ಕ : (ರಾಗವಾಗಿ) ಎರಡೂ ಕೈ ಮುಗದು ಬೇಡ್ಕೊಂತಾನ-ಅಳಬ್ಯಾಡಮ್ಮಾ ಯಾಕ ಅಳತೀದಿ? ಅಳಬ್ಯಾಡ ತಂಗೀ ಅಳಬ್ಯಾಡೇ……..

ಹಿ : ಆಹಾ

ಕ : ನಾನು ಮಾಡಿದ ಅಪರಾಧ ನಿನಗೆ ಬಾಳ ಆಗೇತಿ ತಾಯೀ
ಕ : ಏಸು ಮಂದಿಗೆ ಕಾಲಿಗೆ ಬಿದ್ದು ದುಃಖ ಮಾಡಿದ್ರು ಗಂಡನ ಮನಿ ಬಿಡುಗಡಿ ಯಾಗುವುದಿಲ್ಲ.

ಹಿ : ಆ

ಕ : ಅಳಬಾರ್ದು ಅಂತ ಬೇಡಿಕೊಂಡಾಗ ತಾಯಿ ಸಮಾಧಾನ ಆದ್ಲು; ಶಿವನ ಬುದ್ಧಿ ಬಂತು!

ಹಿ : ಶಿವನ ಗುಣ ಬಂತು

ಕ : ಆಗ್ಲೆಪ್ಪಾ ಅಣ್ಣಾ ನಡೀ………

ಹಿ : ಸಮಾಧಾನ;

ಕ : ಮಾಂಗಲ್ಯ ಆದ ಬಳಿಕ ಪತಿಗೆ-ಸತಿಗತಿ, ಸತಿಯಳಿಗೆ ಪತಿಯ ಬಿಟ್ಟು ಸದ್ಗತಿ ಇಲ್ಲ. ಸತಿಗೆ ಪತಿಯೇ ದೇವರಿ!

ಹಿ : ಆ.

ಕ : ಅಗಸಿಗೆ ಬಂದಾಗ ಮಂತ್ರಿ ಕೇಳಿದಾ-ಮಹಾರಾಜ್ರೇ ಎಲ್ಲ್ಯಾಸಿ ಕರ್ಕೊಂಡ್ಹೋಗಾದು ಮದು ಮಗಳಿಗೆ?

ಹಿ : ರಂಭಾವತಿ ಮನಿ ಮುಂದೆ

ಕ : ಎಲ್ಲೀ ಬ್ಯಾಡ ಮಂತ್ರಿ, ರಂಭಾವತಿ ಮನಿ ಮುಂದೇ ಕರ್ಕೊಂಡು ಹೋಗಾನು. ಮಗ ನೋಡಾಕ ಬರ್ತಾನೆ, ಮಡದಿಗೆ ನೋಡಿದ ತಕ್ಷಣ ಹಂಗs ಬೆನ್ನು ಹತ್ತಿ ಬರ್ತಾನೆ; ಮಗನಿಗೆ ಕರ್ಕೊಂಡು ಮನಿಗೆ ಹೋಗಿ ಬಿಡಾನು.

ಹಿ : ರಂಭಾವತಿ ಮನಿ ಮುಂದೆ ಮಜಲು

ಕ : ಸುರು ಮಾಡ್ರೋ ಗಲಾಟೆಯಾಗಲಿ ಪಾತ್ರದವರು, ಪಿಟೀಲು, ಪಿಯಾನು, ಸಂಗೀತ! ಚಲೋ ಗಾಯನ ಮಾಡ್ರಿ- ಬರ್ಲಿ ಮಗ.

|| ಪದ || (ಕಬೀರ ಭಜನೆ)

ಅಜೀ ಕಹೇ ಪ್ರಭೂ ಏಕ್ ಬಾತ್ ಸಬ್ ದಿನ್ ಕಹೇ ಪ್ರಭು ಏಕ್ಬಾತ್
……………………………………..
……………………………………..
ಉಸಕೆ ಊಪರ್ ಮಾರೆ ಏಕ್ಲಾತ್ ಸಬ್ ದಿನ್ ಕಹೇ ಏಕ್ ಬಾತ್
ಮಾತಾಪಿತಾ ಜೋವೊ ಬಾತೇ ಮಾತಾ ಪಿತಾ ಜೋವೊ ಬಾತೇ
ಆತೆ ಮೇರೇ ಪೀಭೆ ಕೋಈ ನಹೀ ಆತೆ ಸಬ್ ದಿನ್ ಕಹೇ ಪ್ರಭು ಏಕ್ಬಾತ್
ಕಹತ್ ಕಬೀರ್ ಸುನ್ಬೈಸಾಧೂ ಕಹತ್ ಕಬೀರ್ ಸುನ್ಬೈಸಾಧೂ
ಭಜನಕರೋ ಜುಮ್ಮೆರಾತ್ ಸಬ್ದಿನ್ ಕಹೋ ಪ್ರಭು ಏಕ್ಬಾತ್
ಅಜೀ ಕಹೇ ಪ್ರಭು ಏಕ್ಬಾತ್ ಸಬ್ದಿನ್ ಕಹೇ ಪ್ರಭು ಏಕ್ಬಾತ್

ಕ : ಗಾಯನ ಕೇಳಿ ನೀಲಕುಮಾರಗ ಆನಂದ ಆಯ್ತು. ಏನಿದು ಗಾಯನ! ನಡಿಯೇ ಹೋಗಾನು ರಂಭಾ

ಹಿ : ಏನು ಶಬ್ದ ಆತು?

ಕ : ಹೊರಗಡಿಗೆ ಕೆಳಗ ಹೋಗಬಾರದ್ರಿ, ಮೇಲ್ ಮಾಡಿ ಹತ್ತಾನು ನಡ್ರಿ ಅಂದ್ಲು ಇಕಿ-

ಹಿ : ರಂಭಾವತಿ ಸೂಳಿ.

