ಕ : ಏನ್ಹೇಳಿದ್ರೂ ಕೇಳ್ವಲ್ಲ ಮಂತ್ರಿ! ಒಂದೇ ಹಟ ಹಿಡುದ ಅವನು!
ಹಿ : ಹೌದು
ಕ : ಅಕ್ಕಿ ಬಂಡಿ, ಬೆಲ್ಲದ ಬಂಡಿ, ತೊಗರಿ ಬ್ಯಾಳಿ ಬಂಡಿ, ಉಪ್ಪು-ಕಾರ, ಮಟ್ಟಿಗಟ್ಟಲೆ ಸೀರಿ, ಮದ್ವೆ ಕುಬ್ಸ, ಉತ್ತತ್ತಿ ಕೊಬ್ರಿ ಬಂಡಿ,ಅರಿಸಿಣ ಬಂಡಿ,
ಹಿ : ಆ ರಾಗ ಬಂಡಿ
ಕ : ಎಲ್ಲಾ ತಗದು ಕೈಯಾಗ ಸಾಮಾನ ಕೊಟ್ರು
ಕ : ಗಂಡಿನೂರಿನಿಂದ ದಂಡಿಗೆ ಕರ್ಕೊಂಡು ಕಂಜೂರದ ಬಾಕು, ಮದಿನೀರು ಮಾಲು, ಒಂದು ನಿಂಬಿಹಣ್ಣು, ಬಂಗಾರದ ನಿಂಬಿಹಣ್ಣು-ಇವು ನಾಲ್ಕೂ ತೊಗೊಂಡು ಜೇಬಿನಾಗ ಇಟ್ಕೊಂಡು ಹನ್ನೆರಡು ಸಾವಿರ ದಂಡು-ಆರು ಸಾವಿರ ಹಿಂದೆ ಆರು ಸಾವಿರ ಮುಂದೆ, ಇನ್ನೂರ ಬಂಡಿ ಮದುವಿ ಸಾಮಾನು ತಯಾರಾದ್ವು ಊರು ದೇವರಿಗೆ ಹಣ್ಣು ಕಾಯಿ ಕೊಟ್ಟು
ಹಿ : ಆ
ಕ : ಯಪ್ಪಾ ಮದುವಿ ಮನಿಗೆ ಹೊಂಟಾರೇ….
ಎಲ್ಲಾರೂ ಲಗ್ನಕ್ಕ ನಡುದಾರಾ……ಹರಯನ್ನ ಮಾದೇವಾ
ಕ : ಲಗ್ನಕ್ಕೆ ಇವ್ರು ಬರ್ಬೇಕಾದ್ರೆ ಒಂದು ಗಾವುದ ಎರಡು ಗಾವುದ ಮೂರು ಗಾವುದ ನಾಲ್ಕು ಗಾವುದ ಸಮೀಪದಲ್ಲಿ ಬೆಳ್ಳಗೆ ಕಾಣತೈತಿ ರುದ್ರಾವತಿ ಪಟ್ಣ-
ಹಿ : ಹೆಣ್ಣೋರ ಊರು!
ಕ : ವನಂತರದಾಗ ಹಳ್ಳಿದಾಗ ಮಕ ಮಾರಿ ತೊಳಕೊಂಡು ನೀರು ಕುಡಿಯಾಕ ಗಂಡಿನೋರು ಕುಂತರು.
ಹಿ : ನಿಬ್ಬಣ ಕುಂತುಬಿಡ್ತು
ಕ : ಎಲೋ ಮಂತ್ರಿ-
ಹಿ : ಅಯ್ಯಾ ಏನು?
ಕ : ಬೀಗರೂರು ಇದೇ ಏನೋ?
ಹಿ : ಹೌದ್ರಿ ಇದೇ ಬೀಗರೂರು-ರುದ್ರಾವತಿ ಪಟ್ಣ.
ಕ : ಮದಲಿಂಗನ ಕರ್ಕೊಂಡು ಬಂದಿಲ್ಲಲ್ಲೋ!
ಹಿ : ಇಲ್ಲ!
ಕ : ಮದಲಿಂಗ!
ಹಿ : ಹಾ!
ಕ : ಮದಲಿಂಗ ಬಂದಿಲ್ಲ ಅಂದ ತಕ್ಷಣಕ್ಕೆ ಎಲ್ಲಾ ನಿಪ್ಪಾಗಿ ಮಂತ್ರಿ ಎದಿಗೆ ಗುಂಡು ಬಡದ್ಹಂಗಾತು!
ಹಿ : ಆಹಾ!
ಕ : ಅಲೇಲೆಲೆ ಎಂಥಾ ಅಂದ ಮಾಡಿದ್ನೆಲ್ಲೋ ನಾನು!
ಹಿ : ಆಹಾ
ಕ : ನೀಲಕುಮಾರ ಬಂದಿಲ್ಲ? ಅಂತ ಕೇಳ್ತಾರೆ, ಎದುರು ಭೇಟಿಗೆ ಬಂದು ಮದುಮಗ ಎಲ್ಲಿ ತೋರ್ಸು ಅಂದರೆ ಯಾರಿಗೆ ತೋರ್ಸಾದು ನಾನು?
ಕ : ನನ್ನ ಕೈಹಿಡಿದು ಕೇಳಿದಾಗ ನಾನು ಯಾರ್ನ ತೋರ್ಸಲಿ-ಮದುಮಗನಿಗೆ. ಎಂಥಾ ಕೆಲಸ ಮಾಡಿದ್ನ್ಯೋ ಪರಮಾತ್ಮ! ನಾನು ಎಚ್ಚರ ತಪ್ಪಿದೆ….
ಹಿ : ಬಲಿಗೆ ಬಿದ್ದೆ, ಎಚ್ಚರ ತಪ್ಪಿದೆ!
ಕ : ಹೆಣ್ಣಿನೋರು ಬಂದು ಮದಲಿಂಗನ್ನ ಬಿಟ್ಟು ಹ್ಯಾಂಗ ಬಂದ್ರಿ ಅಂತ್ಹೇಳಿ ನನ್ನ ದವಡಿ ಮ್ಯಾಲೆ ಬಡದು ಮೊದಲು ನನ್ನ ಕ್ವಾಣ್ಯಾಗ ಹಾಕ್ತಾರೆ!
ಹಿ : ಹೌದು
ಕ : ರಾಜನ ಅಪಮಾನ ಮಾಡಿದ್ರೆ
ಹಿ : ಯಜಮಾನನ ಮರ್ಯಾದೆ ಹೋಗ್ತೈತಿ!
