ನಾಂದಿ

ಎನ್ನಯ್ಯ ಗುರು ತಂದೆ ತನ್ನಂತೆ ಮಾಡಿದನೇ
ಮತ್ಯಾರೂ ಗುರುವೇ ನಮಗೆ || ||

ಮತ್ಯಾರು ಗುರುವೇ ನಮಗಿನ್ನು |
ಊರು ನೀರ ಆಸೆ ನಮಗಿಲ್ಲ || . ||

ತುಂಟತನವಾ ಮಾಡಿ ಎಂಟು ಮಂದೀನ ಗೆದ್ದೆ |
ಅವರ ಗಂಟಲಕೆ ಗಾಣ ಹಾಕಿದೆ |
ಆರು ದಿನಸಿನ ಧಾನ್ಯ ಮೂರು ದಿನಸಿನ ಅಕ್ಕಿ |

ಏಕ್ ಹಾಕಿ ಕುಟ್ಟಿ ಹಸ ಮಾಡೇನಲ್ಲವ್ವಾ |
ಮತ್ಯಾರು ಗುರುವೇ ನಮಗಿನ್ನು ||

ಕುಂಬಾರ ಮನಿಗಡಗಿ ಒಂಬತ್ತು ತೂತಿನ ಗಡಗಿ |
ಅಂಬಲಿಕಾಸಿ ಹದ ಮಾಡಿ |
ಅಂಬಲಿ ಕಾಸಿ ಹದ ಮಾಡಿ ಸಾಧುರಿಗೆ ಉಣಿಸಿ |
ಗಡಗೀಯ ತೊಳೆದಿಟ್ಟೆನಲ್ಲವ್ವಾ |
ಗಾಳೀಗೆ ಗಾಳಿ ಧೂಳೀಗೆ ಧೂಳಿ |
ಏನೇನೊ ವಿಪರೀತ ತೋರೀತೆ ||

ಎನ್ನಯ್ಯ ಗುರು ತಂದೆ ತನ್ನಂತೆ ಮಡ್ಡಿದನೆ
ಮತ್ಯಾರು ಗುರುವೆ ನಮಗಿನ್ನು |
ಊರ ನೀರ ಆಸೆ ನಮಗಿಲ್ಲ ||

(ಕತೆಗಾರ ಮತ್ತು ಹಿಮ್ಮೇಳಿಗ ಚೌಡಿಕೆಯ ಶೃತಿಗೆ ಆss….ಆss….ಎಂದು ದನಿ ಗೂಡಿಸಿ ಆಲಾಪಿಸುತ್ತಾರೆ)

ಕತೆಗಾರ : ಏನ್ರಿ ಈ ಮಧ್ಯಲೋಕದಲ್ಲಿ ಕಾಶೀಗಿರಿ ಪಟ್ಣದಲ್ಲಿ ಸಾವಚಿತ್ತ ಮಹಾರಾಜ. ಆತನ ಮಡದಿ ಪೂಲಾವತಿ.

ಹಿಮ್ಮೇಳಿಗ : ಹೌದೂ………..

ಕ : ಸಾವಚಿತ್ತ ಮಹಾರಾಜ ಮಹಾ ಬುದ್ಧಿವಂತ ಒಳ್ಳೆ ಧರ್ಮಿಷ್ಠ.

ಹಿ : ಆಹಾ……..

ಕ : ರಾಜನ ಧರ್ಮಯಂಥಾದ್ದು?

ಹಿ : (ರಾಗಬದ್ಧವಾಗಿ) ಆs೦……….

ಕ : ಕೆರೆ ಬಾವಿಗಳನ್ನು ಗುಡಿ ಮಂಟಪಗಳನ್ನು ಕಟ್ಟಿಸ್ಬೇಕು;

ಹಿ : (ರಾಗಬದ್ಧವಾಗಿ) ಆsss………..

ಕ : ಬಡವರನ್ನು ಕರೆಸ್ಬೇಕು, ಧರ್ಮದ ಲಗ್ನ ಮಾಡಬೇಕು;

ಹಿ : ಮಾಡ್ಬೇಕು.

ಕ : (ರಾಗಬದ್ಧವಾಗಿ) ತಡೀ ತಪ್ಪಡಿ, ಜೋಗಿ ಜಂಗಮರು, ಹಕೀಂ ಫಕೀರರು, ಸನ್ಯಾಸಿ ಬಾವಜಿಗಳು ಬಂದು ಮುಂದೆ ನಿಂತು ದಯಾಂತ ಭಿಕ್ಷೆ ಬೇಡಿದ್ರೆ ಏನು ಭಿಕ್ಷಾ ಕೊಡ್ತಾನಪಾ!

ಹಿ : ಏನು ಭಿಕ್ಷಾ ಕೊಡ್ತಾನಪಾ?

ಕ : ಭೂದಾನ, ಅನ್ನದಾನ, ಚಿನ್ನದಾನ, ವಸ್ತ್ರದಾನ – ಇಂಥಾ ಪುಣ್ಯದಾನ ಮಾಡ್ತಾನ ಸಾವಚಿತ್ತ ಮಹಾರಾಜ!

ಹಿ : ಆಹಾ……..

ಕ : ರಾಜನ ಮಡದಿ ಪೂಲಾವತಿ ತನ್ನ ಪ್ರಜರಿಗೆ ಕರೆಕಳಿಸಿ ಉಪವಾಸ ಇದ್ದೋರಿಗೆ, ಆ ತಾಯಿ, ತನ್ನ ಕೈ ಮುಟ್ಟಿ ಊಟ ಕೊಡ್ತಾಳೆ.

