ ವಯಸ್ಸಿನಲ್ಲಿಯೇ ಮಂಜಾಗುತ್ತಿರುವುದು, ಪ್ರತಿ ದಿನ ಹಳೆಯ ಬಟ್ಟೆಗಳ ಮಧ್ಯದಲ್ಲಿ ಕುಳಿತು ಅದರ ಧೂಳನ್ನು ತಿಂದು ಅವರು ಅನೇಕ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೆಚ್ಚಾಗಿ ಇವರಲ್ಲಿ ಟಿ ಬಿ, ಡಸ್ಟ್ ಅಲರ್ಜಿ ಕಂಡುಬರುತ್ತಿದೆ.

೪.೨ ಪಾರಂಪರಿಕ ಕಸುಬುದಾರರ ಸ್ಥಿತಿಗತಿಗಳು

ಪೇಶ್ವೆಯವರ ಆಡಳಿತ ಕಾಲಕ್ಕೆ ಉನ್ನತ ಸ್ಥಿತಿಯಲ್ಲಿದ್ದ ಗೊಂದಲ ಹಾಕುವ ಧಾರ್ಮಿಕ ವೃತ್ತಿ ಹಂತ ಹಂತವಾಗಿ ಕಡಿಮೆಯಾಗುತ್ತ ಬಂದಿತು. ಗೊಂದಲಿಗರಲ್ಲಿ ವಿವಿಧ ಪಂಗಡಗಳಾಗಿ ಕವಲೊಡೆದು ವಿವಿಧ ಕಲಾ ವೃತ್ತಿಗಳನ್ನು ಅವಲಂಬಿಸಿ ಅವುಗಳ ಪ್ರದರ್ಶನದ ಮೂಲಕ ಭಿಕ್ಷಾಟನೆ ಮಾಡುತ್ತ ಅಲೆಮಾರಿಗಳಾಗಿಯೇ ಜೀವಿಸಹತ್ತಿದ್ದರು. ಇವರ ಪಾರಂಪರಿಕ ವೇಷಭೂಷಣಗಳು ಇವರಿಂದ ಪ್ರದರ್ಶಿಸಲ್ಪಡುತ್ತಿದ್ದಕಲೆ, ಸಾಹಿತ್ಯ ಜನರಲ್ಲಿ ಭಕ್ತಿ ಭಾವ ತುಂಬುವಂತಹದ್ದಾಗಿತ್ತು. ಭಕ್ತಿ – ಮುಕ್ತಿ ಪುರಾಣ, ಪವಾಡ, ಚರಿತ್ರೆ, ಸತ್ಯಕಥೆ, ಸಾಮಾಜಿಕ ವಿಡಂಬನೆ, ಹಾಸ್ಯ ಮುಂತಾದ ಎಲ್ಲ ವಸ್ತುಗಳನ್ನೊಳಗೊಂಡ ಕಥೆಗಳು ಜನರನ್ನು ಆಕರ್ಷಿಸಿದ್ದವು. ಒಂದು ಕಾಲದಲ್ಲಿ ಈ ಅಲೆಮಾರಿ ಬುಡಕಟ್ಟಿನ ವಿವಿಧ ಕಲೆಗಳನ್ನು ನೋಡಿದ ಜನ ಇವರನ್ನು ಗೌರವದಿಂದ ಕಾಣುತ್ತಿದ್ದರು. ಗೊಂದಲಿಗರ ಸಮುದಾಯದ ಪಾರಂಪರಿಕ ವೃತ್ತಿಗಳಾದ ಬೀದಿ ಹಾಡುಗಾರರು, ಕಥೆಗಾರರ, ಭೂತೇಯರು, (ಎಣ್ಣೆ ಜೋಗಿಗಳು) ಸಿಂಗದವರು, ಬುಡಬುಡಕೆಯವರು, ವಾಸುದೇವರು, ಅಲೆಮಾರಿ ಹಸ್ತ ಸಾಮುದ್ರಿಕ ಜ್ಯೋತಿಷಿಗಳು, ಮತ್ತು ಗಿಳಿಶಾಸ್ತ್ರದ ಜ್ಯೋತಿಷಿಗಳು ಇವರೆಲ್ಲರ ಸ್ಥಿತಿಗತಿಗಳು ಇಂದು ಶೋಛನಿಯ ಸ್ಥಿತಿಯಲ್ಲಿವೆ. ಕಥೆಗಾರ, ಬೀದಿ ಹಾಡುಗಾರರು, ಎಣ್ಣೆ ಜೋಗಿಗಳು ಬುಡಬುಡಕೆಯವರು ಅಲೆಮಾರಿ ಜ್ಯೋತಿಷಿಗಳು ಗಿಳಿಶಾಸ್ತ್ರದವರು ಮತ್ತು ಅರೆಪಂಚಾಂಗದವರು ಬಡತನದ ಬೇಗೆಯಿಂದ ಬಳಳುತ್ತಿದ್ದು ಒಂದು ಹೊತ್ತಿನ ಕೂಳಿಗೂ ಪರದಾಡುವಂತಾಗಿದೆ. ಇದಕ್ಕೆಲ್ಲ ಕಾರಣ ಅವರು ನಿರ್ವಹಿಸುತ್ತಿರುವ ವೃತ್ತಿಗಳು, ಆಧುನಿಕ ಸಮಾಜದಲ್ಲಿ ಈ ಕಲಾ ವೃತ್ತಿಯ ಭಿಕ್ಷುಕರ ಕಥೆ, ಸಾಹಿತ್ಯ ಕಲೆ, ಶಕುನ ಮುಂತಾದವುಗಳನ್ನು ಕೇಳುವ ಆಸಕ್ತಿಯೇ ಜನರಲ್ಲಿ ಇಲ್ಲದಂತಾಗಿದೆ. ಹೀಗಾಗಿ ಜನರನ್ನೇ ನಂಬಿ ಬದುಕುತ್ತಿದ್ದ ಈ ಕಲಾವೃತ್ತಿಯ ಕುಟುಂಬದವರು ನಿರ್ಗತಿಕರಾಗಿದ್ದಾರ ದೇಶದ ಯಾವುದೇ ಭಾಗಕ್ಕೆ ಹೋದರು ಇವರ ಹೊಟ್ಟಿ ತುಂಬುತ್ತಿಲ್ಲ.

ಮಾತೃ ದೇವತೆಯರಾದ ಎಲ್ಲಮ್ಮ, ಕಾಳಮ್ಮ, ಅಂಬಾಭವಾನಿ, ತುಳಜಾಭವಾನಿ ಇವರನ್ನು ತಮ್ಮ ಮನೆ ದೈವವಾಗಿ ಸ್ವೀಕರಿಸಿದ ಕುಟುಂಬಗಳು ತಮ್ಮ ಮನೆಯಲ್ಲಿ ನಡೆಯುವ ಮಂಗಲ ಕಾರ್ಯಗಳಲ್ಲಿ ಕಡ್ಡಾಯವಾಗಿ ಗೊಂದಲ ಹಾಕಿಸಬೇಕು ಎಂಬಪರಂಪರೆ ಇದ್ದರೂ ಅದನ್ನು ಅನುಸರಿಸುತ್ತಿಲ್ಲ. ಕೆಲವರು ಗೊಂದಲ ಪೂಜೆಯನ್ನು ಕಾಟಾಚಾರಕ್ಕೆ ಮಾಡಿ ಮುಗಿಸುವವರಿದ್ದಾರೆ. ಹೀಗಾಗಿ ಗೊಂದಲ ಹಾಕುವುದನ್ನೇ ವೃತ್ತಿ ಮಾಡಿಕೊಂಡು ಕುಟುಂಬಗಳು ತನ್ನ ಮುಂದಿನ ಪೀಳಿಗೆಗೆ ಈ ವೃತ್ತಿಯನ್ನು ಕಲಿಸುತ್ತಿಲ್ಲ.

ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ಬುಡಬುಡಕೆಯವರ ಶಕುನ ಕೇಳುವ ಕಾಲ ಎಂದೋ ಮುಗಿದು ಹೋಗಿದೆ. ಅನೇಕ ಬುಡಬುಡಕೆಯವರು ಹಳ್ಳಿಗಳಲ್ಲಿ ಮುಖಂಡರ ಒಪ್ಪಿಗೆ ಪಡೆದು ಹಕ್ಕಿ ಪಣ ಕಟ್ಟಿ ಬೆಳಗಿನ ಜಾವದಲ್ಲಿ ಆ ಊರಿನ ಮುಂದಿನ ಸ್ಥಿತಿಗತಿಗಳನ್ನು ಹೇಳುತ್ತಾರೆ. ಅವರ ಹೇಳಿಕೆಗಳನ್ನು ಕೇಳಿಯೂ ಕೇಳದವರಂತೆ ವರ್ತಿಸುವ ಸಮಾಜ ಇಂದು ನಿರ್ಮಾಣವಾಗಿದೆ. ಬುಡಬುಡಕೆ ಮನೆಗಳಿಗೆ ಬಂದು ಭಿಕ್ಷೆ ಕೇಳಿದರೆ ‘ಮುಂದ್ಹೋಗು, ನಾಳೆ ಬಾ’ ಎಂಬ ಶಬ್ದಗಳನ್ನೇ ಭಿಕ್ಷೆಯಾಗಿ ಪಡೆಯುವಂತಾಗಿದೆ. ಒಂದು ಕಾಲಕ್ಕೆ ಬುಡಬುಡಕೆಗೆ ಭಿಕ್ಷೆ ಹಾಕದಿದ್ದರೆ ಅವರು ಮಾಟ-ಮಂತ್ರ ಮಾಡುತ್ತಾರೆಂಬ ಭಯ ಇತ್ತು.ಹೀಗಾಗಿ ಅವನು ಕೇಳಿರುವ ಕಾಣಿಕೆಯಲ್ಲಿ ಕನಿಷ್ಠ ಅರ್ಧದಷ್ಟಾದರೂ ಜನ ನೀಡುತ್ತಿದ್ದರು. ಜನ ಮಾಟ-ಮಂತ್ರಗಳ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ. ಬುಡಬುಡಕೆಯವರಿಂದ ತಾಯತ, ಕರೀದಾರ ಕಟ್ಟಿಸಿಕೊಳ್ಳುವ ಮತ್ತು ವಿವಿಧ ರೋಗಗಳಿಗೆ ಕಾಡುಮೂಲಿಕೆಗಳನ್ನು ಪಡೆಯುವ ಪರಂಪರೆ ಹಳ್ಳಿಗಳಲ್ಲಿ ಮಾಯವಾಗಿದೆ. ಈಎಲ್ಲಾ ಕಾರಣಗಳಿಂದ ಬುಡಬುಡಕೆಯ ಬದುಕು ಅತಂತ್ರವಾಗಿದೆ. ಎಲ್ಲಿಯೂ ನೆಲೆ ಕಾಣದ ಈ ಬುಡಬುಡಕೆ ಕುಟುಂಬಗಳು ತನ್ನ ವೃತ್ತಿಯನ್ನು ಕೈ ಬಿಡುತ್ತಿವೆ.

ಅಲೆಮಾರಿ ಹಸ್ತ ಮುದ್ರಿಕೆಯವರು, ಅರೆ ಪಂಚಾಂಗದವರು ಮತ್ತು ಗಿಳಿಶಾಸ್ತ್ರದವರ ಸ್ಥಿತಿಗಳು ಬುಡಬುಡಕೆಯವರಿಗಿಂತ ಸ್ವಲ್ಪ ಉತ್ತಮವಾಗಿದ್ದರೂ ಆಧುನಿಕ ಸಮಾಜದಲ್ಲಿ ಅವರು ಬದುಕುವುದು ಕಷ್ಟವಾಗಿದೆ. ‘ನಾವು ಊರಿಂದೂರಿಗೆ ಅಲೆಯುತ್ತಾ ದಿನಕ್ಕೆ ೪೦ ರಿಂದ ೭೫ ರೂಪಾಯಿ ಹಣ ಗಿಟ್ಟಿಸಿಕೊಳ್ಳಲು ಪಡುತ್ತಿರುವ ಪಾಡು ಆ ದೇವರಿಗೆ ಗೊತ್ತು’ ಎಂದು ಗಿಳಿಶಾಸ್ತ್ರದವರು ತಮ್ಮ ಗೋಳನ್ನು ನಮ್ಮ ಮುಂದೆ ತೋಡಿಕೊಳ್ಳುತ್ತಾರೆ. ಕೆಲವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿರುವುದು ಕಂಡು ಬರುತ್ತದೆ. ಅರೆಪಂಚಾಂಗ ವೃತ್ತಿಯವರಲ್ಲಿ ಅನೇಕರು ಕೆಲ ಹಳ್ಳಿಗಳಲ್ಲಿ ಗುಡಿಸಲು ಹಾಕಿಕೊಂಡು ಕೂಲಿ ಮಾಡುತ್ತಿರುವುದನ್ನು ನೋಡುತ್ತೇವೆ. ಬೀದಿ ಹಾಡುಗಾರರು, ಎಣ್ಣೆ ಜೋಗಿಗಳು ತಮ್ಮ ವೃತ್ತಿಯನ್ನು ಬಿಟ್ಟು ಬಹಳ ವರ್ಷಗಳಾಗಿವೆ. ಅಲೆಮಾರಿ ಕಲಾವೃತ್ತಿ ಭಿಕ್ಷುಕರಾದ ಗೊಂದಲಿಗರು ತಮ್ಮ ಪಾರಂಪರಿಕ ಕಲೆಗಳನ್ನು ಉಳಿಸಿಕೊಳ್ಳಲಾಗದೆ ಬೇರೆ ಬೇರೆ ವೃತ್ತಿಗಳ ಮೂಲಕ ಬದುಕು ಸಾಗಿಸುತ್ತಿರುವ ಚಿತ್ರ ಪ್ರತಿಯೊಂದು ಊರಿನಲ್ಲಿ ಕಂಡುಬರುತ್ತದೆ.

