ಪಣ ಕಟ್ಟುವ ವಿಧಾನ

ಬುಡಬುಡಕೆ ಪಣ ಕಟ್ಟಲು ಸ್ಮಶಾನಕ್ಕೆ ಹೋಗುವಾಗ ಒಂದು ತಂಬಿಗೆ ನೀರನ್ನು ಅರಿಷಿಣ ಕುಂಕುಮ ತೆಗೆದುಕೊಂಡು ಹೋಗುತ್ತಾ. ಯಾವುದೇ ಬೆಳಕು ನೀಡುವ ವಸ್ತುಗಳನ್ನು ಈ ಸಂದರ್ಭದಲ್ಲಿ ತೆಗೆದುಕೊಂಡು ಹೋಗುವುದಿಲ್ಲ. ಇತ್ತಿತ್ತಲಾಗಿ ಕೆಲವರು ಲಾಟೀನ್ ಒಯ್ಯುತ್ತಿದ್ದಾರೆ. ಅಮಾವಾಸ್ಯೆಯ ದಿನ ಪಣ ಕಟ್ಟಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆಂಬ ನಂಬಿಕೆ ಅವರಲ್ಲಿದೆ. ಪಣ ಕಟ್ಟಲು ಕುಳಿತ ಸ್ಥಳದ ಸುತ್ತಲೂ ಬುಡಬುಡಕೆ ಮಂತ್ರಗಳನ್ನು ಪಠಿಸುತ್ತ ನೀರು ಸಿಂಪಡಿಸಿ ಕೆಲವರು ರಂಗೋಲಿ ಹಾಕಿ ಅರಿಷಿಣ, ಕುಂಕುಮ ಹಾಕಿ ಅಕ್ಕಿ ಕಾಳುಗಳನ್ನು ಸುತ್ತಲು ಎಸೆಯುತ್ತಾರೆ. ಪಣ ಕಟ್ಟಲು ಹೋಗುವ ಸಂದರ್ಭದಲ್ಲಿ ಈ ವ್ಯಕ್ತಿ ಯಾರೊಂದಿಗೂ ಮಾತನಾಡುವುದಲ್ಲ. ಒಂದು ವೇಳೆ ಮಾತನಾಡಿದರೆ ಕಟ್ಟಿರುವ ಪಣ ಸುಳ್ಳಾಗುತ್ತದೆಂಬ ಪರಿಕಲ್ಪನೆ ಇದೆ. ನೀರು, ಅರಿಷಿಣ, ಕುಂಕುಮ ಅಕ್ಕಿ ಕಾಳುಗಳನ್ನು ಅವನು ಚೆಲ್ಲುವ ಸಮಯದಲ್ಲಿ ಹನುಮಂತ, ಪಾಂಡುರಂಗನ ಸ್ಮರಣೆ ಅತೀ ಅವಶ್ಯ ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ ಮಂತ್ರಗಳನ್ನು ಮನಸ್ಸಿನಲ್ಲಿಯೇ ಹೇಳಿಕೊಳ್ಳಬೇಕು ಎಂಬ ನಿಯಮವಿದೆ. ಈಬುಡಬುಡಕೆಯವರು ಪಣ ಕಟ್ಟುವಾಗಿನ ಮಂತ್ರಗಳನ್ನು ತನ್ನ ಶಿಷ್ಯಂದಿರಿಗೆ ಮಾತ್ರ ಹೇಳಿಕೊಡುತ್ತಾರೆ. ಈ ಎಲ್ಲ ಕೆಲಸಗಳನ್ನು ಪೂರೈಸಿದ ಮೇಲೆ ನಿಶ್ಯಬ್ದದ ಈ ಸಂದರ್ಭದಲ್ಲಿ ಹಾಲಕ್ಕಿಗಳು ಕೂಗುತ್ತವೆ.

೧) ಹಾಲಕ್ಕಿ ಒಂದು ಸಲ ನುಡಿದರೆ ಶುಭ

೨) ಹಾಲಕ್ಕಿ ಎರಡು ಸಲ ನುಡಿದರೆ ಉತ್ತಮ

೩) ಹಾಲಕ್ಕಿ ಮೂರು ಸಲ ನುಡಿದರೆ ಕನಿಷ್ಠ

೪) ಹಾಲಕ್ಕಿ ನಾಲ್ಕು ಸಲ ನುಡಿದರೆ ಈ ವರ್ಷದ ಭವಿಷ್ಯವೂ ಹಿಂದಿನ ವರ್ಷದಂತೆಯೆ ಎಂದು ತಿಳಿದುಕೊಳ್ಳುವರು.

೫) ಜೋಡು ಹಾಲಕ್ಕಿಗಳು ಒಂದೇ ಸಲ ನುಡಿದರೆ ಶುಭ

೬) ಜೋಡು ಹಾಲಕ್ಕಿಗಳು ಎರಡು ಸಲ ನುಡಿದರೆ ಉತ್ತಮ

೭) ಎರಡು ಹಕ್ಕಿಗಳು ಒಂದರ ನಂತರ ಒಂದು ನುಡಿಯುತ್ತಿದ್ದರೆ ಶುಭ ಸೂಚನೆ. ಈ ಸಂದರ್ಭದಲ್ಲಿ ಈ ಹಕ್ಕಿಗಳು ಯಾವ ದಿಕ್ಕಿನಲ್ಲಿ ಕುಳಿತುಕೂಗುತ್ತಿವೆ ಮತ್ತು ಯಾವ ಕಡೆಗೆ ಆ ಹಕ್ಕಿಗಳು ಹೋದವು ಎಂಬುದೂ ಮುಖ್ಯವಾಗುತ್ತದೆ.

೮) ಹಾಲಕ್ಕಿಗಳು ಊರ ಗೋಡೆಯ ಅಥವಾ ಕೋಟೆಯ ಗೋಡೆಯ ಮೇಲೆ ಕುಳಿತು ಕೂಗಿದರೆ ಅದು ಊರಿಗೆ ಸಂಬಂಧಿಸಿದ ವಿಷಯ ಎಂದು ತಿಳಿದುಕೊಳ್ಳುತ್ತಾರೆ.

ಹಾಲಕ್ಕಿಗಳ ಶಕುನ ಕೇಳಿದ ಮೇಲೆ ಬುಡಬುಡಕೆ ರಾತ್ರಿಯ ಹೊತ್ತಿನಲ್ಲೇ ಗ್ರಾಮದೇವತೆ, ಆಂಜನೇಯನ ಅಥವಾ ಇತರೆ ದೇವಸ್ಥಾನಗಳಿಗೆ ಹೋಗಿ ಕಿಡಬುಡಕಿಯಿಂದ ಕೋಮಲವಾದ ಶಬ್ದವನ್ನು ಹೊರಡಿಸುತ್ತ ದೇವರ ನಾಮಸ್ಮರಣೆ ಮಾಡುತ್ತಾನೆ. ನಂತರ ಮನೆಗೆ ಹೋಗಿ ಮಲಗಿಕೊಳ್ಳುತ್ತಾನೆ. ಈ ಪ್ರಕ್ರಿಯೆಯನ್ನು ಮುಗಿಸಲು ಬುಡಬುಡಕೆಗೆ ಸುಮಾರು ರಾತ್ರಿ ಮೂರು ಗಂಟೆಯಾಗುತ್ತದೆ. ಕೆಲ ಬುಡಬುಡಕೆಯವರು ರಾತ್ರಿ ವೇಳೆಯಲ್ಲಿಯೇ ಊರನ್ನೆಲ್ಲ ಸುತ್ತಿಬರುವುದುಂಟು. ಪ್ರಾದೇಶಿಕವಾಗಿ ಪಣಕಟ್ಟುವ ಪದ್ಧತಿಯಲ್ಲಿ ಸಾಕಷ್ಟು ಭಿನ್ನತೆ ಇರುವುದು ಕಂಡುಬರುತ್ತದೆ.

