ಕ : ತರಾಕ ಹೋಗ್ತಾನೆ ಈಗ;
ಹಿ : ಹೋಗ್ತಾನೆ.
ಕ : ಹಿಂಗ ಆ ಹೂ ತರಾಕ ಹೋಗ್ತಾನೆ ಅಂದ ತಕ್ಷಣಾನೇ ಆಕಿ ಹೊಟ್ಯಾಗ ಕುಮುಲು ಬಿದ್ದಂಗ ಆತು!
ಹಿ : ಓಹೋ! ಇವನು ಹೂ ತರಾಕ ವೀಳ್ಯಾ ತಗೊಂಡಾನ ಅಂದ ಬಳಿಕ ಆ ಹೂವು ತರಾನೇ ಇವನು!
ಕ: ಅದಕಾಗಿ ಅಲ್ಲಿಯತನಕ ಯಾಕ ಕಳಿಸ್ಬೇಕು! ಇವನು ಈಗ ಓಳ್ಳೇ ಯತ್ನಕ್ಕ ಸಿಕ್ಕ; ಇಲ್ಲೇ ಕೊಲೆ ಮಾಡಿಸಬೇಕು. ನನ್ನ ಮೈ ಮೇಲಿನ ಪೀಡಿ ಹೋಗತೈತಿ- ಅಂದುಕೊಂಡ್ಲು ;
ಹಿ : ವಿಘ್ನಾವತಿ!
ಕ : ಮಹಾರಾಜಾ ಈ ಹುಡುಗ ಹೂವು ತರ್ತೇನಿ ಅಂತಾನೋ?
ಹಿ : ಹೂಂ ತರ್ತಾನಂತೆ.
ಕ : ಹೂ ತರಾ ಹುಡುಗಲ್ರೀ ಇದು.
ಹಿ : ಹಾ….
ಕ : ಹೂವ ತಗಂಬರ್ತೀನಿ ಅಂತ ಹೇಳಿ ವೀಳ್ಯಾ ತಗೊಂಡು ಓಡಿ ಹೋಗೋ ಕಳ್ಳ ಹುಡುಗ ಇದು.
ಹಿ : ಹೌದೆ?
ಕ : ನೋಡ್ರಿ ಇಂಥಿಂಥಾ ಶೂರರು ಬಂದಾರೆ, ಒಬ್ರೂ ವೀಳ್ಯಾ ತಗಂಡಿಲ್ಲ-ಈ ಚಿಕ್ಕ ಪ್ರಾಯದ ಹುಡುಗ ಹೂವು ತರಾದುಂಟೇನ್ರಿ?
ಹಿ : ಹೂವು ತರಾನಲ್ಲ ಇವನು! ನನ್ನ ಇವುನು ಕೋಲ್ಲೋನು!
ಕ : ನನ್ನ ಹೊಟ್ಟಿಶೂಲಿ ಹೋಗೋ ರೀತಿ ಹೇಳ್ತೀನಿ ಕೇಳ್ತೀರಾ?
ಹಿ : ಹೇಳು ಮಡದಿ.
ಕ : ಹೂ ತರಾದೇನು? ವೀಳ್ಯ ತಗೊಂಡಿದ್ದೇನು?- ಎರಡೂ ಒಂದೇ; ಹೂ ತರಾದು ಬೇಕಾಗಿಲ್ಲ. ಈಗ ವೀಳ್ಯಾ ತಗಂಡ ಈ ಹುಡುಗಗ ಒಯ್ದು ಊರ ಮುಂದೆ, ರತ್ನಾವತಿ ಕೆರಿಯಾಗ ಗಲ್ಲಿಗೆ ನನ್ನ ಹೊಟ್ಟಿಶೂಲಿ ಹೋಗ್ತೈತಿ-
ಹಿ : ವಿಘ್ನಾವತಿ ಅಂದ್ಲು.
ಕ : ಹೂವು ತರಾದು ಬ್ಯಾಡ. ವೀಳ್ಯಾ ತಗಂಡಿದ್ದೇ ಹೂವು!
ಹಿ : ಹೌದು!
ಕ : ಆಹಾ! ಉಪಾಯ ಒಳ್ಳೇದೈತಿ; ಎಲೋ ಹೂವು ತಗೊಂಬರ್ತೀನಿ ಅಂತ ಹೇಳಿ ಓಡಿ ಹೋಗಬೇಕು, ನನ್ನ ಮಡದಿ ಕೊಲ್ಲಬೇಕು ಅಂತ ಮಾಡೀಯಾ ಕಳ್ಳ ಹುಡುಗಾ.
|| ಪದ ||
ಕಟ್ರೋ ಇವನ ಹೆಡ ಮುರುಗೀ….ಹರಯನ್ನ ಮಾದೇವಾ
ಮಗನ್ನ ಹಿಡಿಯುತಾರಾ….ಹರಯನ್ನ ಮಾದೇವಾ
ಹೆಡಮುರಗಿ ಬಿಗುದಾರೈಯಾ….ಹರಹರ ಮಾದೇವಾ
ಗಲ್ಲಿಗೆ ಒಯ್ದು ಹಾಕತಾರೇ….ಹರಯನ್ನ ಮಾದೇವಾ
ಕ : ಕಳ್ಳ ಹುಡುಗ! ಇವನು ವೀಳ್ಯಾ ತಗೊಂಡು ಓಡಿ ಹೋಗಬೇಕಂತಾ ಮಾಡ್ಯಾನ! ಬಲಗೈ ರಟ್ಟಿಗೆ ಒಂದು ಹಗ್ಗಾ ಬಿಗದಾರಪ್ಪಾ-ಚಾಂಡಾಲ್ರು! ಚಿಕ್ಕ ಪ್ರಾಯದ ಹುಡುಗನ ಎಡಗೈ ರಟ್ಟಿಗೆ ಒಂದು ಹಗ್ಗ ಬಿಗದ್ರು!
