ಕ : ನಮ್ಮ ತಂದಿ ಹೆಸರು ತಗಿತೈತಿ ತಾಯಿ ಗಂಗಾಸಾಗ್ರ ಅಂತೈತಿ, ಮಂತ್ರಿ ಹೆಸರ ತಗಿತೈತಿ, ಸಿಬ್ಬಂದಿ ಹೆಸರ ತಗೀತೈತಿ, ಗೌಡೇರ ಹೆಸರ ತಗಿತೈತಿ, ತಾಯಿ-ತಂದಿ ಇಲ್ಲ ಅಂತೈತಿ, ಬಂಧು ಬಳಗ ಎರವಾಗೈತಿ ಅನ್ನತೈತಿ! (ರಾಗ) ನನ್ನ ಹೆಸರ ತಗೀತ ಐತಲ್ಲೊ ಈ ಗಚ್ಚಿನ ಕಟ್ಯಾಗೆ…..ನೀಲಕುಮಾರಾ ನನ್ನ ರಾಜಾ, ಅಗಲಿ ಹೋದ್ಯಾ ನನ್ನ ಬಾಸಿಂಗ ಜೋಡು-ಅಂತೈತಿ!
ಹಿ : ಹೌದು.
ಕ : ಇದೇನು-ನನಗೆ ತಿಳಿವಲ್ಲದಪಾ!
ಹಿ : ಆಹಾ.
ಕ : (ರಾಗ) ಗಚ್ಚಿನ ಕಟ್ಯಾಗ ದೊಡ್ಡ ದೆವ್ವ ಐತಲೇ ತಮ್ಮಾ! ಇಪ್ಪತ್ತೊಂದು ದಿವಸ ನಾನು ಹೂವು ಹರಿಯಾಕ ಬರೋದೈತಿ-ಈ ವನಾಂತರಕ್ಕೆ. ಒಂದು ದಿವಸೆಲ್ಲ ಒಂದು ದಿವಸ ನನಗೆ ನೋಡ್ತೈತೆ ನನ್ನ ಗೋಣ ಮುರಿತೈತಿ-
ಹಿ : ದೆವ್ವ!
ಕ : ಹಿಂಗ ಮಾಡ್ಬಾರ್ದು ನಾಳೆ ಸಿಪಾಯಿಗಳ್ನ ಕರಿಸಿ ಗಚ್ಚಿನ ಕಟ್ಟಿ ಕಿತ್ತಿಸಬೇಕು ಎಲ್ಲಾ.
ಹಿ : ಕೀಳಿಸಿದ್ರೆ?
ಕ : ಕಿತ್ತಿಸಿಬಿಟ್ರೆ ಅದು ಬೈಲಿಗೆ ಬೀಳತೈತಿ!
ಹಿ : ಹೌದು!
ಕ : (ರಾಗ) ನನ್ನ ಕಣ್ಣು ತುಂಬಾ ನೋಡ್ತೈತೆ. ನನ್ನ ಗೋಣು ಮುರಿತೈತೋ ದೆವ್ವಾ….
ಹಿ : ಹೌದೂ.
ಕ : ಹಿಂಗ ಮಾಡ್ಬಾರದು.
ಹಿ : ಮತ್ತೆ ಹ್ಯಾಗೆ?
ಕ : ಮ್ಯಾಲೆ ನಮ್ಮ ಅಜ್ಜ ಅವರು ಮಾಡಿದ ರತನಾವತಿ ಕೆರಿ ಐತಿ.
ಹಿ : ಓ ಕೆರೆ!
ಕ : ಆ ಕೆರಿಯಾಗಳ ನೀರು ಬಂದು ಈ ಗಚ್ಚಿನ ಕಟ್ಟಿಗೆ ಬಡಿಯ್ಹಂಗ ಮಾಡ್ಬೇಕು.
ಹಿ : ಮಾಡಿದ್ರೆ?
ಕ : ನೀರು ಬಡದು ಬಡದು ಕಟ್ಟಿ ಕಿತ್ತುಗೊಂಡು ಹೋಗ್ಬೇಕು.
ಹಿ : ನೀರಿನಗುಂಟಾ.
ಕ : ಗಚ್ಚಿನಕಟ್ಟಿ ನೀರಿನಗುಂಟಾ ಕಿತ್ಕೊಂಡು ಬೈಲಿಗೆ ಬಿದ್ದಾಗ ನೀರಿನ ಜತಿಗೇ ದೆವ್ವ ತೇಲಿಕೊಂಡು ಹೋಗಿ ಬಿಡ್ತೈತಿ.
ಹಿ : ಹೌದು ಹೌದು!
ಕ : ನನ್ನ ಮೈಮೇಲಿನ ಪೀಡಿ ಹೋಗ್ತೈತಿ.
ಹಿ : ಆ.
ಕ : ಇಷ್ಟ ಕೆಲಸ ಮಾಡ್ಬೇಕು ಅಂದ ರಾಜ.
ಹಿ : ನಾಲ್ಕು ಗಂಟೆಗೆ ಮಳಿ ಬೈಲಾತು.
ಕ : ರಂಭಾವತಿ ಮನಿಗೆ ಹೋಗ್ಬೇಕು ಅಂತ ಹೋಗೋ ಟೈಮಿನಾಗs ಆಕಿ ರಂಭಾವತಿ ಜಳಕ ಮಾಡಿಕೊಂಡು, ಬೆಳ್ಳಿಗೂಟಕ ಇದ್ದಂತ ಶಿವದಾರ ಕೊಳ್ಳಾಗ ಹಾಕೊಂಡ್ಲು!
ಹಿ : ಆಹಾ!
ಕ : ಮಲ್ಕೊಂಡೇ ತಾಯಿ ಪ್ರಾಣ ಬಿಟ್ಲು!
ಹಿ : ಬೆಳ್ಳಿ ಪೆಟಿಗ್ಯಾಗ ಜಲ್ಮ ಬಿಟ್ಲು!