ಹಿ : ಹೌದೂ……

ಕ : ಇರುವಿಗೂ ಸಕ್ರಿ ನೀಡ್ತಾಳೆ-ಪೂಲಾವತಿ ಮಹಾರಾಣಿ.

ಹಿ : (ರಾಗವಾಗಿ) ಹೌದೂ……..

ಕ : ನೀರಿನ ಅರವಂಟಿಗೆ ಇಡುಸ್ತಾಳೆ; ಲಗ್ನವಿಲ್ಲದವರಿಗೆ ಲಗ್ನ, ಬಡವರಿಗೆ ಸಹಕಾರ ಮಾಡ್ತಾ, ಹಿಂಗ ಸತಿ-ಪತಿ ಚಂದಾಗಿ ರಾಜ್ಯಭಾರ ಮಾಡ್ಬೇಕಾರ ಆಯಮ್ಮ-

ಹಿ : ರಾಜನ ಮಡದಿ-

ಕ : ಆರು ತಿಂಗಳು ಗರ್ಭಿಣಿ!

ಹಿ : ದಿಮ್ಮನ್ನ ಮನಿಶ್ಯಾಳು!

ಕ : ಗಂಡ ಹೆಂಡ್ತಿ ಪರಮಾತ್ಮನ ಧ್ಯಾನ ಮಾಡ್ತಾ ಇರ್ಬೇಕಾದ್ರೆ ಒಂಬತ್ತು ತಿಂಗಳು ಒಂಬತ್ತು ದಿವಸ ತುಂಬಿದ್ವು.

ಹಿ : ಹೌದು. ತುಂಬಿದ್ವು.

ಕ : (ರಾಗವಾಗಿ) ಅರಮನಿಯೊಳಗೆ ಮಹಾರಾಣಿಗೆ ಬ್ಯಾನಿ ತಗುಲ್ಯಾವೇ……….

ಹಿ : ಜನನವಾಗುವ ಟೈಮು.

ಕ : ಮಡದಿ ಗರ್ಭದಲ್ಲಿ ಪರಮಾತ್ಮ ಗಂಡು ಮಗನ್ನ ಕೊಡ್ಬೇಕು. ನಮ್ಮ ಪಟ್ಣ ಕಾಶೀಪುರ ಒಪ್ಪುವಂಥ ಮಗ ಹುಟ್ಟಬೇಕು, ಅಂತಾ ಸಾವಚಿತ್ತ ಮಹಾರಾಜ ಮತ್ತು ಮಂತ್ರಿ ಪರಮಾತ್ಮನ ಧ್ಯಾನ ಮಾಡ್ತಾರೆ.

ಹಿ : ಹೌದೂ……….

ಕ : ಮಂತ್ರಿ ಹೆಸರಿಗೆ ತಕ್ಕಮ್ತೆ ಬುದ್ಧಿವಂತ.

ಹಿ : ಹೌದು.

ಕ : ಅರಮನಿಯೊಳಗೆ ಗೌಡೇರು, ವಾರಗಿತ್ತೇರು, ಬಾನಗಿತ್ತೇರು, ಸೂಲಗಿತ್ತೇರು, ನಾರೀ ಜನರು ಎಲ್ಲರೂ ಕೂಡ್ಕೊಂಡು ಮಹಾರಾಣಿ ಬಾಣಂತನ ಮಾಡ್ತಾ ಇರುವಾಗ-

ಹಿ : ತಾಯಿ ಪೂಲಾವತಿಗೆ ದೊಡ್ಡ ಬ್ಯಾನಿ ಸುರ್ವಾದುವು.

|| ಪದ ||

ತಡಿಯಲಾರೆ ಬ್ಯಾನೀಗಳನು
ನಡುವಿನ ಶೂಲಿಗಳೈ !
ಜಾವ ಜಾವಕೆ ಬ್ಯಾನಿ ಬಾಕಿಲೆ ಹಿರದಂಗ
ತಾಸು ತಾಸಿನ ಬ್ಯಾನಿ ತಾಳೂಲೆ ಕತದಂಗೆ |
ನಾನು ಯಾರಿಗೆ ಹೇಳಲವ್ವಾ
ತಡಿಯಲಾರೆ ನಡುವಿನ ಶೂಲಿಗಳೈ…. |

ಹಿ : ಆಯಮ್ಮಗೆ ಜನನವಾಗುವಾಗ ಮಧ್ಯಾಹ್ನ ಹನ್ನೆರಡು ಗಂಟೆ ಟೈಮು.

ಹಿ : ಹೌದು, ಏನು ಜನನ ಆತು?

ಕ : ತಾಯಿಯ, ಪಿಂಡಾಂಡದಿಂದ ಕುಲಪುತ್ರ ಕುಮಾರ ಗಂಡು ಮಗು ಹುಟ್ಟಿದ!

ಹಿ : ರಾಜ ಪಂಡಿತ ರಾಜಕುಮಾರ!

ಕ : ಸೂರ್ಯನೋ, ಚಂದ್ರಾಮನೋ ಅನ್ನು ಅಂಥ (ರಾಗವಾಗಿ) ಕುಮಾರ ಹುಟ್ಯ್ಯಾನೇ

ಹಿ : ಆss………

ಕ : ಮಗನ ಹುರಿ ಕೊಯ್ದು, ಚುಟಿಗಿ ಕೊಟ್ರು; ಕೂಸು ಬಾಣಂತಿಗೆ ನೀರೆರದ್ರು.

