ಕ : ದೂರದಾಗ ಊರು, ಚಿತ್ರಾವತಿ ಪಟ್ಟಣ; ತಂದೆ ಇರೋಂಥಾ ಊರು ಬೆಳ್ಳಗೆ ಕಾಣಿಸಿತು-ಮಗನಿಗೆ!

ಹಿ : ಹೌದೂ.

ಕ : ಓಹೋ, ಇದು ಯಾವುದು ಇಲ್ಲಿ?

ಹಿ : ಆಹಾ….

ಕ : ತಾಯ್ನೋರು ಇಲ್ಲಿ ದೆವ್ವ ಐತಿ ಅಮ್ತ ಹೇಳಿದ್ರು! ನನಿಗೆ ಅದು ಸಿಗಲಿಲ್ಲಲ್ಲ?

ಹಿ : ಓಹೋ ಹೌದಲ್ಲ!

ಕ : ನನಗೆ ಈಗ ನೀರಡಿಕೆ ಆಯಿತು, ಗವೀಗೆ ಹೋಗಿ ನೀರು ಕುಡಿಯಾಕ ಅಂದ್ರ ಗವಿ ದೂರ ಆಕೈತಿ; ಇಲ್ಲಿ ಕಾಣೋ ಊರಂದ್ರ ಸಮೀಪ ಆತು. ಈ ಊರು ಯಾವುದು ಐತೆ? ಈ ಊರಿಗೇ ಹೋಗಿ ನೀರು ಕುಡುದು ಗವಿಗೆ ಹೋದ್ರಾತು. (ರಾಗವಾಗಿ) ತಂದೀ ಊರಿಗೆ ಬಂದಾನ ಮಗಾ….ಚಿತ್ರಾವತಿ ಪಟ್ಣಕ್ಕ.

ಹಿ : (ರಾಗವಾಗಿ) ಹೌದೂ….

ಕ : ಆ ಊರಾಗ ಯಾರದಾರ್ರೀ?

ಹಿ : ತಗಡೂರು ಬಜಾರದಾಗ ಮುತ್ತಸೆಟ್ಟಿ ಸಾಹುಕಾರ!

ಕ : ಆ ಮುತ್ತಸೆಟ್ಟಿ ಸಾಹುಕಾರಗೂ ಏಳು ಮಂದಿ ತಾಯಿನೋರಿಗೂ ಭಾಳ ವಿಶ್ವಾಸ; ತಾಯಿ ಮಗ ಆಗಿ ವಾಸ ಮಾಡಿದೋರು ಅವ್ರು. ಆ ಮುತ್ತುಸೆಟ್ಟಿಗೆ ಕೇವಲ ಬಡತನ ಇದ್ದಾಗ ಆ ತಾಯಿನೋರು ಒಂದು ಸೇರು ರೂಪಾಯಿ ಕೊಟ್ಟಿದ್ರು ವ್ಯಾಪಾರಕ್ಕ.

ಹಿ : ಆಹಾ!

ಕ : ತಾಯಿನೋರು ಕೊಲಿಯಾದಾಗ ಅವರ ಚಿಂತ್ಯಾಗೇ ಅಂಬ್ಲಿಕೊಂತ ಕುಂತಿದ್ದ ಮುತ್ತಸೆಟ್ಟಿ, ಅತನ ಮನಿಗೇ ಚಂದ್ರೋಜಿಕುಮಾರ ಬರ್ತಾನ ನೋಡ್ರಿ!

ಹಿ : ಆಹಾ!

ಕ : ಸ್ವಾಮೀ ನನಿಗೆ ನೀರಡಿಕೆ ಆಗೇತಿ, ನೀರುಕೊದು-ಅಂತ ನಿಂತುಕೊಂಡ ಮಗ. ಮೈಮೇಲೆ ಸೀರಿಬಟ್ಟಿ, ಮುಕಳಾಗ ಸೀರಿ ಅರಿಬಿ ಇರೋದ ನೋಡಿಶೆಟ್ಟಿ-

ಹಿ : ಯಾರಪ್ಪಾ ತಮ್ಮಾ ನೀನು? ಬಾರಪ್ಪಾ ಯಾರು ನೀನು?

ಕ : ನಾನು ಯಾರೆಂಬುದೇನು ಮಾರಾಯಾ? ನನ್ನ ಗುರ್ತು ಏನು ಕೇಳ್ತೀ? ಮೊದಲು ನೀರು ಕೊಡು.

ಹಿ : ಹಂಗಲ್ಲಪ್ಪ, ನೀನು ಯಾರು ಹೇಳು, ಆ ಮ್ಯಾಲೆ ನೀರು ಕೊಡ್ತೀನಿ.

ಕ : ಸ್ವಾಮಿ ಏಳು ಮಂದಿ ತಾಯಿನೋರ ಮಗ ನಾನು, ಅಡಿವ್ಯಾಗ ಅದೀನಿ; ಗವಿಯಾಗ ಕಲ್ಲಿನ ಗವಿಯಾಗ ಅದೀನಿ.

ಹಿ : ಓಹೋ! ಯಾರವರು? ಅವರ ಹೆಸರು?

ಕ : ಅತನಾವತಿ, ಮತುನಾವತಿ, ರತುನಾವತಿ, ಪೂಲಾವತಿ, ಸಯಾವತಿ, ಜಯಾವತಿ, ನನಗೆ ಹಡೆದಂತ ಪದ್ಮಾವತಿ; ನನ್ನ ಹೆಸರು ಚಂದ್ರೋಜಿ ಕುಮಾರ.

