ಕ : ಆ ಹನ್ನೆರಡು ಗಾವುದ ವನವಾಸದಲ್ಲಿ ಕವಳಿಹಣ್ಣು, ಕಾರಿಹಣ್ಣು, ಬಿಕ್ಕಿಹಣ್ಣು ಊಟಾ ಮಾಡಿಕೊಂತಾ, ಕಂದಕ ದಾಟಿ, ಒಂಟಿ ಹೂಡೇವು ದಾಟಿ, ಕಂಚಿಕೋಟಿ ದಾಟಿ ಕಂಚಿ ಮುಖದ ರಾಕ್ಷಸನ ಹತ್ರ ಬಂದ!

ಹಿ : ಆ ರಾಕ್ಷಸ ಆಡಬರಿಸಿತು-

ಕ : ಎಲೇ ಯಾರು? ನನ್ನ ಬಾಯಲ್ಲಿ ತುತ್ತಾಗು – ಅಂತ ಎದ್ದು ಬಿಡ್ತು ಹಿಡಂಬ ಒಂದು ಮಂತ್ರದ ಹಳ್ಳು ಒಗದು ಬಿಟ್ತ ನೋಡ್ರಿ – ಋಷಿ ಕೊಟ್ಟದ್ದು; ಸುಮ್ಮನೆ ಮಲ್ಕೊಂಡು ಬಿಡ್ತು ಅದು;

ಹಿ : ರಾಕ್ಷಸ.

ಕ : ಏಳು ಉಕ್ಕಿನ ಕದಕ್ಕ ಇನ್ನೊಂದು ಹಳ್ಳು ಒಗದುಬಿಟ್ಟ ನೋಡ್ರಿ – ಏಳೂ ಕದ ಕಿರ್ ಅಂತ ಬಿಚ್ಚಿಕೊಂಡ್ವು!

ಹಿ : ಆಹಾ ಹೌದು!

ಕ : (ರಾಗವಾಗಿ) ಒಳಗೆ ಬಂದು ನೋಡ್ತಾ ಇದಾನೆ – ಮಲಿಗ್ಯಾಳಾ ದೇವತಾ….ಆಕಿ ರಾಜಕುಮಾರ ಬಂದದ್ದು ನೋಡ್ಯಾಳಾ…

ಹಿ : (ರಾಗವಾಗಿ) ಹೌದೇ….

ಕ : (ರಾಗವಾಗಿ) ಯಾರು ದೊರೀ ಒಳಗೆ ಬರ್ರೀ ಮಹಾರಾಜೈ…..ನಿಮ್ಮೂರು ಯಾವುದು…. ಗ್ರಾಮ ಯಾವುದೈ…

ಹಿ : ಹೌದು ಯಾವೂರು ಮಹಾರಾಜ ನಿಮ್ಮದು?

ಕ : ಚಂದ್ರಾವತಿ ಪಟ್ಣದಲ್ಲಿ ಚಂದ್ರಸೇಕ ಮಹಾರಾಜನ ಮಗ ಅಂತಾರೆ ನನಗೆ ನೋಡು.

ಹಿ : ಹೌದು

ಕ : ಚಂದ್ರಾವತ್ತೆಮ್ಮನ ಗರ್ಭದಲ್ಲಿ ಉದ್ಭವಿಸಿದ ವೀರಪರಾಕ್ರಮಿ ನಾನು.ಈ ಪಾತಾಳದಲ್ಲಿ ಬಂದೀನಿ ಸ್ತ್ರೀಯಳೇ.

ಹಿ : ಆಹಾ!

ಕ : ಮಹಾರಾಜಾ, ದೇವಾನು ದೇವತೆಗಳೇ ಈ ಪಾತಾಳದಲ್ಲಿ ಬರ್ಲಿಕ್ಕೆ ಸಾಧ್ಯವಿಲ್ಲ. ನೀವು ಇಲ್ಲಿ ಬರ್ಬೇಕಾದ್ರೆ ನೀವು ಎಂಥಾ ಗಂಭೀರವಾದ ಪರಾಕ್ರಮಿಗಳು!

ಹಿ : ಹೌದು!

ಕ : ಯಾರು ಇಲ್ಲಿಗೆ ಪ್ರವೇಶ ಮಾಡ್ತಾರೋ ಅವರು ನನ್ನ ಪತಿ ಅಂತ ಹೇಳಿ ನಾನು ಪ್ರತಿಜ್ಞೆ ಮಾಡಿದ್ದೆ.

|| ಪದ ||

ಲಗ್ನವಾಗಬೇಕ್ರೀ ದೊರೆಯೇ…….ಹರಯನ್ನ ಮಾದೇವ
ನಾನೇ ನಿನ್ನ ಮಡದೀ ರಾಜಾ…..ಹರಯನ್ನ ಮಾದೇವ.

ಹಿ : ಲಗ್ನ ಆಗಬೇಕು!

ಕ : ಒಳ್ಳೇದು ಸ್ತ್ರೀಯಳೇ ಲಗ್ನೇನೋ ಆಗತೀನಿ, ನಮ್ಮ ತಂದಿ ಕಣ್ಣು ಹೋಗಿ ಹನ್ನೆರಡು ವರ್ಷ ಆದವು ಮಾತಾಡೋ ಅಡಿಕಿ, ನಗೋ ಎಲಿ, ಕಲ್ಲು ಸುಣ್ಣ, ಕಮಲದ ಹೂವು ಕರೇ ಉಂಚಿ ತೊಪ್ಲ ಐತಂತೆ ನಿನ್ನ ಹತ್ರ – ತೋರ್ಸು.

ಹಿ : ಆಹಾ ಮಹಾರಾಜಾ ಇದೆಂಥ ಕೆಲಸವಾಯ್ತು!

ಕ : ಐದು ಸಾಮಾನುಗಳಲ್ಲಿ ಎರಡು ನನ್ನಲ್ಲಿಲ್ಲ ರಾಜಾ!

ಹಿ : ಅವು ಯಾವು?

ಕ : ಮಾತಾಡೋ ಅಡಿಕಿ, ನಗೋ ಎಲಿ, ಕಮಲದ ಹೂವು ನನ್ನ ಹತ್ರ ಅದಾವು, ಕರೇ ಉಂಚಿ ತೊಪ್ಲ, ಕಲ್ಲು ಸುಣ್ಣ ನನ್ನ ಹತ್ರ ಇಲ್ಲ!

ಹಿ : ಅವಿ ಇಲ್ಲಿ ಆದಾವು?

ಕ : ಇನ್ನು ಹೋಗ್ಬೇಕು ಹನ್ನೆರಡು ಗಾವುದ.

