ಹಿ : ನಾನು ಅವನಿಗೆ ಏನು ವಿದ್ಯಾ ಕಲಿಸ್ಬೇಕು ಹೇಳಮ್ಮಾ.
ಕ : ಹಿಂಗ ಮಾಡ್ರಿ ಮೇಷ್ಟ್ರೇ- “ಎಲೇ ಬಾಳಭಿಕ್ಷುಕ ಬಟ್ಟಿ ವಕ್ಕಂಡು ಬಾ ಹೋಗು” ಅನ್ನ ಬೇಕು. “ಯಕ್ಕೀ ಎಲಿ ತಂಬಾಕು ತಗಂಬಾ ಬಿತ್ತಿ ಸೇದಾದಕ” ಅಂತ ಕಳಿಸಬೇಕು. ಬರೀ ನೀವು ಓಡಾಟ ಕಲಿಸ್ಬೇಕು.
ಹಿ : ಮೇಷ್ಟ್ರು ಕಕ್ಕಾಬಿಕ್ಕಿಯಾದ್ರು; “ಹಿಂಗs ಯಾಕ ಮೊಮ್ಮಗ್ಗ ವಿದ್ಯಾ ಕಲಿಸ್ಬ್ಯಾಡ ಅಂತಾಳ ಈಕಿ?….ನನಗ್ಯಾಕ ಬೇಕು,- ಮೊದಲೇ ಅಲ್ಲಾಬಿಲ್ಲಿ ಈಕಿ”.
ಕ : ಅಂದ್ಕೊಂಡು “ಸಂಗಮ್ಮಾ ಯಾಕಾಗ್ವೊಲ್ಲದಾಕs ಕರ್ಕೊಂಡು ಬಾ” ಅಂದ್ರು. ಸಂಗಮ್ಮ ಮಾತು ಗಟ್ಟಿಮಾಡಿಕೊಂಡು ಗಡಾಗಡಾ ಬಂದ್ಲು ಮನಿಗೆ- “ಪದ್ಮಾವತೀ…”
ಹಿ : ಏನಮ್ಮಾ?
ಕ : ಮೇಷ್ಟ್ರು ಬುದ್ಧಿವಂತರು, ಶಾಣೇರು, ಚಲೋ ವಿದ್ಯಾಕಲಿಸ್ತಾರೆ, ಓದು ವಿದ್ಯಾ ಬುದ್ಧಿ ಶಾಸ್ತ್ರ ಪುರಾಣ ಬೇಕಾದ್ದು ಹೇಳಿಕೊಡ್ತಾರೆ. ಆದ್ರೇ (ರಾಗವಾಗಿ) ಶಾಲಿ ಸಂಬಳ ದುಬಾರಿ ಹೇಳ್ತಾನೆ ಮಗಳೇ….. ಒಂದು ತಿಂಗಳಿಗೆ ಐದುನೂರು ರೂಪಾಯಿ ಕೇಳ್ತಾನೆ!- ಒಂದು ಹುಡುಗ್ಗ!
ಹಿ : ಓ ಪರ್ವಾಗಿಲ್ಲ. ಹೋದ್ರೂ ಹೊಗ್ಲಿ ತಾಯೀ, ನನ್ನ ಗಂಡ ಐದು ಅಕ್ಷರ ಕಲ್ತರ ಸಾಕು; ವಿದ್ಯಾವಂತ ಆದ್ರ ಸಾಕು.
ಕ : ಸಂಗಮ್ಮ ಅಂತಾಳೆ “ಈಗ ರೊಕ್ಕ ಬೇಕಲ್ಲಮ್ಮ ಶಾಲಿಗೆ ಹುಡುಗನ್ನ ಸೇರ್ಸೋದಕ?
ಹಿ : ಹೌದು ರೊಕ್ಕ ಬೇಕು!
ಕ : ಸಂಗಮ್ಮಾ ಮೂಗಿನ್ಯಾಗ ವಜ್ರದ ಗಾಡಿನತ್ತು ಐತಿ. ಇದ್ನs ಮಾರಿ ರೊಕ್ಕ ಕಟ್ಟಿ ಬಿಡು ಮೇಷ್ಟ್ರಿಗೆ.
ಹಿ : “ಕೊಡವ್ವ” ಅಂದ್ಲು.
ಕ : ಪದ್ಮಾವತಿ ಗಾಡಿನತ್ತು ಕೊಟ್ಲು.
ಹಿ : ಹೌದೂ.
ಕ : ಪಲ್ಯದ ಸಂಗವ್ವ ಒಳಕ್ವಾಣಿಗೆ ಹೋದ್ಲು, ಗೀರ್ಬಳೀ ಇಟ್ಟುಕೊಂಡ್ಲು-ಕೈಯಾಗ; ಚಂದ್ರಹಾರ ಹಾಕ್ಕೊಂಡ್ಲು-ಕೊಳ್ಳಾಗ; ಮೂಗಿನಾಗ ಗಾಡಿನತ್ತು ಇಟ್ಕೊಂಡ್ಲು.
ಹಿ : ಆಹಾ ಹೌದು!
ಕ : ಕೈಯಾಗ ಕನ್ನಡಿ ಹಿಡ್ಕೊಂಡ್ಲು.
ಹಿ : ಆಹಾಹಾಹಾ!
|| ಪದ ||
ಮೂಗು ತಿರುತಿರಿವಿ ನೋಡ್ಯಾಳ ಯವ್ವಾ….
ಎಂಥ ಬೇಸ್ ಒಪ್ತೈತಿ ನನಗs…..ಶಿವ ಹರಯನ್ನ ಮಾದೇವ.
ಕ : “ಇಂಥಾ ಗಾಡಿನತ್ತು ಮಾರೋದುಂಟೇ” ಅಂತ್ಹೇಳಿ. ಮೂರೂ ಸಾಮಾನ ತಗದು ಅಡಕ್ಲಿ ಗಡಿಗ್ಯಾಗ ಇಟ್ಲು.
ಹಿ : ಹೌದು
ಕ : ಲೋ ಬಾಳಭಿಕ್ಷುಕ ಬಾರೋ ಇಲ್ಲಿ.
