ಕ : ಐದು ತಿಂಗಳ ಕೂಸು ಆದಾಗ ಆ ತಾಯಿ ಕಾಗದ ಬರದ್ಲು ಗಂಡಗ, ಉದಯವಾನಗs-
ಹಿ : ಪತ್ರ ಏನು ಬರಹ?
ಕ : ಮಹಾರಾಜಾ, ಐದು ತಿಂಗಳ ಮಗ ಇದ್ದಾನೆ; ನೀನೇ ಬಂದು ಕರ್ಕೊಂಡು ಹೋಗ್ಬೇಕು-
ಹಿ : ಓಹೋ! ಪತಿದೇವಗೆ ಹಿಂಗ ಬರದ್ಲು.
ಕ : ಈ ಪತ್ರ ಮುಟ್ಟುತ್ಲೇ ಉದಯವಾನ ಓದ್ಕೊಂಡ.
ಹಿ : ಹೌದೂ
ಕ : ನಾನೇ ಹೋಗಿ ನನ್ನ ಮಡದೀನು. ನನ್ನ ಮಗನ್ನೂ ಕರ್ಕೊಂಡು ಬರ್ಬೇಕಂತೆ!
ಹಿ : ಹೌದು! ಆದ್ರೆ ಅವ್ರು ಈ ಊರಿಗೆ ಬರಬೇಕಾದ್ರೆ ಊರೆಲ್ಲಾ ಶ್ರೀಂಗಾರ ಮಾಡೋರು ಯಾರು?
ಕ : ರಾಜನಿಗೆ ತಾನೇ ನಿಂತು ಎಲ್ಲಾ ವ್ಯವಸ್ಥಿ ಮಾಡ್ಬೇಕಂತಾನೆ; ಊರ್ಗೆಲ್ಲಾ ತೋರಣ ಕಟ್ಟಿಸ್ಬೇಕು! ಪ್ರಜೆರಿಗೆ ಊಟಕೊಡೋ ವ್ಯವಸ್ಥೆ ಆಗ್ಬೇಕು, ಇನ್ನೂ ಏನೇನೋ ಕೆಲ್ಸ. ರಾಜ ತನ್ನ ಬದ್ಲಿ ಮಂತ್ರೀ ಕಳಿಸಬೇಕು ಅಂತ ಯೋಚಿನಿ ಮಾಡಿದ.
ಹಿ : ಆದ್ರೆ ಅಕಳೇಶ ಮಂತ್ರಿ ರಾಜನ ಬಲಗೈ ಇದ್ಹಾಂಗ!
ಕ : ಅನುಭವದಾಗ ಹಿರ್ಯಾ, ಹೆಂಗ್ ಮಾಡ್ಬೇಕಾತು-
ಹಿ : ಅದಕಾಗಿಒಂದು ಪ್ಲಾನ್ ಮಾಡಿದ; ಮಂತ್ರೀಕರಿಸಿ-
ಕ : ಅಕಳೇಶ ಮಂತ್ರೀ, ನನ್ನ ಮಗ ರತನ್ಶೇಕನ್ನೂ ಮಹಾರಾಣೀನೂ ತೊಟ್ಲಸಹಿತ ಕರ್ಕೊಂಡು ಬರೋದಕ ನನಗೆ ಬಿಡುವಿಲ್ಲ; ನೀವಿಲ್ದೆ ಇದ್ರೆ ಇಲ್ಲಿ ಏನೂ ಆಗೋದಿಲ್ಲ-
ಹಿ : ಹೆಚ್ಚಿನ ಟೈಮು ಇಲ್ಲ.
ಕ : ಹೌದು ಮಹಾರಾಜ್!
ಹಿ : ಹೀಂಗ ಮಾಡಿದ್ರ ಹೆಂಗ್ಯ-
|| ಪದ ||
ನಿಮ್ಮ ಮಗ ದುರ್ಜಯ ಕಳಿಸೋನಯ್ಯ….ಹರಹರಯನ್ನ ಮಾದೇವಾ
ನನ್ನ ಗೆಳೆಯ ಕರ್ಕೊಂಡು ಬರ್ಲಿ ಹೋಗಿ…..ಶಿವಯನ್ನ ಮಾದೇವಾ.
ಕ : ಮಂತ್ರಿ ಅಕ್ಕಳಿಸಿದ; ಆದ್ರೆ ರಾಜಕೇಳಲಿಲ್ಲ!
ಹಿ : ಚಿಂತಿ ಬ್ಯಾಡ ಮಂತ್ರೀ; ದುರ್ಜಯ ನನ್ನ ಗೆಳೆಯ, ಜೊತೆಗೆ ಓದಿದೋರು ನಾವು; ಆತನೇ ಹೋಗ್ಲಿ.
ಕ : ಮಂತ್ರಿ ಸುಮ್ನಾಗಬೇಕಾತು. ಆ ಕೂಡ್ಲೆ ರಾಜ ತನ್ನ ಗೆಳೆಯನ್ನ ಕರಿಸ್ಕೊಂಡು
ಹಿ : ಏನಂತಾರೆ?
ಕ : ಗೆಳೆಯಾ ದುರ್ಜಯಾ….
ಹಿ : ಏನು ಮಹಾರಾಜ್? ಯಾಕ ಕರಿಸಿದ್ರಿ? ಅಪ್ಪಣಿ ಆಗಲಿ.
ಕ : ನಿನಗೆ ಕೆಲಸ ಬಂದೈತಿ,
ಹಿ : ಅದೇನು ನೌಕರಿ ಹೇಳ್ರಿ ಮಾರಾಜ್ರೇ?
ಕ : ಭಾಂಡೇಪುರಿ ಪಟ್ಣಕ್ಕೆ ಹೋಗಿ ನನ್ನ ಮಡದಿ ಮಗನ ಕರ್ಕೊಂಡು ಬಾ.
ಹಿ : ತೊಟ್ಲ ಕಾರ್ಯ.
ಕ : ಮಹಾರಾಜ ಶೀಲಾವತಿ ಕರೀಲಿಕ್ಕೆ ಹೋಗ್ಬೇಕು ನೀನು ಅಂದ ತಕ್ಷಣಕ್ಕೆ ಆನಂದವೇ ಆನಂದ ಆಯ್ತು ದುರ್ಜಯಗೆ.
ಹಿ : ಮಹದಾನಂದ!
