ನಾಂದಿ

ಎಂಥಾತ ಗುರುರಾಯನು ಬಾಳಂತಃಕರಣ ಉಳ್ಳಾತನು
ಕಾಂತೇಯ ನೀ ಬಾ ಎಂದು ಏಕಾಂತಕ್ಕೆ ಕರೆದೊಯ್ದು
ಎಂಥಾ ಮಾತ್ಹೇಳಿದನೆ ಗುರುರಾಯ ಎಂಥಾತ ಗುರುರಾಯನೇ
ಆರು ಗುಣ ಅಳಿಯಂದನೇ ಇವು ಮೂರು ಗುಣ ತಿಳಿಯಂದನೇ
ಅಷ್ಟ ಮದಗಳೆಲ್ಲಾ ಗಟ್ಟಿಯಾಗಿ ಹಿಟ್ಟುಕುಟ್ಟಿ
ಅಷ್ಟ ಮದಗಳೆಲ್ಲಾ ಗಟ್ಟಿಯಾಗಿ ಹಿಟ್ಟುಕುಟ್ಟಿ
ಹಿಟ್ಟನ್ನು ತೋರೆಂದನೇ ಗುರುರಾಯ
ಎಂಥಾತ ಗುರುರಾಯನೆ.
ಬೈಲಿಗೆ ಬೈಲೆಂದನೆ ನಿರ್ ಬಯಲೊಳಗೆ ಆಡೆಂದನೇ
ಬಯಲು ನೀರಲ್ಕೇರಿ ಮೇಲೆ ಮಂಟಪದೋಳ್ ಆಡೆಂದನೇ
ಆಲಯದೊಳಗೆ ಆಡೆಂದನೇ ಗುರುರಾಯ
ಎಂಥಾತ ಗುರುರಾಯನೇ
ಸಾಧುರಿಗೆ ನೆನೆಯೆಂದನೇ ಅವರ ಪಾದಕ್ಕೆ ಎರಗೆಂದನೇ
ಸಾಧುರಿಗೆ ನೆನೆಯಂದನೇ ಅವರ ಪಾದಕ್ಕೆ ಎರಗೆಂದನೇ
ಸಾಧು ಸತ್ಪುರುಷರ ಬೋಧವು ತಿಳಿದರೆ
ಸಾಧು ಸತ್ಪುರುಷರ ಬೋಧವು ತಿಳಿದರೆ
ಬಾಧೆ ನಿನಗಿಲ್ಲೆಂದನೇ ಗುರುರಾಯ ಎಂಥಾತ ಗುರುರಾಯನೇ |
ಬಯಲಿಗೆ ಬಯಲೆಂದನೈ ನಿರ್ಬೈಲೊಳಗೆ ಆಡೆಂದನೈ
ಬಯಲು ನಿರ್ಬಯಲೇರಿ ಮೇಲು ಮಂಟಪದೊಳು
ಆಲಯದೊಳಗೆ ಆಡೆಂದನೇ | ಗುರುರಾಯ
ಎಂಥಾತ ಗುರುರಾಯನೇ ||

ಕತೆಗಾರ : ಏನ್ರೀ ಈ ಮಧ್ಯಲೋಕದಲ್ಲಿ ಧರ್ಮಾವತಿ ಪಟ್ಣದಲ್ಲಿ ಧರ್ಮಸೇಕ

ಮಹಾರಾಜ : ಬುದ್ಧಿವಂತ ಮಂತ್ರಿ, ರಾಜ ಒಳ್ಳೀ ಧರ್ಮಿಷ್ಟ.

ಹಿಮ್ಮೇಳಿಗ : ಹೌದು.

ಕ : ರಾಜನ ದಯಾ ಯಂಥಾದ್ದು? ಕೆರೆ ಬಾವಿಗಳು ಕಟ್ಟಿಸ್ಬೇಕು, ಗುಡಿ ಮಂಟಪ ಕಟ್ಟಿಸ್ಬೇಕು, ಬಡವರ್ನ ಕರಸ್ಬೇಕು, ಲಗ್ನಮೂರ್ತ ಮಾಡ್ಬೇಕು. (ರಾಗವಾಗಿ) ತಡಿತಪ್ಪಡಿ, ಜೋಗಿ ಜಂಗಮ, ಹಕೀಮರ್ನೂ, ಫಕೀರ್ನೂ, ಸನ್ಯಾಸಿ ಬಾವಾಜಿ ಯೋಗ್ಗಳು ಬಂದ ನಿಂತ್ಕೊಂಡು

ಹಿ : ಆಹಾ!

ಕ : ರಾಜನ ಮುಂದೆ ನಿಂತ್ಕೊಂಡು ದಯಾಂತ ಭಿಕ್ಷೆ ಬೇಡಿದ್ರೆ, ರಾಜ ಧರ್ಮಸೇಕ ಧೊರೆ, ಕುಂತ್ಕೊಂಡು ಏನು ಭಿಕ್ಷಾ ಕೊಡ್ತಾನ್ರಿ?

ಹಿ : ಆಹಾ!

ಕ : (ರಾಗವಾಗಿ) ಗೋಪಿದಾನ, ಅನ್ನದಾನ, ವಸ್ತ್ರದಾನ; ಇರುವೆಗೂ ಸಕ್ರಿ ಹಂಚ ಬೇಕು, ಪಕ್ಷಿಗಳಿಗೂ ಅನ್ನ ಹಾಕಬೇಕು, ನೀರಿಲ್ಲದ ಜಾಗದಲ್ಲಿ ನೀರಿನ ಅರವಂಟಿಗೆ ಇಡಸ್ಬೇಕು.

ಹಿ : ಒಳ್ಳೇದು.

