ಹಿ : ಹೌದು ಗೊತ್ತಾಗ್ಬೇಕು.

ಕ : ಅದಕ್ಕಾಗಿ ಒಂದು ಕಾಗದ ಬರೀತಾನೇ-ಮಂತ್ರಿ.

ಹಿ : ಏನಂತ?

ಕ : ಕಾಶೀಗಿರಿ ಪಟ್ಣದಲ್ಲಿ ಸಾವಚಿತ್ತ ಮಹಾರಾಜ, – ಆತನ ಮಗ ಬಾಳಭಿಕ್ಷುಕ, ಹನ್ನೆರಡು ದಿವಸದ ಕೂಸು. ಈತಗ ಕೂಡ್ಲೇ ಲಗ್ನ ಮಾಡ್ಬೇಕು. ಇಲ್ದೇ ಇದ್ದೆ ತಂದಿ-ತಾಯಿಗೆ ಅಂತ ಶಾಸ್ತ್ರದಲ್ಲಿ ಬಂತು;

ಹಿ : ಆಹಾ!

ಕ : ಎಲ್ಲೀ ಹೆಣ್ಣು ಸಿಗಲಿಲ್ಲ. ನಿಮ್ಮೂರಿಗೆ ಬಂದ ನಾನು ಬುದ್ಧಿವಂತ ಮಂತ್ರಿ ಉಪಾಯದಿಂದ ಸುಳ್ಳು ಕಾಗದ ಬರೆದೆ.

ಹಿ : ಆಹಾ!

ಕ : ನಿಮ್ಮನ್ನ ಈ ಕೂಸಿಗೆ ನಿಶ್ಚಯ ಮಾಡಿದ್ದು ಖರೇ ಸಂಗ್ತಿ. ನಿಮ್ಮ ಎಡ ಭಾಗದಲ್ಲಿ ಕುಂತವನು ಈ ಬುದ್ಧಿವಂತ ಪ್ರಧಾನಿಯ ಮಗ; ಈತ ನಿಮ್ಮ ಮಗನ ಸ್ವರೂಪ.

ಹಿ : ಆಹಾ!

ಕ : ಬಲಗಡೆ ತೊಟ್ಲಕ್ಕೆ ಬಾಸಿಂಗಾ ಕಟ್ಟಿ ಲಗ್ನಾ ಮಾಡಿದಂಥ ಈ ಕೂಸೇ ನಿಮ್ಮ ಗಂಡ;

ಹಿ : ಬಾಳಭಿಕ್ಷುಕ!

ಕ : ನಿಮಗೂ ನಿಮ್ಮ ಗಂಡನಿಗೂ ಕರ್ಕೊಂಡು ಊರಿಗೆ ಹೋಗಿ ಮುಟ್ಟೋದೊರಳಗs ವಾಯ್ದೆ ಮಿಕ್ಕಿದ್ದರಿಂದ ನಿಮ್ಮ ಅತ್ತೆಗೂ ಮಾವಗೂ ಮರಣ ಕಂಟಕ ಬಂತು –

ಹಿ : ಬಂತು!

ಕ : ನಿಮ್ಮಿಬ್ಬರಿಗೂ ಇಲ್ಲಿ ಅಡಿವ್ಯಾಗ ಬಿಟ್ಟು ಹೋಗ್ಬೇಕು – ಅಂತ ಶಾಸ್ತ್ರೋಕ್ತದಲ್ಲಿ ಬಂದದ್ರಿಂದ ನಿಮಗೂ ನಿನ್ನ ಗಂಡನಿಗೂ ಇಲ್ಲೇ ಬಿಟ್ಟು ನಮ್ಮೂರಿಗೆ ನಾವು ಹೋಗ್ತೇವಿ.

ಹಿ : ಹೌದು.

ಕ : ಗಂಡಾ ಅನ್ನೋದು ಗೊತ್ತಾದ ಬಳಿಕ ಈ ಕೂಸನ್ನ ಜೋಪಾನ ಮಾಡೋದು ಸತಿಯಳಾದ ನಿಮ್ಮ ಕರ್ತವ್ಯ. ನನಗೆ ಜೋಡಲ್ಲ ಸರಿಯಲ್ಲಾ; ವಾರಿಗಲ್ಲ ಸಂಬಂಧ ಇಲ್ಲ – ಅಂತ್ಹೇಳಿ ಕೂಸಿಗೆ ಗೋಣು ಮುರುದು ಯತ್ಲಾಗರ ಬಿಸಾಕಿ ತವರು ಮನಿಗೆ ಹೋದರೆ ಅಥವಾ ಇನ್ಯಾಕಡಿಗೆ ಹೋದ್ರೂ ಅದು ನಿಮಗೇ ಬಿಟ್ಟದ್ದು; ನಿಮ್ಮ ಪತಿವ್ರತಾ ಧರ್ಮಕ್ಕೆ ಬಿಟ್ಟದ್ದು. ಈ ತೊಟ್ಲಕೂಸೇ ನೀವು ಮದಿವ್ಯಾದ ಗಂಡ-

ಹಿ : ಅಂತ ಚೀಟ್ಯಾಗ ಬರ್ದುಬಿಟ್ಟ!

ಕ : ಬರ್ದು, ಅದನ್ನ ಮಡ್ಚಿ ಯಂತ್ರ ಮಾಡಿದ್ಹಂಗ ಮಾಡಿ ಆ ಕೂಸಿನ ಕೊಳ್ಳಾಗ ಮಂತ್ರಿ ಕಟ್ಟಿದ!

ಹಿ : ಆಹಾ!

ಕ : ನಿಬ್ಬಣೆಲ್ಲಾ ಕರ್ಕೊಂಡು ಕಾಶೀಪಟ್ಣ ಸೇರಿದ.

ಹಿ : (ರಾಗವಾಗಿ) ಆs….

ಕ : ಕಾಶೀಗಿರಿ ಪಟ್ಣದಲ್ಲಿ ಸಾವಚಿತ್ತ ಮತ್ತು ಪೂಲಾವತಿ ದುಃಖ ಮಾಡ್ಕೊಂತ ಕುಂತಾರ; ಸಣ್ಣ ಕೂಸಿಗೆ ಅಡಿವ್ಯಾಗ ಬಿಟ್ಟು ಬಂದ್ವೆಲ್ಲಾಂತ್ಹೇಳಿ ಹಾಯ್ ಹಾಯ್ ಅಂತಾರ!