ಹಿ : ಓಹೋ!

ಕ : ಉಂಚಿ ಮರದ ಸುತ್ತಮುತ್ತ ಸಾವಿರ ಮಂದಿ ರಾಕ್ಷಸರು ಪಾರಾ ಇದ್ದಾರೆ. ಆ ಪಾರಾ ದಾಟಿ ಉಂಚಿ ತೊಪ್ಲ ತರೋದು ಸಾಧ್ಯವಾಗೋದಿಲ್ಲ ರಾಜಾ,

ಹಿ : ಹೌದೂ!

ಕ : ಅವೆರಡೂ ತರೋವರಿಗೂ ನೀನು ನನ್ನ ಮಡದಿಯಲ್ಲ, ನಾನು ನಿನ್ನ ಪತಿಯಿಲ್ಲ ಸ್ತ್ರೀಯಳೇ, ಅವು ತಂದ ಬಳಿಕ ನಂದೂ ನಿಂದೂ ಲಗ್ನ.

ಹಿ : ಆಹಾ!

ಕ : ಜಳಕ ಮಾಡಿ ಊಟ ಮಾಡ್ಕೊಂಡು-

|| ಪದ ||

ಮತ್ತೆ ಮುಂದಕ್ಕ ನಡದಾನ…….ಹರಯನ್ನ ಮಾದೇವ
ಉಂಚೀ ಮರಕ್ಕ ನಡದಾನ……..ಶಿವಹರ ಮಾದೇವ
ಹನ್ನೆರಡು ಗಾವೂದ…….ಶಿವಯನ್ನ ಮಾದೇವ
ಸಾವಿರ ಮಂದಿ ರಾಕ್ಷಸರೇ………ಶಿವಯನ್ನ ಮಾದೇವ
ಕಾವಲು ಕುಂತಾವೇ…………ಶಿವಹರ ಮಾದೇವ.

ಕ : ಆ ರಾಕ್ಷಸರು- “ಲೋ ನೀನು ಯಾರು?” ಅಂತ ಮೈಮ್ಯಾಲೆ ಹೋಗಿ ರಾಜ ಕುಮಾರನ್ನ ಹಿಡ್ಕೊಂಡ್ವು. ನಮ್ಮ ಹತ್ರಕ್ಕೆ ನೀನು ಏನು ಮಾಡಿದ್ರು ಬರಾಕ ಸಾಧ್ಯ ಇಲಾ – ಹುಡುಗಾ! ಆದ್ರೂ ನೀ ಬಂದೀ!

ಹಿ : ಹೌದು-

ಕ : ಬಂದ ತಪ್ಪಿಗೆ ನಮ್ಮ ಬಾಯಲ್ಲಿ ಬೀಳು ಅಂತ್ಹೇಳಿ ಬಾಯಿ ತಕ್ಕೊಂಡ್ವು- ರಾಕ್ಷಸಗಳು.

ಹಿ : ಆಹಾ!

ಕ : ಅಂಬುಬಾಣ, ಆಕಾಶಬಾಣ, ಕಲ್ಕೊರಿಯೋಬಾಣ ಈ ಮೂರ್ನ ತೊಗೊಂಡು ಯುದ್ಧಮಾಡಿ ರಾಕ್ಷಸರಿಗೆಲ್ಲ ಸುಟ್ಟು ಬೂದಿ ಮಾಡಿ ಬಿಟ್ಟ ಮಗ!

ಹಿ : ಹೌದು!

ಕ : ಆ ಕರೇ ಮುಖದ ಯಜಮಾನ ರಾಕ್ಷಸ ಇತ್ತು ನೋಡ್ರಿ, ಅದಕ್ಕೂ ಹೊಡದು ಬಿಟ್ಟಾ! ಪ್ರಾಣ ಬಿಡ್ಬೇಕಾದ್ರೆ ಆ ರಾಕ್ಷಸಿ ಹೇಳ್ತು – ಮಗನೇ ನನಗೆ ಕಿಚ್ಚುಕೊಟ್ಟು ಹೋಗು.

ಹಿ : ಅಂತ ಬೇಡಿ ಪ್ರಾಣ ಬಿಡ್ತು!

ಕ : ಉಂಚಿ ತೊಪ್ಲ ಹರ್ಕೊಂಡು, ಕಲ್ಲು ಸುಣ್ಣ ತೊಗೊಂಡ ರಾಜಕುಮಾರ;

ಹಿ : ಹೌದು – ಆದ್ರೆ ಆ ರಾಕ್ಷಸಕ್ಕ ಕಿಚ್ಚು ಕೊಡಲಿಲ್ಲ.

ಕ : ಕಿಚ್ಚೊಡದಿದ್ದಕ್ಕೆ ರಾಕ್ಷಸ ಶಾಪ ಆತಗ ತಟ್ಟಿತು!

ಹಿ : ಆಹಾ!

ಕ : ವಾಪಾಸು ತಿರುಗಿ ಬರ್ತಾ ಇದ್ದಾನೆ – ಕಮಲಗಂಧಿ ಮನಿಗೆ.

ಹಿ : ಆಕೀ ಅರಮನಿಗೆ.

ಕ : (ರಾಗವಾಗಿ) ಕಮಲಗಂಧಿ…ಮಾತಾಡೋ ಅಡಿಕಿ, ನಗೋ ಎಲಿ, ಕಮಲ ಹೂವು ತಂದುಕೊಟ್ಟಾಳೇ…….

ಹಿ : (ರಾಗವಾಗಿ) ಹೌದೇ………..

ಕ : (ರಾಗವಾಗಿ) ಜಳಕ ಮಾಡಿಕೊಂಡಾನ-

ಹಿ : ಆಹಾ!

ಕ : (ರಾಗವಾಗಿ) ಮೇಲ್ಗಂಡ ಹೋಗಾನು ನಡಿ ಮಡದೀ….ಮರ್ತ್ಯದಾಗ ಲಗ್ನ ಆಗೋನು.

ಹಿ : ಹೌದೂ…..

ಕ : ಹೊರಗಡಿಗೆ ಬರ್ಬೇಕಾದ್ರೆಕಂಚಿನ ಕೋಟಿ ರಾಕ್ಷಸ ಕುಂತಿತ್ತು ನೋಡ್ರಿ, ಅದು ಎದ್ದು ತಿನ್ನಾಕ ಬಂತು, ಅದಕ್ಕೂ ಸಂಹಾರ ಮಾಡಿದ; ಅದೂ ಪ್ರಾಣ ಬಿಡುವಾಗ

ಹಿ : ರಾಕ್ಷಸಿ ಏನಂತು-

ಕ : ನನಗೆ ಕಿಚ್ಕೊಟ್ಟು ಹೋಗು ಮಗನೇ; ನೀನು ಹೋದ ಕಾರ್ಯ ಕೈಗೂಡಲಿ-

ಹಿ : ಅಂತ ಆಶೀರ್ವಾದ ಮಾಡಿ ಪ್ರಾಣಬಿಟ್ಟಿತು.