ಕ : ಧರ್ಮಶಾಲೆ ಛತ್ರ ಕಟ್ಟಿಸ್ಬೇಕು. ಇಂಥಾ ಪುಣ್ಯದಾನ ಮಾಡ್ತಾಯಿದಾನ ಧರ್ಮಸೇಕ ಮಹಾರಾಜ!

ಹಿ : ಹೌದು.

ಕ : ದಂಡು ಕಡಿಮೆ ಇಲ್ಲ, ದೌಲತ್ತು ಕಡಿಮೆಯಿಲ್ಲ, ಸೀಮಿಭೂಮಿಗೇನು ಕಡಿಮಿ ಇಲ್ಲ.

ಹಿ : ಸಕಲ ಸಂಪತ್ತು ಐಶ್ವರ್ಯಾನೆ ಭಗವಂತ ಕೊಟ್ಟು ಮರ್ತಾನೆ! ಹನ್ನೆರಡುಸಾವಿರ ದಂಡು, ವಾಲ್ಮೀಕಿ ದಂಡು. ಎಲ್ಲನೂರು, ಮಲ್ಲನೂರು, ಗಂಚಲನೂರು, ಅರ್ಬಾರ್ ದಂಡು, ಸಿದ್ಧೇರ ದಂಡು.

ಕ : ಇಂಥ ಹನ್ನೆರಡುಸಾವಿರ ದಂಡಿಗೆ ಕರ್ಕೊಂಡು ಪಟ್ಟಾ ಆಳ್ಬೇಕಾದ್ರೆ-

ಹಿ : ಧರ್ಮಾವತಿ ಪಟ್ಣದಲ್ಲಿ ಮಹಾರಾಜನ ಮಡದಿ ಗಂಗಾಸಾಗ್ರ.

ಕ : ಹೀಗಿರಬೇಕಾದ್ರೆ-

ಹಿ : (ರಾಗವಾಗಿ) ಅದೇ ರಾಜಗ ಕೇಳಿರಿ ದೈವಾ…. ಆ ರಾಜಗ ಒಬ್ಬ ಮಗ ಐದಾನಾ…. ಹರಹರಯನ್ನ ಮಾದೇವ.

ಕ : ಧರ್ಮಸೇಕ ಮಹಾರಾಜಗೆ ಒಬ್ಬ ಮಗ ಐದಾನೆ.

ಹಿ : ಓಹೋ!

ಕ : ಮಗನ ನಾಮಕರಣ?

ಹಿ : ನೀಲಕುಮಾರ ಮಹಾರಾಜ, ನೀಲಕುಮಾರ ಧೊರಿ.

ಕ : ಮೀಲಕುಮಾರ ಓದು ಬರಹ, ಶಾಸ್ತ್ರ ಪುರಾಣ, ಯುದ್ಧದಲ್ಲಿ ಮಹಾಬುದ್ಧಿವಂತ ಮಗ.

ಹಿ : ಒಳ್ಳೇದು.

ಕ : ರೂಪದಲ್ಲಿ ದೇವತಾ! ದೇವೇಂದ್ರನ ಪ್ರಕಾಶದಂಥ ಮಗ.

ಹಿ : ಆಹಾ!

ಕ : ವಿದ್ಯಾ ಓದಿ ಬುದ್ಧಿವಂತ ಆಗಿ ಅರಮನಿಯಾಗ ಇರ್ಬೇಕಾದ್ರೆ, -ತಂದೆ ಕಛೇರಿಗೆ ಮಗ ನಮ್ದಿಲ್ಲ ಇನ್ನೂವರ್ಗೂ!

ಹಿ : ಒಳ್ಳೇದು!

ಕ : ದರ್ಬಾರ್ ಕಛೇರಿ ಮಾಡೋದೆಲ್ಲ ತಂದೀದು!

ಹಿ : ಆಹಾ!

ಕ : ಗಂಗಾಸಾಗ್ರ ಮಡದೀ-

ಹಿ : ಮಹಾರಾಜಾ?

ಕ : ಈ ನಮ್ಮ ಪ್ರಜೆಗಳಿಗೆ ನಾವು ನೀನು ಪಟ್ಟಾ ಆಳ್ತಾ ಅದೀವಿ;

ಹಿ : ಹೌದು.

ಕ : ಈಗ ನಮಗೆ ಅರುವು-ಮರುವು ಅರವತ್ತು ವರ್ಷ. ಊರು ದೂರಾತು; ಕಾಡು ಸನೇಕ ಬಂತು.

ಹಿ : ಮತ್ತೇನು?

ಕ : ಸೀಮಿಭೂಮಿ ಸಕಲ ಸಂಪತ್ತು ನೋಡೋದು ನಮ್ಮ ಕೈಲೆ ಆಗೋದಿಲ್ಲ.

ಹಿ : ಒಳ್ಳೇದ್ರಿ.

ಕ : ನಮಗೇನು ಹತ್ತು ಮಂದಿ ಮಕ್ಳೈದಾರೆ!

ಹಿ : ಒಬ್ಬಾ ಮಗ!

ಕ : ನೀಲಕುಮಾರ ಒಳ್ಳೇ ಪ್ರಾಯಕ್ಕ ಬಂದಾನಲ್ಲ ಮನಿಯಾಗ!-

ಹಿ : ಆ.

ಕ : ಆ ಮಗನಿಗೆ ಕರೇಕಳ್ಸಿ ಕಛೇರಿಯೊಳಗ ಪಟ್ಟಾಕಟ್ಟಿಬಿಟ್ರೆ-ಪಟ್ಟಾ ತೊಗೊಂಡು ಪಟ್ಟಾ ಆಳ್ತಾನೆ.

ಹಿ : ಒಳ್ಳೇದು ಮಾರಾಜ್.

