ಹಿ : ಇವನ ಕತಿ ಇಲ್ಲಿ – ಈ ಬಾವ್ಯಾಗ!

ಕ : ಅಲ್ಲಿ, ಅತ್ತಕಡಿಗೆ ದೇವಕಮಲಗಂಧಿ – “ಶುಭವಾನ ಪತೀ, ಶುಭವಾನಪತೀ” ಅಂತ ಅಂಬ್ಲಿಕೊಂತಾ ಅಡಿವ್ಯಾಗ ಕುಂತಿದ್ದಲ್ಲ-

ಹಿ : ಅಲ್ಲಿಗೆ.

ಕ : ಗಂಡುರೂಪ ತಾಳಿದಂಥಾ ಶೀಲಾವತಿ ಕುದ್ರಿ ಹತ್ಕೊಂಡು ಬಂದ್ಲು!

ಹಿ : ಏನಿದು, ಯಾವುದೋ ಸ್ತ್ರೀಯಳ ದನಿ!

ಕ : ಶೀಲಾವತಿ ಕಿವಿಗೆ ಇದು ಬಿತ್ತು – ಇದು ಯಾರಿದು? ನನ್ನ ಮೈದುನನ ಹೆಸರು ತಗೀತಾರಲ್ಲಾ, ಯಾರಿರಬಹುದು? ಹೋಗಿ ನೋಡೋನು ಅಂತ್ಹೇಳಿ ಬಂದು ನೋಡ್ತಾಳೆ-

ಹಿ : ಕೇಳ್ತಾಳೆ – ಯಾರು ಸ್ತ್ರೀಯಳೇ ನೀನು?

ಕ : ನೀನು ಯಾರಪ್ಪ? ಪರಪುರುಷರ ನೆಳ್ಳು – ಸ್ತ್ರೀಯಳ ಮ್ಯಾಲೆ ಬೀಳಬಾರ್ದು. ದೂರ ಸರಿದು ಮಾತಾಡು.

ಹಿ : ಆಹಾ – ಮಹಾಪತಿವ್ರತಾ! ಪರಪುರುಷರ ನೆಳ್ಳು ನಿನ್ನ ಮೇಲೆ ಬೀಳಂಗ ಇಲ್ಲ?

ಕ : ಹೌದು ಹೌದು ಸ್ವಾಮೀ, ದೂರ ಸರಿ,

ಹಿ : ಸ್ತ್ರೀಯಳೇ, ನಿಮ್ಮ ಅತ್ತಿ ಯಾರು? ನಿಮ್ಮ ಮಾವ ಯಾರು? ನಿನ್ನ ಗಂಡ ಯಾರು ನಿಮ್ಮ ಮೈದುನ ಯಾರು?

ಕ : ಕರಿವೀರ ಪಟ್ಣದಲ್ಲಿ ದೇವಸೇನ ನನ್ನ ಮಾವ, ಅತ್ತಿ ಮಹಾದೇವಿ, ಗಂಡ ಶುಭವಾನ, ಆತನ ಅಣ್ಣ ಉದಯವಾನ.

ಹಿ : ಹೀಗಿದ್ದೂ ನೀನಿಲ್ಲಿ ಅನಾಥಿಯಂತೆ ಕುಂದ್ರಲಿಕ್ಕೆ ಕಾರಣವೇನಮ್ಮಾ?

ಕ : ನಮ್ಮ ಅಕ್ಕ ಶೀಲಾವತಿ, ಜನನ ಆಗಿ ಬರೋಕಾಲಕ್ಕೆ ರಾಕ್ಷಸ ಹೊತ್ತೊಯ್ಯಿದಿತಂತೆ. ಆ ಸಲುವಾಗಿ ನಮ್ಮ ಉದಯವಾನ ಮಾವನವರು ಹುಡುಕ್ಲಿಕ್ಕೆ ಹೋಗಿ ಎಷ್ಟೋ ವರ್ಷ ಆದ್ವು ; ಆನಂತರ ನಮ್ಮ ಪತಿ ಬಂದು ನನಗೆ ಲಗ್ನ ಆಗಿ, ಈಗ ನೀರು ತರ್ತೀನಿ ಅಂತ್ಹೇಳಿ ಹೋದವರು ಬರ್ಲಿಲ್ಲ ಇನ್ನೂವರಿಗೂ-

ಹಿ : ಶುಭವಾನನ ಹೆಂಡ್ತಿ ನಾನು – ದೇವಕಮಲಗಂಧಿ.

ಕ : ಇದನ್ನು ಕೇಳಿದ ತಕ್ಷ್ಣಕ್ಕೆ ಕುದ್ರಿ ಇಳುದ್ಲು ಶೀಲಾವತೆಮ್ಮ ;

ಹಿ : ಆಹಾ!

ಕ : ಮೈದುನನ ಹೆಂಡತಿಯಾದ ತಂಗೀ ದೇವಕಮಲಗಂಧೀ, ನಾನು ನಿಮ್ಮ ಅಕ್ಕ ; ಶೀಲಾವತಿ ನಾನಮ್ಮ!

ಹಿ : ಯಾರೋ ಅಪ್ಪಾ ನೀನು? ಗಂಡುರೂಪ ತಾಳೀ-

ಕ : ಅಮ್ಮಾ ನಾನೂ ನಿನ್ನಂತೆ ಹೆಣ್ಣುಮಗಳು; ನೋಡು ನನ್ನರೂಪ ಅಂತ್ಹೇಳಿ ಗಂಡುರೂಪ ತಗದ್ಲು-

ಹಿ : ಶೀಲಾವತಿ!

ಕ : ಯವ್ವಾ, ಅಕ್ಕಾ, ನಮ್ಮ ರಾಜ ನಿಮ್ಮನ್ನ ಎಲ್ಲಿ ಹುಡುಕಿದ್ರೂ ಸಿಗಲಿಲ್ಲ! ಈಗ ನೀನೇ ಬಂದ್ಯಾ! ನೀರಿಗೆ ಹೋಗ್ಯಾರ ಪತಿ; ಈಗ ಬರ್ತಾರೆ ಕುಂದ್ರು ಇಲ್ಲೇ.

ಹಿ : ಹೌದೂ.

ಕ : ಹೊತ್ತು ಮಾರೊತ್ತು ಏರಿತು. ಶುಭವಾನ ಬರ್ಲೇ ಇಲ್ಲ! ಬಾವ್ಯಾಗ ಬಿದ್ದಾನ ಅಲ್ಲಿ!

ಹಿ : ಹೌದು.

ಕ : ತಂಗೀ ನಾವಿಬ್ಬರೂ ಹೆಣ್ಣು ಮಕ್ಳು! ಇಲ್ಲಿ ಕುಂತ್ರೆ ಕಳ್ಳರು ಬಂದಾರು; ಹೋಗಾನು ನಡೀ. ನಿನ್ನ ಗಂಡ ಎರವಾದ, ನನ್ನ ಗಂಡ ಎರವಾದ ನಾವಿಬ್ರೂ ಗಂಡ್ರ ಕಳ್ಕೊಂಡ್ವೀ……

ಹಿ : ಆಹಾ!

ಕ : ತಂಗೀ ನೀನು ಹೆಣ್ಣು, ನಾನು ಗಂಡು, ನಾವಿಬ್ಬರೂ ಗಂಡ ಹೆಂಡ್ರಾಗಿ ವನವಾಸ ಪಡಿಯಾನು ನಡೀ.

ಹಿ : ಒಳ್ಳೇದು ಅಕ್ಕಮ್ಮಾ.