ಕ : ಶಪ್ತ ಮಾಡಿದ್ದೆ – ಇಲ್ಲಿಗೆ ಕೈಗೊಂಡಿತು. ಶೀಲಾವತಿ ನನ್ನ ಸ್ವಾಧೀನ ಆದ್ಲು – ಅಂದ ಮನಸ್ಸಿನಾಗs
ಹಿ : ರಾಜರ ಅಪ್ಪಣಿಯಂತಾಗ್ಲಿ.
ಕ : ಜೊತೆಗೆ ತಕ್ಕಷ್ಟು ದಂಡಿಗೆ ಕರ್ಕೊಂಡು ಶೀಲಾವತೆಮ್ಮಗೆ ಕರಿಯಾಕ ನಡದ-
ಹಿ : ಆ ದುಷ್ಟ ದುರ್ಜಯ.
ಕ : ಭಾಂಡೇಪುರಿ ಪಟ್ಣದಲ್ಲಿ ತನ್ನ ತೌರುಮನಿಯೊಳಗೆ, ಶೀಲಾವತಿ ತಾಯಿ. ದಾರಿ ನೋಡ್ತಾಳೆ – ತನ್ನ ಗಂಡನದ್ದು |
ಹಿ : ಪತಿರಾಜ ಬರ್ತಾನೆ, ನನ್ನ ಕರ್ಕೊಂಡ್ಹೋಗುತಾನಂತ.
ಕ : ಓಹೋ ಯಾರು ಬಂದೋರು?
ಹಿ : ಅಕಳೇಶ ಪ್ರಧಾನಿಯ ಮಗ ದುರ್ಜಯ!
ಕ : ಈ ಸುದ್ದಿ ಕೇಳಿ ಮಹಾರಾಣಿ ಮಕಾ ಇಳಿ ಬಿಟ್ಲು ;
ಹಿ : ಮುಗಲು ಹರಿದು ಬಿದ್ದಂಗಾತು!
ಕ : ಈ ದುರ್ಜಯ ಹೆಸರಿಗೆ ತಕ್ಕಂಥ ಗುಣದೋನು; ನನ್ನ ಕಂಡಾಗೆಲ್ಲಾ ಕೆಟ್ಟ ಕಣ್ಣಿನಿಂದಲೇ ನೋಡ್ತಿದ್ದ. ನನ್ನ ಮಹಾರಾಜಯಾಕ ಹಿಂಗ ಮಾಡಿದ!
ಹಿ : ನನ್ನ ದೇವಶೇನ ಮಾವ ಬರಬಾರ್ದಿತ್ತೆ?
ಕ : ನಮ್ಮತ್ತಿ ಮಹಾದೇವಿಯಾದ್ರೂ ಬರಬಾರ್ದಿತ್ತೆ?
ಹಿ : ಅದೂ ಬ್ಯಾಡ, ಅಕಳೇಶ ಮಂತ್ರಿ ನನಗೆ ತಂದಿ ಇದ್ಹಂಗ – ಅತ್ನಾದ್ರು ಬರಬಾರ್ದಿತ್ತೆ?
ಕ : ಇಂಥ ಚಾಂಡಾಲ ಬಂದಾನ ಅಂದ ಬಳಿಕ ನಾನು ಹೋಗೋದಿಲ್ಲ ಅನ್ಲೇ?
ಹಿ : ಅದು ಹೆಂಗs ಅನ್ನೋದು!-
ಕ : ಮಹಾರಾಜ ಮನಸ್ತಾಪ ಮಾಡಿಕೊಳ್ತಾರ!
ಹಿ : ಆಹಾ!
ಕ : ಊರಿನ ದೇವರಿಗೆಲ್ಲಾ ಹಣ್ಣುಕಾಯಿ ಕೊಟ್ಟು ತಂದಿ-ತಾಯಿಗೆ ನಮಸ್ಕಾರ ಮಾಡಿ ಶೀಲಾವತಿ ತನ್ನ ಮಗ ರತನಶೇಕ ಸಹಿತ ಪಲ್ಲಕ್ಕಿಯೊಳಗೆ ಕುಂತು ಕೊಂಡ್ಲು.
ಹಿ : ರಾಜ ಇಬ್ರೂ ಗೌಡೇರ್ನ ಜೋಡಾಗಿ ಕಳಿಸಿದಾ!
ಕ : ಅವರು ಎಂಥಾ ಗೌಡೇರು ಅಂದ್ರ-ವೀರಾಧಿವೀರ ಗೌಡೇರು! ಸಂದರ್ಭಬಿದ್ದರೆ ಯುದ್ಧ ಮಾಡೋಂಥ ಗೌಡೇರು!
ಹಿ : ಶೀಲಾವತಿ ಅದಕಾಗಿ ಎಷ್ಟೋ ಧೈರ್ಯ.
ಕ : ದುರ್ಜಯ ಆಲೋಚಿನಿ ಮಾಡಿದಾ ದಾರಿಯಲ್ಲಿ-
ಹಿ : ದಾರಿಯಲ್ಲಿ!
ಕ : ಈಗ ಬಂದದಾರಿ ಹಿಡಿದು ಮುಂದೆ ಹೋದ್ರ ಹೊತ್ತು ಮುಳುಗೋದ್ರೊಳಗs ಕರಿವೀರ ಪಟ್ಣ ಸೇರ್ತೀವಿ. (ರಾಗವಾಗಿ) ಶೀಲಾವತಿ ನನ್ನ ಕೈವಾಸ ಇನ್ನು ಆಗೋದಿಲ್ರೀ….
ಹಿ : (ರಾಗವಾಗಿ) ಹೌದೂ….
ಕ : ಊರು ದಾರಿ ಬಿಡ್ಬೇಕು. ಅಡವಿದಾರಿ ಹಿಡಿಬೇಕು. ಅದಕ್ಕಾಗಿ ವಸ್ತಿ ಆಗ್ಬೇಕು ಈ ಅಡವಿ ವಸ್ತ್ಯಾಗ ಈಕಿ ಪತಿವ್ರತಾ
ಧರ್ಮ ಕೆಡಸ್ಬೇಕು.
ಹಿ : ಓಹೋ ನೀಚಾತ್ಮ!
ಕ : ಆಲೋಚಿನಿ ಮಾಡಿದಾ! ಊರದಾರಿ ಬಿಟ್ಟ. ಅಡಿವಿದಾರಿ ಹಿಡದ!