ಹಿ : ಆಹಾ!
ಕ : || ಪದ ||
ರಣಕಂಬ ಹುಗುದಾರೋ ನಡೋ ಕೆರಿಯಾಗ
ಗಲ್ಲಿಗೆ ಹಾಕಾಕ ಮಗನಿಗೆ ಹಿಯ್ದಾರಾ….
ಹಿ : ಆಹಾ!
ಕ : ಕಳ್ಳ ಕಳ್ಳ ಅಂತ್ಹೇಳಿ ಜನಜಾತ್ರಿ ನೋಡತೈತಿ! ಗಲ್ಲಿಗೆ ಹಾಕೋದು ನೋಡಿಲ್ಲಂತ್ಹೇಳಿ ಆ ಕೆರಿ ಅಂಗಳದಾಗ ಬಂದು ನಿಂತು ನೋಡ್ತಾ ಅದಾರೆ! ಸೂರ್ಯ ಚಂದ್ರಾಮನಂಥಾ ಮಗನ್ನ ತಂದು ಗಲ್ಲಿಗೆ ಹಾಕಬೇಕು ಅನ್ನೋ ವ್ಯಾಳ್ಯಾದಲ್ಲಿ ನೆರೆದ ಸಭಾ ಮಿಡಕತೈತಿ ನೋಡ್ರಿ!
ಹಿ : ಹೌದು.
ಕ : ತಮ್ಮಾ ಏನ್ಮಗ ಇವನು!
ಹಿ : ಹೌದು!
ಕ : ‘ಹಾಂ’ ಅಂದದ್ದಲ್ಲ, ಆಡಿದ್ದಲ್ಲ, ತಪ್ಪಿಲ್ಲ, ತಡಿಯಿಲ್ಲ, ಅನ್ಯಾಯವಿಲ್ಲ, ಪಾಪವಿಲ್ಲ
ಹಿ : ಹೌದು!
ಕ : ವೀಳ್ಯ ತಗೊಂಡಿದ್ದೇ ತಪ್ಪಂತೆ! ಹೂ ತರ್ತೀನಿ ಅಂತ ಹೇಳಿದ್ದಕ್ಕೇ ಇವನಿಗೆ ತಂದು ಗಲ್ಲಿಗೆ ಹಾಕಾಕ ಹತ್ಯಾರಲ್ಲೊ!
ಹಿ : ಎಲ್ಲರೂ ಮರುಗತಾ ಇದ್ದಾರೆ.
ಕ : ಮುತ್ತುಶೆಟ್ಟಿ ಸಾಹುಕಾರ ಮನಿ ಹೊರಗ ಬಂದು ನೋಡ್ತಾನೆ-
ಹಿ : ಹೌದು!
ಕ : ಆ ಓಣಿ ನಾಗಮ್ಮಾ ಅಂಬೋ ಮುದುಕಿ ಓಡೋಡಿ ಬರ್ತಾ ಐತಿ! ಶೆಟ್ಟಿಗೆ ಆಶ್ಚರ್ಯ ಆತು.
ಹಿ : ಏನಜ್ಜಿ ಎಲ್ಲಿಗೆ ಹೋಗ್ತೀ ನೀನು ಹಿಂಗ ಅವಸರಾ ಬವಸರಾ?
ಕ : ತಮ್ಮಾ ಮುತ್ತುಸೆಟ್ಟೀ, ಗೊತ್ತಿಲ್ಲ ನಿನಗೆ? ಏನಪ್ಪಾ ಇಲ್ಲೇ ಬಾಜಾರದಾಗ ಅದಿಯಲ್ಲೊ! ಯಾವುದೋ ಒಂದು ಹುಡುಗ ಬಂದಾನಂತ ನಮ್ಮೂರಿಗೆ! ಆತನ್ನ ತಗೊಂಡು ಹೋಗಿ ನಮ್ಮ ರಾಜಾಧಿರಾಜನೇ ಗಲ್ಲಿಗೆ ಹಾಕಾಕ ಒಯ್ದಾನಂತೆ! ನೋಡಾಕ ಹೊಂಟೀನಿ; ನಾನೆಂದೂ ಅಂತಾದನ್ನ ನೋಡಿದಾಕಿ ಅಲ್ಲ-ಅಂದ್ಲು ಮುದುಕಿ.
ಹಿ : ಆಹಾ!
ಕ : ಆ ಕೂಡ್ಲೇ ಶೆಟ್ಟಿ ಓಡೋಡಿ ಓಡೋಡಿ ಕೆರಿ ಅಂಗಳದಾಗ ಬಂದು ನೋಡತಾನೆ- ಮಗನಿಗೆ ಗಲ್ಲಿಗೆ ಹಾಕಾಕ ಹತ್ಯಾರೆ!
ಹಿ : ಆಹಾ ಚಿತ್ರೋಸೇನ ಮಹಾರಾಜಾ ಸಮಾಧಾನ ಮಾಡ್ರಿ.
ಕ : ನೀವು ಗಲ್ಲಿಗೆ ಹಾಕೋದಕ್ಕ ಇನ್ನೂ ಮೂರು ತಾಸು ವಾಯಿದಾ ಐತ್ರೀ. ಏನು ಮಾಡ್ಯಾನ್ರೀ, ಈ ಹುಡುಗ ನೀವು ಹಿಂಗ ಗಲ್ಲಿಗೆ ಹಾಕಾಕ, ಚಿತ್ರೋಸೇನ ಮಹಾರಾಜಾ, ಮಂತ್ರೀಯವರೇ?
ಹಿ : ಶೆಟ್ಟೀ
ಕ : ಹೇಳ್ರೀ,
ಹಿ : ವೀಳ್ಯಾ ತಗೊಂಡಾನ ಶಿವಜಾತ-ಪಾರಿಜಾತ ಹೂವು ತರಾಕ!
