ಹಿ : ಆ

ಕ : ದೇಶದ ಮ್ಯಾಲೆ ಹೋಗಿ ದ್ರವ್ಯ ಗಳಿಸ್ಕೊಂಡು ಬರ್ತೀನಂತ್ಹೇಳಿ ನಡೋ ದಾರ್ಯಾಗ ಬಂದು, ನಮ್ಗೆಲ್ಲಾ ಬಿಟ್ಕೊಟ್ಟುಬಂದು, ಇಲ್ಲಿ ರಂಭಾವತಿ ಮನಿಯಾಗ ಕುಂತೆಲ್ಲಪ್ಪ! ಏನು ಬುದ್ಧಿವಂತಪಾ, ನೀನು!

ಹಿ : ಏನಂತಾನೆ?

ಕ : ಏನು ದೇಶ ತಿರುಗಿದೆಪ್ಪ? ಏನು ದ್ರವ್ಯ ಗಳಿಸಿದೆಪ್ಪ? ಏನು ಪಟ್ಟಾ ತೊಗೊಂಡೆಪ್ಪಾ? (ರಾಗವಾಗಿ) ಏನು ದಾನ ಧರ್ಮ ಮಾಡಿದ್ಯೋ….

ಹಿ : ಎಷ್ಟು ಮಂದಿ ಹೊಯ್ಕೊಂಡೋ ಯಪ್ಪಾ!

ಕ : ಅಲ್ಲಪಾ ಗೆಳಿಯಗ ಹೋಗಿ ಮಾತಾಡ್ಸಿ ಬರ್ತೀನೆಂತ ನಮಗೆಲ್ಲಾ ಸಮೋಕ್ಷ ಹೇಳಿ ಬಂದೆಲ್ಲಾ ಕುದ್ರಿ ಮ್ಯಾಲೆ ಕುಂತ್ಗೊಂಡು!

ಹಿ : ಹೌದು.

ಕ : ಗೆಳೆಯನ್ನ ಮಾತಾಡ್ಸಿ ಬರ್ಬೇಕಿತ್ತು ವನಂತರಕ್ಕೆ-ಒಂದು;

ಹಿ : ಇಲ್ಲಾಂದ್ರೆ.

ಕ : ಅಲ್ಲಿಗೆ ಬ್ಯಾಡಬಿಡು, ನಿನಗೆ ಸೌಡು ಆಗ್ಲಿಲ್ಲ, ತಾಯಿ-ತಂದಿ ಹತ್ರ ಹೋಗಿ ಅವರ ಕೂಟ ಮಾತಾಡ್ಕೊಂತಾ ಕುಂದ್ರುಬೇಕು.

ಹಿ : ಅಲ್ಲಿರ್ಬೇಕಿತ್ತು.

ಕ : ಅಲ್ಲಿ ಬ್ಯಾಡ ಶೆಟ್ಟಿ ಮನೇಗಾರ ಇರ್ಬೇಕು.

ಹಿ : ಆ.

ಕ : ಎಲ್ಲಾ ಜಾಗ್ಗಳನೂ ಬಿಟ್ಟು ಇಲ್ಲಿ ರಂಭಾವತಿ ಮನಿಯಾಗ ಬಂದು ಪಂಚಪಗಡಿ ಆಡ್ಕೊಂತ ಈಕಿ ಲೋಲಾಟದಲ್ಲಿ ಕುತ್ಕೊಂಡೆಲ್ಲ-ಏನು ಇದು?

ಹಿ : ಏನಿದು?

ಕ : ನಾವು ವನಂತರದಾಗ ಕುಂತಾಗ ನನಿಗೆ ರಂಭಾವತಿ ಮ್ಯಾಲೆ ಪ್ರೇಮ ಆಗೇತಿ ಆ ಲೇಶಿ ಮನಿಗೆ ಹೋಗಿ ಬರ್ತೀನಿ ಅಂತ್ಹೇಳಿ ನಮ್ಮ ಮುಂದೆ ಎಲ್ಲಾರಿಗೂ ಹೇಳಿಕೇಳಿ ಬರಬೇಕಿತ್ತು; ನಾವೇನು ಬ್ಯಾಡಂತಿದ್ವ್ಯಾ?

ಹಿ : ಹೋಗು ಅಂತಿದ್ವಲ್ಲಪಾ!

ಕ : ನಮಗ ಶೆಟ್ಟಿ ಮನಿಗೆ ಹೋಗಿ ಮಾತಾಡ್ಸಿ ಬರ್ತೀನಿ ಅಂತ್ಹೇಳಿ ರಂಭಾವತಿ ಮನಿಯಾಗ ಬಂದು ಕುಂತಿಯಲ್ಲಾ! ನಿನ್ನ ಸಲುವಾಗಿ ನಮಗ ಅನ್ನಿಲ್ಲಾ, ಆಹಾರಿಲ್ಲ ಅಡವಿಯಲ್ಲಿ.

ಹಿ : ಮುಂಜಾಲಿಂದ ಹಿಡುದು ಸಂಜಿವರಿಗೂ ನಿನ್ನ ತಾಯಿ-ತಂದೆ ಅಮಲತಾ ಇದ್ದಾರೆ.

ಕ : ನಿನ್ನ ಸಲುವಾಗಿ ಅಡಿವ್ಯಾಗೆಲ್ಲ ಹುಡುಕಿ ಬಂದೆ!

ಹಿ : ಹೌದು!