ಹಿ : ಸಾವಚಿತ್ತ ಮಹಾರಾಜಗೆ ಸುದ್ದಿಕೊಟ್ರು.

ಕ : ಸಾಕು, ನಮ್ಮ ಪಟ್ಣಕೊಬ್ಬ ಮಗ ಹುಟ್ಟಿದ; ಕನಿಕರ ಪಟ್ಲ-

ಹಿ : ಪರಮಾತ್ಮ!

ಕ : ರಾಜ ಕೈ ಮುಟ್ಟಿ ದಾನಧರ್ಮ ಮಾಡ್ದ; ಸಂತೋಷದಿಂದ ಸಕ್ರಿ ಹಂಚಿದ. ಮಗ ಹುಟ್ಟಿದ ಐದು ದಿವಸಕ್ಕೆ ಇರ್ಲಾ ಮಾಡಿದ; ಹನ್ನೊಂದು ದಿವಸಕ್ಕೆ ತೊಟ್ಲಾಗ ಹಾಕೋ ಶಾಸ್ತ್ರನೂ ಆತು.

ಹಿ : ಹೌದು ಆತು.

ಕ : ಮಂತ್ರೀ-

ಹಿ : ಏನ್ ಮಾರಾಜ್?

ಕ : ಮಗನಿಗೆ ಹೆಸರಿಕ್ಕುವುದು ಇದೆ.

ಹಿ : ಹೌದೂ.

ಕ : ನಮ್ಮ ಜೋಶಿಗಳು ಯಂಕಂಭಟ್ರು-

ಹಿ : ಆ ಬ್ರಾಹ್ಮಣ,

ಕ : ಕರ್ಕೊಂಡು ಬಾ.

ಹಿ : ಒಳ್ಳೇದು ಮಾರಾಜ್ರೇ.

ಕ : ಮಂತ್ರಿ ಹೋಗಿ (ರಾಗವಾಗಿ) ಚಿಂತಾಮಣಿ ಯಂಕಂಭಟ್ರನ್ನ ರಾಜರ ಹತ್ರ ಕರ್ಕೊಂಡು ಬರ್ತಾನೇ.

ಹಿ : ನಮಸ್ಕಾರ ಮಹಾರಾಜರಿಗೆ.

ಕ : ಬರ್ರೀ ಭಟ್ರೇ, ಬರ್ರೀ ಮಗನಿಗೆ ಹೆಸರಿಡ್ಬೇಕು-ಹೊತ್ತಿಗೆ ನೋಡಿ ಹೇಳ್ರಿ.

ಹಿ : ಭಟ್ರು ಹೊತ್ತಿಗಿ ತಗದು ನೋಡ್ತಾರೆ-

ಕ : ಅಲೇಲೆಲೆ….ಮಾರಾಜ್, ಸಾವಚಿತ್ತ ಧೊರೀ! ಈ ಮಗನ ಜನ ನಕ್ಷತ್ರ ನೋಡ್ಲಿಕ್ಕಾಗಿ ಮಹಂತ ದೋಷ ಐತಿ……..

ಹಿ : ಏನ್ ದೋಷ!?

ಕ : ನೀವು ಸತಿ-ಪತಿಗೆ ಮೂಲಾನಕ್ಷತ್ರದೊಳಗೆ ಈ ರಾಜಕುಮಾರ ಹುಟ್ಟ್ಯಾನ. ಈತ ಹುಟ್ಟಿದ ಇಪ್ಪತ್ತೊಂದು ದಿವಸದಾಗ (ರಾಗವಾಗಿ) ತಾಯಿ-ತಂದೆ ಮರಣ ಐತ್ರೀ…….ದೊರಿಯೇ………..

ಹಿ : ಆಹಾ. ನಮ್ಮಿಬ್ಬರಿಗೂ ಸಾವು ಬಂತು!

ಕ : ಆಹಾ, ಪರಮಾತ್ಮ! ಮಗ ಹುಟ್ಬೇಕು-ನಮಗೆ ಮರಣ ಬರಬೇಕೆಂಬುದಿತ್ತೆ!

ಹಿ : ಲಿಖಿತ!

ಕ : ಬ್ರಾಹ್ಮಣಾ, ಈ ಸಾವು ಏನು ಶಾಂತಿ ಮಾಡಿದ್ರೆ ಬಿಡುಗಡೆಯಾದೀತು ಹೇಳ್ರಿ.

ಹಿ : ಹೇಳ್ರೀ,

ಕ : ಏನು ಹೇಳ್ಲಿ ಮಹರಾಜ್!

ಹಿ : ಆಹಾ!

ಕ : ಇದಕ್ಕ ಪರಿಹಾರ ಎಂದ್ರೆ, ನಿಮ್ಮ ಮಗನ ಮದುವೆ ಮಾಡ್ಬೇಕು; ಅಂದ್ರ ಮಾತ್ರ ನಿಮ್ಮ ಮರಣ ದೋಷ ದೂರಾಗ್ತೈತಿ.

ಹಿ : ಓಹೋ ಲಗ್ನ!

ಕ : (ರಾಗವಾಗಿ) ಹ್ಯಾಂಗ ಮಾಡ್ಬೇಕ್ರಿ….ಏನು ಎರಡು ವರ್ಷದ ಕೂಸೆ! ಒಂದು ವರ್ಷದ ಮಗನೇ……….

ಹಿ : ಆಹಾ!