ಕ : ಅದಕ್ಕೆ ಕಿಚ್ಚು ಕೊಟ್ಟಿದ್ರೆ ಮಗನಿಗೆ ಏನು ಕಷ್ಟ ಬರ್ತಿದ್ದಿಲ-

ಹಿ : ಆದ್ರೆ ಕಿಚ್ಚು ಕೊಡ್ಲಿಲ್ಲ!

ಕ : ಕಮಲಗಂಧಿ ಕರ್ಕೊಂಡು ಬಾವಿ ತಲಕ್ಕ ಬಂದು ನೋಡ್ತಾನೆ – ಒಂದೇ ತೊಟ್ಲ ಐತಿ!

ಹಿ : ಓಹೋ ಒಂದೇ ಒಂದು ತೊಟ್ಲ ಐತಿ!

ಕ : ಇನ್ನೆರಡು ತೊಟ್ಲ ಮ್ಯಾಲೆ ಅದಾವು ಅವುನ್ನ ಬರ ಮಾಡ್ತೀನಿ ಅಂದು ಕಾಗದ ಬರದಾ-

ಹಿ : ನೀಲಾ ನೀಲಾಂಜಿಯವರಿಗೆ!

ಕ : ಮೇಲಿರುವಂಥ ಎರಡು ತೊಟ್ಲ ಬಾವ್ಯಾಗ ಬಿಡಬೇಕು; ನಾವು ಮರ್ತ್ಯಕ ಬರುವವರಿದ್ದೀವಿ ಅಂತ ಬರ್ದು ಅದನ್ನ ಅಂಬಿಗೆ ಹಚ್ಚಿ ಮ್ಯಾಲೆ ಬಿಟ್ಟ – ಮರ್ತ್ಯಕ್ಕೆ.

ಹಿ : ಹೌದೂ!

ಕ : ನೀಲಾ ನೀಲಾಂಜಿ ದಂಡು ಕುಂತಂಥ ಜಾಗದ ಮಧ್ಯದಲ್ಲಿ ಬಂದು ಬಿತ್ತು ಅಂಬು!

ಹಿ : ಪತ್ರ ಓದಿದ್ರು-

ಕ : ಅವೆಳ್ಡು ತೊಟ್ಲ ಬಿಟ್ರು!

ಹಿ : ಓಹೋ!

ಕ : ಒಂದು ತೊಟ್ಲಾಗ ಮಾತಾಡೋ ಅಡಿಕಿ, ನಗೋ ಎಲಿ, ಕಮಲದ ಹೂವು, ಕರೇ ಉಚಿತೊಪ್ಲ, ಕಲ್ಲು ಸುಣ್ಣ ಐದು ವಸ್ತು ಮೊದಲು ಕೊಟ್ಟು ಕಳಿಸಿದಾ; ಎರಡ್ನೇ ತೊಟ್ಲಾಗ ಮಡದೀ ನೀನು ನಡೀ, ಮೂರ್ನೇ ತೊಟ್ಲಾಗ ನಾನು ಬರ್ತೀನಿ ಅಂದ ಪರಾಕ್ರಮಿ.

ಹಿ : ಹೌದೂ.

ಕ : ಕಮಲಗಂಧಿ ಹೇಳ್ತಾಳೆ – ನಾವಿಬ್ರೂ ಒಂದೇ ತೊಟ್ಲಾಗ ಹೋಗಾನs

ಹಿ : ಅಂದ್ರೂ ಕೇಳ್ಲಿಲ್ಲ ಮಗs!

ಕ : ಆ ಎರಡ್ನೇ ತೊಟ್ಲಾಗ ಕಮಲಗಂಧಿ ಕುಂತುಕೊಂಡು ಏಳು ಹಗಲು, ಏಳು ರಾತ್ರಿ ಏರಿ ಬಂದಾಗ ಮೇಲಿದ್ದ ನೀಲಾ ನೀಲಾಂಜಿ ನೋಡಿದ್ರೂ

ಹಿ : ಓಹೋ ತಮ್ಮಾ ನೀಲಾಂಜೀ!

ಕ : ಇಂಥಾ ದೇವತಾ ಸ್ತ್ರೀಯಳನ್ನು ಕಳಿಸಿದ ಪರಾಕ್ರಮಿ!

ಹಿ : ಓಹೋ ಎಂಥಾ ಹೆಣ್ಣು ! ಬಾಳಾ ಚನ್ನಾಗೈತಪ್ಪ!

ಕ : ದೇವಲೋಕದ ದೇವ ಹೆಣ್ಣು ! ಈಕಿ ರೂಪ ನೋಡ್ಲಿಕ್ಕೆ – ನಮ್ಮಿಬ್ಬರಿಗೆ ತಕ್ಕ ಮಡದಿ ಇಕೀ!

ಹಿ : ಹೌದೂ!

ಕ : ಕಮಲಗಂಧೀನ ಗುಡಿಯಾಗ ಕುಂದ್ರಿಸಿದ್ದು, ಇನ್ನೊಂದು ತೊಟ್ಲಾಗ ಬಂದಿದ್ದಂತ ಐದೂ ಸಾಮಾನೂ ತಮ್ಮ ಸ್ವಾಧೀನ ಮಾಡಿಕೊಂಡ್ರು.

ಹಿ : ಹೌದೂ!

ಕ : (ರಾಗವಾಗಿ) ಬಾವಿಯೊಳಗ ಇದ್ದ ವೀರ ಪರಾಕ್ರಮ ವಕ್ಕಳ ಘಂಟಿ ಧಡಲ್ ಅಂದ ಬಾರಿಸಿದ…. ಈ ನಮಃ ಶಿವಾಯ ಅಂತ್ಹೇಳಿ ತೊಟ್ಲದಾಗ ಕುಂತ ಏಳು ಹಗಲು ಏಳು ರಾತ್ರಿ ಕಳದು ಮೇಲಕ್ಕೆ ಬರ್ತಾ ಐತಿ ನೋಡ್ತಿ – ಪರಾಕ್ರಮಿ ತೊಟ್ಲು!

ಹಿ : ಆಹಾ!

ಕ : ನೀಲಾ ನೀಲಾಂಜಿ ಆಲೋಚಿನಿ ಮಾಡಿದ್ರು-

ಹಿ : ಏನಂತ?

