ಕ : “ಹೋಗೋದು ಹೋಗ್ತಿ ರಾಜಾ – ಈ ಕಳ್ಳನ ಕಯ್ಯಾಗ ನಿನ್ನ ಮಡದೀ ಕೊಟ್ಟು; ಈ ಗಿಂಡ್ಯಾಗ ಬಾವಿಯಿಂದ ನೀರು ತಂದುಕೊಟ್ಟು ಹೋಗು. ನೀರು ಕುಡುದು ಈ ಕಳ್ಳನ ಹಿಂದ ಹೋಗ್ತೀನಿ” ಅಂದ್ಲು ಕೂಗಿ.

ಹಿ : ವಾಪಾಸು ಬಂದ ಬಾಳಭಿಕ್ಷುಕ.

ಕ : ಎಲೇ ಕಳ್ಳ ನಿಂದ್ರಲೇ ಐದು ನಿಮಿಷ ತಡಿಯಲೇ, ಈ ಯಮ್ಮ ನೀರು ಕೇಳ್ತಾಳೆ, ನೀರು ತಂದು ಕುಡಿಸ್ತೇನಿ. ನಂತ್ರ ನಿನ್ನ ಗವೀಗ ಕರಕೊಂಡು ಹೋಗುವಂತಿ.

ಹಿ : ಒಳ್ಳೇದು.

ಕ : ಒಳ್ಳೇದು ಅಂತ್ಹೇಳಿ ಕಳ್ಳ ಕುಂತ. ಪದ್ಮಾವತಿ ಗಿಂಡಿ ಹಗ್ಗ ಕೊಟ್ಟು ಗಂಡನ ಕೈಯಾಗ; ಆ ಗಿಂಡಿಗೆ ಹಗ್ಗಕಟ್ಟಿ ಗಾರುಗಚ್ಚಿನ ಬಾವ್ಯಾಗ ಇಳೇ ಬಿಟ್ಟು ಬಗ್ಗಿ ನೀರು ತುಂಬತಾ ಅದಾನ ಬಾಳಭಿಕ್ಷುಕ.

ಹಿ : ಆಹಾ!

ಕ : ಈ ಕಳ್ಳ ಕುಂತಿದ್ನಲ್ಲ ಅಲ್ಲಿ, ಯೋಚಿನಿ ಮಾಡತಾನ-

ಹಿ : ಏನಂತಾ?

ಕ : ಈ ಇವ್ನು ಇವುಳಿಗೆ ನೀರು ತಂದು ಕುಡ್ಸಿ ಹೋಗುವಾಗ ಮತ್ತೆ ಎಲ್ಲಿ ಕರಕೊಂಡ ಹೋಗ್ತಾನೋ ಅಂತ್ಹೇಳಿ ಓಡಿ ಬಂದದ್ದೇ ಬಾಳಭಿಕ್ಷುಕನ ಮುಕಳಾಗ ಕೈ ಹಾಕಿ (ರಾಗವಾಗಿ) ಬಾವ್ಯಾಗ ಒಗದಾನೈ…. ಬಾವಿಗೆ ಬಿದ್ದ ರಾಜ!

ಹಿ : ಧಡಂ ಅಂತ ಬಿದ್ದ!

ಕ : ರಾಜ ತೇಲ್ತಾನೆ ಮುಳುಗತಾನೆ, ತೇಲ್ತಾನೆ ಮುಳುಗತಾನೆ.

ಹಿ : ಮೋಸಗಾರ ಕಳ್ಳ!

ಕ : ಕಳ್ಳ ಅಂತಾನೆ- “ಎಲೈ ಪದ್ಮಾವತೀ ನಡೀ ನನ್ನ ಗವೀಗೆ-

ಹಿ : ಗವೀಗೆ.

ಕ : (ರಾಗವಾಗಿ) “ಬಾಳಭಿಕ್ಷುಕಾ ಬಾವ್ಯಾಗ ಹೋದ್ಯಾ! ಪತೀ ನನ್ನ ಅಗಲಿದೆಯಾ! ಅಯ್ಯೋ ನಾನು ಕಳ್ಳನ ವಶವಾದೇ….ನನ್ನ ಬಿಟ್ಟು ರಾಜಾ ಹೋದ್ರ ಹೋಗು- ತಿದ್ದಾ, ನಾನು ಸುಮ್ಮನೇ ನೀರು ಕೇಳಿದ್ನೆಲ್ಲೇ….ರಾಜಾರಾಜಾ” ಅಂತ ಬೋರ್ಯಾಡ ತಾಳ.

ಹಿ : ಹಲುಬುತಾಳ!

ಕ : ಕಳ್ಳ ಹಿಂದಿಂದೆ ಪದ್ಮಾವತಿ ಮುಂದ್ಮುಂದೆ ನಡೀತಾರೆ. ಒಂದು ಫರ್ಲಾಂಗು ದೂರಾ ಹೋಗಬೇಕಾದರೆ, ಅಲ್ಲೊಂದು ಆಲದ ಮರದ ಮ್ಯಾಲೆ ಗಿಳಿ ಕುಂತಿತ್ತು.

ಹಿ : ಹೌದೂ.

ಕ : ಪದ್ಮಾವತಿ ಕಳ್ಳಗ ಆ ಗಿಳಿ ತೋರ್ಸಿದ್ಲು,-

ಹಿ : ತೋರ್ಸಿ,

ಕ : ಏನ್ರಿ ಆ ಗಿಳಿಗೆ ಯಾರು ಕೊಲೆ ಮಾಡ್ತಾರೋ ಅವರಿಗೆ ನಾನು ಮಡದಿಯಾಗಬೇಕು ಅಂತಾ ನಂದು ಮನಸು ಐತಿ, ಆ ಗಿಳೀಗೆ ಹೊಡೀತೀರೇನ್ರಿ ಕಳ್ಳ ಅವರೇ?

ಹಿ : ಹೊಡೀತೀರೇನ್ರಿ?

