ಕ : ಹೌದು, ವನವಾಸಿಗಳಾಗಿ ಇಲ್ಲಿ ಬಂದು ಉಳ್ಕೊಂಡ ವ್ಯಾಳ್ಯಾದಲ್ಲಿ ಯಾವುದೋ ಹುಲಿ, ಕಾಡುಮೃಗ ತೊಗೊಂಡ್ಹೋಗೇತಿ- ನನ್ನ ಪತಿಗೆ! (ರಾಗವಾಗಿ) ನನ್ನ ಪತೀ…. ನನ್ನ ಅಗಲಿದಾs….
ಹಿ : ಭೂಮಿ- ಕೆರಿ ಜೋಡು, ಮರಗಿಡ ಜೋಡು;
ಕ : ಕಟ್ಟಿಕಲ್ಲು ಕಟ್ಟಿಗೆ ಹೊಂದಿಸ್ಬೇಕು ನೋಡು.
ಹಿ : ಹೌದು.
ಕ : ನಾನು ದತ್ತು ಮಗನ್ನ ಮಾಡ್ಕೋಬೇಕಂದ; ಕೂಸು ಈ ಯಮ್ಮಂದಿರಬಹುದೇ!-
ಹಿ : ಕೇಳಿ ನೋಡೋನು.
ಕ : “ಅಮ್ಮಾ, ಈ ರತ್ನದಂಥ ಕೂಸು ನೋಡಮ್ಮಾ- ಇದು ನಿನ್ನ ಗಂಡ ಹೌದೇನು?” – ಅಂತ ತನ್ನ ಶಲ್ಯದಾಗಿರುವಂಥ ಕೂಸಿಗೆ ತೋರ್ಸಿದಾ.
ಹಿ : ಆಹಾ!
ಕ : ಸಾಗರ ಬಿದ್ದು ನೋಡ್ತಾಳೆ,- ಪತಿ ಬಾಳಭಿಕ್ಷುಕ!
ಹಿ : ಹೌದು!
ಕ : ಎಲ್ಲೆಪ್ಪಾ ನನಗಂಡ ಅಗಲಿಹೋಗಿದ್ದಾ! ನನ್ನ ಬಾಸಿಂಗ ಜೋಡಿ ಬಾಳಭಿಕ್ಷುಕಾ! – ಅಂತ್ಹೇಳಿ ತನ್ನ ಗಂಡನ ಎರಡೂ ಪಾದಕ್ಕೆ ಹಣಿ ಹಚ್ಚಿ ನಮಸ್ಕಾರ ಮಾಡ್ತಾಳೆ.
ಹಿ : ಅಳಬೇಡಮ್ಮಾ ನಿನ್ನ ಪತಿವ್ರತಾ ಧರ್ಮಕ್ಕೆ ವಂದನೆಗಳು ಅಂದ.
ಕ : ಹುಲಿ ಕೂಸು ಒಯ್ಯದದ್ದು, ತಾನೂ ಅದನ್ನೂ ಅದರ ಮಕ್ಕಳನ್ನೂ ಕೊಂದದ್ದು ಎಲ್ಲಾ ಹೇಳಿದಾ-
ಹಿ : ಪದ್ಮಾವತಿ ತಾಯಿಗೆ!
ಕ : ಅಪ್ಪಯ್ಯಾ ಸತಿ- ಪತಿಗೆ ಕಲಿಸಿದ ಪರಮಾತ್ಮನೇ ನೀನು. ನಿನ್ನ ಊರಿಗೆ ಬರ್ತೀನಿ-
|| ಪದ ||
ಕರ್ಕೊಂಡು ಹೋಗ್ತೀಯೇನೋ ಅಣ್ಣಾ ನನ್ನ…. ಹರಯನ್ನ ಮಾದೇವ
ಯವ್ವಾ ಬರಬ್ಯಾಡ ನಿನ್ನ ಹಡದವ್ವಾ………ಹರಯನ್ನ ಮಾದೇವ
ನನ್ನ್ಹಿಂದೆ ಬರಬ್ಯಾಡ ಹಡದವ್ವಾ………ಹರಯನ್ನ ಮಾದೇವ
ನಿನ್ನ ಕರ್ಕೊಂಡು ನಾನು ಹೋದರ…….ಹರಯನ್ನ ಮಾದೇವ
ನಿನ್ನಿಂದ ಮರಣ ಬಂದೀತು ಯನಗs…….ಓ ನಮಃ ಶಿವಾಯ
ಕ : ನನ್ನಿಂದೆ ಬರಬ್ಯಾಡಮ್ಮ ; ನಿನ್ನ ಕಡೆಯಿಂದ ನನಗ ಮರಣ ಆದೀತು.
ಹಿ : ಯಾವ ಕಾರಣಕ್ಕಪ್ಪ ?
ಕ : ಯಾಕಂದ್ರ ನಮ್ಮ ರತನಭೋಗ ಮಹಾರಾಜ ಮಹಾಶೂರ, ರಸಿಕ ಪಂಡಿತ! ನಾನು ನೀನು ಬಜಾರ್ದಾಗ ಹೋಗ್ತೀವಿ-
ಹಿ : ಹೌದು.
ಕ : ನಮ್ಮ ರಾಜ ನೋಡ್ತಾನೆ; ಈ ಬ್ಯಾಡ್ರ ಕಣ್ಣಯ್ಯ ಬ್ಯಾಟಿ ಆಡಾಕ್ಹೋಗಿ ಅಡಿವ್ಯಾಗ ಹೆಣ್ಣು ತಂದ ಅಂತ್ಹೇಳಿ-
ಹಿ : ಆಹಾ,
ಕ : ನನ್ನ ಮದ್ಲು ತುಪಾಕಿ ಬಾಯಿಗೆ ಕೊಟ್ಟು ಸುಟ್ಟು ಬೂದಿ ಮಾಡಿ (ರಾಗವಾಗಿ) ನಿನ್ನ ಲಗ್ನ ಅಕ್ಕಾನೇ ಯವ್ವಾs….ನನ್ನ ಹಿಂದೆ ಬರಬ್ಯಾಡ ತಾಯಿ….
