ನಾಂದಿ
ಸೋಜಿಗವಾಗಿದೆ ಈ ಜಗಮಧ್ಯದಿ
ರಾರಾಜಿಸುವುದು ಸಭೆಯು |
ರಾಜಯೋಗ ಮಹಾರಾಜರ ತೇಜದಿ
ರಾಜಿಸುವುದು ಸಭೆಯು |
ಕಠಿಣ ತ್ರಿಕೂಟದ ತಟದೊಳಗಿರುತಿಹ
ಮಠದೊಳು ಶೋಭಿಸುವಾ |
ಪಟುಲತರದ ವರ ಜಟಿಲಸುಗಾತ್ರರು
ದಿಟದಿ ಮೆರೆವ ಹಠಯೋಗಿಗಳಿಂದಲೀ
ರಾಜಿಸುವುದು ಸಭೆಯು ||
ತೀರ್ಥಕೋಟಿಗಳು ವ್ಯರ್ಥ
ಜ್ಞಾನತೀರ್ಥವೇ ಸ್ಥಿರವೆನಿಪಾ |
ಸಾರ್ಥಕ ಗುರುವೇ ಪರಮಾರ್ಥದ ನಿಜಗತಿ
ಚರಿತಾರ್ಥ ವರಮೂರ್ತಿಗಳಿಂದಲಿ
ರಾಜಿಸುವುದು ಸಭೆಯೂ ||
ಸೋಜಿಗವಾಗಿದೆ ಈ ಜಗಮಧ್ಯದಿ
ರಾಜಿಸುವುದು ಸಭೆಯೂ |
ಯನ್ನಯ್ಯ ಗುರು ತಂದೇ ತನ್ನಂತೆ ಮಾಡಿದನೇ
ಮತ್ಯಾರು ಗುರುವೇ ನಮಗೇ
ಮತ್ಯಾರು ಗುರುವೇ ನಮಗಿನ್ನು || ಪ ||
ಮತ್ಯಾರು ಗುರುವೇ ನಮಗೇ
ಮತ್ಯಾರು ಗುರುವೇ ನಮಗಿನ್ನು || ಪ ||
ಮತ್ಯಾರು ಗುರುವೇನು ನಮಗೆ
ಈ ಊರು ನೀರ ಆಶೆ ನಮಗಿಲ್ಲ ||
ತುಂಟತನವಾ ಮಾಡಿ ಎಂಟುಮಂದೀನ ಗೆದ್ದೆ |
ಅವರ ಗಂಟಲಕೆ ಗಾಣ ಹಾಕಿದೆ ||
ಆರುದಿನಸಿನ ಧಾನ್ಯ ಮೂರುದಿನಸಿನ ಅಕ್ಕಿ
ಏರ್ ಹಾಕಿ ಕುಟ್ಟಿ ಹಸ ಮಾಡೇನಲ್ಲವ್ವಾ ||
ಹಸಮಾಡಿ ನೀರ್ಹಾಕಿ ಗಡಗೀತೊಳದಿಟ್ಟೇನಲ್ಲವ್ವಾ
ಕುಂಬಾರ ಮನಿ ಗಡಗಿ, ಒಂಬತ್ತು ತೂತಿನ ಗಡಗೀ ||
ಅಂಬಲಿ ಕಾಸಿ ಹದಮಾಡಿ |
ಅಂಬಲಿ ಕಾಸಿ ಹದ ಮಾಡಿ ಸಾಧುರಿಗೆ ಉಣಿಸಿ |
ಗಡಗೀಯ ತೊಳದಿಟ್ಟೇನಲ್ಲವ್ವಾ………..
ಗಾಳಿಗೆ ಗಾಳಿ, ಧೂಳಿಗೆ ಧೂಳಿ |
ಏನೇನೋ ವಿಪರೀತ ತೋರೀತೆ ||
ಯನ್ನಯ್ಯ ಗುರುತಂದೆ ತನ್ನಂತೆ ಮಾಡಿದನೆ
ಮತ್ಯಾರು ಗುರುವೇ ನಮಗಿನ್ನು
ಈ ಊರ ನೀರ ಆಶೇ ನಮಗಿಲ್ಲ |
ಕ : ಚಿಗಟೇರಿ ಗ್ರಾಮದಲ್ಲಿ ಇವತ್ತಿನ ದಿವ್ಸ ೫ನೇ ತಾರೀಖು ಮಂಗಳವಾರ ಗಣಪ್ಪನ ಹಬ್ಬದ ಪ್ರಯುಕ್ತ ಈ ಶೀಲಾವತಿ ಕತಿ ಮಾಡ್ತೀವಿ. ತಾವು ದೊಡ್ಡೋರು ಸಣ್ಣೋರು, ಗುರುಗಳು, ಮೇಷ್ಟ್ರು, ವಿದ್ಯಾರ್ಥಿಗಳು ಸರ್ವಜನ ಇಲ್ಲಿ ಸೇರೀರಿ. ನಿಮಗೆ ಬಂದಂಥ ವಿಘ್ನ ದೂರ ಮಾಡುವಂಥ ಈ ಗಣಪನ ಮುಂದೆ ಆತನ ನಾಮ ಉಚ್ಚಾರ ಮಾಡಿ ಈ ಕತಿ ಪ್ರಾರಂಭ ಮಾಡ್ತೀವಿ.
