೪.೧ ಸಮುದಾಯದ ಪಾರಂಪರಿಕ ಕಸಬು

ಗೊಂದಲ ಹಾಕುವ ಆಚರಣೆಯು ಕ್ರಿ.ಶ. ೬-೭ ಶತಮಾನದಲ್ಲಿ ಇತ್ತು ಎಂಬುದರ ಬಗ್ಗೆ ಮಾಹಿತಿ ದೊರೆಯುತ್ತದೆ. ಕದಂಬರು ಗೊಂದಲ ಹಾಕಿಸುತ್ತಿದ್ದರು. ಎಂಬುದಕ್ಕೆ ಉಲ್ಲೇಖಗಳೂ ದೊರೆಯುತ್ತವೆ. ಕದಂಬ ಅರಸರು ತುಳಜಾಪುರದ ಅಂಬಾಭವಾನಿಯ ಭಕ್ತರಾಗಿದ್ದರು. ಈ ದೇವತೆಯ ಉತ್ಸವದಲ್ಲಿ ಅವರು ಗೊಂದಲ ಹಾಕಿಸುತ್ತಿದ್ದರೆಂದು ತಿಳಿಯುತ್ತದೆ. ಕದಂಬರು ಇಂದಿನ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯವನ್ನು ಆಳಿದ್ದರು. ಗೊಂದಲೀ ನೃತ್ಯದ ಬಗ್ಗೆ ಅನೇಕ ಉಲ್ಲೇಖನಗಳು ನಮಗೆ ದೊರೆಯುತ್ತವೆ. ಗೊಂದಲ ಆಚರಣೆಯನ್ನು ಪೇಶ್ವೆಯವರು ಉನ್ತ ಮಟ್ಟಕ್ಕೇರಿಸಿದರು. ಶಿವಾಜಿ ಕಾಲಕ್ಕೆ ಗೊದಲ ಪೂಜೆ ನಡೆಸುವ ಮೂಲಕ ದುರ್ಗಮ ಸಿಂಹಗಡ ಕೋಟೆಯನ್ನು ವಶಪಡಿಸಿಕೊಂಡ ಎಂಬ ಮಾಹಿತಿಯೂ ದೊರೆಯುತ್ತದೆ.

ಪ್ರಾಚೀನ ಕಾಲದಲ್ಲಿ ಗೊಂದಲ ಪೂಜೆಯನ್ನು ನಡೆಸುವವರು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರೇ ಎಂಬುದರ ಬಗ್ಗೆ ಮಾಹಿತಿ ದೊರೆಯುವುದಿಲ್ಲ.

ಶಿವಾಜಿ ಇಂದಿನ ಮಹಾರಾಷ್ಟ ಪ್ರದೇಶವನ್ನು ಆಳುತ್ತಿದ್ದ ಸಂದರ್ಭದಲ್ಲಿ ಬಿಜಾಪುರವನ್ನು ಮೊಘಲರು ಆಳುತ್ತಿದ್ದರು. ಮೊಘಲರಿಗೂ ಪೇಶ್ವೆಯರಿಗೂ ರಾಜ್ಯ ವಿಸ್ತಾರಕ್ಕೆ ಸಂಬಂಧಿಸಿದಂತೆ ಅನೇಕ ಕಲಹಗಳು ಉದ್ಭವಿಸುತ್ತಿದ್ದವು. ಹೀಗಾಗಿ ಎರಡೂ ಕಡೆಯಲ್ಲಿ ಗೂಢಚಾರರ ಸಂಚಾರ ಇದ್ದೇ ಇತ್ತು. ಶಿವಾಜಿ ಗೊಂದಲಿಗರನ್ನು ಗೂಢಚಾರ ವೃತ್ತಿಗಾಗಿ ನೇಮಿಸಿ ಅವರನ್ನು ಕರ್ನಾಟಕಕ್ಕೆ ಕಳುಹಿಸುತ್ತಾನೆ. ಗೊಂದಲಿಗರು ಭಿಕ್ಷುಕರ ವೇಷ ಧರಿಸಿ ಭಿಕ್ಷೆ ಬೇಡುತ್ತ ಕರ್ನಾಟಕದಲ್ಲಿ ನೆಲೆ ಕಂಡುಕೊಂಡರು ಎಂಬ ಮಾಹಿತಿಯು ದೊರೆಯುತ್ತದೆ.

ಗೊಂದಲಿಗರು ಪ್ರಾರಂಭದ ಹಂತದಲ್ಲಿ ದೇವಿಯ ಹೆಸರಿನಲ್ಲಿ ಗೊಂದಲ ಹಾಕಿ ನೃತ್ಯವನ್ನು ಮಾಡಿ ಭಿಕ್ ಬೇಡುತ್ತಿರುವುದೇ ಅವರ ಮೂಲ ವೃತ್ತಿಯಾಗಿದ್ದಿರಬೇಕು. ಗೊಂದಲ ಹಾಕಿಸುವವರ ಸಂಖ್ಯೆ ಕಡಿಮೆಯಾಗುತ್ತ ಹೋದಂತೆ ಗೊಂದಲಿಗರ ಸಮುದಾಯದಲ್ಲಿ ಅನೇಕ ವೃತ್ತಿಗಳು ಹುಟ್ಟಿಕೊಂಡಿವೆ.

ಗೊಂದಲಿಗ ಸಮುದಾಯದಲ್ಲಿ ಇಂದು ಕಂಡು ಬರುವ ವೃತ್ತಿಗಳು.

೧) ಗೊಂದಲ ವೃತ್ತಿ ಗಾಯಕರು
ಅ. ಕಥೆಗಾರರು (ಕಲೋಪ ಜೀವಿಗಳು)
ಆ. ಬೀದಿ ಹಾಡುಗಾರರು

೨) ಬುಡಬುಡಕೆಯವರು

೩) ಭಾಟರು

೪) ಸಿಂಗದವರು

೫) ವಾಸುದೇವರು

೬) ಚಿತ್ರಪಟದವರು

೭) ಗಿಳಿ ಶಾಸ್ತ್ರದವರು

೮) ಹಸ್ತಸಾಮುದ್ರಿಕೆ ಜ್ಯೋತಿಷಿಗಳು

೯) ಭೂತೇರ ಕಲೆ (ಎಣ್ಣೆ ಜೋಗಿಗಳು)

೨ ಮನೆಯಲ್ಲಿ ನಿರ್ವಹಿಸುವ ವೃತ್ತಿಗಳು

೧) ಹೆಂಗಸರ ಕೌದಿ ಹೊಲೆಯುವ ವೃತ್ತಿ

೨) ಹೆಂಗಸರ ಕರಿಮಣಿಸರ, ಇತರೆ ವ್ಯಾಪಾರ ವೃತ್ತಿ

೩ ಸಂಚಾರಿ ವೃತ್ತಿಗಳು

೧) ಬಾಂಡೆ ವ್ಯಾಪಾರ

೨) ಇತರೆ ವ್ಯಾಪಾರ

ಕರ್ನಾಟಕದಲ್ಲಿರುವ ಗೊಂದಲಿಗರು ಇಂದು ಮೇಲೆ ಹೇಳಿದ ವೃತ್ತಿಗಳಲ್ಲದೆ ಇತರೆ ವೃತ್ತಿಗಳಲ್ಲಿ ಅಲ್ಲಲ್ಲಿ ಕಂಡು ಬರುತ್ತಾರೆ. ಪಾರಂಪರಿಕವಾಗಿ ಗೊಂದಲಿಗರೆ ನಿರ್ವಹಿಸುತ್ತಿರುವ ಸುಮಾರು ಹದಿನಾಲ್ಕು ವಿವಿಧ ವೃತ್ತಿಯವರಲ್ಲಿ ಶೇ. ೬೦ ಜನ ನಿರ್ವಹಿಸುವತ್ತಿರುವ ವೃತ್ತಿಗಳ ವಿವರಗಳು ಈ ಕೆಳಗಿನಂತಿವೆ.