ಕ : ರಾಜ ಬಂದು ನಿಂತ್ಕೊಂಡು ಮುಂದೆ! ಈಕಿ ಗಾಯನ ಮಾಡ್ಕೊಂತ ನುಡಿಯುತ್ತಾ, ನಾಚುತ್ತಾ, ನುಡಿಯುತ್ತಾ, ಕೆಮ್ಮುತ್ತಾ ಓರಿಗಣ್ಣಿಲಿ ನೋಡ್ಕೊಂತ ಆರ್ತಿ ಬೆಳಗಾಕ ಬಂದ್ಲು.
|| ಪದ ||
ಆರುತಿ ಬೆಳಗಾನು ಬಾರೇ ಸಖೀ
ಮೂರುತಿ ತಾಯಿ ಗುರುರಾಯರಿಗೆ
ಬಂದಿತು ವರವಿದು ಮಂಗಳವಾಗಲಿ
ಸರ್ಪಭೂಷಣ ಜಯಲೋಲಗೆ || ೧ ||
ಆರುತಿ ಬೆಳಗಾನು ಬಾರೆ ಸಖೀ….
ಮಾನ್ಯತಿ ಮಾನ್ಯಗೆ ಜಯ ತೋರಿದ ಶೀಲಗೆ
ಖಂಡಿತ ಸುಗಣಾ ಸುಗುಣಾಲೋಲಗೆ
ದೇಶ ಶಿಶುನಾಳ ವಾಸುಳ್ಳ
ಚಿಗಟೇರಿ ಚನವೀರ ಕೃಪಾಪಾದವ
ಪೂಜಿಸಿ ಆರತಿ ಬೆಳಗಾನು ಬಾರೆ ಸಖೀ || ೨ ||
ಕ : ಆನಂದದಿಂದ, ಪ್ರೀತಿಯಿಂದ, ಆರತಿ ಬೆಳಗಿ ಒಳಗ ಕರ್ಕೊಂಡು ಹೋದ್ಲು.
ಹಿ : ಆಹಾ.
ಕ : ರಾಜಕುಮಾರ ಜಳಕ ಮಾಡಿಕೊಂಡು, ಈಶ್ವರನ ಪೂಜೆ ಮುಗಿಸಿಕೊಂಡು ವಡ್ರ ಕಾಯಿಕೀ ಮಂದಿ ಕರೆಸಿದ.
ಹಿ : ಆ.
ಕ : ಕೆರಿ ಅಂಗಳದಾಗಿನ ಮರಗುಳೆಲ್ಲ ಕಡದು, ಕಲ್ಲು ದುಂಡಿಯಲ್ಲಾ ಬೈಲಿಗ್ಹಾಕಿ, ಗರಸು ಮಣ್ಣು ಕಡದು, ಏರಿಗೆ ಹೊತ್ತಾಕಿ, ಕೆರಿಯಾಗಳ ನೀರು ಸಮಾಧಿ ಗಚ್ಚಿನ ಕಟ್ಟಿಗೆ ಬರಂಗ ಮಾಡ್ಬೇಕು.
ಹಿ : ಆ ಕಟ್ಟಿಗೆ ನೀರು ಬರಂಗ ಮಾಡ್ಬೇಕು!
ಕ : ಐದು ದಿವಸದಾಗ ಆ ಕೆರಿ ಕೆಲಸ ಮುಗಿಸಿ ಬಂದ ವಡ್ರು ಕಾಯಿಕೀ ಮಂದಿಗೆ ಬಹುಮಾನ ಮಾಡಿ ಅವರಿಗೆ ಕೊಟ್ಟು ಕಳಿಸಿದ.
ಹಿ : ಹೌದು.
ಕ : ಉತ್ತರಿ ಮಳಿ ಕೊನೇದು ಊರಾಕ ಸುರೀತೈತಿ-ದಬ್ಬಗುಟ್ಟಿ!
ಹಿ : ಎಲ್ಲಿತ್ತಪ್ಪ ಅಡಿವ್ಯಾಗ ಮಳೆ!
ಕ : ಅಲೇಲೆಲೆ ವಿಚಿತ್ರವಾದ ಜೋರಾದ ಮಳೀ! ಒಳ್ಳೆ ಸವರಾತ್ರಿ; ಕೆರಿ ತುಂಬಿ ತುಳುಕಾಡೇತಿ!
ಹಿ : ಕೆರಿ ಕೋಡಿ ಬಿತ್ತು ನೋಡಪ!
ಕ : ಕೆರಿ ಕೋಡ್ಯಾಗಳ ನೀರು ಕೋಡಿನ ಹೊಡದು ಆನಿ ಗಡತರ ನೀರು ಬರ್ತಾ ಐತಿ ವನಂತರಕ್ಕೆ!
ಹಿ : ನಗುತಾ ಐತಿ ವನಂತರಕ್ಕೆ!
ಕ : ಸೀದಾ ನೀರು ಗಚ್ಚಿನ ಕಟ್ಟೆಗೆ ಒದೀತು. ನೀರು ಬಡದೂ ಬಡದೂ….ಕಟ್ಟಿ ಕದಲಿ ಹೊಯ್ತು!
ಹಿ : ಹೋಯ್ತು, ದಿಕ್ಕಾಪಾಲಾಯ್ತು!
ಕ : ದಿಕ್ಕಿಗೊಂದು ಕಲ್ಲು ಬಿದ್ದಾಗ, ಭೂಮಿ ಕೊರೆ+ಬಿದ್ದಾಗ, ಬೆಳ್ಳಿ ದಬಾಸ್ ಬಿಚ್ಚಿ ಬಿಟ್ಟು ಬೆಳ್ಳಿ ಪೆಟಗಿ ತುಂಬಾ ನೀರಾಯ್ತು!
ಹಿ : ಆಹಾ!
ಕ : ಬೆಳ್ಳಿ ಪೆಟ್ಟಿಗಿ ತುಂಬಾ ನೀರಾಯ್ತು-
ಹಿ : ಆಹಾ!
ಕ : ಬೆಳ್ಳಿ ಪೆಟ್ಟಿಗಿ ಯಾವಾಗ ನೀರು ತುಂಬಿತು-ಈಜುಗುಂಬಳಕಾಯಿ ಬುಲ್ಡಿ ಎದ್ದಂಗ ತಾಯಿ ಶ್ರಮ ಎದ್ದು ಬಿಡ್ತು!
