ಕ : ಏನು ರೂಪ, ಏನು ಲಾವಣ್ಯ, ಏನ್ ಚಲುವಿಕಿ, ಆಕಿ ರೂಪ ನೋಡಿ ನನ್ನ ಕಣ್ಣಿಗೆ ಮಂಜು ಗವೀತು! ಅಂಥಾ ಹೆಣ್ಣಿಗೆ ನಾನು ಹೆಂಗs ಬಿಡ್ಲಿ!

|| ಪದ ||

ಆಕೀ ಕಾಲಾಗ ನನ ಪ್ರಾಣ ಹೋದ್ರು ಬಿಡೋದಿಲ್ಲ,.ಹರಯನ್ನ ಮಾದೇವ
ಮೊದಲು ಗೆಳೆಯನ್ನ ಕೊಲ್ಲಬೇಕು ನಾನು ನಾವs….ಶಿವಯನ್ನ ಮಾದೇವ.

ಕ : ಗೆಳೆಯನ್ನ ಕೊಂದು ಆಕಿ ಮನಿಗೆ ಹೋದ್ರ ಯಾರ್ದೂ ಭಯವಿರುವುದಿಲ್ಲ-

ಹಿ : ಹೆಂಗ ಕೊಲ್ಲಬೇಕ್ರಿ?

ಕ : ನಮ್ಮ ಗರಡಿಮನಿ ವಸ್ತಾದಿ ಅದಾನಲ್ಲ-

ಹಿ : ಹೌದು.

ಕ ; ಆ ವಸ್ತಾದಿ ಕೈಯಾಗ ಕೊಟ್ಟು ಬಾಳಭಿಕ್ಷುಕನ ಕೊಲೆ ಮಾಡ್ಸೋದು ಒಳ್ಳೇದು.

ಹಿ : ಹೌದು ಒಳ್ಳೇದು.

ಕ : ಮುವ್ವರೂ ಬಂದ್ರು ಗರಡೀ ಮನಿಗೆ. ರಾಜಕುಮಾರ ಕರೀತಾನೆ- “ಬಾಳಭಿಕ್ಷುಕ”

ಹಿ : ಏನು ಅಣ್ಣಯ್ಯನೋರೆ?

ಕ : ನಮ್ಮ ಮನಿಗೆ ಹೋಗಿ ಒಂದು ಚರಿಗಿ ನೀರು ತೊಗೊಂಬಾ.

ಹಿ : ರಾಜಕುಮಾರ ಬಾಳಭಿಕ್ಷುಕನ್ನ ನೀರಿಗೆ ಕಳಿಸಿದ-ಅತ್ತಕಡಿಗೆ.

ಕ : ಇತ್ತಕಡಿಗೆ ಗರಡಿಮನಿಗೆ ವಸ್ತಾದಿ ಕರಿಸಿದ್ರು.

ಹಿ : ಆಹಾ! ಮೂವತ್ತು ಮೂರು ಹಳ್ಳಿಗೆ ಮಿಕ್ಕದಂಥ ವಸ್ತಾದಿ ಅವನು! ಯಾರ್ಯಾರೂ ಅವನ ಕೈಹಿಡಿಯೋರಿಲ್ಲ! ‘ ಎಲ್ಲರಿಗೂ ಮೀರಿದ ಬಂಟಪೈಲ್ವಾನ!

ಕ : ಅವನಿಗೆ ಹೇಳಬೇಕಾದ್ದೆಲ್ಲಾ ಹೇಳಿದ್ರು “ಬಾಳಭಿಕ್ಷುಕನ್ನ ಕೊಂದ್ರೆ ಮೂರುಹಳ್ಳಿ ಇನಾಮ್ ಕೊಡ್ತೀನಿ” ಅಂದ ಐರಾಮ.

ಹಿ : ಒಳ್ಳೇದು ಮಾರಾಜ್ರೇ….

ಕ : ವಸ್ತಾದಿ, ಕಾಸಿ ಹಾಕ್ಕೊಂಡ, ಕಂಬ್ಳಿ ಮುಸುಗಿಕೊಂಡು ಗರಡಿಮನಿ ಮೂಲ್ಯಾಗೆ ಕುಂತ್ಗೊಂಡ. ಅವರಿಬ್ಬರೂ ಮಿತ್ರು – ಐರಾಮ, ಶಿವಗಣ್ಯ ಹೊರಗ ಬಂದ್ರು. ಬಾಳಭಿಕ್ಷುಕ ನೀರು ತಗೊಂಡು ಗರಡೀ ಮನಿಗೆ-

ಹಿ : ಬಂದಾ.

ಕ : “ಗೆಳೆಯಾ ನಾವು ಸ್ವಲ್ಪ ಬಯಲು ಭೂಮಿಗೆ ಹೋಗಿ ಬರ್ತೀವಿ; ನೀನು ಗರಡಿಯೊಳಗೆ ಇರು ಅಂತ್ಹೇಳಿ ಗರಡಿಮನಿ ಮಾಳ್ಗಿ ಹತ್ತಿ ಕುಂತ್ರು.”

ಹಿ : ಹೌದೂ!

ಕ : ಬಾಳಭಿಕ್ಷುಕ ಸಾಧಕ ಮಾಡೋನು ಅಂತ ಗರಡೀಗೆ ಇಳ್ದಾ; ಇಳದದ್ದೆ ತಡಾ ಮೂಲ್ಯಾಗ ವಸ್ತಾದಿ ದಿಡಗ್ಗನೆ ಎದ್ದು ಚಡ್ಡು ಹೊಡದು, ಏನಂತಾನ-

ಹಿ : ಏನೋ ಹುಡುಗಾ, ಬಾ ನನ್ನ ಮ್ಯಾಲೆ ಕುಸ್ತಿಗೆ.

ಕ : ಅಪ್ಪಾ ವಸ್ತಾದೀ, ವಿದ್ಯಾ ಕಲಿಸಿದ ಗುರುವೇ! ನಮಸ್ಕಾರ. ನಿನಗೆ ಈಡೇ ಜೋಡೆ ನಾನು! ನಿಮ್ಮ ಮಗ ನಾನು! ನನ್ನ ಕುಸ್ತಿಗೆ ಕರಿಬ್ಯಾಡ ಅಂತ ವಿನಯದಿಂದ ಹೇಳಿದಾ.

ಹಿ : ಹೌದೂ.