ಕ : ಈ ನಮ್ಮ ದೇಶದಲ್ಲಿ ಕರಿವೀರ ಪಟ್ಣ ;
ಹಿ : ಹೌದು ಕರಿವೀರ ಪಟ್ಣ,
ಕ : ದೇವಸೇನ ಮಹಾರಾಜನ ಮಡದಿ ಮಹಾದೇವಿ.
ಹಿ : ಹೌದೂ
ಕ : ದೇವಸೇನ ಮತ್ತು ಆತನ ಮಡದಿ ಮಾದೇವಿಗೆ ಇಬ್ರು ಮಕ್ಕಳು ಐದಾರೆ.
ಹಿ : ನಾಮಕರಣವೇನು?
ಕ : ಹಿರೇಮಗನ ಹೆಸರು ಉದಯವಾನ ಮಹಾರಾಜ; ಚಿಕ್ಕವನ ಹೆಸರು ಶುಭವಾನ; ಈತ ಒಂಬತ್ತು ವರ್ಷದ ಚಿಕ್ಕ ಬಾಲಕ;
ಹಿ : ಸಾಲಿ ಓದ್ತಾನೆ.
ಕ : ಹಿರೇಮಗ ಉದಯವಾನ ಪ್ರಾಯಕ್ಕೆ ಬಂದಾಗ ದೇವಸೇನ ಮಹಾರಾಜ ಆಲೋಚನಿ ಮಾಡ್ತಾನ ಮಂತ್ರಿಜೊತಿಗೆ- ಮಂತ್ರೀ, ಅಕಳೇಶ ಮಂತ್ರೀ
ಹಿ : ಎನ್ರಿ ಮಾರಾಜ್?
ಕ : ನಿನ್ನ ಮಗ ದುರ್ಜಯ-
ಹಿ : ಹೌದು ಮಹಾರಾಜ್ರೇ.
ಕ : ನನ್ನ ಮಗ ಉದಯವಾನ – ಇಬ್ರೂ ಒಂದೇ ಸಾಲಿನಲ್ಲಿ ಓದಿ ವಿದ್ಯಾವಂತರಾಗ್ಯಾರೆ; ಇಬ್ರೂ ಲಗ್ನಕ್ಕೆ ಬಂದಾರೆ.
ಹಿ : ಹೌದು.
ಕ : ನನ್ನ ಮಗನಿಗೆ ತಕ್ಕಂಥ ಕನ್ಯಾನೋಡಿ ಮದವಿ ಮಾಡ್ಬೇಕಲ್ಲ?
ಹಿ : ಒಳ್ಳೇದು ಮಹಾರಾಜ್ರೇ, ನಿಮ್ಮ ಅಪ್ಪಣೆಯಾದ್ರೆ ನಾನು ದೇಶದ ಮ್ಯಾಲೆ ಹೋಗಿ ಕನ್ಯಾ ನೋಡಿ ಬರ್ತೀನಿ.
ಕ : ಅರಿಖಂಡ, ಕುರಿಖಂಡ, ಕಾಶೀಖಂಡ, ಭದ್ರಾವತಿ ಈ ನಾಲ್ಕೂ ದಿಕ್ಕಿನೊಳಗ ಉದಯವಾನ ಮಹಾರಾಜಗೆ ತಕ್ಕಂಥಾ, ನಮ್ಮ ಕರಿವೀರ ಪಟ್ಣಕ್ಕೆ ಒಪ್ಪಂಥಾ ನಿಮಗೆ ತಕ್ಕಂಥಾ ಸೊಸಿ ನಾನು ಎಲ್ಲಿದ್ರೂ ನೋಡಿ ಪತ್ತೆ ಮಾಡಿ ಲಗ್ನ ಮಾಡುವಂಥ ಭಾರ ನನಗಿರ್ಲಿ – ಅಂದ ಅಕಳೇಶಮಂತ್ರಿ.
ಹಿ : ಆಹಾ!
ಕ : ಉದಯವಾನನ ಫೋಟೋ ತೊಗಂಡಾನೆ; ಕನ್ಯಾ ತೆಗಿಲಿಕ್ಕೆ ಹೋಗಬೇಕಾದ್ರೆ-
ಹಿ : ಆಹಾ!
ಕ : ಆರ್ ಸಾವಿರ ದಂಡು ಸಿಬ್ಬಂದಿಕರ್ಕೊಂಡು ಮಜಲ್ ಮಾಡಿಕೊಂತ ಕನ್ಯಾ ನೋಡಾಕ ಹೋಗೋ ವ್ಯಾಳ್ಯಾದಲ್ಲಿ ಮಂತ್ರೀ ಮಗ ದುರ್ಜಯ ನೋಡಿದಾs- ಬಜಾರದಲ್ಲಿ.
ಹಿ : ತಂದೇ ಅಕಳೇಶಾ ನಮೋ ನಮಸ್ಕಾರ.
ಕ : ಬಾ ಮಗನೇ.
ಹಿ : ಎಲ್ಲಿಗೆ ಹೊಂಟೀ ತಂದೆ?