ಕ : ಮೇಲೆ ಇವ್ನು ಬಂದ್ರೆ ನಮಗೆ ಪಟ್ಟಾ ಸಿಗೋದಿಲ್ಲ!

ಹಿ : ಹೆಣ್ಣೂ ದೊರೆಯೂದಿಲ್ಲ!

ಕ : || ಪದ ||

ತೊಟ್ಲದ ಹಗ್ಗ ಕೊಯ್ದಾರೈ….ಹರಹರ ಮಹಾದೇವ
ಪಾತಾಳಕ್ಕೆ ಕೆಡವ್ಯಾರೇ…..ಹರಹರ ಮಹಾದೇವ
ಆಗ ಮಗ ಬಿದ್ದಾ ನೋಡ್ರೀ…..ಹರಹರ ಮಾದೇವ
ಅವನ ತಲಿ ಬುರುಡಿ ಹೊಡ್ದು……ಹರಹರ ಮಾದೇವ
ಅವನು ಪ್ರಾಣ ಬಿಟ್ಟಾನ…..ಹರಹರ ಮಾದೇವ.

ಕ : ರಾಮಾ ರಾಮಾ ಅಂತ ಪ್ರಾಣ ಬಿಟ್ಟ!

ಹಿ : ವೀರ ಪರಾಕ್ರಮಿ.

ಕ : ನೀಲಾ ನೀಲಾಂಜಿ ಬಂದು ಗುಡಿಯಾಗ ನೋಡ್ತಾರೆ-

ಹಿ : ಆಹಾ ಕಮಲಗಂಧಿ!

ಕ : (ರಾಗವಾಗಿ) ಕಮಲಗಂಧಿ ನನಗs ಲಗ್ನ ಆಗೂ, ನನಗs ಲಗ್ನಾನೂ ಅಂತಾರೆ ಇಬ್ರೂ…..

ಹಿ : (ರಾಗವಾಗಿ) ಆಹಾss

ಕ : (ರಾಗವಾಗಿ) ಮಹಾರಾಜ್ರೇ, ಪತಿರಾಯನ ತೊಟ್ಲ ಕೌಯ್ದು ಮೋಸ ಮಾಡಿದ್ರೀ….ಆಗಲಿ ಹೋದ್ಯಾ ನನ್ನ ಪತೀ….ನಾನು ಎಷ್ಟು ಬೇಡ್ಕೊಂಡೆ ಕೇಳ್ಲಿಲ್ಲಾ……

ಹಿ : (ರಾಗವಾಗಿ) ಹೌದೂ…..

ಕ : (ರಾಗವಾಗಿ) ಬಿಟ್ಟು ಹೋದ್ರ್ಯಾ ರಾಜಾ….

ಹಿ : (ರಾಗವಾಗಿ) ಆಹಾss….

ಕ : ಆ ಪಾತಾಳದಾಗ ಬಿದ್ದು ಪ್ರಾಣ ಬಿಟ್ಟು ಕೊಟ್ಟಂಥ ಮಗನ ಜಲ್ಮ ದೇವಲೋಕಕ್ಕೆ ಹೋತು. ಕಮಲಗಂಧಿ ಗುಡಿಯಾಗ ಪಾರ ಇಟ್ಟು ನೀಲಾ ನೀಲಾಂಜಿ ತಂದಿ ಕಣ್ಣು ಪಡಿಯಾಕ ಬಂದ್ರು.

ಹಿ : ತಂದೇ, ನಾವು ಐದು ವಸ್ತು ತಂದೀವಿ, ಮಾತಾಡೋ ಅಡಿಕಿ, ನಗೋ ಎಲಿ, ಕಮಲದ ಹೂವು, ಕರೇ ಉಂಚಿ ತೊಪ್ಪ್ಲು, ಕಲ್ಲು ಸುಣ್ಣ ತಂದೀವಿ.

ಕ : ಮೂರ್ನು ಸಣ್ಣಾಗಿ ಅರದು ರಸಮಾಡಿ ಕಣ್ಣಾಗ ಬಿಟ್ರು, ಕಮಲದ ಹೂವಿನ ಬೆಳಕು ಕಣ್ಣಿಗೆ ತೋರಿಸಿದ್ರು; ಕರೆ ಉಂಚಿ ತೊಪ್ಲದ ಹೊಗಿ ಕಣ್ಣಿಗೆ ಕೊಟ್ಟಾಗ, ಪರಮಾತ್ಮ ಪಕ್ಕನೆ ರಾಜಗ ಕಣ್ಣುಕೊಟ್ಟ!

ಹಿ : ಮಕ್ಕಳಿಗೆ ನೋಡಿದಾ-

ಕ : ನೀಲಾ ನೀಲಾಂಜಿ ಮಕ್ಕಳಾ ನೀವು ಮಹಾಶೂರರು- ತೊಗಳ್ರಿ ಪಟ್ಟಾ!

ಹಿ : ಪಟ್ಲಾ ಈಗ್ಲೇ ಬೇಕಾಗಿಲ್ಲ ತಂದೇ, ಒಂದು ಹೆಣ್ಣಿಗೆ ಲಗ್ನ ಆಗೋವರಿಗೂ ನಮಗೆ ಪಟ್ಟ ಬೇಕಿಲ್ಲ.

ಕ : ಓಹೋ ಇವರು ಲಗ್ನಾಗೋ ಮನಸ್ಸು ಪಟ್ಟಾರೆ! ಗುಡಿಗೆ ಬರ್ತಾ ಇದಾರೆ ನೋಡ್ರಿ. ಇವರ ಕತಿ ಇಲ್ಲಿ!

ಹಿ : ಅಲ್ಲಿ!

ಕ : ಪರಾಕ್ರಮಿ ಪ್ರಾಣ ಹೋದ ತಕ್ಷ್ಣಕ್ಕೆ ಚಂದ್ರಾವತಿ ಮನಿ ಮುಂದಿನ ಎರಡೂ ಗಿಡ ಒಣಗಿದ್ವು!

ಹಿ : ಆಹಾ!

ಕ : ಹಡದ ತಾಯಿ ಇದನ್ನ ನೋಡಿ (ರಾಗವಾಗಿ) ದುಃಖ ಮಾಡ್ತಾಳಾ….ಯವ್ವಾ ನನ್ನ ಮಗ ಯಾವ ಹುಲಿ ಬಾಯಿಗೆ ಬಿದ್ನೋ…..ಯಾವ ಸರ್ಪ ಕಚ್ಚಿತೋ…. ಪರಮಾತ್ಮಾ…..