ಕ : “ಓಹೋ ಏನು ದೊಡ್ಡ ಆಗದ್ದು ಗಿಳಿ ಹೊಡಿಯೋದು – ನೋಡು ನನ್ನ ಪರಾಕ್ರಮ.” ಅಂತ ಹೇಳಿ ಹಳ್ಳಬಿಲ್ಲು ಮಾಡಿ, ಎದಿ ನಿಗರಿಸಿ, ಆ ಗಿಳಿ ಮ್ಯಾಲೆ ಗುರಿಯಿಟ್ಟು ಹೊಡಿಯಾಕ ನಿಂತ ಆ ಕಳ್ಳ-

ಹಿ : ಆ ಪಕ್ಕಾಕಳ್ಳ!

ಕ : ಪದ್ಮಾವತಿ ಅವನ ಬೆನ್ನ ಹಿಂದೆ ನಿಂತು ಹೇಳ್ತಾಳೆ “ಆಕಡೆ ಈಕಡೆ ನೋಡ ಬ್ಯಾಡ್ರಿ, ಅಗಿಣಿ ಹಾರಿ ಹೋದಿತು ಪ್ರತಿಜ್ಞೆ ಭಂಗಾದೀತ” ಅಂದ್ಲು.

ಹಿ : ಕಳ್ಳ ಗಿಣೀಗೆ ಗುರಿಯಿಟ್ಟು ನೋಡ್ತಾ ಅದಾನೆ.

ಕ : ಉಡಿಯಾಗ ಕೈ ಹಾಕಿ ಕಂಜೂರದ ಬಾಕು ತೆಗೆದುಬಿಟ್ಟು-

|| ಪದ ||

ಕಳ್ಳನ ಬೆನ್ನಾಗ ಇರದಾಳs….ಶಿವಯನ್ನ ಮಾದೇವಾ

ಕ : ಅಯ್ಯೋ ರಾಮಾ ಅಂತ್ಹೇಳಿ ಹಂಗs ಬಿದ್ದದ್ದೇ ಪ್ರಾಣಬಿಟ್ಟ-

ಹಿ : ಕಳ್ಳ!

ಕ : ನೀಚಾತ್ಮಾ, ನಡೀ ಚಾಂಡಾಲಾ, ಪರಿವ್ರತಾ ಹೆಣ್ಣುಮಗಳ ಮ್ಯಾಲೆ ಮನಸಿಟ್ಟಂಥಾ ದ್ರೋಹಿ-

ಹಿ : ಪಾಪಿ!

ಕ : ಕಳ್ಳಗ ಹಿಂಗ ಕೊಲ್ಲಿ ದುಃಖಾ ಮಾಡಿಕೊಂತ ಆ ಬಾವಿ ದಂಡಿಗೆ ಬರಬೇಕಾರ ನೋಡ್ರಿ.

ಹಿ : ಬಾಳಭಿಕ್ಷುಕ-

ಕ : ಆ ಬಾವ್ಯಾಗ ಬಿದ್ದಂಥಾ ಬಾಳಭಿಕ್ಷುಕ ರಾಜ ಮುಳುಗಿ ತೇಲೋ ಕಾಲಕ್ಕ, ಒಳಗ ದೇವಕನ್ನಿ ಇದ್ದಾಳೆ-

ಹಿ : ಪಾತಾಳ ಲೋಕದಲ್ಲಿ!

ಕ : ಆಕಿ ಬಂದು ಕೈ ಹಿಡಕೊಂಡು ರಾಜಕುಮಾರನ್ನ ಕರಕೊಂಡು ಹೋದ್ಲು;

ಹಿ : ಉಪಚಾರ ಮಾಡಿದ್ಲು. ಆಕಿ ಕೇಳ್ತಾಳ-

ಕ : ಏನ್ರೀ, ನಿಮ್ಮ ಊರು ಯಾವುದು? ನಿಮ್ಮ ನಾಮಕರಣವೇನು?

ಹಿ : ಸ್ತ್ರೀಯಳೇ ನಾನು ವನವಾಸಿ-

ಕ : ವನವಾಸಿ!

ಹಿ : ಆಹಾ!

ಕ : ನಾನು ವನವಾಸಪಟ್ಟಗೊಂತಾ ಬಂದು ಏಕಂಚೀ ಪಟ್ಣದಲ್ಲಿ ವಿದ್ಯಾವಂತನಾಗಿ ಈ ವನವಾಸದಲ್ಲಿ ಬರಬೇಕಾದ್ರೆ, ಒಬ್ಬ ಹೆಣ್ಣು ಮಗಳು ನನ್ನ ಹಿಂದಿಂದೇ ಬಂದು ನಾನು ನಿನ್ನ ಮಡದಿ, ನಿನ್ನ ಮಡದಿ ಅಂತ ಇಲ್ಲೀವರಿಗೂ ಬೆನ್ನು ಹತ್ತಿದ್ಲು – ಸ್ತ್ರೀಯಳೇ!

ಹಿ : ಆಹಾ!

ಕ : ಆ ಸ್ತ್ರೀಯಳು ನೀರು ಕೇಳಿದ್ದಕ್ಕ. ಈ ನಿನ್ನ ಬಾವಿಯಲ್ಲಿ ನೀರು ತುಂಬೋ ಕಾಲಕ್ಕೆ ಒಬ್ಬ ಕಳ್ಳ ನನ್ನ ಈ ಬಾವ್ಯಾಗ ಒಗದ.

ಹಿ : ಆಹಾ!

ಕ : ನಾನೂ ನೀನೂ ಇಬ್ರೂ ಸತಿ ಪತಿ ಆದ್ವಿ – ಅಂದ್ಲು ಆ ದೇವಗನ್ನಿ.

ಹಿ : ಹೌದೂ.

ಕ : ಬಾಳಭಿಕ್ಷುಕ ಅಂತಾನೆ – ಆ ಪುಣ್ಯಾತ್ಮಳು ಕುಡಿಯಾಕ ನೀರು ಕೇಳಿದ್ದಳು. ಏನು ಐದಾಳೋ ಇಲ್ಲೋ! ಈ ಗಿಂಡಿ ತುಂಬಾ ನೀರು ಕೊಟ್ಲು ಬರ್ಲಾ ಹೋಗಿ?