ಕ : ಈಗ ಮಡದೀ-

ಹಿ : ಆ.

ಕ : ಮಗನಿಗೆ ಕಛೇರಿಗೆ ಕರೇಕಳಿಸಿಬಿಡಾನು.

ಹಿ : ಓಹೊ ಕಛೇರಿಗೆ ಕರೇಕಳಿಸಿಬಿಡಾನು.

ಕ : ಮಂತ್ರೀ ಬುದ್ಧಿವಂತಾ.

ಹಿ : ಏನು ಮಹಾರಾಜ್ರೇ?

ಕ : ನೀನು ಹೋಗಿ ಮನಿಯಾಗ ಇರಂಥ ನೀಲಕುಮಾರನಿಗೆ ಕರ್ಕೊಂಡು ಬಾ

ಹಿ : ಅಗತ್ಯ ಆಗಲಿ ಮಾರಾಜ್

ಕ : ಆವಾಗ ಮಂತ್ರಿ ಬಾಜಾರದಾಗ ಬರ್ತಾನೆ ನೋಡ್ರಿ! ನೀಲಕುಮಾರನೂ ಈ ಮಂತ್ರಿ ಚಾಕರಿ ಮಾಡೋಂಥ ಬುದ್ಧಿವಂತ್ ಮಂತ್ರಿ ಒಂದೇ ವಯಸ್ನೋರು.

ಹಿ : ಮಂತ್ರಿ-ನೀಲಕುಮಾರ ಒಂದೆ ಸಾಲ್ಯಾಗೆ ಕುಂತು ಓದಿದಂಥ ಜೀವದ ಗೆಳೆಯಾರು.

ಕ : ಹೌದು.

ಹಿ : ನಮೋ ನಮೋ ನಮಸ್ಕಾರ ಗೆಳೆಯ ನೀಲಕುಮಾರ ದೊರೀ.

ಕ : ಶರಣಾರ್ಥಿ ಏನು ಮಂತ್ರಿ ಬಂದೇ-

ಹಿ : ಇವತ್ತು ಮಹಾರಾಜ್ರು-ನಿಮ್ಮ ತಂದೆಯವರು, ಹೇಳಿ ಕಳಿಸ್ಯಾರಲ್ಲಪಾ

ಕ : ಯಾರು?

ಹಿ : ಧರ್ಮಸೇಕ ರಾಜ ನಿಮ್ಮ ತಂದೆ, ತಾಯಿ ಗಂಗಾಸಾಗ್ರ-ಬಾಜಾರದಲ್ಲಿ ಪಗಡೂರ್ ಸಾಲ್ ಬಣ್ಣದ ಕಛೇರಿಗೆ ಬರ ಮಾಡಿದ್ದಾರೆ.

ಕ : ಆಹಾ! ಇಲ್ಲೀವರ್ಗೂ ನಾನು ಯೌವ್ವನ ಪ್ರಾಯಕ್ಕೆ ಬಂದು ಅರಮನಿಯಾಗಿದ್ದಾಗ ನನ್ಗೆ ಒಂದು ದಿವ್ಸಾರ ಕಛೇರಿಗೆ ತಂದೆ ಬರ ಮಾಡಿದ್ದಿಲ್ಲ-

ಹಿ : ಬರ ಮಾಡಿದ್ದಿಲ್ಲ!

ಕ : ಇವತ್ತು ಆ ಕಛೇರಿಗೆ ನನಗೆ ಕರೆ ಕಳಿಸ್ಬೇಕಾದ್ರೆ ಯದಕ್ಕ ಕರೆಕಳಿಸಿದ್ದಾರು!

ಹಿ : ಓಹೋ,

ಕ : ಏನು ಸಮಾಚಾರೋ (ರಾಗವಾಗಿ) ಬರ್ತೀನಿ ಮಂತ್ರಿ ಹೋಗಾನು ನಡೀ… …. ತಲಿಮ್ಯಾಲೆ ಜರ್ತಾರ ಮಂದೀಲ, ಮೈಯಾಗ ಜೋಡು ಅಂಗಿ, ಶಹರ್ದೂಲ್ ಶಾಲು, ಕಾಶೀ ನಡುಕಟ್ಟು, ರಾಜ ಉಡುಗೊರೆ ಹಾಕ್ಕೊಂಡ ನೀಲಕುಮಾರ ಮಗ…….

ಹಿ : ಆಹಾ!

ಕ: ಮಂತ್ರಿ ಮುಂದೆ, ಮಗ ಹಿಂದೆ, ಇಬ್ರೂ ದರ್ಬಾರ್ ಕಛೇರಿಗೆ ಬಂದು ನೋಡ್ತಾರೆ ಧರ್ಮದ ಸಿಂಹಾಸನ ನಿಗಿನಿಗಿ ಹೊಳಿತೈತಿ, ತಂದೆ ಕುಂತಾನೆ ಧರ್ಮಸೇಕ.

ಹಿ : ಆಹಾ!

ಕ : ಗಂಗಾಸಾಗ್ರ ಕುಂತಾಳೆ ತಾಯಿ!

ಹಿ : ನಮೋ ನಮೋ ತಂದೆ ಧರ್ಮಸೇಕಾ, ಗಂಗಾಸಾಗ್ರ ತಾಯಿ, ಜನನೀ ನಮಸ್ತೇ

ಕ : ಬಾ ಮಗನೆ, ಬಾ ನೀಲಕುಮಾರಾ.

ಹಿ : ಆಹಾ!

ಕ : ಬಲಭಾಗದಲ್ಲಿ ಬೆಳ್ಳಿ ಕುರ್ಚಿ ಐತಿ ಕುಂದ್ರು.

ಹಿ : ಒಳ್ಳೇದು ತಂದೆ.