ಹಿ : ಆಹಾ!

ಕ : ಏಳು ಮಂದಿ ತಾಯಿ ಹೆಸರು ಕೇಳಿದ ಮುತ್ತುಶೆಟ್ಟಿ ಸಾವಕಾರ ಸಾಗರಬಿದ್ದು, ಮಗನ ಕೊಳ್ಳಬಿದ್ದು ಮಹಂತ ದುಃಖ ಮಾಡ್ತಾನೆ. (ರಾಗಾವಾಗಿ) ಮಗನೇ…. ಮಗನೇ….ಚಂದ್ರೋಜಿ ಕುಮಾರಾ……ಬಾರೋ ಒಳಗೆ ಮೋಸ ಆದೀತು…..ಬಾ ಒಳಗೆ ಜಲ್ದೀ….ಆ ತಾಯ್ನೋರು ಗವಿಯಾಗ ಅದಾರಲ್ಲಾ!

ಹಿ : (ರಾಗವಾಗಿ) ಹೌದೂ.

ಕ : ಚಂದಾಗಿ ಅದಾರೇನಪ್ಪಾ?

ಹಿ : ಓಹೋ ಅಲ್ಲಾ ಆರಾಮ ಅದಾರೆ, ಆದ್ರ ಕಣ್ಣುಗಳಿಲ್ಲ!

ಕ : ಆಹಾ ಕಣ್ಣು ಕಳದನೇ ಪರಮಾತ್ಮ-ಅಪ್ಪಾ?

ಹಿ : ಹೌದು.

ಕ : ಮಗನಿಗೆ ಕುಂದ್ರಿಸಿ ನೀರು ಎರದ, ರಾಜ ಉಡುಗೊರೆ ಕೊಟ್ಟು ಊಟ ಉಪಚಾರ ಮಾದಿಸಿದ.

ಹಿ : ಆಹಾ!

ಕ : ಆ ಏಳೂ ಮಂದಿ ತಾಯ್ನೋರು ಹಿಂದೆ ನನಿಗೆ ಉಪಕಾರ ಮಾಡೇರ! ಆ ಉಪಕಾರ ಮಗನಿಗೆ ತೀರಿಸ್ಬೇಕು, ಎಲ್ಲಾ ಸಹಾಯ ಮಾಡ್ಬೇಕು ಅಂತ ಅಂದುಕೊಂಡ, ಹೋಳ್ಗಿ ಹುಗ್ಗಿ ಮಾಡಿಸಿ ದೊಡ್ಡ ಬುತ್ತಿ ಕಟ್ಟಿದ.

ಹಿ : ಹೌದು.

ಕ : ಈಗ ನಿಮ್ಮ ತಂದಿ ಇದೇ ಊರಾಗ ಅದಾನಂತಾ ಹೇಳಿದ್ರ ಆತನ ಹತ್ರಹೋದಗೀದಾನು-ಮಗ!

ಹಿ : ಹಾ!

ಕ : ಇನ್ನೊಮ್ಮೆ ಈ ಊರಿಗೆ ಈ ಮಗನಿಗೆ ಬರಗೊಡಿಸ್ಬಾರದು ಯಾಕಂದ್ರೆ ವಿಘ್ನಾವತಿ ಮೋಸ ಮಾಡ್ಯಾಳು.

ಹಿ : ಹೌದು!

ಕ : ಅಪ್ಪಾ ಮಗನೇ.

ಹಿ : ಏನು ಹೇಳ್ರೀ….

ಕ : ಈ ಗೊತ್ತಿಲ್ದ ಊರಾಗ ಹೋಗುತೀ ಎಲ್ಲಿಗೆ? ನಡುವೆ ಎಲ್ಲೆಲ್ಲೂ ಯಾರ ಮನಿಗೂ ಹೋಗಬ್ಯಾಡ ಸೀದಾ ಗವೀಗೆ ನಡೀ.

ಹಿ : ಹೋಗ್ತೀನೀ ಶೆಟ್ರೀ.

ಕ : ಇನ್ನೊಮ್ಮೆ ಬರಬ್ಯಾಡ ನೋಡು ಈ ಊರಿಗೆ.

ಹಿ : ಬರೋದಿಲ್ಲ ಬಿಡಪ್ಪ; ನೀನು ಬ್ಯಾಡಾಂದ್ರ ಬರೋದೆ ಇಲ್ಲ.

ಕ : ಹೌದು ಬರಬಾರ್ದು ನೋಡು.

ಹಿ : ಇಷ್ಟು ಪ್ರೀತಿ ಮಾಡಿದಂಥಾ ಮಾರಾಯ ನೀನು; ಇನ್ನೊಮ್ಮೆ ನೀನು ಬಾರಪ್ಪಾ ಅನಬೇಕು. ಬರಬ್ಯಾಡಾ ಅಂದ್ರ ಬರೋದಿಲ್ಲ ಬಿಡ್ರಿ.

