ಆಟದ ವೈಶಿಷ್ಟ್ಯ

ಗೊಂದಲಿಗರ ಆಟದ ಹರವು, ಕಥಾವಸ್ತು, ಕಲ್ಪನಾವೈವಿಧ್ಯ, ನಿರೂಪಣಾವಿಧಾನ, ಸಂಭಾಷಣಾ ಚಾತುರ್ಯಗಳು ಅದರ ಅನನ್ಯ ಸ್ವಾಯತ್ತತೆಯನ್ನು ಗುಣಾತ್ಮಕವಾಗಿ ಹೇಳುತ್ತವೆ. ಕಥಾವಸ್ತುವಿಗೆ ಬೆಳೆವ ಸಹಜ ಸಾಮರ್ಥ್ಯವಿದೆ. ತನ್ನದೇ ಆದ ಬಂಧದಿಂದ ಸಂವಹನಿಸುವ ದೃಷ್ಟಿಕೋನವನ್ನೂ ಆಂತರಿಕ ಲಯವನ್ನೂ ಹೊಂದಿದೆ. ವಾಸ್ತವಿಕತೆ-ಅವಾಸ್ತವಿಕತೆಗಳ ನೆಯ್ಗೆಯೂ ವಿನ್ಯಾಸಮಯ.

ಗೊಂದಲಿಗರ ಆಟವೊಂದು ಸಾಮಾಜಿಕ ಕ್ರಿಯೆ. ಅದರ ಪ್ರಸ್ತುತಿ ಒಂದು ಸಾಮೂಹಿಕ ಅನುಭವ. ಅದಕ್ಕೆ ಸಾಮಾಜಿಕ ನೈತಿಕ ಹೊಣೆಯಿದೆ. ತನ್ನ ಜನ ಸಮಾಜದ ಚಿತ್ರಣದಲ್ಲಿ ಅಶ್ಲೀಲತೆಯನ್ನಾಗಲೀ ನೀಚತನವನ್ನಾಗಲೀ ಎತ್ತಿಹಿಡಿದ ಪಾಪಬುದ್ಧಿ ಅದಕ್ಕಿಲ್ಲ. ಪ್ರಮಾಣಿಕ ಸದ್ಭಾವನೆ ಅದರ ಸ್ವಭಾವ.

ಕಥಾವಸ್ತುವೇ ಆಟದ ಆತ್ಮ. ಒಂದು ಗೊತ್ತಾದ ರೀತಿಯಲ್ಲಿ ಸೂತ್ರಬದ್ಧವಾಗಿ ಕಥೆ ಆರಂಭಗೊಳ್ಳುತ್ತದೆ. ಅದರ ದೃಶ್ಯೀಕರಣ ಪಾತ್ರಾಭಿನಯಗಳಾಗಲೀ, ಕಥಾ ನಿರೂಪಣೆಯಾಗಲೀ ಎಲ್ಲೆಂದರಲ್ಲಿ ಬರುವುದಿಲ್ಲ; ಅನುಕ್ರಮದ ಶಿಸ್ತು ಅದಕ್ಕಿದೆ. ಕಥಾ ದೃಶ್ಯದ ಪ್ರತಿಘಟಕದಲ್ಲೂ ಆಶಯದ ಅಂಶಗಳು ತುಂಬಿಕೊಂಡಿರುತ್ತವೆ. ಈ ಅಂಶಗಳು ಸರಳವಾಗಿದ್ದರೂ ನಂಬುಗೆ, ಆಚರಣೆ, ಕಲ್ಪನೆ ಮುಂತಾದ ಅದ್ಭುತ ವಿಶೇಷಗಳ ಹಿನ್ನೆಲೆಯಲ್ಲಿ ಅಸಾಮಾನ್ಯವೆನ್ನಿಸುತ್ತವೆ.

ಗೊಂದಲಿಗರ ಆಟಗಳು ಹಲವು ಕತೆಗಳ ಸಮಾವೇಶಾನುಭವ ನೀಡುವುದುಂಟು. “ಶೀಲಾವತಿ” ಆಟದ ಕಥಾವಸ್ತು ಇದಕ್ಕೊಂದು ನಿದರ್ಶನ. “ಸದಾರಮೆ” ಕಥೆಯಲ್ಲಿಯ ಹಲವು ಘಟನೆಗಳು ಹಾಗೂ “ಕಡ್ಲಿ ಮಟ್ಟಿ ಸ್ಟೇಷನ್ ಮಾಸ್ತರ” ಕಥೆಯಲ್ಲಿ ಬರುವ ಕೂಸಿನ ಕೊಲೆಯ ಪ್ರಸಂಗ “ಶೀಲಾವತಿ” ಕಥಾ ಭಾಗಗಳಾಗಿವೆ. ಗೊಂದಲಿಗರ ಈ ಆಟದಿಂದಲೇ ಸಿಡಿದು ಇವರೆಡೂ ಬೆಳೆದು ಪ್ರತ್ಯೇಕ ಕಥಾವಸ್ತುಗಳಾಗಿರಬಾರದೇಕೆ?

ಇವರ ಆಟಗಳಿಗೆ ಕೇವಲ ಪಾರಾಮಾರ್ಥ, ತತ್ವಜ್ಞಾನ, ಆಧ್ಯಾತ್ಮ, ಭಕ್ತಿಯ ಮೇರು ಪ್ರಮಾಣದ ಅಗಾಧತೆಗಳನ್ನು ಉಪದೇಶಿಸುವ ಉಸಾಬರಿ ಇಲ್ಲ. ಸಂಸಾರಹೇಯ ಸ್ಥಳಾಸಕ್ತಿ ವಿರತಿಗಳ ಮಾತಿಲ್ಲ. ಎಲ್ಲ ಆಟಗಳೂ ಆದ್ಯಂತವಾಗಿ ಲೌಕಿಕ ಆಗುಹೋಗುಗಳ ಕಥನಗಳೇ.

ಗೊಂದಲಿಗರ ಆಟಗಳ ಕಥಾವಸ್ತುಗಳು ರಾಜ-ರಾಣಿಯವಾದರೂ ಅವನ್ನು ಕಟ್ಟಿದವರು, ಆಡುವವರು, ನೋಡುವವರು ಸಾಮಾನ್ಯ ಜನಪದರೇ. ಅವರ ಆ ಆಟಗಳಲ್ಲಿ ಬೇಟೆಗಳು, ವಿಶ್ವಾಸ ಘಾತುಕತನಗಳು, ಅನಿಮಿತ್ತವೈರ, ಸ್ವಾರ್ಥಲಾಲಸೆ, ಅಮಾನುಷತೆ, ಯುದ್ಧ, ಕೊಲೆ, ಸುಲಿಗೆ, ಅಧಿಕಾರದಾಹ, ಪ್ರಣಯ ಪ್ರಸಂಗ, ಕರ್ತವ್ಯ ಪರಾಯಣತೆ, ಜೀವಕಾರುಣ್ಯ, ಚಿತ್ತಸಮಾಧಾನ, ದೈವೀ ನಿಷ್ಠೆ, ಸಾಮಾಜಿಕ, ಮಾನವ ಧರ್ಮಾನುಸಂಧಾನ ಇತ್ಯಾದಿಗಳೆಲ್ಲವುಗಳನ್ನೂ ಮನಗಾಣಿಸುವ ಗಟ್ಟಿಯಾದ ಘಟನಾ ದೃಶ್ಯಗಳ ನಿಬಿಡತೆ ಇದೆ.

ಒಂದು ಕಾಲಕ್ಕೆ ಕರಾವಳಿಯ ಪಾಡ್ದನಗಳಂತೆ ನಿರ್ದಿಷ್ಟ ಪಂಗಡಗಳ ಆರಾಧನೆಯ ಮಾಧ್ಯಮವಾಗಿ ಮೈದಳೆದ ಧಾರ್ಮಿಕ ಕಲೆಗಳಲ್ಲಿ ಗೊಂದಲವೂ ಒಂದೆಂಬುದು ನಿಜ. ಆದರೆ ಕಾಲಕ್ರಮೇಣ ಬದಲಾದ ಪರಿಸ್ಥಿತಿಯಲ್ಲಿ ಜೀವನಯಾಪನೆಗಾಗಿ ಅನ್ಯಕಥಾವಸ್ತು ಮತ್ತು ಪ್ರಸ್ತುತಿಯ ತಂತ್ರಗಳಿಂದ ಗೊಂದಲಿಗರು ತಮ್ಮ ಆಟಗಳಗೆ ರಂಜನೀಯ ರೋಚಕ ರೂಪ ಕೊಟ್ಟುಕೊಂಡು ಸರ್ವಜನಾದರಣೀಯ ಕಲೆಯನ್ನಾಗಿಸಿಕೊಂಡಿದ್ದಾರೆ.

ನಮ್ಮ ಎಲ್ಲಾ ಭಾಷೆಯ ಸಂತರೂ, ಅನುಭಾವಿಗಳೂ ಸಾಮಾನ್ಯರನ್ನೇ ಕುರಿತು ಹೇಳುತ್ತಾ ಬಂದಿರುವುದುಂಟು. ಈ ಉದ್ದೇಶದಿಂದಲೇ ಅವರ ಹೇಳಿಕೆಯ ಭಾಷೆ ಸಂವಾದಾತ್ಮಕವಾಗಿಯೂ, ತುಂಬಾ ಪಾರದರ್ಶಕವಾಗಿಯೂ ಇರುತ್ತದೆ. ಅವರ ಭಾಷಾ ಶೈಲಿ ನೇರವಾಗಿ ಹೃದಯಾನುಭವಕ್ಕೆ, ಅರ್ಥಗ್ರಹಿಕೆಗೆ ಒದಗುತ್ತದೆ. ಗೊಂದಲಿಗರು ಕೂಡಾ ಇದೇ ರೀತಿಯ ಸರಳ ಜನ+ಸಂಭಾಷಣಾ ಶೈಲಿಯನ್ನು ಬಳಸಿಕೊಳ್ಳುತ್ತಾ ಬಂದಿದ್ದಾರೆ. ಯಾರ ಮಧ್ಯದಲ್ಲಿದ್ದುಕೊಂಡು ಯಾರಿಗಾಗಿ ತಮ್ಮ ಕಲೆ ಮೈವೆತ್ತಿದೆಯೋ ಅವರಿಗೆ ಅದು ತಲ್ಪಲೆಂಬ ಸಹಜ ವಿವೇಕ ದೃಷ್ಟಿ ಅವರದು.