ಕ : ಅಕ್ಕ ಗಂಡುರೂಪ ತಾಳಿ ಕುದ್ರಿಮೇಲೆ ಕುಂತ್ಲು, ಕೀಲುಕುದ್ರಿ ಮೇಲೆ ತಂಗಿ ಕುಂತ್ಕೊಂಡು ಅಂತರ ಮಾರ್ಗದಲ್ಲಿ ಮುಂದೆ ಹೋದ್ರು. ಮಾರ್ಗದಲ್ಲಿ ಧರ್ಮಾವತಿ ಪಟ್ಣದಲ್ಲಿ ಧರ್ಮಶೇಕರರಾಜ, ಊರ ಪದ್ಧತಿ ಏನೈತಿ ಅಂದ್ರ – ಅವನಿಗೆ ಗಂಡು ಮಕ್ಕಳಿದ್ದಿಲ್ಲ; ಒಬ್ಳೇ ಒಬ್ಳು ಹೆಣ್ಣು ಮಗಳಿದ್ದಾಳೆ-

ಹಿ : ಪದ್ಮಾವತಿ!

ಕ : ಧರ್ಮಶೇಕರನ ತಮ್ಮ ಧರಿಯೇಸೇಕ ಮಹಾರಾಜ. ತನ್ನ ಅಣ್ಣನ ಮ್ಯಾಲೆ ದಂಡೆತ್ತಿ ಬಂದು, ಯುದ್ಧಮಾಡಿ ಎಲ್ಲಾ ತಾನೇ ತೊಗೋಬೇಕೆಂದು ಹೊಂಚ ಹಾಕ್ಯಾನೆ ಈ ತಮ್ಮ ಮಹಾಶೂರ!

ಹಿ : ಮಹಾ ಪರಾಕ್ರಮಿ!

ಕ : ಅದಕಾಗಿ ಎಲ್ಲಾ ಕಡಿಗೂ ಒಂದು ಕಾಗ್ದಾ ಕಳಿಸ್ಯಾನ ಧರ್ಮಸೇಕ; ಏನಂತ?

ಹಿ : ಯಾರು ಬಂದು ನಮ್ಮ ತಮ್ಮಗೆ ಇಲ್ಲಿಂದ ಓಡಿಸ್ತಾರೋ ಅವರಿಗೆ ನನ್ನ ಮಗಳ ಲಗ್ನ ಮತ್ತು ಪಟ್ಟಾಭಿಷೇಕ.

ಕ : ಶೀಲಾವತಿ ಆ ಪಟ್ಣಕ್ಕೆ ಬಂದು ಊರ ಬಾಗಲ್ದಾಗ ಇರೋ ಬೋರ್ಡು ನೋಡಿ ಅಂತಾಳೆ – ತಂಗಿ ಇದು; -ಯುದ್ಧದ ಕಾಗದ ಬರ್ದಾರೆ?

ಹಿ : ಶೀಲಾವತಿ ಎಲ್ಲಾ ಪಕ್ಕಾ ಮಾಡಿಕೊಂಡು ಧರ್ಮಶೇಕರ ಮಹಾರಾಜನ ಹತ್ರಕ್ಕೆ ಹೋದ್ಲು.

ಕ : ಯಾರಪ್ಪ ನೀನು?

ಹಿ : ನಾನು ಶೀಲಸೇನ್ ಮಹಾರಾಜ.

ಕ : ಶೀಲಸೇನ್ ರಾಜ?

ಹಿ : ಹೌದು.

ಕ : “ಧರ್ಮಶೇಕ ಮಹಾರಾಜಾ ಯುದ್ಧ ಮಾಡ್ಲಿಕ್ಕೆ ನನಿಗೆ ವೀಳ್ಯಾಕೊಡು” ಅಂದು ವೀಳ್ಯಾಪಡದ.

ಹಿ : ಹೌದು.

ಕ : ಧರಿಯೇಸೇಕ ರಾಜನ ಮ್ಯಾಲೆ ಯುದ್ಧಮಾಡಿ ಸೋಲಿಸಿಬಿಟ್ಟ!

ಹಿ : ರಾಜಗ ಆನಂದ ಆತು, (ರಾಗವಾಗಿ) ಅಪ್ಪಾ ರಾಜಕುಮಾರಾ ನನ್ನ ಮಗಳು ಪದ್ಮಾವತಿಗೆ ಲಗ್ನಾಗೋ ನನ್ನಳಿಯಾ…

ಕ : ಮಹಾರಾಜ್ರೇ ನಾನು ಲಗ್ನ ಆಗಲಿಕ್ಕೆ ಇನ್ನೂ ಆರು ತಿಂಗಳು ವಾಯ್ದ ಐತೆ; ಈ ಆರು ತಿಂಗಳು ಗೌರೀ ತಪಾ ಐತೆ; ಅದು ತೀರೋವರ್ಗೆ ನಾನು ಲಗ್ನ ಆಗಂಗಿಲ್ಲ. ಸದ್ಯ ಪಟ್ಟಾಭಿಷೇಕ ನನಗೆ ಆಗಲಿ – ಅಂತ್ಹೇಳಿದ್ಲು ಶೀಲಾವತಿ, ರಾಜ ಒಪ್ಪಿಕೊಂಡು ಶೀಲಾವತಿಗೆ ಪಟ್ಟಾಗಟ್ಟಿದಾ! ಗಂಡುರೂಪದ ಶೀಲ್‍ಸೇನ್ ಮಹಾರಾಜ ಪಟ್ಣದ ಮ್ಯಾಲೆ ಕುಂತ್ಕೊಂಡು ರಾಜಕಾರ್ಬಾರು ನಡಿಸ್ಯಾನ.

ಹಿ : ತಂಗಿ ದೇವಕಮಲಗಂಧಿ ಅರಮನಿಯಾಗ ಆದ್ಲು.

ಕ : ತನ್ನ ಮಂತ್ರಿ ಕರೆಸಿದಾ – ಆ ಶೀಲಸೇನ್ ರಾಜ.

ಹಿ : ಏನ್ ಮಾರಾಜ್? ಅಪ್ಪಣಿ ಆಗಲಿ.

ಕ : ನಾನೊಂದು ಫೋಟೋ ಕೊಡ್ತೀನಿ; ಈ ಊರು ಬಾಗಿಲ್ದಾಗ ತೂಗುಹಾಕು, ಆ ಫೋಟೋ ನೋಡೀ ಯಾರು ಶೀಲಾವತೀ ಅಂತ ಅಳ್ತಾರೋ ಅವರಿಗೆ ಹಿಡ್ಕೊಂಡು ನನ್ನತಾವ ಬಾ ಅಂದ.

ಹಿ : ಒಳ್ಳೇದು ಮಹಾರಾಜ ಹಾಗೇ ಆಗಲಿ.

ಕ : ಶೀಲಾವತಿ ಒಳಗೆ ಹೋಗಿ ಜರ್ತಾರಿ ಸೀರಿ. ಜರ್ತಾರಿ ಕುಬ್ಸ ತೊಟ್ಗೊಂಡಿದ್ದು ತನ್ನ ಸ್ತ್ರೀ ರೂಪದ ಫೋಟೋ ತಂದುಕೊಟ್ಲು – ಮಂತ್ರಿ ಕೈಯಾಗ.

ಹಿ : ಮಂತ್ರಿ ಅದನ್ನ ಒಯ್ದು ಊರು ಬಾಗಿಲ್ದಾಗ ಇರೋ ಗಾಜಿನ ಕಂಬಕ್ಕ ತೂಗ ಹಾಕಿದ.