ಕ : ಕಡಿಗೋಗಿ, ಒಂದು ಮಾವಿನ ಮರದ ಕೆಳಗೆ ಕಣ್ಣೀರು ತಗದು ಸುಮ್ಮನೆ ಕುತ್ಗೊಂಡು ಬಿಟ್ಟ; ಪರಮಾತ್ಮಾ ಏನು ಹೊತ್ತು ತಂದ್ಯೊ! ಹ್ಯಾಂಗ ಲಗ್ನ ಮಾಡ್ಬೇಕು ಇದು!
ಹಿ : ಆಹಾ
ಕ : ಒಂದು ಪೇಪರ್ ತಗೊಂಡನಪಾ ಮಂತ್ರೀ.
ಹಿ : ಕಾಗದ!
ಕ : ನೋಡೋನ ಹ್ಯಂಗ ಆಗತೈತೋ ಲಗ್ನ.
ಮಹಾರಾಜ ರಾಜಶ್ರೀ-
ಹಿ : ಆ.
ಕ : ಧರ್ಮಾವತಿ ಪಟ್ಣದಲ್ಲಿ ಧರ್ಮಸೇಕ ರಾಜನ ಮಗ-ಗಂಗಾಸಾಗ್ರ ತಾಯಿ ಗರ್ಭದಲ್ಲಿ ಉದ್ಭವಿಸಿದ ಕುಮಾರ- ನೀಲಕುಮಾರ-
ಹಿ : ಹೌದು
ಕ : ರುದ್ರಾವತಿ ಪಟ್ಣದಲ್ಲಿ ರುದ್ರಸೇಕ ಮಾವ-ಮಹಾದೇವಿ ಅತ್ತಿ ನಿಮ್ಮ ಅಳಿಯ ನೀಲಕುಮಾರ, ನಾನು ಮದುಮಗ ಆಗಿ ಹನ್ನೆರಡು ಸಾವಿರ ಪ್ರಜೆಗಳ ತೊಗೊಂಡು ತಾಯಿ-ತಂದಿ ಕರ್ಕೊಂಡು, ಇನ್ನೂರು ಬಂಡಿ ಮದಿವಿ ಸಾಮಾನ ತೊಗೊಂಡು ಲಗ್ನಕ್ಕ ಹೊರಡಬೇಕಾದ್ರೆ, ಮೊಗಲಾಯಿ ದಂಡು-ಏಳುಕೋಟಿ ದಂಡು ನನ್ನ ಮ್ಯಾಲೆ ಯುದ್ಧಕ್ಕೆ ಬಂದು ನಿಂತರು!
ಹಿ : ಶಭಾಸ!
ಕ : ಕಾಗದ ಬರೀತಾನೆ ಇವನು-ಕವಿ ಮಾಡಿ; ಏಳುಕೋಟಿ ದಂಡು ನನ್ನ ಮ್ಯಾಲೆ ಯುದ್ಧಕ್ಕೆ ಬಂದು ಊರ ಮುಂದೆ ನಿಂತಾಗ ಹೊರಡೋ ಕಾಲಕ್ಕೆ, ನಾನು ಮದುವಿಗೆ ಬಂದ್ರೆ ಊರ್ನೆಲ್ಲ ಲೂಟಿಮಾಡಿ, ಸುಲಿಗೆ ಮಾಡಿಕೊಂಡು ಮೊಗಲಾಯಿದವರು ಒಯ್ತಾರೆ ಅಂಬೋ ಉದ್ದೇಶಕ್ಕೆ ನಿಮ್ಮ ಅಳಿಯ ಒಬ್ಬನೆ ನಿಂತ್ಕೊಂಡು ಯುದ್ಧಾ ಮಾಡ್ತಾ ಅದೀನಿ-ಧರ್ಮಾವತಿ ಪಟ್ಣದಲ್ಲಿ!
ಹಿ : ಓಹೋ ಬರಹ!
ಕ : ಲಗ್ನ ಬಿಟ್ಟು ಯುದ್ಧಕ್ಕೆ ನಿಂತರೆ ಮುಂದೆ ಗತ ಬೀಳತೈತಿ! ಮುಂದೆ ಆಗೋದಿಲ್ಲ ಅಂಬೋ ಉದ್ದೇಶಕ್ಕ ನಮ್ಮ ತಂದೆ, ತಾಯಿ, ಮಂತ್ರಿ, ನನ್ನ ರುಂಬಾಳ, ನನ್ನ ಕೈಯಾಗಿನ ಬಂಗಾರದ ನಿಂಬಿಹಣ್ಣು, ನನ್ನ ಉಂಗುರ, ನನ್ನ ಬಾಕು ಇವು ನಾಲ್ಕು ಕೊಟ್ಟು ಕಳಿಸ್ತೀನಿ ಮಂತ್ರಿ ಕೈಯಾಗ. ಈತನೇ ನಮ್ಮ ಅಳಿಯ ಅಂತ್ಹೇಳಿ ಆ ಕಂಜೂರ ಬಾಕಿಗೆ ಲಗ್ನ ಮಾಡಿ ನನ್ನ ಮಡದಿಗೆ ಕೊಟ್ಟುಕಳಿಸಿದ್ರೆ ಚಲೊ ಆಯ್ತು, ಅತ್ಲಾಗ ಲಗ್ನಾನೂ ಸಾಗಿತು ಇತ್ಲಾಗ ಯುದ್ಧಾನೂ ಸಾಗಿತು.