ಹಿ : ಶ್ರಮ ಮೇಲಾಯ್ತು!
ಕ : ಒಳ್ಳೆ ಸವರಾತ್ರಿ! ಆ ಮರಕ್ಕೆ ಬಡದು; ಈ ಮರಕ್ಕೆ ಬಡದು, (ರಾಗ) ಬಾಳಿ ಗಿಡಕ್ಕೆ ಬಡದು, ತೆಂಗಿನ ಮರಕ್ಕೆ ಬಡದು, ಹೂವಿನ ಗಿಡಕ್ಕೆ ಬಡದು
|| ಪದ ||
ತಾಯಿ ಪೀತಾಂಬ್ರ ಉಚ್ಚೇತಯ್ಯ ಸೀರಿ………ಹರಯನ್ನ ಮಾದೇವಾ
ಮದುವಿ ಪಿತಾಂಬ್ರ ಬಿಚ್ಚೀ ಬಿಚ್ಚೀ……….ಹರಯನ್ನ ಮಾದೇವಾ
ಮುತ್ತು ರತ್ನ ಸೂರಿ ಆಗ್ಯಾವ, ಆಗ್ಯಾವಾ………ಹರಯನ್ನ ಮಾದೇವಾ
ತಾಯಿ ದಂಡಿ ಹೋಗಿ ಹೋಗೀ………ಹರಯನ್ನ ಮಾದೇವಾ
ಬಾಳಿ ಗಿಡದಾಗ ಸಿಕ್ಕೊಂಡೈತೊ ಐತೋ…………ಹರಯನ್ನ ಮಾದೇವಾ
ತಲಿಮ್ಯಾಲಿನ ಮುತ್ತಿನದಂಡಿ………..ಹರಯನ್ನ ಮಾದೇವಾ
ಹೂವಿನ ಗಿಡದಾಗ ಬಿದ್ದೈತಿ………..ಹರಯನ್ನ ಮಾದೇವಾ
ಕೈಯಾಗಿನ ಕಂಕಣ ಉಚ್ಚಾತೆಯ್ಯಾ……..ಓನಮಾ ಶಿವಾಯ
ನಿಂಬಿ ಗಿಡದಾಗ ಬಿದ್ದೈತಿ……….ಓನಮಾ ಶಿವಾಯ
ತಾಯಿ ನೋಡ್ರಿ ಎಂಥಾ ಒಳ್ಳೇವಳೂ………ಓನಮಾ ಶಿವಾಯ
ಮಲ್ಲಿಗೆ ಹೂವ ತೇಲಿದ್ಹಾಂಗ ಶ್ರಮಾ………ಓನಮಾ ಶಿವಾಯ
ತಾಯಿ ಉಟ್ಟ ಮಾರ್ಗದಲ್ಲೇ………ಓನಮಾ ಶಿವಾಯ
ತಾಯಿ ಹೊಟ್ಟೀಲಿ ದಿಗಂಬ್ರ ಹುಟ್ಟಿದ್ಹಾಂಗ……….ಓನಮಾ ಶಿವಾಯ
ನೀರಗುಂಟ ನಡುದಾಳ ಶ್ರಮಾ………..ಓನಮಾ ಶಿವಾಯ
ಬಂದ ಬಂದಾಗ ಹೋಗ್ತಾಳಾ……….ಓನಮಾ ಶಿವಾಯ
ಕ : ಪೀತಾಂಬ್ರ ತೆಂಗಿನ ಮರಕ್ಕ ಸುತ್ಕೊಂಡು, ಉಟ್ಟಮಾರ್ಗಾದ್ಳು. ಮುತ್ತು ರತ್ನ ಸೂರಿ ಆಗ್ಯಾವ ದಂಡಿ ಬಾಳಿ ಸುಳಿಯಾಗ; ಮುತ್ತಿನ ದಂಡಿ ಹೂವಿನ ಗಿಡದಾಗ; ಮುತ್ತಿನ ಕಂಕಣ ನಿಂಬಿಗಿಡದಾಗ, ಹಿಂಗ ಅರವತ್ತಾರು ವಸ್ತಾ ಗಿಡಕ್ಕೊಂದು ಮರಕ್ಕೊಂದು ಸಿಕ್ಕೊಂಡಾವ!
ಹಿ : ಹೌದು!
ಕ : ಉಟ್ಟು ಮಾರ್ಗದಿಂದ ನೀರಿನ ಗುಂಟ ಒಂದು ಫರ್ಲಾಂಗು ಎರಡು ಫರ್ಲಾಂಗು ಅರ್ಧಮೈಲು ಬರೋದರಾಗ ಅಲ್ಲಿ ಹಳ್ಳದ ದಂಡಿಗೆ ಯಾವ ದೇವರ ಗುಡಿ ಐತ್ರಿ?
ಹಿ : ಅಂಬಾದೇವಿ ಗುಡಿ!
ಕ : ಅಂಬಾದೇವಿ ಗುಡಿ; ಮೊದಲಿನ ಯಜಮಾನ್ರುದು ಮ್ಯಾಲೆ ಕೆರಿ ಐತಿ, ಕೆರಿಯಾನ ನೀರು ಬಂದು ಗ್ವಾಡಿಗೆ ಬಡದ್ರೆ, ಗ್ವಾಡಿ ಕೆಟ್ಹೋದಿತು ಅಂತ ಗ್ವಾಡಿ ಮಗ್ಗಲಿಗೆ ಒಂದು ಆನಿ ಎತ್ತರ ಬಂಡಿ ನಿಲ್ಲಿಸ್ಯಾರ-
ಹಿ : ಗುಡಿ ಗ್ವಾಡಿಗೇ!
ಕ : ನೀರು ಬಂದು ನೀರು ಬಂದು ಬಂಡಿಗೆ ಬಡದು ಆಕಡಿ ನೀರು ಆಕಡಿ, ಈಕಡಿ ನೀರು ಈಕಡಿ-
ಹಿ : ಹೌದು ಹೋಳಾಗತೈತಿ!