ಕ : ಹನ್ನೊಂದು ದಿವಸದ ಕೂಸಿಗೆ ಲಗ್ನ ಮಾಡ್ಬೇಕು-ಅಂತೀರಲ್ರೀ ಯಂಕಂಭಟ್ರೇ!

ಹಿ : ಕನ್ಯೆ ಎಷ್ಟು ವಯಸ್ಸಿಂದು ತರ್ಬೇಕು?

ಕ : ಆಹಾ, ಅದನ್ನೂ ಹೇಳ್ಬೇಕೇನ್ರಿ ನಿಮಗೆ?

ಹಿ : ಹೌದು.

ಕ : ಐದು ದಿವಸದ ಕನ್ಯೆ ಹುಡುಕ್ರಿ ಎಲ್ಲಿದ್ರೂ….

ಹಿ : (ರಾಗವಾಗಿ) ಹಾ………

ಕ : ಆರು ದಿವಸದ್ದು ಪತ್ತೆ ಮಾಡ್ರಿ………..

ಹಿ : ಹಾ!

ಕ : ಕೊನಿಗೆ ಎಂಟು ದಿವಸದ ಕನ್ಯಾ ತಗದು ಮದುವಿ ಮಾಡ್ರೀ; ಅಂದ್ರ ಮಾತ್ರ ನಿಮ್ಮ ಪಾಲಿನ ದೋಷ ನಿವಾರಣೆ ಆಗತದೆ.

ಹಿ : ಹೌದು, ಆಗತೈತೆ!

ಕ : (ರಾಗವಾಗಿ) ಬುದ್ಧಿವಂತ ಮಂತ್ರೀ, ಯಾವ ರಾಜನ ಹೊಟ್ಟೆಯಲ್ಲಿ ಐದು, ಆರು ಎಂಟು ದಿವಸದ ಕೂಸು ಸಿಗಬಹುದು? ನಮಗೆ ಮರಣದಿಂದ ಮುಕ್ತಿ ದೊರೀಬಹುದು?

ಹಿ : ಆಹಾ……..

ಕ : ಮಹಾರಾಜಾ, ನೀವೇನೂ ಚಿಂತಿ ಮಾದಬ್ಯಾಡ್ರಿ; ರಾಜಕುಮಾರಗೆ ಹೆಸರಿಡ್ರಿ, ನಾನೆಲ್ಲಿದ್ರೂ, ಪತ್ತೆ ಮಾಡಿ, ಕನ್ಯಾ ಗೊತ್ತು ಮಾಡಿ ಬರ್ತೀನಿ-

ಹಿ : ಅಂದ ಮಂತ್ರಿ!

ಕ : ಆವಾಗ ಬ್ರಾಹ್ಮಣ ವತ್ತಿಗಿ-ತಗದು ನಾಮಕರಣ ನೋಡಿದ….

ಹಿ : ಏನು ಹೇಳ್ದಾ?

ಕ : “ಕಾಶೀಗಿರಿ ಪಟ್ಣದಲ್ಲಿ ಸಾವಚಿತ್ತ ಮಾರಾಜನ ಉತ್ತರಕ್ಕೆ ಹುಟ್ಟಿದ ಮಹಾದಾನಿ ಫೂಲಾವತೆಮ್ಮನ ಗರ್ಭದಿಂದ ಉದ್ಭವಿಸಿದ ಈ ಕೂಸಿಗೆ ಬಾಳಭಿಕ್ಷುಕ ಮಹಾರಾಜ ಅಂತ ನಾಮಕರಣ ಮಾಡ್ರಿ” ಅಂದ.

ಹಿ : ಅದರಂತೆ ಹೆಸರಿಟ್ರು

|| ಪದ ||

ತೂಗೀರಿ ರಂಗಾನ ತೂಗೀರಿ ಕೃಷ್ಣಾನ
ತೂಗೀರಿ ಅತುಲ ರಂಗಾನ ತೂಗೀರಿ ವರಗಿರಿಯಪ್ಪನ
ತಿಮ್ಮಪ್ಪಾನ ತೂಗೀರಿ ಕಾವೇರಿ ರಂಗಾನ
ಆಲದ ಎಲಿ ಮ್ಯಾಲೆ ಮಲಗೀದ ಬಾಲಾನ ಬಂಧು ಬಳಗೆಲ್ಲ ತೂಗೀರಿ
ಇಂದ್ರಗನ್ನಿಕೆಯರು ಮಂದಹಾಸದ ರೂಪೇಂದ್ರನ ತೊಟ್ಲ ತೂಗೀರಿ
ಪುರಂದರ ವಿಠಲ ಬಾಲ ಮಲಿಗ್ಯಾನ
ವೈಕುಂಠ ವಾಸಾನ ತೂಗೀರಿ
ತೂಗೀರಿ ರಂಗಾನ ತೂಗೀರಿ ಕೃಷ್ಣಾನ
ತೂಗೀರಿ ಅತುಲ ರಂಗಾನ.

ಕ : ಇನ್ನು ಈ ಕೂಸಿಗೆ ಕನ್ಯಾ ಗೊತ್ತು ಮಾಡ್ತೀನಿ ಅಂತ ಮಂತ್ರಿ ಹೇಳಿ ಕುದ್ರಿ ಹತ್ತಿ ಹೊಂಟ. “ಎಲ್ಲಿ ಸಿಗಬಹುದು ಆರೆಂಟು ದಿವಸದ ಕನ್ಯಾ! ಯಾರ ಹೊಟ್ಟೆಯಲ್ಲಿ ಹುಟ್ಟಿದ್ದೀತು!” ಅಂತ ಹೇಳಿ-

|| ಪದ ||

ತಡ ಮಾಡದೆ ಪತ್ತೇವು ಮಾಡಾಕ ಹೊಂಟಾನ ದೇವಾ
ಹುಡುಕುತಾ ಹೊಂಟಾನ ದೇವಾ
ಎರಡೇ ಗಾವುದ ನಡದಾನಾ…. ನಮಃ ಶಿವಾಯಾ
ಎಲ್ಲ ಕಡಿಗೂ ಕೇಳ್ಯಾನಾ….ಹರಯನ್ನ ಮಾದೇವಾ.

