ಹಿ : ಯಾಕಪ್ಪ ಅಷ್ಟು ತುರ್ತುಪರಿಸ್ಥಿತಿ?
ಕ : ಮುಂದೆ ಗತ ಐತಿ, ಈಗ ಬಿಟ್ರೆ ಮುಂದ ಒಳ್ಳೇ ಮೂರ್ತಗಳೇ ಇಲ್ಲಾಂತ ನಮ್ಮ ರಾಜ-ಜೋತಿಷ ಪಂಡಿತ್ರು ಹೇಳ್ಯಾರ.
ಹಿ : ಆಹಾ ಹೌದೇ?
ಕ : ಅದಕ್ಕೇ ಇಷ್ಟು ಅವಸರ ಮಹಾರಾಜ್! ತುರ್ತುಕಾರ್ಯ ಮಹಾಪುಣ್ಯವಂತೆ!]
ಹಿ : ಹೌದಂತೆ.
ಕ : ಆಗಲೆಪ್ಪಾ ಬುದ್ಧಿವಂತ ಮಂತ್ರೀ. ಕೊಟ್ಟ ಹೆಣ್ಣು ಕುಲಕ್ಕೆ ಹೊರ್ತು; ಮಾತು ಕೊಟ್ರೆ ಹೋತು; ಮತ್ತು ಒಡೆದರೆ ಹೋತು.
ಹಿ : ಹೌದೂ….
ಕ : ಬಂದು ಲಗ್ನ ಮಾಡ್ಕೊಂಡು ಹೋಗ್ರಿ ಮಂತ್ರೀ. ಋತುವಾದ ಮಗಳು ತಂದೀ ಮನಿಯಲ್ಲಿ ಇರಬಾರ್ದು-
ಹಿ : ಇರ್ಬಾರದು ಅಂತ ಶಾಸ್ತ್ರ ಹೇಳ್ತೈತಿ.
ಕ : ಲಗ್ನದ ವೀಳ್ಯಾ ತಗೊಂಡು ಮಂತ್ರಿ ಸೀದಾ ಕಾಶೀಗಿರಿ ಪಟ್ಣಕ್ಕ ಬಂದ; ರಾಜಗೆ ಮುಜರೆ ಮಾಡಿದ.
ಹಿ : ಹೋದಂಥಾ ಕಾರ್ಯ ಏನಾತು ಮಂತ್ರೀ?
ಕ : ಮಾರಾಜ್! ನೆರವೇರ್ತು; ಬೀಗಸ್ತನ ಮಾಡಿಕೊಂಡೇ ಬಂದೆ.
ಹಿ : ಹೌದೇ! ಯಾವೂರ ಕನ್ಯಾ?
ಕ : ಭದ್ರಾವತಿ ಪಟ್ಣದ ಮಹಾರಾಜ ಭದ್ರಸೇನನ ಮಗಳು. ಮಹಾಜಾಣೆ, ಸುಗುಣೆ ಸುಂದರಿ-ಪದ್ಮಾವತಿ.
ಹಿ : ಎಷ್ಟು ದಿವಸದ ಕೂಸು?
ಕ : ಹನ್ನೆರಡು ವರ್ಷದ ಮಗಳು; ಋತುವಾಗಿ ಆರು ತಿಂಗಳು ಆಗ್ಯಾವೆ.
ಹಿ : ಹೌದೇ?
ಕ : ಅಯ್ಯೋ ಇದೇನಿದು ಮಂತ್ರೀ! ನಿನ್ನ ಮನಿ ಹಾಳಾಗ! ಏನು ಮೋಸಮಾಡ್ದಿ? ಹನ್ನೆರಡು ವರ್ಷದ ಋತುವಾದ ಕನ್ಯಾ ತಂದು ನಮ್ಮ ಹನ್ನೆರಡು ದಿನದ ಕೂಸಿಗೆ ಲಗ್ನ ಮಾಡಬೇಕೂ ಅಂದ್ರ – ನಿನ್ನ ಮನಸ್ಸು ಒಪ್ಪಿತು ಹ್ಯಾಂಗ? ತಂದಿ- ತಾಯಿ ಯಾದ್ರು ಹ್ಯಾಂಗ ಕೊಟ್ರು?
ಹಿ : ನೀನೇನು ಹೇಳ್ದಿ?
ಕ : ಮಹಾರಾಜ್, ನಾಲ್ಕೂ ದಿಕ್ಕು ತಿರುಗಿದೆ; ಎಲ್ಲೂ ಐದಾರು ದಿವಸದ ಕನ್ಯಾ ಸಿಗಲಿಲ್ಲ. ನಾನು ಬರಿಕೈಲಿ ಬಂದಿದ್ರ ನೀವೂ ಮಹಾರಾಣಿ ಮರಣ ಆಗತಿದ್ರಿ; ಅದಕ್ಕಾಗಿ ಇದ್ದ ಮಾತ ಹೇಳ್ಲಿಲ್ಲ-
ಹಿ : ಹೇಳಿದ್ರೇ ದವಡೀ ಮ್ಯಾಲೆ ಹೊಡೀತಿದ್ರು.
ಕ : ಅದಕ್ಕಾಗಿ ಇಲ್ಲದ್ದೊಂದು ಪೌರುಷದ ಕಾಗದ ಬರ್ದು ಭದ್ರಾವತಿ ರಾಜರಿಗೆ ಕೊಟ್ಟೆ; ಅವರ ಮನಸ್ಸಿಗೆ ಬಂತು; ರಾಜಾರಾಣಿ ಇಬ್ರೂ ಒಪ್ಪಿದ್ರು, ಸಕ್ರಿ ವೀಳ್ಯಾ ಮಾಡ್ಕೊಂಡೇ ಬಂದೆ.
ಹಿ : ನಾಳೇ ಲಗ್ನ.
ಕ : ಮಡದೀ….!
ಹಿ : ಏನ್ ಮಾರಾಜ್ರೇ?
ಕ : ನಾಳೆ ಲಗ್ನಕ್ಕೆ ಹೋಗುತ್ತೀವಿ; ನಮ್ಮ ಅಳಿಯನ್ನ ತೋರಿಸಿರಿ ಅಂತ ಬೀಗರಂದ್ರೆ ಯಾರಿಗೆ ತೋರಿಸ್ಬೇಕು!