ಹಿ : ಏನಮ್ಮಾ ಅದು?
ಕ : ಸಾಲಿಗೆ ನಡಿ, ವಿದ್ಯಾ ಕಲಿಯಾಕ ನಡಿ.
ಹಿ : ಒಳ್ಳೇದು.
ಕ : ಓದೋ ಸಾಲಿಗೆ ನಡೀ ಅನ್ನುತ್ಲೇ ಹುಡುಗನ ಮೈ ಉಬ್ಬಿತು; ಯಾವಾಗ ನಾನು ಓದು ಬರಹ ಕಲ್ತೇನು ಅಂತ ಹಿಗ್ಗಿದ. ಊರಾಗ ಸಾಹುಕಾರ್ರು ಶ್ರೀಮಂತರು, ರೈತರು, ಕುರುಬ್ರು, ಬ್ಯಾಡ್ರು, ವಕ್ಕಲಿಗ ಮಕ್ಕಳು ಸಾಲೀ ಓದು ಕಲಿತ್ಹಾಂಗ ನಾನೂ ಕಲೀಬೇಕು.
ಹಿ : ಹೌದು ಕಲಿಬೇಕು.
ಕ : ಸಂಗಮ್ಮ ಹುಡುಗ್ಅನ್ನ ಕರ್ಕೊಂಡು ಶಾಲೆಗೆ ಹೋದ್ಲು; ಮೇಷ್ಟ್ರು ಕುಂತುದ್ರು- ಕುರ್ಚಿ ಮ್ಯಾಲೆ.
ಹಿ : ನಮಸ್ಕಾರ ಮೇಷ್ಟ್ರೇ.
ಕ : ಬಾರಮ್ಮಾ ಬಾ ತಾಯಿ.
ಹಿ : ಏನಮ್ಮ ಬಂದಿ?
ಕ : “ಈತನs ನೋಡ್ರಿ ನನ್ನ ಮೊಮ್ಮಗ್. ನಾನು ಹೇಳಿದ್ನೆಲ್ಲ-ಅದೇ ವಿದ್ಯಾಕಲಿಸ್ರಿ” ಅಂತ್ಹೇಳಿ ಸಂಗವ್ವ ಮೊಮ್ಮಗನ್ನ ಬಿಟ್ಟು ಮನಿಗ್ಹೋದ್ಲು.
ಹಿ : ಗುರುಗಳೇ ಈ ಬಾಳಭಿಕ್ಷುಕನ ನಮಸ್ಕಾರ.
ಕ : ಆಶೀರ್ವಾದ ಮಾಡಿದ್ರು ಮೇಷ್ಟ್ರು.
ಹಿ : ಹೌದು.
ಕ : ಒಳಗ ಹುಡುಗ ಬಂದು ನಿಂದ್ರಬೇಕಾರ, ಮೇಷ್ಟ್ರು ನೋಡ್ತಾರೆ- “ಯಾ ತಾಯಿ ಹಡದಿದ್ದಾಳು ಈ ಮಗನಿಗೆ! ಇಂಥಾ ಮಗನಿಗೆ ಚಲೋ ವಿದ್ಯಾ ಕಲಿಸಬ್ಯಾಡ ಅಂತ್ಹೇಳಿ ಹೋದ್ಲಲ್ಲ! ಹಾಳಾದ ರಂಡಿ ಆಕಿ! ಆಕಿ ಮಾತು ಮೀರಿ ಚಲೋ ವಿದ್ಯಾ ಈ ಹುಡುಗ್ಗ ಕಲಿಸಿದ್ರ ಸಂಗಮ್ಮನs ಮೊದಲು ನನ್ನ ತಲಿ ತಗೊಳ್ಳಾಕಿ. ನನಗ್ಯಾಕ ಬೇಕು, ಆಕಿ ಹೇಳಿದ ವಿದ್ಯಾ ಕಲಿಸಿಬಿಟ್ರಾತು.” ಅಂತ ಅಂದ್ಕೊಂಡ್ರು. ಲೇ ಹುಡುಗ ನಡಿಯೋ ಹೊರಗs
ಹಿ : ಹೊರಗ!
ಕ : ಇಲ್ಲಿ ಸಾಲಿಯೊಳಗೆ ಜಾಗ ಇಲ್ಲ, ಹೊರಗ ಹೋಗಿಕುಂದ್ರು.
ಹಿ : ಆಹಾ!
ಕ : ಓಹೋ ಗುರುದೇವಾ, ಪರಮಾತ್ಮಾ, ನಾನು ಓದ್ಬೇಕಂತ ಬಂದ್ರ ಗುರುಗಳು ನನಗೆ ಒಳಗೆ ಜಾಗ ಇಲ್ಲ ಹೊರ್ಗ ನಡೀ ಅಂದ್ರಲ್ಲಾ!
ಹಿ : ಪರೀಕ್ಷೆ!
ಕ : ನಾನು ಏನು ತಪ್ಪು ಮಾಡಿದ್ದೇನು! “ಒಳ್ಳೇದು ಗುರುಗಳೇ” ಅಂತ್ಹೇಳಿ ಹೊರಗ ಹೋಗಿ ಕುಂತ್ಕೊಂಡ.
ಹಿ : ಪಾಪ! ಪಾಪ!
ಕ : ಲೇ ಹುಡುಗಾ ಈ ವಲ್ಲೀ ವಕ್ಕಂಬಾರೋ-
ಹಿ : ಆಹಾ ಇದು ಗುರುಸೇವಾ-ಒಳ್ಳೇಸೇವಾ.
ಕ : ಲೇ ಬಾಳಭಿಕ್ಷುಕ ಅಲ್ಲಿ ಹೋಗಿ ತಂಬಾಕ ಇಸ್ಗಂಬಾ-
ಹಿ : ಆಗ್ಲಿ ಗುರುವೇ.
ಕ : ಲೇ ಬಾಳಾ ನನ್ನ ಪಂಜೀ ಶಳಕೊಂಬಾ-
ಹಿ : ಒಳ್ಳೇದು ಗುರುವೇ.
