ಅಧ್ಯಯನದ ಫಲಿತಗಳು ಮತ್ತು ಸಲಹೆಗಳು

ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ಒಂದು ಹಂತದವರೆಗೆ ಬಹಳ ಜತನದಿಂದ ಕಾಪಾಡಿಕೊಂಡು ಬಂದ ಗೊಂದಲಿಗರು ಮಾತೃ ದೈವಗಳನ್ನೇ ತಮ್ಮ ಆರಾಧ್ಯದೈವವಾಗಿ ಆರಾಧಿಸುತ್ತ ಬಂದಿದ್ದಾರೆ. ಗೊಂದಲಿಗರಲ್ಲಿ ಬುಡಬುಡಕೆ, ಹಸ್ತಸಾಮುದ್ರಿಕೆ, ಅರೆಪಂಚಾಂಗ, ಬೀದಿಹಾಡುಗಾರರು, ಭಾಟರು, ಸಿಂಗದರು ವಾಸುದೇವರು, ಚಿತ್ರಪಟದವರು, ಗಿಳಿಶಾಸ್ತ್ರದವರು, ಭೂತೇರು (ಎಣ್ಣೆ ಜೋಗಿ) ಹಾಗೂ ಜ್ಯೋತಿಷಿಗಲು ಎಂಬ ಉಪ ಪಂಗಡಗಳಿವೆ. ಈ ಗೊಂದಲಿಗರೆಲ್ಲ ಸಂಘಟನೆಯನ್ನು ಮಾಡಿಕೊಂಡು ‘ಗೊಂಧಳಿ’ ಎಂಬ ಶಬ್ದದಿಂದ ಸಾಂಸ್ಕೃತೀಕರಣ ಪಡೆದುಕೊಂಡಿದ್ದಾರೆ.

ಗೊಂದಲಿಗರು ಮಹಾರಾಷ್ಟ್ರದಿಂದ ವಲಸೆ ಬಂದವರು ಎಂಬ ವಾಕೆ ಹುರುಳಿಲ್ಲ. ಮಹಾರಾಷ್ಟ್ರದ ಡೆಕ್ಕನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಗೊಂದಲಿಗರ ಆ ಪ್ರದೇಶ ಅಂದು ಅದು ಕನ್ನಡ ನಾಡಿನ ಆಳ್ವಿಕೆಗೆ ಒಳಪಟ್ಟಿತು. ಈ ಗೊಂದಲಿಗರನ್ನು ಮೊದಲು ಮಾವೋಳಿ ಬುಡಕಟ್ಟು ಎಂದೇ ಕರೆಯಲಾಗುತ್ತಿತ್ತು ಎಂಬ ಹೇಳಿಕೆಗಳುಂಟು. ಈ ಮಾವೋಳಿ ಜನಾಂಗವೇ ಕಾಲಾನಂತರ ಗೊಂದಲಿಗರೆಂಬ ಹೆಸರು ಪಡೆದುಕೊಂಡಿತು. ಮಾವೋಳಿ ಜನಾಂಗದ ಕುರುಹು ನಮ್ಮ ಕುಲ ಮತ್ತು ಬಳಿಗಳಲ್ಲಿ (ಗೋತಾ) ಕಂಡು ಬರುತ್ತದೆ ಎಂದು ಗೊಂದಲಿಗರ ಹಿರಿಯರು ಪ್ರತಿಪಾದಿಸುತ್ತಾರೆ. ಮಾತೃ ದೇವತೆಯ ಹೆಸರಿನಲ್ಲಿ ಆಚರಿಸುವ ಗೊಂದಲ ಪೂಜೆ ಮತ್ತು ನೃತ್ಯವನ್ನು ಮಾಡುತ್ತಿದ್ದ ನಮಗೆ ಬರುಬರುತ್ತಾ ನಮ್ಮ ವೃತ್ತಿಯ ಮೂಲಕ ನಮಗೆ ಗೊಂದಲಿಗರು ಎಂಬ ಹೆಸರು ಬಂದಿದೆ ಎಂಬ ಅಭಿಪ್ರಾಯವಿದೆ. ಪೇಶ್ವೆಯರ ಕಾಲಕ್ಕೆ ಗೊಂದಲ ಪೂಜೆ ಅತ್ಯಂತ ಉನ್ನತ ಸ್ಥಿತಿಗೇರಿ ಅದು ಹಂತ ಹಂತವಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳತೊಡಗಿತು. ಗೊಂದಲ ಆಚರಣೆಯ ಬಗ್ಗೆ ಕರ್ನಾಟಕದ ಅನೇಕ ಪ್ರಾಚೀನ ಕವಿಗಳು ಉಲ್ಲೇಖಿಸಿದ್ದಾರೆ. ಗೊಂದಲ ಆಚರಣೆ ಮತ್ತು ಗೊಂದಲಿಗರ ಉಗಮದ ಬಗ್ಗೆ ಇರುವ ಅನೇಕ ಪುರಾಣಗಳ ಮೂಲಕ ತಮ್ಮ ಪ್ರಾಚೀನತೆಯನ್ನು ಉಲ್ಲೇಖಿಸುತ್ತಾರೆ. ಗೊಂದಲಆಚರಣೆ ಕಡಿಮೆಯಾದಂತೆ ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು ಈ ಸಮುದಾಯದಲ್ಲಿ ಕವಲೊಡೆದು ವಿವಿಧ ವೃತ್ತಿಗಳು ಹುಟ್ಟಿಕೊಂಡವು. ಜನಪದ ಕಲಾವೃತ್ತಿಯನ್ನು ಅವಲಂಬಿಸಿ ಬದುಕುತ್ತಿರುವ ಗೊಂದಲಿಗರ ಸಮುದಾಯ ಬಹಳ ದೊಡ್ಡದು. ಈ ಸಮುದಾಯ ತನ್ನ ಕಲಾವೃತ್ತಿಯ ಪ್ರದರ್ಶನದ ಮೂಲಕವೇ ತನ್ನ ಅಸ್ತಿತ್ವ ಕಂಡುಕೊಳ್ಳಲು ಹೋರಾಡಿ ಈಗ ಸೋತು ಅನಿವಾರ್ಯವಾಗಿ ಬೇರೆ ಬೇರೆ ವೃತ್ತಿಗಳನ್ನು ಅನುಸರಿಸಿಕೊಳ್ಳುವಂತಾಗಿದೆ.