ಹಿ : ಆಹಾ!
ಕ : (ರಾಗವಾಗಿ) ನಮ್ಮ ಮರ್ಯಾದೆ ಹೋಗೋವತ್ತು ಬರ್ತೈತಲ್ಲೋ ಮಂತ್ರೀ.
ಹಿ : ಮಾರಾಜ್, ನಿಮ್ಮ ಮಗನ್ನ ತೋರ್ಸಾಕ ಬರಾದಿಲ್ರೀ.
ಕ : ಮತ್ತ್ಯಾರಿಗೆ ತೋರ್ಸಾದು?
ಹಿ : ಹೌದು ಯಾರನ್ನ ತೋರ್ಸಾದು?
ಕ : ಮಾರಾಜ್ ಪ್ರಾಯಕ್ಕ ಬಂದ ನನ್ಮಗ ಅದಾನಲ್ಲ.-ಅವನ್ನ ಮದುಮಗನ್ನ ಮಾಡಿಕೊಂಡು ಹೋಗಿ ಇವ್ನೇ ನೋಡ್ರಿ ನಿಮ್ಮ ಅಳಿಯಾ ಅಂತ ತೋರ್ಸೊದು, ನಿಮ್ಮ ಮಗನ ಹೆಸರಿಲೆ ಆಯಮ್ಮಗ ತಾಳಿ ಕಟ್ಟೋದು.
ಹಿ : ಆಹಾ!
ಕ : ಲಗ್ನ ಆದ ಬಳಿಕ ಆಯಮ್ಮ ಬಂದ್ರೆಷ್ಟು ಬರದಿದ್ರೆಷ್ಟು? ಇದ್ರೆಷ್ಟು ಹೋದ್ರೆಷ್ಟು? ನಿಮಗೆ ಬಂದಂಥ ಮರಣ ದೂರಾದ್ರೆ ಸಾಕು.
ಹಿ : ಆಹಾ!
ಕ : ಪ್ರಧಾನಿ ಮಗ ರೂಪದಲ್ಲಿ ಚಲೋ ಇಲ್ರಿ!
ಹಿ : ಹೌದ್ರಿ!
ಕ : ಕರೇ ಹೆಗ್ಗಣ ಆಗ್ಯಾನ್ರಿ! ರೂಪದಲ್ಲಿ ಅಸ್ಸಯ್ಯ!
ಹಿ : ಭಾರೀ ಅಸ್ಸಯ್ಯ!
ಕ : ಅವನ ಕಣ್ಣು ನೆತ್ತಿ ಮ್ಯಾಲೆ, ಪಡುಗದಂತ ಹೊಟ್ಟಿ, ಮುಚ್ಚಳದಂಥ ಬಾಯಿ, ಕೈ-ಕಾಲು ಸೊಟ್ಟು, ಗಡ್ಡ ಬೆಳ್ದಾವು, ರೂಪದಲ್ಲಿ ಭಯಂಕರ!
ಹಿ : ಭಾರಿ ಭಯಂಕರ!
ಕ : (ರಾಗವಾಗಿ) ಅವನ್ನ ಮದು ಮಗನ್ನ ಮಾಡ್ಯಾರಾ!
ಹಿ : ಆಹಾ!
ಕ : ನೂರು ಇನ್ನೂರು ಬಂಡಿ ಮ್ಯಾಲೆ ಸಾಮಾನು ಹೇರ್ಕೊಂಡು, ದಂಡು ದರ್ಬಾರು, ಪರಿವಾರ ಕರ್ಕೊಂಡು ಸಾವಚಿತ್ತ ಮಹಾರಾಜ, ಬಾಣಂತಿ ಪೂಲಾವತಿ, ಹನ್ನೆರಡು ದಿವಸದ ಮಗನ್ನ ತೊಟ್ಲಾಗ ಹಾಕ್ಕೊಂಡು ಆನಿ ಮ್ಯಾಗಿನ ಅಂಬಾರಿಯೊಳಗೆ ಇಟ್ಕೊಂಡು,
|| ಪದ ||
ಲಗ್ನಕೆ ನಡುದಾರೇ….ಓ ನಮಃ ಶಿವಾಯಾ
ಆಹಾ ಭದ್ರಾವತಿ ಪಟ್ಣಾ….ಓ ನಮಃ ಶಿವಾಯಾ
ಕ : ಗಂಡಿನವರು ಭದ್ರಾವತಿ ಅಗಸಿಗೆ ಬಂದ್ರು. ಆಗ ಬೈಗಿನ ಐದು ಗಂಟೆ ಟೈಮು;
ಹಿ : ಹೌದೂ.
ಕ : ಇಡೀ ಭದ್ರಾವತಿ ಪಟ್ಣ ಬೀಗರ್ನ ಎದುರ್ಗೊಣ್ಣಾಕ ಬಂದಾರೆ!
ಹಿ : ಅವರ್ಗೆಲ್ಲಾ ಮದುಮಗನ್ನ ನೋಡೋ ಆಸೆ!
ಕ : ಭದ್ರಸೇನ ಮಹಾರಾಜಾ ಮತ್ತು ಮಡದಿ ಮಹಾದೇವಿ ಬುದ್ಧಿವಂತ ಮಂತ್ರಿನ್ನ ಕೇಳ್ತಾರೆ-
ಹಿ : ಮಂತ್ರೀ ನಮ್ಮ ಅಳಿಯ ಎಲ್ಲಿ?
ಕ : “ಅದೋ ನೋಡ್ರಿ ಮಹಾರಾಜ್ರೇ ಅಲ್ಲಿ ಕುದರಿ ಮ್ಯಾಲೆ ಕುಂತಾರೆ ನಿಮ್ಮ ಅಳಿಯ, ಅವರೇ ವರ”. ಅಂತ ಹೇಳಿ ಮಂತ್ರಿ ತನ್ನ ಮಗನ್ನ ಬಟ್ಟು ಮಾಡಿ (ರಾಗವಾಗಿ) ತೋರಿಸ್ತಾನ.
ಹಿ : ಆಹಾ!
