ಕಲಾಭಿರುಚಿ ಮಾನವನ ಹುಟ್ಟುಗುಣ. ತನ್ನ ಅನಿಸಿಕೆಯನ್ನು ತೋಡಿಕೊಳ್ಳಲು ಅವನು ಸಾಹಿತ್ಯದಂತೆ ಕಲೆಗಳನ್ನೂ ಸೃಜನಶೀಲವಾಗಿ ಬಳಸಿಕೊಂಡಿದ್ದಾನೆ. ಅವನ ಬದುಕಿಗೆ ಅನ್ನ ನೀರು ಗಾಳಿಗಳಂತೆ ಅವನ ಸಾಂಸ್ಕೃತಿಕ ಮುಖಕ್ಕೆ ಸಾಹಿತ್ಯದೊಂದಿಗೆ ಕಲೆಯೂ ಬೇಕೇ ಬೇಕು. ಜನಪದರಿಗೆ ಜೀವನದ ಪ್ರತಿಕ್ಷಣವೂ ಒಂದು ಕಲಾವಸ್ತು ; ಕಲಾಭಿ ವ್ಯಕ್ತಿಯ ವಸ್ತು. ಕಲೆ ಅವರ ಸಮಸ್ತ ಸಾರ್ಥಕ ಬದುಕಿನ ಒಂದು ಪ್ರಮುಖ ಅಂಗ.

ಅನಕ್ಷರತೆಗಿಂತ ಕಲಾಹೀನತ್ವ ಪಶುಲಕ್ಷಣವೆಂಬ ಮಾತು ಸರಿ. ಜನಪದರು ತಮ್ಮ ನೂರು ತೆರನ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರೇನಂತೆ, ಅವರ ಅಂತರಂಗದ ಬಾಗಿಲು ಮಾತ್ರ ಕಲಾದರ್ಶನಕ್ಕಾಗಿ ನಿಡುದೆರೆದಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಕಲಾ ಪ್ರಕಾರವು ಸಾಹಿತ್ಯಕ್ಕೆ ಸಮನಾಗಿ ನಿಲ್ಲುತ್ತಾ ಬಂದಿದೆ.

ಶಾಸ್ತ್ರೀಯತೆ, ಪ್ರಗಲ್ಭತೆಗಳ ಚಮತ್ಕಾರಕ್ಕಿಂತ ಜಾನಪದ ಕಲೆಗಳಲ್ಲಿ ಜನಪದರ ಕಲ್ಪನೆ, ಅನುಭವ, ಸದಾಸೆ, ಅನಿಸಿಕೆ, ನಂಬಿಕೆಗಳನ್ನು ಪ್ರಚೋದಿಸುವ ಗುಣಗಳಿರುತ್ತವೆ. ಶತಶತಮಾನಗಳ ಪರಂಪರೆಯ ಸತ್ವ ಅವುಗಳಲ್ಲಿ ಇಂಬುಗೊಂಡಿರುತ್ತದೆ.

ಮನುಷ್ಯ ತನ್ನ ಅಭಿವ್ಯಕ್ತಿಗಾಗಿ ಕಂಡುಕೊಂಡಿರುವ ಕಲಾಮಾಧ್ಯಮಗಳಲ್ಲಿ ಸಂಗೀತ, ನೃತ್ಯ, ಅಭಿನಯ, ಮಾತುಗಾರಿಕೆ, ಚಿತ್ರಶಿಲ್ಪ ಮುಖ್ಯವಾದುವು. ಇವಿಷ್ಟನ್ನೂ ಅವನು ಏಕತ್ರಗೊಳಿಸಿಕೊಂಡಿರುವುದೆಂದರೆ ರಂಗಕಲೆಗಳಲ್ಲಿ. ಈ ಸಮ್ಮಿಶ್ರ ಕಲೆಗಳು ಸಮೂಹ ಮಾಧ್ಯಮಗಳಲ್ಲೇ ಹೆಚ್ಚು ಪ್ರಭಾವಿಯಾದುವು. ಇವು ನೇರವಾಗಿ ಜನಸಮೂಹ ಮಧ್ಯೆ ಮಾತ್ರ ಬದುಕಬಲ್ಲಂಥವು; ಪ್ರೇಕ್ಷಕರೊಂದಿಗೆ ಅಪ್ರತ್ಯಕ್ಷ ಸಂಬಂಧವಿರಿಸಿಕೊಂಡಿರುವ ರೇಡಿಯೋ, ಸಿನಿಮಾ, ಟಿ. ವ್ಹಿ.ಗಳಂತಲ್ಲ. ನೋಡುಗರು ಪ್ರಾಯೋಜಕರೇ ಹೊರತು ಗಿರಾಕಿಗಳಲ್ಲ.

ಸಾಹಿತ್ಯದಂತೆ ರಂಗಕಲೆಗಳನ್ನು ಕೂಡಾ ಶಿಷ್ಟ ಮತ್ತು ಜಾನಪದವೆಂದು ವರ್ಗೀಕರಿಸಲಾಗಿದೆ. ಶಿಷ್ಟ ರಂಗಕಲೆಗಳು ಲಿಖಿತಕ್ಕಳವಡಲ್ಲವು. ಅವಕ್ಕೆ ಸಾಹಿತ್ಯೇತಿಹಾಸವೂ ಇದೆ. ಪಂಡಿತ ಸೃಷ್ಟಿಯಾದ ಅವುಗಳ ಭಾಷೆ ಶೈಲೀಕೃತ. ಆದರೆ ಜಾನಪದ ರಂಗ ಕಲೆಗಳ ಸ್ವಭಾವ ಬಹುಮಟ್ಟಿಗೆ ವಿಭಿನ್ನ. ಗ್ರಂಥ ಗುಣವಿಲ್ಲದ ಅವು ಕೇವಲ ಪ್ರಯೋಗ ಮೂಲವಾದ ಅನಕ್ಷರಿಗಳ ಸೃಷ್ಟಿಗಳು; ಜ್ಞಾಪಶಕ್ತಿಗೆ ಹೊಂದಿಕೊಳ್ಳುವ ಸ್ವಭಾವದ ಮೌಖಿಕ ಪರಂಪರೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಾಗಿಬಂದ ಅನಾಮಧೇಯ ಕಲಾಪ್ರಕಾರಗಳು. ಇವುಗಳನ್ನು ಆಡುವವರು ಹಾಗೂ ನೋಡುವವರಲ್ಲಿ ನಿರಕ್ಷರೀಗಾವಿಲರ ಸಂಖ್ಯೆಯೇ ಹೆಚ್ಚು.

ಧರ್ಮಪ್ರಜ್ಞೆ ಅಂಟಿರುವುದು ಮಾನವಕುಲಕ್ಕೆ ಮಾತ್ರವೇ ಎನ್ನುವ ಮಾತು ನಿಜ. ಧರ್ಮ ಪರಾಯಣತೆ ನಮ್ಮ ಅನೇಕ ಜಾನಪದ ಕಲೆಗಳ ಉಗಮ ಮತ್ತು ಪರಿ ಪೋಷಣೆಗೆ ಕಾರಣವಾಗಿದೆ. ಇಂಥ ಕಲೆಗಳು ಅರಾಧನೆಯೊಂದಿಗೆ ತಮ್ಮ ಮನರಂಜನಾ ಗುಣದಿಂದ ಲೌಕಿಕಕ್ಕೂ ಭರಿತವಾಗಿವೆ.

ಜಾನಪದ ಸಾಹಿತ್ಯದಂತೆ ಜಾನಪದಗಳ ಕಲೆಗಳೂ ರಾಜಕೀಯ ಸಂಗ್ರಾಮ, ಧಾರ್ಮಿಕ ಸಂಘರ್ಷ, ಆರ್ಥಿಕ ಏರುಪೇರುಗಲಿಗೆ ಸ್ಪಂದಿಸಿಯೂ ತಮ್ಮತನವನ್ನು ಕಾಪಾಡಿಕೊಳ್ಳುತ್ತಾ ಬಂದಿವೆ. ಕಲಾದರ್ಶನಕ್ಕೆ ಅತ್ಯಗತ್ಯವಾದ ನೋಡುವ ಕಣ್ಣು, ಕೇಳುವ ಕಿವಿ, ಅರಿವ ಬುದ್ಧಿ, ಅನುಭವಿಸುವ ಹೃದಯವಂತಿಕೆಗಳನ್ನು ಜನಪದರು ರೂಢಿಸಿಕೊಂಡಿರುವುದರಿಂದಲೇ ಎಷ್ಟೆಲ್ಲಾ ಕಲಾಪ್ರಕಾರಗಳು ಮೈದಾಳಿ ಈವರೆಗೆ ಬಾಳುತ್ತಾ ಬಂದಿವೆ.

ಜನರೊಂದಿಗೆ ಒಡನಾಡುವ ಜನಪದ ಕಲೆಗಳಿಗೆ ರಾಜಾಶ್ರಯದ ಹಂಗಿಲ್ಲ. ಅವುಗಳ ವಸ್ತು, ಭಾಷೆ, ನಿರ್ವಹಣೆಗಳಲ್ಲಿ ಯಾರೊಬ್ಬರ ಪರಾಕೂ ಇಲ್ಲ. ಜನಪದ ಕಲಾವಿದರಿಗೆ ಸಮೂಹ ಪ್ರಜ್ಞೆ ಮುಖ್ಯ. ಅವರೆಲ್ಲ ಕಲಾ ಪ್ರಕ್ರಿಯೆಗಳೂ ತಮ್ಮ ಸಮೂಹದ ಅಂಗವಾಗಿ ಸಾಮಾಜಿಕ, ಧಾರ್ಮಿಕ, ನೈತಿಕ, ಮನರಂಜನಾತ್ಮಕ ಜೀವನ ವಿಧಾನಕ್ಕೆ ಹೊಂದಿಕೊಂಡೇ ಇರುತ್ತವೆ.