ಕ : ಆ ಮನಿಯಾಗ ಹೋಗಿ ಕಡ್ಡಿ ಇಸಗಂಬಾ-
ಹಿ : ಹೋಗ್ ಇಸಗಂಬಾ!!
ಕ : ಇದೇ ವಿದ್ಯಾ ಕಲಿಸ್ತಾನೆ ಮೇಷ್ಟ್ರು. ಬರೀ ಓಡಾಟ ಕಲಿಸ್ತಾನೇ ಹೊರತು ಬರಹ ಬರದು ತೋರಸವಲ್ಲ!
ಹಿ : ಆಹಾ!
ಕ : (ರಾಗವಾಗಿ) ಒಂದು ವರ್ಷದತಂಕ ಹೊರಗಡಿಗೆ ಅದಾನೆ ಹುಡುಗ!
ಹಿ : ಹೌದು.
ಕ : ಆ ಸಾಲಿಯೊಳಗ ಯಾರ್ಯಾರು ಕುಂತು ಓದುತಾರ್ರೀ?
ಹಿ : ಯಾರ್ಯಾರ್ರೀ?
ಕ : ರತನಭೋಗ ರಾಜಾಧಿರಾಜನ ಮಗ ಐರಾಮ, ಪ್ರಧಾನಿ ಮಗ ಶಿವಗಣ್ಯ ಇಬ್ಬರೂ ಓದುತಾ ಅದಾರೆ.
ಹಿ : ಓಹೋ!
ಕ : ಐರಾಮ ಬಾಳಭಿಕ್ಷುಕನ್ನ ನೋಡಿ ಒಂದು ದಿನ ಅಂತಾನೆ- “ಶಿಬ್ವಗಣ್ಯಾ”
ಹಿ : ಏನು ರಾಜಕುಮಾರ?
ಕ : ಇಲ್ಲಿ ಬಾ; ಇಷ್ಟು ಹುಡುಗರು ಒಳಗೆ ಕುಂತು ಓದ್ತಾರೆ ಸಾಲಿಯೊಳಗೆ; ಹೊರಗ ಕುಂತಾನಲ್ಲ; ಯಾರು ಅವನು?
ಹಿ : ಗುರುಗಳೇ ಆ ಹುಡುಗ ಯಾರು? ಹೊರಗ ಕುಂದ್ರಿಸೀರಲ್ಲ ಯಾಕ?
ಕ : ಅವನು ಬಾಳಭಿಕ್ಷುಕ. ಪಲ್ಯಾದ ಸಂಗವ್ವನ ಮೊಮ್ಮಗನಂತೆ.
ಕ : ಮೇಷ್ಟ್ರು ಹೇಳ್ತಾರೆ- “ಅವನಿಗೆ ಚಲೋ ವಿದ್ಯಾ ಕಲಿಸ್ಬ್ಯಾಡ ಅಂತ ಅವರಮ್ಮ ಹೇಳ್ಯಾಳೆ. ಅದಕs ನಾನು ಹೊರಗ ಇಟ್ಟೀನಿ.
ಹಿ : ಆಹಾ! ಸಂಗಮ್ಮನ ಮಾತು ಕೇಳಿ ಆ ಕುಮಾರಗs ಹೊರಾಗ ಕುಂದ್ರಿಸೀರಾ?
ಕ : ಹೌದು.
ಹಿ : ಸಂಗವ್ವ ದೊಡ್ಡಾಕಿ ಅದಾಳೋ ಏನ್ ನಾವು ದೊಡ್ಡೋರು.
ಕ : ನೀವು ರಾಜಕುಮಾರ್ರು. ನೀವೇ ದೊಡ್ಡೋರು.
ಹಿ : ಹೌದು ದೊಡ್ಡೋರು.
ಕ : ಆಕಿ ಪಿರ್ಯಾದಿ ಬಂದದ್ದು ಬರ್ಲಿ; ನಾವು ನೋಡ್ಕೋಳ್ತೇವಿ; ಕರೀರಿ ಒಳಗೆ ಆತನ್ನ.
ಹಿ : ಓಹೋ ಅಗತ್ಯ ಆಗಲಿ ರಾಜಕುಮಾರ! ಬಾಳಭಿಕ್ಷುಕ ಬಾರೋ ಇಲ್ಲಿ, ಒಳಗೆ ಬಾ.
ಕ : ಹುಡುಗ ಒಳಗ ಬಂದ. ಮುಗುಳು ನಗೆ ನಕ್ಕು ಗುರುಗಳಿಗೆ ನಮಸ್ಕಾರ ಹಾಕಿದ.
ಹಿ : ಐರಾಮ ಮತ್ತು ಶಿವಗಣ್ಯ ಇಬ್ಬರೂ ಆತನ ಕೈ ಹಿಡುದು ಸ್ನೇಹಭಾವದಿಂದ ಕೇಳ್ತಾರೆ-
ಕ : ಬಾಳಭಿಕ್ಷುಕ ನೀನು ಇವತ್ತಿನಿಂದ ನಮ್ಮಿಬ್ರಿಗೂ ಗೆಳಿಯ ಆಗ್ಬೇಕಪಾ.
ಹಿ : ಆಗ್ಲಿ ರಾಜಕುಮಾರ.
ಕ : (ರಾಗವಾಗಿ) ಮೂವರೂ ಅವತ್ತಿನಿಂದ ಜೀವದ ಗೆಳೆಯರಾದರೂss….
ಹಿ : ಸಾಗಿತು-ಓದು.
ಕ : ಒಂದಿವ್ಸ ರಾಜಕುಮಾರತನ್ನ ಮನಿಗೆ ಇಬ್ರೂ ಗೆಳೆಯರ್ನ ಊಟಕ್ಕೆ ಕರ್ದ;
ಹಿ : ಹೌದು ಕರಕೊಂಡು ಹೋದ.
ಕ : ರತನಾವತಿ ರತನಭೋಗರಾಜನ ಮಡದಿ ಕೇಳ್ತಾಳೆ “ಮಗ ಐರಾಮಾ, ಈ ಹುಡುಗ ಯಾರು?”