ಹಿ : ಹೋಗಿ ಬರ್ರಿ-

ಕ : ಮಹಾರಾಜಾ ನಿಮ್ಮ ಮ್ಯಾಲೆ ಆ ಸ್ತ್ರೀಯಳು ಮನಸಿಟ್ಟಾಳೆ; ಅಂದ ಬಳಿಕ ನೀರು ಕೊಟ್ಟೇ ಬರಬೇಕು.

ಹಿ : ಕೊಟ್ಟು ಬರಬೇಕು.

ಕ : ದೇವಗನ್ನಿ ಇಟ್ಟಂಥ ನಿಚ್ಚಳಿಕಿಹತ್ತಿ ಮ್ಯಾಲೆ ಬಂದು ರಾಜ ನೋಡ್ತಾನೆ – ಆ ವೃಕ್ಷಾಳಿ ಮರದ ಕೆಳಗೆ ಮಲಕ್ಕೊಂಡಾಳ!

ಹಿ : ನಿದ್ದಿ ಹೋಗ್ಯಾಳೆ.

ಕ : (ರಾಗವಾಗಿ) ರಾಜಾ… ನೀ ಕಾಣವಲ್ಲೇಂತ್ಹೇಳಿ ಮಲಿಗ್ಯಾಳೈ…

ಹಿ : ಮಲಗಿಕೊಂಡಾಳ ಸ್ತ್ರೀಯಳು!

ಕ : ಕಳ್ಳ ಕರಕೊಂಡ್ಹೋಗಿಲ್ಲ! ಅವನು ಚಾಂಡಾಲ, ಬಿಟ್ಟು ಹೋಗ್ಯಾನಲ್ಲ!!

ಹಿ : ಇಲ್ಲಿ, ಹೋದ್ರೂ ಹೋಗಲಿಬಿಡು.

ಕ : “ಈ ಯಮ್ಮ ಎಚ್ಚರಾದಾಗ ನೀರು ಕುಡ್ಸಿ ಹೋಗಾನು” – ಅಂತ್ಹೇಳಿ ಬಾವಿ ದಂಡೇಲಿ ಕುಂತಗೊಂಡ. ರಾತ್ರಿಯಾದ್ರೂ (ರಾಗವಾಗಿ) ಏಳವಲ್ಳು ಆಯಮ್ಮಾ!

ಹಿ : ಹೌದೂ.

ಕ : ಒಳ್ಳೇ ಸರಿರಾತ್ರಿಯಾದ್ರೂ ಎದ್ದೇಳವಲ್ಳು!

ಹಿ : ನಿದ್ದಿ, ಎಚ್ಚರವಾಗಲೊಲ್ಲದು!

ಕ : ಪದ್ಮಾವತಿ ಮಲಗಿಕೊಂಡಾಳ; ಬಾಳಭಿಕ್ಷುಕ ಕುಂತಗೊಂಡಾನ. ಬೆಳಗಾ ಮುಂಜಾವಿನ ಟೈಮು. ಆ ವೃಕ್ಷಾಳಿ ಮರಕ್ಕ ಏನು ಬರ್ತಾವ್ರೀ?

ಹಿ : ಗಂಡುಭೇರುಂಡ ಪಕ್ಷಿಗಳು!

ಕ : ಪೂರ್ವದಲ್ಲಿ, ಪದ್ಮಾವತಿ ತನ್ನ ಗಂಡನ ತೊಟ್ಲ ತಲಿಮ್ಯಾಲೆ ಹೊತಗೊಂಡು ವನವಾಸ ಬರಬೇಕಾದ್ರ ಎರಡು ಗಂಡು ಭೇರುಂಡ, ದೇವಲೋಕದ ಪಕ್ಷಿ, ಆ ತೊಟ್ಲಕ್ಕ ನೆರಳು ಹಿಡದಿದ್ವಲ್ಲ- ಆ ಪಕ್ಷಿಗಳು-

ಹಿ : ಬಂದು ಕುಂತ್ವು!

ಕ : ಮರದ ಮ್ಯಾಲೆ ಇಳಿದಂಥಾ ಆ ಪಕ್ಷಿಗಳು ಮಾತಾಡ್ತಾ ಅದಾವ-

ಹಿ : ಬಾಳಭಿಕ್ಷುಕ ಕುಂತಾನ ಎಚ್ಚರವಾಗಿ-

ಕ : ಏನೇ ಹೆಣ್ಣು ಪಕ್ಷೀ,

ಹಿ : ಏನು ಹೇಳ್ರೀ?

ಕ : ಬೆಳಕು ಹರಿಯಾಕ ಎಷ್ಟೈತಿ ಇನ್ನೂ ಟೈಮು?

ಹಿ : ಇನ್ನೂ-

ಕ : (ರಾಗವಾಗಿ) ಸ್ವಾಮೀ ಟೈಮು ಇನ್ನೂ ಒಂದು ಗಂಟಿ ಐತ್ರೀ ಬೆಳಕು ಹರಿಯಾಕ!-

ಹಿ : ಹೇಳಿತು ಹೆಣ್ಣು ಪಕ್ಷಿ.

ಕ : ಒಂದು ಕತೀನಾರ ಹೇಳ್ರಿ ಅಂತೈತಿ ಅದು.

ಹಿ : ಯಾವ ಕತಿ ಕೇಳಿ ಏನು ಮಾಡ್ತೀ ಹೆಂಡ್ತೀ!

ಕ : ಹೊತ್ತು ಹೋಗವಲ್ದು.

ಹಿ : “ಬಾಳಭಿಕ್ಷುಕನ ಕತಿ – ಪದ್ಮಾವತಿ ಕತಿ, ಗಂಡಾ ಹೆಂಡ್ತೀ, ಕತಿ, ಬಹಾಳ ಚನ್ನಾಗಿ ಐತಿ”, ಅಂತಾ ಗಂಡು ಪಕ್ಷಿ ಹೇಳ್ತು.

ಕ : ಆಹಾ ಮಹಾಪತಿವ್ರತಾ ಕತಿ!

ಹಿ : ಹೌದೂ!

ಕ : ಆ ಪಕ್ಷಿಗಳು ಮಾತಾಡೋದ್ನ ಬಾಳಭಿಕ್ಷುಕ ಕೇಳಿದ! ಏನದು, ನನ್ನ ಕತೀ? ಏನು ಕತಿ ಹೇಳ್ತಾವೋ ಇವು! ಕೇಳ್ಬೇಕು – ಅಂದ.

