ಕ : ರಾಜನ ಮಾತ ಮೀರಲಾರದ ಶಿವದಾರ ತಗದು ಮಗನ ಕೈಯಾಗ ಕೊಟ್ಟಳಪಾ!

ಹಿ : ಆಹಾ!

ಕ : ಪಂಚ ಪಗಡಿ ಮ್ಯಾಲೆ ಇಚ್ಛೆ ಬಿದ್ದಿತ್ತು-ಇಬ್ರದೂ

ಹಿ : ಹೌದು

ಕ : ಈ ಹುಡುಗ ಮೆಲ್ಲಕ ಒಂದೊಂದೆ ಬಾಗಲ ದಾಟತೈತಿ!

ಹಿ : ಶಿವದಾರ ತೊಗೊಂಡು.

ಕ : ಒಂದೊಂದೆ ದಾಟ್ಕೊಂತಾ ಮೂರು ಬಾಗಲ ದಾಟಿ ಹಾರಿ ಅಂಬಾನ ಗುಡಿಗೆ ಓಡಿ ಬರ್ತೈತಿ ಆ ಹುಡುಗ ಶಿವದಾರ ತಗೊಂಡು!

ಹಿ : ಓ ಹುಡುಗ ಹೋಯ್ತು!

ಕ : ಹುಡುಗ ಹೋಯ್ತಲ್ಲೆ! ಮರಾಜಾ ಅರಮನಿಯೊಳಗೆ ಹುಡುಗಿಲ್ಲ! ಶಿವದಾರ ತೊಗೊಂಡು ಯಾವ ಕಡೀಗೆ ಹೋಯ್ತೊ ಜಲ್ದಿ ಹೋಗ್ರಿ; ಯಾರನ್ನ ಕಸ್ಕೊಂಡಾರು.

ಹಿ : ಲಗೂ ಮಾಡಿ ಹೋಗ್ರಿ-ಕಳದೀತು.

ಕ : ತಗೊಂಬಂದು ಶಿವದಾರ ನಿನಿಗೆ ಕೊಡ್ತೀನಿ, ರಂಭಾ ಅಂತ್ಹೇಳಿ, ಕುದ್ರಿಗೆ ತಡಿ ಬಿಗದು ರಾಜಡ್ರಸ್ ಹಾಕ್ಕೊಂಡು ಕುದ್ರಿಮ್ಯಾಲೆ ಕುಂತ್ಗೊಂಡು, ಕುದ್ರಿ ಹೊಡ್ಕೊಂಡು ಅಂಬಾನ ಗುಡಿಗೆ ಓಡುಸ್ತಾನೆ-ರಾಜಕುದ್ರಿ !

ಹಿ : ಹುಡುಗ ಓಡ್ತೈತಿ ಶಿವದಾರ ತೊಗೊಂಡು.

ಕ : ಲೋ ಗುಡ್ಡದ ಸಿಪಾಯಿ ನಿಂದ್ರು.

|| ಪದ ||

ಸಿಕ್ಕಿ ಬಾರಲೇ ಗುಡಿ ಪೂಜಾರೀ…..ಹರಯನ್ನ ಮಾದೇವ
ಲೌಡಿಮಗ ಅಂದಿದ್ದೆ ನೋಡು ರಂಭಾವತಿ ಮನಿಯಾಗ….ಹರಯನ್ನ ಮಾದೇವ

ಹಿ : ಇಲ್ಲಪ್ಪ ಮಾರಾಯ!

ಕ : ಮಾರಾಯ ಸಿಟ್ಟಿಲೆ ಹೇಳಿದ್ರೆ ಆಕಿ ಹೊಟ್ಟಾಗ ಕಬಟೆದ್ದು ಶಿವದಾರ ಕೊಡ್ತಾಳ ಅಂದು ಲೌಡಿಮಗ ಅಂದದ್ದು ನಿಜ!

ಹಿ : ತಪ್ಪು.

