ಕ : ರಂಭಾವತಿ ಸೂಳಿ, ಅಂದ್ರೆ ಪಾತ್ರದಾಕಿ, ಅಕಿ ಮಹಲ್ ಐತಿ. ತಾಯಿ ಕೈವಲ್ಯ ಗೇಟು ಬಾಗ್ಲ ಕಾಯ್ತಾಳೆ ಹೊರಗ. ಆಕಿ ವಿದ್ಯಾವಂತ್ಲು, ರೂಪದಲ್ಲಿ ದೇವ ಲೋಕದ ಕನ್ಯೆಯೋ ತಿಲೋತ್ತಮೆಯೋ, ಮಹಾ ಚಂದಾನ ಚಲುವಿ-ಋತುಮತಿ ಆಗಿ ಒಂದು ವರ್ಷ ಆಗೇತಿ ಲೇಶಿಗೆ.
ಹಿ : ಆಹಾ!
ಕ : ರಂಭಾವತಿ ಎಂಥೆಂಥಾರು ಬಂದು ಮನಸ್ಸು ಕೊಟ್ರೂ, ಆಕಿ ಒಬ್ಬರಿಗೂ ಮನಸ್ಸು ಕೊಟ್ಟಿರ್ಲಿಲ್ಲ! ಆಯಮ್ಮ ಒಳಗೆ ಯಾರ್ನೂ ಕರ್ಕೊಂಡಿಲ್ಲ!
ಹಿ : ಒಳ್ಳೇದು ಪರಿವ್ರತಾ!
ಕ : ಪತಿವ್ರತಾ ಧರ್ಮದಿಂದ ನನಗೆ ತಕ್ಕಂಥ ಒಡೆಯ ಬರ್ಬೇಕು. ಅಂಥಾ ಆ ಮಹಾರಾಜಗೆ ಒಳಗೆ ಕರ್ಕೋಬೇಕು ಅಂತ್ಹೇಳಿ ಏಕ ಭಕ್ತಿಯಿಂದ ಇದ್ದಾಳೆ ಆ ರಂಭಾಸಾನಿ.
ಹಿ : ಒಳ್ಳೇದು.
ಕ : ಆವತ್ತು ಬಾಜಾರದಾಗ ನೀಲಕುಮಾರನ ಕುದ್ರಿ ಬರ್ಬೇಕಾರ ರಂಭಾವತಿ ನೋಡಿ ಬಿಟ್ಲು ರಾಜಗೆ! -ಆಹಾ ಇಲ್ಲಿ ನನಗೆ ತಕ್ಕಂಥ ರಾಜಾ ಬರ್ತಾ ಇದಾನೆ-
|| ಪದ ||
ಇದೇ ರಾಜಗ ಕರ್ಕೊಂಡು ಬರ್ಬೇಕಾ ನಾನಾ….
ಕುದ್ರಿ ಬಾಜಾರದಲ್ಲಿ ಬಂದು ನಿಂತಾಳ…. ಹರಯನ್ನ ಮಾದೇವ
ಕುದ್ರಿ ಹತ್ರ ಬಂದಾಳಯ್ಯ…. ಹರಯನ್ನ ಮಾದೇವ
ಇಕಿ ಕುದ್ರಿಗೆ ಅಡ್ಡಗಟ್ಟ್ಯಾಳ ರಂಭಾ ರಂಭಾ….ಹರಯನ್ನ ಮಾದೇವ
ಆಹ ನಿಂದರ್ರೀ ಮಾರಾಜಾ ಮಾರಾಜಾ…. ಹರಯನ್ನ ಮಾದೇವ
ಓಹೋ ಸ್ತ್ರೀಯಳೆ ನೀನು ಯಾರೇ… ಹರಯನ್ನ ಮಾದೇವ
ನಿನ್ನ ಊರು ಯಾವುದ, ಉದ್ಮಾನ ಯಾವುದಾ ಸ್ತ್ರೀಯಳೇ…. ಹರಯನ್ನ ಮಾದೇವ
ನಿನ್ನ ಹೆಸರು ಏನು ಹೇಳಾ…. ಹರಯನ್ನ ಮಾದೇವ
ಕುದ್ರಿಗೆ ಅಡ್ಡಗಟ್ಟಿ ರಂಭಾವತಿ ನಿಂದ್ರಬೇಕಾದ್ರೆ ಕುದ್ರಿ ಗಕ್ಕನೆ ನಿಂದ್ರಿಸಿಬಿಟ್ಟ ರಾಜ ನೀಲಕುಮಾರ.
ಹಿ : ಆಹಾ ಯಾರು ಸ್ತ್ರೀಯಳೇ ನೀನು?
ಕ : ಓಹೋ ನನಗೆ ಯಾರಂತೀರಿ ಮಹಾರಾಜಾ?
ಹಿ : ಹೌದು.
ಕ : ಧರ್ಮಾವತಿ ಪಟ್ಣದಲ್ಲಿ ಪಗಡೂ ಸಾಲಿನಲ್ಲಿ ಐದು ಅಂತಸ್ತಿನ ಮನಿ ನಂದು ಮಾರಾಜ್.
ಹಿ : ಮಹಲ್ ನಿಮ್ಮದೆ?
ಕ : ಹೌದು, ಗುಣದಲ್ಲಿ ನಾನು ಪಾತ್ರದವಳು, ಲೇಶಿ ರಂಭಾವತಿ.