ಹಿ : ಅಮ್ಮಾ, ನನ್ನ ಗೆಳೆಯ, ಸ್ನೇಹಿತ-ಬಾಳಭಿಕ್ಷುಕ.
ಕ : ಆಹಾ, ಎಂಥಾ ಹುಡುಗ! (ರಾಗವಾಗಿ) ನನ ಹೊಟ್ಟ್ಯಾಗ ಇಂಥ ಮಗ ಹುಟ್ಟ ಬಾರದಿತ್ತೇನೈ.
ಹಿ : ಆಹಾ!
ಕ : ಮಗನೇ ಬಾಳಾ, ಚಂದಾಗಿ ಅದಿಯಪ್ಪ.
ಹಿ : ನೀರೆರ್ಕೋ ಮಗನೇ.
ಕ : ಬಾಳಭಿಕ್ಷುಕಗೆ ಜಳಕ ಮಾಡ್ಸಿ ರಾಜಉಡುಗೊರೆ ಕೊಟ್ಲು-ರತನಾವತಿ;
ಹಿ : ತಾಯಿ!
ಕ : ಆ ಉಡುಗೊರೆ ಉಟ್ಟ, ಹೋಳಿಗಿ ಹುಗ್ಗಿ ಪಂಚಾಮೃತದ ಅಡಿಗಿ ಮೂವರೂ ಮಕ್ಕಳು ಉಂಡ್ರು; ಅವರು ಮೂವರೂ ಬಜಾರ್ದಾಗ ರಾಜಡ್ರೆಸ್ ಹಾಕ್ಕೊಂಡು ಸಾಲಿಗೆ ಹೋಗ್ಬೇಕಾದ್ರೆ ಪದ್ಮಾವತಿ ಕಮಾನ್ ಕಿಟಕ್ಯಾಗೆ ಕುಂತು ನೋಡ್ತಾಳೆ-ತನ್ನ ಗಂಡನ್ನ.
ಹಿ : ಆಹಾ!
ಕ : ನಮ್ಮ ರಾಜಪ್ರಾಯಕ್ಕೆ ಬರ್ತಾ ಐದಾನವ್ವಾ! ನನ್ನ ಮುತ್ತೈದತನ ಕಾಪಾಡಿದ ಪರಮಾತ್ಮ. ಇನ್ನೂ ತುಸು ದಿವ್ಸ ಹೋದ್ರ ನಮ್ಮ ರಾಜ ಒಳ್ಳೇ ಪ್ರಾಯಕ್ಕ ಬರ್ತಾನೆ. ಆಗ ನನಗ ಮಡದೀ ಅನ್ನಬಹುದು; ನಾವು ಸತೀ ಪತೀ ಕಲಿಬಹುದು.
ಹಿ : ಹೌದು ಒಂದಾಗಬಹುದು!
ಕ : ಓದು ಬರಹ ಶಾಸ್ತ್ರ ಪುರಾಣ, ಸಂಗೀತ ಶ್ಲೋಕ ನಾನಾ ತರಹ ವಿದ್ಯಾ ಎಲ್ಲಾ ಐನೋರ ಹತ್ರ ಕಲೀತಾನ- ಬಾಳಭಿಕ್ಷುಕ.
ಹಿ : ಪಂಡಿತ ಅದಾನ ವಿದ್ಯಾದಲ್ಲಿ!
ಕ : ದಿನದಿನಕ್ಕೆ ಎಲ್ಲಾದ್ರೊಳಗೂ ಆತ ಐರಾಮ-ಶಿವಗಣ್ಯರಿಗಿಂತ ಮುಂದು ಐದಾನೆ.
ಹಿ : ಒಂದುದಿನ ರಾಜಕುಮಾರ ಕೇಳ್ತಾನೆ- “ಗೆಳೆಯ ಬಾಳಭಿಕ್ಷುಕಾ ನೀನು ಮಧ್ಯದಾಗ ಬಂದು ಸಾಲಿ ಸೇರ್ದಿ; ಎಷ್ಟೊಂದು ಓದು ವಿದ್ಯಾ ಕಲ್ತಿ! ನಾವು ಚಿಕ್ಕಂದಿನಿಂದ ಓದಿದ್ರೂ ನಿನ್ನಷ್ಟು ನಮಗೆ ವಿದ್ಯಾ ಬರುವಲ್ದಲ್ಲ!!
ಕ : ಗೆಳೆಯರ್ಯಾ, ಈ ಶಾರದಾ ಅಂಬೋ ವಿದ್ಯಾ ಯಾರ್ಗೂ ಪಾಲ್ ಹಂಚಿಕೊಟ್ಟದ್ದಲ್ಲ; ಇಷ್ಟೇ ಕಲೀಬೇಕು ಇಷ್ಟೇ ಬಿಡ್ಬೇಕು ಅಂತ ಏನೂ ಇಲ್ಲ.
ಹಿ : ಆಹಾ!
ಕ : ಒಳ್ಳೇದು ಗೆಳೆಯಾ, ಇಂಥ ಓದು ಬರಹ ಹೆಣ್ಣು ಮಕ್ಕಳು ಕೂಡಾ ಕಲೀತಾರ!-
ಹಿ : ಇದು ಯಾತ್ರ ವಿದ್ಯಾ?
ಕ : “ಗಂಭೀರವಾದ ವಿದ್ಯಾ ಕಲೀಬೇಕು” ಅಂದ ರಾಜನ ಮಗ ಐರಾಮ.
ಹಿ : ಯಾವುದು ಅಂಥಾ ವಿದ್ಯಾ?
ಕ : ಗರಡೀ ಸಾಧಕ ವಿದ್ಯಾ-
ಹಿ : ಹೌದೂ!
ಕ : ಓಹೋ ಗಂಭೀರವಾದ ವಿದ್ಯೆ ಅಂದ್ರೆ ಗರಡಿ ಸಾಧಕ ವಿದ್ಯಾ ಅಂದ ತಕ್ಷಣಕ್ಕs ಬಾಳಭಿಕ್ಷುಕನ ಮೈ ಉಬ್ಬಿ ಬಿಡ್ತು! “ನಡೀರಿ ಹೋಗಾನು”-
ಹಿ : ಗರಡಿ ಮನಿಗೆ.
