ವಾದ್ಯಗಳು

ಮನುಷ್ಯನಿಗೂ ವಾದ್ಯಗಳಿಗೂ ಪುರಾತನ ಸಂಬಂಧ. ಅವುಗಳ ತಾಳ-ಲಯಗಳ ವಾದನ ಗತಿ ಅವನ ಹೃದಯದ ಬಡಿತಗಳೊಂದಿಗೆ ವಾದ್ಯಗಳಿಗೂ ನಿಕಟತೆ ಇರುವುದನ್ನೂ ಕಾಣಬಹುದು. ಕೃಷ್ಣನಿಗೆ-ಕೊಳಲು, ಸರಸ್ವತಿ-ವೀಣೆ, ಶಿವನಿಗೆ-ಡಮರು, ನಾರದಗೆ-ತಂಬೂರಿ ಚಟಿಕೆಗಳು ಜೋಡುಗೊಂಡಿವೆ.

ಗೀತಕ್ಕೆ ಕಳೆಕೊಡುವುದು ವಾದ್ಯಗಳ ಕೆಲಸ. ಜಾನಪದ ಕಲಾ ಪ್ರಕಾರಗಳಲ್ಲಿ ಒಂದೊಂದಕ್ಕೂ ಒಂದು ವಾದ್ಯದ ಪ್ರಾಮುಖ್ಯತೆ ಇದೆ. ಉದಾಹರಣೆಗೆ ಕಂಸಾಳೆಗೆ ತಾಳೆಗಳು, ಕಿನ್ನರಿಜೋಗಿ ಆಟಕ್ಕೆ ಕಿನ್ನರಿ, ನೀಲಗಾರರ ಕಥನ ಕಾವ್ಯಕ್ಕೆ ತಂಬೂರಿ, ಜೋಗಿಗಳ ಆಟಕ್ಕೆ ಚೌಡಿಕೆ, ಗೊರವರ ಕುಣಿತಕ್ಕೆ ಡಮರು ಸಣ್ಣಾಟಕ್ಕೆ ಡಪ್ಪು; ಹೀಗೆ ನಿಗದಿತವಾಗಿದೆ.

ಇದೇ ರೀತಿ ಗೊಂದಲಿಗರ ಆಟದಲ್ಲಿ ಸಂಬಾಳ ಮತ್ತು ಚೌಡಿಕೆಗಳೀಗೆ ಆದ್ಯತೆ. ಹಿಂದೊಂದು ಕಾಲದಲ್ಲಿ ಸುಮಾರು ಸಾವಿರ ಚರ್ಷಗಳ ಹಿಂದೆ ಗೊಂದಲಿಗರಲ್ಲಿ ವೀಣೆ, ಮೃದಂಗ, ಚಂಡಕ, ತ್ರಿವಳಿ, ಮುರಜಗಳಂಥ ವಿಶಿಷ್ಟ ವಾದ್ಯಗಳ ಬಳಕೆ ಇತ್ತಂತೆ; ಮೇಳದ ಕಲಾವಿದರ ಸಂಖ್ಯೆ ಮೂವತ್ತರಷ್ಟು ದೊಡ್ಡದಿತ್ತಂತೆ! ಆದರೆ ಈಗ ಅದರ ಸಂಖ್ಯೆ ಮೂರು, ನಾಲ್ಕಕ್ಕಿಳಿದಿದೆ. ನಮ್ಮ ಬಳ್ಳಾರಿ ಭಾಗದಲ್ಲಿ ಕೇವಲ ಇಬ್ಬರು ಗೊಂದಲಿಗರು ತಮ್ಮ ಆತ ನಡೆಸುತ್ತಾರೆ. ಚೌಡುಕೆ. ಸಮಾಳ ಲೋಹದ ತಾಳಗಳು ಮಾತ್ರ,- ಅವರು ಬಳಸುವ ವಾದ್ಯಗಳು. ಇವು ಮೂರೂ ಇಂದಿಗೂ ಯಾವುದೇ ಬದಲಾವಣೆಗೆ ಅಲವಡಿಸಲಾಗದಂಥ ವಾದ್ಯಗಳಾಗಿವೆ.

ಗೊಂದಲಿಗರು ತಮ್ಮ ಹಾಡುಗಳಿಗೆ ಅಳವಡಿಸುವ ಶಬ್ದ-ಲಯಗಳೇ ಅವರ ವಾದ್ಯತ್ರಯದ ನುಡಿತಕ್ಕೆ ಆಧಾರ. ಇವು ತಮ್ಮ ಆಟದ ರಸಾವೇಶಕ್ಕೆ ತಕ್ಕಂತೆ ಮಿಡಿತಗೊಳ್ಳುತ್ತವೆ; ರೌದ್ರ, ಬೀಭತ್ಸ, ಘೋರ ಪ್ರಸಂಗಗಳಲ್ಲಿ ಇವುಗಳ ನುಡಿತ ದೊಡ್ದದಾಗಿ ಅಬ್ಬರಿಸುತ್ತದೆ. ಕರುಣೆ, ಶಾಂತಿ, ಉತ್ಸಾಹದ ಪ್ರಸಂಗಗಳಲ್ಲಿ ಕೋಮಲಗೊಳ್ಳುತ್ತವೆ. ಹಾಡುಗಳ ಕೋಚಿಗೆ ಮುರ್ತಾಯದ ಢಂಗುನೀಡುತ್ತವೆ. ಹಾಡುಗಳ ಧಾಟಿ ಒಂದೇ ಇದ್ದಾಗ ಪ್ರಸಂಗಕ್ಕೆ ತಕ್ಕಂತೆ ತಮ್ಮ ಸ್ವರ ಮಿಡಿತ ಚಮತ್ಕೃತಿಗಳಿಂದ ಭಾವಪೋಷಕಗಳಾಗುತ್ತವೆ. ಒಟ್ಟಿನಲ್ಲಿ ಗೊಂದಲಿಗರ ಪದಗಳು ಕೇಳಬೇಕಾದಂಥವು ಎನ್ನಿಸಲು ಅವರ ವಾದ್ಯಗಳ ಸಾಂಗತ್ಯವೂ ಬೇಕೇಬೇಕು.

ಚೌಡಿಕೆ

–          ಚೌಡಿಕೆ ಸುಪರಿಚಿತ ಪುರಾತನ ಜನಪ್ರಿಯ ವಾದ್ಯ.

–          ಚೌಡಿಕೆಗಳಲ್ಲಿ ಎರಡು ವಿಧ (೧) ಶೃತಿ ಚೌಡಿಕೆ (೨) ಬಾರಿಕಿ ಚೌಡಿಕೆ.

ಗೊಂದಲಿಗರಿಗೆ ಚೌಡಿಕೆಯೇ ಮಾತೃವಾದ್ಯ; ಪ್ರಮುಖ ಪವಿತ್ರ ವಾದ್ಯ. ಅವರ ಹಾಡು, ರಾಗಾಲಾಪ, ನಿರೂಪಣೆಗಳಲ್ಲಿ ನಾಂದಿಯಿಂದ ಮಂಗಳದವರೆಗೆ ತನ್ನ ನಾದದ ವಾತಾವರಣವನ್ನು ಅದು ಇಂಬುಗೊಳಿಸಿಕೊಂಡೇ ಇರುತ್ತದೆ. ಹಿಮ್ಮೇಳಿಗನ ಬಗಲ ಬಂಧನದಲ್ಲಿರುವ ಈ ವಾದ್ಯ ಅವನ ‘ಆಹಾ’ ‘ಹೌದು’ ಉದ್ಗಾರಗಳಿಗೆ ವಿಶ್ರಾಂತಿ ನೀಡಿ, ತನ್ನ ಟ್ವಂಯಂ ಮಿಡಿತದಿಂದ ಕಥೆಗಾರನಿಗೆ ಸಾಥಿಯಾಗಿ ಸಹಕರಿಸುವುದೂ ಉಂಟು ಅವನು ಥಟ್ಟನೆ ಎತ್ತಿಕೊಳ್ಳಬೇಕಾದ ಪದಗಳು ಬೇಸೂರಾಗದಂತೆ ಚೌಡಿಕೆಯ ನಿರಂತರದ ನಾದ ಸಮೀಕರಣ ನೋಡಿಕೊಳ್ಳುತ್ತದೆ. ಹೀಗೆ ಅದು ಕೇವಲ ಶೃತಿ ಪರಿಮಿತ ವಾದ್ಯವಲ್ಲ; ಏಕತಾರಿಯಂತೆ ಹಾಡಿನ ಲಯವನ್ನನುಸರಿಸಿ ತಾಳದಗತಿಯನ್ನು ಕೊಡುವ ಟೀಕಾವಾದ್ಯದಂತೆ ಸಹಾ ವರ್ತಿಸುತ್ತದೆ.

ಚೌಡಿಕೆಯ ರಚನೆ ಸರಳವಾದದ್ದು. ಎಲ್ಲರೂ ಕಣ್ಗಂಡ ವಾದ್ಯವಾದ್ದರಿಂದ ಅದನ್ನು ವಿವರಿಸುವ ಅವಶ್ಯಕತೆ ಇಲ್ಲ. ಬಳ್ಳಾರಿ ಭಾಗದಲ್ಲಿ ಗೊಂದಲಿಗರು ಚೌಡಿಕೆಯಿಂದ ಶೃತಿ ಹೊರಡಿಸಲಿಕ್ಕಾಗಿ ಲೋಹದ ತಂತಿ ಬಳಸುವುದಿಲ್ಲ. ಆಡಿನ ಕರುಳನ್ನು ಹುರಿಗೊಳಿಸಿ ಬೀವು ಮಾಡಿಕೊಂಡು ಕಡ್ಡಿಯಿಂದ ನುಡಿಸುತ್ತಾರೆ. ಬೀವು ಲೋಹದ ಬಳಕೆಗೂ ಮುನ್ನಿನದಿರಬೇಕು. ಇನ್ನೊಂದು ವಿಶೇಷವೆಂದರೆ ಚರ್ಮವಾದ್ಯಗಳು ಕೇವಲ ಲಯ ತಾಳಗಳ ಸಂಗಾತಿಗಳಾಗಿರುವಾಗ ಚರ್ಮವೊಂದನ್ನೇ ಬಳಸಿಕೊಂಡು ಬಾರಿಕಿ ಚೌಡಿಕೆಗೆ ಹೊರತಾದ ಆಧಾರ ಸ್ವರಕೊಡುವ ವಾದ್ಯವಾಗಿ ರೂಪಿಸಿರುವುದೂ ಒಂದು ಕೌಶಲ್ಯವೇ ಸರಿ.