ಕ : ಅದಕ್ಕೇ ಇವನಿಗೆ ಗಲ್ಲಿಗೆ ಹಾಕ್ತೀವಿ- ಈ ಕಳ್ಳ ಹುಡುಗ ತರೋನಲ್ಲ ಮೋಸ ಮಾಡ್ತಾನ ಅಂತ್ಹೇಳಿ!
ಹಿ : ಆಹಾ!
ಕ : ಕಳ್ಳ ಹುಡುಗಾ ಅಂತ ಜಲ್ಮ ಕಳಿತೀರಾ?
ಹಿ : ಹೌದು.
ಕ : ಹಂಗ ಮಾಡಬ್ಯಾಡ್ರಿ ; ಪರಿಶೋಧನಾ ಮಾಡ್ರಿ ; ವೀಳ್ಯಾತಗೊಂಡಿದ್ದಾನು.
ಹಿ : ಹೌದು.
ಕ : ಒಳ್ಳೇದು, ಹೂವು ತರಾಕ ಕಳಿಸ್ರಿ; ಅವನು ಹೋಗಿ ತರಲಿಲ್ಲಾ – ನನಗೆ ಒಯ್ದು ಗಲ್ಲಿಗೆ ಹಾಕ್ರಿ ; ತಂದ್ರ ಅವನಿಗೂ ಬಿಡ್ರಿ ನನಗೂ ಬಿಡ್ರಿ.
|| ಪದ ||
ಹುಡುಗನ ಜಲ್ಮಕ ಜಾಮೀನು ನಾನೈ…….
ಎಂಟು ದಿವಸ ವಾಯಿದೀ ಕೊಡ್ರಿ ಹುಡ್ಗುಗಾ……..ಹರಯನ್ನ ಮಾದೇವಾ
ಗುರುವಿನ ಮಾರ್ಗ ನೆನಹೂತಾ…….ಹರಯನ್ನ ಮಾದೇವಾ
ಹಿ : ಆಹಾ!
ಕ : ಇವತ್ತು ಸೋಮವಾರ; ಇವತ್ತಿಗೆಂಟು ದಿವಸಕ್ಕ ಹೂವ ತಂದ್ರ ನನಗ ಬಿಡ್ರಿ ; ಇಲ್ಲಾಂದ್ರೆ ನನಗೆ ಒಯ್ದು ಗಲ್ಲಿಗೆ ಹಾಕ್ರಿ ನಾನು ಜಾಮೀನು ಆಗ್ತೀನಿ ಅಂದ.
ಹಿ : ರಾಜಗ ಮಾತಾಡಾಕ ಸಾಧ್ಯ ಆಗಲಿಲ್ಲ!
ಕ : ಒಳ್ಳೇದು; ತಗದು ಬಿಡ್ರೋ ತಮ್ಮಾ ಗಲ್ಲು; ಬಿಡ್ರಿ, ಕೈಬಿಡ್ರಿ ಹುಡುಗನ್ನ – ಅಂದ ರಾಜ; ಎಲ್ಲಾ ಜನಾ ಆನಂದಾತು. ಹುಡುಗನ ಸೆರೆ ಬಿಡಿಸಿದ ಶೆಟ್ಟಿ!
ಹಿ : ಸೆರೆ ಬಿಡಿಸಿ ಪುಣ್ಯ ಮಾಡಿದ ಶೆಟ್ಟಿ!
ಕ : ಹಿಗ್ಗಿ ಎಲ್ಲಾ ಜನ ಹೋಗಿ ಬಿಡ್ತು ವಾಪಾಸು. ರಾಜಕುಮಾರ ಮಗನಿಗೆ ಕರಕೊಂಡು ಮನಿಗೆ ಬಂದ – ಮುತ್ತುಸೆಟ್ಟಿs.
ಹಿ : ಹೌದು.
ಕ : ಅಪ್ಪಾ, ನಾನು ಹೋಗಬ್ಯಾಡ ಬಜಾರದಾಗ ಅಂದ್ರ ನನ್ನ ಮಾತು ಮೀರಿ ಹೋಗಿ ರಾಜನ ಕೈಲಿ ಸಿಕ್ಕೊಂಡಿ! ನಿನ್ನ ಪ್ರಾಣಾ ತೆಗೀತಿದ್ದನಲ್ಲೋ ಈಗ! ತಾಯ್ನೋರು ಏನು ಮಾಡಬೇಕು ಹೇಳು? ಕಣ್ಣಿಲ್ಲದ ಕವಾಜಿಗಳು!
ಹಿ : ಆಹಾ!
ಕ : ನಡಿಯಪ್ಪಾ ನಿನ್ನ ಗವಿಗೆ ; ಹೂವು ತರಾಕ ಹೋಗಬ್ಯಾಡ. ಅವು ಎಲ್ಲಿ ಅದಾವು ಯಾರಿಂದ್ಲು ತರಾದು ಸಾಧ್ಯ ಆಗೋದಿಲ್ಲ!
ಹಿ : ಹೌದು.
ಕ : ಏಳು ಸಮುದ್ರದಾಚಿಗಂತೆ! ನಿನ್ನ ಕೈಲಾದೀತೇನೋ – ಹೂ ತರೋದು.
ಹಿ : ಸಾಧ್ಯ ಇಲ್ಲ ಬಿಡ್ರಿ!
ಕ : ಗವೀಗೆ ಹೋಗಿ ನಿನ್ನ ತಾಯಿಗಳ ಜೋಪಾನ ಮಾಡು. ಇವತ್ತಿಗೆ ಎಂಟು ದಿನಗಳಲ್ಲಿ ನನ್ನ ಗಲ್ಲಿಗೆ ಹಾಕುವಲ್ಲರ್ಯಾಕೆ; ನೀನು ಮಾತ್ರ ಹೋಗಬ್ಯಾಡ ಆ ಹೂವು ತರಾಕ –
ಹಿ : ಅಂದ ಮುತ್ತುಶೆಟ್ಟಿ.