ಕ : ಲಗ್ನ ಮಾಡ್ಕೊಂಡು ಬಂದಾರ ಮಡದಿಗೆ, ನೋಡಿಗೀಡ್ಯಾನು ಅಂತ! ಮ್ಯಾಲೆ ಹತ್ತಿದ ರಾಜಕುಮಾರ ಕಮಾನ ಕಿಟಿಕ್ಯಾಗ ನೋಡ್ತಾನೆ. ಅಬಾಬಾ ಏನ್ ಜನ ಜಾತ್ರಿ!

ಹಿ : ಬಹಳ ಮಂದಿ!

ಕ : ರಂಭಾ, ಆ ಪಲ್ಲಕ್ಯಾಗ ಕುಂತಾಳಲ್ಲ ಆಕಿಯಾರು?

ಹಿ : ಮಡದಿ!

ಕ : ಚೌರ ಬೀಸೋಹೆಣ್ಣು ಮಕ್ಳ ನಡುವೆ ಕುಂತಾಳಲ್ಲ ಆಕೀ ನೋಡ್ರಿ.
(ರಾಗವಾಗಿ) ನಿಮ್ಮ ಮಡದೀ….ಲಗ್ನ ಮಾಡ್ಕೊಂಡು ಬಂದಾರೆ ನೋಡ್ರಿ ನಿಮ್ಮ ಹೆಸರ್ಲೇ….ಫೋಟೊದಾಗ ನೋಡಿದ್ರ ಒಂದು ಕಣ್ಣು ಹೋಗಿತ್ತು……..

ಹಿ : ಆಹಾ!

ಕ : ಈಗನೋಡ್ರಿ ಎರಡೂ ಕಣ್ಣುಗುಡ್ಡಿ ಬೈಲಿಗೆ ಬಿದ್ದಾವ ಆಕೀವು.

ಹಿ : ಓಹೋ ಕೆಳಗ ಜೋತಾಡ್ತಾವ.

ಕ : ತೋರ್ಸತಾಳೆ-ಅವು ಕಣ್ಣಿನ ಮೇಲೆ ಎರಡು ತೊಂಡಾಲು ಇಳೇಬಿದ್ದಾವಲ್ಲ ಬಾಸಿಂಗದಾವು-ಅವಕ್ಕs ಕಣ್ಣುಗುಡ್ಡಿ ಅಂತ ತೋರ್ಸುತಾಳೆ-ಸೂಳೆ!

ಹಿ : ಆಹಾ!

ಕ : ಹೌದಲ್ಲೇ ಹೆಣ್ಣು ಬಹಳ ರೂಪಿಷ್ಟೆ ಐದಾಳೆ (ರಾಗವಾಗಿ) ಎರಡೂ ಕಣ್ಣು ಇಲ್ಲ ನೋಡೇ. ..

ಹಿ : ಆಹಾ ರಾಜಾ!

ಕ : ಕುಲ್ಡಿ!

ಹಿ : ಹೌದು ಕುಳ್ಡಿ!

ಕ : ಮಗಾ ನೋಡ್ತಾನೆ. ತಾಯಿ-ತಂದೆ! (ರಾಗವಾಗಿ) ಯಪ್ಪಾ, ಬಾರೋ ನಿನ್ನ ಮಡದಿ ನೊಡು ಬಾ ಮಗನೇ ನಿನ್ನ ಮಡದಿ ಲಗ್ನ ಮಾಡಿಕೊಂಡು ಬಂದೀವಪ್ಪ ನಿನ್ನ ಹೆಸರಿಲೇ….ಮಾಂಗಲ್ಯ ಮಾಡೀವಿ. ನೋಡು ಬಾರೋ! ಈ ಸೌಂದರ್ಯವಾದ ಮುಖ ನೋಡಿದ್ರೆ ಮೂರ್ಛೆ+ಗವಿತೇತಿ….

ಹಿ : ಆಹಾ!

ಕ : ತಂದೆ ಕೈ ಬೀಸ್ತಾನೆ, ತಾಯಿ ಕೂಗ್ತಾಳೆ, ಮಂತ್ರಿ ಕರೀತಾನೆ, ದಂಡು ಕರೀತಾರೆ, ಇವನೇನು ದಾದs ಮಾಡ್ವಲ್ಲ!

ಹಿ : ಹೌದು!

ಕ : ರಂಭಾ!

ಹಿ : ಏನ್ರೀ ರಾಜಾ?

ಕ : ಬಹಳ ರೂಪಿಷ್ಟ ಅದಾಳೆ ನೋಡೆ ಆಕಿ, ಕಣ್ಣು ಇದ್ದಿದ್ದರೆ ಭಾಳ ಚಲೋ ಆಗ್ತಿತ್ತು.

ಹಿ : ಭಾಳ ಹೊತ್ತು ನೋಡಬಾರದು.

ಕ : ರಾಜಾ, ಕುಲ್ಡಿ ಮುಖ ನೋಡಬಾರದು ನಡ್ರೀ ಒಳಗಾ, ಜಲ್ದೀ-

ಹಿ : ಕರ್ಕೊಂಡು ಹೋಗ್ಬಿಟ್ಲು ರಾಜಗ.

ಕ : ಇವರು ನಿಂತು ಮಜಲ್‍ಮಾಡಿ, ಡಾನ್ಸ್ ಮಾಡಿ, ಸಂಗೀತಮಾಡಿ ಏನು ಮಾಡಿದೂ ಬರ್ಲಿಲ್ಲ-

ಹಿ : ಬರ್ಲಿಲ್ಲ ರಾಜ!

ಕ : ನಡ್ರೆಪ್ಪಾ ಅಂದು, ಅರಮನಿಗೆ ಬಂದ್ರು; ರಾಜ ಅರಮನಿಯೊಳಗ ಅಂತಾನೆ-ಶಿವಲೋಚನಮ್ಮಾ, ಇದು ನಿಂದು ಮನಿ ನೋಡಮ್ಮಾ.

ಹಿ : ಆ!

ಕ : ನಾನು ನಿಮ್ಮ ಸೊಸಿ; ನಿಮ್ಮ ಮಗಳು.

ಹಿ : ಹೌದು.