ಕ : ತಾವು ಮೂವ್ವರ ಪರವಾಗಿ ರಾಜಕುಮಾರ ಸಾಲಿ ಅಯ್ನೋರಿಗೆ ಒಂದು ಸೇರು ರೂಪಾಯಿ ಗುರುದಕ್ಷಿಣೆ ಕೊಟ್ಟ; ಶಲ್ಲೇವು ಮುಂಡಾಸದ ಉಡುಗೊರೆ ಕೊಟ್ಟ.
ಹಿ : ಮೂವರೂ ಸಾಲಿ ಬಿಟ್ರು.
ಕ : ಅವತ್ತಿನಿಂದ ಸಾಮ್ಸಗತಿ ಗರಡಿ ವಿದ್ಯಾ ಕಲಿಯಾಕ ಹತ್ತಿದ್ರು.
ಹಿ : ಹೌದು.
ಕ : ಮೈಯಿಗೆ ಕೆಮ್ಮಣ್ಣು ಹಚ್ಚಿ ತೊಡಿ ಚಪ್ಪರಿಸಿದ್ರೆ ಜಂತ್ಯಾಗಿನ ಮಣ್ಣು ಸುರಿತೈತಿ-
ಹಿ : ಗರಡಿಮನಿಯಾಗ!
|| ಪದ ||
ಉಕ್ಕಿನ ಗುಂಡು ಎತ್ತುತಾನೋ ಮಗ….ಶಿವಯನ್ನ ಮಾದೇವ
ಉಕ್ಕಿನ ಲೋಡು ತಿರುವುತಾನೋ….ಶಿವಯನ್ನ ಮಾದೇವ
ಹಿಂಗಾಣಿ ಮುಂಗಾಣಿ ಹೊದದಾನೋ….ಶಿವಯನ್ನ ಮಾದೇವ
ಅಂತರಲಾಗ ಜಂತ್ರಲಾಗಾ ಹಾಕ್ಯಾನೊ….ಶಿವಯನ್ನ ಮಾದೇವ
ಕ : ಹೊಡಿಯೋ ಕೈ, ಬಡಿಯೋ ಕೈ, ಉಣ್ಣೋ ಕೈ, ತಪ್ಪೋ ಕೈ, ಕತ್ತಿ ಕಠಾರಿ ಕೈ, ಬಿಲ್ಲು ಬಾಣದ ಕೈ, ಕುಸ್ತಿ ತಾಲೀಮು ಲೇಜೀಮ್, ಪೈಲ್ವಾನ್ ಸಾಧಕದ ವಿದ್ಯಾ ಮಾಡಬೇಕಾದ್ರೆ, ಐರಾಮ, ಶಿವಗಣ್ಯ ನೋಡ್ತಾರೆ-
ಹಿ : ಏನು ಗೆಳೆಯಪಾ ಇವನು! ಏನು ಸಾಧಕ ಇವಂದು!
ಕ : ಇಂಥಾದು ನಾವು ಸಾಯೋವರಿಗೂ ಮಾಡಿದ್ರೂ ಬರೋದಿಲ್ಲ!
ಹಿ : ಹೌದು ಬರೋದಿಲ್ಲ!
ಕ : ಬಾಳಭಿಕ್ಷುಕಂದು ಸಂಪೂರ್ಣವಾದ ಚಲೋ ವಿದ್ಯಾ, ಗರಡಿ ಸಾಧಕ ವಿದ್ಯಾ!
ಹಿ : ಗಂಭೀರವಾದ ವಿದ್ಯಾ, ಸಾಧಕ ವಿದ್ಯಾ ಇದು!
ಕ : ಸುಮ್ಮನೆ ಸಾಧಕ ಮಾಡಿದ್ದರೆ ಏನು ತೊಂದ್ರಿ ಬರ್ತೀದಿಲ್ರೀ! ತನ್ನ ಶೌರ್ಯ ಸಾಹಸ, ಗರಡೀ ವಿದ್ಯಾದ ಬಗ್ಗೆ ಅಹಂಕಾರ ಬಂತು-ಆ ಬಾಳಭಿಕ್ಷುಕನಿಗೆ! ಅವನು ಸಾರ್ತಾನೆ-
ಹಿ : ಏನಂತಾನೆ!
ಕ : “ಕಾಸಿ ತೊಟ್ಟವರ ಗಂಡ, ಮೀಸಿ ತಿದ್ದುವರ ಮಿಂಡ, ಹರಿವ ಹಾವಿನ ಗಂಡ, ಉರಿವ ಕಿಚ್ಚಿನ ಗಂಡ, ವಿಧಿ ಮಾಯೆಯ ಗಂಡ-ಅಂದ್ರೆ ನಾನೇ ಬಾಳಭಿಕ್ಷುಕ” ಅಂತ್ಹೇಳಿ ತನಗೆ ತಾನೇ ಭಟ್ಟಂಗಿ ಸಾರ್ಕೊಂಡ.
ಹಿ : ಶಬ್ಬಾಸ್.
ಕ : ವಿಧಿ ಮಾಯಿ ಗಂಡ ಅಂದದ್ದನ್ನ ವಿಧಿ ದೇವಲೋಕದಲ್ಲಿ ಕೇಳಿಬಿಟ್ಲು; ಸರ್ ನ ಗರಡಿ ಮನಿಯಾಗ ಇಳಿದೇ ಬಿಟ್ಲು-
ಹಿ : ವಿಧಿಮಾಯಿ!
ಕ : ಐರಾಮನ ಮೈಯೊಳಗೆ ಹೊಕ್ಕೊಂಡು ಕೂಡ್ಲೇ ಅವನ ಬುದ್ಧಿ ವಿಪರೀತ ಆತು.
ಹಿ : ಹೌದು!
ಕ : ರಾಜಕುಮಾರ ಅಂತಾನೆ-ಬಾಳಭಿಕ್ಷುಕಾ ನೀನು ಪ್ರಾಯಕ್ಕೆ ಬರೋವರ್ಗೆ ಯಾವಾಗ್ಲೂ ನಮ್ಮನಿಯಾಗೇ ಊಟಾ ಮಾಡಿದಿ, ಬಟ್ಟೆ ಉಟ್ಟಿ,
ಹಿ : ಹೌದು ರಾಜಕುಮಾರ.
