ಕ : ಸತ್ಯಶಿವಲೋಚನ ಅಂತ ಹೆಸರಿಟ್ಟಾರೆ. ಶಿವಲೋಚನ-

ಹಿ : ಆಹಾ ಚಂದಾನ ಚಲುವಿ!

ಕ : ಮಹಾಪತಿವ್ರತಾ ಶಿರೋಮಣಿ, ದೇವಲೋಕದ ದೇವಕನ್ನೆಯೋ, ತಿಲೋತ್ತಮೆಯೋ, ಊರ್ವಶಿಯೋ, ರಂಭೆಯೋ, ರತಿಯೋ, ಸರಸ್ವತಿಯೋ, ಪಾದದಲ್ಲಿ ಪದ್ಮರೇಖೆ, ಕೈಯಲ್ಲಿ ಧನರೇಖೆ, ಚಕ್ರ, ಮಸ್ತಕದಲ್ಲಿ ಮಾಣಿಕ್ಯರೇಖೆ, ಮುಖ ನೋಡಿದ್ರೆ-ಮೂರ್ಛೆಗವಿಬೇಕು ಸೂರ್ಯ ಚಂದ್ರಾಮಗಳ ಪ್ರಕಾಶ!

ಹಿ : ಪ್ರಕಾಶ!

ಕ : ಋತುಮತಿಯಾಗಿ ಆರು ತಿಂಗಳು ಆಗೇತಿ-ಆಯಮ್ಮಗ. ಎಂಥೆಂಥಾ ಪಂಡಿತರು ಬಂದ್ರೂ ಆ ರುದ್ರಸೇಕ ಮಗಳಿಗೆ ತಕ್ಕ ವರ ಅಲ್ಲ ಅಂತ ಒಬ್ರಿಗೂ ಕೊಟ್ಟಿಲ್ಲ!

ಹಿ : ಕೊಟ್ಟಿಲ್ಲ!

ಕ : ಆವತ್ತು ಮಂತ್ರಿ ಆ ಊರಿಗೆ ಬಂದ್ನಪಾ. ಆss……ಆss….ಪಗಡೂರು ಸಾಲಿನ ಬಾಜಾರದಲ್ಲಿ ಮಹಾರಾಜ; ಮಹಾರಾಜ ಪಂಡಿತಗೆ ನಮಸ್ತೇ.

ಹಿ : ಶರಣು ಶರಣಾರ್ಥಿ ಯಾರಪ್ಪ ನೀನು?

ಕ : ನಾವು ಮಂತ್ರಿ ಮಹಾರಾಜ್.

ಹಿ : ಓಹೋ!

ಕ : ಮಂತ್ರೀ ನಿಮ್ಮದು ಊರು ಯಾವುದು?

ಹಿ : ಧರ್ಮಾವತಿ ಪಟ್ಣದಲ್ಲಿ ಧರ್ಮಸೇಕ ರಾಜನ ಮಂತ್ರಿಯವರು ಬಂದೀವಿರಿ.

ಕ : ನಮ್ಮ ಸುಂದರವಾದ ಮಂದಿರಕ್ಕೆ ಬಂದ ತಾತ್ಪರ್ಯವೇನು?

ಹಿ : ಆಹಾ.

ಕ : ಕನ್ಯಾದಾನ ಮಹಾರಾಜ-ಮಗನ ಫೋಟೊ ತಂದೀನಿ ಮಗನಿಗೆ ಫೋಟೋ ನೋಡಿ ನೀವು ಕನ್ಯ ಕೊಡ್ಬೇಕು.

ಹಿ : ಫೋಟೋ ತಂದೀವಿ, ನೀಲಕುಮಾರ-ವರ.

ಕ : ವರನೋಡಿ ಕನ್ಯೆ ಕೊಡ್ಬೇಕು, ಕುದರಿ ನೋಡಿ ಬೆಲೆ ಮಾಡ್ಬೇಕು, ಆಳು ನೋಡಿ ಅನ್ನ ಇಡಬೇಕು ಅಂತ ಜಗತ್ತಿನಲ್ಲಿ ಸೃತಿ ಸಾರ್ತೈತಿ.

ಹಿ : ಹೌದು.

ಕ : ಯಾವಾಗ ವರ ನೋಡ್ತೀನಿ ಆವಾಗ ನನ್ನ ಮಗಳ ಕೊಡ್ತೀನಿ ಅಂದ.

ಹಿ : ತೊಗೊಳ್ರಿ ಇದೇ ವರ ಅಂದು ಫೋಟೊ ಕೈಯಾಗ ಕೊಟ್ಟುಬಿಟ್ಟ.

ಕ : ರುದ್ರಸೇಕ ರಾಜಾಧಿರಾಜ ನಮ್ಮ ಮಗಳಿಗೆ ಶಿವಲೋಚನೆಗೆ ತಕ್ಕಂಥ ವರ ಇದ್ದರೆ ಮಾತು ಕೊಡಾನು ಅಂತ್ಹೇಳಿ ಸಭಾದಾಗ ಕುಂತ್ಗೊಂಡು ಫೋಟೊ ಮಡಚಿದ್ದು ತಗದ. ಫಕ್ಕನ ನೀಲಕುಮಾರನ ಫೋಟೊ ನೋಡಿದ-

 ಭಲೇಭಲೇ ನನ್ನ ಅಳಿಯಾ….ಹರಯನ್ನ ಮಾದೇವ
ನಿನಗೆ ಒಪ್ಪಿದೆ….ಹರಯನ್ನ ಮಾದೇವ
ಇರಬೇಕೊ ಇಂಥ ಅಳಿಯ….ಹರಯನ್ನ ಮಾದೇವ
ನನ್ನ ಮಗಳಿಗೆ ತಕ್ಕ ಜೋಡೇ….ಹರಯನ್ನ ಮಾದೇವ
ಮಗಳಿಗೆ ತಕ್ಕಂಥಾ ವರಾ….ಹರಯನ್ನ ಮಾದೇವ
ಕೊಟ್ರೆ ಇದ ಮಗನಿಗೆ ಕೊಡಬೇಕು….ಹರಯನ್ನ ಮಾದೇವ

ಕ : ಸಭಾದಾಗ ಫೋಟೊ ತೋರ್ಸಿದ-ಮಡದಿ ಮಹಾದೇವೀ-

ಹಿ : ಏನ್ರಿ ಮಹಾರಾಜ್.