ಕ : ಹ್ಯಾಂಗರ ಮಾಡಪ್ಪ ನಿನ್ನ ಕೈಯಾಗ ಸಿಕ್ಕೇನಿ ಅಂದ.

ಹಿ : ಆಹಾ.

ಕ : ಹಂಗಾದ್ರೆ ಪರ್ವಿಲ್ಲ ಬಾ ಪೂಜಾರಿ.

ಹಿ : ಅಂಬಾನ ಗುಡಿ ಮುಂದೆ ಇಬ್ರೂ ಬಂದು ನಿಂತ್ರು.

ಕ : ಪೂಜಾರೀ.

ಹಿ : ಏನು ಆಡ್ವಿ ಸಿಪಾಯೀ?

ಕ : ನೀನು ಒಳಗ ಬರಬ್ಯಾಡ ಹೊರಗೆ ಇರು; ನಮ್ಮ ತಾಯಿ ಮಲಿಗ್ಯಾಳ ಒಳಗೆ.

ಹಿ : ನೀನೆ ಹೋಗಪ್ಪ-ಮಾರಾಯಾ ಅಂದು ಹೊರಗs ನಿಂತ ರಾಜಕುಮಾರ.

ಕ : ಕುಶಲಕುಮಾರ ಚರಿಗಿ ತುಂಬಾ ನೀರು ತಂದು ಅಂಬಾದೇವಿ ಪಾದ+ದಡಿಗೆ ಶಿವದಾರ ಇಟ್ಟು ಪೂಜಾಮಾಡಿ ಆ ಶಿವದಾರಕ್ಕೆಎರಡು ಊದನಕಡ್ಡಿ ಬೆಳಗಿದ!

ಹಿ : ಭಗವಂತನ ಶಾಪಕ್ಕೆ ಹನ್ನೆರಡು ವರ್ಷ ಆಗತಾ ಬಂತು.

|| ಪದ ||

ಶಂಕರ ಭೂತೇಶಾ ಭವಹರ
ಶಂಕರ ಭೂತೇಶಾ ಭವಹರ || ||

ಕಿಂಕರನೊಳು ನೀ ಬಿಂಕವ ತೊರೆದು
ಕಿಂಕರನೊಳು ನೀ ಬಿಂಕವ ತೊರೆದು

ಶಂಕಿಸಿದಲೆ ಪೊರೆ ಭವಹರಾ
ಶಂಕರ ಭೂತೇಶಾ….

ಅತಿಹಿತ ಎನುತಲಿ ಸ್ತುತಿಪೆನು ಸ್ತುತಿಪೆ
ಮತಿಕೊಡೋ ಗಿರಿಜೇಶಾ ಮಲ್ಲೇಶಾ
ಮತಿಕೊಡೋ ಗಿರಿಜೇಶಾ ಮಲ್ಲೇಶಾ
ಶಂಕರ ಭೂತೇಶಾ ಭವಹರ….

ಕರಗಿದ ಮನದಿಂ ಚರಣವ ನಂಬಿದೆ
ಕರಗಿದ ಮನದಿಂ ಚರಣವ ನಂಬಿದೆ
ಕರುಣಿಸಿ ಕಾಪ್ಯಾಡೋ ಕೊಟ್ರೇಶಾ
ಶಂಕರ ಭೂತೇಶಾ ಮಲ್ಲೇಶಾ

ಕ : ದೇವತಾಧ್ಯಾನ ಮಾಡಿ ಮಗ ಶಿವದಾರ ತಾಯಿ ಕೊಳ್ಳಾಗ ಹಾಕಿದಾ. ಶಿವಶಿವ ಅಂತ ಎದ್ದುಬಿಟ್ಲು! – ಶಿವಲೋಚನಮ್ಮ ! ಎದ್ದು ನೋಡ್ತಾಳೆ-ಶಿವದಾರ! ಯಾರು ಕೊಟ್ರಪ್ಪ ಮಗನೆ?