೪.೩ ಕೃಷಿ

ಗೊಂದಲಿಗರು ಮೂಲತಃ ಅಲೆಮಾರಿಗಲಾದದ್ದರಿಂದ ಅವರು ಕೃಷಿಕ ವೃತ್ತಿಯಲ್ಲಿ ಎಂದೂ ತೊಡಗಿಸಿಕೊಂಡವರಲ್ಲ. ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ೫೦ ರಿಂದ ೬೦ ಕುಟುಂಬಗಳು ಕೃಷಿಕ ವೃತ್ತಿ ಮಾಡುತ್ತಿವೆ. ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲೂಕಿನಲ್ಲಿ ೭ ಕುಟುಂಬಗಳು ಒಕ್ಕಲುತನ ಮಾಡುವುದು ಕಂಡುಬರುತ್ತದೆ. ಗೊಂದಲಿಗರಲ್ಲಿ ಭೂಮಿ ಇದ್ದವರು ಬೆರಳೆಣಿಕಯಷ್ಟು ಕುಟುಂಬಗಳು ಸಿಗುತ್ತವೆ.

೪.೪. ವರ್ತಮಾನದ ಇತರೆ ಕಸುಬುಗಳು

ಗೊಂದಲಿಗರ ಪಾರಂಪರಿಕ ಕಸುಬುಗಳಾದ ಗೊಂದಲ ವೃತ್ತಿಗಾಯಕರು, ಕಥೆಗಾರರು, ಬೀದಿ ಹಾಡುಗಾರರು, ಎಣ್ಣೆ ಜೋಗಿಗಳು, (ಭೂತೇಯರು) ಸಿಂಗದವರು, ಬುಡುಬುಡಕೆಯವರು, ವಾಸುದೇವರಕು, ಜ್ಯೋತಿಷಿಗಳು, ಹಸ್ತಸಾಮುದ್ರಿಕೆ ಮತ್ತು ಗಿಳಿ ಶಾಸ್ತ್ರದ ಜ್ಯೋತಿಷಿಗಳು ಈ ಹತ್ತು ವೃತ್ತಿಗಳಲ್ಲಿ ಬೆರಳೆಣಿಕೆ ವೃತ್ತಿಗಳು ಮಾತ್ರ ಅಲ್ಲಲ್ಲಿ ಉಳಿದುಕೊಂಡಿರುವುದು ಕಂಡು ಬರುತ್ತದೆ. ಗೊಂದಲ ಹಾಕುವ ವೃತ್ತಿಕಲಾವದಿರು ಜಿಲ್ಲೆಯ ೫ ರಿಂದ ೧೦ರವರೆಗೆ ಕಾಣಸಿಗುತ್ತಾರೆ. ಬುಡಬುಡಕೆಯವರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವವರು ಕಂಡು ಬರುತ್ತಾರೆ. ಜ್ಯೋತಿಷಿಗಳು ತಾಲೂಕು, ನಗರ ಪ್ರದೇಶಗಳಲ್ಲಿದ್ದಾರೆ. ಉಳಿದ ವೃತ್ತಿಯವರಿಗಿಂತ ಇವರು ಉನ್ನತ ಸ್ಥಿತಿಯಲ್ಲಿದ್ದಾರೆಂದು ಹೇಳಬಹುದು. ಬೀದಿಯಲ್ಲಿ ಕುಳಿತು ಹಸ್ತಸಾಮುದ್ರಿಕೆ ಮತ್ತು ಗಿಳಿಶಾಸ್ತ್ರ ಹೇಳುವವರು ಈ ವೃತ್ತಿಗಳಿಂದ ದೂರು ಸರಿಯುತ್ತಿದ್ದಾರೆ. ಎಣ್ಣೆ ಜೋಗಿಗಳು, ಸಿಂಗದವರು, ಬೀದಿ ಹಾಡುಗಾರರು, ವಾಸುದೇವ ವೃತ್ತಿಯ ಹಳೆ ತಲೆಮಾರಿನ ಜನ ಜಿಲ್ಲೆಗೆ ಒಬ್ಬರು ಇಬ್ಬರು ಸಿಗಬಹುದು.

ಆಧುನಿಕ ಜಗತ್ತಿನಲ್ಲಿ ಗೊಂದಲಿಗರು ಪರಂಪರಾನುಗತವಾಗಿ ಕಂಡುಕೊಂಡಿರುವ ವೃತ್ತಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಈ ವೃತ್ತಿಗಳಿಂದ ಬರುವ ಆದಾಯ ನಮ್ಮ ಉಪಜೀವನಕ್ಕೆ ಸಾಕಾಗುವುದಿಲ್ಲ ಎಂಬುದನ್ನು ತಿಳಿದುಕೊಂಡಿದ್ದಾರೆ. ಹೀಗಾಗಿ ಮೂಲ ವೃತ್ತಿಗಳನ್ನು ಕೈ ಬಿಟ್ಟು ವರ್ತಮಾನದಲ್ಲಿರುವ ವೃತ್ತಿಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇವರು ವ್ಯಾಪಾರ ಕೈಕೊಳ್ಳಬೇಕಾದರೆ ಬಂಡವಾಳ ಹೂಡಬೇಕು. ಆರ್ಥಿಕವಾಗಿ ಅತ್ಯಂತ ಹಿಂದುಳಿದ ಇವರು ಹಣಕಾಸಿನ ನೆರವಿಲ್ಲದೆ ಪರದಾಡುತ್ತಿದ್ದಾರೆ. ಕೆಲವರಂತೂ ಭಿಕ್ಷಾಟನೆಯನ್ನು ಆಶ್ರಯಿಸಿದ್ದಾರೆ. ಇನ್ನು ಕೆಲವರು ಕೂಲಿ ಮಾಡುತ್ತಿರುವ ಚಿತ್ರಣವೂ ಕಂಡುಬರುತ್ತದೆ.

ಪಾತ್ರೆ ವ್ಯಾಪಾರ

ಗೊಂದಲಿಗರ ವರ್ತಮಾನದ ವೃತ್ತಿಗಳಲ್ಲಿ ಪಾತ್ರೆ ವ್ಯಾಪಾರ ಪ್ರಮುಖವಾಗಿ ಕಂಡುಬರುತ್ತದೆ. ಈ ಪಾತ್ರೆ ವ್ಯಾಪಾರ ಕೂಡ ಅಲೆಮಾರಿತನದ ವೃತ್ತಿಯಾಗಿದೆ. ಸುಮಾರು ೧೫ ರಷ್ಟು ಗೊಂದಲಿಗರು ಈ ಪಾತ್ರೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ಅಲ್ಯೂಮಿನಿಂಯ ಪಾತ್ರೆಗಳನ್ನಷ್ಟೆ ಮಾರುತ್ತಿದ್ದ ಇವರು ಇಂದು ಸ್ಟೀಲ್, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಮಾರುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ.