ಕ : ನೋಡು ವರಾ!

ಹಿ : ಚಲೋ ಅಳಿಯ, ಪಂಡಿತ!

ಕ : ಕಣ್ಣು ಕವಳಿಹಣ್ಣು, ಮೂಗು ಸಂಪಿಗಿ ತೆನಿ, ಹಲ್ಲು ದಾಳಿಂಬ್ರೆಹಣ್ಣು, ತುಟಿ ನಾಗರ ಹೆಡಿ, ಹುಬ್ಬು ಕಾಮನ ಬಿಲ್ಲು!

ಹಿ : ಚಂದಾನ ಚಲುವ!

ಕ : ಚಲೋ ಅಳಿಯ ಬಂದಾನ ಮಗಳಿಗೆ ತಕ್ಕ ವರ! ಕೊಟ್ಟೆ ಮಗಳಿಗೆ ಅಂದ; ಮಾತು ಕೊಟ್ಟ!

ಹಿ : ಮಾತು ಕೊಟ್ರೆ ಹೋತು, ಮುತ್ತು ಒಡೆದರೆ ಹೋತು. ವೀಳ್ಯಾ ಹಂಚಿದರು ಕ್ಷತ್ರಿಯರು.

ಕ : ಹೆಣ್ಣು ನಿಶ್ಚಯ ಆತು.

ಹಿ : ಏನ್ರಿ ವೀಳ್ಯಾ ಹಂಚೀವಿ.

ಕ : ನಾನು ಸ್ವಲ್ಪ ಕನ್ಯಾ ನೋಡ್ತೀನಿ ಅಂದ ಅವನು-ಗಂಡಿನ ಮಂತ್ರಿ.

ಹಿ : ಹೌದು.

ಕ : ತಾಯಿ ನಾವು ಕನ್ಯಾ ನೋಡ್ಬೇಕು.

ಹಿ : ನಡಿಯಪಾ.

ಕ : ಅರಮನಿಗೆ ಬಜಂತ್ರಿಯಿಂದ ಬಮ್ದ್ರು; ಶಿವಲೋಚನಮ್ಮ ಮಂಚದ ಮ್ಯಾಲೆ ಕುಂತಾಳೆ; ಮುವ್ವತ್ತುಮೂರು ಮಂದಿ ಗೌಡೇರು ಆಯಮ್ಮಗ ಬಂಗಾರದ ಚೌರ ಬೀಸ್ತಾರೆ.

ಹಿ : ಆಹಾ.

ಕ : ಸೂರ್ಯದೇವರ ಬೆಳಕು-ಆಯಮ್ಮ! ಋತುವಾಗಿ ಒಂದು ಚರ್ಷಾಗೇತಿ! -ಇದೇ ನನ್ನ ಮಗಳು ಶಿವಲೋಚನಮ್ಮ.

ಹಿ : ಬಾ ಮಗಳೇ.

ಕ : ಹೊರಾಗ ಬಂದು ಬಾಗಲದಾಗ ನಿಂದ್ರಬೇಕಾದ್ರೆ ಮಂತ್ರಿ ನೋಡಿಬಿಟ್ಟ, ಬಕ್ಕನೆ ಕಣ್ಣಿಗೆ ರವಿ ಬಡದ್ಹಂಗಾತು!

ಹಿ : ಪ್ರಕಾಶ್!

ಕ : ಆಹಾ ತಾಯೀ, ತಾಯೀ ಶಿವಲೋಚನಮ್ಮಾ-

ಹಿ : ಮಹಾಪತಿವ್ರತಾ!

ಕ : ಶಿವಲೋಚನಾ ಬುದ್ಧಿ ಶಿವನ ಬುದ್ಧೀ ಒಂದೇ-ಅಂದ ಮಂತ್ರೀ; ಅವನು ಮಹಾ ಜಾಣ.

ಹಿ : ಹಾ.

ಕ : ಅಂಥಾ ರೂಪಿಷ್ಟಳು ತಾಯಿ!

ಹಿ : ನಮ್ಮೂರಿಗೆ ಒಪ್ಪಂಥಯಮ್ಮ!

ಕ : ನಮ್ಮ ರಾಜ ನೀಲಕುಮಾರಗೆ ತಕ್ಕಂಥ ಮಡದಿ! ಈ ಯಮ್ಮನ ಮುಖ ನೋಡಿದ್ರೆ ನನ್ನ ನೀರ‍ಡಿಕೇನೆ ಹೋಯ್ತು!

ಹಿ : ಆಹಾ!

ಕ : ಮಂತ್ರಿ ಅಂತಾನ-ಈ ಯಮ್ಮನ ಪಾದದ ಮ್ಯಾಗಿನ ಕಳ, ರೂಪ, ಲಾವಣ್ಯ ಆಕಿ ಮುಖದ ಮ್ಯಾಲಿಲ್ಲ; ಯಾವಾಗ ಹೋಗಿ ಲಗ್ನ ಮಾಡಿ ಆ ಲೇಸಿಗೊಂದು (ರಾಗವಾಗಿ) ಕೈ ತೋರ್ಸೇನು ನಾನೈ….