ಹಿ : ಗುಡಿ ಪೂಜಾರಿ ಕೊಟ್ಟಿದ್ದು ತಾಯೀ.

ಕ : ಎಲ್ಲೈದಾನ ಗುಡಿ ಪೂಜಾರಿ?

ಹಿ : ಹೊರಗಡೆ ಇದಾನಮ್ಮ.

ಕ : ಒಳಗೆ ಕರಿಯಪ್ಪಾ ನೋಡ್ತೀನೀ.

ಹಿ : ನೀನಿದ್ದಾಗ ಅವನು ಹ್ಯಾಗೆ ಬರ್ತಾನಮ್ಮ ಅಲ್ಲೆ ಇರ್ಲಿ ಬಿಡಮ್ಮಾ.

ಕ : ಒಳಗ ಕರಿಯಪ್ಪಾ.

ಹಿ : ಒಳ್ಳೇದು; ಪೂಜಾರೀ-

ಕ : ಏನಪ್ಪಾ ಸಿಪಾಯೀ?

ಹಿ : ನಮ್ಮ ತಾಯಿ ಕರೀತಾಳ ಬಾರೋ.

ಕ : ಬಂದೆ ಅಂತ ಒಳಗ ಬಂದು ನೀಲಕುಮಾರ ರಾಜಾಧಿರಾಜ ಗುಡಿ ತಲಬಾಗಲದಾಗ ಇದ್ದಾಗ ಸೂರ್ಯನ ಪ್ರಕಾಶ!

ಹಿ : ಚಂದ್ರಾಮ! ಕ್ಷತ್ರಿಯ!

ಕ : ಇವರೇ ಏನ ಮಗನೇ ಗುಡಿ ಪೂಜಾರಿ ಅಂಬೋದು?

ಹಿ : ಹೌದು ತಾಯಿ ಈತನೇ ಶಿವದಾರ ಕೊಡಿಸಿದ್ದು.

ಕ : ಇವರ ಊರು ಯಾವುದು? ಇವರ ಹೆಸರೇನು? ತಾಯಿ-ತಂದೆ ಯಾರು? ಕೇಳು ಮಗನೆ!

ಹಿ : ಪೂಜಾರಿ?

ಕ : ಏನಪ್ಪ ಮಾರಾಯ?

ಹಿ : ನಿಮ್ಮೂರು ಯಾವುದು? ನಿಮ್ಮ ತಾಯಿ-ತಂದೆ ಯಾರು?

ಕ : ಹೇಳು ನಮ್ಮ ತಾಯಿ ಕೇಳ್ತಾಳೆ!

ಹಿ : ಓಹೋ.

ಕ : ತಮ್ಮಾ ಧರ್ಮಾವತಿ ಪಟ್ಟಣ-ಧರ್ಮಸೇಕ ಮಹಾರಾಜ ತಂದಿ ಗಂಗಾಸಾಗ್ರ ನಮ್ಮ ತಾಯಿ. ಅವರ ಗರ್ಭದಲ್ಲಿ ಉದ್ಭವಿಸಿದ ನನ್ನ ಜಲ್ಮ ನಾಮಕರಣ ನೀಲಕುಮಾರ ಅಂತ!

ಹಿ : ಆಹಾ!

ಕ : ನೀಲಕುಮಾರ, ರಾಜ ಅಂದ ತಕ್ಷಣನೇ ತಾಯಿ ಶಿವಲೋಚನಮ್ಮ –

|| ಪದ ||

ಎದ್ದು ಬಂದಾಳೆ ಶಿವಲೋಚನಮ್ಮ….ಹರಯನ್ನ ಮಾದೇವ
ಪತಿ ಪಾದ ಹಿಡದಾಳ ಶಿವಲೋಚನಮ್ಮ….ಹರಯನ್ನ ಮಾದೇವ
ಮಾಹಾರಾಜಾ ಮಾಹಾರಾಜಾ ನೀ ನನ್ನ ರಾಜಾ….ಹರಯನ್ನ ಮಾದೇವ

ಕ : ಮಹಾರಾಜ ಮಾಹಾರಾಜಾ ನೀಲಕುಮಾರಾ, ನಾನೇ ಶಿವಲೋಚನ, ತೌರುಮನಿ ರುದ್ರಾವತಿ ಪಟ್ಣ, ನಿಮ್ಮ ಪೋಟೊ ನೋಡಿದ್ದೆ!