ಗೊಂದಲಿಗರ ಅನೇಕ ಯುವಕರು ದೊಡ್ಡದಾದ ಬುಟ್ಟಿಗಳಲ್ಲಿ ಪಾತ್ರೆಯ ದೊಡ್ಡದಾದ ಗಂಟನ್ನು ಹಾಕಿಕೊಂಡು ಊರೂರು ಅಲೆಯುತ್ತ ವ್ಯಾಪಾರ ಮಾಡುತ್ತಿದ್ದಾರೆ. ಗೊಂದಲಿಗರ ಈ ವ್ಯಾಪಾರ ಬಹಳ ಕಷ್ಟದಾಯಕವಾದುದು. ತಲೆಯ ಮೇಲೆ ಸುಮಾರು ೨೫ ರಿಂದ ೩೦ ಕೆ.ಜಿ. ಮತ್ತು ಬಗಲಿಗೆ ೧೦ರಿಂದ ೧೨ ಕೆ.ಂಜಿ. ತೂಕದ ಪಾತ್ರೆಗಳನ್ನು ತೆಗೆದುಕೊಂಡು ೧೦ ರಿಂದ ೧೫ ಕಿ.ಮೀ. ದೂರದವರೆಗೆ ಸಂಚರಿಸಿ ವ್ಯಾಪಾರ ಮಾಡುತ್ತಿರುವ ಚಿತ್ರಣ ಕಂಡುಬರುತ್ತದೆ. ಈ ಸಂಚಾರಿ ವ್ಯಾಪಾರ ಮಾಡುವುದರಲ್ಲಿ ಗೊಂದಲಿಗರು ಬಹಳ ಶಕ್ತಿವಂತರು ಎಂದು ಹೇಳಬೇಕಾಗುತ್ತದೆ. ಕೆಲ ಗೊಂದಲಿಗರು ಸಂತೆಗಳಿಗೆ ಹೋಗಿ ಭಾಂಡೆ ವ್ಯಾಪಾರ ಮಾಡುತ್ತಿರುವುದನ್ನು ಕಾಣುತ್ತೇವೆ. ಇತ್ತಿತ್ತಲಾಗಿ ಈ ಪಾತ್ರೆ ವ್ಯಾಪಾರದಲ್ಲಿ ಹೆಂಗಸರು ಮತ್ತು ಮಕ್ಕಳು ಭಾಗವಹಿಸುತ್ತಿರುವುದು ಕಂಡು ಬರುತ್ತಿದೆ.

ಗೊಂದಲಿಗರು ಪಾತ್ರೆ ವ್ಯಾಪಾರವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ. ಅನೇಕ ಊರುಗಳಲ್ಲಿ ಇವರು ಉದ್ರಿ ನೀಡುತ್ತ ತಮ್ಮ ವ್ಯಾಪಾರವನ್ನು ಅಭಿವೃದ್ಧಿಗೊಳಿಸುತ್ತ ಬಂದಿದ್ದಾರೆ. ಹಳೆಯ ಅಲ್ಯೂಮಿನಿಯಂ ಹಿತ್ತಾಳೆ ಮತ್ತು ತಾಮ್ರದ ವಸ್ತುಗಳನ್ನು ಇವರು ಪಡೆಯುವುದುಂಟು.

ಒಂದೊಂದು ದಿನ ಪಾತ್ರೆ ವ್ಯಾಪಾರ ಮಾಡುತ್ತಿರುವ ಈ ಗೊಂದಲಿಗರು ಬಹಳೇ ನೊಂದುಕೊಳ್ಳುವುದುಂಟು. ತಲೆ ಮತ್ತು ಹೆಗಲ ಮೇಲೆ ೪೦ ಕೆ.ಜಿಗೂ ಹೆಚ್ಚಿನ ಭಾರವನ್ನು ಹೊತ್ತುಕೊಂಡು ಹತ್ತಾರು ಮೈಲು ದೂರ ನಡೆದರೂ ವ್ಯಾಪಾರವಾಗದಿದ್ದಾಗ ಅವರ ಸಂಕಟ ಪಡದೇ ಇರಲಾಗುತ್ತದೆಯೆ? ಮಲೆ, ಬಿಸಿಲು, ಚಳಿ ಎನ್ನದೇ ಊರಿಂದೂರಿಗೆ ಸಂಚರಿಸುತ್ತಾರೆ. ಪ್ರತಿ ದಿನವೂ ಹೆಚ್ಚು ಭಾರ ಹೊತ್ತು ತಿರುಗುವ ಇವರಿಗೆ ಕುತ್ತಿಗೆ, ಬೆನ್ನು ಕೈ ಕಾಲುಗಳಿಗೆ ಸಂಬಂಧಿಸಿದ ಅನೇಕ ರೋಗಗಳು ಇವರನ್ನು ಆವರಿಸಿಕೊಂಡಿರುವುದು ಕಂಡುಬರುತ್ತದೆ. ಕೈಕಾಲುಗಳಲ್ಲಿ ಶಕ್ತಿ ಇರುವವರೆಗೆ ಅಂದರೆ ಸುಮಾರು ೫೦ ವರ್ಷದವರೆಗ ಈ ಪಾತ್ರೆ ವ್ಯಾಪಾರ ಮಾಡಬಹುದು ಎಂದು ಗೊಂದಲಿಗರು ಅಭಿಪ್ರಾಯ ಪಡುತ್ತಾರೆ. ಈ ಪಾತ್ರೆ ವ್ಯಾಪಾರದಿಂದ ದಿನಕ್ಕೆ ಸರಾಸರಿ ೭೫ ರಿಂದ ೧೦೦ ರೂ.ಗಳವರೆಗೆ ಉತ್ಪಾದನೆಯಾಗುತ್ತದೆಂದು ಹೇಳುತ್ತಾರೆ. ಬುಡಬುಡಕೆ ಗೊಂದಲ, ಗಿಳಿ ಶಕುನ, ಅರೆಪಂಚಾಂಗ ಈ ಬೇಡಿ ತಿನ್ನುವ ವೃತ್ತಿಗಳಿಗಿಂತ ಈ ವೃತ್ತಿ ಎಷ್ಟೇ ತೊಂದರೆಯಾದರೂ ಅದು ಅದಕಿಕಂತ ಉತ್ತಮ ಎಂದು ಅಭಿಪ್ರಾಯ ಪಡುತ್ತಾರೆ. ಈ ಪಾತ್ರೆ ವ್ಯಾಪಾರದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುತ್ತಿರುವುದರಿಂದ ಅವರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸದೇ ಇರುವುದು ಕಂಡು ಬರುತ್ತದೆ.