ಕ : ಗುಡಿಗೆ ದೇಖರೇಕಿ ಇಲ್ಲ, ಒಳಗ ಪೌಳಿಲ್ಲ, ಅಂಬಾದೇವಿ ಗುಡಿಗೆ ಜನ ಬರಾದು ಹೋಗಾದು ಇಲ್ಲ.
ಹಿ : ಪೂಜಾರಿನೂ ಇಲ್ಲ.
ಕ : ಶ್ರಮಾ ತೇಲಿಕಂತ, ತೇಲಿಕಂತಾ ತಾಯಿ ಉಟ್ಟ ಮಾರ್ಗದೇಶಿಯಿಂದ ತೇಲಿಬಂತು!
ಹಿ : ಅದೋ ಬರ್ತಾ ಐತಿ!
ಕ : ಸೂರ್ಯ ಚಂದ್ರಾಮನ ಪ್ರಕಾಶದಂತೆ ನಿಗಿನಿಗಿ ಹೊಳಿತ ದಿಗಂಬರ ರೂಪದಿಂದ ಶ್ರಮ ಬಂದು-
ಹಿ : ಅಂಬಾದೇವಿ ಕೃಪ!
ಕ : ಭಗವಂತನ ಶಾಪ! ಶಿವಲೋಚನಾ ತಾಯೀ ಶ್ರಮ ಹೋಗಿ ಗುಡಿಯಾಗ ಬಿತ್ತಪ್ಪ ಒಳಗ ಹೋಗಿ!
ಹಿ : ಓಹೋ!
ಕ : ಆ ಗುಡಿಗೆಲ್ಲಾ ಬೆಂಕಿ ಹತ್ತಿದಂಗಾತು-
ಹಿ : ಆ ಯಮ್ಮನ ಪ್ರಕಾಶದಾಗ!
ಕ : ಬೋರ್ ಅಂತೈತಿ ನೀರು. ಇಲ್ಲಿ ನೀಲಕುಮಾರ ರಂಭಾವತಿ ಮನಿಯಾಗ ಮಂಚದ ಮ್ಯಾಲೆ ಮಲ್ಕೊಂಡೇ ಕೇಳ್ತಾನೆ-ಏನು ಇದು?
(ರಾಗ) ದೆವ್ವ ಏನು ಹೋಯ್ತೋ ಐತೋ………
ಮುಂಜಾನೆ ಹೋಗಿ ನೋಡ್ಬೇಕು ಅಂತ್ಹೇಳಿ ಬೆಳಗಾ ಮುಂಜಾನೆ ಕುದ್ರಿ ಹತ್ಕೊಂಡು ಏರಿ ಮೇಲೆ ಬಂದು ನೋಡ್ತಾನೆ. ಒಂದು ಗುಬ್ಬಿ ಕುಡದೇನೆಂದರೆ ನೀರಿಲ್ಲ ಕೆರಿಯಾಗ! ವನಾಂತರದಾಗ ಬಂದು ನೋಡ್ತಾನೆ- ದಿಕ್ಕಿಗೊಂದು ಕಟ್ಟೀ ಕಲ್ಲು ಬಿದ್ದಾವ!
ಹಿ : ಆ ಕಟ್ಟಿ ಸುಳುವಿಲ್ಲ ಬಿಡಪ್ಪ!
ಕ : ಹೋಯ್ತು ದೆವ್ವಾ! ಹೋಗಿ ಬಿಡ್ತು ನೀರಾಗ! ನನ್ನ ಮೈ ಮ್ಯಾಲಿನ ಪೀಡಿ ಹೋಯ್ತು-
ಹಿ : ಅಂದುಕೊಂಡ ರಾಜಕುಮಾರ!
ಕ : ತೆಂಗಿನ ಮರದಾಗ ನೋಡ್ತಾನೆ ಫಳಕ್ಕ ಫಳಕ್ಕಂತ ಹೊಳಿತೈತಿ-ಪಿತಾಂಬ್ರ ಸೀರಿ ಸೆರಗಾ! ಹೇ ಇದು ಯಾರ ಪಿತಾಂಬ್ರ ಇದು? ಹಿ :ಏನು ಸೀರಿ ಇದು!
ಕ : ಯಾವ ದೇವಿದೋ! ಅಂಬಾದೇವಿದೇ ಇದು, ಹೆಣ್ಣು ಮಕ್ಕಳದಲ್ಲ-ಇದು ಸೀರಿ!
ಹಿ : ದೇವತೆಗಳು ಉಟ್ಕೊಳಂತ ಪೀತಾಂಬರ ಇದು!
ಕ : ಇದು ಎಂದಿಗೂ ಬಿಡಬಾರ್ದು ಅಂತ ಮೆಲ್ಲಗ ಬಿಡಸ್ಕೊಂಡು ನಡುವಿನ ಮ್ಯಾಲೆ ಕಟ್ಕೊಂಡ.
ಹಿ : ಆ!
ಕ : ಬಾಳಿ ಸುಳಿಯಾಗ ನೋಡ್ತಾನ-ದಂಡಿ! ಯಾ ದೇವರ ದಂಡಿನೋ ಉಡಿಯಾಗ ಹಾಕ್ಕೊಂಡ! ನಿಂಬಿಗಿಡದಾಗ ಕಂಕಣ ಇದೂ ದೇವರದ್ದು! ಮುತ್ತಿನ ದಂಡಿ-
ಹಿ : ದಂಡಿ!
ಕ : ಚಂದ್ರಹಾರ-ಅಲೇಲೇ
(ರಾಗ) ಇವೆಲ್ಲಾ ಯಾವ ಸ್ತ್ರೀ ಸಾಮಾನು? ಯಾವ ದೇವತಾ ಸ್ತ್ರೀಯಸಾಮಾನು? ನೀರಿನ ಗುಂಟ ಬೈಲಿಗೆ ಬಿದ್ದಾವೈ…….ನೀರಿನಗುಂಟ ಕೆಳಗ ಇನ್ನೂ ಹೋಗ್ಯಾವೇನೋ ಎಲ್ಲಿತನಕ ಹೋಗ್ಯಾವ ಅಲ್ಲಿತನಕ ಹೋಗ್ಬೇಕೂ……..