ಹಿ : ಹೌದೂ………

ಕ : ರುದ್ರಸೇಕ ಮಹಾರಾಜ್ರೇ ಹೋಗ್ತೀವ್ರಿ.

ಹಿ : ಲಗ್ನಕ್ಕ ಎಂದು ಬರ್ತೀರಪ್ಪ?

ಕ : ಹದಿನೈದು ದಿವಸ ಮಾಡಿ ಬರ್ತೀವ್ರಿ ನಾವು.

ಹಿ : ತಡ ಮಾಡಬಾರದು ನೋಡು.

ಕ : ಹೌದ್ರಿ ಮುಂದೆ ಗತ ಐತಿ ಗತದೊಳಗೇ ಲಗ್ನ ಆಗ್ಬೇಕು.

ಹಿ : ಹೌದೌದು.

ಕ : ಋತುವಾದ ಮಗಳು ಮನಿಯಾಗ ಇದ್ದರೆ ನಡು ಮನಿಯಾಗ ಕಂಬ ಸುಟ್ಹಾಂಗೆ.

ಹಿ : ನಿಜ.

ಕ : ಹೆಣ್ಣು ಋತುವಾಗಿ ಮನಿಯಾಗ ಇರಬಾರ್ದು; ಲಗೂನ ಲಗ್ನ ಮಾಡ್ಕೊಂಡು ಹೋಗ್ರಿ.

ಹಿ : ಆಹಾ.

ಕ : ಕನ್ಯಾ ನಿಶ್ಚಯ ಮಾಡಿ ತಾಯಿ ಫೋಟೊ ತೊಗೊಂಡು ಕುದ್ರಿ ಮ್ಯಾಲೆ ಕುತ್ಕೊಂಡು ತನ್ನ ಊರಿಗೆ ನಡುದಾನs ನಡುದಾನ…….

|| ಪದ ||

ಧರ್ಮಾವತಿ ಪಟ್ಟಣಯ್ಯಾ….ಹರಿರಾಮಾ ಹರೀ……..
ಅಲ್ಲಿಗೆ ಬಂದಾನಯ್ಯಾ….ಹರಿರಾಮಾ ಹರೀ……..
ಓಹೋ ಬಂದ್ಯಾ ಪ್ರಥಾನಾ….ಹರಿರಾಮಾ ಹರೀ…….
ಬಂದೀನ್ರೀ ನಮ್ಮ ಧೊರೀ ನಾನೀಗಾ….ಹರಿರಾಮ ಹರೀ…….

ಕ : ನಮಸ್ಕಾರ ಮಹಾರಾಜ ರುದ್ರಸೇಕ-ಗಂಗಾಸಾಗ್ರ ತಾಯಿ.

ಹಿ : ಶರಣಾರ್ಥಿ.

ಕ : ಓಹೋ ಎಂಟು ದಿವಸ ಆಯ್ತು ಇವತ್ತು ಬಂದ್ಯಾ ಮಂತ್ರಿ-ಕನ್ಯಾ ತೆಗಿಯಾಕ ಹೋದೋನು?

ಹಿ : ಹೌದು ಮಾಹಾರಾಜ್ರೇ

ಕ : ಹೋದಂಥ ಕಾರ್ಯ ಹ್ಯಾಗಾಯಿತು?

ಹಿ : ಹ್ಯಾಗಾಯಿತು?

ಕ : ಹೋದಂಥ ಕಾರ್ಯ ನೆರವೇರಿತು ಮಹಾರಾಜ.

ಹಿ : ಆಹಾ!

ಕ : ರುದ್ರಾವತಿ ಪಟ್ಣದ ರುದ್ರಸೇಕ ಮಹಾರಾಜನ ಮಗಳು-

ಹಿ : ಆ……..

ಕ : ಸತ್ಯಶಿವಲೋಚನೆ ನಿಮ್ಮ ಸೊಸಿ-ಫೋಟೊ ತಂದಿನಿ ನೋಡ್ರಿ ಮಹಾದೊರಿ.

ಹಿ : ಆ……..

ಕ : ಆಹಾ, ಆಯಮ್ಮನ ಫೋಟೊ ಕೈಯಾಗ ಹಿಡ್ಕೊಂಡ ರುದ್ರಸೇಕ ಮಾವ; ಫೋಟೊ ಮಡಚಿದ್ದು ತಗದು ನೋಡಿದ- ದೇವಲೋಕದ ದೇವಕನ್ನಿಕೆಯಲ್ಲೋ ಮಗಳು!

ಹಿ : ಮಹಾ ರೂಪಿಷ್ಟಳು!

ಕ : ಅಮ್ಮಾ ನಿನ್ನ ಮುಖ ನೋಡಿದ್ರೆ ನನಿಗೆ ಆನಂದ! ದೇವಲೋಕ ಇಳದ್ಹಂಗಾತಲ್ಲ! ಸೊಸಿ ಶಿವಲೋಚನಾ ನೀನು ನನ್ನ ಸೊಸಿಯಲ್ಲ, ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳು. ನನ್ನ ಮನಿ ಬೆಳಕಾಯ್ತು ಸೊಸೀ! ನನ್ನ ಮಗ ನೀಲಕುಮಾರ ಹೋಗಿ ರಂಭಾವತಿ ಸೂಳಿ ಮನಿಯಾಗ ಸೇರಿದಾನೆ; ಈ ಮಗಳ ಮುಖ ನೋಡಿದ್ರೆ ಯಾವ ಕಾಲಕ್ಕೆ ಈ ರಂಭಾವತಿ ಮನಿಯಾಗ ಇರ್ಬೇಕು-ಮಗ?