ಕ : ಉದಯವಾನ ಮಹಾರಾಜನಿಗೆ, ನಿನ್ನ ಸ್ನೇಹಿತನಿಗೆ, ಕನ್ಯಾ ತೆಗಿಲಿಕ್ಕೆ ಹೋಗ್ತೀನಿ ದೇಶದ ಮ್ಯಾಲೆ – ಮಗನೇ;
ಹಿ : ಓಹೋ ನಮ್ಮ ಉದಯವಾನದೊರಿಗೆ ಕನ್ಯಾ ತೆಗಿಲಿಕ್ಕೆ ಹೋಗ್ತೀರಿ? ಹಾಗಾದರೆ ನಾನು ಬರಲೇ ತಂದೆ?
ಕ : ರಾಜರ ಸೇವಾನುಸೇವಕ ಆದ್ಮ್ಯಾಲೆ ನೀನೂ ಬಂದ್ರೆ ತಪ್ಪಿಲ್ಲ.
ಹಿ : ಹೌದು.
ಕ : ಅಪ್ಪಾ ಮಗನೇ, ನಾನು ನೀನು ಇಬ್ರೂ ಸಿಬ್ಬಂದಿ ಕರ್ಕೊಂಡ್ಹೋಗಿ ನಮ್ಮ ರಾಜಗೆ ಕನ್ಯಾ ನೋಡಿ ಬರೋನು.
ಹಿ : ಒಳ್ಳೇದು….
ಕ : ಅಂದು, ಇಬ್ರೂ ತಂದಿಮಗ ರಾಜ್ಡ್ರೆಸ್ ಹಾಕ್ಕೊಂಡು, ಸಿಬ್ಬಂದಿ ಕರ್ಕೊಂಡು, ಎರಡು ಕುದುರಿ ಮ್ಯಾಲೆ ಕೂತುಗೊಂಡು-
|| ಪದ ||
ಕನ್ಯಾನೋಡಲಿಕ್ಕೆ ನಡುದಾರೈದೇವಾ……..ಹರಯನ್ನ ಮಾದೇವ.
ಕನ್ಯಾನೋಡಲಿಕ್ಕೆ ನಡುದಾರೆ……….ಓನಾಮಃ ಶಿವಾಯ.
ಎರಡೇನೇ ಗಾವುದ ಬರುವಾಗ ದೇವಾ…….ಹರಯನ್ನ ಮಾದೇವ.
ಅಲ್ಲಿಯಾವೂರೇ ಐತಯ್ಯದೇವಾ………ಹರಯನ್ನ ಮಾದೇವ.
ಭಾಂಡೆಪುರಿ ಪಟ್ಣದಲ್ಲಿ ದೈವಾ…….ಶಿವಹರ ಮಾದೇವ.
ಕ : ಎರಡುಗಾವುದ ಎಂಟು ಹರದಾರಿ ಬರಬೇಕಾದ್ರೆ ಅಲ್ಲಿ, ಭಾಂಡೇಪುರಿ ಪಟ್ಣದಲ್ಲಿ-
ಹಿ : ಪಟ್ಣದಲ್ಲಿ.
ಕ : ಶಿವಂತ ಮಹಾರಾಜ್; ಆತನ ಮಡದಿ ಲಕ್ಷ್ಮೀದೇವಿ-
ಹಿ : ಐದಾರೆ.
ಕ : ಅವರಿಗೆ ಒಬ್ಳೇಒಬ್ಳು ಮಗಳಿದ್ದಾಳೆ-
ಹಿ : ನಾಮಕರಣ?
ಕ : ಶೀಲಾವತಿ-
ಹಿ : ಒಹೋ ಮಹಾಜಾಣಿ
ಕ : ದೇವಲೋಕದ ಕನ್ನಿಕಿಯೋ (ತಿಲೋತ್ತಮೆಯೋ, ಊರ್ವಶಿಯೋ, ರಂಭೆಯೋ ರತಿಯೋ ಸರಸ್ವತಿಯೋ…….)
ಹಿ : ಆಹಾ ದೇವತಾ ಸ್ತ್ರೀಯಳು!
ಕ : ಶೀಲಾವತಿ ಋತುಮತಿಯಾಗಿ ಆರು ತಿಂಗಳು;
ಹಿ : ಹೌದೂ.
ಕ : ಒಂದುದಿನ, ಆ ಊರಿಗೆ ಅಕಳೇಶ ಮಂತ್ರಿ ತನ್ನ ಮಗ, ಸಿಬ್ಬಂದಿ ಕರ್ಕೊಂಡು ಬಂದು ವನಾಂತರದಲ್ಲಿ ಬಿಡಾರ ಮಾಡಿದಾ.
ಹಿ : ಹೌದು.
ಕ : ಮಗಾ ದುರ್ಜಯಾ-
ಹಿ : ಏನಪ್ಪಯ್ಯ?
ಕ : ಈ ಸಿಬ್ಬಂದಿ ಕರ್ಕೊಂಡು ನೀನು ಇಲ್ಲೇ ಊರ್ಮುಂದೆ ಇರು. ನಾನು ಒಬ್ನೇ ಊರಾಗ ಹೋಗಿ ವಿಚಾರ ಮಾಡಿಬರ್ತೀನಿ – ಅಂದ ಜನಕ.
ಹಿ : ಹೋಗಿ ಬಾ ಜನಕಾ.
