ಹಂಪಿಯ ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವ ಒಂದು ಸಂಸ್ಥೆ. ನಮ್ಮ ನಾಡಿನಲ್ಲಿ ಹಳೆಯ ಕಾಲದ ತಿಳುವಳಿಯೊಂದಿದೆ, ಅಲ್ಲದೆ ಪಶ್ಚಿಮದಿಂದ ಹರಿದು ಬರುತ್ತಿರುವ ಜ್ಞಾನ ಪ್ರವಾಹವೂ ಇದೆ. ಈ ಎರಡೂ ತಿಳುವಳಿಕೆಗಳು ಒಂದಕ್ಕೊಂದು ಸಂಧಿಸಿ ಬೆಳಕನ್ನು ಉಂಟುಮಾಡಿವೆ. ಜೊತೆಗೆ ದಿಗ್ಭ್ರಮೆಯನ್ನು ತಂದಿವೆ. ಈ ತಿಳುವಳಿಕೆಗಳ ವಿವೇಕದ ವಿನಿಯೋಗ ಇಂದು ಅಗತ್ಯವಾಗಿದೆ. ಇಂಥ ವಿನಿಯೋಗಕ್ಕಾಗಿ ಹೊಸ ಬಗೆಯ ಶಾಸ್ತ್ರ ವಿಧಾನಗಳು ನಮಗಿಂದು ಬೇಕಾಗಿವೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಯ ಗುರಿಯೆಂದರೆ ಈ ಶಾಸ್ತ್ರ ವಿಧಾನಗಳ ನಿರ್ಮಾಣ. ಅಂಥ ಎಲ್ಲ ಬಗೆಯ ಸಂಶೋಧನಕ್ಕೂ ಕನ್ನಡ ವಿಸ್ವವಿದ್ಯಾಲಯದಲ್ಲಿ ಅನುಕೂಲವಿದೆ; ಅವಕಾಶವೂ ಇದೆ.

ಹೀಗೆ ಮೂಡಿ ಬಂದ ಸಾಹಿತ್ಯ ಪ್ರಕಟವಾಗಬೇಕು. ನಮ್ಮ ವಿಶ್ವ ವಿದ್ಯಾಲಯದ ಪ್ರಸಾರಾಂಗಕ್ಕೆ ಇಂಥ ಗುರುತರವಾದ ಜವಾಬ್ದಾರಿಯಿದೆ. ನಾಡಿನ ತಜ್ಞರಿಂದ ಗ್ರಂಥಗಳನ್ನು ಬರೆಯಿಸಿ ಪ್ರಕಟಿಸುವುದರ ಜೊತೆಗೆ, ವಿಶ್ವವಿದ್ಯಾಲಯ ಸೃಷ್ಟಿಸುತ್ತಿರುವ ಸಾಹಿತ್ಯವನ್ನು ಅದು ಪ್ರಕಟಿಸಬೇಕು. ಇದು ತಿಳುವಳಿಕೆಗೆ ಪರಿಪ್ರೇಕ್ಷ್ಯವನ್ನು ಕಟ್ಟುವ ಕೆಲಸ. ಪ್ರಸಾರಾಂಗದ ಪ್ರಕಟಣೆಗಳಿಗೆ ಇಂಥ ಒಂದು ಸಾರ್ಥಕವಾಗಬಲ್ಲ ಉದ್ದೇಶವಿದೆ.

ಶ್ರೀ ಮುದೇನೂರು ಸಂಗಣ್ಣ ಅವರ ‘ಗೊಂದಲಿಗರ ದೇವೇಂದ್ರಪ್ಪನವರ ಆಟಗಳು’ ಅಪರೂಪದ ಕೃತಿ. ಕನ್ನಡ ಜಾನಪದ ಲೋಕಕ್ಕೆ ಹೊಸ ಸೇರ್ಪಡೆ. ಜಾನಪದ ತಜ್ಞರಾದ ಶ್ರೀ ಮುದೇನೂರು ಸಂಗಣ್ಣ ಅವರ ಶ್ರದ್ಧೆ, ಶ್ರಮ ಮತ್ತು ಅನುಭವ ಈ ಕೃತಿಯಲ್ಲಿ ಹರಳುಗಟ್ಟಿದೆ. ಒಬ್ಬನೇ ಗೊಂದಲಿಗ ಕಲಾವಿದನ ಐದು ಆಟಗಳ ಈ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡಿದೆ ಹಿರಿಯರಾದ ಶ್ರೀ ಮುದೇನೂರು ಸಂಗಣ್ಣ ಅವರಿಗೆ ನಮ್ಮ ಕೃತಜ್ಞತೆಗಳು.

ಚಂದ್ರಶೇಖರ ಕಂಬಾರ
ಕುಲಪತಿಗಳು
ಕನ್ನಡ ವಿಶ್ವವಿದ್ಯಾಲಯ, ಹಂಪಿ