ಉತ್ತರ ಕರ್ನಾಟಕದಲ್ಲಿ ಚೈಡಿಕೆ-ವಾದ್ಯದ ಬದಲು ಬಹುತೇಕ ಇದೇ ಆಕಾರದ, ಅಳತೆಯಲ್ಲಿ ಚಿಕ್ಕದಾದ, ತಂತಿವಾದ್ಯ ಬಳಸುವ ರೂಢಿಯಿದ್ದು ಇದನ್ನು ತುಂತುಣಿ ಎಂದು ಕರೆಯುತ್ತಾರೆ.

ಸಮಾಳ

ಸಮಾಳನ್ನು ಚಮಾಳ ಸಂಬಾಳವೆಂದು ಕರೆಯುವುದೂ ಉಂಟು. ಇದು ಗೊಂದಲಿಗರ ಹಾಡಿಕೆಗೆ ಚೌಡಿಕೆಯ ಹಾಡಿಗೆಯೇ ಪ್ರಮುಖವಾದ್ಯ; ಹಾಡಿನ ಕ್ರಮಬದ್ಧ ಕಾಲದ ಪ್ರಮಾಣದ ಗತಿಯನ್ನಾಧರಿಸಿ ವಾದನಗೊಳ್ಳುವ ಈ ಉಪಕರಣ, ಪುರವಂತರು ವೀರಗಾಸೆಯವರು ಬಳಸುವ ಸಮಾಳಗಳ ಕಿರುಗಾತ್ರವಾಗಿದೆ.

ಬಿಡಿ ತಬಲಾಗಳೆರಡು ಜೋಡುಗೊಂಡಂತೆ ಸಮಾಳದ ಆಕಾರವಿರುತ್ತದೆ; ಮಣ್ಣು, ಕಟ್ಟಿಗೆ, ಲೋಹಗಳ ಒಳವುಗಳಿಗೆ ತೆಳುಚರ್ಮದ ಮುಚ್ಚಿಗೆಗಳನ್ನು ಬಿಗಿದುನಾದ ಸಾಂದ್ರತೆ ಹೊರಡುವಂತೆ ಮಾಡಲಾಗುತ್ತದೆ. ಸಂಬಾಳಗಳಲ್ಲಿ ಕರುಪಣಿ ಸಂಬಾಳ ಮತ್ತು ತಾಳದ ಸಂಬಾಳವೆಂದು ಎರಡು ವಿಧ. ಕುರುಪಣಿ ಸಂಬಾಳವನ್ನು ಎರಡೂ ಕೈಗಳಲ್ಲಿ ಹಿಡಿದ ಎರಡು ಕಡ್ಡಿಗಳಿಂದ ನುಡಿಸಬೇಕಾಗುತ್ತದೆ. ಈ ವಾದ್ಯ ಸಂಪೂರ್ಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಬಳ್ಳಾರಿ ಭಾಗದಲ್ಲಿ ಪ್ರಚಲಿತವಿರುವುದು ತಾಳದ ಸಂಬಾಳ. ಇದರ ಬಲಭಾಗ ಮಾತ್ರ ವಾದನದ ಬಳಕೆಗೆ ಬರುತ್ತದೆ. ಎಡಗಡೆಯದು ಕೇವಲ ಆ ವಾದ್ಯದ ಭಾರದ ಸಮತೂಕ ಕಾಯ್ದುಕೊಳ್ಲಲಿಕ್ಕಷ್ಟೇ ಉಪಯುಕ್ತ. ಸಂಬಾಳದ ಎರಡೂ ಹೋಳುಗಳ ಮಧ್ಯೆ ಲೋಹದ ತಾಳದ ಒಂದು ಹೋಳು ಬಿಗಿಯಲ್ಪಟ್ಟಿರುತ್ತದೆ. ತನ್ನ ನಡುವಿಗೆ ಈ ವಾದ್ಯವನ್ನು ಕಟ್ಟಿಕೊಂಡು ಕತೆಗಾರ ಎಡಗೈಯಲ್ಲಿ ತಾಳದ ಇನ್ನೊಂದು ಹೋಳು ಹಿಡಿದು ನುಡಿಸುತ್ತಿದ್ದರೆ ಬಲಗೈಯಿಂದ ಸಮಾಳದ ಬಲಭಾಗವನ್ನು ಬಾರಿಸುತ್ತಾನೆ. ಆತ ತನ್ನ ಹಾಡಿನ ತಾಳಲಯಕ್ಕನುಸರಿಸಿ ಏಕಕಾಲದಲ್ಲಿ ಆ ಎರಡೂ ವಾದ್ಯಗಳನ್ನು ನುಡಿಸುವ ತಾಳಗಳು ಸಾಮಾನ್ಯದ್ದಲ್ಲ. ಗೊಂದಲಿಗರ ಈ ಪರಿಯ ವಾದನದಲ್ಲಿ ಸಂಬಾಳ ಮತ್ತು ತಾಳಗಳು ಏಕಹಸ್ತ ವಾದ್ಯಗಳಾಗುತ್ತವೆ. ಕತೆಗಾರನದು ಒಂಟಿ ಕೈವಾದನವಾದರೂ ಅವುಗಳ ಗತ್ತುಗಳಲ್ಲಿ ವೈವಿಧ್ಯವಿರುತ್ತದೆ.

ಗೊಂದಲಿಗರ ಸಂಬಾಳ ವಾದನಕ್ಕೆ ನಿರ್ದಿಷ್ಟ ತಾಳಗಳ ಹೆಸರಿಲ್ಲ- ಅವುಗಳ ಗತಿ ಗತ್ತುಗಳನ್ನೂ ಅವರು ಒಂಟಿ ತಾಳ ಇಲ್ಲದೆ ಏಕ್ ತಾಳ ಮತ್ತು ಜೋಡು ತಾಳಗಳೆಂದು ಗುರುತಿಸಿಕೊಂಡಿದ್ದಾರೆ. ತಮ ವಾದನದ ಅಕ್ಷರಮಾತ್ರೆಗಳನ್ನೂ ಹೆಸರಿಸಲಾರದ ಅವರು ಕೆಹರವಾ ಮತ್ತು ದಾದ್ರಾ ತಾಳಗಳನ್ನೂ ಬಳಸುವುದೇ ಹೆಚ್ಚು. ಕಥೆಗಾರ ಸಂಬಾಳ ನುಡಿಸುವ ಗತಿಗೆ ಧ್ವನಿಯ ವ್ಯತ್ಯಾಸದ ಯಮಕ ನೀಡಲಿಕ್ಕಾಗಿ ಅದನ್ನು ಸಾಂದರ್ಭಿಕವಾಗಿ ತನ್ನೆರಡೂ ತೊಡೆಗಳ ಮಧ್ಯೆ ಇರಿಸಿಕೊಂಡು ಬಿಗಿದ ದಾರಗಳನ್ನು ಅವುಕುತ್ತಾನೆ. ಇದು ಅನುಕರಣ ಮತ್ತುಇ ನಿರಂತರ ಅಭ್ಯಾಸದಿಂದ ಸಿದ್ಧಿಸುವ ವಾದನ.

ಬಿಡಿ ಪದಗಳು

ಗೊಂದಲಿಗರು ತಮ್ಮ ಆಟದಲ್ಲಿ ಆಗಾಗ ರಾಗ ವೈವಿಧ್ಯಕ್ಕಾಗಿ ಸಂದರ್ಭಗಳನ್ನು ಕಲ್ಪಿಸಿಕೊಂಡು ಬಳಸಿಕೊಳ್ಳುವ ಜನಪ್ರಿಯ ಬಿಡಿ ಪದಗಳಲ್ಲಿ ಲಾವಣಿ, ತತ್ವಪದ ಜೋಗುಳ, ಆರತಿಪದ ಭಜನೆ ಮುಂತಾದವುಗಳಿರುತ್ತವೆ. ಇವರು ಹೆಚ್ಚಾಗಿ ಬಳಸಿ ಕೊಳ್ಳುವುದು ಜನಜನಿತ ಶಿಶುನಾಳ ಶರೀಫರು ಗೋಪಾಲದುರದುಂಡಿ, ಪುರಂದರದಾಸರ ರಚನೆಗಳನ್ನೊಂದೇ ಅಲ್ಲ ಕಬೀರರ ಹಿಂದೀ ಭಜನೆಗಳನ್ನೂ ಬಳಸಿಕೊಳ್ಳುತ್ತಾರೆ. ಸತಿ ಶಿವಲೋಚನೆಯ ಕತೆಯಲ್ಲಂತೂ ರಂಭಾವತಿ ಸೋಳೆ ಉರ್ದು ಶೃಂಗಾರ ಪದಹಾಡಿ ರಾಜಕುಮಾರನನ್ನು ಮೋಹದ ಬಲೆಯಲ್ಲಿ ಕೆಡವಿಕೊಳ್ಳುವ ಪ್ರಸಂಗವಿದೆ. ಆ ಹಾಡುಗಳ ಸಾಹಿತ್ಯ ಮಾತ್ರ ಮೂಲಕ್ಕೆ ಪ್ರಾಮಾಣಿಕವಾಗಿರುವುದಿಲ್ಲ. ಅವರು ತಮ್ಮ ಆಟಗಳಲ್ಲಿ ಅಪ್ರಾಸಂಗಿಕವಾಗಿ ತತ್ವಪದಗಳನ್ನು ತುರುಕುವುದೂ ಇದೆ.

