ಹಿ : ಶಬಾಸ್ ಕ್ಷತ್ರಿ!
ಕ : ಕೈಯಾಗ ಕಲ್ಲು ಹಿಡದು ತೋರಿಸಿ ಬಿಟ್ಟ.
ಹಿ : ಆಹಾ!
ಕ : ಕುದ್ರಿ ಇಳದು ರಾಜ ಗದಗದ ನಡಕ್ಕಿಂತ ಎಂಥ ವಿಚಿತ್ರ ಹುಡುಗ! ನಾನೇನೋ ಸಂಭಾಯಿತ ಅಂತ ಮಾಡಿದ್ದೆ!
ಹಿ : ಆಹಾ!
ಕ : ಅಂದದ್ದಲ್ಲ ಆಡಿದ್ದಲ್ಲ; ಮಗನಾ ಅಂದದಕ್ಕೆ ಹೆಚ್ಚುಕಮ್ಮಿ ಮಾತಾಡಿದ್ರೆ ಎಲ್ಲಿ ಕಲ್ಲಿಲೇ ಬಿಗಿತೈತೋ.
ಹಿ : ಯವ್ವಾ.
ಕ : ಅಪ್ಪಾ ಮತ್ತೆ ಏನನ್ನಬೇಕೋ ಹುಡುಗ ನಿನಗೆ?
ಹಿ : ಏನನ್ನ ಬೇಕು ಅಂತಿಯೇನೋ?
ಕ : ಗುಡ್ಡದ ಶಿಪಾಯಿ, ಗುಡ್ದದ ಶಿಪಾಯಿ, ಅಡಿವ್ಯಾಗನ ಗುಡ್ಡದ ಶಿಪಾಯಿ ಈಗ ನಾನು ಗುಡಿಯಾಗ ಅದೀನಿ.
ಹಿ : ಇರಲಿ ಬಿಡಪ್ಪಾ ಗುಡ್ಡದ ಶಿಪಾಯೀ.
ಕ : (ರಾಗವಾಗಿ) ನೀನ್ಯಾರೋ ಇಲ್ಲಿ ಬರ್ಲಿಕ್ಕೆ……..ನೀನ್ಯಾರು?
ಹಿ : ನೀನು ಯಾರು?
ಕ : ಯಾರಂತ ಕೇಳ್ತೈತಲ್ಲ ಹುಡುಗ ಈಗ!
ಹಿ : ಆಹಾ!
ಕ : ರಾಜ ಅಂದ್ರ ಎಲ್ಲಿ ಕಲ್ಲಿಲೆ ಬಿಗಿತೈತೋ ಏನೋ! ರಾಜಗೀಜ ಅಂದ್ರ ಇನ್ನೊಮ್ಮೆ ಈ ಗುಡಿ ಅಂಗಳದಾಗ ಬರಗೊಡಸಾದಿಲ್ಲ! ಹ್ಯೆಂಗಮಾಡ್ಲಿ-ಅಂದ.
ಹಿ : ಆಹಾ ಗುಡ್ಡದ ಶಿಪಾಯಿ!
ಕ : ಏನೂ?
ಹಿ : ನಾನು ಗುಡಿ ಪೂಜಾರೀ ಮಾರಾಯ….
ಕ : (ರಾಗವಾಗಿ) ನಾನು ಗುಡಿ ಪೂಜಾರಿ ಮಾರಾಯಾ….
ಅಂಬಾನ ಪೂಜೆಗೆ ಬಂದಾನೈ ನಾನಾ….
ಒಳ್ಳೇದು ಗುಡಿ ಪೂಜಾರೀ….
ಕ : ಅಂಬಾನ ಪೂಜೆಗೆ ಬಂದೇನೇ.
ಹಿ : ಒಳ್ಳೇದು ಗುಡಿ ಪೂಜಾರೀ.
ಕ : ಗುಡಿ ಪೂಜಾರಿ ಅಂದದಕ್ಕೆ ಬಿಟ್ಟೀನಿ ಬ್ಯಾರೇರು ಏನಾರಾ ಅಂದದ್ರ ಕಲ್ಲಿಲೆ ಬಿಗದಾ ಬಿಡ್ತಿದ್ದೆ….
ಹಿ : ಆಗಲೆಪ್ಪ ಮಾರಾಯಾ.
ಕ : ಎಲ್ಲಿಗೆ ಹೊಕ್ಕಿ ನೀನು ಪೂಜಾ ಮಾಡ್ಲಿಕ್ಕೆ?
ಹಿ : ಅಮ್ಮಂದು ಪೂಜೆ.
ಕ : ಇಗಾ ಪೂಜಾರಿ ನಮ್ಮ ತಾಯಿ ಒಳಗ ಮಲಿಗ್ಯಾಳ;
ಹಿ : ಆ.
ಕ : ಎಲೋ, ಪೂಜಾರಿ ನಮ್ಮ ತಾಯಿ ಒಳಗ ಮಲಿಗ್ಯಾಳ.
ಹಿ : ಒಳ್ಳೇದು.
ಕ : ಎಡಗಣ್ಣಿಲೆ ನೋಡೀ; ಬಲಗಣ್ಣಿಲೆ ನೋಡೀ; ಸೀದಾ ಅಮ್ಮಂದು ಪೂಜೆ ಮಾಡಿ ಸೀದಾ ಹೊರಗ ಬರಬೇಕು.