ಗೊಂದಲಿಗರು ಶಕ್ತಿ ಪಂಥಕ್ಕೆ ಸೇರಿದವರು ಮತ್ತು ಪ್ರಕೃತಿ ಆರಾಧಕರಾದ ಇವರು ಮಾಂತ್ರಿಕ ಶಕ್ತಿಗಳನ್ ಅಳವಡಿಸಿಕೊಂಡವರಾಗಿದ್ದರಿಂದ ಇವರು ಶಿಷ್ಟರ ದೃಷ್ಟಿಯಲ್ಲಿ ವಾಮಾಚಾರಿಗಳು. ಬುಡಬುಡಕೆ, ಅರೆಪಂಚಾಂಗ, ಹಸ್ತಸಾಮುದ್ರಿಕೆ ವೃತ್ತಿಯನ್ನು ಅನುಸರಿಸಿಕೊಂಡಿರುವ ಇವರು ಬಾಣತಿ ಹಸ್ತದ ಸಹಾಯದಿಂದ ಮಾಟ-ಮಂತ್ರ, ಮೋಡಿ ಮುಂತಾದ ಚಟುವಟಿಕೆಗಳನ್ನು ಮಾಡುವುದನ್ನು ಗಮನಿಸಿದ ನಾಗರಿಕ ಸಮುದಾಯ ಇವರನ್ನು ಭಯದಿಂದ ನೋಡುತ್ತಿತ್ತು. ಇವರು ಪ್ರತಿಯೊಬ್ಬರನ್ನೂ ತಮ್ಮ ವಾಮಚಾರದ ಮೂಲಕ ಅಂಜಿಸುತ್ತಾರೆ ಎಂಬ ಕಾರಣದಿಂದ ಇವರನ್ನು ಸಮಾಜ ಹೊರಗಿಟ್ಟಿತು. ಹೀಗಾಗಿ ಗೋಂದಲಿಗರು ಅಲೆಮಾರಿಗಳಾದರು ಮತ್ತು ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿಯುವಂತಾಯಿತು. ಈ ಕಾರಣದಿಂದ ಗೊಂದಲಿಗರು ನೆಲ ಮತ್ತು ನೆಲೆ ಎರಡನ್ನೂ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ‘ಯಾರಿಗೆ ನಿರ್ದಿಷ್ಟ ನೆಲ ಮತ್ತು ನೆಲೆ ಇರುವುದಿಲ್ಲವೊ ಅವರು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಮತ್ತು ಸಂಪತ್ತು, ಅಧಿಕಾರ ಗಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ‘ಯಾರಿಗೆ ನಿರ್ದಿಷ್ಟ ನೆಲ ಮತ್ತು ನೆಲೆ ಇರುವುದಿಲ್ಲವೊ ಅವರು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಮತ್ತು ಸಂಪತ್ತು, ಅಧಿಕಾರ ಗಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಗೊಂದಲಿಗರು ಇಂದು ನೆಲ-ನೆಲೆ ಎರಡನ್ನೂ ಹೊಂದಿರದ ಕಾರಣ ಸರಕಾರದಿಂದ ಮೀಸಲಾತಿ ಕೇಳುವ ಮತ್ತು ಹೋರಾಟ ಮಾಡುವ ಕಾರ್ಯಕ್ಕೆ ಇಳಿಯುವಂತಾಗಿದೆ (ಗೊಂದಲಿಗರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಸುಮಾರು ೨೫ ವರ್ಷದಿಂದಲೇ ಹೋರಾಟ ಮಾಡುತ್ತ ಬಂದಿರುವ ಬಗ್ಗೆ ಪತ್ರಿಕೆಗಳು ಪ್ರಕಟ ಪಡಿಸಿರುವುದನ್ನು ಅನುಬಂಧದಲ್ಲಿ ಲಗತ್ತಿಸಲಾಗಿದೆ) ಕರ್ನಾಟಕದ ಇಲ್ಲಿವರೆಗಿನ ಎಲ್ಲ ಮುಖ್ಯ ಮಂತ್ರಿಗಳಿಗೆ, ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ, ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದು ಒತ್ತಾಯಿಸಿದರೂ ಇವರನ್ನು ಪರಿಶಿಷ್ಟ ಪಂಗಡಕ್ಕೇ ಸೇರಿಸದೇ ಇರುವುದು ಕಂಡು ಬರುತ್ತದೆ. ಅಲೆಮಾರಿಗಳಾದ ಗೊಂದಲಿಗರು ಇಂದು ಅನಾಥರೂ ಹೌದು. ಸಮಾಜದಿಂದ ತಿರಸ್ಕೃತರೂ ಹೌದೂ. ಅಸ್ತಿತ್ವ ಇಲ್ಲದವರು ಹೌದು. ಅಸ್ತಿತ್ವ ಇಲ್ಲದವರು ಹೌದು. ಆಧುನಿಕ ಸಮುದಾಯಕ್ಕೆ ಇವರ ಪರಂಪರಾನುಗತವಾಗಿ ಬಂದ ಕಲಾ ಸೇವೆಯ ಅಗತ್ಯತೆಯೂ ಇಲ್ಲ. ಹೀಗಾಗಿ ಈ ಎಲ್ಲ ದೃಷ್ಟಿಗಳಿಂದ ಗೊಂದಲಿಗರಲ್ಲಿ ಅನಾಥ ಪ್ರಜ್ಞೆ ಹೆಚ್ಚಾಗಿ ಕಾಡುತ್ತಿದೆ.

