ಹಿ : ಇದೇ ಜಾಗ ಅದು!

ಕ : ಓಹೋ ಇದೇ ಜಾಗ! ?

ಹಿ : ಹೌದೂ.

ಕ : ಈ ಜಾಗದಾಗ ಏನೈತಿ? ಹಿಡಂಬ ಯಾಕಡೆ ಹೋಯ್ತು!- ಅಂತ ರಾಜ ಹಲಬುತಾನೆ;

ಹಿ : ಆಹಾ!

ಕ : ರಾಜಾ ನಿನ್ನ ಮಗನಿಗೂ ನಿನ್ನ ಮಡದಿಗೂ ಕರ್ಕೊಂಡ್ಹೋಗೋದು ಇರ್ಲಿ ; ಈಗ ನಾವಿಬ್ರೂ ಜತಿಲೇ ಹೋದ್ರೆ ನಿನ್ನ ಮಡದಿ ನಿನ್ನ ಮಗ ಸಿಗೋದಿಲ್ಲ.

ಹಿ : ಹೌದೂ.

ಕ : ನೀನೊಂದು ಕಡೆಯಿಂದ ನೋಡ್ಕೊಂತಾ ಬಾ, ನಾನು ಒಂದು ಕಡಿಯಿಂದ ಹುಡ್ಕೊಂತಾ ಬರ್ತೀನಿ. ನಿನಗ ಸಿಕ್ರ ನೀನು ಕರ್ಕೊಂಡು ಊರ ಕಡಿಗೆ ನಡೀ, ನನಿಗೆ ಸಿಕ್ಕರೆ ನಾನು ಊರ ಕಡಿಗೆ ಕರ್ಕೊಂಡು ಬರ್ತೀನಿ.

ಹಿ : ಆಹಾ ಚಲೋ ಉಪಾಯ ಹುಡುಕಿದ್ಯೊ-ದುರ್ಜಯ! ನೀನು ಯಾಕಡಿಗೆ ಹೇಳ್ತೀಯೋ ಆ ಕಡಿ ಹೋಗ್ತೀನಿ ನಾನು.

ಕ : ನೀವು ಈ ಕಡೆಗೆ ಹೋಗ್ರಿ ಮಹಾರಾಜ್ರೆ-ಅಂತಾ ಚಂಡಿಕಾ ಗುಡಿದಾರಿ ಬಿಟ್ಟು ದುರ್ಜಯ ಅಡವಿ ದಾರಿ ತೋರ್ಸಿದ- ಉದಯವಾನಗೆ!

ಹಿ : ಆಹಾ!

ಕ : ಶೀಲಾವತೀ….ಶೀಲಾವತೀ…ರಾಕ್ಷಸ ಯಾವ ಗುಡ್ಡದಾಗ ನಿನಗೆ ಒಯ್ದಿಟ್ಟಿತು? ಎಲ್ಲಿದ್ದೀ ಮಡದೀ? -ಅಂತ ಅಂಬ್ಲಿಕೊಂತಾ ಹೋಗ್ತಾನೆ! ಈ ರಾಜಗೆ ವನವಾಸ!

ಹಿ : ಹೌದು ವನವಾಸ!

ಕ : ಇತ್ತ ಕಡಿಗೆ, ದುರ್ಜಯ ಚಂಡಿಕಾಗುಡಿಗೆ ಬರಬೇಕು ಅನ್ನೋ ಟೈಮಿನಾಗ-

ಹಿ : ಹೌದೂ.

ಕ : ಆಯಮ್ಮ (ರಾಗವಾಗಿ) ತಾಯೀ ಮುಂದೆ ನಿಂತ್ಲು ; “ಯವ್ವಾ ಜಗದಂಬಾ ದುರ್ಜಯ ಮತ್ತೆ ಬರಬಹುದು ಇನ್ನು ದಾರಿ ಬಿಡು ಹೋಗ್ತೀನಿ ಹೊರಗs”

ಹಿ : ವನವಾಸ!

ಕ : (ರಾಗವಾಗಿ) ನನ್ನ ಮಗನ ಶ್ರಮ ನಿನ್ನ ಗುಡಿಯಾಗs ಇರ್ಲೀ – ಅಂತಾ ಕಾಲುದೆಸಿಗೆ ಇಟ್ಟಾಳೇ….

ಹಿ : ಆಹಾ………..

ಕ : ಧಡಗ್ಗ್ ಅಂತ ಕದಗಳು ಉಚ್ಚಿದ್ವು! ಹೊರಗ ಬಂದ್ಲು, ಕದಗಳನ್ನ ಗಪ್ಪನೆ ಮುಚ್ಚಿಬಿಟ್ಟು – ಚಂಡಿಕಾದೇವಿ!

ಹಿ : ವನವಾಸ!

ಕ : || ಪದ ||

ವನವಾಸ ನಡದಾಳೈ….ಹರಯನ್ನ ಮಾದೇವಾ.
ವನವಾಸ ನಡುದಾಳಾ….ಹರಯನ್ನ ಮಾದೇವಾ.
ಎರಡರ್ಧಾರಿ ಹೋಗ್ಯಾಳಾ….ಹರಯನ್ನ ಮಾದೇವಾ.
ಅಲ್ಲಿ ಕೊಳ್ಳದಾಗ ಇಳದಾಳಾ….ಹರಯನ್ನ ಮಾದೇವಾ.
ಯವ್ವಾ ಗಿಡದಾಗ ಬಂದ್ನೆಲ್ಲಾ….ಹರಯನ್ನ ಮಾದೇವಾ.

ಕ : ದುರ್ಜಯ ಬಂದು ಕಮಾನ್ ಕಟಿಕ್ಯಾಗ ಹಣಿಕಿ ನೋಡ್ತಾನೆ – ಇಲ್ಲ!

ಹಿ : ಆಹಾ ಹೋಗ್ಯಾಳೆ!

ಕ : ಎಲ್ಲಿ ಹೋಗ್ಯಾಳೆ!

ಹಿ : ಎಲ್ಲಿ ಹೋಗಿದ್ದಾಳು?

ಕ : ಈಕಿ ಕಾಲಾಗ ನನ್ನ ಪ್ರಾಣ ಹೋದ್ರೂ ಚಿಂತಿಲ್ಲ, ನಾನು ಹುಡಕ್ಬೇಕು ಅಂತ ಅಂದ ದುರ್ಜಯ! ಇವನು ಅಡವಿ ದಾರಿ ಹಿಡದಾ!

ಹಿ : ವನವಾಸ ಇವನಿಗೆ!