ಕ : ಸಿಕ್ಕ ವಡವಿ-ವಸ್ತ್ರಾ ತನ್ನ ಉಡಿಯಾಗ ಕಟ್ಟಿಕೊಂಡ
ಹಿ : ದೊಡ್ಡ ಉಡಿಯಾಗಿ ಬಿಡ್ತು!
ಕ : ಅರ್ಧ ಫರ್ಲಾಂಗ್ ಬಂದು ನೊಡ್ತಾನೆ-ಯಾವೂ ಇಲ್ಲ ಸಾಮಾನು! ಎರಡು ಫರ್ಲಾಂಗ್ ಬಂದು ಹುಡುಕ್ತಾನೆ- ಯಾವೂಇಲ್ಲ!
ಹಿ : ಮತ್ತೇನೂ ಸಿಗಲಿಲ್ಲ!
ಕ : ಏ ಎಷ್ಟೊಕೊಂದು ಸಾಮಾನು ಅದಾವಲ್ಲ! ಯಾ ಗುಡಿ ಬಡದು ಯಾ ದೇವ್ರ ಸಾಮಾನು ಕೆರಿಸೇರಿದ್ವೊ! ಇವು ಯಾ ದೇವರವು ಅದಾವೊ! ಯಾ ಅಂಬಾದೇವಿದು ಐತೋ! ಯಾ ಕಾಳಿಕಾ ದೇವಿದು ಐತೋ! ಯಾ ಊರಮ್ಮಂದು ಐದಾವೋ……..ಸಾಮಾನು ಇವು!
ಹಿ : ಓಹೋ!
ಕ : ಇನ್ನು ರಂಭಾವತಿ ಮನಿಗೆ ಹೋಗ್ಬೇಕಂತ್ಹೇಳಿ ಗರಕ್ಕನ ತಿರುವಿದ ಕುದ್ರಿಯಾ- ರಾಜಕುಮಾರ.
ಹಿ : ಅಂಬಾದೇವಿ ಗುಡಿ! ಅಲ್ಲಿ ಬೆಳ್ಳಗ ಕಾಣ್ಸಿತು!]
ಕ : ಆಹಾ ಅಲ್ಲಿ ಯಾವುದೋ ಒಂದು ದೇವಾಲಯ ಕಾಣ್ತೈತಿ!
ಹಿ : ಗುಡಿ!
ಕ : ಆ ದೇವಿಗೆ ನಮಸ್ಕಾರ ಮಾಡಿ ರಂಭಾವತಿ ಮನಿಗೆ ಹೋಗ್ಬೇಕಂತ್ಹೇಳಿ ಕುದ್ರಿಬಿಟ್ಟ ಗುಡಿಗೆ.
ಹಿ : ಆಹಾ…….
ಕ : ಅಂಗಳದಾಗ ಬಂದು ಕುದ್ರಿ ನಿಲ್ಲಿಸಿದ, ಕುದ್ರಿ ಇಳದು ಒಳಗ ಬಂದು ಬಾಗಿಲ ತಗದ. ನಿಂತು ನೋಡ್ತಾನೆ- ಅಂಬಾದೇವಿ ನಿಗಿನಿಗಿ ಹೊಳಿತಾ ಇದಾಳೆ! ಜಗದೇಶ್ವರಿ ಅಂಬಾ!
ಹಿ : ರಾಜ ರಾಜೇಶ್ವರಿ ಅಂಬಾ!
ಕ : ದೇವಿಗೆ ನಮಸ್ಕಾರ ಮಾಡಿ ಬಲಭಾಗದಾಗ ಗುಡಿಯಾಗ ನೋಡಿದ-ಫಳಕ್ಕನೆ ಹೊಳಿತಾಳ ದಿಗಂಬರ ರೂಪದಿಂದ ಉಟ್ಟಮಾರ್ದಶಿಯಿಂದ-
ಹಿ : ಶಿವಲೋಚನಮ್ಮ-
|| ಪದ ||
ಅಲೇಲೇ ಎಂಥ ಹೆಣ್ಣೋ ಈಕಿ………ಹರಹರ ಮಾದೇವ
ಯಾವ ರಾಜನ ಮಗಳಯ್ಯಾ………ಹರಹರ ಮಾದೇವ
ಯಾವ ರಾಜನ ಮಡದೆಯ್ಯಾ………ಹರಹರ ಮಾದೇವ
ಕ : ತಿಲೋತ್ತಮೆಯೋ, ಊರ್ವಶಿಯೋ, ರಂಭೆಯೋ, ರತಿಯೋ ಸರಸ್ವತಿಯೋ ಪಾದದಲ್ಲಿ ನೋಡಿದ-ಪದ್ಮ ರೇಖೆಗಳು! ಕೈಯಲ್ಲಿ ನೋಡಿದರೆ ಧನರೇಖೆ ಚಕ್ರ! ವಕ್ಕಳ ಶಂಖಾಕಾರ.
ಹಿ : ದೇವತಾಸ್ತ್ರೀ, ದೇವಕನ್ಯೆ!
ಕ : ದಿಗಂಬರ ರೂಪದಿಂದ ಉಟ್ಟಮಾರ್ದಶಿಲೆ ಇಲ್ಲಿ ಅಂಬಾನ ಹತ್ರಯಾರು ತಂದು ಒಗದು ಹೋಗಿರಬಹುದು!
ಹಿ : ಆಹಾ!
ಕ : ಯಾವ ರಾಜನ ಸೊಸಿಯೇ, ಯಾವ ರಾಜನ ಮಡದಿಯೋ, ದೇವೇಂದ್ರನ ಹೆಂಡತ್ಯೋ!
ಹಿ : ಹಾ!
ಕ : ಈಕಿ ರೂಪಕ್ಕ ಈ ಗುಡಿಯಾಗೆಲ್ಲ ಬೆಳಕು ಬಿದ್ದಿರಬೇಕಾದ್ರೆ-ಯಾರಿದ್ದಾರು. ಹ್ಯಂಗ ತಂದು ಒಗದಿದ್ದಾರದು! ಹ್ಯಂಗ ಬಂದು ಬಿದ್ದಿದ್ದಾಳು ಈಕಿ!