ಕ : ರಾಜತ್ವ ಮಾಡ್ತಾ ಇದ್ದಾಳೆ ಶೀಲಾವತೆಮ್ಮ! ವನವಾಸ ಪಡಿಯುತ್ತಿದ್ದಾರೆ ಘೋರಾರಣ್ಯದೆಲ್ಲಿ – ಯಾರು?

ಹಿ : ಪಕ್ಕಾಕಳ್ಳ-

ಕ : (ರಾಗವಾಗಿ) ಜಯರೇ, ಜಯರೇ, ಸೀತಾರಾಮ್, ಸೀತಾರಾಮ್. ಸೀತಾರಾಮ್ ಶೀಲಾವತಿ ಸಿಗಲಿಲ್ಲಾ…..ಇನ್ನು

ಗವಿಗೆ ಹೋಗ್ಬೇಕು.

ಹಿ : ಹೌದೂ.

ಕ : ಅಂತ್ಹೇಳಿ ಆ ಕಳ್ಳ ಧರ್ಮಾವತೀ ಪಟ್ಣಕ್ಕ ಬಂದ, ಹೊಟ್ಟಿಭಾಳ ಹಸ್ತುತ್ತು!

ಹಿ : ಕಂಡೋರ ಮನಿ ಬಾಗ್ಲಿಗೆ ಹೋಗಿ ಯವ್ವಾ ಉಣ್ಣಾಕ ಅನ್ನಪ್ರಸಾದ ನೀಡ್ರಿ ಅಂತ ಬೇಡತಾನ.

ಕ : ಯಾರು ನೀಡ್ಲಿಲ್ಲ! ಅವರು ಹೇಳ್ತಾರ “ಏ ತಮ್ಮಾ ಏ ಬಾವಾಜೀ, ಊರ್ಹೋರಗ ಬಾವಿ ಐತಿ, ಅಲ್ಲೇ ಶೀಲಸೇನ ಮಹಾರಾಜ್ರು ಅನ್ನ ಛತ್ರ ಇಟ್ಟಾರ, ಅಲ್ಲೇ ಹೋಗು, ಊಟ ಉಪಚಾರ, ಉಡುಗೊರೆ ತೊಡುಗೊರೆ ಎಲ್ಲಾಬೇಕಾದ್ದು ಕೊಡತಾರ” ಅಂತ ಹೇಳಿದ್ರು.

ಹಿ : ಶೀಲಾವತಿ ನಿನ್ನ ಕಾಲಾಗ ಹನ್ನೆರಡು ವರ್ಷ ಅನ್ನಂಬೋದು ನನಗೆ ಬಂಗಾರಾಗಿತ್ತು; ಇನ್ನೂ ನಿನ್ನ ಸಾವಾಸ ಸಾಕು. ಇವತ್ತು ಇಲ್ಲಿ ಹೊಟ್ಟಿ ತುಂಬಾ ಊಟಾ ಮಾಡಿಕೊಂಡು ನನ್ನ ಗವೀ ಸೇರ್ಬೇಕು-” ಅಂತ್ಹೇಳಿ ಅಗಸಿ ಬಾಕಲದ ಹತ್ರ ಬಂದ.

ಕ : ಅಲ್ಲಿ ಗಾಜಿನ ಕಂಬದ ಹತ್ರ ಜನ ನಿಂತಿದ್ರು; ಅದು ಏನು ಅಂತ ಹೋಗಿ ನೋಡ್ತಾನ-

|| ಪದ ||

ಆಹಾ ಇಲ್ಲಿ ಕುಂತಾಳ ನನ್ನ ಮಡದೀ….ಹರಯನ್ನ ಮಾದೇವಾ.
ಇಲ್ಲೇ ಕುಂತಾಳ ಶೀಲಾವತೀ….ಹರಯನ್ನ ಮಾದೇವಾ.
ಎದ್ದು ಬಾರೇ ಶೀಲಾವತೀ….ಹರಯನ್ನ ಮಾದೇವಾ.

ಕ : “ಆಹಾ! ಇಲ್ಲಿ ಅದಾಳಲ್ಲೋ ನನ್ನ ಶೀಲಾವತಿ!” ಅಂತಾನೆ ಎದಿ ಎದಿ ಬಡ್ಕೊಂತಾನೆ – ಆ ಫೋಟೋ ನೋಡಿ!

ಹಿ : ಇದನ್ನ ಮಂತ್ರಿ ನೋಡಿ ಅಂತಾನೆ – ಯಾಕ ತಮ್ಮಾ ಯಾಕ ಅಳ್ತೀಯಾ?

ಕ : ನನ್ನ ಮಡದಿ ಸ್ವಾಮಿ ಈಕೆ! ಇಲ್ಲಿ ಬಂದಾಳೆ!

ಹಿ : ಬಾ ಹೋಗೋನು.

ಕ : “ಹೇ, ಫೋಟೋ ನೋಡಿ ಮಡದೀ ಅಂತಿಯಲ್ಲೋ! ನಡಿ ಹೋಗಾನು…….. ರಾಜ ಕರೀತಾನ” – ಹಿಡಕೊಂಡು ಬಂದ್ರು ಕಛೇರಿಗೆ!

ಹಿ : ನಮಸ್ಕಾರ ಶೀಲಸೇನ ಮಹಾರಾಜ!

ಕ : ಯಾರಿವನು ಮಂತ್ರೀ?

ಹಿ : ಯಾರೋ, ಇವನು ಮಡದೀ ಅಂತ ನೋಡಿ ಅತ್ತ – ಫೋಟೋ ನೋಡಿ.

ಕ : ಗಮಕಡ್ಲಿ ಅಕ್ಕಿ, ಚನ್ನಂಗಿ ಬ್ಯಾಳಿ ಅಂತಿದ್ರೀ ಇವನು!

ಹಿ : ಓ ಕಳ್ಳಾ! ಇವನಿಗೆ ಕ್ವಾಣ್ಯಾಗ ಹಾಕ್ರಿ.

ಕ : ಕೈಯಾಗ ಕೋಳ ಕಾಲಾಗ ಬೇಡಿ ಹಾಕಿದ್ರು, ಕತ್ತಲ ಕೋಣ್ಯಾಗ ನೂಕಿದ್ರು.

ಹಿ : ಹೌದು ನೂಕಿ ಬಿಟ್ರು.

ಕ : (ರಾಗವಾಗಿ) ಆಮ್ಯಾಲೆ….ಅಡಿವಿ ಸಿಪಾಯಿ ಬರ್ತಾನೇ…….ಎಲ್ಲಿ ಹೋದೀ ಶೀಲಾವತೀ….ಎಲ್ಲಿ ಹೋದಿ ನನ್ನ ಮಡದೀ….

ಹಿ : ಅಡವಿ ಸಿಪಾಯಿ ಆ ಸಾಬು!

ಕ : “ಆಹಾ ಕಿದರ್ ಗಯಾರೆ ಶೀಲಾವತೀ! ಮೇರಾ ಘೋಡಾ ಗಯಾ” ಅಂತ ಅಂಬ್ಲಸ್ತಾ ಅದೇ ಅಗಸಿ ಬಾಗಿಲಿಗೆ ಬಂದ; ಶೀಲಾವತಿ ಫೋಟೋ ಕಣ್ಣಿಗೆ ಬಿದ್ದಕೂಡ್ಲೇ ಅಲೇಲೇಲೇ, ಯಹಾ ಬೈಠೀ ಹೈ – ಶೀಲಾವತಿ! ಆವ್ ಆವ್, ಮೊಲದ

ಹೆಜ್ಜ್ಯಾಗಳ ಮಣ್ಣು ಬೇಕಂದೆಲ್ಲೇ ಮಡದೀ….