ಕ : ರಾಜಾರಾಣಿ ನೋಡ್ತಾರೆ-ರೂಪದಲ್ಲಿ ಚಲೋ ಇಲ್ಲ! ಕರೇ ಹೆಗ್ಗಣ ಆಗ್ಯಾನೆ! ದೆವ್ವಗಣ್ಣು, ಚಿಬ್ಲಿಯಂಥಾ ಬಾಯಿ, ಗುಡಾಣದಂಥ ಹೊಟ್ಟಿ, ಕೈಕಾಲು ಸ್ವಟ್ಟು!
ಹಿ : ಆಹಾ ಮಂತ್ರಿ ಏನಿದು! ಈತನೇ ಏನು ವರಾ?
ಕ : ಹೌದು ರಾಜ್ರೇ ಇವರೇ ವರ.
ಹಿ : (ರಾಗವಾಗಿ) ಆss….
ಕ : ನಮ್ಮಗಳಿಗೆ ತಕ್ಕ ವರ ಅಲ್ಲ-
ಹಿ : ಅಲ್ಲ!
ಕ : ನೀವು ತೋರಿಸಿದ ಕಾಗದ ನೋಡಿದ್ರೆ ಮಹಾಶೂರ, ಗಂಭೀರ, ಕುಲದೀಪ, ಪಂಡಿತ, ರೂಪವಂತ, ಇನ್ನೂ ಏನೇನೋ ಇಲ್ಲದ್ದೊಂದು ಬರದ್ದದ್ದು ತೋರಿಸಿದ್ರಿ! ಇದು ನಿಮ್ಮ ಮಗಳಿಗೆ ತಕ್ಕ ವರ ಅಲ್ಲ!!
ಹಿ : ಅಲ್ಲ!
ಕ : ಓಹೋ ಮಹಾರಾಜಾ ಕಾಗದ ನೋಡಿ ಹೇಳ್ತೀರೇನು?
ಹಿ : ಹೌದು
ಕ : ಅದು ಬರೀಕೈಲಿ ಬರೆದಂಥ ಬರಹ; ಇದು ದೇವರು ಮಾಡಿದ ಮಣ್ಣು ಸೃಷ್ಟಿ-
ಹಿ : ಆಹಾ ಪರಮಾತ್ಮನ ಸೃಷ್ಟಿ!
ಕ : ಮಹಾರಾಜಾ, ಈತ ನಿಮ್ಮ ಮಗಳಿಗೆ ತಕ್ಕ ವರ ಅಲ್ಲ ಅಂತೀರೇನು?
ಹಿ : ಹೌದು.
ಕ : ನಿಮ್ಮ ಮನಸ್ಸಿಗೆ ಬಂದ್ರ ಈತಗ ನಿಮ್ಮ ಮಗಳ್ನ ಕೊಟ್ಟು ಲಗ್ನ ಮಾಡ್ರಿ; ಇಲ್ಲ ಅಂದ್ರ ನಾವು ವಾಪಾಸು ಹೋಗ್ತೀವಿ-
ಹಿ : ಅಂದ ಆ ಗಂಡಿನ ಮಂತ್ರಿ.
ಕ : ಓಹೋ ಮೋಸವಾಯ್ತು! ಮಹಾರಾಣೀ ಘಾತವಾಯ್ತು, ವರ ನೋಡಿ ನಾವು ಹೆಣ್ಣು ಕೊಡ್ಲಿಲ್ಲ, ಬರಹ ನೋಡಿ ಕೊಟ್ವಿ!
ಹಿ : ಮೋಸ ಆಯ್ತು!
ಕ : ಈಗ ನಮ್ಮ ಮಗಳ ಕೊಟ್ಟು ಲಗ್ನ ಮಾಡೋದಿಲ್ಲ ಅಂದ್ರೆ ಹೋಗ್ತಾರೆ ವಾಪಾಸು!
ಹಿ : ಹೋಗ್ತಾರೆ
ಕ : ಮಾತು ಕೊಟ್ರ ಹೋಯ್ತು, ಮುತ್ತು ಒಡದರ ಹೋಯ್ತು!
ಹಿ : ಹೋಯ್ತು.
ಕ : ನಾವು ಹೆಣ್ಣ್ನೋರು, ವಚನ ಕೊಟ್ಟು ವಾಪಾಸು ಕಳಿಸೋದು – ಇದು ಪದ್ಧತಿ ಅಲ್ಲ.
ಹಿ : ಹೌದು, ಅಲ್ಲ!
ಕ : (ರಾಗವಾಗಿ) ಯವ್ವಾ ಆದದ್ದಾಯಿತು.
ಹಿ : ಆಯ್ತು.
ಕ : ಮಾತು ಕೊಟ್ಟೇವಿ, ಲಗ್ನ ಮಾಡಿ ಕೊಡ್ತೇವಿ; ಬರ್ರೆಪ್ಪಾ ಗಂಡ್ನೋರೇ –
ಹಿ : ಹೆಣ್ಣಿನ ತಂದಿ, ರಾಜಾ, ಬೇಡಿಕೊಂಡ.
ಕ : ಹಿಂಗ ಇರ್ಬೇಕ್ರೀ; ವರ ನೋಡಿ ಏನ್ಮಾಡ್ತೀರಿ? ಸತಿ-ಪತಿ ಚಂದಾಗಿ ಇದ್ದರೆ ಸಾಕು; ಚಂದಾ ನೋಡಿ ಏನು ಮಾಡ್ತೀರಿ, ಚಾಳಿ ನೋಡ್ರಿ.
ಹಿ : ಮೋಸದ ಲಗ್ನ!
ಕ : ಬೀಗರು ಬಿಡದಿ ಮನಿಗೆ ಬಂದ್ರು.
ಹಿ : ಹಾದಿಗೆ ಹಂದ್ರ ಹಾಕಿದ್ರು, ತಳಿರು ತೋರಣ ಕಟ್ಟಿದ್ರು-
ಕ : ಬೀದಿಗೆ ಚಳೇ ಕೊಟ್ರು….
ಹಿ : ಹೌದು. ಊರಿಗೂರೇ ಸಿಂಗಾರಾತು.