ಹಿ : ಆಗಲಿ ಮಾರಾಯಾ.
ಕ : ಆಗಲಿ ಬಿಡಪ್ಪ ಅಂದ. ಅಂಬಾನ ಗುಡಿ ಹಿಂದೆ ಹಳ್ಳ ಹರೀತಿತ್ತು. ಜಳಕ ಮಾಡಿಕೊಂಡು ಚರಿಗಿ ತುಂಬ ತುಂಬ್ಕೊಂಡು ಹೊನ್ನರಿಕೆ ಹೂವು ಹರಕೊಂಡು ಬಂದಾನ.
ಹಿ : ಎಂದಾನ ಗುಡಿಯಾಗಿನ ದೇವ್ರ ಪೂಜೆ ಮಾಡಿದಾನು ಆದ್ರೆ ಬಂದೀತು!
ಕ : ದೇವಿ ಪಾದ ತೊಳದು ಹೊನ್ನರಕಿ ಹೂವು ಏರಿಸಿ (ರಾಗವಾಗಿ) ಊದಿನಕಡ್ಡಿ ಬೆಳಗಿ-ಯವ್ವಾ ಎಂಥ ಸಿಟ್ಟಿನ ಮಗನ್ನ ಕೊಟ್ಟಿ ದೇವಿ. ಮಗನ ಅಂದದ್ದೊಂದು ತಪ್ಪಾತು. ಸಿಟ್ಟಿಗೆ ಬಂದ್ನೆಯವ್ವಾ…..
ಹಿ : ಹೊರಗೆ ನಿಂತಿತ್ತು ಆ ಹುಡುಗಾ….
ಕ : ಲೇ ಎಷ್ಟೊತ್ತು ಮಾಡ್ತಾನ ಪೂಜಾರಿ ಒಳಗ, ಅವನು! ಪೂಜಿ ಆಯ್ತಲ್ಲೋ ಹೊರಗೆ ಬಾರೋ.
ಹಿ : ಒಳಗ ಬಂದ್ರ ಅಮ್ಮನ ಪೂಜಿ ಒಂದು ಆದ್ರೆ. ಹೊರಗೆ ನಿನ್ನ ಪೂಜೆ ಎಲ್ಡು ಪಾಲು ಆದೀತು!
ಕ : (ರಾಗವಾಗಿ) ಆ ಬಂದೆ, ಬಂದೆ….ಬಂದ್ನೊ ತಮ್ಮಾ ಬಂದೇ….ಅಲ್ಲಪ್ಪ ಬಾರೊ ಇಲ್ಲಿ ಆಕೀ.
ಹಿ : ಏನು?
|| ಪದ ||
ಕ : ಆಕಿ ಅಂತಾ ಯಾರಿಗೆ ಅಂದೇ….ಹರಹರಯನ್ನ ಮಾದೇವಾ
ಮಾಡ್ಕೊಂಡ ಹೇಣತ್ತೇನೋ….ಹರಹರಯನ್ನ ಮಾದೇವಾ
ನಿನ ಇಟ್ಟಂಥ ಸೂಳೇನೂ….ಹರಹರಯನ್ನ ಮಾದೇವಾ
ಕ : ಲೇ ಆಕೀ ಅಂತಾ ನಮ್ಮ ತಾಯಿಗೆ ಅನ್ನಾಕ ನೀನು ಮಾಡ್ಕೊಂಡ ಹೇಣ್ತೆ? ನೀನು ಇಟ್ಟಂಥ ಸೂಳೇ? ಆಕಿ ಅಂತ ಹೆಂಗ ಅಂದಿ?
ಹಿ : ತಪ್ಪಾತು, ತಪ್ಪಾತಪ್ಪಾ ಮಾರಾಯ ಮತ್ತೆ ಏನು ಅನ್ನಬೇಕಪ್ಪ?
ಕ : ಆ ಯಮ್ಮ ಯಾರು! ಆ ತಾಯಿ ಯಾರು? -ಅಂತ ಅನ್ನು
ಹಿ : ಆಹಾ!
ಕ : ತಮ್ಮಾ ನಿನ್ನ ತಾಯಿ ಹೀಂಗ ಬಿದ್ದಿರ್ತಾಳೋ ಏನು ಯಾವಾಗರ ಎದ್ದು ಕುಂದ್ರುತಾಳೋ?
ಹಿ : ಪೂಜಾರೀ, ಏಳೋದು ಬೀಳೋದು ಮಾಡ್ತಾಳೆ?
ಕ : ಒಂದು ವ್ಯಾಳ್ಯದಲ್ಲಿ ಏಳೋದು, ನಮ ತಾಯಿ ಎದ್ದು ಕುಂದ್ರುತಾಳೆ, ಒಂದು ಟೈಮಿನಲ್ಲಿ ತನ್ನ ತಾನೇ ಸುಮ್ಮನೆ ಮಲ್ಕೊಂತಾಳೆ-ಏಳೋದು ಬೀಳೋದು ಮಾಡ್ತಾಳೆ-ಪೂಜಾರೀ ನಮ್ಮ ತಾಯಿ.
ಹಿ : ಆಹಾ!
