ಕ : (ರಾಗವಾಗಿ) ಯಪ್ಪಾ ಮುವ್ವತ್ತು ಮಣದ ಸಿಡಿ ಎತ್ತಿದೋ ಮಹಾತ್ಮಾ!

ಹಿ : ಹೌದೇ….

ಕ : (ರಾಗವಾಗಿ) ಈ ಸಿಡಿ ಎತ್ತಿದ ಪ್ರಕಾರವಾಗಿ ನೀನು ಬಾವ್ಯಾಅ ಇಳುದು ಗುಂಡು ಎತ್ತಿದ್ರೆ ನಿನ್ನ ಪ್ರಾಣ ಹೋಗ್ತೈತಿ ಬದುಕಿ ಬರೋದಿಲ್ಲಾ….ಬ್ಯಾಡ ಮಗನಾ….

ಇಳಿಬ್ಯಾಡ ಮಗನs.

ಹಿ : ಹೌದೂ.

ಕ : ಆಹಾ ಏನ್ರೀ ರಾಜ್ರೇ, ಕಮಲಾವತಿ ಸ್ವಯಂವರಕ್ಕ ಬಂದ ಬಳಿಕ ಸಿಡಿ ಎತ್ತಿದ ಪ್ರಕಾರಕ್ಕೆ ಪಾತಾಳ ಬಾವ್ಯಾಗ ಇಳುದು ಗುಂಡು ತೂರಾಕಬೇಕು-

ಹಿ : ಇಲ್ಲಿದ್ರ ಹೆಂಗs!

ಕ : ಎಲ್ಲರ ಆಶೀರ್ವಾದ ಇರ್ಲಿ ಅಂತ್ಹೇಳಿ-

|| ಪದ ||

ಬಾವ್ಯಾಗ ಇಳಿದಾನಾ…….ಹರಯನ್ನ ಮಾದೇವ
ಬಾವ್ಯಾಗ ಇಳುದಾ ನಿಂತಾನ…….ಹರಯನ್ನ ಮಾದೇವಾ
ನೀಲಾ ನೀಲಂಜಿ……..ಹರಯನ್ನ ಮಾದೇವ
ಹಿರೇದಂಪ ಚಿಕ್ಕದಂಪ……..ಹರಯನ್ನ ಮಾದೇವ
ದೊಡ್ಡದುಂಡಿ ತಂದಾರೆ………ಹರಯನ್ನ ಮಾದೇವ
ಎತ್ತಿ ಬಾವ್ಯಾಗ ಒಗದಾರ……….ಹರಯನ್ನ ಮಾದೇವ
ಬಾವ್ಯಾಗ ಬೀಳುವಾಗ ದುಂಡಿ ನೋಡ್ಯಾನ…….ಶಿವಯನ್ನ ಮಾದೇವ
ಎದಿಕೊಟ್ಟು ನಿಂತಾನ………ಶಿವಯನ್ನ ಮಾದೇವ.

ಕ : ಬೀಳೋ ದುಂಡಿ ನೋಡಿ, ಎದಿಸೆಟಿಸಿ ನಿಂತ ಪರಾಕ್ರಮಿ.

ಹಿ : ಹೌದು.

ಕ : ಹಡದ ತಾಯಿಗೆ ನೆನಸಿ ಎಡಗೈಲಿ ಚಂಡು ಹಿಡಿದ್ಹಾಂಗ ಹಿಡಿತಾನ – ಹನ್ನೆರಡು ಮಣದ ಗುಂಡು!

ಹಿ : ಆಹಾ!

ಕ : ಎಲ್ಲಾ ರಾಜ್ರೂ ನೋಡಿ ಅಂತಾರೆ – ಮಗ ಸತ್ತಾ! ದುಃಖ ಮಾಡ್ತಾರೆ – ವೀರ ಪರಾಕ್ರಮಿ ಅಯ್ಯೋ ಪ್ರಾಣ ಬಿಟ್ಟ ಅಂತ!

ಹಿ : ಆದರೆ

ಕ : ಕೇಕಿ ಹೊಡದ ಮಗ!