ಕ : ಇದೋ ಇಲ್ಲಿ ನಿನ್ನ ಗಂಡನ ಫೋಟೊ ತೂಗ್ಹಾಕೀವಿ-ಇದೇ ನಿನ್ನ ಪತಿ.

ಹಿ : ಆಹಾ!

ಕ : ಈ ಕೈಯಾಗಳ ಒಂದುಲಕ್ಷ ರೂಪಾಯಿ ಉಂಗುರ ಸೊಸೀ, ನಿನ್ನ ಬೆರಳಾಗ ಇಡ್ತೀನಿ ತೊಗೋ.

ಹಿ : ಯದಕೆ ಮಹಾರಾಜರೆ?

ಕ : ನಾನು ಅರವು-ಮರವು ಅರವತ್ತು ವರ್ಷ. ಈ ದಂಡಿಗೆಲ್ಲಾ ಸಂಬಳ ಕೊಡೋದು ನೀನೇ; ದಂಡು ಭಟರಿಗೆಲ್ಲಾ ನೋಡೋದು ನೀನೆ, ರಾಜತ್ವ ನಿಂದು, ನಂದು ಅರವು ಮರವು-ಸೊಸೀ! ನೀನೇ ಪರಿಪಾಲನ ಮಾಡ್ಬೇಕು ಪ್ರಜಗಳಿಗೆ.

ಹಿ : ಆಗಲಿ ಮಾವನೋರೇ ನೀವು ಹೇಳಿದ್ದು ಮಾಡ್ತೀನಿ.

ಕ : ಆಯಮ್ಮ ಗೌಡೇರಿಗೆ ಕರ್ಕೊಂಡು ಮನಿಯಾಗ ಆದ್ಲು.

ಹಿ : ಆದ್ಲು.

ಕ : ಎಂಟು ದಿವಸಾದಾಗ ಆ ಗೌಡೇರು ಬಂದಿದ್ರಲ್ಲ ರುದ್ರಾವತಿ ಪಟ್ಣದಿಂದ-ಎರಡು ಕೊಡಾ ತೊಗೊಂಡು ನೀರಿಗೆ ಹೊಂಟಿದ್ರು.

|| ಪದ ||

ನಾರಿ ಹೋಗಿ ನೀರಿಗೆ ಕರಿತಾಳೆ ವಾರಿಗೆ ಗೆಳತೇರು ನೀರಿಗೆ ಬರ್ರೆವ್ವ ತಂಗೀ
ಚಂದ್ರಪಟ್ಟಣದೊಳು ಕುಂಬಾರ ಮಾಡ್ಯಾನ ಚಂದಕೆ ತಂದೆನವ್ವನಾ ಬಿಂದೀಗಿ
ಕಾಮ ಕ್ರೋಧ ಮೋಹ ಮತ್ಸರ ಆರು ಗೆಳತೇರು ಬಂದು ಜೋಡಿ
ಉತ್ತಮ ಮಧ್ಯಮ ಕನಿಷ್ಠ ಮೂರು ಸಿಂಬಿಮಾಡಿ ನಾ ಹೊತ್ತು ಕೊಡಾ
ಮರವು ಎಂಬೋ ಮಾತಿಗೆ ಬಿದ್ದು ಕೊಡ ತುಂಬೀದೆನವ್ವ ಬಡಾಬಡಾ
ಹೊರಸುವರು ಯಾರಿಲ್ಲ ಬಲ ಎಡಾ ಅಲ್ಲಿ ಏಕಾಂತ ಭೆಟ್ಟಿ ಆದ ಗುರುರಾಯ
ಗೋಪಾಳ ದುರದುಂಡಿ ಪದಮಾಡಿ ಹೇಳ್ತಾನೋ ಸಾಂಬನ ಪಾದಕ ಹಂಬಲಾಗಿ!

ಕ : ಆ ಪಾತ್ರದಾಕಿ ರಂಭಾವತಿ ತಾಯಿ ಕೌಸಲ್ಯ ನೋಡಿಬಿಟ್ಲು-ಯಾರು ಈ ಹೆಣ್ಣು ಮಕ್ಕಳು ಇವರು!

ಹಿ : ಆಹಾ.

ಕ : ಇಬ್ರು ಗೌಡೇರು!

|| ಪದ ||

ಸ್ನಾನ ಸಂಧ್ಯಾನ ಮಾಡಿ ಕುಂಬಾರ ಹೊಂಟಾನು ಬೀದಿಯಲೀ
ಗುರುಧ್ಯಾನ ಎಂಬ ಗುದ್ದಲಿ ತೊಗೊಂಡು ಆಗುದಾನ ಭೂಮಿ ಮ್ಯಾಲ
ಗರ್ವೆಂಬ ಕತ್ತಿಯ ಮೇಲೆ ಮಣ್ಣು ಹೇರಿದಾನು
ಹಂಸವೆಂಬ ಅಡತಾಳದ ಮೇಲೆ ಕೆಸರು ತುಳಿದಾನೊ ಪರೀಪರೀ
ವಿದ್ಯಾಸಕ್ತಿ ಎಂಬ ಕೋಲು ಹಿಡಿದಾನೆ
ಜ್ಞಾನಶಕ್ತಿ ಎಂಬ ತಿಗರಿ ತಿರುವ್ಯಾನೆ
ಪಂಚಸತ್ವದ ಬಿಂದಿಗಿ ಹೊರತಂದಾನೇ

ಕ : ಹಾಡು ಹೇಳ್ಕೊಂತಾ….

ಹಿ : ಹೇ ತಂಗಿ ನಿಂದ್ರಿ ಯಾವೂರಾರು ನೀವು?

ಕ : ನಾವು ಈ ಊರಾರು ಅಲಮ್ಮಾ ಪರದೇಶದವರು; ಶಿವಲೋಚನಿ ಅದಾರಲ್ಲ-

ಹಿ : ಆಹಾ!

ಕ : ಆ ಮಹಾರಾಣೀ ಊರವರು, ರುದ್ರಾವತಿ ಪಟ್ಣದಲ್ಲಿ ರುದ್ರಸೇಕನ ಮಗಳು ಶಿವಲೋಚನೀ ಗೌಡೇರು ನಾವು.