ಗೊಂದಲ ಪೂಜೆ

ಈ ಗೊಂದಲ ಪೂಜೆಯನ್ನು ನಿರ್ವಹಿಸುತ್ತಿರುವುದರಿಂದಲೇ ಇವರಿಗೆ ‘ಗೊಂದಲಿಗರು’ ಎಂಬಹೆಸರು ಬಂದಿದೆ. ನಮ್ಮ ತಿಳುವಳಿಕೆಯ ಪ್ರಕಾರ ಒಂದು ಕಾಲಕ್ಕೆ ಗೊಂದಲಹಾಕುವುದೇ ಇವರ ಮೂಲ ವೃತ್ತಿಯಾಗಿತ್ತು ಎಂದು ತಿಳಿದು ಬರುತ್ತದೆ. ಗೊಂದಲ ಪೂಜೆಯ ಆಚರಣೆ ಕಡಿಮೆಯಾಗುತ್ತ ಬಂದಂತೆ ವೃತ್ತಿ ಕಲಾಕಾರರಾದ ಗೊಂದಲಿಗರಲ್ಲಿ ವಿವಿಧ ವೃತ್ತಿಗಳು ಹುಟ್ಟಿಕೊಳ್ಳಲು ಕಾರಣವಾಯಿತು.

ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಗೊಂದಲ ಪೂಜೆಯನ್ನು ನಡೆಸುವುದು ಇಂದಿಗೂ ಅಲ್ಲಲ್ಲಿ ಕಂಡು ಬರುತ್ತದೆ. ಈ ಪೂಜೆಯ ಆಚರಣೆ ಇಂದು ಮಹಾರಾಷ್ಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಕರ್ನಾಟಕದಲ್ಲಿಯೂ ೧೭-೧೮ ಮತ್ತು ೧೯ನೆಯ ಶತಮಾನದ ಅಂತ್ಯದವರೆಗೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಈಗ ಈ ಗೊಂದಲ ಪೂಜೆ ನಡೆಸುವವರ ಸಂಖ್ಯೆ ಕರ್ನಾಟಕದಲ್ಲಿ ಬಹಳ ಪ್ರಮಾಣದಲ್ಲಿ ಕ್ಷೀಣಿಸಿದೆ.

ಡಾ. ನಿಂಗಣ್ಣ ಸಣ್ಣಕ್ಕಿ ಅವರು ಗೊಂದಲಿಗರು ನಡೆಸುವ ಪೂಜೆಯನ್ನು ಕುರಿತು ಹೀಗೆ ವಿವರಿಸಿದ್ದಾರೆ. ಗೊಂದಲವನ್ನು ವಿಶೇಷವಾಗಿ ಮದುವೆ ಆಚರಣೆಯ ಸಂದರ್ಭದಲ್ಲಿ ನಂತರ ನಡೆಸುವುದನ್ನು ಕಾಣುತ್ತೇವೆ. ಕೆಲವರು ಗೊಂದಲ ಪೂಜೆ ನಡೆಸುವ ಹರಕೆ ಹೊತ್ತಿರುತ್ತಾರೆ. ಇಂಥವರು ಮಂಗಳವಾರ ಅಥವಾ ಶುಕ್ರವಾರ ಈ ಪೂಜೆಗಳನ್ನು ತಮ್ಮ ಮನೆಗಳಲ್ಲಿ ಏರ್ಪಡಿಸುತ್ತಾರೆ. ಗೊಂದಲ ಪೂಜೆಯನ್ನು ಜಾತಿ ಮತ ಭೇದಗಳಿಲ್ಲದೇ ಆಚರಿಸುವುದುಂಟು. ಬ್ರಾಹ್ಮಣರು ಮದುವೆ ಮತ್ತು ಇತರೆ ಮಂಗಳ ಕಾರ್ಯಗಳಲ್ಲಿ ಹಾಕಿಸುವುದುಂಟು. ಕೆಲವರು ಉಪನಂಯನ ಸಂದರ್ಭದಲ್ಲಿ ಗೊಂದಲ ಪೂಜೆ ಮಾಡಿಸುವುದುಂಟು ಕರ್ನಾಟಕದಲ್ಲಿ ಗೊಂದಲ ಪೂಜೆಯನ್ನು ಬ್ರಾಹ್ಮಣರು, ಗೊಂದಲಿಗರು, ಮರಾಠರು. ಕ್ಷತ್ರಿಯರು, ಪತ್ತಾರರು ಸಿಂಪಿಗರು, ಬಡಿಗೇರರು, ಕಮ್ಮಾರರು, ಉಪ್ಪಾರರು, ಬೇಡರು, ಕುರುಬರು, ಲಿಂಗಾಯತರು, ಗೊಂದಲ ಹಾಕಿಸುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದಾರೆ. ಗೊಂದಲ ಪೂಜೆಯ ಬಗ್ಗೆ ಈ ಮೇಲಿನ ಸಮುದಾಯಗಳು ವಿಶೇಷವಾದ ಭಯ-ಭಕ್ತಿ ಇಟ್ಟುಕೊಂಡಿವೆ.