ಕ : ಏಕದಮ್ ಒಮ್ಮೆಗೇ ಕುಪ್ಪಳಿಸಿ ಹಾರಿ ಸಿಟ್ಟಿನಿಂದ ವಸ್ತಾದಿ ಬಾಳಭಿಕ್ಷುಕಗೆ ತೆಕ್ಕಿ ಹಿಡದು ಬಿಟ್ಟ.

ಹಿ : (ರಾಗವಾಗಿ) ಶಂಕರಾ….

ಕ : ತನ್ನ ಶಿಷ್ಯನ ವಸ್ತಾದಿ ನೆಲಕ್ಕೆ ಎತ್ತಿಹಾಕಿ ಕೊಲ್ಲುವ ಸಮಯದಲ್ಲಿ (ರಾಗವಾಗಿ) ಮ್ಯಾಲೆ ಪರಮಾತ್ಮ ನೋಡಿಬಿಟ್ಟ.

ಹಿ : ನೋಡಿ ಬಿಟ್ಟಾ!

ಕ : ವಸ್ತಾದಿ ಕೈಯಾಗ ಮಗ ಉಳಿಲಾರ ಅಂತಂದು, ಗರಡಿ ಮನಿಯಾಗ ವಿಭೂತಿ ಚಲ್ಲಿ ಬಿಟ್ಟ. ಬಾಳಭಿಕ್ಷುಕನ ಮೈಯಾಗ ಒಂದು ಎತ್ತಿನ ಶಕ್ತಿ ಕೊಟ್ಟ ಪರ್ಮಾತ್ಮ!

ಹಿ : ಬಸವಣ್ಣನ ಶಕ್ತಿ!

ಕ : ಬಾಳಭಿಕ್ಷುಕ ವಸ್ತಾದೀನ ಅಂಗಾತ ಕೆಡವಿ ಎದಿಮ್ಯಾಲೆ ಮಂಡಿಗಾಲು ಊರಿ ಕೂತ್ಕೊಂಡ ಐರಾಮ, ಶಿವಗಣ್ಯ ಮಾಳ್ಗಿ ಮ್ಯಾಲೆ ಕುಂತುದ್ರಲ್ಲ – ಧಪ್ಪಂಥ ಬಿದ್ದ ಶಬ್ದ ಕೇಳಿದ್ರು! ಕೆಳಗೆ ಇಳಿದು ಬಂದು ನೋಡ್ತಾರೆ – ವಸ್ತಾದಿ ಮಣ್ಣು ಮುಕ್ಯಾನೆ! ಶಿವಗಣ್ಯ ಅಂತಾನೆ (ರಾಗವಾಗಿ) ಇಂಥ ವಸ್ತಾದಿಗೆ ಮಣ್ಣು ಮಾಡಿದ ಮ್ಯಾಲೆ ನಾಳೆ ನಮಗೇನು ಬಿಡ್ತಾನೋ ಗೆಳೆಯಾ….

ಹಿ : ಹೌದು!

ಕ : ವಸ್ತಾದಿ ಎದ್ದು “ಬಾಳಭಿಕ್ಷುಕಾ ನಾನು ಸೋತೆ, ನೀನು ಗೆದ್ದಿ” ಅಂತ ಹೇಳಿ ಅಲ್ಲಿಂದ ಕಾಲು ಕಿತ್ತ.

ಹಿ : ಹೌದೂ-

ಕ : ಬಾಳಭಿಕ್ಷುಕ ಕೇಳ್ತಾನೆ- “ಗೆಳಿಯರಾ ಬಯಲು ಭೂಮಿಗೆ ಹೋಗ್ತೀವಿ ಅಂತ ಹೋದ್ರಿ; ನನ್ನ ಗರಡಿ ಮನಿಯಾಗ ಇರು ಅಂದ್ರಿ; ನಂಬಿ ನಾನು ಒಳಗ ಹೋದ್ರೆ ವಸ್ತಾದಿ ನನ್ನ ಕೊಲ್ಲಾಕ ಬಂದಿದ್ನಲ್ಲೋ!”

ಹಿ : ನಮಗೆ ಇದು ಮಾಹಿತಿಯಾಗಿಲ್ಲಲ್ಲ ಗೆಳೆಯಾ! ಬದುಕಿ ಉಳಿದೀ – ನಮ್ಮ ಪುಣ್ಯ!

ಕ : ಹಿಂಗ ಎರಡು ಮೂರು ಸಲ ಬ್ಯಾರೆ ಬ್ಯಾರೆ ರೀತಿಲೆ ಬಾಳಭಿಕ್ಷುಕನ್ನ ಕೊಲ್ಸೋ ಯತ್ನ ಮಾಡಿದ್ದು ದಂಡಾತು.

ಹಿ : ಆಹಾ!

ಕ : ಮಿತ್ರರ ಮಸಲತ್ತ ಗೊತ್ತಾತು.

ಹಿ : ಹೌದು ಮನವರಿಕಿ ಆತು – ಬಾಳಭಿಕ್ಷುಕಗ.

ಕ : ಅವರಿಬ್ಬರೂ ಗೆಳೆಯರು ಮಾತಾಡ್ಕೊಂತಾರೆ-ಏನ್ಮಾಡಿದ್ರೆ ಇವನಿಗೆ ಮರಣ ಬಂದಿತು? ಇವನು ಸಾಯದೇ ಪದ್ಮಾವತಿ ಕೈವಶ ಆಗೋದು ಸಾಧ್ಯವಿಲ್ಲ.

ಹಿ : ಇದಕ್ಕ ಏನ್ಮಾಡ್ಬೇಕು? ಹೊಳೀಲಿಲ್ಲ.

ಕ : ಇಬ್ಬರೂ ಸಂಗಮ್ಮನ ಮನಿಗೆ ಬಂದ್ರು; ಶಿವಗಣ್ಯ ಕೇಳ್ತಾನೆ-

ಹಿ : ಸಂಗಮ್ಮಾ ಬಾಳಭಿಕ್ಷುಕ ಏನ್ಮಾಡಿದ್ರೂ ಸಾಯವಲ್ಲಾ! ಏನ್ಮಾಡಿದ್ರೆ ಮರಣ ಬಂದೀತು?

ಕ : ಮಕ್ಕಳ್ರಾ, ಅವನು ಹಂಗs ಸಾಯೋನಲ್ಲಾ. ಒಂದು ಹಂಚಿಗಿ ಮಾಡ್ರಿ-

ಹಿ : ಏನಮ್ಮಾ, ಅದು – ಮದ್ಲು ಹೇಳು.