ಗೊಂದಲಿಗರು ಕಂಡುಕೊಂಡಿರುವ ಅವರದೇ ಆದ ಈ ರಂಗಭಾಷೆಗೆ ಜನಪದರ ಬದುಕಿನ ಸುಖ ದುಃಖಗಳನ್ನು ಕಲ್ಪಿತಪಾತ್ರಗಳ ಮೂಲಕ ವೈಭವೀಕರಿಸಿ ಚಿತ್ರಿಸುವ ಚೈತನ್ಯವಿದೆ. ಕಥಾ ಪಾತ್ರಗಳಲ್ಲಿರುವ ಅರಸನಿಂದ ಆಳಿನವರೆಗೆ ಎಲ್ಲರಿಗೂ ಜಾನಪದ ದೀಕ್ಷೆ ನೀಡಿರುವುದರಿಂದ ಭಾಷೆಯಲ್ಲಿ ಏಕರೂಪದ ಕ್ರಿಯಾತ್ಮಕತೆ ಇದೆ. ಸಂಸ್ಕೃತದ ತೂಕವನ್ನು, ಕಾಯ್ದುಕೊಳ್ಳಲಿಕ್ಕಾಗಿ ಪಾಂಡಿತ್ಯವನ್ನು ತಡಕಾಡ ಬೇಕಾದ ಹಂಗಾಗಲೀ, ಅಧ್ಯಾತ್ಮಿಕ ಪರಿಭಾಷೆಯ ಬಂಧನವಾಗಲೀ ಇಲ್ಲದ ಅಚ್ಚ ದೇಸಿತನ ಗೊಂದಲಿಗರದು.

ಕತೆಗಾರ ಮತ್ತು ಹಿಮ್ಮೇಳಿಗ ಗೊಂದಲಿಗರು ತಾವಾಡುವ ಕತೆಗಳನ್ನು ಆದ್ಯಂತವಾಗಿ ವಶಪಡಿಸಿಕೊಂಡಿರುತ್ತಾರೆ. ಹೀಗೆ ಅವುಗಳ ಒಳಹೊರಗುಗಳನ್ನು ಅರಗಿಸಿಕೊಂಡಿರುದರಿಂದಲೇ ಅವರು ತಮ್ಮ ಆಟಗಳ ಹಲವು ಹತ್ತು ವಿಧದ ಪಾತ್ರಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಎವೆತೆರೆದಿಕ್ಕುವಷ್ಟರಲ್ಲೇ ಪುಟನೆಗೆದು ಅವುಗಳ ಮನೋಧರ್ಮವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ತಮ್ಮ ಪ್ರೇಕ್ಷಕರನ್ನು ಒಳಗೊಳಿಸಿಕೊಳ್ಳಲಿಕ್ಕಾಗಿ ನಿರೂಪಣಾ ಪ್ರಸಂಗಗಳಲ್ಲಿ “ನೋಡ್ರಿ” “ಕೇಳ್ರಿ” ಮುಂತಾದ ಆಪ್ತ ಸಂಬೋಧನೆಗಳನ್ನು ಬಳಸುತ್ತಾರೆ. ಕುತೂಹಲ ಮೂಡಿಸಿ ಮುಂದೇನು….ಮುಂದೇನು ಎಂದು ಉದ್ಗರಿಸುವಂತೆ ಪ್ರಭಾವ ಬೀರುತ್ತಾರೆ. ಗೊಂದಲಿಗರು ಅನಗತ್ಯವಾದುದನ್ನು ವಿವರಿಸುವುದಿಲ್ಲ; ಕಥೆಯ ಓಘದ ಕಡೆಗೇ ನೇರಲಕ್ಷ್ಯೆ. ಶೃಂಗಾರಸದ ವೈಭವೀಕರಣಕ್ಕೆ ವಿಪುಲಾವಕಾಶಗಳಿದ್ದರೂ ಸ್ವಲ್ಪದರಲ್ಲಿಯೇ ಹೇಳಿ ಮುಗಿಸುವುದು ಅವರ ಸಂಯಮದ ಲಕ್ಷಣ. ಮೊದಲು ಎದುರಾಳಿಯ ಅಸಮ ಬಲ, ಕ್ರೂರತನ, ಮಾಂತ್ರಿಕ ಶಕ್ತಿಗಳನ್ನು ವೈಭವೀಕರಿಸಿ ಕಥಾ ನಾಯಕ ನಾಯಕಿಯರು ದುರ್ಬಲರೆಂಬ ಭಾವನೆಯನ್ನು ಮೂಡಿಸುತ್ತಾರೆ. ನಂತರ ಅವರ ಅತುಲ ಪರಾಕ್ರಮವನ್ನು ಮೆರೆಸುತ್ತಾ ಆ ಎದುರಾಳಿಗಳನ್ನು ಇಲ್ಲವಾಗಿಸಿ ಬಿಡುತ್ತಾರೆ.

ಗೊಂದಲಿಗರ ಆಟಗಳ ವೈಶಿಷ್ಟ್ಯಗಳಲ್ಲಿ ಇನ್ನೂ ಹಲವನ್ನು ಈ ಕೆಳಕಂಡಂತೆ ಗುರುತಿಸಬಹುದು.