ಮಾತೃ ದೇವತೆಗಳ ಆರಾಧಕರಾದ ಗೊಂದಲಿಗರು ‘ಶಕ್ತಿದೇವತೆಗಳ ಹೆಸರಿನಿಂದ ಪ್ರತಿಷ್ಠಾಪಿಸುವ ಶಿಷ್ಠೆ ಹಾಗೂ ಜನಪದ ದೇವತೆಗಳನ್ನು ಪೂಜಿಸದವರಿಗೆಲ್ಲ ಅವಳ ಮಹಿಮೆಯಿಂದ ಅವರು ಯಾವ ಯಾವ ರೀತಿಯ ಥಾನಮಾನಗಳನ್ನು ಪಡೆದುಕೊಂಡಿದ್ದಾರೆಂಬುದನ್ನು ಕುರಿತು ಗೊಂದಲಿಗರು ಹಾಡು-ಕೀರ್ತನೆ ಹಾಗೂ ಕಥೆಗಳ ಮೂಲಕ ವಿವರಿಸುತ್ತಾರೆ. ಮೈಸೂರಿನ ಒಡೆಯರಿಗೆ ಚಾಮುಂಡಿದೇವಿ ಒಲಿದಿರುವ ಬಗ್ಗೆ. ಶಿವಾಜಿ ಮಹಾರಾಜನಿಗೆ ಅಂಬಾಭವಾನಿ ವರವನ್ನಿತ್ತಿರುವ ಬಗೆಗೆ, ಪಂಡಿತರಿಗೆ ಸರಸ್ವತಿ ಒಲಿದಿರುವ ಬಗ್ಗೆ, ದುಷ್ಟರನ್ನೆಲ್ಲ ದುರ್ಗಿ ಸಂಹರಿಸಿದ್ದು, ಮುಂತಾದ ಮಹಿಮೆಗಳನ್ನು ಜನರಿಗೆ ಆವೇಶಭರಿತರಾಗಿ ತಿಳಿಸುತ್ತಾರೆ. ಅಲ್ಲದೇ ದೇವಿ ಪುರಾಣ, ದೇವಿ ಸಹಸ್ರನಾಮಾವಳಿ, ದೇವಿ ಚರಿತ್ರೆ ಯಲ್ಲಮ್ಮನ ಚರಿತ್ರೆ, ಬನಶಂಕರಿ ಚರಿತ್ರೆ, ಚಾಮುಂಡಿ ಚರಿತ್ರೆಗಳನ್ನು ಈ ಸಂದರ್ಭದಲ್ಲಿ ಭಾವಾವೇಶದಿಂದ ಹೇಳುವುದರ ಮೂಲಕ ಕೇಳುಗರಲ್ಲಿ ಶಕ್ತಿದೇವತೆಗಳ ಬಗ್ಗೆ ಭಯ-ಭಕ್ತಿ ಹುಟ್ಟುವಂತೆ ಮಾಡುತ್ತಾರೆ. ಗೊಂದಲಿಗರ ಈ ಗೊಂದಲಿ ಪೂಜೆಯಿಂದ ಪ್ರಬಾವಿತರಾದ ಜನ ಇತರಂತೆ ನಮಗೂ ದೇವಿಯ ನುಗ್ರಹವಾಗಲಿ ಎಂದು ಆಶಿಸಿ ಗೊಂದಲಿಗರಿಂದ ಆದಿಶಕ್ತಿಯನ್ನು ತಮ್ಮ ಮನೆಯಲ್ಲಿ ಪೂಜಿಸುವ ಪರಂಪರೆಯನ್ನು ತಮ್ಮ ತಮ್ಮ ಮನೆಗಳಲ್ಲಿ ನೆರವೇರಿಸುವುದರಿಂದ ದುಷ್ಟ ಶಕ್ತಿಗಳು ಮಾಯವಾಗಿ ಸಕಲ ಸಿದ್ಧಿಗಳು ಲಭಿಸುತ್ತವೆ. ಎಂಬ ತಿಳುವಳಿಕೆ ಈ ಶಕ್ತಿ ಆರಾಧಕರಲ್ಲಿದೆ.’

ಗೊಂದಲ ಹಾಕುವ ಸಂಪ್ರದಾಯದಲ್ಲಿ ನಾಲ್ಕು ಪ್ರಭೇದಗಳಿರುವುದರ ಬಗ್ಗೆ ತಿಳಿಯುತ್ತದೆ ಮತ್ತು ಗುಡಿಯೊಳಗೆ ಹಾಕುವ ಗೊಂದಲಕ್ಕೆ ‘ಗುಡಿಗೊಂದಲ’ ಎಂದೂ, ಗುಡಿಯ ಮಗ್ಗಲಲ್ಲಿ ಹಾಕುವ ಗೊಂದಲಕ್ಕೆ ಬಯಲು ಗೊಂದಲ ಎಂದೂ ಕರೆಯುವುದುಂಟು.

೧. ಉತ್ತಮ ಗೊಂದಲ; ಈ ಪ್ರಬೇದ ಅತ್ಯಂತ ಪ್ರಾಚೀನವಾದದ್ದು, ಗೊಂದಲ ಪೂಜೆಯಲ್ಲಿ ಅತೀ ದೊಡ್ಡದಾದ ಗೊಂದಲ ಮೇಳ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಈ ತಂಡದಲ್ಲಿ ೩೨ ಜನರು ಭಾಗವಹಿಸುತ್ತಾರೆ.

೨. ಮಧ್ಯಮ ಗೊಂದಲ ಈ ತಂಡದಲ್ಲಿ ಹದಿನಾರು ಜನರಿರುತ್ತಾರೆ.

೩. ಸಾಧಾರಣ ಗೊಂದಲ ಈ ತಂಡದಲ್ಲಿ ೮ ಜನರಿರುತ್ತಾರೆ.

೪. ಅತೀ ಸಾಧಾರಣ ಗೊಂದಲ ಈ ತಂಡದಲ್ಲಿ ೩ ರಿಂದ ೫ ಜನರಿರುತ್ತಾರೆ.

೧೯೨೨ರಲ್ಲಿ R.E. Enthoven ಅವರು ಗೊಂದಲ ಪೂಜೆಯನ್ನು ಕುರಿತು ತಮ್ಮ ಗ್ರಂಥವಾದ The Tribes and Castes of Bombay Vol. ೨ರಲ್ಲಿ ರೀತಿಯಾಗಿ ದಾಖಲಿಸಿದ್ದಾರೆ.’

‘ಗೊಂದಲ ಹಾಕುವಿಕೆಯೇ ಗೊಂದಲಿಗರ ಬದುಕಿನ ಮುಖ್ಯ ಸಾಧನ. ದೇವಿ ಭವಾನಿಯ ಹೆಸರಿನಲ್ಲಿ ಭಿಕ್ಷೆ ಬೇಡುವುದೂ ಉಂಟು ಮತ್ತು ಧಾರ್ಮಿಕ ಐತಿಹಾಸಿಕ ಹಾಗೂ ಪ್ರೇಮವನ್ನುಸೂಚಿಸುವ ಹಾಡುಗಳನ್ನೂ ಹಾಡುವುದುಂಟು. ಮರಾಠರು, ಸಿಂಪಿಗಳು, ಸೋನಾರ್‌ಗಳು, ದೇಶಸ್ಥ ಬ್ರಾಹ್ಮಣರು ಮತ್ತು ಇತರೆ ಕೆಲವು ಡೆಕ್ಕನ್ ಪ್ರೇದಶದ ಜಾತಿಗಳವರ ಉಪನಯನ ಹಾಗೂ ಮದುವೆಗಳ ಕಾರ್ಯಕ್ರಮಗಳಲ್ಲಿ ಗೊಂದಲವನ್ನು ಏರ್ಪಡಿಸುವುದು ಸಂಪ್ರದಾಯುವಾಗಿ ಬೆಳೆದು ಬಂದಿದೆ ಗೊಂದಲದ ಸಂಕ್ಷಿಪ್ತ ರೂಪ ಹೀಗಿದೆ ಎಂದು ತಿಳಿಸುತ್ತಾರೆ.’