ಹಿ : ಇರೋದಿಲ್ಲ.

ಕ : ಯಾವಾಗ ಹೋಗಿ ತೋರ್ಸತೀ? ಮಂತ್ರಿ, ಮಗನಿಗೆ ಕರ್ಕೊಂಬಾ; ಜಲ್ದಿ ಲಗ್ನಕ್ಕೆ ಹೋಗಾನು, ಎಂದಿಟ್ಟ್ಯಪಾ ಲಗ್ನ?

ಹಿ : ಎಂಟು ದಿವಸಕ್ಕ.

ಕ : ಆಗಲಿ ಆನಂದಾತು ಹೋಗಿ ಬಾ ಮಂತ್ರಿ.

ಹಿ : ಆ.

ಕ : ಮನಿಗೆ ಹೋಗಿ ಊಟ್ ಮಾಡ್ಯಾನ ಮಂತ್ರಿ-(ರಾಗವಾಗಿ) ಮಧ್ಯಾಹ್ನ ಒಂದು ಗಂಟೆಗೆ…….ಶಿವಲೋಚನಮ್ಮನ ಫೋಟೊ ಜೇಬಿನಾಗೆ ಇಟ್ಕೊಂಡಾನೆ………ಆ ರಂಭಾವತಿ ಮನಿಗೆ ಬರ್ತಾನೇ………

ಹಿ : ಆಹಾ……..

ಕ : ರಂಭಾವತಿ ತಾಯಿ ಕೈವಲ್ಯಾ ಗೇಟ್ ಬಾಗಲ್ದಾಗ ಕುಂತಿದ್ಲು; ಐದಿ ಏನಮ್ಮಾ ಕೌಸಲ್ಯಮ್ಮಾ?

ಹಿ : ಬರ್ರೀ ಮಂತ್ರಿಯವರು ಬಂದಿರಿ?

ಕ : ಯಕಪ್ಪಾ ಬಂದೆ?

ಹಿ : ಸ್ವಲ್ಪ ಒಳಗೆ ದಾರಿ ಬಿಡಬೇಕಲ್ಲಮ್ಮಾ

ಕ : ಯಾಕ ದಾರಿ?

ಹಿ : ಮಹಾರಾಜ್ರಕೂಟ ಸ್ವಲ್ಪ ಮಾತಾಡದೈತಿ

ಕ : ಹೋಗಾ; ಮೊದಲ ಬಂದಾಗ ಮರ್ಯಾದಿ ಮಾಡಿ ಒಳಗ ಬಿಟ್ರೆ ಒಳಗ್ಹೋಗಿ ಇಲ್ಲದ್ದ ಮಾತಾಡಿ ಚಲೊ ಮೈಯಾಲ್ಲಾ ಬಡಿಸ್ಕೊಂಡು ಬಂದು ಒಳಾಗ ದಾರಿ ಬಿಡು ಅಂತಾನ! ನಾನು ದಾರಿ ಬಿಡೋದಿಲ್ಲ.

ಹಿ : ಹಂಗ ಮಾಡ್ಬೇಡಮ್ಮಾ ಸ್ವಲ್ಪ ಮಾತಾಡೋದೈತಿ

ಕ : ಅದು ಯಾವ ಮಾತು? ನನ್ನ ಮುಂದೆ ಹೇಳು ನಾನು ಹೋಗಿ ಹೇಳ್ತೀನಿ.

ಹಿ : ಮಾತಿಲ್ಲ ಒಂದು ತೋರ್ಸದೈತಿ.

ಕ : ರಾಜಗ ಒಂದು ಕಾಗದ, ಒಂದು ಫೋಟೊ ತಂದೀನಿಯಮ್ಮಾ ಆ ಫೋಟೊ ತೋರ್ಸೊ ಸಲುವಾಗಿ ನಾನು ಬಂದೀನಿ.

ಹಿ : ಆಹಾ.

ಕ : ಅದು ಯಾ ಫೋಟೊ ನನ್ನ ಕೈಯಾಗ ಕೊಡು; ನಾನ್ಹೋಗಿ ರಾಜನ ಕೈಯಾಗ ಕೊಡ್ತೀನಿ, ನಿನಗ ದಾರಿ ಬಿಡಾದಿಲ್ಲ.

ಹಿ : ತೋರ್ಸಬಹುದು.

ಕ : ಯಮ್ಮಾ, ನೀನು ಕೊಡೋದು ಅದೇ ಫೋಟೊ, ನಾನ್ಕೊಡೋದೂ ಅದೇ ಫೋಟೊ ತೊಗೊಂಡ್ಹೋಗಿ ಕೊಡು ಹೋಗಮ್ಮ -ಅಂದು ಹೊರಗ ನಿಂತ್ಕೊಂಡು ಫೋಟೊ ಒಳಗ ಕೊಟ್ಟ!

ಹಿ : ಮಂತ್ರಿಗೆ ತಿಳೀಲಿಲ್ಲ!

ಕ : ಗೇಟು ಬಾಗಲು ಬಂಧೂರವಾಗಿ ಮುಚ್ಚಿ ಆಕಿ, ಕೌಸಲ್ಯ ಒಳಗ ಬಂದು-ಏನಿದು ಕಾಗದ ತಂದಾನ, ಫೋಟೊ ಅಂತ್ಹೇಳಿ ಆ ಮಂತ್ರಿ ತಂದಂಥ ಫೋಟೊ ಕೈಯಾಗ ಹಿಡ್ಕೊಂಡು ಕಮಾನು ಕಿಟಕಿ ಬೆಳಕಿನ್ಯಾಗ ನೋಡ್ತಾ ಇದಾಳೆ- ದೇವಲೋಕದ ಸ್ತ್ರೀಯಳು! ಶಿವಲೋಚನ ಫೋಟೊ!