ಕ : ಹಂಗಾದ್ರೆ ತಮ್ಮಾ, ಗುಡ್ಡದ ಸಿಪಾಯೀ
ಹಿ : ಏನು?
ಕ : ನಾನು ಹೊಕ್ಕೀನಲ್ಲ ಈಗ ಹೋದಾಗ ನಿಮ್ಮ ತಾಯಿ ಎದ್ದುಕುಂತ್ರೆ –
ಹಿ : ಆ
ಕ : ಯವ್ವಾ ನೀನು ಏಳೋದು ಬೀಳೋದು ಮಾಡ್ತೀಯಲ್ಲಾ ನಿನ್ನ ಮರಣ ಯದರಾಗ ಐತಮ್ಮ -ಅಂತ ಕೇಳ್ಕೊ.
ಹಿ : ಒಳ್ಳೇದು.
ಕ : ನಿಮ್ಮ ತಾಯಿ ಮರಣ ಹೇಳಿದ್ರೆ-ನಾಳೆ ಇದೇ ಟೈಮಿನಾಗ ನಾನು ಬರ್ತೀನಿ. ಮರಣ ಏನಾರ ಹೇಳಿದ್ರೆ ನನ್ನ ಮುಂದೇ ಹೇಳು, ಮುಂದಲ ಪ್ರಯತ್ನ ಮಾಡೋನು ಮಗನೇ,ತಪ್ಪಾತು ನಾಲಗಿ ಜಾರಿತಪ್ಪ –
ಹಿ : ಗುಡ್ಡದ ಸಿಪಾಯಿ.
ಕ : ಆಹಾಂ ಗುಡಿಪೂಜಾರಿ ಹಂಗಾದರ ತಾಯಿ ಮರಣ ಕೇಳಲ್ಯಾ?
ಹಿ : ಕೇಳಬೇಕು.
ಕ : ಹೌದು.
ಹಿ : ಒಳ್ಳೇದು ಕೇಳ್ತೀನಿ.
ಕ : (ರಾಗವಾಗಿ) ಅಪ್ಪಾ, ನಾನು ಹೋಗಿಬರ್ತೀನಿ, ಗುಡ್ದದ ಸಿಪಾಯೀ.
ಹಿ : ಆಹಾ.
ಕ : ಹೋಗಿ ಬಾರಲೇ ಗುಡಿಪೂಜಾರೀ.
ಕ : ಎಂಥ ಸಿಟ್ಟಿನ ಹುಡುಗ ಐತಿ ಇದು!
ಹಿ : ಆ
ಕ : ಕುದ್ರಿಮ್ಯಾಲೆ ಕುಂತ್ಕೊಂಡು ರಾಜ ಆಕಡೆ ಹೋಗಾದ್ಕು,
ಹಿ : ರಂಭಾವತಿ ಜಳಕ ಮಾಡಾಕ ಶಿವದಾರ ತಗದ ಬೆಳ್ಳಿ ಗೂಟಕ್ಕೆ ಸಿಗೆಹಾಕಿಬಿಟ್ಲು !
ಕ : ಆಹಾ, ಅಂಬಾನ ಗುಡಿಯಾಗ ತಾಯಿ, ಎದ್ದು ಕುಂತ್ಲು ಶಿವಲೋಚನ!
ಹಿ : ಆಹಾ!
ಕ : ಮಗ ಬಂದು ನೋಡ್ತಾನೆ-ಯವ್ವಾ ಆ ಕುಂತೇನವ್ವಾ?
ಹಿ : ಆ ಕುಂತೀನಿ ಬಾ ಮಗನೇ.
ಕ : ಈಗ ಅರ್ಧ ಗಂಟೆ ಮುಂಚೆ ಅವನು ಗುಡಿ ಪೂಜಾರಿಯಂತೆ ನೋಡಮ್ಮಾ-
ಹಿ : ಬಂದಿದ್ನೆ?
ಕ : ಇಲ್ಲಿ ಬಂದಿದ್ದ ಅವನು.
ಹಿ : ಏನಾತಪ್ಪ?
ಕ : ನಾನು ಹೊರಗ ಆಡತಿದ್ನೆ – ಕಲ್ಲಿನ ಆಟ!
ಹಿ : ಒಳ್ಳೇದು.
ಕ : ಕುಂತಿದಿಯೇನೋ ಮಗನ ಅಂತ ಬಂದು ಹೇಳಿದನಮ್ಮಾ!
ಹಿ : ಮಗ!
ಕ : ಮಗನೆ ಅಂದದಕ್ಕೆ ನನಗೆ ಸಿಟ್ಟು ಬಂತು ಯವ್ವಾ.
ಹಿ : ಆ!
ಕ : ಲೇ ನೀನು ಯಾರೋ ಲೌಡಿ ಮಗನೇ ಮಗನೆ ಅಂತಾ ಹ್ಯಾಂಗ್ ಅಂದ್ಯೋ? ಕಲ್ಲು ತೋರ್ಸಿ ಬಿಟ್ನೆಮ್ಮಾ – ತರತರ ನಡುಗಿದ ಅವನು!
ಹಿ : ಆ.
ಕ : ಮತ್ತೆ ಏನು ಅನ್ನಬೇಕೋ ಹುಡುಗಾ ಅಂದ.
ಹಿ : ಗುಡ್ಡದ ಸಿಪಾಯಿ ಹೇಳು ಅಂದೆ.