ಹಿ : ಅಣ್ಣಾ, ನನ್ನ ಊರೊಳಗ ಕರ್ಕೊಂಡು ಹೋಗಬ್ಯಾಡ; ಊರ ಸಮೀಪದಾಗs ನನ್ನ ಬಿಟ್ಟು ನೀನು ನಿನ್ನ ಮನಿಗೆ ಹೋಗು. ನನ್ನ ಹಣೇ ಬಾರ ತಪ್ಸೋದು ಯಾರಿಗೆ ಸಾಧ್ಯ!
ಕ : “ಹಂಗಾದರೆ ಬಾರಮ್ಮ ಹೋಗೋನು” ಅಂದ ಕಣ್ಣಪ್ಪ.
ಹಿ : ಊರ ಹಾದಿ ಹಿಡದ್ರು.
ಕ : ಊರ ಹತ್ರ ವನಂತ್ರ ; ಅಲ್ಲೊಂದು ಹೊಕ್ಕು ತುಂಬೋ ಬಾವಿ. ಆಯಮ್ಮನ್ನ ಬಾವಿಹತ್ರ ಕುಂದ್ರಿಸಿದ ತನ್ನ ಮನಿಗೆ ಹೋದ-ಬ್ಯಾಟಿಗಾರ.
ಹಿ : ಹೌದು.
ಕ : ಆ ವನಂತರ ಬಾವಿಗೆ ಊರಾಗಿನ ಜನ ಎಲ್ಲಾ ನೀರಿಗೆ ಬರ್ತಾರೆ; ಹೆಣ್ಣು ಮಕ್ಕಳು, ಗಂಡು ಮಕ್ಕಳು….!
ಹಿ : ಯಾರು ಈ ಹೆಣ್ಣು ಮಗಳು! ಮಕದ ಮ್ಯಾಲೆ ರಾಜಕಳಿ ಐತಿ; ಆಕಿ ಮುಂದೆ ತೊಟ್ಲಾಗ ಇರೋ ಕೂಸು ತಳತಳ ಹೊಳಿತೈತಿ! ಎಲ್ಲರೂ ಮಾತಾಡ್ಸಿ ನೋಡ್ತಾರೆ-
ಕ : ಯಾರಮ್ಮಾ ನೀನು ಓ ತಾಯಿ?
ಹಿ : ಒಬ್ರು ಕೂಡಾನೂ ಮಾತಾಡ್ವಲ್ಲೂ ಪದ್ಮಾವತಿ – ಯಾಕ?
ಕ : ಕಂಡೋರ ಕೂಡ ಮಾತಾಡಿದ್ರೆ ತನ್ನ ಪತಿವ್ರತ ಕೆಟ್ಟು ಹೋದೀತು ಅಂತ ಇರಬಹುದೇ!
ಹಿ : ಮುಪ್ಪಾನ ಮುದುಕರ ಕೂಡ ಮಾತಾಡಸ್ಬೇಕು.
ಕ : ಜನ ಮಾತಾಡ್ಕೊಂಡ್ರು. ಆ ಊರಾಗ ಪಲ್ಯದ ಸಂಗವ್ವ ಅಂತಾ ಐದಾಳೆ- ಅರವತ್ತುವರ್ಷದ ಮುದುಕಿ, ಯಜಮಾನಿ, ಮಹಾನ್ ಹುಲಿ ಆಕೆ! ಆಲಿಸೊಪ್ಪಿನ ಪಲ್ಯ ಮಾಡಿ ಊರಾಗ ಮಾರಾಟ ಮಾಡ್ತಾಳ್ರೀ!-
ಹಿ : ಆ ಸಂಗಮ್ಮ!
ಕ : ಹೇ ತಾಯೀ ಸಂಗಮ್ಮಾ-
ಹಿ : ಏನ್ರಪ್ಪಾ ? ಏನ್ರಮ್ಮಾ ?
ಕ : ಯಾವುರಾಕ್ಯೋ ಏನೋ, ಒಬ್ಬ ಹೆಣಮಗಳು ಬಂದು ಬಾವಿ ದಂಡ್ಯಾಗ ಕುಂತಾಳ; ಏನು ವಸ್ತಾ, ಏನು ವಡವಿ, ಏನು ಮುತ್ತು, ಏನು ರತ್ನ….
ಹಿ : ಆಹಾ!
ಕ : ಒಂದು ಕೂಸು ಐತಿ; ಅದನ್ನು ತೊಟ್ಲಾಗ ಇಟ್ಕೊಂಡು ಕುಂತಾಳೆ; ಯಾರು ಮಾತಾಡ್ಸಿದ್ರೂ ಬಾಯಿ ಬಿಡ್ತಾ ಇಲ್ಲ!
ಹಿ : ಹೌದೇ….?
ಕ : ನೀನಾರ ಹೋಗಿ ಮಾತಾಡಸ್ಬಾರದೆ?-
ಹಿ : ಯಜಮಾನ ಮನಿಶಾಳು ನೀನು !
ಕ : ಸಂಗಮ್ಮ ಅಂತಾಳೆ- “ಒಳ್ಳೇದು; ಹಿಂಗೇನು? ಹೋಗಿ ನೋಡ್ತೀನಿ”- ಅಂತ್ಹೇಳಿ ಗಡಗಡ ಬಾವಿದಂಡಿಗೆ ಬರ್ತಾಳೆ.
ಹಿ : ಬಂದ್ಲು.
ಕ : ಆಹಾ ಮಗಳೇ ಯಾರು ನೀನು?
ಹಿ : ನೀನು ಯಾರಮ್ಮಾ?
ಕ : ಮುಸುಗು ತಗದು ಪದ್ಮಾವತಿ ನೋಡ್ತಾಳೆ- ಮುಪ್ಪಾನ ಮುದುಕಿ. ತಾಯಿ ಇದ್ದಾಂಗ. ಈ ಯಮ್ಮನ ಕೂಡ ನಾನು ಮಾತಾಡಿದ್ರೆ ನನ್ನ ಪತಿವ್ರತಾ ಏನೂ ಹಾನಿಯಾಗಲಾರ್ದು.
ಹಿ : ಹೌದು.
ಕ : ಬಾ ತಾಯಿ ಕುಂತ್ಗೋ.
ಹಿ : ಯಾವೂರಮ್ಮ ನಿಂದು? ಯಾರು ನೀನು?