ಸಮಾಜದ ದೃಷ್ಟಿಯಲ್ಲಿ ತಿರಸ್ಕೃತರಾಗಿರುವ ಗೊಂದಲಿಗರು ಸಾಮಾಜಿಕವಾಗಿ ಅಸ್ಪೃಶ್ಯರೇ ಆಗಿರುವುದು ಕಂಡು ಬರುತ್ತದೆ. ಗೊಂದಲಿಗರು ಊರೂರು ಅಲೆಯುತ್ತಾ ಭಿಕ್ಷೆ ಬೇಡುವ ಸಂದರ್ಭದಲ್ಲಿ ಅವರಿಗೆ ಭಿಕ್ಷೆಯನ್ನು ಎತ್ತರಿಸಿ ಹಾಕುವ, ನೀರನ್ನು ಕೇಳಿದರೆ ಕೊಡಲು ಹಿಂದೇಟು ಹಾಕುವ, ಅವರನ್ನು ಮುಟ್ಟಿಸಿಕೊಳ್ಳದೇ ಇರುವುದು, ಮನೆಯೊಳಗೆ ಕಾಲಿಡದಂತೆ ಕಟ್ಟಪ್ಪಣೆ ಮಾಡುವ, ಹೋಟೆಲುಗಳಲ್ಲಿ ಅವರಿಗೆ ಪ್ರತ್ಯೇಕವಾದ ಕಪ್ಪು, ಗ್ಲಾಸುಗಳಲ್ಲಿ ಚಹಾ ಮತ್ತು ನೀರು ಕೊಡುವ ಇಂತಹ ಹತ್ತಾರು ನಿದರ್ಶನಗಳು ಕಂಡು ಬರುತ್ತವೆ.

ಗೊಂದಲಿಗರು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶನ ಮಾಡಿ ಆ ಮೂಲಕ ಭಿಕ್ ಬೇಡುವುದನ್ನೇ ಪ್ರದಾನ ವೃತ್ತಿಯನ್ನಾಗಿಸಿಕೊಂಡ ಇವರ ವೃತ್ತಿಗಳಲ್ಲಿ ಉತ್ಪಾದನೆ ಎನ್ನುವುದು ಸೊನ್ನೆಯಾಗಿದೆ. ಬುಡಬುಡಕೆಯವರು, ಅರೆಪಂಚಾಗದವರು, ಜ್ಯೋತಿಷ್ಯಾಸ್ತ್ರ ಹೇಳುವವರು ನೇರವಾಗಿ ಭಿಕ್ಷೆ ಬೇಡಲಿಕ್ಕಾಗದೇ ಶಾಸ್ತ್ರ ಮತ್ತು ಶಕುನದ ಮೂಲಕ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದರೂ ಅವರ ದಿನ ನಿತ್ಯದ ಆದಾಯ ತೀರ ಕಡಿಮೆ. ಆಧುನಿಕ ಸಮಾಜಕ್ಕೆ ಇವರ ಮೇಲೆ ಯಾವರ ನಂಬಿಕೆಗಳೂ ಇಲ್ಲ ‘ಬುಡಬುಡಕ್ಯಾನ ಭವಿಷ್ಯ ಬುಡತನಕ ಸುಳ್ಳು’ ಎಂಬ ಗಾದೆ ಮಾತು ಇವರ ವೃತ್ತಿಯನ್ನು ಕುರಿತು ಹುಟ್ಟಿಕೊಂಡಿದೆ. ಹೀಗಾಗಿ ಇವರ ಭವಿಷ್ಯ ಶಕುನಗಳನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ಅನೇಕ ಪ್ರದೇಶಗಳಲ್ಲಿಯ ಗೊಂದಲಿಗರು ತಮ್ಮ ಮೂಲ ವೃತ್ತಿಗಳನ್ನು ಕೈ ಬಿಡುತ್ತ ಕೂಲಿ ಮತ್ತೆ ಕೆಲವರು ಪಾತ್ರೆ ವ್ಯಾಪಾರ ಮಾಡುತ್ತಿದ್ದಾರೆ.

ಗೊಂದಲಿಗರ ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಬೆನ್ನು ಹತ್ತಿ ಊರೂರು ಅಲೆದಾಡಿ ಹಳ್ಳಿಗರಿಂದ ಹಳೆಯ ಬಟ್ಟೆಗಳನ್ನು ತಂದು ಅವರಿಗೆ ಕವದಿ ಹೊಲಿದು ಕೊಟ್ಟು ಅಲ್ಪ ಪ್ರಮಾಣದಲ್ಲಿ ಸಂಪಾದನೆ ಮಾಡುತ್ತಿದ್ದರು. ಇಂದು ಗ್ರಾಮೀಣ ಪ್ರದೇಶದವರಿಗೆ ಇವರು ಹೊಲಿಯುವ ಕವದಿ ಮೇಲಿನ ವ್ಯಾಮೋಹ ಕಡಿಮೆಯಾಗಿದೆ. ಕವದಿ ಬದಲಾಗಿ ಕಂಬಳಿ, ರಗ್ಗು, ಚಾದರನ್ನೇ ಹಳ್ಳಿಗರು ಬಳಸುತ್ತಿರುವುದರಿಂದ ಕವದಿ ಹೊಲಿಸುತ್ತಿರುವವರ ಸಂಖ್ಯೆ ತೀರ ಕಡಿಮೆಯಾಗಿದೆ. ಇದರಿಂದ ಗೊಂದಲಿಗರ ಹೆಂಗಸರು ಮಾಡುತ್ತಿದ್ದ ವೃತ್ತಿಗೂ ಕಲ್ಲು ಬಿದ್ದಂತಾಗಿದೆ.