ಕ : ನೀನಾರು ಅಂತ ಕೇಳಿದೆ. ಗುಡಿ ಪೂಜಾರಿ ಅಂದ ಆ ಅಮ್ಮಂದು ಪೂಜೆ ಮಾಡಿ ನಿನಗೆ ನೋಡಿ ಏನನ್ನ ಬೇಕಮ್ಮಾ ಅವನು! –
ಹಿ : ಆಕಿ, ಆಕಿ ಅಂದ ನೋಡಮ್ಮ!
ಕ : ಆಕಿ ಅಂತ ಯಾರಿಗೆ ಅಂದಿ ಅಂತ ಕಣ್ಣು ಕೆಂಪಗ ಮಾಡಿದೆನಮ್ಮಾ
ಹಿ : ಮತ್ತೆ ಏನನ್ನಬೇಕೋ ಹುಡುಗ ಅಂದ.
ಕ : ಆ ಯಮ್ಮ ಯಾರು ಆ ತಾಯಿ ಯಾರು ಅಂತ ಹೇಳು ಅಂತ ಅಂದೆ
ಹಿ : ಆಹಾ!
ಕ : ನಿಮ್ಮ ತಾಯಿ ಹಿಂಗ ಬಿದ್ದಿರ್ತಾಳೋ ಏನು ಏಳ್ತಾಳೋ ಅಂದ ಅವನು
ಹಿ : ಹೌದು!
ಕ : ಯವ್ವಾ ನೀನು ಎಷ್ಟೋ ದಿವಸ ಆತು ನಾನು ನೋಡ್ಲಿಕ್ಕೆ. ಏಳೋದು ಬೀಳೋದು ಮಾಡ್ತಿಯಲ್ಲೇ ತಾಯಿ? ನಿನ್ನ ಮರಣ ಯದರಾಗ ಐತಿ ಅಮ್ಮಾ? ಅಂದ ಮಗ.
ಹಿ : ಮರಣದ ತಾತ್ಪರ್ಯ!
ಕ : (ರಾಗವಾಗಿ) ಯವ್ವಾ-ನನ್ನ ಮರಣ ಏನು ಕೇಳ್ತೀ?……ಸಮುದ್ರದಾಗ ಸಜ್ಜಕಾನ ಮೀನು ಐತಿ, ಅದರ ಮೂಗಿನ್ಯಾಗ ಗಾಡಿನತ್ತು ಇರೋದೇ ನನ್ನ ಮರಣದ ಮೀನು.
ಹಿ : ಆಹಾ!
ಕ : ಏಳು ಬಂಡಿ ಕಟ್ಟಿಗಿ ಹೊಡದು ಸುಟ್ಟು ಬಂಡಿಲೋಬಾನ ಹಾಕಬೇಕು. ಎಡಗಡಿಗೆ ಖಂಡಗದ ಅನ್ನದ ರಾಶಿ ಹಾಕಬೇಕು. ಸಮುದ್ರ ದಂಡಿಗೆ ಮೀನು, ಅನ್ನದ ವಾಸನಿಗೆ ಲೋಬಾನದ ವಾಸನಿಗೆ ಬಾಯಿ ತಕ್ಕೊಂಡು ದಂಡೆಗೆ ಬರ್ತೈತಿ, ಅಂಬು ಬಾಣದಿಂದ ಹೊಡದ್ರೆ ಮೀನು ಸತ್ತು ಹೋಗತ್ತೈತಿ ಮೀನಿನ ಹೊಟ್ಟಿ ಬಗದರೆ ಬಂಗಾರದ ಶಿವದಾರ ಐತಿ;
ಹಿ : ಒಳ್ಳೇದು ತಾಯೀ.
ಕ : ಆ ಶಿವದಾರ ತಂದು ನನ್ನ ಕೊಳ್ಳಾಗ ಹಾಕಿದ್ರೆ ಎಂದೆಂದಿಗೂ ಮರಣ ಇಲ್ಲ ಮಗನೇ.
ಹಿ : ಆಹಾ!
ಕ : ಆ ಶಿವದಾರ ಯಾರನ್ನ ಬ್ಯಾರೇರು ಹಾಕ್ಕೊಂಡ್ರ ನನ್ನ ಪ್ರಾಣ ಹೋಗತ್ತೈತಿ ಅಲೇಲೆಲೆ ಯವ್ವಾ!
ಹಿ : ಆ.
ಕ : ನಾಳೆ ಗುಡಿ ಪೂಜಾರಿ ಬರ್ತೀನಿ ಅಂತ ಹೇಳ್ಯಾನೆ, ಒಳ್ಳೇದಮ್ಮ ಅಂದ.
ಹಿ : ಅರ್ಧಗಂಟಿ ಮಾತಾಡ್ಕೊಂತ ಕುಂದ್ರಾದಕು, ಆಕಿ ರಂಭಾವತಿ ಜಳಕ ಮಾಡ್ಕೊಂಡು ಶಿವದಾರ ಕೊಳ್ಳಾಗ ಹಾಕ್ಕೊಂಡ್ಲು!
ಕ : ತಾಯಿ ಮಲ್ಕೊಂಡೇ ಪ್ರಾಣ ಬಿಟ್ಲು. ತಾಯಿ ಮಗ್ಗಲಿಗೆ ಮಗ ಮಲ್ಕೊಂಡ.