ಹಿ : ಹೌದು!

ಕ : ಅರಿಖಂಡ, ದೊರಿಖಂಡ, ಕಾಶೀಖಂಡ….

ಹಿ : (ರಾಗವಾಗಿ) ಹೌದೂ….

ಕ : ಪೂರ್ವಾ, ಪಶ್ಚಿಮಾ, ಉತ್ತರಾ, ದಕ್ಷಿಣಾ ಈ ನಾಲ್ಕೂ ದಿಕ್ಕಿನಾಗ ಶೋಧಾ ಮಾಡಿದ್ರೂ ತಕ್ಕ ಕಂದಮ್ಮ ಸಿಗಲಿಲ್ಲ!

ಹಿ : ಹೌದು ಸಿಗಲೇ ಇಲ್ಲ!

ಕ : ಮೂರು ದಿವಸದ ಹೊತ್ತಾತು. ಬರೀಕೈಲೆ ಹೋಗಿ, ಬರೀಕೈಲಿ ಕಾಶೀಗಿರಿ ಪಟ್ಣಕ್ಕೆ ಬರೋ ಪ್ರಸಂಗ ಬಂತು….

ಹಿ : ಮಂತ್ರಿಗೆ!

ಕ : (ರಾಗವಾಗಿ) ಹ್ಯಾಂಗ್ ಮಾಡೋದs ದೇವ….
ಬರೀಕೈಲಿ ಹೋದ್ರ…..ತಾಯಿ-ತಂದಿಗೆ ಮರಣಾ!

ಹಿ : ಆಹಾ!

ಕ : ಇದು ಯಾವುದು ಊರು?

ಹಿ : ಭದ್ರಾವತಿ ಪಟ್ಣ ಅಂತ ಮುಂದೆ ಬೋರ್ಡು ಐತಿ ನೋಡು.

ಕ : ಭದ್ರಾವತಿ ಪಟ್ಣದಲ್ಲಿ ಭದ್ರಸೇನ ಮಹಾರಾಜ; ಆತನ ಮಡದಿ ಹೆಸರು-

ಹಿ : ಮಹಾದೇವಿ

ಕ : ಈ ಊರಾಗ ಏನಾರ ಐದಾರು ದಿವಸದ ಕನ್ಯಾ ಸಿಗಬಹುದೆ-ಅಂತ ಹೇಳಿ ಆ ಪಟ್ಣದ ಮುಂದಲ ಬಾವಿ ದಂಡೀಲೆ ಆಲೋಚನೆ ಮಾಡ್ಕೊಂತ ಕುಂತ ಮಂತ್ರಿ; ಆಗ ಸಾಯಂಕಾಲದ ಟೈಮು.

ಹಿ : ಹೌದು.

ಕ : ಭದ್ರಸೇನ ಮಹಾರಾಜಗೆ ಗಂಡು ಸಂತಾನವಿಲ್ಲ. ಒಬ್ಳೇ ಒಬ್ಳು ಮಗಳೈದಾಳ;

ಹಿ : ಮಗಳ ನಾಮಕರಣ?

ಕ : ಪದ್ಮಾವತಿ.

ಹಿ : ವಯಸ್ಸು?

ಕ : ಹನ್ನೆರಡು ವರ್ಷದ ಮಗಳು; ಋತುಮತಿಯಾಗಿ ಆತು ತಿಂಗಳು. ಓದು ಬರಹ, ಶಾಸ್ತ್ರ ಪುರಾಣ, ಸಂಗೀತ ಶ್ಲೋಕದಲ್ಲಿ ನಿಪುಣಳು-ಪದ್ಮಾವತಿ.

ಹಿ : ಆಹಾ. ಹೌದು!

ಕ : ಹಿಂಗ ವಿದ್ಯೆಯಲ್ಲಿ ಒಂದೇ ಅಲ್ಲ, ರೂಪದಲ್ಲಿ ಕೂಡಾ ದೇವಲೋಕದ ಕನ್ಯೆಯೋ, ತಿಲೋತ್ತಮೆಯೋ, ಊರ್ವಶಿಯೋ, ರಂಭೆಯೋ, ರತಿಯೋ, ಸರಸ್ವತಿಯೋ….

ಹಿ : ಆಹಾ ಚಂದನ್ನ ಚಲುವಿ!

ಕ : ಮಗಳಿಗೆ ಎಷ್ಟೋ ವರಗಳು ಬಂದ್ರೂ ಮನಸ್ಸಿಗೆ ಹಿಡಸ್ಲಿಲ್ಲ.

ಹಿ : ಊಹೂಂ ಇಲ್ಲ!

ಕ : ಮಗಳಿಗೆ ತಕ್ಕಂಥ ವರ ಸಿಕ್ಕಿಲ್ಲ!

ಹಿ : ಆಹಾ!