ಹಿ : ಆಹಾ!

ಕ : ಅಲೇಲೆಲೆ ಇವನ ಬಾಯಾಂಗ ಮಣ್ಣ ಹಾಕ; ಮೋಸಗಾರ! ಮನಘಾತಕ ಮಂತ್ರಿ! ಎಲೋ…….

ಹಿ : ಆ

ಕ : ಮೊದಲು ಬಂದು ರಾಜನ ಚೇಷ್ಟಿ ಮಾಡಿ ಮೈಯೆಲ್ಲಾ ಬಡಿಸ್ಕೊಂಡು ಹೋಗಿ ಅದೇ ಸಿಟ್ಟಿಲೆ ಎಂಥ ಹೆಣ್ಣು ತಗದು ಬಂದಾನ ಇವನ ವೋಸುರಿಲಿ.

ಕ : (ರಾಗವಾಗಿ) ಮಂತ್ರಿ ಬಾಯಾಗ ಮಣ್ಣು ಹಾಕಲೀ………ಎಂಥಾ ಹೆಣ್ಣು ತಗದು ಬಂದಾನೆ ಯವ್ವಾ……..ರಾಜ ಲಗ್ನಕ್ಕ ಹೋಗ್ತಾನ……..ನನ್ನ ಮಗಳು ಪರದೇಶಿ ಆಗ್ತಾಳೇ ತಾಯಿ……..ನನ್ನ ಮಗಳು ಒಬ್ಬಾಕೆ ಆಗ್ತಾಳೆ….ಇವನು ಎಂಥಾ ಕೆಲಸ ಮಾಡಿಬಿಟ್ಟ ಮಂತ್ರಿ….ನೀಲಕುಮಾರಗೂ ನನ್ನ ಮಗಳಿಗೂ ತಕ್ಕ ಜೋಡಾಗಿತ್ತಲ್ಲೇ ಯವ್ವಾ….ಈಗ ಪರದೇಶಿ ಆಗ್ತಾಳೆ ನನ್ನಮಗಳೂ………

ಕ : ಕೌಸಲ್ಯ ಆಲೋಚನೆ ಮಾಡ್ತಾಳೆ.

ಹಿ : ಆ.

ಕ : ಏನು ಮಾಡಿದ್ರ ರಾಜ ನಮ್ಮ ಮನಿಯಾಗs ಇದಾನು; ಹ್ಯಂಗ ಮಾಡಿದ್ರೆ ರಾಜ ನಮ್ಮ ಮನಿಯಾಗs ಸ್ಥಿರ ಆದಾನು?

ಹಿ : ಹೌದು.

ಕ : ಶಿವಲೋಚನ ರೂಪ ನೋಡಿದ್ರೆ ಈ ಮಗಳ ಪಾದದ ಮ್ಯಾಗಳ ಕಳ ನನ್ನ ಮಗಳ ಮುಖದ ಮ್ಯಾಲೆ ಇಲ್ಲಲ್ಲೇ!

ಹಿ : ಆ.

ಕ : ಯಾವ ದೇಶದ ಹೆಣ್ಣಿರಬಹುದು, ಎಂಥಾ ಚಂದಾನ ಚಲುವಿ ಈಕಿ! ಹ್ಯಾಗೆ ಐದಾಳೆ ಈಕಿ! ಮಕ ನೋಡಿದ್ರೆ ಸೂರ್ಯ ದೇವನ ಮಗ ಇದ್ಹಾಂಗೆ ಐತಲ್ಲೆ-ಇದು ಹೆಣ್ಣು!

ಹಿ : ಹೌದು!

ಕ : || ಪದ ||

ಹೆಣ್ಣಿಂದು ಒಂದು ಕಣ್ಣು ಕೆಡಿಸ್ಯಾಳಯ್ಯಾ……..
ಫೋಟೊದೊಳಗ ಕುಳ್ಡಿ ಮಾಡ್ಯಾಳಯ್ಯಾ….ಶಿವಹರಯನ್ನ ಮಾದೇವ

ಕ : ಒಂದು ಕಣ್ಣು ಕೆಡಿಸಿ ಕುಳ್ಡಿ ಮಾಡಿ-ಮಗಳೇ ರಂಭಾ

ಹಿ : ಏನಮ್ಮಾ?

ಕ : ಬಾ ಇಲ್ಲಿ-ಲಗೂ ಮಾಡಿ

ಹಿ : ಏನಮ್ಮಾ?

ಕ : ನಿನ್ನ ಸವತಿ ಫೋಟೊ ಬಂದೈತಿ ನೋಡಿಲ್ಲಿ. ನಿನ್ನ ರಾಜ ಲಗ್ನಾಗಕ ತಂದಾನ-ಅವನ ಮಂತ್ರಿ!

ಹಿ : ಕನ್ಯಾ ತಗದು ಬಂದಾನೆ ರಾಜಗಾ!

ಕ : ಆ ಶಿವಲೋಚನ ಫೋಟೊ ಕೈಯಾಗ ಹಿಡಿದು ರಂಭಾವತಿ ನೋಡ್ತಾಳೆ-ತಾಯೀ ಅಬಾಬಾ! (ರಾಗವಾಗಿ) ದೇವಲೋಕದ ಕನ್ಯೆಯಲ್ಲೇ ಇದು ತಾಯಿ! ಹೋಗ್ತಾನ ರಾಜ ಲಗ್ನಕ್ಕೆ! ಹ್ಯಾಗ ಮಾಡ್ಬೇಕು ತಾಯೀ……..