ಹಿ : ಆಹಾ!

ಕ : ಬೆಳ್ಳನ ಬೆಳಕು ಹರಿಬೇಕಾರೆ ಪದ್ಮಾವತಿ ಒಬ್ಬಾಕೆ ಮಲಿಗ್ಯಾಳೆ ಡೇರಾದಾಗ!

ಹಿ : ಹೌದೂ!

ಕ : ಆಗ ಟ್ಯಾಹ, ಟ್ಯಾಹ ಅಂತ ಕೂಸು ಅಳ್ತೈತಿ! – ಹಸುವಾಗೇತಿ- ಬಾಳಭಿಕ್ಷುಕಗೆ! ಪದ್ಮಾವತಿ ಮಲ್ಕೊಂಡೇ ಕೇಳ್ತಾಳೆ

ಹಿ : ಏನಿದು ಕೂಸು ಅಳೋದು ಇಷ್ಟೋತ್ತ್ನಾಗ!

ಕ : ಪದ್ಮಾವತಿ ಸಿಟ್ಟಿಲೆ ಎದ್ದು ಕುಂತು ನೊಡ್ತಾಳೆ- ತಲಿಗಿಂಬಿಗೆ ತೊಟ್ಲೈತಿ!

ಹಿ : ಆಹಾ!

ಕ : ಏನು, ನನ್ನ ಡೇರಿಯೊಳಗೆ ತೊಟ್ಲ ಇಟ್ಟಾರಲ್ಲ! ಏನಿರಬಹುದು! –

ಹಿ : ಏನಿರಬಹುದು?

ಕ : ತೊಟ್ಲಾಗ ನೋಡ್ತಾಳೆ – ಸೂರ್ಯ ಚಂದ್ರಾಮನಂಥ ಕೂಸು! –

ಹಿ : ಆಹಾ ಯಾರಿರಬಹುದು?

ಕ : ಹೊರಗ ಬಂದು ನೋಡ್ತಾಳೆ – ಅತ್ತಿ -ಮಾವ, ದಂಡು ಮಾರ್ಬಲ ಯಾರೂ ಇಲ್ಲ!
(ರಾಗವಾಗಿ)

ಮೋಸಾತೇ ಹಡದವ್ವಾ….ಹರಯನ್ನ ಮಾದೇವಾ
ಎಲ್ಲಾರೂ ಹೋಗ್ಯಾರೇ….ಹರಯನ್ನ ಮಾದೇವಾ
ನನಗ ಕೂಸಿಗೆ ಬಿಟ್ಟು ಹೋಗ್ಯಾರೇ….ಹರಯನ್ನ ಮಾದೇವಾ
ಯಾತಾಯಿ ಬಿಟ್ಟು ಹೋಗ್ಯಾಳಾ….ಹರಯನ್ನ ಮಾದೇವಾ
ಹ್ಯಾಂಗ್ ಬಿಟ್ಟು ಹೋಗಿದ್ದಾಳೇ….ಹರಯನ್ನ ಮಾದೇವಾ
ಹಡದವ್ವ ತಾಯಿ ನೋಡವ್ವಾ….ಹರಯನ್ನ ಮಾದೇವಾ

ಕ : ಆಹಾ ಮಾವ ಸಾವಚಿತ್ತ ಮಾರಾಜ್ರೇ, ದಂಡೇ, ರೈತರೇ, ಪ್ರಜರೇ ಹಿಂಗ ಲಗ್ನ ಮಾಡಿ ಅಡಿವ್ಯಾಗ ಬಿಟ್ಟು ಹೋದ್ರ್ಯಾ? ನಿಮ್ಮದು ಯಾವ ಧರ್ಮ? ಈ ಕೂಸಿಗೆ ಬಿಟ್ಟು ಹೋಗ್ಬೇಕಾರ ಕಾಲು ಹೆಂಗ ಎದ್ದಿದ್ದಾವು? ಮಗನೇ ನಿನ್ನ ಹಡದ ತಾಯಿಗಾದ್ರು ಹೆಂಗ ಮನಸಾತು!

ಹಿ : ಆಹಾ!

ಕ : “ಮಗನೇ ಮಗನೇ ಅಳಬ್ಯಾಡ ಮಗನೇ” ಅಂತ್ಹೇಳಿ ಕೂಸಿಗೆ ತೊಡಿಮ್ಯಾಲೆ ಹಾಕ್ಕೊಂಡು, ತುಟಿಗಲ್ಲ ಹಿಡಿದು ಮುದ್ದು ಮುದ್ದು ಮಾಡಬೇಕಾರ, ಕೂಸು ಅಳೋದು ಬಿಟ್ಟು –

ಹಿ : ಸಮಾಧಾನ ಆತು!

ಕ : ಆಹಾ! ಈ ಕೂಸಿನ ಕೊಳ್ಳಾಗ ಏನೋ ಒಂದು ಅಂತ್ರ ಕಟ್ಟ್ಯಾರಲ್ಲ! ಏನಿರಬಹುದು? ಇದನ್ನ ಬಿಚ್ಚಿ ನೋಡ್ಬೇಕು –

ಹಿ : ದಾರ ಹರದ್ಲು –

ಕ : ನೋಡ್ತಾಳೆ –

ಹಿ : ಚೀಟಿ!

ಕ : ಚೀಟಿ ಓದ್ತಾಳೆ.

ಹಿ : ಆಹಾ –

ಕ : ಸಾವಚಿತ್ತ ಮಗ ಬಾಳಭಿಕ್ಷುಕನಂತೆ! ನನಗೂ ಈ ಕೂಸಿಗೂ ಲಗ್ನಮಾಡಿ ಅಡಿವ್ಯಾಗ ಬಿಟ್ಟು ಹೋಗ್ಯಾರಂತೆ!!

ಹಿ : ಆಹಾ ಮೋಸಗಾರ ಘಾತಕ ಸಾವಚಿತ್ತ ಧೊರಿ!