ಪಣ ಕಟ್ಟುವಾಗಿನ ಮತ್ತು ಶಕುನ ಹೇಳುವ ವೃತ್ತಿಯಲ್ಲಿ ವೇಷ ಭೂಷಣಗಲು ಬುಡಬುಡಕೆ ಶಕುನ ಹೇಳುವ ವೃತ್ತಿಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ ತಲೆಗೆ ಜರತಾರಿ ರುಮಾಲು ಸುತ್ತಿಕೊಂಡಿರುತ್ತಾನೆ. ಒಂದು ವೇಳೆ ಬಿಳಿಯ ಸಾದಾ ರುಮಾಲು ಇದ್ದರೆ ಅದರ ಮೇಲೆ ಕೆಂಪು ಬಟ್ಟೆ ಸುತ್ತಿರುತ್ತಾರೆ. ಧೋತರ ಉಟ್ಟುಕೊಂಡು ನಿಲುವಂಗಿ ಧರಿಸಿ ಅದರ ಮೇಲೆ ಕರೆ ಬಣ್ಣದ ಕೋಟು ಧರಿಸಿದ ಬುಡಬುಡಕೆ ಇತದರರಿಂದ ಪಡೆದುಕೊಂಡ ಬಹುಮಾನಗಳಾದ ಬೆಳ್ಳಿಯ ಪದಕ, ಕಂಚಿನ ದೇವರ ಪದಕಗಳನ್ನು ಭುಜಕ್ಕೆ ಧರಿಸಿರುತ್ತಾನೆ. ಎರಡೂ ಕೈ ಬೆರಳುಗಳಿಗೆ ಉಂಗುರ ಹಾಕಿಕೊಂಡಿರುತ್ತಾನೆ. ಕೋಟಿನ ಮೇಲೆ ಬೆಳ್ಳಿಯ ಸರಪಳಿಯನ್ನು ಜೋತಾಡುವಂತೆ ಇಳಿಬಿಟ್ಟಿರುತ್ತಾನೆ. ಹಣೆಗೆ ಉದ್ದನಾಮವನ್ನು ಹಚ್ಚಿಕೊಂಡಿರುತ್ತಾನೆ. ಬಲಗೈಯಲ್ಲಿ ಬುಡಬುಡಕಿ ವಾದ್ಯ ಎಡಗೈಯಲ್ಲಿ ಕೋಲು, ಎಡ ಹೆಗಲಿಗೆ ತನ್ನ ವಸ್ತುಗಳನ್ನು ಒಂದು ಉದ್ದನೆಯ ಚೀಲದಲ್ಲಿ ಹಾಕಿ ಜೋತಾಡುವಂತೆ ಕೆಳಗೆ ಬಿಟ್ಟಿರುತ್ತಾನೆ. ಊರಿನ ಪ್ರತಿಯೊಂದು ಓಣಿಯಲ್ಲಿಯ ಮನೆಗಳಿಗೆ ಹೋಗಿ ಮನೆ ಮುಂದೆ ಬುಡಬುಡಕಿ ವಾದ್ಯ ಬಾರಿಸುತ್ತ ಆ ಕುಟುಂಬದ ಶಕುನ ಹೇಳುತ್ತಾನೆ.

ಬುಡಬುಡಕೆಯ ವೃತ್ತಿಯಲ್ಲಿ ಮೂರು ಹಂತಗಳನ್ನು ಕಾಣುತ್ತೇವೆ.

೧) ಪಣ ಕಟ್ಟುವುದು

೨) ಬುಡಬುಡಕಿ ವಾದ್ಯ ಬಾರಿಸುತ್ತಾ ಇಡೀ ಊರನ್ನು ಸುತ್ತುವುದು

೩) ಬೆಳಗಿನ ಜಾವದಲ್ಲಿ ಎದ್ದು ಊರಿನ ಪ್ರತಿ ಮನೆಯ ಮುಂದೆ ಹೋಗಿ ಶಕುನ ಹೇಳಿ, ಭವಿಷ್ಯ ತೋರಿಸಿ ಅಪಾಯಗಳಿಗೆ ಪರಿಹಾರ ತೋರಿಸಿ ಅವರಿಂದ ಧನದಾನ್ಯ ಬಟ್ಟೆ ಪಾತ್ರೆ ಮುಂತಾದ ವಸ್ತುಗಳನ್ನು ಪಡೆಯುವುದು.

ಪ್ರತಿಯೊಬ್ಬ ಬುಡಬುಡಕೆ ತಾನು ಪಣ ಕಟ್ಟಿದ ಊರಿನ ಮುಖ್ಯಸ್ಥನ ಮುಂದೆ ಮೊದಲು ಹಾಲಕ್ಕಿಯಿಂದ ಕಂಡು ಕೊಂಡ ಶಕುನದ ಫಲವನ್ನು ಹೇಳಿ ಅವನ ಅನುಮತಿ ಪಡೆದು ನಂತರ ಊರಿನ ಜನರಿಗೆಲ್ಲಾ ಆ ಸುದ್ದಿಯನ್ನು ತಿಳಿಸಬೇಕೆಂದು ನಿಯಮವಿದೆ.

ಬುಡಬುಡಕೆ ಮಾತಿನಲ್ಲಿ ಬಹಳ ಚಾಣಾಕ್| ಕುಟುಂಬದ ಎಲ್ಲಸದಸ್ಯರ ಮನಸ್ಸು ಒಲಿಸಿಕೊಳ್ಳುವಲ್ಲಿ ನಿಸ್ಸೀಮ. ಮನೆಯ ಎಲ್ಲ ಸದಸಯ್ರಿಗೆ ಶಕುನ ಹೇಳಿ ಅವರಿಂದ ಅನೇಕ ವಸ್ತುಗಳನ್ನು ಪಡೆಯುತ್ತಾನೆ. ಬುಡಬುಡಕೆ ವೃತ್ತಿಯಲ್ಲಿ ಮಾತುಗಾರಿಕೆಗೆ ಮೊದಲ ಆದ್ಯತೆ. ಮಾತು ಬಾರದವ ಈ ವೃತ್ತಿಯಿಂದ ಒಂದು ಪೈಸೆಯನ್ನು ತರಲಾಗುವುದಿಲ್ಲ ಎಂಬ ಮಾತುಗಳು ಈ ಸಮುದಾಯದವರಿಂದ ಬರುತ್ತವೆ. ಪಣ ಕಟ್ಟಿದ ಊರಿನಲ್ಲಿ ಕನಿಷ್ಟ ಒಂದು ವಾರದವರಿಗೆ ಇದ್ದು ಆ ಊರಿನ ಎಲ್ಲ ಮನೆಗಳಿಗೆ ಹೋಗಿ ಭಿಕ್ಷೆ ಬೇಡುವುದನ್ನು ಕಾಣುತ್ತೇವೆ.

ಒಂದು ಕಾಲದಲ್ಲಿ ಹಾಲಕ್ಕಿಯ ನುಡಿಗಳನ್ನು ಮಾತ್ರ ಕೇಂದ್ರೀಕರಿಸಿಕೊಂಡು ಶಕುನ ಹೇಳುತ್ತಿದ್ದ ಬುಡಬುಡಕೆಯವರು ಇಂದು ಹಾಲಕ್ಕಿಯ ಜೊತೆಗೆ ಗೂಗಿ, ಕಾಗೆ, ಟಿವ್ ಹಕ್ಕಿ ಮತ್ತು ಹಲ್ಲಿಯ ನುಡಿಗಳನ್ನು ಗೃಹಿಸಿ ಶಕುನ ಹೇಳುತ್ತಿರುವುದನ್ನು ಕಾಣುತ್ತೇವೆ. ಅನೇಕ ಬುಡಬುಡಕೆಗಳು ಹಾಲಕ್ಕಿ ಶಕುನದ ಜೊತೆಗೆ ಹಸ್ತಸಾಮುದ್ರಿಕ ಶಾಸ್ತ್ರವನ್ನು ಹೇಳುವವರು ಕಂಡುಬರುತ್ತಾರೆ. ಬುಡಬುಡಕೆಗಳು ಹಕ್ಕಿ ಪಣಕಟ್ಟಿದ ಸಂದರ್ಭದಲ್ಲಿ ಹಸ್ತಸಾಮುದ್ರಿಕ ಶಾಸ್ತ್ರ ಹೇಳುವುದಿಲ್ಲ. ಹಸ್ತಸಾಮುದ್ರಿಕೆ ಹೇಳುವವರು ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿ ಕಂಡು ಬಂದರೂ ಇವರಲ್ಲಿ ಶೇಕಡಾ ೪೦ ರಷ್ಟು ಜನ ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದವರೇ ಆಗಿರುವುದು ಕಂಡುಬರುತ್ತದೆ. ಈ ಹಸ್ತ ಸಾಮುದ್ರಿಕಾ ಶಾಸ್ತ್ರ ಮತ್ತು ಬುಡಬುಡಕೆ ವೃತ್ತಿಯನ್ನು ಕಲಿಯುವುದಕ್ಕೋಸ್ಕರ ಇವರು ಉಡುಪಿ, ಮಂಗಳೂರು ಜಿಲ್ಲೆಗಳಿಗೆ ತಮ್ಮ ಗುರುಗಳ ಹತ್ತಿರ ಹೋಗುತ್ತೇವೆ ಎಂದು ಹೇಳುತ್ತಾರೆ. ಈ ಬುಡಬುಡಕೆ ಸಮುದಾಯದ ಯುವಕರು ಇಂದು ಬುಡಬುಡಕೆ ವಿದ್ಯೆ ಕಲಿಯುವುದಕ್ಕಿಂತ ಹಸ್ತ ಸಾಮುದ್ರಿಕಾ ಶಾಸಕೆ ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬರುತ್ತದೆ. ಹಸ್ತಸಾಮುದ್ರಿಕೆ ಶಾಸ್ತ್ರ ಕಲಿಯುವವರು ಹೆಚ್ಚಾಗಿ ಎಸ್.ಎಸ್.ಎಲ್. ಸಿ. ಗಿಂತಲೂ ಕಡಿಮೆ ವಿದ್ಯಾರ್ಹತೆ ಹೊಂದಿದವರೇ ಆಗಿರುವುದನ್ನು ಕಾಣುತ್ತೇವೆ.