ಈ ಕಾರ್ಯಕ್ರಮಕ್ಕೆ ಕೆಲವು ದಿನಗಳ ಮುಂಚೆ ಗೊಂದಲಿಗರು ಊಟಕ್ಕೆ ಆಹ್ವಾನಿತರಾಗುತ್ತಾರೆ. ಮತ್ತು ಹೇರಳ ಆಹಾರ ಅವರಿಗೆ ಒದಗುತ್ತದೆ. ಕಾರ್ಯಕ್ರಮದ ದಿನದಂದು ಸಂಜೆ ಸ್ನಹಿತರು ಮತ್ತು ಸಂಬಂಧಿಗಳು ಗೊಂದಲ ನೋಡಲು ಆಹ್ವಾನಿಸಲ್ಪಡುತ್ತಾರೆ.

ಹಜಾರದ ನಡುವೆ ಒಂದು ಮಣೆಯ ಮೇಲೆ ಗೊಂದಲಿಗರ ಮುಖ್ಯಸ್ಥ ಒಂದು ರವಕೆಯ ಕಣವನ್ನು ಹರಡುತ್ತಾನೆ ಮತ್ತು ಅದರ ಮೇಲೆ ಕೆಲವು ಬೊಗಸೆ ಅಕ್ಕಿಯನ್ನು ಹರಡುತ್ತಾನೆ. ಆ ಅಕ್ಕಿಯ ಮೇಲೆ ಕುಂಭವನ್ನಿಟ್ಟು ಅದರ ಬಾಯನ್ನು ಮಾವಿನ ಎಲೆಗಳಿಂದ ಮುಚ್ಚುತ್ತಾರೆ. ಆ ಕುಂಭದ ಮೇಲೆ ಅಕ್ಕಿಯನ್ನು ತುಂಬಿದ ತಟ್ಟೆಯೊಂದನ್ನು ಇಟ್ಟು ‘ತಾಕು’ ಅಥವಾ ದೇವಿ ಭವಾನಿಯ ಪ್ರತಿಮೆಯನ್ನು ಇಡುತ್ತಾರೆ. ಆ ಮೇಲೆ ಆ ಮನೆಯ ಯಜಮಾನ ಹಣ್ಣು ಮತ್ತು ಹಣವನ್ನು ನಿವೇದಿಸಿ ಕುಂಕುಮ ಅರಿಶಿಣ, ಗಂಧ ಹೂವುಗಳಿಂದ ಪೂಜಿಸಿ ನಮಸ್ಕರಿಸುತ್ತಾನೆ.

‘ಈಗ ಗೊಂದಲಿಗರ ಮುಖ್ಯಸ್ಥ ದೇವತೆಯ ಮುಂದೆ ನಿಲ್ಲುತ್ತಾನೆ ಅವನ ಬಲಕ್ಕೆ ಸಹಾಯಕನೊಬ್ಬ ಹೊತ್ತಿಸಿದ ದೀವಟಿಗೆಯನ್ನು ಹಿಡಿದು ನಿಲ್ಲುತ್ತಾನೆ. ಇತರ ಸಂಗಾತಿಗಳು ಮುಖ್ಯ ಗೊಂದಲಿಯ ಹಿಂದೆ ನಿಲ್ಲುತ್ತಾರೆ. ಅವರಲ್ಲೊಬ್ಬ ಜೋಡಿ ವಾದ್ಯವಾದ ಸಂಬಾಳವನ್ನು ನುಡಿಸುತ್ತಾನೆ. ಒಬ್ಬ ತಂತೀವಾದ್ಯವಾದ ತುಂತುಣಿ ನುಡಿಸುತ್ತಾನೆ. ಮೂರನೆಯವನು ಲೋಹದ ಬಟ್ಟಲುಗಳನ್ನು ಒಂದಕ್ಕೊಂದಕ್ಕೆ ಬಡಿಯುವುದರ ಮೂಲಕ ತಾಳ ನುಡಿಸುತ್ತಾನೆ.’

ಈಗ ಮುಖ್ಯಸ್ಥ ಗಂಧ ಅರಿಶಿಣ ಹೂವುಗಳಿಂದ ದೀವಟಿಗೆಯನ್ನು ಪೂಜಿಸಿ ಅದಕ್ಕೆ ನಮಸ್ಕರಿಸಿ ‘ಓ ದೇವತೆ ತುಳಜಾಪುರದ ಭವಾನಿ ಗೊಂದಲ ನೃತ್ಯವನ್ನು ವೀಕ್ಷಿಸಲು ಬಾ’ ಎಂದು ಹೇಳುತ್ತಾನೆ. ಇದೇ ರೀತಿಯಾಗಿ ಅವನು ಅನೇಕ ದೇವ ದೇವತೆಗಳನ್ನು ತಮ್ಮ ಕಾರ್ಯಕ್ರಮವನ್ನು ವೀಕ್ಷಿಸಲು ಬರಬೇಕೆಂದು ಪುನಾರಾವರ್ತಿಸುತ್ತಾನೆ. ಆ ಮೇಲೆ ಅವನು ಹಿಂದೆ ಮುಂದೆ ಚಲಿಸುತ್ತ ಭವಾನಿ ಮಲ್ಹಾರಿರಾಮಾ ಅಥವಾ ಇನ್ನಾವುದಾದರೂ ನಾಯಕನ ಸಾಧನೆಗಳನ್ನು ಕುರಿತಂತೆ ಒಂದು ಹಾಡು ಹಾಡುತ್ತಾನೆ. ಅವನ ಸಹಾಯಕರು ಅವರವರ ವಾದ್ಯಗಳನ್ನು ನುಡಿಸುತ್ತಿರುತ್ತಾರೆ.

ಹಿಂದೆ ಮುಂದೆ ಚಲಿಸುತ್ತಿದ್ದ ಮುಖ್ಯಸ್ಥ ಕೆಲವು ನಿಮಿಷಗಳ ಅನಂತರ ನಿಲ್ಲುತಾನೆ ಮತ್ತು ಆ ಹಾಡಿನ ಅರ್ಥವನ್ನು ಪ್ರೇಕ್ಷಕರಿಗೆ ವಿವರಿಸುತ್ತಾನೆ. ಹೀಗೆ ಬೆಳಗಿನ ತನಕ ಅವನು ತನ್ನ ಕಥೆಯನ್ನು ಮುಂದುವರಿಸುತ್ತಾನೆ. ಕಥಾನಕ ಮುಗಿದ ಮೇಲೆ ಮುಖ್ಯ ಗೊಂದಲ, ಪ್ರೇಕ್ಷಕರು ಇಷ್ಟಪಟ್ಟರೆ, ಶಿವಾಜಿ ಮತ್ತಿತರ ಮರಾಠಾ ನಾಯಕರ ಸಾಧನೆಗಳನ್ನು ವಿವರಿಸುವ ಹಾಡುಗಳನ್ನು ಹಾಡುತ್ತಾನೆ. ಮತ್ತು ಆತ ಬುದ್ದಿವಂತನಾಗಿದ್ದರೆ ತನ್ನಿಂದಲೋ ಅಥವಾ ಇತರ ಗೊಂದಲಿಗರಿಂದಲ ರಚಿತವಾದ ಕೆಲವು ಲಾವಣಿಗಳನ್ನು ಹಾಡಿ ಪ್ರೇಕ್ಷಕರನ್ನು ಸಂತೋಷಗೊಳಿಸುತ್ತಾನೆ. ಕೆಲವು ವೇಳೆ ಗೊಂದಲಿಗರಲ್ಲೊಬ್ಬರು ಭವಿಷ್ಯದ ಘಟನೆಗಳನ್ನು ಹೇಳುವುದೂ ಉಂಟು.