ಕಣ್ಣು ಮತ್ತು ಕಿವಿಯಲ್ಲಿನ ಕಸ ತೆಗೆಯುವ ವೃತ್ತಿ

ಗೊಂದಲಿಗರಲ್ಲಿ ಕೆಲ ಗಂಡಸರು ಮತ್ತು ಹೆಂಗಸರೂ ಕಣ್ಣು ಸ್ವಚ್ಛಗೊಳಿಸುವ ವಡತ್ತಿಯಲ್ಲಿ ನಿರತರಾಗಿರುವುದು ಕಂಡುಬರುತ್ತದೆ. ಬೈಲಹೊಂಗಲ, ಕಿತ್ತೂರು, ಬೆಳಗಾವಿ, ಸವದತ್ತಿ, ರಾಮದುರ್ಗಷ ಖಾನಾಪುರ, ಬೀಡಿ, ಗೋಕಾಗ, ಹುಬ್ಬಳ್ಳಿ, ಹೆಬ್ಬಳ್ಳಿ, ಗದಗ, ಅಣ್ಣಿಗೇರೆ, ಬಿಜಾಪುರ, ಬಾಗಲಕೋಟ ಮುಂತಾದ ಅನೇಕ ಪ್ರದೇಶಗಳಲ್ಲಿ ಇವರು ಕಂಡು ಬರುತ್ತಾರೆ. ಕಣ್ಣು ಮತ್ತು ಕಿವಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿರುವವರೂ ಕೂಡ ಅಲೆಮಾರಿಗಳಾಗಿರುವುದು ಕಂಡು ಬರುತ್ತದೆ. ಸಂತೆ, ಜಾತ್ರೆಗಳಲ್ಲಿ ತಿರುಗಾಡುತ್ತ ಕಣ್ಣು ಮತ್ತು ಕಿವಿಗಳಲ್ಲಿಯ ಧೂಳು ಕಲ್ಲು, ಇತರೆ ಸೂಕ್ಷ್ಮ ವಸ್ತುಗಳನ್ನು ತೆಗೆದು ಶುದ್ಧಗೊಳಿಸುತ್ತಾರೆ.

ಕಣ್ಣಿನಲ್ಲಿಯ ಕಸವನ್ನು ಇವರು ಅತ್ಯಂತ ಸೂಕ್ಷ್ಮವಾಗಿ ತೆಗೆಯುವುದು ಕಂಡುಬರ್‌ತದೆ. ಕಣ್ಣಿನ ಗುಡ್ಡೆಯೊಳಗೆ ತಮ್ಮ ನಾಲಿಗೆಯನ್ನು ತೂರಿಸಿ ಆ ನಾಲಿಗೆಯನ್ನು ಕಣ್ಣು ಗುಡ್ಡೆಯ ಮತ್ತು ರೆಪ್ಪೆಯ ಸುತ್ತಲೂ ಆಡಿಸಿ ಅದರಲ್ಲಿರುವ ಕಸವನ್ನು ತೆಗೆಯುತ್ತಾರೆ. ಕಿವಿಯಲ್ಲಿರುವ ಕೂಗಣೆ ಮತ್ತು ಇತರೆ ಹೊಲಸನ್ನು ಉದ್ದವಾದ ಕೊಳವೆಯ ಸಹಾಯದಿಂದ ತೆಗೆಯುತ್ತಾರೆ. ಕಣ್ಣನ್ನು ಸ್ವಚ್ಛಗೊಳಿಸಲು ೨ ರಿಂದ ೫ ರೂ.ಪಾಯಿಗಳವರೆಗೆ ಕೂಲಿ ಪಡೆಯುತ್ತಾರೆ. ಈ ವೃತ್ತಿ ಮಾಡುವವರ ಸ್ಥಿತಿ ಗತಿಗಳೂ ಚಿಂತಾಜನಕವಾಗಿವೆ. ಆಧುನಿಕ ಸಮುದಾಯ ಹೊಸ ಹೊಸ ವೈದ್ಯಕೀಯ ಸೇವೆಯಲ್ಲಿಯೇ ಹೆಚ್ಚಿನ ನಂಬಿಕೆ ಇಟ್ಟಿರುವುದರಿಂದ ಇವರು ಕಣ್ಣು ಸ್ವಚ್ಛಮಾಡಲು ಹೋಗಿ ಮತ್ತೇನಾದರೂ ಮಾಡಿದರೆ ಹೇಗೆ? ಎಂಬ ಅಂಜಿಕೆಯಿಂದ ಅವರನ್ನು ದೂರವಿಡುತ್ತಿದ್ದಾರೆ.

ಹೆಣ್ಣು ಮಕ್ಕಳ ಸಂಚಾರಿ ವೃತ್ತಿಗಳು

ಸುಮಾರು ಶೇ. ೨ರಷ್ಟು ಹೆಂಗಸರು ಸಣ್ಣ ಪುಟ್ಟ ವ್ಯಾಪರ ಮಾಡುತ್ತಿರುವುದು ಕಂಡುಬರುತ್ತದೆ. ಗಂಡಸರು ಪಾತ್ರೆ ವ್ಯಾಪಾರ ಮಾಡಿದರೆ, ಹೆಂಗಸರು ಹೆಣ್ಣು ಮಕ್ಕಳಿಗೆ ಬೇಕಾಗುವ ಕನ್ನಡಿ, ಹಣೆಗೆ, ಕುಂಕುಮ, ಟಿಕಳಿ, ಜರದ ಎಳೆಗಳು, ಸೂಜಿ, ದಾರ, ಪಿನ್ನ, ಬಣ್ಣದ ಡಬ್ಬಿ, ಸ್ನೋ ಪೌಡರ್, ರಿಬ್ಬನ್ನ್, ಕ್ಲಿಪ್, ಹೆಣೆಕೆಯ ವಸ್ತುಗಳು ಹೀಗೆ ಹತ್ತು ಹಲವಾರು ವಸ್ತುಗಳನ್ನು ಒಂದು ಅಗಲವಾದ ಬಿದಿರಿನ ಬುಟ್ಟಿಯಲ್ಲಿ ಇಟ್ಟುಕೊಂಡು ಮನೆ ಮನೆಗೆ ಹೋಗಿ ವ್ಯಾಪಾರ ಮಾಡುತ್ತಾರೆ. ಪ್ರತಿ ಓಣಿಯಲ್ಲಿಯೂ ತಾವು ತಂದ ವಸ್ತುಗಳ ಬಗೆಗೆ ಎತ್ತರದ ಧ್ವನಿಯಲ್ಲಿ ಕೂಗಿ ಹೇಳುತ್ತಾರೆ. ಅತ್ಯಂತ ವಿನಯದಿಂದ ಮಾತನಾಡಿ, ಹೆಣ್ಣು ಮಕ್ಕಳನ್ನು ಒಲಿಸಿಕೊಂಡು ವ್ಯಾಪಾರ ಮಾಡುತ್ತಾರೆ. ಪ್ರತಿ ಊರಿಗೆ ವಾರಕ್ಕೆ ಒಂದು ಸಲವಾದರೂ ಇವರು ಭೇಟಿ ನೀಡುವುದನ್ನು ಕಾಣುತ್ತೇವೆ. ದಿನಕ್ಕೆ ೨೫ ರಿಂದ ೩೦ ರೂ.ಗಳವರೆಗೆ ಉಳಿತಾಯ ಮಾಡಲು ಸುಮಾರು ಹತ್ತಾರು ಕಿ.ಮೀ. ದೂರ ನಡೆಯುತ್ತಾರೆ.