ಕ : ದುರ್ಜಯ ಅಲ್ಲೇ ಉಳ್ದಾ, ಅಕಳೇಶಮಂತ್ರಿ ಫೋಟೋ ತೊಗೊಂಡು ಕನ್ಯಾ ನೋಡಾಕ ನಡದಾ – ಊರಾಗ; ಬಣ್ಣದ ಚಾವಡಿ ದರ್ಬಾರ್ ಕಛೇರಿಯೊಳಗೆ ಶಿವಂತರಾಜ ಕುಳಿತಿದ್ದ.
ಹಿ : ನಮೋ ನಮೋ ನಮಸ್ಕಾರ ದೊರೆ ಶಿವಂತ ಮಹಾರಾಜ್.
ಕ : ಶರಣಾರ್ಥಿ, ಯಾರಪ್ಪಾ ನೀನು?
ಹಿ : ನಾವು ಮಂತ್ರಿಗಳು.
ಕ : ನಿಮ್ದು ಊರು ಯಾವುದು? ಹೆಸರೇನು ಮಂತ್ರಿ?
ಹಿ : ಕರಿವೀರ ಪಟ್ಟಣದ ದೇವಸೇನರಾಜರ ಮಂತ್ರಿ ಅಕಳೇಶ ನಾನು.
ಕ : ಆಹಾ ಬಹಳ ದೂರ ಬಂದೆಲ್ಲಪ್ಪಾ?
ಹಿ : ಕನ್ಯಾದಾನ ಬೇಡಿ ಬಂದೀನಿ.
ಕ : ಯಾರಿಗೆ ಕನ್ಯಾಬೇಕು?
ಹಿ : ನಮ್ಮ ಉದಯವಾನ ರಾಜಕುಮಾರಗೆ;
ಕ : ಓಹೋ! ನನ್ನ ಮಗಳು ಋತುಮತಿಯಾಗಿ ಆರು ತಿಂಗಳು; ಹೆಸರು ಶೀಲಾವತಿ. ಕುದ್ರಿನೋಡಿ ಬೆಲಿಮಾಡು, ಆಳುನೋಡು ಅನ್ನಾನೀಡು, ವರಾನೋಡಿ ಕನ್ಯಾಕೊಡು ಅಂತಾ ಶಾಸ್ತ್ರ ಐತಿ,
ಹಿ : ನಿಜಾ.
ಕ : ವರನೋಡಿ ಕನ್ಯಕೊಡ ಬೇಕಾಗ್ತೈತಿ-
ಹಿ : ವರಕರತಂದೀರೇನು ಮಂತ್ರೀ?
ಕ : “ಫೋಟೋ ತಂದೀನಿ; ಈ ರಾಜಕುಮಾರನ ಫೋಟೋ ನೋಡ್ರಿ” -ಅಂತ್ಹೇಳಿ ಉದಯವಾನ ಕುಮಾರನ ಫೋಟೋ ಕೊಟ್ಟ-
ಹಿ : ಅಕಳೇಶ ಮಂತ್ರಿ!
ಕ : ಉದಯವಾನನ ಫೋಟೋ ಶಿವಂತ ಮಹಾರಾಜ ನೋಡ್ದ ; ನೋಡಿದ ಕೂಡ್ಲೆನೇ ದೇವಲೋಕದ ದೇವೇಂದ್ರನ್ನೇ ನೋಡಿದಂತಾಯಿತು – ಆಹಾ.
|| ಪದ ||
ಇರಬೇಕೋ ಇಂದಾ ರಾಜಾ……..ಹರಯನ್ನ ಮಾದೇವ.
ಇರಬೇಕೋ ಕುಮಾರ ಇವನಾ………ಹರಯನ್ನ ಮಾದೇವ.
ನನ್ನ ಮಗಳು ಶೀಲಾವತಿ……….ಹರಯನ್ನ ಮಾದೇವ.
ಮಗಳಿಗೆ ತಕ್ಕಂಥ ಜೋಡೇ …….ಹರಯನ್ನ ಮಾದೇವ.
ಇದs ಮಗನಿಗೆ ಕೊಡಬೇಕ ನಾನು………ಹರಯನ್ನ ಮಾದೇವ.
ಒಳ್ಳೇದು ಅಕಳೇಶ…………ಹರಯನ್ನ ಮಾದೇವ.
ಕ : ಆಹಾ! ಅಕಳೇಶ ಮಂತ್ರೀ,
ಹಿ : ಮಹಾರಾಜಾ?
ಕ : ನನ್ನ ಮಗಳು ಶೀಲಾವತಿಗೆ ತಕ್ಕ ವರ ಇದು! ಚಲೋ ಜೋಡು ಉದಯವಾನನ ಫೋಟೋ ನೋಡ್ಲಿಕ್ಕೆ ನನ್ನ ಮನಸ್ಸು ಆನಂದವಾಯಿತು. ಈ ಕುಮಾರಗೆ ನನ್ನ ಮಗಳ, ಕೊಟ್ಟೆ.
ಹಿ : ಆಹಾ!
ಕ : ಸಾಕ್ಷಿವೀಳ್ಯಾಕೊಟ್ಟು ಹೆಣ್ಣು ನಿಶ್ಚಯ ಸಭಾದಾಗ ನೆಡೀತು.
ಹಿ : ಹೌದೂ.