ಕ : ಉಪವಾಸ ಬಿದ್ದೆ ನೋಡಪ್ಪ, ಐದು ಗಂಟಿ ಆತು. ಏನು ಗಂಡ್ಸಪ್ಪ ನೀನು, ಒಂದು ಹೆಣ್ಣು ಮಗಳು ಇದ್ಹಾಂಗೆ! ನಿನ್ನ ಬುದ್ಧಿ ಸುಡ್ಲಿ-ಅಂದ ಆ ಮಂತ್ರಿ.

ಹಿ : ಹಿಯ್ಯಾಳಿಸಿದ.

ಕ : ಇಬ್ರೂ ಒಂದೇ ಸಾಲಿ ಕುಂತು ಓದಿದ ಗೆಳೆಯರು! ಬಂದು ಇಂಥ ಮಾತು ಹೇಳ್ಬೇಕಾದ್ರೆ; ಒಂದು ಹೆಣ್ಣಿಗೆ ನಂಬಿ, ಒಂದು ಹೆಂಗ್ಸಿಗೆ ನಂಬಿ ಬಂದು ನಮ್ಗೆಲ್ಲಾ ಅವಮಾನ ಮಾಡಿದಿ-ಅಂತ್ಹೇಳಿ ಕೆಟ್ಟ ಮಾತು ಆಡಬೇಕಾದ್ರೆ ರಾಜಗೆ ನಾಚಿಕೆ ಬಂದಂಗಾತು!

ಹಿ : ಹೌದು ಮಾಡಿದ ಕೆಲಸಕ್ಕೆ!

ಕ : ನಾನು ರಾಜ ಹೌದು; ಮಾಡಿದ ತಪ್ಪಿಗೆ ಎಂಥೆಂಥ ಮಾತ್ಹೇಳಿಬಿಟ್ನಲ್ಲ ನನ್ನ ಗೆಳೆಯ ಮಂತ್ರಿ! ನಾನೂ ಇವನೂ ಒಂದೇ ಸಾಲ್ಯಾಗ ಓದ್ದೋರು, ನನ್ನ ಮಾತು ಇವನು ಮೀರಿದ್ದಿಲ್ಲ ಇವನ ಮಾತು ನಾನು ಮೀರಿದ್ದಿಲ್ಲ.

ಹಿ : ಆ.

ಕ ; ಇಲ್ಲಿವರಿಗೂ ಇಷ್ಟು ಪ್ರೀತಿಯಿದ್ದು ಇವತ್ತು ಈ ಮಾತು ಹೇಳಿದ ಬಳಿಕ ನಾನು ಇವನಿಗೆ ಮುಖ ಹೆಂಗ ತೋರ್ಸಲಿ! – ಅಂತ್ಹೇಳಿ ಸುಮ್ಮನೆ ಶಿರಬಾಗಿ ಕುಂತ್ಕೊಂಡ-

ಹಿ : ಲಜ್ಜೆಭರಿತನಾಗಿ!

ಕ : ರಂಭಾವತಿ ನೋಡಿಬಿಟ್ಳು; ಆಕಿ ಮಹಾಮಾಯಿ! -ಏನ್ರಿ ಮಾರಾಜ್?

ಹಿ : ಆ.

ಕ : ಯಾರ್ರೀ ಇವನು ಬಂದಾನು?

ಹಿ : ಇವನು ನಮ್ಮ ಮಂತ್ರಿ, ಸೇವಾನು+ಸೇವಕ ಮಂತ್ರಿ.

ಕ : ಮಂತ್ರಿ ಏನ್ರೀ?

ಹಿ : ಹೌದು.

ಕ : ನಿಮ್ಮ ಚಾಕರಿ ಮಾಡಿ ಭಾಕರಿ ಉಣ್ಣೋಂಥ ಮುಂಡೇ+ಮಗ!

ಹಿ : ಆ.

ಕ : ನಿಮಗೆ, ಬಂದು ಇಲ್ಲಿ ಈ ಜಾಗದಲ್ಲಿ, ಈ ಸ್ಥಾನದಲ್ಲಿ ಇಂಥಿಂಥ ಮಾತ ಹೇಳ್ಬೇಕಾದ್ರೆ ಸ್ವಲ್ಪರ ಸಿಟ್ಟು ಇಲ್ವಲ್ರೀ!

ಹಿ : ಏನಂದಿ ಹೇಳು?

ಕ : ನಿಮಗೆ ಹೇಳಾದs ನನ್ನಂತಾಕಿಗೆ ಹೇಳಿದ್ರೆ ಅವನು-

ಹಿ : ಆ.

ಕ : ನಿಂತಬಿಟ್ಟಲೇ ಅವನ ತಲಿ ಹೊಡಸತಿದ್ದೆ-ಅಂದ್ಲು ಆ ರಂಭಾ!

ಹಿ : ಮಾಯಾ!

ಕ : ಆ ಮಾತ ರಂಭಾವತಿ ಹೇಳ್ಬೇಕಾದ್ರೆ ಅಂಗಾಲು ಸಿಟ್ಟು ನಡ+ನೆತ್ತಿಗೇರಿದಂಗಾತು; ಎಲೇ….. || ಪದ ||

ಏನೆಂದೆ ಲೌಡಿ+ಮಗs….ಹರಹರ ಮಾದೇವ
ಮಂಚಾ ಇಳುದು ಬಂದಾನ….ಹರಹರ ಮಾದೇವ

ಕ : ಲೇ ಮಂತ್ರೀ, ಸೊಕ್ಕು ಬಂತು; ಗುಲಾಮ್ ಚೋರಾ; ಲೌಡಿ+ಮಗನ! -ಅಂತ್ಹೇಳಿ ಮಂತ್ರಿಗೆ ಬಂದು ತೆಕ್ಕಿ ಹಿಡಿದು ಎತ್ಹ್ಯಾಕಿ ಬಿಟ್ಟ-ರಾಜಕುಮಾರ!