ವಾಕ್ಸಂಪ್ರದಾಯ

ಭಾಷೆ ಸಾಮಾಜಿಕ ಬದುಕನ್ನು ಹೊಂದಿಕೊಂಡು ಜೀವಿಸುವಂಥದ್ದು. ನಾವು ಬಳಸುವ ಶಬ್ದಗಳು ಹಾಗೂ ಅವುಗಳ ವ್ಯಾಕರಣ ಭಾಷೆಯ ಅಂಗಗಳು. ಮನುಷ್ಯ ವಿದ್ಯಾವಂತನಿರಲಿ ಅವಿದ್ಯಾವಂತನಿರಲಿ ತನ್ನ ಅನಿಸಿಕೆಗಳನ್ನು ಸಮರ್ಥವಾಗಿ ನಿವೇದಿಸಲು, ತನ್ನವರೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಭಾಷೆಯೇ ಸುಲಭ ಸಾಧನ. ಅವನು ತನ್ನ ದಿನದ ಬಹು ಭಾಗವನ್ನು ಕಲೆಯುವುದೇ ವಾಗ್ವ್ಯವಹಾರದಲ್ಲಿ. ಗತಿಶೀಲತೆ, ಅವಸ್ಥಾಭೇದ, ಪ್ರಾದೇಶಿಕತನಗಳು ಭಾಷೆಯ ಮೂಲ ಸ್ವಭಾವ. ಭಾಷೆ ವಿಶ್ವವ್ಯಾಪಿ, ವಿಶ್ವರೂಪಿ, ಸರ್ವರ ಸೊತ್ತು. ಅವರಿವರೆನ್ನದೆ ಎಲ್ಲರ ಕೈವಾರಿ. ಪ್ರತಿಯೊಬ್ಬರ ನಾಲಿಗೆಗೂ ಹೊಂದಿಕೊಂಡು ಅಭಿವ್ಯಕ್ತಿಗೆ ಮಾಧ್ಯಮವಾಗುವ ಸಾರ್ವತ್ರಿಕ ಸ್ವಭಾವ ಅವರದ್ದು. ಯಾವಜ್ಜೀವದ ಬಳಕೆಯ ಈ ಭಾಷೆ ಶಿಷ್ಟರಿಗೂ ಸಾಮಾನ್ಯರಿಗೂ ನೇರ ಸಂಪರ್ಕ ಕಲ್ಪಿಸುವ ಸಾಧನ.

ಭಾಷೆ ಎರಡು ರೂಪದಲ್ಲಿ ವರ್ತಿಸುತ್ತದೆ.

೧) ಧ್ವನಿರೂಪ
೨) ಲಿಖಿತ ರೂಪ

ಧ್ವನಿರೂಪ ಶ್ರವಣಗ್ರಾಹ್ಯ, ಉಚ್ಚಾರ ಶೀಲ ಹಾಗೂ ಮೌಖಿಕ ಸ್ವಭಾವಿ. ಲಿಖಿತ ರೂಪ ಚಾಕ್ಷುಸ ಸ್ವಭಾವದ್ದು. ಓದುಬಲ್ಲ ಸಾಕ್ಷರರಿಗೆ ಮಾತ್ರ ನಿಲುಕುವಂಥಾದ್ದು. ಹಾಗೆ ನೋಡಿದರೆ ಸಾಕ್ಷರತೆ ಕೂಡಾ ಮೌಖಿಕತೆಯ ಒಂದು ಭಾಗ, ಯಾಕೆಂದರೆ ಸಾಕ್ಷರರೂ ನಿರಕ್ಷರಿಗಳಂತೆ ಮಾನವ ಸಮಾಜದ ಅಂಗವೇ. ಲಿಪಿಯ ಶೋಧನಾ ತಾಂತ್ರಿಕತೆ ಹಾಗೂ ಅದರ ವಿಸ್ತೃತ ಸಾಧ್ಯತೆಗಳ ಅಗಾಧತೆ ಮಾನವ ಸಮಾಜದ ಮೇಲೆ ಏಕಪ್ರಕಾರದ ಪ್ರಭಾವ ಬೀರುತ್ತಲೇ ಇವೆ. ಘಟನೆಗಳು ಓದುವುಕೆಯಲ್ಲಿ ಸಂಭವಿಸುವುದಕ್ಕಿಂತ ಕಿವಿಯಾರೆ ಕೇಳಿದಾಗ, ಅಭಿನಯಗೊಂಡಾಗ ಅವು ನಮಗೆ ನಿರಾಳವಾಗಿ ನಾಟುತ್ತವೆ. ಆದ್ದರಿಂದಲೇ ಕೇವಲ ಗ್ರಂಥಗಳು ಮಾತ್ರ ಸಂಪೂರ್ಣವಾಗಿ ಮಾನವನ ಮುಖವಾಣಿಯಾಗಲಾರವು. ಲಿಪಿ ಒಂದು ನಿರ್ದಿಷ್ಟ ಪಠ್ಯವಾದ್ದರಿಂದ ಅದರ ಪಠಣ ವಾಚನಗಳು ಮೌಖಿಕವೆನ್ನಿಸುವುದಿಲ್ಲ. ಆಡುಮಾತಿನ ನೆಯ್ಗೆ, ಶೈಲಿ, ಧ್ವನಿ, ಬಂಧ ಲಿಖಿತಕ್ಕಿಂತ ಬೇರೆಯದೇ ಆದ ಅನುಭವ ಕೊಡುತ್ತವೆ.

ಅಕ್ಷರಗಳಿಂದ ಶಾಬ್ದಿಕ ಭಾಷೆ ರೂಪಗೊಳ್ಳದೆ ಕ್ರಿಯಾತ್ಮಕ ಧ್ವನಿಯ (Sound) ಉಚ್ಚಾರದಿಮ್ದ ಹುಟ್ಟಿದೆ. ಭಾಷೆಯ ಮೌಖಿಕ ಗುಣಸ್ವಭಾವ ಅಡಗಿರುವುದೇ ಅದರ ಧ್ವನಿಯಲ್ಲಿ ನಮ್ಮೆಲ್ಲ ಜೀವನ ವಿಧಾನದ ಗ್ರಹಿಕೆ ಸಂವೇದನೆಗಳನ್ನು ಮೂಲಸ್ವರೂಪದಲ್ಲೇ ಸುಲಭವಾಗಿ ಪ್ರಕಟಪಡಿಸಲು ಭಾಷೆ ಮತ್ತು ಅದರ ಕಂಠ ಪರಂಪರೆಯೊಂದೇ ತಾರಕ. ನಿರಂತರತೆ ಭಾಷೆಯ ಜೀವಾಳ. ಪರಸ್ಪರ ಅನುಕರಣೆ ಅನುಸರಣೆಗಳೇ ಅದರ ಆ ಲಕ್ಷಣಗಳಿಗೆ ಕಾರಣ. ಮಾನವನ ಮೌಖಿಕ ಭಾಷಾಗುಣ ಎಂದೂ ಪಳಿಯುಳಿಕೆಯಾಗದ ಚಿರಂಜೀವಿ. ಇನ್ನೊಂದು ವಿಶೇಷವೆಂದರೆ ಭಾಷೆಯ ಮೌಖಿಕ ರೂಪ ಪರಿಸ್ಥಿತಿಗೆ ತಕ್ಕಂತೆ ವರ್ತಿಸುವ ಮೂಲಕ ಸ್ಪಂದಿಸುವುದು. ವ್ಯಾಕರಣದ ಸೂತ್ರಗಳಿಗಾಗಲೀ, ಒಂದು ನಿರ್ದಿಷ್ಟ ವಾಕ್ಯರಚನಾ ಕ್ರಮಕ್ಕಾಗಲೀ ಅದು ಸಂಪೂರ್ಣ ಹಿಡಿತಗೊಳ್ಳುವುದಿಲ್ಲ.

ಪಂಪ, ಶರಣರು, ದಾಸರು ಮುಂತಾದವರಿಂದ ಕನ್ನಡ ಭಾಷೆಯು ತನ್ನ ಸಾಹಿತ್ಯಿಕ ರೂಪದಲ್ಲಿ ಒಂದೊಂದು ಪರಂಪರೆಯನ್ನು ಕಾಣುತ್ತಾ ಬಂದಿದೆ. ಆದರೆ ಜನಪದರ ಭಾಷೆಯಾದರೋ ಯಾರೊಬ್ಬರ ಮಾರ್ಗವನ್ನೂ ತುಳಿಯದೇ ಸಾಮೂಹಿಕತೆಯ ಮೂಸೆಯಲ್ಲಿ ನಿರಂತರವಾಗಿ ಕಾಲಕ್ಕೆ ತಕ್ಕಂತೆ ಮೈ ಪಡೆಯುತ್ತಾ ಲಕಲಕಿಸುತ್ತದೆ. ಇದು ನೂರಕ್ಕೆ ನೂರು ಶಬ್ದಕೋಶ ನಿರ್ದೇಶಿತ ಭಾಷೆಯಲ್ಲ. ಬದುಕಿನ ವ್ಯಾವಹಾರಿಕ ಒಡನಾಟದ ಕ್ರಿಯಾಶೀಲ ಭಾಷೆ. ಜಾನಪದ ಭಾಷೆಗೆ ಸ್ವಭಾವಜನ್ಯವಾದ ಗಡುಸಾದ ತ್ರಾಣದ ತುಡಿತವಿರುತ್ತದೆ. ಅದಕ್ಕಾಗೇ ಕವಿರಾಜ ಮಾರ್ಗಕಾರ “ನಾಳ್ನುಡಿಯ ಬೆಡಂಗು” ಎಂದಿರುವುದು.

ಈ ಎಲ್ಲಾ ಲಕ್ಷಣಗಳಿಂದಾಗಿ ಯಾವುದೇ ಪ್ರಾದೇಶಿಕ, ಸಾಂಸ್ಕೃತಿಕ, ಇತಿಹಾಸದ ಅಧ್ಯಯನಕ್ಕೆ ಅಲ್ಲಿಯ ಭಾಷಾ ವಾಕ್ಸಂಪ್ರದಾಯ ಅತಿ ಮುಖ್ಯ. ಯಾಕೆಂದರೆ ಅದು ಮಾನವನ ವೈಶಿಷ್ಟ್ಯಗಳಲ್ಲೇ ವಿಶಿಷ್ಟವಾದದ್ದು. ಆ ಒಂದು ಉಪಕರಣದಿಂದ ಅವನು ಜೀವ-ಜಗತ್ತಿನ ಹಿಂದು-ಇಂದು-ಮುಂದುಗಳನ್ನು ತನ್ನ ಬುದ್ಧಿಮತ್ತೆಯಿಂದ ಪರಿಭಾವಿಸಿ ಹೇಳಬಲ್ಲ.