ಹಿ : ಓಹೋ ಲೇಶಿ!
ಕ : ಯಾಕಮ್ಮ ನನ್ನ ಕುದ್ರಿಗೆ ತಡಿದ್ರೆಲ್ಲ?
ಹಿ : ನಿಮ್ಮ ಕಡಿಗೆ ಮೂರು ಮಾತು ಆದಾವು. ಮೂರು ಮಾತು ಕೇಳಿಕೊಂಡು ನೀವು ಎಲ್ಲಿಯಾದ್ರು ಪ್ರಯಾಣ ಮಾಡ್ಬೇಕು-ಮಾರಾಜಾ.
ಕ : ನನ್ನ ಕಡಿಗೆ ಮೂರು ಮಾತು?!
ಹಿ : ಹೌದು ಮಹಾದೊರಿ.
ಕ : ನೀಲಕುಮಾರ ಅಂತಾನ-ಇಕಿ ಗೊತ್ತೇ ನನಗಿಲ್ಲ; ನನ್ನ ಗುರ್ತ ಇಕೀಗಿಲ್ಲ!
ಹಿ : ನಿಜ ನಿಜ.
ಕ : ನನ್ನ ಕಡಿಗೆ ಮೂರು ಮಾತು ಅದಾವ ಅಂತಾಳೆ! ಯಾವ ಮಾತು ಇದ್ದಾವು!
ಹಿ : ಆಹಾ.
ಕ : ಸ್ತ್ರೀಯಳೇ ನನಗೀಗ ಕುದ್ರಿ ಇಳದು ಮನಿಗೆ ಬರಂಗಿಲ್ಲ. ಯಾವ ಮಾತು ಇಲ್ಲೇ ಹೇಳು; ನಿನಿಗೆ ಕೇಳ್ಕೊಂಡು ನನ್ನ ಮಂತ್ರಿ ನನ್ನ ದಂಡಿನ ಹತ್ರ ಹೋಗ್ತೀನಿ.
ಹಿ : ಇಲ್ಲಿ ಹೇಳೋದಲ್ಲ ಬಹಿರೂಪದಲ್ಲಿ ದೊರೀ
ಕ : ಈ ಬಾಜಾರದಾಗ ಹೇಳೊ ಮಾತಲ್ರಿ, ನಮ್ಮ ಮನಿಯಾಗ ಬರ್ರಿ ಆ ಮಾತ ಕೇಳ್ತೀನಂದ್ಲು ಆಕಿ!
ಹಿ : ಹೌದು ಹೌದು.
ಕ : ಕುದ್ರಿ ಇಳದ, ರಂಭಾವತಿ ರಾಜನ ಕೈ ಹಿಡಿದು ಒಳಗ ಕರಕೊಂಡ್ಹೋಗಿ ಬಿಟ್ಲು! ಮೇಲ್ಮಾಡಿಗೆ ಕರ್ಕೊಂಡು ಹೋಗಿ-
ಹಿ : ತೂಗೋ ಮಂಚದ ಮ್ಯಾಲೆ ರಾಜನ್ನ ಕುದ್ರಿಸಿ ಬಿಟ್ಲು!
ಕ : ಮಂಚದ ಮ್ಯಾಲೆ ಕುಂತು ಆಕಿ ಮನಿ ನೋಡ್ತಾನೆ!-ಚಿತ್ರಪಟಗಳು, ಗಾಜಿನ ಹಂಡೇವು, ಗುಲಾಪುಗಳು, ಗಡಿಯಾರ, ಬೆಂಚಿ, ಕುರ್ಚಿ! ಪಿಟೀಲು, ಪಿಯಾನು ಸಂಗೀತ ಗಾಯನಕ್ಕ
ಹಿ : ಗಾಯನಕ್ಕ!
ಕ : ಮಾತಾಡಾಕ ಮಾತಿಲ್ಲ ಕತಿಯಲ್ಲ!
ಹಿ : ಹಾ!
ಕ : ರಾಜಗ ಚೆಂಡುಹೂವಿಲೆ ಹೊಡದು, ಮಲ್ಲಿಗಿಹೂವಿಲೆ ಹೊಡದು, ಪನ್ನೀರ ಚಿಮುಕಿಸಿ ಗಾಯನ ಸುರು ಮಾಡಿಬಿಟ್ಲು- ಸೂಳಿ ರಂಭಾವತಿ
|| ಪದ ||
ಬಾಲೀಶಾಖಾ ಚಲೀಗಯೀ
ದಿಲ್ಕೀ ಕಲಿಯಾ
ಕ್ಯಾಕರೂಂ ಮೈಕರೂಂ ತಾರೀಫ್ ತೇರೀ
ಮುಖ ಪ್ಯಾರೀ ಸರ್ಕಾರೀ ದರ್ಬಾರೀ ಗುಲ್ಪ್ಯಾರೀ
ಮುಖ ಪ್ಯಾರೀ ಸರ್ಕಾರೀ ದರ್ಬಾರೀ ಗುಲ್ಪ್ಯಾರೀ
ಏಕ್ ಚಾಂದ್ ಹೈ ಏಕ್ ಸಿತಾರಾ ಹೈ
ಕ್ಯಾ ಜೋಡ್ ಪ್ಯಾರಾ ಪ್ಯಾರಾ ಹೈ
ಮುಖ ಪ್ಯಾರೀ ಸರ್ಕಾರಿ ದರ್ಬಾರೀ ಗುಲ್ಪ್ಯಾರೀ
ಮುಖ ಪ್ಯಾರೀ ಸರ್ಕಾರಿ ದರ್ಬಾರೀ ಗುಲ್ಪ್ಯಾರೀ
ಬಾಲೀಶಾಖಾ ಚಲೀಗಯೀ
ದಿಲ್ ಕೀ ಕಲಿಯಾ
ಆಮಕೆ ಬಲ್ಲೆ ಮೇ ಕೋಯಲ್ ಬೋಲೀ
ಆಮಕೆ ಬಲ್ಲೆ ಮೇ ಕೋಯಲ್ ಬೋಲೀ
ಆಮಕೆ ಪಕೆ ರಸೂಲಿಲ್ಲಾ
ಆಮಕೆ ಪಕೆ ರಸೂಲಿಲ್ಲಾ
ಧರಿಯಾ ಕೀ ಮರ್ಜಿ ಜಾಲೆ ಮೇ ಸಪಡಿ
ಧರಿಯಾ ಕೀ ಮರ್ಜಿ ಜಾಲೆ ಮೇ ಸಪಡಿ
ಆಹಾ ತಡಪ್ ತಡಪ್ ಜಾನ್ ದೇ ತೇರಾ
ಆಹಾ ತಡಪ್ ತಡಪ್ ಜಾನ್ ದೇ ತೇರಾ.