ಕ : ಹದಿನೈದು ದಿವ್ಸಕ್ಕೆ ಲಗ್ನಕ್ಕ ಬರ್ತೀವಿ ಅಂತ್ಹೇಳಿ ಮಂತ್ರಿ ತನ್ನ ಮಗನ ಹತ್ರಬಂದ. ತಂದಿ ಬಂದದನ್ನ ಕಂಡು ಮಗ ಕಾತುರದಿಂದ ಕೇಳ್ತಾನೆ-
ಹಿ : ಏನು ತಂದಿ ಬಂದಿ? ಹೋದ ಕಾರ್ಯ ಏನಾತು?
ಕ : ಹೋದಕಾರ್ಯ ಕೈಗೂಡಿತು ಮಗನೇ. ರಾಜಕುಮಾರಗೆ ಕನ್ಯಾ ನಿಶ್ಚಯ ಆಯ್ತು-
ಹಿ : ಹೆಣ್ಣು ದೊರೀತು.
ಕ : ಹೌದು ಕುಮಾರ ಚಲೋ ಕನ್ಯಾ ಸಿಕ್ಕಿತು.
ಹಿ : ಹೌದೇ?
ಕ : “ರೂಪದಲ್ಲಿ ಚಲೋ ಇದ್ದಾಳೆ, ಇದೋ ನೋಡು ಉದಯವಾನನಿಗೆ ತಾನು ತಂದಂಥ ಹೆಣ್ಣಿನ ಫೋಟೋ” ಅಂತ್ಹೇಳಿ ಮಗನ ಕೈಯಾಗ ಕೊಟ್ಟ.
ಹಿ : ಓಹೋ!!
ಕ : ಆ ದುರ್ಜಯ, ನೋಡ್ರಿ, ಫೋಟೋ ನೋಡ್ದಾ – ನೋಡಿದ ತಕ್ಷ್ಣಕ್ಕೆ ಕಣ್ಣಿಗೆ ರವಿ ಬಡದ್ಹಂಗಾತು!
ಹಿ : ಮಗಾ ಅಂತಾನೆ-
ಕ : ತಂದೇ ಈ ಹೆಣ್ಣು ಯಾರಿಗೆ ತಗದಿ?-
ಹಿ : ಹೌದು, ಯಾರಿಗೆ ತಗದಿ?
ಕ : ಉದಯವಾನ ರಾಜಕುಮಾರ್ಗೆ – ಈ ಕನ್ಯಾ ನಿಶ್ಚಯ ಆಗೇತಿ.
ಹಿ : ಛೀ! ಉದಯವಾನಗೆ ತಕ್ಕ ಹೆಣ್ಣಲ್ಲ ಇದು!
ಕ : ಅಲ್ಲ.
|| ಪದ ||
ನನಗೆ ಒಪ್ಪತಕ್ಕಂಥ ಹೆಣ್ಣೋ
ಈಕೀಗೆ ನಾನು ಲಗ್ನ ಆಗತೀನೋ…….ಹರಯನ್ನ ಮಾದೇವಾ
ಕ : “ಆಹಾ ಉದಯವಾನಗೆ ಒಪ್ಪತಕ್ಕಂಥ ಹೆಣ್ಣು ಅಲ್ಲ ಇದು; ತಂದೇ ನಿನ್ನ ಮಗ ನಾದಂಥ ನನಗೆ ಒಪ್ಪತಕ್ಕಂಥ ಹೆಣ್ಣು” ಅಂದ ಅವನು, ದುರ್ಜಯ.
ಹಿ : ಓಹೋ ತಾಯಿ ಮೇಲೆ ಮನಸ್ಸು?
ಕ : ಆಮಾತು ತಂದೆ ಅಕಳೇಶ ಕೇಳಿದ ತಕ್ಷ್ಣಕ್ಕೆ ಕೋಪಕ್ಕೆ ಬಂದು ಎಲೇ-
ಹಿ : ಆಹಾ!
ಕ : ಏನೆಂದೆ ದುರ್ಜಯಾ!!
ಹಿ : ಆಹಾ.
ಕ : ಅವರ ಉಪ್ಪು ನಾವು ಊಟ ಮಾಡೀವಿ. ಅಂದ ಬಳಿಕ ನಮ್ಮ ತಂದೆ ಅವರು.
ಹಿ : ಹೌದು ಮಹಾರಾಜರುಗಳು – ತಂದೆಗಳು.
ಕ : ಅವರ ಮಗನಿಗೆ ತಗದ ಕನ್ಯಾ ನೀನು ಲಗ್ನ ಅಕ್ಕೀನಿ ಅಂತೀಯಾ!
ಹಿ : ಆಹಾ.
ಕ : ನೀಚಾತ್ಮಾ ಈಗ ಹೇಳಿದ ಮಾತ ಇನ್ನೊಂದುಸಲ ಹೇಳ್ಬ್ಯಾಡ;
ಹಿ : ಹೌದೂ-
ಕ : ನನಗೆ ಅನ್ನಕೊಟ್ಟಂಥ ಮಹಾರಾಜನ ಕುಮಾರಗೆ ತಗದ ಕನ್ಯೆ – ನಮಗೆ ಜನನಿ!
ಹಿ : ಮಹಾತಾಯಿ! ಮಾತೋಶ್ರೀ!