ಹಿ : ಜಲ್ಮಿಲ್ಲ!
ಕ : ಇಲ್ಲ!
ಹಿ : ಆಹಾ
ಕ : ಈಕಿ ಜಲ್ಮ ಇದ್ದಿದ್ದರೆ ವೈಭವದಿಂದ ಭಜಂತ್ರಿಯಿಂದ ಕರ್ಕೊಂಡು ಹೋಗಿ (ರಾಗ) ನಾನು ಲಗ್ನ ಆಗತಿದ್ದೆನೇ ತಾಯಿ….ಅಂಬಾ…
ಹಿ : ನನ್ನ ಪುಣ್ಯ ಇಲ್ಲ! ನನ್ನ ಪುಣ್ಯ ಇಲ್ಲ! ಅಂದ ಅವನು
ಕ : ಯಾರು ಐದಾಳೋ ಏನೋ! ಪಾಪ ಪತಿವ್ರತಾ ಶಿರೋಮಣಿ, ದಿಗಂಬರ ರೂಪದಿಂದ ಉಟ್ಟಮಾರ್ದಶಿಯಿಂದ ಬಂದು ಬಿದ್ದಾಳೆ!
ಹಿ : ಹೌದು!
ಕ : ಈ ವಸ್ತ್ರ, ಈ ವಡವಿ, ಈ ಮುತ್ತು ರತ್ನ ಈ ಪೀತಾಂಬರ ಇನ್ನೂ ಯಾರವೂ ಅಲ್ಲ ಇಕಿವೇ!
ಹಿ : ಹಾ
ಕ : ಯಾಕ ರಂಭಾನ ಮನಿಗೆ ಒಯ್ಯಬೇಕು?
ಹಿ : ಬ್ಯಾಡ
ಕ : ಅಂಬಾನ ಗುಡಿ ಮುಲ್ಯಾಗ ಸುರ್ವಿ ಬಿಟ್ಟನಪ-ಮುತ್ತುರತ್ನ! ಪುಣ್ಯಾತ್ಮಳು ದಿಗಂಬರ ರೂಪದಿಂದ ಮಲ್ಕೊಂಡಾಳ ಅಂತ್ಹೇಳಿ ಅರ್ಧಸೀರಿ ಹಾಸಿ ಅರ್ಧಮ್ಯಾಲೆ ಹೊಚ್ಚಿದಾ!
ಹಿ : ಆಹಾ!
ಕ : ಅಂಬಾ, ನಾನು ಹೋಗ್ತೀನಿ ರಂಭಾವತಿ ಮನಿಗೆ-ಅಂತ ದೇವರಿಗೆ ನಮಸ್ಕಾರ ಮಾಡಿ ಹೊರಗ ಬರ್ತಾ ಇದಾನೆ; ಆಯಮ್ಮನ ರೂಪ ನೋಡಿ ಇವನು ಮುಂದಕೆ ಕಾಲು ಇಡೋದೇ ಆಗ್ವಲ್ಲದು!
ಹಿ : ಪಾಪ!
ಕ : ಇಕಿ ರೂಪಲಾವಣ್ಯ ನೋಡಿ ನನ್ನ ಮನಸ್ಸು ಸೈರಸವಲ್ಲದು! ಅಂಬಾದೇವಿ ಗುಡಿ ಮುಂದೇ ನಾನು ಸುಟ್ಟು ಬೂದಿ ಆದ್ರೂ ಪರ್ವಿಲ್ಲ-ಬಂದದ್ದು ಪಾಪ ಬರ್ವಲ್ಲದಾಕ-(ರಾಗವಾಗಿ) ಸತ್ತ ಶ್ರಮಕ್ಕೆ ಮುಟ್ಯಾನಯ್ಯಾ….ಹರಯನ್ನ ಮಾದೇವಾ
ಸತ್ತ ಶ್ರಮಕ್ಕೆ ಭೋಗ ಮಾಡ್ಯಾನೆ….ಹರಯನ್ನ ಮಾದೇವಾ
ಕ : ಪುಣ್ಯಾತ್ಮಳ ಧರ್ಮಕೆಟ್ಟು ಹೋಯ್ತು! ಇಕಿಗೆ ನಾನು ಮುಟ್ಟಿ ಬಿಟ್ನಲ್ಲೋದೇವ ಎಂಥ ಅಪರಾಧ!
ಹಿ : ಚಾಂಡಾಲ!
ಕ : (ರಾಗ) ಪುಣ್ಯಾತಮಳೇ ಯಾರೋ ಏನೋ-ನಿನ್ನ ಧರ್ಮ ಕೆಡಿಸಿ ಬಿಟ್ಟೆ; ನಾನು ದ್ರೋಹಿ ಆದೆ!
ಹಿ : ಹಾ.
ಕ : ಅಂಬಾ ನಿನ್ನ ಕೃಪ ಇರ್ಲಿ – ಇಕಿ ಮ್ಯಾಲೆ! ಅಂತ ಅಂದದ್ದೇ ಅಂಬಾ ಗುಡಿ ಹಿಂದೆ ಸ್ನಾನ ಮಾಡ್ಕೊಂಡು ರಾಜಡ್ರಸ್ ಹಾಕ್ಕೊಂಡು ಅಂಬಾದೇವಿ ಕದ ಮುಚ್ಚಿ ಮುಂದಕ್ಕೆ ಹೋಗದಕಾ ರಂಭಾವತೊ ಜಳಕ ಮಾಡಾಕ ಶಿವದಾರ ತೆಗೆದು ಬೆಳ್ಳಿ ಗೂಟಕ ಹಾಕಿದ್ಲು!
ಹಿ : ಕ್ಷಣ ಮಾತ್ರದಲ್ಲಿ ತಾಯಿ ಜಲ್ಮ ತಿರುಗಿತು!