ಕ : ಮುತ್ತಶೆಟ್ಟಿ ಕೊಟ್ಟ ಬುತ್ತಿ ತಲಿಮ್ಯಾಲೆ ಹೊತ್ತು.

|| ಪದ ||

ಗವಿಗೆ ನಡುದಾನ ಮಗ ಹರಯನ್ನ ಮಾದೇವಾ
ಕಲ್ಲಿನ ಗವಿಗೆ ಬರುತಾನ ಮಗ…. ನಮ ಶಿವಾಯ
ಯವ್ವಾ ಕುಂತೀರಾ ಹಡದವ್ವಾ….ಹರಯನ್ನ ಮಾದೇವಾ
ಕುಂತೀವಿ ಬಾರೋ ನನ್ನ ಬಾಳಾ, ಬಾಳಾ….ಶಿವಯನ್ನ ಮಾದೇವ
ಯಾವ ಕಡಿಗೆ ಹೋಗಿದ್ದೀ ಮಗನ ಬ್ಯಾಟೀಶಿವ ಹರಯನ್ನ ಮಾದೇವಾ.

ಕ : ಯಾವ ಕಡಿ ಹೋಗದ್ದಿ ಮಗನೇ?

ಹಿ : ಯಾವ ಕಡಿಗೆ ಹೋಗದ್ದಿ ಮಗನೇ?

ಕ : ಇಲ್ಲೇ ಸಮೀಪದಲ್ಲಿ ಹೋಗಿದ್ದೆ, ಎಲ್ಲೆಲ್ಲಿ ಇಲ್ಲಮ್ಮಾ, ದಕ್ಷಿಣ ಮಾರ್ಗವಾಗಿ ಬ್ಯಾಟಿ ಆಡ್ತಿದ್ದೆನಮ್ಮಾ.

ಹಿ : ಹೌದೇ?

ಕ : ಈಗ ರಾಜ ಉಡುಗೊರೆ ತೊಟ್ಟೀನಿ; ಇಂಥಾ ಊರಿಗೆ ಹೋಗೀನಿ ಅಂತ್ಹೇಳಿ ನಿಜ ಹೇಳಿದ್ರೆ ಇನ್ನೊಮ್ಮೆ ಗವಿ ಬಿಟ್ಟು ಹೊರಗೆ ಬಿಡೋದಿಲ್ಲಾ.

ಹಿ : ಅದರ ಸಲುವಾಗಿ ಯಾವುದೋ ಒಂದು ಸುಳ್ಳು ಹೇಳಬೇಕು-ಇವರಿಗೆ!

ಕ : ಅಂತ್ಹೇಳಿ ಏನಂತಾ ಹೇಳ್ತಾನ?- ಅಮ್ಮಾ ಅದು ಯಾವುರೋರೋ ಯಾದೇಶದೋರೋ ನೋಡ್ರಮ್ಮ ವ್ಯಾಪಾರಗಾರರು; ನನ್ನ ನೋಡಿ ನನಿಗೆ ಇಲ್ಲಿ ಬಾರೋ ತಮ್ಮಾ ಅಂದ್ರು; ಹೋದ್ನೆಮ್ಮಾ.

ಹಿ : ಹೌದು!

ಕ : ಏನೋ ನಿನಗೆ ಬಟ್ಟೆಬರಿ ಇಲ್ಲೇನು ಅಂತ ಕೇಳಿದ್ರಮ್ಮಾ!

ಹಿ : ಹೌದೇ ಮಗನೇ?

ಕ : ಹೂನಮ್ಮಾ ; ಸ್ವಾಮೀನಾನು ಅನಾಥ, ಅಡಿವ್ಯಾಗ ಅದೀನಿ ಅಂದೆ,

ಹಿ : ಆಹಾ!

ಕ : ಒಬ್ರು ಅಂಗೀನೇ ಬಿಟ್ಟುಕೊಟ್ರು; ಒಬ್ರು ಚಂದ್ರಹಾರನೇ ಕೊಟ್ರು. ಎಲ್ಲಾ ಸಹಾಯಮಾಡಿ ಅಡಿವ್ಯಾಗ ನನಗ ಉಣಿಸಿದ್ರಮ್ಮಾ!

ಹಿ : ಆಹಾ!

ಕ : ನಮ್ಮ ತಾಯ್ನೋರು ಕಣ್ಣಿಲ್ದೋರು ಅದಾರ ಅಂತ ಹೇಳ್ದೆ; ಅವರು ಬುತ್ತಿ ಕೊಟ್ಟು ಕಳಿಸಿದ್ರಮ್ಮಾ, ನಾನು ಯಾ ಊರಿಗೂ ಹೋಗಿಲ್ಲ-

ಹಿ : ಅಂದ ಮಗ!

ಕ : (ರಾಗವಾಗಿ) ಅವ್ವ ನಮ್ಮ ಮಗ್ಗ ಯಂಥಾ ಸಹಾಯ ಮಾಡ್ಯಾರೆ ಆ ಏಳೂ ಮಂದಿ ವ್ಯಾಪಾರಗಾರ್ರು!…ಅಪ್ಪಾ ನಿನ್ನ ಮುಖಾ ನೋಡ್ಬೇಕು ಅಂದ್ರೆ ನಮಗೆ ಕಣ್ಣಿಲ್ಲ!….ನೀನು ಹ್ಯಾಂಗಿದ್ದೀ ಮಗನೇ….

ಹಿ : ಚಂದ್ರೋಜಿ! ನಮಗಿಷ್ಟು ಹೋಳಿಗಿ ಹುಗ್ಗಿ ತಂದು ಊಟಾ ಮಾಡಿಸಿದಿ; ಆನಂದ ಆಯ್ತು.

ಕ : ಏನೂ ಚಿಂತಿ ಮಾಡಬ್ಯಾಡ್ರಮ್ಮ ನಾನಿರೋವರಿಗೂ ನೀವಿನ್ನು ಹೆದರಬ್ಯಾಡ್ರಿ ತಾಯೀ.