ಕಥೆಯ ಕತೆ

ಕಥೆಯೆಂದರೆ ಹೇಳುವ ಮಾತು ಎಂಬ ಅರ್ಥವಿದೆ. ಗುಣ್ಯಾಢ್ಯನ ಪ್ರಕಾರ ಕಥೆ ಗದ್ಯಗುಣದ್ದು. ಮಾಸ್ತಿಯವರು ಹೇಳಿರುವಂತೆ ಕಥೆಯೆನ್ನುವುದು ಕಥಿತವಸ್ತು. ಒಂದು ಘಟನೆ ಹಾಗೂ ಅದರ ಗತಗೋಷ್ಠಿಯ ಕಥನ ಅದರ ಪ್ರಮುಖ ಲಕ್ಷಣ. ಕಥೆ ಒಬ್ಬ ವ್ಯಕ್ತಿಯು ತನ್ನ ಅಂತಸ್ಸತ್ವದಿಂದ ಕಟ್ಟಿದಂಥದ್ದಾದರೂ ಅದಕ್ಕೆ ಸಾಮೂಹಿಕ ರೂಪ ಒದಗಿ ಇಡೀ ಜನಪದದ ಸೊತ್ತಾಗುತ್ತದೆ. ಸಾವಿರ ಬಾಯಿಗಳಲ್ಲಿ ಬದುಕಿ ಬೆಳೆಯುತ್ತಲೇ ನಡೆವ ಗುಣ ಕಥೆಗಳದ್ದು ; ಲಿಪಿ ರೂಪದಲ್ಲಿ ಗ್ರಂಥದ ಗಾದಿಯೇರದ ಕಥೆಗಳ ಗಾತ್ರ ಪರ್ವತ ಪ್ರಮಾಣದ್ದು.

ಕಥೆಗೆ ಕಥಾವಸ್ತು, ಕಥೆಗಾರ ಮತ್ತು ಕೇಳುಗ ಬೇಕೇಬೇಕು. ಕಥೆ ಕಟ್ಟಿಕೊಂಡು ಯಾರೊಬ್ಬರೂ ತನಗಾಗಿ ಇಟ್ಟುಕೊಳ್ಳಲಾಗುವುದಿಲ್ಲ; ತನ್ನವರೊಂದಿಗೆ ಹಂಚಿಕೊಂಡೇ ತೀರುವುದು ಮಾನವ ಸಹಜ ಸ್ವಭಾವ. ಕಥೆಗಳಿಲ್ಲದ ಜನಾಂಗವಿಲ್ಲ; ಎಲ್ಲಾ ರಾಷ್ಟ್ರಗಳಲ್ಲೂ ಕಥಾ ಪರಂಪರೆ ಇದೆ. ಈ ಪ್ರಪಂಚದಲ್ಲಿ ಕಥೆಗಳ ಪ್ರಮುಖ ರಕ್ಷಕರೆಂದರೆ ಭಾರತ ಇಂಡೋನೇಶಿಯಾ, ಮಧ್ಯ ಏಶಿಯಾಗಳೆಂದು ಇತಿಹಾಸಜ್ಞರು ಗುರುತಿಸಿದ್ದಾರೆ.

ಕಥೆಗಳು ಆಯಾ ಪ್ರದೇಶದ ಜನಪದರ ವ್ಯವಹಾರಿಕ ಮೌಖಿಕ-ಭಾಷೆಯಲ್ಲೇ ಹುಟ್ಟಿವೆ. ಕರ್ಣಾಕರ್ಣಿಯಾಗಿದ್ದ ಕಥಾ ಸಾಹಿತ್ಯ ಗ್ರಂಥಸ್ಥಗೊಂಡದ್ದು ಲಿಪಿ ಹುಟ್ಟಿ ಪ್ರೌಢಗೊಂಡ ನಂತರವೇ. ಕಥೆ ಸವ್ಯಸಾಚಿ; ಶಿಷ್ಟ ಹಾಗೂ ಪರಿಶಿಷ್ಟಗಳೆರಡಕ್ಕೂ ಬೇಕಾದ ನಿರೂಪಣಾ ಮಾಧ್ಯಮ. ಅರಸರ ಒಡ್ಡೋಲಗದಲ್ಲಿಯಂತೆ. ಮನೆ-ಮನೆಗಳಲ್ಲಿ, ಗುಡಿಸಲು-ಗುಡಿಸಲುಗಳಲ್ಲಿ, ಬೀದಿ-ಬೀದಿಗಳಲ್ಲಿ ಅದಕ್ಕೆ ಮನ್ನಣೆಯ ಮಣೆ ಇದೆ. ಕತೆ ಹೇಳುವ, ಕೇಳುವ ಪರಂಪರೆ ತುಂಬಾ ಪುರಾತನ; ನಮಲ್ಲಂತೂ ವೇದ ಕಾಲದಷ್ಟು ಹಿಂದಿನದು. ಶಿಲಾಶಾಸನಗಳಲ್ಲಿ ಕಥಾ ಪ್ರಕಾರದ ಉಲ್ಲೇಖವಿರುವುದನ್ನು ನಾವು ಕಾಣಬಹುದು. ಮಧುಸೂದನನೆಂಬ ಅಧಿಕಾರಿಯು ಗಾಯಕ ವಾದಕರಿಗೊಂದೇ ಅಲ್ಲ ಕಥಕರಿಗೂ ದಾನ ಮಾಡುತ್ತಿದ್ದನಮ್ತೆ. ಬಳ್ಳಿಗಾವಿಯ ಕೇದಾರ ಮಠವು ಗಾಯಕ-ವಾದಕ-ನರ್ತಕರಂತೆ ಕಥಕರಿಗೂ ಆಶ್ರಯ ಸ್ಥಾನವಾಗಿತ್ತಮ್ತೆ. ದಾನಚಿಂತಾಮಣಿ ಅತ್ತಿಮಬ್ಬೆ ಕೂಡಾ ಇದೇ ರೀತಿ ಅನ್ಯ ಕಲಾವಿದರೊಂದಿಗೆ ಕಥಕರಿಗೂ ದಾನಪೋಷಣೆ ನೀಡುವ ಸುಮಭಿಲಕ್ಷಿತಾರ್ಥ ದಾನವಿನೋದೆಯಾಗಿದ್ದಳಂತೆ.

ಕಥೆಗಾರರು ವ್ಯಾಸ ವಾಲ್ಮೀಕಿಗಳಂತೆ ಮುನಿಗಳಲ್ಲ. ಕಾಳಿದಾಸ, ಹರ್ಷ, ಭವಭೂತಿ, ಭಾಸ, ಪಂಪ, ರನ್ನರಂತೆ ವಿದ್ವತ್ ಪ್ರಗಲ್ಭರಲ್ಲ. ಕಥೆ ಹೇಲಬಲ್ಲವರು ಮನೆ ಮನೆಯ ಶ್ರೀ ಸಾಮಾನ್ಯರು; ಅಜ್ಜ, ಅಜ್ಜಿ, ಅಪ್ಪ, ಅವ್ವ, ಊರು ಕೇರಿಗಳ ಹಿರಿಯರು. ಹೀಗೆ, ಅಬಾಲವೃದ್ಧರಾದಿಯಾಗಿ ಕಥೆ ಹೇಳುವ-ಕೇಳುವ ಸಾಮರ್ಥ್ಯವಿದ್ದವರಿಲ್ಲದ ಊರಿಲ್ಲ. ಕಥೆಗಳಲ್ಲಿ ಪುರಾಣ ಕಥೆಗಳು, ನಗದವರನ್ನು ನಗಿಸುವ ಕಥೆಗಳು, ಶೃಂಗಾರಾದ್ಭುತ ಕತೆಗಳು, ಲೌಕಿಕ ಕಥೆಗಳು, ಕಟ್ಟು ಕತೆಗಳು ಹೀಗೆ, ಇವುಗಳ ವರ್ಗೀಕರಣದ ಪಟ್ಟಿಯೊಂದು ಬೆಳದೇ ಬೆಳೆವ ಹನುಮನ ಬಾಲ. ಈ ಅಪಾರ ಕಥಾರಾಸಿಯಲ್ಲಿ ಲೌಕಿಕ ನೀತಿ ಕಥೆಗಳ ಬಾಹುಳ್ಯವೇ ದೊಡ್ದದು.

ಕಥೆಗಳನ್ನು ಸ್ಥೂಲವಾಗಿ ಈ ಪೀಠಿಕೆಯ ಅನುಲಕ್ಷ್ಯದಲ್ಲಿ ಮೂರು ವಿಧವಾಗಿ ವಿಂಗಡಿಸಬಹುದು.

೧. ಮನೆಗತೆ
೨. ಕಥೋಪಜೀವಿಗಳು ಹೇಳುವ ಕತೆಗಳು
೩. ಕೀರ್ತನದ ಕತೆಗಳು

ಮನೆಗತೆ ಹೇಳುವವರು ನುರಿತ ಹವ್ಯಾಸಿಗಳಲ್ಲೊಬ್ಬರು. ಕೇಳುಗರೆಲ್ಲರ ಪ್ರತಿನಿಧಿಯಾಗಿ ಒಬ್ಬರು ಕತೆಗಾರನ ನಿರೂಪಣೆಯ ಪ್ರತಿ ವಾಕ್ಯಕ್ಕೂ ‘ಹೂಂ’ಗೊಡದಿದ್ದರೆ ಕತೆ ಮುಂದೆ ಸಾಗದು. ಇದು ಹಾಡುವಾತಗೆ ಹಿಮ್ಮೇಳಿಗರು ಸೊಲ್ಲು ನೀಡುವಂತೆ ವರ್ತಿಸುತ್ತದೆ; ಬಹುತೇಕ ಬಿಡುವಿನ ವೇಳೆ, ರಾತ್ರಿ ಮಲಗುವ ಮನ್ನಿನದು ಕಥಾ ಸಮಯ. ಆರಾಧನೆಯ ಗೋಜಿಲ್ಲದ, ಆಡುಮಾತಿನ ಗದ್ಯ ಶೈಲಿಯ ಅವುಗಳಲ್ಲಿ ೯೯% ಕಾಲ್ಪನಿಕ. ಮನೆ, ಪಡಸಾಲೆಗಳಲ್ಲಿ ಕುಳಿತು ಹೇಳುವ ಕತೆಗಳಲ್ಲಿ ಭಾವಾಭಿನಯ ಮಾತ್ರವಿರುತ್ತದೆ. ಅವುಗಳಲ್ಲಿ ಸಾರ್ವತ್ರಿಕ ಮನೋಧರ್ಮ, ಅತಿಮಾನುಷ ವಾತಾವರಣ, ಹೋರಾಟ, ಲೋಕಾನುಭವಗಳು ಇಡಿಕಿರಿದುತ್ತದೆ. ಈ ಪ್ರಪಂಚದ ಜೀವ-ಜಡಗಳೆಲ್ಲ ಕಥಾಪಾತ್ರಗಳೇ. ಕತೆಗಾರರ ಪ್ರತಿಭೆ, ಕಲ್ಪನಾ ಬಾಹುಳ್ಯ, ಕೇಳುಗರ ಕುತೂಹಲಗಳನ್ನನುಸರಿಸಿ ಸಮಯಕ್ಕೆ ತಕ್ಕಂತೆ ಅವುಗಳ ಗಾತ್ರ ಹಿಗ್ಗಬಲ್ಲುದು; ಕುಗ್ಗಲೂಬಹುದು. ಇವುಗಳಿಗೆ ಸ್ಥಳ ಕಾಲಗಳ ಬಂಧವಿಲ್ಲ. ಅನಾಮಧೇಯ ಸ್ವಭಾವದ ಇವುಗಳ ಮೂಲವನ್ನು ಶೋಧಿಸಲಾಗುವುದಿಲ್ಲ.