ಹಿ : (ರಾಗವಾಗಿ) ಆಹಾ….

ಕ : ಬೆಕ್ಕಿನ ಉಚ್ಚಿ ತೊಗೊಂಡು ಬಾ ಅಂದೆಲ್ಲೇ ಹೊಟ್ಟಿಶೂಲಿಗೇ….

ಹಿ : ಹೌದೂ!

ಕ : (ರಾಗವಾಗಿ) ನನ್ನ ಕುದ್ರೀ, ನನ್ನಡ್ರಸ್ಸು, ತಗೊಂಡು ಬಂದು ಇಲ್ಲಿ ಕುಂತ್ಯಾ ನನ್ನ ಮಡದೀ ಶೀಲಾವತೀ….ಬಾ ಈಗನ್ನ ಹೋಗಾನು, ಅಂತ ಫೋಟೋ ನೋಡಿ ಹಣಿಹಣಿ ಬಡ್ಕೊಂತಾನ ಸಿಪಾಯಿ!

ಹಿ : ಮಂತ್ರಿ ನೋಡಿದಾ; ಹೇ ಇವನು ಹಿಂಗ್ಯಾಕ ಮಾಡ್ತಾನೋ – ಅಂತ ತನ್ನ ಸಿಪಾಯಿನ ಕೇಳ್ತಾನ.

ಕ : ಮೊಲದ ಹೆಜ್ಜಿ ಬೆಕ್ಕಿನ ಉಚ್ಚೀ ಬೇಕಂತಾನ್ರೀ!

ಹಿ : ಲೇ ತಮ್ಮಾ, ಹೋಗಾನು ನಡಿ – ರಾಜಕರೀತಾನ.

ಕ : ಸೀದಾ ರಾಜನ ಹತ್ರ ಬಂದ್ರು.

ಹಿ : ನಮೋ ನಮೋ ನಮಸ್ಕಾರ ಶೀಲಸೇನ ದೊರಿ.

ಕ : ಯಾರಿವನು?

ಹಿ : ಮೊಲದ ಹೆಜ್ಜಿ ಮಣ್ಣು ಬೆಕ್ಕಿನ ಉಚ್ಚಿ ಅಂತಾನೆ ಇವನು, ಮೇರಾ ಘೋಡಾ ಗಯಾ, ಮೇರಾ ಡ್ರಸ್ ಗಯಾ ಅಂತಾನ! ಜಾತಿಯಲ್ಲಿ ಮುಸಲ್ಮಾನ.

ಕ : ಇವನು ಅಡವಿ ಸಿಪಾಯಿ!

ಹಿ : ಕ್ವಾಣ್ಯಾಗ ಹಾಕ್ರಿ ಇವನ್ನ.

ಕ : ಅವನಿಗೂ ಹಾಕಿದ್ರೂ-

|| ಪದ ||

ದುರ್ಜಯ ಬರ್ತಾನ್ರಿ ದೇವಾ…. ನಮಃ ಶಿವಾಯ.
ಆಹಾ ದುರ್ಜಯ ಬರ್ತಾನೆ ಊರಿಗೇ…. ನಮ ಶಿವಾಯ.
ಎತ್ಲಾಗ ಹೋದಿ ಶೀಲಾವತೀ ಮಡದೀ….ಹರಯನ್ನ ಮಾದೇವಾ.
ನಮ್ಮ ತಂದೆತಾಯಿಗೆಬಿಟ್ಟೆ ನಾನೂಹರಯನ್ನ ಮಾದೇವಾ.

ನನ್ನ ಸೀಮಿ ಹೋಯ್ತು, ಭೂಮಿ ಹೋಯ್ತೇ ಮಡದೀ….ಹರಹರ ಮಾದೇವಾ.
ಚಂಡಿಕಾದೇವಿ ಗುಡಿಯೊಳಗ ಮಡದೀ ನಮಾ ಶಿವಾಯ.
ನನ್ನ ಬಿಟ್ಟು ಹೋದ್ಯಾಹರಯನ್ನ ಮಾದೇವಾ.

ಕ : ಈಗ ನೋಡ್ರಿ ಶೀಲಾವತೀ, ಶೀಲಾವತೀ ಅಂತಾ ದುರ್ಜಯ ಬಂದಾನೆ-

ಹಿ : ಹೌದು, ಎಲ್ಲರಿಗೂ ಪಡಿಪಾಟ್ಲು ವನವಾಸದ ದಾರಿ ಹಚ್ಚಿದೋನು ಇವನು!

ಕ : ಚಂಡಿಕಾದೇವಿ ಗುಡಿಯಾಗ ಇದ್ದ ಆ ನನ್ನ ಪುಣ್ಯಾತ್ಮಳು ಎಲ್ಲಿ ಹೋದ್ಲು? ಎಲ್ಲಿ ಅದಾಳೆ! ಅಂತ್ಹೇಳಿ ಊರು ಉದ್ಮಾನ ಬಿಟ್ಟು! ತಂದಿ ತಾಯಿ ಬಿಟ್ಟು ಬಂದೆ!

ಹಿ : ಆss.

ಕ : ಇನ್ನು ಹುಡ್ಕೋದು ಬ್ಯಾಡ, ಊರಿಗೆ ಹೋಗಾನು, ಅಂತ್ಹೇಳಿ ಇದೇ ಊರಿಗೆ ಬಂದಾ-

ಹಿ : ಯಾವುರಿಗೆ?

ಕ : ಧರ್ಮಾವತಿ ಪಟ್ಣಕ್ಕ, ಈ ಊರಾಗ ಅನ್ನಪ್ರಸಾದ ಇಸ್ಕೊಂಡು ಉಂಡು ನಮ್ಮೂರಿಗೆ ಹೋಗ್ಬೇಕಂತ್ಹೇಳಿ ಬಂದ – ಅದೇ ಅಗಸಿಗೇ.

ಹಿ : ಗಾಜಿನ ಕಂಬದಮ್ಯಾಲೆ ಇದೋ ಫೋಟೋ ನೋಡಿದಾ!

ಕ : ಆಹಾ! ಮಡದಿ ಶೀಲಾವತಿ ಇಲ್ಲಿ ಅದಾಳ! ಏನೇ, ಚಂಡಿಕಾ ಗುಡಿಯೊಳಗೆ ನಿನ್ನ ಮುಖ ನೋಡಿದ್ದು – ಇಲ್ಲಿ ಬಂದು ಕುಂತೆಲ್ಲೇ!

(ರಾಗವಾಗಿ) ಬಾ….ಶೀಲಾವತೀ…..

ಹಿ : ಆಹಾ.

ಕ : ಶೀಲಾವತೀ ಬಾರೇ – ಅಂತ ಅಂಬ್ಲುತಾ ದುರ್ಜಯ ಕೂಗಿ ಕರೀಬೇಕಾದ್ರೆ-

ಹಿ : ಮಂತ್ರಿ ನೋಡ್ದಾ.

ಕ : ಎಷ್ಟು ಮಂದಿ ಅದಾರಪ್ಪ ಇವ್ರೆಲ್ಲಾ! ಏನೋ ತಮ್ಮಾ, ಫೋಟೋ ನೋಡಿ ಮಡದೀ ಅಂತಿಯಲ್ಲೋ ?

ಹಿ : ಯಪ್ಪಾ ನನ್ನ ಮಡದೀ!

ಕ : ಮಡದೀ! ರಾಜಕರೀತಾನ ಬಾ – ಅಂತ್ಹೇಳಿ ಅವನ ಹೆಡಮುರ್ಗಿ ಬಿಗದು ಎಳಕೊಂಡು ತಂದ್ರು.