ಕ : ಮಗ ಕುಂತು ನೋಡ್ತಾನೆ-ತಂದೆ ಕಛೇರಿ! ಅಬಾಬಾ ಏನು ತಂದೆ ಇದು?

ಹಿ : ಇದು ಸಿಂಹಾಸನ

ಕ : ರೈತರು, ಶ್ರೀಮಂತರು, ಸಾಹುಕಾರು, ದಂಡು ಮಾರ್ಬಲ! ನಿಗಿನಿಗಿ ಹೊಳಿತೈತಿ ವೈಭವದ ಕಛೇರಿ.

ಹಿ : ಇವತ್ತು ನನಗೆ ಕರಿಸ್ದೆಲ್ಲಾ ತಂದಿ-ಏನು ಕಾರಣ?

ಕ : ನಿನ್ನ ಕರೆಸಿದ ಕಾರಣ ಇದು-

ಹಿ : ಹಾ!

ಕ : ನೀಲಕುಮಾರ-

ಹಿ : ಏನು ಜನಕಾ?

ಕ : ಈಗ ಈ ಪಟ್ಟಾ ತೊಗೊಂಡು ಈ ದಂಡಿಗೆಲ್ಲ ಸಂಬ್ಳ ಕೊಡೋದು ನೀನು ಮಾಡ್ಬೇಕು.

ಹಿ : ಓಹೋ!

ಕ : ಈ ಬಂಟರಿಗೆ ರೋಜ್ಗಾರ್ ಕೊಟ್ಟು ಲೆಕ್ಕ ಬರೀಬೇಕು.

ಹಿ : ಒಳ್ಳೇದು.

ಕ : ಅರಿಖಂಡ, ಕುರಿಖಂಡ, ಕಾಶಿಖಂಡ, ಭದ್ರಾವತಿ ಈ ನಾಲ್ಕೂ ದಿಕ್ಕಿನ ರಾಜ್ರೆಲ್ಲಾ ಕಪ್ಪ ಕಾಣಿಕೆ ಕೊಡ್ತಾರೆ, ಅದನ್ನ ತೊಗೊಂಡು ಲೆಕ್ಕ ಬರೆದಿಡಬೇಕು.

ಹಿ : ನಿಜ

ಕ : ಪುಣ್ಯ ಮಾಡ್ಬೇಕು, ಧರ್ಮ ಮಾಡ್ಬೇಕು, ರಾಜತ್ವ ಮಾಡ್ಬೇಕು, ಈ ಪದ್ಧತಿ ನನ್ನ ಕೈಲೆ ಈಗ ಆಗ್ವಲ್ಲದು.

ಹಿ : ಹಾ.

ಕ : ನಿನ್ನ ಸ್ವಾಧೀನ ಮಾಡ್ತೀನಿ ತೊಗೊಳ್ಳೊ-ಪಟ್ಟಾ

ಹಿ : ಓಹೋ! ಇದು ಸಕಲ ಸಂಪತ್ತು ಸಾಮ್ರಾಜ್ಯ ನನ್ನ ಸ್ವಾಧೀನ!

ಕ : ಹೌದು, ನೀನೆ ತೊಗೋಬೇಕು ಈಗ ಮಗನೆ.

ಹಿ : ಇದೆಲ್ಲಾ ಕುಂತು ನಾನು ದಾನಧರ್ಮ ಮಾಡ್ಬೇಕಾಗ್ತದೆ.

ಕ : ಹೌದು ದಾನಧರ್ಮ ಮಾಡ್ಬೇಕು ರಾಜ ಕ್ಷತ್ರಿದಲ್ಲಿ

ಹಿ : ಆ ದಾನಧರ್ಮ ಮಾಡ್ಬೇಕಾದ್ರೆ ಇದೆಲ್ಲ ಗಳಿಸಿದ್ದು ನೀನೇ! ನೀನು ಗಳಿಸಿದ ಸಾಮ್ರಾಜ್ಯ-

ಕ : ಆಹಾ ಹೌದ್, ಈ ಸಾಮ್ರಾಜ್ಯ ಮಾಡಿದ್ದು ನಿಮ್ಮ ತಂದೆ-ನಾನು.

ಹಿ : ಒಳ್ಳೇದು.

ಕ : ಅಲ್ಲ ತಂದೆ;

ಹಿ : ಆ

ಕ : ನೀನು ಮಾಡಿದ ಸಾಮ್ರಾಜ್ಯ ತೊಗೊಂಡು ಪಟ್ಟಾ, ದಾನಧರ್ಮ ಮಾಡಿದ್ರೆ ಆ ಧರ್ಮ ಯಾರಿಗೆ ಬಂತು?

ಹಿ : ಆಹಾ!

ಕ : ನಿನಿಗೆ ಬಂತು ತಂದೆ.

ಹಿ : ಹೌದು.

ಕ : ನನಿಗೆ ಬರ್ಲಾರ್ದು. ನಾನು ಮಾಡ್ಬೇಕಾದ್ರೆ ಧರ್ಮ-ನಾನು ಸ್ವಂತಕ್ಕೆ ದ್ರವ್ಯ ಗಳಿಸ್ಬೇಕು.

ಹಿ : ಹೌದು.

ಕ : ದೇಶದ ರಾಜರತಾಗ ಹೋಗಿ ನನ್ನ ವಿದ್ಯಾ ತೋರಿಸ್ಬೇಕು, ನನ್ನ ವಿದ್ಯಕ್ಕೆ ಅವರು ಗೌರವ ಕೊಟ್ಟು-

ಹಿ : ಹಾ.