ಹಿ : ಏನೇ ಹೆಣ್ಣು ಪಕ್ಷೀ-

ಕ : ಏನ್ರೀ?

ಹಿ : ಕತಿ ಚಾಲೂ ಮಾಡಲಾ?

ಕ : ಮಾಡಬೇಕ್ರೀ!

ಹಿ : ಆಹಾ

ಕ : ಕಾಶಿಗಿರಿ ಪಟ್ಣದಲ್ಲಿ ಸಾವಚಿತ್ತನ ಉತ್ತರಕ ಪೂಲಾವತ್ತೆಮ್ಮನ ಗರ್ಭದಲ್ಲಿ ಉದ್ಭವಿಸಿದ ಬಾಳಭಿಕ್ಷುಕ.

ಹಿ : ಹೌದು,

ಕ : ಅವನು ಮೂಲಾನಕ್ಷತ್ರದಲ್ಲಿ ಹುಟ್ಟಿದ ಸಲುವಾಗಿ ತಾಯಿ – ತಂದಿಗೆ (ರಾಗವಾಗಿ) ಮರಣ ಬಂದಿತ್ತೇ…

ಹಿ : ಆಹಾ

ಕ : ಅದರ ನಿವಾರಣೇ ಸಲುವಾಗಿ, ತಮ್ಮ ಮಗನಿಗೆ ಐದಾರು ದಿವಸದ ಹೆಣ್ಣುಕೂಸು ಲಗ್ನ ಮಾಡಬೇಕು ಅಂದ್ರ ಎಲ್ಲೂ ಸಿಗಲಿಲ್ಲ. ಬುದ್ಧಿವಂತ ಮಂತ್ರಿ ಋತುವಾದ ಕನ್ಯೆ ಪದ್ಮಾವತಿ ಗೊತ್ತು ಮಾಡಿದ. ತೊಟ್ಲಕ್ಕ ಬಾಸಿಂಗ ಕಟ್ಟಿ ಲಗ್ನ ಮಾಡಿ ಊರಿಗೆ ಕರಕೊಂಡು ಹೋಗೋ ಸಮಯದಲ್ಲಿ, ವಾಯಿದಾ ಮೀರಿದ ಸಲುವಾಗಿ ಅಡಿವ್ಯಾಗ ಬಿಟ್ಟ ಹೋಗಬೇಕು ಅಂತ ಬಂತು ಶಾಸ್ತ್ರ ಭಾಗದಲ್ಲಿ; ಅದಕಾಗಿ ಗಂಡ ಹೆಂಡ್ತಿ ಇಬ್ರನೂ ಅಡಿವ್ಯಾಗ ಅಲ್ಲೇ ಬಿಟ್ಟು ಹೋದ್ರು-

ಹಿ : ಆಹಾ ಬಿಟ್ಟು ಹೋದ್ರು!

ಕ : ತನ್ನ ಗಂಡ ಆ ಕೂಸು ಅಂಬೋದ ಗುರ್ತ ತಿಳದು ಜೋಪಾನ ಮಾಡ್ಲಿಕ್ಕೆ ತಲೀ ಮ್ಯಾಲೆ ತೊಟ್ಲ ಹೊತಗೊಂಡು ಪದ್ಮಾವತಿ-

ಹಿ : ಅಂದ್ರ ಪತಿವ್ರತಾ ಸ್ತ್ರೀಯಳು-

ಕ : ವನವಾಸ ಪಡಕೊಂತಾ, ಏಕಂಚೀ ಪಟ್ಣದಲ್ಲಿ, ಪಲ್ಲೇದ ಸಂಗವ್ವನ ಮನಿಯಾಗ ಬೆಳಸಿ, ತಾನು ಬೇರೆ ಮನಿಯಾಗಿದ್ಲು.

ಹಿ : ಆಹಾ!

ಕ : ಬಾಳಭಿಕ್ಷುಕ ಬೆಳೆದು ರತಭೋಗ ಮಹಾರಾಜನ ಮಗ ಐರಾಮ , ಮಂತ್ರೀ ಮಗ ಶಿವಗಣ್ಯರ ಜೀವದ ಗೆಳೆಯನಾಗಿ, ಓದು ಬರಹ ವಿದ್ಯಾ ಕಲ್ತು ಗರಡೀ ಸಾಧಕದಲ್ಲಿ ವಿದ್ಯಾ ಮಾಡುವ ಕಾಲಕ್ಕ –

ಹಿ : ಆಹಾ!

ಕ : ವಿಧಿಮಾಯಿ ಗಂಡ ನಾನು ಅಂತ ಅಂದದ್ದಕ್ಕೆ ವಿಧಿ ಬಂದು ವನವಾಸಾ ಕೊಟ್ಲು – ಬಾಳಭಿಕ್ಷುಕಗ!

ಹಿ : ಹೌದು.

ಕ : ಐರಾಮ, ಒಂದು ದಿನ ಪದ್ಮಾವತಿ ರೂಪಕಂಡು ಮರುಳಾದ; ಆಕಿ ಬಾಳಭಿಕ್ಷುಕನ ಹೆಂಡತೀ ಅಂತ ಗೊತ್ತಾತು. ಗಂಡನ್ನ ಕೊಂದು ಆಕೀನ ಕೈವಶ ಮಾಡಿಕೊಳ್ಬೇಕಂತ ಹುಲಿ ಬ್ಯಾಟಿ ನೆವ ಮಾಡಿ-

ಹಿ : ಆಹಾ!

ಕ : ಅಡವಿಗೆ ಕರಕೊಂಡು ಬರಬೇಕಾದ್ರ, ಪದ್ಮಾವತಿ ತನ್ನ ಗಂಡನ್ನ ಬೆನ್ನ ಹತ್ತಿ ಬಂದ್ಲು. ಐರಾಮ – ಶಿವಗಣ್ಯ ತಮ್ಮ ಗೆಳೆಯನ್ನ ಕೊಲ್ಲಾಕ ನಿಂತ್ರು; ಅದರ ಅವನ ಪ್ರಾಣ ಹೋಗಲಿಲ್ಲ!