ಹಿ : ಆಹಾ!

ಕ : ದಡಲ್ ಅಂತ ಬಿದ್ದ ಮಂತ್ರಿ ಅಂಗಾತ.

ಹಿ : ಆಹಾ!

ಕ : ಅಷ್ಟು ಮಾಡಿಬಿಡ್ಲಿಲ್ಲ, ಎದಿಮ್ಯಾಲೆ ಕುತ್ಕೊಂಡು ಬಡ್ತಾ ಬಡಿತಾ ಇದಾನೆ ಮಂತ್ರಿಗೆ!]

ಹಿ : ಮಹಾಬಡ್ತ!

ಕ : ಬಾಯಿಮ್ಯಾಲೆ ಬಡಿತಾನೆ, ಬಾಯಿ-ಮೂಗಿನ್ಯಾಗ ರಕ್ತ ಹೋಗ್ತಾ ಐತೆ!

ಹಿ : ಕಳುವು ಮಾಡಿದ ಕಳ್ಲಗೆ ಬಡದ್ಹಾಂಗ ಬಡಿತಾನೆ ನೀಲಕುಮಾರ!

ಕ : ಒಳಗೆ ಯಾರು ದಾರಿ ಬಿಟ್ರು?

ಹಿ : ಆ.

ಕ : ಯಾರಪ್ಪಣೀ ತೊಗೊಂಡು ಬಂದೀ? -ಅಂತಾನೆ ಮಂಡಗೈಲೆ ಇರಿತಾನೆ!

ಹಿ : ಬಡಿಬ್ಯಾಡ ಗೆಳೆಯಾ ತಪ್ಪಾಯ್ತು.

ಕ : ನಿನ್ನ ಮಗ, ನಿನ್ನ ಮಗ ನಾನು ಸಾಯ್ತೀನಿ, ಯಪ್ಪಾ ಹೊಡಿಬ್ಯಾಡ ಗೆಳೆಯಾ.

ಹಿ : ನಾನು ಎಷ್ಟು ಹೇಳಿದ್ರು ಬಿಡುವಲ್ಲ; ಎಷ್ಟು ಬೇಡಿದ್ರೂ ಕೇಳ್ವಲ್ಲು!

ಕ : (ರಾಗವಾಗಿ) ಬಾರೀ ಅವ್ವಾ ರಂಭಾವತೀ ನಿನ್ನ ಮಾತ ಕೇಳಿ ಬಡಿಯಾಕ ಹತ್ಯಾನ….ನೀನಾರ ಬಂದು ಬಿಡಿಸು….ರಂಭಾವತಿ ನಿನ್ನ ಮಗ ಸಾಯ್ತೀನೇ, ಬಿಡುಸ ಬಾರವ್ವಾ…ಅಂತಾನ ಮಂತ್ರಿ ಅಂಗಾತ ಬಿದ್ದು!

ಹಿ : ಅಂತಃಕರಣ ಬರ್ವಲ್ದು ಆಕೀಗೆ!

ಕ : ಬಡದ ಬಡದ-ಜೀವದ ಮ್ಯಾಲೆ ಕಬರಿಲ್ಲದೆ ಮೂರ್ಛೆಗವಿದು ಜಲ್ಮ ಹೋದ್ಹಂಗ ಬಿದ್ರೂ ಬಿಡ್ಲಿಲ್ಲ!

ಹಿ : ಮಹಂತ ಬಡ್ತಾ!

ಕ : ರಂಭಾವತಿ ನೋಡಿಬಿಟ್ಲು, ಮಂತ್ರಿ ಕಣ್ಮುಚ್ಚಿ ಬಿಟ್ಟಾನ-ಮೂರ್ಛೆಗವದುಬಿದ್ದು.

ಹಿ : ಆಹಾ ರಾಜಾ!

ಕ : ಬಡಿಬ್ಯಾಡ್ರಿ ಸಾಕು ಸತ್ತುಗಿತ್ತಾನು, ಕೇಸ್ ನಮ್ಮ ಮ್ಯಾಲೆ ಬಂದೀತು; ಸಾಕು ಮಾಡ್ರಿ; ರಾಜನ ಕೈ ಹಿಡದು ಎಳಕೊಂಡು ಹೋಗಿ ಬಿಟ್ಲಪ್ಪ ಒಳಗ.

ಹಿ : ಆಹಾ!

ಕ : ಯಾವಾಗ ಆ ರಂಭಾವತಿ ರಾಜನ ಕೈ ಹಿಡುಕೊಂಡಕೂಡ್ಲೇ ಸಿಟ್ಟು ಹೋಯ್ತು.

ಹಿ : ಹೋಯ್ತು!

ಕ : (ರಾಗವಾಗಿ) ಅಂಗಾತ ಬಿದ್ದಾನೆ ಮಂತ್ರೀ….ಗಾಳಿ ಬೀಸೋರಿಲ್ಲ, ಕಿವಿ ಮುಚ್ಚೋರಿಲ್ಲ, ನೀರ್ಕೊಡಾರಿಲ್ಲ, ಅಂಗಾತ ಬಿದ್ದಾನೆ….

ಹಿ : ಆಹಾ!

ಕ : ಎಷ್ಟೋ ಹೊತ್ತಿಗೆ ಗಾಳಿ ಬಡಿಬೇಕಾದ್ರೆ ಶಿವಶಿವಾಂತ ಎದ್ದು ಕುಂತು ನೋಡಿದಾ-ಮಂತ್ರಿ! (ರಾಗವಾಗಿ) ರಾಜಾ ಹೋಗ್ತೀನ್ರೀ….