ಹಿ : ಮಗಳೇ ನಿನಕಿಂತ ಮುಂಚಿತವಾಗಿ ಒಂದು ಉಪಾಯ ಮಾಡಿ ಆಲೋಚಿಸಿನಿ ಹುಡುಕೀನಿ!

ಕ : ಗೊಂಬಿದೊಂದು ಕಣ್ಣು ಕಳಿದೀನಿ; ಹೆಣ್ಣು ಕುಳ್ಡಿ ಮಾಡೀನಿ… ….ಕುಳ್ಡೀ ಲಗ್ನಾಗ್ಬ್ಯಾಡಂತ್ಹೇಳಿ ಬಿಡು ರಾಜಗ; ರಾಜಾ ಹೋಗೋದಿಲ್ಲ.

ಹಿ : ಓಹೋ ಹೋಗೋದಿಲ್ಲ!

ಕ : ಒಳ್ಳೇ ಉಪಾಯ ಮಾಡೀ ತಾಯಿ ಕೌಸಲ್ಯಮ್ಮಾ!-ಅಂತ್ಹೇಳಿ ನೀಲಕುಮಾರ ರಾಜನ ಹತ್ರ ಮಂಚಕ್ಕ ಬಂದ್ಲು

ಹಿ : ಆ

ಕ : ನಿಮ್ಮ ಮಂತ್ರಿ ಹೋಗಿ ನಿನಗೆ ಹೆಣ್ಣು ನಿಶ್ಚಯ ಮಾಡಿ ಬಂದಾನಂತೆ ನೀವು ಲಗ್ನಕ್ಕೆ ಹೋಗಬೇಕಂತೆ; ಫೋಟೊ ಬಂದೈತಿ ನೋಡ್ರಿ-ಅಂತ ಫೋಟೊ ಕೈಯಾಗ ಕೊಟ್ಲು.

ಹಿ : ಹೌದು

ಕ : ನೀಲಕುಮಾರ ರಾಜಾಧಿರಾಜ, ಮಂಚದ ಮ್ಯಾಲೆ ಕುಂತ್ಕೊಂಡು ಏನು ಅದು ಹೆಣ್ಣಿನ ಫೋಟೊ ಅಂತ ಹೇಳಿ ಮಡಚಿದ್ದು

ಹಿ : ಆ

ಕ : ಫೋಟೊ ಮಡಚಿದ್ದು ತಗದು ಆಹಾ-

|| ಪದ ||

ಎಂಥ ನನ್ನ ಮಡದೀ….ಹರಹರ ಮಾದೇವಾ
ಭಲೇ ಭಲೇ ಮಡದಿ ಶಿವಲೋಚನಾ ಶಿವಲೋಚನಾ
ಯಾವಾಗ ಹೋಗಿ ಮಡದಿಗೆ ನೋಡ್ಲೀ….ಹರಹರ ಮಾದೇವ
ಹೋಗ್ತೀನೇ ರಂಭಾವತೀ….ಹರಯನ್ನ ಮಾದೇವ
ಲಗ್ನಕ್ಕೆ ಹೋಗ್ತೀನೆ ನಾನು….ಹರಯನ್ನ ಮಾದೇವ
ಬಲೇಲೆ ಬಲೇಲೆ ಹೆಣ್ಣೇ….

ಕ : ರೂಪದಲ್ಲಿ ದೇವಕನ್ನಿಕೆಯೋ ಈ ಹೆಣ್ಣು! (ರಾಗವಾಗಿ) ಓಹೋ ಹ್ಯಾಗಿದಾಳೆ! ಯಾವಾಗ ಹೋಗಿ ಈಕಿ ಮುಖ ನೋಡ್ಲಿ….ಎಲ್ಲಿ ರುದ್ರಸೇಕ ಮಹಾರಾಜನ ಮಗಳು? ಮಾದೇವಿ ತಾಯಿ ಗರ್ಭದಲ್ಲಿ ಉದ್ಭವಿಸಿದ ಶಿವಲೋಚನಾನ್ನ ನನಗೆ ತಗದು ಬಂದಾನ ಮಂತ್ರೀ…ಯಾವಾಗ ಹೋದೇನು ಯಾವಾಗ ಹೋಗಿ ನೋಡೇನು ಮಡದೀ…ಎಂಥಾ ರೂಪದ ಹೆಣ್ಣು ಇದು….

ಹಿ : ನಿಧಾನ ಮಾಡ್ರಿ ರಾಜಾ

ಕ : ಹೋಗ್ತೀನಿ ರಂಭಾ

ಹಿ : ನಿಧಾನ ಮಾಡ್ರಿ ಇಲ್ಲಿ

ಕ : ಯಾಕ?

ಹಿ : ಲಗ್ನಕ್ಕ ಹೆಂಗೋಗ್ತೀರಿ ಮಾರಾಜ್?

ಕ : ಯಾಕ?

ಹಿ : ನೋಡ್ರಿ ಸರಿಯಾಗಿ ದೃಷ್ಟಿಸಿ ಫೋಟೊ+ಅದು ಹ್ಯಾಂಗೈತಿ ಅಂಬೋದು?

ಕ : ಏನಾಗೈತಿ?

ಹಿ : ಒಂದು ಕಣ್ಣು, ನೇತ್ರ ಇಲ್ಲ ನೋಡ್ರಿ.

ಕ : ಅಲೇಲೆ ಹೌದಲ್ಲೋ!

ಹಿ : ಆಹಾ ನೋಡು ರಾಜಾ

ಕ : ಹೆಣ್ಣು ಚಲೋ ಐತೆ-ಹ್ಯಾಂಗ್? ಬಲಗಣ್ಣೆ ಇಲ್ಲ!

ಹಿ : ನೋಡ್ರಿ ಅಸಯ್ಯ ಮಾಡಾಕೆ ಕುಲ್ಡಿಗೆ ತಗದು ಬಂದಾನ-ಅವನು ಮೋಸಗಾರ!