ಕ : ಉದಯವಾನಗೆ ವನವಾಸ, ದುರ್ಜಯಗೆ ವನವಾಸ, ಶೀಲಾವತೆಮ್ಮಗೆ ವನವಾಸ-

ಹಿ : ಎಲ್ರಿಗೂ ವನವಾಸ!

ಕ : ಗಿಡದ ಕೆಳಗೆ ಕಣ್ಣೀರು ತಂದ್ಕೊಂಡು ಶೀಲಾವತ್ತೆಮ್ಮ ಕುಂದ್ರಾಕರ – ಅಲ್ಲಿ ಯಾರು?

ಹಿ : ಕಪ್ಪತ್ ಗುಡ್ಡದಾಗಿನ ಕಳ್ಳ!-

ಕ : ಪಕ್ಕಾಕಳ್ಳ!

ಹಿ : ಹೌದೂ!

ಕ : ಮುಕುಳಾಗ ಲಂಗೋಟಿ, ತಲಿಮ್ಯಾಲೆ ಚಂಗೂಟಿ, ಹೆಗಲಮ್ಯಾಲೆ ಕಂಬ್ಳಿಕೋರಿ, ಕೈಯಾಗ ಜಾಲೀತೊಗಟಿ ಹಿಡಕೊಂಡಾನ ಅವನು!

ಹಿ : ಅಸಾಧ್ಯ ಕಳ್ಳ!

ಕ : ಬೇಕ್‍ಬೇಕಾದ್ದೇ ಕಳುವುಮಾಡಿ, ತನ್ನ ಗವಿ ತುಂಬ್ಯಾನ;

ಹಿ : ಒಂದು ಮನಿ ಇದ್ಹಾಂಗೆ ಐತಿ – ಆ ಗವಿ!

ಕ : ಹಂಡೇವು, ತಪಾಲಿ, ಕೊಳಗಲಿ, ಚರಿಗೀ ಕೊಡಪಾನ, ಅಕ್ಕಿ ಬೆಲ್ಲ ಬ್ಯಾಳಿ, ಗೋದಿ ಕಡ್ಲಿ, ಸಕ್ರಿ, ತುಪ್ಪಾ, ಹುಲಿಗಿಣ್ಣ ಮೊದಲು ಮಾಡ್ಕೊಂಡು ಅವನು ಸಂಪಾದನಿ ಮಾಡ್ಯಾನೆ ಆ ಪಕ್ಕಾಕಳ್ಳ!

ಹಿ : ಹೌದೂ!

ಕ : ಆ ಕಳ್ಳ ಹುಣಸಿ ಮರದ ಕೆಳಗs ಬಂದ-

ಹಿ : ನೆಳ್ಳಿಗೆ ಬಂದ.

ಕ : ಒಂದು ಸೋಗಿನಂಥಾ ದನಿ ತಗದು ಆತುಗೊಂತ ಕುಂತ ಸ್ತ್ರೀಯಳನ್ನು ನೋಡಿದ!-

ಹಿ : ಶೀಲಾವತಿಗೆ ನೋಡಿದ!

ಕ : ಆಹಾ ಸ್ತ್ರೀಯಳೆ ಯಾರು ನೀನು?

ಹಿ : ಅಪ್ಪಾ ನನಗೆ ಯಾರು ಅಂತ ಕೇಳ್ತೀಯಾ?

ಕ : ನಾನು ಪರದೇಶಿ, ವನವಾಸಿ – ನನ್ನ ಹೆಸರು ಶೀಲಾವತಿ ಅಂತಾರೆ ಅಣ್ಣಯ್ಯ

ಹಿ : ನೀನು ವನವಾಸಿ! ಪರದೇಶಿ!! ಹೌದೇ?

ಕ : ಹೌದು ಅಣ್ಣಯ್ಯ.

|| ಪದ ||

ನನಗs ಮಡದಿಯಾಗ ಬೇಕೆ ನೀನೈ……..ಹರಯನ್ನ ಮಾದೇವಾ.
ನನ್ನ ಮಡದಿ ನೀನು ನೋಡೇ………ಹರಯನ್ನ ಮಾದೇವಾ.

ಕ : ಬಪ್ಪರೇ ಸ್ತ್ರೀಯಳೇ! ಶೀಲಾವತಿ ನಿನಗೆ ಯಾರುಗತಿ ಇಲ್ಲ, ನನಗೆ ಮಡದಿ ಇಲ್ಲ, ಮಕ್ಕಳಿಲ್ಲ, ಸಂಸಾರ ಇಲ್ಲ, ಲಂಬಾಟಿಲ್ಲ – ನಾನೇ ನಿನ್ನ ಗಂಡ.

ಹಿ : (ರಾಗವಾಗಿ) ದೇವಾs…….ದೇವಾs……..

ಕ : ಅಣ್ಣಾ ನಿನ ತಂಗಿನಾನು…..ಇಂಥಾ ಮಾತು ಹೇಳ್ಬ್ಯಾಡ ಅಣ್ಣಾ!
ನಿನ್ನ ತಾಯಿ ಇದ್ಹಂಗಪಾ………..
ನಿನ್ನ ಮಗಳಿದ್ಹಂಗs………..

ಹಿ : ಆಹಾ!

ಕ : ಎಲೇ ಹೆಣ್ಣೇ, ಅಪ್ಪಾ ಅಣ್ಣಾ ಅಂದ್ರ ತಲಿ ಬುರುಡಿನೇ ಹೊಡದೇನು.

ಹಿ : ಹೌದು.

ಕ : ನನಗೆ ಗಂಡ ಅನ್ನಬೇಕು ನೀನು

ಹಿ : ಹೌದು ಹೌದು.

ಕ : ಹೇಳೀ ಕೇಳೀ ಕಳ್ಳ! ಕಳವು ಮಾಡೋನಿಗೆ ಅಂತಃಕರಣ ಇಲ್ಲ. ಪತಿವ್ರತಾ ಧರ್ಮ ಅಂಬೋದು ಗೊತ್ತಿಲ್ಲ! ಶೀಲಾವತಿ ಅಂತಾಳೆ -“ಆಗಲಿ ಸ್ವಾಮಿ ನಡ್ರಿ ನೀವೇ ನನ್ನ ಪತಿ”

ಹಿ : ಆಹಾ ಆನಂದವೇ ಆನಂದ ಆಯ್ತು ಆ ಕಳ್ಳಗೆ

ಕ : ಆ ಯಮ್ಮನ್ನ ಗವೀಗೆ ಕರ್ಕೊಂಡ್ಹೋದಾ – ಅಕ್ಕಿ, ಬ್ಯಾಳಿ, ಗೋಧಿ, ಕಡ್ಲಿ, ಬೇಕಾದ್ದೇ ಐತಿ ನೋಡು ಮಡದೀ ; ಅಡಿಗೀ ಮಾಡು; ಇಬ್ರೂ ಊಟ ಮಾಡಾನ ಅಂದ.