ಶಿವಲೋಚನೆಯ ಕತೆಯಲ್ಲಿ ಗೌಡೇರು ನೀರ ತರ ಹೋಗುವಾಗ ಹೇಳುವ “ವಾರಗೀಗೆಳಿತೇರು ನೀರಿಗೆ ಬರ್ರೆವ್ವಾ ತಂಗೀ” ಮತ್ತು “ತೇರು ಸಾಗುತೈತೆ ನೋಡ ಬನ್ನಿರಿ”…….. ಪದಗಳು ಇದಕ್ಕೊಂದು ನಿದರ್ಶನ.

ರಾತ್ರಿಯ ತಮ್ಮ ಆಟಗಳಲ್ಲಿ ಬಳಸುವ ಬಿಡಿ ಹಾಡುಗಳನ್ನೇ ಗೊಂದಲಿಗರು ಹಗಲು ಹೊತ್ತಿನಲ್ಲಿ ಭಿಕ್ಷೆ ಬೇಡುವಾಗ ಹಾಡುತ್ತಾರೆ.

ಆದರೆ ಕಿನ್ನರಿ ಜೋಗಿಗಳಂತೆ ಇವರು ಸಿನೇಮಾ ಹಾಡುಗಳನ್ನೇನೂ ಈವರೆಗೆ ಬಳಸಿ ಕೊಂಡಿರುವುದನ್ನು ನಾನು ಕಂಡಿಲ್ಲ.

ಕಥಾರಂಭಮುಕ್ತಾಯ

ಹೊಲ-ಮನೆ ಕೆಲಸಗಳನ್ನು ಪೂರೈಸಿಕೊಂಡು ರಾತ್ರಿ ಹತ್ತರ ನಂತರ ಜನರು ಗೊಂದಲಿಗರಾ ಆಟಕ್ಕೆ ನೆರೆಯುವುದು ವಾಡಿಕೆ. ತಮ್ಮ ನಿಗದಿತ ವೇಷಗಳೊಂದಿಗೆ ರಂಗ ಸ್ಥಳವೇರಿದ ಕಥೆಗಾರ ಮತ್ತು ಹಿಮ್ಮೇಳಿಗ ದೈವಕ್ಕೆ ನಮಿಸಿ ತಾವು ಬಲ್ಲ ಕತೆಗಳ ಪಟ್ಟಿಯನ್ನು ಒಪ್ಪಿಸುತ್ತಾರೆ. ಆಟ ಏರ್ಪಡಿಸಿದವರಲ್ಲೊಬ್ಬರು ಹಿಂದಿನ ದಿನವೇ ನಿಶ್ಚಿತಗೊಂಡಿದ್ದ ಆಟದ ಹೆಸರನ್ನು ಬಹಿರಂಗ ಪಡಿಸುತ್ತಾರೆ. ಕಥೆಗಾರ ಮತ್ತು ಆತನ ಹಿಮ್ಮೇಳಿಗ ಚೌಡಿಕೆಯ ಶೃತಿಗೆ ತಮ್ಮ ಕಂಠಗಳನ್ನು ಹೊಂದಿಸಿಕೊಂಡು ದೇವತಾಸ್ತುತಿ ಪದ ಹಾಡುತ್ತಾರೆ.

ಕಥಾರಂಭದ ಮಾತುಗಳೇ ಆಟದ ಪೂರ್ವರಂಗದ ಪೀಠಿಕೆಯಾಗುತ್ತವೆ. ಆ ಮಾತುಗಳೇ ರಾಜ-ರಾಣಿ, ಮಕ್ಕಳಿದ್ದರೆ ಅವರ ಪರಿಚಯದೊಂದಿಗೆ ಕ್ರಿಯೆಯ ಚೌಕಟ್ಟು ನಿರ್ದೇಶಿತವಾಗಿ ವಸ್ತುನಿಷ್ಠತೆ ತೊಡಗುತ್ತದೆ. ಪುಟ್ಟ ವಾಕ್ಯಗಳಿಗೆ ಧ್ವನಿ-ಲಯ ತುಂಬಿ ಇಬ್ಬರೊಂದಾಗಿ ನಿರೂಪಿಸುವ ತಮ್ಮ ಮೊದಲ ಆಪ್ತ ಧಾಟಿಯ ಮಾತಿನಿಂದಲೇ ಅವರು ಪ್ರೇಕ್ಷಕರನ್ನು ತಮ್ಮ ಸ್ವಾಧೀನಗೊಳಿಸಿಕೊಳ್ಳುತ್ತಾರೆ. ಆಟ ಆರಂಭಗೊಂಡ ನಂತರ ಮಧ್ಯಂತರದಲ್ಲಿ ವಿಕೋಪದ ಉತ್ಕಟತೆ ತೋರಿ ಮುಕ್ತಾಯದಲ್ಲಿ ಅನಿರೀಕ್ಷಿತ ಆದರೆ ಅಪೇಕ್ಷಿತ ರೀತಿಯಲ್ಲಿ ಸುಖಾಂತವಾಗುತ್ತದೆ.

ಆಟದ ದೀರ್ಘತೆಗೆ ಕಾರಣ

ಗೊಂದಲಿಗರ ಆಟ ಇಡೀ ರಾತ್ರಿಯ ಅವಧಿಯದಾಗಲು ಕಾರಣವೆಂದರೆ

 • ಹಾಡುಗಳ ಸಂಖ್ಯೆಯನ್ನು ಹೆಚ್ಚಿಸುವುದು.
 • ಹಾಡಿನಲ್ಲಿ ಹೇಳಿದ್ದನ್ನೇ ಮಾತುಗಳಲ್ಲಿ ಪುನರಪಿಗೊಳಿಸುವುದು.
 • ಕನಿಷ್ಠ ಮೂರು-ನಾಲ್ಕು ಅಡ್ಡ ಕಥೆಗಳನ್ನು ಬಳಸುವುದು.
 • ಆಟದ ಮಧ್ಯೆ ಏಳೆಂಟು ತತ್ವಪದ, ಲಾವಣಿಗಳನ್ನು ಹಾಡುವುದು.

ಇವೆಲ್ಲವುಗಳನ್ನು ಕೈಬಿಟ್ಟರೆ ಮೂಲ ಆಟ ಆಡಲು ೨-೨೧/೨ ತಾಸಿನ ಅವಧಿ ಸಾಕಾಗುತ್ತದೆ.

ಈಗಿನ ಪ್ರೇಕ್ಷಕರ ಅಭಿರುಚಿ, ಅಭ್ಯಾಸ, ಅಪೇಕ್ಷೆಗಳನ್ನು ಹೊಂದಿಕೊಂಡು ಗೊಂದಲಿಗರ ಆಟಗಳು ಕೂಡಾ ಕಂಪೆನಿ ನಾಟಕಗಳಂತೆ ಮೂರು-ಮೂರುವರೆ ತಾಸುಗಳ ಅವಧಿಗಿಳಿದಿವೆ. ಇದರಿಂದಾಗಿ ಅವರ ಆಟಗಳು ಹೆಚ್ಚು ಬಂಧುರಗೊಳ್ಳಲು ಅನುಕೂಲವಾಗುತ್ತದೆ.

ಪಾತ್ರ ಪೋಷಣೆವಿಶ್ಲೇಷಣೆ

ಆಟದ ಘಟನೆಗಳನ್ನು ಅನುಕ್ರಮಗೊಳಿಸಿ ಏಕಸೂತ್ರತೆಯ ಬಂಧವಿತ್ತು ಹುಟ್ಟಿಸುವ ಪಾತ್ರಗಳು ಕಥಾನಕ್ಕೆ ಕಾರಣವಾಗುತ್ತವೆ; ಅವಲ್ಲೆವಕ್ಕೂ ವಿಶಿಷ್ಟ ವೈಯಕ್ತಿಕ ಇರುತ್ತದೆ. ನಟರಿಲ್ಲವಾಗಿ ಕಥೆಗಾರ ಮತ್ತು ಹಿಮ್ಮೇಳಿಗರೇ ನಿರೂಪಣೆಯ ಮೂಲಕ ಎಲ್ಲ ಪಾತ್ರಗಳ ವೇಷಭೂಷಣಗಳನ್ನು ವರ್ಣಿಸಿ ಅವರ ಆಕೃತಿ ಕಟ್ಟಿಕೊಡುತ್ತಾರೆ. ಅಭಿನಯಕ್ಕಳವಡಿಸಲಾಗದ ಯುದ್ಧ, ಸಾವು, ಪಟ್ಟಾಭಿಷೇಕ ಮುಂತಾದವುಗಳನ್ನು “ಯುದ್ಧ ಮಾಡಿದರು” “ಸತ್ತರು” “ಪಟ್ಟಕೊಟ್ಟರು” ಮುಂತಾಗಿ ಕಥಿಸುತ್ತಾರೆ. ಕುರೂಪ, ಸುರೂಪಗಳನ್ನು ಅವರು ವರ್ಣಿಸುವಾಗ ತೋರುವ ಕಲ್ಪಕ ಶಕ್ತಿಯಲ್ಲಿ ಆಯಾ ಪಾತ್ರಗಳ ಒಳಗನ್ನು ಬಿಂಬಿಸುವ ರೀತಿ ಪ್ರತಿಭೆ ತೋರುತ್ತದೆ.