ಹಿ : ಆಹಾ!

ಕ : ಬಾಳಭಿಕ್ಷುಕನೇ ಅವರಿಬ್ರುನೂ ಕಡದು ಹಾಕಿದ.

ಹಿ : ಹೌದು.

ಕ : ರಾಜಕುಮಾರ ವನವಾಸ ಬರಬೇಕಾದ್ರ ಪದ್ಮಾವತಇ ನೀನೇ ನನ ಗಂಡಾನ ಧ್ವನಿ ಕೊಟ್ಟಾಗ, ನೀನು ಯಾರವ್ವಾ, ಎಂತವ್ವಾ, ತಾಯೀ ಅಂದ; ಅಕ್ಕ ಅಂದ ತಂಗೀ ಅಂದಾ!

ಹಿ : ಆಹಾ!

ಕ : ನಾ ನಿನ್ನ ಮಡದೀ ಅಂತ ಎಷ್ಟು ಪರಿಯಿಂದ ಹೇಳಿದ್ರೂ ಡೋರೋಸೇನ್ ರಾಜನ ಕೈಯಾಗ ಕೊಟ್ಟು ಹೋಗುತಿದ್ದಾ. ಆಗ ಪದ್ಮಾವತಿ ಶೌರ್ಯದ ಮಾತಾಡಿ ಯುದ್ಧಾ ಮಾಡಿಸಿದಳು; ಗಂಡ ಕಳ್ಳನ ಕೈಯಾಗ ಆಕೀನ ಮತ್ತೆ ಕೊಟ್ಟು ಹೋಗೋ ಸಂದರ್ಭದಲ್ಲಿ ನೀರು ಕೇಳಿದ್ದು-

ಹಿ : ಪದ್ಮಾವತಿ.

ಕ : ರಾಜಕುಮಾರ ಬಾವಿಯಿಂದ ನೀರು ತೆಗೀವಾಗ ಆತನ್ನ ಕಳ್ಳ ಬಾವ್ಯಾಗ ನೂಕಿದ; ಬಾವ್ಯಾಗಿದ್ದ ದೇವಗನ್ನಿ ಆತನ್ನ ಕಾಪಾಡಿ ಮದಿವ್ಯಾದಳು.

ಹಿ : ಹೌದು!

ಕ : ಪದ್ಮಾವತಿ ಕಳ್ಳನ ಜತಿ ಹೋಗುವಾಗ ಪ್ಲಾನು ಮಾಡಿ ಅವನ್ನ ಇರದು ಕೊಂದು ಬಂದು ಮಲಗಿಕೊಂಡಾಳ ತನ್ನ ಗಂಡನ ಧ್ಯಾನಾ ಮಾಡ್ತಾ!-

ಹಿ : ಆಹಾ ಪತಿವ್ರತಾ!

ಕ : ಬೆಳಕು ಹರೀತೇ ಹೆಣ್ಣು ಪಕ್ಷಿ!

ಹಿ : ಹೌದೂ.

ಕ : ಇನ್ನು ಕತೀ ಮುಗೀತಾ ಬಂತು.

ಹಿ : ಆಹಾ!

ಕ : ಕೊನೇ ವಚನ ಹೇಳ್ತೀನಿ ಕೇಳ್ತಿಯಾ ಪಕ್ಷಿ?

ಹಿ : ಯಾವ ವಚನಾ?

ಕ : ಬಾವಿ ದಂಡೆಗೆ ಕುಂತು ಕೇಳುತಿರೋನೇ ಗಂಡ ಬಾಳಭಿಕ್ಷುಕ!

ಹಿ : ಹೌದು ಹೌದೂ!

ಕ : ವನವಾಸಾ ಮಾಡ್ತಾ ಮಲಗಿಕೊಂಡಂಥಾ ಸ್ತ್ರೀಯೆ ಪದ್ಮಾವತಿ; ಆತನ ಮಡದಿ! ಇನ್ನು ಮುಗೀತು – ನಡೀ ಕತಿ.

ಹಿ : ಪಕ್ಷೀ ಬರ್ ಅಂತ ಹಾರಿಹೋದ್ವು – ದೇವಲೋಕಕ್ಕ.

ಕ : ಬಾಳಭಿಕ್ಷುಕನ ಕತಿ – ಸಂಪೂರ್ಣ ಕೇಳಿದ ತಕ್ಷ್ಣಕ್ಕೆs ಬಾವಿ ದಂಡಿಯಿಂದ ಕುಪ್ಪಳಿಸಿ ಹಾರಿ ಬಂದು

|| ಪದ ||

ಎದ್ದೇಳೇ ಎನ್ನ ಮಡದೀಶಿವಯನ್ನ ಹರ ಮಾದೇವ.
ಎದ್ದೇಳೇ ನನ ಮಡದೀಶಿವಯನ್ನ ಹರ ಮಾದೇವ.
ವನವಾಸ ಪಡೆದು ಬಂದೇವೇಶಿವಯನ್ನ ಹರ ಮಾದೇವ.

ಕ : ಮಡದೀ ಭುಜದ ಮ್ಯಾಲೆ ಕೈಯಿಟ್ಟ “ಮಡದೀ, ಮಡದೀ, ಪದ್ಮಾವತೀ, ಎದ್ದೇಳು – ಏಳು ಮಡದೀ’ ಅಂತ ಎಬ್ಬಿಸ ಬೇಕಾರ – ಕಳ್ಳ ಬಂದಂಗಾತು ಕನಸಿನ್ಯಾಗ! ದಿಡಗ್ನs ಎದ್ಲು ಪದ್ಮಾವತೀ!

ಹಿ : ಯಾರು ಸ್ವಾಮಿ!

ಕ : ಓ ಮಡದೀ.

ಹಿ : ಆಹಾ!

ಕ : ಮಡದಿ ಅಂಬೋ ಸೊಲ್ಲು ಯಾರು ಬಿಡುಗಡಿ ಮಾಡಿದ್ರು? ಪತೀ, ಪತೀ ಅಂದ್ಹೇಳಿ ಪತೀ ಪಾದಾ ಹಿಡದ್ಲು-

ಹಿ : ಪಾದಾ ಹಿಡದ್ಲು.