ಕ : ಮಗ ಮನಸ್ತಾಪ ಮಾಡ್ಕೊಂಡ; ಮಕಸಣ್ಣದಾತು; “ನಮ್ಮ ತಂದೆ, ನನ್ನ ಜನಿಸಿದ ಜನಕ; ಇಂಥ ಚಲೋ ಕನ್ಯಾ ನನಗೆ ಲಗ್ನ ಮಾಡು ಅಂತ್ಹೇಳಿ ನಾನು ಅಂದ್ರ ಈಗ ಹೇಳಿದ ಮಾತ ಇನ್ನೊಂದ್ಸಲ ಹೇಳೀ” ಅಂತ ಕಣ್ಣು ಕೆಂಪಗ ಮಾಡಿದನಲ್ಲ!
ಹಿ : ಹೌದೂ!
ಕ : ಆಹಾ (ರಾಗಾವಾಗಿ) ಎಂಥಾ ಹೆಣ್ಣು, ಎಂಥ ರೂಪಿಷ್ಟಳು ಐದಾಳೀಕೀ………
ಹಿ : (ರಾಗವಾಗಿ) ಆಹಾ,
ಕ : ಆಗಲಿ ನಮ್ಮ ತಂದಿ ಇದೇ ಹೆಣ್ಣು ಉದಯವಾನಗೆ ಲಗ್ನಮಾಡಿದ್ರೂ ಪರ್ವಿಲ್ಲ-
ಹಿ : ಆಹಾ.
ಕ : ಅವನು, ದುರ್ಜಯ ಮನಸ್ಸಿನಾಗ ಏನಂತಾನ?
ಹಿ : ಶಪ್ತ!
ಕ : ಈ ಹೆಣ್ಣು ಉದಯವಾನಗೇ ಲಗ್ನವಾಗಿದ್ದೇ ನಿಜವಾದ್ರೆ-
ಹಿ : ಆಹಾ,
ಕ : “ಅವಳ್ನ ಉದಯವಾನ ಗೆದ್ದ ಅಂದ್ರೆ, ನಾನು ಕದೀದೆ ಎಂದೂ ಬಿಡ್ಲಾರೆ”- ಅಂದ ಮನಸ್ಸಿನಾಗs.
ಹಿ : ಶಪ್ತ!
ಕ : ಮಂತ್ರಿ! ಅಕಳೇಶ ಹೆಣ್ಣು ನಿಶ್ಚಯಮಾಡಿ, ದೇವಸೇನ ಮಹಾರಾಜರಿಗೆ ಎಲ್ಲಾ ವರ್ತಮಾನ ಕೊಟ್ಟ.
ಹಿ : ಮದುಮಗನ್ನ ಅಲಂಕಾರ ಮಾಡ್ಯಾರ.
|| ಪದ ||
ತಲೀಮಾಲೆ ಜರತಾರದ ಮಂದೀಲದೇವಾ………ಹರಯನ್ನ ಮಾದೇವ.
ಯಪ್ಪಾ ಮದುಮಗನs ಮಾಡ್ಯಾರದೇವಾ……….. ಹರಯನ್ನದೇವ
ಹಣಿಗೆ ಬಂಗಾರ ಬಾಸಿಂಗಾ….ಓ ನಮಃ ಶಿವಾಯ
ಕೈಗೆ ಮುತ್ತಿನ ಕಂಕಣಾ…..ಹರಯನ್ನದೇವಾ
ಯಪ್ಪಾ ಅರಸಿಣ ಬಟ್ಟೀತೊಡಿಸ್ಯಾರಾ…….ಹರಯನ್ನದೇವಾ
ಇವರು ಲಗ್ನಕ ಬಂದಾರೇಯ್ಯಾ…..ಶಿವಹರಯನ್ನದೇವಾ
ಭಾಂಡೇಪುರಿ ಪಟ್ಣಕೆ ದೈವಾ….ಶಿವಹರಯನ್ನದೇವಾ.
ಕ : ಶಿವಂತ ಮಹಾರಾಜ ಹೆಣ್ಣಿನ ತಂದಿ-ತಾಯಿ ಮತ್ತು ಆತನ ಪ್ರಜೆಗಳು ಬೀಗರನ್ನ ಎದುರ್ಗೊಂಡ್ರು. ಇಡೀ ಭಾಂಡೇಪುರಿ ಪಟ್ಣದ ಹಾದಿಗೆ ಹಂದ್ರಹಾಕಿ; (ರಾಗವಾಗಿ) ಬೀದಿಗೆ ಚಳೇಕೊಟ್ಟಾರೆ;
ಹಿ : ಊರಿಗೆ ಊರ್ನೇ ಶಿಂಗಾರ ಮಾಡ್ಯಾರೆ;
ಕ : ತಾಳೀ ಮೂರ್ತ ಹತ್ರ ಬಂತು.
ಹಿ : ಮಹಾರಾಜನ ಮಗ ಉದಯವಾನ ಮದುಮಗ ಆಗಿ ಬಂದು ಸಾಸ್ವಿಕಟ್ಟಿಮ್ಯಾಲೆ ಕುಂತಾನ;
ಕ : ಶೀಲಾವತಿ-ಜರತಾರ ಸೀರಿ ಉಟ್ಟು, ಜರತಾರದ ಕುಬ್ಸ ತೊಟ್ಟು, ವಡವಿ – ವಸ್ತಾ ಇಟಗೊಂಡು ಸಾಸ್ವಿಕಟ್ಟಿಮ್ಯಾಲೆ ಬಂದ್ಲು-
ಹಿ : ಬಂದು ಎಡಗಡಿಗೆ ಕುಂತ್ಲು.