ಗೊಂದಲಿಗರ ಆಟದ ಪಾತ್ರಗಳ ಚಿತ್ರಶಾಲೆ ದೊಡ್ಡದು. ಚಹರೆ ಇಲ್ಲದ ಪಾತ್ರವೊಂದೂ ಅದರಲ್ಲಿ ನಮಗೆ ಕಾಣುವುದಿಲ್ಲ. ಅವೆಲ್ಲವೂ ಮನುಷ್ಯನ ಅಂಕು-ಡೊಂಕು, ಆಶೆ-ಅಕಾಂಕ್ಷೆ, ಸುಖ-ದುಃಖ ಮನೋದೃಷ್ಟಿಗಳ ಪ್ರತಿನಿಧಿಗಳು. ಅವು ಭೌತಿಕ ಪ್ರಪಂಚದ ಪರಿಧಿಯಲ್ಲೇ ವರ್ತಿಸುತ್ತಾ ಮಾನವ ಸ್ವಭಾವದ ಆಳಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ; ಒಂದಕ್ಕೊಂದು ಚಾಲನೆ ಕೊಡುತ್ತವೆ. ಗೊಂದಲಿಗರು ತಮ್ಮ ಎಲ್ಲಾ ಪಾತ್ರಗಳನ್ನು ಸಂಪೂರ್ಣ ಬಲ್ಲವರಾದ್ದರಿಂದಲೇ ಅವುಗಳನ್ನು ಮನೋವಿಜ್ಞಾನಿಯ ಪರಿಜ್ಞಾನದಿಂದ ಪರಿಚಯಿಸುತ್ತಾರೆಯೇ ಹೊರತು ಅವನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ.

ಗೊಂದಲಿಗರದ್ದು ಸ್ವಯಂ ಬಡತನದಿಂದ ಬಳಲುವ ತಿರಿದುಂಬ ಬದುಕಾದರೂ ತಮ್ಮ ಆಟಗಳಲ್ಲಿ ಅವರು ಅದನ್ನು ಚಿತ್ರಿಸಿ ಹೋಗುವುದಿಲ್ಲ. ಈ ಪ್ರಪಂಚಿನ ಪುತ್ಥಳಿಗಳಾದ ರಾಜ-ರಾಣಿಯರನ್ನೇ ತಮ್ಮ ಕಥಾನಾಯಕ ನಾಯಕಿಯರನ್ನಾಗಿಸಿಕೊಳ್ಳುತ್ತಾರೆ. ಅವರ ಮೂಲಕವೇ ಲೋಕ ಜೀವನದ ವಿದ್ಯಮಾನಗಳನ್ನು ಜನಪದರ ಅರಿವಿಗೆ ತರುತ್ತಾರೆ. ಕಥಾನಾಯಕ ನಾಯಕಿಯರು ವಿಶೇಷ ಗುಣದವರು. ಪಾಂಡಿತ್ಯ, ಪ್ರತಿಭೆ, ಚೆಲುವಿಕೆಗಳಲ್ಲಿ ಅದ್ವಿತೀಯರು; ಧೀರೋದಾತ್ತರು; ಸುಖವಳಿದು ಕಷ್ಟ ಬಂತೆಂದು ಅಳಲುತ್ತಾ ಕೈಕಟ್ಟಿ ಕುಳಿತುಕೊಳ್ಳುವ ಹೆಂಬೇಡಿಗಳಲ್ಲ; ಎಂಥ ದುರ್ಧರ ಪ್ರಸಂಗದಲ್ಲೂ ತಮ್ಮ ನ್ಯಾಯ+ನಿಷ್ಠುರತೆ, ಸತ್ಯಸಂಧತೆ, ಸಾತ್ವಿಕತೆ, ಪರೋಪಕಾರ ಬುದ್ಧಿ, ಧೈರ್ಯ-ಸಾಹಸಗಳನ್ನು ಬಿಟ್ಟುಕೊಟ್ಟವರಲ್ಲ; ಸಾವಿಗಂಜುವ ಖಳರಲ್ಲ. ತಮ್ಮ ಜೀವನ ಮೌಲ್ಯಗಳ ಪಾಲನೆಯಲ್ಲಿ ಸತ್ತು ಮತ್ತೆ ಬದುಕಿ ಬಾಳುವ ಬಲ್ಲಾಳುಗಳು. ಸೋಲರಿಯದ ಸಾಹಸಿಗಳು. ಹೀಗೆಂದ ಮಾತ್ರಕ್ಕೆ ರಾಜರ ಸ್ವಭಾವಗಳಲ್ಲಿ ವೈವಿಧ್ಯವಿಲ್ಲದಿಲ್ಲ ಅವರಲ್ಲಿ ಕೆಲವರು ತಮ್ಮ ಮೈಸುಖಕ್ಕಾಗಿ ಅಮಾಯಕ ಅಸಹಾಯಕರನ್ನು ಬಲಿಗೊಡುವ ಅಮಾನುಷರಿದ್ದಾರೆ. ಸುಳ್ಳು, ನಯವಂಚನೆ, ಮೋಸ, ಕಪಟ, ಕುಟಿಲ ಕಾರಾಸ್ಥಾನ, ಕ್ರೌರ್ಯ-ಸೇಡು, ಅನಿಮಿತ್ತ ವೈರ ಮುಂತಾದವುಗಳಿಗೆ ದಾಸರಾದವರಿದ್ದಾರೆ.

ಕಥಾ ಪ್ರಸಂಗದ ಬಾವಾಗಳು, ಪರಮೇಶ್ವರ-ಪಾರ್ವತಿ, ದೇವಕನ್ಯೆಯರು ಉತ್ತಮರ ಹಾನಿಯನ್ನು ಕಂಡು ಮರುಗುವವರು. ಆಪತ್ಕಾಲದಲ್ಲಿ ತಕ್ಕ ನೆರವಿನ ಕೃಪೆ ತೋರಿ ಮಾನವತೆಯನ್ನು ಎತ್ತಿ ಹಿಡಿಯುವಂಥವರು.

ಲೋಕ ವಾಸ್ತವದ ಎಲ್ಲೆ ಮೀರಿದ ಇವರೊಂದೇ ಅಲ್ಲ ರಾಕ್ಷಸರಂಥವರೂ ಕೂಡಾ ಮಾನವನ ಮನಸ್ಸಿನ ಕಲ್ಪನೆಯಿಂದ ಸೃಷ್ಟಿಗೊಂಡವರೆಂಬುದು ಸ್ವಯಂ ಸಿದ್ಧ. ಸಾಮೂಹಿಕ ಮನಸ್ಸು ಆಶಿಸಿದ, ಕಲ್ಪಿಸಿದ, ಭಾವಿಸಿದ ಈ ಪಾತ್ರಗಳು ಗೊಂದಲಿಗರ ಆಟದಲ್ಲಿ ಅತ್ಯಂತ ಅವಶ್ಯಕ ಕಥಾ ಸಾಮಗ್ರಿಗಳಾಗಿ ವರ್ತಿಸುತ್ತವೆ. ಕಥಾನಾಯಕ ನಾಯಕಿಯರನ್ನು ವಿಜೃಂಭಿಸಲು ಪೋಷಕ ಸಾಮಾನ್ಯ ಪಾತ್ರಗಳು ಪ್ರಾಮಾಣಿಕವಾಗಿ ಶ್ರಮಿಸುತ್ತವೆ. ಇಷ್ಟೇ ಅಲ್ಲ ಪಶು-ಪಕ್ಷಿಗಳಂಥ ಅನ್ಯ ಜೀವರಾಶಿ ಕೂಡ ಮಾನವ ಕ್ರಿಯೆಗಳನ್ನು ಆರೋಪಿಸಿಕೊಂಡು ಜೀವ ಕಾರುಣ್ಯ ತೋರುವುದೂ ಗೊಂದಲಿಗರ ಆಟಗಳಲ್ಲಿದೆ.

ಇನ್ನೊಂದು ವಿಷಯ; ಕುದುರೆ ಮತ್ತು ಅದರ ಸವಾರ ಇತರ ಜಾನಪದ ಕತೆಗಳಂತೆ ಗೊಂದಲಿಗರ ಆಟದಲ್ಲೂ ಪಾತ್ರವಹಿಸುತ್ತಾರೆ. ಇವರಿಬ್ಬರೂ ಗ್ರಾಮೀಣ ಭಾರತೀಯ ಸಾಹಿತ್ಯ-ಕಲೆಗಳ ಸ್ಥಳೀಯ ಅಂತರ್ ಹಾರಾಟದ ಆಜ್ಞಾಧಾರಕ ವಾಹನವಾಗಿ ವರ್ತಿಸುತ್ತದೆ.

ಸ್ತ್ರೀ

ಗೊಂದಲಿಗರ ಆಟದ ಕಥಾವಸ್ತುವಿನಲ್ಲಿ ಸ್ತ್ರೀ ಪಾತ್ರ ಮುಖ್ಯವಾದದ್ದು. ಕಥೆಯ ಶೀರ್ಷಿಕೆಗಳಲ್ಲಿ ಸ್ತ್ರೀಯರ ಹೆಸರುಗಳೇ ಹೆಚ್ಚು ಶೋಷಣೆಯ ದೃಷ್ಟಿಯಿಂದ ಎಲ್ಲ ಕಥೆಗಳಲ್ಲೂ ಸ್ತ್ರೀಗೆ ಅಗ್ರಸ್ಥಾನ. ಹಾಗೆ ನೋಡಿದರೆ ಅವಳೇ ಎಂದಿನಿಂದಲೂ ಕೌಟುಂಬಿಕ ಸಮಸ್ಯೆಯಾಗಿದ್ದಾಳೆ. ಆಕೆಯೊಂದು ಸಾರ್ವಕಾಲಿಕ ಸಮಸ್ಯೆಯೂ ಹೌದು. ಇಂದಿಗೂ, ನಮ್ಮ ಸಾಮಾಜಿಕ ಅವಸ್ಥಾಂತರಗಳಲ್ಲೂ ಅವಳ ಪರಿಸ್ಥಿತಿ ಹೆಚ್ಚು ವ್ಯತ್ಯಯಗೊಂಡಿಲ್ಲದಿರುವುದನ್ನು ನಾವು ಕಾಣಬಹುದು. ನಮ್ಮ ಭಾರತೀಯ ಸಮಾಜದಲ್ಲಿ ಪುರುಷನಂತೆ ಸ್ತ್ರೀಗೆ ಸ್ವಂತ ಜೀವನವೇನೋ ಇದೆ. ಆದರೆ ಇಂದಿಗೂ ಅವನಂತೆ ಅವಳಿಗೆ ಪ್ರತ್ಯೇಕ ವ್ಯಕ್ತಿತ್ವವಿಲ್ಲ. ಸ್ತ್ರೀಯು ಝೋಪಡಿಯಲ್ಲಿರಲಿ, ಏಳಂತಸ್ತಿನ ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ರಾಣಿ-ಮಹಾರಾಣಿಯಾಗಿರಲಿ ಅವಳ ತಲೆಯ ಮೇಲೆ ಸದಾ ಶಪಿತ ಶೋಷಣೆ, ಕ್ರೌರ್ಯ, ಹಿಂಸೆಗಳ ಕತ್ತಿ ತೂಗುತ್ತಿರುತ್ತದೆ. ಈ ಸಂಗ್ರಹದ ಆಟವೊಂದರಲ್ಲಿ ಪಾರ್ವತಿ ತನ್ನ ಪರಮೇಶ್ವರನ ಎದುರು ಉದ್ಗರಿಸಿರುವಂತೆ. “ಹೆಣ್ಣು ಬಾಳು ಸುಡಲಿ.” ಯಾಕೆಂದರೆ ಜೀವನ ಯಾತ್ರೆಯಲ್ಲಿ ಆಕೆಯ ಪಾಲಿಗೆ ಸಾಯಲೂ ಬಿಡದ ಕರ್ತವ್ಯದ ಭಾರ ಕಾಡುತ್ತಿರುತ್ತದೆ. ಆದರೂ ತನ್ನ ಬದುಕನ್ನು ಬಿಟ್ಟುಕೊಡದ ಜಾಗ್ರತ ಪ್ರಜ್ಞೆ ಆಕೆಯದು.