ಕ : ಕಪ್ಪತ್ತು ಗುಡ್ದದಾಗ ಏಳು ಮೆಟ್ಟಿನ ಹುಲಿ ಐತಿ ಅಂತ ಅವನ್ಗೆ ಕರ್ಕೊಂಡು ಹೋಗ್ರಿ.

ಹಿ : ಹೋಗ್ರಿ.

ಕ : ಅವನ ಕೈಗೆ ಮಂಡಗತ್ತಿ ಕೊಡ್ರಿ; ನೀವಿಬ್ರೂ ಚಲೋ ಚೂಪಾದ ಬಿಚ್ಚಗತ್ತಿ ತೊಗೊಂಡು ಅಡಿವಿಗೆ ಕರ್ಕೊಂಡು ಹೋಗಿ-

ಹಿ : ಹೋಗಿ?

ಕ : ಅವನಿಗೆ ಕೊಲ್ಲಿ ಬರ್ರೀ (ರಾಗವಾಗಿ) ಒಳ್ಳೇದೈ.

ಹಿ : ಚಲೋ ಉಪಾಯ.

ಕ : ಗೆಳೆಯಾ ಬಾಳಭಿಕ್ಷುಕಾ ಕಪ್ಪತ್ತಗಲ್ಲ ಗುಡ್ಡದಾಗ ಏಳು ಮೆಟ್ಟಿನ ಹುಲಿ ಐತಂತೆ! ನಮ್ಮ ತಂದಿ ರತನಭೋಗರಾಜ ಅದನ್ನ ಕೊಂದವರಿಗೆ ಪಟ್ಟಾಭಿಷೇಕ ಮಾಡ್ತೀನಿ ಅಂತ್ಹೇಳಿ-

ಹಿ : ಟಾಂ, ಟಾಂ, ಹೊಡಿಸ್ಯಾನ!

ಕ : ಹುಲಿ ಹೊಡದವರಿಗೆ ಪಟ್ಟಾಭಿಷೇಕ! ಎಲ್ಲೈತಿ ಹುಲಿ ಗೆಳೆಯರ್ರ್ಯಾ? ತೋರ್ಸು ನಡೀರಿ, ಕೊಲ್ತೀನಿ.

ಹಿ : ಅಂತ ಗುಡುಗಿದ ಬಾಳಭಿಕ್ಷುಕ.

ಕ : ಸಂಗಮ್ಮ ಹೇಳಿದಂಗ ಅವನ ಕೈಯಾಗ ಮಂಡಗತ್ತಿ ಕೊಟ್ರು, ತಾವು ಚೂಪಾದ ಬಿಚ್ಚಗತ್ತಿ ತಗಂಡ್ರು; ಹುಲಿ ಕೊಲ್ಲಬೇಕು ಅಂತ್ಹೇಳಿ ಬಜಾರ್ದಾಗ ಕ್ಯಾಕಿ ಹೊಡ್ಕೊಂತ ಬರ್ಬೇಕಾದ್ರೆ ಪದ್ಮಾವತಿ ನೋಡಿಬಿಟ್ಲು!

ಹಿ : ತನ್ನ ಗಂಡನೂ ಅದಾನ ಆ ಗುಂಪಿನ್ಯಾಗ!

ಕ : ಓಹೋ! ಆ ಕೂಡ್ಲೆ ಪದ್ಮಾವತಿ ಸಂಗವ್ವನ್ಹತ್ರ ಓಡಿ ಬಂದ್ಲು.

ಹಿ : ಹೌದೂ.

ಕ : ಯವ್ವಾ ಏನದು? ಬಲಗಡಿಗೆ ಇರೋ ರಾಜಕುಮಾರ್ನ ಕೈಯಾಗ ಚಂದ್ರಾಯುಧ ಥಳ ಥಳ ಹೊಳೀತೈತಿ, ಎಡಗಡಿಗಿರೋ ಮಂತ್ರಿ ಮಗನ ಕೈಯಾಗ ನೋಡಿದ್ರ ಎಂಥಾ ಚಲೋ ಬಿಚ್ಚುಗತ್ತಿ ಐತಿ; ನಮ್ಮ ರಾಜರ ಕೈಯಾಗ ನೋಡಿದ್ರ ಹಳೇದು ಮಂಡಗತ್ತೈತೆಲ್ಲಾ !

ಹಿ : ಏನಿದು?

ಕ : “ನಮ್ಮ ರಾಜಗೆ ಇವರು ಎಲ್ಲಿಗೆ ಕರ್ಕೊಂಡು ಹೊಂಟಾರ?” ಅದಕ ಸಂಗಮ್ಮ ಹೇಳ್ತಾಳೆ-

ಹಿ : ಅದರ ಗೊಡವಿ ನಿನಗ್ಯಾಕಮ್ಮಾ? ನೀನು ಮನಿಯಲ್ಲೇ ಇರುಹೋಗು.

ಕ : “ಇಲ್ಲಮ್ಮಾ ನೀನು ಹೇಳಾಕಬೇಕು” – ಹಟ ಮಾಡಿದ್ಲು ಪದ್ಮಾವತಿ.

ಹಿ : ಹೌದು.

ಕ : ಪದ್ಮಾವತಿಗೆ ರಾಜನ ಟಾಂ, ಟಾಂ ವಿಷಯ ತಿಳಿಸಿದ್ಲು; “ನಿನ್ನ ಪತಿ ಮಹಾರಾಜಾ ಹುಲಿಕೊಂದು ಪಟ್ಟಾಭಿಷೇಕ ಪಡಿಯಾಕ ಹೊಂಟಾನವ್ವ”.

ಹಿ : ಪದ್ಮಾವತಿಗೆ ಏನೋ ಅನುಮಾನ ಆತು-

ಕ : ಅಮ್ಮಾ ಸಂಗಮ್ಮಾ ನಾನು ಹುಲಿ ಕೊಲ್ಲೋದ ನೋಡಿಲ್ಲಾ, ಹೋಗ್ತೀನಿ.

ಹಿ : ಬ್ಯಾಡ ಬ್ಯಾಡ ಹೋಗ್ಬ್ಯಾಡ-

ಕ : ಹೋಗ ಬಾರದು ನೀನು.

ಹಿ : ಯಾಕಮ್ಮಾ?

ಕ : ಬಳೀ ಶಬ್ದ ಕೇಳಿದ್ರೆ ಬಿಚ್ಚಗತ್ತಿ ನಾಟೋದಿಲ್ಲ ನೋಡಮ್ಮ-

ಹಿ : ನೀನು ಹೋಗಬಾರ್ದು.