ಕ : ನನೀಗೆ ಜಾಮೀನಾಗಿ, ಹೂತರಾಕ ಹೋಗಬ್ಯಾಡ ಅಂದು ಗಲ್ಲಿಗೆ ಗೋಣು ಕೊಡುತೇನಿ ಅಂತಾನಲ್ಲ ಈ ಪುಣ್ಯಾತ್ಮ!
ಹಿ : ಆಹಾ!
ಕ : ಆಗಲ್ರೀ ಹೋಗ್ತೀನಿ ಗವೀಗೆ – ಅಂತ್ಹೇಳಿದ.
ಹಿ : ಒಂದು ಮೈಲಿ ದೂರತನನ ಮುತ್ತುಶೆಟ್ಟಿ ಬಂದು ರಾಜಕುಮಾರನ್ನ ಕಳಿಸಿ ಮನಿಗೆ ಹೋದ.
ಕ : ಎರ್ಥಾ ಮಗ ಸತ್ತುಹೋಗುತ್ತಿದ್ದ ನಾನು ಹೊಗ್ಲಿಲ್ಲದ್ರೆ! ಅಂತ್ಹೇಳಿ ಶೆಟ್ಟಿ ಊರಾಗ ಆಡಿಕೊಂಡ.
ಹಿ : ಹೌದು.
ಕ : ಇತ್ತಕಡಿಗೆ ಎರಡು ಮೈಲು ಬಂದು ಮಗ ನಿಂತುಗೊಂಡು ಆಲೋಚಿನಿ ಮಾಡ್ತಾ ಅದಾನೆ-
ಹಿ : ಏನಂತ?
ಕ : ಯಾವ ಕಡಿಗೆ ಹೋಗಲಿ ಈಗ? ತಾಯಿನೋರು ಬೇಕಂತ ಗವೀಗೆ ಹೋದ್ರ ಮುತ್ತುಸೆಟ್ಟಿ ಸಾಹುಕಾರ ಸಾಯ್ತಾನ ; ಹೂವು ತರಾಕ ಹೋದ್ರೆ ತಾಯಿನೋರಿಗೆ ಕಷ್ಟ ಬರತೈತಿ; ಅವರ್ನ ಜೋಪಾನ ಮಾಡೋರು ದಿಕ್ಕಿಲ್ಲಧಂಗಾಕ್ಕೈತಿ.
ಹಿ : ಆಹಾ ಎಂಥಾ ಅನುಸಂಕಟ!
ಕ : ನನ್ನ ತಾಯಿನೋರು ಇದ್ದರೇನು; ಸತ್ತರೇನು ಶೆಟ್ಟೀ ಪ್ರಾಣ ನಾನು ಉಳಿಸಬೇಕು- ಅಂದ ಮಗ!
ಹಿ : ಓಹೋ!
ಕ : ವನವಾಸ ನಡದ – ಹೂ ತರಾಕ! ಒಂದು ಗಾವುದಾ, ಎರಡು ಗಾವುದಾ, ಮೂರು ಗಾವುದಾ! ವಸ್ತಿ ಮಾಡಿಕೊಂತಾ, ವಸ್ತಿ ಮಾಡಿಕೊಂತಾ ಹೋಗಬೇಕಾದ್ರೆ, ದಾರಿಯೊಳಗೆ ನೀರಡಿಕಿಯಾಗಿತ್ತು – ನೋಡ್ರಿ ಹುಡುಗ್ಗಾ;
ಹಿ : ಅಡಿವ್ಯಾಗ!
ಕ : ನೀರು ನೀರು ನೀರು ಅಮ್ತ ಅಂಬ್ಲಿಕೊಂತ ಹೋಗಬೇಕಾದ್ರೆ ಅಲ್ಲಿ ಒಂದು ಕಮಲಾವತಿ ಕೆರೆ ಒಣಗಿ ಹೋಗಿತ್ತು ; ಒಂದು ಎತ್ತಿನ ಹೆಜ್ಜಿ ಕುಣಿಯಾಗ ಒಂದು ಬೊಗಸಿ ನೀರು ಇರಬೇಕಾದರೆ, ಆ ಬೊಗಸಿ ನೀರಿನಾಗs ಒಂದು ಕಲ್ಲೇಡಿ ಕುಂತಿತ್ತು!
ಹಿ : ಓಹೋ!
ಕ : ಇಲ್ಲಿ ನೀರು ಅದಾವು- ಕುಡೀಬೇಕು ಅಂತ್ಹೇಳಿ ಬಂದು ಕುಂತಾಗ ಆ ಕಲ್ಲೇಡಿ ನೋಡ್ತು; ಮಾರಾಯಾ ರಾಜಾಧಿರಾಜಾ, ಈ ನೀರು ಕುಡಿಬ್ಯಾಡ ನಾನು ಸಾಯ್ತೀನಿ-
ಹಿ : ಅಂತು ಕಲ್ಲೇಡಿ.
ಕ : ಓಹೋ! ಕಲ್ಲೇಡೀ ನೀನು ನೀರು ಕೊಡ್ಲಿಲ್ಲದಿದ್ರೆ ನನ್ನ ಪ್ರಾಣ ಹೋಗ್ತೈತಿ ಈಗ ; ನೀನು ಕಡಿಗೆ ಬಾ, ನಿನ್ನ ನೀರ ನಾನು ಕುಡಿತೀನಿ
ಹಿ : ನನ್ನ ಪ್ರಾಣದ ಗತಿ?
ಕ : ನೀನೇನೂ ಚಿಂತಿ ಮಾಡಬ್ಯಾಡ ಕಲ್ಲೇಡೀ; ನೀರು ಇದ್ದಲ್ಲಿ ಬಾವ್ಯಾಗಾಗಲೀ ಸಮುದ್ರದಾಗ ಆಗಲೀ ನಿನ್ನ ಒಯ್ದು ಬಿಡ್ತೀನಿ – ಅಂದ ರಾಜಕುಮಾರ.