ಕ : ನನಗೆ ಧನ ಕೊಟ್ಟ ಬಳಿಕ ಆ ಧನ ದ್ರವ್ಯ ತೊಗೊಂಡು ಬಂದು ಪಟ್ಟಾ ಕುಂತು ದಾನಧರ್ಮ ಮಾಡಿದ್ರೆ ಆವಾಗ ನನಗೆ ಧರ್ಮ ಬರ್ತೈತಿ.

ಹಿ : ಪುಣ್ಯಾ ಬರ್ತೈತಿ.

ಕ : ನೀನು ಮಾಡಿದ ಸೀಮಿ, ಭೂಮಿ, ದ್ರವ್ಯ ನಾನು ತೊಗೊಂಡು ಧರ್ಮ ಮಾಡಿದ್ರೆ ಆ ಧರ್ಮ ನನಿಗೆ ಬರಾದಿಲ್ಲ-ಅಂದ ಮಗ.

ಹಿ : ಓ ನಿಜ.

ಕ : (ರಾಗವಾಗಿ) ಅಯ್ಯೋ ಹುಚ್ಚು ಮಗನೇ ನೀಲಕುಮಾರಾ…….ತಂದೆ ಮಾಡಿದ್ದು ಮಗ ಉಣ್ಣಬೇಕು, ಮಗ ಮಾಡಿದ್ದು ತಂದೆ ಉಣ್ಣಬೇಕು…….ತಂದೆ ಮಾಡಿದ ಪುಣ್ಯ ಮಗನಿಗೆ, ಮಗ ಮಾಡಿದ ಪುಣ್ಯ ತಂದಿಗೇ……ಇದು ಜಗತ್ತಿನಾಗೇ ನಡದೈತಿ ಮಗನೇ……….

ಹಿ : ಐತೆ.

ಕ : (ರಾಗವಾಗಿ) ಇದರಾಗೆ ಏನೂ ಭೇದವಾಗೋದು ಇಲ್ಲ. ಪಟ್ಟ ತೊಗೊಂಡು, ಪಟ್ಟ ಆಳಪ್ಪ ಮಗನೇ………

ಹಿ : ಆಹಾ.

ಕ : ನೀನು ದೇಶದ ಮೇಲೆ ಹೋಗ್ತೀನಿ ಅಂತಿಯಲ್ಲೋ ನೀಲಕುಮಾರಾ!

ಹಿ : ಆಹಾ!

ಕ : ನೀನೇನು ಬಡವನೇ ಏನು ಬಗ್ಗನೇ, ದೇಶದ ಮೇಲೆ ಹೋಗ್ಲಿಕ್ಕೆ?

ಹಿ : ಹೌದು.

ಕ : ಇಡೀ ಜಗತ್ತಿಗೇ ರಾಜಾಧಿರಾಜ, ಮುವ್ವತ್ತು ಮೂರು ದೇಶಕ್ಕೆ ನಾನು ಅಧಿಪತಿ ಆದಾಗ ನನ್ನ ಮಗ ನೀನು ದೇಶದ ಮೇಲೆ ಹೋಗ್ತೀನಿ ಅಂತಿಯಲ್ಲೋ……….

ಹಿ : ಬ್ಯಾಡ.

ಕ : ಹಾಗಲ್ಲ ತಂದೆ ನಾನು ಹೋಗ್ತೀನಂತ್ಹೇಳಿದ್ರೆ ಹನ್ನೆರಡು ವರ್ಷ ಹೋಗಾದಿಲ್ಲ. ಒಂದು ತಿಂಗಳಾಗಲೀ ಹದಿನೈದು ದಿವಸಾಗಲೀ ದೇಶದ ರಾಜರತಾಗ ನನ್ನ ವಿದ್ಯಾ ತೋರ್ಸಾಕೆ ಹೊಕ್ಕೀನಿ.

ಹಿ : ವಿದ್ಯಾ ತೋರ್ಸಿ-

ಕ : ತೋರ್ಸಿ ಆ ವಿದ್ಯಾಕ್ಕೆ ಅವರು ಒಪ್ಪಿ ಹಣ ಕೊಟ್ರೆ, ಹಣ ತೊಗೊಂಡು ಪಟ್ಟಾ ದಾನಧರ್ಮ ಮಾಡ್ತೀನಿ.

ಹಿ : ಆಹಾ!

ಕ : ಅಲ್ಲೀವರೆಗೂ ನನಗೆ ಸಾಧ್ಯವಿಲ್ಲ.

ಕ : ಸಿಬ್ಬಂದಿ ರೆಡಿಯಾಯ್ತು ಹೋಗಲಿಕ್ಕೆ ಊರುಬಿಟ್ಟು.

ಹಿ : ಮಗ ನೀಲಕುಮಾರ ತಾಯಿ-ತಂದಿ ಮಾತು ಮೀರಿ ಒಂದೇ ಹಟ ಹಿಡ್ದ

ಕ : ಅಗಸಿಗೆ ಬರ್ಬೇಕಾದ್ರೆ ರೈತರು, ಶ್ರೀಮಂತರು, ಸಾಹುಕಾರ್ರು, ಗೆಳೆಯರು ಎಲ್ಲಾರಿಗೂ ಹೇಳಿ ಕೇಳಿ ಕುದ್ರಿ ಮ್ಯಾಲೆ ಕುಂತಾನ ನೀಲಕುಮಾರ-ದೇಶದ ಮೇಲಿ ಹೋಗ್ಲಿಕ್ಕೆ.

ಹಿ : ಆಹಾ

ಕ : ಅಪ್ಪಾ! ಹೋಗ್ತೀಯ ಮಗನೆ…….ಲಗೂ ಮಾಡಿ ಬಾ ಬಾಳ.

ಹಿ : ಒಳ್ಳೇದು ತಂದೆ.