ಹಿ : ಸ್ವಾಮೀ ಈಪಾತ್ರಿ – ಪಡಗಾ ನನ್ನ ಅಡಗೀ ಮಾಡಾಕ ಬರದಿಲ್ರೀ…ಇವು

ಕ : ಹಂಗಾರ ಯಾವ ಪಾತ್ರಿಬೇಕು?

ಹಿ : ಜಾತಿ ಹಿತ್ತಾಳಿ ಪಾತ್ರಿಬೇಕ್ಲು. ಅಂದ್ಲು ಶೀಲಾವತಿ!

ಕ : ಹೌದು ಇಷ್ಟೇ ಅಲ್ಲ. ನನ್ನ ಅಡಗೀಗೆ ಗಮಗಡ್ಲಿ ಅಕ್ಕಿ, ಚನ್ನಂಗಿ ಬ್ಯಾಳಿ –

ಹಿ : ಇವು ಮೂರು ಬೇಕು.

ಕ : ಎಲ್ಲಿ ಸಿಗತಾವು ಇವು?

ಹಿ : ಆಹಾ!

ಕ : ಇಲ್ಲಿಗೆ ಮೂರು ಮೈಲುದೂರ ಬಸ್ವಾಲಿಪಟ್ಣ ; ಇವತ್ತು ಸಂತಿ ಐತೆ – ಅಲ್ಲಿ ಇವು ಸಿಕ್ತಾವು.

ಹಿ : ಹೌದು, ಸಿಕ್ತಾವು!

ಕ : ಹೋಗಿ ತೊಗೊಂಡು ಬರ್ಲೇ ಅಂತ್ಹೇಳಿ, ಅವನು ದುಡ್ದು ದ್ರವ್ಯ ತೊಗೊಂಡು ಕಂಬ್ಳಿಕೋರಿ ಹೆಗಲಿಗೆ ಹಾಕ್ಕೊಂಡು ಗಮಗಡ್ಲಿ ಅಕ್ಕಿ, ಚನ್ನಂಗಿ ಬ್ಯಾಳಿ, ಜಾತಿ ಹಿತ್ತಾಳಿಪಾತ್ರಿ……

ಹಿ : ಶೀಲಾವತಿ ಅಡಿಗಿ ಮಾಡೋ ಅಂಥಾ ವಸ್ತು ತರ್ಬೇಕು-

ಕ : ಅಂತ ಹೇಳ್ಕೊಂತ, ಹೇಳ್ಕೊಂತಾ ಬಜಾರದಾಗ ಇವನು ಇತ್ಲಾಗ ಬಂದಾನ

ಹಿ : ಅತ್ತಕಡಿಗೆ ಶೀಲಾವತಿ ಗವಿಬಿಟ್ಟು ಹೊರಗs ಬಂದ್ಲು.

ಕ : (ರಾಗವಾಗಿ) ಯವ್ವಾ ಕಳ್ಳ ಹೋದಾ ಸಂತಿಗೇ….ಈಕಡೆ ದಾರಿಬಿಟ್ಟಾಳೆ ತಾಯಿ!

ಹಿ : ಹೌದೂ!

ಕ : ಮುಂದೋಡ್ತಾಳೆ, ಹಿಂದಕೆ ನೋಡ್ತಾಳೆ – ಕಳ್ಳ ಬಂದ ಅಂತ್ಹೇಳಿ!

ಹಿ : ಹೌದು ಗುಡ್ದದಾಗ ಇಳಿದು ಗಿಡದಾಗ ಅಡಗಿಕೊಂಡಾಳ?

ಕ : ಇವನು, ಕಳ್ಳ ನೋಡ್ತಾನೆ – ಯಾವಕ್ಕಿ, ಯಾವ ಬ್ಯಾಳೋ ಯಾವ ಪಾತ್ರ್ಯೋ ಈ ಸಂತೀ ಗಲಾಟಿಯೊಳಗ ನನಿಗೆ ಯಾವುದೂ ನೆಪ್ಪs ಆಗ್ವಲ್ದು! ಆಕೀನs ಕರ್ಕೊಂಡು ಬರ್ಬೇಕು ಅಂತ್ಹೇಳಿ ಓಡೋಡಿ ಮತ್ತೆ ಗವಿಗೆ ಬಂದ – ಕಳ್ಳಾ! ಏನೇ ಶೀಲಾವತಿ ಒಳಗೆ ಅದೀ ಏನು?

ಹಿ : ಒಳಗ ಅದಾಳೇನು?

ಕ : ಯಾವ ಪಾತ್ರಿ ಅನ್ನೋದು ನನಗ ನೆಪ್ಪಾಗಲಿಲ್ಲ – ನೀನೇ ಬಾ, ತೊಗೊಂಡು ಬರಾನು.

ಹಿ : ಒಳಗ ಐದಿ ಏನೆ?

ಕ : ಅಂದಕಂತಾ ಒಳಗ ಬಂದು ನೋಡ್ತಾನೆ-

|| ಪದ ||

ss. ಶೀಲಾವತಿ ಇಲ್ಲಲ್ಲೋ ಮಡದೀ….ಹರಯನ್ನ ಮಾದೇವಾ.
ಅಗಲಿ ಹೋದ್ಯಾ ನನ್ನ ಮಡದೀ….ಹರಯನ್ನ ಮಾದೇವಾ.
ಎದಿಎದಿ ಬಡ್ಕೊಂತಾನೈ….ಹರಯನ್ನ ಮಾದೇವಾ.

ಕ : ಏನು ಹೆಣ್ಣು, ಏನು ಹೆಣ್ಣದು! ರೂಪದಲ್ಲಿ ದೇವಲೋಕದ ಕನ್ಯಾ, ಆಕಿ ಮುಖ ನೋಡಿದ್ರೇ ನೀರಡಿಕೆ ಹೋಗ್ತಿತ್ತು! ಈ ಇದು ಗವಿ ಬ್ಯಾಡ, ಈ ಕಳ್ಳತನ ಬ್ಯಾಡ…. (ರಾಗವಾಗಿ) ಏನೂ ಬ್ಯಾಡ ಆಕೀ ಹುಡುಕಾಕ ಹೋಗಬೇಕೈ….