ಕ : ಮರುದಿನ ಹಂದ್ರದಾಗ ಮುಂಚಿತವಾಗಿ ಬುದ್ಧಿವಂತ ಮಂತ್ರಿ, ನೋಡ್ರಿ-ಎಂಥಾ ಉಪಾಯ ಮಾಡಿ ಲಗ್ನ ಮಾಡ್ತಾನ ಕೂಸಿಗೆ!
ಹಿ : ಮಹಾ ಚಮತ್ಕಾರಿ!
ಕ : ಬಾಳಭಿಕ್ಷುಕನ ಮುತ್ತಿನ ತೊಟ್ಲ ತರಿಸಿ ತೂಗು ಹಾಕಿಸಿದ-ಹಂಬರದಾಗೆ ಮೊದ್ಲೆ! ಮಂತ್ರಿ!
ಹಿ : ಆಹಾ!
ಕ : ಹೆಣ್ಣಿನೋರು ನೋಡಿದ್ರು – ಏನಿದು ಮಂತ್ರೀ?
ಹಿ : ಏನ್ರೀ ಮಹಾರಾಜ್?
ಕ : ಮದು ಮಕ್ಕಳೇ ಬಂದಿಲ್ಲ, ತೊಟ್ಲು ತಂದು ಕಾಕಿದೆಲ್ಲ ಹಂದ್ರದಾಗ?
ಹಿ : ನಮ್ಮ ದೇಶದ ಪದ್ಧತೀನೇ ಹಿಂಗ್ರೀ ಮಹಾರಾಜ್ರೇ-
ಕ : ಅಂದ ಬುದ್ಧಿವಂತ ಮಂತ್ರಿ.
ಹಿ : ಹೌದೇ? ಇದೆಂಥಾ ಪದ್ಧತಿ ಇದು?
ಕ : ಯಾಕಂದ್ರ, ವರ್ಷಂಬೋದ್ರಾಗ ಮಹಾರಾಣಿ ತೊಟ್ಲುಕಟ್ಲೀ ಅಂತ ನಮ್ಮದೊಂದು ಹರಕಿ ಇರುತೈತಿ; ಮಹಾರಾಜ್ರೇ ಅದಕs ನಾವು ಹಿಂಗ ತೊಟ್ಲತೂಗಬ್ ಹಾಕತೇವಿ….ಹಂದರದಾಗ.
ಹಿ : ಚಲೋ ಆಯ್ತು!
ಕ : “ಮಂತ್ರೀ, ನಿಮ್ಮ ಪದ್ಧತಿ ಹೆಂಗ ಐತೋ ಹಂಗ ಮಾಡ್ರಿ” ಅಂದ್ರು-
ಹಿ : ಹೆಣ್ಣಿನೋರು.
ಕ : ಆವಾಗ ಪದ್ಮಾವತಿ, ಮದು+ಮಗಳಾಗಿ ಜರತಾರಿ ಸೀರಿ ಉಟ್ಟು, ಜರತಾರಿ ಕುಬ್ಸತೊಟ್ಟು ಬಂಗಾರ ಡಾಗೀನ ಇಟ್ಕೊಂಡು, ಹೂವು ಮುಡ್ಕೊಂಡು, ಹಂದ್ರದಾಗ ಬಂದು ನೋಡ್ತಾಳೆ-ಬಲಗಡಿಗೆ ಸಾಸ್ವಿ ಕಟ್ಟಿ ಮ್ಯಾಲೆ ತೊಟ್ಲ ಇಟ್ಟಾರೆ!
ಹಿ : ಮುತ್ತಿನ ತೊಟ್ಲು!
|| ಪದ ||
ಆರುತಿ ಬೆಳಗಾನು ಬಾರೆ ಸಖೀ
ಮೂರುತಿ ತಾಯೀ | ಗುರುರಾಯರಿಗೆ
ಬಂದಿತು ವರವಿಂದು ಮಂಗಳವಾಗಲಿ
ಬಂದಿತು ವರವಿಂದು ಮಂಗಳವಾಗಲಿ
ಸರ್ಪಭೂಷಣ ಜಯಲೋಲಗೆ
ಆರುತಿ ಬೆಳಗನು ಬಾರೆ ಸಖೀ
ಮಾನ್ಯತಿ ಮಾನ್ಯಗೆ ಜಯ ತೋರಿದ ಶೀಲಗೆ
ಖಂಡಿತ ಸುಗುಣಾ ಸುಗುಣಾ ಲೋಲಗೆ
ದೇಶ ಶಿಶುನಾಳ ವಾಸುಳ್ಳ
ಚಿಗಟೇರಿ ಚನಿವೀರ ಕೃಪಾಪಾದವ
ಪೂಜಿಸಿ ಆರತಿ ಬೆಳಗನು ಬಾರೆ ಸಖೀ
ಕ : ಮದು ಮಗಳು ಪದ್ಮಾವತಿ ಸಾಸ್ವಿ ಕಟ್ಟಿ ಹತ್ತಿ ಎಡಭಾಗದಲ್ಲಿ ಕುಂತ್ಲು.
ಹಿ : ಆಗ-
ಕ : ಮಂತ್ರಿ ತನ್ನ ಮದುಮಗ ಮಗನ ಮದುಮಗಳ ಎಡಗಡಿಗೆ ಕೂಡ್ರಿಸಿಬಿಟ್ಟ!
ಹಿ : ಹೆಣ್ಣಿನೋರು ನೋಡಿಬಿಟ್ರು!-
ಕ : ಇದು ಏನಿದು ಬುದ್ಧಿವಂತ ಮಂತ್ರಿ?-
ಹಿ : ಏನ್ಮಾರಾಜ್?
ಕ : ಮದುಮಗ, ಬಲಗಡಿ ಇರ್ಬೇಕು, ಮದು ಮಗಳು ಎಡಗಡಿ ಇರ್ಬೇಕು-
ಹಿ : ನಮ್ಮ ದೇಶದ ಲಗ್ನಾನs ಹಿಂಗ ಮಹಾರಾಜ್ರೇ; ಮದುಮಗ ಬಲಗಡಿ ಇರೋದಿಲ್ರಿ ಎಡಗಡಿ ಇರ್ಬೇಕು.