ಕ : ಊರ ಮುಂದೆ ಬಾವಿ ದಂಡಿಗೆ ಕುಂತೇ ಐದಾನ ಮಂತ್ರಿ; ಆ ವ್ಯಾಳ್ಯಾದಲ್ಲಿ ಅಲ್ಲಿಗೆ ಬಂದ್ರು-

ಹಿ : ಯಾರು ಬಂದ್ರು?

ಕ : ಪದ್ಮಾವತಿ ಮಂಚ ತೂಗುವಂಥ ಇಬ್ಬರು ಗೌಡೇರು ಕೊಡ ತಗೊಂಡ ಅಲ್ಲಿಗೆ ನೀರಿಗೆ ಬರ್ತಾರೆ ನೋಡ್ರಿ.

|| ಪದ ||

ನಾರಿ ಹೋಗಿ ನೀರಿಗೆ ಕರೀತಾಳೆ ವಾರಿಗಿ ಗೆಳತೇರು ನೀರಿಗೆ ಬರ್ರೆವ್ವಾ ತಂಗೀ
ಚಂದ್ರಪಟ್ಟಣದೊಳು ಕುಂಬಾರ ಮಾಡ್ಯಾನ ಚಂದಕೆ ತಂದೇನವ್ವಾ ನಾ ಬಿಂದೀಗಿ
ಜ್ಞಾನಿಟ್ಟು ಕೇಳೀರು ಸ್ನಾನ ಸಂಧ್ಯಾನ ಮಾಡಿ ಕುಂಬಾರ ಹೊಂಟಾನು ಬಿರಿ ಬಿರೀ
ಗುರು ಎಂಬೊ ಗುದ್ದಾಲಿ ತೊಗೊಂಡು ಅಗದಾನು ಭೂಮಿ ನೆಲಾ
ಗರ್ವ ಎಂಬೋ ಕತ್ತೆಯ ಮೇಲೆ ಮಣ್ಣ ಹೇರಿದಾನೊ ಸಾರಿ ಸಾರಿ
ಕೆಸರ ತುಳಿದಾನೋ ಪರಿ ಪರಿ ಧೈರ್ಯ ಎಂಬ ತಿಗರಿ ಮ್ಯಾಗ
ಮಣ್ಣ ತಿರುವಿದಾನ ಪಂಚಭೂತಗಳೆಂಬ ಚಿತ್ರಾವ ಕೊರದಿದಾನೋ
ಮುನ್ನೂರ ಅರವತ್ತು ಕುತ್ತುಗಳೆಂಬೊ ಗೊಂಬೀಯ ಬರದಾನೊ ಬಾಳ ಚಂದಾ
ಚಿಂತೆಂಬ ಗತಿಗೆಟ್ಟ ಸಂತೀಗೆ ನಾ ಹೋದೇನೆ ದಾನ ಧರ್ಮ ಕರ್ಮ
ಅಲ್ಲಿಯೂ ಪಾರಾಗಿ ನಿರಾಲೆಂಬೊ ನಿರಮನದೋಳು
ಸಾಂಬಾನ ಪಾದಾಕೆ ಹಂಬಲಾಗಿ
ಕಾಮ ಕ್ರೋಧ ಮೋಹ ಮತ್ಸರ ಆರು ಮಂದಿ ಗೆಳತೇರು ಬಂದು ಜೋಡಿ
ಉತ್ತಮ ಮಧ್ಯಮ ಕನಿಷ್ಠ ಮೂರೂ ಸಿಂಬಿ ಮಾಡಿ ನಾ ಹೊತ್ತೆ ಕೊಡ
ಮರವು ಎಂಬೊ ಮಾತಿಗೆ ಬಿದ್ದು ಕೊಡ ತುಂಬೀದೆನವ್ವಾ ಬಡಾಬಡಾ
ಹೊರಸುವರು ಯಾರೂ ಇಲ್ಲ ಬಲ ಎಡ ಅಲ್ಲಿ ಏಕಾಂತ ಭೆಟ್ಟಿ ಆದ ಗುರುರಾಯ
ಗೋಪಾಳ ದುರುದುಂಡಿ ಪದ ಮಾಡಿ ಹೇಳ್ತಾನೊ ಸಾಂಬನ ಪಾದಾಕ ಹಂಬಲಾಗಿ

ಕ : ಈ ಪ್ರಕಾರವಾಗಿ ಆ ಗೌಡೇರು ಹಾಡು ಹೇಳ್ಕೊಂಥಾ ಬಾವಿ ಹತ್ರ ಬಂದು ನೋಡ್ತಾರೆ….

ಹಿ : ಆಹಾ!

ಕ : ತಂಗೀ ಇವರ್ಯಾರು?

ಹಿ : ಮಹಾರಾಜ್ರು ಆಗ್ಯಾರು!

ಕ : ಯಾವ ದೇಶದ ರಾಜನಮ್ಮಾ! ಎಂಥಾ ಚಂದಾನ ಚಲುವ ಇದಾನಲ್ಲಮ್ಮ!!

ಹಿ : ಹೌದಲ್ಲಮ್ಮ!

ಕ : ನಮ್ಮ ತಾಯಿ ಪದ್ಮಾವತಿಗೆ ಎಂತೆಂಥೋರೋ ವರ ಬಂದ್ರೂ ಲಗ್ನಾಗಿಲ್ಲ-

ಹಿ : ಈ ಮಹಾರಾಜನ್ಗೇಯಾಕ ಲಗ್ನ ಆಗ್ಬಾರದು?