ಬುಡಬುಡಕೆಯ ಶಕುನವನ್ನು ಹಳ್ಳಿಗರು ಕೇಳುತ್ತಾರೆ. ಆದರೆ ಅವರು ಹೇಳುವ ಭವಿಷ್ಯದ ಮೇಲೆ ಜನರ ನಂಬಿಕೆ ಬಹಳ ಕಡಿಮೆ. ‘ಬುಡಬುಡಕ್ಯಾನ ಮಾತು ಬುಡತನಕ ಸುಳ್ಯ’ ‘ಲೋಕದ ಭವಿಷ್ಯ ಬಲ್ಲ ಬುಡಬುಡಿಕ್ಯಾಗ ತನ್ನ ಭವಿಷ್ಯ ಗೊತ್ತಲ್ದ ತಿರಗ್ತಾನ ಎಂಬ ಗಾದೆ ಮಾತುಗಳು ಗ್ರಾಮೀಣ ಪರಿಸರದಲ್ಲಿ ಪ್ರಚಲಿತದಲ್ಲಿವೆ.

ಬುಡಬುಡಕೆ ಹತ್ತಿರ ಬಾಣತಿ ಕೈ ಇರುವುದನ್ನು ಕೈಣುತ್ತೇವೆ. ಈ ಬಾಣತಿ ಕೈ ಸಹಾಯದಿಂದ ‘ಮಾಟ ಮಂತ್ರ, ತಂತ್ರ’ಗಳನ್ನು ಮಾಡುವ ಮತ್ತು ಮಾಡಿದ್ದನ್ನು ತೆಗೆಯಲು ಉಪಯೋಗಿಸುತ್ತೇವೆ ಎಂದು ಹೇಳುತ್ತಾರೆ. ಬಾಣತಿ ಕೈ ಇಟ್ಟುಕೊಂಡವರು ಬಹಳ ವಿರಳವಾಗಿ ಕಂಡುಬರುತ್ತಾರೆ. ಬುಡಬುಡಕೆಯವರು ತಾಯಿತಗಳನ್ನು ಮಂತ್ರಿಸಿ ಕೊಡುವುದುಂಟು. ಅನೇಕ ರೋಗಗಳಿಗೆ ಇವರು ಔಷಧಿಯನ್ನು ಕೊಡುವವರು ಇದ್ದಾರೆ. ದೆವ್ವ, ಭೂತ, ಗಾಳಿ, ಪಿಶಾಚಿ ಬಡಿದುಕೊಂಡವರಿಗೆ ಈ ಬುಡಬುಡಕೆಯವರು ಬಾಣತಿ ಕೈ ಸಹಾಯದಿಂದ ಅನೇಕ ಮಂತ್ರಗಳನ್ನು ಜಪಿಸುತ್ತ ಅವರಿಗೆ ತಾಯಿತ, ಕರಿದಾರ ಕಟ್ಟುವುದುಂಟು.

ಬುಡುಬುಡಕೆಯವರು ತಮ್ಮಲ್ಲಿರುವ ಭವಿಷ್ಯದ ಹೊತ್ತಿಗೆ ಸಹಾಯದಿಂದ ಭವಿಷ್ಯ ಹೇಳುವುದನ್ನು ಕಾಣುತ್ತೇವೆ. ಇದಕ್ಕೆ ಅವರು ‘ನೀಲಿ ಹೊತ್ತಿಗೆ’ ಎಂದೂ ಕರೆಯುವರು. ಈ ಹೊತ್ತಿಗೆಯಲ್ಲಿ ಸುಮಾರು ೨೫ ರಿಂದ೩೦ ಪುಟದ ಗಾತ್ರವಿರುವ ಪುಸ್ತಕವಿರುತ್ತದೆ. ಇದರಲ್ಲಿ ಈ ಕೆಳಗೆ ಸೂಚಿಸಿರುವ ಚಿತ್ರಗಳು ಮತ್ತು ಅವುಗಳ ಮುಂದೆ ಶುಭ, ಅಶುಭ ಸೂಚನೆ ಮತ್ತು ಪರಿಹಾರದ ವಿಷಯವಿರುತ್ತದೆ. ಆಕಳು, ಈಶ್ವರಲಿಂಗ, ರಾಕ್ಷಸ, ನರಸಿಂಹ, ವೃಷಭ, ಹೆಣ್ಣು-ರಾಕ್ಷಸ, ಗೋಪಿ – ಕೃಷ್ಣ ಪೀಡೆ, ಪೂರ್ಣಚಂದ್ರ, ಸರ್ಪಗಳು, ಯರಳಿ – ಮನುಷ್ಯ, ಋಷಿಗಳು ಜೂಗುವ ತೊಟ್ಟಿಲು, ಗೂಗಿಗಳು, ಗೋವುಗಳು, ವ್ಯಾಘ್ರ ಮನುಷ್ಯನನ್ನು ಹಿಡಿಯುವದು, ನಾಲ್ಕು ಮಂದಿಗಾಳಿ ಸ್ತ್ರೀಯರು, ಶೂಲದ ಮೇಲೆ ಮನುಷ್ಯ ಬಿತ್ತುವ ಕೂರಿಗೆ, ಹಾವು ಚೇಳುಗಳು, ದತ್ತಾತ್ರೇಯ, ಕುಸ್ತಿ ಹಿಡಿಯುವ ಚಿತ್ರ, ಮಾರುತಿ ದೇವರು, ಬೆಕ್ಕು – ಇಲಿ ಧರ್ಮರಾಯನ ಸಭೆ, ಸಿದಗಿ ಸಂಭ್ರಮ, ಹಸ್ತ, ಕಮಲ, ಮೀನು ಮುಂತಾದವುಗಳ ಚಿತ್ರಗಳಿರುತ್ತವೆ. ಭವಿಷ್ಯ ಕೇಳುವವರು ತಮ್ಮ ಮನೆ ದೇವರನ್ನು ಸ್ಮರಸಿ ಬುಡಬುಡಕೆ ಕೊಡುವ ತಾಮ್ರದ ಕಡ್ಡಿಯನ್ನು ಆ ನೀಲಿ ಹೊತ್ತಿಗೆಯ ಒಂದು ಪುಟದಲ್ಲಿ ಹಾಕುತ್ತಾರೆ. ಭವಿಷ್ಯ ಕೇಳುವ ವ್ಯಕ್ತಿಗೆ ಆಕಳು, ವೃಷಭ, ಪೂರ್ಣಚಂದ್ರ, ಯಾರಳಿ-ಮನುಷ್ಯ, ಋಷಿಗಳು, ತೂಗುವ ತೊಟ್ಟಿಲು, ನಾಲ್ಕು ಮಂದಿ ಗಾಳಿ ಸ್ತ್ರೀಯರು, ದತ್ತಾತ್ರೇಯ, ಮಾರುರಿ, ಧರ್ಮರಾಜನ ಸಭೆ, ಹಸ್ತಕಮಲ, ಮೀನು ಬಂದರೆ ಶುಭ ಮತ್ತು ಹಿಡಿದ ಕಾರ್ಯಗಳು ಸಿದ್ಧಿಯಾಗುತ್ತವೆ ಎಂದು ಹೇಳುತ್ತಾರೆ. ನರಸಿಂಹ, ಹೆಣ್ಣುಮಗಳು – ರಕ್ಷಸ, ವ್ಯಾಘ್ರ ಮನುಷ್ಯನನ್ನು ಹಿಡಿಯುವುದು, ಈ ಚಿತ್ರಗಳು ಬಂದರೆ ಅಶುಭವೆಂದು ಅಂಥವರು ಪರಿಹಾರವಾಗಿ ಐದು ಅಣೆ, ತೆಂದಿನಕಾಯಿ, ಕುರಿಮರಿ, ಮುಂತಾದ ವಸ್ತುಗಳನ್ನು ಕೊಡಬೇಕೆಂದು ಹೇಳುತ್ತಾರೆ. ಗೋಪಿ, ಸರ್ಪಗಳು, ಗೂಗಿಗಳು, ಶೂಲದ ಮೇಲೆ ಮನುಷ್ಯ ಕುಸ್ತಿ ಹಿಡಿದ ಚಿತ್ರ ಬೆಕ್ಕು ಇಲಿ, ಸಿದಗಿ ಸಂಭ್ರಮ ಈ ಚಿತ್ರಗಳು ಬಂದರೆ ಅದು ಹೀನಾಯ ಚಿತ್ರಣ ಎಂದು ಹೇಳುತ್ತಾರೆ. ಕೇಳುಗರ ಭವಿಷ್ಯದಲ್ಲಿ ಈ ಹೀನ ಚಿತ್ರಗಳು ಬಂದಲೆ ಅವರು ಕುರಿಮರಿ, ಕೋಳಿ, ತೆಂಗು, ತಾಮ್ರ, ಹಣ, ಅಕ್ಕಿ-ಬಟ್ಟೆ ಮುಂತಾದ ವಸ್ತುಗಳನ್ನು ನೀಡಿ ಪರಿಹಾರ ಕಂಡುಕೊಳ್ಳಬೇಕಾಗಿ ಹೇಳುತ್ತಾರೆ.