ಕ : ಪುಣ್ಯಾತ್ಮಳೇ, ನಾನು ಗೇಣು ಕೂಸು, ರಕ್ತದ ಕಂದನಿದ್ದೆನಂತೆ! ನನಿಗೆ ನೀನು ಮಡದಿಯಾಗಿ ತಲಿಮ್ಯಾಲೆ ಹೊತ್ತುಕೊಂಡು ವನವಾಸ ಪಡೆದಿ!

ಹಿ : ಆಹಾ!

ಕ : ಪಕ್ಷಿಗಳು ಎಲ್ಲಾ ಕತೀನೂ ವೃತ್ತಾಂತ ಮಾಡಿದವು. ನೀನು ಧರ್ಮದ ತಾಯಿ, ಕರ್ಮದ ಹೆಂಡತಿ!

ಹಿ : ಕರ್ಮದ ಹೆಂಡತಿ!

ಕ : ಬಾಳಭಿಕ್ಷುಕ ಬಾವಿ ಹತ್ರ ನಿಂತು ಕರೀತಾನ – ದೇವಕನ್ನೇ……ದೇವಕನ್ನೇ

ಹಿ : ಏನು ಪತೀ ….

ಕ : ಬಾ ಹೊರಗ.

ಹಿ : ಒಳ್ಳೇದು ಇದೋ ಬಂದೆ.

ಕ : ಪದ್ಮಾವತೀ ಈಕಿ ದೇವಕನ್ಯೆ, ನಿನ್ನಂತೆ ನನ್ನ ಪ್ರಾಣಾ ಕಾಪಾಡಿದಾಕಿ, ನೀವಿಬ್ರೂ ನನ್ನ ಧರ್ಮದ ತಾಯಿಗಳು; ಪತ್ನಿಯರು.

ಹಿ : ಅಕ್ಕ – ತಂಗಿ ಭೆಟ್ಟಿ ಆತು.

ಕ : ದೇವಕನ್ನೆ ಅಂತಾಳೆ – ಅಕ್ಕಾ ನಿನ್ನಿಂದ ನಾನು ಮುತ್ತೈದಿತನದ ನೋಡ್ದೆ. ನೀನು ನನ್ನ ಕಾಪಾಡಿದೆ. ನಾವಿಬ್ರೂ ಸತಿಯರಾದೆವು – ರಾಜಗ!

ಹಿ : ಒಳ್ಳೆಯದಾಯಿತಮ್ಮಾ – ತಂಗೀ!

ಕ : “ಏಕಂಚಿ ಪಟ್ಣಕ್ಹೋಗಾನು ನಡೀರಿ ಮೂವರು. ಅಲ್ಲಿ, ಸಂಗವ್ವನ ಮನಿಯಾಗ ನನ್ನ ಮುತ್ತೈದಿತನಾದ ತೊಟ್ಲೈತಿ” ಅಂದಳು ಹಿರೇ ಮಡದಿ.

ಹಿ : ಹೋಗೋನು ಮಡದಿ.

ಕ : (ರಾಗವಾಗಿ) ಮೂವರೂ ಬರ್ತಾರೆ ಊರಿಗೆ….

ಹಿ : ಆಹಾ!

ಕ : ಇವ್ರು ಬಜಾರದಾಗ ಬರೋದನ್ನ ಸಂಗಮ್ಮ ನೋಡಿದ್ಳು-

ಹಿ : ಅಯ್ಯೋ ರಾಜಾ ಬಂದಾ! (ರಾಗವಾಗಿ) ಏನು ಮಾಡ್ತಾನೋ ಏನೋ ತಾಯೀ ನನಗೈ….

ಕ : ಸಂಗವ್ವ ಒಳಗ ಹೋಗಿ ಗಾಡಿನತ್ತು ; ಮುತ್ತಿನ ತೊಟ್ಲು ; ಗೀರುಬಳಿ; ಚಂದ್ರಹಾರ ಎಲ್ಲಾ ತಗೊಂಡು ಹೊರಬರೋ ಹೊತ್ತಿಗೆ ಆ ಗಂಡಾ ಹೆಂಡ್ರೂ ಬಂದ್ರು.

ಹಿ : ಸಂಗಮ್ಮ ಅಂತಾಳ – ತೊಗೊಳ್ರಿ ಇವೆಲ್ಲಾವು ನಿಮ್ಮವು.

ಕ : ಆದ್ರ-

ಹಿ : ಪದ್ಮಾವತಿ ಹೇಳತಾಳ – ಸಂಗಮ್ಮಾ, ತಾಯೀ ನೀನು ನನಗೂ ನನ್ನ ಗಂಡಗೂ ಜ್ವಾಪಾನ ಮಾಡಿದಿ. ಈ ಎಳ್ಡೂ ಗೀರುಬಳಿ ತಗೋ ; ಈ ಚಂದ್ರಹಾರ ತಗೊ….. ಸುಖವಾಗಿ ಊಟಮಾಡಿಕೊಂಡಿರು.

ಹಿ : ಹೌದು.

ಕ : ಗಾಡಿನತ್ತು ತಗೊಂಡು, ಪತಿಗೆ ನಮಸ್ಕಾರ ಮಾಡಿ ಮೂಗಿನ್ಯಾಗ ಇಟಗೊಂಡ್ಲು, ಮುತ್ತೈದಿತನದ ತೊಟ್ಲಾ ತಲಿಮ್ಯಾಲೆ ಹೊತ್ಗೊಂಡ್ಲು.

ಹಿ : ಮೂವರೂ ರಾಜಬೀದಿ ಹಿಡದ್ರು.

ಕ : ರತನಭೋಗ ಮಹಾರಾಜ ಬಾಳಭಿಕ್ಷುಕನ್ನ ಕಾಣತ್ಲೇ ಕರೆಸಿ ಕೇಳಿದಾ – ಎಲೋ ಬಾಳಭಿಕ್ಷುಕ ನನ್ನ ಮತ್ತು ಮಂತ್ರಿ ಮಕ್ಳು ಎಲ್ಲಿ ಹೋದ್ರು? ನೀನೆಲ್ಲಿ ಬಿಟ್ಟಂದಿ? –

ಹಿ : ಎಲ್ಲಿ ಬಿಟ್ಟಂದಿ?