ಹಿ : ಓಹೋ!

ಕ : ಆವಾಗ ಒಂದು ದಿವಸ ಸೋಮವಾರ, ಮಗ ತಾಯಿಗಳಿಗೆ ಹೇಳ್ತಾನ….ನಾನು ಸ್ವಲ್ಪ ಬ್ಯಾಟಿ ಆಡಿ ಬರ್ತೀನ್ರಮ್ಮಾ.

ಹಿ : ಆಹಾ ಹೋಗಿ ಬಾರಪ್ಪ ಉತ್ತರ ದಿಕ್ಕಿಗೆ ಮಾತ್ರ ಹೋಗಬ್ಯಾಡ.

ಕ : ಹೋಗೋದಿಲ್ಲ ಬಿಡಮ್ಮ.

ಹಿ : ಓಹೋ.

ಕ : ಅದೇ ಮಾರ್ಗವಾಗಿ ಉತ್ತರ ದಿಕ್ಕಿಗೇ ನಡೆದ-ಮಗ!

ಹಿ : ಹೌದು!

ಕ : ಮೊನ್ನೆ ಹೋಗಿದ್ದೆ ಈ ಕಡಿಗೆ,

ಹಿ : ಹೌದು.

ಕ : ಭೂತ ಇದ್ದಿಲ್ಲ, ದೆವ್ವ ಇದ್ದಿಲ್ಲ- ಈ ಅಡಿವ್ಯಾಗ! ಇವತ್ತು ಸೂಮವಾರ ಆಗೇತಿ, ದೆವ್ವ ಏನಾರ ಸಿಗಬೌದು. -ಅಂತ ಮಗ ಅದೇ ಮಾರ್ಗವಾಗಿ ನಡೆದು-ಎಲ್ಲೆಲ್ಲೋ ಹುಡುಕುಡ್ತಾನೆ-

ಹಿ : ದೆವ್ವ ಇಲ್ಲ!

ಕ : ನಮ್ಮ ತಾಯಿನೋರು ಇದೇ ಮಾರ್ಗದಲ್ಲಿ ದೆವ್ವ ಐತಿ ಅಂದ್ರು; ಎಲ್ಲೀವರಿಗೂ ನೋಡಿದ್ರೂ ಸಿಗಲಿಲ್ಲ!

ಹಿ : ಆಹಾ!

ಕ : ಇನ್ನು ಊರು ಸಮೀಪ ಬಂತು-

ಹಿ : ಚಿತ್ರಾವತಿ ಪಟ್ಣ!

ಕ : ಮೊನ್ನೆ ಶೆಟ್ಟಿ ನನಿಗ ಎಷ್ಟು ಉಪಕಾರ ಮಾಡಿದ್ದ! ಆತಗ ನಾನು ಮಾತಾಡಿಸಲಾರ್ದೆ ಹೋದ್ರೆ ದೋಷ ಬರತೈತಲ್ಲ! ಇವತ್ತೊಂದು ದಿವಸ ಹೋಗಿ ಮಾತಾಡಿಸಿ ಬಂದು ಬಿಡಾನು- ಅಂತ್ಹೇಳಿ ಅದೇ ಶೆಟ್ಟಿಮನಿಗೆ ಬಂದ-ಮಗ.

ಹಿ : ಓಹೋ!

ಕ : ಕುಂತೀರಾ ಶ್ರೀಮಂತ ಸಾವಕಾರ್ರೇ….

ಹಿ : ಯಾರವರು? ಕುಂತೀನಿ ಬರ್ರೀ….

ಕ : “ಅಯ್ಯೋ! ಮತ್ತೆ ಬಂದ್ಯಾ,” ಬರಬ್ಯಾಡ ಅಂತ ಹೇಳಿದ್ನೆಲ್ಲೋ ಮಗನೇ!

ಹಿ : ಬರಬೇಕು ಅಂತ ಬರ್ಲಿಲ್ಲ ಶೆಟ್ರೇ; ಸಮೀಪದಲ್ಲಿ ಬ್ಯಾಟಿ ಆಡಿಕೊಂತ ಬಂದೆ; ನಿಮ್ಮ ನೆಪ್ಪಾತು; ನಿಮ್ಮನ್ನು ಮಾತಾಡ್ಸಿ ಹೋಗಾನು ಅಂತ ಬಂದೆ.

ಕ : ಓ ಬಾರಪ್ಪಾ ಜಲ್ದೀ ಒಳಗ ಬಾ; ಹೊರಗಿರ ಬ್ಯಾಡ-ಅಂದ ಶೆಟ್ಟಿ.

ಹಿ : ಹೌದು.

ಕ : ಒಳಗ ರತ್ನದ ಜಾಡಿ ಹಾಸಿ ಮಗನ್ನ ಕುದ್ರಿಸಿದ; ಊಟಾ ಮಾಡಿಸಿ ವೀಳ್ಯಾಕೊಟ್ಟ ಒಂದು ಅರ್ಧಗಂಟಿ ಇಬ್ರೂ ಮಾತಾಡಿಕೊಂತಾ ಕುಂತಿದ್ರು ನೋಡ್ರಿ.

ಹಿ : ಶೆಟ್ರದ್ದು ಬಜಾರದ ಮನಿ.