ಹಿ : ತಾಯಿ ದುಃಖ ಮಾಡೋದ ಪರಮಾತ್ಮ ತಿಳುದು-

ಕ : ಸತ್ತಂಥ ಮಗನ ಮ್ಯಾಲೆ ವಿಭೂತಿ ಚಲ್ಲಿದs-

ಹಿ : ಪರಮಾತ್ಮ!

ಕ : ತಾಯಿ ದುಃಖ ಮಾಡೋದ ಕೇಳಿ (ರಾಗವಾಗಿ) ಮಗ ಎದ್ದು ಕುಂತಾನೋ ಬಾವ್ಯಾಗs……

ಹಿ : (ರಾಗವಾಗಿ) ಹೌದೂ.

ಕ : ಓಹೋ ಹೆಣ್ಣಿನ ರೂಪಕ್ಕೆ ಮರುಳಾಗಿ, ಪಟ್ಣಕ್ಕೆ ಆಸಿ ಮಾಡಿ ನಮ್ಮ ಅಣ್ಗೋಳು ನನ್ನ ಪಾತಾಳಕ್ಕೆ ಕೆಡವಿದ್ರು!

ಹಿ : ಋಷಿಗೆ ಹೋಗಿ ಕೇಳ್ಬೇಕು;

ಕ : ನಮೋ ನಮಃ ಋಷಿಗಳೇ,

ಹಿ : ಶರಣಾರ್ಥಿ ಬಾ ಮಗನೇ, ಮೇಲೆ ಹೋದ ಮಗ ಪಾತಾಳಕ್ಕೆ ಬರ್ಲಿಕ್ಕೆ ಕಾರಣ ಏನು?

ಕ : ಮೋಸವಾಗಿರ್ಬೇಕು ಎರಡೂ ರಾಕ್ಷಸರ್ನ ಸಂಹಾರ ಮಾಡ್ದೇನು ಮಗನೇ?

ಹಿ : ಹೌದು ಮಾಡಿದೆ ತಂದೆ; ಅವರು ಕಿಚ್ಕೊಂಡು ಅಂದ್ರು ನಾನು ಕೊಡ್ಲಿಲ್ಲ.

ಕ : ಆಹಾ, ಹೋಗಿ ಕಿಚ್ಚುಕೊಟ್ಟು ಬರೋವರಿಗೂ ನಿನ್ನ ವನವಾಸ ತಿರೋದಿಲ್ಲ; ನಡೀ ವನವಾಸಕ್ಕೆ.

ಹಿ : ಹೌದೂ.

ಕ : ಇಪ್ಪತ್ನಾಲ್ಕು ಗಾವುದ ಮತ್ತೆ ವನವಾಸ ನಡೆದ ಮಗs, ಕರೇ ಕಂಚಿ ಕೋಟಿ ಬಾಗಲ್ದಾಗ ಕುಂತ ಕಂಚಿ ಮುಖದ ರಾಕ್ಷಸನ ಹತ್ರ ಬಂದು ಅದಕ್ಕ ಕಿಚ್ಚುಕೊಟ್ಟು ಕರೇ ಉಂಚಿ ಮರಕ್ಕೆ ಹೋಗಿ ಅದರ ಕೆಳಗೆ ಮಲಗಿದ.

ಹಿ : ರಾಕ್ಷಸನ ಹೆಣ ಸುಡಬೇಕಾದ್ರೆ ಸ್ವಲ್ಪ ಕಟಿಗಿ ಸಾಲ್ದು ಬಂದುವ್ರೀ!

ಕ : ಪರಾಕ್ರಮಿ ಆ ಕರೇ ಉಂಚಿ ಮರ ಹತ್ತಿ ಕಟಿಗಿ ಮುರದು ಹಾಕಿ ಸುಡೋ ಕಾಲಕ್ಕೆ ಹೊಗಿ ಆತು ;

ಹಿ : ಆ ಉಂಚಿ ತೊಪ್ಲದ ಹೋಗಿ ಸುತ್ತು ಮುತ್ತೂ ಎಲ್ಲಾ ಕವೀತು!

ಕ : ಅದೇ ಟೈಮಿನಲ್ಲಿ ಅಲ್ಲೇ ಮರದಲ್ಲಿ ಎರಡು ದೇವಲೋಕದ ಗಂಡಭೇರುಂಡ ಪಕ್ಷಿ ಕುಂತಿದ್ವು.

ಹಿ : ಆ ಪಕ್ಷಿಗಳು ಕಣ್ಣು ಹೋಗಿ ಹನ್ನೆರಡು ವರ್ಷ ಆಗಿದ್ವು. ಕೈಲಾಸದಲ್ಲಿ ಬೆಂಕಿ ಬಿದ್ದಾಗ ಕರುಡಾಗಿದ್ದವು.

ಕ : ಆ ಉಂಚಿ ತೊಪ್ಲದ ಹೊಗಿ ಕಣ್ಣಿಗೆ ಬಡಿದ ತಕ್ಷ್ನಕ್ಕೆ ಕಣ್ಣು ಬಂದ್ವು!

ಹಿ : ಅಪ್ಪಾ ನೀನು ಯಾರು? – ಆ ಪಕ್ಷಿ ಕೇಳ್ತಾವ.

ಕ : (ರಾಗವಾಗಿ) ನಾನು ಮರ್ತ್ಯಲೋಕದವನು, ನನಗೆ ಇಲ್ಲಿ ವನವಾಸ.

ಹಿ : (ರಾಗವಾಗಿ) ಹೌದೇ!

ಕ : ನೀನೇನೂ ಚಿಂತಿ ಮಾಡ್ಬೇಡಾ, ನಮ್ಮ ರೆಕ್ಕಿ ಮ್ಯಾಲೆ ಕುಂದ್ರು ನಿಮ್ಮ ತಾಯಿ ಹತ್ರ ಬಿಡ್ತೀವಿ – ಅಂದ್ವು ಪಕ್ಷಿಗಳು.

ಹಿ : ಓಹೋ

ಕ : ಪಕ್ಷಿಗಳು ರೆಕ್ಕಿಗೆ ರೆಕ್ಕಿ ತಗಲಿಸಿದಾಗ ಮ್ಯಾಲೆ ಮಗ ಕುಂತಾ!

ಹಿ : ಹೌದು,

ಕ : ಕುಂತ ಕೂಡ್ಲೇ ಅಂತರ ಮಾರ್ಗದಲ್ಲಿ ಆತನ್ನ ಮರ್ತ್ಯಕ್ಕೆ ತಂದ್ವು ನೋಡ್ರೀ

ಹಿ : ಚಂದ್ರಾವತಿ ಪಟ್ಣದ ಊರ ಮುಂದೆ ಇರುವ ವನಾಂತರದಲ್ಲಿ ರಾಜಕುಮಾರನ್ನ ಇಳಿಸಿದ್ವು.