ಗ್ರಾಮೀಣ ಪ್ರದೇಶದಲ್ಲಿಯ ಕೆಲ ಗೊಂದಲಿಗರ ಹೆಣ್ಣು ಮತ್ತು ಗಂಡು ಮಕ್ಕಳು ಕಣ್ಣು ಮತ್ತು ಕವಿಗಳಲ್ಲಿಯ ಧೂಳು ಮತ್ತು ಹೊಲಸು ತೆಗೆದು ಸ್ವಚ್ಚಗೊಳಿಸುವ ವೃತ್ತಿಯನ್ನು ಕೈಗೊಂಡಿದ್ದರು. ಕೇವಲ ಎರಡರಿಂದ ಐದು ರೂಪಾಯಿಗಳವರೆಗೆ ಹಣ ಪಡೆದು ವೃತ್ತಿಯನ್ನು ಮಾಡುತ್ತಿದ್ದ ಇವರನ್ನು ಜನ ನಂಬುತ್ತಿಲ್ಲ, ನಗರಗಳಲ್ಲಿ ಕಿವಿಗೊಬ್ಬ, ಕಣ್ಣಿಗೊಬ್ಬ, ಮೂಗಿಗೊಬ್ಬ ಹೀಗೆ ಮಾನವನ ಪ್ರತಿಯಂದು ಅಂಗಾಂಗವನ್ನೂ ಪರೀಕ್ಷಿಸಿ ಔಷಧೋಪಚಾರ ಮಾಡುತ್ತಿರುವ ವೈದ್ಯರ ಮುಂದೆ ಇವರನ್ನು ಕೇಳುವವರೆ ಇಲ್ಲದಂತಾಗಿದೆ. ಅನೇಕ ವರ್ಷಗಳಿಂದ ಇವರ ಸೇವೆಯನ್ನು ಪಡೆದುಕೊಂಡ ಜನಸಮುದಾಯ ಇಂದು ಇವರನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿದೆ. ಒಂದು ಕಾಲಕ್ಕೆ ಇವರ ನೆರವನ್ನು ಪಡೆದುಕೊಂಡವರೂ ಕೂಡ ಇಂದು ‘ಕಣ್ಣು ಕವಿಗಳನ್ನು ಇವರಿಂದ ಹಾಳು ಮಾಡಿಕೊಂಡರೆ ನಮ್ಮ ಗತಿ ಏನು?’ ಎಂದು ಯೋಚಿಸುವ ಸ್ಥಿತಿಗೆ ತಲುಪಿದ್ದಾರೆ. ಇಲ್ಲಿಯೂ ಇವರ ಸ್ವಂತ ಉತ್ಪಾದನೆ ಇಲ್ಲದಂತಾಗಿದೆ. ಹೀಗಾಗಿ ಅಲೆಮಾರಿ ಜನಾಂಗವಾದ ಈ ಗೊಂದಲಿಗರು ಎಂದೂ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಬೇರೆಯವರ ಉತ್ಪತ್ತಿಯ ಉಳಿತಾಯಕ್ಕೆ ಕೈ ಚಾಚುತ್ತ ಬಂದರು. ಗೊಂದಲಿಗರು ಅನುಸರಿಸಿಕೊಂಡಿರುವ ಯಾವುದೇ ವೃತ್ತಿಯಾಗಲಿ ಅದು ಎಂದೂ ಇತರರಿಗ ಅವಶ್ಯಕವಾದ ಮತ್ತು ಪ್ರಧಾನವಾದ ವೃತ್ತಿಯಾಗಲೇ ಇಲ್ಲ. ಗೊಂದಲಿಗರು ಕೈಗೊಂಡಿರುವ ವೃತ್ತಿಗಳಾದ ಶಾಸ್ತ್ರ, ಶಕುನ ಹೇಳುವುದು, ಮಾಟ-ಮಂತ್ರ ಮಾಡುವುದು, ಕವದಿ ಹೊಲೆಯುವುದು, ಕಥೆ ಹೇಳುವುದು, ಹಾಡೂ ಹೇಳುವುದು, ಕಲಾ ಸೇವೆ ಮಾಡುವುದು, ವಾದ್ಯ ನುಡಿಸುವುದು ಮತ್ತು ವೇಷ ಹಾಕುವುದು ಇವು ಪೂರಕ ವೃತ್ತಿಗಳಾಗಿರುವುದರಿಂದ ಇವು ಸಮಾಜಕ್ಕೆ ಅನಿವಾರ್ಯವಾಗಿಲ್ಲ ಮತ್ತು ಬೇಕಾಗಿಲ್ಲ. ಈ ಎಲ್ಲ ಕಾರಣಗಳಿಂದ ಗೊಂದಲಿಗರು ತಮ್ಮ ಮೂಲ ವೃತ್ತಿಗಳನ್ನು ಕೈ ಬಿಟ್ಟು ಕೂಲಿ ಕೆಲಸಕ್ಕೆ ಇಳಿಯುವಂತಾಗಿದೆ. ಅನೇಕ ಕುಟುಂಬಗಳು ಕೂಲಿ ಹುಡುಕಿಕೊಂಡು ನಗರಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.