ಗೊಂದಲಿಗರು ತಮ್ಮ ಆಟಗಳಲ್ಲಿ ಸ್ತ್ರೀ ಜೀವನದ ವೇದನೆಗಳನ್ನು ಚಿತ್ತ ವೇದಕವಾಗಿ ಪ್ರಸ್ತುತಗೊಳಿಸುತ್ತಾರೆ. “ಶೀಲಾವತಿ” ಮತ್ತು “ಬಾಳಭೀಕ್ಷುಕ”ನ ಮಡದಿ “ಪದ್ಮಾವತಿ” ಪುರುಷ ಪ್ರಧಾನ ಸಮಾಜ ನೀಡಿದ ಹಿಂಸೆ, ತೊಂದರೆ, ಕ್ರೌರ್ಯ, ಯಾತನೆಗಳನ್ನು ಅನುಭವಿಸಿದ್ದು ಈ ಅಭಿಪ್ರಾಯಕ್ಕೆ ತಕ್ಕ ಉದಾಹರಣೆಯಾಗಿದೆ. ಅರಸರು ತಮ್ಮ ರಾಣಿಯರನ್ನು ತಿರಸ್ಕರಿಸಿದರೆ ಇಡೀ ರಾಜ್ಯವೇ ತಿರಸ್ಕರಿಸುತ್ತದೆ. ಅಂಥ ತಿರಸ್ಕೃತರು ಸ್ವಸಾಮರ್ಥ್ಯ, ಸಾಹಸ, ದೈವೀನೆರವುಗಳಿಂದ ತಮ ಪಾಲಿನ ಅಗ್ನಿದಿವ್ಯದಲ್ಲಿ ಯಶ ಪಡೆದು “ಸತ್ಯಮೇವ ಜಯತೇ” ಮಾತನ್ನು ಮೆರೆಯುತ್ತಾರೆ.

ಧರ್ಮಸಮ್ಮತ ಪಾತಿವ್ರತ್ಯದ ಸಾರ ಸಂಕೇತವಾಗಿರಲೆಂದು ಮದುವೆಯಾಗುವವರೆಗೆ ಸ್ತ್ರೀಯ ಲೈಂಗಿಕ ಪರಿಶುದ್ಧತೆಯ ಮೇಲೆ ಇಡೀ ಪುರುಷ ಸಮಾಜ ಕಾಳಜಿವಹಿಸುತ್ತದೆ. ಬ್ರಾಹ್ಮಣರಾದರೆ ಋತುಮತಿಯಾಗುವ ಮುನ್ನವೇ ಕನ್ನೆಯರ ಮದುವೆ ಮುಗಿಸತಕ್ಕದ್ದು. ರಾಜರಾದರೆ ಹನ್ನೆರಡು ವರ್ಷ ತುಂಬುತ್ತಲೇ ತಮ್ಮ ರಾಜಕುಮಾರಿಯರ ಮದುವೆ ಮಾಡಿಕೊಟ್ಟು ಪುರುಷ ಸಮಾಜದ ಪ್ರತಿಷ್ಠೆಯನ್ನು ಗಂಡನ ಮನೆಯವರಿಗೆ ವರ್ಗಾಯಿಸಿತಕ್ಕದ್ದು. ಒಂದು ಪಕ್ಷ ತವರು ಹಾಗೂ ಗಂಡನ ಮನೆಗಳೆರಡೂ ವರ್ಜ್ಯವಾಗುವ ದುರ್ಧರ ಪ್ರಸಂಗವೇನಾದರೂ ಬಂದರೆ (ಹಾಗೆ ಬರುವುದೇ ಹೆಚ್ಚು) ಸ್ವಯಂ ನಾರಿಯೇ ತನ್ನ ಶೀಲವನ್ನು ಕಾಪಾಡಿಕೊಳ್ಳತಕ್ಕದ್ದು. ಇದನ್ನು “ಶೀಲಾವತಿ” ಮತ್ತು “ಬಾಳಭಿಕ್ಷುಕ” ಕಥಾವಸ್ತುಗಳು ಕಥಿಸುತ್ತವೆ.

ರಾಜರುಪ್ರಜೆಗಳು

ಗೊಂದಲಿಗರ ಆಟದಲ್ಲಿ ರಾಜ್ಯವೆಂದರೆ ಒಂದು ಪುಟ್ಟ ಪಟ್ಟಣ. ಆ ರಾಜ್ಯದ ಕೇಂದ್ರ ವ್ಯಕ್ತಿ ರಾಜ. ಹಿಡಿಂಬ, ಬರ, ವೈರಿ ರಾಜರ ಉಪಟಳಗಳಿಂದ ಪ್ರಜಾವರ್ಗವನ್ನು ಸಕಾಲದಲ್ಲಿ ಕಾಪಾಡುವುದು ಆತನ ಹೊಣೆ. ಆತನ ಕ್ಷೇಮಾಭ್ಯುದಯ ಪ್ರಜರಿಗೆ ಸಂಬಂಧಿಸಿದ ಸಂಗತಿಯಾದ್ದರಿಂದ ಪರಸ್ಪರರಲ್ಲಿ ಸುವ್ಯವಸ್ಥಿತ ಸಂಬಂಧವಿರುತ್ತದೆ. ಅದು ಕೌಟುಂಬಿಕ ಸ್ವಭಾವದ್ದು. ಎಲ್ಲ ಸುಖ-ದುಃಖಗಳಲ್ಲೂ ಉಭಯತರೂ ಪಾಲುದಾರರು. ರಾಜರು ಪ್ರಜರ ತಂದೆ, ಪ್ರಜರು ರಾಜರಿಗೆ ಮಕ್ಕಳ ಸಮಾನ. ಅರಮನೆಯ ಆಗುಹೋಗುಗಳು ಪ್ರಜರ ಮನೆಗಳವೂ ಹೌದು. ರಾಜನ ವೈಯಕ್ತಿಕ ಅಸಂಗತ ವರ್ತನೆಗಳನ್ನು ಒಪ್ಪದಿದ್ದರೂ ಅವರು ಎದುರು ಬಿದ್ದು ವಿರೋಧಿಸುವವರಲ್ಲ.

ರಾಜರಿಗೆ ಸಂತಾನ ಫಲವಿಲ್ಲವಾದರೆ ತಮಗೆಲ್ಲ ಕೇಡೆಂದು ಪ್ರಜರ ದೃಢ ನಂಬುಗೆ ರಾಣಿ ವಿಕಲಾಂಗಳಾದರೆ ರಾಜನ ಅಂಗವೂ ಮುಕ್ಕಾಗಿ ಶುಭಕಾರ್ಯಗಳಿಗೆ ಅನರ್ಹನಾಗುತ್ತಾನೆಂಬ ಭಾವನೆ. ರಾಜರ ಬೇಟೆ, ಮದುವೆ, ಪುತ್ರೋತ್ಸವ, ತೊಟ್ಟಿಲ ಕಾರ್ಯಗಳು ಪ್ರಜರಿಗೆಲ್ಲ ಸಂಬಂಧಿಸಿದಂಥವು. ರಾಜಕುಮಾರನಿಗೆ ಕನೆಯನ್ನು ಆಯ್ಕೆ ಮಾಡುವಾಗ ಪ್ರಜರ ಅಭಿಪ್ರಾಯವೂ ಮುಖ್ಯ. ಪ್ರಜರಲ್ಲಿ ಉಚ್ಚಕುಲದ ಬ್ರಾಹ್ಮಣರಿಂದ ಹಿಡಿದು ನೀಚಕುಲದವರೆಗೆ ಎಲ್ಲ ಪಂಗಡದವರೂ ಇದ್ದಾರೆ. ಬ್ರಾಹ್ಮಣರು ಪ್ರತಿಷ್ಠೆ ಪ್ರಭಾವಗಳ ದ್ಯೋತಕ. ಕತೆಗಳ ಆಗುಹೋಗುಗಳಲ್ಲಿ ಇವರಿಗೂ ಮಹತ್ವದ ಪಾತ್ರವಿದೆ; ಹುಟ್ಟಿದ ಕೂಸಿನ ಜನ್ಮ ನಕ್ಷತ್ರದ ಆಧಾರದ ಮೇಲೆ ತಮ್ಮ “ಹೊತ್ತಿಗೆ” ಯ ನೆರವಿನಿಂದ ಅರಸು ಮನೆತನದ ಶುಭಾಶುಭಗಳನ್ನು ಮುಂಗಂಡು ಅರ್ಥೈಸುವ ಪರಿಣತ+ಮತಿಗಳಿವರು. ಅಘಟಿತ ಘಟನೆಗಳನ್ನೂ ಅಲೌಕಿಕ ಹಸ್ತಕ್ಷೇಪಗಳನ್ನೂ ವಿವರಿಸಿ ಅವುಗಳಿಂದ ಪಾರಾಗುವ ದಿವ್ಯೋಪಾಯಗಳನ್ನು ಸೂಚಿಸುವ ವೆಂಕಭಟ್ಟರಂಥ “ದೋಸಿಗ”ರಲ್ಲಿ ರಾಜನಿಂದ ರಂಕನವರೆಗೆ ಎಲ್ಲರಿಗೂ ಅಚಲ ವಿಶ್ವಾಸ ಮತ್ತು ಶ್ರದ್ಧೆ.