ಹಿ : ಮಾಹಾರಾಜ್ರೆ ನೀವೇ ನಿಮ್ಮ ಲಗ್ನಕ್ಕ ಬರ್ಲಿಲ್ಲ!

ಕ : ಓಹೋ ಶಿವಲೋಚನಾ ನಿನ್ನ ಕಣ್ಣು! ನಿನ್ನ ಫೋಟೊ ರಂಭಾವತಿ ಸೂಳಿ ಮನಿಯಾಗ ನೋಡ್ದೆ !

ಹಿ : ಆಹಾ!

ಕ : ಫೋಟೊ ನೋಡ್ಲಿಕ್ಕಾಗಿ ಫೋಟೊದಾಗ ಒಂದು ಕಣ್ಣು ಕೆಡಿಸ ಕುಲ್ಡಿಗೆ ಲಗ್ನಕ್ಕೆ ಬರ್ಲಿಲ್ಲ ಮಡದಿ!

ಹಿ : ಆಹಾ.

ಕ : ಉಪಾಯದಿಂದ ಮಂತ್ರಿ ಸುಳ್ಳು ಕಾಗದ ಬರದು ಮಾಂಗಲ್ಯಮಾಡಿ ಕರ್ಕೊಂಡು ಬಂದು, ಊರಾಗ ನೀನು ರಾಣಿ ತಗೊಂಡಾಗ ಶಿವದಾರದ ನಿನ್ನ ಕೇಳ್ಕೊಂಡು ಅವರು ಕೊಳ್ಳಾಗ ಹಾಕ್ಕೊಂಡು ಅವರು ನಿನ್ನ ಮರಣದ ಪಾಲು ಮಾಡಿದ್ರು!

ಹಿ : ಏನು ಮೋಸ!

ಕ : ಅಂಬಾದೇವಿ ನಮ್ಮಿಬ್ರಗೆ ಸತಿ-ಪತಿಗೆ ಇಲ್ಲಿ ಗುಡಿಯಾಗ ಕಲಿಸಿದ್ಲು! ಅಂತ್ಹೇಳಿ ನೀಲಕುಮಾರ-ಆಯಮ್ಮ ಶಿವಲೋಚನಮ್ಮ ಉಳ್ಯಾಡಿದೇವಿ ಧ್ಯಾನ ಮಾಡ್ಯಾರ, ದೇವಿ ಪ್ರತ್ಯಕ್ಷ ಆದ್ಲು ಅಂಬಾ!

ಹಿ : ಆಹಾ!

ಕ : ಮಗಳೇ ದೇವಲೋಕದಾಗ ದೇವೇಂದ್ರನ ಸಭಾದಲ್ಲಿ ದೇವಕನ್ಯೆಯಾಗಿ ಜಲ್ಮ ತಾಳಿ ದೇವಸಭಾ ಕೆಡಿಸಿದ್ದಕ್ಕೆ ಪರಮಾತ್ಮ ಶಾಪಕೊಟ್ಟು ಮರ್ತ್ಯಕ್ಕೆ ದೂಡಿದ ಮಗಳೇ ಇಂದಿಗೆ ನಿನ್ನ ಶಾಪ ವಿಮೋಚನ ಆಯ್ತು.

ಹಿ : ಆಯ್ತು.

ಕ : ಭೂಮಿ-ಕೈಲಾಸ ಜೋಡು, ಮರುಗಿದ ಜೋಡು, ಜೋಡಿನಲ್ಲಿ ಜೋಡು-ಸತಿ-ಪತಿ ಜೋಡು!