ಕ : ನನಗೆ ಯಾರು ಅಂತ ಕೇಳ್ತೀಯಾ ಅಮ್ಮಾ? ವನವಾಸಿಗಳು ನಾವು.
ಹಿ : ನಿನ್ನ ಹೆಸರು?
ಕ : ಪದ್ಮಾವತಿ ಅಂತ.
ಹಿ : ಆಹಾ!
ಕ : ತಗಳಮ್ಮಾ ಮಗ ಅಳತೈತಿ, ಮಲಿ ಕುಡುಸು.
ಹಿ : ಮಗ ಅಂತ್ಹೇಳ್ಬೇಡಮ್ಮಾ. ಪಾಪಕ್ಕ ತನ್ನ ಗುರಿ ಮಾಡಬ್ಯಾಡ.
ಕ : ಯಾಕಮ್ಮಾ ಹಿಂಗಂತೀ?
ಹಿ : ಇದು ನಿನ್ನ ಹೊಟ್ಟಿಕೂಸಲ್ಲೇನು?
ಕ : ಅಲ್ಲಮ್ಮ, ನನಗೆ ಪತಿಭಾಗದಲ್ಲಿ ಕುಳಿತು ಲಗ್ನ ಆದಂಥ ಪತಿಯಾಗಬೇಕು ಈ ಬಾಳಭಿಕ್ಷುಕ.
ಹಿ : ಅಯ್ಯೋ ಇದೇನಮ್ಮ ಹಿಂಗಂತೀ! ಕೂಸಿಗೆ ನಿನ್ನ ಗಂಡ ಅಂತೀಯಲ್ಲಮ್ಮ! ಮಗಳೇ, ಏನು ಸುಖ ಉಣ್ಬೇಕು ಅಂತ ಹೇಳಿ ಲಗ್ನ ಆದಿ ನೀನು ಇದ್ನ!
ಕ : ಸುಖದ್ದಲ್ಲ ಇದು; ಮೋಸಕೃತ್ಯದಿಂದ ಲಗ್ನ ಮಾಡಿ ಅರಣ್ಯದಲ್ಲಿ ವನವಾಸಕ್ಕೆ ಗುರಿ ಮಾಡಿ ಹೋಗಾರಮ್ಮಾ!
ಹಿ : ಆಹಾ, ಮೋಸಕೃತ್ಯ! ಗಂಡ ಹೆಂಡ್ತೀಗೆ ಅಡಿವ್ಯಾಗ ಬಿಟ್ಟು ಹೋಗ್ಯಾರ!
ಕ : ಪದ್ಮಾವತೀ, ನನ ಮಗ್ಳೇ. ಇಂಥ ಕೂಸಗಂಡನ ತೊಟ್ಲು ತಲಿಮ್ಯಾಲೆ ಹೊತ್ಕೊಂಡು ಎಷ್ಟು ದಿವಸ ಅಂತಾ ವನವಾಸ ಮಾಡ್ತೀ? ಎಲ್ಲಿಗೆ ಅಂತ ಹೋಗ್ತೀ?
ಹಿ : ಯಾರರ ನನ್ನ ಕರ್ಕೊಂಡು ಹೋಗಿ ತಮ್ಮ ಮನಿ ಕೆಲಸಕ್ಕೆ ಹಚ್ಚಿದ್ರ, ಹೇಳಿದ್ದು ಮಾಡ್ಕೊಂಡು ಇರ್ತೀನಿ ತಾಯೀ….
ಕ : ಯಾರ ಮನಿಗೂ ಹೋಗಬ್ಯಾಡ ಮಗಳೇ; ನಾ ಕರ್ಕೊಂಡು ಹೋಗ್ತೀನಿ ಬಾ- ನನ್ನ ಮನಿಗೆ.
ಹಿ : ನಿನ್ನ ಮನಿಗೆ?
ಕ : ಕುಂದ್ರಾಕ ನಿಂದ್ರಾಕ ಮಲಗಾಕ, ನಿನ್ನ ಗಂಡನ ತೊಟ್ಲಕಟ್ಟಾಕ, ಅಡ್ಡಾಡಾಕ ಅನುಕೂಲವಾದ ಮನೀ ಅಂದ್ರ ನನ್ನ ಮನೀನs.
ಹಿ : ಅಮ್ಮಾ ನಿನ್ನ ಮನಿಗೆ ಬರ್ಲೇ?
ಕ : ಸಂಗಮ್ಮ ಏನ್ ಅಂದ್ಕೊಂತಾಳೆ? -ಈಕಿ ಮೈಮ್ಯಾಲೆ ವಡವಿ ವಸ್ತ್ರ, ಮುತ್ತು ರತ್ನ ಜಗ್ಗ ಐತಿ.
ಹಿ : ಹೌದು!
ಕ : ಈಕಿನ ನನ್ನ ಮನಿಗೆ ಕರ್ಕೊಂಡು ಹೋಗಿ ಇವ್ಕೆಲ್ಲಾ (ರಾಗವಾಗಿ) ಚಕ್ರಹಾಕ ಬೇಕಾs ತಾಯೀ…..
ಹಿ : ಹೌದೂ.
ಕ : ಯವ್ವಾ ನಾನು ನಿನ್ನ ಮನಿಗೆ ಬರ್ತೀನಿ, ಆದರೆ ನನ್ನ ಮಾತ ಕೇಳ್ತೀ ಏನು?
ಹಿ : ಮಾತ? ಏನು ಮಾತು?
ಕ : ನನ್ನ ಮೂರು ವಚನ ಕೇಳ್ಬೇಕು.