ಹಿ : ಓಹೋ!
ಕ : ಕಲ್ಲೇಡಿ ಕಡಿಗೆ ಬಂತು; ಚಂದ್ರೋಜಿಕುಮಾರ ಆ ಬೊಗಸಿ ನೀರು ಕುಡಿದ.
ಹಿ : ಹೌದು.
ಕ : ಆ ಕಲ್ಲೇಡಿಗೆ ತಗೊಂಡುರಾಜಕುಮಾರಏರಿಮ್ಯಾಲೆ ಒಂದು ಅಳ್ಳೀಮರಕ್ಕೆ ಒಂದು ಕಲ್ಲು ಒಗದ – ಮೂರು ಎಲಿ ಉದುರಿದುವು. ಆ ಎಲಿ ದೊಣ್ಣಿ ಕಟ್ಟಿ ಆ ಕಲ್ಲೇಡಿ ಇಟ್ಟು ಗೊಂಡುಮುಂದಕ್ಕ ಎರಡು ಹರ್ದಾರೀ ಬರಬೇಕಾದ್ರೆ – ಅಲ್ಲಿ ಖಾಸ್ಬಾಗ್ ವನಾಂತ್ರ!
ಹಿ : ಹೌದು.
ಕ : ಆ ವನಾಂತರದಾಗ ಒಂದು ಮಾವಿನ ಮರದ ಕೆಳಗೆ ಆ ಕಲ್ಲೇಡಿನ ಮಗ್ಗಲದಾಗ ಇಟ್ಟಗೊಂಡು “ಬ್ಯಾಸರ ಆಗೈತಿ- ಕಲ್ಲೆಡೀ, ಸ್ವಲ್ಪ ಮಲಗತೀನಿ” ಅಂತ್ಹೇಳಿ ಮಲ್ಕೊಂಡ ಚಂದ್ರೋಜಿಕುಮಾರ.
ಹಿ : ಆ ಖಾಸ್ಬಾಗಕ್ಕ ಏನು ಕಾವಲು ಅದಾವರೀ?
ಕ : ಒಂದು ಕರೇ ಕಂಚಾಣ ಕಾಗೆ, ಒಂದು ಕರೇ ಸರ್ಪ!
ಹಿ : ಏಳೆಡಿ ಸರ್ಪ!
ಕ : ಆ ಮಾವಿನ ಮರದ ಬುಡದಾಗs ಇರೋ ಹುತ್ತದಾಗ ಅದು ಐತ್ರಿ ; ಆ ಮರದಾಗ ಐತ್ರಿ ಕಾಗಿ. ಯಾರಾದ್ರೂ ನರಮಾನವರು ಬಂದು ವನಾಂತರದಾಗ ಮಲಕ್ಕೊಂಡ್ರೆ ಅವ್ಯ್-
ಹಿ : ಏನು ಮಾಡ್ತಾವರೀ?
ಕ : ಅವೆರಡೂ ಜೀವದ ಗೆಳೆಯರು! ಕಾಗಿ ಕಾವ್ ಕಾವ್ ಕಾವ್ ಅಂತ ಕೂಗಿದಾಗ ಸರ್ಪ ಬಂದು ಅಲ್ಲಿ ವಸ್ತೀ ಮಾಡಿದವರ ಕಚ್ಚತೈತಿ! ಏಸೋ ಮಂದಿ ಜಲ್ಮಾ ತಕ್ಕೊಂಡಾವ ಎರಡೂ ಸೇರಿ!
ಹಿ : ಹೌದು!
ಕ : ಈ ಚಂದ್ರೋಜಿ ಕುಮಾರ ಬಂದು ಮರದ ಕೆಳಗೆ ಮಲಗಿಕೊಂಡ ಟೈಮಿನಾಗಕಾಗಿ ಇರಲಿಲ್ಲ.
ಹಿ : ಸಮುದ್ರದ ಕಡಿಗೆ ಮೀನ ಮೇಯಾಕ ಹೋಗಿತ್ತು.
ಕ : ಸರ್ಪ ಹುತ್ತದಾಗಿತ್ತು-
ಹಿ : ಮಲಗಿತ್ತು!
ಕ : ಕಾಗಿ ಹಾರಾಡ್ತಾ ವನಾಂತರಕ್ಕೆ ಬಂತು – ವಾಪಾಸು. ರಾಜ ಮಲಕ್ಕೊಂಡಿದ್ದನ್ನು ಮರದ ಮ್ಯಾಲೆ ಕುಂತು ನೋಡಿತು; ಓಹೋ ಯಾರೋ ನರಮಾನವರು ಬಂದು ನಮ್ಮ ವನಂತಾರದಾಗ ಮಲ್ಕೊಂಡಾನ! ನನ್ನ ಗೆಳಿಯಗ ಕರೀಬೇಕು.
ಹಿ : ಕಾವ್ ಕಾವ್ ಕಾವ್-
ಕ : ಅಂತ್ಹೇಳಿ ಮೂರೇಟಿ ಕಾಗಿ ಕೂಗಿದಾಗ ಸರ್ಪ ಎಚ್ಚರಾಗಿ ಹೊರಗಡಿಗೆ ಬಂದು ಬೋರಾಡಿಕೊಂತ ನೋಡತೈತಿ!
ಹಿ : ರಾಜ ಮಲ್ಕೊಂಡಾನ!