ಹಿ : ಹೌದು
ಕ : ಅಳಿಯನೇ ಬರ್ಲಿ ಅಳಿಯಾಗ ನೋಡೇ ಲಗ್ನ ಮಾಡಿಕೊಡ್ತೀವಿ ಅಂತ್ಹೇಳಿ-ಬಂದ ನಮ್ಮ ತಾಯಿ-ತಂದಿ ವಾಪಸು ಕಳಿಸಿದ್ರೆ, ಏಳುಕೋಟೆ ದಂಡಿನೊಳಗೆ ಆರುಕೊಂಟಿ ವೈರಿ ದಂಡಿಗೆ ಸಂಹಾರ ಮಾಡೀನಿ; ಇನ್ನೊಂದು ಕೋಟಿ ದಂಡು ಐತಿ, ಅದೊಂದು ಕೋಟಿ ಸಂಹಾರ ಮಾಡಿ ಇಲ್ಲಿಂದ ಸೀದಾ ನಿಮ್ಮೂರಿಗೆ ಬರ್ತೀನಿ. ಯುದ್ಧದಿಂದ ಮಾವನ ತಲಿ ಹೊಡಿತೀನಿ, ಅತ್ತಿ ತಲಿ ಗಿಲಾವ್ ಮಾಡಿ ಹೊಡೀತೀನಿ. ಮಾವ-ಅತ್ತಿ ಮನಿ ಸ್ವಚ್ಛ ಮಾಡಿ ಆ ಹುಡುಗಿ ಜಡಿ ಹಿಡ್ಕೊಂಡು ಎಳ್ಕೊಂಡು ಬಂದು ನನ್ನ ಊರಾಗ ನಾನು ಸ್ವಂತ ಲಗ್ನ ಆಗ್ತೀನಿ ಅಂತ್ಹೇಳಿ-
|| ಪದ ||
ಸುಳ್ಳ ಕಾಗದ ಬರದಾನೈ……..ಹರಯನ್ನ ಮಾದೇವ
ಕಾಗದಾ ಮಡಿಚಾನಯ್ಯ………ಹರಯನ್ನ ಮಾದೇವ
ಜೇಬಿನ್ಯಾಗ ಕಾಗದ ಇಟಗೊಂಡ……..ಹರಯನ್ನ ಮಾದೇವ
ಎದ್ದೇಳ್ರೋ ದಂಡೇ………ಹರಯನ್ನ ಮಾದೇವ
ಲಗ್ನಾಕ್ಕೆ ನಡೀರಯ್ಯಾ……..ಹರಯನ್ನ ಮಾದೇವ
ಸುಳ್ಳುಕಾಗದ ಬರದು ಜೇಬಿನಾಗ ಇಟ್ಕೊಂಡs…….ಊರ ಹತ್ರ ಬರ್ಲಿಕ್ಕೆ ಮಾರೊತ್ತು ಇತ್ತು. ವನಾಂತರದಾಗ ಎಲ್ಲಾ ಕುತ್ಕೊಂಡು ಬಿಟ್ರು. ಅರ್ಧ ಮೈಲು ಇತ್ತು-ಊರಿಗೂ ಆ ವನಂತರಕ್ಕೂ ಎದುರು ಭೇಟಿಗೆ ಬರ್ಲಿ ಹೆಣ್ಣೋರು.
ಹಿ : ಬರ್ಲಿ.
ಕ : ಮಜಲ್ ಮಾಡ್ರೋ ತಮ್ಮಾ
ಹಿ : ಗಲಾಟಿ ಮಾಡ್ರೋ ಬೀಗರಿಗೆ ಕೇಳ್ಲಿ
ಕ : ಹೆಣ್ಣೋರು ಕೇಳಿಬಿಟ್ರು ರುದ್ರಸೇಕ-ಮಹಾದೇವಿ ಮಡದಿ.
ಹಿ : ಆ
ಕ : (ರಾಗವಾಗಿ) ಯಾವಾಗ ಹೋಗಿ ಅಳಿಯಾಗ ನೋಡೇವ ನಾವು-ತಾಳ ಮೇಳ ಭಜಂತ್ರಿ ಮಾಡ್ಕೊಂತಾ ಹೆಣ್ಣೋರು, ಗೌಡರು, ಬಾಣಗಿತ್ತೇರು, ಜಗಜಟ್ಟಿ ನಾಕ ಜನರು, ದಂಡು, ಮಜಲು ಕಳಸ ಕನ್ನಡಿ ಸಹಿತ ಎದುರುಗೊಣ್ಣಾಕ ಬೀಗರಿಗೆ ಹೊರಟರು.
ಹಿ : ಹೌದು.
ಕ : ಬಂದ್ರೇನಪ್ಪಾ?
ಹಿ : ಬಂದ್ವಿ.
ಕ : ಎಲ್ಲಾರೂ ಕ್ಷೇಮ?
ಹಿ : ಓ ಕೆಮ್ಮು ನೆಗಡಿ ಜಾಸ್ತಿಯಾಗೇತಿ!
ಕ : ನಮ್ಮ ಕ್ಷೇಮಾಲಾಭಗಳು ಆಕಡಿಗಿರಲಿ ಮಂತ್ರೀ
ಹಿ : ಆ
ಕ : ನಮ್ಮ ಅಳಿಯ?
ಹಿ : ಅಳಿಯಾ?
ಕ : ಓ ನಿಮ್ಮ ಅಳಿಯ ಬಂದಿಲ್ರಿ, ಭಾಳ ಐತಿ ಕೌತುಕ ನಿಮ್ಮ ಅಳಿಯಂದು.
ಹಿ : ಹೇಳಿದ್ರೆ?
ಕ : ಬಾಯಿ ಮಾತಿಲೆ ಹೇಳಿದ್ರೆ ನಿಮಗೆ ತಿಳಿಯಾದಿಲ್ಲ ಕಾಗದ ಬರದು ಕಳಿಸ್ಯಾನ ನೋಡ್ರಿ ಅಂದ.
ಹಿ : ಆಹಾ ಕಾಗದ!
ಕ : ಆ ಕಾಗದ ಕೈಯಾಗ ಕೊಟ್ನಪ್ಪ!