ಕ : ಕೆಟ್ಟ ಹೀನ ಜಾತಿ ಈ ಸೇನಾಪತಿ! ಕುಲಘಾತಕ, ವಿಷಘಾತಕ ನನ್ನ ಯೌವ್ವನ ನೋಡಿದ್ರೆ –

ಹಿ : ದೇವಲೋಕದ ಯೌವ್ವನ ಪ್ರಾಯ!

ಕ : ನನಗೆ ಜೋಡೆ, ಈಡೇ, ಸರಿಯೇ, ಸಂಬಂಧೇ ವಾರ್ಗೇ?-

ಹಿ : ಅಲ್ಲ ಅಲ್ಲ!

ಕ : ಇಂಥ ಕೂಸಿಗೆ ನನ್ನ ಗಂಡನ್ನ ಮಾಡಿ ಸರ್ವೊತ್ತಿನಾಗ ಬಿಟ್ಟು ಹೋಗ್ಬೇಕಾದ್ರೆ ಎಂಥ ಮೋಸಗಾರ್ರು!

ಹಿ : ಆಹಾ!

ಕ : ಎಲೋ ಸಾವಚಿತ್ತ ಮಹಾರಾಜಾ! ಇಲ್ನೋಡು, ಈ ನನ್ನ ತೊಡಿ ಮ್ಯಾಲೆ ಮಲಿಗಿದಂಥ ಈ ಬಾಳಭಿಕ್ಷುಕನೇ ನನ ವೈರಿ –

ಹಿ : ಹೌದು ಮಹಾ ವೈರಿ!

ಕ : ಎಷ್ಟು ದಿವಸ ನನ್ನ ಗಂಡ ಆಗ್ಬೇಕೂಂತ ಕಾದು ಕುಳಿತಿದ್ಯೋ ವೈರೀ!

ಹಿ : ಬ್ರಹ್ಮಲಿಖಿತ!

ಕ : “ನಾನು ನಿನ್ನ ಕೊಂದು ನನ್ನ ತವರು ಮನೆಗೆ ಹೊಕ್ಕೀನಿ” – ಅಂದ್ಲು ಪದ್ಮಾವತಿ –

ಹಿ : ಕಣ್ಣು ಕೆಂಪಗ ಮಾಡಿ!

ಕ : ಕೂಸಿನ ಕಾಲು ಕೈಯಾಗ ಹಿಡಿದು ನೋಡ್ತಾಳೆ – “ಈಡಲ್ಲಾ, ಜೋಡಲ್ಲಾ ಸರಿಯಲ್ಲ, ಸಂಬಂಧ ಅಲ್ಲ, ಅಂತ್ಹೇಳಿ ಗರ ಗರ ಅಂತ ತಿರುವುತಾ ಅದಾಳೆ,-”

ಹಿ : ಕೂಸೂ ಬೋರಿಟ್ಟು ಅಳತಾ ಐತಿ!

ಕ : ಮತ್ತೆ ತಡದು ಡೇರಾದ ಹೊರಗಡೆ ಬಂದು ನೋಡ್ತಾಳೆ ಸೂರ್ಯ ಮ್ಯಾಲೆದ್ದಾನೆ, ಒಂದು ಮಾರ್ಹೊತ್ತು ಆಗೇತಿ!

ಹಿ : ಆಹಾ ಎಂಥಾ ಹೊತ್ತು!

ಕ : ಕೈಲಾಸದಲ್ಲಿ ಶಿವಪಾರ್ವತಿ ಇದನ್ನ ನೋಡ್ತಾ ಅದಾರ! ದೇವೀ ಪಾರ್ವತಿ!

ಹಿ : ಏನು ಸ್ವಾಮಿ?

ಕ : ಇಲ್ಲಿ ನೋಡು, ಮರ್ತ್ಯದಲ್ಲಿ ಹ್ಯಾಗೆ ನಡೀತೈತಿ ಕತಂತ್ರ! ಮಹಾಪತಿವ್ರತಾ ಪದ್ಮಾವತಿ ತನ್ನ ಗಂಡನಿಗೆ ಕೊಲೆ ಮಾಡಿ ರಂಡಿಯಾಗಿ ಹೋಗೋ ಸಂದರ್ಭ ಬಂತು!

ಹಿ : ಹೌದು!

ಕ : ಈಗ ಆಕೀಗ ನನ್ನ ಕೃಪಾಶೀರ್ವಾದ ಬೇಕು, ಒಳ್ಳೇ ಜನರ ಕೈಯಿಂದ ಅನ್ಯಾಯ ಆಗ್ಬಾರದು –

ಹಿ : ಆಗ್ಬಾರದು!

ಕ : ಪರಮಾತ್ಮ ತನ್ನ ಜೋಳಿಗಿಯಿಂದ ವಿಭೂತಿ ತಗದ ಮಗಳ ಮೈಮ್ಯಾಲೆ ಚಲ್ಲಿ ಬಿಟ್ಟ; ಶಿವ ಗುಣ ಕೊಟ್ಟ.

ಹಿ : ಅವಗುಣ ಎಲ್ಲಾ ಹೋಗಿಬಿಟ್ಟು, ಶಿವಗುಣ ಬಂದ್ವು;

ಕ : ಪಕ್ಕನೇ ಜ್ಞಾನ ಉದಯ ಆತು!

ಹಿ : ಆತು – ಪದ್ಮಾವತಿಗೆ!

ಕ : (ರಾಗವಾಗಿ) ಅಯ್ಯೋ, ಅಯ್ಯೋ ಅಳಬೇಡ ನನ್ನ ಪತಿರಾಜೈ….

ಹಿ : ಆಹಾ!

ಕ : (ರಾಗವಾಗಿ) ಯವ್ವಾ ಈ ರಾಜನ ಕೈಮುಟ್ಟಿದ ಈ ಮಾಂಗಲ್ಯ ನನ್ನ ಕೊಳ್ಳಾಗ ಐತಿ; ಈತನಿಂದ ನನಗ ಮುತ್ತೈದತನ ಬಂದೈತಿ; (ರಾಗದೊಂದಿಗೆ) ಈ ಗಂಡನ್ನ ಕೊಲೆ ಮಾಡಿಬಿಟ್ರೆ ನಾ ರಂಡಿಯಾಗ್ತೀನೈ….