ಕ : ಇವತ್ತು ನಿನ್ನ ಮನಿಗೆ ನಾವಿಬ್ರು ಗೆಳೆಯರು ಊಟಕ್ಕೆ ಬರ್ತೀವಿ, ಕರ್ಕೊಂಡ್ಹೋಗ್ತೀಯಾ?
ಹಿ : “ರಾಜಕುಮಾರಾ ನಾನು ಮನಿಗ್ಹೋಗಿ ನಮ್ಮಮ್ಮ ಸಂಗಮ್ಮಗೆ ಹೇಳಿ ಬರ್ತೀನಿ- ಚಲೋ ಅಡಿಗಿ ಮಾಡಮ್ಮಾ ಅಂತ. ನೀವು ಇಲ್ಲೇ ಗರಡಿ ಮನಿಯಾಗ ಕುಂತಿರ್ರಿ”.
ಅಂತ್ಹೇಳಿ ಹೊಂಟ ಮನಿಗೆ.
ಕ : ಅಮ್ಮಾ ಸಂಗಮ್ಮಾ ಇವತ್ತು ಗೆಳೆಯರ್ಗೆ ಊಟಕ್ಕೆ ಕರ್ಕೊಂಡು ಬರ್ತೀನಿ; ರಾಜನ ಮಗ ಮಂತ್ರೀ ಮಗ ಬರ್ತಾರೆ. ಪಂಚಾಮೃತ ಅಡಿಗಿ ಮಾಡಿ ಅವರಿಗೆ ನೀಡ್ಬೇಕಲ್ಲಮ್ಮಾ.
ಹಿ : ಹೋಗs ಮೂಳಾ-
ಕ : “ರಾಜನ ಮಕ್ಕಳಿಗೆ ಕರ್ಕೊಂಡು ಊಟಕ್ಕೆ ಬರ್ತಾನಂತೆ-ಈ ಮೂಳಾ! ಚಲೋ ಅಡಿಗಿ ಮಾಡ್ಬೇಕಂತ! ನಾನು ಮಾಡೋದಿಲ್ಲ ಅಡಿಗಿ” ಅಂದ್ಲು-
ಹಿ : ಸಂಗವ್ವ!
ಕ : ನನ ಗೆಳೆಯರ್ಗೆ ನೋಡಿದ್ರೆ ಊಟಕ್ಕೆ ಬರ್ರಿ ಅಂತ ಹೇಳ್ಬಂದೆ! ಈಗ ಇಲ್ಲ ಅಂತಾ ಹೇಳಲಿ ಹೆಂಗ!
ಹಿ : ಏನು ಗತಿ ಮಾಡ್ಲಿ!
ಕ : ಅಂತ ಸಣ್ಣ ಮಕ ಮಾಡಿ ಬಾಳಭಿಕ್ಷುಕ ಹೊರಗ ಹೋದ.
ಹಿ : ಆಹಾ! ಪದ್ಮಾವತಿ ಇದ್ನ ನೋಡಿ ಬಿಟ್ಲು!
ಕ : ಪದ್ಮಾವತಿ ಆ ಕೂಡ್ಲೆ ಬಂದು ಸಂಗವ್ವನ್ನ ಕೇಳ್ತಾಳೆ-
ಹಿ : ಯವ್ವಾ ನಮ್ಮ ರಾಜನಿಗೆ ಏನರಾ ಅಂದೇನು?
ಕ : ಏನೂ ಅನ್ನಲಿಲ್ಲವ್ವ ನಮ್ಮ ಗೆಳೆಯರಿಗೆ ಕರ್ಕೊಂಡು ಬರ್ತೀನಿ ಊಟಕ್ಕೆ; ಚಲೋ ಅಡಿಗಿ ಮಾಡಂದ.
ಹಿ : ಆಹಾ!
ಕ : ಆದ್ರೆ ನನ ಕೈಯಾಗ ದುಡ್ಡಿಲ್ಲಪ್ಪಾ. ಹ್ಯಂಗs ಮಾಡ್ಲಿ ಅಂತ ಇಷ್ಟೇ ಹೇಳ್ದೆ. ಮನಸ್ಸು ಸಣ್ಣದು ಮಾಡಿ ಮಕಾ ಇಳೇ ಬಿಟ್ಕೊಂಡು ಹೋದಾ-
ಹಿ : ಹೌದು ಹೋದ!
ಕ : (ರಾಗವಾಗಿ) ಹಂಗs ಮಾಡ್ಬ್ಯಾಡೇ ಯವ್ವಾ…. ನನ್ನ ರಾಜ ಹೇಳ್ದಂಗ ಚಲೋ ಅಡಿಗಿ ಮಾಡಿ ನೀಡು.
ಹಿ : ಹೌದು ಮಗಳೇ ಸಾಮಾನು ತರಾಕ ಏನಾರ ಬೇಕಲ್ಲ! ಇದ್ರ ಬೇಕಾದ್ದು ಮಾಡಿ ನೀಡ್ತಿದ್ದೆ.
ಕ : ಪದ್ಮಾವತಿ ಎಡಗೈಯಾಗೊಂದು ಗೀರುಬಳಿ ಐತಿ. ಅದನ್ನ ತಗದ್ಲು. ಇದನ್ನ ಮಾರಿ ಕೇಳಿದ್ದನ್ನ ಮಾಡಿ ನೀಡು ಅಂತ ಅಂದು ಕೊಟ್ಹೋದ್ಲು.
ಹಿ : ಹೌದೂ….
ಕ : ಆ ಕೂಡ್ಲೆ ದಡಾ ದಡ ಹೋಗಿ ಬಾಳಭಿಕ್ಷುಕನ್ನ ಕೂಗಿ ಕರದ್ಲು – ಸಂಗಮ್ಮ.
ಹಿ : ಯಾಕಮ್ಮಾ ಕರೀತೀ?
ಕ : ನಿಂದ್ರಪ್ಪ ಮಗನೇ.