ಹಿ : ಕಾಗದ ಮಾವ ರುದ್ರಸೇಕ ಅಗಸ್ಯಾಗ ನಿಂತ್ಕೊಂಡೇ ಓದುತಾನೆ-
ಕ : ಧರ್ಮಾವತಿ ಪಟ್ಣದಲ್ಲಿ ಧರ್ಮಸೇಕ ರಾಜನ ಮಗ-ಗಂಗಾಸಾಗ್ರ ದೇವಿ ಗರ್ಭದಲ್ಲಿ ಉದ್ಭವಿಸಿದ ನೀಲಕುಮಾರ,
ರುದ್ರಾವತಿ ಪಟ್ಣದಲ್ಲಿ ರುದ್ರಸೇಕ ಮಾವ-ಮಹಾದೇವಿ ಅತ್ತೆಯವರಿಗೆ ಬರೆದ ಪತ್ರ-
ಹಿ : ಆ
ಕ : ಮದುವಿ ಸಾಮಾನು ತಯಾರು ಮಾಡ್ಕೊಂಡು ನಾನು ಮದುಮಗ ಆಗಿ ಹೊರಡೋ ಕಾಲಕ್ಕೆ ಮೊಗಲಾಯಿ ದಂಡು ಏಳುಕೋಟೆ ದಂಡು ಬಂದು ನನ್ನ ಮ್ಯಾಲೆ ಯುದ್ಧಕ್ಕೆ ನಿಂತರು. ಲಗ್ನಕ್ಕೆ ಬಂದ್ರೆ ಊರು ಹಾಳಾಗತೈತಿ ಅಂಬೋ ಉದ್ದೇಶಕ್ಕೆನಾನು ಒಬ್ಬನೇ ನಿಮ್ಮ ಅಳಿಯ, ಏಳುಕೋಟೆ ಮೇಲೆ ಯುದ್ಧ ಮಾಡಾಕ ನಿಂತೇನಿ. ಇನ್ನು ಅತ್ಲಾಗ ಲಗ್ನ ಬಿಟ್ನೆ ಅಂದ್ರ ಗತಾಬೀಳತೈತಿ ಅಂಬೋ ಉದ್ದೇಶಕ ತಾಯಿ-ತಂದಿ ದಂಡು, ಮಾರ್ಬಲ ಮಂತ್ರಿ, ನನ್ನ ರುಂಬಾಳ, ನನ್ನ ಕೈಯಾಗಿನ ಬಂಗಾರದ ನಿಂಬಿಹಣ್ಣು, ನನ್ನ ಉಂಗುರ, ನನ್ನ ಕಂಜೂರ ಬಾಕು ಇವು ನನ್ನ ವಸ್ತು ಕೊಟ್ಟು ಕಳಿಸೀನಿ. ಈತನೇ ನಮ್ಮ ಅಳಿಯ ಅಂತ್ಹೇಳಿ ಲಗ್ನ ಮಾಡಿ ನನ್ನ ಮಡದೀನ ಕೊಟ್ಟು ಕಳಿಸೀದ್ರೆ ಚಲೋ ಆತು, ಅಳಿಯನೇ ಬಂದಾಗ ನೋಡಿ ಲಗ್ನ ಮಾಡಿ ಕೊಡ್ತೀನಿ ಅಂತ್ಹೇಳಿ ಬಂದವರಿಗೆಲ್ಲಾ ನಿಬ್ಬುಣಕ್ಕೆ ವಾಪಸು ಕಳಿಸಿದ್ರೆ, ಏಳುಕೋಟೆ ದಂಡಿನಲ್ಲಿ ಆರುಕೋಟಿ ಸಂಹಾರ ಆಗೇತಿ! ಇನ್ನು ಒಂದು ಕೋಟಿ ದಂಡು ಐತಿ, ಅದೊಂದು ಕೋಟಿ ಸಂಹಾರ ಮಾಡಿ ಸೀದಾ ನಿಮ್ಮ ಊರಿಗೆ ಬಂದು ಮಾನವ ತಲಿ ಹೋಡಿತೀನಿ, ಅತ್ತಿ ತಲಿ ಹೊಡಿತೀನಿ. ಮಾವನ ಮನಿ ಗಿಲಾವ್ ಮಾಡಿ, ಸ್ವಚ್ಛ ಮಾಡಿ ಆ ಹುಡುಗಿ ಜಡಿ ಹಿಡ್ಕೊಂಡು ಎಳ್ಕೊಂತಾ ನನ್ನ ಊರಾಗ ಬಂದು ನಾನು ಸ್ವಂತ ಲಗ್ನ ಮಾಡ್ಕೊಂತೀನಿ.
ಹಿ : ಕಾಗದಾ ಓದಿದಾ ಮಾವ.
ಕ : ಮಾವ ಕಾಗದ ಓದಬೇಕಾದ್ರೆ ಗದ್ಗದ್ ನಡುಗುತಾನೆ, ಅಯ್ಯೋ ಏನು ಮಂತ್ರಿ ಇದು!
ಹಿ : ಏನು ಏಳುಕೋಟಿ!
ಕ : ಒಂದು ಸಾವಿರ ಅಲ್ಲ, ಎಳ್ಡು ಸಾವಿರಲ್ಲ ಏಳುಕೋಟಿ ದಂಡಿನ ಮ್ಯಾಲೆ.
ಹಿ : ಅಬಾಬಾಬಾ.
ಕ : (ರಾಗವಾಗಿ) ಎಂಥ ಲಡಾಯಿ ಮಾಡ್ತಾ ಇದಾನೇ ತಾಯೀ….ಮಡದಿ ಮಹಾದೇವಿ ಈ ವ್ಯಾಳ್ಯಾದಲ್ಲಿ ಹ್ಯಂಗ ಮಾಡೋದು ಕಾಗದ ಹಿಂಗ ಐತೆಲ್ಲ ಎಂಥಾ ಲಡಾಯಿ ಮಾಡ್ತಿದ್ದಾನು ಅಳಿಯಾ….
ಹಿ : ಅಬಾಬಾ!
ಕ : ಅಲ್ಲಾ ಏಳುಕೋಟಿ ದಂಡಂತೆ!
ಹಿ : ಆ ಪಂಡಿತ ಮಹಾಶೂರ-
ಕ : ನಾವು ಹ್ಯಂಗ ಮಾಡ್ಬೇಕು ಈಗ!
ಹಿ : ಆ ಮಾಡ್ಬೇಕು ಹ್ಯಾಗೆ?
ಕ : ಲಗ್ನ ಮಾಡಿಕೊಡೋದು ಬಿಡಾದು. ಅಳಿಯ ಬಂದಾಗs ಲಗ್ನ ಮಾಡಿಕೊಡ್ತೀನಿ ಅಂದ್ರೆ ಅಲ್ಲಿಂದ ಬಂದು ನನ್ನ ತಲಿ ಹೊಡೀತಾನೆ!
ಹಿ : ಆಹಾ!
ಕ : ನಿನ್ನ ತಲೀನೂ ಹೊಡಿತಾನೆ;
ಹಿ : ಹೊಡಿತಾನೆ!
ಕ : ನಮ್ಮ ಮಗಳಿಗೆ ಎಳ್ಕೊಂಡ್ಹೋಗಿ ತನ್ನ ಊರಾಗ ಲಗ್ನ ಆಗ್ತಾನಂತೆ!
ಹಿ : ಹ್ಯಾಗೆ!
ಕ : (ರಾಗವಾಗಿ) ತಲಿ ಹೊಡಿಸ್ಕೊಣಾದಕಿಂತ ಜಲ್ದಿ ಲಗ್ನ ಮಾಡಿ ಕಳಿಸಿಬಿಡೋನ ಮಡದೀ….ಬರ್ಯಪ್ಪ ಊರಾಗ ಬರ್ರಿ. ಎಲ್ಲಾರೂ ಬರ್ರಿ ಏನು ಪರ್ವಿಲ್ಲ….