ಇತರೆ ವೃತ್ತಿಗಳು

ಗೊಂದಲಿಗರು ಇತ್ತಿತ್ತಲಾಗಿ ಒಂದೇ ವೃತ್ತಿಗೆ ಅಂಟಿಕೊಂಡಿಲ್ಲ. ಪಾರಂಪರಿಕ ವೃತ್ತಿಗಳು ಮಾಯವಾಗತೊಡಗಿದ ಮೇಲೆ ಪಾತ್ರೆ ವ್ಯಾಪಾರ ಕೆಲವರಿಗೆ ಅದೃಷ್ಟ ತಂದಿದೆ ಎಂದು ತಿಳಿದು ಅದರಲ್ಲಿಯೇ ತಮ್ಮ ಅಸ್ತಿತ್ವ ಗುರುತಿಸಿಕೊಳ್ಳಲು ಪ್ರಯತ್ನಿಸಿದರು. ಈ ವ್ಯಾಪಾರ ಕೆಲವರಿಗೆ ಅದೃಷ್ಟ ತಂದು ಕೊಟ್ಟರೆ ಕೆಲವರನ್ನು ಮೂಲೆಗುಂಪಾಗಿಸಿದ್ದರ ಬಗ್ಗೆ ಮಾಹಿತಿ ದೊರೆಯುತ್ತದೆ. ಹೀಗಾಗಿ ಅನಕರು ಪಾತ್ರೆ ವ್ಯಾಪಾರ ಬಿಟ್ಟು ಬಾಂಡೆ ಬೆಸೆಯುವ, ಕೊಡೆ, ಸ್ಟೋವ್ ರಿಪೇರಿ ಮಾಡುವ, ಪ್ಲಾಸ್ಟಿಕ್ ವಸ್ತುಗಳನ್ನು ಗೂಡೆ ಕಟ್ಟುವ, ಕೂಲಿ ಮಾಡುವ, ಸೈಕಲ್ ರಿಪೇರಿ ಮಾಡುವ, ಪಂಚರ್ ಹಾಕುವ ಹೀಗೆ ಹತ್ತಾರು ಕೆಲಸಗಳಲ್ಲಿ ಯುವ ಪೀಳಿಗೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತದೆ. ಈ ಕೆಲಸಾಗರರು ಹೆಚ್ಚಿನ ಬಂಡವಾಳ ಹಾಕಿ ವೃತ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲಾಗದೆ ಬಂದ ಹಣದಲ್ಲಿಯೇ ತೃಪ್ತಿ ಪಟ್ಟುಕೊಳ್ಳುತ್ತಿರುವುದನ್ನು ಕಾಣುತ್ತೇವೆ.

ಸರಕಾರಿ ಕೆಲಸಗಳಲ್ಲಿ ಇವರು ಕಂಡು ಬರುವುದು ಅತೀ ವಿರಳ. ಶೈಕ್ಷಣಿಕವಾಗಿ ಅತೀ ಹಿಂದುಳಿದ ಇವರಿಗೆ ಸರಕಾರಿ ಕೆಲಸಗಳು ಸಿಗುವುದು ಅತೀ ಕಷ್ಟ. ಅಲ್ಪ ಸ್ವಲ್ಪ ವಿದ್ಯಾಭ್ಯಾಸ ಪಡೆದವರು ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

೪.೫ ಶೈಕ್ಷಣಿಕ ಸ್ಥಾನಮಾನ

ಗೊಂದಲಿಗರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಶಿಕ್ಷಣದ ಸಮಸ್ಯೆಯೂ ಅತೀ ಮುಖ್ಯವಾದದ್ದು. ಅಲೆಮಾರಿಗಳಾಗಿರುವ ಇವರಿಗೆ ಶಿಕ್ಷಣವೇ ಇಲ್ಲವೆಂದರೆ ಸಂಘಟನೆ ಇಲ್ಲ. ಈ ಕಾರಣಕ್ಕಾಗಿ ಗೊಂದಲಿಗರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀರ ಹಿಂದುಳಿಯಲು ಕಾರಣರಾಗಿದ್ದಾರೆ. ಗೊಂದಲಿಗರಲ್ಲಿ ನೆಲೆಯೂರಿದವರು, ಅಲೆಮಾರಿ ಮತ್ತು ಅರೆ ಅಲೆಮಾರಿ ಎಂದು ಮೂರು ಭಾಗಗಳಾಗಿ ವಿಂಗಡಿಸಿಕೊಂಡು ಅವರ ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಮಾಡಿದಾಗ ಅಲೆಮಾರಿ ಮತ್ತು ಅರೆ ಅಲೆಮಾರಿ ಕುಟುಂಬಗಳಲ್ಲಿ ಶಿಕ್ಷಣ ಇಲ್ಲವೇ ಇಲ್ಲ ಎಂದು ಹೇಳಬೇಕಾಗುತ್ತದೆ. ಜಿಲ್ಲಾ ಮತ್ತು ತಾಲೂಕು ಪ್ರದೇಶಗಳಲ್ಲಿ ನೆಲೆ ಕಂಡುಕೊಂಡಿರುವ ಗೊಂದಲಿಗರು ನಾಗರಿಕ ಪ್ರಭಾವದಿಂದ ತಮ್ಮ ಮಕ್ಕಳನ್ನು ಶಾಲೆಗೆಕಳಿಸುವ ಪರಂಪರೆಯನ್ನು ಇತ್ತಿತ್ತಲಾಗಿ ಬೆಳೆಸಿಕೊಳ್ಳುತ್ತಿರುವುದು ಸಮೀಕ್ಷೆಯಿಂದ ಕಂಡು ಬರುತ್ತದೆ. ಒಟ್ಟು ಜಿಲ್ಲೆಗಳ ಕೆಲ ಗ್ರಾಮಗಳನ್ನು ಮತ್ತು ನಗರಗಳನ್ನು ಸಮೀಕ್ಷೆ ಮಾಡಿದಾಗ ಅವರ ಶೈಕ್ಷಣಿಕ ಸ್ಥಿತಿಗತಿಗಳ ಚಿತ್ರಣ ಈ ಕೆಳಗಿನಂತೆ ಕಂಡು ಬಂದಿದೆ.

ವಿವರಗಳನ್ನು ಪಡೆಯಲು ಅವರ ವಯೋಮಾನಕ್ಕನುಗುಣವಾಗಿ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

೧. ೬ ರಿಂದ ೧೫ ವರ್ಷದೊಳಗಿನವರ ಶಿಕ್ಷಣದ ಮಾಹಿತಿ

೨. ೧೬ ರಿಂದ ೨೫ ವರ್ಷದೊಳಗಿನವರ ಶಿಕ್ಷಣದ ಮಾಹಿತಿ

೩. ೨೬ ರಿಂದ ೪೫ ವರ್ಷದೊಳಗಿನವರ ಶಿಕ್ಷಣದ ಮಾಹಿತಿ

೪. ೪೬ ರಿಂದ ೬೦ ಅದಕ್ಕೂ ಮೇಲ್ಪಟ್ಟ ವರ್ಷದವರ ಶಿಕ್ಷಣದ ಮಾಹಿತಿ

ಬಳ್ಳಾರಿ ಜಿಲ್ಲೆ

ಬಳ್ಳಾರಿ ನಗರದಲ್ಲಿ ಒಟಟು ೧೫೨ ಕುಟುಂಬಗಳಲ್ಲಿ ಒಟ್ಟು ೨೩೬ ಒಟ್ಟು ಜನಸಂಖ್ಯೆ ಕಂಡು ಬಂದಿದ್ದು ಇದರಲ್ಲಿ ೩೭೩ ಪುರುಷರು ಮತ್ತು ೩೬೩ ಮಹಿಳೆಯರಿದ್ದಾರೆ.