ಕ : ಅದೇ ಅವ್ರು ಮಾತಾಡಿಕೊಂತ ಕುಂತ ಟೈಮಿನಾಗs

ಹಿ : ರಾಜನ ಹೆಂದತಿಯಾದ ಮಹಾ ಮೋಸಗಾರ್ತಿ ವಿಘ್ನಾವತಿ ಮಹಾರಾಣಿ ಜಳಕ ಮಾಡಿಕೊಂಡು ಮಹಲಿನ ಮೇಲೆ ನಿಂತ್ಕೊಂಡು ಊರು ನೋಡ ಬೇಕಾದ್ರೆ-ಶೆಟ್ಟೀ ಮನಿ ಕಡೆ ನೋಡಿ ಬಿಟ್ಲು-

ಹಿ : ಆಹಾ! ವಿಘ್ನಾವತಿ

ಕ : ಓಹೋ! ಏನಿದು! ಶೆಟ್ರ ಮನಿಯಾಗ ಎಂಥಾ ಬೆಳಕು ಐತಲ್ಲ! ಯಾರು ಬಂದಿರಬಹುದು!-ಅಂದುಕೊಂಡ್ಲು.

ಹಿ : ಹೌದು ಏನು ಕಾರಣ ಇರಬಹುದು!

ಕ : ಏನು ದೇವಲೋಕದೋರು ಅದಾರೋ!- ಏನು ಬೆಳಕ ಐತಿ ಆ ಮನಿಯಾಗ!

ಹಿ : ಹೌದು!

ಕ : ನೀಲಾವತ್ತಿಗಿ ತೆಗದು ನೋಡ್ತಾ ಅದಾಳೆ ವಿಘ್ನಾವತಿ;-

ಹಿ : ಆಹಾ ವತ್ತಿಗೀವಳಗ ಏನೈತ್ರೀ?

ಕ : (ರಾಗವಾಗಿ) ಚಿತ್ರಾವತಿ ಪಟ್ಣದಲ್ಲಿ ಚಿತ್ರೋಸೇನ ಮಹಾರಾಜನ ಏಳುಮಂದಿ ಸತಿಯರ ಪೈಕಿ ಎಲ್ಲರಿಗಿಂತಾ ಚಿಕ್ಕಾಕಿ ಪದ್ಮಾವತೀ ಗರ್ಭದಲ್ಲಿ ಉದ್ಭವಿಸಿದ ಚಂದ್ರೋಜಿ ಕುಮಾರಾ! ರಾಕ್ಷಸರಿಗೆಲ್ಲಾ ಇವನೇ ಗಂಡಾ!-ಅಂತ ನೋಡಿಬಿಟ್ಲು ವತ್ತಿಗ್ಯಾಗ!

ಹಿ : ಆಹಾ!

ಕ : ಮೋಸ ಆಯ್ತು!

ಹಿ : ಹೌದು!

ಕ : ಮೋಸ ಮಾಡಿದ ಮಂತ್ರಿ! (ರಾಗವಾಗಿ) ಯವ್ವಾ ಏಳು ಮಂದಿ ಸವತೆರಿಗೆ ತೆಲಿ ಹೊಡದು ಬಂದಿಲ್ಲಾ…ಅವರಿಗೆ ಪ್ರಾಣದಾನ ಮಾಡೀ….

ಹಿ : ಆ….

ಕ : (ರಾಗವಾಗಿ) ಬರೀ ಕಣ್ಣು ತೊಗೊಂಡು ಬಂದದ್ದಕ್ಕೆ ಸವತ್ಯಾರು ಜನನ ಆಗ್ಯಾರ!!…

ಹಿ : (ರಾಗವಾಗಿ) ಹೌದು!

ಕ : (ರಾಗವಾಗಿ) ನನ್ನ ವಂಶಕ್ಕೆ ಮೂಲಾಗಿ ಸವತೀ ಹೊಟ್ಟ್ಯಾಗ ಹುಟ್ಟಿದ ವೈರಿ!

ಹಿ : ಆಹಾ!

ಕ : (ರಾಗವಾಗಿ) ಇಡೀ ರಾಕ್ಷಸರಿಗೆಲ್ಲಾ ಗಂಡಾ ಅಂತ ವತ್ತಿಗ್ಯಾಗ ಐತಲ್ಲೇ ತಾಯೀ…. ಅಯ್ಯೋ ಅಯ್ಯೋ (ರಾಗವಾಗಿ) ಎಂಥಾ ವೈರಿ ಹುಟ್ಯಾನೇ….ಇವನಿಗೆ ಏನು ಮಾಡ್ಲೀ…ಏನು ಮಾಡಿದ್ರೆ ಇವನಿಗೆ ಮರಣ ಬಂದೀತೂ…..

ಹಿ : ಆಹಾ!

ಕ : ಹೆಂಗ ಮಾಡಿದ್ರೆ ಇವನಿಗೆ ಸಾವು ಬಂದೀತು!-

ಹಿ : ಅಂತಾಳೆ ವಿಘ್ನಾವತಿ!

ಕ : ತಲೀಗೆ ಸೆರಗs ಕಟ್ಟಿಕೊಂಡು ರಾಜರು ಊಟಕ್ಕೆ ಬರೋ ಟೈಮ್ ನೋಡಿ, ಮಂಚದ ಮೇಲೆ ಬಿದ್ದು ಗದ್ದಗಡಾ ಉಳ್ಯಾಡತಾಳ-ವಿಘ್ನಾವತಿ!

ಹಿ : ಓಹೋ!