ಕ : ಈಕಿ ಮಾಡಂಥ ಗಾಯನಕ್ಕೂ, ನರ್ತನಕ್ಕೂ, ಶಾರದಿ ವಿದ್ಯಾಕ್ಕೂ ರಾಜ ಮರುಳಾಗಿ ತೆಪ್ಪಗಾದ
ಹಿ : ಆಹಾ!
ಕ : ಆ ಕಡೆ ದಂಡಿಗೂ ಮರ್ತ, ಮಹಾ ಮಂತ್ರಿಗೂ ಮರ್ತ, ಈ ಕಡೆ ತಾಯಿ-ತಂದಿಗೂ ಮರ್ತ! ರಂಭಾವತಿ ಕೈವಾಸ ಆದ.
ಹಿ : ಮನಸ್ಸು ಹೋಯಿತು!
ಕ : ರಂಭಾವತಿ ಮ್ಯಾಲೆ ಪ್ರೇಮಿಟ್ಟ.
ಹಿ : ಆ
ಕ : ರಂಭಾವತೀ ಮನಿಯಾಗ ಕಂತು-ಏನಂತಾನೆ ನೀಲಕುಮಾರ?
ಹಿ : ಏನಂತಾನೇ?
ಕ :
|| ಪದ ||
ಚಲೋ ಪತ್ನಿ ಸಿಕ್ಲಪ ನನಗೈ….ಹರಹರ ಮಾದೇವ
ಇನ್ನು ಹೋಗಬಾರ್ದು ದೇಶದ ಮ್ಯಾಲೆ….ಹರಯನ್ನ ಮಾದೇವ
ಎಲ್ಲರಿಗೆ ಮರ್ತಾನ ರಾಜಾ….ಹರಹರ ಮಾದೇವ
ಪಂಚಪಗಡಿ ಆಟ ಆಡ್ಕೊಂತ ಕುಂತಾನಾ….ಹರಯನ್ನ ಮಾದೇವ
ದಂಡು ದಾರಿ ನೋಡ್ತೈತಿ ರಾಜಗೇ….ಹರಹರ ಮಾದೇವ
ಮಹಾರಾಜ ಬರ್ಲಿಲ್ಲ ತಮ್ಮಾ….ಹರಯನ್ನ ಮಾದೇವ
ವತ್ತು ಮುಳುಗಾಕ ಬಂತೈ….ಹರಹರ ಮಾದೇವ
ಕ : ಎಲ್ಲಾರಿಗೂ ಮರ್ತು ಪಂಚಪಗಡಿ ಆಡ್ಕೊಂತ ಮಹಲ್ನ್ಯಾಗ ಆದ.
ಹಿ : ದಂಡು, ಮಂತ್ರಿ ದಾರಿ ನೋಡ್ತಾರೆ-ರಾಜ ಬರ್ಲಿಲ್ಲ! ತಮ್ಮಾ ವತ್ತು ಮುಳುಗಿತು!
ಕ : ಬರ್ಲಿಲ್ಲಲ್ಲ!
ಹಿ : ಬರಬಹುದು ಇನ್ನು ಸ್ವಲ್ಪ ಹೊತ್ತಿಗೆ-
ಕ : ಆಗ ಬಂದಾನು, ಈಗ ಬಂದಾನು; ರಾತ್ರಿಯಾತು, ಹತ್ತು ಗಂಟಿಯಾಯ್ತು ಎಲ್ಲಾರು ಊಟ ಮಾಡ್ಕೊಂಡು ಮಲ್ಕೊಂಡ್ರು ವನಂತರದಾಗ!
ಹಿ : ಹೌದು!
ಕ : ಮುಂಜಾಲೆ ಬೆಳಕು ಹರದು ಎಂಟು ಗಂಟಿಗೆ ನೋಡ್ತಾರೆ, ರಾಜ ಬರ್ಲಿಲ್ಲ! ಮಂತ್ರಿ ನೋಡಿದ-
ಹಿ : ಆ
ಕ : ಏ ದಂಡೇ
ಹಿ : ಏನು ಮಹಾಮಂತ್ರಿ?