ಕ : ತಾಯಿ ತಂದೆ ಕಣ್ಣೀರು ತೆಗಿತಾರೆ, ಎಲ್ಲಾರಿಗೂ ಹೇಳಿ ಕೇಳಿ, ಎಲ್ಲಾರಿಗೂ ಮಾತಾಡ್ಸಿ ಆ ಊರು ಬಿಡ್ಬೇಕಾದ್ರೆ-

|| ಪದ ||

ಎರಡು ಹರ್ದಾರಿ ಬಂದಾನಾ……….ಶಿವಯನ್ನ ಮಾದೇವ
ರಸ್ತಿಯೊಳಗ ಹೂವಿನ ವನಾಂತ್ರ……..ಶಿವಯನ್ನ ಮಾದೇವ

ಕ : ಊರುಬಿಟ್ಟು ಎರಡರ್ಧಾರಿ ಬರ್ಬೇಕಾದ್ರೆ ರಸ್ತೆಮ್ಯಾಲೆ ಹೂವಿನ ವನಂತರದಾಗ ಕುದ್ರಿ ನಿಲ್ಲಿಸಿ ವನಂತರ ನೋಡ್ತಾನ-ಅಬಾಬಾ ಮಂತ್ರಿ!

ಹಿ : ಆಹಾ!

ಕ : ಏನಿದು ವನಂತರ ಇದು?

ಹಿ : ಇದು ಮಹಾಸ್ವಚ್ಛವಾದ ವನಾಂತರ.

ಕ : ಧರ್ಮದ ವನಂತರ ಇದು-ಸೂಜಿಮಲ್ಲಿಗೆ, ಜಾಜಿಮಲ್ಲಿಗೆ, ಇರುವಂತಿಗೆ, ಸೇವಂತಿಗೆ ಚಂಡಮಲ್ಲಿಗೆ, ದುಂಡುಮಲ್ಲಿಗೆ, ದಂಡಾಪತ್ರಿ ದ್ರಾಕ್ಷಿ, ದಾಳಿಂಬ್ರಿ. ಸ್ವಚ್ಛವಾದ ವನಂತರ ನೋಡ್ಲಿಕ್ಕೆ ಆನಂದ ಆಯ್ತು-ಮಂತ್ರಿ! ಸ್ವಲ್ಪತ್ತು ಕುಂತು ಹೋಗಾನು ಮುಂದೆ ದೇಶದ ಮೇಲೆ.

ಹಿ : ಹಾ.

ಕ : ಇಲ್ಲಿ ಡೇರಿ ಹೊಡಿರಪ್ಪ ಅಂತ್ಹೇಳಿ ಎಲ್ಲಾರು ಕುಂತುಬಿಟ್ರು ವನಂತರದಾಗ-ಮಂತ್ರೀ

ಹಿ : ಏನ್ರೀ?

ಕ : ಯಾವ ದಿಕ್ಕಿಗೆ ಇಲ್ಲಿಂದ ನಾವು ಹೋಗೋದು?

ಹಿ : ಓಹೋ!

ಕ : ಮಹಾರಾಜಾ! ನೀವು ಯಾವ ಕಡಿ ಹೋಗ್ತೀರೋ ಆ ಕಡಿ ನಾವು ಬರ್ಲಿಕ್ಕೆ ತಯಾರs-ಏನು ಪೂರ್ವ ದಿಕ್ಕಿಗೆ ಹೋಗಾನೊ ಏನು ಪಶ್ಚಿಮ ದಿಕ್ಕಿಗೆ ಹೋಗಾನೊ?

ಹಿ : ಒಡಿಯಾನ ಹೇಳ್ಕಿ ಬಡಿಗಿ ಮಾಟ. ಮಹಾರಾಜ ನೀಲಕುಮಾರಾ-ನಿಮ್ಮ ಕಾಲು ಮುಂದು ನಮ್ಮ ಕಾಲು ಹಿಂದು.

ಕ : ನೀವು ಯಾವ ಕಡಿಗೆ ಹೋಗ್ತೀರೋ ನಿಮ್ಮ ಹಿಂದೆ ನಾವೆಲ್ಲಾರು ರೆಡಿಯಾಗೀವಿ.

ಹಿ : ಆ.

ಕ : ಹೋಗೋ ಬರೋ ಸುದ್ದಿ ಮಾತಾಡ್ಕೊಂತ ವನಂತರದಾಗ ನೋಡ್ರೀ ನೀಲಕುಮಾರ ರಾಜನು ಊರು ಬಿಟ್ಟುಬರೋ ಮುಂದುಗಡಿಗೆ ಯಾರಿಗೆ ಮರತು ಬಂದಿದ್ದರಿ?

ಹಿ : ತನ್ನ ಜೀವದ ಗೆಳೆಯನಾದ ಮುತ್ತುಶೆಟ್ಟಿ ಸಾಹುಕಾರನ್ನ.

ಕ : ಪಗಡೋಸಾಲು ಬಜಾರದಲ್ಲಿ ಸ್ನೇಹಭಾಗ ಒಳ್ಳೆ ಗೆಳೆತನ-ಶೆಟ್ಟೀದು.

ಹಿ : ಆ.

ಕ : ಆಹಾ-ಮಂತ್ರಿ!

ಹಿ : ಏನು ಮಾಹಾರಾಜ್?

ಕ : ನನ್ನ ಗೆಳೆಯಗ್ಹೋಗಿ ಮಾತಾಡ್ಸಿ ಬರ್ಲಿಲ್ಲ-ನಾನು ಊರೂರು ಮ್ಯಾಲೆ ಹೋಗ್ತೀನಂತ್ಹೇಳಿ!

ಹಿ : ಓಹೋ ಮರ್ತು ಬಂದ್ನೆಲ್ಲಾ!