ಬುಡಬುಡಕೆಯವರ ಸ್ಥಿತಿಗತಿಗಳು

ಬುಡಬುಡಕೆಯವರು ಪೂರ್ಣ ಪ್ರಮಾಣದ ಅಲೆಮಾರಿಗಳು ಬುಡಬುಡಕೆ ವೃತ್ತಿಯನ್ನು ಅನುಸರಿಸುತ್ತಿರುವ ಕುಟುಂಬಗಳು ಈ ವೃತ್ತಿಗಾಗಿ ಅವರು ತಮ್ಮ ತಮ್ಮಲ್ಲಿಯೇ ಕೆಲ ಊರುಗಳನ್ನು ಹಂಚಿಕೊಂಡಿರುತ್ತಾರೆ. ಒಬ್ಬರು ಹಂಚಿಕೊಂಡಿರುವ ಊಈರನ್ನು ಇನ್ನೊಬ್ಬರು ಪ್ರವೇಶ ಮಾಡಬಾರದು ಎಂಬ ನಿರ್ಬಂಧ ಇವರಲಿಲ್ದೆ.

ಬುಡಬುಡಕೆಯವರು ಆರ್ಥಿಕವಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅತೀ ಹಿಂದುಳಿದಿದ್ದಾರೆ. ಕೆಲವರಂತೂ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಸ್ವಂತ ಮನೆ ಅಥವಾ ಗುಡಿಸಲನ್ನು ಹೊಂದಿರದ ಅನೇಕ ಬುಡಬುಡಕೆ ಕುಟುಂಬಗಳನ್ನು ಹಳ್ಳಿಗಳಲ್ಲಿ ನಗರಗಳಲ್ಲಿ ಕಾಣುತ್ತೇವೆ. ಊರಿನ ಚಾವಡಿ, ಧರ್ಮಶಾಲೆ, ಗುಡಿ, ಅಗಸಿ ಅಥವಾ ಊರಿನ ಬೈಲ ಪ್ರದೇಶದಲ್ಲಿ ಒಂದು ಜೋಪಡಿ ಹಾಕಿಕೊಂಡು ವಾಸಿಸುತ್ತಿರುವುದು ಕಂಡು ಬರುತ್ತದೆ. ಆಧುನಿಕ ಜಗತ್ತಿನಲ್ಲಿ ಇವರ ಶಕುನ, ಕೇಳುವ ಜನ ಬೆರಳೆಣಿಕೆಯಷ್ಟು ಸಿಗುತ್ತಾರೆ. ಇವರು ಒಂದು ದಿನದ ದುಡಿಮೆ ಒಂದು ಹೊತ್ತಿನ ಊಟಕ್ಕೂ ಸಾಕಾಗುವುದಿಲ್ಲ.

ಒಂದುಕಡೆ ನೆಲೆ ನಿಲ್ಲಲು ಅವಕಾಶವಿಲ್ಲದ ಈಬುಡಬುಡಕೆಯವರು ತಮ್ಮ ಕುಟುಂಬದ ಜೊತೆಗೆ ಅಲೆದಾಡುವುದರಿಂದ ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಬುಡಬುಡಕೆಯವರಿಗೆ ಈ ವೃತ್ತಿ ಬಿಟ್ಟು ಇನ್ನೊಂದು ವೃತ್ತಿಯ ಪರಿಚಯವಿಲ್ಲ. ಕೃಷಿಯಂತೂ ಇವರ ಸಮೀಪಕ್ಕೆ ಸುಳಿದಿಲ್ಲ. ಬುಡಬುಡಕೆ ವೃತ್ತಿಯಿಂದ ಬೇಸತ್ತ ಕೆಲ ಯುವಕರು ಸಣ್ಣ ಪುಟ್ಟ ಪಾತ್ರೆ ವ್ಯಾಪಾರ ಪ್ರಾರಂಭಿಸಿದ್ದಾರೆ. ಆದರೆ ಇವರ ಸ್ಥಿತಿಯೂ ಚಿಂತಾಜನಕವಾಗಿದೆ.

ಎಣ್ಣೆ ಜೋಗಿಗಳು

ಎಣ್ಣೆ ಜೋಗಿಗಳನ್ನು ಭೂತ್ಯಾ, ಭೂತೇರ, ಭೂತೇ ಎಂದು ಕರೆಯುವುದುಂಟು. ಗೊಂದಲಿಗರ ಸಮುದಾಯದವರೇ ಆದ ಇವರು ವೃತ್ತಿಯ ಮೂಲಕ ಈ ಹೆಸರಿನಿಂದ ಗುರುತಿಸಲ್ಪಟ್ಟಿದ್ದಾರೆ. ಇವರೂ ಕೂಡ ಅಲೆಮಾರಿಗಳು. ಊರಿನ ಪ್ರತಿ ಮನೆಗೆ ಹೋಗಿ ಶಕ್ತಿ ದೇವತೆಗಳ ಸ್ತುತಿ ಮಾಡಿ ಅವರಿಂದ, ಎಣ್ಣೆ, ಧನ – ಧಾನ್ಯ, ಬಟ್ಟೆ ಸಂಗ್ರಹಿಸಿ ಉಪಜೀವನ ಸಾಗಿಸುತ್ತಾ ಬಂದಿದ್ದಾರೆ. ಇವರು ಕಥೋಪಜೀವಿಗಳು ಇವರಿಗೆ ‘ಗೊಂದಲ’ ಹಾಕುವ ಅಧಿಕಾರವಿಲ್ಲ.

ಎಣ್ಣೆ ಜೋಗಿಗಳ ವೇಷ ಭೂಷಣಗಳು

ಎಣ್ಣೆ ಜೋಗಿಗಳು ಧೋತರ ಉಟ್ಟುಕೊಂಡು ನಿಲುವಂಗಿ ಧರಿಸಿರುತ್ತಾರೆ. ತಲೆಗೆ ರುಮಾಲು ಸುತ್ತಿಕೊಂಡಿರುವ ಇವರು ಕೊರಳಲ್ಲಿ ಕವಡೆ ಸರಗಳನ್ನು ಹಾಕಿಕೊಂಡು, ಎದೆಯ ಮೇಲೆ ಶಕ್ತಿ ದೇವಿಯ ಕಂಚಿನ ಮೂರ್ತಿ ಅಥವಾ ಚಿತ್ರ ಪಟವನ್ನು ನೇತು ಹಾಕಿಕೊಂಡಿರುತ್ತಾರೆ. ಕೆಲವರು ಎರಡು ಕೈಗಳಿಗೆ ಬೆಳ್ಳೆಯ ಕಡಗಗಳನ್ನು ಹಾಕಿಕೊಂಡು ಹಣೆಗೆ ಭಂಡಾರ, ಕುಂಕುಮ ಹಚ್ಚಿಕೊಂಡಿ ಇವರು ಮನೆ ಮನೆಗೆ ಹೋಗಿ ದೇವತೆಗಳ ಅವತಾರ, ಪವಾಡಗಳನ್ನು ಹಾಡುತ್ತಾ ಅವರಿಂದ ಬೆಣ್ಣೆ, ಭಿಕ್ಷೆ, ಹಣ, ಧಾನ್ಯ ಪಡೆದುಕೊಳ್ಳುತ್ತಾರೆ. ಇವರು ಯಾವುದೇ ರೀತಿಯ ಸಿದ್ಧಪಡಿಸಿದ ಆಹಾರಗಲನ್ನು ಸ್ವೀಕರಿಸುವುದಿಲ್ಲ. ಬಾಗಲಕೋಟೆ ಜಿಲ್ಲೆ ಕೋಡಿಹಾಳ ಗ್ರಾಮದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಜನ ಈ ವೇಷಕಟ್ಟಿ ಸಂಚರಿಸುವವರಿದ್ದಾರೆ.