ಕಥೆ ಹೇಳುವುದನ್ನೇ ವೃತ್ತಿ ಮಾಡಿಕೊಂಡ ಅನುವಂಶಿಕ ಜಾನಪದ ಕಥೋಪ ಜೀವಿಗಳು ನಿರಕ್ಷರಿಗಳು. ಇವರಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಅಲೆಮಾರಿಗಳೇ ಹೆಚ್ಚು. ಈ ಕಥನಕಾರರ ಸಂಖ್ಯೆ ನಮ್ಮ ಕನ್ನಡ ನಾಡಿನಲ್ಲಿ ದೊಡ್ದದಿದ್ದರೂ ಅವರಲ್ಲಿ ಚೌಡಿಕೆಯವರು, ನೀಲಗಾರರು, ಕಂಸಾಳೆಯವರು, ಗಣಿಯವರು, ಕಿನ್ನರಿ ಜೋಗಿಗಳು, ಗೊಂದಲಿಗರು, ತಂಬೂರಿಯವರು, ಗೊರವರು, ದೊಂಬಿದಾಸರು, ಹೆಳವರು ಪ್ರಮುಖರು. ಇವರಲ್ಲಿ ಹಲವರು ಬರೀ ಪದ್ಯದ ಮೂಲಕ ಕಥೆ ನಿರೂಪಿಸಿದರೆ ಇನ್ನೂ ಹಲವರು ಕೇವಲ ಗದ್ಯದಲ್ಲಿ ಹೇಳುತ್ತಾರೆ. ಮತ್ತೆ ಕೆಲವರು ಗದ್ಯ-ಪದ್ಯಗಳೆರಡನ್ನೂ ಬಳಸಿಕೊಳ್ಳುತ್ತಾರೆ. ಆದರೆ ಅವರ ನಿರೂಪಣಾ ಶೈಲಿಗಳಲ್ಲಿ ವ್ಯತ್ಯಾಸವಿದೆ. ಅಚರ ಒಂದೊಂದು ಕಥನ ಕಲಾ ಪ್ರಕಾರಕ್ಕೂ ಬೇರೆ ಬೇರೆ ವಾದ್ಯಗಳು, ಪೋಷಕುಗಳು ನಿರ್ದಿಷ್ಟವಾಗಿವೆ. ಪ್ರಮುಖ ಕತೆಗಾರನಿಗೆ ಹಿಮ್ಮೇಳಿಗರಿದ್ದು, ಅವರು ವಾದ್ಯ ವಾದನದಿಂದ, ಸಂಭಾಷಣೆ ಹಾಗೂ ತಮ್ಮ ಸೊಲ್ಲು-ಪಲ್ಲವಿ ಉದ್ಗಾರಗಳಿಂದ ಕತೆಗೆ ಕಳೆಗಟ್ಟಿಸುತ್ತಾರೆ. ಕನ್ನಡ ಜಾನಪದ ಕಥನ ಗೀತೆಗಳನ್ನು ಡಾ. ಎಂ. ಚಿದಾನಂದಮೂರ್ತಿ ಅವರು ಪಾಮರ ಲೋಕದ ಒಂದು ಪ್ರಕಾರವೆಂದರೆ, ಡಾ. ಎಂ. ಎಂ. ಕಲಬುರ್ಗಿ ಅವರು ಒಂದು ‘ದೃಶ್ಯ ಪ್ರಭೇದ’ ವೆಂದು ಕರೆದಿದ್ದಾರೆ. ಹಿಂದಿನ ಕಾಲದ ನಮ್ಮ ಪಂಡಿತರು ಈ ದೇಸೀ ದೃಶ್ಯ ಕಾವ್ಯವನ್ನೇ “ಭಾಜನೆ ಗಬ್ಬ” ವೆಂದು ಹೆಸರಿಸಿದ್ದಾರೆ.

ಕನ್ನಡದಲ್ಲಿ ಹದಿನೈದು ವಿಧದ ಜನಪದ ವೃತ್ತಿ ಕಥನ ಗಾಯಕರಿದ್ದಾರೆಂದು ಗುರುತಿಸಲಾಗಿದೆ. ಇವರ ಅಜ್ಞಾತ ಕೃತಿಗಳನ್ನು ಬೆಳಕಿಗೆ ತಂದ ಶ್ರೇಯಸ್ಸು ಡಾ. ಜೀಶಂಪ, ಡಾ. ಎಚ್. ಎಲ್. ನಾಗೇಗೌಡ, ಕಾರಾಕೃ, ದಿ. ಡಾ. ಗದ್ಗಿಮಠ ಅವರಿಗೆ ಸಲ್ಲಬೇಕು.

ಕತೆಗಳ ಉದ್ದೇಶ ನೀತಿ ನಿರೂಪಣೆ ಹಾಗೂ ಮನರಂಜನೆ. ಇವುಗಳ ಪ್ರಾಯೋಜಕರು ನಿಮ್ಮ ವರ್ಗಗಳ ಅಶಿಕ್ಷಿತರೇ. ಇಡೀ ರಾತ್ರಿ ನಡೆಯುವ ನಿಡುಗತೆಗಳಲ್ಲಿ ಉಪಕತೆಗಳಿರುವುದು ವಾಡಿಕೆ. ಕತೆಯ ಹಂದರದಲ್ಲಿ ಅತಿಮಾನುಷ ವಾತಾವರಣದೊಂದಿಗೆ ಲೋಕಾನುಭವವಿರುತ್ತದೆ. ರಾಜ-ರಾಣಿಯರು ಮುಖ್ಯ ಪಾತ್ರಗಳಾಗಿರುವುದೇ ಹೆಚ್ಚು ಅವರ ಧೈರ್ಯ, ಅತುಲ ಪರಾಕ್ರಮ, ಹೋರಾಟ, ಮಂತ್ರ ಮಾಟ, ಪವಾಡಗಳ ಪ್ರಸಂಗಗಳೂ ಅದರಲ್ಲಿ ಇರುತ್ತವೆ. ಗ್ರಾಮೀಣ ಪ್ರದೇಶದಲ್ಲೇ ಇವುಗಳ ಪ್ರಯೋಗ ಹೆಚ್ಚು.

ಈ ಕಥೋಪಜೀವಿಗಳ ಕಥನಗಾರಿಕೆಗೆ ಓಣಿಯ ಯಾರದೋ ಮನೆಯ ಕಟ್ಟಿ ಇಲ್ಲವೇ ಅಂಗಳದಲ್ಲಿಯ ಹಂದರವೂ ಆದೀತು. ಭಿಕ್ಷಾಟನೆಗೆಂದು ಹಳ್ಳಿಗಳನ್ನು ಸುತ್ತುವಾಗ ವಿಶೇಷ ಸಂದರ್ಭಗಳಲ್ಲಿ ಸಂಭಾವನೆ ಗೊತ್ತುಮಾಡಿಕೊಂಡು, ವೀಳ್ಯ ಪಡೆದೇ ತಮ್ಮ ಕಲಾ ಪ್ರದರ್ಶನ ಮಾಡುವ ಪದ್ಧತಿ ಇದೆ.

ಕಥಾ ಕೀರ್ತನ

ಕೀರ್ತನ ಏಕವ್ಯಕ್ತಿ ಕಥಿಸುವ ಕಲೆ. ಕೀರ್ತನಕಾರನು ವೃತ್ತಿನೈಪುಣ್ಯ ಸಾಧಿಸಿಕೊಂಡಿರುವಂಥ ಹೆಚ್ಚಾಗಿ ಮೇಲ್ವರ್ಗದ ಸುಶಿಕ್ಷಿತ; ನಿರ್ದಿಷ್ಟ ವೇಷಧಾರಿ. ಆತ ನಿಂತೇ ಕಥೆ ನಡೆಸುವುದು ವಾಡಿಕೆ. ಕೀರ್ತನವು ನಿರೂಪಣಾ ವಾಕ್ಸಂಪ್ರದಾಯದ್ದಾದರೂ ಭಾಷೆಯಲ್ಲಿ ಶಿಷ್ಟತೆ ಹೆಚ್ಚು. ಸಂಭಾಷಣೆ ಏಕಪಾತ್ರಾಭಿನಯದ ಮಾದರಿಯದು. ಸಾಂದರ್ಭಿಕವಾಗಿ ಹಾಡುಗಳನ್ನು ಬಳಸುವುದರಿಂದ ಚಿಟಕಿ, ತಾಳ, ಹಾರ್ಮೋನಿಯಂ, ತಬಲಾ ಮುಂತಾದ ವಾದ್ಯಗಳನ್ನು ವಾದಕರು ಹಿನ್ನೆಲೆ ವಾದಕರಾಗಿರುತ್ತಾರೆ. ಕೀರ್ತನಕಾರನು ಚಿಟಕಿ ಇಲ್ಲವೆ ತಾಳಗಳನ್ನು ನುಡಿಸುತ್ತಾ ಕಥೆ ನಡೆಸುವುದು ಪದ್ಧತಿ ಕಥಾ ವಸ್ತುಗಳೆಲ್ಲ ಭಕ್ತಿರಸ ಪ್ರಧಾನ. ದೇವಾನುದೇವತೆಗಳನ್ನು ಕುರಿತ ಪೌರಾಣಿಕ ಪ್ರಸಂಗಗಳು ಹಾಗೂ ಧಾರ್ಮಿಕತೆ ಅವುಗಳ ತಿರುಳು. ನಿರೂಪಣೆ ಗದ್ಯದೊಂದಿಗೆ ತನ್ನದೇ ಆದ ವಿಶಿಷ್ಟ ರೀತಿಯ ರಾಗದ ಗತ್ತನ್ನೂ ಹೊಂದಿರುತ್ತದೆ. ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸುವ ಪರಿಪಾಠ ಹೆಚ್ಚು. ವಕ್ತವ್ಯದಲ್ಲಿ ಪರಿಮಿತ ಅಭಿನಯವಿರುತ್ತದೆ. ಹಲವು ಕೀರ್ತನಕಾರರು ಕಾಲಿಗೆ ಗೆಜ್ಜೆ ಕಟ್ಟಿ ನಸು ನೃತ್ಯ ಮಾಡುವುದೂ ಉಂಟು. ದೇವಸ್ಥಾನ, ಮಠಗಳಲ್ಲಿ ನಿಗದಿತ ವೇಳೆಯಲ್ಲಿ ಎರಡು-ಮೂರು ತಾಸು ನಡೆವ ಕೀರ್ತನದ ಪ್ರಾಯೋಜಕರು ಸುಶಿಕ್ಷಿತರು, ಉಳ್ಳವರು ಹಾಗೂ ಮಧ್ಯಮ ವರ್ಗದವರು.