ಬೆಳಗಾಗುವ ಹೊತ್ತಿಗೆ ಅಥವಾ ಕರ್ಪೂರದಿಂದ ದೇವತೆಗ ಬೆಳಗಲಾಗುತ್ತದೆ. ಪವಿತ್ರ ದೀವಟಿಗೆಯನ್ನು ಹಾಲಿನಲ್ಲಿ ಅಥವಾ ಅಪ್ಪಟ ಬೆಣ್ಣೆಯಲ್ಲಿ ಅದ್ದಿ ನಂದಿಸಲಾಗುತ್ತದೆ. ಇಲ್ಲಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಗೊಂದಲ ಪೂಜೆಯನ್ನು ನೆರವೇರಿಸುವ ಕ್ರಮದಲ್ಲಿ ಪ್ರಾದೇಶಿಕವಾಗಿ ಭಿನ್ನತೆ ಕಂಡು ಬರುತ್ತದೆ. ಉತ್ತರ ಕರ್ನಾಟಕದ ಬೆಳಗಾವಿ,ಬಿಜಾಪೂರ ಮತ್ತು ಧಾರವಾಡದ ಪ್ರೇದಶಗಳಲ್ಲಿ ಗೊಂದಲ ಹಾಕುವ ಪದ್ಧತಿ ಬೇರೆ ಬೇರೆಯಾಗಿರುವುದು ಕಂಡುಬರುತ್ತದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಈ ಪ್ರದೇಶಗಳಲ್ಲಿಯೂ ಭಿನ್ನತೆ ಇರುವುದನ್ನು ಕಾಣುತ್ತೇವೆ. ಆಧುನಿಕತೆ, ವೈಜ್ಞಾನಿಕತೆ ನಾಗರೀಕತೆಯ ಪ್ರಬಾವವೂ ಈ ಗೊಂದಲಪೂಜೆಯ ಮೇಲಾಗಿದೆ. ಕೆಲಪ್ರದೇಶಗಳಲ್ಲಿ ಬೆಳ್ಳಬೆಳ್ಳತನಕ ನಡೆಯುತ್ತಿದ್ದ ಗೊಂದಲ ಪೂಜೆ ಈಗ ೪-೫ ಗಂಟೆಗಳಲ್ಲಿ ಮುಗಿಸುವ ಪರಂಪರೆಯನ್ನು ಗೊಂದಲಿಗರು ಹಾಕಿಕೊಂಡಿದ್ದಾರೆ. ನಾನು ಕ್ಷೇತ್ರಕಾರ್ಯ ಮಾಡಿದ ಗುಲಬರ್ಗಾ, ರಾಯಚೂರು, ಬೀದರ, ಬೆಳಗಾವಿ, ಬಿಜಾಪೂರ, ಗದಗ, ಕೊಪ್ಪಳ, ಧಾರವಾಡ, ಶಿವಮೊಗ್ಗ ಈ ಜಿಲ್ಲೆಗಳಲ್ಲಿ ಗೊಂದಲ ಪೂಜೆಯ ಆಚರಣೆ ಬೆರಳೆಣಿಕೆಯಲ್ಲಿ ಮಾತ್ರಕಂಡುಬರುತ್ತಿವೆ.

ಮದುವೆ / ಉಪನಯನದ ಸಂದರ್ಭದಲ್ಲಿ ಗೊಂದಲ ಪೂಜೆ

ಮದುವೆ ಮತ್ತು ಉಪನಯನದ ಸಂದರ್ಭದಲ್ಲಿ ಸುರಿಗೆ ನೀರಿನ ಸ್ನಾನವಾದ ರಾತ್ರಿ ಗೊಂದಲ ಹಾಕಬೇಕಾದಾಗ ಮದುವೆ ನಡೆಯುವ ಮನೆಯ ಮುಂದೆ ಹಾಕಬೇಕಾಗುವುದರಿಂದ ಅಲ್ಲಿ ದೇವಿ ಅಂಬಾಭವಾನಿಯನ್ನು ಪ್ರತಿಷ್ಠಾಪಿಸಿ ನಂತರ ಗೊಂದಲ ಹಾಕುತ್ತಾರೆ.

ಮನೆಯ ಮುಂದಿನ ಒಂದು ಕಟ್ಟೆಯ ಮೇಲೆ ಸಾರಿಸುವಂಥ ನೆಲವಾಗಿದ್ದರೆ ಸಾರಿಸಿ ಇಲ್ಲವೆ ಕಲ್ಲಿನ ಪರಸಿ ಇದ್ದರೆ ಅದನ್ನು ತೊಳೆದು ಸ್ವಚ್ಛಗೊಳಿಸಿ, ಅದರ ಮೇಲೆ ಜಮಖಾನ ಹಾಸಿ ಮತ್ತು ಬಟ್ಟೆ ಹಾಕಿ ಅದರಲ್ಲಿ ಅಕ್ಕಿಯನ್ನು ಸುರಿಯುತ್ತಾರೆ. ನಂತರ ಅಕ್ಕಿಯನ್ನು ಚಚ್ಚೌಕಾಕಾರಕ್ಕೆ ಮಟ್ಟ ಮಾಡಿ ಕಳಸ ಇಡುತ್ತಾರೆ. ಕಳಸದ ಚೆಂಬಿನ ಕತ್ತಿಗೆ ಚಿನ್ನದ ಹಾರವನ್ನು ಹಾಕಿ ಅಲಂಕಾರ ಮಾಡುತ್ತಾರೆ. ಕಳಸದ ಸುತ್ತ ಅಲ್ಲಲ್ಲಿ ನಿಂಬೆ ಹಣ್ಣು, ನಾಲ್ಕೂ ಮೂಲೆಗೆ ವೀಳ್ಯದೆಲೆ, ಅಡಿಕೆ, ಅರಿಶಿನದ ಕೊಂಬು, ಉತ್ತತ್ತಿ, ಕಳಸದ ಮುಂದೆ ಅಂಬಾಭವಾನಿಯ ಪುಟ್ಟ ಬೆಳ್ಳಿಯ ಮುಖವನ್ನು ಕಳಸಕ್ಕೆ ಹಚ್ಚಿ ನಿಲ್ಲಿಸಿರುತ್ತಾರೆ. ಈ ದೇವಿಯ ಮುಂದೆ ಧೂಪದುಂಡಿಗೆ, ಅರಿಷಿಣ, ಕುಂಕುಮ, ಪಂಚಾರತಿ, ನೈವೇದ್ಯದಲ್ಲಿ ತಾಟಿನಲ್ಲಿ ಮಾಡಿದ ‘ಕಣಗು ಆರತಿ’ ಎಂದು ಕರೆಯುವ ಐದು ದೀಪಗಳನ್ನು ಹಚ್ಚಿರುತ್ತಾರೆ. ದೇವಿಯ ‘ವೇದಿಕೆ’ಯ ಮುಂದೆ ಸ್ವಲ್ಪ ಬಲಕ್ಕಾದಂತೆ ದೀವಟಿಗೆ, ಕಬ್ಬಿಣದಿಂದ ಮಾಡಿದ ಈ ದೀವಟಿಗೆಯ ತಲೆಯ ಭಾಗವನ್ನು ಜೋಳದ ಹಿಟ್ಟಿನಲ್ಲಿ ದಪ್ಪವಾಗಿ ಮೆತ್ತಿ ಅದಕ್ಕೆ ದಬ್ಬಣ ಚುಚ್ಚಿ, ಆ ದಬ್ಬಣಕ್ಕೆ ಎಣ್ಣೆಯಲ್ಲಿ ಎದ್ದಿದ ಗಗ್ಗರದ ಗಾತ್ರದ ಸಿಂಬಿಗಳನ್ನು ಸಿಕ್ಕಿಸಿ ಹೊತ್ತಿಸುತ್ತಾರೆ. ಅದಕ್ಕೆ ಊರೆ ಕೊಟ್ಟು ನಿಲ್ಲಿಸುತ್ತಾರೆ. ಪಂಚಾರತಿ ಕುಸುಬಿನೆಣ್ಣೆಯ ಕಣಗು ಆರತಿ ಮತ್ತು ಈ ದೀವಟಿಗೆ ಇವು ಇಡೀ ರಾತ್ರಿ ಉರಿಯುತ್ತಿರುತ್ತವೆ. ದೇವಿಯ ಮಂಟಪದ ಮೇಲೆ ಕಡಕಣೆ ಮತ್ತು ಫಟಮಾಲೆಗಳನ್ನು ತೂಗುಹಾಕಿರುತ್ತಾರೆ. ಇಷ್ಟು ಆದರೆ ಅದರ ಮುಂದಿನ ಜಾಗ ಗೊಂದಲ ಹಾಕಲು ಯೋಗ್ಯ ಎಂದು ಹೇಳುತ್ತಾರೆ.