ಭೂತೇರ ಕುಣಿತ

ಈ ಕುಣಿತದಲ್ಲಿ ಸುಮಾರು ೮ ರಿಂದ ೧೦ ಜನರಿರುತ್ತಾರೆ. ನಿಲುವಂಗಿ ಧರಿಸಿದ ಇವರು ಕಣ್ಮಿಗೆ ಕಾಡಿಗೆ ಹಣೆಗೆ ಭಂಡಾರ, ಕೊರಳಿಗೆ ಕವಡೆಯ ಕೈಕಡಗ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಹಲಗೆ ವಾದನದ ಜೊತೆಗೂಡಿ, ಹಲಗೆಯ ಪ್ರತಿಗತಿಗೂ ‘ಉರ’ ಇಂದು ಉಸಿರು ಬಿಡುತ್ತಾ ‘ಆಯಿ ರಾಜಾ ಉಧೋ ಉಧೋ’ ಎಂಧು ಕೂಗುತ್ತಾ ಕುಣಿಯುತ್ತಾರೆ. ಅಂಬಾಭವಾನಿ ಜಾತ್ರೆಯಲ್ಲಿ ಇವರು ಕುಣಿಯುತ್ತಾರೆ.

ಸಿಂಗದ ವೃತ್ತಿ

ಸಿಂಗದ ವೃತ್ತಿಯನ್ನು ಮಾಡುವ ಕುಟುಂಬಗಳು ಕೂಡ ಗೊಂದಲಿಗರ ಸಮುದಾಯದವರೇ ಆಗಿದ್ದಾರೆ. ಸಿಂಗದವರು ನಪುರಿ ಎಂಬ ವಾದ್ಯ ಊದುವ ವೃತ್ತಿಯನ್ನು ಮಾಡಿಕೊಂಡಿದ್ದಾರೆ. ನಪುರಿ ವಾದ್ಯ ನುಡಿಸುವ ಇವರನ್ನು ‘ಸಿಂಗೆ – ಅಥವಾ ಸಿಂಧೆ’ ಎಂದೂ ಕರೆಯುವುದುಂಟು. ಸಿಂಗದವರು ದೇವಾಂಗ ಸಮಾಜದವರಲ್ಲಿ ಮತ್ತು ಇತರೆ ಶಕ್ತಿ ದೇವತೆಯರ ಆರಾಧಕರ ಮನೆಯಲ್ಲಿ ನೆಡಯುವ ಮಂಗಲ ಕಾರ್ಯಗಳಲ್ಲಿ ವಿಶೇಷ ಆವ್ಹಾನಿತರಾಗಿ ತಮ್ಮ ವಾದ್ಯವನ್ನು ಊದುವುದುಂಟು. ಇವರು ಇಳಕಲ್, ಕೆರೂರು, ಗುಳೇದಗುಡ್ಡ, ಹೊಸಪೇಟ, ಬೀದರ ಮುಂತಾದ ಸ್ಥಳದಲ್ಲಿ ಕಂಡು ಬರುತ್ತಾರೆ. ಸಿಂಗದರು ಮಂಗಲ ಕಾರ್ಯಗಳಲ್ಲಿ ನಪುರಿ ವಾದ್ಯ ನುಡಿಸುವ ಅವರಿಂದ ಧನ ಧಾನ್ಯ, ಬಟ್ಟೆ, ಪಾತ್ರೆ ಮುಂತಾದ ವಸ್ತುಗಳನ್ನು ಪಡೆದುಕೊಳ್ಳುತ್ತಾರೆ. ನಪುರಿ ನುಡಿಸುವ ವೃತ್ತಿ ಇದು ಅವರಿಗೆ ಅರೆಕಾಲಿಕ ವೃತ್ತಿಯಾಗಿದ್ದು ಊರಿಂದೂರಿಗೆ ಹೋಗಿ ಪಾತ್ರೆ ವ್ಯಾಪಾರ, ಕೂಲಿ, ಇನ್ನಿತರ ಕೆಲಸಗಳಲ್ಲಿ ಇವರು ತೊಡಗಿಸಿಕೊಂಡಿರುವರು. ಸಿಂಗದ ಕುಟುಂಬದಲ್ಲಿ ನಪೂರಿ ಊದುವವರು ಈ ವಾದ್ಯದ ಮೂಲಕ ಹಾಡುಗಳನ್ನು ನುಡಿಸುವಂತಹ ಸಾಮರ್ಥ್ಯವನ್ನು ಉಳ್ಳವರಾಗಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಗೊಂದಲಿಗರ ಸಮುದಾಯದಲ್ಲಿ ನಪೂರಿ ಊದುವ ಈ ಕಲಾವಿದರು ಅತ್ಯಂತ ಪ್ರಾಚೀನ ಕಲಾವಿದರು ಎಂದು ಹೇಳಿಕೊಳ್ಳುತ್ತಾರೆ. ಬದಾಮಿ ಚಾಲುಕ್ಯರ ಕಾಲದಲ್ಲಿ ಸೈನ್ಯದ ಎದುರು ಮತ್ತು ದೇವಿಯ ಎದುರು ನಪುರಿ ಊದುತ್ತಿದ್ದರು ಎಂದು ಹೇಳಿಕೊಳ್ಳುತ್ತಾರೆ. ಬದಾಮಿಯ ಬನಶಂಕರಿ ಜಾತ್ರೆಯಲ್ಲಿ ಉಧೋ ಉಧೋ ಬನಶಂಕರಿ ಎಂದು ಸ್ಮರಿಸುತ್ತಿರುವಾಗ ಸಿಂಗದವರು ಬೆಳ್ಳಿಯ ನಪೂರಿಗಳಿಂದ ‘ತು ತೂ ತೂತೂ ತೊಂ ತು ತೂ’ ಎಂಬ ಸ್ವರಗಳನ್ನು ನುಡಿಸುತ್ತಾರೆ. ದೇವಾಂಗ ಸಮಾಜದವರು ಬನಶಂಕರಿ ಜಾತ್ರಗೆ ಹೊರಡುವ ಸಂದರ್ಭದಲ್ಲಿ ತಮ್ಮ ಮನೆ ದೇವತೆಯಾದ ಬನಶಂಕರಿಗೆ ಪೂಜೆ ಸಲ್ಲಿಸುವಾಗ ಈ ವಾದ್ಯವನ್ನು ನುಡಿಸುವುದನ್ನು ಕಡ್ಡಾಯವಾಗಿ ಮಾಡಿಕೊಂಡಿರುವುದುಂಟು. ಈ ಸಿಂಗದವರು ಹಳದಿ, ಹಸಿರು ಬಣ್ಣಗಳಿಂದ ಕೂಡಿದ ಮಧ್ಯದಲ್ಲಿ ಸಿಂಹದ ಚಿತ್ರವಿರುವ ಲಾಂಛನವನ್ನು ಹೊಂದಿರುವುದು ಕಂಡುಬರುತ್ತದೆ.

ಸಿಂಗದವರು ಆಯಗಾರರಾಗಿದ್ದು ಕಂಡು ಬರುತ್ತದೆ. ಆಯ ಕಡಿಮೆಯಾದಂತೆ ಸಿಂಗದರರು ನಪುರಿ ವಾದ್ಯವನ್ನು ನುಡಿಸುವುದನ್ನು ಕಡಿಮೆ ಮಾಡಿದ್ದಾರೆ.