ಹಿ : ಹೌದು.

ಕ : ಆ ಪಾತಾಳ ಬಾವ್ಯಾಗಿನ ಆ ಗುಂಡು ಎತ್ತಿ ಹಿಡಕೊಂಡು ಬೀಸಿ ಮ್ಯಾಲೆ ಒಗೀತೀನಿ ಅಂತ ಕೂಗಿದ್ಲು ಕೇಳಿ ರಾಜ್ರೆಲ್ಲಾ-

ಹಿ : ಹೆದರಿದ್ರು.

ಕ : ನಮ್ಮ ತಲಿಮ್ಯಾಗ ಎಲ್ಲಿ ಬೀಳ್ತೈತೋ ಓಡ್ರಿ ಜಲ್ದಿ ಅಂತ

ಹಿ : ದಿಕ್ಕಾಪಾಲಾಗಿ ಹೋಗಿಬಿಟ್ರು ದೂರ!

ಕ : ವೀರ ಪರಾಕ್ರಮಿ ಗುಂಡು ಎತ್ತಿ ಮ್ಯಾಲ ಒಗದ; ಸೀದಾ ಆಕಾಶಕೆ ಪುಟುದು ಭೂಮಿ ಮ್ಯಾಲೆ ಬಂದು ಬಿತ್ತು!

ಹಿ : ಹಿರೇದಂಪ ವಿಕ್ಕದಂಪಗೆ ಹೇಳ್ತಾನೆ – ತಮ್ಮಾ,

ಕ : ಈಗ ನಾವು ಅಡವಿ ಸಿಪಾಯಿಗೆ ನಮ್ಮ ತಂಗಿ ಕೊಡೋದಿಲ್ಲ ಅಂದ್ರ ನಮ್ಮ ಮ್ಯಾಲೆ ಯುದ್ಧ ಮಾಡ್ತಾನೆ,

ಹಿ : ಮತ್ತೆ ಸೋಲ್ತೀವಿ!

ಕ : ಲಗ್ನ ಮಾಡಿಕೊಟ್ಟು ಬಿಡೋನು.

ಹಿ : ಹೌದು ಕೊಟ್ಟೇ ಬಿಡಾನs

ಕ : ಆಹಾ ವೀರಾಧಿವೀರನೇ ನಮ್ಮ ತಂಗೀ ಲಗ್ನ ಆಗೋದಕ್ಕ ನೀನು ಬರ್ಬೇಕು,

ಹಿ : ಹೌದು, ಬರ್ಬೇಕು.

ಕ : ಆಹಾ! ಹಿರೇದಂಪ ಚಿಕ್ಕದಂಪರೇ, ಮುವ್ವತ್ತು ಮಣದ ಸಿಡಿ ಎತ್ತಿ, ಹನ್ನೆರಡು ಮಣದ ಗುಂಡು ಹಿಡ್ದು ಮೇಲಕ್ಕೆ ಒಗದು ನಿಮ್ಮ ತಂಗೀ ಗೆದ್ದೀನಿ ಅಂತ್ಹೇಳಿ ನೀವು ಹೇಳಿದ ಪ್ರಕಾರ ನಿಮ್ಮ ಊರಾಗ ಲಗ್ನವಾಗಲಾರೆ ನಾನು.

ಹಿ : ಹ್ಯಂಗ? ಯಾಕೆ?

ಕ : ನನ್ನ ಹಿಂದೆ ಒಂದು ನನ್ನ ಊರಾಗೇ ಲಗ್ನ ಮಾಡಿಕೊಟ್ಟು ಬರ್ಬೇಕು – ಅಂತ ಗಟ್ಟಿ ದನೀಲೆ ಹೇಳಿದ.

ಹಿ : ಹಾಗೇ ಆಗಲಿ ಮಾರಾಯ ಬರ್ತೀವಿ.

ಕ : ಬಂದ ರಾಜರಿಗೆಲ್ಲಾ ಉಪಚಾರ, ಉಡುಗೊರೆ – ತೊಡುಗೊರೆ, ವೀಳ್ಯಾ ಕೊಟ್ಟು ಕಳಿಸಿದ್ರು ಹಿರೇದಂಪ ಚಿಕ್ಕದಂಪ.