ಹಿ : ಏನಮ್ಮಾ?
ಕ : ಚಲೋ ಅಡಿಗಿ ಮಾಡ್ತೀನಿ-ನಿನ್ನ ಗೆಳೆಯರ್ಗೆ ಕರ್ಕೊಂಡ್ಬಾ-ಮಧ್ಯಾಹ್ನದ ಊಟಕ್ಕ.
ಹಿ : ಚಲೋ ಅಡಿಗಿ ಮಾಡಮ್ಮಾ.
ಕ : ನನ್ನ ಆಸಿ ಕಾಪಾಡಿದ್ಲು ನಮ್ಮಮ್ಮ! ನನ್ನ ಚಿಂತಿ ದೂರಾತು; ಸಿಟ್ಟಿಲೇ ಹೇಳಿದ್ರೂ ಅಮ್ಮನ ಹೊಟ್ಯಾಗ ಕಬುಟು ಇಲ್ಲ. ಹಿಂದೆಲೇ ಬಂದು ಊಟಕ್ಕೆ ಕರೀತು!
ಹಿ : ಹೌದು!
ಕ : ಸಂಗಮ್ಮ ಮುಗ್ಗು ಪದಾರ್ಥದ ಅಡಿಗಿ ಮಾಡಿದ್ಲು. ಮುಂಗೈ ದಪ್ಪದ ಮೂರು ರೊಟ್ಟಿ; ಉಪ್ಪಿಲ್ಲದೆ ಕುಚ್ಚಿದ ಆಲೀ ಸೊಪ್ಪಿನ ಪಲ್ಯ!-
ಹಿ : ಅಡಿಗಿ ರಡಿ ಆತು!
ಕ : ಬಾಳಭಿಕ್ಷುಕ ತನ್ನ ಗೆಳೆಯರ್ನ ಕರ್ಕೊಂಡು ಊಟಕ್ಕೆ ಬಂದ; ಸಂಗಮ್ಮ ಮನಿಯಾಗ ಮಕಕ್ಕ ನೀರು ತಂದು ಕೊಡ್ತಾಳೆ-
ಹಿ : ಮುಕ್ಕ ಮಗಿ ಮಣ್ಣಿಂದು!
ಕ : ಶಿವಗಣ್ಯಾ! ಮುಕ್ಕ ಮಗಿಯ್ಯಾಗ ನೀರು ಕೊಟ್ಟಲ್ಲ ಸಂಗವ್ವ!
ಹಿ : ಆಗ್ಲಿ ಗೆಳಿಯಾ ಇದೇ ದೊಡ್ದು; ಶ್ರೇಷ್ಠವಾದದ್ದು; ಏನು ಚಿಂತಿ ಮಾಡಬ್ಯಾಡ ಬಾ
ಕ : ಕೈಕಾಲು ಮುಕ ತೊಳ್ಕೊಂಡು ಒಳಗ್ಹೋಗಿ ಕುಂತ್ಗೊಂಡ್ರು-ಮೂರೂಜನ
ಹಿ : ಇದೇನಿದು?
ಕ : ಮುಕಳಿ ಬುಡಕ ಮೂರು ಕಾಕುಳ್ಳ ಕುಂದ್ರಾಕ ಮಣಿ ಮಾಡಿ ಇಟ್ಟಾಳ! ಮುಗ್ಗ ಪದಾರ್ಥದ ಅಡಿಗಿ ತಂದು ನೀಡತಾಳ!- ಗಬ್ಬು ನಾರ್ತೈತಿ!
ಹಿ : ಅಯ್ಯಯ್ಯೋ ಸಂಗವ್ವನ ಮಾರಿಗೆ ಬೆಂಕಿ ಹಚ್ಲಿ.
ಕ : “ಒಂದು ಪಾವಿನ ಅನ್ನ ಮಾಡಿದ್ದರೆ ಮೂವರೂ ಊಟ ಮಾಡ್ತಿದ್ವಿ….ಮುಗ್ಗ ಪದಾರ್ಥ ಅಡಿಗಿ ಮಾಡಿದ್ಲಲ್ಲ”! ಅಂತ ಬಾಳಭಿಕ್ಷುಕ ಮಿಡುಕಿದ-
ಹಿ : ಒದ್ದಾಡಿದ.
ಕ : ಐರಾಮ ವಾಕರಿಸೋದು ನೋಡಿ ಶಿವಗಣ್ಯ ಅಂತಾನೆ- “ಏನೂ ಚಿಂತಿಯಿಲ್ಲ ಗೆಳೆಯರಾ; ಇದೇ ಅಮೃತ” ಅಂತ ಹೇಳಿ ಒಂದು ಚೂರು ರೊಟ್ಟಿ ತೊಗೊಂಡು ಬಾಯಾಗ ಇಟ್ಗೊಂಡು ಬಿಟ್ಟ; ಬಾಯೆಲ್ಲ ವಿಷ ಆತು!
ಹಿ : ಐರಾಮಗೂ ಒಂದು ಥರಾ ಆತು!
ಕ : ರಾಜಕುಮಾರ ಎದ್ದು ನೀರಮಗಿ ತೊಗೊಂಡು ಹೊರಾಗ ಬಂದು ಕೈತೊಳ್ಕೊಂಡು ಮಗಿ ಬಾಯಿಗಿ ಹಚ್ಚಿ ನೀರು ಕುಡಿಯೋ ಕಾಲಕ್ಕೆ-
ಹಿ : ಆಹಾ!
ಕ : ಪದ್ಮಾವತಿ ಕಮಾನ್ ಕಿಟಿಗ್ಯಾಗ ಕುಂತಿದ್ಲು- ಐರಾಮನ ದೃಷ್ಟಿ ಆಕಿ ಮ್ಯಾಲೆ ಬಿತ್ತು!
ಹಿ : ವಿಧಿ ಮಾಯೀ ಕುತಂತ್ರ!
ಕ : ಆಹಾ ಏನ ಹೆಣ್ಣು ; ಏನ್ ಪ್ರಕಾಶ, ಏನು ರೂಪ ಲಾವಣ್ಯ ಇದು!-
ಹಿ : ಯಾರಿದ್ದಾಳು ಈಕಿ?