ಕ : ಹೌದೂ!

ಹಿ : ಗಮನಾ ಅಂತ ದೇವಲೋಕಕ್ಕೆ ಹಾರಿಹೋದ್ವು ಆ ಪಕ್ಷಿಗಳು!

ಕ : ವೀರ ಪರಾಕ್ರಮಿ ವನವಾಸದಿಂದ ಮರ್ತ್ಯಕ್ಕೆ ಬರುವಾಗ ಬೂದಿ ಬಡ್ಕೊಂಡು ಕೈಯಾಗ ಕುಂಬಳಕಾಯಿ ಬುರ್ಡಿ ಹಿಡ್ಕೊಂಡು ಸನ್ಯಾಸಿಯಾಗಿ ನಡದಾನ! ಈ ಕಡಿಗೆ-

ಹಿ : ಇಲ್ಲಿ, ಆಂಜನೇಯನ ಅದೇ ಗುಡಿಯಲ್ಲಿ ಕಮಲಗಂಧಿ ಕುಂತಿದ್ಲು.

ಕ : ನೀಲಾ ನೀಲಾಂಜಿ ಅಣ್ಣ ತಮ್ಮಗಳು ಪುನಃ ನನ್ನ ಲಗ್ನಾಗು, ನನ್ನ ಲಗ್ನಾಗು ಅಂತಾರ ಆಕೀಗೆ!

ಹಿ : ಆದ್ರೆ ಆಕಿ ಒಂದು ಶರ್ತು ಹಾಕ್ತಾಳೆ,

ಕ : ವೀರ ಪರಾಕ್ರಮಿ ರಾಜನ ಕಥಿ ಹೇಳ್ರಿ ಅದನ್ನ ಕೇಳಿ ಲಗ್ನ ಆಗತೀನಿ – ಅಂದು! ಕಮಲಗಂಧಿ

ಹಿ : ಅದೇ ಟೈಮಿನಾಗ, ಅದೋ ನೋಡ್ರಿ ಅಲ್ಲಿ ಬರ್ತಾ ಅದಾರೆ – ಯಾರೋ ಸನ್ಯಾಸ್ಲಿ

ಕ : ಹೌದು ತಮ್ಮಾ!

ಹಿ : ನಮಗಂತೂ ಆತನ ಕತಿ ಗೊತ್ತಿಲ್ಲ; ಸನ್ಯಾಸಿ ಅಂದ ಮ್ಯಾಗ ಋಷಿ ಇದ್ಹಾಂಗ!

ಕ : ಋಷಿಗಳಿಗೆ ಏನ ಗೊತ್ತಿರೋದಿಲ್ಲ? ಯಲ್ಲಾ ಬಲ್ರು.

ಹಿ : ಅದಕಾಗಿ ಅವರ್ನ ಕೇಳೋಣ.

ಕ : (ರಾಗವಾಗಿ) ಸನ್ಯಾಸಿ ವೇಷದ ವೀರ ಪರಾಕ್ರಮಿ ಗುಡಿಗೆ ಬಂದಾ….

ಹಿ : ನಮೋ ನಮಃ ಸನ್ಯಸಿಗಳೇ

ಕ : ಏನುಬೇಕು ಮಕ್ಕಳಾ ನಿಮಿಗೆ?

ಹಿ : ಒಂದು ಪರಾಕ್ರಮಿ ಕತಿ ಹೇಳ್ತೀರಾ ಋಷಿಗಳೇ!

ಕ : ಓಹೋ ಅಗತ್ಯ ಆಗಲಿ; ಆ ಕತಿ ಸಂಪೂರ್ಣ ಅನುಭವ ಐತಿ! ನಾನು ಹೇಳ್ತೀನಿ-

|| ಪದ ||

ಯಾರಿಗೂ ಯಾರಿಲ್ಲ ಎರವಿನ ಸಂಸಾರ
ಯಾರಿಗೂ ಯಾರಿಲ್ಲ ಎರವಿನ ಸಂಸಾರ
ನೀರ ಮ್ಯಾಗಿನ ಗುಳ್ಳಿ ನಿಜವಿಲ್ಲ ಹರಿಯೆ || ||
ಬಾಯಾರಿತೂ ಎಂದು ಬಾವಿ ನೀರಿಗೆ ಹೋದೆ
ಬಾವಿಯ ಜಲಬತ್ತಿ ಬರಿದಾಯಿತು ಹರಿಯೆ
ಬಿಸಿಲುಗಾಳಿಗೆ ಬೆದರಿ ಮರದ ನೆರಳಿಗೆ ಹೋದೆ
ಮರಬಾಗಿ ಶಿರದ ಮೇಲೆ ಎರಗೀತು ಹರಿಯೆ
ಅಡವಿಯೋಳ್ ಮನೆ ಮಾಡಿ ಗಿಡಕೆ ತೊಟ್ಟಿಲ ಕಟ್ಟಿ
ತೊಟ್ಟಲಿನೊಳು ಶಿಶುವ ಮಾಯ ಮಾಡಿದ ಹರೀ
ತಂದೆ ಶ್ರೀ ಪುರಂದರ ವಿಠ್ಠಲ ನಾರಾಯಣ
ನಾ ಸಾಯೋ ಹೊತ್ತಿಗೆ ನೀ ಕಾಯೋ ಹರಿಯೆ

ಹಿ : ಸನ್ಯಾಸಿಗಳೇ ಆ ಪರಾಕ್ರಮಿ ಕತಿ ಸಂದರ್ಭ ಏನೈತಿ ತಿಳಿಸ್ರೀ.

ಕ : ಹಂಗಾದ್ರ ನಿಮ್ಮ ತಂದಿ-ತಾಯಿ, ನಿಮ್ಮ ಮಂತ್ರಿ, ನಿಮ್ಮ ಬಂಧು ಬಾಂಧವರ್ನೆಲ್ಲಾ ಕರ್ಕೊಂಡು ಬಂದು ಒಂದು ಗುಡಿಯಾಗ ಸಭಾ ಮಾಡ್ರಿ; ನಾನು ಆ ಕತಿ ಹೇಳ್ತೀನಿ ಅಂದ ಬೂದಿಬಡಕ ಸನ್ಯಾಸಿ!