ಹಿ : ಹೌದೇ?

ಕ : ಆಹಾ ಶಿವಲೋಚನಿ ಮಂಚ ತೂಗೋ ಗೌಡೇರು ಏನು ನೀವು?

ಹಿ : ಹೌದು ಹೌದು.

ಕ : ನಿಲ್ಲಮ್ಮಾ, ನಿಮ್ಮ ತಾಯಿ ಗುಣ ಹ್ಯಂಗ ಐತಿ?

ಹಿ : ನಮ್ಮ ತಾಯಿ ಗುಣ ಕೇಳ್ತೀಯಾ?

ಕ : ಹೌದು.

ಹಿ : ನಮ್ಮ ತಾಯಿ ಗುಣ ಕೇಳಿ ಏನು ಮಾಡ್ತೀಯಮ್ಮಾ ನಮಗೊಂದು ತಾನೊಂದು ಉಣಬೇಕೆಂಬುದಿಲ್ಲ-ಊಟ ಉಪಚಾರದಲ್ಲಿ!-

ಕ : ಎಲ್ಲಾ ಸೌಖ್ಯ ನಡಿಸ್ಯಾಳೆ!

ಹಿ : ಮಹಾರಾಣಿ!

ಕ : ಅಲ್ಲಮ್ಮಾ ಅಂಥ ತಾಯಿ ಫಕ್ಕನ ಸತ್ತಳು ಅಂದ್ರೆ ಹ್ಯಾಂಗ ಮಾಡ್ತೀರಿ? -ಅಂದ್ಲು ಆ ಕೌಸಲ್ಯ.

ಹಿ : ಆ ಕೌಸಲ್ಯ!

ಕ : ಛೀ ಭಷ್ಟರಂಡೆ ಎಂಥ ಮಾತ ಹೇಳ್ತಿಯಲ್ಲೆ! ಅಂಥಾ ಮಾತು ಹೇಳ್ಬ್ಯಾಡಮ್ಮಾ.

ಹಿ : ಸುಖದ ಜಲ್ಮ!

ಕ : ಅಂಥಾ ತಾಯಿ ನಮ್ಮ ಜಗತ್ತಿನಾಗs ಯಾರಿಲ್ಲ!

ಹಿ : ಹೌದೂ.

ಕ : ಅಲ್ಲಮ್ಮಾ ಜ್ವರ ಬರ್ಲಿ, ಚಳಿ ಬರ್ಲಿ, ಜಡ್ಡು ಬರ್ಲಿ, ಆಪತ್ತು ಬರ್ಲಿ, ಅನುವು ಬರ್ಲಿ ಮುಂದೆ ನೋಡಾಕಿ ನಾನೇ- ಅರವತ್ತು ವರ್ಷದ ಮುದುಕಿ! ಊರಾಗೆಲ್ಲಾ ಯಾರಿಗನ್ನ ಏನಾರ ಬಂದ್ರೆ ನೋಡಾಕಿ ಅದೀನಿ. ನಿಮಗೆ ಮಾಹಿತಿ ಇಲ್ಲ; ನಿಮ್ಮ ತಾಯಿ ಮರಣ ಯದರಾಗ ಐತಿ ಕೇಳ್ಕೊಂಡು ಬರ್ರಿ, ಮುಂದೊಂದು ಕಂಟಕ ಐತಿ, ನಾನು ಸಾಯದ್ಹಂಗ ನೋಡ್ಕೊಂತೀನಿ ಅಂದ್ಲು ಆ ಕೌಸಲ್ಯ.

ಹಿ : ಮರಣ!

ಕ : ಏ ತಂಗೀ?

ಹಿ : ಆ.

ಕ : ಒಳ್ಳೇ ಬುದ್ದಿವಂತ್ಲು ಅದಾಳೆ ಈಕಿ-

ಹಿ : ಈ ಮುದಿಕಿ!

ಕ : ನಮ್ಮ ತಾಯಿ ಸುದ್ದಿಯಲ್ಲಾ ಈ ಯಮ್ಮನ ಮುಮ್ದೆ ಹೇಳ್ಬೇಕಮ್ಮಾ; ಅಂದ್ರ ಸಾಯದ್ಹಂಗ ನೋಡಿಕೊಂತಾಳೆ.

ಹಿ : ಸೂಳಿದ್ರೂ ಸೂಳಿ ತಾಯಿ ಇರಬಾರ್ದಂತ ಶಾಸ್ತ್ರ ಐತಿ!

ಕ : ಎಲ್ಲಾ ರಮಿಸಿಬಿಟ್ಲಪ್ಪ. ಗೌಡೇರು ಮಳ್ಳಾಗಿಬಿಟ್ರು! ಕೊಡಾ ನೀರು ತುಂಬಿಕೊಂಡು ಬಂದ್ರು ಮನಿಗೆ; ಶಿವಲೋಚನಮ್ಮ ಕುಂತಿದ್ಲು-ಮಂಚದ ಮ್ಯಾಲೆ; ಶರಣಾರ್ಥೆಮ್ಮಾ.

ಹಿ : ಏನಮ್ಮಾ?

ಕ : (ರಾಗವಾಗಿ) ಯವ್ವಾ-ನಿನಗೊಂದು ಮಾತು ಕೇಳ್ತೀವಿ, ಬಲಗೈ ಭಾಷಿ ಕೊಡಮ್ಮ ಶಿವಲೋಚನಮ್ಮಾ….

ಹಿ : ಯಾವ ಮಾತಮ್ಮಾ? ಏನ್ ಕೇಳ್ತೀರಿ ಕೇಳ್ರಿ, ಕೇಳಿದ್ದ ಕೊಡ್ತೀನಿ.

ಕ : ಇಲ್ಲಮ್ಮ ಭಾಷಿಕೊಂಡು ಅಂದ್ರು ಇಬ್ರೂ ಗೌಡೇರು.

ಹಿ : ಭಾಷಿ ಕೊಟ್ಲು ಶಿವಲೋಚನಮ್ಮ!