ಹಿ : ಅಭ್ಯಂತರವಿಲ್ಲ.
ಕ : ಬಿಡದಿಮನಿ ತಯಾರ ಮಾಡೀವಿ ಅಂದ.
ಹಿ : ಆಹಾ.
ಕ : ಮಂತ್ರಿ ಹಿಗ್ಗಿದ.
ಹಿ : ಚಮತ್ಕಾರಿ ಮಂತ್ರಿ!
ಕ : ಚಲೋ ಆಯ್ತು ಕೆಲಸ, ಈಗ ನಮ್ಮ ದಂಡಿನಾಗ ಗಾಂಜಿ ಹುಡುಗರು ಐದಾರೆ.
ಹಿ : ಆಹಾ.
ಕ : ಸ್ವಲ್ಪ ಸ್ವಲ್ಪ ಹೆಂಡಾ ಕುಡಿಯ ಮಂದೀನೊ ಐತೆ-ನಮ್ಮ ದಂಡಿನಾಗೆ! ಸಾರಾಯ ಕುಡಿಯ ಮಂದಿ ಐತಿ.
ಹಿ : ಬ್ರಾಂದಿ ಕುಡಿಯಾರೂ ಐದಾರೆ!
ಕ : ಲಗ್ನ ಆಗೋ ಟಿಮಿನಾಗ ಹಂದ್ರದಾಗ ಬಂದು ನಿಶೆ ಆಗಿ ಏನ್ರೀ ಇಲ್ಲಿ ಆದಾನೆ ನಿಮ್ಮ ಅಳಿಯಾ! ರಂಭಾವತಿ ಸೂಳಿ ಮನಿಯಾಗ ಅದಾನ ಅಂತ ಯಾವನನ ಹೇಳಿ ಬಿಟ್ರೆ ಕಾರ್ಯನ ಬಂದಾಗತೈತಿ!
ಹಿ : ಹೌದು.
ಕ : (ರಾಗವಾಗಿ) ಲೇ ತಮ್ಮಾ, ನಿಶಾ ಪಾನಿ ಮಾಡ್ಯಾರು; ಊರಾಗ ಒಬ್ಬಾನು ಬರಬ್ಯಾಡ್ರೋ ಊರ ಹೊರ್ಗ ಇರ್ರೋ ವನಂತರದಾಗೈ….
ಶೆಟ್ರು, ಸಾವ್ಕಾರು, ಜೊಗೇರು, ಬೋಗಾರು, ಸಾಳೇರು, ಮಾಮ್ಲೆದಾರು, ಸುಭೇದಾರು ಸರಿ+ಸುಮಾರು ಮಂದಿ ಊರಾಗ ಬಂದ್ರು!
ಹಿ : ಆ.
ಕ : ನಿಶೆ ಮಾಡೋರೆಲ್ಲ ಊರ ಹೊರಗ ಇರ್ರಿ, ಲಗ್ನಾಗೊವರಿಗೂ ಇಲ್ಲೆ ಇರ್ರಿ-ಅಪ್ಪಣೆ ಹಾಕಿಬಿಟ್ನಪ್ಪ! ಅರ್ಧ ಊರಾಗ ಬಂದ್ರು ಅರ್ಧ ಊರ ಹೊರಗ ಆದ್ರು.
ಹಿ : ಹೌದು!
ಕ : ತೆಂಗಿನ ವನಂತರ, ವೇಗದ ವನಂತರ, ಮಾವಿನ ವನಂತರ, ಉಗೇದ ಮರ ಕಟ್ಟಿ, ಹಾದಿಗೆ ಹಂದ್ರ ಹಾಕಿ, ಬೀದಿಗೆ ಚಳ್ಳೆ ಕೊಟ್ಟು, ಹಳದಿ ತೋರಣ ಕಟ್ಟಿ, ಸಾಸ್ವಿಕಟ್ಟಿ ಕಟ್ಟಿ ಸೇರು ತುಂಬಿದ್ರು. ಹಂದ್ರದಾಗ ಬಂದು ಕಂಜೂರದ ಬಾಕು, ದಸ್ತುರುಮಾಲು ನಿಂಬಿಹಣ್ಣು, ಸಿಕೇದ ಉಂಗುರ ತಂದು ಸಾಸ್ವಿ ಕಟ್ಟಿ ಮ್ಯಾಲಿಟ್ಟ ಮಂತ್ರಿ-ಮದುಮಗನ ಮಾಡಿ.
ಹಿ : ಆಹಾ ಎಲ್ಲಾ ವಸ್ತು.
ಕ : ಅಮ್ಮಾ ಶಿವಲೋಚನಾ.
ಹಿ : ಆಹಾ.
ಕ : ಏನು ಮಾಡ್ತಿ ಮಗಳೇ? ಈ ಕಾಗದ ನಿನ್ನ ಗಂಡ ಬರ್ದು ಕಳಿಸ್ಯಾನೆ ನೋಡಮ್ಮಾ.
ಹಿ : ಆಹಾ.
ಕ : ಯವ್ವಾ ಏಳುಕೋಟಿ ದಂಡಿನ ಮ್ಯಾಲೆ ಯುದ್ಧ ಮಾಡಾಕ ನಿಂತಾನಂತ!
ಹಿ : ಮಹಾ ಪಂಡಿತ!
ಕ : ಈಗ ಆರುಕೋಟಿ ದಂಡಿಗೆ ಹೊಡದಾನಂತೆ, ಇನ್ನೊಂದು ಕೋಟಿ ದಂಡು ಐತ್ಯಂತೆ! ಜಲ್ದಿ ಲಗ್ನ ಮಾಡಿಕೊಳ್ಳಮ್ಮ ಊರಿಗೆ ಹೋಗಿ ದಂಡೆಲ್ಲಾ ನೋಡುವಂತೆ….