ಕ : ಮಂತ್ರೀ ಮಗನಿಗೆ ಒಳಗೊಳಗೇ ಹೊಟ್ಟುರಿ, ನಾನು ಲಗ್ನ ಆಗ್ಬೇಕು ಅಂದ್ರ ಈಕಿ ಹೋಗಿ ಉದಯವಾನನ ಎಡಗಡಿಗೆ ಕುಂತ್ಲಲ್ಲ!-
ಹಿ: ಆಗಲಿ ನೋಡೋನು.
ಕ : ಶೀಲಾವತಿ ಉದಯವಾನಗೆ ಲಗ್ನವಾಗೋದು ಪರ್ವಿಲ್ಲ-
ಹಿ : ಎಲೇ ಹೆಣ್ಣೆ!
ಕ : “ಎಂದಾದರೂ ನಿನಗೆ ನಾನು ಕದ್ದಾಳೇನು” ಅಂತ ಆ ಹಂದ್ರದಾಗs ಶಪ್ತಮಾಡಿದ.
ಹಿ : ಆಹಾ….
ಕ : (ರಾಗವಾಗಿ) ಒಂದು ದಿವ್ಸದ ಲಗ್ನಕಾರ್ಯ, ಎರಡು ದಿವ್ಸದ ಕಾರ್ಯ ಮಾಡ್ಯಾರೈ….
ಕ : ಆ ತಾಯಿ ತಲಿಮ್ಯಾಲೆ ಮುತ್ತಿನದಂಡಿ, ಹಣಿಮ್ಯಾಲೆ ಬಂಗಾರದ ಪದಕ, ಕೈಯಾಗ ಮುತ್ತಿನ ಕಂಕಣ.
ಹಿ : ಮದುಮಗನ ಹಣಿಮ್ಯಾಲೆ ಬಾಸಿಂಗ, ಮುಂಗೈ ಸರಪಣಿ, ಕೊರಳಾಗ ಮುತ್ತಿನಸರ, ಎಳ್ಡೂ ಕೈತುಂಬಾ ಉಂಗ್ರ!
ಕ : ಮೂರದಿವ್ಸ ಹಗಲ್ಯಾವುದೋ ರಾತ್ರಿ ಯಾವುದೋ! ಉಟೋಪಚಾರ, ಉಡುಗೊರೆ – ತೊಡುಗೊರೆ, ಮಾಂಗಲ್ಯ, ಕಾರ್ಯ ಎಲ್ಲಾ ಭರ್ಜರಿ ನಡದ್ವು.
ಹಿ : ಹೌದೂ
ಕ : ಶಿವಂತರಾಜ ಹೆಣ್ಣಿನ ತಂದೆ ಬಂದು ದೇವಸೇನರಾಜಗೆ ಹೇಳ್ತಾನೆ-
ಹಿ : “ಮಾಹಾರಾಜ್ ಈಕಿ ನನ್ನ ಮಗಳಲ್ಲ. ಇವತ್ತು ನಿಮ್ಮ ಮಗಳು ಆದ್ಲು”-
ಕ : ಹೆಣ್ಣೋಪ್ಪಿಸಿದ.
ಹಿ : ತಂದಿ-ತಾಯಿ ಮಗಳಿಗೆ ಎಲ್ಲಾ ನೀತಿ ಮಾತು ಹೇಳಿದ್ರು-
ಕ : ತಂದಿ-ತಾಯಿಗೆ, ನಮಸ್ಕಾರ ಮಾಡಿ ಪಲ್ಲಕ್ಕ್ಯಾಗ ಕುಂತ್ಲು ಶೀಲಾವತಿ.
ಹಿ : ಇಡೀ ನಿಬ್ಣ, ಮದುಮಕ್ಕಳ್ನ ಕರ್ಕೊಂಡು ವಾಪಾಸು ಊರಿಗೆ ಬಂತು.
ಕ : ದೇವಸೇನ ಮತ್ತು ಮಾದೇವಿ ಇಬ್ರೂ ಉದಯವಾನರಾಜಗೆ ಪಟ್ಟಾಕಟ್ಟಿದ್ರು; ಶೀಲಾವತೀನ ಮಹಾರಾಣಿ ಮಾಡಿದ್ರು. ಎಲ್ಲಾ ರಾಜ ಕೆಲಸ ವಹಿಸಿ ಅವರಿಬ್ರೂ ಬೇರೆ ಅರಮನಿಗೆ ಹೋದ್ರು.
ಹಿ : ಚಿಕ್ಕಮಗ ಶುಭವಾನನ ಸಾಲಿ ಓದು ನಡದೇ ಐತಿ.
ಕ : ಶೀಲಾವತಿ ರಾಣಿ ಪ್ರಜೆಗಳಿಗೆ ಅನ್ನದಾನ, ಪುಣ್ಯದಾನ, ಮಾಡ್ತಾ ಇರೋ ಕಾಲಕ್ಕೆ-
ಹಿ : ಆಹಾ-
ಕ : (ರಾಗವಾಗಿ) ಆss. ಆs ಆss ದುರ್ಜಯ ಪ್ರಧಾನಿಯ ಮಗ ಶೀಲಾವತಿಗೆ ಅಂಬ್ಲಿಸೋದು ಬಿಟ್ಟಿಲ್ಲ; ದಿನದಿನಕ್ಕೆ ಹೆಚ್ಚಾಗತಾ ಐತಿ ಅದು!