ಹಿ : ಆಹಾ!
ಕ : ಶೀಲಾವತಿಗೆ ಅನುಮಾನ ಬಂತು-ಅಣ್ಣಾ ದುರ್ಜಯಾ.
ಹಿ : ಅಮ್ಮಾ?
ಕ : ಯಾಕಪ್ಪಾ ಊರುದಾರಿ ಬಿಟ್ಟೆಲ್ಲಾ?
ಹಿ : “ಈ ದಾರಿ ಸುತ್ತಾಗತೈತೆಮ್ಮ – ಇದು ಉದಯವಾನ ಮಹಾರಾಜ್ರು ಲಗೂನ ಮಾಡಿ ಬರ್ರೀ ಅಂತ ಹೇಳಿ ಕಳಿಸ್ಯಾರ” ಅಂದ.
ಕ : ಶೀಲಾವತೆಮ್ಮನ ಮಕಸಣ್ಣದಾತು.
ಹಿ : ಅದಕ್ಕೆ ದುರ್ಜಯ ಅಂತಾನೆ – ನಾನು ಇರೋವರಿಗೂ ನಿನಗೆ ಏನು ಭಯ ಬಾರಮ್ಮ ರಾಣೀ.
ಕ : ಆ ಕಡಿಗೂ ಗುಡ್ಡ, ಈ ಕಡಿಗೂ ಗುಡ್ಡ, ನಡುಮಧ್ಯದ ಕೊಳ್ಳದಾಗ ಹೊತ್ತು ಮುಳಿಗಿ ಕತ್ತಲಾತು!
ಹಿ : ಆತು.
ಕ : ಊರು ಬರ್ಲಿಲ್ಲ, ಉದಮಾನ ಬರ್ಲಿಲ್ಲ!!
ಹಿ : ಯಾಕಣ್ಣಾ ಊರು ಬರ್ಲಿಲ್ಲ? ಏನೋ ದಾರಿ ತಪ್ಪಿದ್ಹಂಗಾತು?
ಕ : “ಹೌದಮ್ಮ ದಾರಿ ತಪ್ಪೀದ್ವೀ; ಇಲ್ಲಿ ವಸ್ತಿಮಾಡಿ ಮುಂಜಾನೆ ಹೋಗಾನು” ಅಂದ.
ಹಿ : ಹ್ಯಾಗಾದ್ರೂ ಮಾಡಣ್ಣ – ಅಂದ್ಲು ರಾಣಿ.
ಕ : ಡೇರೆ ಹೊಡದ್ರು ಶೀಲಾವತಿಗೆ; ದುರ್ಜಯಗೂ ಒಂದು ಡೇರಿ ತಯರಾತು; ಗೌಡೇರಿಗೂ ಒಂದು ಡೇರಿ; ರಾತ್ರಿ ಒಂಬತ್ತು ಗಂಟಿ ಟೈಮು; ಆ ಗೌಡೇರು ಮಲ್ಕೊಂಡ್ರು. ಉಳಿದ ಸಿಬ್ಬಂದಿಗೆಲ್ಲಾ ನಿದ್ದಿ ಹತ್ತಿತು.
ಹಿ : ತಾಯೀ ಮಗನೂ ನಿದ್ದಿಮಾಡ್ತಾ ಅದಾರ,
ಕ : ಮಧ್ಯರಾತ್ರಿ ವ್ಯಾಳ್ಯ.
ಹಿ : ಹೌದೂ,
ಕ : ಆರು ತಾಸಿನೊಳಗ, ದುರ್ಜಯ ಎದ್ದ ;-
ಹಿ : ಓಹೋ-
ಕ : ಈಗ ಮಧ್ಯರಾತ್ರಿ ; ಶೀಲಾವತಿಗೆ ಸ್ವಾಧೀನ ಮಾಡ್ಕೊಬೇಕು – ಅಂದ ಚಾಂಡಾಲ! ಒಳ್ಳೇ ಸವರಾತ್ರಿಗೆ ಆಕಿಡೇರಾಗ ಬಂದು ನೋಡ್ತಾನೆ – ಶಾಲು ಹೊಚ್ಚಿಕೊಂಡ ಮಲ್ಕೊಂಡಾಳೆ – ಮಹಾಪತಿವ್ರತಾ ಶೀಲಾವತಿ! (ರಾಗವಾಗಿ) ಎದ್ದೇಳೇ……. ಶೀಲಾವತೀ….ಎಂಥ ನಿದ್ರಿ ಮಾಡ್ತೀ….ಮಡದೀ…….
ಹಿ : ಅಂತಾ-
ಕ : ಗದರಿಸಿ ಮಾತಾಡ್ಬೇಕಾದ್ರೆ ತಾಯಿಗೆ ಎಚ್ಚರಾಗೇತಿ!
ಹಿ : ಆಹಾ!
ಕ : ದಿಗ್ಗನೇ ಎದ್ದು ಕುಂತು ನೋಡ್ತಾಳೆ – ದುರ್ಜಯ! ಮಂತ್ರೀಮಗ!
ಹಿ : ಅಣ್ಣಾ….ಏನು ಅಣ್ಣಾ, ಇಲ್ಲಿ ಬಂದೀಯಲ್ಲಾ?
ಕ : ಅಪರಂಪಾರ ಮಧ್ಯರಾತ್ರಿ, ಎಲ್ರೂ ಮಲ್ಕೊಂಡಾರ, ನೀನು ಬಂದೆಲ್ಲಾ ಅಣ್ಣಾ?
ಹಿ : ಹಿಂಗ ಬರಬಾರ್ದು-
ಕ : ಮಹಾರಾಣಿ ಇದ್ದ ಜಾಗದಲ್ಲಿ ಬರಬಾರ್ದುನಡಿ-
ಹಿ : ಮದ್ಲು ನಡೀ.
ಕ : ಅಣ್ಣಾ ಅನ್ನಬಾರ್ದು ಈಗ, ಅಪ್ಪ ಅನ್ನಕೂಡ್ದು, ತಮ್ಮಾ ಅನ್ನಬಾರ್ದು ನಿನಗೆ ನಮ್ಮ ತಂದಿ ನಿಶ್ಚಯ ಮಾಡಾಕ ಬಂದಾಗ ನಿನ್ನ ಫೋಟೋ ನೋಡಿ ನಿನ್ನಮ್ಯಾಲೆ ಪ್ರೀತಿ ಆತು. ನನ್ನ ಕೈವಾಸ ಆಗ್ಬೇಕು ನೀನು.