ಕ : ಶಿವಲೋಚನಮ್ಮ ಶಿವಶಿವಾ ಅಂತ ಗುಡಿಯಾಗ ಎದ್ದು ಕುಂತ್ಲು ನೋಡಾ ಇದಾಳೆ-ನಿಗಿ ನಿಗಿ ಹೊಳಿತೈತಿ ಅಂಬಾನ ಗುಡಿ!
ಹಿ : ಆಹಾ ಇದೇನು!
ಕ : ಅಂಬಾದೇವಿ ಗುಡಿಯಾಅ ಬಿದ್ದೀನಲ್ಲ! ಹ್ಯಾಂಗ ಇಲ್ಲಿ ಬಂದಿರಬಹುದು?
ಹಿ : ಯಾರು ತಂದು ನನಿಗೆ ಒಗದಿದ್ದಾರು?
ಕ : ನೋಡ್ಕೊಂತಾಳೆ-ಪತಿವ್ರತಾ ಧರ್ಮ ಕೆಟ್ಟು ಹಾನಿಯಾಗೇತಿ!
ಹಿ : ಆ….
ಕ : ಆಹಾ ಮೋಸವಾಯ್ತು! ನೀಲಕುಮಾರಾ!….ನೀಲಕುಮಾರ ನನ್ನ ಪತೀ ಬಾ….
ಹಿ : ಆ….
ಕ : ನಿನ್ನ ಹೆಸರಿಲೆ ಮಾಡಿದ ಮಾಂಗಲ್ಯ ಅನ್ಯಾಯವಾಯ್ತು; ಯಾವ ಚಾಂಡಾಲ ಬಂದಿದ್ದು ಅಂಬಾನ ಗುಡಿಯೊಳಗೆ ನನ್ನ ಕೈ ಮುಟ್ಟಿ (ರಾಗವಾಗಿ) ನನ್ನ ಧರ್ಮ ಕೆಡಿಸಿ ಹೋಗ್ಯಾರ….ಪತೀ….
ಹಿ : (ರಾಗವಾಗಿ) ಹೌದೂ….
ಕ : ಮಾವಾ ಧರ್ಮಸೇಕಾ; ಅತ್ತಿ ಗಂಗಾಸಾಗ್ರ, ನಿಮ್ಮ ಸೊಸಿ ನೀರ ಪಾಲಾದ್ಲು!
ಹಿ : ಹೌದು!
ಕ : ಕೆಟ್ಟೆ! ಅರಮನಿಯೊಳಗೆ ಸಿಂಹಾಸನದ ಮೇಲೆ ಕುಂತ ನಿಮ್ಮ ಸೊಸೀ ಧರ್ಮ ಕೆಟ್ಹೋತು! (ರಾಗವಾಗಿ) ಅಂಬಾ….ಅಂಬಾ ನಿನ್ನ ಮಗಳಿಗೆ ಧರ್ಮ ಕೆಡಿಸಿದ್ರೆ…. ಯಾರು ಬಂದಿದ್ದರೆ ಈ ಅಂಬಾನ ಗುಡಿಗೆ!
ಹಿ : ಯಾವ ಪಾಪಿ ಚಾಂಡಾಲ!
ಕ : ನನ್ನ ರೂಪ ನನ್ನ ಲಾವಣ್ಯ ನನ್ನ ಸೌಂದರ್ಯ ನೋಡಿ ತಡಿಲಾರದ ನನ್ನ ಧರ್ಮ ಕೆಡಿಸಿ ಹೋದ್ರು! ಇರಬಾರದು ಹೆಣ್ಣಿನ ಜಲ್ಮಾ! ಹೆಣ್ಣು ಜಲ್ಮಾ ಒಯ್ದು ಮಣ್ಣಾಗ ಇಡಬೇಕು.
|| ಪದ ||
ಶಿವಶಿವ ಜಲ್ಮಾ ಇದು ವ್ಯರ್ಥವೂ
ಶಿವ ಶಿವ ಜಲ್ಮಾ ಇದು ವ್ಯರ್ಥವೈ
ಭೂಮಿಯೊಳು ನಾರಿಯಾ ನರಜಲ್ಮವೇ
ಭೂಮಿಯೊಳು ನಾರಿಯಾ ನರಜಲ್ಮವೇ
ಶಿವಶಿವ ಜಲ್ಮಾ ಇದು ವ್ಯರ್ಥವೂ
ಶಿವಶಿವ ಜಲ್ಮಾ ಇದು ವ್ಯರ್ಥವೈ
ಪತಿ ಸೇವೆ ಮಾಡದ ನಾರಿ ಜಲ್ಮ ವ್ಯರ್ಥವೂ
ಪತಿ ಸೇವೆ ಮಾಡದ ನಾರಿ ಜಲ್ಮ ವ್ಯರ್ಥವೈ
ಪತಿ ಇಲ್ಲದೇ ಜಲ್ಮ ಇದು ವ್ಯರ್ತವೂ
ಪತಿ ಇಲ್ಲದೇ ಜಲ್ಮ ಇದು ವ್ಯರ್ಥವೈ
ಶಿವಶಿವ ಜಲ್ಮಾ ಇದು ವ್ಯರ್ಥವೂ
ಶಿವಶಿವಾ ಜಲ್ಮಾ ಇದು ವ್ಯರ್ಥವೈ.
ಹಿ : ಇಲ್ಲಿ ಏನಾಯ್ತಪಾ?
ಕ : ಭೋಜನ ಮಾಡ್ಕೊಂಡು ರಂಭಾವತಿ ಆಕಿ, ಶಿವದಾರ ಕೊಳ್ಳಾಗ ಹಾಕ್ಕೊಂಡ್ಲು – ಅಲ್ಲಿ ಮಲ್ಕೊಂಡೆ ತಾಯಿ ಜಲ್ಮ ಬಿಟ್ಲು!
ಹಿ : ರಾಜಕುಮಾರ ಮನಿಗೆ ಬರುತ್ಲೇ-
ಕ : ಕೈಯಾಗ ಆರತಿ ಹಿಡಕೊಂಡು ರಾಜಗ ಆರತಿ ಬೆಳಗಾಕ ಬರ್ತಾಳ ಸೂಳಿ! ಆ ರಂಭಾವತಿ ಮೇಲೆ ರಾಜಂದು ಪ್ರೀತಿ ಇಲ್ಲ!