ಜ್ಯೋತಿಷ್ಯ ವೃತ್ತಿ: ದೋಶಿಗೇರ, ದೋಶಿ (ಜೋಶಿ) ಪಂಡಿತ್, ಜೋಯಿಸ್ ಎಂದು ಕರೆದುಕೊಳ್ಳುವ ಮತ್ತು ಜೋತಿಷ್ಯ ವೃತ್ತಿಯಲ್ಲಿ ತೊಡಗಿಕೊಂಡಿರುವವರೆಲ್ಲ ಸಾಮಾನ್ಯವಾಗಿ ಗೊಂದಲಿಗರ ಸಮುದಾಯದವರೇ ಆಗಿದ್ದಾರೆ. ಶಾಸ್ತ್ರ ಬದ್ಧವಾಗಿ ಹಸ್ತ ಸಾಮುದ್ರಿಕಾ ಶಾಸ್ತ್ರವನ್ನು ಕಲಿತ ಕೆಲ ಗೊಂದಲಿಗ ಜ್ಯೋತಿಷ್ಯರು ಇಂದು ತಮ್ಮ ಮೂಲ ಮತ – ಪಂಗಡಗಳ ಜೊತೆಗೆ ಗುರುತಿಸಿಕೊಳ್ಳುವುದನ್ನು ಬಿಡುತ್ತಿದ್ದಾರೆ. ಅನೇಕರು ನಾವು ಸಮಾಜದಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಬುಡಕಟ್ಟು ಜನಾಂಗವಾದ ಗೊಂದಲಿಗರ ಸಮುದಾಯದ ಹಿನ್ನೆಲೆಯಿಂದ ಬಂದಿದ್ದೇವೆ ಎಂಬುದು ಜನತೆಗೆ ಗೊತ್ತಾದರೆ, ನಮ್ಮ ವೃತ್ತಿಗೆ ದೊಡ್ಡ ಪೆಟ್ಟು ಬೀಳುತ್ತದೆ ಎಂಬ ಕಾರಣದಿಂದ ತಮ್ಮ ಮೂಲ ಜಾತಿಯನ್ನು ದೂರವಿಡುತ್ತಿದ್ದಾರೆ. ನಗರಗಳ ಯಾವುದೇ ಮುಖ್ಯ ಬೀದಿಗಳಲ್ಲಿ ಮತ್ತು ವಸತಿಗೃಹಗಳಲ್ಲಿ ಇವರು ತಮ್ಮ ಜ್ಯೋತಿಷ್ಯದ ಫಲಕ ಹಾಕಿಕೊಂಡಿರುವುದು ಕಂಡು ಬರುತ್ತದೆ. ಜನಭರಿತ ರಸ್ತೆಯ ಬದಿಗಳಲ್ಲಿ ಕುಳಿತು ಜ್ಯೋತಿಷ್ಯ ಹೇಳುವವರು ಒಂದು ಸಣ್ಣ ಕಂಬಳಿಯನ್ನು ಹಾಸಿಕೊಂಡು, ಜ್ಯೋತಿಷ್ಯ ಶಾಸ್ತ್ರದ ಕೆಲ ಪುಸ್ತಕಗಳನ್ನು ಕೆಂಪು ಬಣ್ಣದ ವಸ್ತದಲ್ಲಿ ಕಟ್ಟಿಟ್ಟುಕೊಂಡು ಅದರ ಹಿಂದೆ ಶಕ್ತಿ ದೇವತೆಯ ಭಾವಚಿತ್ರ ಇಟ್ಟುಕೊಂಡು, ಆ ಕಂಬಳಿಯಲ್ಲಿ ಕವಡೆಗಳನ್ನು ಹರವಿಕೊಂಡು ದೇವಿಯ ಮುಂದೆ ಊದಬತ್ತಿಗಳನ್ನು ಹಚ್ಚಿಕೊಂಡು ಗಂಭೀರವಾಗಿ ಕುಳಿತುಕೊಂಡಿರುವ ಚಿತ್ರಣ ಸಾಮಾನ್ಯವಾಗಿ ಕಂಡು ಬರುತ್ತದೆ. ಈ ಜ್ಯೋತಿಷಿಗಲು ಧೋತರ ಉಟ್ಟುಕೊಂಡು, ಅದರ ಮೇಲೆ ನಿಲುವಂಗಿ ತೊಟ್ಟು, ಕರಿ ಕೋಟನ್ನು ಧರಿಸಿ, ತಲೆಗೆ ರುಮಾಲು ಸುತ್ತಿಕೊಂಡಿರುತ್ತಾರೆ. ಹಣೆಗೆ ನಾಮವನ್ನು ಹಚ್ಚಿಕೊಂಡಿರುತ್ತಾರೆ. ಕೊರಳಲ್ಲಿ ತುಳಸಿ ಅಥವಾ ರುದ್ರಾಕ್ಷಿ ಮಾಲೆ ಇರುತ್ತದೆ. ಶಹರಗಳ ರಸ್ತೆ ಬದಿಗಳಲ್ಲಿ ಕುಳಿತು ವೃತ್ತಿ ಮಾಡಿಕೊಂಡಿರುವ ಇವರು ಸಾಮಾನ್ಯವಾಗಿ ಕೆಲವರು ಅಲೆಮಾರಿಗಳಾಗಿರುವುದುಂಟು. ವಸತಿ ಗೃಹಗಳಲ್ಲಿ ಈ ವೃತ್ತಿ ನಡೆಸುವವರಲ್ಲಿ ಕೆಲವರು ಖಾಯಂ ಆಗಿ ಇರುವುದು ಕಂಡು ಬರುತ್ತದೆ. ಕೆಲವರು ಪತ್ರಿಕೆಗಳಲ್ಲಿ ತಮ್ಮ ಜ್ಯೋತಿಷ್ಯ ವೃತ್ತಿಯ ಬಗ್ಗೆ ಜಾಹಿರಾತು ನೀಡುತ್ತಿರುವುದನ್ನು ಕಾಣುತ್ತೇವೆ. ಇವರು ಹಸ್ತರೇಖೆ, ಮುಖ ಲಕ್ಷಣ ಮತ್ತು ಭಾವಚಿತ್ರದ ಮೇಲೆ ನಿಮ್ಮ ಭವಿಷ್ಯವನ್ನು ನಿಖರವಾಗಿ ಹೇಳುತ್ತಾರೆ. ವಿದ್ಯೆ, ಪರೀಕ್ಷೆ, ಉದ್ಯೋಗ, ಪ್ರಮೋಷನ್, ವಿದೇಶಿ ಪ್ರವಾಸ,ಸಂತಾನ ಪ್ರಾಪ್ತಿ, ಸಾಲಮುಕ್ತಿ ರೋಗಗಳು, ಲಕ್ಷ್ಮಿಯೋಗ, ಸ್ತ್ರೀ ವಶೀಕರಣ, ಮಾಟ-ಮಂತ್ರ ನಿವಾರಣೆ, ಮದುವೆ ಅಡೆ-ತಡೆ, ನ್ಯಾಯಾಲಯದ ಪ್ರಕರಣಗಳು, ವಿವಾಹ ವಿಚ್ಛೇದನ ಮುಂತಾದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹೇಳುತ್ತೇವೆಂದು ಪ್ರಕಟಣೆಯಲ್ಲಿ ಮತ್ತು ಅವರು ವಾಸಿಸುತ್ತಿರುವ ವಸತಿ ಗೃಹದ ಮುಂದೆ ಫಲಕವನ್ನು ಹಾಕಿರುತ್ತಾರೆ.

ಅಲೆಮಾರಿಗಳಾದ ಜ್ಯೋತಿಷಗಳು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಂಡುಬರುವುದುಂಟು. ಇವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳು ಅಷ್ಟು ಉತ್ತಮವಾಗಿಲ್ಲ. ಇವರು ಕೂಡ ತಮ್ಮ ಕುಟುಂಬ ಸಹಿತ ಅಲೆಮಾರಿಗಲಾಗಿರುವುದರಿಂದ ಇವರ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿಲ್ಲ. ಗ್ರಾಮೀಣ ಪ್ರೇದಶದ ಮಧ್ಯಮ ವರ್ಗಕ್ಕಿಂತಲೂ ಕೆಳಗಿನವರನ್ನು ಆಶ್ರಯಿಸಿರುವ ಇವರು ಒಂದೊಂದು ದಿನ ಯಾವ ಉತ್ಪಾದನೆಯೂ ಇಲ್ಲದೆ ಹಿಂತಿರುಗುತ್ತಿರುತ್ತೇವೆ ಎಂದು ನೊಂದುಕೊಂಡು ಹೇಳುತ್ತಾರೆ. ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ಈ ಜ್ಯೋತಿಷಿ ವೃತ್ತಿಯನ್ನು ಮಾಡುವವರು ಸುಮಾರು ೨೦೦ಕ್ಕೂ ಹೆಚ್ಚು ಜನ ಕಂಡು ಬರುತ್ತಾರೆ.