ಸಾಮಾನ್ಯವಾಗಿ ೬ ರಿಂದ ೧೬ ವರ್ಷದ ವರೆಗಿನ ಮಕ್ಕಳು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆಯುವಂತರಾಗಿದ್ದಾರೆ. ಮತ್ತು ತಮ್ಮ ಶಿಕ್ಷಣವನ್ನು ಮುಂದುವರೆಸಿದವರಾಗಿದ್ದಾರೆ. ೧೬ ರಿಂದ ೨೫ ವರ್ಷದವರೆಗಿನವರು ಎಸ್.ಎಸ್.ಎಲ್.ಸಿ.ಯಿಂದ ಪದವಿ ವರೆಗೆ ಶಿಕ್ಷಣ ಪಡೆದವರಿದ್ದು ಇವರಲ್ಲಿ ಅನೇಕರು ಎಸ್.ಎಲ್.ಎಲ್‌ಸಿ. ಪಿ.ಯು.ಸಿ. ನಂತರ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದೇ ಇದ್ದವರು ಕಂಡು ಬರುತ್ತಾರೆ.

ಕೋಷ್ಟಕ ೧ನ್ನು ಗಮನಿಸಿದಾಗ ೪೬-೬೦ ವರ್ಷ ವಯೋಮಾನದವರು ಪಡೆದ ಶಿಕ್ಷಣಕ್ಕಿಂತಲೂ ೨೬ ರಿಂದ ೪೫ ವರ್ಷ ವಯೋಮಾನದವರ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಾಗಿರುವುದು ಕಂಡುಬರುತ್ತದೆ. ೧೬ ರಿಂದ ೨೫ ವರ್ಷ ವಯೋಮಾನದವರ ಶಿಕ್ಷಣವನ್ನು ಗಮನಿಸಿದಾಗ ಕೆಳಗಿನ ಎರಡೂ ಹಂತಗಳಿಗಿಂತ ಇವರು ಪಡೆಯುತ್ತಿರುವ ಶಿಕ್ಷಣದ ಪ್ರಮಾಣದಲ್ಲಿ ಸ್ವಲ್ಪ ಏರಿಕೆ ಇರುವುದು ಕಂಡು ಬರುತ್ತದೆ. ಇನ್ನು ೬ ರಿಂದ ೧೫ ವರ್ಷದೊಳಗಿನ ಮಕ್ಕಳು ಆಸಕ್ತಿಯಿಂದ ಶಿಕ್ಷಣ ಪಡೆಯುತ್ತಿರುವ ಬಗ್ಗೆ ತಿಳಿಯುತ್ತದೆ.

೧೫೨ ಕುಟುಂಬಗಳಲ್ಲಿ ೧೧೯ ಜನ ಪ್ರಾಥಮಿಕ ಮತ್ತು ಮಾಧ್ಯಮಿಕ ೧೭ ಜನ ಎಸ್.ಎಸ್.ಎಲ್.ಸಿ. ೧೨ ಜ ಪಿ.ಯು.ಸಿ. ಮತ್ತು ಒಬ್ಬರು ಮಾತ್ರ ಪದವಿ ಶಿಕ್ಷಣ ಪಡೆದ ಬಗ್ಗೆ ಮಾಹಿತಿ ದೊರೆಯುತ್ತದೆ. ಮಹಿಳೆಯರ ಶೈಕ್ಷಣಿಕ ಸ್ಥಿತಿಗತಿಗಲನ್ನು ಗಮನಿಸಿದಾಗ ೧೬ ರಿಂದ ೪೫ ವರ್ಷದೊಳಗಿನ ೩೦ ಜನ ಮಹಿಳೆಯರು (ವಿದ್ಯಾರ್ಥಿನಿಯರನ್ನು ಬಿಟ್ಟು) ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆದಿದದಾರೆ. ೬ ಜನ ಎಸ್.ಎಸ್.ಎಲ್.ಸಿ. ೩ ಜನ ಪದವಿ ಪೂರ್ವ ಶಿಕ್ಷಣ ಪಡೆದದ್ದು ಕಂಡುಬರುತ್ತದೆ. ೪೬ ರಿಂದ ೬೦ ವರ್ಷದೊಳಗಿನ ಮಹಿಳೆಯರ ಸಾಕ್ಷರತೆಯನ್ನು ಗಮನಿಸಿದರೆ ಗೊಂದಲಿಗರಲ್ಲಿಯ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಹಂತ ಹಂತವಾಗಿ ಪ್ರಯತ್ನಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ಬಳ್ಳಾರಿ ಜಿಲ್ಲೆಯ ಇತರೆ ತಾಲೂಕಿನ ಪ್ರದೇಶಗಳನ್ನು ಗಮನಿಸಿದಾಗ ನಗರದ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರಿವ ಗೊಂದಲಿಗರ ಶೈಕ್ಷಣಿಕ ಸ್ಥಿತಿಗತಿಗಳು ಉತ್ತಮವಾಗಿಲ್ಲ ಎಂಬುದು ಕಂಡು ಬರುತ್ತದೆ. ಕೋಷ್ಟಕ ೨ನ್ನು ಗಮನಿಸಿ.

ಹಗರಿಬೊಮ್ಮನಹಳ್ಳಿ (ನಗರ) ಮತ್ತು ಹಂಪಾಪಟ್ಟಣ ಈಗ್ರಾಮಗಳಲ್ಲಿ ಒಟ್ಟು ೫೮ ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು ಒಟ್ಟು ಜನಸಂಖ್ಯೆ ೩೯೩ ಇದ್ದು ಇದರಲ್ಲಿ ಗಂಡಸರು ೧೯೯ ಮತ್ತು ಹೆಂಗಸರು ೧೯೪ ಇರುವುದು ಕಂಡುಬರುತ್ತದೆ. ೬ ರಿಂದ ೧೫ ವರ್ಷದೊಳಗಿನ ಮಕ್ಕಳು ಒಟ್ಟು ೨೬ ಜನರಿದ್ದು ಇದರಲ್ಲಿ ೯ ಹೆಣ್ಣು ಮಕ್ಕಳಿದ್ದಾರೆ. ಇವರಲ್ಲಿ ೯೦ರಷ್ಟು ವಿದ್ಯಾರ್ಥಿಗಳಾಗಿದ್ದಾರೆ. ೧೬ ರಿಂದ ೨೫ ವರ್ಷದೊಳಗಿನ ೧೩ ಜನ ಪುರುಷರು ಮತ್ತು ೬ ಜನ ಮಹಿಳಿಯರಿದ್ದು ಇವರಲ್ಲಿ ಶೇಕಡಾ ೫೦ ರಷ್ಟು ಮಾತ್ರಜನ ತಮ್ಮ ಶಿಕ್ಷಣವನ್ನು ಮುಂದುವರೆಸಿದ್ದಾರೆ. ಪುರುಷರಲ್ಲಿ ಇಬ್ಬರು ಎಸ್.ಎಸ್.ಎಲ್.ಸಿ. ಮತ್ತು ಇನ್ನಿಬ್ಬರು ಪಿ.ಯು.ಸಿ ಮತ್ತು ಒಬ್ಬರು ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ಹೆಂಗಸರಲ್ಲಿ ಒಬ್ಬರು ಮಾತ್ರ ಎಸ್.ಎಸ್.ಎಲ್.ಸಿಯನ್ನು ಪೂರ್ಣಗೊಳಿಸಿದ್ದಾರೆ.