 • ಗೊಂದಲಿಗರ ಆಟ ಸಂಪೂರ್ಣ ಜಾನಪದ ಆವರಣದಲ್ಲಿ ನಡೆವ ಒಂದು ಕಥಾ ನಾಟಕ.
 • ಮೂಲ ಕಥಾವಸ್ತುವಿನ ಆಕೃತಿ ನಿರ್ದಿಷ್ಟ ಉದ್ದೇಶವನ್ನು ಅನುಭವಕ್ಕೆ ತರುವ ರೀತಿಯ ಸಂರಚನೆಯಾಗಿರುತ್ತದೆ.
 • ಆಟವು ಪ್ರಜರೆಲ್ಲರ ಕ್ಷೇಮ ಚಿಂತನೆಯಲ್ಲಿ ಅರಸಗಿರುವ ಕರ್ತವ್ಯಾಸಕ್ತಿಯನ್ನು ಪರಿಚಯ ಮಾಡಿಕೊಡುತ್ತಾ ಕಥಾ ಪೀಠಿಕೆಯಾಗಿ ವರ್ತಿಸುತ್ತದೆ.
 • ಅದು ನಡೆದು ಹೋದ ಘಟನೆಯೊಂದನ್ನು ವರ್ತಮಾನದಲ್ಲಿ ಅಭಿನಯಿಸುವ ರೀತಿಯದು.
 • ಆಟವು ಲಿಖಿತ ಸ್ವರೂಪದ್ದಾಗಿರದೆ ಸಮಯ ಸ್ಫೂರ್ತಿಯ ರಂಗರೂಪವಾಗಿರುತ್ತದೆ. ಸಂಭಾಷಣೆ ಸೃಷ್ಟ್ಯಾತ್ಮಕ ಸ್ವರೂಪದ್ದು.
 • ಆಟ ಜನಸಾಮಾನ್ಯರ ಆಶಯ ಕಲ್ಪನೆ, ಒಲವು ಪ್ರವೃತ್ತಿ, ಹಂಬಲ, ಜೀವನಶ್ರದ್ಧೆ ಹಾಗೂ ಸ್ವಭಾವ ವೈವಿಧ್ಯಗಳನ್ನು             ಮೇಳೈಸಿಕೊಂಡಿರುತ್ತದೆ; ತನ್ನ ಸಾಮಾಜಿಕ ವ್ಯವಸ್ಥೆಯ ಒಳನೋಟಗಳನ್ನೂ ಸಾಂಸ್ಕೃತಿಕ ಬದುಕನ್ನೂ ನಿರೂಪಿಸುತ್ತದೆ.
 • ನಮ್ಮ ಯಕ್ಷಗಾನ ಮತ್ತು ಮೂಡಲಪಾಯದ ಬಯಲಾಟಗಳಂತೆ ಈ ಆಟದಲ್ಲೂ ಕಾಳಗ ಹೋರಾಟಗಳೇ ಹೆಚ್ಚು,            ಸಂಘರ್ಷವೇ ಇದರ ಕಥಾಬೀಜ.
 • ಆಟ ಹೋಲಿಕೆಯಲ್ಲಿ ಕಿನ್ನರಿ ಜೋಗಿಗಳ ಆಟಕ್ಕಿಂತ ನಿರ್ವಹಣೆ, ಸಂಭಾಷಣೆ, ಭಾಷಾಶೈಲಿ, ಅಭಿನಯ ತಂತ್ರಗಳಲ್ಲಿ ಸುಧಾರಿಸಿದ್ದೆನ್ನಬೇಕು. ಮೇಲ್ವರ್ಗದವರೊಂದಿಗಿನಿ ಗೊಂದಲಾರಾಧನೆಯ ಪರಂಪರಾಗತ ಸಂಬಂಧ ಇದಕ್ಕೆ ಕಾರಣವಿರಬೇಕು.
 • ಕಥಾವಸ್ತುಗಳಲ್ಲಿ ಕಾಲದೇಶಗಳನ್ನು ಮೀರಿದ ವಿಶ್ವಸತ್ಯವನ್ನು ಮನವರಿಕೆ ಮಾಡಿಕೊಡುವ ಗುಣವಿರುತ್ತದೆ.
 • ಗಂಡು-ಹೆಣ್ಣು, ಗಂಡು-ಗಂಡು, ಹೆಣ್ಣು-ಹೆಣ್ಣು ಪಾತ್ರಗಳ ಮಧ್ಯೆಯ ಆಂತರಿಕ ಕ್ರಿಯೆ ಹಾಗೂ ಸಂಘರ್ಷಗಳೇ ಆಟದ         ಕಥಾ ವಸ್ತುಗಳು.
 • ಬದುಕಿನ ಗೊತ್ತು ಗುಡಿಗಳನ್ನು ನಿರ್ದೇಶಿಸುವುದರೊಂದಿಗೆ ಸಾರಾಸಾರ ವಿವೇಚನೆಗೆ ಆಟ ಪ್ರಚೋದನೆ ನೀಡುತ್ತದೆ.
 • ಅಕ್ಷರ ಕರಿತವರಿಗೆ ಜಾನಪದವೆನ್ನಿಸಿದಂತೆ ಆಟ ಆಡುವ ಗೊಂದಲಿಗರಿಗೂ ಅದನ್ನು ನೋಡುವ ಜಾನಪದ ಪ್ರಾಯೋಜಕರಿಗೂ ಅನ್ನಿಸುವುದಿಲ್ಲ.
 • ಉಚ್ಚಾರದಲ್ಲಿ ವಾಗ್ದೋಷಗಳಿರುವಂಥವೇ. ಭಾವಾವೇಶದ ಸುಸಂಗತಿ ಇರುವುದರಿಂದ ಆಟ ಆಡುವವರೂ ನೋಡುವವರೂ ಸಮಾನ ಭಾಷೋಚ್ಚಾರ ಸ್ವಭಾವಿಗಳಾಗಿದ್ದರಿಂದ ಅವು ಕಿವಿಗೆ ಕರ್ಕಶವೆನ್ನಿಸುವುದಿಲ್ಲ.
 • ಆಟದ ಪದಗಳಲ್ಲಿ ಬಂದದ್ದೇ ಹಾಡುಗಳಲ್ಲಿ ಪುನರಪಿಗೊಳ್ಳುತ್ತದೆ. ಬಹುಪಾಲು ಜಾನಪದ ರಂಗಕಲೆಗಳಲ್ಲಿರುವ ಈ ರೂಢಿ ನೋಡುಗರ ಕಿವಿಗೆ ಆಳವಟ್ಟಿರುವುದಾದ್ದರಿಂದ ಬೇಸರವೆನ್ನಿಸುವುದಿಲ್ಲ. ವಾಕ್ಯ ರಚನೆಯಲ್ಲಿ ಸ್ಥಾನಪಲ್ಲಟವಿರುವುದೂ ಉಂಟು.
 • ತೊಗಲು ಗೊಂಬೆಯಾಟದಂತೆ ಗೊಂದಲಿಗರ ಆಟಗಳನ್ನೂ ಮಳೆರಾಯನ ಕೃಪೆಗಾಗಿ ಕೆಳವರ್ಗದವರು ಆಡಿಸುವ ರೂಢಿಯಿದೆ.
 • ದೊಡ್ದಕತೆ ತುಂಡಾಗುವುದು ಮತ್ತು ಅನ್ಯಕತೆ ಒಳಗೊಳ್ಳುವುದೂ ಇದೆ.
 • ಕುಲಗೋತ್ರ ಧಾರ್ಮಿಕ ಚೌಕಟ್ಟುಗಳನ್ನು ದಾಟಿ ಲೌಕಿಕ ಆವರಣದಲ್ಲೇ ಆಟ ಮೆರೆಯುತ್ತದೆ. ಅದರಲ್ಲಿ ಬರುವ ಮದುವೆ ಪ್ರಸಂಗ ಇಡೀ ಕಥನಕ್ಕೆ ಚಾಲನೆ ಕೊಡುತ್ತದೆ.
 • ಕಥಾವಸ್ತುಗಳಲ್ಲಿ ಪರಂಪರಾಗತ ನಂಬುಗೆಗಳು, ಸಂಪ್ರದಾಯಗಳು, ಶಕುನಶಾಸ್ತ್ರ, ಬಾಲ್ಯವಿವಾಹ, ಬಹುಪತ್ನೀತ್ವ,        ಸ್ತ್ರೀ ಶೋಷಣೆ, ವೇಶ್ಯಾಪದ್ಧತಿ, ರಾಜ್ಯಕ್ಕೆ ಸಂಬಂಧಿಸಿದ ಶ್ರೇಣೀಕೃತ ವ್ಯಸಸ್ಥೆ, ರಾಜ-ರಾಣಿ, ಮಂತ್ರಿ, ಸೈನ್ಯ ಹಾಗೂ    ಪ್ರಜರ ನಿಗದಿತ ಕರ್ತವ್ಯಗಳ ವಿವರಗಳಿರುತ್ತವೆ.
 • ಗೊಂದಲಿಗರ ಆಟದ ಪಾತ್ರಗಳಿಗೆ ಅನ್ಯಲೋಕದ ಆಶೆಯಿಲ್ಲ. ಮಧ್ಯಲೋಕದ ವರ್ತಮಾನದ ಬದುಕೇ ಅವರಿಗೆ ಮುಖ್ಯ. ಇನ್ನೂ ಹೆಚ್ಚಿನ ಸಂಗತಿಯೆಂದರೆ ದೇವಲೋಕ ಮತ್ತು ಪಾತಾಳಲೋಕದವರೇ ಮಣ್ಣಿನ ವಾಸನೆಯ ಬದುಕಿಗೆ ಮೋಹಗೊಂಡು ಅಲ್ಲಿಗೆ ಬರುತ್ತಾರೆ.
 • ಆಟದ ತುಂಬಾ ಮಾನವ ಸಂಬಂಧಗಳಿಗೆ ತಡೆಯೊಡ್ಡುವ ಘಟನೆಗಳಿರುತ್ತವೆ. ಪುರಾಣಗಳಲ್ಲಿಯಂತೆ ದುಷ್ಟರ ಶಿಕ್ಷಣಕ್ಕೆ ಪರಾಮಾತ್ಮನೇನೂ ಅವತಾರವೆತ್ತಿಬರನು. ನೋವುಂಡ ವ್ಯಕ್ತಿಗಳೇ ಅಂಥವರಿಗೆ ಯಥೋಚಿತ ಶಿಕ್ಷೆ ಕೊಡುತ್ತಾರೆ; ಅವರು ಕ್ಷಮಿಸುವ ಪ್ರಸಂಗಗಳೂ ಉಂಟು.
 • ಕಥಾನಾಯಕ ನಾಯಕಿಯರು ಪುರಾಣಗಳಲ್ಲಿಯಂತೆ ಸತ್ತು ಸ್ವರ್ಗ ಕಾಣುವ ಜರೂರಿಲ್ಲ. ಕರಾವಳಿ ಕರ್ನಾಟಕದ ಪಾಡ್ದನಗಳ ವ್ಯಕ್ತಿಗಳಂತೆ ಗೊಂದಲಿಗರ ಆಟಗಳ ವೀರರೂ, ವೀರವನಿತೆಯರೂ ಮಡಿದೇ ಸಾಂಸ್ಕೃತಿಕ ವೀರಪದವಿ ಪಡೆವ ಪರಿಪಾಠವಿಲ್ಲ. ಅವರು ಎಲ್ಲ ವಿಧದ ಆಪತ್ತುಗಳನ್ನೂ ಎದೆಗೊಟ್ಟು ಎದುರಿಸಿ ಪ್ರಾಮಾಣಿಕ ಬದುಕು ಸಾಗಿಸುತ್ತಾರೆ.
 • ಕೀರ್ತನ ಪರಂಪರೆಯಲ್ಲಿಯಂತೆ ಗೊಂದಲಿಗರ ಆಟದಲ್ಲೂ ತಾಳ ರಹಿತ ಗೀತಾತ್ಮಕ ವಾಕ್ಯಗಳಿವೆ.
 • ಎಲ್ಲವೂ ಅರಸು ಮನೆತನದ ಕಥೆಗಳೇ; ಆದರೆ ಅವು ಜಾನಪದ ಬದುಕಿನಿಂದ ಮೈಪಡೆದ ವಿಶಿಷ್ಟ ಸೃಷ್ಟಿ.
 • ಪುರಾಣಗಳಲ್ಲಿರುವ ರಾಜ್ಯದಾಹೀ ದಾಯಾದಿಗಳ ಮಾತ್ಸರ್ಯ ಗೊಂದಲಿಗರ ಕಾಲ್ಪನಿಕ ಕತೆಗಳಲ್ಲೂ ಇದೆ ಎಂಬುದನ್ನು “ವೀರಪರಾಕ್ರಮ” ಬಿಂಬಿಸುತ್ತದೆ.
 • “ಶೀಲಾವತಿ” ಮತ್ತು “ಬಾಳಭಿಕ್ಷುಕ” ಆಟಗಳಲ್ಲಿ ರಾಜ್ಯ ವ್ಯಾಮೋಹ ವಿದೂರವಾದ ಕೇವಲ ಸ್ತ್ರೀ ಲಂಪಟತನದಿಂದಾಗಿ, ವಿಶ್ವಾಸ ಘಾತುಕತನ ಹಾಗೂ ನಿರ್ಮಮಹತ್ಯಾ ಬುದ್ಧಿಯ ಅಟ್ಟಹಾಸಗಳನ್ನು ಎತ್ತಿ ತೋರುವ ಪುರುಷರ ದಟ್ಟು ಚಿತ್ರಣವಿದೆ.
 • “ಶೀವಲೋಚನ” ಮತ್ತು “ವಿಘ್ನಾವತಿ”ಗಳಲ್ಲಿ ಸ್ತ್ರೀ ಪಾತ್ರಗಳೇ ಖಳನಾಯಕಿಯರಾಗಿದ್ದಾರೆ. ತಾವು ಒಲಿದ ಅರಸರ        ಮೂಲಕ ತಮ್ಮ ಸವತಿಯರನ್ನು ಹಿಂಸಿಸುತ್ತಾ ಮೈಸುಖ ಪಡೆಯುತ್ತಾರೆ.
 • ಇವೆಲ್ಲ ಆಟಗಳ ವಸ್ತುಗಳಲ್ಲಿಯ ಸ್ತ್ರೀ-ಪುರುಷ ಸಂಬಂಧಗಳಲ್ಲಿ ಆಸ್ಫೋಟಿಸುವ ಜಟಿಲತೆಗಳನ್ನು ಗೊಂದಲಿಗರು ಕಲಾತ್ಮಕವಾಗಿ ಪ್ರಸ್ತುತಗೊಳಿಸುತ್ತಾರೆಯೇ ಹೊರತು ವಾರ್ತಾ ಶೈಲಿಯಲ್ಲಿ ಅಲ್ಲ.
 • ಗೊಂದಲಿಗರ ತಾವು ನೆಲಸಿರುವ ಪರಿಸರದ ನಂಬಿಕೆ, ಆಚರಣೆಗಳನ್ನು ತಮ್ಮ ಕಥಾವಸ್ತುಗಳಿಗೆ ಅಳವಡಿಸಿಕೊಳ್ಳುತ್ತಾರೆ. ಸತಿ ಶಿವಲೋಚನಾಳ ಶವವನ್ನು ಕೈವಲ್ಯದಲ್ಲಿರಿಸಿಕೊಂಡು ಬಾಜಾ ಬಜಂತ್ರಿಯಿಂದ ಯಾತ್ರೆ ಹೊರಟಾಗ ಬೀದಿಗುಂಟ ಚುರುಮುರಿಯನ್ನು ಸುರಿಸುತ್ತಾ ಹೋಗಲಾಗುತ್ತದೆ. ಇದು ಲಿಂಗಾಯತ ಶವ ಸಂಸ್ಕಾರ ವಿಧಿಯೆಂದು ಬೇರೆ ಹೇಳಬೇಕಾಗಿಲ್ಲ.
 • ಆಟಗಳಿಗೆ ಕಾಲ ದೇಶಗಳ ಕಟ್ಟಿಲ್ಲ.
 • ಪಾತ್ರಗಳ ನಡವಳಿಕೆಯ ಕಾಳಜಿ ಸ್ಥಳೀಯವಾದದ್ದಲ್ಲ; ವಿಶ್ವಮಾನ್ಯವಾದದ್ದು.
 • ಕಥೆಗಾರನ ನಿಗದಿತ ವೇಷವೆಂದರೆ ಬಣ್ಣದ ನಿಲುವಂಗಿ, ಧೋತರ, ತಲೆಗೆ ಮುವ್ವತ್ತು ಮೊಳ ಉದ್ದದ ಅಚ್ಚಬಿಳಿ ರುಮಾಲು, ಅಡ್ಡ ಉತ್ತರೀಯ, ನಡು ಕಟ್ಟಾಗಿ ಒಂದು ಶಲ್ಯ, ಕೊರಳಲ್ಲಿ ಒಂದು ಕವಡಿಸರ, ಕಾಲಲ್ಲಿ ಕಿರಿಗೆಜ್ಜೆ ಸರ, ಎದೆಯ ಮೇಲೆ ದೇವಿಯ ಉಬ್ಬು ಶಿಲ್ಪವಿರುವ ಹಿತ್ತಾಳೆಯ ಐದು-ಆರು ಇಂಚು ಅಳತೆಯ ತಗಡು.
 • ಹಿಮ್ಮೇಳಿಗನ ಉಡುಗೆ ಎಂದರೆ ತಲೆಗೆ ದೊಡ್ಡ ರುಮಾಲು, ಅಡ್ಡ ಇಳಿಬಿಟ್ಟ ಶಲ್ಯ, ದಿನನಿತ್ಯ ಉಡುವಪಂಚೆ ಹಾಗೂ         ತೊಡುವ ಅಂಗಿ ಮಾತ್ರ.
 • ಗೊಂದಲ ಮತ್ತು ಆಟಗಳಲ್ಲಿ ಸ್ತ್ರೀಯರು ಪಾಲ್ಗೊಳ್ಳುವುದಿಲ್ಲ. ಹಳೆಯ ಬಟ್ಟೆಗಳನ್ನು ಪಡೆದು ಕೌದಿ ತಯಾರಿಸಿಕೊಟ್ಟು ಮಜೂರಿ ಪಡೆಯುವುದು ಅವರ ಕಾಯಕ.