ಕ : ಆ ಕೂಡ್ಲೆ ಅಲ್ಲಿಂದ ಪದ್ಮಾವತಿ ತನ್ನ ಮನಿಗೆ ಓಡಿ ಬಂದ್ಲು. ಒಂದು ಕಂಜೂರ ಬಾಕು, ಒಂದು ಗಿಂಡಿ, ಒಂದು ಹಗ್ಗ ತೊಗೊಂಡು ಉಡಿಯಾಗ ಕಟ್ಗೊಂಡು ಹೊಂಟ್ಲು-

ಹಿ : ಓಡೋಡಿ.

ಕ : ಮೂರು ಜನ ಗೆಳೆಯರು ಮುಂದೆ ಮುಂದೆ, ಪದ್ಮಾವತಿ ಅವರ ಹಿಂದೆ – ಹಿಂದೆ, ಅವರು ಬರಕ್ಕನ ತಿರುಗಿ ನೋಡಿದ್ರೆ ಒಂದು ಗಿಡದ ಮರೀಗೆ-

ಹಿ : ಅಡಗಿಕೊಂತಾಳೆ!

ಕ : ಎರಡು ಹರ್ದಾರಿ ಹೋದ್ರು – ಅರಣ್ಯದೊಳಗ! ಹುಲಿ ಸುದ್ದಿ ಇಲ್ಲ!

ಹಿ : ಬಾಳಭಿಕ್ಷುಕ ಕೇಳ್ತಾನೆ-

ಕ : ಗೆಳೆಯರೇ ಹುಲಿ ಐತಿ ಅಂದ್ರೆಲ್ಲಾ – ಯಾವ ಗುಡ್ಡದಾಗ ಐತೀ? ಎಲ್ಲೈತಿ ತೋರಿಸ್ರಿ ಸಂಹಾರ ಮಾಡ್ತೀನಿ.

ಹಿ : ಎಲೈ ಬಾಳಭಿಕ್ಷುಕಾ ಎಲ್ಲೈತಿ ಹುಲಿ!

ಕ : ನೀನೆ ಹುಲಿ, ಲುಚ್ಚಾ ಲೌಡಿ ಮಗನೇ! ಪರಸ್ತ್ರೀಯರಿಗೆ ನಮ್ಮ ಊರಲ್ಲಿ ಮನಸಿಟ್ಟು-

ಹಿ : ಮನಸಿಟ್ಟು-

ಕ : ಇಲ್ಲದ ಕುಚ್ಯಾಷ್ಟಿ ಮಾಡ್ಕೊಂತಾ ಹೋಗ್ತೀಯಾ?-

ಹಿ : ಅದೂ ಪತಿವ್ರತಾ ಹೆಣ್ಣು ಮಕ್ಕಳಿಗೆ!

ಕ : ಎಲೈ ನೀನೇ ಹುಲಿ; ನಮ್ಮ ಕೈಯೊಳಗ ಬಿಡ್ಸಿಕೊಂಡು ಉಳದ್ರೆ! ಬಿಚ್ಚುಗತ್ತಿ ತೊಗೊಂಡು ನಿನ್ನ ಕಡಿಯಾಕ ಬಂದೀವಿ-

ಹಿ : ಅಂದ್ರು ಇಬ್ಬರೂ ಜೀವದ ಗೆಳೆಯರು.

ಕ : ಎಂಥಾ ಮಾತು ಹೇಳ್ತೀರಿ ಜೀವದ ಗೆಳೆಯರಾ! ನಿಮ್ಮಿಂದನs ನಾನು ಓದು ಬರಹ ಕಲ್ತೆ-

ಹಿ : ಗರಡೀ ವಿದ್ಯೆ ಕಲ್ತೆ!

ಕ : ಇಡೀ ನಿಮ್ಮ ಪಟ್ಣದಲ್ಲಿ ಯಾವ ಸ್ತ್ರೀನೂ ನಾನು ಈ ತಂಕ ಕಣ್ಣೆತ್ತಿ ನೋಡಿಲ್ಲ; ಈ ಮಾತು ನಿಜ-

ಹಿ : ಸತ್ಯ!

ಕ : ಹಂಗಾದ್ರೆ ಇಲ್ಲಿ ಕೇಳು-ನೀನು ತಲಿಬಾಗಿ ನಿಂತ್ಕೊ; ಈ ಬಿಚ್ಚುಗತ್ತೀಲೆ ನಿನ್ನ ಶಿರಕ್ಕೆ ಹೊಡೀತೇವಿ. ನೀನು ಪಾರಾಗಿ ಉಳಿದ್ರ-

ಹಿ : ನೀನು ಸತ್ಯವಂತ.

ಕ : ಸತ್ಯವೇ ಜಯ. ಆಗಲೆಪ್ಪ ಕೊಲ್ಬೇಕು ಅಂತ ಬಂದೀರಿ! ಅಂದಬಳಿಕ ಶಿರಬಾಗ್ತೀನಿ ಕೊಲ್ರಿ.

ಹಿ : ಬಾಳಭಿಕ್ಷುಕ ಶಿರಬಾಗಿ ನಿಂತ-

ಕ : ಪದ್ಮಾವತಿ ಗಿಡದ ಮರಿಗೆ ನಿಂತ್ಕೊಂಡು ತನ್ನ ಗಂಡನ ಶಿರಾ ಕಡಿತಾರ ಅಂತ ಅಂಬಿಲಿಸ್ತಾಳೆ (ರಾಗವಾಗಿ) ಅಗಲಿದ್ಯಾ ಪತಿದೇವಾ …ಗಂಡನ ತೊಟ್ಲ ತಲಿ ಮ್ಯಾಲೆ ಹೊತ್ಕೊಂಡು ವನವಾಸ ತಿರಿಗಿದ್ನೆ ಯಪ್ಪಾ………ನನಗಂಡಗೆ ಆತನ ಗೆಳಿಯರೇ ಕೊಲ್ಲಾಕ ನಿಂತಾರಲ್ಲಾ …ನನ್ನ ಮದ್ವೀರಾಜ ಹೋದ ಮ್ಯಾಲೆ ನಾ ರಂಡಿಯಾಗ್ತೀನಿ….ಪರಮಾತ್ಮಾ ಪಾರು ಮಾಡೋ….ಭಗವಂತ ಪಾರ್ಮೋಡೋ.. ಅಂಬಾಭವಾನೀ ಪಾರ್ಮಾಡೋ …. ಅಂತ್ಹೇಳಿ ದೇವರ ಧ್ಯಾನ ಮಾಡ್ತಾಳೆ.