ಕ : ಏನು ಉಪಾಯ ಮಾಡ್ಯಾಳ್ರೀ ಮಗನಿಗೆ ಕೊಲ್ಲಾಕ! ಶಿವಜಾತ-ಪಾರಿಜಾತ ಹೂವುಗಳು ತರ್ಲಿಕ್ಕೆನಾನು ಹೇಳಿ ಕಳಿಸ್ಬೇಕು. ಈ ನಮ್ಮ ದೇಶದಲ್ಲಿ ಈ ಹೂವು ತರಲು ಯಾರಿಂದಲೂ ಸಾಧ್ಯವಿಲ್ಲ!

ಹಿ : ಹೌದು!

ಕ : ಈ ವೈರಿ ಹುಡುಗ ಹೋಗತಾನೆ ಅವನ್ನು ತರಾಕ; ಹೋದ ಬಳಿಕ ಇವನು ಬರೋದಿಲ್ಲ.

ಹಿ : ತಿರುಗಿ ಬರೋ ಭರಾಸೇ ಇಲ್ಲ- ಆಕಿಗಿ, ರಾಕ್ಷಸಿಗೆ.

ಕ : ದೂರದ ಜಾಗಾದಾಗಾ ಐತಿ ಆ ಶಿವಜಾತ-ಪಾರಿಜಾತ!

ಹಿ : ರಾಜ ಊಟಕ್ಕೆ ಬಂದು ನೋಡ್ತಾನೆ-

ಕ : ತಲೀಗೆ ಸೆರಗ ಕಟ್ಟಿಕೊಂಡು ಮಂಚದ ಮ್ಯಾಲೆ ಬಿದ್ದು ಗದ್ದಗಡಾ ಉಳ್ಯಾಡತಾ ಅದಾಳ ಮಡದಿ! (ರಾಗವಾಗಿ) ಮಧುರವಾಣೀ ನಿನ್ನಾಯ ತುಟಿಗೆ ಹಲ್ಲಿನ ಗಾಯ….

ಹಿ : ಏನೇ ಮಡದೀ….ಹೊಟ್ಟಿಶೂಲೀ….

ಕ : (ರಾಗವಾಗಿ) ಆಹಾ….

ಹಿ : (ರಾಗವಾಗಿ) ಮಹಾರಾಜಾ ತಡೀಲಾರೆ ಹೊಟ್ಟಿಶೂಲಿ! ಏನುಶೂಲೀ…..

ಹಿ : (ರಾಗವಾಗಿ) ಎಂಥಾಶೂಲೀ….

ಕ : ನಿನ್ನ ಹೊಟ್ಟಿಶೂಲಿಗೆ ಏನುಬೇಕು ಮಡದೀ?-

ಹಿ : ಹೇಳು ಮಡದೀ;

ಕ : ಆಹಾ, ಹೇಳ್ತೀನಿ ಧೊರಿ ಇನ್ನೇನೂ ಬೇಕಾಗಿಲ್ಲರೀ; ಇವತ್ತು ಶಿವಜಾತ-ಪಾರಿಜಾತ ತಂದು ಕೊಡ್ರಿ ; ನನ್ನ ಹೊಟ್ಟಿಶೂಲಿ ಹೋಗತೈತಿ.

ಹಿ : ಶಿವಜಾತ-ಪಾರಿಜಾತ?

ಕ : ಆ ಕೂಡ್ಲೇ – “ರೈತರೇ ದಂಡೇ, ನನ್ನ ಮಡದಿಗೆ ಹೊಟ್ಟಿಶೂಲಿ ಎದ್ದೈತಿ! ಇವತ್ತು ಶಿವಜಾತ-ಪಾರಿಜಾತ ಹೂಗಳು ತಂದು ಕೊಟ್ಟವರಿಗೆ ಐವತ್ತು ಸಾವಿರ ರೂಪಾಯಿ ಬಹುಮಾನ ಕೊಡ್ತೀನಿ” -ಅಂದ ಚಿತ್ರೋಸೇನ ರಾಜ.

ಹಿ : ನಾವು ತರ್ತೀವಿ ಬಿಡ್ರಿ-

ಕ : ನಮ್ಮ ವನಾಂತರದಾಗ ಅದಾವು-

ಹಿ : ನಮ್ಮ ತೋಟದಾಗ ಅದಾವೆ ಅಂತ ಎಲ್ಲಾರು ಹೋದರು.

ಕ : ಚೂಜಿಮಲ್ಲಿಗೆ, ನಿಲುವಂಜಿ, ಶಾವಂತಿಗೆ, ಚಂಡಮಲ್ಲಿಗಿ, ದುಂಡುಮಲ್ಲಿಗೆ ತಂದು ತಂದು ರಾಸಿಹಾಕಿಬಿಟ್ರು ರೈತರು, ದಂಡು.

ಹಿ : ಈ ಹೂವು ಅಲ್ಲಾರೀ ಮಹಾರಾಜಾ; ಏಳು ಸಮುದ್ರದಾಚೆಗೆ ಹೋದ್ರೆ ಆ ಹೂವು ಸಿಗ್ತಾವೆ-ಶಿವಜಾತ- ಪಾರಿಜಾತ!ಕ ಕ : ಆಹಾ! ಅಪ್ಪಾ ಏಳು ಸಮುದ್ರದ ಆಕಡಿಗೆ ಅದಾವಂತೆ! ಆ ಹೂವು ತಂದು ಕೊಟ್ಟವರಿಗೆ ಪಟ್ಟಾಭೀಷೇಕ ಮಾಡ್ತೀನಿ; ತಂದು ಕೊಡೋರು ಬಂದು ವೀಳ್ಯ ತಗೋಬೇಕು – ಇಲ್ಲಿ.