ಹಿ : ಆಹಾ!

ಕ : (ರಾಗವಾಗಿ) ಎಲ್ಲೆಲ್ಲಿಗ್ಹೋದ್ರೂ ನನಗೆ ಮತ್ತೆ ಈ ಮುತ್ತೈದತನ ಸಿಗೋದಿಲ್ಲಾ!

ಹಿ : (ರಾಗವಾಗಿ) ಆಹಾ!

ಕ : (ರಾಗವಾಗಿ) ಇಂಥ ಮೋಸ ಮಾಡಿ ನಮ್ಮಿಬ್ರಿಗೂ ಸತಿ-ಪತಿಗೂ ಬಿಟ್ಟು ಹೋಗ್ಯಾರೆ ಅಳಬ್ಯಾಡ ನನ ಪತಿ ರಾಜಾ….ಅಳಬ್ಯಾಡಾ ಪತೀ….

ಹಿ : (ರಾಗವಾಗಿ) ಆಹಾ!

ಕ : ನನಗೆ ನಿನಗೆ ಜತಿ ಮಾಡ್ಯಾನ ಪರಮಾತ್ಮ –

ಹಿ : ಪತಿರಾಜಾ, ಬಾ ನಿಮ್ಮ ತೊಟ್ಲು ತಲಿಮ್ಯಾಲೆ ಹೊತುಗೊಂಡು ತನ್ನ ತವರೂರಿಗೆ ಹೋಗಿ ಹಾಲು ಹಣ್ಣು ಉಣಿಸಿ ನಿನ್ನ ಜ್ವಾಪಾನ ಮಾಡ್ತೀನಿ ನಡ್ರಿ ಹೋಗಾನು –

ಹಿ : ಆಹಾ!

ಕ : ಅಂತ್ಹೇಳಿ, ತೊಟ್ಲು ತಲಿಮ್ಯಾಲೆ ಹೊತ್ಗೊಂಡು ಹೋಗಬೇಕಾರ ಪಾರ್ವತಿ ಪರಮೇಶ್ವರ ನೋಡಿದ್ರು –

ಹಿ : ಓಹೋ!

ಕ : ಪಾರ್ವತಿ ಹ್ಯಾಗಿದೆ ಪತಿವ್ರತಾ ಧರ್ಮದ ಕಷ್ಟ ನೋಡು! ಸುಡು ಸುಡೋ ಬಿಸಿಲಿನ ತಾಪ –

ಹಿ : ಪರಮಾತ್ಮಾ! ಕೂಸು ನೋಡ್ರಿ ಬಿಸಿಲಿನ ಝಳಕ್ಕ ವಿಲಿವಿಲಿ ಒದ್ದಾಡ್ತಾ ಐತಿ; ಗೊಬೋ ಇಟ್ಟು ಅಳ್ತಾ ಐತಿ!

ಕ : ತನ್ನ ಗಂಡ ಅನ್ನೋ ಭಾವಕ್ಕೆ ಪದ್ಮಾವತಿ ಈ ಕೂಸನ್ನು ಜ್ವಾಪಾನ ಮಾಡ್ಬೇಕು!

ಹಿ : ಪರಮಾತ್ಮಾ! ಈ ಕೂಸು ಯೌವ್ವನಕ್ಕೆ ಬರೋದು ಯಾವಾಗ! ಎಲ್ಲರ್ಹಂಗ ಸತಿ-ಪತಿ ಆಗಿ ಬಾಳೋದು ಯಾವಾಗ!! ಹೆಣ್ಣಾಗಿ ಹುಟ್ಬಾರದು.

ಕ : “ಪಾರ್ವತಿ ನೀ ಚಿಂತಿ ಮಾಡಬ್ಯಾಡ. ಈ ಕೂಸು ಯೌವ್ವನ ಪ್ರಾಂತಕ್ಕ ಬರೋವರ್ಗೂ ಪದ್ಮಾವತಿ ಇದೇ ವಯಸ್ಸಿನಾಕಿ ಆಗಿ ಇರ್ಲಿ. ಈಕಿ ಪತಿವ್ರತಾ ಧರ್ಮ ನಾನು ಕಾಪಾಡ್ತೀನಿ” ಅಂದ ಪರಮಾತ್ಮ –

ಹಿ : ಆಶೀರ್ವಾದ ಮಾಡಿದ ಆ ಪರಮಾತ್ಮ!

ಕ : ತೊಟ್ಲಾ ಹೊತ್ಗೊಂಡು ಪದ್ಮಾವತಿ ಮುಂದಕ್ಕೆ ಮೂರು ಗಾವುದಾ ಬರ್ಬೇಕಾದ್ರೆ ಒಂದು ವೃಕ್ಷಾಳಿ ಮರ; ಅದರ ನೆರಳಲ್ಲಿ-

ಹಿ : ಏನು ಕುಂತಾವ್ರೀ?

ಕ : ಗಂಡ ಭೇರುಂಡ-ಎರಡು ಪಕ್ಷಿಗಳು ಕುಂತಾವ!

ಹಿ : ಆಹಾ ದೇವಲೋಕದ ಪಕ್ಷಿ!

ಕ : ದಾರೀ ಮಾರ್ಗದಲ್ಲಿ ರಣರಣ ಬಿಸಿಲು; ಅದರ ತಾಪಕ್ಕ ಕೂಸು ವಿಲಿವಿಲಿ ಒದ್ದಾಡ್ತೈತಿ – ತೊಟ್ಲುದಾಗ!

ಹಿ : ಹೌದು!

ಕ : ಆ ಎಲ್ಡೂ ಗಂಡ ಭೇರುಂಡ

ಹಿ : ಗಂಡು ಪಕ್ಷಿ, ಹೆಣ್ಣು ಪಕ್ಷಿ;

ಕ : ಈ ಪದ್ಮಾವತಿ ಪಡೋ ಪಾಡು ನೋಡ್ತಾವ –

ಹಿ : ಆಹಾ!

ಕ : ಇವರಿಬ್ರೂ ಸತಿ-ಪತಿ! ಈ ಕೂಸು ಪದ್ಮಾವತಿಗೆ ಜೋಡಲ್ಲಾ ಈಡಲ್ಲಾ; ಆದ್ರೂ ಈಕೆ ಗಂಡನ್ನೋ ಭಾವಕ್ಕ ಎಷ್ಟೊಂದು ಕಷ್ಟ ನೀಚ್ತಾಳಲ್ಲ!