ಕ : ಮಹಾರಾಜ್ರೇ ನಿಮ್ಮ ಮಗ ಐರಾಮ ಮತ್ತು ಮಂತ್ರೀ ಮಗ ಶಿವಗಣ್ಯ ನನ್ನ ಕೊಲೀ ಮಾಡಲಿಕ್ಕ ಕರ್ಕೊಂಡು ಹೋಗಿದ್ದಕ್ಕ ಅವರಷ್ಟಿಗೆ ಅವ್ರೇ ಪ್ರಾಣ ಕಳಕೊಂಡ್ರು.

ಹಿ : ಹೌದೇ!

ಕ : “ಬೇಕಿದ್ರೆ ನೀವೂ ಯುದ್ಧ ಮಾಡಂಗಿದ್ರ ಬರ್ರೀ ರಾಜಾ” ಅಂದ ಬಾಳಭಿಕ್ಷುಕ.

ಹಿ : ಸಾಕು ಸಾಕು. ಮಹಾಶೂರ ನೀನು.

ಕ : ಪರಸ್ತ್ರೀಯರ ಮೇಲೆ ಮನಸ್ಸಿಟ್ಟಂಥಾ ಪಾಪಿಷ್ಠರು ಅವರಿಬ್ರೂ ; ಕಾಗಿಗೂಗಿ ಪಾಲಾದ್ರಲ್ಲ, – ನನಿಗೆ ಸಂತೋಷಾತು! ಬಾಳಭಿಕ್ಷುಕ ನೀನೇ ನನ್ನ ಮಗ. ತಗೋ ಅರ್ಧ ರಾಜ್ಯ, ಆರುಸಾವಿರ ದಂಡು ಕೊಡ್ತೀನಿ ಅಂದ ರಾಜ.

ಹಿ : ಅದನ್ನೆಲ್ಲಾ ಪಡಕೊಂಡು ಬಾಳಭಿಕ್ಷುಕ ಆ ಊರ ದೇವರಿಗೆಲ್ಲಾ ಹಣ್ಣುಕಾಯಿ ಕೊಟ್ಟು.

ಕ : ಭದ್ರಾವತಿ ಪಟ್ಣಕ್ಕೆ ಎಲ್ಲಾರ್ನು ಕರಕೊಂಡು ಬಂದ.

ಹಿ : ಆತನ ಮಾವನ ಮನಿ.

ಕ : ಪದ್ಮಾವತಿ ತೌರುಮನಿ.

ಹಿ : ಭದ್ರಶೇಕ ಮಹಾರಾಜ ಬೆಪ್ಪಾದ,

ಕ : ಇದೇನಿದು! ರೂಪದಲ್ಲಿ ಚಲೋ ಇದ್ದಿಲ್ಲ ನನಳ್ಳಿಯ! ಅವನ್ನೇನಾರ ಕೊಲೀ ಮಾಡಿದ್ರೋ? ಇಲ್ಲಾ ಆ ಗಂಡನ್ನ ಬಿಟ್ಟು ಇವನಿಗೆ ನನ್ನ ಮಗಳು ಲಗ್ನ ಆಗ್ಯಾಳೋ ಯಾರು ಈತ?

ಹಿ : ಪದ್ಮಾವತಿ ತಂದಿ – ತಾಯಿಗೆ ಅನುಮಾನ!

ಕ : ಮಗಳಿಗೆ ಎಲ್ಲಾ ಅರ್ಥಾತು. ಆಕಿ ಹೇಳ್ತಾಳ – ಅಪ್ಪಾ, ತಂದೆ ನನ್ನ ಲಗ್ನದಾಗ ತೊಟ್ಲಲ್ಲಿ ಮಲಗಿದ್ದಂಥಾ ಕಂದಯ್ಯನೇ ನನ್ನ ಗಂಡ, ಬಾಳಭಿಕ್ಷುಕ! ನನ್ನ ಎಡಗಡಿಗೆ ಕುಂತವ್ನು – ಅವನು ಪ್ರಧಾನಿ ಮಗ; ಆತ ನನ್ನ ಮಗನ ಸ್ವರೂಪ ತಂದೆ.

ಹಿ : ಮೋಸದ ಲಗ್ನ ಮಾಡಿದ್ದ ಬುದ್ಧಿವಂತ ಮಂತ್ರಿ!

ಕ : ಮಗಳು ಎಲ್ಲಾ ವನವಾಸದ ಕತಿ ಹೇಳಿದಾಗ ತಮ್ದೆ ಅಂತಾನೆ – ಭಲೇ ಮಗಳೇ….ಭಪ್ಪರೆ ಮಗಳೇ….ಭಳಿರೇ ಮಗಳೇ…..ಮುತ್ತು ಹವಳ ಕಲೆತ್ಹಂಗಾತು.

ಹಿ : ನಿನ್ನ ಯವ್ವೌನಕ್ಕೂ ಈ ರಾಜಕುಮಾರ ಅಳಿಯಗೂ ಜೋಡಿ!-

ಕ : ನೋಡಿ ಆನಂದಾತು.

ಹಿ : ಮಾವ ತನ್ನ ದಂಡು ದರ್ಬಾರು ಉಡುಗೊರಿ ತೊಡುಗರಿ ಕೊಟ್ಟ, ಮಗಳಿಗೆ ಕೊಡೋದು ಕೊಟ್ಟ.

ಕ : ಎಲ್ಲಾರನೂ ಕರಕೊಂಡು ಬಾಳಭಿಕ್ಷುಕ ಮಡದಿ ಸೈತ ಕಾಶಿಗಿರಿ ಪಟ್ಣಕ್ಕೆ ಬರ್ತಾನೆ.