ಗೊಂದಲ ಕಾರ್ಯಕ್ರಮದಲ್ಲಿ ಸಂಬಾಳ ಹೊಂದಿರುವ ವ್ಯಕ್ತಿಯೇ ಮುಖ್ಯ ಗಾಯಕ. ಪಕ್ಕದಲ್ಲಿ ಚೌಡಿಕೆ ಹಿಡಿದಿರುವ, ಇನ್ನೊಂದು ಪಕ್ಕದಲ್ಲಿಲ್ಲ ಪತ್ರ ಹಿಡಿದಿರುವ, ಇಬ್ಬರು ವ್ಯಕ್ತಿಗಳೇ ಹಿಮ್ಮೇಳವಾಗಿ ಕಾರ್ಯನಿರ್ವಹಿಸುತ್ತಾರೆ. ಇಬ್ಬರು ಅಥವಾ ಮೂವರು ಗೊಂದಲ ಕಾರ್ಯನಿರ್ವಹಿಸುವುದು ಕಂಡು ಬರುತ್ತದೆ. ಗೊಂದಲದ ಪ್ರಾರಂಭದ ದಿನಗಳಲ್ಲಿ ಗಂಡಸರು ಮಾತ್ರ ಭಾಗವಹಿಸುತ್ತಿದ್ದರು. ಈಗ ಹೆಣ್ಣು ಮಕ್ಕಳೂ ಈ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಗೊಂದಲ ಪೂಜೆ

ಗೊಂದಲ ಪೂಜೆಯಲ್ಲಿ ಪೂರ್ವ ರಂಗ ಮತ್ತು ಉತ್ತರ ರಂಗ ಎಂಬ ಎರಡು ಭಾಗಗಳಿವೆ. ಪೂರ್ವರಂಗದಲ್ಲಿ ಕಲಶ ಪೂಜೆ, ದೀವಟಿಗೆ ಮತ್ತು ಕಕ್ಕಡಗಳನ್ನು ಉರಿಸುವುದುನ್ನು ಪ್ರಮುಖವಾಗಿ ಕಾಣುತ್ತೇವೆ. ಉತ್ತರ ರಂಗದಲ್ಲಿ ಶಕ್ತಿ ದೇವತೆಗಳ ಆರಾಧನೆ, ಕುಣಿತ, ಕೀರ್ತನೆ, ಹಾಡು ಮುಂತಾತವುಗಳನ್ನು ನೋಡುತ್ತೇವೆ. ನವರಾತ್ರಿಯ ದಿವಸ ಗೊಂದಲ ಪೂಜೆ ಸಲ್ಲಿಸಿದರೆ ಅಂದು ದೇವಿಯು ಭಕ್ತರಿಗೆ ಬೇಡಿದ ವರಗಳನ್ನು ನೀಡುತ್ತಾಳೆಂಬ ಬಲವಾದ ನಂಬಿಕೆ ಗೊಂದಲಿಗರಲ್ಲಿದೆ. ಹೀಗಾಗಿ ಗೊಂದಲಿಗರು ವಿಜಯ ದಶಮಿಯ ದಿನ ಗೊಂದಲ ಹಾಕಲು ಆಹ್ವಾನಿಸದಿದ್ದರೂ ಸ್ವತಃ ತಾವೇ ತಮ್ಮ ತಮ್ಮ ಮನೆಗಳಲ್ಲಿ ಅಥವಾ ಶಕ್ತಿ ದೇವತೆಗಳ ಗುಡಿಗಳಲ್ಲಿ ಗೊಂದಲ ಹಾಕುವ ಪರಂಪರೆಯನ್ನು ಇಟ್ಟುಕೊಂಡಿದ್ದಾರೆ.

ಗೊಂದಲ ಪೂಜೆಯ ಸ್ಥಳದಲ್ಲಿ ಚಚ್ಚೌಕಾದ ಮಣೆಯನ್ನಿಟ್ಟು ಅದರ ನಾಲ್ಕು ತುದಿಗಳಿಗೆ ಅಕ್ಕಿ ಕಾಳನ್ನು ಹೊಯ್ದು, ನಡುವೆ ಕಳಸವಿಡುತ್ತಾರೆ. ಈ ಕಳಸವೇ ದೇವಿಯ ಸ್ಥಾಪನೆ. ಪ್ರಾಣಪ್ರತಿಷ್ಠಾನ ಆರಾಧನೆಯನ್ನು ಮಾಡಿಕೊಳ್ಳುವ ಶಕ್ತಿ ಎಂದು ಭಾವಿಸುತ್ತಾರೆ.