ಕ : ಆರ್ಭಟ ಮಾಡ್ಕೊಂತಾ ಸರ್ಪ ಹೋಗಿ
|| ಪದ ||
ರಾಜನ ಕಿರುಬೆರಳು ಕಚ್ಚೈತೆ……ಹರಯನ್ನ ಮಾದೇವಾ
ರಾಜ ಮಲ್ಕೊಂಡೇ ಪ್ರಾಣಾ ಬಿಟ್ಟಾನಾ……ಹರಯನ್ನ ಮಾದೇವಾ
ರಾಜನ ಜಲ್ಮ ಹೋಗೈತ್ರೀ…….ಹರಯನ್ನ ಮಾದೇವಾ
ಕ : ಸರ್ಪಕಚ್ಚಿದಾಗ ರಾಮಾ ರಾಮಾ ಅಂತ್ಹೇಳಿ ಪ್ರಾಣ ಬಿಟ್ಟ ಮೆಗಾ!
ಹಿ : ಹೌದೂ!
ಕ : ಕಾಗಿ ಮರದ ಮ್ಯಾಲೆ ಕುಂತಿತು; ಸರ್ಪ ಹುತ್ತದಾಗ ಹೋತು;
ಹಿ : ಓಹೋ!
ಕ : ರಾಜನ ಜಲ್ಮ ಹೋದದ್ದ ಕಲ್ಲೇಡಿ ನೋಡಿ – ದೇವಾ, ನನಿಗೆ ನೀರಾಗ ಬಿಡ್ತೀನಿ ಅಂದ ರಾಜ ಎರ್ತಾ ಪ್ರಾಣ ಬಿಟ್ಟ! ಇದು, ಮೋಸ ಮಾಡಿದ್ದು ಕಾಗೆ (ರಾಗವಾಗಿ) ಇದಕ್ಕೇನು ಉಪಾಯ ಮಾಡಬೇಕೂ-
ಹಿ : ಅಂತು ಕಲ್ಲೇಡಿ.
ಕ : ರಾಜನ್ನ ಬಿಟ್ಟು ಒಂದು ಮಾರು ದೂರ ಹೋಗಿ ಕಣ್ಣುಗಳ ಮುಚ್ಚಿಕೊಂಡು ಸತ್ತಾಂಗ ಬಿತ್ತು ನೋಡ್ರಿ – ಆ ಕಲ್ಲೇಡಿ! ಅದು ಸತ್ತಾಂಗ ಬೀಳುತ್ಲೇ ಕಾಗಿ ಕಣ್ಣು ಅದರ ಮ್ಯಾಲೆ ಬಿತ್ತು!
ಹಿ : ಓಹೋ
ಕ : ನನಿಗೆ ತಕ್ಕ ಆಹಾರ ಇಲ್ಲಿ ಬಂದು ವನಾಂತರದಾಗ ಬಿದ್ದೈತಿ-ಕಲ್ಲೇಡಿ!
ಹಿ : ಆಹಾ!
ಕ : ನಾನು ತಿನ್ನಬೇಕು ಅಂತ್ಹೇಳಿ ಕಾಗಿ ಬುರ್ರ್ ನ ಹಾರಿ ಕಲ್ಲೇಡೀ ಡುಬ್ಬದ ಮೇಲೆ ಕುಂತ್ಗೊಂಡು, ಸತ್ತೈತಿ ಅಂತ್ಹೇಳಿ ತನ್ನ ಮೋತಿಲೆ ಕುಕ್ಕಿ ತಿನ್ನಾಕ ಸಜ್ಜಾಗೈತಿ!
ಹಿ : ಹೌದು!
ಕ : ಹವಣಿಕಿ ಮಾಡಿ, ಹವಣಿಕಿ ಮಾಡಿ ಆ ಸತ್ತಹಾಂಗ ಬಿದ್ದಂಥ ಕಲ್ಲೇಡಿ, ಗಪ್ಪನs ಗೋಣು ಹಿಡದು ಬಿಟ್ಟಿತು!
ಹಿ : ಆಹಾ!
ಕ : ಕಾಗಿ ಲಪಟಪ ಲಪಟಪ ಒದ್ದಾಡತೈತಿ!
ಹಿ : ಹಾ!
ಕ : ಓಹೋ ಕಲ್ಲೇಡೀ ನನ್ನ ಕೊಲ್ಲಬೇಡಾ-ಅಂತು ಕಾಗಿ!
ಹಿ : ಆಹಾ!
ಕ : ಕೊಲ್ಲಬ್ಯಾಡಾ ಅಂತೀಯಾ ಕಾಗಿ ರಾಜಾ? ನಮ್ಮ ರಾಜನ ಜಲ್ಮ ಬದುಕುಸು – ನಿನ್ನ ಬಿಡ್ತೀನಿ, ಇಲ್ಲಂದ್ರ ನಿನಿಗೆ ಎರಡು ತುಂಡು ಮಾಡಿಬಿಡ್ತೀನಿ – ಅಂತು!
ಹಿ : ಅಯ್ಯಯ್ಯೋ ಬದುಕುಸ್ತೀನಿ ಬಿಡಪಾ;-
ಕ : ಮಾರಾಯಾ ನಿಮ್ಮ ರಾಜನ್ನ ಜಲ್ಮ ಪಡಿತೀನಿ ; ಸ್ವಲ್ಪ ನನ್ನ ಗೋಣು ಸೈಲು ಮಾಡಪಾ; ನನ್ನ ಗೆಳಿಯಾನಿಗೆ ಕರಿತೀನಿ-ಅಂತು ಕಾಗಿ.
ಹಿ : ಕಾವ್ ಕಾವ್ ಕಾವ್
ಕ : ಅಂತ ಮತ್ತೆ ಮೂರೇಟು ಕೂಗಿದಾಗ ಸರ್ಪ ಬೈಲಿಗೆ ಬಂದು ನೋಡಿದಾಗ ಕಲ್ಲೇಡಪ್ಪನ ಕೊಂಡ್ಯಾಗ ಕಾಗೆಪ್ಪನ ಗೋಣು ಸಿಕ್ಕೊಂಡೈತ್ರಿ!
ಹಿ : ಏನೋ ಕಾಗಿರಾಜಾ ಗೆಳೆಯಾ?