ಈ ಜ್ಯೋತಿಷಿಗಳು ಜನರ ಮನಸ್ಸನ್ನು ಅರ್ಥೈಸಿಕೊಂಡು ಅವರ ಭಾವನೆಗಳಿಗೆ ಸ್ಪಂದಿಸಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡುವ ಕಲೆಯನ್ನು ಇವರು ಚೆನ್ನಾಗಿ ಕರಗತ ಮಾಡಿಕೊಂಡಿರುತ್ತಾರೆ. ಇವರು ನಾವು ಸಮಾಜದ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಭವಿಷ್ಯ ಹೇಳಿ ಅವರಿಂದ ಅನೇಕ ಬಹುಮಾನಗಳನ್ನು ಪಡೆದಿದ್ದೇವೆಂದು ಹೇಳುತ್ತ ಅವರೊಂದಿಗೆ ತೆಗೆಯಿಸಿಕೊಂಡ ಛಾಯಾ ಚಿತ್ರಗಳನ್ನು ತೋರಿಸುವ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಬುಡಬುಡಕೆಯವರಂತೆ ಇವರಲ್ಲಿಯೂ ಅನೇಕರಿಗೆ ಖಾಯಂ ಆಗಿ ವಾಸಿಸಲು ಮನೆಗಳಿಲ್ಲದೇ ಇರುವುದು ಕಂಡುಬರುತ್ತದೆ.

ಅರೆ ಪಂಚಾಂಗದವರು

ಗೊಂದಲಿಗರ ಸಮುದಾಯದವರೇ ಆದ ಇವರನ್ನು ವೃತ್ತಿಯ ಮೂಲಕ ಅರೆಪಂಚಾಂಗದವರು ಎಂದು ಕರೆಯುತ್ತಾರೆ. ಕೆಲವು ಕಡೆ ಬುಡಬುಡಕೆಯವರೆ ಅರೆ ಪಂಚಾಂಗ ವೃತ್ತಿ ಮಾಡುತ್ತಿರುವುದು ಕಂಡುಬರುತ್ತದೆ. ಈ ವೃತ್ತಿಯವರೂ ಅಲೆಮಾರಿಗಲಾಗಿದ್ದಾರೆ. ಬುಡಬುಡಕೆಯವರಂತೆ ಇವರೂ ಕೂಡ ವೃತ್ತಿಗಾಗಿ ಕೆಲ ಊರುಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಒಬ್ಬರಿಗೆ ಮೀಸಲಿಟ್ಟ ಪ್ರದೇಶದಲ್ಲಿ ಇನ್ನೊಬ್ಬರು ಈ ವೃತ್ತಿ ಕೈಕೊಳ್ಳುವುದನ್ನು ಇವರಲ್ಲಿ ಕಾಣುವುದಿಲ್ಲ. ಅರೆ ಪಂಚಾಂಗದವರೆಂದು ಇವರನ್ನು ಸ್ಥಳೀಯರು ಕರೆದಿರಬಹುದು. ಪಂಚಾಂಗ ನೋಡುವುದರಲ್ಲಿ ಅರ್ಧಂಬರ್ಧ ಜ್ಞಾನ ಇರುವುದರಿಂದ ಹೀಗೆ ಕರೆದಿರಬಹುದು.

ಅರೆ ಪಂಚಾಂಗದವರು ಬುಡಬುಡಕೆಯವರಂತೆ ಧೋತರ, ನಿಲುವಂಗಿ, ತಲೆಗೆ ರುಮಾಲು, ಕರಿಕೋಟು ಧರಿಸಿ ಹೆಗಲಿಗೆ ಜೋಳಿಗೆ ಹಾಕಿಕೊಂಡು ಹಣೆಯ ಮೇಲೆ ನಾಮಧರಿಸಿಕೊಂಡಿರುತ್ತಾರೆ. ಜೋಳಿಗೆಯಲ್ಲಿ ಪಂಚಾಂಗ ತ್ತು ಭವಿಷ್ಯ ಹೇಳುವ ಹೊತ್ತಿಗೆಯನ್ನಿಟ್ಟುಕೊಂಡು ಊರಿನಲ್ಲಿ ಸುತ್ತಾಡುತ್ತಾ ಯಾರಾದರೂ ಮಳೆ, ಬೆಳೆ, ಬಿತ್ತುವ, ಕೊಯ್ಯುವ, ಕಣ ಮಾಡುವ, ರಾಶಿ ಮಾಡುವ, ಎತ್ತು ಖರೀದಿಸುವ ಮುಂತಾದ ವಿಷಯಗಳ ಬಗ್ಗೆ ಕೇಳಿದರೆ ಅವರಿಗೆ ವಿವರವಾದ ಮಾಹಿತಿಯನ್ನು ಹೇಳುತ್ತಾರೆ. ಅವರಿಂದ ಹಣ, ಬಟ್ಟೆ, ಧಾನ್ಯಗಳನ್ನು ಪಡೆದು ಉಪಜೀವನ ಸಾಗಿಸುವುದು ಕಂಡು ಬರುತ್ತದೆ.

ಗಿಳಿಶಾಸ್ತ್ರದವರು

ಗಿಳಿಯ ಮೂಲಕ ಶಕುನ ಹೇಳುವ ವೃತ್ತಿ ಮಾಡಿಕೊಂಡವರು ಕೂಡ ಗೊಂದಲಿಗರ ಸಮುದಾಯದವರೇ ಆಗಿರುವುದು ಕಂಡು ಬರುತ್ತದೆ. ಜನಸಾಮಾನ್ಯರಿಂದ ಹಿಡಿದು ಶ್ರೀ ಸಾಮಾನ್ಯರವರೆಗೆ ವಿವಿಧ ಪಕ್ಷಿ, ಪ್ರಾಣಿಗಳ ಮೂಲಕ ಭವಿಷ್ಯ ಹೇಳುವ ವೃತ್ತಿಯನ್ನು ಕೈಕೊಂಡಿರುವ ಇವರ ಸಮುದಾಯದ ಪಾರಂಪರಿಕ ವೃತ್ತಿ ವಿಶಿಷ್ಟವಾಗಿ ಕಂಡು ಬರುತ್ತದೆ. ಗಿಳಿ ಶಾಸ್ತ್ರದವರು ನೀಲಿ ಹೊತ್ತಿಗೆಯಲ್ಲಿರುವ ವಿಷಯ ಮತ್ತು ಚಿತ್ರಗಳನ್ನು ಇವರು ಸಣ್ಣ ಸಣ್ಣ ಕವರುಗಳಲ್ಲಿ ಹಾಕಿ ಅವುಗಳನ್ನು ಮುಂದಿಟ್ಟುಕೊಂಡು ಕುಳಿತಿರುತ್ತಾರೆ. ಪೆಟ್ಟಿಗೆಯಲ್ಲಿ ಒಂದು ಅಥವಾ ಎರಡು ಗಿಳಿಗಳನ್ನು ಸಾಕಿರುವ ಇವರು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಕುಳಿತುಕೊಂಡಿರುತ್ತಾರೆ. ದಾರಿ ಹೋಕರನ್ನು ಕೈ ಮಾಡಿ ಕರೆಯುತ್ತಾರೆ. ಜನರು ಗಿಳಿಶಾಸ್ತ್ರ ಕೇಳಲು ಬರುವಂತೆ ಅವರನ್ನು ಆಕರ್ಷಿಸುವ ಸಲುವಾಗಿ ಅವರ ವೇಷಭೂಷಣ, ಬಣ್ಣ, ದುಡ್ಡು ದವಲತ್ತು ಕುರಿತು ಹೊಗಳಿ ತಮ್ಮ ಬಳಿ ಬರುವಂತೆ ಮಾಡುತ್ತಾರೆ.