ಪ್ರೇಕ್ಷಕರು

ಲಿಖಿತ ಕೃತಿಗೆ ಒಬ್ಬ ಓದುಗ ಸಾಕಾದರೆ ರಂಗಪ್ರಯೋಗಕ್ಕೆ ಹಲವು ಸಂಖ್ಯೆಯ ನೋಡುಗರು ಬೇಕೇಬೇಕು.

ಜನಪದರದ್ದು ಅಸಾಮಾನ್ಯ ಕಲಾಭಿರುಚಿಯ ಸಂಸ್ಕಾರ. ಅವರು ತಮ್ಮ ಮಧ್ಯೆ ಮೈದಳೆದ ಕಲಾಪ್ರಕಾರಗಳ ಶ್ರೀಮಂತಿಕೆಯ ಒಳಹೊರಗುಗಳನ್ನು ಬಲ್ಲವರು. ಯಕ್ಷಗಾನ ಮತ್ತು ದೊಡ್ಡಾಟಗಳಲ್ಲಿಯ ಅದ್ಭುತ ವರ್ಣಮಯ ವೇಷಗಾರಿಕೆ, ತಲೆಗೊರಳ ಹಾಡುಗಾರಿಕೆ, ಅಬ್ಬರದ ಕುಣಿತ, ಶೈಲೀಕೃತ ಸಂಭಾಷಣೆಗಳನ್ನು “ಶಹಬ್ಬಾಸ್” ಎನ್ನುತ್ತಾರೆ; ಸಣ್ಣಾಟಗಳ ಬೇರೆಯದೇ ಆದ ಸೊಗಸಿಗೆ “ಸೈ” ಎನ್ನುತ್ತಾರೆ; ಊರ ಮನೆಮನೆಯ ಅಂಗಳಗಳನ್ನೇ ರಂಗಸ್ಥಳಗಳನ್ನಾಗಿಸಿಕೊಳ್ಳುವ ಹಗಲು ವೇಷಗಾರರ ಆಟದ ತುಣುಕುಗಳನ್ನೂ ಪ್ರಹಸನಗಳನ್ನೂ ತಾರೀಪು ಮಾಡುತ್ತಾರೆ; ಕಿರುರಂಗಸ್ಥಳದಲ್ಲಿ ಪಾತ್ರವಾಡುವ ಪುಟ್ಟ ಸೂತ್ರದ ಗೊಂಬೆಗಳನ್ನೇ ದೊಡ್ಡ ಜೀವಂತ ನಟರೆಂದು ಭಾವಿಸುತ್ತಾರೆ. ತೊಗಲುಗೊಂಬೆ ಆಟದ ಚಪ್ಪಟೆಗೊಂಬೆಗಳನ್ನೇ ತ್ರಿಗಾತ್ರದ ಅಭಿನಯ ಪಟುಗಳೆಂದು ಕಲ್ಪಿಸಿಕೊಂಡು ತಲೆ ದೂಗುತ್ತಾರೆ. ಇಷ್ಟೇ ಅಲ್ಲ, ಆಟವೇ ಅಲ್ಲದ ದಾಸರಾಟ, ದೊಂಬರಾಟ, ಮೋಡಿಕಾರರ ಆಟಗಳಿಗೆ ಇವರೇ ಪ್ರಾಯೋಜಿಕರು, ಇದೇ ರೀತಿ ಕಿನ್ನರಿ ಜೋಗಿ, ಗೊಂದಲಿಗರಿಗೆ ವೀಳ್ಯವಿತ್ತು ಅವರ ಆಟನೋಡಿ ಸವಿಯುತ್ತಾರೆ. ಒಟ್ಟಿನಲ್ಲಿ ಎಲ್ಲ ವಿಧದ ಕಲಾ ಪ್ರಕಾರಗಳಿಗೆ ಜಾನಪದರಲ್ಲದೆ ಇನ್ನಾರು ಗತಿ, ಇಂತು, ತಮ್ಮ ಪರಿಸರದ ಒಂದೊಂದು ಕಲಾಪ್ರಕಾರದ ಸಾಧ್ಯತೆ ಪರಿಮಿತಿಗಳನ್ನು ಬಲ್ಲವರಾಗಿ, ಇಲ್ಲದ್ದನ್ನು ಬಯಸಿ ಹಳಿಯದೆ, ತಮ್ಮ ಕಲ್ಪನಾ ವಿಭಾವ ಗುಣದಿಂದ ಎಲ್ಲವನ್ನೂ ಸವಿವ ಪರಿಣತ ಮತಿಯುಳ್ಳ ರುಚಿಗಾರರು-ಅವರು! ಅದ್ಭುತರಮ್ಯ ಅಜ್ಜಿಯ ಕತೆಗಳನ್ನು ಕೇಳುತ್ತಾ ಬಂದಿರುವುದರಿಂದ ಕಾಲ್ಪನಿಕ ಪ್ರಪಂಚದ ಆಗು ಹೋಗುಗಳ ಪರಿಚಯ ಅವರಿಗಿದ್ದೇ ಇರುತ್ತದೆಯಾದರೂ ಕಥಾ ವಸ್ತುವಿನ ಕ್ರಿಯೆ ಪ್ರಸ್ತುತಿಗಳಲ್ಲಿಯ ಅವರ ಆಸಕ್ತಿಗೇನೂ ಕೊರತೆ ಇಲ್ಲ.

ಆಟ ನೋಡ ಬರುವ ಪ್ರೇಕ್ಷಕರ ಇನ್ನೊಂದು ವೈಶಿಷ್ಟ್ಯವೆಂದರೆ, ಅವರು ತಮ್ಮ ಮತೀಯ, ಧಾರ್ಮಿಕ ಆಚರಣೆಗಳನ್ನೂ, ಪುರಾಣಗಳನ್ನೂ, ಕಲ್ಪನಾ ವಿಲಾಸವನ್ನೂ ದಿನನಿತ್ಯದ ಬದುಕಿನ ಆಗು-ಹೋಗುಗಳನ್ನೂ ಬದಿಗಿರಿಸಿ, ಆಟ ನೋಡುತ್ತಾ ಅವನ್ನು ಪುನರನುಭವಿಸುತ್ತಾರೆ; ಈ ಮೂಲಕ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ತಮ್ಮ ಸಮ್ಮುಖದಲ್ಲೇ ತಮಗಾಗಿ ನಡೆಯುತ್ತಿರುವ ಪ್ರಯೋಗದಲ್ಲಿ ಹೀಗೆ ಅವರು ಪಾಲ್ಗೊಳ್ಳದಿದ್ದರೆ ಆಟವನ್ನು ಸವಿಯಲಾರರು; ಕಲಾವಿದರ, ಸೃಜನಶೀಲ ಬಿತ್ತರಣೆ ಅವರ ಸಂವೇದನೆಯನ್ನು ಪ್ರಚೋದಿಸಲಾರದು.