ಕ : ಕಣ್ಣಿಲ್ಲದ ಹೆಣ್ಣು ನನಗೆ ಲಗ್ನ ಮಾಡ್ಬೇಕು ಅಂತ ಮೋಸ ಮಾಡ್ಯಾನ ಅವನು ಮಂತ್ರೀ!

ಹಿ : ಹೌದು

ಕ : ಇಂಥಾ ಹೆಣ್ಣಿಗೆ ನೀವು ಲಗ್ನಾಗ್ತೀರಾ?

ಹಿ : ಆಗಬ್ಯಾಡ

ಕ : ಏನಂತಾರ ಜನ? -ಕುಳ್ಡಿಗಂಡ, ಕುಳ್ಡಿಗಂಡ ಅಂತ ಕೂಗತಾರ!

ಹಿ : ಹೌದು ಅಸಯ್ಯ!

ಕ : ಯಾವ ಕಾರ್ಯದಾಗೂ ನೀವು ಬರಂಗಿಲ್ಲ-ಕುಳ್ಡೀನ ಲಗ್ನ ಆದ್ರ!
(ರಾಗವಾಗಿ) ರಾಜಾ ಹೋಗ್ಬ್ಯಾಡ್ರೀ ಲಗ್ನಕ್ಕೆ….

ಹಿ : ಹೌದು

ಕ : (ರಾಗವಾಗಿ) ಕಣ್ಣಿಲ್ಲದ ಹೆಣ್ಣಿಗೆ ಲಗ್ನಾಗೋದೇನೆ ಬ್ಯಾಡಾ….ಹೋಗಲಿಬಿಡು ರಂಭಾ-ಫೋಟೊ ಮಾಡ್ನ್ಯಾಗ ಇಟ್ಟುಬಿಟ್ಟ; ಪಂಚಪಗಡಿ ಆಡ್ಕೊಂತಾ ಇಬ್ರೂ ಕುಂತಗಂಡು ಬಿಟ್ರು!

ಹಿ : ಆಹಾ!

ಕ : ಹೊರಗಡೆ ಬರ್ಲೇ ಇಲ್ಲ ನೀಲಕುಮಾರ; ಒಳಗೇ ಆದ!

ಹಿ : ಓಹೋ!

ಕ : ಮಂತ್ರಿ ರಾಜನ್ನ ಹಿಣಿಕಿ ನೋಡ್ತಾನೆ, ಬರ್ತಾನೆ, ರಾಜ ಬಂದಾನು-ಈಗ ಬಂದಾನು, ಆಗ ಬಂದಾನು ಅಂತ ನೋಡ್ತಾನೆ! ಎರಡು ಗಂಟೆ ಆತು! ರಾಜ ಬರ್ಲಿಲ್ಲ, ಫೋಟಾನು ಬರ್ಲಿಲ್ಲ! ಎರಡೂ ಒಳಗಾದುವು! ಎದಿಗೆ ಗುಂಡು ಒಡದ್ಹಾಂಗಾತು ಮಂತ್ರಿಗೆ! -ಓಹೋ ಮೋಸ ಆಯ್ತು!

ಹಿ : ಸುಮ್ಮನೆ ಕೊಟ್ನೆಲ್ಲಾ!

ಕ : ಫೋಟೊ ಒಳಗ್ಹೋದ್ಮ್ಯಾಲೆ ರಾಜ ಒಂದು ಐದು ನಿಮಿಷ ಇರಬಾರ್ದಾಗಿತ್ತು ಅಲ್ಲಿ ಏನೋ ಘಾತ ಮಾಡ್ಯಾರೆ ಆ ರಂಡೇರು

ಹಿ : ಹೌದೌದು! ಪಾತ್ರದೋರು ಅವ್ರು!

ಕ : ಹಣಿ ಹಣಿ ಬಡ್ಕೊಂತಾ ವಾಪಾಸು ತಿರುಗಿದ ಮಂತ್ರಿ

ಹಿ : ನಮಸ್ಕಾರ ಧರ್ಮಸೇಕ ರಾಜಾ

ಕ : ಶರಣಾರ್ಥಿ, ಬಂದನೇ ಮಗ?

ಹಿ : ಇನ್ನೆಲ್ಲಿ ಮಗ! ರಂಭಾವತಿ ಕೈವಾಸ ಆದ-ಮಗ!

ಕ : ಇಲ್ಲ ಬರ್ಲಿಲ್ಲ!

ಹಿ : ಬರ್ಲಿಲ್ಲ ಫೋಟೊದ ತೋರ್ಸಿದೆ

ಕ : ಒಳಗೆ ಫೋಟೊ ಕೊಟ್ಟೆ ಫೋಟಾನು ಬರ್ಲಿಲ್ಲ, ನಿಮ್ಮ ಮಗನೂ ಬರ್ಲಿಲ್ಲ! ಒಳಗ ಎಳ್ಡೂ ಗಡ್‍ಪಡದ್ ಆದವು.
(ರಾಗವಾಗಿ) ಅಯ್ಯೋ ಅಯ್ಯೋ ಮಗನ ಬುದ್ಧಿ ಸುಡ್ಲೀ….
ಎಂಥಾ ಹೆಣ್ಣು ಕಳ್ಕೊಂಡ್ವೆ ಮಡದಿ ಮಹಾದೇವಿ….

ಹಿ : ಆ

ಕ : (ರಾಗವಾಗಿ) ಗಂಗಾಸಾಗ್ರ….ಏನು ಸೊಸಿ ಸಿಕ್ಕಿದ್ಲು! ಮಗ ಬಂದಿದ್ರೆ ಲಗ್ನ ಮಾಡ್ಕೊಂಡು ಸೊಸಿ ಕರ್ಕೊಂಡು ಬರ್ತಿದ್ವಿ….