ಗೊಂದಲ ಪೂಜೆಗೆ ಸರಿಯಾಗಿ ಬರಬೇಕೆಂದು ಬಂಧು ಬಾಂಧವರಿಗೆಲ್ಲ ಮುಂಚಿತವಾಗಿಯೇ ತಿಳಿಸಿರುತ್ತಾರೆ. ಎಲ್ಲರೂ ಬೆಳಗಿನ ಸಮಯದಲ್ಲಿ ಸೇರಿದ ಮೇಲೆ ಗೊಂದಲದ ಪೂರ್ವ ರಂಗ ಪ್ರಾರಂಭವಾಗುತ್ತದೆ.ಪೂಜೆಯ ಆರಂಭದಲ್ಲಿ ವಾದ್ಯಗಾರರು ಸಂಬಾಳ, ಚೌಡಿಕೆ, ತಾಳ, ಟಿಂಕ ನುಡಿಸಲು ಪ್ರಾರಂಭಿಸುತ್ತಾರೆ. ಬಂದವರಿಗೆ ಹಣೆಗೆ ಅರಿಷಿಣ, ಕುಂಕುಮ ಹಚ್ಚುತ್ತಾರೆ. ಪೂಜೆಗೆ ಬಂದವರೆಲ್ಲ ದೇವಿಯ ಕಳಸಕ್ಕೆ ನಮಸ್ಕರಿಸಿ ಕುಳಿತುಕೊಳ್ಳುತ್ತಾರೆ. ಎತ್ತರದ ಧ್ವನಿಯಲ್ಲಿ ವಾದ್ಯಗಳನ್ನು ಶಬ್ದ ಮಾಡುತ್ತಿರುವಾಗ ಹಾಡುಗಾರರಿಗೆ ಆವೇಶ ಬರುತ್ತದೆ. ಕುಳಿತು ನೋಡುತ್ತಿದ್ದವರಲ್ಲಿ ಅನೇಕರು ಆವೇಶಕ್ಕೊಳಗಾಗುತ್ತಾರೆ.ಎಲ್ಲರೂ ಶಕ್ತಿ ಮಾತೆಯರ ಹೆಸರಿನಲ್ಲಿ ಉಧೋ ಉಧೋ ಎಂದು ಸ್ಮರಿಸುತ್ತ ಕವಡಿಯ ಸರವನ್ನು ಕೊರಳಲ್ಲಿ ಹಾಕಿಕೊಂಡು ಇರಿಯುವ ಕಕ್ಕಡವನ್ನು ಕೈಯಲ್ಲಿ ಹಿಡಿದುಕೊಂಡು ಅದರ ಉನ್ನು ದೇಹಕ್ಕೆ ಬಡಿದುಕೊಳ್ಳುತ್ತ ಉಧೋ ಉಧೋ ಎಂದುಹೇಳುತ್ತ ಕುಣಿಯುತ್ತಾರೆ. ಈ ಸಂದರ್ಭದಲ್ಲಿ ವಾದ್ಯಗಳು ‘ಕುಣಿ ಕುಣಿ’ ಮಾರ್ ಮಾರ್. ಬಡಿ ಬಡಿ ಹಿಡಿ ಹಿಡಿ ಎಂದು ಶಬ್ದಗಳನ್ನು ಹೊರಡಿಸುತ್ತವೆ. ಹೆಂಗಸರು ನಡುವಿಗೆ ಸೀರೆಯನ್ನುಕಟ್ಟಿಕೊಂಡು ಹಣೆಗೆ ಭಂಡಾರ ಹಚ್ಚಿಕೊಂಡು ಉಧೋ ಉಧೋ ಎಂದು ಹೇಳುತ್ತ ಕುಣಿಯುತ್ತಾರೆ. ಕುಣಿದು ಕುಣಿದು ಸುಸ್ತಾಗಿ ಕೆಲವರು ನೆಲದ ಮೇಲೆ ಬೀಳುವುದುಂಟು. ಕೆಲವು ಕಡೆ ಸರದಿಯ ಮೇಲೆ ಕುಣಿಯುವ ಪದ್ಧತಿಯು ಇದೆ. ಬೆಳಿಗ್ಗೆ ಪ್ರಾರಂಭವಾದ ಪೂರ್ವ ರಂಗದ ಕಾರ್ಯಕ್ರಮ ಮಧ್ಯಾಹ್ನದವರೆಗೆ ನಡೆಯುತ್ತದೆ. ಸಾಮಾನ್ಯವಾಗಿ ಮಧ್ಯಾನ್ಹ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿರುತ್ತಾರೆ.

ಸಂಜೆ ಗೊಂದಲದ ಕಲಶಕ್ಕೆ ಆರತಿ ಬೆಳಗಿ ನಮಸ್ಕರಿಸುವುದರ ಮೂಲಕ ಉತ್ತರ ರಂಗ ಪ್ರಾರಂಭವಾಗುತ್ತದೆ. ಈ ಗೊಂದಲ ಪೂಜೆಯನ್ನು ನಡೆಸುವ ಮುಖ್ಯ ಪೂಜಾರಿಗೆ ಈಸಂದರ್ಭದಲ್ಲಿ ಬಿಡುವೇ ಇಲ್ಲದಂತೆ ಕಾರ್ಯಗಳು ನಡೆಯುತ್ತಿರುತ್ತವೆ. ಪೂಜಾರಿ ಜನರನ್ನು ಕುರಿತು ‘ತಮ್ಮ ಭಾಗ್ಯದ ದೇವಿ ಬರುತ್ತಿದ್ದಾಳೆ ಯಾರೂ ಇಲ್ಲಿಂದ ಹೊರೆಗ ಎಂದು ಹೇಳುತ್ತ ಭಕ್ತರ ಸಮೂಹವನ್ನು ಹೋಗಬಾರದು’ ಎಂದು ಹೇಳುತ್ತ ಭಕ್ತರ ಸಮೂಹವನ್ನು ಎಚ್ಚರಗೊಳಿಸುತ್ತಿರುತ್ತಾನೆ. ಇಲ್ಲಿಂದ ಶಕ್ತಿ ದೇವತೆಗಳಿಗೆ (ಅಂಬಾಭವಾನಿ, ಯಲ್ಲಮ್ಮ, ಲಕ್ಷ್ಮಿ, ಸರಸ್ವತಿ) ಸಂಬಂಧಿಸಿದ ಪುರಾಣ ಕಥೆಗಳು ಅವರ ಅವತಾರಗಳು, ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆ, ಪವಾಡಗಳನ್ನು ಮೈದುಂಬಿಕೊಂಡು ಕಥೆಯ ಮತ್ತು ಹಾಡುಗಳ ರೂಪದಲ್ಲಿ ಹೇಳುತ್ತಾರೆ. ಈ ಪ್ರಕ್ರಿಯೆ ಬೆಳತನಕ ಸಾಗುತ್ತದೆ.

ಗೊಂದಲ ಪೂಜೆಯ ನಂತರ ಬೆಳಿಗ್ಗೆ ಎಲ್ಲರೂ ಶಕ್ತಿ ದೇವಿಯ ಕಲಶಕ್ಕೆ ಆರತಿ ಬೆಳಗಿ ನಮಸ್ಕರಿಸಿ ಗೊಂದಲ ನಡೆಸಿಕೊಟ್ಟ ತಂಡಕ್ಕೆ ಅವರು ನಿಗದಿ ಪಡಿಸಿದ ಹಣ (ನೂರು ರೂಗಳಿಂದ ಮೂರುನೂರು ರೂಗಳವರೆಗೆ) ಕುಬ್ಬಸ, ಎಲೆ-ಅಡಿಕೆ, ಮನೆಯಲ್ಲಿ ಬಳಸಿದ ಪಾತ್ರೆಗಳನ್ನು, ಹಳೆಯ ಬಟ್ಟೆಗಳನ್ನು, ಹಣ್ಣು, ಕಾಯಿ, ಅಕ್ಕಿ, ಜೋಳ, ಗೋಧಿ ಮುಂತಾದ ವಸ್ತುಗಳನ್ನು ಕೊಡುತ್ತಾರೆ.