ಹಿ : ಹೌದೂ.

ಕ : ಇವನ ದಾರಿ ಒಂದು ಕಡಿಗಾತು; ಆಯಮ್ಮನ ದಾರಿ ಒತ್ತಟ್ಟಿಗೆ ಆತು! ಸೀದಾ ಆ ತಾಯಿ ನಡ್ಕೊಂಡ್ಹೋಗಬೇಕಾದ್ರೆ, ಆಕಡೆ ಗುಡ್ಡ, ಈಕಡೆ ಗುಡ್ಡ ನಡೋ ಮಧ್ಯದಲ್ಲಿ ಅಲ್ಲಿ ಒಂದು ಬಾವಿ-

ಹಿ : ಹೊಕ್ಕು ತುಂಬೋ ಬಾವಿ!

ಕ : ಆ ಬಾವಿಗೆ ಬಂದು ಕೈಕಾಲು ಮುಖ ತೊಳ್ಕೊಂಡು ಒಂದು ಬಗಸಿ ನೀರ್ಕುಡುದ್ಲು.

ಹಿ : ಆಹಾ!

ಕ : ಕವಳಿಹಣ್ಣು, ಕಾರಿಹಣ್ಣು, ಊಟಮಾಡ್ಕೊಂತಾ ಆಯಮ್ಮ ತನ್ನ ಗಂಡ ಉದಯವಾನಗೆ ನೆನಿಸ್ಕೊಂತಾ, ಅತ್ತಿ – ಮಾವಗ ನೆನಿಸ್ಕೊಂತಾ ಆ ಬಾವಿ ದಂಡಿ ಮ್ಯಾಗ ಕುಂತಾಗ-

ಹಿ : ಮೂರುಗಂಟಿ ಟೈಮು!

ಕ : ಆಗ ಅಲ್ಲಿಗೆ ಯಾರು ಬರ್ತಾರ್ರೀ?

|| ಪದ ||

ಅಡ್ವಿ ಸಿಪಾಯಿ ಅದಾನೇ ಅವನs……ಹರಯನ್ನ ಮಾದೇವಾ.
ತಲಿಮ್ಯಾಲೆ ಜರತಾರದಪೇಟಾ….ಹರಯನ್ನ ಮಾದೇವಾ.
ಅಡವಿಕಾಯಿ ಅಡ್ವಿ ಸಿಪಾಯೀ….ಹರಯನ್ನ ಮಾದೇವಾ.
ಒಂದು ಕುದ್ರಿಮ್ಯಾಲೆ ಬಂದಾನೋ ಅವನಾ…. ನಮಃ ಶಿವಾಯ.
ರಾಜಡ್ರೆಸ್ ಹಾಕೊಂಡಾನ ಅಡವಿಸಿಪಾಯೀ….ಹರಹರಯನ್ನ ಮಾದೇವಾ.
ಬಾವಿ ದಂಡಿಗೇ ಬಂದಾನೋ ದೇವಾ…. ನಮಃ ಶಿವಾಯ.
ಇಲ್ಲಿ ಯಾವ ಸ್ತ್ರೀ ಕುಂತಾಳಲ್ಲೋ….ಹರಹರಯನ್ನ ಮಾದೇವಾ.

ಕ : ಅವನು ಜಾತಿಯಲ್ಲಿ ಮುಸಲ್ಮಾನ! ಸಿಪಾಯಿ ಅಂದ್ರೆ – ಅಡ್ವಿಕಾಯೋ ಸಿಪಾಯಿ! ತಲಿಮ್ಯಾಲೆ ಜರತಾರ ಪೇಟಾ, ಮೈಯಾಗ ಜೋಡು ಅಂಗಿ; ಕುದ್ರಿಬಿಚಾರ; ಕಾಶೀ ನಡುಕಟ್ಟು; ಕುದ್ರಿ ಅಂದ್ರ ಕುದುರಿ! ಠಾಕಣಕುದ್ರಿ!

ಹಿ : ಪಕ್ಷಿಯಂತಾ ಕುದ್ರಿ!

ಕ : ಬಂದು ನೋಡ್ತಾನೆ – ಬಾವಿ ದಂಡಿಮ್ಯಾಲೆ ನಿಗಿ ನಿಗಿ ಕುಂತಿರ್ತಾಳೆ ಸ್ತ್ರೀಯಳು!

ಹಿ : ಆಹಾ!

ಕ : ಆಹಾ ಸ್ತ್ರೀಯಳೇ, ನೀನು ಯಾರು?

ಹಿ : ಸ್ವಾಮೀ ನನಗೆ ಯಾರು ಅಂತೀರಾ?

ಕ : ಓ ಸ್ತ್ರೀಯಳೆ ಹೌದು; ನೀನು ಯಾರು?

ಹಿ : ಶೀಲಾವತಿ ಸ್ವಾಮೀ ನನ್ನ ಹೆಸರು; ನನಾ ತಾಯಿ-ತಂದಿ ಇಲ್ಲ; ಊರು-ಉದ್ಮಾನ ಇಲ್ಲ; ವನವಾಸಿಗಳು ನಾನು.

ಕ : ವನವಾಸಿಗಳು!?

ಹಿ : ಹೌದು ಹೌದು!

ಕ : (ರಾಗವಾಗಿ) ನನಗೇ ಲಗ್ನವಾಗ ಬೇಕೈ ಮಡದೀ….

ಹಿ : ಆಹಾ!

ಕ : ಯಾವಾಗ ನನಗೆ ಮಡದಿ ಆಗ್ಬೇಕು ಅಂತ ಆ ತಾಯೀನ ಅವನು ಕೇಳ್ದಾ – ಆತಕ್ಷ್ಣಕ್ಕs ಕಣ್ಣೀರು ಪಳಕ್ಕನೆ (ರಾಗವಾಗಿ) ಉದುರ್ಯಾವೇ…..

ಹಿ : ಆss….(ಆಲಾಪ)

ಕ : ಆಹಾ ಎಂಥ ರೂಪ ಇರಬಹುದು ನನಗೆ! ಶಂಕರಾ! ಯಾರು ಬಂದ್ರೂ ಬಾರೇ ಮಡದಿ, ಹೋಗೇ ಮಡದಿ ನನಗೆ ಲಗ್ನ ಆಗೇ ಅಂತ ಹೇಳ್ತಾರಲ್ಲ! ಇಂಥ ಜಗತ್ತಿನೊಳಗೆ ನಾನು ಒಳ್ಳೇ ರೂಪಿಷ್ಟಳು ಇರಬಹುದೇ!?