ಸಂಗಮ್ಮನ ಹೆಸರಿಗೂ ಜಾನಪದ ಕಥೆ ಕಲಾ ಪ್ರಕಾರಗಳಿಗೂ ತುಂಬಾ ನಂಟು. ಶಿವಗಂಗೆಯಂಥ ಕಥನ ಕವನ, ಕಿನ್ನರಿ ಜೋಗಿಗಳ ಆಟ, ಅಜ್ಜಿ ಕಥೆಗಳಲ್ಲಿಯಂತೆ ಗೊಂದಲಿಗರ ಆಟಗಳಲ್ಲೂ ಆಕೆ ಇದ್ದಾಳೆ. ಬಾಳಭಿಕ್ಷುಕ ಆಟದಲ್ಲಂತೂ ಆ ಮುದುಕಿಯ ಪಾತ್ರ ತುಂಬಾ ಮಹತ್ವದ್ದು.

ಮಂತ್ರಿ

ಜಾನಪದ ಕತೆಗಳಂತೆ ಗೊಂದಲಿಗರ ಆಟಗಳಲ್ಲಿ ಕೂಡಾ ರಾಜನಿರುವೆಡೆ ಮಂತ್ರಿ ಇದ್ದೇ ಇರುತ್ತಾನೆ. ಅರಸನ ಕುಲ ಕ್ಷತ್ರಿಯ ಎಂದಿರುವಂತೆ ಇವನ ಕುಲದ ಉಲ್ಲೇಖ ಎಲ್ಲಿಯೂ ಇಲ್ಲ. ಅರಸನ ಮೇಧಾಶಕ್ತಿಯೇ ತಾನಾಗಿ ವರ್ತಿಸುವ ಇವನ ಧೀಮಂತಿಕೆ ಕರ್ತವ್ಯ ನಿಷ್ಠೆ, ವಿಧೇಯತೆಗಳು ಅದ್ಭುತವಾದವು. ವಿಶ್ವಾಸ, ನಿಸ್ವಾರ್ಥತೆ, ಸಮಯ ಪ್ರಜ್ಞೆಗಳ ಒಕ್ಕೂಟವೇ ಇವನು; ರಾಜ ಮತ್ತು ಪ್ರಜರಿಗಾಗಿ ಏನು ಮಾಡಲಿಕ್ಕೂ ಹಿಂದೆಗೆಯದ ವ್ಯಕ್ತಿ. ತನ್ನ ಪ್ರಭುವಿಗೆ ಏಕವಚನದಲ್ಲಿ ಸಕಾಲಿಕ ಎಚ್ಚರಿಕೆ ನೀಡುವ ನ್ಯಾಯ ನಿಷ್ಠುರನಿದ್ದರೂ ಮಂತ್ರಿಯ ನಿರಂಕುಶ ಪ್ರವೃತ್ತಿಯ ತನ್ನ ರಾಜನ ತಲೆದಂಡದ ಮಾತಿಗೆ ತೆಪ್ಪಗಾಗುವುದೂ ಉಂಟು.

ರಾಕ್ಷಸರು

ಗೊಂದಲಿಗರ ಆಟಗಳ ರಾಕ್ಷಸರು ಇದೇ ಲೋಕದವರು. ಬಹುತೇಕ ಕ್ರೂರ ಸ್ವಭಾವದ ಸರ್ವಪ್ರಾಣಿ ಭಕ್ಷಕರು. ಮಾನವ ಪೀಡಕರಲ್ಲಿ ಮೊದಲಿಗರು. ಇವರಿಗೆ ಹಿಡಂಬಗಳೆಂಬ ಪರ್ಯಾಯ ನಾಮವೂ ಇದೆ. ಈ ಅಮಾನುಷರದು ಶಾಶ್ವತ ಸಂಸಾರವಲ್ಲ. ತಾತ್ಕಾಲಿಕ ಮೈಗರಜಿನದು. ದೇವರುಗಳಂತೆ ಇವರಿಗೂ ಈ ಮರ್ತ್ಯಲೋಕವೇ ಆಡುಂಬೊಲ. ಇಲ್ಲಿಯ ಮಾನವರಿಗೆ ಆ ಇಬ್ಬರೂ ಮೋಹಗೊಳ್ಳುತ್ತಾರೆ.

ನೇರ ಹೋರಾಟಗಳಲ್ಲಿ ರಾಕ್ಷಸರನ್ನು ಸೆದೆಬಡಿದು ಕೊಲ್ಲಲಾಗುವುದಿಲ್ಲ. ಇವರ ಪ್ರಾಣಗಳು ಗಡಿಗೆ, ಗೊಂಬೆ, ಮರಸೋಟಗಳಂಥ ಅನ್ಯ ವಸ್ತುಗಳು ಹಾಗೂ ಗಿಳಿಗಳಂಥ ಪಕ್ಷಿಗಳಲ್ಲಿರುವುದೇ ಹೆಚ್ಚು. ಇವುಗಳನ್ನು ನಾಶ ಮಾಡಿದಾಗಲೇ ಆ ಪೀಡಕರಿಗೆ ಸಾವು ಸಮನಿಸುತ್ತದೆ.

ಗೊಂದಲಿಗರ ಆಟಗಳಲ್ಲಿಯ ಹಿಡಂಬಗಳಲ್ಲಿ ಅಕ್ಕಂಬೋ ರಾಕ್ಷಸಿ ಮಾತ್ರ ಭೂತ ದಯೆಯುಳ್ಳವಳಾಗಿರುವುದು ಸೋಜಿಗದ ಸಂಗತಿ.

ತೋರಂಗಿ ಬಾವಾ

“ಇಚ್ಛಾಶಕ್ತಿಯಿಂದ ತಮ್ಮ ಅನಿಸಿಕೆಯನ್ನು ಅನ್ಯರ ಹೇರಬಹುದು; ಆಗುಹೋಗುಗಳನ್ನು ಬದಲಿಸಬಹುದು”- ಎನ್ನುವ ವ್ಯಕ್ತಿನಿಷ್ಠ ಭ್ರಮೆ ಮನುಷ್ಯನಲ್ಲಿ ಅವನ ಅನಾಗರಿಕ ಅವಸ್ಥೆಯಿಂದಲೂ ಉಳಿದು ಬಂದಿರುವುದನ್ನು ನಾವು ಕಾಣುತ್ತೇವೆ. ಇಂದಿಗೂ ಅದರ ಕೈಚಳಕ ಸ್ವಾಮಿಗಳನ್ನು, ಬಾವಾಗಳನ್ನು ಸೃಷ್ಟಿಸುತ್ತಲೇ ಇದೆ.

ಹಿಡಿಂಬಗಳಂಥ ಅಮಾನುಷರ ಎಲ್ಲ ವಿಧದ ಮಂತ್ರ, ಮಾಟ, ಮೋಸಗಳನ್ನು ನಿವಾರಿಸಿ ಸಜ್ಜನರಿಗೆ ನೆರವಾಗುವ ಬಾವಾಗಳಲ್ಲಿ ತೋರಂಗಿ ಬಾವಾ ಒಬ್ಬ ಅಸಾಮಾನ್ಯ ಮಾನವ ವ್ಯಕ್ತಿ. ಜನಸಂಪರ್ಕವಿಲ್ಲದ ಏಕಾಂತ ಸ್ಥಳದಲ್ಲಿ ಈತನ ವಾಸ. ಆಪತ್ತಿನಲ್ಲಿರುವ ಕಥಾನಾಯಕ ನಾಯಕಿಯರಿಗೆ ಈತ ಮಂತ್ರಿಸಿದ ಹರಳುಗಳನ್ನು ಕೊಡುತ್ತಾನೆ. ತನ್ನ ನೀಲಾಹೊತ್ತಿಗೆಯ ನೆರವಿನಿಂದ ಅಂಥವರಿಗೆ ಮಾರ್ಗದರ್ಶನ ಮಾಡುತ್ತಾನೆ. ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲವೆಂಬುದು ನೋಡುಗರಿಗೆ ಗೊತ್ತಿದ್ದರೂ ಕಥೆಗಳ ವಸ್ತು ಸ್ಥಿತಿ ಹುಟ್ಟಿಸುವ ಭ್ರಮೆ ಅದ್ಭುತ ಮಾಂತ್ರಿಕ ಶಕ್ತಿಯಿದೇ.

ಈ ಕಾಲ್ಪನಿಕ ವ್ಯಕ್ತಿಯ ಬಗ್ಗೆ ಗಢವಾಲಿ ಜಾನಪದ ಭಕ್ತಿಗೀತೆಗಳಲ್ಲಿ ಉಲ್ಲೇಖವಿರುವುದೊಂದು ವಿಶೇಷ. ಉತ್ತರ ಭಾರತದ ಜಾನಪದ ಸಾಹಿತ್ಯ ಸಂಪರ್ಕದಿಂದ ಈತ ನಮ್ಮ ಗೊಂದಲಿಗರ ಆಟಗಳಲ್ಲಿ ನುಗ್ಗಿರಬೇಕು.