ಮನರಂಜಿಸುವ ಹಾಗೂ ನೀತಿಪಾಠ ಹೇಳುವ ಉಪಕತೆಗಳಿಲ್ಲವಾದರೆ ಕೀರ್ತನ ಕತೆ ಕಳೆಗಟ್ಟಲಾರದು.

ಪೌರಾಣಿಕಕಾಲ್ಪನಿಕ ಕಥಾ ಸಂಬಂಧ

ದೇವರು, ಭೂತ, ಪವಾಡ, ಮಾಂತ್ರಿಕತೆ, ಸಾಹಸಾದ್ಭುತ ಅತಿಮಾನುಷತ್ವಗಳು ಅಮೂರ್ತ ಕಲ್ಪನೆಗಳೇ ಸರಿ; ಇಂಥವುಗಳನ್ನೆಲ್ಲ ತನ್ನ ಬದುಕಿನಲ್ಲಿ ನೆಲೆಗೊಳಿಸಿಕೊಲ್ಳಲೆಂದೇ ಪೌರಾಣಿಕ ಹಾಗೂ ಕಥೆಗಳನ್ನು ಸೃಷ್ಟಿಸಿಕೊಂಡಿರುವುದು ಮಾನವ ಕುಲವೊಂದೇ.

ನಮ್ಮ ದೇಶದಲ್ಲಿ ಕಾಲ್ಪನಿಕ ಕಥೆಗಳು ಕೂಡಾ ಪುರಾಣಗಳಂತೆ ಸಂದು ಹೋದ ಕಾಲವೊಂದರ ಸಾಮಾಜಿಕ ರೀತಿನೀತಿ, ಕಟ್ಟುಕಟ್ಟಳೆ, ಮಾನವಾನುಭವ, ಕಲ್ಪನೆ ಹಾಗೂ ಭ್ರಮೆಗಳ ಸಂಪುಟಗಳಾಗಿವೆ. ಸಾಹಿತ್ಯಕ್ಕೆ ಯುಗಕ್ಕಿಂತ ಪೂರ್ವದಲ್ಲಿ ಮೈದಳೆದು ಇಂದಿನವರೆಗೆ ಬಾಳುತ್ತಾ ಬಂದಿರುವ ಇವರೆಡೂ ಸ್ವಭಾವದಲ್ಲಿ ಬಹುತೇಕ ಸರಿಸಮಾನವಿದ್ದರೂ ಒಂದರ ಮೇಲೊಂದು ಪರಸ್ಪರ ಪ್ರಭಾವ ಬೀರಿರುವುದುಂಟು.

ಆದರೆ ಕಾಲ್ಪನಿಕ ಕಥೆಗಳು ಮಹಾಕಾವ್ಯ ಹಾಗೂ ಪುರಾಣಗಳ ಗುಣಗಳಿಂದ ಕೂಡಿದವಾಗಿದ್ದರೂ ಅವಕ್ಕೆ ಪೌರಾಣಿಕ ಸ್ಥಾನಮಾನವಿಲ್ಲ. ಪೌರಾಣಿಕ ಪಾತ್ರಗಳಂತೆಯೇ ಕಾಲ್ಪನಿಕ ಕಥಾನಾಯಕ ನಾಯಕಿಯರು ಅಸಾಮಾನ್ಯ ಗುಣಸ್ವಭಾವದವರಾದರೂ ದೇವತೆಗಳಲ್ಲ; ಕೇವಲ ಮನುಷ್ಯರು. ಇವರಿಗೆ ಭಕ್ತರ ಬೆಂಬಲ ಇಲ್ಲವಾಗಿ ಪೂಜನೀಯರಲ್ಲ. ಅಸಮ ವೀರರಾದರೂ ಕಾಲ್ಪನಿಕ ಲೋಕದವರಾದ್ದರಿಂದ, ಆ ಅರಸು ಮನೆತನಗಳಿಗೆ ನಾಮ ನಿರ್ದೇಶನಗಳೇ ಇಲ್ಲದ್ದರಿಂದ ಭೂತಕಾಲದ ಯಥಾವತ್ ಐತಿಹಾಸಿಕ ಸ್ಮರಣೀಯ ವ್ಯಕ್ತಿಗಳಲ್ಲ. ಪುರಾಣಗಳಿಗಿರುವಂತೆ ಸಂಸ್ಕೃತ ಸಂಬಂಧವಿಲ್ಲದ ಕಥೆಗಳಿವು.

ಘಟಿಸುವ ಅನಪೇಕ್ಷಿತ ಅಕಾಲಿಕ ಉದಾತ್ತ ವ್ಯಕ್ತಿಗಳ ಮರಣಗಳು ಪುರಾಣಗಳಲ್ಲಿ ಅನಿವಾರ್ಯವಾಗುತ್ತವೆ. ಸುಖಾಂತಕ್ಕೆ ಅಂಥವರ ಜೀವ ಬಲಿಗಳು ಅವುಗಳಿಗೆ ಶೋಭೆಯನ್ನೂ ಗೌರವವನ್ನೂ ತರುತ್ತವೆ ಆದರೆ ಗೊಂದಲಿಗರ ಕಾಲ್ಪನಿಕ ಕಥೆಗಳ ಅಂತ್ಯದಲ್ಲಿ ಇಂಥ ಪರಿಸಮಾಪ್ತಿಗೆಡೆಯಿಲ್ಲ. ಸತ್ಯವಂತರು ಸತ್ತರೂ ಮತ್ತೆ ಜೀವ ಪಡೆದುಕೊಂಡು ಸುಖಸಂತೋಷಗಳಿಗೆ ಭಾಜನರಾಗುತ್ತಾರೆ. ಇದರಿಂದ ಪ್ರೇಕ್ಷಕರಿಗೆ ಅಪೇಕ್ಷಿತ ಸಮಾಧಾನ ಸಿಗುತ್ತದೆ.

ಹೀಗಿದ್ದರೂ ಇವುಗಳಲ್ಲಿ ಸಾಮೂಹಿಕವಾದ ಧಾರ್ಮಿಕ ನಂಬುಗೆ ಹಾಗೂ ಸಾಂಪ್ರದಾಯಿಕತೆಗಳ ಸಂಬಂಧಗಳ ಇದ್ದೇ ಇವೆ. ಕಲ್ಪನಾ ವಿಲಾಸವನ್ನು ಮತಾಂಧತೆಗೆ ಬಳಸಿಕೊಳ್ಳುವ ಪಾಪಬುದ್ಧಿ ಇವಕ್ಕಿಲ್ಲ. ಆದ್ದರಿಂದಲೇ ಕಾಲ್ಪನಿಕ ಕಥೆಗಳಿಗೆ ಜನಮನದ ಆದರಾಭಿಮಾನಗಳ ಸಮ್ಮಾನವಿರುವುದು.

ಗದ್ಯ ಪದ್ಯ ಕಥನಗಳು

ಜಾನಪದದಲ್ಲಿ ಗದ್ಯ, ಪದ್ಯ, ಗದ್ಯಪದ್ಯಯುಕ್ತ ಕಥನಗಳೆಂದು ಮೂರು ಭಾಗ ಮಾಡಬಹುದು. ಈ ಕಥನಗಳನ್ನು ಪುರಾಣ, ಐತಿಹ್ಯ, ಕಾಲ್ಪನಿಕಗಳೆಂದು ವಿಂಗಡಿಸಬಹುದು. ಇವುಗಳ ಕಥಾಂಶಗಳು ಹಲವು ಮಟ್ಟಿನ ಆಶಯಗಳನ್ನುಳಿದು ಮಿಕ್ಕಂತೆ ಪ್ರತ್ಯೇಕ ಪ್ರಕಾರಗಳೇ. ಪುರಾಣಗಳಿಗೆ ಸಾಂಪ್ರದಾಯಿಕ, ಧಾರ್ಮಿಕ ಮತ್ತು ದೈವಿಕ ನಂಬುಗೆ ಶ್ರದ್ಧೆ ಆಚರಣೆಗಳ ನಿಕಟ ಸಂಬಂಧವಿರುತ್ತದೆ; ಮಾನವಾನುಭವ, ಸನ್ನಿವೇಶ, ಇತಿಹಾಸ, ಕಲ್ಪನೆ, ಭ್ರಮೆಗಳೂ ಒಗ್ಗೂಡಿರುತ್ತವೆ.

ನಮ್ಮ ದೇಶದಲ್ಲಿ ಪುರಾಣಗಳು ಹಾಗೂ ಮಹಾಕಾವ್ಯಗಳು ವಾಕ್ಸಂಪ್ರದಾಯ ಮತ್ತು ಲಿಖಿತರೂಪ- ಈ ಎರಡರಲ್ಲೂ ಸರಿ ಜೋಡಿಯಾಗಿ ಸಹಜೀವನ ನಡೆಸುತ್ತಾ ಬಂದಿವೆ. ಆದರೆ ಇರುವ ಒಂದು ವ್ಯತ್ಯಾಸವೆಂದರೆ ಆ ಎರಡರ ವಸ್ತು ಒಂದೇ ಆದರೂ ಅವು ಒಂದಕ್ಕೊಂದು ನಿಷ್ಠವಿರುವುದಿಲ್ಲ.