ಹಿ : ಆss…….

ಕ : ಬ್ರಹ್ಮದೇವಾ, ಎಲ್ಲಾ ಸ್ತ್ರೀಯರಿಗೂ ಒಂದು ರೂಪ ಮಾಡಿ ನನಗೆ ಮಾತ್ರ ಬದ್ಲಿ ಎರಡು ರೂಪ ಬರ್ದಿಯಾ? ರೂಪದಲ್ಲಿ ಸೌಂದರ್ಯವಾದ ಕಣ್ಣು, ಮೂಗುಗಳಿಗಿಂತ ಹೆಣ್ಣಿನ ಗುಣವೇ ಶುದ್ಧವಾದದ್ದಲ್ಲವೇನೋ ದೇವಾ.

ಹಿ : ಆss………

ಕ : ಜಗತ್ತಿನ ಬೆಳಕಿನೊಳಗ, ಕಣ್ಣಿಗೆ ಕಾಣುವ ರೂಪವೇ…..ಅಯ್ಯೋ – ಅಂತಾ ಎದಿ ಎದಿ ಬಡ್ಕೊಂತಾ ರೋಧನಾ ಮಾಡ್ಬೇಕಾದ್ರೆ-

ಹಿ : ಇವನು, ಅಡ್ವಿ ಸಿಪಾಯಿ ಅಂತಾನೆ-ಏನೇ-

ಕ : ಹಿಂಗ್‍ಯಾಕ ಮಾಡ್ತೀ?

ಹಿ : ಆಹಾ!

ಕ : ಸ್ವಾಮೀ ನನಗs ಹೊಟ್ಟಿಶೂಲಿ ಎದ್ದೈತೀ…..

ಹಿ : ಹೌದು ಹೊಟ್ಟಿಶೂಲಿ.

ಕ : (ರಾಗವಾಗಿ) ಸ್ವಾಮೀ ಹೊಟ್ಟಿಶೂಲಿ ತಡಿಲಾರಿನ್ರೀ…..ಸ್ವಾಮಿ ಹೊಟ್ಟಿಶೂಲಿ ತಡಿಲಾರಿನ್ರೀ….

|| ಪದ ||

ಅಜೀ ಕಹೇ ಪ್ರಭೂ ಏಕ ಬಾತ್
ಸಬ್ ದಿನ್ ಕಹೇ ಪ್ರಭೂ ಏಕ ಬಾತ್
………………………………………..
…………………………………………
ಉಸಕೆ ಊಪರ್ ಮಾರೇ ಏಕ ಲಾತ್
ಸಬ್ ದಿನ ಕಹೇ ಏಕ ಬಾತ್
ಮಾತಾಪಿತ ಜಾವೋ ಬಾತೆ
ಮಾತಾಪಿತ ಜಾವೋ ಬಾತೆ
ಆತೆ ಮೇರೆ ಪೀಛೆ ಪೀಛೆ ಕೋಯಿ ನಹೀ ಆತೆ
ಸಬ್ ದಿನ ಕಹೇ ಪ್ರಭೂ ಏಕ ಬಾತ್
ಕಹತ್ ಕಬೀರ್ ಸುನಭೈ ಸಾಧು
ಕಹತ್ ಕಬೀರ್ ಸುನಭೈ ಸಾಧು
ಭಜನ್ ಕರೋ ಜುಮ್ಮೇರಾತ್
ಸಬ್ ದಿನ ಕಹೋ ಪ್ರಭೂ ಏಕ ಬಾತ್
ಅಜೀ ಕಹೇ ಪ್ರಭೂ ಏಕ ಬಾತ್
ಸಬ್ ದಿನ್ ಕಹೇ ಪ್ರಭೂ ಏಕ ಬಾತ್

ಕ : “ಏನ್ ಔಷಧಿ ಬೇಕು ನಿನಗೆ? ತಂದ್ಕೊಡ್ತೀನಿ” ಅಂದ ಅವನು-

ಹಿ : ಅಡಿವಿ ಸಿಪಾಯಿ!

ಕ : ಏನೂ ಬೇಕಾಗಿಲ್ರಿ. ಮೊಲದ ಹೆಜ್ಜೆಗಳ ಮಣ್ಣು, ಬೆಕ್ಕಿನ ಉಚ್ಚಿಬೇಕು. ಈ ಹೊಟ್ಟಿಶೂಲಿಗೆ-ಅಂದ್ಲು!

ಹಿ : ಉಪಾಯ!

ಕ : ಮೊಲದ ಹೆಜ್ಜಿ ಮಣ್ಣು, ಬೆಕ್ಕಿನ ಉಚ್ಚಿ ಆದ್ರೆ-

ಹಿ : ಈ ಹೊಟ್ಟಿಶೂಲಿ ಹೋಗ್ತೈತಿ ಹೌದಲ್ಲೋ?

ಕ : ಹಾಗಾದರೆ ಹೋಗಿ ತರ್ತೀನಿ ಅಂದ ಅವನು!

ಹಿ : ಹಾಗಾಗದಿಲ್ಲ ಸ್ವಾಮೀ,

ಕ : ನನಿಗೆ ಬರಾಸಿಲ್ರೀ.

ಹಿ : ಇಲ್ಲ?

ಕ : (ರಾಗವಾಗಿ) ನೀವು ಬರ್ತಾರ ಅನ್ನೋದು ನನಗ ಖಾಯಂ ಇಲ್ಲ…ನಿಮ್ಮ ಡ್ರಸ್ಸು, ಕುದ್ರಿ ಎಲ್ಲಾ ಬಿಟ್ಟು ಹೋಗ್ರೀ…. ಹಂಗಾದ್ರೆ ನನಗೆ ಬರ್ತೀರಿ ಅಂಬೋದು ಬರಾಸ್ ಆಗತೈತೀ…..

ಹಿ : (ರಾಗವಾಗಿ) ಆಹಾs….

ಕ : “ಬಹುತ್ ಅಚ್ಚಾ, ಬಹುತ್ ಅಚ್ಚಾ! – ಅಂದ ಅಡ್ವಿ ಸಿಪಾಯಿ; ಲೇವ್ ಮೇರಾ ಘೋಡಾ, ಲೇವ್ ಮೇರಾ ಡ್ರಸ್, ಲೇವ್ ಮೇರಾ ತಲ್ವಾರ್” ಅಂತ ಬಿಚ್ಚುಗತ್ತಿ ಕುದ್ರಿ ಎಲ್ಲಾ ಬಿಚ್ಚಿ ಕೊಟ್ಟ!