ಅರಣ್ಯ

ನಿಸರ್ಗಕ್ಕೂ ಮಾನವನಿಗೂ ಅವಿನಾಭಾವ ಸಂಬಮ್ಧ, ನಿಸರ್ಗದ ಕೂಸು ಅವನು. ಅರಣ್ಯ ಆ ನಿಸರ್ಗದ ಒಂದು ಭಾಗವಾಗಿರುವಂತೆಯೇ ಮಾನವಲೋಕಕ್ಕೆ ವೈದ್ಯಶ್ಯವಾದ ಪ್ರಪಂಚವೂ ಹೌದು.

ಗೊಂದಲಿಗರ ಆಟಗಳಲ್ಲಿ ಬರುವ ರಾಜ್ಯಗಳ ಅಂಚಿಗೇ ಅರಣ್ಯ ಹೊಂದಿಕೊಂಡಿರುತ್ತದೆ. ಅದು ಕ್ರೂರ ಜೀವ-ಜಂತುಗಳಂತೆ ಕಳ್ಳರು, ರಾಕ್ಷಸರ ನಿಗೂಢ ಬೀಡು. ಅಲ್ಲಿ ನಡೆದ ಘಟನೆಗಳು ಚಿತ್ರ-ವಿಚಿತ್ರ. ಬೇಡರು ಹಿಂದೊಂದು ಕಾಲದಲ್ಲಿ ಅದನ್ನು ಭೇದಿಸುತ್ತಿದ್ದರು. ಅರಸರಾದವರು ವಿಶೇಷ ಸಂದರ್ಭಗಳಲ್ಲಿ ಮಾತ್ರ ನುಗ್ಗುತ್ತಿದ್ದರು. ಉಗಾದಿಯ ವಾರ್ಷಿಕ ಕರಿಬ್ಯಾಟಿಗಾಗಿ ಕಾಡು ಮೃಗಗಳ ಹದ್ದು ಮೀರಿದ ಉಪಟಳವನ್ನು ನೀಗುವುದಕ್ಕಾಗಿ ವ್ಯವಸ್ಥೆಯ ಸಂರಕ್ಷಕರವರು.

ವಸತಿಯೋಗ್ಯ ಸ್ಥಳ ಮಾನವ ನಿರ್ಮಿತವಾದರೆ ಅರಣ್ಯ ನಿಸರ್ಗನಿರ್ಮಿತ. ಇವರೆಡರ ಮಧ್ಯೆ ಸಂಘರ್ಷವಿರುವಂತೆ ಸಂಬಂಧವೂ ಇದೆ. ಉದಾಹರಣೆಗೆ ಪ್ರಸ್ತುತ ಸಂಗ್ರಹದ ಕತೆಗಳನ್ನು ನೋಡಬಹುದು.

 • ಮಂತ್ರಿ ಕಾಡಿನಲ್ಲಿ ಏಳುಜನ ರಾಣಿಯರ ಜೀವ ತೆಗೆಯದೆ ಕಣ್ಣು ಕಳೆಯುತ್ತಾನೆ. (ವಿಘ್ನಾವತಿ)
 • ಅರಸು ಪರಿವಾರ ನವದಂಪತಿಗಳನ್ನು ತ್ಯಜಿಸಿ ಹೋಗುವುದು ಅರಣ್ಯದಲ್ಲಿ. (ಬಾಳ ಭಿಕ್ಷುಕ)
 • ಪರಸತಿಯನ್ನು ಅಪಹರಿಸಿ ಶೀಲಗೆಡಿಸಲೆತ್ನಿಸುವುದು ಅರಣ್ಯದಲ್ಲಿ. (ಶೀಲಾವತಿ)
 • ರಾಜರು ತಮ್ಮ ರಾಜ್ಯದಲ್ಲಿ ಸರ್ವಶಕ್ತರಾದರೂ ಅಸಹಾಯಕರಾಗುವ ಏಕಮಾತ್ರ ತಾಣವೆಂದರೆ ಅರಣ್ಯ.
 • ದೂರದ ಹಾದಿಯ ಪಯಣಿಗರಿಗೆ ವಸ್ತಿ ಸ್ಥಳ ಅದು.
 • ಪರಿತ್ಯಕ್ತರಿಗೆ ದಾರಿತೋರುವ, ನೆರಳು ನೀಡುವ ಪಕ್ಷಿಗಳ ಬೀಡು ಅದು.
 • ಅಗಲಿದ ಕೌಟುಂಬಿಕ ಪರಿವಾರದವರನ್ನು ಮತ್ತೆ ಸಮಾಗಮಗೊಳಿಸುವ ತಾಣ ಅರಣ್ಯ.
 • ಹಲವು ಆಪತ್ತುಗಳಿಂದ ಅತ್ಮರಕ್ಷಣೆ ಮಾಡಿಕೊಳ್ಳಲು ಮರಚು ನೀಡುವ ರಕ್ಷಾವನ ಅದು.
 • ದುಷ್ಟ ಶಿಕ್ಷೆ ಶಿಷ್ಟ ಪರಿಪಾಲನೆ ಮಾಡುವ ಚಂಡಿಕಾದೇವಿ ಅಂಬಾಭವಾನಿಯ ಅಪರಾವತಾರ; ಆಕೆಯ ದೇವಸ್ಥಾನದ        ನೆಲೆಯೂ ಅರಣ್ಯವೇ. ಗೊಂದಲಿಗರು ತಮ್ಮ ಈ ಆರಾಧ್ಯ ದೈವತದಿಂದ ಕಥಾ ಪಾತ್ರಗಳ ವಿಪತ್ತುಗಳನ್ನು         ಸುಲಭದಲ್ಲಿ ಪರಿಹರಿಸುತ್ತಾರೆ.
 • ಮಕ್ಕಳ ಫಲವನ್ನು ಪರಾಮಾತ್ಮ ಕರುಣಿಸುವುದು ಅಡವಿಯಲ್ಲಿಯೇ ಇದು ಶಿವ ಶಿವೆಯರಿಗಿರುವ ಅರಣ್ಯ ಸಂಬಂಧವನ್ನು ಸೂಚಿಸುತ್ತದೆ.
 • ಕಥಾರಂಭ ಊರಲ್ಲಾದರೆ ಅದರ ಮುನ್ನಡೆಗೆ ಅಡವಿಯೇ ಆಡುಂಬೊಲ.

ಗೊಂದಲಿಗರ ಆಟಗಳಲ್ಲಿ ಅರಣ್ಯದ ಪ್ರಮುಖ ಪಾತ್ರವಿಲ್ಲದಂಥವೂ ಇವೆಯೆಂಬುದನ್ನು ಶಿವಲೋಚನೆ ಜಯರಾಣಿ, ಧರ್ಮವುಳ್ಳ, ಭೋಜರಾಜ, ವೀರಪರಾಕ್ರಮ ಮುಂತಾದವುಗಳಿಂದ ತಿಳಿಯಬಹುದು.

ನಗೆಗಾರಿಕೆಉಪಕತೆ

ಗೊಂದಲಿಗರ ಆಟಗಳಲ್ಲಿ ಕತೆಗೆ ಹೊಂದಿಕೊಂಡ ಹಾಸ್ಯವೂ ಇಲ್ಲದಿಲ್ಲ. ಹಲವು ಆಟಗಳಲ್ಲಿ ಪಾತ್ರಗಳ ವರ್ತನೆ. ನಗೆಗೆ ಕಾರಣವಾಗುತ್ತದೆಂಬುದಕ್ಕೆ ಅಡವಿಸಿಪಾಯಿ, ಕಳ್ಳರು ಉದಾಹರಣೆ, ತಮ್ಮ ನೋಡುಗರನ್ನು ನಗಿಸುವ ಸಂದರ್ಭಗಳನ್ನು ಅವು ವ್ಯರ್ಥ ಗೊಳಿಸುಕೊಳ್ಳುವುದಿಲ್ಲ. ಅಶ್ಲೀಲತೆಗೆ ಅವಕಾಶ ಕೊಡುವುದಿಲ್ಲ. ಒಮ್ಮೊಮ್ಮೆ ದುಷ್ಟ ಪಾತ್ರಗಳ ದುರವಸ್ಥೆಯ ದೃಶ್ಯಗಳೇ ನಗೆಯುಕ್ಕಿಸುತ್ತವೆ. ಹೆಚ್ಚು ನಗಬೇಕೆನ್ನುವವರಿಗಾಗಿ ಅಡ್ಡಕತೆಗಳಿವು. ಅವು ಹೊಟ್ಟೆ ಹುಣ್ಣಾಗುವಷ್ಟು ನಗಿಸುವುದರ ಜೊತೆಗೆ ಒಂದಲ್ಲ ಒಂದು ವಿಧದ ಸಂದೇಶವನ್ನೂ ಸಾರುತ್ತವೆ.

ಗೊಂದಲಿಗರು ತಮ್ಮ ಸುದೀರ್ಘ ಆಟಗಳಲ್ಲಿ ತತ್ವಪದ, ಲಾವಣಿಗಳಲ್ಲದೆ ಉಪಕತೆಗಳನ್ನು ಬಳಸಿಕೊಳ್ಳುತ್ತಾರೆ. ಒಂದು ಆಟದಲ್ಲಿ ನಾಲ್ಕೈದು ಹಾಡೂಗಳೂ ಮೂರು ನಾಲ್ಕು ಕತೆಗಳೂ ಇರುತ್ತವೆ. ಮೂಲಕತೆಗೆ ಸಂಬಂಧವಿಲ್ಲದ ಆ ಬಿಡಿಕತೆಗಳನ್ನು ಅಡ್ಡಕತೆಗಳೆಂದೂ ಕರೆಯುತ್ತಾರೆ. ಇವುಗಳನ್ನು ಬಳಸುವ ಉದ್ದೇಶ ಆಟದ ಏಕಮುಖ ಗಾಂಭೀರ್ಯವನ್ನು ಮುರಿಯಲೆಂದು; ಕೇವಲ ವೀರ ರೌದ್ರ ಕರುಣ ರಸಗಳಲ್ಲೇ ಮುಳುಗಿದ ತನ್ನ ಪ್ರೇಕ್ಷಕರ ಮನೋಭೂಮಿಕೆಗೆ ಹಾಸ್ಯರಸದಿಂದ ರಂಜಿಸಲೆಂದು. ಆದರೆ ಈ ಕತೆಗಳ ಗುರಿ ಕೇವಲ ಮನೋರಂಜನೆ ಮಾತ್ರವಲ್ಲ ಅವುಗಳ ನಗೆ ಲೇಪನದಲ್ಲಿ ಗಂಭೀರಾರ್ಥಗಳೂ ಇರುತ್ತವೆ.