ಹಿ : ಆಹಾ!
ಕ : (ರಾಗವಾಗಿ) ಅಣ್ಣಾ ಇಂಥಾ ಮಾತ್ಹೇಳ್ಬ್ಯಾಡೋ.
ಹಿ : ಆss……….
ಕ : (ರಾಗವಾಗಿ) ನಿನ್ನ ಮಗಳೂ….ನಿನ್ನ ತಂಗೀ….ನಿಮ್ಮ ತಾಯೀ ಇದ್ಹಾಂಗ-
ಹಿ : ಹೌದು.
ಕ : ರಾಜನ ಉಪ್ಪ ಉಂಡಿ, ನನಗೀ ಮಾತು ಹೇಳ್ಬ್ಯಾಡ ಅಣ್ಣಾ ; ನಿನ ತಂಗಿ ಇದ್ಹಾಂಗ ನಾನು.
ಹಿ : (ರಾಗವಾಗಿ) ಆಹಾ!
ಕ : ಅದು ಸಾಧ್ಯವಿಲ್ಲ, ಪ್ರೀತಿಯಿಂದ ನನಗೆ ವೀಳ್ಯಾಕೊಟ್ಟು ನನ್ನ ಮಡದಿ ಆಗ್ಲಿಕ್ಕೇ ಬೇಕು-
ಹಿ : ಆಗ್ಲಿಕ್ಕೇ ಬೇಕು ಬಿಡೋದಿಲ್ಲ!
ಕ : ದೇವಾನನ್ನ ಪತಿವ್ರತಾ ಧರ್ಮಕ್ಕೆ ತೊಂದ್ರಿತಂದ್ಯಾ ಶ್ರೀಹರೀ….
ಹಿ : ಪರಮಾತ್ಮಾ!-
ಕ : ಕಾಪಾಡು ನನ್ನ ಪತಿವ್ರತಾ; ಅಪ್ಪಾ ಅಂದ್ರ ಇವನಿಗೆ ಅಂತಃಕರಣ ಬರ್ಲಾರ್ದು!
ಹಿ : ದಯತ್ವ ಇಲ್ಲ!
ಕ : ಅವ್ವಾ ಅಂದ್ರೂ ಇವನಿಗೆ ತಿಳಿವಲ್ದು! ಮದ ಏರಿ ಕೈಮೈ ಮುಟ್ಟಿ ಮಾನಭಂಗ ಮಾಡಬಹುದು….ಶೀಲಾವತಿ ಯೋಚಿಸ್ತಾಳೆ; ಯೋಚ್ನೆಮಾಡಿ, – (ರಾಗವಾಗಿ) “ಆಗಲಿ ಅಣ್ಣಾ” ಅಂದ್ಲೂ….
ಹಿ : ಕೇಳಿ ನನಗೆ ಸಮಾಧಾನ ಆತು ಮಡದೀ,
ಕ : ದುರ್ಜಯಾ ನೀನೆ ನನ್ನ ಪತಿ, ನಾನೇ ನಿನ್ನ ಮಡದಿ.
ಹಿ : ಆಹಾ ಹೀಗೆ ಹೇಳಬೇಕು; ಶೀಲಾವತೀ ಈಗ ನನಿಗೆ ಆನಂದ ಆಯ್ತು.
ಕ : ಒಂದು ಐದು ನಿಮಿಷ ತಡಮಾಡ್ಬೇಕ್ರಿ.
ಹಿ : ಯದಕೆ?
ಕ : ನಿನ್ನ ಮಡದಿಯಾಗಲಿಕ್ಕೆ ನಾನು ಸ್ವಲ್ಪ ಬೈಲುಭೂಮಿಗೆ ಹೋಗಿ ಬರ್ತೀನಿ; ಐದು ನಿಮಿಷ ತಡಮಾಡು.
ಹಿ : ಆಹಾ
ಕ : ಹೋಗಿ ಬಾ
ಹಿ : (ರಾಗವಾಗಿ) ಆss………
ಕ : (ರಾಗವಾಗಿ) ಹೊರಗೆ ಬಂದು ನೋಡ್ತಾಳೆ ಶೀಲಾವತಿ……..ಎಲ್ಲರೂ ಮಲಿಕ್ಕೊಂಡಾರಾs……..ಎಲ್ಲಾದಂಡು ನಿದ್ರೆಲಿ ಮಲಿಗೇತೀ….ನನ್ನ ಪತಿವ್ರತಾ ಉಳಿಸೋರು ಯಾರು ತಾಯೀ!
ಹಿ : ಹೌದೂ.
ಕ : (ರಾಗವಾಗಿ) ಈಗ ನಾನು ಯಾರ ಮರೀ ಬೀಳ್ಲೀ……
ಹಿ : (ರಾಗವಾಗಿ) ಆಹಾ!
ಕ : ಕಂಡೋರ ಮರಿಬಿದ್ರೆ ನನ್ನ ಪತಿವ್ರತಾ ಧರ್ಮ ಉಳಿಯೋದಿಲ್ಲ; ಕಾಪಾಡ್ಬೇಕು ನೀನೇ ತಾಯೀ! ಅಂತ ಮನದಾಗೇ ದೇವೀನ ನೆನಿತಾ ಒಂದು ಫರ್ಲಾಂಗ್ ದೂರ ಹೋಗ್ಬೇಕಾದ್ರೆ, ಅಲ್ಲಿ ಚಂಡಿಕಾದೇವಿ ಗುಡಿ ಐತಿ – ನೋಡ್ರಿ!
ಹಿ : ಆಹಾ. ಅಂಬಾದೇವಿಗುಡಿ, ಒಂದೇ ಒಂದು ಅರ್ಧ ಫರ್ಲಾಂಉ!
ಕ : ಚಂಡಿಕಾದೇವಿ ಗುಡಿಗೆ ಬಂದ್ಲು ; ಆ ಗುಡಿಗೆ ಕಮಾನ್ ಕಿಟಕಿ ಬಾಗಿಲು ; ಅದರ ಕದ ಎಲ್ಲಾ ಉಕ್ಕಿನವು; ಬೀಗ ಹಾಕೇತಿ – ಬಾಗ್ಲಿಗೆ ; ಒಳಗs ಹೋಗಾಕ ದಾರಿ ಇಲ್ಲ!