ಹಿ : ಏನಮ್ಮ ಆ ವಚನ?
|| ಪದ ||
ಹಾತೋ ಮೇ ಝಾಡು ದೇ ಕರ್
ಝಾಡ್ನೆ ನಹೀ ಲಗಾನ
ಪರಪುರುಷರ ಛಾಯ್ ಮೇರೆ ಊಪರ್
ನಹೀ ಫಡಾನ
ಕ : ತಲಿ ಮ್ಯಾಲೆ ಕೊಡ ಹೊತ್ತು ಬಾವಿ ನೀರು ತರಾಕ ಕಳಿಸಬ್ಯಾಡ
ಹಿ : ಒಂದು
ಕ : ಕಸಬರಿಗೀ ಕೊಟ್ಟು ಹೊರ ಅಂಗಳಾ ಉಡುಗಾಕ ಹಚ್ಚಬ್ಯಾಡ
ಹಿ : ಎಳ್ಡು
ಕ : “ಗಂಡು ಮಕ್ಕಳ ನೆರಳು ನನ್ನ ಮ್ಯಾಲೆ ಬೀಳೋ ಹಂಗ ಮಾಡಬ್ಯಾಡ. ಈ ಮೂರೂ ವಚನ ಕೊಡ್ತೀನಿ ಅಂದ್ರ ನಿನ ಮನಿಗೆ ಬರ್ತೀನಿ” – ಅಂದ್ಲು ಪದ್ಮಾವತಿ
ಹಿ : ಒಳ್ಳೇದು, ಯಾಕಾಗ್ವೊಲ್ಲದು ಬಾ ನನ ಮಗಳೇ
ಕ : ಮುದುಕೀ ಮಾತ ನಂಬಿದ್ಲು, ಗಂಡನ ತೊಟ್ಲ ಹೊತ್ಕೊಂಡು ತಲಿ ತುಂಬಾ ಮುಸುಗು ಹಾಕ್ಕೊಂಡು ಪದ್ಮಾವತೀ ತಾಯಿ ಸಂಗವ್ವನ ಮನಿಗೆ ಬಂದ್ಲು
ಹಿ : ಹ್ಯಂಗ ಐತಮ್ಮ ಮನಿ?
ಕ : “ನಿನ್ನ ಮಾತು ನಿಜ ತಾಯೀ; ಮನಿ ಆರಾಮು ಐತಿ”. ತೊಟ್ಲ ಹಾಕಿದ್ಲು. “ಸಂಗಮ್ಮಾ ಇನ್ನು ನಿನ್ನ ಮಗಳು ನಾನು” ಅಂದ್ಲು ಪದ್ಮಾವತಿ.
ಹಿ : ಹೌದು.
ಕ : “ಸಂಗಮ್ಮಾ ನನ್ನ ಪತಿಗೆ ಹಾಲು ಬೇಕಲ್ಲ! ಯಾರ ಮನಿಯಾಗಾರ ಸಿಗತಾವೇನು?”
ಹಿ : ಕೇಳಿ ಬರ್ತೀನಿ ಮಗಳೇ; ಗೌಳೇರ ಮನಿಯಾಗ ಸಿಗಬಹುದು.
ಕ : ಸಂಗಮ್ಮ ಹೊಂಟು ಬಂದ್ಲು ಗೌಳೇರ ಪ್ಯಾಟಿಗೆ; – ಗೌಳೇರಣ್ಣಾ ಪಲ್ಯದ ರೊಕ್ಕಾ ಕೊಡ್ತೀ ಏನು?
ಹಿ : ಮುಂದಿನ ವಾರ ಕೊಡ್ತೀನಮ್ಮ
ಕ : ಪಲ್ಲೆದ ರೊಕ್ಕ ಇರ್ಲಿ….
ಹಿ : ಮತ್ತೇನಮ್ಮಾ?
ಕ : ಮಗಳು ಬಂದಾಳ ಮನೀಗೆ. ಮೊಮ್ಮಗ ಹುಟ್ಟೇತಿ; ಬಲು ಅಳತೈತಿ. ನನ್ನ ಮಗಳು ಇರೋತಂಕಾ (ರಾಗವಾಗಿ) ಪಲ್ಯದ ರೊಕ್ಕ ನಾನು ಕೇಳಾದಿಲ್ಲಾ, ಹಾಲಿನ ರೊಕ್ಕ ನೀನು ಕೇಳಬ್ಯಾಡಾ….
ಹಿ : ಸಂಗವ್ವಾ ಶಿಶುವಿಗೆ ಹಾಲು ಕೊಟ್ರ ಎಲ್ಲಿ ಹೋಗಾದಿಲ್ಲ; ದಿನಾಲಿ ಚರಿಗಿ ಹಾಲು ಒಯ್ಯಿ. ಆತs?
ಕ : ಮಾತು ಗಟ್ಟಿಮಾಡಿಕೊಂಡು ಸಂಗಮ್ಮ ಗಡಗಡಾ ಮನಿಗೆ ಬಂದ್ಲು – “ಪದ್ಮಾವತೀ”
ಹಿ : ಅಮ್ಮಾ ಏನು?
ಕ : ಹಾಲು, ಹೈನಾ, ಮಜ್ಗಿ, ಮೊಸರು, ಬೆಣ್ಣೆ ಬೇಕಾದ್ದs ಸಿಗತೈತಿ ಮಗಳೇ-
ಹಿ : ಹೌದೇ?
ಕ : ಆದ್ರ ಹಾಲು ದುಬಾರಿ ಹೇಳ್ತಾರಲ್ಲಮ್ಮ!
ಹಿ : ಎಷ್ಟು ಹೇಳಿದ್ರು?
ಕ : ಒಂದು ಚರಿಗಿ ಹಾಲಿಗೆ ಐದು ರೂಪಾಯಿ ಹೇಳ್ತಾನೆ!
ಹಿ : ಎಷ್ಟಾದ್ರು ಆಗ್ಲಿ, ಒಂದು ಚರಿಗಿ ಹಾಲು ದಿನಾಲು ತೊಗೊಂಬಾರಮ್ಮಾ.
ಕ : ಮಗಳೇ ಈಗ ಅಡ್ವಾನ್ಸು ದುಡ್ಡು ಕಟ್ಟೇಕಂತೆ-ಎಂಟು ದಿವಸದ್ದು!
ಹಿ : ಹೌದು!
ಕ : ಯವ್ವಾ ಇಗಾ ಬಲಗೈಯಾಗೊಂದು ಗೀರು ಬಳಿ ಐತಿ; ಚಿನಿವಾಲರ ಅಂಗಡಿಗೆ ಒಯ್ದು ಮಾರು. ರೊಕ್ಕಕೊಟ್ಟು ಹಾಲು ತೊಗೊಂಡ್ಬಾ.
ಹಿ : ಹೌದೂ.