|| ಪದ ||
ಯವ್ವಾ ಯವ್ವಾ….ಹರಯನ್ನ ಮಾದೇವ
ಲಡಾಯಿ ನೋಡ್ವಂತೆವ್ವ….ಹರಯನ್ನ ಮಾದೇವ
ಆಹಾ ಒಳ್ಳೇದು ನಮ್ಮ ತಂದೆ….ಹರಯನ್ನ ಮಾದೇವ
ತಾಯಿ ಹಿರಿಹಿರಿ ಹಿಗಾಳಯ್ಯ್ಅ….ಹರಯನ್ನ ಮಾದೇವ
ರಾಜನ ಲಡಾಯಿ ಹ್ಯಂಗಿದ್ದೀತಯ್ಯಾ….ಹರಯನ್ನ ಮಾದೇವ
ಮುವ್ವತ್ತುಮೂರು ಗೌಡೇರ್ಯಾ….ಹರಯನ್ನ ಮಾದೇವ
ಜರತಾರಿ ಸೀರಿ ಉಟ್ಟಾಳ ತಾಯಿ, ತಾಯೀ….ಶಿವಯನ್ನ ಮಾದೇವ
ಜರತಾರಿ ಕುಬ್ಸ ತೊಟ್ಟಾಳವ್ವಾ ತಾಯೀ….ಶಿವಯನ್ನ ಮಾದೇವ
ಹಣಿಮ್ಯಾಲೆ ಮುತ್ತಿನ ದಂಡಿ ಬಿಗದಾರವ್ವ….ಶಿವಯನ್ನ ಮಾದೇವ
ತಲಿಮ್ಯಾಲೆ ಮುತ್ತಿನ ದಂಡಿ….ಶಿವಯನ್ನ ಮಾದೇವ
ಕೈಗೆ ಮುತ್ತಿನ ಕಂಕಣ ಕಟ್ಯಾರ….ಶಿವಯನ್ನ ಮಾದೇವ
ಕೊಳ್ಳಾಗ ಅರವತ್ತಾರು ವಸ್ತಾ….ಶಿವಯನ್ನ ಮಾದೇವ
ತಾಯಿಗೆ ಮುತ್ತಿನ ಉಡಿ ತುಂಬ್ಯಾರ….ಓ ನಮಾಶಿವಾಯ
ಮದುಮಗಳ ಮಾಡ್ಯಾರಲ್ಲ….ಹರಯನ್ನ ಮಾದೇವ
ಬಂದು ಹಂದ್ರದಾಗ ನಿಂತಾಳ….ಹರಯನ್ನ ಮಾದೇವ
ಮಾವ ಧರ್ಮಸೇಕ ಬಂದಾನ….ಹರಯನ್ನ ಮಾದೇವ
ಹ್ಯಾಂಗ ಅದಿಯೇ ನನ್ನ ಸೊಸಿಯೇ….ಹರಯನ್ನ ಮಾದೇವ
ನನ್ನ ನೀರಡಿಕೆ ಹೋಯ್ತವ್ವಾ ತಾಯೀ….ಹರಯನ್ನ ಮಾದೇವ
ನಮ್ಮ ಮಗನಿಗೆ ಒಪ್ಪಂಥ ಸೊಸಿಯೇ….ಹರಯನ್ನ ಮಾದೇವ
ಒಂದು ಹಗಲು ಯಾವುದೇ ರಾತ್ರಿ ಯಾವುದೇ….ಶಿವಯನ್ನ ಮಾದೇವ
ಅದಾ ಲಗ್ನ ಸಾಗಿಸ್ಯಾರ….ಶಿವಯನ್ನ ಮಾದೇವ
ಮೂರು ದಿವಸ ಲಗ್ನ ಆಗ್ಯಾದವ್ವ….ಶಿವಹರ ಮಾದೇವ
ಧಾರಿ ಎರದು ತಾಳಿ ಕಟ್ಯಾರವ್ವ….ಶಿವಹರ ಮಾದೇವ
ಕ : ವೈಭವದ ಲಗ್ನ ಹಗಲು ಯಾವುದೋ ತಾರಿ ಯಾವುದೋ ಎಚ್ಚರಿಲ್ಲ!
ಹಿ : ಕಾರ್ಯಗಳು!
ಕ : ಚಂದ್ರಹಾರ, ಕಂಠೀಸರ, ಗೋಧಿಸರ, ಬಹುಮಾಲೆ. ಕೈಗೆ ಮುತ್ತಿನ ಕಂಕಣ, ತಲಿಮ್ಯಾಲೆ ಮುತ್ತಿನ ದಂಡಿ, ಮುತ್ತಿನ ದಂಡಿಗೆ ಎರಡು ತೊಂಡಲುಗಳು ಕಟ್ಯಾರ ಮುತ್ತಿನ ತೊಂಡಲವು ಎರಡು ಕಣ್ಣುಗಳು ಮ್ಯಾಲೆ ಜಣಿಕ್ಯಾಡುತಾವ- ಮುತ್ತಿನ ಪೆಂಡಿ.
ಹಿ : ದಂಡಿ.
ಕ : ವೈಭವದ ಲಗ್ನ ಧಾರಿ ಎರದು, ತಾಳಿ ಕಟ್ಟಿ ನಾಲ್ಕು ದಿವಸಾದಾಗ-ಮಂತ್ರಿ ನಾನೀಗ ಗೆದ್ದೆ ಅಂದ ಅವನು!
ಹಿ : ಯಾರನ್ನ ಹೇಳ್ವಲ್ರಾಕ!
ಕ : ಏನ್ರೀ ಬೀಗರೇ?
ಹಿ : ಆ.
ಕ : ನೀವು ಎರಡೂಟಿ, ನಾವು ಎರಡೂಟ-ನಾಲ್ಕು ಊಟ ಬಡ ಮುಂದಿಗೆಲ್ಲ ಹಾಕಿ ಬಿಡಾನು.
ಹಿ : ಬಡಜನ ಊಟ ಮಾಡ್ಲಿ.
ಕ : ಮಾವ ರುದ್ರಸೇಕ ಅಂತಾನ-ಅಪ್ಪಾ ನೀವು ಎರಡೂಟ ನಾವು ಎರಡೂಟ ಅಂದ್ರೆ ಇನ್ನು ನಾಲ್ಕು ದಿವಸ ಆಯ್ತು.
ಹಿ : ಆ!
ಕ : (ರಾಗವಾಗಿ) ಅಳಿಯ ಲಡಾಯಿ ಮುಗಿಸ್ಕೊಂಡು ಬಂದು ನನ್ನ ತಲಿ ತಗದಾನು….
ಊರು ಬಿಡ್ರೋ ನಾಳೇ….ನನ್ನ ತಲಿ ತಗದಾನು ನಿಮ್ಮೂರಾಗ ನೀವು ಊಟ ಹಾಕ್ರಿ ನಮ್ಮೂರಾಗ ನಾವು ಊಟ ಹಾಕ್ತೀವಿ.