ಕ : ಹೋಗಿ ಮಾತಾಡ್ಸಿ ಬರ್ತೀನಿ ನೀವೆಲ್ಲಾ ಇಲ್ಲೆ ಕುಂತಿರ್ರಿ.

ಹಿ : ಹೋಗ್ಬಾರ್ದು ರಾಜಕುಮಾರ.

ಕ : ಯಾಕಪ್ಪಾ ಮಂತ್ರೀ?

ಹಿ : ಅದು ಮುಂದಿಟ್ಟ ಕಾಲು ಹಿಂದಕ್ಕ ಇಟ್ರ ಅಪಶಕುನಾಗುತೈತಿ ಹೋಗಬಾರ್ದು.

ಕ : ಅಲ್ಲೊ ಒಂದು ಅರ್ಧ ಗಂಟ್ಯಾಗ ಹೋಗಿ ಗೆಳಿಯಾಗ ಮಾತಾಡ್ಸಿ ಬರ್ತೀನಿ.

ಹಿ : ನೀವೇನು ಒಂದು ಆರು ತಿಂಗಳು ಹೋಗಾದಿಲ್ಲ ಮಾರಾಜ್! ನನ್ನ ಮಾತು ಕೇಳ್ರಿ-ಮಂತ್ರಿ ಮಾತು ಇದು.

ಕ : ಆ.

ಹಿ : ಏನೋ ಹದಿನೈದು ದಿವಸ ಒಂದು ತಿಂಗಳೊಳಗ ಬಂದು ಆಮ್ಯಾಲೆ ಗೆಳೆಯಾಗ ಮಾತಾಡ್ಸುವಂತ್ರಿ, ಆಹಾನಾ ನೀವೇನು ಹೋಗಾ ಅವಶ್ಯ ಇಲ್ಲ.

ಕ : ನಾವು ಈಗ ಹಂಗ ಹೋದ್ರ ಗೆಳೆಯ ಮನಸ್ಸು ಮುರ್ಕೊಂತಾನೊ!

ಹಿ : ಮನಸ್ಸು!

ಕ : ಏನಂತಾನಂದ್ರೆ-

ಹಿ : ಆಹಾ!

ಕ : ಎಲ್ಲರ ಮನಿಗೂ ಬಂದು ಹೋದ, ನಮ್ಮ ಮನಿಗೆ ಸ್ವಲ್ಪ ಬರ್ಲಿಲ್ಲ ಅಂತ್ಹೇಳಿ ಗೆಳೆಯ ಮನಸ್ಸು ಮುರ್ಕೊಂಡಾನು; ಹತ್ತು ನಿಮಿಷದಾಗ ಹೋಗಿ ಗೆಳೆಯಗೆ ಮಾತಾಡಿಸಿ ಬರ್ತೀನಿ ನನಗೆ ಅಪ್ಪಣಿ ಕೊಡ್ರಿ.

ಹಿ : ಒಳ್ಳೇದು ಹೋಗಿ ಬರ್ರಿ.

ಕ : ಕುದ್ರಿಮ್ಯಾಲೆ ಕುಂತ್ಕೊಂಡು ಆದಂಡು ಮಂತ್ರಿಗೆ ಅಲ್ಲಿಬಿಟ್ಟು

ಹಿ : ಬಿಟ್ಟು,

ಕ : ವಾಪಾಸು ಊರಿಗೆ ನಡೆದ-ಗೆಳೆಯನಿಗೆ ಮಾತಾಡಿಸ್ಲಿಕ್ಕೆ;

ಹಿ : ಆ ಧರ್ಮಾವತಿ ಪಟ್ಣಕ್ಕೆ.

ಕ : ಊರು ಬಾಜಾರದಲ್ಲಿ ಬಂದು ಮುತ್ತು+ಶೆಟ್ಟಿ ಮನಿ ಅಂಗಳಕ್ಕ ಕುದ್ರಿ ನಿಲ್ಲಿಸ್ಬೇಕಾದ್ರೆ? ಮುತ್ತುಶೆಟ್ಟಿ ಸಾಹುಕಾರ ಗೆಳೆಯನ್ನ ನೋಡ್ದಾ-

ನಮಸ್ಕಾರ ಧೊರಿ ಬನ್ರಿ.

ಹಿ : ಶರಣಾರ್ಥಿ.

ಕ : ಕುದ್ರಿ ಸಹ ಇಳೀಲಿಲ್ಲ ನೀಲಕುಮಾರ. ಗೆಳೆಯಾ ನಾನು ಇವತ್ತು ರಾಜ ಅರಮನಿಯಾಗ ಇದ್ದಾಗ ನನ್ನ ತಂದೆ- ತಾಯಿ ಕರೆಕಳಿಸಿದ್ರು.

ಹಿ : ಬರ್ರಿ ಒಳಗೆ, ಒಳ್ಳೇದು.

ಕ : ಪಟ್ಟಾಭಿಷೇಕ ಮಾಡ್ತೀನಿ ಮಗನೇ ಪಟ್ಟಾ ತಗೋ ಅಂದ್ರು-ನೀನು ಮಾಡಿದ ಪಟ್ಟಾ ತೊಗೊಂಡು ಪಟ್ಟಾ ಆಳೋದಿಲ್ಲ ತಂದೇ, ದೇಶದ ಮೇಲೆ ಹೋಗಿ ದ್ರವ್ಯ ಗಳಿಸ್ಕೊಂಡು ಬರ್ತೀನಿ ಅಂತ್ಹೇಳಿ ನಾನು.

ಹಿ : ಆಹಾ!