ಈ ಮಾತು ಗೊಂದಲಿಗರ ಆಟಕ್ಕೂ ಅನ್ವಯಿಸದಿರುವುದಿಲ್ಲ. ಗೊಂದಲೀ ಕಲಾವಿದರಿಗೂ, ಅವರ ಆಟದ ವಸ್ತುವಿಗೂ ಪ್ರೇಕ್ಷಕರಿಗೂ ಪ್ರಯೋಗ ಕಾಲದಲ್ಲಿ ಒಂದು ವಿಧದ ಆಂತರಿಕ ಕ್ರಿಯಾ ನಿಕಟತೆ ಇರುತ್ತದೆ. ಆಟ ನಿರ್ಮಿಸಿಕೊಡುವ ಒಂದು ರೀತಿ ಜಾಗ್ರತ-ಮಾಯಾಲೋಕದಲ್ಲಿ ನೆರೆದ ಜನರು ಭ್ರಮಾಧೀನರಾಗಿರುತ್ತಾರೆ; ತಾವು ಕಣ್ಗಾಣುತ್ತಿರುವ ಕಥಾವಸ್ತುವಿನ ಆಚೆ ಏನನ್ನೂ ನಿರೀಕ್ಷಿಸಲೆಡೆ ಇಲ್ಲವಾಗಿ ಅದಕ್ಕೆ ಸಂಪೂರ್ಣಬದ್ಧರಾಗಿರುತ್ತಾರೆ. ಆಟವು ಅವರನ್ನು ತನ್ನ ಕಾಲ್ಪನಿಕ ವಲಯಕ್ಕೆ ಸೆಳೆದುಕೊಳ್ಳುತ್ತದೆ. ಹಾಗಾಗಿ ಅದು ಮುಗಿವವರೆಗೆ ಪ್ರೇಕ್ಷಕರು ಬೆನ್ನುಬಿಡುವುದಿಲ್ಲ. ಉದಾತ್ತ ಪಾತ್ರಗಳೊಂದಿಗೆ ಒಂದಾಗಿ ನೊಂದು ನರಳುತ್ತಾರೆ; ಅವರನ್ನು ಎಷ್ಟೆಲ್ಲ ಕಾಡಿ, ಚಿತ್ರಹಿಂಸೆ ನೀಡಿದ ಧೂರ್ತರ ದಮನ ಕಂಡು ಹರ್ಷಗೊಳ್ಳುತ್ತಾರೆ; ಅಪೇಕ್ಷಿತ ರೀತಿಯಲ್ಲಿ ಸುಖಾಂತವಾಗುವ ರೀತಿ ಅವರಿಗೆ ಹೃದ್ಯವಾಗುತ್ತದೆ.

ಗೊಂದಲಿಗರ ಆಟಗಳಿಂದ ಜನಪದರು ಜೀವ ಮತ್ತು ಜಗತ್ತುಗಳನ್ನು ಗ್ರಹಿಸುವ ರೀತಿಯನ್ನು ಅರಿಯುತ್ತಾರೆ; ಲೋಕದೃಷ್ಟಿ ಹಾಗೂ ಸಾಮಾಜಿಕ ಶೀಲಸ್ವಭಾವದ ದರ್ಶನಮಾಡಿಕೊಳ್ಳುತ್ತಾರೆ. ಅಡುಗ-ನೋಡುಗರಿಬ್ಬರ ಹೃದಯ ಮತ್ತು ಮನಸ್ಸುಗಳು ಒಂದೇ ಸ್ತರದಲ್ಲಿ ಜಾನಪದೀಯವಾಗಿರುವುದರಿಂದ ಈ ಕ್ರಿಯೆ ನಿರಾತಂಕವಾಗಿ ನಡೆಯುತ್ತದೆ.

ಜನಪದ ರಂಗಕಲೆಗಳ ವೀಕ್ಷಣೆಯು ರೂಢಿಸಿಕೊಳ್ಳಬೇಕಾದ ಒಂದು ಸಾಧನಾ ವಿಶೇಷ; ನೋಡಿ, ಸವಿದು, ಸಾಮೂಹಿಕವಾಗಿ ಒಂದೆಡೆ ಸೇರಿ ಪ್ರತಿಕ್ರಿಯಿಸುವುದು ಒಂದು ಕಲೆ.

ಗೊಂದಲಿಗರ ಆಟಕ್ಕೆ ಸಲ್ಲುವ ಸಂಭಾವನೆ ಅದರ ನೋಡುಗರ ಆರ್ಥಿಕ ತಾಕತ್ತನ್ನನುಸರಿಸಿರುತ್ತದೆ. ಹಿಂದೊಂದು ಕಾಲದಲ್ಲಿ ಒಂದು ಆಟಕ್ಕೆ ನಾಲ್ಕು ರೂಪಾಯಿಗಳಿರುತ್ತಿತ್ತು. ಈಗ ನೂರಿನ್ನೂರಾಗಿದೆ. ಆಟ ಆಡಿಸುವ ಮುಂದಾಳುಗಳು ಓಣಿಯ ಜನಸಾಮಾನ್ಯರಿಂದ ಶಕ್ತ್ಯಾನುಸಾರ “ಹಂಚಿಗಿ” (ವಂತಿಗೆ) ಸಂಗ್ರಹಿಸುತ್ತಾರೆ. ಹತ್ತರ ಹಲ್ಲುಕಡ್ಡಿ ಒಬ್ಬನ ತಲೆಯ ಹೊರೆಯಾಗುವಂತೆ ಆ ಒಟ್ಟು ವಂತಿಗೆಯ ಮೊತ್ತ ಗೊಂದಲಿಗರ ಸಂಭಾವನೆಗೂ ಮಿಕ್ಕ ಖರ್ಚಿಗೂ ಸರಿಹೋಗುತ್ತದೆ.

ದಿವಂಗತ ದೇವೇಂದ್ರಪ್ಪ

ದಿವಂಗತ ಗೊಂದಲಿಗರ ದೇವೇಂದ್ರಪ್ಪ ಪಾರಗೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣವೆಂಬ ಪುಟ್ಟಹಳ್ಳಿಯ ನಿವಾಸಿಯಾಗಿದ್ದರು. ನೀವು ಹುಟ್ಟಿದ ಸ್ಥಳವಾವುದೆಂದು ವಿಚಾರಿಸಿದಾಗ “ಯಾವ ಊರು ಅಂತ ಹೇಳಲಿ? ನಮ್ಮಪ್ಪ ನಮ್ಮವ್ವ ಊರಾಡುವಾಗ ಯಾವುದೋ ಒಂದು ಹಾಳು ಗುಡಿಯಲ್ಲೋ ಮನೆಯೊಂದರ ಗೋಡೆಯ ನೆರಳಿನಲ್ಲೋ ನಾನು ಹುಟ್ಟಿರಬೇಕು. ಗೊಂದಲಿಗ ಜನಾಂಗ ಒಂದೆಡೆ ನೆಲೆನಿಂತಿದ್ದು ನಮ್ಮ ತಲೆಮಾರಿನಿಂದ” ಎಂದಿದ್ದರು. ತಮ್ಮ ಇಡೀ ಜೀವಮಾನದ ದುಡಿಮೆಯಿಂದ ನಾಲ್ಕಂಕಣದ ಸಾದಾ ಮನೆ ಕಟ್ಟಿ ತಮ್ಮ ಮಕ್ಕಳು-ಮರಿಗಳಿಗೆ ಅವರು ನೆರಳು ಮಾಡಿಕೊಟ್ಟುಹೋಗಿದ್ದಾರೆ. ಶ್ರೀಯುತರು ಮೂರನೆಯ ತರಗತಿಯವರೆಗೆ ಅಕ್ಷರ ವಿದ್ಯೆ ಕಲಿತಿದ್ದರಷ್ಟೇ. ತಮ್ಮ ಅನುವಂಶಿಕ ವೃತ್ತಿಶಿಕ್ಷಣಕ್ಕೆ ಬಾಲ್ಯದಿಂದಲೇ ಅವರು ತೊಡಗಿದರಂತೆ. ಹದಿಹರೆಯದಲ್ಲೇ ಗೊಂದಲಕಾರ್ಯ ಮತ್ತು ಆಟ ನಡೆಸುವಕಾಯಕದಲ್ಲಿ ನೈಪುಣ್ಯ ಸಾಧಿಸಿದ್ದರಂತೆ. ನಾನು ಅವರ ಆಟಗಳನ್ನು ನಾಲ್ಕು ದಶಕಗಳಿಂದ ನೋಡುತ್ತಾ ಬಂದಿದ್ದೇನೆ. ಮೂವತ್ತು ವರ್ಷಗಳಿಂದ ಅವರ ನಿಕಟ ಪರಿಚಯ ನನಗಿತ್ತು.