ಆ. ಬುಡಬುಡಿಕೆ ವೃತ್ತಿ

ಕಾರ್ನಾಟಕದ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಲ್ಲಿ ಈ ಬುಡಬುಡಕೆ ವೃತ್ತಿಯನ್ನು ಮಾಡಿಕೊಂಡಿರುವ ಕಲಾವಿದರು ನಮಗೆ ಕಾಣಸಿಗುತ್ತಾರೆ. ಇವರು ಕೈಯಲ್ಲಿ ಚಿಕ್ಕದಾದ ಢಮರುಗದಂತಿರುವ ವಾದ್ಯವನ್ನು ಹಿಡಿದುಕೊಂಡಿರುತ್ತಾರೆ. ಇವರಿಗೆ ‘ಬುಡುಬುಡಕೆಯವ, ಬುಡಬುಡಿಕ್ಯಾ, ದೋಷಿಗ್ಯಾ, ಗೂಳಿಗಾರ, ಮಹಾರಾಷ್ಟಲ್‌ಲಿ ಸುಡುಬುಡಿಕೆ, ಸುಡಬುಡಿಕ್ಯಾ ಎಂದು ಕರಾವಳಿ ಪ್ರದೇಶದಲ್ಲಿ ಹಕ್ಕಿ ನರಸಣ್ಣ, ನರಸಣ್ಣ ಎಂದು ಕರೆಯುವರು, ಬುಡಬುಡಕೆಯವರು ಗೊಂದಲಿಗರ ಪಂಗಡದಿಂದ ಸಿಡಿದು ಬುಡಬುಡಕೆ ವೃತ್ತಿಯನ್ನು ಆರಂಭಿಸಿದವರಾಗಿದ್ದಾರೆ.

೧) ೧೮೮೪ ರಲ್ಲಿ ಜೇಮ್ಸ್ ಕ್ಯಾಂಪ್ಬೆಲ್ ಪ್ರಕಟಿಸಿದ ಬಿಜಾಪುರ ಜಿಲ್ಲೆ ಗೆಝಟಿಯರನಲ್ಲಿ ಬುಡ್ಬುಡ್ಕೇರ ಎಂದು ಕರೆಯಲಾಗಿದೆ.

೨) ೧೯೦೮ರಲ್ಲಿ ಪ್ರಕಟವಾದ ಇಂಪೀರಿಯಲ್ ಗೆಝಟಿಯರನ್ನ ೧೫ನೇ ಸಂಪುಟದಲ್ಲಿ ‘ಬುಡುಬುಡುಕಲರು’ ಎಂದು ಗುರುತಿಸಿದ್ದಾರೆ.

೩) ಕೊಲ್ಲಾಪುರ ಜಿಲ್ಲೆಯ ಗೆಝಟಿಯರಲ್ಲಿ ‘ಸುಡುಬುಡುಕೆರ’ ಎಂದು ಕರೆಯಲಾಗಿದೆ.

೪) ಕನ್ನಡ ಸಾಹಿತ್ಯ ಪರಿಷತ್ತು ೧೯೭೭ರಲ್ಲಿ ಪ್ರಕಟಿಸಿದ ‘ಕರ್ನಾಟಕ ಜಾನಪದ ಕಲೆಗಳು’ ಎಂಬ ಕೃತಿಯಲ್ಲಿ ಬುಡಬುಡಿಕೆಯವರ ಚಿತ್ರಣವಿದೆ.

೫) ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ‘ಕರ್ನಾಟಕ ಜನಪದ ಕಲೆಗಳ ಕೋಶ’ದಲ್ಲಿ ಬುಡಬುಡಿಕೆ ಕಲೆಯ ಬಗ್ಗೆ ವಿವರವಾದ ಮಾಹಿತಿ ಇದೆ.

೬) ಕರ್ನಾಟಕದ ಬುಡಕಟ್ಟುಗಳ ಕೋಶ ಭಾಗ ೨ರಲ್ಲಿ ಬುಡಬುಡುಕೆಯವರನ್ನು ಕುರಿತಾದ ಲೇಖನ ಪ್ರಕಟವಾಗಿದೆ.

ಹಕ್ಕಿ ಪಣ ಕಟ್ಟುವುದು

ಬುಡಬುಡಕೆಯ ಆಯಾ ಊರುಗಳಲ್ಲಿ ವಡತ್ತಿ ಮಾಡುವವರು ಆಯಾ ಗ್ರಾಮದ ಪ್ರಮುಖ ವ್ಯಕ್ತಿಗಳನ್ನು ಭೆಟ್ಟಿಯಾಗಿ ಅವರಿಂದ ಒಪ್ಪಿಗೆ ಪಡೆದು ಹಕ್ಕಿ ಪಣ ಕಟ್ಟಿ ಸ್ಮಶಾನದಲ್ಲಿ ಕುಳಿತು ಹಾಲಕ್ಕಿಯ ಕೂಗು ಅದರವರ್ತನೆಯನ್ನು ಗೃಹಿಸುತ್ತಾರೆ. ಈ ಕ್ರಮಕ್ಕೆ ಅವರು ‘ಹಕ್ಕಿ ಪಣ ಕಟ್ಟುವುದು’ ಅಥವಾ ಹಕ್ಕಿ ನರಸಣ್ಣನ ಮಾತು ಎನ್ನುವರು. ಊರಿನ ಬೀದಿಗಳಲ್ಲಿ ಸಂಚರಿಸಿ ಹಾಲಕ್ಕೆ ನುಡಿಯುವ ಮಾತುಗಳನ್ನು ಹೇಳುತ್ತಾರೆ.

ಬುಡಬುಡಕೆಯವರು ಹಕ್ಕಿ ಪಣ ವನ್ನು ಮಧ್ಯರಾತ್ರಿ ಕಟ್ಟುತ್ತಾರೆ. ಸ್ಮಶಾನದಲ್ಲಿ ಗಿಡಮರಗಳಿರುವ ಸ್ಥಳದಲ್ಲಿ ಹಾಲಕ್ಕಿಗಳು ಕುಳಿತುಕೊಂಡಿರುತ್ತವೆ. ಈ ಬುಡಬುಡಕೆಯವರು ಮೊದಲು ಹಾಲಕ್ಕಿಗಳ ಮಾತುಗಳನ್ನು ಮಾತ್ರ ಗಮನಿಸುತ್ತಾರೆ. ಇತರೆ ಯಾವುದೇ ಬೀದಿಗಳಲ್ಲಿ ಸಂಚರಿಸಿ ಹಾಲಕ್ಕಿ ನುಡಿಯುವ ಮಾತುಗಳನ್ನು ಹೇಳುತ್ತಾರೆ.