ಕ : “ಒಳ್ಳೇದು, ಆ ಗೀರು ಬಳಿಕೊಂಡು” ಅಂತ್ಹೇಳಿ ಆ ಬಲಗೈಯಾಗ ಇದ್ದ ವಜ್ರದ ಗೀರು ಬಳಿ ತೊಗೊಂಡು ಒಳಕ್ವಾಣಿಗೆ ಹೋದ್ಲು ಅದನ್ನು ಬಲಗೈಯಾಗ ಇಟ್ಕೊಂಡು ತಿರುವಿ ತಿರುವಿ ನೋಡ್ತಾಳೆ – ಸಂಗಮ್ಮ!
ಹಿ : ಆಹಾ!
ಕ : ಎಂಥಾ ಚಂದ ಒಪ್ಪತೈತಿ ಈ ಗೀರು ಬಳಿ ನನ್ನ ಕೈಗೆ! ಇಂಥಾದನ್ನು ಮಾರೋದಾದ್ರು ಹೆಂಗ! ಅಂತ ಹೇಳಿ ನಡುವಿನ್ಯಾಗ ಇಟ್ಕೊಂಡ್ಲು-
ಹಿ : ಇಟ್ಕೊಂಡ್ಲು!
ಕ : ಗೌಳೇರಣ್ಣನ ಮನಿಗೆ ಹೋಗಿ ಸಂಗಮ್ಮ ವರಿಗಿ ಹಾಲು ತೊಗೊಂಡು ಮನಿಗೆ ಬಂದ್ಲು. “ಪದ್ಮಾವತೀ, ಮಗಳೇ”
ಹಿ : ಏನಮ್ಮ?
ಕ : ತೊಗೊ, ಕೂಸಿಗೆ ಹಾಲು ಕುಡ್ಸು.
ಹಿ : ಪದ್ಮಾವತಿ ಅಂತಾಳೆ-
ಕ : ” ಅಮ್ಮಾ ನಾನು ಕೈ ಮುಟ್ಟಿ ಕುಡುಸ್ಲಾರೆ-ಹಾಲು. ತಾಯಿ ಸ್ವರೂಪ ಆಗತೀನಿ- ನಾನು ಹಾಲು ಕುಡಿಸಿದ್ರೆ; ನನ್ನ ಗಂಡಗ ನಾನು ತಾಯಿ ಆಗಬಾರದು. ನೀನು ಯಜಮಾನಿ-ನೀನೆ ಕುಡ್ಸು.
ಹಿ : ಹೌದೂ.
ಕ : ಹಾಲು ಕಾಸಿ ಸಕ್ರಿ ಬೆರಸಿ ದಿನಾ ಒಂದು ಚರಿಗಿ ಹಾಲು ಕೂಸಿಗೆ ಕುಡುಸ್ತಾ ಅದಾಳೆ ಸಂಗವ್ವ. ಪದ್ಮಾವತೀ ಗಂಡ ಒಂದು ತಿಂಗಳು ಎಳ್ಡು ತಿಂಗಳು ಮೂರು ತಿಂಗಳು ದಿನಕ್ಕೊಂದು ಚಂದಾಗಿ-
|| ಪದ ||
ಮಗ ಮುಂದಕೆ ಬೆಳಿತಾನೋ….ಶಿವ ಹರಯನ್ನ ಮಾದೇವ
ಬಾಳಿ ದಿಂಡೇ ಬಲತ್ಹಾಂಗ…………ಶಿವ ಹರಯನ್ನ ಮಾದೇವ
ಆರು ತಿಂಗಳು ಒಂದೇ ವರುಷ……..ಶಿವ ಹರಯನ್ನ ಮಾದೇವ
ಅಂಬೇಗಾಲೇ ಹಾಕ್ತಾನ……………..ಶಿವ ಹರಯನ್ನ ಮಾದೇವ
ಎರಡ ವರುಷಕೆ ಓಡಾಡ್ತಾನ………..ಶಿವ ಹರಯನ್ನ ಮಾದೇವ
ಮೂರು ವರುಷಕೆ ಮಾತಾಡ್ತಾನೆ…….ಶಿವ ಹರಯನ್ನ ಮಾದೇವ
ಒಂಟಿ ಕಬ್ಬಿನ ಸೂಲಂಗಿ ಬೆಳದ್ಹಾಂಗ ಬೆಳಿತಾನ….ಶಿವ ಹರಯನ್ನ ಮಾದೇವ
ಕುಂಬಳ ಕುಡಿ ಚಿಗದ್ಹಾಂಗ………ಶಿವ ಹರಯನ್ನ ಮಾದೇವ
ಕ : ಆರು ತಿಂಗಳಾಗ ವಳ್ಳಿ ಬಿದ್ದು ಎದೀಲೆ ತೆವಳ್ತಾಳೆ; ಒಂದು ವರ್ಷಕ್ಕೆ ಅಂಬಿಗಾಲ ಹಾಕ್ತಾನ! ವರವಿನ ಪಿಂಡ! ಸೂಲಂಗಿ ಕಬ್ಬು ಬಾಳಿದಿಂಡು ಕುಂಬ್ಳ ಬಳ್ಳಿ ಹಂಗs ಬೆಳೀತಾ! ಬರತಾ ಅದಾನೆ! ಪದ್ಮಾವತಿ ನೋಡ್ತಾ ಅದಾಳ- ಇಂಥಾ ತನ್ನ ಗಂಡನ್ನ! ಒಂದು ದಿವಸ ಸಂಗವ್ವ ಅಂತಾಳ
ಹಿ : ಏನಂತಾ?
ಕ : ಯವ್ವಾ, ನಾನು ಹಿಂಗ ಒಂದೇ ಮನಿಯಾಗ ಇದ್ದರೆ ನನ್ನ ಗಂಡ ನನಿಗೆ ಅವ್ವಾ ಎಂದಾನು, ತಾಯೀ ಅಂದಾನು-
ಹಿ : ಆಹಾ!
ಕ : ಇದು ಪದ್ಧತಿ ಅಲ್ಲ, ಬ್ಯಾರೆ, ಒಂದು ಮನಿಯಾಗ ನಾನು ಇದ್ದರ ನನ್ನ ಗಂಡ ಪ್ರಾಯಕ್ಕ ಬಂದ ಮ್ಯಾಲೆ ನನ್ನ ರೂಪ ನೋಡಿ ಮಡದೀ ಅಂತ ಕರೀಬಹುದು.
ಹಿ : ಸತಿ-ಪತಿ ಕಲೀಬಹುದು.