ಕ : ಕಣ್ಣಿಗೆ ಮೂರ್ಛೆಗವಿತು!
ಹಿ : ಹೌದು!
ಕ : ಬಾಳಭಿಕ್ಷುಕ ಶಿವಗಣ್ಯ ಹೊರ ಬಂದು ನೋಡ್ತಾರೆ-ಗೆಳೆಯ ಕಕ್ಕಾಬಿಕ್ಕಿಯಾಗ್ಯಾನ!
ಹಿ : ಏನು ಬಡೀತಪಾ ರಾಜಕುಮಾರಾ?
ಕ : ಏನಿಲ್ಲ ಎದಿಗೆ ನೀರು ಬಡೀತು ಅಷ್ಟೇ-
ಹಿ : ಅಷ್ಟೇ!
ಕ : ಬಾಳಭಿಕ್ಷುಕ ಹೇಳ್ತಾನ, “ರಾಜಕುಮಾರಾ ಸಮಾಧಾನ ಮಾಡ್ಕೋ ನಮ್ಮಮ್ಮ ಚಲೋ ಅಡಗಿ ಮಾಡ್ಲಿಲ್ಲ; ನನ್ನಿಂದ ತಪ್ಪಾತು”.
ಹಿ : “ಆದದ್ದಾತು, ನಡೀರಿ ಹೋಗಾನು ಗರಡೀಮನಿಗೆ” ಅಂದ ಶಿವಗಣ್ಯ.
ಕ : ಬಾಳಭಿಕ್ಷುಕ ಒಬ್ನೆ ಸಣ್ಣಮಕ ಮಾಡ್ಕೊಂಡು ದೊಡ್ಡ ಹೆಜ್ಜಿಲೇ ಹೋಗ್ತಾ ಅದಾನೆ; ಅವನ ಹಿಂದೆ ದೂರದಾಗ ಐರಾಮ ಶಿವಗಣ್ಯಾ ಇಬ್ರೂ ಮಾತಾಡ್ತಾ ನೆಡ್ದಾರೆ; ಐರಾಮ ಅಂತಾನ “ಶಿವಗಣ್ಯಾ”-
ಹಿ : ಏನು ರಾಜಕುಮಾರ?
ಕ : ಆ ಕಮಾನ್ ಕಿಟಿಗ್ಯಾಗ ಕುಂತಿದ್ದಲ್ಲ-ಯಾರು ಆಕಿ? ಕೇಳು ಸಂಗವ್ವಗ.
ಹಿ : ವಿಚಾರ ಮಾಡ್ತಿನಿ ಗೆಳಿಯಾ.
ಕ : “ಆಕಿ ಮ್ಯಾಗ ನನಗ ಪ್ರೀತಿ ಆಗೇತಿ. ನೀನು ಮದ್ಲು ಹೋಗಿ ವಿಚಾರಿಸ್ಕೊಂಡು ಬಾ” ಅಂದ.
ಹಿ : ಆ ಕೂಡ್ಲೇ ಶಿಬಗಣ್ಯ ಸಂಗವ್ವನ ಹತ್ರ ಬಂದ.
ಕ : ಸಂಗವ್ವಾ, ಸಂಗಮ್ಮಾ
ಹಿ : ಯಾರಾವರು? ಒಳಗ ಬರ್ರಿ.
ಕ : ನಾನು ಶಿವಗಣ್ಯ, ಮಂತ್ರೀ ಮಗ, ನಿನ್ನ ಹತ್ರ ಒಂದು ವಿಷಯ ತಿಳಿಯೋದು ಐತಿ- ರಾಜಕುಮಾರ ಕಳಿಸ್ಯಾನ.
ಹಿ : ಏನು ತಮ್ಮಾ ಅದು ಹೇಳು;
ಕ : ಆ ಎದುರುಮನಿ ಕಮಾನ್ ಕಿಟಿಗ್ಯಾಗ ಆಗ್ಲೆ ಕುಂತಿದ್ಲಲ್ಲ -ಯಾರಮ್ಮ ಆ ಹೆಣ್ಣು ಮಗಳು?
ಹಿ : ಅದು ನಿಮಗ ಗೊತ್ತಿಲ್ಲೇನು ಶಿವಗಣ್ಯಪ್ಪಾ?
ಕ : ಇಲ್ಲ!
ಹಿ : ನಿಮ್ಮ ಗೆಳಿಯ ಬಾಳಭಿಕ್ಷುಕ ಅದಾನಲ್ಲ, – ಅವನ ಹೆಂಡ್ತಿs -ಪದ್ಮಾವತಿ.
ಕ : ಓಹೋ ಗೆಳಿಯನ ಮಡದಿ!
ಹಿ : ಹೌದು ಹೌದು.
ಕ : ಆ ಕೂಡ್ಲೆ ಶಿವಗಣ್ಯಾ, ಐರಾಮನ ಹತ್ರ ಬಂದ.
ಹಿ : ಏನು ಗೆಳೆಯ ಹೋದ ಕೆಲ್ಸ ಏನಾತು?
ಕ : ರಾಹಕುಮಾರಾ, ಆ ಯಮ್ಮನ ಮ್ಯಾಲೆ ಮನಸ ಇಡಬ್ಯಾಡ ನೋಡು; ನಮ್ಮಿಬ್ರಿಗೂ ತಂಗಿ ಆಯಮ್ಮ. ನಮ್ಮಿಬ್ರಿಗೂ ತಾಯಿ – ಆ ತಾಯಿ!
ಹಿ : ತಾಯಿ!
ಕ : ನಮ್ಮ ಗೆಳೆಯನ ಮಡದಿಯಂತೆ; ಬಾಳಭಿಕ್ಷುಕನ ಹೆಂಡತಿಯಂತೆ-ಪದ್ಮಾವತಿ!
ಹಿ : ಹೌದು!
ಕ : ಓಹೋ ಗೆಳೆಯನ ಮಡದಿ!
ಹಿ : ಹೌದೌದು, ತಾಯಿ ಸ್ವರೂಪ ನಮಿಗೆ-ಆಕಿ.
Leave A Comment