ಹಿ : ಆಹಾ ಹೌದು!

ಕ : ನಾವೀಕಿಗೆ ಸಹಾಯ ಮಾಡೋನು;

ಹಿ : ಅಳಿಲ ಸೇವೆ – ಮಳಲ ಭಕ್ತಿ!

ಕ : ನಾವು ರೆಕ್ಕಿಗೆ ರೆಕ್ಕಿ ಕಲಸಿ ತೊಟ್ಲಕ್ಕ ನೆರಳ ಹಿಡಿಯೋನು,

ಹಿ : ಹೌದು!

ಕ : ಆ ಹೆಣ್ಣು – ಗಂಡು ಭೇರುಂಡ ಪಕ್ಷಿಗಳು ರೆಕ್ಕಿಗೆ ರೆಕ್ಕಿ+ ಕಲಿಸಿ ತೊಟ್ಲಕ್ಕ ನೆರಳ ಹಿಡದ್ವು. (ರಾಗವಾಗಿ) ತೊಟ್ಲಕಾ ನೆರಳ ಹಿಡದಾವ ಗಂಡು ಭೇರುಂಡ ಪಕ್ಷೀ….

ಹಿ : ಹೌದೂ

ಕ : ಹೆಂಗ ಹೆಂಗ ಪದ್ಮಾವತಿ ಹೋಗ್ತಾಳೆ – ಹಗ್ಹಂಗ್ ನೆರಳು ಮಾಡ್ತಾವು

ಹಿ : ಆ ಪಕ್ಷಿ ಜೋಡು!

ಕ : ಕಮಲಾವತೀ ಕೆರಿ ಏರಿಗೆ ಬಂದ್ಲು – ಪದ್ಮಾವತಿ, ಮಠ ಮಠ ಮಧ್ಯಾಹ್ನದ ಹೊತ್ತು –

ಹಿ : ಹನ್ನೆರಡು ಗಂಟೆ ಟೈಮು!

ಕ : ಆ ಕಮಲಾವತೀ ಕೆರಿ ಏರಿ ಮ್ಯಾಲೆ ಒಂದು ಆಲದ ಮರ; ಅದರ ನೆರಳಿಗೆ ಗಂಡನ ತೊಟ್ಲು ಇಳಿಸಿದ್ಲು. ದೇವಲೋಕದ ಪಕ್ಷಿ ಹೋದ್ವು – ದೇವಲೋಕಕ್ಕ.

ಹಿ : ಹೌದು!

ಕ : ನೋಡ್ತಾ ಅದಾಳೆ – ತೊಟ್ಲಾಗ ಗಂಡ ತಾಮಸ್ವಂದು ಮಲಿಗ್ಯಾನ; ಬಾಯ್ ಬಾಯಿ ಬಿಡ್ತಾನೆ! ಮುಖ ಬಾಡೇತಿ!!

ಹಿ : ಅಯ್ಯೋ ಪಾಪ ಹಸುಗೂಸು!

ಕ : ಮಡದಿ ಕೆರಿಯಾಗ ಇಳುದು ಒಂದು ಬಗಸಿ ನೀರು ತರತಾಳೆ; ಒಂದೊಂದೇ ಹನಿ ಗಂಡನ ಬಾಯಾಗ ಬಿಡ್ತಾ ಅದಾಳೆ! ಹೀಂಗ ಬಿಡೋ ಸಮಯದೊಳ್ಗೆ –

ಹಿ : ಆಹಾ ದೇವರ ಲೀಲಾ!

ಕ : ಪರಮಾತ್ಮ ನೋಡಿದಾ, ತನ್ನ ಜ್ಯೋಳಿಗ್ಯಾಗಿನ ವಿಭೂತಿ ಚಲ್ಲಿದ; ಆ ಬಗಸ್ಯಾಗಿಂದು ನೀರು ಕಳದು ಹಾಲು ಮಾಡಿದ!-

ಹಿ : ಆ ಪರಮಾತ್ಮ!

ಕ : ಕೂಸು ಹಾಲು ಕೂಡೀತು; ಹಂಗs ನಿದ್ದಿ ಹತ್ತಿತು ಅದಕ್ಕ!

ಹಿ : ಆಹಾ!

ಕ : ಪದ್ಮಾವತೀನೂ ಸೆರಿನೀರು ಕುಡದು ಮಲಗಿಕೊಂಡ್ಲು; ಹೊತ್ತು ಮುಳುಗಿ ರಾತ್ರಿ ಆತು ನೋಡ್ರಿ!

ಹಿ : ಹೌದು, ಸವರಾತ್ರಿ ಕಳೀತು.

ಕ : ಆದ್ರೂ ಪದ್ಮಾವತಿಗೆ ಎಚ್ಚರಾಗಲಿಲ್ಲ!

ಹಿ : ಮಹಂತ ದಣಿವು!

ಕ : ಆ ಅಪವ್ಯಾಳ್ಯಾದಾಗ ಕೂಸಿಗೆ ಹಸುವಾಗೇತಿ; ಟ್ಯಾಹ, ಟ್ಯಾಹ ಅಂತ್ಹೇಳಿ ಅಂಬಿಟ್ಟು ಅರಸ್ತೈತಿ,

ಹಿ : ಆಹಾ! ಈ ಕೂಸಿನ ಕತೆ ಇದು!

ಕ : ಅದೇ ಕಡಿಗೆ ಕಪ್ಪಗಲ್ ಗುಡ್ಡ; ಅದರಲ್ಲಿ ಕರಿಕಲ್ಲಿನ ಗವಿ; ಅದರೊಳಗೆ ಏಳು ಮೆಟ್ಟಿನ ಹುಲಿ (ರಾಗವಾಗಿ) ಅದೋ ಐತಯ್ಯಾ………… ಅದಕೆರಡು ಮರಿ ಹುಟ್ಟ್ಯಾವಯ್ಯಾ. ಹರಯನ್ನ ಮಾದೇವಾ.