ಕ : ತಾಯೀ ಇಲ್ಲೇ ಸಮೀಪದಾಗ ನನಗೆ ಬ್ಯಾರೆ ಮನಿ ನೋಡು. ನನ್ನ ಗಂಡ ಇಲ್ಲೇ ನಿನ್ನ ಮನಿಯಾಗs ಬೆಳೀಲಿ.
ಹಿ : ಒಳ್ಳೇದು ಆಗಲಮ್ಮಾ.
ಕ : ಶೆಟ್ರಮನಿ ಐತಿ ಮಗಳೇ ಎದುರಿಗೇ; ಹೊಸದಾಗಿ ಕಟ್ಟಿಸ್ಯಾರೆ, ಬಾಡ್ಗಿ ಕೊಡ್ತಾರೇನೋ ಕೇಳಿ ಬರ್ತೀನಮ್ಮಾ.
ಹಿ : ಕೇಳಿ ಬಾರಮ್ಮ ತಾಯೀ.
ಕ : ಶೆಟ್ರ ಹತ್ರ ಬಂದ್ಲು ಸಂಗವ್ವ ಕೇಳ್ತಾಳು- “ಶೆಟ್ರೇ ಪಲ್ಯದ ರೊಕ್ಕಾ ಕೊಡ್ರಿ”
ಹಿ : ಮುಂದ್ಲವಾರ ಕೊಡ್ತೀನಮ್ಮಾ; ಈ ವಾರ ಇಲ್ಲ.
ಕ : ನಿಮ್ಮ ಕಡಿಗೆ ಒಂದು ಮಾತು ಐತಿ ಶೆಟ್ರೇ.
ಹಿ : ಯಾವ ಮಾತು? ಹೇಳಮ್ಮ.
ಕ : ನಮ್ಮ ಮನಿ ಎದುರಿಗೆ ಐತೆಲ್ಲ, ನಿಮ್ಮ ಹೊಸಮನಿ-ಅದನ್ನು ಬಾಡ್ಗಿಕೊಡ್ರಿ. ನನ್ನ ಮಗಳು ದೊಡ್ಡ ಶ್ರೀಮಂತರ ಮನಿ ಸೊಸಿ; ನನ್ನ ಮನಿಯಾಗ ಇರಾಕ ಯಾಕೋ ನಾಚ್ಕೊಂತಾಳೆ!
ಹಿ : ಒಳ್ಳೇದಮ್ಮ ಕೊಡ್ತೀನಿ ತೊಗಳ್ರಿ.
ಕ : ” ನಾಲ್ಕು ಒಪ್ಪತ್ತು ನಿಮ್ಮ ಮನಿಯಾಗ ಇರ್ತಾಳೆ ಅಷ್ಟೇ”, ಅಂತ್ಹೇಳಿ ಮನಿ ಗಟ್ಟಿ ಮಾಡಿ ಗಡಗಡಾ ಬಂದ್ಲು. “ಪದ್ಮಾವತೀ……”
ಹಿ : ಏನಮ್ಮಾ ಮನಿ ಗೊತ್ತಾತೇ?
ಕ : ಹೌದಮ್ಮ; ಮನಿಯಂತೂ ಭಾಳಾ ಚಲೋ ಐತಿ; ಪಂಕಾ ಕನ್ನಡಿ ಹಳ್ಳಿನ ಗ್ವಾಡಿ, ನೀಲುವಾಡಿ ಬಾಗಿಲು, ತೂಗ+ಮಂಚ! ಕುಂದ್ರಾಕ, ನಿಂದ್ರಾಕ-ಮನಿ ಎಲ್ಲಾ ಚಂದಾಗಿ ಐತಿ, (ರಾಗವಾಗಿ) ಮನಿ ಬಾಡಿಗಿ ದುಬಾರೀ ಹೇಳ್ತಾನವ್ವಾ ಶೆಟ್ಟೀ……
ಹಿ : ಎಷ್ಟಂತೆ?
ಕ : ಒಂದು ತಿಂಗಳಿಗೆ ನೂರು ರೂಪಾಯಿ ಹೇಳ್ತಾನೆ!
ಹಿ : ಹೋಗ್ಲಮ್ಮ ಪರವಾಗಿಲ್ಲ.
ಕ : ನಾವು ಸತಿ-ಪತಿ ಈಗ ಅಗಲಿ ಮುಂದೆ ಕಲತರ ಸಾಕು ಬಿಡು,
ಹಿ : ನಾವು ಕಲತರ ಆತು ನೋಡು.
ಕ : ಮಗಳೇ ಈಗ ಆ ಮನಿಗೆ ಆರು ತಿಂಗಳ ಬಾಡಿಗಿ ಅಗಾವ್ ಕಟ್ಟಬೇಕಂತೆ! ಹ್ಯಂಗ ಮಾಡೋದು?
ಹಿ : ಹ್ಯಂಗ ಮಾಡೋದು?
ಕ : ಅಮ್ಮಾ ಈ ಕೊಳ್ಳಾಗ ಇರತಕ್ಕಂಥ ಚಂದ್ರಹಾರ ಒಯ್ದು ಮಾರಿಬಿಡು-ಅಕ್ಷಾಲ್ರ ಅಂಗಡ್ಯಾಗ; ನಾನು ಆ ಮನಿಯಾಗೇ ಇರ್ತೀನಿ.
ಹಿ : ಒಳ್ಳೇದು ಕೊಡು ಚಂದ್ರಹಾರ.
ಕ : ಸಂಗಮ್ಮ ಚಂದ್ರಹಾರ ಉಡಿಯಾಗ ಕಟ್ಟಿಗೊಂಡು ತನ್ನ ಒಳಕ್ವಾಣಿಗೆ ಹೋದ್ಲು; ಅಡಕ್ಲಿ ಗಡಿಗ್ಯಾಗ ಇಟ್ಟು ಬಂದ್ಲು. ಮರುದಿನ ಶೆಟ್ರು ಹೊಸ ಮನಿಗೆ ಪದ್ಮಾವತಿಗೆ ಕರ್ಕೊಂಡು ಹೋಗಿ ಬಿಟ್ಲು.
ಹಿ : ಗಡಗಡಾ ಮನಿಗೆ ಬಂದ್ಲು.