ಹಿ : ಆಹಾ….

ಕ : ಐರಾಮ, ಶಿವಗಣ್ಯ ಬಿಚ್ಚುಗತ್ತಿ ಎತ್ತಿ ಹಾಕಿದ್ರು; ಬಾಳಭಿಕ್ಷುಕನ ಒಂದು ರೋಮ ಹರಿಲಿಲ್ಲ!

ಹಿ : ಸತ್ಯ!

ಕ : ಅಲೇಲೇ ಏನೋ ಮಾಟಾ ಮಾಡ್ಯಾನೋ ಇವನು!

ಹಿ : ಹೌದು ಮಾಟ!

ಕ : ಮಾಟಿಲ್ಲ ನನ್ನ ಹತ್ರ ; ಸತ್ಯದ ಮುಂದೆ ಮಾಟ, ಮಂತ್ರ ನಾಟೋದಿಲ್ಲ. ಇನ್ನೊಮ್ಮೆ ಕಡೀರಿ ಗೆಳೆಯರ್ಯಾ-

ಹಿ : ಕಡೀರಿ!

ಕ : ಇನ್ನೊಮ್ಮೆ ಬಿಚ್ಚುಗತ್ತಿ ಎತ್ತಿ ಹಾಕಿದ ತಕ್ಷಣ ಜೋಳದ ರವದಿಯಗಿತ್ತು ಅದು!

ಹಿ : ಸಾಯಲಿಲ್ಲ ಬಾಳಭಿಕ್ಷುಕಾ!

ಕ : ಗೆಳೆಯಾ ಬಾಳಭಿಕ್ಷುಕಾ-

ಹಿ : ಏನು ರಾಜಕುಮಾರ?

ಕ : ಕುವಾಟ ಮಾಡಿದ್ವಿ ಅಷ್ಟೇ ಎದ್ದೇಳು.

ಹಿ : ನನಗೆ ಕುವಾಟ ಮಾಡಿದ್ರಿ ಗೆಳೆಯರ್ಯಾ, ಹೌದೇ?

ಕ : ಹೌದು. ಹೌದು.

ಹಿ : ನಾನು ಸ್ವಲ್ಪ-

ಕ : ಕುವಾಟ ಮಾಡ್ತೀನಿ, ಇಬ್ರೂ ಶಿರಬಾಗ್ರಿ.

ಹಿ : ನಿನಿಗೆ ಆದ್ಹಂಗs ನಮಗೂ ಆದೀತು.

ಕ : ಇಬ್ರೂ ಶಿರಾ ಬಾಗಿದ್ರು ; ಬಾಳಭಿಕ್ಷುಕ ಬಿಚ್ಚುಗತ್ತಿ ತೊಗೊಂಡ. “ಕಾಳಿಕಾದೇವೀ ಇವರಲ್ಲಿ ಧರ್ಮ ಇದ್ದಲ್ಲಿ ಪಾರು ಮಾಡು, ಕರ್ಮ ಇದ್ರ ಎರಡು ತುಂಡು ಮಾಡು”-

ಹಿ : ಅಂತ ಅಂದು-

ಕ : ಬಿಚ್ಚುಗತ್ತಿ ಎತ್ತಿಹಾಕಿದ ತಕ್ಷಣಕ್ಕs ಇಬ್ರೂ ಎರಡು ತಂಡಾದ್ರು. ಐರಾಮ ಶಿವಗಣ್ಯ ಸತ್ತದ್ದನ್ನು ಕಂಡು ಬಾಳಭಿಕ್ಷುಕ ಹಣಿ ಹಣಿ ಬಡಕೊಂತಾನ. “ಅಯ್ಯೋ ಗೆಳಿಯರಾ! ನಿಮ್ಮ ಅನ್ನ ಉಂಡು ನಿಮ್ಮ ನೀರು ಕುಡುದು ಬೆಳದ ನಾನು ನಿಮ್ಮನ್ನು ತುಂಡರಿಸಿ ಕಡಿದ್ನೆಲ್ಲೋ….ಮಾತಾಡ್ರೀ ಗೆಳೇರಾ….ಬಿಟ್ಟು ಹೊದ್ರ್ಯಾ ಗೆಳೇರಾ!” ಅಂತ ಹಂಬಲಿಸ್ತಾ ಬಾಳಭಿಕ್ಷುಕ ಮುಂದೆ ವನವಾಸದ ಹಾದಿ ಹಿಡೀತಾನ

ಹಿ : ಆಹಾ ವನವಾಸದ ಹಾದಿ ಹಿಡೀತಾನ.

ಕ : ಗಿಡದ ಮರೀಗೆ ನಿಂತುಗೊಂಡು ಪದ್ಮಾವತಿ ತನ್ನ ಗಂಡ ಪಾರಾದದ್ದನೆಲ್ಲಾ ನೋಡಿದ್ಲು; ಹಿಗ್ಗಿದ್ಲು. ಆನಂದದಿಂದ “ಪತೀ ಪತೀ ನಿಂದ್ರೂ ನಿಂದ್ರೂ ಬಂದೆ, ನಿನ್ನ ಮಡದಿ ಬಂದೆ” ಅಂತ ಕೂಗತಾಳ-

ಹಿ : ಗಟ್ಟಿ ಕೂಗುತಾಳ!

ಕ : ಬಾಳಭಿಕ್ಷುಕ – ಈ ಸ್ತ್ರೀ ಕೂಗು ಕೇಳಿ ಗಕ್ಕನ ನಿಂತು ಕೇಳತಾನ – “ಯಾರು?”

ಹಿ : ಕೂಗೋರು ಯಾರು?

ಕ : “ನಾನು ನಿಮ್ಮ ಮಡದಿ” ಅಂತಾಳ , “ನೀವು ನನ್ನ ಪತಿ” ಅಂತಾಳ.

ಹಿ : ಇದೇನು! ಮಡದಿ ಅಂತಾಳ, ಪತೀ ಅಂತಾಳ! ಯಾರಿರಬಹುದು!