ಹಿ : ಹೌದು.

ಕ : ಮರುದಿವಸ ತಂಗಿ ಕಮಲಾವತಿ ಕರ್ಕೊಂಡು ಲಗ್ನ ಮಾಡಿಕೊಟ್ಟು ಬರ್ಬೇಕು ಅಂತ್ಹೇಳಿ ಅಣ್ನ-ತಮ್ಮಾ ಸಂಭ್ರಮದಿಂದ ಬರಬೇಕಾದ್ರೆ-ನೋಡ್ರಿ ಒಳ್ಳೇ ಮಧ್ಯದಾರಿಯೊಳಗೆ ಹೊತ್ತು ಮುಳುಗಿತು.

ಹಿ : ಅಲ್ಲಿ ಯಾವೂರೈತ್ರೀ?

ಕ : ಘನ ಚಕ್ರವರ್ತಿ ಪಟ್ಣದಲ್ಲಿ ಚಕ್ರೋಸೇನ ಮಹಾರಾಜನ ಊರ ಮುಂದೆ ವನಾಂತರಕ್ಕೆ ಬಂದು ಎಲ್ಲರೂ ವಸ್ತಿಯಾದ್ರು. ರಾತ್ರಿ ಮಲ್ಕೊಂಡ್ರು; ಕಮಲಾವತಿ ಡೇರಾದಾಗ ಮಲಿಗ್ಯಾಳ, ಇನ್ನಿದ್ದರೆಲ್ರೂ ದಂಡು ಸಿಬ್ಬಂದಿ ಸಹಿತ ಸುತ್ತಲೂ ಮಲಕ್ಕೊಂಡಾರs.

ಹಿ : ಹೌದು.

ಕ : ಘನ ಚಕ್ರವರ್ತಿ ಪಟ್ಣಕ್ಕೆ ಏನು ದಾಳಿ ಇಟ್ಟೈತ್ರಿ ರಾಕ್ಷಸ! ಕಣ್ಣು ಬಂಡಿಗಾಲಿ, ಮೂಗು ಕುಂಬಿಕೆಜ್ಜಿ, ಹಲ್ಲು ಕುಂಟಿಕೂರ್ಗಿ, ಅಗಸಿಯಂತ ಬಾಯಿ!

ಹಿ : ಆಹಾ!

ಕ : ಹಿಂಡಂಬ, ಗಂಡು ರಾಕ್ಷಸ ಆ ಊರಿಗೆ ಬರ್ತೈತಿ; ಮಂದಿ ಮಕ್ಕಳಿಗೆ ತಿನ್ನೂ ವಲ್ಲದ್ರೀ! ಪತಿವ್ರತಾ ಸ್ತ್ರೀಯರಿಗೆ ಧರ್ಮ ಕೆಡಸಾಕ ನಿಂತೈತ್ರೀ!

ಹಿ : ಚಕ್ರೋಸೇನ ರಾಜ ಏನಂತ ಬೋರ್ಡು ಹಾಕ್ಯಾನ ನೋಡ್ರಿ-

ಕ : ಆ ಹಿಡಂಬಗ ಯಾರು ಹೊಡೀತಾರೋ ಅವರಿಗೆ ನನ್ನ ಮಗೌ ರತ್ನಾವತಿ ಕೊಟ್ಟು ಲಗ್ನ ಮಾಡ್ತೀನಿ.

ಹಿ : ಹೌದು ಆದ್ರೆ-

ಕ : ಯಾರಿಗೂ ಆ ರಾಕ್ಷಸ ಸಿಕ್ಕಿಲ್ಲ; ಅದು ಸಂಹಾರ ಆಗಿಲ್ಲ! ಇವರು ಬೆಳ್ಳಂಬೆಳ್ಳಕ್ಕಿಯಿಂದ ಬಂದೋರು ಆ ಊರ್ಮುಂದಿನ ವನಂತರದಾಗ ವಸ್ತಿ ಆಗಿದ್ರಲ್ಲ-

ಹಿ : ಹೌದು,

ಕ : ಅವತ್ತು ರಾತ್ರಿ ಹಿಡಂಬ ಬಂತು ಆ ಊರಿಗೆ;

ಹಿ : ಆಹಾ ಊರ್ಮುಂದೆ ನೋಡ್ತು; ಇದು ಸಿಬ್ಬಂದಿ!