ಹಿ : ಮೊದಲು ಊರು ಬಿಡ್ರಿ.
ಕ : ಶಿವಲೋಚನಮ್ಮಗೆ ಮುವ್ವತ್ತು ಮೂರು ಮಂದಿ ಚೌರೀ ಬೀಸೋ ಗೌಡೇರು.
ಹಿ : ಹೌದು.
ಕ : ನಮ್ಮ ತಾಯಿ ಜತಿಗೆ ನಾವೂ ಹೋಗ್ತೀವಿ ಅಂತ ಮುವ್ವತ್ತುಮೂರು ಮಂದಿ ಹೆಣ್ಮಕ್ಕಳೂ ಬೆಂಬಲ ನಡುದ್ರು.
ಹಿ : ರಾಜನ ಲಡಾಯಿ ನೋಡಾನು ಅಂತ ಎಲ್ಲಾರು ಹಿಗ್ಗಿದ್ರು.
ಕ : ಶಿವಲೋಚನ ಪಲ್ಲಕ್ಯಾಗ ಕುಂತಾಗ ಜಗನ್ಜ್ಯೋತಿ ಸೂರ್ಯನ ಬೆಳಕು! ಆರು ಸಾವಿರ ದಂಡು ಮುಂದೆ ಆರುಸಾವಿರ ದಂಡು ಹಿಂದೆ; ಅತ್ತಿ ಮಾವ ಬಲಗಡೆ ಪಲ್ಲಕ್ಯಾಗ, ಎಡಗಡಿಗೆ ಮಂತ್ರಿ ವೈಭವದಿಂದ ನಡುದಾರ.
ಹಿ : ಆಹಾ!
ಕ : ಊರ ಸಮೀಪ, ಧರ್ಮಾವತಿ ಪಟ್ಣದ ಸಮೀಪಕ್ಕೆ ಬರ್ತಾ ಅದಾರ.
ಹಿ : ಸಮೀಪದಾಗs ಊರು ಬೆಳ್ಳಗ ಕಾಣ್ತಾ ಐತಿ!
ಕ : ಇನ್ನೊಂದು ಮೈಲು ಐತಿ ಊರು; ಆ ತಾಯಿ ಪಲ್ಲಕ್ಯಾಗ ಕುಂತ್ಗೊಂಡು ಹುಬ್ಬಿನ ಮ್ಯಾಲೆ ಲೈ ಇಟ್ಟು ನೋಡ್ತಾಳೆ- ಲಂಕಾಪಟ್ಣ ಕಂಡ್ಹಾಂಗ ಕಾಣ್ತೈತಿ-ಧರ್ಮಾವತಿ ಪಟ್ಣ!
ಹಿ : ಏನು ಬೆಳಕು!
ಕ : ಅಣ್ಣಾ ಮಂತ್ರೀ
ಹಿ : ಅಮ್ಮಾ?
ಕ : ಅದೇನು ಊರು?
ಹಿ : ಹಾ ಅದೇ ನೋಡಮ್ಮ ನಿಮ್ಮೂರು ಧರ್ಮಾವತಿ ಪಟ್ಣ; ನಿನ್ನ ಗಂಡನೂರು!
ಕ : ಆಹಾ ಊರು ಭಾಳ ಚಂದ ಕಾಣಸ್ತೈತಿ!
ಹಿ : ಹೌದು.
ಕ : (ರಾಗವಾಗಿ) ನಮ್ಮ ರಾಜನ ಲಡಾಯಿ ಕಾಣ್ವಲ್ಲದಲ್ಲೋ…….
ರಣಾಗ್ರ ಕಾಣ್ವಲ್ಲದಲ್ಲ ಮಂತ್ರಿ………
ಹಿ : ಯವ್ವಾ.
ಕ : (ರಾಗವಾಗಿ) ರಂಭಾವತಿ ಮ್ಯಾಲೆ ಲಡಾಯಿ ಮಾಡ್ತಾನವ್ವ, ರಂಭಾವತಿ ಲೇಶಿ ಮನಿಯಾಗ ನಿನ್ನ ಗಂಡ ಯುದ್ಧ ಮಾಡ್ತಾನಮ್ಮಾ-ಅಂದ ಮಂತ್ರಿ.
ಹಿ : ಲಡಾಯಿ ಸುಳ್ಳಮ್ಮಾ.
ಕ : (ರಾಗವಾಗಿ) ನಿನಗೆ ಒಂದು ಸುಳ್ಳು ಕಾಗದ ಬರೆದು
ದಯಾ ಮಾಡ್ಬೇಕು ದಯಾ ಮಾಡ್ಬೇಕು
ಹಿ : (ರಾಗವಾಗಿ) ಕ್ಷಮಾ ಮಾಡ್ಬೇಕು
ಕ : ಲಡಾಯಿ ಇಲ್ಲ. ರಣಾಗ್ರ ಇಲ್ಲ, ಯುದ್ಧ ಇಲ್ಲ ಯಾವ್ಯಾವುದೂ ಇಲ್ಲ. ನಿನ್ನ ಗಂಡ ಹೋಗಿ ಸೂಳಿ ಮನಿಯಾಗ ಸೇರ್ಯಾನ-ತಾಯಿ-ತಂದಿ ಬಿಟ್ಟು!
ಹಿ : ಆ
ಕ : ನಿನಗೆ ಸುಳ್ಳು ಕಾಗದ ಬರದು ಲಗ್ನ ಮಾಡೀವಿ, ಇದು ಸತ್ಯವಾದ ಮಾತು. ನಿನ್ನ ಗಂಡ ಲೇಶಿ ಮನಿಯಾಗ ಸೇರಿದ ಸಲುವಾಗಿ ನಾವೆಷ್ಟು ಪರಪರಿಯಿಂದ ನಿಮ್ಮ ಫೋಟೊ ಒಯ್ದು ತೋರಿಸಿದ್ವಿ-ಬರ್ಲಿಲ್ಲ!
ಹಿ : ಆ
ಕ : ತಗದ ಹೆಣ್ಣು ಬಿಡಬಾರ್ದು ಅಂಬೋ ಉದ್ದೇಶಕ್ಕ ಸುಳ್ಳು ಕಾಗದ ಬರದು ನಿಮ್ಮ ತಾಯಿ-ತಂದಿಗೆ ತೋರ್ಸಿ ನಾವು ಮಹಾರಾಜನ ಕತ್ತಿರುಮಾಲಕ ಲಗ್ನ ಮಾಡ್ಕೊಂಡು ಬಂದೀವಮ್ಮ-ಮಂತ್ರಿ ಕೈ ಜೋಡಿಸಿ ನಿಂತ.