ಕ : ಆಹಾ ಇದೆಂಥಾ ಲಗ್ನಾರಿ? ಏನ್ಹೇಳ್ತೀರಿ ನೀವು?
ಹಿ : ನಿಮ್ಮ ಮನಸ್ಸಿಗೆ ಬಂತೂ-ಲಗ್ನ ಮಾಡ್ರಿ. ಇಲ್ಲಾ ಅಂದ್ರೆ ಹೇಳಿ ಬಿಡ್ರಿ- ಮಹಾರಾಜ್ರೇ. ನಾವು ವಾಪಾಸು ಹೋಗತೇವಿ.
ಕ : (ರಾಗವಾಗಿ) ಯಪ್ಪಾ ಹಂಗಾರs ಮಾಡ್ರೋ ನೀವಾs………ಮೊದಲ ನೀರು ತೊಟ್ಲಿಗೆ, ಎರಡ್ನೇದು ಮದು ಮಗಳಿಗೆ, ಮೊದಲ ಅಕ್ಕಿಕಾಳು ತೊಟ್ಲಕ್ಕೆ ಎರಡ್ನೇ ಅಕ್ಕಿಕಾಳು ಪದ್ಮಾವತಿಗೆ-ಹಾಕಿಸಿದ್ರು; ಮಾಡೋ ಕಾರ್ಯನೆಲ್ಲಾ ಮುತ್ತಿನ ತೊಟ್ಲಕ್ಕೆ ಮತ್ತ ಪದ್ಮಾವತಿಗೆ ಮಾತ್ರ ಮಾಡಿಸಿದ್ರು.
ಹಿ : ಆ ಪ್ರಧಾನಿ ಮಗ್ಗ?
ಕ : ಏನೂ ಮಾಡ್ವಲ್ರು. ಸುಮ್ಮನೇ ಕುಂದ್ರಿಸಿ ಬಿಟ್ರು-ಮದುಮಗನ್ನ ಮಾಡಿ!
ಹಿ : ಹೌದೂ!
ಕ : ಏನಪಾ ಗಂಡ್ನೋರೆ-
ಹಿ : ಮತ್ತೇನ್ರಿ?
ಕ : ಮಾಡೋ ಕಾರ್ಯಗಳನ್ನೆಲ್ಲಾ ಮದುಮಗಳಿಗೊಂದೇ ಮಾಡ್ತೀರಿ, ಮದು ಮಗನಿಗೆ ಒಂದೂ ಮಾಡ್ಲಿಲ್ಲ?
ಹಿ : ಹೌದಲ್ಲ ಮಾಡ್ಲಿಲ್ಲ?
ಕ : ನಮ್ಮ ಕಡಿಗೆ ಮದು+ಮಗಳು ಏನಿಲ್ರೀ; ಲಗ್ನೆಲ್ಲ ಮುಗದ ಬಳಿಕ ನಮ್ಮೂರಾಗ ಎಲ್ಲಾ ಮಾಡ್ತೀವಿ-
ಹಿ : ಅಂದ್ರು ಅವ್ರು.
ಕ : ಯಪ್ಪಾ ಆಡಕತ್ತಿನೊಳಗ ಒಂದು ಅಡಕಿ ಸಿಕ್ಕಂಡ್ಹಂಗ!ಆಗೈತಿ ನಾನು! (ರಾಗವಾಗಿ) ಮಾತು ಕೊಟ್ಟೇನ್ರೋ ಹೆಂಗರೆ ಮಾಡ್ರೋ ಲಗ್ನೈ….
ಹಿ : ಆಹಾ!
ಕ : ತಾಳಿ ಕಟ್ಟೋ ವ್ಯಾಳ್ಯಕ್ಕ ಸರಿಯಾಗಿ ಪೂಲಾವತಿ ರಾಣಿ, ತನ್ನ ಹನ್ನೆರಡು ದಿನದ ಮಗನ್ನ ಉಡಿಯಾಗ ಕಟ್ಟಿಕೊಂಡು ಬಂದು ಸೊಸೆ ಪದ್ಮಾವತಿ ಎದುರಿಗೆ ಕುಂತ್ಲು.
ಹಿ : ಆಹಾ!
ಕ : ಅಲ್ಲಿ ನೆರೆದೋರೆಲ್ಲಾ ನೋಡ್ತಾ ಅದಾರೆ-ಚಿಂತಾಮಣಿ ಯಂಕಂಭಟ್ಟ ಬಾಳ – ಭಿಕ್ಷುಕನ ಕೈ ಹಿಡಿಸಿ ಗಿಂಡ್ಯಾಗಿನ ಹಾಲ್ನ ಪದ್ಮಾವತಿ ಕೈಗೆ ಹಾಕಿಸಿದ, ಪದ್ಮಾವತಿ ಕೈಯಾಗಿನ ಹಾಲನ್ನ ಕೂಸಿನ ಕೈಯಾಗ ಹಾಕಿಸಿದ. ಕೂಸಿನ ಕೈ ಮುಟ್ಸಿ ಪದ್ಮಾವತಿಗೆ ಮಾಂಗಲ್ಯಾ ಕಟ್ಟಿಸಿದ; ಎಲ್ರೂ ನೋಡ್ತಾರೆ-
ಹಿ : ಹೌದು, ಕೌತುಕದಿಂದ ನೋಡ್ತರೆ!-
ಕ : “ಏನ್ರಿ ಇದು? ಮದುಮಗ ಇಲ್ಲಿ ಸಾಸ್ವಿ ಕಟ್ಟಿಯಿಂದ ದೂರ್ದಾಗ ಅದಾನ! ಮದು ಮಗಳಿಗೆ ಮಾಂಗಲ್ಯ ಮಾಡಿಸಿದ್ರು- ಯಾವುದೋ ಒಂದು ಕೂಸಿನ ಕೈ ಮುಟ್ಸಿ!” ಮಂತ್ರಿ ಹೇಳ್ತಾನೆ-
ಹಿ : ನಮ್ಮ ದೇಶದ ಪದ್ಧತಿ!