ಹಿ : ಊರ ಹೊರಗ ರಾಜನ ಮನಿದೇವಿ ಕಾಳಿಕಾ ಗುಡಿಗೆ ಬಂದನಂತ್ರ ಪದ್ಮಾವತಿ-

ಕ : ತನ್ನ ಅತ್ತಿ – ಮಾವಗ ಪತ್ರ ಬರೀತಾಳೆ – ಮಾವಾ ಸಾವಚಿತ್ತ ಮಾರಾಜಾ, ಅತ್ತೆ, ಪೂಲಾವತೀ, ಮಂತ್ರಿ ಬುದ್ಧಿವಂತ ಇವರಿಗೆ – ಇಷ್ಟು ವರ್ಷ ವನವಾಸ ಪಡದು ಇವತ್ತು ನನ್ನ ಗಂಡನ್ನ ಕರಕೊಂಡು ಕಾಳಿಕಾ ಗುಡಿಗೆ ಬಂದೀನಿ. ನೀವು ಬಂದು ಮುಖ ತೋರಿಸ್ಬೇಕು.

ಹಿ : ಆ ಕಾಗ್ದಾ ನೋಡಿದ ತಕ್ಷಣಕ್ಕs ಅತ್ತಿ-ಮಾವ, ದಂಡು-ದರ್ಬಾರ, ರೈತ್ರು, ಬ್ಯಾಡ್ರು, ವಕ್ಕಲಿಗರು, ಶೆಟ್ರು, ಸಾವಕಾರ್ರು, ದೊಡ್ಡೋರು ಸಣ್ಣೋರು-ಏನ್ ಜನವೋ ಜನ ಬಂದು ಬಿಟ್ರು ಗುಡೀಗೆ!

ಕ : ಅಂಬಾಭವಾನಿಗೆ ಪೂಜಿ ಮಾಡಿದ್ರು.

ಹಿ : ಹೌದು.

ಕ : ಸಾವಚಿತ್ತ ಮಹಾರಾಜ ಅಂತಾನೆ.

ಹಿ : ಆಶ್ಚರ್ಯ!

ಕ : ಸೊಸಿ ಪದ್ಮಾವತೀ, ಲಗ್ನದಲ್ಲಿ ನೋಡಿದ ನಿನ್ನ ಮಕ ಈಗಲೂ ಅದೇ ರೂಪ, ಅದೇ ಲಾವಣ್ಯ, ಅದೇ ಯವ್ವೌನ ಐತಲ್ಲ ಮಗಳೇ!

ಹಿ : ಆಹಾ!

ಕ : ಮಹಾತಾಯೀ ನೀನು ಧರ್ಮಾತ್ಮೆ! ಮಹಾಪತಿವ್ರತಾ ಶಿರೋಮಣಿ!

ಹಿ : ಹೌದು!

ಕ : ನಮ್ಮ ಮರಣಕ್ಕೆ ಹೆದರಿ ಹೆಡದಮಗ ಬಾಳಭಿಕ್ಷುಕ ಕುಮಾರನ್ನೂ ನಿನ್ನೂ ಅಡವೀವಳಗ ಬಿಟ್ಕೊಟ್ಟು ಬಂದಿದ್ವಲ್ಲಮ್ಮಾ ಪದ್ಮಾವತೀ!

ಹಿ : ನಿನಿಗೆ ನಮ್ಮ ವಂನೆಗಳಿರಲಿ.

ಕ : ಅದಕ್ಕ ಸೊಸಿ ಅಂತಾಳೆ – ಮಾವಾ ನಿಮ್ಮ ಕೃಪಾದಿಂದ ನನ್ನ ಮುತ್ತೈದಿತನ ಬೆಳೀತು. ನಿಮಗೂ ಅತ್ತಿಗೂ ನನ್ನ ನಮಸ್ಕಾರಗಳಿರಲಿ.

ಹಿ : ಕಾಳಿಕಾದೇವಿಗೆ,

ಕ : ಪೂಜಾ ಮಾಡಿಸಿದ್ರು. ಮುಹೂರ್ತ ನೋಡಿ ಬಾಳಭಿಕ್ಷುಕ ರಾಜಕುಮಾರಗ ರಾಜಪಟ್ಟ ಕಟ್ಟಿದರು.

ಹಿ : ರಾಣೀಪಟ್ಟ ಪದ್ಮಾವತಿಗೆ ಕಟ್ಟಿದ್ರು. ದೇವಗನ್ನಿ ಚಿಕ್ಕರಾಣಿ ಆದ್ಲು.

ಕ : ಈ ಪ್ರಕಾರವಾಗಿ ಬಾಳಭಿಕ್ಷುಕ – ಪದ್ಮಾವತಿ ಕತಿ ಇಲ್ಲಿಗೆ ಮುಕ್ತಾಯ.

|| ಮಂಗಳ ||

|| ಪದ ||

ಅಂಬಗೆ ಬೆಳಗೀರಾರುತಿಯ ಎತ್ತೀರಾರುತಿಯ
ದೇವಿಗೆ ಬೆಳಗೀರಾರುತಿಯ ಎತ್ತೀರಾರುತಿಯ
ಅಂಬಾ ಶಾಂಭವಿಗೆ ನೆನದೇವೋ ಎತ್ತೀರಾರುತಿಯ
ಗಂಧ ಅಕ್ಷತಿ ಚಂದದ ಪೂಜೆ ಮಾಡಿ
ಗಂಧ ಅಕ್ಷತಿ ಚಂದದ ಪೂಜೆ ಮಾಡಿ
ದೇವಿ ಶಾಂಭವಿಗೆ ನೆನದೇವೋ ಎತ್ತೀರಾರುತಿಯ
ಅಂಬಗೆ ಬೆಳಗೀರಾರುತಿಯ ಎತ್ತಿರಾರುತಿಯ
ಲಂಕೆಗೆ ಹನುಮಂತ ಹೋಗಿ ಲಂಕೆಯ ಸುಟ್ಟ
ಲಂಕೆಯ ಸುಟ್ಟ ಹನುಮಂತಗೆ
ರಾಮ ಲಕ್ಷ್ಮಣಗೆ ನೆನೆದೇವೊ ಎತ್ತಿರಾರತಿಯ
ಅಂಬಗೆ ಬೆಳಗೀರಾರುತಿ ಎತ್ತೀರಾರುತಿ.
ಜಯಾ ಜಯ ನಮಃ ಪಾರ್ವತೀಪತಿ ಹರಹರ ಮಹಾದೇವ