ಕ : ನಿನ್ನ ಜಲ್ಮ ಯದ್ರಾಗ ಐತಿ, ನಮ್ಮ ಮುಂದೆ ಹೇಳ್ಬೇಕು-ಅಂದ್ರು ಗೌಡೇರು.

ಹಿ : ಮರಣ!

ಕ : ಮರಣ ಅಂದ ತಕ್ಷಣಕ್ಕೆ ತಾಯಿಗೆ ದಿಕ್ಕೆಟ್ಟಿತು. ಕಣ್ಣಿಗೆ ರವಿ ಬಡದ್ಹಾಂಗ ಆತು!

ಹಿ : ಆಹಾ!

ಕ : ಕತ್ತಲಗವುದು ಕಾರಾಂಧಕಾರಾಗಿ ಎಚ್ಚರದಪ್ಪಂಗ ಆತು-ಅಮ್ಮಗ!

ಹಿ : ಮರಣ!

ಕ : ಮರಣದ ಸುದ್ದಿ ಕೇಳಿಕೊಂಡು ಯಾರನ್ನ ಬಾ ಅಂತ ಊರಾಗ ಹೇಳ್ಯಾರೊ ಅಥವಾ ನಿಮ್ಮ ಮನಃಪೂರಕ ಕೇಳ್ತೀರೋ ಏನು ಗೌಡೇರ್ಯಾ?

ಹಿ : ಇದು ಯಾರು ನಮಿಗೆ ಬೋಧ ಮಾಡಿಲ್ಲಮ್ಮಾ; ಏನೂ ಹೇಳಿಲ್ಲ.

ಕ : ಅಂಥಾ ಹೊತ್ತು ಬಂದ್ರ ಇಲ್ಲೀಂತ; ನಿನ್ನ ಮರಣ ಯದರಾಗ ಐತಿ-ಹೇಳು ರಾಣಿ.

ಹಿ : ಹೇಳಯವ್ವಾ.

ಕ : ಯವ್ವಾ ನನ್ನ ಮರಣ ನಿಮಿಗೆ ಹೇಳ್ತೀನಿ; ಒಬ್ರೂ ಯಾರ ಮುಂದೂ ಹೇಳ್ಬ್ಯಾಡ ನೋಡ್ರಿ ನೀವು.

ಹಿ : ಯಾರ ಮುಂದ ಹೇಳಾದಿಲ್ಲಮ್ಮಾ-ನಾವು ಹೊಟ್ಟೆಯಲ್ಲೆ ಮುಚ್ಚಿಗೊಂತೀವಿ.

ಕ : ಇಲ್ಲಿಗೆ ಎರಡು ಗಾವುದ ದೂರದಲ್ಲಿ ಸಮುದ್ರದಾಗ ಸಜ್ಜಕಾನ ಮೀನಿನ ಮೂಗಿನಾಗ ಗಾಡಿನತ್ತು ಇರೋದೇ ನನ್ನ ಮರಣದ ಮೀನು.

ಹಿ : ಒಳ್ಳೇದು!

ಕ : ಆ ಸಜ್ಜಕಾನ ಮೀನಿಗೆ ಏನ ಮಾಡ್ಬೇಕು, ಅಂದ್ರ ಸಮುದ್ರ ದಂಡಿಗೆ ಹೋಗಿ ಏಳು ಬಂಡಿ ಕಟ್ಗಿ ಹೊಡೆದು ಸುಟ್ಟು ಕಿಚ್ಚು ಮಾಡಿ- ಕಿಚ್ಚಿನಾಗ ಒಂದು ಬಂಡಿ ಲೋಬಾನ ಹಾಕ್ಬೇಕು.

ಹಿ : ಒಳ್ಳೇದು

ಕ : ಒಂದು ಖಂಡುಗದ ಅನ್ನ ಒಯ್ದು ಸಮುದ್ರ ದಂಡಿಗೆ ರಾಶಿ ಹಾಕ್ಬೇಕು. ಅನ್ನದ ವಾಸನಿಗೆ, ಲೋಭಾನದ ವಾಸನಿಗೆ ನೀರಿನಾಗಿಂದ ಮೀನು ಬಾಯಿ ತಕ್ಕೊಂಡು ದಂಡಿಗೆ ಬರ್ತೈತಿ.

ಹಿ : ಆ!

ಕ : ಅದೇ ಕಮಲಾವತಿ ಮೀನು! ಮೀನಿಗೆ ಬಾಣದಿಂದ ಹೊಡದ್ರೆ ಸತ್ತು ಹೋಗತೈತಿ; ಮೀನು ಕಡಿಗೆ ತಗದು ಮೀನಿನ ಹೊಟ್ಟೆ ಬಗದ್ರೆ ಮೀನಿನ ಹೊಟ್ಯಾಗ ಬಂಗಾರದ ಶಿವದಾರ-

ಹಿ : ಶಿವದಾರ ಐತಿ!

ಕ : ಆ ಶಿವದಾರ ತಂದು ನನ್ನ ಕೊಳ್ಳಾಗ ಹಾಕಿದ್ರೆ ಎಂದೆಂದಿಗೂ ನನಗೆ ಮರಣವಿಲ್ಲ.

ಹಿ : ಇಲ್ಲ!

ಕ : ಆ ಶಿವದಾರ ಯಾರನ್ನಾ ಹಾಕ್ಕೊಂಡ್ರ ಆವಾಗ ನನ್ನ ಮರಣ-ಅಂದ್ಲು.

ಹಿ : ಆಹಾ, ಸಾಯ್ತೀನಿ ಅಂದ್ಲು!

ಕ : ಗೌಡೇರು ಕೇಳ್ಕೊಂಡ್ರು, ಸೀದಾ ಕೊಡಾ ತೊಗೊಂಡು ಹೊಂಟ್ರು-ಸೋಮವಾರ ಮುಂಜಾನೆ-ಕೌಸಲ್ಯಮ್ಮಾ.

ಹಿ : ಆ?