ಕ : ನಮ್ಮ ದೇಶದಾಗ ಬಾಲಹಸ್ತ ಅಂತ ಹೇಳಿ ಇಂಥ ಸಣ್ಣ ಕೂಸುಗಳ ಕೈಲೇ ನಮ್ಮ ಕಡಿಗೆ ತಾಳಿ ಕಟ್ಸೋದು.
ಹಿ : ಹೆಂಗನs ಮಾಡ್ರೆಪ್ಪ ಅಂದ ಕನ್ಯಾದ ತಂದಿ.
ಕ : ಮಾಂಗಲ್ಯ ಕಾರ್ಯ ಆಗಿ, ಲಗ್ನ ಮುಗೀತು; ರಾತ್ರಿಗೆ-
ಹಿ : ಮೆರವಣಿಗೆ!
ಕ : ಆನಿ ಮ್ಯಾಲೆ ಅಂಬಾರಿ, ಅದರೊಳಗೆ ಪಲ್ಲಕ್ಕಿ; ಆ ಪಲ್ಲಕ್ಕಿಯೊಳಗೆ ಎಡಗಡಿಗೆ ಪದ್ಮಾವತಿ, ಬಲಗಡಿಗೆ ಬಾಸಿಂಗ ಕಟ್ಟಿದ ಬಾಳಭಿಕ್ಷುಕನ ಆ ಮುತ್ತಿನ ತೊಟ್ಲು !
ಹಿ : ಮೆರವಣಿಗೆ ರಾಜ ಬೀದಿಯೊಳಗೆ ಸಾಗಿತು.
ಕ : (ರಾಗವಾಗಿ) ಪ್ರಧಾನಿ ಮಗ ಹಿಂದೆ ನಡಕೊಂತಾ ಹೊಂಟಾನೊ…..
ಈ ಪ್ರಕಾರವಾಗಿ ಮೋಸ ಕೃತ್ಯದಿಂದ ಬಾಳಭಿಕ್ಷುಕನ ಲಗ್ನ ಮಾಡಿದ-
ಹಿ : ಬುದ್ಧಿವಂತ ಮಂತ್ರಿ!
ಕ : ನಿಬ್ಬಣ ಕಾಶೀಗಿರಿ ಪಟ್ಣಕ್ಕೆ ಹೊಂಟಿತು; ಆ ಟೈಮಿನಲ್ಲಿ ಹೆಣ್ಣಿನ ತಂದೆ-ತಾಯಿ ಹೇಳ್ತಾರೆ, “ಸಾವಚಿತ್ತ ಮಾರಾಜ್ರೇ, ಪೂಲಾವತಿ ತಾಯೀ! ಈ ಪದ್ಮಾವತಿ ಇನ್ನು ನಮ್ಮ ಮಗಳಲ್ಲ ನಿಮ್ಮ ಮಗಳಲ್ಲ”.
ಹಿ : ಹೆಣ್ನೋರು ಹೆಣ್ಣೊಪಿಸಿದರು. ತಮ್ಮ ಮಗಳಿಗೆ ಹೇಳ್ತಾರೆ-
ಕ : “ಅಮ್ಮಾ ಕಂದಮ್ಮಾ ಮಗಳೇ ನಿನಗೆ ತಕ್ಕ ವರ ಸಿಗಲಿಲ್ಲ; ರೂಪದಲ್ಲಿ ಚಲೋ ಇಲ್ಲ-ನಿನ್ನ ಗಂಡ! ಆದದ್ದಾತು. ಚಂದಾಗಿ ಹೋಗಿ ನಿನ್ನ ಅತ್ತಿಮಾವಂದಿರ ಸೇವೆ ಮಾಡಿಕೊಡಿರಮ್ಮ” ಅಂತ ಹೇಳಿದ್ರು.
ಹಿ : ಆಹಾ!
ಕ : “ಪತಿಯೇ ಪರದೈವ ಆತನ ಸೇವಾ ಮಾಡಿ ಮುತ್ತೈದೆಯಾಗಿ ಬಾಳಮ್ಮಾ” ಅಂತ್ಹೇಳಿ ಪದ್ಮಾವತಿಗೆ ಮುತ್ತು ರತ್ನ ಅಹೇರ್ ಮಾಡಿ ಕಳಿಸಿಕೊಟ್ರು.
ಹಿ : ಮದುಮಗಳು ಪದ್ಮಾವತಿ, ತಂದೆ-ತಾಯಿಗೆ ನಮಸ್ಕಾರ ಮಾಡಿದ್ಲು; ಭದ್ರಾವತಿ ಪ್ರಜರಿಗೆ ಕೈ ಮುಗಿದ್ಲು.
ಕ : ಕೊಟ್ಟ ಹೆಣ್ಣು ಕುಲಕ್ಕ ಹೊರಗಾತು. ಸಾವಚಿತ್ತ ಮಹಾರಾಜ ತನ್ನ ಸೊಸಿ ಕರ್ಕೊಂಡು, ತನ್ನ ನಿಬ್ಬಣ ಕರ್ಕೊಂಡು ಊರಿಗೆ (ರಾಗವಾಗಿ) ಹೊಂಟಾನೈ….
ಹಿ : ಹೌದು! ಕಾಶೀಗಿರಿ ಪಟ್ಣದ ಅರ್ಧ ಹಾದಿಗೆ ಆ ನಿಬ್ಬಣ ಬಂದೈತಿ ನೋಡ್ರಿ.
ಕ : ಇನ್ನು ಅರ್ಧದಾರಿ ಉಳುದೈತಿ; ಹೊತ್ತು ನೋಡಿದ್ರ ಕತ್ಲಾತು!
ಹಿ : ಅದಕ್ಕಾಗಿ ಜಾಗ ನೋಡಿ ವಸ್ತಿ ಆದ್ರು.
ಕ : ಮಧ್ಯರಾತ್ರಿ ವ್ಯಾಳ್ಯಾ; ಎಲ್ಲರೂ ಮಲಿಗ್ಯಾರ; ದೂರದ ಪ್ರಯಾಣ!
ಹಿ : ಎಲ್ಲರೂ ಗೊರ್ಕಿ ಹೊಡಿತಾರೆ- ಸುತ್ತು ಮುತ್ಲು ಇದ್ದ ಹುಲಿ, ಹೊನ್ನಿಗ, ಚಿರ್ತ ಚಿಗರಿ ಹೆದರಿ ಅಲ್ಲಿಂದ ಓಡಿಹೋದ್ವು!