ಕ : ಎಂದೂ ರಾಜ ಬಿಸುಲ್ಮಕ ನೋಡಿದೋನು ಅಲ್ಲ;
ಹಿ : ಊರು ಬಿಟ್ಟೋನಲ್ಲ!
ಕ : ಮನಿ ಬಿಟ್ಟು ಬೈಲಿಗೆ ಬಿದ್ದೋನಲ್ಲ!
ಹಿ : ಹೌದು.
ಕ : ಇಲ್ಲಿವರಿಗೂ ಬಂದು ಗೆಳೆಯಾಗ ಮಾತಾಡ್ಸಿ ಬರ್ತೀನಿ ಅಂತ ಊರಾಗ ಹೋದ!
ಹಿ : ಹೋದ.
ಕ : ಊರಾಗ ಹೋಗಿ ಗೆಳೆಯಾಗ ಮಾತಾಡ್ಸಿ ಬರೋ ಕಾಲಕ್ಕೆ ತಾಯಿ-ತಂದಿ ನೆನಪಾಗೇತಿಲ್ ಆ ತಾಯಿ-ತಂದಿ ಹತ್ರ ಹೋಗ್ಯಾನೆ! ತಾಯಿ-ತಂದಿ ಕುತ್ಕೊಂಡು ಬ್ಯಾಡ ಮಗನೆ ಅಂತ್ಹೇಳಿ ಜೋರು ಜುಲ್ಮಿ ಮಾಡಿ ಮಗನಿಗೆ ಕರ್ಕೊಂಡು ಕುಂದ್ರಿಸ್ಯಾರ!
ಹಿ : ಹೌದು ಹೌದು.
ಕ : ದೇಶ ತಿರುಗಿ ದ್ರವ್ಯ ಗಳಿಸ್ಕೊಂಡು ಬರೋಂಥ ಪಂಡಿತ ಹೋಗಿ ಊರಾಗ ಕುಂತ ಬಳಿಕ ನಮ್ಮ ದೇನೈತಿ ಉಲ್ಡು ಇನ್ನು?
ಹಿ : (ರಾಗವಾಗಿ) ಹೇಳ್ರೋ ನಡ್ರೋ ಊರಿಗೆ ಹೋಗಾನೂ….
ಕ : ಎಲ್ಲಾ ಸಿಬ್ಬಂದಿ ಕರ್ಕೊಂಡು ತಾಳ ಮೇಳ ಮಾಡ್ಕೊಂತ ಹನ್ನೆರಡು ಗಂಟೆಗೆ ಊರಾಗೆ ಒಂದ್ರು ವಾಪಾಸ್.
ಹಿ : ಬಂದ್ರು.
ಕ : ಧರ್ಮಸೇಕ ಮಹಾರಾಜ ಗಂಗಾಸಾಗ್ರ ಮಹಾರಾಣೀ ನಮಸ್ತೇ, ಮಂತ್ರಿ ಬಂದೀನಿ.
ಹಿ : ನಿಮಗೆ ದೀರ್ಘದಂಡ ಹಾಕ್ತೀವಿ.
ಕ : ಯಾಕಪ್ಪಾ ನಿನ್ನೆ ಇದೇ ಹೊತ್ತಿನ್ಯಾಗೆ ದೇಶದ ಮೇಲೆ ಹೋಗ್ತೀವಿ ಅಂತ ಹೋಗಿದ್ರಲ್ಲೋ-ಮಗ ನೀವು ಎಲ್ಲಾರು ಇವತ್ತs ವಾಪಾಸು ಬಂದ್ರೆಲ್ಲಾ ಏನಿದು?
ಹಿ : ಓಹೋ! ಧರ್ಮಸೇಕ ತಂದೆ, ನಿಮ್ಮ ಹತ್ರ ಮಗಾ ಬಂದಿಲ್ಲ ಇನ್ನೂ?
ಕ : ಯಾರು ನೀಲಕುಮಾರ?!
ಹಿ : ನೀಲಕುಮಾರ ನಿಮ್ಮ ಮಗ ಬಂದಿಲ್ಲಾ?
ಕ : ಇಲ್ಲಪ್ಪಾ, ಗೆಳೆಯಗ ಮಾತಾಡ್ಸಿ ಬರ್ತೀನಿ ಅಂತ ನಿನ್ನೆ ಹೋದ ಮಗ ಬಂದಿಲ್ಲ ಇನ್ನೂ?
ಹಿ : ಬಂದಿಲ್ಲ!
ಕ : ಬಂದಿಲ್ಲ ಅರಮನಿಗೆ ಮಗ ಅಂದ ತಕ್ಷಣಕ್ಕ ಮಂತ್ರಿ ಎದಿಗೆ ದುಂಡು ಬಡಧಾಂಗಾತು.
ಹಿ : ಮೋಸವಾಯಿತು!
ಕ : ಯಾಕ ಬರ್ಲಿಲ್ಲ ಇಲ್ಲಿ?