ಹಿ : ನಮಸ್ಕಾರ ಶೀಲಸೇನ್ ಮಾರಾಜ್.

ಕ : ಯಾರಿವನು?

ಹಿ : ಹೇಳು ಮಂತ್ರೀ.

ಕ : ಅದೇನೋ ಚಂಡಿಕಾ ಗುಡಿಯೊಳಗೆ ಕುಂತಿದ್ದಲ್ಲೇ – ಈಗ ಮುಖ ತೋರ್ಸಿದಿಯಾ? ಅಂದ.

ಹಿ : ಹೌದು.

ಕ : ಯಾವಾಗ ಅವನ್ನ ಶೀಲಾವತಿ ತಾಯಿ ನೋಡಿ ಬಿಟ್ಲು – ಹೊಟ್ಟ್ಯಾಗ ಎತ್ತಿ ಎತ್ತಿ ಒಗೀತೈತಿ!

ಹಿ : ಚಾಂಡಾಲಾ! ವನವಾಸಕ್ಕ ಗುರಿಮಾಡಿ ಪತಿವ್ರತಾ ಧರ್ಮಕ್ಕೆ ಹಾನಿ ತಂದಿಟ್ಯಾ! ಹನ್ನೆರಡು ವರ್ಷ ಗಂಡನ ಊರು ಎರವಾಯಿತು, ತವರೂರು ಎರವಾಯ್ತು, ಮಗ ರತನಸೇಕ ಹೋದ – ಅಂತಾ ಈದ ಹುಲಿ ಆಗಿ, ಕೈಕಾಲಿಗೆ ಕ್ವಾಳಿಹಾಕ್ಸಿ ಕ್ವಾಣ್ಯಾಗ ನೂಕ್ಸೀದ್ಲು!

ಕ : ಆಹಾ ಇವರ ಕತಿ ಇಲ್ಲಿ!

ಹಿ : ಹೌದೂ.

ಕ : ಉದಯವಾನ ಮಾರಾಜ ಊರು ಬಿಟ್ಟು ಒಂದು ಅರ್ಧಮೈಲು ದೂರದಲ್ಲಿ ರಸ್ತಿ ಮಾರ್ಗದಲ್ಲಿ ಕುಂತ್ಗೊಂಡು ದುಃಖಮಾಡ್ತಾ ಅದಾನ!

ಇನ್ನು ಇಲ್ಲೀ ಕತಿ-

ಹಿ : ಅಲ್ಲಿ ಬಾವ್ಯಾಗ ಬಿದ್ದುದ್ನಲ್ಲ ಶುಭವಾನ-

ಕ : ಹೌದು, ರೈತ್ರೆಲ್ಲಾ ಒಕ್ಕಲುತನದ ಕೆಲಸಕ್ಕs ಬಂದು ನೋಡ್ತಾರೆ – ಬಾವಿ ಮ್ಯಾಗ ಮುಚ್ಚಿದ ತಟ್ಟಿ ಇದ್ದುದ್ದಿಲ್ಲ! ಬಾವ್ಯಾಗ ಹಣಿಕಿ ನೋಡಿದ್ರು – ಆ ಶುಭವಾನಗೆ! ಮ್ಯಾಲೆ ಎಳ್ಕೊಂಡ್ರು-

ಹಿ : ರಾಜನಿಗೆ ಎಳ್ಕೊಂಡ್ರು!

ಕ : ಏನ್ರಿ ಯಾವಾಗ ಬಂದು ಬಿದ್ದಿದ್ರೀ?

ಹಿ : ಯಪ್ಪಾ, ಎರಡು ಮೂರು ದಿವ್ಸ ಆಯ್ತು ಮಾರಾಯಾ. ಅನ್ನ ಇಲ್ಲ, ಆಹಾರ ಇಲ್ಲ.

ಕ : ಊಟ ಮಾಡ್ರಿ ಅಂತ ಬುತ್ತಿ ಕೊಟ್ರು.

ಹಿ : ರಾಜ ಊಟ ಮಾಡಿದಾ. ತನ್ನ ಮಡದಿ ಜಾಗಕ್ಕೆ ಬಂದು ನೋಡ್ತಾನ-

ಕ : ಮಡದಿ ಇಲ್ಲ! ಕೀಲ್ಕುದ್ರಿ ಇಲ್ಲ! ನಮ್ಮ ಅಣ್ಣ ಇದರಂತೆ ಮಡದಿ ಮಗನ್ನ ಕಳ್ಕೊಂಡ; ನಾನೂ ಮಡದಿ ಕಳ್ಕೊಂಡೆ! – ಅಂತ್ಹೇಳಿ ಅತ್ತಗೊಂತಾ-

ಹಿ : ಎಲ್ಲಿಗೆ ಬಂದ?

ಕ : ಅದೇ ಅಣ್ಣ ಕುಂತ ಜಾಗಾಕ್ಕೇ ಬಂದ – ಶುಭವಾನ.

ಹಿ : ಆಹಾ!

ಕ : ಧರ್ಮಾವತಿ ಪಟ್ಣದ ಊರ ಮುಂದೆ – ಯಾರು ಸ್ವಾಮಿ ಇಲ್ಲಿ? ಮರದ ತೆಳಗs ಕುಂತೀರಿ ಅಂಬ್ಲಿ ಕೊಂತs?

ಹಿ : ಯಾರು, ಯಾರು ನೀವು?

ಕ : ಒಬ್ರ ಮುಖ ಒಬ್ರು ನೋಡಿದ್ರು; ಎಷ್ಟಾದ್ರೂ ಅಣ್ಣ ತಮ್ಮಾ! ಗುರ್ತು ಹತ್ತಿ ತಕ್ಷಣಕ್ಕೆ-

ಹಿ : ಅಣ್ಣಾ ಅಣ್ಣಾ ಇಲ್ಲಿ ಕುಂತ್ಯಾ!

ಕ : (ರಾಗವಾಗಿ) ಇಬ್ರೂ ಅಣ್ಣಾ-ತಮ್ಮಾ ದುಃಖಮಾಡ್ತಾರೈ……..

ಹಿ : ಯಾವಾಗ ಬಂದಿದ್ದೋ ತಮ್ಮಾ.

ಹಿ : ಆಹಾ!

ಕ : (ರಾಗವಾಗಿ) ಐದು ವರ್ಷ ಆಯ್ತು-ಅಣ್ಣಾ, ನಿನ್ನ ಹುಡುಕಾಕ, ಅತ್ತಿಗಿಗೆ ಹುಡುಕಾಕ!….ನೀನು ಮುಖಾನೆ ತೋರ್ಸಲಿಲ್ಲಾ….ಈಗ ಮುಖಾ ತೋರ್ಸಿದಿ ಅಣ್ಣಾ…

ಹಿ : (ರಾಗವಾಗಿ) ನಮ್ಮ ಅತ್ತಿಗೆ ಎಲ್ಲಿ ಅಣ್ಣಾss….

ಕ : ತಮ್ಮಾ ನಿಮ್ಮ ಅತ್ತಿಗೆ ಸಿಗಲಿಲ್ಲಪಾ, ಮಗನೂ ಸಿಗಲಿಲ್ಲ. ಇನ್ನೂ ಹುಡ್ಕೋದು ಸಾಕು; ಇಲ್ಲಿ ಯಾವುದೋ ಐತಲ್ಲ – ಹೋಗಿ ಊಟ ಮಾಡ್ಕೊಂಡು ಊರಿಗೆ ಹೋಗಾನು ನಡೀ.