ಮೊದಲೊಂದು ಕಾಲದ ದೇವೇಂದ್ರಪ್ಪನವರ ಆಟಗಳಲ್ಲಿ ಅಲ್ಲೊಂದು ಇಲ್ಲೊಂದು ಅಶ್ಲೀಲ ಮಾತುಗಳು ನುಸುಳುತ್ತಿದ್ದವು. ಆದರೆ ಬರಬರುತ್ತಾ ಇಲ್ಲವಾದದ್ದನ್ನು ನಾನು ಗುರುತಿಸಿದ್ದೇನೆ. ನಾಡಹಬ್ಬ, ಗಣೇಶೋತ್ಸವ, ಆಕಾಶವಾಣಿ ಕಾರ್ಯಕ್ರಮ ಮುಂತಾದವುಗಳಿಗೆ ಅವರು ಆಹ್ವಾನಿತರಾಗತೊಡಗಿದಂದಿನಿಂದ, ಅದರಲ್ಲೂ ಪಂಢರಪುರದ ವಿಠ್ಠಲನ ಸನ್ನಿಧಿಯಲ್ಲಿ ವಾರಕರಿ ದೀಕ್ಷಾಬದ್ಧರಾದಂದಿನಿಂದ ಅವರ ಭಾಷೆ ತನ್ನ ಕಗ್ಗುತನ ಕಳೆದುಕೊಳ್ಳುತ್ತಾ ಬಂತು. ಭಾಷೋಚ್ಚಾರ ಎಲ್ಲ ಭಾಹಗಳ ಜನರಿಗೂ ತಿಳಿದು ತನ್ನ ಕಲೆ ಶಿಷ್ಟಪ್ರಿಯವಾಗಿ ಬೇಡಿಕೆ ದೈನಂದಿನ ವ್ಯಾವಹಾರಿಕ ಮಾತುಗಾರಿಕೆಯಲ್ಲಿಪಡೆಯುತ್ತಾ ಬಂತು. ದೇವೇಂದ್ರಪ್ಪನವರ ದೈನಂದಿನ ವ್ಯಾವಹಾರಿಕ ಮಾತುಗಾರಿಕೆಯಲ್ಲಿ ಕೂಡಾ ಸುಧಾರಿತ ಗ್ರಾಮ್ಯಗುಣದ ಹದವಾದ ಆಡುನುಡಿಯ ಗತ್ತಿರುತ್ತಿತ್ತು.

ನಾನು ದೇವೇಂದ್ರಪ್ಪನವರ ಹಲವು ಆಟಗಳನ್ನು ಒಂದಕ್ಕಿಂತ ಹೆಚ್ಚು ಸಲ ನೋಡಿದ್ದೇನೆ. ಮರುಪ್ರಯೋಗಗಳಲ್ಲಿ ಅವುಗಳಲ್ಲೊಂದು ನೂರಕ್ಕೆ ನೂರು ಯಥಾವತ್ ಆಗಿರುತ್ತಿರಲಿಲ್ಲ. “ನಿಮ್ಮ ಆಟಗಳಲ್ಲಿ ಯಾವುದು ಅಧಿಕೃತ” ವೆಂದು ಕೇಳಿದರೆ, “ಅದೆಲ್ಲಾ ನನಗೆ ಗೊತ್ತಿಲ್ಲ. ಎಲ್ಲ ಆ ದೇವಿ ನಡೆಸುತ್ತಾಳೆ” ಎನ್ನುತ್ತಿದ್ದರು. ತಮ್ಮ ಆಟದ ಪಾತ್ರ ಪೋಷಣೆಯಲ್ಲಿ, ಪ್ರಸಂಗಗಳ ಪ್ರಖರತೆಯಲ್ಲಿ, ಸನ್ನಿವೇಶಗಳ ನಿರೂಪಣಾ ಸಂವಿಧಾನದಲ್ಲಿ, ಸರಳ ಶೈಲಿಯ ನಿರರ್ಗಳತೆಯಲ್ಲಿ, ವಾಕ್ಯರಚನಾ ವಿನ್ಯಾಸದಲ್ಲಿ, ಪದಪುಂಜಗಳ ಜೋಡಣೆಯಲ್ಲಿ, ಕಲ್ಪನಾಶಕ್ತಿಯಲ್ಲಿ, ಕುತೂಹಲ ಪ್ರಚೋದಿಸುವ ಜಾಣ್ಮೆಯಲ್ಲಿ ಸ್ವಂತಿಕೆಯನ್ನು ಮೆರೆಯುತ್ತಿದ್ದರು. ಅವರು ತಮ್ಮ ಆಟಗಳ ಸಮಸ್ತ ಪಾತ್ರಗಳನ್ನೂ ತಮ್ಮ ಸ್ವಂತದ ಅಂಗಾಂಗಗಳೆಂದುಕೊಳ್ಳುತ್ತಿದ್ದರು. ಯಾವ ಒಂದು ಪಾತ್ರವೂ ಅವರಿಂದ ದೂರ ಉಳಿಯುತ್ತಿರಲಿಲ್ಲ.

ದೇವೇಂದ್ರಪ್ಪನವರ ಆಟಗಳಲ್ಲಿ ಒಂದು ಕಾಲದಲ್ಲಿ ಮಾತಿಗೊಂದು ಪದವಿರುತ್ತಿತ್ತು. ಆದರೆ ಕಾಲಾನುಸಾರವಾಗಿ ಮಾತಿಗೆ ಪ್ರಾಧಾನ್ಯತೆ ಬಂದ ನಂತರ ಸಂಭಾಷಣೆಗೆ ಹೆಚ್ಚಿನ ಇಂಬು ದೊರೆಯಿತು. ನಿಡುಗಾಲದಿಂದ ಆಟಗಳಲ್ಲಿ ಅವರು ಬಳಸುತ್ತಾ ಬಂದಿದ್ದ ವಾಗ್ವಿಧಾನಗಳಲ್ಲಿ ವರ್ನನೆ, ನುಡುಗಟ್ಟು, ವ್ಯಕ್ತಿಚಿತ್ರಣ ಇವುಗಳ ಹಲವು ಮಾದರಿಗಳನ್ನು ಈ ಮುಂಚೆ ಉಲ್ಲೇಖಿಸಿರುವೆ. ಅವರ ಸೋದರರಾದ ಶ್ರೀ ದುರುಗಪ್ಪ ಮತ್ತು ಮಗ ರಾಮಣ್ಣನವರ ಆಟಗಳಲ್ಲೂ ಅವೇ ಮುಂದುವರಿದಿವೆ. ಇನ್ನೊಬ್ಬ ಬಂಧು ಶ್ರೀ ಹನುಮಂತಪ್ಪನವರ ಆಟಗಳಲ್ಲೂ ಅಷ್ಟೇ. ಕಥೆ ಬೆಳೆಸುವ ವಿಧಾನವೂ ಅದೇ.

ಅಪರೂಪದ ಗೊಂದಲೀ ಕಲಾವಿದರಾಗಿದ್ದ ಶ್ರೀ ದೇವೇಂದ್ರಪ್ಪನವರ ಆಟಗಳಲ್ಲಿ ಹಲವನ್ನು ಕಾಲಕಾಲಕ್ಕೆ ಧ್ವನಿಮುದ್ರಿಸಿ ಲಿಪಿಗಿಳಿಸಿದಾಗ ಅವುಗಳಲ್ಲಿ ಹಲವು ಅಪಾರ್ಥಗೊಳಿಸುವ ವಾಗ್ದೋಷಗಳು ನುಸುಳಿರುವುದು ಕಾಣಿಸಿತು. ಅವರು ಹಾಡುತ್ತಿದ್ದ ಕಬೀರ ಭಜನೆಯಲ್ಲಿ “ಕಹತೆ ಹೈ ಕಬೀರ” ವಿಕೃತಗೊಂಡು “ಖಾತಿ ಕಾಫಿರ್” ಎಂದಾಗಿತ್ತು! ಇಂಥ ಎಷ್ಟೋ ತಪ್ಪುಗಳನ್ನು ಹಾಗೂ ಪುನರುಕ್ತಿ ದೋಷಗಳನ್ನು ಮಾತ್ರ ದಿ.ದೇವೇಂದ್ರ ಮತ್ತು ದುರುಗಪ್ಪನವರ ಹೇಳಿಕೆಯಂತೆ ಅಲ್ಲಲ್ಲಿ ದುರಸ್ತುಗೊಳಿಸಬೇಕಾಯಿತು. ಇಷ್ಟನ್ನುಳಿದು ಇನ್ನಾವ ದೃಷ್ಟಿಯಿಂದಲೂ ಮೂಲಕ್ಕೆ ಅಪಚಾರ ಬಗೆದಿಲ್ಲ. ಧ್ವನಿ ಸುರುಳಿಗಳಿಂದ ಲಿಪಿಗಿಳಿಸಿರುವ ಅವರ ಈ ಆಟಗಳಲ್ಲಿ ಅವುಗಳ ದೃಕ್ ರೂಪ, ಹಾಡಿನ ಸೊಗಸು, ಕುಣಿತ, ಅಭಿನಯ, ಮುಖಭಾವಗಳ ವೈಖರಿಯ ತಾಜಾತನ ಲೋಪಗೊಂಡಿವೆ. ಬರವಣಿಗೆಯಲ್ಲಿ ಅವರ ಆಟಗಳ ವರ್ಣಮಯತೆ, ಸೊಗಸುಗಳು ಸೊರಗಿರುವುದು ಅನಿವಾರ್ಯ.

ದೇವೇಂದ್ರಪ್ಪ ತಮ್ಮ ೭೪ನೆಯ ವಯಸ್ಸಿನಲ್ಲಿ ದಿನಾಂಕ ೧೫-೧-೯೧ರಂದು ಕ್ಯಾನ್ಸರ್ ರೋಗದಿಂದ ದಿವಂಗತರಾದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕ್ಯಾಡೆಮಿ ಅವರ ಕೊನೆಯ ವರ್ಷಗಳಲ್ಲಿ ಪ್ರಶಸ್ತಿ ನೀಡಿ ತನ್ನ ಗೌರವವನ್ನು ಮೆರೆದುಕೊಂಡಿತು. ಆದರೆ ಅವರೆಷ್ಟೇ ಪ್ರಯತ್ನಿಸಿದರೂ ಮಾಸಾಶಾನ ಮಾತ್ರ ಸರ್ಕಾರದಿಂದ ದೊರೆಯಲಿಲ್ಲ. ಕೊನೆಯವರೆಗೂ ಅವರ ಸಮರ್ಥ ಹಿಮ್ಮೇಳಿಗರಾಗಿದ್ದ ಶ್ರೀ ದುರುಗಪ್ಪ ಈಗ ತಮ್ಮ ಅಣ್ಣನ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಇವರೀರ್ವರ ಮಕ್ಕಳಿಗೆ ತಮ್ಮ ಈ ಅನುವಂಶಿಕ ಕಲೆಯಿಂದ ಬದುಕುವ ಭರವಸೆ ಉಳಿದಿಲ್ಲ. ಊರೂರು ತಿರುಗಿ ತಿರಿದು ಬದುಕುವುದರಲ್ಲಿ ಆಶೆಯಿಲ್ಲ. ಅದು ಆತ್ಮಗೌರವ ವಿಲ್ಲದ ಕೆಲಸವೆನ್ನುತ್ತಾರೆ. ಅಂತೆಯೇ ಅನ್ಯ ಕಿರುಕುಳ ವ್ಯಾಪಾರಗಳಲ್ಲಿ ತೊಡಗಿದ್ದಾರೆ. ಗೊಂದಲಾಚರಣೆಯ ಪರಂಪರೆಯೊಂದು ಇಲ್ಲವಾಗಿದ್ದರೆ ಈ ಕಲೆ ಕೂಡಾ ಅವಜ್ಞೆ ಗೀಡಾಗುತ್ತಿತ್ತು.