ಹಿ : ಆಹಾ ಚಂಡಿಕಾ ದೇವಿ!
ಕ : ದೇವೀ ಧ್ಯಾನ ಮಾಡಿದ್ಲು ;
|| ಪದ ||
ಬೊಂಗಳಾಂಬಿಕೆ ನಿನ್ನ ಪೊಗಳುವೆ ಹೊಗಳುವೆ
ಮಹಾಂಕಾಳಿ ಮೊದಲೆನಗೆ ಒಲಿಯಮ್ಮ
ಸರ್ವ ಕಾಲದೊಳು ಸ್ಮರಣಿಯ ಮಾಡುವೆ
ಭಾಗ್ಯದ ನಿಧಿ ತಾಯಿ ಬೊಂಗಳಾಂಬೀ
ಆದಿ ಅನಾದಿ ಸಾಧಿಸಿ ನೀ ಬಂದು
ಆ ಮಹಾದೇವನ ಕಾಡಿಸಿದೆ
ಏನು ಹೇಳಲಿ ದೇವಿ ನಿನ್ನ ಶೂರತನ
ಮೂಳ ಮಾತಿಗೆ ನೀ ಮುಂದೆ ಇರುವಾಕಿ
ಹೊಟ್ಟೆ ಮಗನ ಮೆಟ್ಟಿ ಹುಗಿಯುವ ಕಾಲಕ್ಕೆ
ಆಣೆ ರೊಕ್ಕಾಕೆ ಹೆಣ ತರುಬಿಸಿದೆ
ಧರ್ಮಾರಾಜನ ಐಶ್ವರ್ಯ ಕಳಚಿಕ್ಕಿ
ಗಳಿಗ್ಯಾಗ ಅಳಿಗಾಲ ತರಿಸೀದೆ
ಹರಿಶ್ಚಂದ್ರ ರಾಜನಂಥ ಸತ್ಯವಂತ ಯಾರಿಲ್ಲ
ವೀರಬಾಹುಕನ ಮನೆ ಸೇರಿಸಿದೆ
ವಿಶ್ವಾಮಿತ್ರ ಗುರು ಆಗಿ ಕಾಡಿಸಿದಿ
ವಿಕ್ರಮ ರಾಜನ ದಿಕ್ಕಾಪಾಲು ಮಾಡಿಸಿ
ಅನ್ನ ಕೊಬ್ಬರ ಮನೆ ಸೇರಿಸಿದೆ
ಊಟಕ್ಕೆ ಹಾಕಿದ ಹಾರ ನುಂಗಿತು ಹಂಸವು
ಹಟಕಂತಲಿ ಕೈ ಕಾಲು ಕಡಿಸೀದೆ
ಧರೆಯೋಳು ಮೇಲ್ಗಿರಿ ಗದುಗಿನ ಗಿರಿಮಳಿಸ್ವಾಮಿ
ಆತನ ಹಿರೇ ಮಗಳು ನೀನಾದೆ
ಹಿ : ಧಡಕ್ಕಂತಾ ಕದಾ ಬಿಚ್ಚಿದುವು;
ಕ : ಬೀಗ ತನಿಗೆ ತಾನೇ ಸಿಡುದ್ವು – ಆಕಿ ಪತಿವ್ರತಾ ಧರ್ಮಕ್ಕೆ! ಶಾಂಭವೀ ಅಂತ ಒಳಗ ಬಲಗಾಲಿಟ್ಟು ಆ ತಾಯಿ ಹೋಗಿ ದೇವತೀ ಹಿಂದೆ ಕುಂತ್ಲು!
ಹಿ : ಹೌದೂ.
ಕ : ಕದಾ ತಗದಿದ್ರೆ ಆ ಚಾಂಡಾಲ ಬಂದು ಈ ಮಗಳ ಕೈ ಮೈ ಮುಟ್ಯಾನು ಅಂತಾ ದಡಗ್ ಅಂತ ಕದ ಮುಚ್ಚಿಬಿಟ್ಲು – ಚಂಡಿಕಾದೇವಿ!
ಹಿ : ಬೀಗಾನೂ ಜಡದ್ಲು!
ಕ : ಎಲ್ಲಾ ಬಂದೋಬಸ್ತು ಆತು.
ಹಿ : ಐದು ನಿಮಿಷ ಆತು, ಹತ್ತು ನಿಮಿಷ ಹೋತು!
ಕ : ಇಪ್ಪತ್ತು ನಿಮಿಷ ಹೋತು! ಶೀಲಾವತಿ ಹೋದಾಕಿ ಬರ್ಲಿಲ್ಲ – ಬೈಲು ಭೂಮಿಗೆ!
ಹಿ : ಹೌದು ಚರಿಗಿ ತೊಗೊಂಡು ಹೋದಾಕಿ ಬರ್ಲಿಲ್ಲ!
ಕ : ರತನಶೇಕ ಮಗನಿಗೆ – “ಎಲೋ ನಿಮ್ಮ ತಾಯಿಗೆ ನೋಡ್ಕೊಂಡು ಬರ್ತೀನಿ” ಅಂತ ಹೊರಗ ಬಂದ;
ಹಿ : ಶೀಲಾವತೀ, ಶೀಲಾವತೀ.
ಕ : (ರಾಗವಾಗಿ) ಆಕಿ ಸುದ್ದಿಯಿಲ್ಲ….ಆಹಾ ಹೋದ್ಲು….!
ಹಿ : ಮೋಸ ಆತು!
ಕ : (ರಾಗವಾಗಿ) ಮೋಸ ಮಾಡ್ದೇನೇ….ಬಯಲು ಭೂಮಿಗೆ ಕುಂತು ಬರ್ತೀನಂತಾ ಹೋದಿ!
ಹಿ : ಹೋದೀ……….
ಕ : (ರಾಗವಾಗಿ) ಯಾವ ಕಡಿಗೆ ಹೋದೀ…..ಎದಿ ಎದಿ ಬಡ್ಕೊಂತಾನೆ, ಬಾಯ್ ಬಾಯಿ ಬಡ್ಕೊಂತಾನಾ!