ಆ ಹುಲಿಗೆ ಎರಡು ಮರಿ ಹುಟ್ಟಿ ಹದಿನೈದು ದಿವಸಾದ್ವು.

ಹಿ : ಆಹಾರಿಲ್ಲ!

ಕ : ತಾಯಿಗೆ ಮೇಯಾಕ ಹೋಗಾಕಾಗಿಲ್ಲ-ಗವಿಬಿಟ್ಟು! ಆದ್ರ, ಆರಾತ್ರಿ ಭಾರೀ ಹಸಿವು. “ಮಕ್ಳೇ ನನಗೆ ಹಸಿವಾಗೈತಿ ಆಹಾರ ಹುಡ್ಕೊಂಡು ತಿಂದು ನಿಮ್ಗೂ ತರತೀನಿ” ಅಂತ್ಹೇಳಿ – ಬಿಡ್ತು ನೋಡ್ರಿ ಗವಿ;

ಹಿ : ಗವೀಬಿಟ್ಟು ನಡೀತು-ಏಳು ಮೆಟ್ಟಿನ ಹೆಣ್ಣು ಹುಲಿ!

ಕ : ಗಡ್ರಗ್ ಗಡ್ರಗ್ ಗರ್ಜನಿ ಮಾಡ್ಕೊಂತಾ ಅದು ಚಿಗರಿ ಹಿಡಿತೈತಿ, ತಿಂತೈತಿ! ಮೊಲ ಹಿಡಿತೈತಿ, ತಿಂತೈತಿ! ಹೊಟ್ಟಿ ತುಂಬಿತು! ನೀರು ಕುಡಿಯಾಕ ಕಮಲಾವತೀ ಕೆರಿಗೆ ಬಂತು ಹುಲಿ!

ಹಿ : ಹೌದೂ!

ಕ : ಹೆಣ್ಣು ಹುಲಿ “ಕೆರಿ ನೀರು ಕುಡುದು ಗವಿಗೆ ಹೋಗ್ಬೇಕು; ನನ್ನ ಮಕ್ಕಳಿಗೆ ತಕ್ಕ ಆಹಾರ ಹುಡಕ್ಬೇಕು” – ಅಂತ್ಹೇಳಿ ಬರುಬೇಕಾದ್ರೆ ಕೂಸು ಅಳತಿತ್ತಲ್ಲ, ಅದರ ದನಿ ಆ ಹುಲಿ ಕಿವಿಯಾಗ ಬಿತ್ತು!

ಹಿ : ಆಹಾ!

ಕ : ಆ ಕೂಡ್ಲೇ ಚಂಗನೆ ನೆಗದು ಬಂದು ಅಂಟ್ರಗಾಲ ಹಾಕಿ ತೊಟ್ಲ ಹಣಿಕಿ ನೋಡ್ತೈತಿ-

ಹಿ : ಆಹಾ!

ಕ : ನನ್ನ ಹೊಟ್ಟಿ ತುಂಬೋ ಆಹಾರ ಅಲ್ಲಿದು;

ಹಿ : ನನ್ನ ಮಕ್ಕಳಿಗೆ ತಕ್ಕ ಆಹಾರ.

ಕ : “ಓಹೋ! ನನ್ನ ಮರಿಗಳಿಗೆ ತಕ ಆಹಾರ್ ಸಿಕ್ಕಿತು”! ಅಂತ್ಹೇಳಿ ತೊಟ್ಲ ಹಿಡಿದು ಜಗೆ ಬೀಳಬೇಕಂದ್ರೆ, ತೊಟ್ಲು ಬಾರ್ಲು ಬಿತ್ತು. ತೆಳಗೆ ಬಿದ್ದಂಥ ಮಗನಿಗೆ ಬಾಯಾಗ ಕಚ್ಕೊಂಡು ಬಿಡ್ತು ಹುಲಿ.

ಹಿ : ಆಹಾ!

ಕ : ಹುಲಿ ತನ್ನ ಹಲ್ಲು ಆ ಕೂಸಿನ ಎಲುಬಿಗೆ ನಾಟದಂಗೆ ಬಾಯಾಗ ಕಚ್ಚಿಕೊಂಡು

|| ಪದ ||

ಮಗನಿಗೆ ಹುಲಿ ತೊಗೊಂಡು ಹೊಂಟೈತೀ……….ಹರಯನ್ನ ಮಾದೇವಾ
ಹುಲಿ ಬಾಯಿಗೆ ಬಿದ್ದಾನs ಕೂಸೂ………ಹರಯನ್ನ ಮಾದೇವ
ಹುಲಿ ಬಂದಾತೈ ಗವಿಗೇ………ಹರಯನ್ನ ಮಾದೇವ
ತನ್ನ ಮರಿ ಕರಿದಿತೈ………..ಹರಯನ್ನ ಮಾದೇವ
ಎರಡೂ ಮರಿ ತಿನ್ನಾಕ ಬಂದಾವಾ………ಹರಯನ್ನ ಮಾದೇವ

“ಮಕ್ಕಳೇ ನಿಮಿಗೆ ತಕ್ಕ ಆಹಾರ ತಂದೀನಿ ಇದನ್ನ ಕೊಂದು ತಿನ್ನಿರಿ” ಅಂತ ಹೇಳಿ ಹೊರಗ ಬಂದು ದೊಡ್ಡ ಕಲ್ದುಂಡಿ ಮ್ಯಾಲೆ ಕುಂತ್ಗೊಂಡು ಬಿಡ್ತು; ಮರಿಗಳು ಕೂಸಿನ ಬ್ಯಾಟಿ ಆಡೋ ಚಿನ್ನಾಟ ನೋಡ್ತಾ ಐತಿ.

ಹಿ : ಆಹಾ!

ಕ : ಚೋಟುದ್ದ ಕೂಸಿಗೆ ಎರಡೂ ಹುಲಿ ಮರಿ ಜಗ್ಗಾಡ್ತಾವ.

ಹಿ : ಆಹಾ!

ಕ : ಒಂದು ಮರಿ ಕಾಲು ಹಿಡಿದು ಜಗ್ಬೇಕು ಅಂತೈತಿ, ಇನ್ನೊಂದು ಮರಿ ತಲಿಬುರುಡಿ ಹಿಡಿಬೇಕು ಅಂತೈತಿ.