ಹಿ : ಆಹಾ!
ಕ : ಮರುದಿವಸ ನೀಲಕುಮಾರ ರಂಭಾವತಿ ಮನಿಯೊಳಗ ಜಳಕ ಮಾಡಿಕೊಂಡು -ರಂಭಾ
ಹಿ : ಏನು ರಾಜ್ರೇ?…
ಕ : ಈಗ ಬಂದು ಬಿಡ್ತೀನಿ, ವನಾಂತಕ್ಕೆ ಹೋಗಿಬರ್ತೀನಿ.
ಹಿ : ತಡ ಮಾಡಬ್ಯಾಡ್ರಿ ರಾಜಾ.
ಕ : ಮಾರು ಹೊತ್ತು ಏರಿತ್ತು; ಕುಶಲಕುಮಾರ ಹೊರಾಗ ಬಂದು ಕಲ್ಲಿನ ಆಟ ಆಡ್ಕೊಂತ ಅಂಗಳದಾಗ ತಿರುಗಾಡುಕ ಹತ್ತೈತೆ
ಹಿ : ಆ
ಕ : ಓಹೋ ಹುಡುಗ ಹೊರಗ ಬಂದೈತಲ್ಲೊ! ನಿನ್ನಿನ್ಹಂಗ ಮಗನ ಅಂದ್ರ ಕಲ್ಲಿಲೆ ಎಲ್ಲಿ ಬಿಗಿತೈತೊ! ಮಗ ಅನ್ನಬಾರದು ಓತಮ್ಮಾ -ಈ ಗುಡ್ದದ ಸಿಪಾಯೀ
ಹಿ : ಓಹೋ ಹಿಂಗ ಹೇಳ್ಬೇಕು ನೋಡಲೆ ಗುಡಿಪೂಜಾರಿ.
ಕ : ನಿನ್ನೆ ಅಂದ್ಹಂಗ ಇವತ್ತು ಮಗನೇ ಅಂದದ್ದರೇ ಬಿಗದೇ ಬಿಡುತ್ತಿದ್ದೆ ಕಲ್ಲಿಲೆ….
ಹಿ : ಹಾ ಹಗಲಲ್ಲ ಮಗನ ಅಂತ ಯಾಕ ಅನ್ನಬೇಕಪ್ಪಾ, ಆ ನಿಮ್ಮ ತಾಯಿ ಎದ್ದಿದ್ಲೇನೋ!
ಕ : ನೀನು ಹೋಗೋ ವ್ಯಾಳಕ್ಕೆ ಎದ್ದಿದ್ಲು, ನೀನು ದೂರ ಹೋಗಿದ್ದಿ -ಪೂಜಾರೀ
ಹಿ : ಎದ್ದಿದ್ಲು ತಾಯಿ!
ಕ : ನಮ್ಮ ತಾಯಿ ಎದ್ದಿದ್ಲು | ಶಿವದಾರದಾಗ ಮರಣ (ರಾಗವಾಗಿ) ತಾಯಿದು; ಶಿವದಾರದಾಗ ಮರಣ ಐತೀ….
ಹಿ : (ರಾಗವಾಗಿ) ಹೌದು-
ಕ : ಮೀನಿನ ಹೊಟ್ಟಿಲಿ ಐತೆಂತೆ ಪೂಜಾರಿ.
ಹಿ : ಆ
ಕ : ಆ ಶಿವದಾರ ತಂದು ನಮ್ಮ ತಾಯಿ ಕೊಳ್ಳಾಗ ಹಾಕಿದೆ ಎಂದೆಂದಿಗೂ ಮರಣ ಇಲ್ಲಂತೆ!….
ಹಿ : ಆಹಾ.
ಕ : ಆ ಶಿವದಾರ ಯಾರನ್ನ ಹಾಕಂಬಿಟ್ರ ನಮ್ಮ ತಾಯಿ ಸತ್ತುಹೋಗ್ತಾಳಂತೆ!
ಹಿ : ಓಹೋ!
ಕ : || ಪದ ||
ಆಹಾ ಮೀನು ಹೊಡದು ಹನ್ನೆರಡು ವರ್ಷಾಂತೋ….ಹರಯನ್ನ ಮಾದೇವ
ನಾನೇ ತಂದೀನೀ ಶಿವದಾರಾ…….ಹರಯನ್ನ ಮಾದೇವ
ನನ್ನ ಮನಿಯಾಗs ಐತಲ್ಲೇ ತಾಯೀ…..ಹರಯನ್ನ ಮಾದೇವ
ರಂಭಾವತಿ ಕೊರಳಾಗs………ಹರಯನ್ನ ಮಾದೇವ
ಶಿವದಾರ ತಂದು ಹಾಕ್ತೀನಿ……….ಹರಯನ್ನ ಮಾದೇವ
ಈಕಿ ಶಿವದಾರ ಮರಣದ್ದು………ಹರಯನ್ನ ಮಾದೇವ
ಹ್ಯಂಗ ಕೇಳಿದ್ದಾಳು ರಂಭಾವತೀ………ಹರಯನ್ನ ಮಾದೇವ
ಓಹೋ ಬಾರೋ ತಮ್ಮಾ ನೀನೀಗ……..ಹರಹನ್ನ ಮಾದೇವ
ಕ : ವಿಚಿತ್ರವಾದ ಕತಂತ್ರ! ಹ್ಯಾಂಗ್ ಕೇಳಿದ್ದಾಳು ಆಕಿರಂಭಾ ಮರಣದ ಶಿವದಾರ- ನಾವೇ ತಂದೀನೀ. ನನ್ನ ಮನಿಯಾಗ ಐತಿ.