ಹಿ : ಶೀಲಾವತೀನ ಹುಡ್ಕೊಂತs ಹುಡ್ಕೊಂತಾ ಆ ದುರ್ಜಯ ಚಂಡಿಕಾದೇವಿ ಗುಡಿಗೆ ಬಂದ.
ಕ : ಒಳಗs ಬೆಳಕು ಐತಿ! ಕಮಾನು ಕಿಟಿಕ್ಯಾಗ ಹಣಿಕಿ ನೋಡ್ತಾನೆ.
ಹಿ : ಆಹಾ,.
|| ಪದ ||
ಇಲ್ಲಿ ಐದಾಳೋ ಶೀಲಾವತೀ……..ಹರಯನ್ನ ಮಾದೇವಾ.
ಇಲ್ಲಿ ಐದಾಳೋ ಈಕೇ………..ಹರಯನ್ನ ಮಾದೇವಾ.
ಒಳಗೆ ಕುಂತೇನೆ ನನ ಮಡದೀ……..ಹರಯನ್ನ ಮಾದೇವಾ.
ಎದ್ದುಬಾರೆ ಶೀಲಾವತೀ……….ಹರಯನ್ನ ಮಾದೇವಾ.
ಕ : ಆಹಾ ಶೀಲಾವತೀ! ಇಲ್ಲಿ ಬಂದು ಕುಂತಿ ಏನೇ? ಮಡದೀ ಬಾ ಹೊರಗಡಿಗೆ-
ಹಿ : ಏನ್ಮಾಡಿದ್ರೂ ತಾಯಿ ಧ್ವನಿ ಕೊಡುವಲ್ಲುಳು!
ಕ : ಇವನ್ಕೂಟ ಮಾತಾಡಿದ್ರೇ ನನ್ನ ಪತಿವ್ರತಾ ಕೆಟ್ಟೀತು. ಅಂತಾ ಸುಮ್ಮನ ಐದಾಳೆ!
ಹಿ : ಹೌದೂ.
ಕ : ಶೀಲಾವತೀ ಬರೋದಿಲ್ವೇ ? ನಿನ್ನ ಮಗನ್ನ ತರ್ತೀನಿ ನಿಲ್ಲು – ಅಂದು ಓಡಿ ಬಂದ ದುರ್ಜಯ
ಹಿ : ಡೇರಿಯೊಳಗ ಐದು ತಿಂಗಳ ಕೂಸು ರತನ ರತನ ಇದ್ಹಾಂಗ ಐತಿ!
ಕ : ಗಂಡು ಮಗ! ತೊಗೊಂಡು ಬಂದ ಗುಡಿಮುಂದಕ ಅದನ್ನ~
ಹಿ : ಆಹಾ!
ಕ : ಶೀಲಾವತೀ ಹೊರಗಡಿಗೆ ಬರ್ತೀಯೋ ಏನು ನಿನ್ನ ಮಗನಿಗೆ ಕಡದು ಬಿಡ್ಲಾ?- ಅಂದ ಚಾಂಡಾಲ!
ಹಿ : ದೇವಾ ಪರಮಾತ್ಮಾ!
ಕ : (ರಾಗವಾಗಿ) ಅವ್ವಾ ಮಗನಿಗೆ ಕಡೀತೀನಿ ಅಂತಾನ……ಹೊರಗ ಹೋದ್ರ……ಪತಿವ್ರತಾ ಧರ್ಮ ಹೋಗ್ತೈತೀ…….ಸತಿ-ಪತಿ ತಣ್ಣಗಿದ್ದರೆ ಇಂಥ ಮಗನಿಗೆ ಹತ್ತು ಮಂದಿ ನೋಡೇನಂದ್ಲು…..ಆಯಮ್ಮ!
ಹಿ : ಪತಿವ್ರತಾ ಹಾನಿಯಾದ ಮ್ಯಾಲೆ ಮಾನ ಮುಖ ನೋಡ್ಬಾರ್ದು ಅಂದ್ಲು
ಕ : ದುರ್ಜಯ ಕೇಳ್ತಾನೆ – ಹಾಗಾದರೆ ನೀನು ಬರೋದಿಲ್ವೇನೆ?
ಹಿ : ಆಹಾ.
ಕ : “ನೋಡು ಹಂಗಾದ್ರೆ,- ನನ್ನ ಏಟು” ಅಂದು ಬಿಚ್ಚುಗತ್ತಿ ತೊಗೊಂಡು ಬೀಸಿ ಮಗನಿಗೆ ಎರಡು ತುಂಡು ಮಾಡಿದಾ!
ಹಿ : ರುಂಡಾ-ಮುಂಡಾ ಕಿಟಕಿ ಒಳಗ ಒಗೆದ.
ಕ : ರಕ್ತದ ಬಿಚ್ಚುಗತ್ತಿ ತೊಗೊಂಡು ಡೇರಾದ ಹತ್ರ ಬಂದು ನೋಡ್ತಾನೆ. -ಎಲ್ಲರೂ ಮಲ್ಕೊಂಡಾರ!
ಹಿ : ಭಾರೀ ನಿದ್ದಿ ಮಾಡ್ತಾ ಅದಾರ!
ಕ : ಈಗ ಏನು ಮಾಡ್ಲಿ? ಇವರೆಲ್ಲಾ ಎದ್ದು “ರಾಣಿ ಎಲ್ಲಿ ಹೋದ್ಲು?” ಅಂತ ಕೇಳಿದ್ರೆ ನಾನು ಏನ ಹೇಳ್ಲಿ!
ಹಿ : ಏನು ಜವಾಬು ಕೊಡ್ಲಿ?
ಕ : ಏಳ್ರೀ ಎದ್ದೇಳ್ರೀ ದಂಡೇ ಎಂಥಾ ನಿದ್ದಿ ಮಾಡ್ತೀರಿ? ಎಷ್ಟು ಕೂಗಿದ್ರು ನಿಮಗ ಒಬ್ಬರಿಗೂ ಎಚ್ಚರಾಗ್ಲಿಲ್ಲ!
ಹಿ : ಆಹಾ!