ಹಿ : ಮುಕಳಾಗ ಲಂಗೂಟಿ, ತಲಿಮ್ಯಾಲೆ ಚಂಗೂಟಿ, ಊಟಗೊಂಡು-

ಕ : ಮೊಲದ ಹೆಜ್ಜಿಮಣ್ಣು, ಬೆಕ್ಕಿನ ಉಚ್ಚಿ ತರ್ತೀನಿ ಅಂತ ಹೊಂಟಾ – ಅಡಿವ್ಯಾಗ!

ಹಿ : ಆ ಗುಡ್ಡದಿಂದ ಈ ಗುಡ್ಡಕ್ಕೆ ಬರ್ತಾನೆ, ಈ ಗುಡ್ಡದಿಂದ ಆ ಗುಡ್ಡಕ್ಕೆ ಹೋಗ್ತಾನೆ-

ಕ : ಮೊಲದ ಹೆಜ್ಜ್ಯಾಗಿನ ಮಣ್ಣು ಸಿಕ್ರೂ ಬೆಕ್ಕಿನ ಉಚ್ಚಿ ಸಿಗ್ತಾವಾ ಅಡಿವ್ಯಾಗ ಇವನಿಗೆ?

ಹಿ : ತಿರಿಗೇ ತಿರುಗ್ತಾನೆ, ತಿರೀಗೆ ತಿರುಗ್ತಾನೆ ಇವನು – ಹುಚ್ಚು ಹಿಡದು!

ಕ : ಅಡಿವ್ಯಾಗಲ್ಲಿ ಆಯಮ್ಮಾಈ ಸಿಪಾಯಿನs ಈ ಕಡೆ ಕಳಿಸಿದ್ದೇ ತಲಿಮ್ಯಾಲೆ ಜರತಾರದ ಪೇಟಾ ಸುತ್ತಿಬಿಟ್ಲು – ತುರುಬು ಒಳಗ ಮಾಡ್ಕೊಂಡು!

ಹಿ : ಆಹಾ!

ಕ : ಸೀರಿ ಶರಗ ಬಿಗಿಮಾಡಿ ಕಟ್ಗೊಂಡು, ಜೋಡು ಅಂಗಿ ಹಾಕ್ಕೊಂಡು ಬಿಟ್ಲು. ಮೈಯಾಗ ಇಜಾರ ಹಾಕ್ಕೊಂಡು ಕಾಸೀ ನಡುಕಟ್ಟು ಬಿಗದ್ಲು, ಬಿಚಗತ್ತಿ ಕೈಯಾಗ ಹಿಡ್ಕೊಂಡು ಕುದ್ರಿಮ್ಯಾಲೆ ಕುಂತುಬಿಟ್ಲು.

ಹಿ : ಹೌದೂ.

ಕ : ದೇವಲೋಕದ ದೇವೇಂದ್ರ ಬಂದಾನೇನೋ! ಗಂಡುರೂಪ ಭರ್ಜರಿ ಒಪ್ಪತೈತಿ!

ಹಿ : ರಾಜ ಉಡುಗೊರೆ!

ಕ : ಮೂಗಿನಾಗ ಇರತಕ್ಕಂಥ ಗಾಡಿನತ್ತು ತಗದು ಸೀರಿ ಸೆರಿಗಿನ್ಯಾಗ ಕಟ್ಕೊಂಡು ಬಿಟ್ಲು.

ಹಿ : ಹೌದು ಒಪ್ಪಿದೆ.

ಕ : ಈಗ ನನಗೆ ಮಡದಿ ಅಂಬೋರು ಯಾರು!

ಹಿ : ಆಹಾ!

ಕ : ಅನ್ಕೊಂತಾ ಶೀಲಾವತಿ ಕುದ್ರಿಬಿಟ್ಲು – ಅಡಿವ್ಯಾಗ;

ಹಿ : ಅಡಿವ್ಯಾಗ!

ಕ : ಕುದ್ರಿಮ್ಯಾಲೆ ಕುಂತು ಗರಗರ್ ತಿರುಗತಾ ಮುಂದಕ್ಕ ನಡಿತಾಳ ಅಡಿವ್ಯಾಗ; ಹೊತ್ತು ಮುಳುಗಿದಾಗ ವಸ್ತಿ ಮಾಡ್ತಾಳೆ.

ಹಿ : ಆಹಾ!

ಕ : ಇವನು, ಅಡ್ವಿ ಸಿಪಾಯ್ಗೆ ಮೊಲದ ಹೆಜ್ಜ್ಯಾನ ಮಣ್ಣು ಸಿಗಲಿಲ್ಲ; ಬೆಕ್ಕಿನ ಉಚ್ಚೀನು ಸಿಗಲಿಲ್ಲ!

ಹಿ : ಎಳ್ಡೂ ಸಿಗಲಿಲ್ಲ!

ಕ : ಇವನ್ನ ಬಿಟ್ಟು ಇನ್ನೇನು ಔಷಧ ಬೇಕೋ ಅಂತ್ಹೇಳಿ ಕೇಳೋನು ಅಂತ ಆ ಬಾವಿ ದಂಡಿಗೆ ಬಂದು ನೋಡ್ತಾನೆ – ಇಲ್ಲ, ಇಲ್ಲ! ಶೀಲಾವತಿನೇ ಇಲ್ಲ!!

ಹಿ : ಅರೇರೇ.

ಕ : ಮೇರಾ ಘೋಡಾ ಗಯಾ, ಅರೇರೇ ಮೇರಾ ಡ್ರೆಸ್ ಗಯಾ!…ಕಿದರ್ ಗಯಾ (ರಾಗವಾಗಿ) ಶೀಲಾವತೀ….

ಹಿ : (ರಾಗವಾಗಿ) ಆss…..

ಕ : ಹಣಿ ಹಣಿ ಬಡ್ಕೊಂತಾನ ; ಆಕೀ ಕಾಲಾಗ ನನ್ನ ಪ್ರಾಣ ಹೋದ್ರೂ ಚಿಂತಿ ಇಲ್ಲ, (ರಾಗವಾಗಿ) ಹುಡುಕಾಕ ಹೋಗಬೇಕು ಅಂತಾನೆ ಇವನೂ!

ಹಿ : ಆಹಾ!