ಹೊಸಪೇಟೆ ನಗರದಲ್ಲಿ ಒಟ್ಟು ೬೧ ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು ಇಲ್ಲಿ ಒಟ್ಟು ೪೦೭ ಜನಸಂಖ್ಯೆ ಇದ್ದು ೨೦೯ ಪುರುಷರು ೧೯೮ ಮಹಿಳೆಯರು ಇರುವುದು ತಿಳಿಯುತ್ತದೆ. (ಕೋಷ್ಟಕ ೩ನ್ನು ಗಮನಿಸಿ ೪೬ ರಿಂದ ೬೦ ವರ್ಷದೊಳಗಿನವರ ಶಿಕ್ಷಣವನ್ನು ಗಮನಿಸಿ ಹೇಳುವುದಾದರೆ ೨೬ ರಿಂದ ೪೫, ೬ ರಿಂದ ೨೫ ಮತ್ತು ೬ ರಿಂದ ೧೫ ವರ್ಷದವರು ಶಿಕ್ಷಣ ಪಡೆಯುತ್ತಿರುವುದರಲ್ಲಿ ಹಂತ ಹಂತವಾಗಿ ಏರಿಕೆಯಾಗುತ್ತಿರುವುದು ಕಂಡುಬರುತ್ತದೆ. ಪುರುಷರಲ್ಲಿ ೨೬ ರಿಂದ ೬೦ ವರ್ಷದೊಳಗಿನವರು ೧೩ ಜನ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ ೩ ಜನ ಎಸ್.ಎಸ್.ಎಲ್.ಸಿ. ತಲಾ ಒಬ್ಬರು, ಪಿ.ಯು.ಸಿ. ಮತ್ತು ಪದವಿ ಶಿಕ್ಷಣ ಪಡೆದದ್ದು ಒಬ್ಬರು, ಡಿಪ್ಲೊಮಾ ತಾಂತ್ರಿಕ ಶಿಕ್ಷಣ ಪಡೆದದ್ದು ಕಂಡುಬರುತ್ತದೆ.

ಸ್ತ್ರೀಯರಲ್ಲಿ ಕೇವಲ ೩ ಜನ ಕಂಡು ಬರುತ್ತಾರೆ. ಒಬ್ಬರು ಮಾತ್ರ ಎಸ್.ಎಸ್.ಎಲ್.ಸಿ. ಓದಿದ್ದಾರೆ. ೧೬ ರಿಂದ ೨೫ ವರ್ಷದೊಳಗಿನ ಪುರುಷರಲ್ಲಿ ೧೮ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದಿದ್ದು, ಎಸ್.ಎಸ್.ಎಲ್.ಸಿ. ೩ ಜನ ಪಿ.ಯು.ಸಿ. ೧, ಪದವಿ ೧ ಮತ್ತು ಡಿಪ್ಲೋಮದಲ್ಲಿ ಒಬ್ಬರು ಶಿಕ್ಷಣ ಪಡೆದಿದ್ದಾರೆ. ಸ್ತ್ರೀಯರಲ್ಲಿ ಒಬ್ಬರು ಎಸ್.ಎಸ್.ಎಲ್.ಸಿ. ಇನ್ನೊಬ್ಬರು ಪಿ.ಯು.ಸಿ.ವರೆಗೆ ಶಿಕ್ಷಣ ಪಡೆದುಕೊಂಡಿದ್ದಾರೆ.

ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಮತ್ತು ಕಂಪ್ಲಿ ಗ್ರಾಮಗಳಲ್ಲಿ ೫೧ ಕುಟುಂಬಗಳಲ್ಲಿ ಶೈಕ್ಷಣಿಕ ಸ್ಥಿತಿಗತಿಗಳನ್ನು ಗಮನಿಸಲಾಯಿತು. (ಕೋಷ್ಟಕ ೪ನ್ನು ಗಮನಿಸಿ) ಒಟ್ಟು ೨೪೪ ಜನಸಂಖ್ಯೆ ಹೊಂದಿದ ೫೧ ಕುಟುಂಬಗಳಲ್ಲಿ ೧೨೫ ಜನ ಗಂಡಸರು ೧೧೯ ಹೆಂಗಸರಿದ್ದು, ಇವರಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದವರು ಮತ್ತು ಪಡೆಯುತ್ತಿರುವ ಪುರುಷರ ಸಂಖ್ಯೆ ೪೧ ಮಹಿಳೆಯರ ಸಂಖ್ಯೆ ೨೧ ಇರುವುದು ಕಂಡು ಬರುತ್ತದೆ. ಪುರುಷರಲ್ಲಿ ೩ಜನ ಎಸ್.ಎಸ್.ಎಲ್.ಸಿ. ೩ ಜನ ಪಿ.ಯು.ಸಿ. ೩ ಜನ ಪದವಿ ಶಿಕ್ಷಣ ಪಡೆದಿದ್ದಾರೆ. ಸ್ತ್ರೀಯರಲ್ಲಿ ಒಬ್ಬರು ಎಸ್.ಎಸ್.ಎಲ್.ಸಿ. ಒಬ್ಬರು ಪಿ.ಯು.ಸಿ. ಇನ್ನೊಬ್ಬರು ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ನಾವು ಸಮೀಕ್ಷೆ ಮಾಡಿದ ಒಟ್ಟು ಕುಟುಂಬಗಳು ೩೩೨ ಒಟ್ಟು ಜನಸಂಖ್ಯೆ ೧೬೮೦ ಪುರುಷರು ೯೦೬ ಮಹಿಳೆಯರು ೮೭೪ ಇವರಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕಿ ಶಿಕ್ಷಣ ಪಡೆದವರು ಒಟ್ಟು (ವಿದ್ಯಾರ್ಥಿಗಳನ್ನು ಸೇರಿಸಿಕೊಂಡು) ಪುರುಷರು ೨೧೦ ಮತ್ತು ಮಹಿಳೆಯರು ೧೦೮. ಎಸ್.ಎಸ್.ಎಲ್.ಸಿ. ವರೆಗೆ ಶಿಕ್ಷಣ ಪಡೆದ ಒಟ್ಟು ಪುರುಷರು ೨೩ ಮಹಿಳೆಯರು ೧೦, ಪಿ.ಯು.ಸಿ. ವರೆಗೆ ಶಿಕ್ಷಣ ಪೆಡದ ಪುರುಷರು ಒಟ್ಟು ೧೬ ಮಹಿಳೆಯರು ೫ ಪದವಿ ಪಡೆದ ಪುರುಷರು ೭ ಮಹಿಳೆ ೧ ಇಬ್ಬರು ಪುರುಷರು ಡಿಪ್ಲೋಮಾದಲ್ಲಿ ತಾಂತ್ರಿಕ ಪಡೆದಿದ್ದಾರೆ. ಒಟ್ಟು ಶಿಕ್ಷಣ ಪಡೆದವರ ಸಂಖ್ಯೆ ೩೮೨.