ಹಿ : ಹೌದು.

ಕ : ನಿನ್ನ ಮಗನಿಗೂ-ನಿನ್ನ ಗಂಡನಿಗೂ ಕಲಿಸೀನಿ-

ಹಿ : ಒಂದು ಮಾಡೀನಿ.

ಕ : ನಡೀರಿ ಅಂತ ಅಂಬಾ ಪ್ರತ್ಯಕ್ಷ ಆಶೀರ್ವಾದ ಮಾಡಿದಾಗ-ಊರ ಮುಂದೆ ಅಗಸ್ಯಾಗ ಆಂಜನೇಯನ ಗುಡಿಗೆ ಬಂದು ಶಿವಲೋಚನಮ್ಮ ಮಾವಗೂ, ಅತ್ತೆಗೂ, ಮಂತ್ರಿಗೂ ಕಾಗದ ಬರದಾಗ ಊರಾಗಿನ ಜನ ಎಲ್ಲಾ ಹೊಳ್ಳಿ ಬಂದ್ರು ಗುಡಿಗೆ.

ಹಿ : ಹೌದು.

ಕ : ಮಂತ್ರಿ ಬಂದು ನೋಡ್ತಾನೆ-ಸತಿ-ಪತಿ ಬಂದಾರ ನೀಲಕುಮಾರ-ಶಿವಲೋಚನ!

ಹಿ : ಆಹಾ.

ಕ : ಮಹಾರಾಜಕುಮಾರ ನೀಲಕುಮಾರ?

ಹಿ : ಏನು ಮಂತ್ರೀ?

ಕ : ರಂಭಾವತಿ ಮಾತು ಕೇಳಿ ನನಗೆ ಎಂಥ ಬಡ್ತಾ ಬಡಿದೆಲ್ಲಾ!

ಹಿ : ರಂಭಾವತಿ ಒಂದು ಕೈ ತೋರಿಸ್ತೀನಿ. ಅಪ್ಪಣಿ ಕೊಡ್ರೀ

ಕ : ಆಹಾ ಏನರ ಮಾಡು ಹೋಗು ಅಂದ!

ಹಿ : ಹೌದು.

ಕ : ರಂಭಾವತಿ ಹಿಡ್ಕೊಂಡು ಬಂದ್ರು-ಶಿವಲೋಚನಮ್ಮನ ಎದುರಿಗೆ ಶಿಕ್ಷೆ ಕೊಡ್ತಾ ಇದಾನೆ ಮಂತ್ರಿ-

ಹಿ : ಆಹಾ!

ಕ : ರಂಭಾವತಿ ಲೇಶಿ ಬಂದು ಶಿವಲೋಚನಮ್ಮನ ಪಾದ ಹಿಡಿದು ಯವ್ವಾ ನಿನಗೆ ಸತಿ-ಪತಿ ಅಗಲಸಿದಾಕಿ ನಾನು- ಪಾತ್ರದಾಕಿ. ನಾನು ಭಾಳ ಪಾಪ ಮಾಡೀನಿ ಫೋಟೊದಾಗ ಕಣ್ಣು ನಾನು ಕೆಡಿಸಿ.

ಹಿ : ಕೆಡಿಸಿ.

ಕ : ನಿನ್ನ ಗಂಡಗ ನಾನು ಲಗ್ನಕ, ಬರದ್ಹಂಗ ಮಾಡಿದೆ!

ಹಿ : ಮರಣದಾಸ!

ಕ : ಪರಮಾತ್ಮ ಶಾಪ ಮುಗದು ನೀವು ಸತಿ-ಪತಿ ಆದ್ರಿ ನಿಮ್ಮ ಸೇವಾನು ಸೇವಕಳಾಗಿರುತ್ತೀನಿ ಅಂತ್ಹೇಳಿ ಬೇಡಿಕೊಂಡಳು.