ನಿನ್ನೆ ಗೆಳೆಯನಿಗೆ ಮಾತಾಡ್ಸಿ ವಾಪಾಸು ವನಂತರಕ್ಕೆ ಬರೋ ಟೈಮಿನಾಗ ಹೊತ್ತಾಗೇತಿ, ಟೈಮು ಮೀರಿ ರಾತ್ರಿ ವ್ಯಾಳ್ಯಾದಾಗ
ಹಿ : ಆಹಾ-
ಕ : ನಮ್ಮ ವನಂತರಕ್ಕೆ ಬರೋ ದಾರಿ ಬಿಟ್ಟು ಯಾವ ದಾರಿ ಮಾರ್ಗ ಹಿಡ್ಕೊಂಡು ಎತ್ಲಾಗ ಹೋದಾನೋ ಏನೋ?
ಹಿ : ಅಡವಿಗೆ?
ಕ : (ರಾಗವಾಗಿ) ದಾರಿತಪ್ಪಿ ಯಾವ ಗುಡ್ಡದಾಗ ಹೋಗಿ ಬಿದ್ನೋ….
ಹಿ : ಆ!
ಕ : ರಾಜಕುಮಾರಗ ಘಾತ ಆತು ಅಂದ ಮಂತ್ರಿ! -ಹೌದು ತಾಯಿ-ತಂದೆ, ಊರಾಗ ದಂಡು ರೈತರು ಕೇಳಿಬಿಟ್ರು.
ಹಿ : ಆಹಾ ಸುದ್ಧಿ !
ಕ : ರಾಜರ ಮಗ ಇಲ್ವಂತೆ. ರಾಜಕುಮಾರ ಇಲ್ಲಂತೆ!
ಹಿ : ಆ!
ಕ : (ರಾಗವಾಗಿ)
ಹೋದ್ಯಾ ಮಗನೇ ನೀಲಕುಮಾರ ಯಾ ಹುಲಿ ತಿಂದಿತೋ…….
ಯಾವ ಹೊನ್ನಿಗಾ ನುಂಗಿತು ಆಡಿವ್ಯಾಗs….ಒಟ್ಟು ಮಗs ನಮಗೆ….
ಇರಾ ಒಬ್ಬ ಮಗ ನಮಗೆ ಪರದೇಶಿ ಮಾಡಿ ಹೋದ್ಯಾ…….
ನಾವೆಷ್ಟು ಬೇಡಿಕೊಂಡ್ರು ನಮ್ಮ ಮಾತ್ಕೇಳ್ಲಿಲ್ಲಾ……..
ಕಡೆಕಾಲಕ್ಕೆ ದ್ರವ್ಯ ಗಳಿಸ್ಕೊಂಡು ಬರ್ತೀನಂತ್ಹೇಳಿ ನಮ್ಮನ್ನ ಪರದೇಶಿ ಮಾಡಿ ಹೋದ್ಯಾ….ಅಡಿವಿ ಪಾಲಾದ್ಯ ಮಗನೇ-ತಾಯಿ ತಂದೆ ಅಳ್ತಾ ಇದಾರೆ! ಮಂತ್ರಿ ನೋಡಿದ್ಯಾ-ಶಿವಾ ನಾನು ಎಂಥಾ ಕೆಲ್ಸ ಮಾಡಿಬಿಟ್ಟೆ!
ಕ : ಆಹಾ, ಅವ್ವಾ ಅಳ್ಬ್ಯಾಡ ತಾಯಿ ಸಮಾಧಾನ ಮಾಡು, ನಾನು ನಿಮ್ಮ ಮಗ ಎಲ್ಲಿದ್ರೂ ಪತ್ತೆ+ಮಾಡ್ತೀನಿ, ಕರ್ಕೊಂಡು ಬರ್ತೀನಿ; ಅಡಿವ್ಯಾಗ ಇದ್ದಾನು-
ಹಿ : ಹೋಗಿ ಬರ್ತೀನಿ.
ಕ : ಹೋಗಿ ಬರ್ತೀನಿ ಅಂತ್ಹೇಳಿ ಮಂತ್ರಿ, ಊಟಿಲ್ಲ, ಉಪಚಾರಿಲ್ಲ ಹನ್ನೆರಡು ಗಂಟೆಗೆ ಊರು ಬಿಟ್ನಪಾ! ಹುಡ್ಯಾಕ ರಟ. ಎರಡರ್ಧಾರಿ ಅಡಿವ್ಯಾಗ ಬಂದಾನೆ, ಮೂರರ್ಧಾರಿ ತಿರುಗ್ಯಾನೆ; ನೀಲ ಕುಮಾರಾ ಅಂತಾ ಕೂಗ್ತಾನೆ; ಪ್ರತಿಧ್ವನಿ ಬರ್ತಾ ಐತಿ ಗುಡ್ಡದಾಗ! ಆ ಗುಡ್ಡಾನೆಲ್ಲಾ ಹತ್ಯಾನ!
ಹಿ : ಹುಡುಕಾಟ!
ಕ : “ನೀಲ ಕುಮಾರಾ!” ಈ ಗುಡ್ಡದಾಗ ಧ್ವನಿ ಬರ್ತೈತಿ! ಅಲ್ಲಿಂದ ಇಲ್ಲಿಗೆ ಬರ್ತಾನೆ!
ಹಿ : ಅಂ!
ಕ : ಎಲ್ಲೆಲ್ಲೋ ಹುಡುಕಿದ್ರು ರಾಜನ ಸುದ್ದಿನೇ ಇಲ್ಲ; ಸುಳಿವೇ ಇಲ್ಲ!
ಹಿ : ಇಲ್ಲ!