ಕ : (ರಾಗವಾಗಿ) ಆಹಾ ಮಾರಾಯಾ ನಾನು ತಿನ್ನಬೇಕು ಅಂತ ಬಂದಾಗ ಈ ಕಲ್ಲೇಡಿ ನನಗೆ ಹೀಡದೈತೀ…..ರಾಜನ ಜಲ್ಮ ಬದುಕಿಸಿದ್ರೆ ಬಿಡ್ತಾನಂತೆ ಗೋಣಾ….ಇಲ್ಲಂದ್ರೆ ಎರಡು ತುಂಡು ಮಾಡ್ತಾನಂತೆ…..ಹಮ್ಗನ್ನ ಮಾಡಿ ರಾಜನ ಜಲ್ಮ ಪಡಿ ನಾಗರಾಜಾ….
ಹಿ : (ರಾಗವಾಗಿ) ಹೌದು ನಾಗರಾಜಾ!
ಕ : ಅಯ್ಯೋ ಅಯ್ಯೋ ನನ್ನ ಗೆಳೆಯ ಸಾಯ್ತಾನ ಅಂತ್ಹೇಳಿ, ಆ ಸರ್ಪ ನೋಡ್ರಿ, ಎಲ್ಲಿ ಬಾಯಿ ಹಾಕಿ ವಿಷ ಬಿಟ್ಟಿತೋ ಅಲ್ಲೆ ಬಾಯಿ ಹಾಕಿ ಬಿಟ್ಟ ವಿಷಾನೆಲ್ಲಾ ಎಳಕೊಂಡು ಬಿಡ್ತು!
ಹಿ : ಆಹಾ!
ಕ : ಯಾವಾಗ ಸರ್ಪ ವಿಷ ಎಳಕೊಂಡಿತೋ, ಶಿವಶಿವ ಅಂತ ಚಂದ್ರೋಜಿಕುಮಾರ ಎದ್ದು ಕುಂತ!
ಹಿ : ಆಹಾ!
ಕ : ಮನುಷ್ಯನಿಗಿರೋ ವಿಷ ಸರ್ಪಕ್ಕೂ ಏರಿಬಿಡ್ತು ; ಅಲ್ಲೇ ಮಲ್ಕೊಂಡೇ ಪ್ರಾಣ ಬಿಡ್ತು ಅದು ;
ಹಿ : ಚಂದ್ರೋಜಿಕುಮಾರ ಆರಾಮಾದ!
ಕ : ಕಲ್ಲೇಡಪ್ಪನ ಕೊಂಡ್ಯಾಗ ಸಿಕ್ಕೊಂಡಿತ್ತಲ್ಲ-ಕಾಗಿ,
ಹಿ : ಕಂಚಾಣಿ ಕರೇ ಕಾಗಿ,
ಕ : ಬಿಡಪ್ಪಾ ಗೆಳೆಯಾ ನನ್ನ ಗೋಣನ,
ಹಿ : ಮೊದ್ಲು ಬಿಡು ಗೆಳಿಯಾ…..
ಕ : ಬಿಡ್ತೀನಪ್ಪಾ ತಡೀ; ಅಲ್ಲೋ, ಹೀಂಗ್ಮಾಡಿ ನೀವು ಏಸು ಮಂದಿ ಕೊಲಿ ಮಾಡಿದ್ರಿ? ಅಂದದ್ದೇ ಕಾಗೀಗೋಣು ಕತ್ತರಿಸಿ ಎರಡು ತುಂಡು ಮಾಡೇತಿ – ಏಡಿ!
ಹಿ : ಕಾಗೀ ಪ್ರಾಣಾ ಕಳೀತು ಏಡಿ!
ಕ : ಅಪ್ಪಾ ಕಲ್ಲೇಡೀ ನೀನು ನನಗ ಬಹಾಳ ಉಪಕಾರ ಮಾಡಿದಿ. ಇದೋ ಈ ಬಾವಿ ತುಂಬಿ ತುಳುಕಾಡತೈತಿ ; ಈ ಬಾವ್ಯಾಗ ಇರು ಅಂತ್ಹೇಳಿ ಏಡಿಗೆ ಬಿಟ್ಟ ಚಂದ್ರೋಜಿಕುಮಾರ.
ಹಿ : ಆಹಾ!
ಕ : ಅದಕ್ಕ ಕಲ್ಲೇಡಿ ಹೇಳಿತು-ಅಪ್ಪಾ, ಚಂದ್ರೋಜಿಕುಮಾರಾ, ನೀರಿಲ್ಲದ ಕೆರಿ ಜಾಗದಾಗ ಇದ್ದು ಪ್ರಾಣಾ ಬಿಡ್ತಿದ್ದೆ-ನಾನು; ಈ ತುಂಬಿದ ಬಾವ್ಯಾಗ ನನಗ ಬಿಟ್ಟು ನೀನು ಮುಂದೆ ಹೊರಟೀ-ಶಿವಜಾತ-ಪಾರಿಜಾತ ಹೂ ತರಲಿಕ್ಕೆ!
ಹೋದಂಥಾ ಕಾರ್ಯ ಕೈಗೂಡ್ಲಿ ಅಂತ ಏಡಿ ಆಶೀರ್ವಾದ ಮಾಡಿತು.
ಹಿ : ಆಹಾ!
ಕ : ಆ ವನಾಂತರ ಬಿಟ್ಟು ಎರಡು ಹರದಾರಿ ಬರಬೇಕಾದರೆ ಸಮುದ್ರದ ದಂಡ್ಯಾಗ, ಅಲ್ಲಿ ಯಾರ ಮಠಾ ಐತ್ರೀ?
|| ಪದ ||
ಒಬ್ಬ ತೋರಂಗಿ ಬಾಬಾನ ಮಠ ಐತ್ರೀ….ಹರಯನ್ನ ಮಾದೇವಾ
ಗುರುವಿನ ಪಾದ ಶಂಕರಾ….