ಹಿ : ಆದದ್ದಾತು ರಂಭಾವತಿ,

ಕ : ಮಂತ್ರೀ ಈ ಯಮ್ಮಗ ಏನು ಮಾಡಬ್ಯಾಡ

ಹಿ : ಆಹಾ! ಈಕಿ ಲೇಶಿ ಧರ್ಮ ಅದು.

ಕ : ಈಕಿ ಪಾದ ಹಿಡುದಾಳ ಅಂದ ಬಳಿಕ ಪ್ರಾಣದಾನ ಮಾಡು.

ಹಿ : ಒಳ್ಳೇದು.

ಕ : ಒಳ್ಳೇದು ಜನನಿ ಅಂತ್ಹೇಳಿ ಹಾಗೂ ತಾಯಿಗೂ ಕರ್ಕೊಂಡು

ಹಿ : ಆಹಾ!

ಕ : ತಾಯಿ-ತಂದೀ! ನಿಮ್ಮ ಮಾತು ಮೀರಿ ಧಿಕ್ಕಾರ ಮಾಡಿ ನಾನು ಸೂಳಿ ಮನಿ ಸೇರಿದ್ದೆ!

ಹಿ : ಆಹಾ!

ಕ : ಅನಂತರದಿಂದ ಶಿವಲೋಚನಾ ಪತಿವ್ರತಾ ಧರ್ಮದಿಂದ ಬಂದು ನಿಮ್ಮ ಪಾದ ಹಿಡಿದೆ.

ಹಿ : ಆಹಾ!

ಕ : ಅದಕ್ಕ ತಂದಿ ತಾಯಿ ಅಂತಾರ ಮಗನೇ ಆದದ್ದಾತು. ನಮ್ಮ ಸೊಸಿ ಶಿವಲೋಚನಮ್ಮನಿಂದ ಎಲ್ಲಾ ಒಳ್ಳೇದಾತು. ಇನ್ನು ಮೇಲೆ ನೀವಿಬ್ರೂ ಸತಿ-ಪತಿ; ರಾಜ-ರಾಣಿ.

ಹಿ : ಅಂತ ಪಟ್ಟ ಕಟ್ಟಿದ್ರು!

ಕ : ನೀಲಕುಮಾರ ತಾಯಿ-ತಂದೆ ಪಾದಸೇವೆ ಮಾಡ್ಕೊಂತಾ ಇರುವಾಗ ಇಲ್ಲಿಗೆ ಕತಿ ಶಿವಲೋಚನಮ್ಮನ ಕತಿ ಮುಕ್ತಾಯ ಆತು.

ಮಂಗಳ

ಅಂಬಗೆ ಬೆಳಗೀರಾರುತಿಯ ಎತ್ತಿರಾರುತಿಯ
ದೇವಿಗೆ ಬೆಳಗೀರಾರುತಿಯ ಎತ್ತಿರಾರುತಿಯ
ಅಂಬಾ ಶಾಂಭಾವಿಗೆ ನೆನೆದೇವೊ ಎತ್ತೀರಾರುತಿಯ
ಗಂಧ ಅಕ್ಷತಿ ಚಂದದ ಪೂಜೆ ಮಾಡಿ
ದೇವಿ ಶಾಂಭವಿಗೆ ನೆನದೇವೊ ಎತ್ತೀರಾರುತಿಯ
ಅಂಬಗೆ ಬೆಳಗೀರಾರುತಿಯ ಎತ್ತೀರಾರುತಿಯ
ಲಂಕೆಗೆ ಹನುಮಂತ ಹೋಗಿ ಲಂಕೆ ಸುಟ್ಟ
ರಾಮಲಕ್ಷ್ಮಣಗೆ ನೆನೆದೇವೋ ಎತ್ತೀರಾರುತಿಯ
ಅಂಬಗೆ ಬೆಳಗೀರಾರುತಿಯ ಎತ್ತೀರಾರುತಿಯ
ಜಯಾ ಜಯ ನಮಃ ಪಾರ್ವತೀ ಪತಿ ಹರಹರ ಮಹಾದೇವ