ಮೂಲ ಆಟದ ಘಟನೆಗಳಲ್ಲಿ ಹೊಸತನ, ಸಮಕಾಲೀನತೆಗಳನ್ನು ತುಂಬಲೆಡೆ ಕಲ್ಪಿಸಿಕೊಳ್ಳಲಾಗದ ಸೃಜನಶೀಲ ಗೊಂದಲಿಗರು ತಮ್ಮ ಉಪಕತೆಗಳನ್ನು ಕಾಲಕಾಲಕ್ಕೆ ಹೇಗೆ ತತ್ಕಾಲೀನಗೊಳಿಸುತ್ತಾರೆಂಬುದಕ್ಕೆ ಜಗಳಗಂಟಿ ಜಕ್ಕವ್ವನ ಕತೆಯಲ್ಲಿ ಬಾವಿಯ ಬದಲು ಬೋರವೆಲ್ ಬಳಸಿಕೊಂಡಿರುವುದೊಂದು ಉದಾಹರಣೆ. ‘ಜಗಳಗಂಟಿ ಜಕ್ಕವ್ವ’ ಆತ್ಮ ವಿಸ್ಮೃತೆಯನ್ನು ಧ್ವನಿಸುವ ಅಡ್ಡಕತೆ; ಸ್ವಸ್ವರೂಪ ಜ್ಞಾನದ ಅಗತ್ಯವನ್ನು ತಿಳಿಸುವ ಮಾರ್ಮಿಕತೆಯೂ ಇದರಲ್ಲಿದೆ.

ಇಸೋಪನ ನೀತಿಕತೆಯ ಸಿಂಹ ಸ್ವಂತದ ಬಿಂಬವನ್ನೇ ವೈರಿಯೆಂದುಕೊಂಡು ಬಾವಿ ಹಾರಿದ ಕತೆಯಂತೆಯೇ ಬಾಹ್ಯಾಂತರಂಗಗಳ ವ್ಯತ್ಯಾಸ, ಆಂತರಿಕ ಸ್ಥಿತಿಯ ಅರಿವಿನ ಅವಶ್ಯತೆ, ಕೇವಲ ಬಾಹ್ಯಕ್ಕೆ ಬೆಲೆಕೊಟ್ಟರಾಗುವ ಅಪಾಯ ಇವುಗಳನ್ನೂ ಈ ಕತೆ ಮನವರಿಕೆ ಮಾಡಿಕೊಡುತ್ತದೆ. ಇದೇ ರೀತಿ ದುರಾಶೆಯ ರೈತ ಹೈಬ್ರಿಡ್ ಜೋಳದ ಬೆಳೆ ತೆಗೆವ ಪ್ರಕರಣ ಕೂಡಾ. ಈ ಕತೆಯಲ್ಲಿಯೂ ಅರ್ಥಸಂಪತ್ತಿದೆ. ಔದಾರ್ಯವನ್ನು ತೋರಿದ ಅಂಬಾದೇವಿಗೇ ಮೋಸಮಾಡಹೋದ ಅವನಿಗೊದಗಿದ ದುರವಸ್ಥೆ ನಗೆಯೊಂದಿಗೆ ಮರುಕ ಹುಟ್ಟಿಸುತ್ತದೆ. ದೇವರು ಕೊಟ್ಟು ನೋಡುವನು; ಕಸಿದುಕೊಂಡೂ ನೋಡವನೆಂಬದಕ್ಕೆ ಉತ್ಕೃಷ್ಟ ದೃಷ್ಟಾಂತ ಕತೆ ಇದು. ಅಪ್ರತ್ಯಕ್ಷವಾಗಿ ತಮ್ಮ ಅಂಬಾಭವಾನಿಯ ಮಹಿಮೆಯನ್ನು ಸಾರುವ ಧಾರ್ಮಿಕ ಕತೆಯೂ ಹೌದು.

ಕತೆಗಳು ಮುಕ್ತಾಯದಲ್ಲಿ ನೀತಿಯ ತಾತ್ಪರ್ಯ ಹೇಳಿ ಆಟದ ಪರಿಸರಕ್ಕೆ ಹೊಂದಿಕೊಳ್ಳುತ್ತವೆ. ಹೀಗೆ ಅಡ್ಡಕತೆಗಳಿಗೆ ತಮ್ಮದೇ ಅಸ್ತಿತ್ವವಿದ್ದರೂ ತಮ್ಮ ಮಹತ್ವದೊಂದಿಗೆ ಮೂಲಕತೆಗಳ ಸಂದೇಶಕ್ಕೆ ತಮ್ಮ ದನಿಯನ್ನೂ ಹೊಂದಿಸಿಕೊಳ್ಳುತ್ತಿರುವ ಮೂಲಕ ಬಾಂಧವ್ಯ ಕುದುರಿಸಿಕೊಳ್ಳುತ್ತವೆ.

ಹಲವು ರೂಢಿಗಳುನಂಬುಗೆಗಳುಆಚರಣೆಗಳುಆಶಯಗಳು

ಜನಪದ ಪ್ರಪಂಚದಲ್ಲಿ ಗಂಡು ಹೆಣ್ಣುಗಳೇ ಮೂಲಭೂತ ಘಟಕಗಳು. ಅವರಿಬ್ಬರ ನಿರ್ದಿಷ್ಟ ಜೀವನ ಕ್ರಮದಲ್ಲಿ ಒಂದು ಜನಾಂಗದ ನಂಬುಗೆಗಳು, ಸಾಮಾಜಿಕ ಆಚರಣೆಗಳು, ನಿಗದಿತ ಜೀವನ ಪದ್ಧತಿಗಳು ಭೌತಿಕ, ಸಾಂಸ್ಕೃತಿಕ ಸಂಪ್ರದಾಯಗಳು, ಆಲೋಚನಾ ಕ್ರಮಗಳು, ನಂಬುಗೆಗಳು ಇಂಬುಗೊಂಡಿರುತ್ತವೆ. ಇವೆಲ್ಲವೂ ಗೊಂದಲಿಗರ ಆಟಗಳಲ್ಲಿವೆಯೆಂಬುದಕ್ಕೆ ಹಲವನ್ನು ಮಾದರಿಗಾಗಿ ಈ ಕೆಳಗೆ ಕಾಣಿಸಲಾಗಿದೆ.

 • ರಾಜ ಮುಂದಿಟ್ಟ ಕಾಲು ಹಿಂದಿಟ್ಟರೆ ಅಪಶಕುನ.
 • ಕ್ಷತ್ರಿಯ ವಂಶದ ಮಗ ಸೂಳೆಯ ಮನೆಯಲ್ಲಿರಬಾರದು.
 • ಮಕ್ಕಳ ಸಂತಾನವಿಲ್ಲದಿದ್ದರೆ ದೇವರಲ್ಲಿ ಬೇಡಿಕೊಳ್ಳಬೇಕು.
 • ಗತದ ಅವಧಿಯಲ್ಲಿ ಶುಭಕಾರ್ಯ ಮಾಡಬಾರದು.
 • ಸತಿ-ಪತಿ ಸಂಪೂರ್ಣಂಗರಾಗಿರಬೇಕು. ಇಲ್ಲವಾದರೆ ಅವರು ಮಂಗಳ ಕಾರ್ಯಗಳಿಗೆ ನಿಷಿದ್ಧರು.
 • ಋತುವಾದ ಕುಮಾರಿಯರು ಮನೆಯಲ್ಲಿದ್ದರೆ ನಡುಮನೆಯ ಕಂಬ ಸುಟ್ಟಂತೆ.
 • ರಾಜರು ಶೂರತನ ತೋರಿಯೇ ರಾಜ್ಯ ಮತ್ತು ಕನ್ಯೆಯರನ್ನು ಪಡೆಯತಕ್ಕದ್ದು.
 • ಬ್ರಾಹ್ಮಣ ಕನ್ಯೆಯರು ಮದುವೆಗೆ ಮುನ್ನ ಋತುವಾದರೆ ಕಾಡುಪಾಲು ಮಾಡತಕ್ಕದ್ದು.
 • ಅರಸು ಬಹುಪತ್ನೀವಲ್ಲಭ.
 • ಸ್ತ್ರೀ ಹೊನ್ನು-ಮಣ್ಣುಗಳಂತೆ ಒಂದು ಸೊತ್ತು.
 • ಬೇಡಾದ ಅರಸನ ಪತ್ನಿ ಬೇಕಾದವಳೆನ್ನಿಸಲು ತುಂಬಾ ಯಾತನೆಪಡಬೇಕು.
 • ಶಿವಲೋಚನಾಳಂಥ ಪತಿವ್ರತೆಯರ ಸಮಾಧಿಗೆ ಭಕ್ತಿಯಿಂದ ಪ್ರದಕ್ಷಿಣೆ ಹಾಕಿದರೆ ಜನ-ದನಗಳ ರೋಗರುಜಿನಗಳು             ಇಲ್ಲವಾಗುತ್ತವೆ.
 • ಮದುವೆಯ ಕಾಲದಲ್ಲಿ ಅರಸುಕುಮಾರನ ಗೈರುಹಾಜರಿ ಅನಿವಾರ್ಯವಾದರೆ ಆತನ ರುಮಾಲು, ಕತ್ತಿ-ಕಠಾರಿಗಳನ್ನೇ ವರನ ಸ್ಥಾನದಲ್ಲಿರಿಸಿ ಮಾಂಗಲ್ಯಧಾರಣ ಮಾಡಿಸುತ್ತಾರೆ.