ಕ : ಗೀರುಬಳಿ ಕೈಯಾಗ ಇಟ್ಕೊಂಡ್ಲು, ಚಂದ್ರಹಾರ ಕೊರಳಾಗ ಹಾಕ್ಕೊಂಡ್ಲು.
|| ಪದ ||
ಕೊಡದಾಗ ನೀರು ಹಾಕಿ ಗೋಣು ತಿರು ತಿರುವಿ
ನೋಡ್ಯಾಳ ……..ಹರಯನ್ನ ಮಾದೇವ
ಯವ್ವಾ ಯಂತಾ ಬೇಸಿ ಒಪ್ಪ್ಯಾವೆ ……….ಹರಯನ್ನ ಮಾದೇವ.
ಕ : ಹಿಗ್ಗಿ ಹೀರಿಕಾಯಿ ಆದ್ಲು-ಸಂಗವ್ವ! ಗೀರುಬಳಿ, ಚಂದ್ರಹಾರ ತೆಗೆದು ಮತ್ತೆ ಅಡಕಲ ಗಡುಗಿ ಸೇರಿಸಿದ್ಲು – ಸಂಗವ್ವ.
ಹಿ : ಹೌದು.
ಕ : ಹೀಂಗ ಬಾಳಭಿಕ್ಷುಕಗೆ ಸಂಗಮ್ಮ ದಿನ ಹಾಲು ಕುಡುಸ್ತಾಳೆ; ಮಮ್ಮಗನ್ನ ಬೆಳಸ್ತಾಳೆ. ಒಂದು ದಿನ ಆಕಿ ಅಂದುಕೊಂಡ್ಲು-
ಹಿ : ಏನಂತಾ?
ಕ : ಏನು ಈ ಹಾಳಾದ ಕೂಸು! ನನಗೇನು ಸಂಬಂದೇ- ಸೇರ್ವೇ! ಹತ್ತಿದ್ದೇ- ಹರದದ್ದೇ! ಬಳಗೇ-ಬಂಧೇ! ದಿನಾಲು ಚರಿಗಿ ಹಾಲು ತಂದು ಕುಡಸ್ಬೇಕು ಯಾಕ? ಇನ್ನು ಸಾಕು; ಇದೇ ಒಳ್ಳೇ ಸಮಯ, ಇದನ್ನ ಕೊಲೆ ಮಾಡ್ಬೇಕು- ಇವತ್ತು ರಾತ್ರಿಗೆ-
ಹಿ : ಕೊಲಿ ಮಾಡ್ಬೇಕು;
ಕ : “ನಮ್ಮ ರಾಜಾಧಿರಾಜ ರತನ್ ಭೋಜ ರಾಜಗೆ ಈ ಪದ್ಮಾವತಿನಾ ಲಗ್ನ ಮಾಡಿ ಕೊಟ್ಟು ನಾನು ಬೇಕಾದ್ದೇ ಇನಾಮ್ ಪಡೀಬೇಕು” ಅಂದ್ಲು-
ಹಿ : ಪಲ್ಲೇದ ಸಂಗವ್ವ!
ಕ : ಒಂದು ಪಾವು ಮುಗ್ಗು ಜ್ವಾಳ ನುಚ್ಚಿಗೆ ಹೊಡದು, ಗಡಿಗ್ಗೆ ಹಾಕಿ ಕಟಾಂಬ್ಲಿ ಮಾಡಿದ್ಲು. ಸುಡು ಸುಡೋ ಕಟಾಂಬ್ಲಿ ಮಗುವಿನ ಬಾಯಿಗೆ ಹಾಕಿದ್ಲು!
ಹಿ : ಆಹಾ!
ಕ : ಆ ಸುಡೋ ಕಟಾಂಬ್ಲಿ ಬಾಯಿಗೆ ಹಾಕಿ ಬಾಳಭಿಕ್ಷುಕನ ಎದಿ ಮ್ಯಾಲೆ ಕುಂದುರುತಾಳೇ…..
ಹಿ : ಆಹಾ!
ಕ : ಕೂಸು ತಳಮಳಸ್ತಾ ಐತಿ; ಕಣ್ಕಣ್ ಬಿಟ್ಟು ಒದ್ದಾಡ್ತಾ ಐತಿ!
ಹಿ : ಇನ್ನು ಪ್ರಾಣ ಪಕ್ಷಿ ಹಾರಿ ಹೋಗ್ಬೇಕು.
ಕ : ಒಹೋ! ಪರಮಾತ್ಮ ಮ್ಯಾಗಿಂದ ನೋಡಿದಾ- ಕೂಸು ಸಾಯೋದ!
ಹಿ : ಆಹಾ….
ಕ : ಪಾರ್ವತೀ! ವ್ಯರ್ಥ ರಂಡಿಯಾಗಿ ಹೋಗ್ತಾಳೆ ಪದ್ಮಾವತಿ!
ಹಿ : ಹೌದೂ.
ಕ : ಪರಮಾತ್ಮ ತನ್ನ ಬಗಲ್ ಜೋಳ್ಗಿಯಿಂದ ವಿಭೂತಿ ತಗದು ಚಲ್ಲಿಬಿಟ್ಟ-ಸಂಗವ್ವನ ಮನಿಯಾಗ! ಕಟಾಂಬ್ಲಿ ಹೋಗಿ ಅಮೃತ ಆತು,-ಅಮೃತ! ಬಾಳಭಿಕ್ಷುಕ ಹೊಟ್ಟಿ ತುಂಬಾ ಕುಡೀತು-
ಹಿ : ಅಮೃತಾ!
ಕ : ಸಂಗವ್ವ ನೋಡ್ತಾಳೆ-ಸಾಯಲಿಲ್ಲ ಕೂಸು! ಹೋಗ್ಲಿ ಬಿಡು ಬೆಳೀಲಿ. ದಿನಾ ಒಂದು ಪಾವು ಜ್ವಾಳ ಹೋದಾವು-
ಹಿ : ಮುಗ್ಗಜ್ವಾಳ!
ಕ : ದಿನಾ ಕಟಾಂಬ್ಲಿ ಮಾಡಿ ಸಂಗಮ್ಮ ಕೂಸಿಗೆ ಕುಡುಸ್ತಾಳೆ. ದಿನಾ ಆ ಕಟಾಂಬ್ಲಿನ ಅಮೃತ ಮಾಡ್ತಾನೆ ಪರಮಾತ್ಮ!