ಕ : ಅಡವಿಕಾಯ ಚಾಕರಿ ಬಿಟ್ಟು ಶೀಲಾವತೀನ ಹುಡುಕೋದು ಬಂತು – ಇವನಿಗೆ ವನವಾಸ! ಪಕ್ಕಾಕಳ್ಳಗ ವನವಾಸ್, ಉದಯವಾನ ವನವಾಸ್, ದುರ್ಜಯ ವನವಾಸ್!-

ಹಿ : ಶೀಲಾವತೆಮ್ಮ ವನವಾಸ್, ಎಲ್ಲರೂ ವನವಾಸ್!

ಕ : ಈ ಕತಾ ಪ್ರಾರಂಭದಲ್ಲಿ ಶುಭವಾನ-

ಹಿ : ದೇವಸೇನನ ಚಿಕ್ಕಮಗ, ಸಾಲಿ ಓದುತ್ತಿದ್ನಲ್ಲ-

ಕ : ಆತ ಈಗ ಓದೋದು ಬಿಟ್ಟು ರಾಜತ್ವ ಆಳೋ ಅಂಥ ಪಂಡಿತ ಆಗ್ಯಾನ!

ಹಿ : ಯವ್ವೌನ ಪ್ರಾಯಕ್ಕೆ ಬಂದಾನ!

ಕ : ಒಂದು ದಿವ್ಸ ಶುಭವಾನ ತನ್ನ ತಂದಿ-ತಾಯಿಗೆ ಹೇಳ್ತಾನೆ – ಅಡಿವ್ಯಾಗ ಅತ್ತಿಗಿ ಕಳದ್ದೋದ್ಲು; ಅಣ್ಣ ಆಕಿ ಹುಡುಕಾಕ ಹೋದಾ; ಇನ್ನೂ ಬರ್ಲಿಲ್ಲ! ಅಪ್ಪಾ ಅವ್ವಾ ನಾನು ಹೋಗಿ ಇಬ್ರುನೂ ಹುಡಿಕಿ ಕರಕೊಂಬರ್ತೀನಿ.

ಹಿ : ತಂದೆ ದೇವಸೇನ ಮಹಾರಾಜ ಹೇಳ್ತಾನೆ – ಅಪ್ಪಾ ಮಗನೇ, ಅಗತ್ಯ ಆಗಲಿ; ನಮ್ಮ ಮನಿಯಾಗೊಂದು ಕೀಲ್ಗುದ್ರಿ ಐತಿ; ಬಲಗಡಿಗೆ ಕೀಲು ತಿರುವಿದ್ರೆ ಹೋಗ್ಬೇಕು ಕೈಲಾಸಕ್ಕ; ಎಡಗಡಿಗೆ ಕೀಲು ತಿರುವಿದ್ರೆ ಕೆಳಗ ಇಳೀಬೇಕು-

ಕ : ಇಳೀಬೇಕು.

ಹಿ : ಆಹಾ ಕೀಲ್ಕುದ್ರಿ. ಪರರಾಷ್ಟ್ರದ ಕುದ್ರಿ!

ಕ : ಆ ಕುದ್ರಿ ಮ್ಯಾಲೆ ಶುಭವಾನ ಕುಂತ್ಕೊಂಡು ಬಲಗಡಿ ಕೀಲು ತಿರುವಿಬಿಟ್ಟ. ಅಂತರ ಮಾರ್ಗದಲ್ಲಿ ಅದು ನಡೀತು. ನೋಡ್ಕೊಂತಾ…ನೋಡ್ಕೊಂತಾ ದೇಶಕೋಶ ತಿರುಗುತಾ ತಿರುಗತಾ-

ಹಿ : ಆಹಾ!

ಕ : ಶೀಲಾವತೀ ಅತ್ಗೆಮ್ಮಾ ಅಣ್ಣಾ ಉದಯವಾನಾ- ಅಂತ ಹುಡ್ಕೊಂತಾ ಮುಂದೆ ಕೌಶಂಬೀ ಪಟ್ಣದ ಹತ್ತಿರ ಬಂದ.

ಹಿ : ಹೌದು ಅದು ಕೌಶಂಬಿಪಟ್ಣ. ಅದರ ರಾಜ ಕರಳೆತ್ತಿನ ರಾಜ.

ಕ : ಆ ರಾಜಗೆ ಒಬ್ಳೇ ಮಗಳು- ದೇವಕಮಲಗಂಧಿ; ಋತುಮತಿಯಾಗಿ ಆರುತಿಂಗಳು.

ಹಿ : ಹೌದು.

ಕ : ಆ ದೇವಕಮಲಗಂಧಿ ಏನು ಪ್ರತಿಜ್ಞೆ ಮಾಡ್ಯಾಳ?

ಹಿ : ಅಂತರ ಮಾರ್ಗದಲ್ಲಿ ಬರೋ ರಾಜಾಧಿರಾಜಗೇ ನಾನು ಲಗ್ನ ಆಗ್ಬೇಕು-

ಕ : ಅಂತ ಪ್ರತಿಜ್ಞೆ ಆಕೀದು!

ಹಿ : ಹೌದೂ!

ಕ : ಅಂತರ ಮಾರ್ಗದಲ್ಲಿ ಶುಭವಾನ ಬರುವಾಗ ದೇವಕಮಲಗಂಧಿ ನೋಡಿದ್ಲು-

ಹಿ : ನೋಡಿ ಕೈಬೀಸಿದ್ಲು.

ಕ : ಯಾರೋ ಒಬ್ಬ ಸ್ತ್ರೀಯಳು ನನಗೆ ಕೈ ಬೀಸ್ತ ಅದಾಳೆ! ನಮ್ಮ ಅಣ್ಣನ ಸುದ್ದಿ ಹೇಳ್ತಾಳೋ ಅಥವಾ ನಮ್ಮ ಅತ್ಗೀ ವರ್ತಮಾನ ಹೇಳ್ತಾಳೋ – ಅಂತ್ಹೇಳಿ ಎಡಗಡೆ ಕೀಲು ತಿರುವಿಬಿಟ್ಟ ; ಬರ್ ನೆ ಇಳೀತು ಕುದ್ರಿ!

ಹಿ : ಆಹಾ, ಯಾರು ಮಹಾರಾಜ ನೀವು!