ಶ್ರೀ ದೇವೇಂದ್ರಪ್ಪ ಪಾರಗೆ ಇನ್ನಿಲ್ಲವಾಗಿದ್ದರೂ ಅವರಂಥ ಶ್ರೇಷ್ಠ ಹಿರಿಯ ಗೊಂದಲಿಗ ಕಲಾವಿದರು ಇನ್ನೂ ನಮ್ಮ ನಾಡಿನಲ್ಲಿ ಅಲ್ಲಲ್ಲಿ ಜೀವದಿಂದರಲು ಸಾಕು, ಅಂಥವರನ್ನು ಗುರುತಿಸಿ ಅವರ ಆಟಗಳನ್ನು ವಿಡಿಯೋ ಮಾಡುವುದು ಅವಶ್ಯಕ ಅವಸರದ ಕೆಲಸ. ಅವರ ಕಥಾ ವಸ್ತುಗಳನ್ನು ಭೌಗೋಲಿಕ, ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ ನೆಲೆಯಲ್ಲಿ ಇದಕ್ಕಿಂತ ಮುಖ್ಯವಾಗಿ ಮಾನವಶಾಸ್ತ್ರದ ದೃಷ್ಟಿಯಿಂದ ಪರಾಮರ್ಶಿಸ ಬೇಕಿದೆ. ಅವುಗಳ ರಂಗರೂಪ, ಮೌಖಿಕ ವೈಶಿಷ್ಟ್ಯಗಳನ್ನು ಅಭ್ಯಾಸಿಸಬೇಕಿದೆ.

ಗೊಂದಲಿಗರ ಆಟಗಳನ್ನು ಜಾನಪದ ಹಿನ್ನಲೆಯಲ್ಲೇ ಅರ್ಥವಿಸಿಕೊಳ್ಳಬೇಕು.

ಕೊನೆಯದಾಗಿ

ಒಂದೂವರೆ ಶತಮಾನದಷ್ಟು ಹಿಂದೆಯೇ ತಮ್ಮ ಕ್ರಿಸ್ತಮತ ಪ್ರಚಾರಕ್ಕೆಂದೋ ಆಳರಸರ ಅಧಿಕಾರಗಳಾಗಿಯೋ, ಎಷ್ಟೋ ಜನ ಬ್ರಿಟಿಷರು ಭಾರತದ ಎಲ್ಲಾ ಕಡೆಗೆ ಬಂದಂತೆ ನಮ್ಮ ಕನ್ನಡನಾಡಿಗೂ ಬಮ್ದರು. ನಮ್ಮ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಬದುಕಿನಲ್ಲಿ ಆಸಕ್ತಿ ತಳೆದರು. ಅವನ್ನು ಬಿಂಬಿಸುವ ಸಾಹಿತ್ಯ ಕಲೆಗಳನ್ನು ದಾಖಲಿಸಿ ಪ್ರಕಟಿಸಿದರು. ನಮಗೆ ಜಾನಪದ ಪ್ರಪಂಚದ ಮಹತಿಯ ಅರಿವು ಮಾಡಿಕೊಟ್ಟವರು-ಅವರೇ. ಅವರಲ್ಲಿ ಕರ್ನಲ್ ಮೆಕೆಂಜಿ, ಬುಕನನ್, ಅಬ್ಬೆದೊ+ಬೋಯ್, ಮೊಗ್ಲಿಂಗ್, ಫ್ಲೀಟ್, ಕಿಟ್ಟೆಲ್ ಮೊದಲಾದವರು ಪ್ರಮುಖರು. ಫ್ಲೀಟ್ ಮಹಾಶಯನಂತೂ ಲಾವಣಿಗಳ ವೈಜ್ಞಾನಿಕ ಸಂಗ್ರಹಣೆಗೆ ಮೊದಲ ಪಾಠ ಹಾಕಿಕೊಟ್ಟಿದ್ದಾನೆ. ನವೋದಯದ ಕಾಲದಲ್ಲಿ ನಮ್ಮ ಹಿರಿಯ ಲೇಖಕರಲ್ಲಿ ಹಲವರು ಜಾನಪದ ಸಾಹಿತ್ಯ, ಕಲೆಗಳನ್ನು ಮೌಲಿಕವಾಗಿ ಪರಿಗಣಿಸಿ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಅರವತ್ತರ ದಶಕಾರಂಭದಲ್ಲಿ ಡಾ. ದೇ. ಜವರೇಗೌಡರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಕರ್ಣಧಾರತ್ವ ವಹಿಸಿಕೊಂಡ ನಂತರ ಜಾನಪದಕ್ಕೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಗಣ್ಯಸ್ಥಾನ ಕೊಟ್ಟು ಪ್ರಶಂಸನೀಯ ಕಾರ್ಯ ಮಾಡಿದರು. ಈ ವಿಷಯದಲ್ಲಿ ನಮ್ಮ ನಾಡಿನ ಅನ್ಯ ವಿಶ್ವವಿದ್ಯಾಲಯಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರೂ ಅವರೇ. ಈಗ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಉನ್ನತ ವ್ಯಾಸಂಗದ ಜಾನಪದದ ವಿಭಾಗಗಳಿವೆ.

ನಾಗರಿಕರಲ್ಲದವರ ಜೀವನವನ್ನು ಪರಿಭಾವಿಸಬೇಕೆಂದರೆ ಅವರದೇ ಭಾಷೆಯಲ್ಲಿ ಅಧ್ಯಯನ ಮಾಡದೇ ಅನ್ಯಮಾರ್ಗವಿಲ್ಲ. ಜನಪದ ಸಮಾಜದ ವಿಶಿಷ್ಟ ರಚನೆ, ಅದರ ರೀತಿನೀತಿ, ನಂಬಿಕೆ-ಆಚರಣೆಗಳನ್ನು ತಾಳ್ಮೆಯಿಂದ ಅರ್ಥಮಾಡಿಕೊಂಡರೆ ಮಾತ್ರ ಅವರ ಸಾಹಿತ್ಯ ಮತ್ತು ಕಲೆಗಳನ್ನು ಗ್ರಹಿಸಲು ಸಾಧ್ಯವೆಂಬ ಪರಿಜ್ಞಾನ ನಮ್ಮ ಜಾನಪದ ಸಂಶೋಧಕರಿಗೆ ಈಗ ಬಂದಿದೆ. ಕಳೆದ ಹತು ಹದಿನೈದು ವರ್ಷಗಳಿಂದ ಕನ್ನಡ ಮೌಖಿಕ ಪರಮ್ಪರೆಯ ಅಧ್ಯಯನ ವ್ಯಾಪಕವಾಗಿ ನಡೆದಿದೆ. ರ್ರಂಗ ಪ್ರಯೋಗಗಳನ್ನೂ, ಅವುಗಳ ಕಲಾವಿದರನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡಲಾಗುತ್ತಿದೆ. ಜಾನಪದ ಅಧ್ಯಯನದಲ್ಲಿ ವಸ್ತುಗಳ ಮೌಲಿಕತೆಯೊಂದಿಗೆ ಅವುಗಳ ಭಿನ್ನ ಪಾಠಗಳಿಗೂ ವಿಶೇಷ ಆದ್ಯತೆ ದೊರೆತಿರುವುದನ್ನು ನಾವು ಕಾಣಬಹುದು. ಅವುಗಳ ಭಾಷೆ ಪ್ರಾದೇಶಿಕತೆಗಳೊಂದಿಗೆ ಅವುಗಳಲ್ಲಿಯ ಸಾರ್ವತ್ರಿಕ ಅಂಶಗಳೂ ಶೋಧನೆಗೊಳಪಡುತ್ತಿರುವುದೊಂದು ವಿಶೇಷ.

ಗೊಂದಲಿಗರ ಆಟಗಳು ಕೂಡಾ ಈ ಎಲ್ಲ ಮಾನದಂಡಗಳಿಂದ ಅಳೆಯಲು ತಕ್ಕುದಾಗಿವೆ. ಇವರ ಆಟಗಳನ್ನು ಜಾನಪದ ಕತೆಗಳಂತೆ ವಸ್ತು, ರೂಪ, ಸಂದರ್ಭ, ಉದ್ದೇಶ, ಸಾಂಸ್ಕೃತಿಕ ಸಮಾಜಶಾಸ್ತ್ರ, ಮಾನವಶಾಸ್ತ್ರ, ಭಾಷಾಶಾಸ್ತ್ರಗಳ ದೃಷ್ಟಿಕೋನದಿಂದ, ಪ್ರಯೋಗದ ಹಿನ್ನೆಲೆಯಲ್ಲಿ ಪರಾಮರ್ಶಿಸಲು ಅವಕಾಶವಿದೆ.