ಕ : ಆದ್ರೆ ಸಾವಚಿತ್ತ ಮಹಾರಾಜ ಮತ್ತು ಮಂತ್ರಿಗೆ ನಿದ್ದಿ ಇಲ್ಲ; ಎಚ್ಚರಾಗೇ ಅದಾರ. ಮಂತ್ರಿ ಏನ್ಮಾಡ್ತಾನೆ?
ಹಿ : ಬ್ರಾಹ್ಮಣ ಯಂಕಭಂಟ್ರನ್ನ ಎಬ್ಬಿಸ್ತಾನೆ.
ಕ : ಯಂಕಂಭಟ್ರೇ ಎದ್ದೇಳ್ರಿ.
ಹಿ : ಏನು ಸ್ವಾಮಿ?
ಕ : ಇಪ್ಪತ್ತು ದಿನ ಕಳಿಯೊದೊರಳಗs ಮಗನ ಲಗ್ನಾ ಮಾಡ್ಕೊಂಡು ಊರು ಸೇರ್ಬೇಕು ಅಂತ ನೀವು ಹೇಳಿದ್ರಿ.
ಹಿ : ನಿಜ, ಶಾಸ್ತ್ರೋಕ್ತ!
ಕ : “ಏನು ನಾವು ಆ ವಾಯ್ದಿ ಒಳಗೆ ಅದೇವೋ, ಏನು ವಾಯ್ದಿ ಮೀರಿ ಅದೀವೋ? ಸ್ವಲ್ಪ ಪಂಚಾಂಗ ತೆಗೀರಿ” -ಅಂತ ಅಂದ ರಾಜ.
ಹಿ : ಪ್ರಶ್ನೆ ಕೇಳುಸ್ತಾನ ರಾಜ!
ಕ : ವತ್ತಿಗಿ ತಗದು (ರಾಗವಾಗಿ) ಲೆಕ್ಕ ಮಾಡ್ತಾ ಇದಾನೇ-
ಹಿ : ವೆಂಕಭಟ್ಟಾ.
ಕ : ಬರೋಬ್ಬರಿ ಇಪ್ಪತ್ತು ದಿವಸ ಆಗಿ ಹೋದ್ವು- ಇವತ್ತಿನ ನಡುರಾತ್ರಿಗೆ!
ಹಿ : ಆಹಾ ರಾಜಾ!
ಕ : ಲಗ್ನ ಮಾಡಿದ್ದು ವ್ಯರ್ಥಾತು! ಈಗಾಗಲೇ ಇಪ್ಪತ್ತೊಂದನೇ ದಿನಕ್ಕೆ ಕಾಲಿಡೋ ಟೈಮು. ಇಷ್ಟೊತ್ತಿಗೆ ನಿಮ್ಮ ಅರಮನಿಯಾಗ ಇದ್ದರೆ ನಿಮಗೆ ಸಾವು ಬರ್ತಿರ್ಲಿಲ್ಲ….
ಹಿ : ಇಲ್ಲ ಬರ್ತಿರ್ಲಿಲ್ಲ.
ಕ : ವಸ್ತಿಯಾದ್ದಕ್ಕೆ ಮುಂಜಾನೆ ನೀವು ಊರಿಗೆ ಹೋಗೋದರೊಳಗೇ (ರಾಗವಾಗಿ) ನಿಮಗೆ, ಸತಿ-ಪತಿಗೆ ಮರಣ ಬಂತೈ… ನಿಮಗೆ ಸಾವು ಬಿಡುಗಡೆ ಇಲ್ಲಾ.
ಹಿ : ಆಹಾ!
ಕ : ಮತ್ತೆ ನಿಮಗೆ ಸಾವು ಬಂತು! ಏನ್ಮಾಡಿದ್ರೂ ವ್ಯರ್ಥ ಆತು!-
ಹಿ : ಸಾವು ತಪ್ಸಾಕ ಆಗ್ಲಿಲ್ಲ ಮಹಾರಾಜ್!
ಕ : ಅಯ್ಯೋ ಮಂತ್ರಿ! ನೀನು ಹನ್ನೆರಡು ದಿವಸದ ಕೂಸಿಗೆ ಹನ್ನೆರಡು ವರ್ಷದ ಹೆಣ್ಣು ತಗದು ಮೋಸದಿಂದ ಲಗ್ನ ಮಾಡಿದ್ರೂ ನಮಗೆ ಸಾವಿನಿಂದ ಬಿಡುಗಡೆ ಆಗ್ಲಿಲ್ಲ!
ಹಿ : (ರಾಗವಾಗಿ) ಆಗ್ಲಿಲ್ಲಾ!
ಕ : ಹೆಂಗ ಬ್ರಾಹ್ಮಣಾ ನಾಳೆ ಊರಿಗೆ ಹೋಗೋದು?
ಹಿ : ನೀವು ಏನು ಮಾಡಿದ್ರೂ ನಿಮಗೆ ಸಾವು ತಪ್ಪೋದಿಲ್ರೀ; ಈಗ ನಾನು ಹೇಳಿದ ಮಾತು ಲಗೂನ ಕೇಳ್ಬೇಕು ನೋಡ್ರಿ.
ಕ : ಯಾವ ಮಾತು ?
ಹಿ : ಈಗ ರಾತ್ರಿ ಹನ್ನೆರಡು ಗಂಟೆ ಟೈಮು-ಸರಿ ರಾತ್ರಿ,
ಕ : ಹೇಳ್ರಿಸ್ವಾಮಿ ಯಾವ ಮಾತು?
ಹಿ : ಈ ನಿಮ್ಮ ಮಗ ಏನೈತಲ್ಲಾ-
ಕ : ಆಹಾ!
ಹಿ : ಅದನ್ನೂ ನಿಮ್ಮಸೊಸಿ ಏನು ಅದಾಳಲ್ಲ- ಮದುಮಗಳು (ರಾಗವಾಗಿ) ಆಕೀನೂ ಅಡವ್ಯಾಗ ಬಿಡಬೇಕ್ರಿ. ಆs……..