ಹಿ : ಚಲೇಜಾವ್, ಹೊರಗ ನಡಿ ಇನ್ನೊಮ್ಮೆ ಬಂದಿ.

ಕ : ಗದ್‍ಗದ್ ನಡುಕ್ಕೆಂತಾ ಮೆಲ್ಲಕ ಮುಂದೆ ಬಾಗಲ್ದಾಗ ಬಂದು-ಕೈವಲ್ಯಮ್ಮ ಹೋಗಿ ಬರ್ತೀನಿ.

ಹಿ : ಯಾಕಪ ಹೊಡಿಸ್ಕೊಂಡು ಬಂದೆಲ್ಲಾ ಮಂತ್ರೀ?

ಕ : ಗದ್‍ಗದ್ ನಡುಕ್ಕೊಂತಾ ಬಾಜಾರದಾಗ ಬರ್ಬೇಕಾರೆ ಬಾಯಾಗ ಮೂಗಿನ್ಯಾಗ ಜನ ರಕ್ತ ನೋಡಿಬಿಟ್ರು!

ಹಿ : ರೈತ್ರು ಜನ!

ಕ : ಮಹಾರಾಜರ ಮಂತ್ರಿಗೆ ಬಡ್ದಾರೆ! ದೊಡ್ಡ ಅಧಿಕಾರಿ ಮಂತ್ರಿಗೆ ಬಡುದಾರೆ!

ಹಿ : ಯಾರು ಹೊಡದಿದ್ದಾರು?

ಕ : ನಮಸ್ಕಾರ ಧರ್ಮಸೇಕ್, ಗಂಗಾಸಾಗ್ರ ತಾಯೀ….

ಹಿ : ಮಂತ್ರಿಗೆ ನೋಡಿ-ಏನು ಮಗನೆ ಯಾರು ಹೊಡದ್ರು?

ಕ : ಜಲ್ದಿ ಹೇಳು, ಯಾರು ಬಡದ್ರು? ಅವರ ತಾಯಿನಾಡ; ಸುಟ್ಟು ಬೂದಿಮಾಡ್ತೀನಿ.

ಹಿ : ಸಮಾಧಾನ ಮಾಡ್ರಿ, ನನಗೆ ಯಾರೂ ಬಡಿಲಿಲ್ಲ ಮಹರಾಜ್.

ಕ : ತೋಪಿನ ಬಾಯಾಗ ಕೊಡ್ತೀನಿ, ಹೇಳೊ ಮಂತ್ರಿ, ಸುಟ್ಟು ಬೂದಿಮಾಡ್ತೀನಿ, ಹೇಳೊ ಜಲ್ದೀ.

ಹಿ : ನಿಮ್ಮ ಮಗ ನೀಲಕುಮಾರ!

ಹಿ : ಆ.

ಕ : ಆ ನನ್ನ ಮಗ?

ಹಿ : ಹೌದು ಮಹಾದೊರಿಯೇ….

ಕ : ಅಯ್ಯೋ ನೀಲಕುಮಾರ-ನೀನೂ ಅವನೂ ಜೀವದ ಗೆಳೆಯರು, ಅಂಥಾ ಮಗ ನಿನಗೆ ಬಡುದನೇನೊ?

ಹಿ : ಹೌದು.

ಕ : ಏನು ಕಾರಣ?

ಹಿ : ರಂಭಾವತಿ ಮನಿಯಾಗ ಐದಾನ್ರಿ, ಲೇಶೀ ಮನಿಯಾಗ ಐದಾನೆ. ಲೇಶೀ ಮಾತು ಕೇಳಿ ಇಂಥ ಬಡ್ತ ಬಡದಾನ!

ಕ : ಅಯ್ಯೋ ಅಯ್ಯೋ… ….ಮಗನ ಮಾರಿಗೆ ಬೆಂಕಿ ಹಚ್ಲಿ, ಮಡದೀ….

ಹಿ : ಆ.

ಕ : (ರಾಗವಾಗಿ) ಮಡದೀ ಗಂಗಾಸಾಗ್ರ! ಪಟ್ಟಾ ತಗೋ ಅಂದ್ರೆ ಪಟ್ಟ ತಗಳ್ಲಾರ್ದೆ ರಂಭಾವತಿ ಮನಿ ಸೇರಿದ್ನಲ್ಲ ಮಗಾ…….

ಹಿ : ಆಹಾ!

ಕ : ಮುವತ್ತುಮೂರು ದೇಶದ ರಾಜರು ಬಂದು ಕಪ್ಪಕಾಣಿಕೆ ಕಟ್ಟಬೇಕಾದ್ರೆ ಮಗ ಎಲ್ಲಿ ಹೋದ ಅಂದ್ರೆ, ಲೇಶೀ ಮನಿಯಾಗ ಅದಾನ ಅಂದ್ರೆ ನನ್ನ ಮರ್ಯಾದೆ ಹೋಗತೈತಲ್ಲ!

ಹಿ : ಅಪಮಾನ.

ಕ : (ರಾಗವಾಗಿ) ಲೋ ಮಗನೇ ನಾನು ಎಷ್ಟು ಹೇಳಿದ್ನೆಲ್ಲೋ….ಹೋಗಾನು ನಡೀ….ಮಡದೀ ಜಲ್ದಿ ಮಗನಿಗೆ ಕರ್ಕೊಂಡು ಬರಾನು ನಡೀ, ಜಲ್ದೀ ನಡೀ, ಬುದ್ಧಿ ಕೆಟ್ಟೋಗತೈತಿ, ಸೂಳಿ ಮನಿಯಾಗ ಬಿಡಬಾರ್ದು ಮಗನಿಗೆ….