ಕ : ಹಿಂದಕ್ಕ ತಿರುಗಿ ನೋಡ್ತಾನೆ – ಸೂರ್ಯ ಚಂದ್ರಾಮರಂತೆ ಥಳಥಳ ಹೊಳಿಯೋ ಸ್ತ್ರೀಯಳು!

|| ಪದ ||

ಆಹಾ! ನೀನ್ಯಾರೇ ಹಡದವ್ವಾ….ಹರಯನ್ನ ಮಾದೇವಾ
ನೀನ್ಯಾರೇ ತಾಯವ್ವಾ….ಹರಯನ್ನ ಮಾದೇವಾ
ಎಲ್ಲಿಂದ ಬಂದೀಯವ್ವಾ….ಹರಯನ್ನ ಮಾದೇವಾ
ನಿನ್ನ ಊರುಉದ್ಮಾನ ಯಾವುದs ….ಹರಯನ್ನ ಮಾದೇವಾ.

ಕ : ಯಾರಮ್ಮಾ ನೀನು ಎಲ್ಲಿಂದ ಬಂದೆಮ್ಮತಾಯಿ?

ಹಿ : ಯಾರನ್ನ ಕೂಗಿ ಕರೀತಿಯಮ್ಮಾ?

ಕ : ರಾಜಾ ನಿನ್ನ ಮಡದಿ ನಾನು, ಪದ್ಮಾವತಿ, ಇದೋ ಈ ಮಾಂಗಲ್ಯ ನಿನ್ನ ಕೈಮುಟ್ಟಿ ಕಟ್ಟಿದ್ದು ; ನೀವು ಹನ್ನೆಳ್ಡು ದಿವಸದ ಕೂಸಿದ್ದಾಗ ನಿಮ್ಮ ತಂದಿ – ತಾಯಿ, ನಿಮ್ಮ ಮಂತ್ರಿ ನನಗ ಮಾಂಗಲ್ಯ ಮಾಡಿ, ಅಡಿವ್ಯಾಗ ಇಬ್ಬರ್ನೂ ಬಿಟ್ಟು ಹೋಗಿದ್ರು! ನಿನ್ನ ತೊಟ್ಲಾ ಹೊತ್ಕೊಂಡು ವನವಾಸ ಪಡದು ಬಂದು ಇವತ್ತು ಸತಿಪತಿ ಆಗಿ ಕಲ್ತೀವಿ!

ಹಿ : ಇದೇನಮ್ಮ ತಾಯಿ ನೀವನ್ನೋದು!

ಕ : ನಿನ್ನ ಮಡದಿ ನಾನು; ಅಮ್ಮ ಅನ್ನಬ್ಯಾಡ, ತಾಯೀ ಅನ್ನ ಬ್ಯಾಡ, ಅಕ್ಕ ಅನ್ನ ಬ್ಯಾಡ, ಜನನೀ ಅನ್ನ ಬ್ಯಾಡ!

ಹಿ : ನಿನ್ನ ಮಡದಿ ನಾನು!

ಕ : ನಿನ್ನ ಈ ಮಾತೆಲ್ಲಾ ನನಗ ಅರ್ಥ ಆತು ಬಿಡಮ್ಮ. ನನ್ನ ರೂಪ, ನನ್ನ ಲಾವಣ್ಯ, ನನ್ನ ಚಲುವಿಕೆ ನೋಡಿ ಈ ಮಾತಾಡಾಕ ಬಂದೀಯೇನು? ಹೋಗಮ್ಮಾಹೋಗು, ನೀನು ಯಾರೋ ಏನೋ ನನಗ್ಗೊತ್ತಿಲ್ಲ.

ಹಿ : ಪತೀ….ರಾಜಾ….ಸಾವಚಿತ್ತ ಮಾರಾಜನ ಮಗ ನೀನು; ಭದ್ರಾವತಿ ಪಟ್ಣದ ಭದ್ರಶೇಕ ರಾಜನ ಮಗಳು ನಾನು – ನಿನ್ನ ಮಡದೀ-

ಕ : “ಅದೆಲ್ಲಾ ನನಗ ಗೊತ್ತಿಲ್ಲಮ್ಮಾ. ನನ್ಹಿಂದೆ ಬರಬ್ಯಾಡ ನಡಿ, ಊರಿಗೆ ಹೋಗು”. ಅಂತಾ ಅಂದು ಮುಂದಕ ನಡದ.

ಹಿ : ನಡೆದೇ ಬಿಟ್ಟ.

ಕ : ಪದ್ಮಾವತಿ ಬೆನ್ನು ಹತ್ತಿ ಬಿಟ್ಲು. ಎರಡು ಮೈಲು ದೂರ ಬರಬೇಕಾರ, ಅಲ್ಲಿ ಯಾರು ಕುಂತಾರ?

ಹಿ : ಡೊರೋಸೇನ್ ಮಾರಾಜ!

ಕ : ಆ ಡೊರೋಸೇನ್ ಮಹಾರಾಜ ಬ್ಯಾಟಿ ಆಡಾಕ ಬಂದು ಆಲದ ಮರದ ಕೆಳಗ ಕುಂತಾನ – ತನ್ನ ದಂಡಿಗೆ ಕರಕೊಂಡು;

ಹಿ : ವಿಶ್ರಾಂತಿ!

ಕ : ಡೊರೋಸೇನ್ ಮಹಾರಾಜ, ಆತನ ಮಂತ್ರಿ ನೋಡ್ತಾರೆ-

ಹಿ : ಅವರಿಬ್ಬರೂ ಗಂಡಾ ಹೆಂಡ್ತಿ ಹೋಗೋದ್ನ!

ಕ : ಏ ತಮ್ಮಾ

ಹಿ : ಏನು ಸ್ವಾಮಿ?

ಕ : ನಿಂದ್ರು ; ಹಿಂದೆ ಬರ್ತಾಳಲ್ಲ – ಯಾರು ಆ ಯಮ್ಮ?

ಹಿ : ಆ ತಾಯಿ?

ಕ : ಯಾರದಾಳೋ ಏನ್ರಿ ನನಗ ಗೊತ್ತಿಲ್ಲ; ನನಿಗೆ ಸಂಬಂಧಿಲ್ಲ.

ಹಿ : ಹಂಗಾದ್ರೆ ನೀನು ನಡೀ-

ಕ : ಅಂದ ಮಂತ್ರಿ. ಆ ರಾಜ ಅಂತಾನೆ – ಏ ಸ್ತ್ರೀಯಳೇ ನಿಂದ್ರು;

ಹಿ : ನಿಂದ್ರು.