ಕ : ಅಂತ ಹೇಳಿ ಅವರು ಮಾತಾಡ್ಕೊಂಡ್ರು; ಪ್ರಧಾನಿ ಕಿವಿಗೆ ಇದು ಬಿತ್ತು! ಆತ ಕೇಳ್ತಾನೆ-

ಹಿ : ಯಾರಮ್ಮಾ ನೀವು?

ಕ : ನಾವು ಗೌಡೇರು ನೀವು ಯಾರಪ್ಪಾ?

ಹಿ : ನಾನು ಬುದ್ಧಿವಂತ….

ಕ : ಸಾವಚಿತ್ತ ಮಹಾರಾಜನ ಮಂತ್ರಿ ತಂಗೇರಾs.

ಹಿ : ಓಹೊ!

ಕ : ಇವನ್ನ ನಾನು ರಾಜ ಅಂತ ತಿಳಿದ್ವಿ! ಮಂತ್ರಿ ಅಂತೆ! ಮಂತ್ರೀನೇ ಹಿಂಗ ಅದಾನ ಅಂದ ಮ್ಯಾಲೆ ಇವನ ರಾಜ ಇನ್ನು ಹೆಂಗ್ ಇರಬಹುದು!

ಹಿ : ಹೌದು ಹಂಗ ಇರಬಹುದು!!

ಕ : ಗೌಡೇರು ನೀರು ಕೊಡ ಹೊತಗೊಂಡು ಹೋದ್ರು. ಮಂತ್ರಿ ಅಂದು ಕೊಂತಾನೆ- ಆಹಾ! ಹನ್ನೆರಡು ವರ್ಷದ ಪದ್ಮಾವತೀನ ನಮ್ಮ ಹನ್ನೊಂದು ದಿವಸದ ಕೂಸಿಗೆ ಗೊತ್ತು ಮಾಡ್ದೆ ವಿಧಿ ಇಲ್ಲ!

ಹಿ : ಐದಾರು ದಿವಸದ ಕೂಸು ಹುಡುಕಿದ್ರೆ ಎಲ್ಲೂ ಸಿಗಲಿಲ್ಲ. ಮತ್ತೇನ್ಮಾಡೋದು!

ಕ : ಬರೀ ಕೈಲಿ ಹೋದ್ರೆ ನಮ್ಮ ತಂದಿ-ತಾಯಿಗೆ ಸಮಾನರಾದ ರಾಜ-ರಾಣಿಗೆ ಮರಣ.

ಹಿ : ಇದರಿಂದ ಅವರ್ನ ಪಾರು ಮಾಡ್ಬೇಕು ಅದಕಾಗಿ-

|| ಪದ ||

ಹನ್ನೊಂದು ದಿವಸದ ಕೂಸಿಗೆ….ಹರಯನ್ನ ಮಾದೇವಾ
ಹನ್ನೆರಡು ವರ್ಷದ ಹೆಣ್ಣು….ಹರಯನ್ನ ಮಾದೇವಾ
ತಗದು ಮದ್ವಿ ಮಾಡ್ಬೇಕೋ….ಹರಯನ್ನ ಮಾದೇವಾ

ಹಿ : ಹೌದು ಮಾಡ್ಬೇಕು.

ಕ : ಆದ್ರೆ, ಈ ರಾಜನ್ನ ಕೇಳೋದು ಹ್ಯಂಗ? ಈತ ಕೊಡ್ತಾನೇನು ಮಗಳ್ನ?

ಹಿ : ಕೊಡೋದಿಲ್ಲ, ಕೊಟ್ರೆ ಕಪಾಳಕ್ಕೆ ಕೊಡ್ತಾನೆ-ಕೈ!

ಕ : ನನ್ನ ಮಾನ ಮರ್ಯಾದಿ ಕಳಿತಾನೆ; ಇದಕ್ಕೆ ಏನು ಉಪಾಯ, ಮಾಡ್ಬೇಕು!

ಹಿ : ಪ್ರಯತ್ನ ಮಾಡ್ಬೇಕು.

ಕ : ಅಂತಾ ಮಂತ್ರಿ ಒಂದು ಪ್ಲಾನ್ ಮಾಡಿದಾ, ಬಿಳಿ ಹಾಳಿ ತರಿಸಿದ, ಅದರ ಮೇಲೆ ಬರ್ದಾ-

ಹಿ : ಒಕ್ಕಣೀ ಬರ್ದಾ-

ಕ : ತನ್ನ ಜೇಬಿನೊಳಗೆ ಇಟ್ಟುಕೊಂಡು ಭದ್ರಸೇನ ಮಹಾರಾಜನ ಕಛೇರಿಗೆ ಬಂದ- “ನಮಸ್ಕಾರ ಮಹಾದೊರೆಯವರಿಗೆ”-

ಹಿ : ಶರಣಾರ್ಥಿರಿ; ಯಾರಪ್ಪ ನೀವು?

ಕ : ನಾವು ಮಂತ್ರಿ ಮಹಾರಾಜ.

ಹಿ : ಯಾವೂರು ನಿಮ್ಮದು?

ಕ : ಕಾಶೀಗಿರಿ ಪಟ್ಣದ ಸಾವಚಿತ್ತ ಮಹಾರಾಜರ ಮಂತ್ರಿ, ಬುದ್ಧಿವಂತ ನಾನು.

ಹಿ : ಆಹಾ! ನಮ್ಮ ಸುಂದರವಾದ ಪಟ್ಣಕ್ಕೆ ಬಂದ ಕಾರಣವೇನು?