ಕ : ನಾವು ಮರಣ ಕೇಳಿ ಬಂದೀವಿ, ನಿನಿಗೆ ಹೇಳ್ತೀವಿ, ನೀನು ನಮ್ಮ ತಾಯಿಗೆ ಏನು ಆಗಧಂಗ ನೋಡ್ಕೊಳ್ಳವ್ವ.

ಹಿ : ಆ

ಕ : (ರಾಗವಾಗಿ) ಬಾವಿ ದಂಡ್ಯಾಗೆಲ್ಲಾ ಕುಂತು ಹೇಳ್ಯಾರಾ……….ಮುಂದೇನಾರಾ ಬಂದ್ರೆ ನೋಡಮ್ಮ ನಮ್ಮ ತಾಯಿಗೆ…….

ಕ : ಗೌಡೇರು ಕೂಡಾ ತುಂಬ್ಕೊಂಡು ಆಕಡಿಕೆ ಹೋಗುತ್ಲೆ ಈಕಡಿಕೆ ಕೌಸಲ್ಯಮ್ಮ ಬಂದು-ಮಗಳೇ ರಂಭಾ

ಹಿ : ಏನಮ್ಮಾ ತಾಯೀ?

ಕ : ಬಾ ಇಲ್ಲಿ.

ಹಿ : ಏನು ಹೇಳವ್ವಾ?

ಕ : ನಿಮ್ಮ ರಾಜ ಎಲ್ಲಿ? ಜಳಕಾ ಮಾಡ್ತಾನೇನು?

ಹಿ : ಹೌದು ಹೌದು!

ಕ : ಜಲ್ದಿ ಶಿವಲೋಚನಳ ಶಿವದಾರ ತರಿಸಿ ನಿನ್ನ ಕೊಳ್ಳಾಗ ಹಾಕ್ಕೊಂಡು ಬಿಡು; ನಿನ್ನ ಸವತಿ ಇವತ್ತು ಸತ್ತು ಹೋಗ್ತಾಳೆ, ಮಣ್ಣುಪಾಲು ಆಗ್ತಾಳೆ! ಎಲ್ಲೆಲ್ಲೂ ರಾಜ ಹೋಗಧಂಗ ಇರ್ತಾನೆ-ನಿನ್ನ ಹತ್ರಾನೆ! ಅಂತಾ ಎಲ್ಲಾ ಹೇಳಿದ್ಲು;

ಹಿ : ಮಗಳ ತೆಲಿ ತುಂಬಿದ್ಲು !

ಕ : ಸವತಿ ಮರಣದ ಶಿವದಾರ ತರಿಸಬೇಕಂತ್ಹೇಳಿ ತೆಲಿಗೆ ಸೆರಗಾಕಟ್ಟಿಕೊಂಡು ಬಿಟ್ಲಪಾ ರಂಭಾವತಿ; ಸೀರಿಹರಕೊಂಡ್ಲು ಕುಬ್ಸಹರ್ಕೊಂಡು ಮಂಚದ ಮೇಲೆ ಮಲ್ಕೊಂಡು ಉಳ್ಯಾಡತಾಳ! ರಾಜ ಜಳಕ ಮಾಡ್ಕೊಂಡು ರಾಜಡ್ರಸ್ ಹಾಕ್ಕೊಂಡು ಬಂದು ನೋಡ್ತಾನೆ-ಮಡದೀ!

ಹಿ : ಏನ್ರೀ ನನ್ನ ರಾಜಾ?

ಕ : (ರಾಗವಾಗಿ) ಮಧುರವಾಣಿ ನಿನ್ನ ತುಟಿಗೆ ಹಲ್ಲಿನ ಗಾಯ……..
ಏನೇ ಮಡದಿ ರಂಭಾ ಕೈಬಿಡಬ್ಯಾಡಾ……….
ಹಿಂಗ್ಯಾಕ ಮಲಗಿದಿ ಮಡದಿ ಎದ್ದೇಳೂ………..

ಹಿ : (ರಾಗವಾಗಿ) ಅಯ್ಯೋ ಹೊಟ್ಟಿ ಶೂಲೀ……..ಹೊಟ್ಟಿ ಶೂಲೀ……..

ಕ : ಮಡದೀ ಯಾಕ ಬಂತು ನಿನಗ ಹೊಟ್ಟಿಶೂಲಿ? ಏನು ಮಾಡಿದ್ರೆ ಅದು ವಾಸಿ ಆಗತೈತಿ? ಹೇಳು; ಲಗೂನ ಮಾಡಿ ಹೇಳು

ಹಿ : ಅಯ್ಯೋ! ನಿಮ್ಮ ರಂಭಾ ಸಾಯ್ತಾಳೆ ಕಾಪಾಡ್ರಿ ನನ್ನ ಧೊರೀ….ಅಯ್ಯೋ….

ಕ : ಮಡದೀ, ನಾನೀಗೇನು ಮಾಡ್ಲಿ ಹೇಳು ರಂಭಾ? ನನ್ನ ಪ್ರಾಣ ಕೊಡ್ತೇನು ಬೇಕಾದ್ರ.

ಹಿ : ಧೊರೀ… ನನ್ನ ಧೊರೀ….ನನಗ ಆ ಶಿವದಾರ ತರಿಸಿ ಕೊಳ್ಳಾಗ ಮದ್ಲು ಹಾಕಿಸ್ರೀ ನನಗೆಂದೂ ಸಾವಿಲ್ಲಾ….ಧೊರೀ….ರಾಜಾ…..

ಕ : ಅದೆಲ್ಲಿ ಸಿಗತೈತಿ ರಂಭಾ?

ಹಿ : ಯಾವ ಶೆಟ್ಟಿ ಅಂಗಡ್ಯಾಗ? ಯಾವ ಸಾಬ್ರ ಅಂಗಡ್ಯಾಗ? ಹೇಳು ಈಗಿಂದೀಗ ನಾನೇ ತಂದು ಕೊಟ್ಟೇನು?

ಕ : ನನ್ನ ರಾಜಾ! ಇಲ್ಲಿ ಎಲ್ಲೀ ಸಿಗೋದಿಲ್ರಿ-ಅದೊಂದು ಜಾಗಾ ಬಿಟ್ಟು!