ಕ : ಹಿಡಂಬ, ರಾಕ್ಷಸ ಬಂದಿತ್ತು ಇಲ್ಲಿ! ಕಣ್ಣು ಬಂಡೀಗಾಲಿ, ಮೂಗು ಗುಂಬಿಕೆಜ್ಜಿ ಹಲ್ಲುಕುಂಟಿಕೂರ್ಗಿದಿಂಡು. ಅಗಸಿಯಂತ ಬಾಯಿ! ಅದ್ಭುತ ರಾಕ್ಷಸ ಬಂದು-
ಹಿ : ಇಲ್ಲಿಗೆ ಬಂದು-.
ಕ : ಈ ಗೌಡೇರಿಗೆ ನಮಗೆಲ್ಲಾ ಬಿಟ್ಟು, ಶೀಲಾವತ್ತೆಮ್ಮಗೂ ರತನಶೇಕ ಮಗನಿಗೂ (ರಾಗಾವಾಗಿ) ರಾಕ್ಷಸ ಎತ್ತಿಕೊಂಡು ಹೋಯ್ತೋ ಈಗಾs…..
|| ಪದ ||
ದುರ್ಜಯ ಸುಳ್ಳು ಹೇಳ್ಯಾನಯ್ಯಾ….ಹರಹರಯನ್ನದೇವಾ!.
ಕ : ದುರ್ಜಯ ಸುಳ್ಳು ಹೇಳಿದಾ!
ಹಿ : ಆಹಾ.
ಕ : ದುರ್ಜಯ ಹೇಳಿದ ಮಾತಿಗೆ ದಂಡು ಗಾಬರಿಯಾಗಿ, “ಯಮ್ಮಾ ಶೀಲಾವತೀ ಯಾವ ಕಡಿಗೆ ಹೋದೆಮ್ಮಾ? ನಿನ್ನ ಮಗನ್ನ ರಾಕ್ಷಸ ಒಯ್ದನೇ!
ಹಿ : ಆಹಾ!
ಕ : ನಮಗೆಲ್ಲಿ ರಾಕ್ಷಸ ನುಂಗ್ತೈತೋ ನಡ್ರಿ ಅಂತ್ಹೇಳಿ ದಂಡಿಗೆ ಎಲ್ಲಾ ಕರ್ಕೊಂಡು ಹೊಂಟ್ನಪಾ ಇವನು – ದುರ್ಜಯ!
ಹಿ : ಆಹಾ ಊರಿಗೆ!
ಕ : ಕರಿವೀರ ಪಟ್ಣ ಸಿಂಗಾರ ಮಾಡ್ಯಾರ ; ಊರಮುಂದೆ ಮಂಟಪಕಟ್ಟೀ; ಉದಯವಾನ, ಶುಭವಾನ, ಅವರ ತಂದಿ- ತಾಯಿ – “ಶೀಲಾವತಿ ಮತ್ತು ರಾಜಕುಮಾರ ಬರ್ತಾರೆ ಅಂತ ನೋಡೇ ನೋಡಿದ್ರು – ಬರ್ಲಿಲ್ಲ!
ಹಿ : ಹೌದೂ.
ಕ : ಮುಂಜಾನೆ ಹನ್ನೊಂದು ಗಂಟಿ ಟೈಮು! ನೋಡ್ತಾರೆ – ದಂಡು ಗಾಬರ್ಯಾಗಿ ಓಡೋಡಿ ಬಂತು – ಊರಿಗೆ!
ಹಿ : ಏನು ದುರ್ಜಯ?
ಕ : ಅಯ್ಯೋ ಮೋಸವಾಯ್ತು ಮಹಾರಾಜಾ!
ಹಿ : ಏನಾಯ್ತು?
ಕ : ನಿನ್ನೆ ಮಧ್ಯಾಹ್ನ ಮೂರುಗಂಟೆಗೆ ನಾವು ಊರು ಬಿಟ್ಟು ಬರೋ ಕಾಲಕ್ಕೆ ರಾತ್ರಿ ವಸ್ತಿಯಾದ್ವಿ – ಅರಣ್ಯದಲ್ಲಿ!
ಹಿ : ಆಹಾ!
ಕ : ಹಿಡಂಬ, ಖೂಳ ರಾಕ್ಷಸ ಬಂದು, ಶೀಲಾವತಿ ಮಹಾರಾಣಿಗೂ, ಮಗ ರತನಶೇಕ ರಾಜಕುಮಾರಗೂ ತೊಗೊಂಡು ಹೋಗಿ ಬಿಡ್ತು!
ಹಿ : ಆಹಾ!
ಕ : (ರಾಗವಾಗಿ) ಹೋದ್ಯಾ ಶೀಲಾವತೀ….ಹೋದ್ಯಾ ಮಗನೇ ರತನಶೇಕಾ…….. ನಿನ್ನ ಮಕಾ ನೋಡ್ಲಿಲ್ಲೋ…… ಮಗನೇ ಹೋದ್ಯಾ!
ಹಿ : (ರಾಗವಾಗಿ) ಆಹಾss…..
ಕ : ದುರ್ಜಯಾ, ಗೆಳೆಯಾ, ಹಿಡಂಬಾ ಕೈಯಾಗ ನನ್ನ ಮಗನಿಗೂ, ಮಡದಿಗೂ ಕೊಟ್ಟ ಬಂದ್ರ್ಯಾ?
ಹಿ : ಆಹಾ!
ಕ : ಹೋದ್ಲು ಮಡದಿ – ಅಂತ ಉದಯವಾನ ಮಹಾರಾಜ ದುಃಖ ಮಾಡ್ತಾನೆ! ಅವರಪ್ಪ ದೇವಶೇನ ಅಳ್ತಾನೆ; ತಾಯಿ ಮಹಾದೇವಿ ದುಃಖ ಮಾಡ್ತಾಳೆ!
ಹಿ : ಯವ್ವಾ ಸೊಸೀ, ರಾಕ್ಷಸನ ಕೈವಾಸ ಅದೇ ನೀನೂ!
ಕ : ಉದಯವಾನ ಅಂತಾನೆ -ಎಂಥಾ ಕೆಲ್ಸ ಮಾಡಿದೋ ಮಿತ್ರಾ! ನನ್ನ ಮಡದಿಗೂ ನನ್ನ ಮಗನಿಗೂ ರಾಕ್ಷಸನ ಕೈಯಾಗ ಕೊಟ್ಟು ಬಂದೀ!
ಹಿ : ಆಹಾ!