ಗೊಂದಲಿಗರ ವೃತ್ತಿಗೆ ಸಂಬಂಧಿಸಿದಂತೆ ನಾನು ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಒಟ್ಟು ೧೭೭೦ ಕುಟುಂಬಗಳನ್ನು ಕುರಿತು ಅಧ್ಯಯನ ಮಾಡಿದಾಗ ಇವರಲ್ಲಿ ಸುಮಾರು ೭೦ ರಷ್ಟು ಜನ ಕೂಲಿ ಕೃಷಿಹಾಗೂ ಇತರೆ ವೃತ್ತಿಗಳನ್ನು ಅನುಸರಿಸಿಕೊಂಡಿರುವುದು ಕಂಡು ಬರುತ್ತದೆ.ಒಟ್ಟು ೮೧೪೬ ಜನಸಂಖ್ಯೆಯಲ್ಲಿ ೧೫ ರಿಂದ ೩೦ ಜನರು ಮಾತ್ರ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಸುಮಾರು ೧೫ರಷ್ಟು ಜನ ಪಾತ್ರೆ ಮತ್ತಿತರ ವ್ಯಾಪಾರ ವೃತ್ತಿಯನ್ನು ಮಾಡಿಕೊಂಡಿದ್ದಾರೆ. ಪಾರಂಪರಿಕ ವೃತ್ತಿಗಳಾದ ಬುಡಬುಡಕೆ, ಅರೆಪಂಚಾಂಗ, ಶಕುನ, ಎಣ್ಣೆ ಜೋಗಿ, ಗೊಂದಲಿ, ಗಿಳಿಶಾಸ್ತ್ರ, ಹಸ್ತಸಾಮುದ್ರಿಕ ಮುಂತಾದ ಪಾರಂಪರಿಕ ವೃತ್ತಿಗಳಲ್ಲಿ ಸುಮಾರು ೧೦ ರಷ್ಟು ಜನರು ತೊಡಗಿಸಿಕೊಂಡಿದ್ದಾರೆ.

ಅಲೆಮಾರಿಗಳಾದ ಇವರಿಗೆ ಕೃಷಿ ಬಗ್ಗೆ ಅಷ್ಟಾಗಿ ತಿಳುವಳಿಕೆ ಇಲ್ಲ. ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ಸುಮಾರು ೬೦ ಕುಟುಂಬಗಳು ಕೃಷಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೆ ನಾನು ಸಮೀಕ್ಷೆ ಮಾಡಿದ ಶಿವಮೊಗ್ಗ ಜಿಲ್ಲೆಯ ಜಡಿಗದ್ದೆ ಗ್ರಾಮದಲ್ಲಿ ೨, ಭರತನಹಳ್ಳಿಯಲ್ಲಿ ೨, ಕಾರವಾರ ಜಿಲ್ಲೆ ಕೊಳಗೇರಿಯಲ್ಲಿ೨, ದಮಗೇರಿಯಲ್ಲಿ ೫, ಯಲ್ಲಾಪುರದಲ್ಲಿ ೮ ಮತ್ತು ಮುಂಡರಗಿಯಲ್ಲಿ ೧ ಕುಟುಂಬ ಕೃಷಿಕ ವೃತ್ತಿಯನ್ನು ಮಾಡಿಕೊಂಡಿದೆ. ಈ ಗೊಂದಲಿಗರು ಅರಣ್ಯ ಪ್ರದೇಶದ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದು ಸಾಮಾನ್ಯವಾಗಿ ಎಲ್ಲರೂ ಅರ್ಧದಿಂದ ಒಂದು ಎಕರೆ ವರೆಗಿನ ಜಮೀನಿನಲ್ಲಿ ಕೃಷಿ ಕೈಗೊಂಡಿದ್ದು ತಿಳಿದುಬರುತ್ತದೆ.

ಅಲೆಮಾರಿ ಗೊಂದಲಿಗರ ಅನೇಕರ ಮನೆಗಳು ಇಂದಿಗೂ ಗುಡಿಸಲು ಮತ್ತು ಗುಡಾರಗಳಿಂದ ಕೂಡಿವೆ. ಅವರು ವಾಸಿಸುವ ಕ್ರಮವನ್ನು ಗಮನಿಸಿದರೆ ಅವರು ಅಲೆಮಾರಿಗಳೆಂದು ಸೂಕ್ಷ್ಮವಾಗಿ ತಿಳಿಯುತ್ತದೆ. ಇವರ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಇರುವುದೇ ಇಲ್ಲ. ಎಲ್ಲಿಬೇಕೆಂದಲ್ಲಿ ತೆಗೆದುಕೊಂಡು ಅಲ್ಲಿಯೇ ಸಂಸಾರ ಸಾಗಿಸುತ್ತ ಬಂದಿದ್ದಾರೆ. ಮನೆಯ ಹೊರಗೆಯೇ ಅಡುಗೆ ಮಾಡುತ್ತಾರೆ. ಅಂದಿನ ದುಡಿಮೆ ಅಂದಿನ ಆಹಾರಕ್ಕೆ ಮಾತ್ರ ಸಾಲುತ್ತದೆ. ಮಳೆಗಾಲದಲ್ಲಿ ಇವರ ಸ್ಥಿತಿಯನ್ನು ಹೇಳತೀರದು. ಇಂತಹ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ನಾನು ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ೧೭೭೦ ಗೊಂದಲಿಗರ ಕುಟುಂಬಗಳಲ್ಲಿ ಕರ್ನಾಟಕ ಸರ್ಕಾರ ಶಿವಮೊಗ್ಗ ನಗರದಲ್ಲಿ ೫೫, ಸಾಗರದಲ್ಲಿ ೧೦, ಹರಗುವಾಳು ೫೦, ಹಳಿಯಾಳ ೫, ಭರತನಹಳ್ಳಿ ೪ ಡೋಮಗೇರಿ ೪, ಜಡಿಗದ್ದೆ ೩, ಬಾಲಗೇರಿ ೪, ಗುಲಬರ್ಗಾನಗರ ೧೦, ಕಲ್ಲಹಂಗರಣ ೩ ಮದನ ಹಿಪ್ಪರಣ ೧೦, ನಿಂಗದಳ್ಳಿ ೩ ಜವಳಿ ೧, ಮತ್ತು ಯಳಸಂಗಿ ಗ್ರಾಮದಲ್ಲಿ ೬ ಆಶ್ರಯ ಮನೆಗಳನ್ನು ನೀಡಿದೆ. ಒಟ್ಟು ೨೦೭ ಕುಟುಂಬಗಲಿಗೆ ಆಶ್ರಯ ಮನೆ ನೀಡಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಉಳಿದ ೧೫೬೩ ಕುಟುಂಬಗಳಿಗೆ ಸುಮಾರು ೮೦೦ಕ್ಕೂ ಹೆಚ್ಚು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ಅಲ್ಲಲ್ಲಿ ಗುಡಿಸಲು, ಟೆಂಟ್ ಮನೆಗಳಲ್ಲಿ ಉಳಿದುಕೊಂಡಿವೆ ಇಲ್ಲಿ ಕನಿಷ್ಟವಾದ ಮೂಲಭೂತ ಸೌಕರ‍್ಯಗಳೂ ಇಲ್ಲದೇ ಇರುವುದನ್ನು ಕಾಣುತ್ತೇವೆ.