ಹಿ : ಆ ಪರಮಾತ್ಮ!
ಕ : ನಾಲ್ಕು ವರ್ಷ, ಐದು ವರ್ಷ, ಆರು ವರ್ಷ, ಈ ಪ್ರಕಾರವಾಗಿ ಸಂಗವ್ವನ ಮನಿಯೊಳಗೆ ಬುದ್ಧಿಜ್ಞಾನ ಬಾಲಪ್ರಾಯಕ್ಕೆ ಬರ್ತೈತಿ ಬಾಳಭಿಕ್ಷುಕ. ಮನೀ ಹೊರಗ ರೈತರ ಮಕ್ಕಳ ಜೊತಿಗೆ ಆಡ್ತಾನೆ-
ಹಿ : ಪದ್ಮಾವತಿ ಗಂಡ!
ಕ : ಪದ್ಮಾವತಿ ಒಂದು ದಿವಸ, ತನ್ನ ಗಂಡ-ಬಾಲಕ ವಾರಿಗಿ ಹುಡುಗರಕುಟಾಗ ಆಟ ಆಡೋದ ನೋಡಿದ್ಲು. ಸಂಗವ್ವನ ಹತ್ತಿರ ಹೋಗಿ “ಯವ್ವಾ ಸಂಗವ್ವಾ”…..
ಹಿ : ಏನ್ ಬಾ ತಾಯಿ, ಏನ್ ಬೇಕಿತ್ತು ಪದ್ಮಾವತಿ?
ಕ : ನನ್ನ ಗಂಡನ್ನ ಹಿಂಗs ಬಿಟ್ರ ದಡ್ಡಾಗಿ ಹೋಗ್ತಾರೆ (ರಾಗದ ದನಿಯಲ್ಲಿ) ಶಾಲಿಗೆ ಕಳಿಸೇ ಯವ್ವಾs…..
ಐನೋರ ಶಾಲಿಗೆ ಹೋಗಿ ನಾಲ್ಕು ಅಕ್ಷರ ಕಲ್ತರೆ ನನ್ನಗಂಡ ಬುದ್ಧಿವಂಥ ಆಗ್ತಾನೆ.
ಹಿ : ಹೌದು ಮಗಳೇ, ಹೋಗಿ ಮೇಷ್ಟ್ರಿಗೆ ಹೇಳಿ ಬರ್ತೀನಿ-
ಕ : ಅಂತ ಹೇಳಿ ಸಂಗವ್ವ ಗಡಗಡಾ ನಡದ್ಲು ಶಾಲೆಗೆ. “ಮೇಷ್ಟ್ರೇ…..ಮೇಷ್ಟ್ರೇ….”
ಹಿ : ಏನು ಬಂದಿ ಸಂಗವ್ವ?
ಕ : ನನ್ನ ಪಲ್ಯಾದ ರೊಕ್ಕ ಕೊಡ್ರಿ, ಸಂತಿಗೆ ಹೋಗ್ಬೇಕು.
ಹಿ : ಇನ್ನೂ ಪಗಾರ ಆಗಿಲ್ಲಮ್ಮ ಮುಂದಿನವಾರ ಆಗತೈತಿ ಕೊಡ್ತೀನಿ.
ಕ : ಅದು ಸಂಬಳದ್ದು ಇರ್ಲಿಬಿಡ್ರಿ ಮೇಷ್ಟ್ರೇ….
ಹಿ : ಮತ್ತೇನಮ್ಮಾ?
ಕ : ನನ್ನ ಮೊಮ್ಮಗ ನಿಮ್ಮ ಸಾಲಿಗೆ ನಾಳೆಯಿಂದ ಓದಾಕ ಬರ್ತಾನೆ; ಸಾಲಿ ರೊಕ್ಕ ನೀವು ಕೆಳ್ಬ್ಯಾಡ್ರಿ, ಪಲ್ಯದ ರೊಕ್ಕ ನಾನು ಕೇಳೋದಿಲ್ಲ.
ಹಿ : ಹೌದು.
ಕ : ಆಹಾ! ನಿನ್ನ ಮೊಮ್ಮಗನಿಗೆ ಚಲೋ ವಿದ್ಯಾ ಕಲಿಸ್ತೀನಿ-
ಹಿ : ನೀನು ಅದ್ರ ಕಾಳ್ಜಿ ಬಿಡಮ್ಮಾ.
ಕ : ಓದು, ಬರಹ, ಶಾಸ್ತ್ರ ಪುರಾಣ ಇಂಥಾ ವಿದ್ಯಾ ಕಲಿಸಬ್ಯಾಡ್ರಿ ನಮ್ಮ ಹುಡುಗ್ಗ ಮೇಷ್ಟ್ರೇ;
ಹಿ : ಮತ್ತೆಂಥ ವಿದ್ಯಾ ಕಲಿಸ್ಬೇಕವ್ವ?
ಕ : ಸಂಗವ್ವ ಏನಂತಾಳೆ?- “ಮೇಷ್ಟ್ರೇ ಚಲೋ ವಿದ್ಯಾ ಕಲಿಸಿದ್ರ ನನ್ನ ತಲಿ ಚಪಾಟಿ, ನಿಮ್ಮ ತಲಿಗೆ ಲಪಾಟಿ ಮಾಡೋ ಹುಡುಗ ಅವನು.
ಹಿ : ಹೌದೇ!!
ಕ : ಓದು ಬರಹ ಕಲಿಸ್ಬ್ಯಾಡ್ರಿ; ಸಾಲಿ ಹುಡುಗರ ಜೊತಿಗೆ ಅವನ್ನ ಕುಂದ್ರಸ ಬ್ಯಾಡ್ರಿ. ಅವರು ಒದೋದ್ನ ಕಿವಿಲಿ ಕೇಳಿದ್ರೆ ಸಾಕು, ಕಲಿಯೋ ಹುಡುಗ ಅವನು.
ಹಿ : ಅಂಥ ಮಹಾ ಪಂಡಿತನೇ!
ಕ : ಹೌದು ಮೇಷ್ಟ್ರೇ, ಅವನ್ನ ಸಾಲಿಬಿಟ್ಟು ದೂರ ಕುಂಡ್ರಿಸಿರಿ.
Leave A Comment