ಹಿ : ಆಹಾ!

ಕ : ಈ ಕೂಸಿನ ಕತಿ ಇಲ್ಲಿ ಹೀಂಗs….

ಹಿ : ಆಹಾ!

ಕ : ಅಲ್ಲಿ ಪದ್ಮಾವತಿ ಮಲಿಗ್ಯಾಳ!

ಹಿ : ಹೌದು

ಕ : ಎಚ್ಚರಿಲ್ಲ!

ಹಿ : ಭಾರಿ ನಿದ್ದಿ, ಮರನಿದ್ದಿ,

ಕ : ಈ ಟೈಮಿನಾಗ ಆ ಭಾಗದ ಕಡಿಗೆ ಬೇಟೆಗಾರ ಬೇಡರ ಕಣ್ಣಯ್ಯ ಬಂದ.

ಹಿ : ಯಾ ಊರಾತ? ಯಾರೀತ?

ಕ : ದೂರದಲ್ಲಿ ಕಾಣತಕ್ಕಂಥ ರತ್ನಭೋಗ ಮಹಾರಾಜನ ಏಕಂಚಿ ಪಟ್ಣದಾತ, ಈತ ಮಹಾ ಶೂರ. ಬ್ಯಾಟಿಯೊಳಗ ಪ್ರಸಿದ್ಧ – ಈ ಕಣ್ಣಯ್ಯ!

ಹಿ : ಹೌದು.

ಕ : ಜೋಡು ಗುಂಡಿನ ತುಬಾಕಿ ತೊಗೊಂಡು ರಾತ್ರಿ ವ್ಯಾಳ್ಯಾದೊಳಗೆ ಬ್ಯಾಟಿ ಆಡಾಕ ಬರ್ತಾ ಅದಾನ ನೋಡ್ರಿ!

ಹಿ : ಹೌದೂ!

ಕ : ನೋಡ್ಕೊಂತ, ನೋಡ್ಕೊಂತ “ಬ್ಯಾಟಿ ಎಲ್ಲಿ ಆಗುವಲ್ದು” ಅಂತ್ಹೇಳಿ ಆ ಕರಿಕಲ್ ಗುಡ್ಡದ ಸಮೀಪಕ್ಕೆ ಬಂದು ನೋಡ್ತಾನೆ-

ಹಿ : ಹುಲಿ ಕುಂತೈತಿ ಕಲ್ಗುಂಡಿನ ಮ್ಯಾಲೆ;

ಕ : ಆಹಾ ಚಲೋ ಬ್ಯಾಟಿ! ಎಂಥಾ ಹುಲಿ ಕುಂತೈತಿ! ಅಂತ ತುಬಾಕಿ ಬಾಯಿಗೆ ಗುಂಡಿಟ್ಟ. ಗುರಿ ಇಟ್ಟು ಧಡಲ್ ಅಂತ ಹಾರಿಸಿಬಿಟ್ಟ-ತುಬಾಕಿ! ಹುಲಿ ಕತ್ತರಿಸಿ ಬಿತ್ತು! ರಾಮಾ ಅಂತ ಪ್ರಾಣಾ ಬಿಡ್ತು! ಬಂದು ನೋಡ್ತಾನೆ ಕಣ್ಣಪ್ಪ-ಏಳು ಮೆಟ್ಟಿನ ಹೆಣ್ಣು ಹುಲಿ!

ಹಿ : ಓಹೋ ಚಲೋ ಬ್ಯಾಟಿ ಆತು ಇವತ್ತಿನ ದಿವಸ!

ಕ : ಇದೇನಿದು ಗವಿಯಲ್ಲಿ ಕೂಸಿನ ಧ್ವನಿ ಬರ್ತೈತಲ್ಲ! ಒಳಗ ಈ ಕೂಸು ಅಳಲು ಕಾರಣವೇನು; ಊರಲ್ಲ ಉದ್ಮಾನಲ್ಲ!

ಹಿ : ಹೌದು!

ಕ : ಕಣ್ಣಯ್ಯ ಪಂಜು ಹಚ್ಚಿದ; ಆ ಪಂಜಿನ ಬೆಳಕಿನಿಂದ ಒಳಗೆ ಬಂದು ನೋಡ್ತಾನೆ- ಎರಡು ಹುಲಿ ಮರಿ ಅದಾವು!!

ಹಿ : ಆ ಹಸುಗೂಸುನ ಜಗ್ಯಾಡತಾ ಅದಾವು!

ಕ : ಯಾವ ದೇಶದ ಮಗನೋ! ಅಯ್ಯೋ ಪಾಪ! ಅಂತ ಎರಡೂ ಹುಲಿ ಮರಿಗಳ ಕುಂಡಿಗೆ ಝಾಡಿಸಿ ಪ್ರಾಣ ಹೋಗ್ಹಂಗ ಒದ್ದು ಗವಿ ಹೊರಗೆ ಒಗದು ಬಿಟ್ಟ!

ಹಿ : ಆಹಾ!

ಕ : ಮಗನಿಗೆ ಏನು ಅನಾಹುತ ಆಗಿರಬಹುದಂತ ಪಂಜಿನ ಬೆಳಕೀಲೆ ನೋಡ್ತಾನೆ.

ಹಿ : ಆಹಾ!

ಕ : ಏನ್ಮಗಾ ಏನ್ಮಗಾ!

ಹಿ : ಹೌದು!

ಕ : ನನ್ನ ಮದಿವಿ ಆಗಿ ಹನ್ನೆರಡು ವರ್ಷ ಆತು! ಸಂತಾನವಿಲ್ಲದ ಬಂಜಿಬಾಳು ನಂದು!!

ಹಿ : ಹೌದು!

ಕ : ಹುಲಿ ಬ್ಯಾಟಿಗೆ ಬಂದದ್ದು ಚಲೋ ಆತು; ಮಗನ ಬ್ಯಾಟಿ ದೊರೀತು, ಆನಂದಾತು! ಅಂತ್ಹೇಳಿ ಆ ಕೂಸಿನ ಮೈಮ್ಯಾಲಿನ ರಕ್ತ ವರಿಸಿದ-

ಹಿ : ಉಪಚಾರ ಮಾಡಿದ!