೧೭೭೦ ಕುಟುಂಬಗಳಲ್ಲಿ ಒಟ್ಟು ಜನಸಂಖ್ಯೆ ೮೧೪೬ ಇದ್ದು ಇದರಲ್ಲಿ ೪೨೬೯ ಪುರುಷರು ಹಾಗೂ ೩೮೭೭ ಮಹಿಳೆಯರಿದ್ದಾರೆ. ಎರಡು ದಶಕಗಳಿಂದೀಚೆಗೆ ಇವರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಉಂಟಾಗುತ್ತಿದ್ದರೂ ಪ್ರೌಢ, ಪದವಿ ಪೂರ್ವ, ಪದವಿ, ಹಾಗೂ ತಾಂತ್ರಿಕ ಶಿಕ್ಷಣದಲ್ಲಿ ಇವರು ತೊಡಗಿಸಿಕೊಂಡದ್ದು ತೀರ ಕಡಿಮೆ ಎಂದು ಹೇಳಬೇಕಾಗುತ್ತದೆ. ನೆಲೆ ಕಂಡು ಕೊಂಡಿರುವ ಕುಟುಂಬಗಳಲ್ಲಿ ಸಾಕ್ಷರತೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಅಲೆಮಾರಿ ಹಾಗೂ ಅರೆ ಅಲೆಮಾರಿ ಕುಟುಂಬಗಳಲ್ಲಿ ಶಿಕ್ಷಣದ ಬಗ್ಗೆ ಅರಿವು ಇನ್ನೂ ಮೂಡಿಲ್ಲ. ೪೨೬೯ ಪುರುಷರಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ೧೭೪೫ ಜನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದುಕೊಂಡಿದ್ದಾರೆ. ಎಸ್.ಎಸ್.ಎಲ್.ಸಿ. ೩೨೬, ಪಿ.ಯು.ಸಿ. ೧೮೨ ಪದವಿ ೭೭, ಬಿಎಡ್ ೫, ತಾಂತ್ರಿಕ ಶಿಕ್ಷಣ ೫, ಸ್ನಾತಕ ಪದವಿ ೫, ಬಿಡಿಎಸ್೧, ಡಿಪ್ಲೊಮಾ ೫, ಐಟಿಐ ೨ ಮತ್ತು ಟಿ.ಸಿ. ಎಚ್‌ನಲ್ಲಿ ೫ ಜನ ಶಿಕ್ಷಣ ಪಡೆದಿದ್ದಾರೆ. ಒಟ್ಟು ೩೮೭೭ ಮಹಿಳೆಯರಲ್ಲಿ ೯೯೩ ಮಹಿಳೆಯರು ಪ್ರಾಥಮಿಕ ಹಾಗೂ ಪ್ರೌಢ (ವಿದ್ಯಾರ್ಥಿನಿಯರನ್ನು ಸೇರಿಸಿಕೊಂಡು) ಶಿಕ್ಷಣ ಪಡೆದಿದ್ದಾರೆ. ಎಸ್.ಎಸ್.ಎಲ್.ಸಿ. ೧೦೪, ಪಿ.ಯು.ಸಿ. ೩೮, ಪದವಿ ೧೮, ಬಿ.ಎ.ಎಂ.ಎಸ್. (ವೈದ್ಯಕೀಯ)ನಲ್ಲಿ ಒಬ್ಬರು ಪದವಿ ಪಡೆದಿದ್ದಾರೆ, ಕರ್ನಾಟಕ ಸರ್ಕಾರದ ಮಧ್ಯಾಹ್ನದ ಬಿಸಿಯೂಟದ ಪ್ರಯೋಜನದಿಂದ ಗೊಂದಲಿಗರ ಮಕ್ಕಳ ಶಿಕ್ಷಣದಲ್ಲಿ ಅಲ್ಪ ಪ್ರಮಾಣದ ಏರಿಕೆ ಉಂಟಾಗಿರುವುದನ್ನು ಈ ಸಂದರ್ಭದಲ್ಲಿ ಗಮನಿಸಲಾಗಿದೆ. ಅಲೆಮಾರಿಗಳು ಪ್ರಾಥಮಿಕ ಶಿಕ್ಷಣದ ನಂತರ ತಮ್ಮ ಮಕ್ಕಳನ್ನು ಸಣ್ಣ ಪುಟ್ಟ ವ್ಯಾಪಾರ ಮತ್ತು ಕೂಲಿಗೆ ಕರೆದುಕೊಂಡು ಹೋಗುತ್ತಿರುವುದರಿಂದ ಮಕ್ಕಳು ಮಾಧ್ಯಮಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದಕ್ಕೆ ಅವರಲ್ಲಿರುವ ಅಲೆದಾಟ, ಬಡತನ, ನೆಲೆಸಿರುವ ಪರಿಸರ ಕಾರಣವಾಗಿದೆ. ಕಡ್ಡಾಯ ಶಿಕ್ಷಣದ ಬಗ್ಗೆ ಇವರಿಗೆ ತಿಳುವಳಿಕೆಯೇ ಇಲ್ಲ. ಅನೇಕ ಪೋಷಕರು, ಪಾಲಕರು ಮಕ್ಕಳ ದುಡುಮೆಯನ್ನೇ ಅವಲಂಬಿಸಿ ಬದುಕುವವರಾಗಿದ್ದಾರೆ.