ಹಿ : ಅಣ್ಣ – ತಮ್ಮ ಇಬ್ರೂ ಬಂದ್ರೂ ಧರ್ಮಾವತಿ ಪಟ್ಣದ ಊರ ಮುಂದೆ!

ಕ : ಇದು, ಈ ಧರ್ಮಛತ್ರ ಯಾರದ್ರೀ?

ಹಿ : ಶೀಲಸೇನ್ ಮಹಾರಾಜರದು!

ಕ : ಇಲ್ಲಿ ಊಟ ನಡಿತೈತಿ?

ಹಿ : ಹೌದೂ ಅನ್ನ ಛತ್ರ ಇಟ್ಟಾರೆ; ಹೋಗಿ ಬಾವ್ಯಾಗ ಜಳಕಾ ಮಾಡಿ ಬರ್ರೀ.

ಕ : ಅಣ್ಣಾ – ತಮ್ಮಾ ಇಬ್ರೂ ಜಳಕಾ ಮಾಡ್ಬೇಕು ಅಂತಾ ಬಂದು ಆ ಗಾಜಿನ ಕಂಬಕ ನೋಡ್ತಾರೆ – ಶೀಲಾವತಿ ಫೋಟೋ ತೂಗಬಿದೈತಿ!

ಹಿ : ಆಹಾ ಹಾ…

ಕ : ಅಣ್ಣಾ…

ಹಿ : ಯಾರು?

ಕ : ಅಣ್ಣಾ, ಶೀಲಾವತಿ ಮಹಾರಾಣಿ ತಾಯಿ ಇಲ್ಲಿ! ನಮ್ಮ ಅತ್ಗಿನ್ನೇ ನೋಡಿದ್ಹಂಗ ಆಗತ್ತೈತಲ್ಲ!

ಹಿ : ಹೌದು ತಮ್ಮಾ, ನಿಮ್ಮ ಅತ್ತಿಗಿ ಹಿಂಗೇ ಇದ್ಲು! ಯಾರೋ ಏನೋ!

ಕ : ಆಹಾ!

ಹಿ : ಇವರು ಫೋಟೋ ನೋಡಿ ಚಿಂತಾಬ್ದದಲ್ಲಿ ಇರಬೇಕಾದ್ರೆ-

ಕ : ಮಂತ್ರಿ ನೋಡಿದ್ಯಾ ; ಯಾರ್ರೀ ಸ್ವಾಮಿ ನೀವು?

ಹಿ : ವನವಾಸಿಕರು, ನಾನು ಉದಯವಾನ,

ಕ : ನಾನು ಈತನ ತಮ್ಮ ಶುಭವಾನ,

ಹಿ : ನಮ್ಮ ರಾಜ್ರು ಕರೀತಾರೆ ಕವೇರಿಗೆ – ಬರಬೇಕು ನೀವು. ನಿಮಗೇನೂ ಬಂದಾನs ಮಾಡೋದಿಲ್ಲ.

ಕ : ರಾಜಾದ್ನಿ ಮೀರಬಾರದು, ಅದರ ಪ್ರಕಾರ ಬರುತ್ತೀವಿ – ಅಂದು ಇಬ್ರೂ ಅಣ್ಣ ತಮ್ಮಾ ನಡದ್ರು.

ಹಿ : ತಗಡೂರು ಸಾಲು ಬಜಾರದಲ್ಲಿ ಬಣ್ಣದ ಛಾವಡಿಯಲ್ಲಿ ಕುಂತುಕೊಂಡು ಗಂಡು ರೂಪ ತಾಳಿರುವ ಶೀಲಾವತಿ ನೋಡ್ತಾಳೆ-

ಕ : ಪತಿಮಾರಾಜ್!

ಹಿ : ಅಯ್ಯೋ;

ಕ : ಉದಯವಾನ – ನನ್ನ ಪತಿ, ಬಾಸಿಂಗ ಜೋಡು! ನನ್ನ ಮೈದುನ! ಬರ್ತಾ ಅದಾರೆ- ಇಬ್ರೂ!

ಹಿ : ಅದೋ ಬಂದ್ರು!

ಕ : ಬಂದದ್ದು ಬಂದದ್ದೇ ಅಣ್ಣಾ ತಮ್ಮಾ “ರಾಜಾಧಿರಾಜಾ ನಮಸ್ಕಾರ” ಅಂತ ಅಂದ್ರು.

ಹಿ : ಚಡಪಡಿಸಿದ್ಲು-

ಕ : ತಾಯಿ ಶೀಲಾವತಿ; ಸಿಂಹಾಸನ ಇಳಿದು ಬಿಟ್ಲು-

ಹಿ : ಆಹಾ!

ಕ : ಇಳಿದದ್ದೇ – ಬರ್ರೀ ಮಹಾರಾಜ್ರೇ ನಮಸ್ಕಾರ ಕೂಡ್ರಿ ; ಬರ್ರಿ, ಬರ್ರಿ,

ಹಿ : ಬರ್ರಿ

ಕ : ಸುಮ್ಮನೆ ಬಂದು ಕೂಡ್ಬೇಕು, ಸಮಾಚಾರ ಹೇಳ್ಬೇಕು.

ಹಿ : ಇದು ಯಾರಪ್ಪ ಈ ಶೀಲ್‍ಸೇನ್ ಮಾರಾಜ!

ಕ : ನಮ್ಮ ಪದ್ಧತಿ ಪ್ರಕಾರವಾಗಿ ರಾಜರಿಗೆ ನಾವು ನಮಸ್ಕಾರ ಮಾಡೋದು ಪದ್ಧತಿ! ಸಿಂಹಾಸನ ಇಳಿದು ಬಂದು ನಮಗಿಂತ ಮುಂಚಿತವಾಗಿ ನಮಸ್ಕಾರ ಮಾಡಿ ಕುಂದ್ರೀ ಅಂತ ಕುರ್ಜಿಮ್ಯಾಲೆ ಕುಂದ್ರಿಸಿ ಮರ್ಯಾದಿ ಮಾಡ್ತಾರಲ್ಲ!

ಹಿ : ನಿಮ್ಮದು ಯಾವುರು? ಹೆಸರೇನು? ಎಲ್ಲಾ ವೃತ್ತಾಂತ ಹೇಳ್ಬೇಕು.

ಕ : ಕರಿವೀರ ಪಟ್ಣದಲ್ಲಿ ದೇವಸೇನ ಮಹಾರಾಜ ನಮ್ಮ ತಂದಿ ಮಹಾದೇವಿ ನಮ್ಮ ತಾಯಿ;

ಹಿ : ಈತ ಶುಭವಾನ ನನ್ನ ತಮ್ಮ ; ನನ್ನ ಹೆಸರು ಉದಯವಾನ.

ಕ : ನಾವಿಬ್ರೂ ವನವಾಸ ಬಂದದ್ದು ವೃತ್ತಾಂತ ಇದು – ಭಾಂಡೇಪುರಿ ಬಂದು ಜನಜ ಆಗಿ ಊರಿಗೆ ಬರೋ ಟೈಮಿನಲ್ಲಿ, ಆಕಿಗೆ ಆಕೀ ಮಗನಿಗೆ ಹಿಡಂಬಾ ಒಯ್ಯತಂತೆ!

ಹಿ : ರಾಕ್ಷಸ!

ಕ : ಹುಡುಕಾಟ ಒಂದು ಹನ್ನೆರಡು ವರ್ಷ ಆತು – ಮಹಾರಾಜ್; ನನ್ನ ತಮ್ಮ ಬಂದು ಐದು ವರ್ಷ ಆತು! ಈತ ನಾನು ಮಡದೇರ್ನ ಕಳ್ಕೊಂಡು ಹುಡುಕಾಕ ಬಂದ್ವಿ; ಮಡದೇರು ಸಿಗಲಿಲ್ಲ; ಊರಿಗೆ ಹೋಗ್ತೀವಿ ಇವತ್ತು.