ಕ : ತೋರಂಗೀ ಬಾವಾ ವೇದಾಂತ ಋಷಿ, ತೀರ್ಥಮುನಿ! ಅವನಿಗೆಒಬ್ಬ ಮಗಳಿದ್ದಾಳೆ; ಆಕೀ ಹೆಸರು ಕಾಳಾವತಿ.
ಹಿ : ತೋರಂಗೀ ಬಾವನ ಮಗಳು ಕಾಳಾವತಿ!
ಕ : ಆ ಕಾಳಾವತಿ ಋತುಮತಿ ಆದಾಕಿ; ಅದರ ಆಕಿ ಹುಟ್ಟಿದ ಮಗಳು ಅಲ್ಲಪಾ-ಸಾಕು ಮಗಳು.
ಹಿ : ತೋರಂಗೀ ಬಾವ ಜ್ವಾಪಾನ ಮಾಡ್ಯಾನ- ಆ ಮಗಳಿಗೆ!
ಕ : ಚಂದ್ರೋಜಿಕುಮಾರ ತನ್ನ ಮಠಕ್ಕ ಬಂದದ್ದನ್ನ ಬಾವಾ ನೋಡಿದ.
ಹಿ : ಆಹಾ!
ಕ : ನಮೋ ನಮೋ ನಮಸ್ಕಾರ ತೋರಂಗಿ ಬಾವಾಗಳೇ.
ಹಿ : ನಮಸ್ಕಾರ ಬಾರಪ್ಪಾ; ಯಾರಪ್ಪಾ ನೀನು?
ಕ : ನಾನು ವನವಾಸಿಗ-ತಾತಾ, ತೋರಂಗಿ ಬಾವಾಗಳೇ! ಘೋರಾರಣ್ಯದಲ್ಲಿ ಗವಿಯೊಳಗೆ ಏಳು ಮಂದಿ ತಾಯ್ನೋರು ಅದಾರೆ ನನಗೆ; ಹಡದ ಮಾತೆ-ಪದ್ಮಾವತಿ. ಅವರ ಗರ್ಭದಲ್ಲಿ ಉದ್ಭವಿಸಿದ ನನ್ನ ಹೆಸರು ಚಂದ್ರೋಜಿಕುಮಾರ.
ಹಿ : ಆಹಾ!
ಕ : ಚಂದ್ರೋಜೀ, ನನ್ನ ಮಗಳಿಗೆ ತಕ್ಕ ವರ ನೀನು.
ಹಿ : ತಕ್ಕವರ!
ಕ : ಪರಮಾತ್ಮನೆ ಕಳಿಸಿದಾನೆ ನಿನ್ನ; ನನ್ನ ಮಗಳು ಕಾಳಾವತಿಗೆ ಲಗ್ನ ಆಗಬೇಕಲ್ಲ ನೀನು?
ಹಿ : ನಾನು ಬಂದ ಕಾರ್ಯ ಬೇರೆ, ಸಾಧ್ಯವಿಲ್ಲ ಗುರುವೇ. ಆದರೆ ನಿಮ್ಮ ಆಜ್ಞೆ, ಶಾಸ್ತ್ರೋಕ್ತ ಮದುವಿವೊಂದು ಆಗಲಿ.
ಕ : (ರಾಗವಾಗಿ) ಮಗಳೇ ಕಾಳಾವತೀ, ನಿನಗೆ ತಕ್ಕ ವರ ಬಂದೈತಿ ಮಗಳೇ…
ಹಿ : (ರಾಗವಾಗಿ) ಹೌದೇ…
ಕ : ಶಾಸ್ತ್ರೋಕ್ತದಿಂದ ಮಗಳ ಕೊರಳಿಗೆ ಮಾಂಗಲ್ಯ ಕಾರ್ಯ ಮಾಡಿಸಿ ಲಗ್ನಮಾಡಿದ; ತೋರಂಗೀ ಬಾವಾ ಆಶೀರ್ವಾದ ಮಾಡಿದ-
ಹಿ : ಓಹೋ ಅಪ್ಪಾ ಚಂದ್ರೋಜಿಕುಮಾರಾ, ಮಗಳು ಕಾಳಾವತೀ, ಸತಿ-ಪತಿ ಒಂದಾಗಿ ಇರ್ರಿ ಇಲ್ಲೇ – ಮಠದಾಗ.
ಕ : ಆಹಾ ಬಾವಾ, ತೋರಂಗಿ ಬಾವಾ, ನಿನ್ನ ಮಗಳಿಗೆ ಲಗ್ನವಾಗಿ ನಾನು ಚಂದಾಗಿ ಇಲ್ಲಿ ಇರಾಕ ಬಂದಿಲ್ಲ; ಚಿತ್ರಾವತಿ ಪಟ್ಣದಲ್ಲಿ ವಿಘ್ನಾವತಿ ಹೊಟ್ಟಿಶೂಲಿ ಆಗಿದ್ದಕ್ಕೆ ಶಿವಜಾತ-ಪಾರಿಜಾತ ಹೂ ತರಬೇಕು ಅಂತ್ಹೇಳಿ ನಾನು ಬಂದೀನಿ. ಹೂವು ಎಲ್ಲಿ ಅದಾವು ನನಗ ಹೇಳಿಕೊಡ್ರಿ. ಆ ಹೂವು ತರಾಕ ನಾನು ಹೋಗ್ತೀನಿ – ಅಂದ ಮಗ!
ಹಿ : ಹೌದು.
ಕ : ಅಲೇ ಅಲೇಲೇ ನಿನ ಮನಿ ಹಾಳಾಗ!ಏನೋ ಚಂದ್ರೋಜಿ- ಶಿವಜಾತ ಪಾರಿಜಾತ ಹೂವು ಎಲ್ಲಿ ಅದಾವು ಅಂತಾ ತಿಳಿದೀ?
ಹಿ : ಎಲ್ಲಿ ಅದಾವರೀ?
Leave A Comment