ಕ : ಕರಿವೀರ ಪಟ್ಣದಲ್ಲಿ ದೇವಸೇನ ನಮ್ಮ ತಂದೆ, ಮಹಾದೇವಿ ನಮ್ಮ ತಾಯಿ, ಅವರ ಗರ್ಭದಲ್ಲಿ ಉದ್ಭವಿಸಿದ ಶುಭವಾನ ನಾನು, ಉದಯವಾನ ನಮ್ಮ ಅಣ್ಣ. ಭಾಂಡೇಪುರದ ರಾಜರ ಮಗಳು ಶೀಲಾವತಿ ನಮ್ಮ ಅಣ್ಣನ ಹೆಂಡ್ತಿ ; ಆಕಿ ಗಂಡುಮಗು ಜನನ ಆಗಿ ನಮ್ಮೂರಿಗೆ ಬರಬೇಕಾದ್ರೆ ರಾಕ್ಷಸ ಆ ತಾಯಿ ಮಗನ್ನೂ ಹೊತುಗೊಂಡು ಹೋತಂತೆ, ನಮ್ಮ ಅಣ್ಣನೂ ಇಲ್ಲ ಅತ್ತಿಗೀನೂ ಪತ್ತೇ ಇಲ್ಲ!

ಹಿ : ಹೌದೇ?

ಕ : ಅದರ ಸಲುವಾಗಿ ನಾನು ಹುಡುಕಾಕ ಬಂದೀನಿ.

ಹಿ : ಆಹಾ!

ಕ : ಆಹಾ ರಾಜಾ! ನಾನು ಮಾಡಿದ ಪ್ರತಿಜ್ಞೆಗೂ ನೀವು ಬಂದ ವನವಾಸಕ್ಕೂ ಜೋಡಿ ಆಯ್ತು? (ರಾಗವಾಗಿ) ನನಗೆ ಲಗ್ನವಾಗಬೇಕೈ ನೀವೈ…..ದೇವಕಮಲಗಂಧಿ ನಾನೂ……

ಹಿ : ಶಾಸ್ತ್ರೋಕ್ತದಿಂದ ಲಗ್ನ ಆತು.

ಕ : ದೇವಕಮಲಗಂಧಿ ತನ್ನ ಗಂಡಗ ಇಲ್ಲೇ ಇರ್ಬೇಕ್ರೀ ಅಂತಾಳೆ.

ಹಿ : ಆದ್ರೆ ರಾಜ ಹೇಳ್ತಾನೆ – ಇಲ್ಲ ಮಡದೀ ನಾನು ಇಲ್ಲಿ ಇರೋ ಹಾಂಗಿಲ್ಲ, ವನವಾಸ ಹೋಗ್ತೀನಿ – ನಮ್ಮ ಅಣ್ಣ ಅತ್ಗಿ ಹುಡುಕಾಕ.

ಕ : ತನ್ನ ಗಂಡನ ಮಾತಿಗೆ ಒಪ್ಪಿ ಆ ಸತಿಯಳು – ನಾನು ಬರ್ತೀನಿ ಮಹಾರಾಜ ನಾವಿಬ್ರೂ ಹೋಗೋನು ನಡ್ರಿ ಅಂದ್ಲು.

ಹಿ : ಆಹಾ.

ಕ : ಸತಿ-ಪತಿ ಕೀಲ್ಕುದ್ರಿ ಮ್ಯಾಲೆ ಕುಂತ್ಗೊಂಡ್ರು.

ಹಿ : ಹೌದೂ.

ಕ : ಶುಭವಾನ ಬಲಗಡೆ ಕೀಲು ತಿರುವಿಬಿಟ್ಟ. ಕುದ್ರಿ ಮೇಲೆದ್ದು ಅಂತರ ಮಾರ್ಗದಲ್ಲಿ ಹೋಗ್ತಾ ಐತಿ; ಹೋಗ್ತಾ ಹೋಗ್ತಾ ಹೋಗ್ತಾ ಇರ್ಬೇಕಾದ್ರೆ-

ಹಿ : ಮಧ್ಯರಾತ್ರಿ ಟೈಮು ಆತು.

ಕ : ಆಗ ಆ ದೇವಕಮಲಗಂಧಿಗೆ ಒಳ್ಳೇ ನೀರಡ್ಕಿ ಆಗೇತಿ!

ಹಿ : ನೀರು, ನೀರು,

ಕ : ಎಡಗಡೆ ಕೀಲು ತಿರುವಿಬಿಟ್ಟು ರಾಜ – ಕೆಳಗಿಳೀತು, ಕುದ್ರಿ ; ಬೆಳದಿಗಂಳು ಬಿದ್ದೈತಿ!

ಹಿ : ಹೌದು.

ಕ : ರಾಣೀ ಇಲ್ಲಿ ಎಲ್ಲ್ಯಾದ್ರು ನಿನಗ ನೀರು ತರ್ತೀನಿ ಈ ಕೀಲು ಕುದ್ರಿ ತೊಗೊಂಡು ನೀನಿಲ್ಲೆ ಕುಂದ್ರು – ಅಂತ್ಹೇಳಿ ಶುಭವಾನ ನೀರು ಹುಡುಕಾಕ ನಡದಾ;

ಹಿ : ಹುಡುಕಿ ನೋಡ್ತಾನೆ ಎಲ್ಲೀ ನೀರಿಲ್ಲಾ! ಆಹಾ!

ಕ : ಅಲ್ಲಿ, ಒಂದು ಹಳ್ಳಿ ರೈತರು ಭೂಮಿ ಹೊಡ್ಕೊಂಡು ನಾಲ್ಕಾರು ಬಾವಿ ತೋಡ್ಯಾರೆ. ಅದ್ರಾಗೆ ಒಂದಾಳೆತ್ತರ ನೀರೈತಿ; ಇದೇ ಜಾಡು ಹಿಡದು ನೋಡ್ಕೊಂತ ಬರ್ತಾನ.

ಹಿ : ಹೌದು.

ಕ : ರೈತರು ಹೊತ್ತು ಮುಣಗೋ ಮುಂಚೆ ಆ ನೆಲಸಾಪು ಬಾವಿಗೆ ತಟ್ಟಿ ಮುಚ್ಚಿ ಹೋದ್ರು, ಇದು ಗೊತ್ತಿಲ್ದೆ ಹೋಗಿ ಶುಭವಾನ ಆ ತಟ್ಟಿ ಮ್ಯಾಲೇ ಕಾಲಿಟ್ಟು (ರಾಗವಾಗಿ) ಬಾವ್ಯಾಗ ಬಿದ್ದಾನೈ………

ಹಿ : ಆಹಾ!

ಕ : ತೇಲ್ತಾ ಮುಣುಗುತಾ ಒಂದು ಕಲ್ಲು ಹಿಡ್ಕೊಂಡು ಅದಾನೆ ಶುಭವಾನ!