ಹಿ : ಹೇ! ನಮ್ಮ ಕಡಿಗೆ ಆಗೋದಿಲ್ಲಂದು ಒಬ್ಬರೂ ಬರುವಲ್ಲರು!

ಕ : ಮಂತ್ರೀ, ಊರಾಗೆಲ್ಲಾ ಟಾಂ ಟಾಂ ಹೊಡೀ, ಡಂಗೂರ ಸಾರು, ಶಿವಜಾತ-ಪಾರಿಜಾತ ಹೂ ತಂದು ಕೊಟ್ಟವರಿಗೆ ಪಟ್ಟಾಭಿಷೇಕ-ಚಿತ್ರಾವತಿ ಪಟ್ಣದ್ದು.

ಹಿ : ಹೌದು.

ಕ : ರೈತರೇ, ಪ್ರಜರೇ, ಶ್ರೀಮಂತರೇ, ಸಾಹುಕಾರರೇ, ಊಚರೇ, ನೀಚರೇ, ಚಿತ್ರಾವತಿ ಪಟ್ಣ ಬೇಕಾದವರು ಶಿವಜಾತ- ಪಾರಿಜಾತ ಹೂ ತಂದು ಕೊಟ್ಟರೆ ರಾಜಾಧಿರಾಜ ಪಟ್ಟಾಭಿಷೇಕ ಮಾಡ್ತಾನೆ. ಅದನ್ನ ತರೋಕೆ ಹೋಗೋರು ಬಂದು ಕಛೇರಿಯೊಳಗ ವೀಳ್ಯಾ ತಗೊಂಡು ಹೋಗಬೇಕು.

ಹಿ : ಮಂತ್ರಿ ಡಂಗೂರ ಸಾರಿಕೊಂತಾ ಬರಬೇಕಾರ,-

ಕ : ಮುತಶೆಟ್ಟಿ ಮನಿಯಾಗ ಏನು ಕುಂತಿದ್ದನಲ್ಲ ಮಗ-

ಹಿ : ಚಂದ್ರೋಜಿ ಕುಮಾರ-

ಕ : ಆ ಮಗಾ ಕೇಳಿದ ಟಾಂ ಟಾಂ!

ಹಿ : ಶೆಟ್ರೀ-

ಕ : ಆ ಏನಪ್ಪಾ?

ಹಿ : ಏನೋ ಊರಾಗ ಡಂಗೂರ ಸಾರ್ತಾರಲ್ಲ?

ಕ : ಅದರ ಗೊಡವಿ ನಿನಗ್ಯಾಕಪ್ಪಾ? ಅದು ಏನಾರ ಇರಲಿ, ನಡೀ ಗವಿಗೆ. ತಾಯಿನೋರು ದಾರಿ ನೋಡುತಿದ್ದಾರು!

ಹಿ : ಹೌದು.

ಕ : ಆಹಾ ಏನೈತಿ ಕೇಳಿ ಬರ್ತೀನಿ ಹೋಗಿ ಅಷ್ಟೇ.

ಹಿ : ಲಗೂನ ಬರಬೇಕು ನೋಡಪ್ಪ.

ಕ : ಆಗಲಿ ಅಂದು ಬಜಾರದಾಗ ನಡದ-ತಂದೀ ಕಛೇರಿಗೆ. ತಂದಿ ಅಂಬೋದು ಮಗನಿಗೆ ಗೊತ್ತಿಲ್ಲ; ಮಗ ಅಂಬೋದು ತಂದಿಗ್ಗೊತ್ತಿಲ್ಲ;

ಹಿ : ಹೌದು!

ಕ : ನಮೋ ನಮೋ ನಮಸ್ಕಾರ ಚಿತ್ರಸೇನ ಮಹಾರಾಜನಿಗೆ.

ಹಿ : ಓಹೋ ನಮಸ್ಕಾರ ಬಾರಪ್ಪ.

ಕ : ದಂಡು ದರ್ಬಾರ ಕುಂತಿತ್ತು-ಮಗಬಂದಾಗ, ಯಾರು ಈ ಹುಡುಗ? ಮಹಾಶೂರನಾಗಿ ಕಾಣ್ತಾನೆ! ಬಲಭಾಗದಲ್ಲಿ ಬೆಳ್ಳಿ ಕುರ್ಚಿ ಮ್ಯಾಲೆ ಕುಂದ್ರಿಸಿ ಬಿಟ್ಟ-ಯಾರಪ್ಪ ನೀನು?

ಹಿ : ನಾನು ವನವಾಸಿಗರೀ, ನನ್ನ ಹೆಸರು ಚಂದ್ರೋಜಿ ಕುಮಾರ.

ಕ : ಓಹೋ ಭಾಪ್ಪರೆ!

ಹಿ : ಏನೋ ಊರಾಗ ಟಾಂ ಟಾಂ ಹಾಕಿದ್ರಿ?….

ಕ : ಅಪ್ಪಾ, ನನ್ನ ಮಡದಿಗೆ ಹೊಟ್ಟಿಶೂಲಿ ಎದ್ದೈತಿ;

ಹಿ : ಹೌದೇ?