ಕ : ಅಪ್ಪಾ, ಅಣ್ಣಾ, ನನಪತಿ ಹೋಗ್ತಾನ. ಆತನ ಹೆಂಡ್ತಿ ನಾನು, – ಪದ್ಮಾವತಿ

ಹಿ : ಆಹಾ!

ಕ : ಅಲ್ಲೇ ಸ್ತ್ರೀಯಳೇ, ಅವನಿಗೇ ನಾವು ಕೇಳಿದ್ರ ಅಮ್ಮ ತಾಯಿ ಅಂತ ಹೇಳ್ಯಾನ!-

ಹಿ : ಹೌದು ಹೇಳಿದ.

ಕ : ಅವನಿಗೆ ಗಂಡಾ ಅಂತೀಯೇನು ನೀನು? ವನವಾಸಿಗೆ ಲಗ್ನ ಆಗ್ತೀಯೇನು? ಅವನು ಬ್ಯಾಡ ; ನಾನು ಲಗ್ನ ಆಗ್ತೀನಿ – ಬಾ ನನ್ನೂರಿಗೆ.

ಹಿ : ಹೂಂ ಬಾ.

ಕ : ಸ್ವಾಮೀ, ಇಂಥಾ ಮಾತು ಹೇಳಬ್ಯಾಡ್ರಿ, ಕೈ ಬಿಡ್ರಿ ನನ್ನ ಹೋಗ್ತೇನಿ. ಮಹಾರಾಜಾ, ಬಾಳಭಿಕ್ಷುಕ ರಾಜಾ, ಇವರ ಕೈಯಾಗ ನನ್ನ ಕೊಟ್ಟು ಹೋಗ್ತೀಯಾ ಈ ನಿನ್ನ ಮಡದೀಗೆ? ಬ್ಯಾಡಾ, ಬಿಟ್ಟು ಹೋಗಬ್ಯಾಡಾ ರಾಜಾ, ನಿನ್ನ ಮುತ್ತಿನ ತೊಟ್ಲಾ ತೆಲೀ ಮ್ಯಾಲೆ ಹೊತಗೊಂಡು ವನವಾಸ ಪಡದು ಬಂದೀನಿ; ಈ ಅರಣ್ಯದೊಳಗ ಬ್ಯಾರೇರ ಕೈಯಾಗ ಕೊಟ್ಟು ಹೋಗ್ತೀಯಾ-

ಹಿ : ಗಂಡಗ ಬೇಡಿಕೊಂತಾಳ!

ಕ : ಗಂಡ ಅಂತಾನ -ಹೋಗಮ್ಮಾ ಹೋಗು; ಸುಖವಾಗಿರು ಆತನ್ನ ಲಗ್ನಾಗಿ, ನನ್ಹಿಂದೆ ಬಂದು ಏನು ಉಣತಿ-

ಹಿ : ಸುಖ!

ಕ : ಸತಿ – ಪತಿ ಮುಂದೆ ಹೋಗ್ತಿದ್ದಾಗ ಗಿಡಮರ ಪೆಳಿ ಹಾದಿ ತಪ್ಸಿ ಅಗಲಿಸೋ ಸಮಯದಲ್ಲಿ ಪದ್ಮಾವತಿಗೆ ಒಳ್ಳೇ ಸಿಟ್ಟು ಬಂತು!

ಹಿ : ಕೋಪ!

ಕ : ಎಲೋ ನಿಂದ್ರು ಬಾಳಭಿಕ್ಷುಕಾ.

ಹಿ : ಆಹಾ

ಕ : ನೀನು ವೀರಾಧಿವೀರ ಶೂರ, ಗಂಭೀರ ಆಗಿದ್ರೆ ಹಿಂದಕ್ಕ ತಿರುಗಿ ಬಂದು ನನ್ನ ಸೆರೀ ಬಿಡಿಸ್ತೀ ಹೆಂಗ್ಸು ಹೆಣ್ಣು ಮಗಳಾಗಿದ್ರೆ ಮುಕಳಾಗ ಬಾಲಾ ಇಟಗೊಂಡು ಹೊಕ್ಕೀ ನಡೀ-

ಹಿ : ಅಂತ ಕೂಗಿ ಹೇಳಿಬಿಟ್ಟು – ಪದ್ಮಾವತಿ!

ಕ : ಪರಾಕ್ರಮಿ ಆದ್ರ ಯುದ್ಧ ಮಾಡ್ತೀ, ಹೆಂಗ್ಸು ಹೆಣ್ಣು ಮಗಳಾದ್ರೆ ಮುಂದಕ್ಕ ಹೊಕ್ಕೀ ಅಂತ – ಹಿಂಗ ಅಂದ ಮಾತು ಕೇಳಿದ ತಕ್ಷಣ ಗಡಕ್ಕನs ಬಾಳಭಿಕ್ಷುಕ ತಿರುಗಿಬಿಟ್ಟ.

ಹಿ : ಆಹಾ!

ಕ : ಈ ಶಬ್ದ ಕೇಳಿದ ನಂತರ ಮುಂದಕ್ಕ ಹೆಂಗ ಹೋಗ್ಲಿ! ಎಂಥ ಮಾತು ಹೇಳಿ ಬಿಟ್ಳಲ್ಲ ಈ ಹೆಣ್ಣು ಮಗಳು-

ಹಿ : ಈ ಸ್ತ್ರೀಯಳು!

ಕ : ರಾಜಕುಮಾರ ವಾಪಾಸು ಬಂದ.

ಹಿ : ಬಂದು ಏನಂತಾನ?

ಕ : ಎಲೈ ಯಾರಲ್ಲಿ? ಯಾರವ್ರು? ಸುಮ್ಮಗ ಬಿಡ್ರಿ (ರಾಗವಾಗಿ) ನನ್ನ ಮಡದಿಗೆ ದಾರೀ….

ಹಿ : ಮದ್ಲು ಅಮ್ಮಾ ಅಮ್ಮ ಅಂದಿ; ತಾಯೀ ತಾಯೀ ಅಂದಿ; ಈಗ ಮಡದಿ ಅಂತೀಯಾ? ನಿಂದ್ರು ಯುದ್ಧಕ್ಕೆ….

ಕ : ಆಗಲಿ.

ಕ : ಯುದ್ಧ ಚಾಲೂ ಆಯ್ತು ; ಬಾಳಭಿಕ್ಷುಕರಾಜ ಸಾವಿರ ಮಂದಿ ಕೊಂದ-

ಹಿ : ಸಂಹಾರ ಮಾಡಿದ ಲಡಾಯದಲ್ಲಿ.