ಆದಿಯಲ್ಲಿ ಜಾನಪದ ಸೃಷ್ಟಿಯಾದ ಪುರಾಣಗಳು ಮತ್ತು ಮಹಾಕಾವ್ಯಗಳು ತಮ್ಮ ಐತಿಹಾಸಿಕ ಹಿನ್ನೆಲೆ ಹಿಂಬಲಗಳಿಂದ ಕಾಲಾನುಕ್ರಮದಲ್ಲಿ ರಾಷ್ಟ್ರೀಯತೆ ಪಡೆದು ಗ್ರಂಥಸ್ಥಗೊಂಡಿವೆ. ಫಣಿರಾಯ ತಿಣುಕುವ ಅವುಗಳ ಬೃಹತ್ ಪ್ರಮಾಣದಲ್ಲಿ ಕವಿಕೃತಿಗಳು ಹೊರ ಬಂದಿವೆ; ಈಗಲೂ ಬರುತ್ತಿವೆ.

ಕನ್ನಡದ ವೃತ್ತಿ ಕಥನಕಾರರನ್ನು ಧಾರ್ಮಿಕ ಮತ್ತು ಲೌಕಿಕ ಎಂದು ವರ್ಗೀಕರಿಸಿರುವುದುಂಟು. ಚೌಡಿಕೆಯವರು, ಗೊರವರು, ಮಂಟೇಸ್ವಾಮಿಗಳು ಧಾರ್ಮಿಕ ಕಥನಕಾರರಾದರೆ ಕಿನ್ನರಿ ಜೋಗಿಗಳು, ಕರಪಾಲದವರು, ದೊಂಬಿದಾಸರು, ತಂಬೂರಿಯವರು ಲೌಕಿಕ ಸಂಪ್ರದಾಯಕ್ಕೆ ಸೇರಿದವರು. ಈ ಎರಡೂ ಸಂಪ್ರದಾಯಗಳಿಗೆ ಮಂಟೇದವರು, ಕಂಸಾಳೆಯವರು, ಗೊಂದಲಿಗರು ಹೊಂದಿಕೊಂಡಿರುವುದನ್ನು ಕಾಣಬಹುದು.

ಈ ಎಲ್ಲ ಕಥನಕಾರರು ಬಳಸುವ ಸಂಕೀರ್ಣ ಸ್ವರೂಪದ ಕಥೆಗಳು ಯಾರೋ ಒಬ್ಬನ ಸೃಷ್ಟಿಯಾದರೂ ಸಾರ್ವತ್ರಿಕವೆನ್ನಿಸಿವೆ. ಅವು ಸುಧಾರಣೆ, ಸಾಂದರ್ಭಿಕ ಬದಲಾವಣೆ ಸೇರ್ಪಡೆ ರಿಪೇರಿಗಳಿಗೆ ಮೈಕೊಡುತ್ತಲೇ ಇರುತ್ತವೆ. ಅವುಗಳ ವಸ್ತುವಿನ ಘಟನಾಪ್ರಧಾನ ಸಂಭಾಷಣೆ, ನಿರೂಪಣಾಯುಕ್ತ ಕಥನ ಶೈಲಿ, ಹಾಡುಗಳು ಸರಳವಾದರೂ ಶಕ್ತಿಯುತ.

ಗೊಂದಲಿಗರ ಕಲ್ಪನಾ ವಿಲಾಸ

ಪ್ರಪಂಚದ ಕಥಾಬಾಹುಳ್ಯದಲ್ಲಿ ಪೌರಾಣಿಕ ಕಥಾವಸ್ತುಗಳಿಗಿಂತ ಕಾಲ್ಪನಿಕ ಕಥೆಗಳದ್ದೇ ಸಿಂಹಪಾಲು.

ಕಾಲ್ಪನಿಕ ಕಥೆಯ ಸ್ವಭಾವ ಅದ್ವೀತಿಯ. ಕಥೆಗಳಲ್ಲೇ ಕಥಾರಾಜ ಅದು. ಅದಕ್ಕೆ ಕಾಲದೇಶಗಳ ನಿರ್ಬಂಧವಿಲ್ಲ. ನಿರೂಪಣಾ ಸಾಧ್ಯತೆಗಳನ್ನೆಲ್ಲಾ ಲೀಲಾಜಾಲವಾಗಿ ದುಡಿಸಿಕೊಳ್ಳುವ ನೈಪುಣ್ಯ ಅದಕ್ಕಿದೆ. ಈ ವರ್ಗದ ಕಥೆಗಳಲ್ಲಿ ರಮ್ಯತೆ, ಸಾಹಸಾದ್ಭುತಗಳು, ಮಾಟಗಾತಿಯರು, ರಾಕ್ಷಸ-ಹಿಡಂಬಿಗಳು ಮಂತ್ರವಾದಿಗಳದ್ದೇ ಮೇಲುಗೈ ಆಟಗಳ ಅಸಂಭವನೀಯ ಪ್ರಸಂಗಗಳು ಸಂಭವನೀಯ ಭ್ರಮೆ ಮೂಡಿಸುವ ರೀತಿಯಲ್ಲಿ ವರ್ತಿಸುತ್ತವೆ. ಕಾಲ್ಪನಿಕ ಕಥೆಗಳಿಗಿರುವ ಐತಿಹ್ಯ ಮತ್ತು ಕಿನ್ನರ ಕತೆಗಳ ಸಂಬಂಧವೂ ಘನಿಷ್ಕವಾದದ್ದು.

ಈ ಮುನ್ನ ಹೇಳಿರುವಂತೆ ಗೊಂದಲಿಗರ ಆಟದ ಕಥಾವಸ್ತುಗಳು ಬಹುತೇಕ ಕಾಲ್ಪನಿಕ. ಅವುಗಳಿಗೆ ಮೂಲಾಧಾರ ಆಕಾರಗಳೇ ಇಲ್ಲ. ಸಂಭವನೀಯತೆಯ ಮೇಲೆ ಕಲ್ಪಿತಗೊಂಡಿದ್ದರೂ ಆವಾಸ್ತವಿಕತೆಗೇ ಹೆಚ್ಚಿನ ಪ್ರಾಮುಖ್ಯತೆ. ವ್ಯಕ್ತಿನಾಮಗಳು, ರಾಜ್ಯಗಳ ಹೆಸರುಗಳು, ರಾಜ-ರಾಣಿ, ಪ್ರಜರ ಹೆಸರುಗಳು, ಬಹುತೇಕ ಕನ್ನಡ ಜಾಯಮಾನದವಲ್ಲ. ನಮ್ಮ ಚಾರಿತ್ರಿಕ ಹಾಗೂ ಭೌಗೋಳಿಕ ಅಸ್ತಿತ್ವಕ್ಕೆ ಅವು ಹೊರತಾದವು. ಆದರೇನಂತೆ ತಮ್ಮ ಅದ್ಭುತರಮ್ಯತೆಯಿಂದ ತಮ್ಮ ಪ್ರೇಕ್ಷಕರು “ಸೈ”ಯೆನ್ನುವಂತೆ ಅವು ಪ್ರಸ್ತುತಗೊಳ್ಳುವ ಸಾಮರ್ಥ್ಯ ಪಡೆದಿವೆ.

ಪುರಾಣಗಳಲ್ಲಿ ಇಂಬುಗೊಂಡಿರುವ ಮಾನವಾತೀತ ಪವಾಡ ಸದೃಶ ಘಟನೆಗಳಂಥವೇ ಗೊಂದಲಿಗರ ಆಟದ ಕತೆಗಳಲ್ಲಿ ಕೂಡಾ ಸಮಪ್ರಮಾಣದಲ್ಲೇ ಇವೆ. ಕಥಾನಾಯಕ=ನಾಯಕಿಯರು ಏಕಾಂಗಿಗಳಾಗಿ ಪ್ರದರ್ಶಿಸಿಸುವ ಶೌರ್ಯಾ ವೇಶಗಳಿಗೆ ಮಿತಿ ಇಲ್ಲ.

ಕವಿ ನೇಮಿಚಂದ್ರನು ತನ್ನ ಲೀಲಾವತಿ ಪ್ರಬಂಧದಲ್ಲಿ ಹೀಗೆ ಹೇಳಿದ್ದಾನೆ-

            ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ
ಮುಟ್ಟುಗೆ ಮುಟ್ಟದಿರ್ಕೆ ಮುಗೀಂ ಹರನಂ ನರನೊತ್ತಿ ಗಂಟಲಂ
ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕೃತಿ ಬಂಧದೊಳಲ್ತೆ ಕಟ್ಟಿದರ್
ಮುಟ್ಟಿದರೊಲ್ತೆ ಮೆಟ್ಟಿದರದೇನಳವಗ್ಗಳವೊ ಕವೀಂದ್ರರಾ

ನಮ್ಮ ಗೊಂದಲಿಗರೂ ಈ ಕವೀಂದ್ರರ ಪ್ರತಿಭೆಯವರೇ! ಅವರ ಆಟಗಳ ಕಾಲ್ಪನಿಕ ಕಥಾವಸ್ತು+ಪ್ರಪಂಚದ ಎಲ್ಲವೂ ಸಂಭವನೀಯವೇ!!

ಶೀಲಾವತಿ ಗಂಡುವೇಷದಲ್ಲಿ ಏಕಾಂಗಳಾಗಿ ಐರಿ ಸೈನ್ಯದೊಂದಿಗೆ ಕದನವಾಡಿ ಗೆಲಿದ ರಣವೀರ ಮಹಿಳೆ.

ವೀರಪರಾಕ್ರಮಿಯಂಥ ಎಳೆಯುವಕ ತೋರಿದ ಅತ್ಯದ್ಭುತ ಸಾಹಸ ಪರಾಕ್ರಮಗಳು ಮಾನವಾತೀತವಾದವು.