ಕ : ಅರಮನಿಯಾಗ ಮಲಿಗ್ಯಾಳ; ಶಿವಜಾತ-ಪಾರಿಜಾತ ಹೂ ಏಳು ಸಮುದ್ರದಾಚಿಗೆ ಇದಾವಂತೆ! ಆ ಹೂ ತಂದವರಿಗೆ ನಾನು ಪಟ್ಟಾಕಟ್ತೀನಿ.

ಹಿ : ಆಹಾ!

ಕ : ವೀಳ್ಯಾ ತಗೊಂಬೋರು ಯಾರಿದ್ರೂ ತಗೊಳ್ರೀ ಅಂತ ಟಾಂ ಟಾಂ ಹಾಕ್ಸೀನಿ.]

ಹಿ : ಓಹೋ! ಯಾರೂ ಒಯ್ದಿಲ್ಲೇನ್ರಿ ವೀಳ್ಯಾನ?

ಕ : ಯಾರೂ ಬಂದಿಲ್ಲ; ಯಾರೂ ಒಯ್ಯವಲ್ಲರು!

ಹಿ : ಹೌದೇ?

ಕ : ಆ ಶಿವಜಾತ-ಪಾರಿಜಾತ ಹೂವು ನಾನು ತಂದುಕೊಡ್ತೀನಿ; ಕೊಡ್ರಿ ನನಗೆ ವೀಳ್ಯಾ-ಅಂದ ಮಗ!

ಹಿ : ಓಹೋ….ಶೂರ!

ಕ : ಹೌದು-ತಂದೆ ವೀಳ್ಯಾ ಕೊಟ್ಟ ಮಗನಿಗೆ! ಹೂ ತರಾಕ ವೀಳ್ಯಾ ತಗೊಂಡ ಮಗ!

ಹಿ : ಹೋಗಿ ಬರ್ತೀನ್ರಿ.

ಕ : ಹಂಗs ; ಹೋಗಬ್ಯಾಡಪ್ಪ ಸ್ವಲ್ಪ ಸಮಾಧಾನ ಮಾಡು; ಹೂ ತರಾಕ ಹೋಗೋದು ಹೋಗ್ತೀ; ಅರಮನಿಯಾಗ ನನ್ನ ಮಡದಿಗೆ ಹೊಟ್ಟಿಶೂಲಿ ಎದ್ದೈತಿ. ಹೂ ತರಾಕ ಹೋಗ್ತೀನಮ್ಮಾ ಅಂತ ಹೇಳಿ, ಸ್ವಲ್ಪ ಮಾತಾಡಿಸಿ ಹೋಗುವಂತಿ.

ಹಿ : ಆಹಾ!

ಕ : ಸಮಾಧಾನ ಆಗತಾಳೆ.

ಹಿ : ಹೌದು.

ಕ : ಬ್ಯಾನಸ್ತರ ಮುಂದೆ ಔಷಧ ಕೊಡೋರು ಬಮ್ದು ಸ್ವಲ್ಪ ಮಾತಾಡಿದರೆ ಅರ್ಧ ಬ್ಯಾನಿ ಕಮ್ಮಿಯಂತೆ; ಅದಕ್ಕೇ ನಿನಿಗೆ ಹೇಳಿದ್ದು.

ಹಿ : ಹೌದೇ!

ಕ : ನಡೀ ಮನಿ ಕಡಿಗೆ ಹೋಗೋನು.

ಹಿ : ಓಹೋ ನಡೀರಿ.

ಕ : ತಂದೆ ಮಗನಿಗೆ ಕರಕೊಂಡು ವಿಘ್ನಾವತೀ ಮನಿಗೆ ಬರ್ತಾ ಇದಾನೆ.

ಹಿ : ಆಹಾ!

ಕ : ಅವರಿಬ್ರೂ ಬರೋದ ವಿಘ್ನಾವತಿ ನೋಡ್ತಾಳೆ (ರಾಗವಾಗಿ) ಯವ್ವಾ ವೈರಿ ಕರಕೊಂಡು ಬರ್ತಾನಾ…. ಇವನಿಗೆ ನೋಡಿ ಮೈಗೆ ಮುಳ್ಳು ಬರ್ತಾವೋ…. ದೂರ ಇರಬಾರ್ದೇನೇ ಇವನೂ….ಚಂದ್ರೋಜಿ ಕುಮಾರ ಹ್ಯಾಂಗ ಅದಾನ! ಕಿಡಿ ಕಿಡಿ ಬೆಂಕಿ ಆಗ್ಯಾನಾ…..

ಹಿ : ಆಹಾ..

ಕ : (ರಾಗವಾಗಿ) ಮಡದೀ ಮಡದೀ…ವಿಘ್ನಾವತಿ ಸಾಯಬೇಡಾ….

ಹಿ : ಓ ಸಾಯಬ್ಯಾಡಾ….

ಕ : ನೋಡು-ಬಂದ ಈ ಹುಡುಗ ಯಾವೂರೋನೋ, ಯಾವ ದೇಶಯೋನೋ! ಶೂರ ಅದಾನೆ!

ಹಿ : ಹೌದು!

ಕ : ಶಿವಜಾತ-ಪಾರಿಜಾತ ಹೂ ನಿನ್ನ ಹೊಟ್ಟಿಶೂಲಿಗೆ ತರ್ತೀನಿ ಅಂತಾ ವೀಳ್ಯಾ ತಗೊಂಡಾನೆ.

ಹಿ : ಓಹೋ! ಹೌದೇ?