ಹಿ : ಹೌದೂ

ಕ : ಚಂದ್ರ೦ಸೇಕ ರಾಜಾ, ಸೂರ್ಯಕಾಂತಿ ವಿಧಿ, ಚಂದ್ರಾವತೆಮ್ಮ, ದಂಡು, ಮಂತ್ರಿ, ರೈತರು ಬ್ಯಾಡ್ರು, ಕುರುಬ್ರು, ವಕ್ಕಲಿಗರು, ಶೆಟ್ರು ಊರಾಗಿನ ಎಲ್ಲಾ ಜನ ಗುಡಿಗೆ ಬರೋಬ್ಬರಿ ಕಲುತ್ರು!

ಹಿ : ಹೌದು ಸೇರಿದ್ರು!

ಕ : ಸಭಿಕರ ಸಭಾದಾಗ ಬೂದಿಬಡುಕನಾಗಿ ಏಕದಾರಿ ತೊಗೊಂಡು ಬಂದು ನಿಂತನ ಮಗ-

ಹಿ : ಕತಿ ಹೇಳ್ತಾನ-

ಕ : ಇದೇ ಚಂದ್ರಾವತಿ ಪಟ್ಣದಲ್ಲಿ ಚಂದ್ರಸೇಕ ಮಹಾರಾಜಾ ರಾಜಕೀ ಆಳ್ತಾ ಇದಾನೆ. ಆತನ ಮಡದಿ ಚಂದ್ರಾವತಿಗೆ ಮಕ್ಕಳಿರಲಿಲ್ಲ ಪ್ರಜೆಗಳೇ!

ಹಿ : ಓಹೋ

ಕ : ಪರಮಾತ್ಮನ್ನ ಒಲಿಸಿ ಉತ್ತುತ್ತಿ ಫಲ ತೊಗೊಂಡು ಬರೋವ್ಯಾಳ್ಯಾದಲ್ಲಿ ದಾರಿ ಮಾರ್ಗದಲ್ಲಿ ವಿಧಿ ಮಾಯಿ ಬಂದು ಮಕ್ಕಳ ಫಲ ಕಸ್ಕೊಂಡು ಲಗ್ನವಾಗೋ ಸಂದರ್ಭದಲ್ಲಿ ಹಿರೇ ಮಡದಿ ಚಂದ್ರಾವತೆಮ್ಮಗೆ ಚಂದ್ರಸೇಕ ಮಹಾರಾಜ ಧಿಕ್ಕಾರ ಮಾಡಿ ದೂಡಿದಾ.

ಹಿ : ಆಹಾ!

ಕ : ಊರೊಳಗೆ ಲಗ್ನವಾದಂಥ ಸೂರ್ಯಕಾಂತಿ ಮೇಗಳ ತೊಗಟಿ ಊಟ ಮಾಡಿದ್ದಕ್ಕೆ ಅವಳಿ ಜವಳಿ ಇಬ್ರು ಮಕ್ಕಳ್ನ ಪಡದ್ಲು ! ಒಳಗಿನ ಬೀಜ ಚಂದ್ರಾವತೆಮ್ಮಗ ಸಿಕ್ಕಾಗ ಸತಿಪತಿಗೆ ಪರಮಾತ್ಮ ಕಲಿಸಿದಾಗ ಆಯಮ್ಮನ ಹೊಟ್ಟ್ಯಾಗ ವೀರ ಪರಾಕ್ರಮಿ ಹುಟ್ಟಿದ!

ಹಿ : ಆಹಾ!

ಕ : ಸೂರ್ಯಕಾಂತಿ ಹೊಟ್ಟಿಯಲ್ಲಿ ಮಕ್ಕಳು ಹುಟ್ಟಿದ ಸಲುವಾಗಿ ಚಂದ್ರಸೇಕ ರಾಜನ ಕಣ್ಣು ಹೋಗಿ ಹನ್ನೆರಡು ವರ್ಷಾಗ್ಯಾವೆ. ಈ ಹನ್ನೆರಡು ವರ್ಷಾನೂ ಹಿರೇದಂಪ ಚಿಕ್ಕದಂಪ ರಾಜರಿಗೆ ಚಂದ್ರಸೇಕ ರಾಜ ಕಪ್ಪ ಸಲ್ಲಿಸ್ಲಿಲ್ಲ! ಅದಕ್ಕಾಗಿ ಅವರು ಬಂದು ತಂದಿ ಇಬ್ಬರು ಮಕ್ಳನ್ನೂ ಹೆಡಮುರಿಗಿ ಕಟ್ಟಿಕೊಂಡು ಒಯ್ಯಬೇಕು ಅನ್ನೋ ಟೈಮಿನಾಗ ಆ ಪರಾಕ್ರಮಿ ಬಂದು ಯುದ್ಧಮಾಡಿ ಅವರ ಸೆರಿ ಬಿಡಿಸಿದ.

ಹಿ : ಸೋಲಿಸಿ ಕಳಿಸಿದ.

ಕ : ಹಿರೇದಂಪ ಚಿಕ್ಕದಂಪ ತಂಗಿ ಕಮಲಾವತಿ. ಆಕಿ ಸ್ವಯಂವರದಲ್ಲಿ ಮುವ್ವತ್ತು ಮಣ ಸಿಡಿ ಎತ್ತಿ, ಹನ್ನೆರಡು ಮಣದ ಗುಂಡು ಪಾತಾಳ ಬಾವಿಯಿಂದ ಮ್ಯಾಲಕ್ಕೆ ಒಗದು ಕಮಲಾವತಿ ಗೆದ್ದ!

ಹಿ : ಹೌದೂ.

ಕ : ಕಮಲಾವತೀನ ಗೆದ್ದು ಬರೋ ಮಾರ್ಗದಲ್ಲಿ ಈ ವೀರ ಪರಾಕ್ರಮಿ ರಾಜನ ಕತಿಯೊಳಗೆ ಹಿಡಂಬಗೆ ಕೊಲ್ಲಿ ರತ್ನಾವತಿ ಅಂಬೋ ಹೆಣ್ಣನ್ನು ಗೆದ್ದ. ಚಂದ್ರಸೇಕ ರಾಜನ ಕಣ್ಣು ಹೋಗಿದ್ದುವಲ್ಲ – ಅದಕ್ಕಾಗಿ ಪಂಡಿತ ಶಾಸ್ತ್ಯ್ರೀಗಳು ಹೊತ್ತಿಗೆ ತಗದು ನೋಡಿ ಮಾತಾಡೊ ಅಡಿಕಿ, ನಗೋ ಎಲಿ, ಕಮಲದ ಹೂವು, ಕಲ್ಲುಸುಣ್ಣ, ಕರೇ ಉಂಚಿ ತೊಪ್ಲ ತಂದ್ರೆ ಕಣ್ಣು ಬರ್ತಾವೆ ಅಂತಾ ಹೇಳಿದ್ರು, ಆದ್ರೆ ನೀಲಾ ನೀಲಾಂಜಿ ಕೈಲೆ ಆಗಲಿಲ್ಲ.