ಹಿ : ಹೌದು ಹೌದು.

ಕ : ಕ್ಷತ್ರಿ ವಂಶದ ಮಗ ಲೇಶಿ ಮನಿಯಾಗ ಇರೋದು ಧರ್ಮ ಅಲ್ಲ!

ಹಿ : ಆ

ಕ : ಸತಿ-ಪತಿ ಪಲ್ಲಕ್ಕ್ಯಾಗ ಕುತ್ಕೊಂಡು ರಂಭಾವತಿ ಮನಿಗೆ ಬಂದ್ರಪ್ಪ-ಮಗನಿಗೆ ಕರಿಯಾಕ! (ರಾಗವಾಗಿ)

ಮಗನೇ ಒಳಗೈದಿಯಾ ಬಾರಾ….
ರಂಭಾವತಿ ಸೂಳಿ ಮನಿಯಾಗ ಇರಬಾರ್ದೂ…….
ನಾವು ಕ್ಷತ್ರಿಯರು……..ಒಬ್ಬಾ ಮಗ ನೀನು….

ಹಿ : ಆ!

ಕ : (ರಾಗವಾಗಿ) ನೀನು,ಬಿಟ್ಟು ಬಂದ್ಯಾ ನಮಗೆ ದಂಡು ಮಾರ್ಬಲ ಸಕಲಸಂಪತ್ತು ಎಲ್ಲಾ. ಬಾ ಮಗನೆ…….ಅಪ್ಪಾ ಬಾರೋ ಮಗನೇ ನೀಲಕುಮಾರ ಅಂತ ಕರೀತಾರೆ………

ಹಿ : ಆ………

ಕ : (ರಾಗವಾಗಿ) ನೀಲಕುಮಾರಾ…….

ಹಿ : ಆ………

ಕ : ರಂಭಾವತಿಗಿಂತ ರೂಪವಾದ ಕನ್ಯಾತಗದು ಲಗ್ನ ಮಾಡ್ತೀವಿ ಬಾ ಮಗನೆ, ಬಾ ಮಗನೆ ಲೇಶಿ ಮನಿಯಾಗ ಇರಬಾರ್ದು.

ಹಿ : ಹೌದು

ಕ : ಹೊರಗ ನಿಂತು ಕರೀತಾರೆ, ಕೂಗುತಾರೆ, ತಾಯಿ ಧ್ವನಿ ಮಾಡುತಾಳೆ, ಕಣ್ಣೀರು ತರುತಾಳೆ! ಹಡದ ತಾಯಿ!

ಹಿ : ಬೇಡ್ತಾಳೆ!

ಕ : ತಾಯಿ-ತಂದೆ ಮಾತು ಕೇಳ್ತಾನೆ, ಹೊರಗ ಬಂದಾರೆ ತಾಯಿ-ತಂದೆ; ಹೋಗ್ಬೇಕು ಮಾತಾಡ್ಬೇಕು ಅಂಬೋದು ತಿಳೀವಲ್ಲದು ಮಗನಿಗೆ!

ಹಿ : ಆಹಾ.

ಕ : ರಂಭಾವತಿ ಕೂಟ ಪಂಚ ಪಗಡಿ ಆಡ್ಕೊಂತ ಮಾತುಕತಿ ಆಡ್ಕೊಂತ ಒಳಗೇ ಆಗಿ ಬಿಟ್ಟ!

ಹಿ : ಆ!

ಕ : ಹೊರಗ ಬಂದು ತಾಯಿ-ತಂದಿಗೆ ಮುಖ ತೋರಿಸ್ಲಿಲ್ಲ;

ಹಿ : ತೋರ್ಸಲಿಲ್ಲ!

ಕ : (ರಾಗವಾಗಿ) ಮಡದೀ ಮಗ ಬರೋದಿಲ್ಲಾ, ಹೋಗಾನು ನಡಿಯೇ ಮನಿಗೇ……

ಹಿ : ಆಹಾ……….

ಕ : (ರಾಗವಾಗಿ) ಮಗನ ದಾರಿ ಮಗನಿಗೆ, ನಮ್ಮ ದಾರಿ ನಮಗಾಯಿತು; ಇಲ್ಲಿಗೆ ಮಗ ಎರವಾದ; ಹಡದೂ ಬಂಜಿ ಆದ್ವೀ…….

ಹಿ : ನಮ್ಮ ಕಡೇಕಾಲಕ್ಕ ಆ ರಂಭಾವತಿ ಬೇಕಾಯ್ತು ಇವನಿಗೆ!

ಕ : ಚಿಂತಿ ಮಾಡ್ಕೊಂತಾ ಸಂಜಿಗೆ ಮನಿಗೆ ಬರ್ಬೇಕಾದ್ರೆ ನೀಲಕುಮಾರನ ಗೆಳೆಯನಾದ ಮಂತ್ರಿ ನೋಡಿದಾ-

ಹಿ : ಬಂದ್ನೇನ್ರಿ ನಿಮ್ಮ ಮಗ?

ಕ : ಇನ್ನೆಲ್ಲಿ ಮಗ ಮಂತ್ರೀ! ಮಗ ಬರ್ಲಿಲ್ಲ! ಸೂಳಿ ರಂಭಾವತಿ ಕೈವಾಸ ಆದ- ಬರೋದಿಲ್ಲ ಮಗಾ!

ಹಿ : ಹೌದು.

ಕ : ಮಗಾ ಬರ್ಲಿಲ್ಲಾ?

ಹಿ : ಬರ್ಲಿಲ್ಲ!