ಹಿ : ಅಲ್ರೀ ನಿಮ್ಮ ಮಡದೇರು ಸಿಕ್ಕರೇನು ಕರ್ಕೊಂಡು ಊರಿಗೆ ಹೋಗ್ತೀರೋ ಏನು ಬಿಟ್ಟು ಹೋಗ್ತೀರೋ? -ಅಂದ್ಲು ಆಯಮ್ಮ!

ಕ : ಇಂಥಾ ಮಹಾಪತಿವ್ರತಾ ಮಡದೇರು ಸಿಕ್ಕರೆ ನಾವು ಬಿಟ್ಟು ಹೋಗಾದಿಲ್ಲ, ಕರ್ಕೊಂಡು ಹೋಗ್ತೀವಿ.

ಹಿ : ನಿಮ್ಮಲ್ಲಿ ಏನಾರ ಭಾವನಾ – ಪತಿವ್ರತಾ ಅಪತಿವ್ರತಾ ಸ್ತ್ರೀಯರು ಅಂಬೋದು?

ಕ : ಅಂಥ ಸ್ತ್ರೀಯರಲ್ಲ; ಅವ್ರು ಅಂಥವರಾಗಿದಿದ್ದರೆ ನಾವು ಮೊದಲೇ ಹುಡುಕು ತಿದ್ದಿಲ್ಲ?

ಹಿ : ಹೌದೂ.

ಕ : ಹಾಗಾದರೆ ಒಂದರ್ಥ ಘಂಟಿ ಇಲ್ಲಿ ಕುಂದಿರ್ರೀ; ನಂದು ಒಳಗೆ ಕೆಲಸ ಐತಿ – ಅಂದು ಶೀಲಾವತಿ ಒಳಗೆ ಹೋಗಿಬಿಟ್ಲು.

ಹಿ : ತಂಗೀ, ದೇವಕಮಲಗಂಧೀ, ಇಬ್ರು ಮಹಾರಾಜ್ರು ಬಂದಾರೆ, ಜಲ್ದೀ ನೀರು ಕಾಸು.

ಕ : ಅಕ್ಕ ತಂಗಿ ಇಬ್ರು ಜಳಕ ಮಾಡಿಕೊಂಡು ಜರತಾರಿ ಸೀರಿ ಉಟ್ಕೊಂಡ್ರು ಜರತಾರಿ ಸೀರಿ ಉಟ್ಕೊಂಡ್ರು ಜರತಾರಿ ಕುಬ್ಸ ತೊಟಗೊಂಡ್ರು, ಕೈಯಾಗ ಆರತಿ ಹಿಡ್ಕೊಂಡು ಬರುವಾಗ (ರಾಗವಾಗಿ) ಉದಯವಾನ ಶುಭವಾನ ನೋಡಿದ್ರು-

ಹಿ : ಬಂದ್ಯಾ ಶೀಲಾವತೀ!

ಕ : ಬಂದ್ಯಾ ಕಮಲಗಂಧೀ!

ಹಿ : ಆಹಾ!

ಕ : ಇಬ್ರು ಆರತಿ ಬೆಳಗತಾರ-

|| ಪದ ||

ಮುತ್ತಿನ ಆರುತಿ ಎತ್ತಿರೆಲ್ಲರು ತೀರ್ಥದೇವಗೆ ಸಾಂಬಶಿವಗೇ
ಅಪಾರ ಮಹಿಮೆಗೆ ತ್ರಿಪುರ ನಾಶಗೆ
ವಿಪುಲ ಸಂಪಗೆ ವೀರಶಿವಗೆ ಮುತ್ತಿನ ಆರುತಿ
ಎತ್ತಿರೆಲ್ಲರು ತೀರ್ಥದೇವಗೆ ಸಾಂಬಶಿವಗೆ
ನಂದಿನಾಥಗೆ ಇಂದುಧರಗೆ ನಂದಿನಾಥಗೆ ಇಂದುಧರೆಗೆ
ಕಂದು ಕೊರಳಗೆ ಚಂದ್ರಧರಗೆ ಕಂದುಕೊರಳಗೆ ಚಂದ್ರಧರೆಗೆ
ಮುತ್ತಿನ ಆರುತಿ ಎತ್ತಿರೆಲ್ಲರು ತೀರ್ಥದೇವಗೆ ಸಾಂಬಶಿವಗೇ
ಆರುತಿ ಬೆಳಗನು ಬಾರೆ ಸಖೀ
ಮೂರುತಿ ತಾಯ್ ಉಡುರಾಜ ಮುಖೀ || ||
ಸರ್ಪಭೂಷಣಗೆ ಲೋಕರಕ್ಷಿಪಗೇ
ಮಾನ್ಯಾಭಿಮಾನಗೆ ಕರುಣಾಶೀಲಗೆ
ಸಂಗೀತ ಸುಗುಣ ಸುಗುಣಾಲೋಲಗೆ || ||
ದೇಶಕ್ಕೆ ದಿಟವಾದ ವಾಸುಳ್ಳ ಲಿಂಗನಹಳ್ಳಿ
ವಡವಿ ಚನಿವೀರೇಶನ | ವಡವಿ ಚನಿವೀರೇಶನ |

ಪಾದವ ಪೂಜಿಸಿ ಪಾದವ ಪೂಜಿಸಿ
ಆರುತಿ ಬೆಳಗನು ಬಾರೆ ಸಖೀ
ಮೂರುತಿ ತಾಯ್ ಗುರುರಾಜ ಮುಖೀ || ||

ಕ : ತನ್ನ ರಾಜಗೆ ಮೈದುನಗೆ ಆ ದುರ್ಜಯ ಚಾಂಡಾಲ ಉಂಟು ಮಾಡಿದ ವನವಾಸ ಎಲ್ಲಾ ಶೀಲಾವತಿ ತಾಯಿ ಹೇಳಿಬಿಟ್ಲು.

ಹಿ : ಆಹಾ!

ಕ : ದುರ್ಜಯ, ಕಳ್ಳ, ಅಡವಿ ಸಿಪಾಯಿ – ಮೂವರಿಗೂ ಕರೇಕಳಿಸಿಬಿಟ್ರು.

ಹಿ : ಆ ಕಳ್ಳನ ಕಿವಿ ಕೊಯ್ಸಿ ತಾಯಿ ಬಿಟ್ಟು ಬಿಟ್ಟು.

ಕ : ಅಡವಿ ಸಿಪಾಯಿಗೆ ಮೂಗು ಕೊಯ್ಸಿ ಅವನಿಗೂ ಬಿಟ್ಟು ಬಿಟ್ಲು.

ಹಿ : ಇನ್ನು ಆ ಚಾಂಡಾಲ ದುರ್ಜಯನ ಸರ್ತಿ!

ಕ : ಸ್ವಲ್ಪ ತಡೀ – ಅಂದು ಆ ಊರ ದೇವರಿಗೆಲ್ಲಾ ಹಣ್ಣುಕಾಯಿ ಕೊಟ್ಟು ಆ ಪದ್ಮಾವತಿಗೂ ತನ್ನ ಮೈದುನಗೂ ಲಗ್ನಮಾಡಿದ್ಲು, ಬ್ರಾಹ್ಮಣರಿಗೆ ದಾನಮಾಡಿದ್ಲು; ಅಡಿವ್ಯಾಗ ಇರೋ ಆ ಚಂಡಿಕಾ ಗುಡಿಗೆ ಬಂದು ಆಯಮ್ಮಾ ಏನಂತಾಳೆ?