ಕ : ಕನ್ಯಾದಾನ ಬೇಡಿ ಬಂದೀವಿ ಮಾಹಾರಾಜ್ರೇ

ಹಿ : ಯಾರಿಗೆ ಕನ್ಯಾ?

ಕ : ಬಾಳ+ಭಿಕ್ಷುಕ ಮಹಾರಾಜರಿಗೆ.

ಹಿ : ಓಹೋ!

ಕ : ಕುದ್ರಿನೋಡಿ ಬೆಲಿ ಮಾಡ್ಬೇಕು, ಆಳು ನೋಡಿ ಅನ್ನ ನೀಡ್ಬೇಕು, ವರ ನೋಡಿ ಹೆಣ್ಣು ಕೊಡ್ಬೇಕು ಅಂತ ಐತಿ-

ಹಿ : ಹೌದು, ಶಾಸ್ತ್ರ ಐತಿ.

ಕ : ವರ ಏನರಾ ಕರ ತಂದಿರೇನು?

ಹಿ : ಇಲ್ಲ ಮಹಾರಾಜ್, ಅವರ ಬರಹಾ ತಂದೀನಿ;

ಕ : ಬರಹ,- “ಇದೋ ನೋಡ್ರಿ, ಬರಹ” ಎಂದ.

ಹಿ : ಅರಸನ ಕೈಗೆ ತಾನು ಬರದ ಚೀಟಿ ಕೊಟ್ಟ.

ಕ : ಕಾಶೀಗಿರಿ ಪಟ್ಣದಲ್ಲಿ ಸಾವಚಿತ್ತ ಮಾಹಾರಾಜ್ರು, ಆತನ ಮಗ ಒಳ್ಳೇ ಯೌವ್ವನಕ್ಕೆ ಬಂದಾನೆ; ಓದು ಬರಹ, ವಿದ್ಯೆಯಲ್ಲಿ ಮಹಾ ಪ್ರಚಂಡ, ರೂಪದಲ್ಲಿ ದೇವೇಂದ್ರ ಸ್ವಭಾವದಲ್ಲಿ ಗಂಭೀರ, ಶೂರ ಧೀರ, ನಾಕುದೇಶ ಹುಡುಕಿದ್ರೂ ತಕ್ಕ ಕನ್ಯಾ ಸಿಗಲಿಲ್ಲ. ಈಗ ಭದ್ರಾವತಿ ಪಟ್ಣಕ್ಕೆ ನಮ್ಮ ಮಂತ್ರಿ ಬುದ್ಧಿವಂತ ಬಂದಾನೆ; ತಕ್ಕ ಕನ್ಯಾ ಇದ್ರೆ ನನಗೆ ಕೊಡಬಹುದು; ನನ್ನ ಹೆಸರು ಬಾಲಭಿಕ್ಷುಕ ರಾಜಕುಮಾರ.

ಹಿ : ಹೌದೂ.

ಕ : ರಾಜ ತನ್ನ ಮಡದಿಯನ್ನು ಕರದು ಪತ್ರ ತೋರಿಸ್ದಾ; “ಆತ ಹೇಳ್ತಾನ-

|| ಪದ ||

ಇವನಿಗೆ ನನ್ನ ಮಗಳ್ನ ಕೊಡಬೇಕೈ ಮಡದಿ……….ಹರಯನ್ನ ಮಾದೇವಾ
ಮಗಳಿಗೆ ತಕ್ಕಂಥ ಮರ ಈತಾ………ಹರಯನ್ನ ಮಾದೇವಾ
ನಾವು ವಚನ ಕೊಡಬೇಕೋ…………. ನಮಃ ಶಿವಾಯಾ

ಕ : ಮಡದಿ….

ಹಿ : ಏನ್ರಿ ಮಹಾರಾಜ್?

ಕ : ಬಾಳಭಿಕ್ಷುಕ ಮಹಾರಾಜ ಮಹಾಶೂರ ಧೀರ, ಪಂಡಿತನಿದ್ದಾನಂತೆ!

ಹಿ : ಇದ್ದಾನಂತೆ!

ಕ : ಈ ಮಗನಿಗೆ ತಕ್ಕಂಥಾ ಕನ್ಯಾ ಅಂದ್ರ-ನಮ್ಮ ಮಗಳು.

ಹಿ : ಹೌದು, ಪದ್ಮಾವತೀನೇ ತಕ್ಕಂಥ ಕನ್ಯಾ.

ಕ : ಕೊಟ್ಟು ಲಗ್ನಾ ಮಾಡೋಣು.

ಹಿ : ಹೌದೂ.

ಕ : ರಾಜಾ-ರಾಣಿ ಒಪ್ಪಿ ಮನಸ್ಸಿಗೆ ಬಂದೈತಿ ಅಂತ ಮಾತು ಕೊಟ್ರು; ಆನಂದದಿಂದ ಸಕ್ರಿ ವೀಳ್ಯಾ ಮಾಡಿದ್ರು.

ಹಿ : ಹೌದು ಸಕ್ರಿ ಹಂಚದ್ರು ಪಟ್ಣಣಕ್ಕೆಲ್ಲಾ.

ಕ : ಇನ್ನು ಮಂತ್ರಿ ಊರಿಗೆ ಹೊಂಡಬೇಕು; ಆಗ ಆತ ರಾಜಗೆ ಹೇಳ್ತಾನೆ-

ಹಿ : ಏನಂತಾ?

ಕ : ಮಾಹಾರಾಜ್ರೇ ನಾಳಿಲ್ಲದ ನಾಡ್ದ ಲಗ್ನಕಾರ್ಯ ಮುಗೀಬೇಕು.