ಹಿ : ಆಹಾ!

ಕ : ಪರಾಕ್ರಮಿ ಬಾವಿ ಒಳಗೆ ಹೋಗಿ ಆ ಐದು ವಸ್ತು ತಂದು ತಂದೆಗೆ ಕಣ್ಣು ಪಡೆದ. ವನವಾಸ ತೀರಿಸ್ಕೊಂಡು ಈಗ ನಿಂತ್ಕೊಂಡ ಈ ಕಥಾ ಪ್ರಸಂಗದಲ್ಲಿ ಈ ಸಭಾ ಮಂಟಪದಾಗೆ ನನ್ನ ಎದುರಿಗೆ ಕುಂತು ಕೇಳುವಾತನೆ ಚಂದ್ರಸೇಕ ರಾಜ, ಬಲಭಾಗದಲ್ಲಿ ಕುಂತು ಕಥಿ ಕೇಳಿದಾಕೇ ತಾಯಿ ಚಂದ್ರಾವತಿ; ಎಡಭಾಗದಲ್ಲಿ ಕುಂತು ಕಥಿ ಕೇಳಿದಾಕೇ ದೇವಲೋಕದ ವಿಧಿ ಸೂರ್ಯಕಾಂತಿ!

ಹಿ : ಆಹಾ!

ಕ : ನನ್ನ ಹಿಂದೆ ನಿಂತ್ಕೊಂಡು ಕಥಿ ಚಾಲೂ ಮಾಡಿಸಿದೋರೆ ನೀಲಾ ನೀಲಾಂಜಿ – ನನ್ನ ಅಣ್ಣನವರು; ವನವಾಸ ತೀರಿಸ್ಕೊಂಡು ಬಂದು ಕಥಿ ಮುಗಿಸಿದವನೇ ನಾನು, ಪರಾಕ್ರಮಿ – ಅಂತ ಹೇಳಿ, ಗಡ್ಡಬಿಚ್ಚಿ, ನಿಜರೂಪ ತೋರಿಸಿಬಿಟ್ಟ – ತಂದೆ ತಾಯಿಗಳಿಗೆಲ್ಲ.

ಹಿ : ಹುಟ್ಟಿದರೆ ಹುಟ್ಬೇಕು ಇಂಥ ಮಹಂತ ವೀರ ಮಗ!

ಕ : ಸೂರ್ಯಕಾಂತಿ ಎದ್ದು ಬಂದು ಅಂತಾಳೆ – ಹೌದು ಮಗನೇ ನೀನು ಗಂಭೀರ, ವೀರ, ಪರಾಕ್ರಮಿ! ನೀನು ಹೇಳಿದ್ದೆಲ್ಲಾ ನಿಜಾನೆ. ನನ್ನ ಬಂಜೆತನ ಇಲ್ಲಿಗೆ ಇಂಗಿತು; ನನ್ನ ಮಕ್ಕಳ್ನ ನಿನ್ನ ಕೈಯಲ್ಲಿ ಕೊಟ್ಟೆ; ಇದೋ ನಾನು ಹೊರಟೆ….

ಹಿ : ಸೂರ್ಯಕಾಂತಿ ಹೊರಟು ಹೋದ್ಲು – ಕೈಲಾಸಕ್ಕೆ.

ಕ : ತಾನು ಗೆದ್ದು ತಂದಿದ್ದನಲ್ಲ – ರತ್ನಾವತಿ, ಕಮಲಾವತಿ ಆ ಎರಡೂ ಹೆಣ್ಣುಗಳನ್ನು ತನ್ನ ಇಬ್ರೂ ಅಣ್ಣನವರಿಗೆ ಲಗ್ನ ಮಾಡಿದ; ತಾನು ಪಾತಾಳದಿಂದ ತಂದಂಥಾ ಹೆಣ್ಣು ದೇವಕಮಲಗಂಧಿಗೆ ತಾನು ಲಗ್ನಾದ. ಇಬ್ಬರೂ ಅಣ್ಣನವರಿಗೆ “ಕುಂತು ಪಟ್ಟ” ಕೊಟ್ಟು ತಾನು “ನಿಂತು ಪಟ್ಟಾ” ತೊಗೊಂಡು ವೈಭವದಿಂದ ರಾಜತ್ವ ಆಳಿದಂಥಾ ವೀರ ಪರಾಕ್ರಮ ರಾಜನ ಕತಿ ಇಲ್ಲಿಗೆ ಮುಕ್ತಾಯ.

 || ಮಂಗಳ ಪದ ||

ಶಂಕರಾ ಪಾರ್ವತಿ ಜಯ ಮಂಗಲಂ
ಶಂಕರಾ ಪಾರ್ವತಿ ಜಯ ಮಂಗಲಂ
ಕಾಲ ಭಯದಿ ಬಳಲಿದ ಬಾಲನ ಮುದದಿ
ಕಾಲ ಭಯದಿ ಬಳಲಿದ ಬಾಲನ ಮುದದಿ
ಪಾಲಿಸು ದೈವಗಿರಿ ದೀನನನು
ಪಾಲಲೋಲಗೆ ಜಯ ಮಂಗಲಂ ಬಾಲಲೋಲಗೆ ಜಯ ಮಂಗಲಂ
ಶ್ರೀ ಆನಂದ ಮಧುಸೂದನ ಪದ್ಮನಾಭ ನಾರಾಯಣ
ಜನಾರ್ಧನ ಆನಂದ ಘನ ಅವಿನಾಶ ಸಕಳ ದೇವಾಧಿದೇವ
ಕೃಪಾಳು……..

ಕೇಶವಾ ಮಹಾನಂದ ಮಹಾನುಭಾವ
ಸದಾಶಿವ ವಿಶ್ವಬಲ ಗರುಡಧ್ವಜ ಕರುಣಾಕರ
ಸಹಸ್ರ ಪಾದ ಕ್ಷೀರಸಾಗರ ಶೇಷ ಶಯನ
ಕಮಲರಾಯನ ಮೋಹನ ಮುದನೆ
ಓಂಕಾರ ಪ್ರಧಾನ ರೂಪ ಗಣೇಶಾಂಚೆ
ಆಕಾರ ಬ್ರಹ್ಮ ಉಕಾರ ವಿಷ್ಣು
ಮಕರ ಮಹೇಶ ಜಾಣಿಯಾಲೆ
ಓಂಕಾರ ಪ್ರಧಾನ ರೂಪ ಗಣೇಶಯಾಚೆ
ಪುರಾಣೆ ವ್ಯಾಸಾಂಚೀಯ