ಕ : (ರಾಗವಾಗಿ) ಎಲ್ಲಿ ವಸ್ತಿಯಾಗಿದ್ರು? ಹುಡುಕಿ ಬರಾನು ಅಂತ್ಹೇಳಿ ಉದಯವಾನ ಹೇಳ್ತಾನೆ!
ಹಿ : ಬ್ಯಾಡ್ರಿ, ಬ್ಯಾಡ್ರಿ ಹೋಗಬ್ಯಾಡ್ರಿ, ಪ್ರಜರು ಹೇಳ್ತಾರೆ!
ಕ : ಹೋಗಬ್ಯಾಡ ಮಗನೇ, ಹೋದ ಮಡದಿ ಸಿಗೋದಿಲ್ಲ; ಇನ್ನೂ ಒಂದು ಮದುವಿ ಮಾಡ್ತೀವಿ.
ಹಿ : ಆಹಾ!
ಕ : ಹತ್ತುಮಂದಿ ಲಗ್ನವಾದ್ರೂ ನನ್ನ ಮನಸ್ಸು ಒಪ್ಪೀತೇ ತಂದೆ?
ಹಿ : ಒಪ್ಪಲಾರದು!
ಕ : ಮೊದಲ ಉಂಡ ಊಟಾನೇ ಊಟ! ಹಿಂದಾಗಡೆ ಊಟ ಉಪಯೋಗವಿಲ್ಲ.
ಹಿ : ಆಹಾ!
ಕ : ದುರ್ಜಯಾ ಯಾವ ಕಡೆ ನನ್ನ ಮಡದೀಗೆ ರಾಕ್ಷಸ ತೊಗೊಂಡು ಹೋಯಿತು!- ಹುಡುಕಿ ಬರ್ತೀನಿ. ದುರ್ಜಯಾ ನೀವು ಎಲ್ಲಿ ವಸ್ತಿಯಾಗಿದ್ರಿ ತೋರ್ಸುಬಾ; ನನ್ನ ಮಡದಿಗೂ, ಮಗನಿಗೂ ಪತ್ತೆ ಮಾಡ್ತೀನಿ.
ಹಿ : ನಡ್ರೀ ಮರಾಜ್ ಹೋಗೋನು. ಬರ್ರೀ – ಅಂತ ಹೇಳಿದ, ಆದರೆ ಹೊಂಡೂ ಮುಂದ
ಕ : ತಾಯಿ-ತಂದೆಗೆ ನಮಸ್ಕಾರ ಮಾಡಿದಾ; ತನ್ನ ತಮ್ಮಗ್ಹೇಳಿದ – ತಮ್ಮಾ ಶುಭವಾನಾ
ಹಿ : ಅಣ್ಣಾ.
ಕ : ಓದೋ ಸಾಲಿಬಿಡು.
ಹಿ : ಬಿಟ್ಟು-
ಕ : ತಾಯಿ-ತಂದೆಗೆ ನೋಡ್ಕೊಂಡು, ಊರಲ್ಲಿ ಪ್ರಜೆಗಳ್ನ ಕಾಪಾಡು.
ಹಿ : ಆಹಾ.
ಕ : ಉದಯವಾನ ಮತ್ತು ದುರ್ಜಯ ಹೊಂಟ್ರು. ದುರ್ಜಯ ಮುಂದ ಮುಂದೆ, ಉದಯವಾನ ಹಿಂದ್ಹಿಂದೆ.
ಹಿ : ಆಹಾ!
ಕ : ಎಲ್ಹೋದಿ ಮಡದೀ! ಗಿಡಗಂಟಿ, ಗುಡ್ಡ ಗವ್ವಾರದಲ್ಲಿ ಎಲ್ಲಿ ನೀನು ಅದೀ? ಶೀಲಾವತೀ, ಮಡದಿ-
ಹಿ : ಆಹಾ ಮಡದೀ!
ಕ : ನನಗೆ ಅಗಲಿದ್ಯಾ ಮಗ ರತನಶೇಕಾ! ಎಲ್ಲಿ ಹೋದಿ? ನಿನ್ನ ಮುಕ ನೋಡ್ಬೇಕು ಅಂದ್ರ ನೋಡದ್ಹಂಗ ಆತು!
|| ಪದ ||
ಯಾರಿಗೂ ಯಾರಿಲ್ಲ ಯರವೀನ ಸಂಸಾರ.
ನೀರ ಮೇಲಿನ ಗುಳ್ಳಿ ನಿಜವಿಲ್ಲ ಹರಿಯೇ || ಪ ||
ಬಾಯಾರೀತು ಎಂದು ಬಾವಿ ನೀರಿಗೆ ಹೋದೆ
ಬಾವಿಯ ಜಲಬತ್ತಿ ಬರಿದಾಯ್ತು ಹರಿಯೇ |
ಯಾರಿಗೂ ಯಾರಿಲ್ಲ ಯರವೀನ ಸಂಸಾರ
ನೀರ ಮೇಲಿನ ಗುಳ್ಳಿ ನಿಜವಿಲ್ಲ ಹರಿಯೇ!!
ಬಿಸಿಲು ಗಾಳಿಗೆ ಬೆದರಿ ಮರದ ನೆರಳಿಗೆ ಬಂದೆ!
ಮರಬಾಗಿ ಶಿರದ ಮೇಲೆ ಎರಗಿತು ಹರಿಯೇ.
ಯಾರಿಗೂ ಯಾರಿಲ್ಲ ಯರವೀನ ಸಂಸಾರ
ನೀರ ಮೇಲಿನ ಗುಳ್ಳಿ ನಿಜವಿಲ್ಲ ಹರಿಯೇ!!
ಅಡವಿಯೊಳ ಮನೆ ಮಾಡಿ ಗಿಡಕೆ ತೊಟ್ಟೀಲ ಕಟ್ಟಿ |
ತೊಟ್ಟಿಲದೊಳಗಿನ ಶಿಶುಮಾಯ ಮಾಡಿದೆಯಾ ಹರಿಯೇ ||
ತಂದೆ ಶ್ರೀಪುರಂದರ ವಿಠಲಾ ನಾರಾಯಣಾ |
ತಂದೆ ಶ್ರೀಪುರಂದರ ವಿಠಲಾ ನಾರಾಯಣಾ ||
ನಾ ಸಾಯೋ ಹೊತ್ತಿಗೆ ನೀ ಕಾಯೋ ಶಂಕರಾ….ಶಂಕರಾ.
Leave A Comment