ಹಿ : ತಲಿ ಬಗ್ಗಿಸಿಕೊಂಡು ನಿಂತ!
ಕ : ಕತ್ತಲಗವುದು ಕಾರಂಧಕಾರ ಬಿದ್ದು, ಮುಗಲು ಹರದು ಬಿದ್ದಾಂಗಾತು!
ಶಿವಲೋಚನಮ್ಮ ಪಲ್ಲಕ್ಕ್ಯಾಗ ಕುಂತಂಥ ಪತಿವ್ರತಾ ಶಿರೋಮಣಿ ಹಾರಿ ಪಲ್ಲಕ್ಕಿ ಬಿಟ್ಟು ಹಣಿ ಹಣಿ ಜಜ್ಜಿಕೊಂತಾಳ.
ಹಿ : ಮೋಸವಾಯ್ತು; ಮೋಸವಾಯ್ತು!
ಕ : (ರಾಗವಾಗಿ) ಅವ್ವಾ ಮೋಸದ ಲಗ್ನ ಮೋಸದ ಕಾಗದ! ಮಾವ ಧರ್ಮಸೇಕ ರಾಜಾ ಅತ್ತಿ ಗಂಗಾಸಾಗ್ರ ದೇವೀ!
ಹಿ : ಆ…….
ಕ : (ರಾಗವಾಗಿ) ಕ್ಷತಿ ವಂಶದಲ್ಲಿ ಇಂಥ ಮೋಸ ಮಾಡ್ಬೇಕಾ, ಮಾವ ಧರ್ಮಸೇಕ ರಾಜಾ ನಾನೇನು ಮೋಸ ಮಾಡಿದ್ದೆ ನಿಮಗೆ? ನಿಜವಾದ ಮಾತ್ನೆ ಹೇಳಬೇಕಿತ್ರೀ..
ಹಿ : ಮೋಸ!
ಕ : (ರಾಗವಾಗಿ) ಸುಳ್ಳು ಕಾಗದ ಬರದು ನನಗೆ ಮಾಂಗಲ್ಯ ಮಾಡಿ ಬಂದ್ರ್ಯಾ……….ತಾಯಿ-ತಂದಿ ದೂರ ಮಾಡಿದ್ರ್ಯಾ……..ತವರು ಮನಿ ಎರವಾಯಿತೊ…….ಅಗಲಿದೆಯಾ ತಂದೆ ರುದ್ರಸೇಕ…….ತಾಯಿ ಮಹಾದೇವೀ………
ಹಿ : ಅಮ್ಮಾ
ಕ : ನಿಮ್ಮ ಮಗಳ್ನ ಸಾಕಿ ಸಲುಹಿ ಜೋಪಾನ ಮಾಡಿ, ಪರದೇಶಿ ಮಾಡಿ ದೂಡಿ ದ್ಹಂಗಾತು. ಲೇಶಿ ಮನಿಯಾಗ ಇರುವಂಥ ಪತಿ ಮುಖ ಎಂದಿಗೆ ನೋಡ್ಲಿ!
ಹಿ : ಕ್ಷಮಾ ಮಾಡು ತಾಯೀ
ಕ : ಅಮ್ಮಾ
ಹಿ : ಏಳು ಏಳಮ್ಮಾ
ಕ : ಇನ್ನು ನನಿಗ್ಯಾ ಗಂಡನ ಮನಿ ಉಳುದುದ್ದದೊಂದೇ ಗಂಡನ ಮನಿ.
|| ಪದ ||
ಅಳಬ್ಯಾಡವ್ವ ತಂಗಿ ಅಳಬ್ಯಾಡೇ
ನಿನ್ನ ಕಳುಹ ಬಂದವರೆಲ್ಲಾ ಉಳುವಿಕೊಂಬುವರೇನು
ಅಳಬ್ಯಾಡವ್ವ ತಂಗಿ ಅಳಬ್ಯಾಡೇ || ಪ ||
ಕಡಿಕೀಲೆ ಉಡಿಅಕ್ಕಿ ತುಂಬಿದರಮ್ಮಾ
ದುಡುಕಿಲೆ ಮುಂದಕೆ ದೂಡಿದರಮ್ಮಾ
ಮಿಡಿಕ್ಯಾಡಿ ಮದ್ವಿಆದಿ ಮೋಜಕಾಣಮ್ಮಾ
ಉಡಿಕ್ಯಾಡಿ ಮಾಯದ ಮರ ಏರಿದೆ ತಂಗಿ || ೧ ||
ಆಹಾ ರಂಡೇರ ಬಳಗವು ಬೆನ್ನತ್ತಿ ಬರುವಾಗ
ಮಿಂಡೇರ ಬಳಗವು ಬೆನ್ನತ್ತಿ ಬರುವಾಗ
ರಂಡೇರವರ ನೋಡಿ ನಗುತಲಿ ನಿಂತು
ಕಂಡವರ ಕಾಲ್ಬಿದ್ದು ಕೈ ಮುಗಿದು ನಿಂತರೆ
ಗಂಡನ ಮನೆಯು ಬಿಡದಮ್ಮ ತಂಗೀ || ೨ ||
ಅಳಬ್ಯಾಡವ್ವ ತಂಗಿ ಅಳಬ್ಯಾಡೇ
ನಿನ್ನ ಕಳುವ ಬಂದವರೆಲ್ಲ ಉಳುವಿಕೊಂಬುವರೇನು
ರಂಗೀಲೆ ಉಟ್ಟೆಮ್ಮ ರೇಶಿಮೆ ಸೀರಿ
ಅಂಗು ನೂಲಿನ ಸೀರಿ ಮರ್ತೆಮ್ಮ ನಾರಿ
ಮಂಗಳ ಮೂರುತಿ ಶಿಶುನಾಳ ಲಿಂಗಕ್ಕೆ
ಹೊರತಾದೆ ನೋಡವ್ವ ತಂಗೀ || ೩ ||
ಅಳಬ್ಯಾಡವ್ವ ತಂಗಿ ಅಳಬ್ಯಾಡೇ
ನಿನ್ನ ಕಳುವ ಬಂದವರೆಲ್ಲ ಉಳುವಿಕೊಂಬುವರೇನು
ಅಳಬ್ಯಾಡವ್ವ ತಂಗಿ ಅಳಬ್ಯಾಡೇ.
Leave A Comment