ಕ : ಹೆಗಲಿಗೆ ಹಾಕ್ಕೊಂಡು ತನ್ನ ಜೋಡು ಗುಂಡಿನ ತುಬಾಕಿ ತೊಗೊಂಡು ಕಪ್ಪಗಲ್ ಗುಡ್ಡದಿಂದ ತನ್ನ ಊರಾದ ಏಕಂಚಿ ಪಟ್ಣಕ್ಕೆ ಹೋಗಬೇಕಾದ್ರೆ, ಅದೇ ದಾರಿಯಲ್ಲಿ ಪದ್ಮಾವತಿ ಮಲಗಿದ ಜಾಗ; ಅಷ್ಟು ಹೊತ್ತಿಗೆ ನಸಗು ಹರೀತು.

ಹಿ : ಮುಂಜಾನೆ ಆತು!

ಕ : ಪದ್ಮಾವತಿ ಎದ್ದು ನೋಡ್ತಾಳೆ!- ತನ್ನ ಗಂಡನ ತೊಟ್ಲು ಕೆಳಗ ಬಿದ್ದೈತಿ! ಅದ್ರಾಗ ಆತಿಲ್ಲ!! ಆಹಾ, (ರಾಗವಾಗಿ) ನನ್ನ ಗಂಡನ ತೊಟ್ಲು ಬರಿದೈತಲ್ಲೋ…. ಯಾವ ಹುಲಿ ಮೃಗ ಬಂದು ತಗಂಡು ಹೋಗೈತೋ!…. ನನ್ನ ನಿದ್ದಿಗೆ ಬೆಂಕಿ ಹಚ್ಲೀ….ನನಗೀಗ ಎಚ್ಚರಾತಲ್ಲಾ! ಅಗಲಿ ಹೋದ ನನ್ನ ಬಾಳಭಿಕ್ಷುಕ ರಾಜಾ! ನನ್ನ ರಂಡಿ ಮಾಡಿ ಬಿಟ್ಟು ಹೋದ್ಯಾ ಪತಿರಾಜಾ!-

ಹಿ : ಆಹಾ!

ಕ : ಅಂತ್ಹೇಳಿ ತೊಟ್ಲಕ ಸಾಗರಬಿದ್ದು ಅಳತಾಳ-

ಹಿ : ಪದ್ಮಾವತಿ!

ಕ : ಬೇಡರ ಕಣ್ಣಪ್ಪ ಅಲ್ಲಿಗೆ ಬಂದು ನೋಡ್ತಾನೆ-ಯಾರು ಈ ಯಮ್ಮಾ? ಯದಕ ತೊಟ್ಲಿಗಿ ಬಿದ್ದು ಅಳ್ತಾಳ ಈ ಯಮ್ಮ?

ಹಿ : ಯಾರು ಯಮ್ಮಾ ನೀನು?

ಕ : ಒಹೋ ನೀನು ಯಾರಪ್ಪಯ್ಯ?

ಹಿ : ನಾನು ರತನಭೋಗ ರಾಜನ ಏಕಂಚಿ ಪಟ್ಣದಲ್ಲಿ ಹುಲಿ ಬ್ಯಾಟಿಗಾರನಾದಂಥ ಬ್ಯಾಡ್ರ ಕಣ್ಣಪ್ಪ; ಅಮ್ಮ ನೀನು ಯಾರು?

ಕ : ಒಹೋ ನನಗೆ ಯಾರು ಅಂತ ವಿಚಾರ ಮಾಡ್ತೀಯಾ ಅಪ್ಪಯ್ಯ?

ಹಿ : ಹೌದು.

ಕ : ಪದ್ಮಾವತಿ ನನ್ನ ಹೆಸರು; ಗಂಡನ ಕಳ್ಕೊಂಡು ರಂಡಿಯಾದೆನಪ್ಪಾ! ಆಹಾ ನನ್ನ ಗಂಡ ಯಾಕ ಕಡೆಗೆ ಹೋದನಮ್ಮಾ!

ಹಿ : ಆಹಾ!

ಕ : ಏನು ಕಾರಣ ಜಗಳಾ ಮಾಡಿದ್ರಮ್ಮಾ? ನೀವು ಸತಿ-ಪತಿಗಳು ಇಲ್ಲಿವರ್ಗೂ ಕಲ್ತು ಬಂದು ಏನು ಮನಸ್ತಾಪ ಆತು? ನಿನ್ನ ಗಂಡ ಹೊಡದೂ ಬಡುದೂ ಯತ್ಲಾಗ ಬಿಟ್ಟು ಹೋದ?

ಹಿ : ಜಗಳ ಮಾಡೂ ಅಂಥ ಗಂಡ ಅಲ್ಲ ಅಪ್ಪಯ್ಯ ಆತ !

ಕ : ಹೌದೇ?

ಹಿ : ಹೌದು!

ಕ : ಈ ತೊಟ್ಲಾಗ ಇದ್ದ ಕಂದಯ್ಯ ನನ್ನ ಗಂಡ.

ಹಿ : ಹೇ- ಹೋಗಮ್ಮಾ! ಚೋಟು ಕಂದಯ್ಯಗೆ ನನ್ನ ಗಂಡ ಅಂತೀಯಲ್ಲ! ನೀನೊಡಿದ್ರೆ ಯೌವನ ಪ್ರಾಯಕ್ಕೆ ಬಂದು ಕುಂತೀ; ಇಂಥ ಚೋಟು ಕೂಸಿಗೆ ಗಂಡ ಅನ್ನಲಿಕ್ಕೆ ಕಾರಣೇನು?

ಕ : ಬ್ರಹ್ಮಲಿಖಿತ-ಅಪ್ಪಯ್ಯ! ಅತ್ತೆ – ಮಾವಂದಿರ ಮೋಸ ಕೃತ್ಯದಿಂದ ತಮ್ಮ ಕೂಸಿಗೆ ಲಗ್ನ ಮಾಡಿಕೊಂಡು ಅಡಿವ್ಯಾಗ ಬಿಟ್ಟು ಹೋದ್ರು!

ಹಿ : ಆಹಾ ಮೋಸಕೃತ್ಯದ ಲಗ್ನ!