ಕ : ತಾಯಿ-ತಂದಿ ಮಾತು ಮೀರಿ ಊರು ಬಿಟ್ಟು ಎರಡರ್ಧಾರಿ ಧರ್ಮದ ವನಂತರಕ್ಕೆ ಹೋದೆ. ಅಲ್ಲಿಂದ ನಿನ್ನ ಮರತು ಹೋಗಿದ್ದಕ್ಕೆ ನಿನ್ನ ಮಾತಾಡ್ಸಾಕ ಬಂದೆ-

ಹಿ : ವಾಪಾಸು!

ಕ : ಎಂಥ ಹುಚ್ಚು ಮಹಾರಾಜ್ ನೀಲಕುಮಾರ ನೀವು!

ಹಿ : ಯಾಕೆ?

ಕ : ಸಕಲ ಸಾಮ್ರಾಜ್ಯ ಸಂಪತ್ತಿಗೆ ಅಧಿಪತಿ ನಿಮ್ಮ ತಂದೆ-ಧರ್ಮಸೇಕ!

ಹಿ : ನಿಮ್ಮ ತಂದೀ ಪಟ್ಟಾ ತೊಗೊಳ್ಳದೆ ದೇಶದ ಮ್ಯಾಲೆ ಹೋಗ್ತೀಯಾ! ಎಂಥ ಬಡವನಪ್ಪ ನೀನು!

ಕ : (ರಾಗವಾಗಿ) ಹೌದು ಗೆಳೆಯಾಯೈ….ದ್ರವ್ಯ ಗಳಿಸ್ಕೊಂಡು ಬರ್ಲಿಕ್ಕೆ ಹೊಂಟೀನೀ….ನೀಲಕುಮಾರ ರಾಜ ನೀನು, ದೇಶದ ಮ್ಯಾಲೆ ಹೋಗ್ಲಿಕ್ಕೆ ಬಡವನಲ್ಲ ಬಗ್ಗನಲ್ಲ, ಅಂಥಾ ತಾಯಿ-ತಂದೆ ಮಾತು ಮೀರಿ ಎರಡರ್ಧಾರಿ ಹೋಗಿ ನನಗೆ ಮಾತಾಡ್ಸಾಕ ವಾಪಾಸು ಬಂದೆಲ್ಲ!

ಹಿ : ಆಹಾ.

ಕ : ನನ್ನ ಮನಿಯಾಗ ಏಳು ಹೊನ್ನಿನ ಕಂದ ಅದಾವು ತೊಗೋ. ನಿನಿಗೆ ಕೈಗಡ ಕೊಡ್ತೀನಿ; ಧರ್ಮಮಾಡು, ದಾನಮಾಡು, ಪುಣ್ಯಮಾಡು. ಯಾವಾಗ ನಿನ್ನ ಮನಸ್ಸಿಗೆ ಬರ್ತೈತೋ, ಆವಾಗ ವಾಪಾಸು ಮಾಡು.

ಹಿ : ಆಹಾ!

ಕ : ಇದು ಸಾಧ್ಯವಿಲ್ಲ. ನಿನ್ನ ಹೊನ್ನಿನ ಕಂದ ಕೈಗಡ ತೊಗೊಂಡು ದಾನ ಮಾಡಿದ್ರೆ ಆ ಧರ್ಮ ನಿನಿಗೆ ಬಂತು; ನನಿಗೆ ಬರ್ಲಾರ್ದು.

ಹಿ : ಓಹೋ!

ಕ : ತಾಯಿ-ತಂದೆ ಮಾತು ಕೇಳ್ಲಾರ್ದ ಮಗ-ನನ್ನ ಮಾತೇನು ಕೇಳ್ತೀರಿ!

ಹಿ : ಆ!

ಕ : ಬಂದುದಕ್ಕೆ ಮರ್ಯಾದಿ ವೀಳ್ಯಾ ಕೊಡ್ತೀನಿ, ತೊಗೋಳ್ರಿವೀಳ್ಯಾ ಅಂತ್ಹೇಳಿ ಕುದ್ರಿ ಮ್ಯಾಲೆ ಕುಂತಿದ್ದ ಹಂಗs ಐದು ಎಲಿ ಅಡಿಕಿ ವೀಳ್ಯಾ ಮಾಡಿಕೊಟ್ಟ. ಎಲಿ ಅಡಿಕಿ ಹಾಗೇ ಬಾಯಾಗ ಹಾಕ್ಕೊಂಡು, ಹೋಗಿ ಬರ್ತೀನಿ ಗೆಳೆಯಾ ಅಂತ್ಹೇಳಿ ವಾಪಾಸು ಕುದ್ರಿ ತಿರುವಿದ-ವನಂತರಕ್ಕೆ ಹೋಗಾಕ. ಪಗಡೂರು ಸಾಲು ಬಾಜಾರದಾಗ ಕುದ್ರಿ ಹೊಕ್ಕೊಂಡು ಬರ್ತಾನೆ ನೋಡ್ರಿ-ನಡೋ ಬಾಜಾರದಾಗ!

ಹಿ : ಆಹಾ.

ಕ : ವನಾಂತ್ರದಲ್ಲಿ ಮಂತ್ರಿ, ದಂಡು ಬಿಟ್ಟು ಬಂದೀನಿ ಅಂತ್ಹೇಳಿ ದೌಡುಮಾಡಿ ಕುದ್ರಿ ಬಿಟ್ಕೊಂಡು ಬರ್ಬೇಕಾದ್ರೆ ಅಲ್ಲಿ ಬಾಜಾರದಾಗ ಯಾರ ಮನಿ ಐತ್ರಿ?

|| ಪದ ||

ಪಾತ್ರದಾಕಿ ರಂಭಾವತಿ ಸೂಳಿಮನಿ ನೋಡ್ರೀಹರಹರಯನ್ನದೇವಾ
ಲೇಶಿ ರಂಭಾವತಿ ಮನಿಯೈಶಿವಯನ್ನ ಮಾದೇವ