ಕರ್ನಾಟಕದ ಅಲೆಮಾರಿ ಬುಡಕಟ್ಟುಗಳ ಲಕ್ಷಣಗಳನ್ನೆಲ್ಲ ಈ ಗೊಂದಲಿಗರಲ್ಲಿ ಕಾಣುತ್ತೇವೆ. ಗೊಂದಲಿಗರು ತಮ್ಮದೇ ಆದ ಖಿವಾರಿ ಎಂಬ ಭಾಷೆಯನ್ನು ಮಾತನಾಡುವುದನ್ನು ಕಾಣುತ್ತೇವೆ. ಮಾತೃ ಪ್ರಧಾನ ಕುಟುಂಬದ ಈ ಗೊಂದಲಿಗರು ಮಾತೃ ದೇವತೆಗಳನ್ನು ಆರಾಧಿಸುತ್ತಿರುವುದು ಕಂಡು ಬರುತ್ತದೆ. ಗೊಂದಲಿಗರಲ್ಲಿ ಏಕ ರೂಪದ ಸಂಸ್ಕೃತಿ ಇರುವುದು ಕಂಡುಬರುತ್ತದೆ. ಗೊಂದಲಿಗರಲ್ಲಿ ಪರಂಪರಾನುಗತವಾಗಿ ರೂಢಿಸಿಕೊಂಡು ಬಂದಿರುವ ಆಚರಣೆ ಸಂಪ್ರದಾಯಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುತ್ತ ಬಂದಿರುವುದನ್ನು ಕಾಣುತ್ತೇವೆ. ಆಧುನಿಕ ಯುಗದಲ್ಲಿಯೂ ಅವರು ಆದಿಮ ಆಚರಣೆಗಳನ್ನು ಆಚರಿಸುತ್ತಿರುವುದು ಕಂಡು ಬರುತ್ತದೆ. ಮದುವೆಗಳಲ್ಲಿ ಹೆಣ್ಣಿಗೆ ತೆರ ಕೊಟ್ಟ ತರುವ ಪದ್ಧತಿಯನ್ನು ಚಾಚೂ ತಪ್ಪದೇ ಪಾಲಿಸುತ್ತ ಬಂದಿದ್ದಾರೆ. ಗೊಂದಲಿಗರು ತಮ್ಮ ಆಚಾರ-ವಿಚಾರ, ಪೂಜಾ ವಿಧಿ-ವಿಧಾನ, ಹಬ್ಬ-ಹರಿದಿನ, ಜಾತ್ರೆ ಉತ್ಸವಗಳನ್ನು, ಮುದುವೆ, ಹುಟ್ಟು,ಸಾವು ಇತರೆ ಎಲ್ಲ ಸಂಸ್ಕಾರಗಳನ್ನು ಚಾಚೂ ತಪ್ಪದೇ ಆಚರಿಸಿಕೊಂಡು ಬಂದಿದ್ದಾರೆ. ಅಲೆಮಾರಿ ಬುಡಕಟ್ಟುಗಳಲ್ಲಿಯೇ ಗೊಂದಲಿಗರು ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿದವರಾಗಿದ್ದಾರೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ಗೊಂದಲಿಗರಲ್ಲಿಯ ನ್ಯಾಯ ನಿರ್ಣಯ ಪದ್ಧತಿ ಅತ್ಯಂತ ವಿಶಿಷ್ಟವಾಗಿರುವುದನ್ನು ಗಮನಿಸಲಾಗಿದೆ. ಆಧುನಿಕ ಯುಗದಲ್ಲಿಯೂ ಕೋರ್ಟು ಕಛೇರಿ ಎಂದು ಅಲೆದಾಡದೇ ತಮ್ಮ ತಮ್ಮ ಸಮಸ್ಯೆಗಳನ್ನು ತಂಟೆ-ತಕರಾರುಗಳನ್ನು ತಮ್ಮದೇ ಆದ ನ್ಯಾಯ ಪಂಚಾಯಿತಿಯಲ್ಲಿ ಬಗೆಹರಿಸಿಕೊಳ್ಳುವುದನ್ನು ಕಾಣುತ್ತೇವೆ. ಗೊಂದಲಿಗರ ನ್ಯಾಯ ಪದ್ಧತಿ ಇತರ ಸಮುದಾಯದವರೆಗೆ ಮಾದರಿಯಾಗುವ ರೀತಿಯಲ್ಲಿದೆ ಎಂಬುದನ್ನು ಗಮನಿಸಬೇಕು. ಅನೇಕ ಗೊಂದಲಿಗರ ಕುಟುಂಬಗಳು ನಗರಕ್ಕೆ ವಲಸೆ ಹೋಗಿ ಅಲ್ಲಿ ಕೂಲಿ ಮತ್ತಿತರ ವೃತ್ತಿಯ ಮೂಲಕ ಬದುಕುತ್ತಿದ್ದಾರೆ ಆದರೆ ಇವರಲ್ಲಿ ದುಶ್ಚಟಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ದುಶ್ಚಟಗಳ ನಿಯಂತ್ರಣಕ್ಕಾಗಿ ಅವರನ್ನು ಪಂಢರಪುರಕ್ಕೆ ಕರೆದುಕೊಂಡು ಹೋಗಿ ತುಳಸಿ ಮಾಲೆಯನ್ನು ಹಾಕಿಸಿ ಅವರನ್ನು ಚಟಗಳಿಂದ ದೂರವಿಡುವಂತೆ ಸಮಾಜದ ಹಿರಿಯರು ಕ್ರಮ ಕೈಗೊಳ್ಳುತ್ತಿದ್ದಾರೆ.

ಗೊಂದಲಿಗರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಹಳ ಹಿಂದುಳಿದಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮೂಲಕ ಅವರಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ಸಿಗುವಂತಾಗಬೇಕು.

ಗೊಂದಲ ಹಾಕುವ ಮತ್ತು ಅತ್ಯುತ್ತಮವಾದ ಕಥೆಗಳನ್ನು ಹೇಳುವ ಹಿರಿಯ ಕಲಾವಿದರು ಇವರ ಸಮುದಾಯದಲ್ಲಿ ಇನ್ನೂ ಉಳಿದುಕೊಂಡಿದ್ದಾರೆ. ಅವರಲ್ಲಿರುವ ಸಾಹಿತ್ಯ ಮತ್ತು ಅವರ ಪ್ರದರ್ಶನದ ದಾಖಲಾತಿ ಕೆಲಸ ತುರ್ತಾಗಿ ನಡೆಯಬೇಕಾಗಿದೆ. ಗೊಂದಲಿಗರ ಕಲಾವಿದರಿಗೆ ಮಾಶಾಸನ ದೊರೆಯುವಂತಾಗಬೇಕಾಗಿದೆ. ಅಲೆಮಾರಿ ಗೊಂದಲಿಗರಿಗೆ ಅಲ್ಲಲ್ಲಿ ಪುನರ್‌ವಸತಿ ಕೇಂದ್ರಗಳನ್ನು ಸ್ಥಾಪಿಸಿ ಅವರು ಒಂದು ಕಡೆ ನೆಲೆ ನಿಲ್ಲುವಂತಹ ವ್ಯವಸ್ಥೆಯನ್ನು ಸರ್ಕಾರ ತೀವ್ರಗತಿಯಲ್ಲಿ ಮಾಡಬೇಕಾಗಿದೆ. ಇವತ್ತು ಇವರ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವಂತಾಗಬೇಕು.

ಆಧುನಿಕ ಪರಿಸರದಲ್ಲಿ ಗೊಂದಲಿಗರ ಕಲೆ ಸಾಹಿತ್ಯ ಉಳಿಸಿಕೊಳ್ಳಲು ಅವರಿಗೆ ಪ್ರೋತ್ಸಾಹವನ್ನು ಉತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಹ ತರಬೇತಿಗಳನ್ನು ನೀಡಬೇಕಾಗಿದೆ. ವ್ಯಾಪಾರ ಮಾಡುವ ಕುಟುಂಬಗಳಿಗೆ ಬ್ಯಾಂಕ್ ಮತ್ತುಸಹಕಾರಿ ಸಂಘಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಹಣಕಾಸಿನ ನೆರವುಕೊಡುವ ಅಗತ್ಯತೆ ಇದೆ.

ಗೊಂದಲಿಗರಲ್ಲಿಯ ಯುವ ಪೀಳಿಗೆ ಶಕ್ತಿ ಮೀರಿ ದುಡಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆ ದುಡಿಯುವ ಕೈಗಳಿಗೆ ಕೆಲಸ ನೀಡುವ ಅವಶ್ಯಕತೆ ಇದೆ. ಪಾತ್ರೆ ವ್ಯಾಪರ ಮಾಡುವ ಅನೇಕರನ್ನು ನಾನು ಸಂದರ್ಶನ ಮಾಡಿದಾಗ ಅವರಲ್ಲಿರುವ ಚಾಣಾಕ್ಷತನ ಮತ್ತು ಮಾತುಗಾರಿಕೆ ಇತರೆ ಸಮುದಾಯಗಳಿಗಿಂತ ವಿಶಿಷ್ಟವಾಗಿರುವುದು ಕಂಡು ಬರುತ್ತದೆ.

ಕರ್ನಾಟಕದಲ್ಲಿ ಗೊಂದಲಿಗರು ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂಬ ಹೇಳಿಕೆಗಳುಂಟು, ಆದರೆ ನಾನು ಸಮೀಕ್ಷೆ ಮಾಡಿರುವ ಪ್ರಕಾರ ಅಂದಾಜು ಒಂದು ಲಕ್ಷದಿಂದ ಒಂದುಲಕ್ಷ ಇಪ್ಪತ್ತು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಸಾಧ್ಯತೆ ಇದೆ. ಪ್ರತಿ ಜಿಲ್ಲೆಯ ಪ್ರತಿ ಈರಿನ ಸಮಗ್ರ ಸಮೀಕ್ಷೆ ಮಾಡಿರೆ ಪೂರ್ಣ ಪ್ರಮಾಣದ ಮಾಹಿತಿ ದೊರೆಯುತ್ತದೆ. ಕಡಿಮೆ ಅವಧಿಯಲ್ಲಿ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿಯ ೧೭೭೦ ಕುಟುಂಬಗಳನ್ನು ಸಮೀಕ್ಷೆ ಮಾಡಿ ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವಂತಹ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

* * *