ಕ : ಅಡಿವ್ಯಾಗ ಇಲ್ಲಂತ್ಹೇಳಿ ನಾಲ್ಕು ಗಂಟೆಗೆ ವಾಪಾಸು ಊರಿಗೆ ಬಂದ.
ಹಿ : ನಮಸ್ಕಾರ ಧರ್ಮಸೇಕ-ಗಂಗಾಸಾಗ್ರ ತಾಯೀ.
ಕ : ಶರಣಾರ್ಥಿ
ಹಿ : ಐದಾನೇನೋ-ಸಿಕ್ಕನೇನೋ ಮಂತ್ರೀ-ಮಗಾ?
ಕ : (ರಾಗವಾಗಿ) ಎಲ್ಲಿ ಐದಾನ್ರೀ ಮಗಾ!….ಮಗನ ಸುದ್ದಿಯಿಲ್ಲ ಸುಳಿವಿಲ್ಲಾ….ಅಡಿವ್ಯಾಗೆಲ್ಲಾ ಹುಡುಕಿ ಬಂದೆ ಎಲ್ಲೆಲ್ಲಿ ಮಗನ ಸುದ್ದಿಯಿಲ್ಲಾ!
ಹಿ : ಇಲ್ಲ
ಕ : || ಪದ ||
ಹೋದನೇ ಮಡದೀ ಮಗ ನಮ್ಮಾ…ಹರಯನ್ನ ಮಾದೇವ
ಮಗ ಹೋಗ್ತಾನೇ ನನ ಮಡದೀ…ಶಿವಯನ್ನ ಮಾದೇವ
ಯಾವ ಹುಲಿ ನುಂಗೇತೇನ ನೋಡಾ ಮಗ….ಹರಯನ್ನ ಮಾದೇವ
ಅಡಿವ್ಯಾಗ ಹೋಗಿ ವಸ್ತಿಮಾಡಿದಾ ಮಗ….ಹರಯನ್ನ ಮಾದೇವ
ಯಾ ಹೊನ್ನಿಗಾ ನುಂಗೇತೇನಾ….ಓ ನಾಮಾ ಶಿವಾಯ
ಅಗಲಿ ಹೋದ ನಮ್ಮ ಬಾಳಾ….ಬಾಳಾ….ಓ ನಮಾ ಶಿವಾಯ
ಕ : ಮಗನೇ ಯಾ ಹುಲಿ ನುಂಗಿತು, ಯಾ ಹೊನ್ನಿಗ ನುಂಗಿತು ಅಂತ ತಾಯಿ-ತಂದಿ ಅಳ್ತಾರೆ!
ಹಿ : ಮಹಾದುಃಖ!
ಕ : ಮಂತ್ರಿ ಅಲೋಚಿನಿ ಮಾಡ್ದಾ-ಏನ್ರಿ ಮಹಾರಾಜ್ರೇ.
ಹಿ : ಆ
ಕ : ಹುಲಿ ತಿಂದಿಲ್ಲ ಹೊನ್ನಿಗ್ಯಾ ತಿಂದಿಲ್ಲ, ನಿಮ್ಮ ಮಗ ಎಲ್ಲಿ ಹೋಗಿಲ್ಲಾ; ಈ ಊರಾಗs ಯಾರ ಮನೆಗಾರ, ಗೆಳೆಯರ ಮನೇಗ ಕುಂತಿದ್ದಾನು. ಊರಾಗ ಸ್ವಲ್ಪ ಪತ್ಯ+ಮಾಡ್ತೀನಿ ಅಳಬ್ಯಾಡ್ರಿ-ಅಂತ್ಹೇಳಿ ಮತ್ತೆ ನಾಲ್ಕು ಗಂಟಿ ನಾಲ್ಕುವರಿ ಗಂಟ್ಯಾಗ ಊರಾಗ ಹೊಂಟ್ನಪಾ ಅಲ್ಲೇ-ರಾಜಕುಮಾರನ್ನ ಹುಡುಕಾಕ.
ಹಿ : ಸ್ನೇಹಿತರ ಮಾತು!
ಕ : ಸಾಹುಕಾರ್ರೇ,
ಹಿ : ಏನಪ?
ಕ : ನಮ್ಮ ನೀಲಕುಮಾರ ನಿಮ್ಮ ಹತ್ರ ಬಂದಿದ್ನೆ? ನಿಮ್ಮ ಮನಿಗೆ ಬಂದಿದ್ನ?
ಹಿ : ಇಲ್ಲ ಬಂದಿಲ್ಲ
ಕ : ಬಡವ್ರೇ ನಮ್ಮ ರಾಜಗೆ ನೋಡಿದ್ರಾ?
ಹಿ : ನೋಡಿಲ್ಲಾ !
ಕ : ಊರಾಗೆಲ್ಲ ಪತ್ತೆ+ಮಾಡ್ತಿದಾನೆ ಎಲ್ಲೆಲ್ಲಿ ಸುಳಿವಿಲ್ಲಾ!
ಹಿ : ಓಹೋ! ಮುತ್ತ ಶೆಟ್ಟಿ ಮನಿಗೆ ಹೊಕ್ಕೀನಂತಾ ಹೇಳಿಬಂದ ಅವರ ಮನೆಗೇನಾರ ಐದಾನೇನೋ
ಕ : ಅಲ್ಲಿಗೆ ಬಂದ ಓಡಿ, ಐದು ಗಂಟೆಯಾಗಿತ್ತು; ಶೆಟ್ರು ಅಂಗಡ್ಯಾಗ ಕುಂತಿದ್ರು. ನಮಸ್ಕಾರ ಮುತ್ತು+ಶೆಟ್ಟಿ ಸಾಹುಕಾರ
ಹಿ : ಶರಣಾರ್ಥಿ, ಶರಣಾರ್ಥಿ
ಕ : ಯಾಕ ಮಂತ್ರಿ ಬಂದೆ?