ಕ : ಹಿಂಗ್ ಮಾಡಿದ್ರೆ ನಿಮ್ಮ ಮಗ ಬರೋದಿಲ್ಲ, ಸೂಳಿ ಮನಿ ಬಿಡೋದಿಲ್ಲ.

ಹಿ : ಮತ್ತೆ ಹ್ಯಾಂಗ್ ಮಾಡ್ಬೇಕು ಪ್ರಯತ್ನ?

ಕ : ಇದಕ್ಕ ನಾನೊಂದು ಉಪಾಯ ಮಾಡೇನ್ರೀ.

ಹಿ : ಆಹಾ!

ಕ : ರಂಭಾವತಿಗಿಂತ ರೂಪವಾದ ಕನ್ಯ ತಗದು ಲಗ್ನ ಮಾಡಿದ್ರೆ ಸೂಳಿ ಮನಿ ಬಿಡ್ತಾನೆ.

ಹಿ : ಹೌದು ಹೌದು.

ಕ : ಕನ್ಯಾತಗದು ಬರ್ತೀನಿ, ಮೊದಲು ಲಗ್ನ ಮಾಡಿ ಆ ಮ್ಯಾಲೆ ರಂಭಾವತಿ ಮನೆ ಬಿಡುಗಡೆ ಮಾಡೋನು.

ಹಿ : ನಿನ್ನ ಅಭಿಪ್ರಾಯ ತಿಳೀತು-

ಕ : ಹ್ಯಾಂಗನ್ನ ಮಾಡಪ್ಪ ಮಂತ್ರೀ.

ಹಿ : ನಾನಿರೋವರಿಗೂ ನೀವೇನು ಹೆದರಬ್ಯಾಡ್ರೀ ರಾಜಾ-ಅಂದಮಂತ್ರಿ.

ಕ : ನಿಮ್ಮ ಮಗ ನಾನು-ಕುದರಿಗೆ ತಡಿ ಬಿಗದ, ರಾಜಡ್ರಸ್ ಹಾಕ್ಕೊಂಡು ಕೈಯಾಗ ಪೋಟೋ ತೊಗೊಂಡ. ರೂಪದಲ್ಲಿ ದೇವೇಂದ್ರ ಕುಮಾರ್ನೊ, ಹರಿಶ್ಚಂದ್ರನೊ, ಕುಬೇರನೋ, ಈಶಾನ್ಯನೋ! ಅಂಥ ರೂಪಿಷ್ಟ ಮಗ ನೀಲಕುಮಾರ!

ಹಿ : ಹಾ

ಕ : ಆ ಫೋಟೋ ತೊಗೊಂಡು ಜೇಬಿನಾಗ ಇಟ್ಕೊಂಡು ಕುದ್ರಿಹತ್ತಿ ಹೇಳ್ತಾನ-ಕನ್ಯಾ ತಗದು ಲಗ್ನ ಮಾಡಿ, ರಂಭಾವತಿ ಮನಿ ರಾಜಗ ಬಿಡುಗಡಿ ಮಾಡಿ-

ಹಿ : ಮಾಡಿ-

ಕ : ಆ ಮ್ಯಾಲೆ ನನಿಗೆ ಬಿಡದಂಥ ಬಡತಾ ಅನೈತಿ, ರಂಭಾವತಿ ಮ್ಯಾಲೆ ತಿರಿಸ್ಕೊ ಬೇಕು ಅಂದ! ಹಟ ತೊಟ್ಟ ಮಂತ್ರಿ!

|| ಪದ ||

ಕನ್ಯಾ ನೋಡಾಕ ನಡದಾನಾ……..ಹರಯನ್ನ ಮಾದೇವ
ಕನ್ಯ ತೆಗೀಲಿಕ್ಕೆ ನಡದಾನಾ………ಶಿವಯನ್ನ ಮಾದೇವ
ಅದ ಊರು ಬಿಟ್ಟಾನ……….ಹರಹರ ಮಾದೇವ
ಅದ ಊರು ಬಿಟ್ಟಾನ……….ಹರಹರ ಮಾದೇವ
ಒಂದು ಗಾವುದ ಬರ್ತಾನ………ಹರಹರ ಮಾದೇವ
ಎರಡು ಗಾವುದ ಬರ್ತಾನ ……..ಹರಹರ ಮಾದೇವ
ಕನ್ಯಾ ನೋಡುತಾನೆ…….ಶಿವಹರ ಮಾದೇವ
ಅವನ ಮನಸಿಗೆ ಬರುವಲ್ತು……..ಶಿವಹರ ಮಾದೇವ
ಮುಂದಕ್ಕೆ ನಡುದಾನ………ಹರಹರ ಮಾದೇವ
ಎಲ್ಲೆಲ್ಲಿ ಹುಡುಕಿದರೂ……….ಹರಹರ ಮಾದೇವ
ಚಲೋ ಕನ್ಯಾ ಸಿಗವಲ್ಲದೈ…….ಶಿವಹರ ಮಾದೇವ
ಯಪ್ಪಾ ಹೆಣ್ಣೇ ದೂರಿವಲ್ಲದೂ……….ಶಿವಹರ ಮಾದೇವ

ಕ : ಎಲ್ಲಾ ಕನ್ಯಾ ನೋಡ್ತಾನೆ, ರಾಜರ ಮಕ್ಳು ನೋಡ್ಕೊಂತಾ ನೋಡ್ಕೊಂತಾ, ಮನಸ್ಸಿಗೆ ಹಿಡಸ್ವಲ್ದು ಮಂತ್ರಿಗೆ. ಇದು ನೀಲಕುಮಾರಗೆ ಒಪ್ಪಂಥ ಹೆಣ್ಣಲ್ಲ- ಅಂತಾನೆ, ಮುಂದೆ ಹೋಗ್ತಾನೆ!-

ಹಿ : ಹೋಗ್ತಾನೆ!