ಹಿ : ಮರಣ
ಕ : ತಮ್ಮಾ
ಹಿ : ಏನೋ ಪೂಜಾರಿ?
ಕ : ಗುಡ್ಡದ ಶಿಪಾಯೀ, ಆ ಶಿವದಾರ ಕೊಡಸ್ತೀನಿ ಬರ್ತೀಯಾ?
ಹಿ : ಬರ್ತೀನಿ; ಎಲ್ಲೈತಿ….ಅದು?
ಕ : ಮನಿಯಾಗ ಐತಿ, ನನ್ನ ಮಡದಿ ರಂಭಾವತಿ ಕೊಳ್ಳಾಗ ಐತಿ, ಅದು.
ಹಿ : ಆ.
ಕ : (ರಾಗವಾಗಿ) ಯಪ್ಪಾ ಬರ್ತೀನಿ ನಡಿ-ಕೊಡಸು ನಡಿ ಮಾರಾಯಾ!
ಹಿ : ಬಾ ನಾವಿಬ್ರೂ ಹೋಗಾನು.
ಕ : ನಮ್ಮಿಬ್ರಿಗೂ ನೋಡಿ ಆಕಿ ರಂಭಾವತಿ ಏನಂತಾಳ?
ಹಿ : ಏನಂತಾಳ?
ಕ : ಏನ್ರಿ ಈ ಹುಡುಗ ಯಾರ ಮಗ ಅಂತ ಕೇಳ್ತಾಳೆ.
ಹಿ : ಒಳ್ಳೇದು ವಿಚಾರಿಸಬಹುದು.
ಕ : ಹಂಗ ಅಂದ್ರೆ ಸಿಟ್ಟಿಗಿ ಬಂದಿಯಪ್ಪಾ ಮಾರಾಯ
ಹಿ : ಅದೇನಿಲ್ಲ.
ಕ : ನನ್ನ ಗೆಳೆಯನ ಮಗ
ಹಿ : ಆ
ಕ : ಮುತ್ತ ಶೆಟ್ಟಿ ಮಗ ಅಂತ ಹೇಳತೀನಿ.
ಹಿ : ಒಳ್ಳೇದು.
ಕ : ಯಾಕಾದೀತ್ರೀ ಹುಡುಗನ ಮುಖ ನಿಮ್ಮ ಮುಖ ಒಂದೇ ಐತಿ, ನಿನ್ನ ಮಗ ಅಂತಾಳೆ ಆಕಿ.
ಹಿ : ಹೌದೇ….
ಕ : ಹ್ಯಾ….ನನ್ನ ಮಗ ಅಲ್ಲ ನನ್ನ ಗೆಳೆಯನ ಮಗ ಅಂತೀನಿ. ನಾವಿಬ್ರು ಒಳಗ ಹೋಗಾನು.
ಹಿ : ಆ
ಕ : ಊಟಕೊಂಡು ಆಕಿನಾನು ಪಂಚಪಗಡಿ ಅಡಾಕ ಕುಂದ್ರುತೀವಿ.
ಹಿ : ಒಳ್ಳೇದು
ಕ : ನೀನೇನು ಮಾಡಬೇಕು ಅಂದ್ರೆ-ಕೈಯಾಗ ಬಾಣ ಬಡಿಗಿ ತೊಗೋಬೇಕು
ಹಿ : ಆ
ಕ : ದಡಲ್ ಬಡಲ್ ಅಂತ ಗಡಿಗಿಯಲಾ ಹೊಡಿಬೇಕು-ಅಡಿಗಿಮನಿಯಾಗ
ಹಿ : ಒಳ್ಳೇದು.
ಕ : ಈ ಹುಡುಗನ್ನ ಯಂಥಾನ ಕರ್ಕೊಂಬಂದ್ರಿ?
ಹಿ : ಹುಡಗೆಲ್ಲಾ ಗಡಿಗಿ ಹಾಳು ಮಾಡ್ತಾನಲ್ಲ.
ಕ : ಅಂತ್ಹೇಳಿ ಆಕಿ ಸಿಟ್ಟು ಮಾಡಿದಾಗ ನೀನು ಯಾಕ ಗಡಿಗಿ ಹೊಡಿದೋ ತಮ್ಮಾ ಅಂತ ನಾನು ಕೇಳಿದಾಗ-
ಹಿ : ಆಹಾ….
ಕ : ನೀವು ಪಗಡಿ ಆಟ ಆಡಿದ್ರಿ: ನಿಮಗೆ ಹೊತ್ತು ಹೋಗುತ್ತಿತ್ತು, ನನಗೆ ಸುಮ್ಮನೆ ಕುಂತ್ರೆ ಹೊತ್ತು ಹೋಗಲಿಲ್ಲ! ನೀವು ಪಗಡಿ ಆಟ ಆಡಿದ್ರೆ ನಾನು ಗಡಿಗಿ ಆಟ ಅಡ್ದೆ ಅಂತ ನೀನು ಹೇಳು.