ನಮ್ಮ ರಾಷ್ಟ್ರೀಯ ಸಂಕೇತಗಳಾದ ಪುರಾಣಗಳ ಕಥಾ ಘಟನೆಗಳಿಗೂ ಗೊಂದಲಿಗರ ಕಾಲ್ಪನಿಕ ಆಟಗಳ ಘಟನೆಗಳಿಗೂ ಹೋಲಿಕೆ ಇರುವ ಪ್ರಸಂಗಗಳೂ ಇವೆ. ತಮ್ಮ ವನವಾಸ ಕಾಲದಲ್ಲಿ ರಾಮಲಕ್ಷ್ಮಣರು ಸೀತಾನ್ವೇಷಣೆಯಲ್ಲಿ ನಿರತರಾದಂತೆ ಶೀಲಾವತಿ ಕಥೆಯಲ್ಲಿ ಉದಯವಾನ, ಶುಭವಾನ ಸೋದರರೂ ಶೀಲಾವತಿಯನ್ನು ಹುಡುಕುತ್ತಾರೆ. ತನ್ನ ಅಣ್ಣ ಶ್ರೀರಾಮಚಂದ್ರನ ಬಗ್ಗೆ ಭರತ ತೋರುವ ಬಂಧು ಪ್ರೇಮವನ್ನೇ ಶುಭವಾನನೂ ತನ್ನ ಅಣ್ಣನಲ್ಲಿ ತೋರುತ್ತಾನೆ.

ಈ ಪರಿಯ ಸಾಮ್ಯತೆಯು ಪುರಾಣಗಳ ಬೇರುಗಳು ಜಾನಪದ ಕಥೆಗಳಲ್ಲಿವೆಯೆಂಬ ಹೇಳಿಕೆಯನ್ನು ಸಮರ್ಥಿಸುತ್ತದೆ.

ಕಥಾ ಸಂವಿಧಾನದ ಘಟನೆಗಳು ಕಾಲ್ಪನಿಕವೆಂಬುದು ಆಟ ನಡೆಸುವ ಗೊಂದಲಿಗ ಕಲಾವಿದರಂತೆ ಆ ಆಟದ ನೋಡುಗರಿಗೂ ಗೊತ್ತು. ಆದರೆ ಈ ಪರಿಯ ಅವಾಸ್ತವವೇ ಮಾನವನ ವಾಸ್ತವ ಬದುಕಿಗೆ ಸಾರ್ಥಕ ಆದರ್ಶದ ದರ್ಶನ ನೀಡುವುದೆಂಬ ನಂಬುಗೆ ಅವರಿಗೆ. ಸಾಮಾಜಿಕ ಲೌಕಿಕ-ಅಲೌಕಿಕ ಧಾರ್ಮಿಕ ನೆಲೆಗಳಲ್ಲಿಯೇ ಬೆಳೆಯುತ್ತಾ ಹೋಗುವ ಕಥಾ ಸಂವಿಧಾನವೇ ಲೋಕ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ನಿವಾರಿಸಿಕೊಳ್ಳುವ ಪ್ರೇರಣೆಯನ್ನು ನಮಗೆ ನೀಡುತ್ತದೆ. ವಿಭಿನ್ನ ಸ್ವಭಾವದ ಜನಸಮುದಾಯವನ್ನು ಪರಸ್ಪರ ನಿಕಟಗೊಳಿಸಿ ಅವಶ್ಯ ಭೋಧನನೀಡುವ ಕಾಲ್ಪನಿಕ ಕಥಾವಸ್ತುಗಳು ನಮ್ಮಲ್ಲಿ ಅಂತಸ್ಸತ್ವ ಹಾಗೂ ಸ್ವಾರಸ್ಯ ಸ್ವಭಾವಗಳಿಂದ ನಿರಂತರವಾಗಿ ಜನಪ್ರಿಯವಾಗಿವೆ.

ಗೊಂದಲಿಗರು

ಸವದತ್ತಿ ಯಲ್ಲವ್ವ ಮತ್ತು ತುಳಜಾಪುರದ ಅಂಬಾಭವಾನಿ ಈ ಎರಡು ದೇವತೆಗಳಿಗೆ ಭೌಗೋಳಿಕ ಎಲ್ಲೆ ಮೀರಿದ ಭಕ್ತರಿದ್ದಾರೆ. ಕರ್ನಾಟಕ-ಮಹಾರಾಷ್ಟ್ರಗಳ ಬಾಂಧವ್ಯಕ್ಕೆ ಭಕ್ತಿಭಾವವೂ ಒಂದು ಕಾರಣ. ದೇವೀಭಕ್ತರಾದ ಗೊಂದಲಿಗರು ಎರಡೂ ಪ್ರದೇಶಗಳಲ್ಲಿದ್ದಾರೆ; ಇಷ್ಟೇ ಅಲ್ಲ ಗುಜರಾತ, ಮಧ್ಯಪ್ರದೇಶ, ಅಂಧ್ರಪ್ರದೇಶಗಳಲ್ಲೂ ನೆಲೆಸಿದ್ದಾರೆ. ಅವರ ಅನುವಂಶಿಕ ವೃತ್ತಿಯ ಹೆಸರೇ ಅವರ ಕುಲದ ಹೆಸರೂ ಆಗಿದೆ. ಅವರದು ಹಿಂದುಳಿದ ವರ್ಗಕ್ಕೆ ಸೇರಿದ ಅಲೆಮಾರೀ ಜನಾಂಗ.

ತಮ್ಮ ಜೋಗಿಜನಾಂಗದ ಕುಲಭೇಧಗಳನ್ನು ದಿ. ದೇವೇಂದ್ರಪ್ಪ, ಕಿನ್ನರಿಜೋಗಿ, ಹಂಡಿಜೋಗಿ, ಟಗರುಜೋಗಿ, ಕೇಣಿಜೋಗಿ, ಗೊಂದಲೀಜೋಗಿ ಎಂದು ಹೆಸರಿಸಿದ್ದರು. ಗೊಂದಲೀಜೋಗಿಗಳಲ್ಲಿ ಸ್ವಗೋತ್ರ ಮತ್ತು ಭಿನ್ನಗೋತ್ರವೆಂದೂ ಸ್ವಗೋತ್ರದಲ್ಲಿ ಎಂಟು ವಿಧಗಳೆಂದೂ, ಭಿನ್ನಗೋತ್ರದಲ್ಲಿ ಹನ್ನೆರಡು ವಿಧಗಳೆಂದೂ ವಿಭಾಗಿಸಲಾಗಿದೆ. ಇದಲ್ಲದೆ ಗೊಂದಲೀಜೋಗಿಗಳಲ್ಲಿ ಗೊಂದಲಿ ಬುಡಬುಡಕಿ, ಅರೆಪಂಚಾಂಗ, ಸಿಂಗದವರು, ಭೂತೇರು, ಚಿತ್ರವೃತ್ತಿಯವರು, ಭಾಟರು, ವಾಸುದೇವ ಎಂಬ ಎಂಟು ಪಂಗಡಗಳಿರುವುದನ್ನು ಗುರುತಿಸಲಾಗಿದೆ.

[1]

ದೇವತೆಯ ಗುಡಿಯ ಎದುರಿನಲ್ಲಿ ಇದನ್ನು ದೈವಶ್ರದ್ಧೆಯಿಂದ ಸಾಮೂಹಿಕವಾಗಿ ಗೊಂದಲಿಗರು ಆಚರಿಸುವುದೂ ಇದೆ. ಗೊಂದಲಕ್ಕೆ ಆಚರಣೆಯ ಹಂಗಿರುವುದರಿಂದ ಅದನ್ನು ಹುಟ್ಟಿದ ಸಂದರ್ಭದಲ್ಲಿ ಪ್ರತ್ಯೇಕಿಸುವಂತಿಲ್ಲ. ಆದರೆ ಪ್ರತ್ಯೇಕವಾಗಿ ಜನಪದರು ಆಡಿಸುವ ಇವರ ಆಟಗಳಿಗೆ ಇಂಥ ಬಂಧನಗಳು ಅನ್ವಯಿಸುವುದಿಲ್ಲ. ‘ಗೊಂದಲ’ವನ್ನು ಒಂದೊಂದು ಕಡೆಯಲ್ಲಿ, ಒಂದೊಂದು ಕಾಲದಲ್ಲಿ, ಒಂದೊಂದು ಹೆಸರಿನಿಂದ ಕರೆದಿರುವುದಿದೆ. ಗೊಂದಣ, ಗೊಂದಳ, ಗೊಂಡ್ಲಿ, ಗೊಂಡಲೀ, ಗೊಂಡಗೀ, ಗುಂಡಲೀ, ಗೊಂದೋಳು, ಗೌಂಡಳೀ, ಗುಂಡ್ಲಿ, ದುಂಡಲೀ, ಗೊಂಧಳ್, ಅದರ ಸಮಾನಾರ್ಥದ ಶಬ್ದಗಳು ಗೊಂದಲ ಶಬ್ದಕ್ಕೆ ಹಲವು ಅರ್ಥಗಳಿವೆ. ಗುಂಪು, ಭಜನೆಗುಂಪು, ಸಾಮೂಹಿಕವಾದ ಪ್ರಾರ್ಥನೆಯ ದೈವಾವೇಶದಿಂದ ಕುಣಿಯುವುದು-ಇತ್ಯಾದಿ.

ಅಹ್ವಾನಿಸುವವರ ಮನೆಯಲ್ಲಿ ನಿಗದಿತ ದಿನದಂದು ರಾತ್ರಿ ೯-೧೦ ಗಂಟೆಯ ನಂತರ ಗೊಂದಲಿಗರು ತಮ್ಮ ಪದ್ಧತಿಯಂತೆ ಕಲಶಸ್ಥಾಪನೆ ಮಾಡಿ ಅಂಬಾಭವಾನಿಯನ್ನು ಅವಾಹಿಸುತ್ತಾರೆ. ಗೊಂದಲದ ಆರಂಭದಲ್ಲಿ ತಮ್ಮ ವಾದ್ಯಮೇಳದೊಂದಿಗೆ ದೇವತೆಗಳ ಸ್ತವನರೂಪದ ಹಾಡುಗಳನ್ನು ಹಾಡುತ್ತಾರೆ. ಅವರಲ್ಲೊಬ್ಬ ಈ ಪವಿತ್ರ ಸಂದರ್ಭಕ್ಕೆ ನಿಗದಿಯಾದ ಎಣ್ಣೆಯ ಕಿಮಟು ಮುಳುಗಿದ ನಿಲುವಂಗಿ ತೊಟ್ಟು, ತಲೆಗೊಂದು ಅದರದೇ ಕವಡಿ ಹೆಣೆದ ಕುಲಾಯಿ ಹಾಕಿಕೊಂಡಿರುತ್ತಾನೆ. ಕೊರಳಲ್ಲಿ ಕವಡಿಸರ, ಎದೆಯಮೇಲೆ ಜಗದಂಬೆಯ ಉಬ್ಬುಶಿಲ್ಪವಿರುವ ಹಿತ್ತಾಳಿ ತಗಡು ಧರಿಸಿರುತ್ತಾನೆ. ಕುಂಕುಮ, ಸಾದಗಳಿಂದ ಮುಖಾಲಂಕಾರ ಮಾಡಿಕೊಂಡಿರುತ್ತಾನೆ. ಅತನ ಎರಡೂ ಕೈಗಳಲ್ಲಿ ಬಟ್ಟೆಗಳನ್ನು ಹುರಿಮಾಡಿ ನಿರ್ಮಿಸಿದ ಒಂದೊಂದು ಉರಿವ ಕಕ್ಕಡಗಳಿರುತ್ತವೆ. ಆತನನ್ನು “ಪೈಂತ್‍ಮಾಮ್” ಎನ್ನುತ್ತಾರೆ. ಹಿಮ್ಮೇಳಿಗರ ಹಾಡು ವಾದ್ಯಗಳ ಸಾಂಗತ್ಯದೊಂದಿಗೆ ರಾತ್ರಿಯೆಲ್ಲಾ ಆತ ಆಗಾಗ ನರ್ತಿಸುತ್ತಾನೆ. ಆತನ ಭಾವಾವೇಶ ಇಡೀ ವಾತಾವರಣವನ್ನೇ ಭಕ್ತಿಮಯವಾಗಿರಿಸಿರುತ್ತದೆ.