ಕ : ಅಲ್ಲಿ ಯಾವೂರೈತಿ?

ಹಿ : ರುದ್ರಾವತಿ ಪಟ್ಣ
ಕ : ರುದ್ರಾವತಿ ಪಟ್ಣದ ರಾಜ ರುದ್ರಸೇಕ, ರುದ್ರಸೇಕನ ಮಡದಿ ಮಹಾದೇವಿ- ರಾಣಿ.

ಹಿ : ಆ

ಕ : ಆ ರಾಜಗೆ ಗಂಡು ಮಕ್ಳಿಲ್ಲ ಒಬ್ಳೆ ಮಗಳಿದ್ದಾಳೆ-ಮಗಳಂದ್ರೆ ಹೊಟ್ಟ್ಯಾಗ ಹುಟ್ಟಿದ ಮಗಳಲ್ಲ ಸಾಕುಮಗಳು.

ಹಿ : ಸಾಕು ಮಗಳೇ? ಹ್ಯಾಗೆ?

ಕ : ಅವರಿಗೆ ಮಕ್ಕಳಿರಲಿಲ್ಲ ನೋಡ್ರಿ, ರುದ್ರಸೇಕ ಮಹಾರಾಜ ಮತ್ತೆ ಮಹಾದೇವಿ ರಾಣಿ ಭಗವಂತಗೆ ಒಲಿಸಿಕೊಂಡು ಮಕ್ಕಳ ಫಲ ಬೇಡಾಕ ನಿಂತಿದ್ರು-ಈಶ್ವರ ದೇವರ ಗುಡಿಯಾಗ;

ಹಿ : ಆ

ಕ : ದೇವಲೋಕದಾಗ ಏನು ನಡದೈತಿ ಆವಾಗ; ದೇವಾನು ದೇವತರು, ಅಷ್ಟದಿಕ್ಕು ಪಾಲಕರು, ಸೂರ್ಯ ಚಂದ್ರಾದಿಗಳು, ಗಂಧರ್ವರು, ಕಿಂಪುರುಷರು, ಕಿನ್ನರರು ಕೂಡಿರಬೇಕಾದ್ರೆ ಒಬ್ಬ ರಂಭಾ ದೇವಕನ್ಯೆ- ಸಂಗೀತ ಮಾಡ್ತಿದ್ಲು, ದೇವ ಸಭಾದಾಗ!

ಹಿ : ದೇವೇಂದ್ರನ ಸಭಾದಾಗ!

ಕ : ಸಂಗೀತ! ಹ್ಯಂಗ ಮಾಡ್ತಿದ್ಲು! ನರ್ತನ, ಪೀಟಿಲು, ಪಿಯಾನು ತೊಗೊಂಡು ದೇವಲೋಕದ ದೇವಕನ್ಯೆ ಸಂಗೀತ ಮಾಡ್ಬೇಕಾರೆ ದೇವಾನು ದೇವತರು ತಲೆ ದೂಗಿದರು.

ಹಿ : ಒಪ್ಪಿದ್ರು

ಕ : ಹ್ಯಂಗ ಮಾಡಿದ್ಲು ಆಕಿ ಸಂಗೀತ!

|| ಪದ ||

ದಿಲ್ ಚಮಕಾ ಆಹಾ ದಿಲ್ ಚಮಕಾ
ಮಹಮ್ಮದ ಕೆ ನೂರಸೇ
ದಿಲ್ ಚಮಕಾ ಆಹಾ ದಿಲ್ ಚಮಕಾ
ಮಹಮ್ಮದ ಕೆ ನೂರಸೇ
ಕುದಾಕುದ್ ಹೈ ಜಹಾ ಉಧರ ಜಾವೂಂಗಾ
ಕುದಾಕುದ್ ಹೈ ಜಹಾ ಉಧರ ಜಾವೂಂಗಾ
………………………………………
……………………………………….
……………………………………….
……………………………………….
ದಿಲ್ ಚಮಕಾ ಆಹಾ ದಿಲ್ ಚಮಕಾ
ಮಹಮ್ಮದೆ ಕೆ ನೂರಸೇ.

ಕ : ಸಂಗೀತ ಮಾಡಂಥ ದೇವಸಭಾ, ಎಲ್ಲಾ ದೇವಾನುದೇವತರೂ ಸೇರ್ಯಾರೆ. ಕೀಟಕ ನಾರದ….

ಹಿ : ಆ ಸಭಾದಾಗ-
ಕ : ಸಭಾ ನೋಡಿದ, ಎಲ್ಲಾರು ಈಕಿ ಗಾಯನಕ್ಕ ಒಪ್ಪ್ಯಾರೆ; ಆದ್ರೆ ಈಕಿ ಗಾಯನ ಕೆಡಸ್ಬೇಕು ಅಂದ ನಾರದ.

ಹಿ : ಹೌದು ನಾರದಮುನಿ!

ಕ : ಒಂದು ತುಳಸಿ ಹುಳ ಆಗಿ ಹೋಗಿ ಎರಡೂ ಕುಚಗಳ ನಡುವೆ ಕುಂತ್ಕೊಂಡ ನಾರದ!

ಹಿ : ಆಹಾ!