ಹಿ : ಒಳ್ಳೇದು ಜವಾಬು!
ಕ : ನಿನಗೆ ಏನು ಕೊಟ್ರೆ ಹೊತ್ತು ಹೋಗತೈತಿ, ತಮ್ಮಾ ಅಂತ ನಿನಗೆ ಕೇಳಿದಾಗ ಆಯಮ್ಮನ ಕೊಳ್ಳಾಗ ಇದ್ದ ಶಿವದಾರ ಕೊಡಸ್ಬೇಕು ನನಗೆ. ಅಂದ್ರ ಹೊತ್ತು ಹೋಗತೈತಿ, ಅಂತ ನೀನು ಹೇಳು.
ಹಿ : ಆಗಲಿ ಪೂಜಾರಿ
ಕ : ಆ ಶಿವದಾರ ನಾನು ಇಸ್ಕೊಡ್ತೀನಿ, ಶಿವದಾರ ತೊಗೊಂಡು ಓಡಿ ಅಂಬಾನ ಗೂಡಿಗೆ ಬಂದು ಬಿಡು.
ಹಿ : ಆಹಾ! ಚಲೋ ಉಪಾಯ ಇದು ಪೂಜಾರಿ! ಆಗಲಿ ಪೂಜಾರಿ-ಇಬ್ರು ಹೋಗಾನು ನಡಿ.
ಕ : ಇಬ್ರು ಕುದ್ರಿ ಮ್ಯಾಲೆ ಕುತ್ಕೊಂಡು. ಆ ರಂಭಾವತಿ ಮಹಲಿಗೆ ಬರಬೇಕಾದ್ರೆ
|| ಪದ ||
ಆರುತಿ ಬೆಳಗಾನು ಬಾರೆ ತಾಯಿ
ಮೂರುತಿ ತಾಯಿ ಉಡು ರಾಜ ಮುಖಿ
ಬಂದಿತು ವರವಿಂದು ಮಂಗಳವಾಗಲಿ
ಬಂದಿತು ವರವಿಂದು ಮಂಗಳವಾಗಲಿ
ಸರ್ಪಭೂಷಣಗೆ ಜಯ ಲೋಲಗೆ
ಆರುತಿ ಬೆಳಗಾನು ಬಾರೆ ಸಖೀ
ಮಾನ್ಯತೆ ಮಾನ್ಯಗೆ ಜಯ ತೋರಿದ ಶೀಲಗೆ
ಖಂಡಿತ ಸುಗುಣಾ ಸುಗುಣಾಲೋಲಗೆ
ಆರುತಿ ಬೆಳಗಾನು ಬಾರೆ ಸಖೀ
ವಾಸುಳ್ಳ ಶಿಶುನಾಳಧೀಶಗೆ
ಚಿಗಟೇರಿ ಚನಿವಾರ ಪಾದವ ಪೂಜಿಸಿ ಆರುತಿ ಬೆಳಗಾನು ಬಾರೆ ಸಖೀ.
ಕ : ಓಹೋ ಹೋ ಮಹಾರಾಜಾ ಇದು ಯಾರ ಮಗಾರೀ?
ಹಿ : ಇದು ನನ್ನ ಗೆಳಿಯಾ ಮುತ್ತು ಶೆಟ್ಟಿ ಮಗಾ.
ಕ : ಹೋ ಯಾಕಾದೀತ್ರೀ!
ಹಿ : ಹೌದೇ?
ಕ : ಹುಡುಗನ ಮುಖಾ ನಿನ್ನ ಮುಖ ಒಂದೇ ಐತಿ!
ಹಿ : ಹೌದು ಒಂದೇ ಐತಿ.
ಕ : ಛೇ ಛೇ ನನ್ನ ಮಗ ಅಲ್ಲ ಗೆಳೆಯನ ಮಗ ಅಭ್ಯಾಸ ಆಗೇತಿ ನನಗೆ
ಹಿ : ಹೌದ್ರಿ.
ಕ : ಆ ಒಳ್ಳೇದು ಬರ್ರಿ ಅಂತ್ಹೇಳಿ ಒಳಗ ಕುದ್ರಿಕಟ್ಟಿ ರಾಜಗ ಮಗನಿಗೆ ನೀರೆರೆದು ಊಟಕ್ಕ ನೀಡಿದ್ಲು ಊಟ ಮಾಡಿದ್ರು! ಪಂಚ ಪಗಡಿ ಆಡಾಕ ರಾಜ ನೀಲಕುಮಾರ ರಂಭಾವತಿ ಇಬ್ರೂ ಕುಂತ್ರು.
ಹಿ : ಹೌದು.
ಕ : ಆಡಾಕ ಕುಂತಾಗ ಆ ಹುಡುಗ ನೋಡ್ತು. ಆ ಹುಡುಗ ಕೈಯಾಗ ಬಾಣ ಬಡಿಗಿ ತೂಗೊಂಡು ಗಡಿಗಿ ಹೊಡಿ ಅಂತ ಹೇಳ್ಯಾನ, ಬಡಿಗೀಗೆ ಕೈ ಹಚ್ಚಬಾರದು-ಅಂತು ಹುಡುಗ, ಅದು.