ವರ್ತಮಾನಕ್ಕೆ ವಿಭಿನ್ನವಾದ ಗತಕಾಲದಲ್ಲಿ ಕಲಾಭಿರುಚಿ ಜೀವನದ ಒಂದು ಅವಿಭಾಜ್ಯ ಅಂಗವಾಗಿತ್ತು. ನಮ್ಮ ಜನಪದರು ಅದರ ಪೂರೈಕೆಗಾಗಿ ತಮಗೆ ನಿಲುಕುವ ನಾನಾ ವಿಧದ ವೃತ್ತಿ ಕಲಾವಿದರನ್ನು ಆಶ್ರಯಿಸುತ್ತಿದ್ದರು. ಇದೂ ಅಲ್ಲದೆ ಸ್ವಯಂ ಪದ ಕಟ್ಟುವ, ಹಾಡುವ, ಕುಣಿಯುವ, ಆಟ ಆಡುವ ಸಾಂಸ್ಕೃತಿಕ ಸಂಸ್ಕಾರ ಅವರಿಗೆ ನಿರಾಯಾಸವಾಗಿ ಸಾಧಿಸುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಆ ಜಾನಪದ ಕಲಾಸಕ್ತಿ ಉಡುಗುವ ಹಾದಿ ಹಿಡಿಯತೊಡಗಿದೆ. ವೈಜ್ಞಾನಿಕ ಶೋಧನೆಗಳಾದ ಹಿರಿ-ಕಿರಿ ತೆರೆಗಳು ಈ ಶತಮಾನದ ಅದ್ವೀತಿಯ ಕಲಾ ಪ್ರಕಾರಗಳೆನ್ನುವುಷ್ಟು ಪ್ರಬಲವಾಗುವ ಕಾಲ ದೂರವಿಲ್ಲ. ನೋಡುಗರಿಗೆ ಕಲಾವಿದರ ನೇರ ಜೀವಂತ ಸಂಬಂಧ ತಪ್ಪುತ್ತಿದೆ. ಬರೀ ಹಾಡು ಕುಣಿತಗಳಷ್ಟೇ ಅಲ್ಲ, ರಂಗ ಕಲೆಗಳು ಕೂಡಾ ಮೊದಲೇ ಮುದ್ರಿತಗೊಂಡು ಫ್ರಿಜ್‍ನೊಳಗಿನ ಸಿದ್ಧ ತಂಗಳು ತಿನಿಸುಗಳಂತೆ ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಜನಪದರ ಅಭಿರುಚಿಯನ್ನು ಸೆಳೆದುಕೊಳ್ಳುತ್ತಿವೆ. ಅವರಿನ್ನು ಅವು ಕೊಟ್ಟದ್ದನ್ನು ಮಾತ್ರ ಪರಿಗ್ರಹಿಸಿ ತೃಪ್ತಿ ತಂದುಕೊಳ್ಳುಬೇಕಾದ ಕೇವಲ ಗಿರಾಕಿಗಳಾದರೆ ಆಶ್ಚರ್ಯವಿಲ್ಲ. ನಮ್ಮ ಜೀವನದ ವಿಧಾನಗಳು, ವಿಚಾರಗಳು ಶರವೇಗದಲ್ಲಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ಗೊಂದಲಿಗರ ಆಟ ಎಷ್ಟು ಸುಸಂಗತ? ಸಾಮಾಜಿಕ, ಸಾಂಸ್ಕೃತಿಕ, ಕಲಾತ್ಮಕ ಪರಿವರ್ತನೆಗಳನ್ನು ತಡೆದು ಗೊಂದಲಿಗರನ್ನು ಯಥಾಸ್ಥಿತಿಯಲ್ಲಿಡಬೇಕೆ? ಅವರು ತಿರಿದುಂಬುವವರಾಗಿಯೇ ಉಳಿಯಬೇಕೆ? ಮುಂತಾದ ಪ್ರಶ್ನೆಗಳ ಹಲವು ಆಧುನಿಕರನ್ನು ಕಾಡುತ್ತಿವೆ. ಗತಕಾಲದ್ದೆಂಬ ಒಂದೇ ಕಾರಣದಿಂದ ಈ ಕಲಾ ಪ್ರಕಾರವನ್ನು ಸಾರಾ ಸಗಟಾಗಿ ತಳ್ಳಿ ಹಾಕುವ ಮುನ್ನ ಪ್ರಸ್ತುತಕ್ಕೆ ತಕ್ಕಂತೆ ಅದನ್ನು ಚಲನಶೀಲಗೊಳಿಸಿ ಜನರನ್ನು ಹಿಡಿದಿಡುವಂತೆ ಮಾಡಲು ಸಾಧ್ಯವಿದೆಯೇ? ಸೂಕ್ತ ವಾತಾವರಣವೊಂದನ್ನು ನಿರ್ಮಿಸಿ ಜಾನಪದ ಅಂಶಗಳನ್ನು ಆಧುನಿಕ ಧೋರಣೆಗೆ ಒಗ್ಗಿಸುವುದರ ಸಾಧಕ ಬಾಧಕಗಳೇನು ಎಂಬ ಬಗ್ಗೆ ಯೋಚಿಸಲೆಡೆಯಿದೆ.

ಈ ಮುನ್ನ ಹೇಳಿರುವಂತೆ ಗೊಂದಲಿಗರ ಆಟದಲ್ಲಿ ಜೀವನೋತ್ಸಾಹ, ನೈತಿಕತೆ, ಕಷ್ಟಸಹಿಷ್ಣುತೆ, ಆತ್ಮವಿಶ್ವಾಸ, ಸಾಹಸ ಮನೋಭಾವಗಳನ್ನು ಬಿತ್ತುವ ತಾಕತ್ತಿದ್ದೇ ಇದೆ; ಒಳಿತು-ಕೆಡಕು, ನೀತಿ-ಅನೀತಿ, ಧರ್ಮ-ಅಧರ್ಮ, ಶೋಷಣೆಯ ಕಷ್ಟ-ಕಾರ್ಪಣ್ಯ ಮುಂತಾದವುಗಳನ್ನು ಬಿಂಬಿಸುವ ದನಿಗಳೂ ಇಲ್ಲದಿಲ್ಲ. ಬದುಕನ್ನು ಆತ್ಮೀಯವಾಗಿ ಕಂಡು ಆರಾಧಿಸುವ ಚೈತನ್ಯವನ್ನು ತಂಬುವ ದೃಷ್ಟಿ ಕೂಡಾ ಇದೆ. ಕಾರಣ, ಇವರ ಕಥಾ ವಸ್ತುಗಳನ್ನು ಕಾಲಕ್ಕೆ ತಕ್ಕಂತೆ ಹೆಚ್ಚು ಸಾಮಾಜಿಕವಾಗುವಂತೆ ಮಾಡಬಾರದೇಕೆ?

ರಷ್ಯಾ, ಚೈನಾ, ಜಪಾನ್, ಜರ್ಮನಿ, ಫಿನ್‍ಲ್ಯಾಂಡ್, ನಾರ್ವೆ, ಸ್ವೀಡನ್ ಮೊದಲಾದ ದೇಶಗಳಲ್ಲಿ ಜಾನಪದ ರಂಗಕಲೆಗಳನ್ನು ಕ್ಷಯಿಸಬಿಡದೆ ಅಲ್ಲಿಯ ಕಲಾವಿದರು, ಪ್ರೇಕ್ಷಕರು, ಸರಕಾರ ಒಗ್ಗೂಡಿ ರಕ್ಷಿಸಿಕೊಂಡಿದ್ದಾರೆನ್ನುತ್ತಾರೆ. ಹೊಸ ಹುಮ್ಮಸ್ಸು ಪಡೆದು ಅವು ಶ್ರೀಮಂತಗೊಂಡಿವೆಯಂತೆ. ಆ ದೇಶಗಳ ಪ್ರೇಕ್ಷಕರು ಕೇವಲ ನವನವೀನ ಇಲೆಕ್ಟ್ರಾನಿಕ್ ಮಾಧ್ಯಮಗಳ ಲಂಪಟ ಗಿರಾಕಿಗಳಾಗದೆ ಹೆಚ್ಚಾಗಿ ನೇರವಾಗಿ ಲಭ್ಯವಿರುವ ಕಲಾವಿದರನ್ನೂ ಅವರ ಕಲೆಗಳನ್ನೂ ದುಡಿಸಿಕೊಳ್ಳುವ ಕಾಳಜಿವುಳ್ಳವರಾಗಿದ್ದಾರಂತೆ.

ನಮ್ಮ ಗೊಂದಲಿಗರ ಆಟಗಳಂಥ ದುಡಿಮೆಗಾರರೊಂದಿಗೆ ಬೆಳೆದು ಬಂದಿರುವ ಜಾನಪದ ರಂಗಕಲೆಗಳು ಕೂಡಾ ಹೀಗೆ ಉಳಿದು ಬಾಳಬೇಕೆಂದರೆ ಇಡೀ ಜನ ಸಮಾಜದ ಅಭಿಮಾನ, ಸಕ್ರಿಯ ಆಸಕ್ತಿ ಪೋಷಣೆಗಳು ಬೇಕೇ ಬೇಕು; ಸರಕಾರದ ಪ್ರೋತ್ಸಾಹದ ನೆರವೂ ಮುಖ್ಯ. ಗೊಂದಲಿಗ ಕಲಾವಿದರ ಬೇಡಿಯೇ ಬದುಕುವ, ತಮ್ಮ ಕಲೆಯನ್ನು ಬದುಕಿಸಿಕೊಳ್ಳುವ ದಯನೀಯತೆ ನೀಗಬೇಕು; ಅವರ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳಬೇಕು. ಅವರು ಕೇವಲ ತಮ್ಮದಾದ ಅನುವಂಶಿಕ ಕಲೆಯನ್ನು ಕಾಪಾಡಿಕೊಳ್ಳುವುದಿದ್ದಲ್ಲಿ ಅದಕ್ಕೆ ಕಾಲಕ್ಕೆ ತಕ್ಕ ಹೊಸದೃಷ್ಟಿ ಹೊಸ ಸಾಧನೆ, ಹೊಸ ಸಿದ್ಧತೆ ಮಾಡಿಕೊಳ್ಳುವುದೂ ಅಷ್ಟೇ ಅತ್ಯವಶ್ಯಕ.

ಆದರೆ ಪ್ರಸ್ತುತದಲ್ಲಂತೂ ಈ ದಿಶೆಯಲ್ಲಿ ಅಂಥ ವಿಧಾಯಕ ದೃಷ್ಟಿಯಲ್ಲಿ ಕಾಣುತ್ತಿದೆ!