ಹಿ : ನಮ್ಮ ರಾಜಕುಮಾರ ನಿಮ್ಮ ಹತ್ರ ಬಂದಿದೆ ನಿನ್ನೆ?
ಕ : ಬಂದಿದ್ರು.
ಹಿ : ಯಾವ ಕಡಿ ಹೋದ್ರು?
ಕ : ಅಲ್ಲಪಾ ಕುದ್ರಿ ಅಂಗಳದಾಗ ನಿಲ್ಲಿಸಿದ್ದ್ರು; ಇಳಿಯಪ್ಪ ಕುದ್ರೀ ಅಂದ್ರ ಇಳಿಲಿಲ್ಲಾ!
ಹಿ : ಆ!
ಕ : ನಾನು ತಡ ಮಾಡಂಗಿಲ್ಲ, ದಂಡು ವನಂತರದಾಗ ಬಿಟ್ಟು ಬಂದೀನಿ ನಾನು ಹೋಗ್ತೀನಿ ಅಂದ್ರು!
ಹಿ : ಹಾ!
ಕ : ಹಾಂಗs ಕುದ್ರಿ ಮ್ಯಾಲೆ ಕುಂತು ಮಾತಾಡಿದ್ರಪ್ಪ; ನಾನು ವೀಳ್ಯಾ ಮಾಡಿಕೊಟ್ಟೆ ಹಂಗs ಬಾಯಾಗ ಹಾಕ್ಕೊಂಡು ಹಿಂಗೆ ಬಾಜಾರದಾಗ ಬರ್ತೀನಿ ಅಂದು ನಿಮ ವನಂತರಕ್ಕ ಬಂದ್ರಲ್ಲ ನಿನ್ನೆ?
ಹಿ : ಓಹೋ ಬಂದಿಲ್ಲ!
ಕ : ಆಹಾ…. ಪತ್ಯೆ+ಆಯ್ತು! ಈ ಬಾಜಾರದಾಗ ಯಾರ ಮನಿಯಾಗರೆ ಇದ್ದಾನಂತ್ಹೇಳಿ ಶೆಟ್ಟಿ-
ಹಿ : ಹಾ-
ಕ : ಹೋಗಿ ಬರ್ತೀನಿ.
ಹಿ : ಹೋಗಿ ಮಾಡಿ ಬಾರಪ್ಪಾ ಅಂದ-ಶೆಟ್ಟಿ.
ಕ : ಬಾಜಾರದಾಗ ಚಿನಿವಾಲರ ಅಂಗಡಿ, ಕಿರಾಣಿ ಅಂಗಡಿ, ಜವಳಿ ಅಂಗಡಿ ಎಲ್ಲಾ ವ್ಯಾಪಾರದ ಅಂಗಡಿ, ಮಹಲು ಮಂಟಪ ಕೇಳ್ಕೊಂತ ಹೊಂಟ ಮಂತ್ರಿ ರಾಜಕುಮಾರನು ಕುದ್ರಿ ಹೋಯ್ತೇನ್ರಿ ನಿನ್ನೆ ಈ ಕಡೆ?
ಹಿ : ಹೌದು.
ಕ : ನಿನ್ನೆ ಹೀಂಗs ಹೋದ ರಾಜಕುಮಾರ
ಹಿ : ಕುದರಿ ಮ್ಯಾಲೆ!
ಕ : ಕೇಳ್ಕೊಂತ, ಕೇಳ್ಕೊಂತ್, ದೊಡ್ಡ ಊರದು, ಪಗಡೋ ಸಾಲು ಬಜಾರ ಸಾಲಿ ನ್ಯಾಗ ಪಾತ್ರದಾಕಿ ರಂಭಾವತಿ ಮನಿ ಹತ್ರ ಬಂದ ಮಂತ್ರಿ!
ಹಿ : ಹೌದು
ಕ : ರಂಭಾವತಿ ಮನಿ ಎದುರಿಗೇ ಒಂದು ಮುದುಕಿ ಮನಿ; ಆ ಮನಿ ಹೊರ ಕಟ್ಟೀ ಮ್ಯಾಲೆ ಆಕಿ ಹಗಲೂ ರಾತ್ರೀ ಟೆಂವ್ ಟೆಂವ್ ದಮ್ಮು ಹತ್ತಿ ಕೆಮ್ಮುತಾ ಕುಂತಿರತೈತಿ.
ಹಿ : ಯವ್ವಾ?
ಕ : ಯಾರದು?
ಹಿ : ನಾನು ಮಂತ್ರಿ
ಕ : ಏನು ಬೇಕಪ್ಪ ಮಂತ್ರಿ?
ಹಿ : ಏನಿಲ್ಲವ್ವ ನಿನ್ನ ಹತ್ರನೆ ಬಂದಿದ್ದೆ; ಇತ್ತ ಕಡಿಗೆ ನಮ್ಮ, ರಾಜಕುಮಾರನ ಕುದ್ರಿ ಬಂದಿತ್ತೇನು?