ಹಿ : ಹೌದೂ….

ಕ : ಮಗ ಬರ್ಲಿಲ್ಲ ಅಂದ ಬಳಿಕ ಏನು ಮಾಡೋದೈತಿ!
(ರಾಗವಾಗಿ) ಸೊಸಿ ಮುಖ ನೋಡಾಕ ನಮ್ಮ ನಸೀಬ ಬೇಕೊ….ಕಾಗದ ಬರದು ಬಿಡಪ್ಪಾ….ಯಾರಿಗಾರ ಕೊಟ್ಟು ಲಗ್ನ ಮಾಡ್ಲಿ….ಅವರು ತಂದೀ ತಾತೀ….

ಹಿ : ಹೌದು ಕಾಗದ ಬರೀ

ಕ : ಹೌದು ಮದುಮಗನೆ ಬಂದಿಲ್ಲ ಅಂದ ಬಳಿಕ ಲಗ್ನಕ್ಕೆ ಹ್ಯಾಂಗ ಹೋಗ್ಬೇಕು?

ಹಿ : ಮಗ ಬರ್ಲಿಲ್ಲಿದ್ರೆ ಲಗ್ನ ಆಗಾದಿಲ್ಲೇನ್ರಿ?

ಕ : ಆಗೋದಿಲ್ಲ; ಅಪಮಾನಾತು-ನಮಗೆ ಮಗ ಬರ್ಲಿಲ್ಲಿದ್ರೆ ಲಗ್ನ ಆಗೋದಿಲ್ಲೇನು ಅಂತೀಯಲ್ಲೋ, ಏನು ಹುಚ್ಚು ಹಿಡದೈತೇನೋ ಮಂತ್ರೀ!

ಹಿ : ಮಗನಗೊಡವಿ ನಿಮಗ್ಯಾಕ, ನಾನು ಐದೀನಿ ಲಗ್ನ ಮಾಡಾನು

ಕ : ಹ್ಯಂಗ ಲಗ್ನ ಮಾಡ್ತೀಯೋ ಮಂತ್ರಿ? ಏನು ಹುಚ್ಚೊ, ಏನು ಮಳ್ಳೊ, ಏನು ದಿಕ್ಕು ತಪ್ಪೇತೋ?

ಹಿ : ಆ

ಕ : ಮದಲಿಂಗನ ಬಿಟ್ಟು ಮದುವಿಗೆ ಹೋಗ್ಬೇಕು ಅಂತಿಯಲ್ಲೋ! ಹಾಂಗ ಬಿಟ್ಹೋದ್ರ ನಮಗೆ ಮರ್ಯಾದಿ ಬಂದೀತೇನೋ!

ಹಿ : ಆಹಾ!

ಕ : ಅತ್ತಿ ಮಾವನೋರ ಪ್ರೇಮ ಯಾರ ಮೇಲೆ ಇರ್ತೈತಿ?

ಹಿ : ಓ, ಅಳಿಯನ ಮೇಲೆ ಪ್ರೀತಿ!

ಕ : ಎದುರು ಭೇಟಿಗೆ ಬಂದಾಗ ನಮ್ಮ ಅಳಿಯ ಎಲ್ಲಿ? ವರ ತೋರ್ಸಿರಿ ಅಂದಾಗ ನಾವು ಯಾರಿಗೆ ತೋರಿಸ್ಬೇಕು?

ಹಿ : ಇಲ್ಲಿ ಕುಂತಾರಲ್ಲ ಇವ್ರಿಗೆ ತೋರ್ಸಿಬಿಟ್ರಾತು.

ಕ : ಇಲ್ಲಿ ಮುಂದೆ ಕುಂತಿರೋ ಸ್ವಾಮಿಗೆ?

ಹಿ : ಈ ಸ್ವಾಮಿಗೆ?

ಕ : ಓಹೋ ನಿಜವಾದ ಮದಲಿಂಗನ ಬಿಟ್ಟು ಮದುವಿಗೆ ಬಂದ್ರಿ ಅಂತ್ಹೇಳಿ ನಮ್ಮ ದವಡಿ ಮ್ಯಾಲೆ ಬಡೀ ಬೇಕಾದ್ರೆ-

ಹಿ : ಆ

ಕ : ಆ ರಾಜಗ ಅಪಮಾನ ಮಾಡ್ಬೇಕಂತ ಮಾಡಿಯಾ? ಬೇಡ

ಹಿ : ಮಂತ್ರೀ ನೋಡು, ಆಲೋಚಿನಿ ಮಾಡು

ಕ : ಬ್ಯಾಡಪ್ಪ ಲಗ್ನದ ಗೋಪಿ ಬಿಟ್ಟು ಬಿಡು. ಕಾಗದ ಬರದುಬಿಡು ಯಾರಿಗರ ಕೊಟ್ಟು ಲಗ್ನ ಮಾಡ್ಲಿ

ಹಿ : ಆ

ಕ : ಹಂಗಾಗದಿಲ್ಲ ಅಂದ ಮಂತ್ರಿ. ತಗದ ಹೆಣ್ಣು ಬಿಡಾಕ ಬರಾದಿಲ್ಲ.

ಹಿ : ಆ

ಕ : ನಾನು ಐದೀನಿ, ಲಗ್ನದ ಗೊಡವಿ ನಿಮಗ್ಯಾಕ? ಮದುವಿ ಸಾಮಾನಕ್ಕ ರೆಡಿ ಮಾಡ್ರಿ ಅಂದ

ಹಿ : ಲಗ್ನದ ಸಾಮಾನು!