ಹಿ : ಈಗ ಆ ತಾಯಿ ಗರ್ಭಾವತಿ!
ಕ : ಐದು ತಿಂಗಳು ಗರ್ಭಾವತಿ ಇರುವಾಗ ರಾಜ ಏನಂತಾನಾ?
ಹಿ : ಮಡದೀ ನಿಮ್ಮ ತಂದಿ ಶಿವಂತ ಮಾಹಾರಾಜಗೆ ಈ ಶುಭ ಸುದ್ದಿ ಕಳಸ್ತೀನಿ – ಅಂದ.
ಕ : ಪದ್ಧತಿ ಪ್ರಕಾರ ಜನನ ಆಗ್ಲಿಕ್ಕೆ ತವರುಮನಿಗೆ ಕಳಿಸೋದು ಶಾಸ್ತ್ರ ಐತಿ.
ಹಿ : ತೌರುಮನಿಗೆ ಮಂತ್ರಿ ಸುದ್ದಿ ಕಳಿಸಿದ.
ಕ : ಚಲೋ ಮೂರ್ತ ನೋಡಿ ತೌರುಮನಿಯೋರು – ಗಂಡನ ಮನಿಯೋರು ಭರ್ಜರಿ ಶ್ರೀಮಂತ ಕಾರ್ಯ ಮಾಡಿದ್ರು.
ಹಿ : ಶೀಲಾವತೆಮ್ಮ ತನ್ನ ತೌರುಮನಿಗೆ ಜನನ ಆಗ್ಲಿಕ್ಕೆ ಬಂದ್ಲು.
ಕ : ದಿನದ ಮ್ಯಾಲೆ ದಿನಕಳೆದ್ವು-, ಈಗ ಆಯಮ್ಮಗೆ ಒಂಬತ್ತು ತಿಂಗಳು ಒಂಬತ್ತು ದಿವ್ಸ ಆದ್ವು-
ಹಿ : ಆದದ್ದೊಂದೇ ತಡ ಶೀಲಾವತಿ ಮಹಾರಾಣಿ ಹೊಟ್ಟೆಯೊಳಗೆ ಯಾರು ಹುಟ್ಟಿದ್ರು.
ಕ : || ಪದ ||
ರಾಜಪಂಡಿತ ಮಗನೈ….ಹರಹರಯನ್ನ ಮಾದೇವಾ.
ಶೀಲಾವತಿ ಜನನ ಆಗಾಳಯ್ಯಾ…..ಹರಹರ ಮಾದೇವಾ.
ಕ : ಕರಿವೀರ ಪಟ್ಣಕ್ಕೆ ಕಾಗದ ಬರದ್ರು-
ಹಿ : ರಾಜ ಪಂಡಿತ, ಮಗ ಹುಟ್ಟ್ಯಾನ!
ಕ : ರಾಜರಿಗೂ, ಪ್ರಜರಿಗೂ ಮಹಂತ ಸಂತೋಷ ಆತು! ಊರು ತುಂಬಾ ಸಕ್ರಿ ಹಂಚಿದ್ರು, ರಾಜ ದಾನಧರ್ಮ ಮಾಡಿದ;
ಹಿ : ಊರಿಗೇ ಊಟಕೊಟ್ಟ.
ಕ : ಕೂಸಿಗೆ ನಾಮಕರಣ ಶಾಸ್ತ್ರನೂ ಆತು.
ಹಿ : ಏನಂತ?
ಕ : ಕರಿವೀರ ಪಟ್ಣದಲ್ಲಿ ಉದಯವಾನನ ಉತ್ತರಕ್ಕೆ ಹುಟ್ಟಿದ ಶೀಲಾವತಿ ಗರ್ಭದಲ್ಲಿ ಜನನ ಆದ ಈ ಮಗನ ಹೆಸರು ರತನಶೇಕ ಅಂತ.
ಹಿ : ಹೌದೂ.
ಕ : ಕೂಸು ರಾಜಪಿಂಡ! ಹೆಂಗ್ ಬೆಳಿತಾ ಐತಿ ನೋಡ್ರಿ-
|| ಪದ ||
ಒಂದ ತಿಂಗಳ ಮಗನಯ್ಯಾ……ಹರಯನ್ನ ಮಾದೇವಾ.
ಎರಡು ತಿಂಗಳಕಾಲ ಕಳುದಾವಯ್ಯ……ಈ ನಮಃ ಶಿವಾಯ.
ದಿನದಿನಕ್ಕೆ ದಿವ್ಸಕ್ಕೆ ದಿವಸ……ಹರಯನ್ನ ಮಾದೇವಾ
ನಾಲ್ಕೂ ತಿಂಗಳ ಹೋಗ್ಯಾವ……ಹರಯನ್ನ ಮಾದೇವಾ.
ಐದು ತಿಂಗಳ ಮಗ ಆದs…..ಹರಯನ್ನ ಮಾದೇವಾ.
Leave A Comment