ಹಿ : ಪ್ರೀತಿ ಹೋತು ಕಿತಗೊಂಡು!
ಕ : ಏರಂಭಾ ತಗೀ ಆರತಿ;
ಹಿ : ಆಂ!….
ಕ : ಏನು ಆರತಿ ಬೆಳಗತಿ ನೀನು! ಅಲ್ಲೇ, ನೀನ್ಯ್ ಜಳಕ ಮಾಡ್ಕೊಂಡು, ಮಡಿ ಉಡಿಯಿಂದ ಬಂದು ಆರತಿ ಬೆಳಗ ಪದ್ಧತಿ!
ಹಿ : ಹೌದು!
ಕ : ಅಂಥಾದ್ದು, ನನಗೆ ನೋಡಿ ತಕ್ಷಣಾನೇ ಒಳಗೆ ಹೋಗಿದ್ಹೇಹಿಂಗ ಆರತಿ ತಗೊಂಬಂದು ಬೆಳಗಾದು ಅಂದ್ರೇನು?
ಹಿ : ಓಹೋ ಸ್ನಾನಮಾಡಿ
ಕ : ರಾಜಾ ಇಷ್ಟು ದಿವಸ ಇಲ್ಲದ ಯಾಕ ನನಗೆ ಕಣ್ಣು ಕೆಂಪಗೆ ಮಾಡ್ತೀ? ಆರತಿ ಏನು ಬೆಳಗತಿದಿ ಅಂತೀರಿ! (ರಾಗವಾಗಿ) ಯಾರೇಗಾರ ಹೋಗಿನೋಡಿ ಬಂದಿರಿ ಏನ್ರೀ ರಾಜೈ….ಯಾರ ಮನಿಗೆ ಹೋಗಿದ್ರಿ ದೊರೀ….(ರಾಗವಾಗಿ) ಎಲೇ ನೀನು ಇದ್ದು ಮತ್ತೆಯಾರಿಗೆ ನೋಡ್ಲೇ….ಸೊಕ್ಕು ಬಂತೇನೆ….
ಹಿ : ಇಲ್ರಿರಾಜಾ ತಪ್ಪಾತು ಕುಚೇಷ್ಟಿ ಮಾಡಿದೆ
ಕ : ಒಳಗೆ ಕರ್ಕೊಂಡು ಹೋಗಿ ಬಿಟ್ಲು ಸೂಳಿ ರಾಜ ಒಳಗೆ ಹೋಗಿ ಈಶ್ವರನ….
ಹಿ: ಪೂಜಾ ಮುಗಿಸಿದಾ…
ಕ : ದಿಗಂಬರ ರೂಪದಲ್ಲಿ ಗುಡಿಯಾಗ ಮಲಗಿದ ತಾಯಿ ಶಿವಲೋಚನಮ್ಮ ಪಿತಾಂಬ ಉಟ್ಕೊಂಡು ದೇವಿಧ್ಯಾನ ಮಾಡ್ಬೇಕಾದ್ರೆ ಒಂದು ತಾಸು ತಾಯಿ ಜಲ್ಮ ತಿರಿಗಿತ್ತು ನೋಡ್ರಿ! ತಾಯಿ ಹೊಟ್ಯಾಗ ಅದೇ ಗರ್ಭ ಆಗೈತಿ!
ಹಿ : ಗರ್ಭಿಣಿ! ಪರಮಾತ್ಮ!
ಕ : ರಾಜಾ ಒಂದು ನೋಡ್ತಾನೆ; ಹೋಗ್ತಾನೆ; ಬಂದಾಗ ರಾಣಿ ಜಲ್ಮ ಮಲಗಿರತೈತಿ! ಆತ ಹೋದಾಗ ತಿರುಗತೈತಿ! ಇದರಂತೆ ಒಂದು ತಿಂಗಳು-ಎರಡು ತಿಂಗಳು ಮೂರು ತಿಂಗಳು-ನಾಲ್ಕು ತಿಂಗಳು ಆರು ತಿಂಗಳು ಆದ್ವು!
ಹಿ : ರಾಜ ಒಂದು ದಿನ ನೋಡ್ತಾನೆ-
ಕ : ಎಲೇ!
ಹಿ : ಇದೇನು!
ಕ : ಎಷ್ಟೋ ದಿವಸ ಆದ್ರೂ ಅಂಬಾನ ಗುಡಿಯೊಳಗೇ ಬಿದ್ದಲ್ಲೇ ಬಿದ್ದಾಳೆ ಈಕಿ!
ಹಿ : ಆಹಾ!
ಕ : ಇದು ನಾತನೆ ಆಗಿಲ್ಲ!
ಹಿ : ಈ ಹೆಣ ನಾರವಲ್ಲದಲ್ಲ!
ಕ : ಸತ್ತು ಸಮಾಧಿಯಾಗಿ ಮೂರು ದಿವಸಕ್ಕೆ ಹೊಟ್ಟೆ ಉಬ್ಬಿ ಗುಡಿಯಲ್ಲಾ ಇಚ್ಚಂಡ ಆಗ್ಬೇಕಿತ್ತು! ಅಂಥಾದ್ದು ಈ ಪುಣ್ಯಾತ್ಮಳು ಎಷ್ಟೋ ತಿಂಗಳಾದ್ರೂ ನಾತಇಲ್ಲ; ದೂರ್ವಾಸನೀ ಏನೂ ಇಲ್ಲಲ್ಲ.
ಹಿ : ಹೌದು ಏನೂ ಇಲ್ಲಲ್ಲ! ಅಂದ್ರೆ-(ರಾಗವಾಗಿ) ಸತ್ತ ಶ್ರಮದ ಹೊಟ್ಟಿ ಉಬ್ಬೇತೋ ತಾಯೀ….ಗರ್ಭ ಅಂಬೋದು ಗೊತ್ತಾಗಿಲ್ಲ ರಾಜಗ….
Leave A Comment