ಮೊದಲೊಂದು ಕಾಲದಲ್ಲಿ ಈ ಗೊಂದಲವೆಂಬ ಉಪಾಸನಾ ವಿಧಿ ಕೇವಲ ಭಕ್ತಿಭರಿತ ಪದ್ಯಗಳನ್ನೂ ನೃತ್ಯಗಳನ್ನೂ ಮೇಳೈಸಿಕೊಂಡಿದ್ದಿರಬೇಕು. ಹಾಗಾಗಿ ಗೊಂದಲಿಗರು ಧಾರ್ಮಿಕ ವೃತ್ತಿಗಾಯಕರೆನ್ನಿಸಿರಬೇಕು. ಆದರೆ ಈಗವರನ್ನು ಹಾಗೆ ಕರೆಯುವಂತಿಲ್ಲ. ನಮ್ಮ ಕನ್ನಡ ನಾಡಿನಲ್ಲಿ ಆಚರಿಸುವ ಗೊಂದಲ ವಿಧಾನದ ಪೂರ್ವರಂಗದಲ್ಲಿ ದೇವಿಸ್ತುತಿಗಳಿದ್ದರೆ ಉತ್ತರರಂಗದಲ್ಲಿ ಆಯ್ದ ಆಖ್ಯಾನ ಕಥೆಗಳು ವಸ್ತು+ವಿಷಯಗಳಾಗುತ್ತವೆ. ಅವು ಸಂಪೂರ್ಣ ಗೀತಗೋಷ್ಠಿಯೇನಲ್ಲ. ಕಥೆಯನ್ನು ಹಾಡುವುದಿಲ್ಲ. ವ್ರತಕತೆಯೊಂದನ್ನು ನಾಟಕೀಕರಿಸಿರುವ ರೀತಿಯಲ್ಲಿ ಪ್ರಸ್ತುತಗೊಳಿಸುತ್ತಾರೆ. ಅದರಲ್ಲಿ ದೃಶ್ಯ ಮತ್ತು ಶ್ರವ್ಯಗಳ ಏಕತ್ರತೆ ಇರುತ್ತದೆ.[2]

ಗೊಂದಲಿಗರು ತಮ್ಮ ಗೊಂದಲಕ್ಕೆ “ಬನ್ನಿ ಮಹಾಂಕಳಿ” ಯಂಥಾ “ರೇಣುಕಾ ಮಹಾತ್ಮೆ”ಯ ಭಕ್ತಿಪ್ರಧಾನ ಕಥೆಗಳನ್ನು ಆಯ್ದುಕೊಳ್ಳುವುದೇ ಹೆಚ್ಚಾದರೂ, ಜಯರಾಣಿ ಬಾಳಾವತಿ, ರಸ್ತಾಳರಾಜ, ಶೀಲಾವತಿ, ಬಾಳಭಿಕ್ಷುಕ, ಅರಣ್ಯಕುಮಾರ, ಮುಂತಾದ ನೀತಿಪರ ಕಥೆಗಳನ್ನು ಬಳಸಿಕೊಳ್ಳುವುದುಂಟು. ಗೊಂದಲದ ಆಟಗಳಲ್ಲಿ ದೇವಿಸ್ತುತಿ ಮತ್ತು ಕುಣಿತಗಳಿಗೆ ಪ್ರಾಧಾನ್ಯತೆ ಹೆಚ್ಚು. ಆಟದ ಮಧ್ಯೆಯ ಉಪಕತೆ ತತ್ವಪದಗಳು ಬೇಸರ ಯಾಂತ್ರಿಕತೆಗಳನ್ನು ನೀಗಿ ಮನರಂಜನೆ ಮೂಲಕ ನಡುರಾತ್ರಿ ಕಳೆಯುವುದಕ್ಕೆ ನೆರವಾಗುತ್ತವೆ.

ಅಂಬಾಭವಾನಿಯ ಆರಾಧನೆಯ ನಿಮಿತ್ತ ಗೊಂದಲಹಾಕಿಸುವ ಭಕ್ತರಲ್ಲಿ ಬ್ರಾಹ್ಮಣರಿಂದ ಹರಿಜನರವರೆಗೆ ಎಲ್ಲ ಮತೀಯರೂ ಅರಮನೆಯಿಂದ ಗುಡಿಸಲವರೆಗೆ ಎಲ್ಲ ವರ್ಗದವರೂ ಇದ್ದಾರೆ. ತತ್ವಜ್ಞಾನ ವೇದವೇದಾಂತ ಸ್ಮೃತಿಶಾಸನಗಳನ್ನು ಸಂಸ್ಕೃತ ಭಾಷೆಯ ದಿಗ್ಬಂಧನದಲ್ಲಿರಿಸಿಕೊಳ್ಳುವ ಬ್ರಾಹ್ಮಣ ಮನೆತನಗಳು ಗೊಂದಲಿಗರಂಥ ನಿಮ್ಮ ವರ್ಗದ ಅಶಿಕ್ಷಿತರನ್ನು ಅಹ್ವಾನಿಸಿ ಗೌರವದಿಂದ ಕಂಡು ತಮ್ಮ ಕಾರ್ಯ ಸಂಪನ್ನಗೊಳಿಸಿಕೊಳ್ಳುವ ಪರಂಪರೆ ಇರುವುದೊಂದು ಅಚ್ಚರಿ. ಬ್ರಾಹ್ಮಣರಂತೆ ಗೊಂದಲಾಚರಣೆ ಮಾಡುವ ಅನ್ಯ ಕುಲಗಳೆಂದರೆ- ಭಾವಸಾರ ಕ್ಷತ್ರಿಯರು (ರಂಗಾರೇರು) ಸೋಮಸಾರ ಕ್ಷತ್ರಿಯರು (ಪಟೇಗಾರರು) ಮರಾಠರು, ಆರೇರು, ರಜಪೂತರು, ಸಿಂಪಿಗರು, ಸಾಳೇರು, ಕ್ಷತ್ರಿಯರು; ಇಇನೂ ಕೆಲವು ಕಡೆ ಲಂಬಾಣಿಗಳು ಲಿಂಗಾಯತರು ಕೂಡಾ ಗೊಂದಲ ಹಾಕಿಸುತ್ತಾರೆ. ತಮ್ಮ ಅರಸೊತ್ತಿಗೆ ಇನ್ನಿಲ್ಲವಾಗಿದ್ದರೂ ಈಗಲೂ ಕರ್ನಾಟಕದ ಬಹುತೇಕ ರಾಜ ಮನೆತನಗಳ ಕುಲದೇವತೆ ಅಂಬಾಭವಾನಿಯಾಗಿರುವುದರಿಂದ ನವರಾತ್ರಿ ಕಾಲದಲ್ಲಿ ಗೊಂದಲಿಗರನ್ನು ಅವರು ಬರಮಾಡಿಕೊಂಡು ವಿಶೇಷ ರೀತಿಯ ಗೊಂದಲ ಹಾಕಿಸುವುದನ್ನು ನಾವು ಕಾಣುತ್ತೇವೆ.[1] ಜಾನಪದ ವಿದ್ವಾಂಸರಾದ ಡಾ. ಅಂಬಳಿಕೆ ಹಿರಿಯಣ್ಣ ಮತ್ತು ಡಾ. ಪುರುಷೋತ್ತಮ ಬಿಳಿಮಲೆ ಇವರು ಉಲ್ಲೇಖಿಸಿರುವ ಜೋಗಿ ಪಂಗಡಗಳ ಸಂಖ್ಯೆ ಹೆಚ್ಚಿನದಿದೆ.

[2] ತಮ್ಮ ಜಾತಿಯವರು ಜಗದಮ್ಬೆಯ ಗೊಂದಲ ಹಾಕಿಸಿ ಆರಾಧಿಸುವುದನ್ನು ನಮ್ಮ ದಾಸವರೇಣ್ಯರಾದ ಜಗನ್ನಾಥದಾಸರು ತೀವ್ರವಾಗಿ ಖಂಡಿಸಿದ್ದಾರೆಣ್ಬುದನ್ನು ಅವರ ಈ ಕೆಳಗಿನ ಸಾಲುಗಳಿಂದ ತಿಳಿಯಬಹುದು.

“ಸಾರಿದ ಡಂಗುರ ಯಮನು ಪಾಪಿನಾರೇರ
ಎಳೆತಂದು ನರಕದಲ್ಲಿಡಿರೆಂದು                                    || ಪ ||

ಜಲಜಕ್ಕೆ ಸಾಳಿ ಕಂಬಳಿ ಬೋಳಿ ಚಿಕ್ಕೆ
ಗೊಂದಲಿ ಮೊದಲಾದುವು ದೈವವೆಂದು |
ತಿಳಿದು ಪಿಶಾಚಿ ಎಂಜಲನುಂಡು ಹಿಗ್ಗುವ

ಲಲನೇರಾಸಾಲಸ್ಯ ಗೊಳದೆ ತನ್ನಿರೋ ಎಂದು              || ೪ ||