ಗಿಳಿ ಶಾಸ್ತ್ರ ಕೇಳಲು ಬಂದವರ ಹೆಸರು ಕೇಳಿ ಆ ಹೆಸರನ್ನು ತಮ್ಮ ವಾಕ್‌ಚಾತುರ್ಯದಿಂದ ಬಣ್ಣಿಸಿ ತಮ್ಮ ಮನೆ ದೇವರನ್ನು ಸ್ಮರಿಸಲು ಹೇಳುತ್ತಾರೆ ಮತ್ತು ಪೆಟ್ಟಿಗೆಯಲ್ಲಿರುವ ಒಂದು ಗಿಳಿಯನ್ನು ಹೊರಗೆ ಬಿಡುತ್ತಾರೆ. ಗಿಳಿಯು ಭವಿಷ್ಯ ಹೊಂದಿರುವ ಕಾರ್ಡುಗಳನ್ನು ಕೆದಕುತ್ತಾ ಕೊನೆಗೆ ತನಗಿಷ್ಟವಾದ ಒಂದು ಕವರನ್ನು ಕಚ್ಚಿಕೊಂಡು ಪೆಟ್ಟಿಗೆ ಹತ್ತಿರ ಹೋಗುತ್ತದೆ.ಆಗ ಗಿಳಿ ಶಾಸ್ತ್ರದವ ಆ ಕವರಿನಲ್ಲಿರುವ ಚಿತ್ರವನ್ನು ಹೊರತೆಗೆದು ಅದರಲ್ಲಿ ಶುಭ ಅಶುಭ ಫಲಗಳನ್ನು ಹೇಳುತ್ತಾನೆ ಮತ್ತು ಕಷ್ಟ ಬಂದಿದ್ದರೆ ಅದಕ್ಕೆ ಪರಿಹಾರವನ್ನೂ ಹೇಳುತ್ತಾನೆ. ಗಿಳಿಶಾಸ್ತ್ರ ಹೇಳುವವರು ಕನಿಷ್ಟ ಎರಡು ರೂಪಾಯಿಗಳಿಂದ ೨೦ ರೂಪಾಯಿಗಳ ವರೆಗೆ ಹಣ ತೆಗೆದುಕೊಳ್ಳುವುದು ಕಂಡು ಬರುತ್ತದೆ.

ಈ ಗಿಳಿಶಾಸ್ತ್ರದ ವೃತ್ತಿಯಿಂದ ಸುಮಾರು ೫೦ ರಿಂದ ೧೦೦ರೂಗಳವರೆಗೆ ಸಂಪಾದನೆ ಮಾಡುತ್ತಾರೆ. ಒಂದೊಂದು ದಿನ ಯಾವುದೇ ಗಿರಾಕಿಗಳಿಲ್ಲದೆ ಸಪ್ಪೆಯಾಗಿ ಹೋಗುವುದುಂಟು. ಗಿಳಿಶಾಸ್ತ್ರದವರನ್ನು ಪ್ರಶ್ನಿಸಿದರೆ ಈ ವೃತ್ತಿಯಿಂದ ಯಾವ ಉಪಯೋಗವಿಲ್ಲ. ಇದಕ್ಕಿಂತ ಕೂಲಿ ಮಾಡುವುದೇ ಎಷ್ಟೋ ಮಲು ಎಂಬು ಮಾತುಗಳು ಅವರಿಂದ ಬರುತ್ತವೆ. ಗಿಳಿಶಾಸ್ತ್ರ ಹೇಳುವವರು ಊರಿನಲ್ಲಿ ‘ಗಿಳಿಶಾಸ್ತ್ರ ಕೇಳತೇರೇನ್ರಿ, ನಮ್ಮ ರಾಮನ ಮಾತು ನೂರಕ್ಕೆ ನೂರರಷ್ಟು ಸತ್ಯ. ಹಿಂದೆ ನಡೆದದ್ದನ್ನು ಮುಂದೆ ನಡೆಯುವುದನ್ನು ನಮ್ಮ ರಾಮು ಸರಿಯಾಗಿ ಹೇಳ್ತಾನೆ’’ ಎಂದು ಕೂಗುತ್ತ ಸುತ್ತುತ್ತಿರುವ ದೃಶ್ಯಗಳನ್ನೂ ಕಾಣಬಹುದು.

ಗಿಳಿಶಾಸ್ತ್ರ ಹೇಳುವ ಇವರು ಕೂಡ ಅಲೆಮಾರಿಗಳೇ ಆಗಿದ್ದಾರೆ. ಕೆಲವರು ತಮ್ಮ ಮಕ್ಕಳನ್ನು ಊರಾಡಲು ಕರೆದುಕೊಂಡು ಹೋಗುವುದುಂಟು, ಇವರೂ ಕೂಡ ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದವರಾಗಿರುವುದು ಕಂಡುಬರುತ್ತದೆ. ಗಿಳಿಶಾಸ್ತ್ರ ಕೇಳುಗರ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ಕಾಲದಲ್ಲಿ ಅನೇಕರು ಈ ವೃತ್ತಿ ಬಿಟ್ಟು ಇತರೆ ವೃತ್ತಿಗಳನ್ನಾಧರಿಸಿಕೊಂಡು ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಪರಂಪರಾನುಗತವಾಗಿ ಸಾಗಿ ಬಂದ ಈ ವೃತ್ತಿಯ ಮೂಲಕ ನಮಗೆ ಬದುಕಲು ಆಗುತ್ತಿಲ್ಲ ಅದಕ್ಕಾಗಿ ಈ ವೃತ್ತಿಯನ್ನು ಇಲ್ಲಿಗೆ ಕೈ ಬಿಡುತ್ತಿದ್ದೇವೆ ಎಂದು ನೊಂದುಕೊಂಡು ನುಡಿಯುವುದನ್ನು ಕಾಣುತ್ತೇವೆ.

ಗೊಂದಲಿಗರ ಭಾಟ ವೃತ್ತಿ

ಭಾಟ ವೃತ್ತಿಯನ್ನು ಮಾಡುವ ಇವರಿಗೆ ‘ಭಟ್ಟಂಗಿಗಳು’ ಎಂದು ಕರೆಯುವುದುಂಟು. ಭಟ್ಟಂಗಿ ಎಂದರೆ ಹೊಗಳುವವರು. ಅಂದರೆ ಮಾತೃ ದೇವತೆಗಳ ಮಹಿಮೆಯನ್ನು ಕೊಂಡಾಡುವವರು ಎಂಬ ಅರ್ಥದಲ್ಲಿ ಈ ಭಟ್ಟಂಗಿಯನ್ನು ಗುರುತಿಸಿದ್ದಾರೆ. ಗುಳೇದಗುಡ್ಡ, ರಾಮದುರ್ಗ, ಇಳಕಲ್, ಸವದತ್ತಿ, ಗಜೇಂದ್ರಗಡ ಮುಧೋಳ ಈ ಪ್ರದೇಶಗಳಲ್ಲಿ ವಾಸಿಸುವ ಇವರು ಶಕ್ತಿ ಆರಾಧಕರ ಸಮುದಾಯಗಳ ಮನೆಗಳಿಗೆ ಹೋಗಿ ಅಲ್ಲಿ ಕಾಳಿ, ಎಲ್ಲಮ್ಮ, ಅಂಬಾಭವಾನಿ, ತುಳಜಾಭವಾನಿ ಮುಂತಾದ ದೇವತೆಗಳನ್ನು ಸ್ತುತಿಸಿ ಅವರಿಂದ ಬಟ್ಟೆ, ಹಣ, ಧಾನ್ಯ ಪಡೆದುಕೊಂಡು ಉಪಜೀವನ ನಡೆಸುತ್ತಾರೆ. ಧೋತರ ಉಟ್ಟುಕೊಳ್ಳುವ ಇವರು ನಿಲುವಂಗಿ ಧರಿಸಿ ಮೊಣಕಾಲನ್ನು ದಾಟುವ ಕರಿಕೋಟನ್ನು ತೊಟ್ಟಿರುತ್ತಾರೆ. ತಲೆಗೆ ರುಮಾಲು, ಹಣೆಗೆ ಕುಂಕುಮ ಹಚ್ಚಿರುವ ಇವರು ಕೈಯಲ್ಲಿ ಉದ್ದವಾದ ಈಟಿಯನ್ನು ಹಿಡಿದುಕೊಂಡಿರುತ್ತಾರೆ. ನಿರ್ದಿಷ್ಟಪಡಿಸಿದ (ನನ್ನ ಗಮನಕ್ಕೆ ಬಂದಿರುವ ಸಮುದಾಯಗಳಾದ ವಿಶ್ವಕರ್ಮ ಮತ್ತು ದೇವಾಂಗದವರ ಮನೆಗಳ ಮುಂದೆ ಹೋಗಿ ಸುಮಾರು ೧ ಗಂಟೆಯವರೆಗೆ ದೇವಿ ಸ್ಮರಣೆ ಮಾಡುತ್ತಾರೆ.)