ಎಲ್ಲರೂ ಊರಿಗೆ ಹೋಗಬೇಕೈ……..ಹರಯನ್ನ ಮಾದೇವಾ
ಕ : ಮದುಮಗ-ಮದುಮಗಳು ಇವರ್ನ ಕರ್ಕೊಂಡು ಹೋದ್ರೆ ಏನೂ ತೊಂದರೆ ಇಲ್ಲ.
ಹಿ : ಗ್ಯಾರೆಂಟಿ ಮರಣ!
ಕ : ಇಲ್ಲೇ ಇವರ್ನ ಬಿಟ್ಟು ಹೋದರೆ, ನಂತರದಲ್ಲಿ ನಿಮಗೆ ಏನೂ ತೊಂದರೆ ಇಲ್ಲ.
ಹಿ : ಯಾವ ಮರಣದ ಭಯಾನೂ ಇಲ್ಲ!
ಕ : ನೋಡ್ರಿ – ಇದರಲಿ ಯಾವುದು ಬೇಕೋ – ಯೋಚ್ನೆ ಮಾಡಿ ನೋಡ್ರಿ.
ಹಿ : ಅಯ್ಯೋ, ಅಯ್ಯೋ (ರಾಗವಾಗಿ) ಕಂದಮ್ಮನ್ನ ಬಿಟ್ಟು ಹೋಗೋ ಪ್ರಸಂಗ ಬಂತಲ್ರೀ
ಕ : “ಆಹಾ ಪರಮಾತ್ಮಾ! ನನ್ನ ಕಂದನ್ನ ಜೋಪಾನ ಮಾಡೋರು ಯಾರು? ಮಲಿ ಕುಡುಸೋರು ಯಾರು ?”
ಹಿ : ಅಂತ ಹಡದ ಹೊಟ್ಟಿ ಗೋಳಿಡ್ತಾ ಐತಿ!
ಕ : ನಮ್ಮ ಮಗ ಬಾಳಭಿಕ್ಷುಕ ಕೂಸು ರತನ ಇದ್ದಂಗ ಐತಿ.
ಹಿ : ಆಹಾ!
ಕ : ಈಗ ನೋಡ್ರಿ, ಸತಿ-ಪತಿ ಜನ್ಮ ತಣ್ಣಗಿದ್ರೆ ಇಂಥ ಮಗನ್ನ ಮತ್ತೆ ಕಾಣಬಹುದು…
ಹಿ : ಮಂತ್ರಿ ಬುದ್ದಿವಂತ ಹೇಳಿದ!
ಕ : “ಈ ಮಗನ್ನೂ ಸೊಸೀನೂ ಕರ್ಕೊಂಡು ಹೋದ್ರೆ ತಂದಿ-ತಾಯಿಗೆ ಮರಣ ಐತಿ ನೋಡ್ರಿ – ಯಂಕಂಭಟ್ಟ ಮತ್ತೆ ಎಚ್ಚರಿಸಿದ. (ರಾಗವಾಗಿ) ಮಡದೀ ಮಗನ ದಾರಿ ಬ್ಯಾರೆ ಆತೂ ಅಡಿವ್ಯಾಗ ಬಿಟ್ಟು ಹೋಗೋ ಹೊತ್ತು ಬಂತೂ, ನಡೀ ಊರಿಗೆ ಹೋಗಾನೊ..
ಹಿ : ರಾಜ ಅಂತಾನೆ ತನ್ನ ರಾಣಿಗೆ!+
ಕ : ಮಹಾರಾಜ್ರೇ ನಾನು ಹಡದ ಕೂಸಿಗೆ ಬಿಟ್ಟು ಬರ್ಲಿ ಹೆಂಗs?
ಹಿ : ಹೌದು.
ಕ : ಅದು ಸಾಧ್ಯವಿಲ್ಲ, ಸಾವು ಬಂದ್ರೂ ಬರ್ಲಿ, ನಾನು ಬರೋದಿಲ್ಲ – ನನ್ನ ಮಗನ್ನ ಮಾತ್ರ ಬಿಟ್ಟು.
ಹಿ : ಹೌದೂ.
ಕ : ಹಂಗಲ್ಲ ಮಡದೀ, ಸತಿ-ಪತಿ ಜೋಡು, ಮರಣ ಬಂದ್ರ ಇಬ್ಬರಿಗೂ ಬರ್ತೈತಿ-
ಹಿ : ಆಹಾ!
ಕ : ಈಗ ಮಗನ ದಾರಿ ಮಗನಿಗಾತು – ಇಲ್ಲೇ ಬಿಟ್ಟು ಹೋಗಾನು ನಡಿ –
ಹಿ : ಮದ್ಲು ಹೋಗಾನು ನಡಿ.
ಕ : ಮಂತ್ರಿ ಜುಲ್ಮಿಲಿಂದ ಮಗನ ತೊಟ್ಲ ತಗೊಂಡ. ಅದರಾಗ ಕೂಸು ಮಲಗಿತ್ತಲ್ಲ-
ಹಿ : ಹೌದು!
ಕ : ಆ ತೊಟ್ಲಾನ ಪದ್ಮಾವತಿ ಡೇರ್ಯಾಗ ಇಟ್ಟ; ತಾಯಿ ಅಳುತಾ ಅದಾಳೆ- ಹೊರಗೆ! ಹಡದ ಕಳ್ಳು!!
ಹಿ : ಹೊಟ್ಟೀ ಕೂಸು!!
ಕ : (ರಾಗವಾಗಿ) ಆ ಮಂತ್ರಿ ಆಲೋಚ್ನಿ ಮಾಡ್ತಾ ಇದಾನೆ-
ಹಿ : ಆಹಾ!
ಕ : ಈ ಯಮ್ಮ ಪದ್ಮಾವತಿ ಅಮ್ಮಾಗೆ ಕೂಸು ತನ್ನಗಂಡ ಅಂಬೋದು ಗೊತ್ತಿಲ್ಲ! ಬೆಳಗಾದ ಮ್ಯಾಲೆ ಇದು ಆಕೀಗೆ ತಿಳೀಬೇಕು.
Leave A Comment