ಕ : ಈ ಎದುರು ಮನಿ ಪಾತ್ರದಾಕಿ ರಂಭಾವತಿ ಲೇಸಿ ಅದಾಳಲ್ಲ-
ಹಿ : ಹೌದು,
ಕ : ಈಕಿ ನಿನ್ನೆ ಬರೊ ಕುದ್ರಿ ತರುಬಿದ್ಲು; ರಾಜ ಇಳುದ; ಅವ್ರು ಏನೇನು ಮಾತಾಡಿದ್ರೋ ಏನೋ ಆ ರಾಜನ ಕೈ ಹಿಡ್ಕೊಂಡು ಹೋಗಿ ತನ್ನ ಅರಮನಿಯಾಗ ಇಟಗೊಂಡಾಳ!
ಹಿ : ಆಹಾ!
ಕ : ಹೋದ ರಾಜ ಹೊರ ಬಂದಿಲ್ಲ! ಈಗ ತಾತ್ಕಾಲಿಕ ರಂಭಾವತಿ ಲೇಸಿ ಮನಿಯಾಗ ಐದಾನೆ! (ರಾಗವಾಗಿ) ಇಲ್ಲಿ ಪತ್ಯೆವಾದ್ನೊ ಸ್ವಾಮೀ….
ಹಿ : ಆ
ಕ : (ರಾಗವಾಗಿ) ಒಳಗ ರಾಜ ಇರಬಹುದು ನೋಡ್ಬೇಕು ಅಂತ್ಹೇಳಿ ಮಂತ್ರಿ ಬಂದಾನs.
ಹಿ : ಆಹಾ!
ಕ : ರಂಭಾವತಿ ತಾಯಿ ಕೈವಲ್ಯ, ಗೇಟು ಬಾಗಲ ಕಾಯ್ತಾಳ; ಅರವತ್ತು ವರ್ಷದ ಮುದಿಕಿ, ಆಕಿ; ಮಹಾ ಅಲ್ಲಾ ಪಿಲ್ಲಿ!
ಹಿ : ಹೌದು
ಕ : ಎಂಥ ಎಂಥ ಪಂಡಿತ್ರು ಬಂದ್ರೂ ಒಳಗೆ ದಾರಿ ಬಿಡು ಅಂದ್ರ ಬಿಡಾಕಿ ಅಲ್ಲ ಆಕಿ,
ಹಿ : ಹಾ
ಕ : ಯಾರು ನೀನು?
ಹಿ : ಮಂತ್ರಿ ತಾಯೀ-ನಾನು!
ಕ : ಓಹೋ ಅಮ್ಮ ತಾಯಿ ಮಹಾರಾಜ್ರು ಒಳಗ ಅದಾರೆ; ಸ್ವಲ್ಪ ದಾರಿ ಬಿಡು; ರಾಜನ ಕೂಟಾಗ ಮಾತಾಡಾದು ಐತಿ.
ಹಿ : ಹೌದು ಹೌದು
ಕ : ದೊಡ್ಡ ಅಧಿಕಾರಿ ಮಂತ್ರಿ ಬಂದಾನ, ಮರ್ಯಾದಿ ಮಾಡಿ ದಾರಿ ಬಿಡಾನು ಅಂದ್ಲು. ಮುದುಕಿ.
ಹಿ : ಬರ್ರಿ ಮಂತ್ರಿ ಬರ್ರಿ-ಗೇಟು ಬಾಕ್ಲು ತಗದ್ಲು; ಒಳಗೆ ಬಂದ ಮಂತ್ರಿ
ಕ : ಎರಡು ಬಾಗ್ಲ ದಾಟಿ ಮೇಲ್ಭಾಗಕ್ಕೆ ಬಂದು ನೋಡ್ತಾನೆ-ಇಬ್ರೂ ಪಂಚ ಪಗಡಿ ಆಡ್ತಾ ಇದ್ದಾರೆ-
ಹಿ : ರಂಭಾವತಿ-ನೀಲಕುಮಾರ ವೀಳ್ಯ ತಿಂದು ಆನಂದದಿಂದ!
ಕ : ಮಹಾರಾಜ್!
ಹಿ : ಆಹಾ!
ಕ : ಶರಣರೀ
ಹಿ : ಓ ನಮಸ್ಕಾರ.
ಕ : || ಪದ ||
ಥೂ ನಿನ್ನ ಬುದ್ಧಿಗೆ ಬೆಂಕಿ ಹಚ್ಚ….ಹರಯನ್ನ ಮಾದೇವ
ಏನು ದೇಶ ತಿರುಗಿದೋ ಮರಾಜಾ….ಹರಯನ್ನ ಮಾದೇವ
ಏನು ದ್ರವ್ಯ ಗಳಿಸ್ಕೊಂಡು ಬಂದ್ಯೋ ರಾಜಾ….ಹರಯನ್ನ ಮಾದೇವ
ಏನು ಪಟ್ಟಾ ತೊಗೊಂಡೆಪ್ಪಾ ರಾಜಾ….ಹರಯನ್ನ ಮಾದೇವ
ನಿನ್ನ ಬುದ್ಧಿ ಸುಡಲಿ ನೀಲಾ….ಹರಯನ್ನ ಮಾದೇವ
ಥೂ ನಿನ್ನ ಬುದ್ಧಿ ಸುಡ್ಲಿ ನೀಲಕುಮಾರಾ
Leave A Comment