ಹಿ : ಎಲ್ಲಿ? ಯಾ ಜಾಗದಾಗ ಸಿಕ್ಕೀತು ನನ ರಂಭಾ?

ಕ : ಇಲ್ಲಿಂದ ಎರಡು ಗಾವುದ ದೂರದಾಗ ಇರೋ ಸಮುದ್ರದಾಗ ಸಜ್ಜಕಾನ ಮೀನು ಐತಿ; ಅದರ ಹೊಟ್ಯಾಗಿರೋ ಶಿವದಾರ ತಂದು ನನ್ನ ಕೊಳ್ಳಾಗ ಹಾಕ್ರಿ; ನನಿಗೆ ಎಂದೆಂದೂ ಮರಣಂಬೋದು ಇಲ್ಲ.

ಹಿ : ರಂಭಾವತಿ ಆ ಶಿವದಾರ ತರೋದರ ಬಗಿ ಎಲ್ಲಾ ಹೇಳಿದ್ಲು ಮಳ್ಳುರಾಜಗ.

ಕ : ಇಷ್ಟೇ ಹೌದಲ್ಲೋ! ಇನ್ನೊಂದು ತಾಸಿನೊಳಗ ತರ್ತೀನಿ ಅಂದ ನೀಲಕುಮಾರ.

ಹಿ : ಆ.

ಕ : ಏಳು ಮಂದಿ ಆಳು ಮಕ್ಕಳಿಗೆ ಹೇಳಿ ಏಳು ಬಂಡಿ ಕಟ್ಗಿ ಹೇರಿಸಿಬಿಟ್ಟ-ಸಮುದ್ರ ದಂಡಿಗೆ; ಒಂದು ಖಂಡುಗದ ಅನ್ನ ತಯಾರ ಮಾಡಿಸಿ ಸಮುದ್ರ ದಂಡಿಗೆ ಅನ್ನದ ರಾಶಿ ಹಾಕಿ ಬಿಟ್ಟ. ಏಳು ಬಂಡಿ ಕಟ್ಗಿ ಹೊಡಸಿ ಕಿಚ್ಚಿನಾಗ ಒಂದು ಬಂಡಿ ಲೋಬಾನ ಒಗೆದ.

ಹಿ : ಹೌದು.

ಕ : ನೀಲಕುಮಾರ ಅಂಬು ಬಾಣ ತೊಗೊಂಡು ಕಾದ್ಕೊಂತ ಕುಂತಾನ, ನೀರಿನಾಗ ಮೀನು ಎಲೈತಿ ಬರ್ಲಿ ನೋಡೋನು! ನಡೋ ಸಮುದ್ರದಾಗ ಐತಿ ಮೀನಿನ ಮೂಗಿನಾಗ ಗಾಡಿನತ್ತು!

ಹಿ : ಥಳಕ್, ಥಳಕ್ ಹೊಳಿತೈತಿ!

ಕ : ಅನ್ನದ ವಾಸಿನಿಗೆ, ಲೋಬಾನದ ವಾಸಿನಿಗೆ ಮೀನು ಬಾಯಿ ತಕ್ಕೊಂಡು ಬರ್ತೈತಿ-ಸಮುದ್ರ ದಂಡಿಗೆ; ಬಂದು ಅನ್ನದ ವಾಸಿನಿಗೆ ಬಾಯಿ ತಕ್ಕೊಂಡು ನಿಂದ್ರಬೇಕಾರೆ ನೋಡಿದ ನೀಲಕುಮಾರ; ಅಂಬು ಬಾಣ ಬಿಟ್ಟ:

ಹಿ : ಮೀನು ಗಪ್ಪ ಅಂತ ಬಿತ್ತು ದಂಡಿಗೆ!

ಕ : ಮೀನು ಕಡಿಗೆ ತಗದು ಹೊಟ್ಟಿ ಬಗದುಬಿಟ್ಟ!

ಹಿ : ಆಹಾ! ಶಿವದಾರ, ಬಂಗಾರದ್ದು !

ಕ : ಶಿವದಾರದಲ್ಲಿ ಶಿವದಾರ! ಇಂಥಾದು ಯಾವಲ್ಲೂ ಇಲ್ಲ! ಜಗತ್ತಿನಲ್ಲೇ ಇಲ್ಲ!

ಹಿ : ಇಲ್ಲೇ ಇಲ್ಲ.

ಕ : ಇದು ಬಂಗಾರದ ಶಿವದಾರ ಶಿವನ ಕೊಳ್ಳಾಗಿಂದು! ಚಂದಾಗಿ ತೊಳದು ಜೇಬಿನಾಗ ಇಟ್ಕೊಂಡು ಒಂದೇ ಒಂದು ಅರ್ಧ ಗಂಟ್ಯಾಗ (ರಾಗವಾಗಿ) ಬಮ್ದುಬಿಟ್ಟಾ………

ಹಿ : ಆಗ ಎರಡು ಗಂಟಿ ಟೈಮು.

ಕ : ರಂಭಾವತಿ, ತೊಗೋ ಶಿವದಾರ;

ಹಿ : ಇದೋ ತಂದೇನಿ ನೋಡು

ಕ : ಗ್ವಾಡಿಗೆ ಬೆಳ್ಳಿಗೂಟ ಇತ್ತು; ಹೋಗಿ ಬೆಳ್ಳಿಗೂಟಕ್ಕೆ ಶಿವದಾರ ಹಾಕಿಬಿಟ್ಟ.

ಹಿ : ಹೌದು.