ಹಿ : ಹೌದೂ. ದುರ್ಜಯನ್ನೂ ಹಿಡದು ತರಿಸ್ಯಾಳ ಅಲ್ಲಿಗೆ.

ಕ : ಅಮ್ಮಾ ಚಂಡಿಕಾದೇವೀ, ಅಂಬಾಭವಾನೀ, ನೀನು ನನ್ನ ಪತಿವ್ರತಾ ಧರ್ಮ ಕಾಪಾಡಿದ್ರೆ ನಿನಗೆ ನರಬಲಿ ಕೊಡ್ತೀನಿ ಅಂತಾ ಬೇಡಿಕೊಂಡಿದ್ದೆ ಮನಸ್ಸಿನಾಗೆ.

ಹಿ : ಹರಕಿ ಹನ್ನೆರಡು ವರ್ಷ!

ಕ : ಇವತ್ತು ನನ್ನ ಕಾರ್ಯ ಕೈಗೂಡಿತು ತಾಯೀ! ಮೈದುನಾ-

ಹಿ : ಏನಮ್ಮಾ ಅತ್ತಿಗೆ?

ಕ : ಹಿಡಿ ಈ ದುರ್ಜಯಗೆ – ಅಂದ್ಲು ; ರಣಕೂದ್ಲು ಚಲ್ಲರಿ ಹೊಡದ್ಲು; ಬಿಚ್ಚುಗತ್ತಿ ಕೈಯಾಗ ಹಿಡಕೊಂಡು ದುರ್ಜಯನ್ನ ಕಡದು ಬಿಟ್ಲು – ಶೀಲಾವತಿ!

ಹಿ : ಆಹಾ!

ಕ : ಅವನ ಶಿರಾ ಚಂಡಾಡಿ ಕೈಯಾಗ ಹಿಡಕೊಂಡು ಆ ಪತಿವ್ರತಾ ಶಿರೋಮಣಿ ಚಂಡಿಕಾದೇವಿ ಪಾದಕ್ಕೆ ಇಟ್ಲು ;

ಹಿ : ಆಹಾ!

ಕ : ಆ ಚಂಡಿಕಾದೇವಿ ಪ್ರತ್ಯಕ್ಷಾಗಿ – ಏನು ವರ ಬೇಡ್ತೀ ಬೇಡು ಮಗಳೇ,

ಹಿ : ಬೇಡು ಮಗಳೇ
ಕ: ತಾಯೀ ನನಗೆ ಏನೂ ಬೇಕಾಗಿಲ್ಲ, ಈ ಬರೇ ಉಡಿಲೇ ಹೋಗಿ ಅತ್ತಿ – ಮಾವಗೆ ಮುಖಾ ತೀರೊಸಲಾರೆ; ನನಗೆ ನನ್ನ ಮಗನ್ನ ಕೊಡು ಅಂದ್ಲು

ಹಿ : ಇದೋ ಕೊಟ್ಟಿ ನಿನ್ನ ಮಗನಿಗೆ-

ಕ : ಅಂತಾ ಅಂದು ಹನ್ನೆರಡು ವರ್ಷದ ಮಗನ್ನ ಶೀಲಾವತಿಗೆ ಕೊಟ್ಲು ಬಿಟ್ಲು – ತಾಯಿ, ಮಹಾತಾಯಿ!

ಹಿ : ರತನಸೇಕ ಮಗ ವೈಭವದಿಂದ ಬಂದ – ಗುಡಿಯಿಂದ ಹೊರಗೆ.

ಕ : ಮಗನಿಗೆ ಎತ್ತಿಕೊಂಡು ಆ ದೇವಿ ಗುಡಿ ಮುಂದೆ ಒಂದು ಉಚ್ಚಯ ನಡಿಸಿ ಆ ದೇವಿ ಕಾರ್ಯ ನೆರ್ವೇರಿಸಿ, ಉದಯವಾನ, ಶುಭವಾನ, ದೇವಕಮಲಗಂಧಿ, ಪದ್ಮಾವತಿ, ರತನಶೇಕ ಮಗ, ಇವರನೆಲ್ಲಾ ಕರ್ಕೊಂಡು ಕರಿವೀರ ಪಟ್ಣಕ್ಕೆ ಬಂದ್ಲು ; ಈ ಸುದ್ದಿ ತಿಳಿದು ಆಕಿ ಅತ್ತಿ – ಮಾವ ಪ್ರಜೆರು ಹಾದಿಗೆ ಹಂದ್ರಹಾಕಿ ಬೀದಿಗೆ ಚಳೇವು ಕೊಟ್ಟು ಪಟ್ಣ ಸಿಂಗಾರ ಮಾಡಿ, ಅರಮನಿಗೆ ಬರಮಾಡಿಕೊಂಡ್ರು.

ಹಿ : ಹೌದು.

ಕ : ಮರುದಿವಸ ಅಕಳೇಶ ಮಂತ್ರೀನ ಬರಮಾಡಿಕೊಂಡು ಉದಯವಾನ ಮಹಾರಾಜ ದುರ್ಜಯ ಮಾಡಿದ ವನವಾಸದ ಕತಿ ಎಲ್ಲಾ ಹೇಳಿದಾ. ಮಂತ್ರಿ ತನ್ನ ಮಗ ದುರ್ಜಯನ ದುಷ್ಟತನಕ್ಕೆ ಆದ ಶಿಕ್ಷೆ ಕೇಳಿ ಸಮಾಧಾನನಾದ, ಪ್ರಜೆರೆಲ್ಲಾ ತಮ್ಮ ಶೀಲಾವತಿ ಮಹಾರಾಣಿ ಮಹಾ ಪತಿವ್ರತಾ ಶಿರೋಮಣಿ ಅಂತ್ಹೇಳಿ ಹಾಡಿ ಹೊಗಳಿದ್ರು.

ಹಿ : ಹೌದು.

ಕ : ಹೀಗೆ ಈ ಕತಿ, ಶೀಲಾವತಿ ಕತಿ. ಸುಖರೂಪವಾಗಿ ಮುಕ್ತಾಯ ಆಗೋ ವ್ಯಾಳ್ಯಾದಲ್ಲಿ ನಿಮಗೆಲ್ಲರಿಗೂ ಆ ಪರಮಾತ್ಮ ಒಳ್ಳೇದು ಮಾಡ್ಲೀ ಅಂತ ಹೇಳಿ ಬೇಡಿ ಮಂಗಳಾ ಹಾಡ್ತೇವಿ.

|| ಮಂಗಳ ||

ಶಂಕರಾ ಪಾರ್ವತಿ ಜಯಮಂಗಲಂ
ಶಂಕರಾ ಪಾರ್ವತಿ ಜಯಮಂಗಲಂ || ||
ಕಾಲ ಭಯದ ಮುನಿ ಬಾಲನ ಮುದದಿ
ಪಾಲಿಸು ದೇವಗಿರಿ ವಾಸ ಪಾಲಿಸು ಶಂಕರಾ
ಬಾಲಲೋಲಗೆ ಜಯ ಮಂಗಲಂ ||
ನಿಮ್ಮನು ಸುತ್ತಿಪೆನು ಪಾದಕೆ ನಮಿಪೆನು
ಶಂಕರ ಪಾರ್ವತಿ ಶಿವಭಗವಂತಗೆ ನಮಿಸುತ
ಶಂಕರಾ ಪಾರ್ವತಿ ಜಯಮಂಗಲಂ.