ಕ : ಡೋರೋಸೇನರಾಜ ಸೋತು ಹೋದ. “ಶರಣು. ಈಕಿ ನಿನ್ನ ಮಡದಿ; ನಮಗೆ ತಾಯಿ,” ಅಂತ ಹೇಳಿ (ರಾಗವಾಗಿ) ಓಡ್ತಾನೆ – ಊರಿಗೆ.

ಹಿ : ಹೌದೂ.

ಕ : ಲಡಾಯಿ ಮಾಡಿದ ರಾಜಕುಮಾರಗೆ ಪದ್ಮಾವತಿ ಬಂದು ಅಂತಾಳೆ – ಮಹಾರಾಜಾ ನಿನ್ನ ಮಡದಿ ನಾನು-

ಹಿ : ನಿನ್ನ ಪತ್ನಿ ನಾನು.

ಕ : ಯವ್ವಾ ಇನ್ನಾದ್ರು ಹೋಗಮ್ಮ ಹೋಗು! ನಾನು ನಿನಗೆ ತಾಯೀ ಅಂದ್ರೂ ನನ್ನ ಹಿಂದೆ ಬಂದು ಇಷ್ಟು ಮಂದೀ ಕೊಲಿ ಮಾಡಿಸಿದಿ. ನಿನ್ನ ಕಾಲಾಗ ನನಗೆ ಎಷ್ಟೊಂದು ಪಾಪ ಬಂತಲ್ಲಮ್ಮಾ!

ಹಿ : ಏಳು ಕೋಟಿ ಪಾಪ!

ಕ : ಅಂತ್ಹೇಳಿ (ರಾಗವಾಗಿ) ಮುಂದಕ ನಡುದಾನಾ, ……..ರಾಜಾ ಮುಂದಕ ನಡುದಾನಾ…ಮತ್ತೆ ಬೆನ್ನು ಹತ್ತಿ ಬಿಟ್ಲು-

ಹಿ : ಪದ್ಮಾವತೀ!

ಕ : “ರಾಜಾ….ರಾಜಾ” ಅಂತ್ಹೇಳಿ ಹೋಗಬೇಕಾದ್ರೆ, ವೃಕ್ಷಾಳಿ ಮರದ ಕೆಳಗೆ ಗಾರ ಗಚ್ಚಿನ ಬಾವಿ-

ಹಿ : ಬಾವಿ.

ಕ : ಬಾವೀ ದಂಡಿಗೆ ಒಬ್ಬ ಪಕ್ಕಕಳ್ಳ ಕುಂತಾನ ಅಲ್ಲಿ-

ಹಿ : ಆ ವೃಕ್ಷಾಳಿ ಮರದ ಕೆಳಗೇ ಕುಂತಾನ!

ಕ : ನೋಡಿದ – ರಾಜಾಧಿರಾಜನ ಉಡುಗೊರೆ ತೊಡುಗರೆ ವಸ್ತಾ – ವಡವಿ.

ಹಿ : ಎಲೋ ರಾಜಾಧಿರಾಜಾ ನಿಂದ್ರು-

ಕ : ನಿಂದ್ರು ; ಕಲ್ಲಿನ ಗವಿಯೊಳಗಿಂದ ನಾನು ಪಕ್ಕಾಕಳ್ಳ ಬಂದು ಬೆಳಗಿನಿಂದಾ ದಾರೀ ಕಾಯ್ತಾ ಇದ್ದೀನಿ. ನಿನ್ನ ವಡವಿ- ವಸ್ತಾ ಪೋಷಾಕು ಎಲ್ಲಾ ಬಿಟ್ಟುಕೊಡು;

ಹಿ : ಹೂಂ ಬಿಚ್ಚಿಕೊಡು.

ಕ : ಇಲ್ಲಾ ಅಂದ್ರ ಈ ಜಾಲಿ ಕೊಳ್ಡು ಎತ್ತಿ ನಿನ್ನ ತಲಿಬುಳ್ಡಿ ಹೊಡದೇನು.

ಹಿ : ಎಲೈ ಕಳ್ಳಾ-

ಕ : ಈ ಆಭರಣ ತಗೊಂಡು ಏನು ಮಾಡ್ತೀ? ಹಿಂದಕ್ಕ ತಿರುಗಿ ನೋಡು, ಎಂಥಾ ವಸ್ತು ಬರತೈತಿ! (ರಾಗವಾಗಿ) ನಿನ್ನ ಗವಿಯೊಳಗ ಕರಕೊಂಡು ಹೋಗೋ ಕಳ್ಳಾsss….

ಹಿ : ಹೌದು!

ಕ : ಮಹಾರಾಜಗ ಮುಂದೆ ಹೋಗಾಕ ಬಿಟ್ಟನಪಾ-

ಹಿ : ಪಕ್ಕಾಕಳ್ಳ!

ಕ : ಅಗೋ ಬಂದ್ಲು ಹೆಣ್ಣು! ಆ ರಾಜನ ವಡವೀ ವಸ್ತಾ ತಗೊಂಡು ಏನು ಮಾಡ ಬೇಕು?-

ಹಿ : ಈಕೇ ಖರೇ ವಸ್ತಾ!

ಕ : ಕಳ್ಳ ಕರೀತಾನೆ – “ಬಾರೇ ಮಡದೀ ಗವಿಗೆ ಹೋಗೋನು.”

ಹಿ : ಆಹಾ!

ಕ : ಆಗ ಪದ್ಮಾವತಿ ಅಂತಾಳೆ – ರಾಜಾ….ಪತಿರಾಜಾ, ನಿನ್ನ ಮಡದಿಗೆ ಈ ಕಳ್ಳನ ಕೈಯಾಗ ಕೊಟ್ಟು ಹೋಗ್ತೀಯಾ!-

ಹಿ : ಅಯ್ಯೊ! ನನರಾಜಾ!

ಕ : “ನನ್ನ ಹಿಂದೆ ಬರಬ್ಯಾಡಮ್ಮಾ ಹೋಗು, ನಿನ್ನ ಜ್ವಾಪಾನ ಮಾಡ್ತಾನ ಈ ಕಳ್ಳ ಚಂದಾಗಿ, ಇಬ್ರೂ ಗಂಡ ಹೆಂಡ್ತಿ ಆಗಿ ಇರ್ರಿ” ಅಂದ ಬಾಳಭಿಕ್ಷುಕ.

ಹಿ : ಅದಕ್ಕೇನಂತಾಳೆ ಪದ್ಮಾವತಿ?-