ಕ : ಆಕಿ ತುಳಸಿ ಹುಳ ನೋಡಿಬಿಟ್ಲು-ಬಂಗಾರದ ಹುಳ! ಆಕಿ ಸಭಾ ನೋಡೋದು ಬಿಟ್ಲಪಾ-ತನ್ನ ಎದಿ ತಾನು ನೋಡ್ಕೊಂತ ತನ್ನ ಕುಚ ತಾನು ನೋಡ್ಕೊಂತ ನಕ್ಕಂತ ನಿಂತುಕೊಂಡುಬಿಟ್ಲು ಸಭಾದಾಗ!

ಹಿ : ಆ!

ಕ : ದೇವಾನು+ದೇವತರು ನೋಡಿದ್ರು ಈಕಿದೇನು ವಿಚಾರ!-

ಹಿ : ಆ!

ಕ : ಈಕಿ ಎದಿ ನೋಡ್ಕೊಂತ ನಿಂತುಬಿಟ್ಲು! ಈಕಿ ಗಾಯನ ನೋಡ್ಬಾರದು-ಅಂತ ಎಲ್ಲಾರು ಎದ್ದು ಹೋಗಿಬಿಟ್ರು. ಪರಮಾತ್ಮ ಒಬ್ಬನೇ ಕುತ್ಕೊಂಡ, “ಮಗಳೇ ನೀನು ಸಭಾ ಕೆಡಿಸಿಬಿಟ್ಟೆಲ್ಲಮ್ಮಾ! ನೀನು ಅವಿಚಾರ ಮಾಡ್ಬಿಟ್ಟೆ.”

ಹಿ : ಹೌದು!

ಕ : ನೀನು ದೇವಲೋಕದಾಗ ಇರಾಕಿ ಅಲ್ಲ, ದೇವ ಸಭಾ ಕೆಡಿಸೀ! ಮರ್ತ್ಯಕ್ಕೇ ನಡೀ- ಅಂದ ಪರಮಾತ್ಮ.

ಹಿ : ಆ!

ಕ : ದೇವಕನ್ನಿಗೆ ಮೂರು ದಿವಸದ ಕೂಸು ಮಾಡಿ ಜೋಳಿಗೇಗ ಹಾಕ್ಕೊಂಡು ಈಶ್ವರ ದೇವರ ಗುಡಿಯಾಗ ಇಳದಾನ ಪರಮಾತ್ಮ-ರುದ್ರಸೇಕ ರಾಜನ ಉಡಿಯಾಗ ನೀಡಾಕ-

ಹಿ : ನೀಡ್ಲಿಕ್ಕೆ!

ಕ : ಭವತೀ ಭಿಕ್ಷಾಂದೇಹಿ.

ಹಿ : ಭಿಕ್ಷಾ!

ಕ : ಜಂಗಮಯ್ಯಗಳು ಬಂದ್ರು ಗುಡಿಯಾಗ.

ಹಿ : ಗಂಡ ಹೆಂಡತಿ ನಮಸ್ಕಾರ ಮಾಡಿದ್ರು.

ಕ : ಏನು ಬೇಕ ನಿಮಗೆ?

ಹಿ : ಆಹಾ, ಮಕ್ಕಳಿಲ್ಲ!

ಕ : ಮಕ್ಕಳಿಲ್ಲ? “ಉಡಿ ಒಡ್ರಿ ಒಂದು ಕೂಸು ತಂದೀನಿ” ಅಂದ ಪರಮಾತ್ಮ!

ಹಿ : ಓಹೋ ದೇವ!

ಕ : ಗಂಡ ಹೆಂಡತಿ ಉಡಿ ಒಡ್ಡಿದ್ರು.

ಹಿ : ಆಹಾ.

ಕ : ಜೋಳಿಗ್ಯಾಗಿಂದ ಪರಮಾತ್ಮ ಮೂರು ದಿವಸದ ಹೆಣ್ಣು ಕೂಸು ತಗದ.

ಹಿ : ಆಹಾ ದೇವಕನ್ಯೆ!

ಕ : ಅವರ ಉಡಿಯಾಗ ನೀಡ್ಬೇಕಾದ್ರೆ ಪರಮಾತ್ಮ ಆ ಕೂಸಿಗೆ ಏನು ಶಾಪ ಕೊಟ್ಟ ನೋಡ್ರಿ;

ಹಿ : ಹೆಣ್ಣಿಗೆ ಶಾಪ!

ಕ : ಮಗಳೇ-

ಹಿ : ಆ.

ಕ : ದೇವರ ಸಭಾ ಕೆಡಿಸಿ ಮರ್ತ್ಯಾಕ್ಕ ಬಂದಿ.

ಹಿ : ಆ.

ಕ : ಇಲ್ಲಿ ಮುಂದೆ ಋತುಮತಿಯಾಗಿ ಯವ್ವೌನ ಪ್ರಾಯಕ್ಕ ಬಂದಾಗ ನಿನಗೆ ಮರಣ ಬರ್ಲಿ. ನಿನ್ನ ಮರಣ ನಿನಗೆ ಗೊತ್ತಿರಬೇಕು; ಇನ್ನಾರಿಗೂ ಗೊತ್ತಾಗಬಾರ್ದು! -ಅಂತ ಶಾಪಕೊಟ್ಟು ಅವರ ಉಡಿಯಾಗ ಕೂಸು ಹಾಕಿ ಹೋದ ಆ ಕಡಿಗೆ. ಇವರು ಆ ಕೂಸಿಗೆ ತಂದು ಜೋಪಾನ ಮಾಡ್ಯಾರೆ.

ಹಿ : ರಾಜ ರಾಣಿ.

ಕ : ಶಿವ ಕೊಟ್ಟಂಥ ಫಲ!

ಹಿ : ಆ.