ಹಿ : ಆಹಾ
ಕ : ಕೈಯಾಗ ಒಣಕಿ ತೂಗೊಂತು, ಒಣಿಕಿ, ಒಳಗ ಬಂದು ನೋಡ್ತೈತಿ ಹಂಡೇವು, ತಪೇಲಿ ಕೊಡಪಾನ ಒಟ್ಟಿ ಬಿಟ್ಟಾಳ- ಪಾತ್ರದಾಕಿ!
ಹಿ : ಲೇಶಿ!
ಕ : ದಡಲ್ ಬಡಲ್ (ರಾಗವಾಗಿ) ಕುಟ್ಟುತೈತೆ ಹರಯನ್ನ ಮಾದೇವಾ ಅಯ್ಯೋ ಎಂಥ ಹುಡುಗನ್ನ ಕರ್ಕೊಂಡು ಬಂದ್ರಿಮಾರಾಜ! ಹುಡುಗನ್ನ ತುಡುಗ ನುಂಗ; ಸಾವು ನುಂಗ, ಹೊತ್ತುಗೊಂಡು ಹೋಗ ಸುಡುಗಾಡಿಗೆ.
ಹಿ : ಹಾಳ ಮಾಡಿ ಬಿಟ್ಟ-ಎಲ್ಲಾ
ಕ : ನೀನು ಸುಮ್ಮನಿರು ಸ್ವಲ್ಪ ರಂಭಾ, ಮೊದಲು ಸಿಟ್ಟಿನ ಹುಡುಗ ಕೈಯಾಗ ಒಣಕಿ ತೊಗೊಂಡೈತಿ, ನಿನಿಗೆ ಮದಿವಿ ಮಾಡಿತು. ನಾನಲ್ಲ ಕರೀತಿನಿ ಸುಮ್ಮನಿರು
ಹಿ : ಲೇ ಹಿಂಗ್ಯಾಕ ಗಲಾಟಿ ಮಾಡಿದೋ ಲೌಡಿ ಮಗನಾ….
ಕ : ಭಲೇ ಭಲೇ ಅಲೇಲೆ ಪೂಜಾರಿ ಲೌಡಿ ಮಗ ಅಂದ್ನಲ್ಲ ಇವನು! (ರಾಗ) ಹೆಂಗಾದ್ರು ಗುಡಿತಾಗ ಸಿಕ್ತಿ ಬಾರೋ ಪೂಜಾರೀ….
ಹಿ : ಹೌದು
ಕ : ಯಾಕಪ್ಪಾ ಗಲಾಟಿ ಮಾಡಿದೆಲ್ಲೋ?
ಹಿ : ಸುಮನೆ ಕುಂತ್ರೆ ಹೊತ್ತು ಹೋಗಲಿಲ್ಲಪ್ಪ
ಕ : ನೀವು ಪಗಡಿ ಆಡಿದ್ರೆ ಹೊತ್ತು ಹೋಗತೈತಿ, ನಾನು ಸುಮ್ಮನೆ ಕುಂತ್ರೆ ಹೊತ್ತು ಹೋಗಲಿಲ್ಲ! ನೀವು ಪಗಡಿ ಆಡಿದ್ರೆ ನಾನು ಗಡಿಗಿ ಆಟ ಆಡ್ದೆ.
ಹಿ : ಚಲೋ ಆಯ್ತು.
ಕ : ತಮ್ಮಾ ನಿನಗೆ ಏನು ಕೊಟ್ರು ಹೊತ್ತು ಹೊಗತೈತಿ.
ಹಿ : ಅದನ್ನಾರ ಹೇಳು.
ಕ : ಆ ರಂಭಾವತಿ ತಾಯಿ ಕೊಳ್ಳಾಗ ಶಿವದಾರ ಐತಲ್ಲ ಅದನ್ನ ಕೊಡ್ಸಿಬಿಡು. ಆಡ್ಕೊಂತ ಕುಂದ್ರತೀನಿ.
ಹಿ : ಹೌದು.
ಕ : ಏನೇ ರಂಭಾವತಿ, ಆ ಹುಡುಗ ಆಡ್ತಾನಂತೆ ಶಿವದಾರ ತಗದಕೊಟ್ಟು ಬಿಡು
ಹಿ : ಕೊಡಲಾರೆ-
ಕ : ಬ್ಯಾಡ್ರಿ ದೊಡ್ಡ ವಸ್ತು ಇದು. ಅಸುವಾಲ್ದಿ ಹುಡುಗ ಇದು; ಎಲ್ಲೆನ್ನ ಕಳದೀತು.
ಹಿ : ಹೌದು!
ಕ : ಕಳಿಯೋ ಹುಡುಗಲ್ಲ, ಮಹಾಪಕ್ಕ ಹುಷಾರಿ ಐತೆ, ಒಯ್ದರೆ ನನ್ನ ಗೆಳಿಯ ಮುತ್ತು ಶೆಟ್ಟಿ ಮನಿಗೆ ಒಯ್ತಾನೆ.
ಹಿ : ಹೌದು.
ಕ : ಮತ್ತ ಇಲ್ಲೇ ಇಸ್ಕೊಂಡು ಕೊಡ್ತೀನಿ, ಆಡ್ಲಿ ಕೊಡು-ಗಲಾಟೆ ಮಾಡ್ತೈತಿ!
ಹಿ : ಆಹಾ.
Leave A Comment