ಕ : ಜಳಕಾ ಮಾಡಾಕ ಕುತ್ಗೊಂಡುಬಿಟ್ಲು ರಂಭಾವತಿ. ಜಳಕಾ ಮಾಡ್ಕೊಂಡು ಶಿವದಾರ ಹಾಕ್ಕೋಬೇಕು ಅಂತ ಇಕೀದು!
(ರಾಗವಾಗಿ) ಶಿವಲೋಚನಮ್ಮಾ………ಈಶ್ವರನ ಪೂಜಾ ಮುಗಿಸ್ಯಾಳೆ………ತನ್ನ ಗಂಡನ ಧ್ಯಾನಾ ಮುಗಿಸ್ಯಾಳೆ, ಅತ್ತಿ ಮಾವನ ಪಾದಸೇವೆ ಮಾಡಿ ಊಟ ಮಾಡ್ಕೊಂಡು ದಂಡಿಗೆಲ್ಲಾ ಕರ್ಕೊಂಡು ಮಾತಾಡ್ಕೊಂತ ಎಲ್ಲಾ ಸಭಾಮಾಡಿ ದಂಡಿಗೆಲ್ಲಾ ಸಂಬಳ ಕೊಟ್ಟಿಗಂತ ಕುಂತಾಳೆ!

ಹಿ : ಹೌದು

ಕ : ಆಗ ಎರಡು ಗಂಟೆ ಟೈಮು; ರಂಭಾವತಿ ಜಳಕ ಮಾಡ್ಕೊಂಡು ಶಿವದಾರ ಹಾಕ್ಕೊಂಡು ಬಿಟ್ಲಪ್ಪ!

ಹಿ : ಆ.

ಕ : ಸಭಾದಾಗ ಕುಂತು ಎಲ್ಲಾರಿಗೂ ಹೇಳ್ತಾ ಕೇಳ್ತಾ ಕುಂತಿದ್ದ ಶಿವಲೋಚನಮ್ಮ ಮೂರು ಮಾರುದ್ದ ದೂರ ಪುಟುದು ಅಂಗಾತ ಬಿದ್ಲು !

|| ಪದ ||

ರಾಮಾ ರಾಮಾ ಅಂತಾ ಪ್ರಾಣ ಬಿಟ್ಟಾಳ್ರಿ……..ಹರಯನ್ನ ಮಾದೇವ
ಮೂರುಗಂಟಿ ಟೈಮು ಜಲ್ಮ ಹೋಗೈತಿ……..ಹರಯನ್ನ ಮಾದೇವ
ಶಿವಲೋಚನಾ ಅಯ್ಯೋ ಮಗಳೇ….ಸೊಸೀ….ಹರಯನ್ನ ಮಾದೇವ
ಗಂಗಾಸಾಗ್ರ ಅತ್ತಿಮಾವ ದಂಡೂ…….ಹರಯನ್ನ ಮಾದೇವ
ಅಯ್ಯೋ ಸೊಸೀ ಜಲ್ಮಹೋತ್ರೋ………ಹರಯನ್ನ ಮಾದೇವ
ಅವ್ವಾ ಕೈ ಬಿಟ್ಟೇನೇ ತಾಯೀ ತಾಯೀ…….ಹರಯನ್ನ ಮಾದೇವ
ಮಾತಾಡೇ ನನ್ನ ಸೊಸೀ ಶಿವಲೋಚನಾ……..ಹರಯನ್ನ ಮಾದೇವ
ಜ್ವರಇಲ್ಲ ಚಳಿಇಲ್ಲ ಮಂತ್ರೀ ಸೊಸಿ ಹೋದ್ಲು………ಹರಯನ್ನ ಮಾದೇವ
ಕೈಯ ಬಿಟ್ಟು ಹೋದ್ಯಾ ಮಗಳಾ………ಹರಯನ್ನ ಮಾದೇವ
ಮಾತಾಡೇ ನನ್ನ ಸೊಸಿಯೇ………..ಹರಯನ್ನ ಮಾದೇವ
ಸುಳ್ಳು ಕಾಗದ ಬರ್ದುದ್ದು ನಾವೇ……….ಹರಯನ್ನ ಮಾದೇವ
ಲಗ್ನ ಮಾಡ್ಕೊಂಡು ಬಂದ್ವೆವ್ವಾ………..ಹರಯನ್ನ ಮಾದೇವ
ಲಗ್ನ ಮಾಡಿದ್ರೆ ಎಂಥದಾಯ್ತೇ!…………ಹರಯನ್ನ ಮಾದೇವ
ಸೊಸಿ ಮುಖ ಬಂಗಾರ ಐತೆ ತಾಯೀ……….ಹರಯನ್ನ ಮಾದೇವ
ನಡೋ ಮನಿಯಾಗ ಕಂಬ ಮುರಿತ್ರೆ!………..ಹರಯನ್ನ ಮಾದೇವ
ಮಾವಅತ್ತಿ ಬಾಚಿಬಿದ್ದಾರೆ…….ಹರಯನ್ನ ಮಾದೇವ
ಸೊಸಿ ನೋಡಾಕು ಅಂತಾರೆಯವ್ವಾ ಮಾತಾಡು………ಹರಯನ್ನ ಮಾದೇವ
ಮುವ್ವತ್ತು ಮೂರು ಗೌಡೇರೆ ತಾಯೀ……..ಹರಯನ್ನ ಮಾದೇವ
ನಮಗ ಪರದೇಶಿ ಮಾಡಿ ಹೋದ್ಯಾ……….ಹರಯನ್ನ ಮಾದೇವ
ಬಾ ಬಾರೋ ಎನ್ನ ಮಗನೆ………ಹರಯನ್ನ ಮಾದೇವ
ಶಿವಲೋಚನಮ್ಮತಾಯೀ……..ಹರಯನ್ನ ಮಾದೇವ
ತಾಯಿ ಮರಣ ಹೊಂದ್ಯಾಳೇ………..ಹರಯನ್ನ ಮಾದೇವ
ಅತ್ತಿಮಾವ ನೋಡ್ತಾರೆ………ಹರಯನ್ನ ಮಾದೇವ
ಹೋದೇನೆ ನನ್ನ ಸೊಸೀ………ಹರಯನ್ನ ಮಾದೇವ
ನೋಡಿ ದುಃಖ ಮಾಡುವಾಗಾ……..ಹರಯನ್ನ ಮಾದೇವ
ಆಹಾ ದಂಡು ಅಳುವಾಗಾ….ಹರಯನ್ನ ಮಾದೇವ
ಅತ್ತಿ ಮಾವಾ ಬಂದು ಬಳಗಾ….ಹರಯನ್ನ ಮಾದೇವ