ಕ : ಇದು ಯಾವುದೋ ವಸ್ತಿ ಆಗೇತಿ! ಇದರಾಗ ನನಗೆ ತಕ್ಕಂಥ ಮಡದಿ ಸಿಕ್ಕರೆ ನನ್ನ ಮನಿಗೆ ಒಯ್ಯಬೇಕು ಅಂದುಗೊಳ್ಳತೈತಿ ಹಿಡಂಬ!

ಹಿ : ಹೌದು; ದಂಡಿನ ಮಧ್ಯದಾಗ ಬಂದು ನೋಡ್ತೈತಿ – ಯಾರೂ ಇಲ್ಲ!

ಕ : ಕಮಲಾವತಿ ಮಲಗಿದ್ದು ಕಣ್ಣಿಗೆ ಬಿತ್ತು! ಓಹೋ ಇಲ್ಲಿ ಮಲಿಗ್ಯಾಳ ನನಗೆ ತಕ್ಕ ಮಡದಿ!

ಹಿ : ಹೌದು!

ಕ : ಈಕೀಗೆ ಒಯ್ದು ನನ್ನ ಮನಿಯಾಗ ನನ್ನ ಮಡದಿ ಮಾಡ್ಕೋಬೇಕು – ಅಂತ್ಹೇಳಿ ಆ ಹೆಣ್ಣಿಗೆ ಎತ್ತಿ ಹೆಗಲ ಮ್ಯಾಲೆ ಇಟ್ಕೊಂಡು ಹೋಗ್ತಾ ಐತಿ – ರಾಕ್ಷಸ!

ಹಿ : ಫಕ್ಕನೆ ಕಮಲಾವತಿ ಎಚ್ಚರಾಗಿ ನೋಡಿದ್ಲು!-

ಕ : ಅಣ್ಣಾ (ರಾಗವಾಗಿ) ಹಿರೇದಂಪಣ್ಣಾ….ಚಿಕ್ಕದಂಪಣ್ಣಾ….ನಿಮಗೆ ಎಂಥಾ ನಿದ್ದಿ ಹತ್ತೇತೀ…ಏಳ್ರೀ…ಎದ್ದೇಳ್ರಿ….ಹಿಡಂಬ ನನ್ನ ಒಯ್ತಾ ಐತಣ್ಣಾ….ನನಗೆ ಸೆರೆ ಬಿಡಿಸ್ರೀ…..

ಹಿ : ಆಹಾ!

ಕ : ಈ ದುಃಖ ಮಾಡಂಥ ಶಬ್ದ ಪರಾಕ್ರಮನ ಕಿವಿಗೆ ಬಿತ್ತು; ಕೈಯಾಗ ಜಾಲೀ ಟೊಳಪಿ ತೊಗೊಂಡು ಬೆನ್ನುಹತ್ತಿದ.

ಹಿ : ಆಹಾ!

ಕ : ಲೋ ಹಿಡಂಬಾ! ನಿಂದ್ರು ನಾನು ಗೆದ್ದಂಥ ಹೆಣ್ಣಿಗೆ ನೀನು ಕರ್ದೊಯ್ತೀಯಾ?- ಅಂತ್ಹೇಳಿ ಬಂದು ಬಂದದ್ದೇ ಹಿಡಂಬಾ ತೆಲಿಗೆ ಜಾಲಿ ಟೊಳಪಿಲೆ ಬಿಟ್ಟ – ಏಟು; ರಾಮ ಅಂತ ಪ್ರಾಣ ಬಿಡ್ತು ಹಿಡಂಬಾ,

ಹಿ : ರಾಕ್ಷಸ!

ಕ : ಕಮಲಾವತಿಗೆ ಕರ್ಕೊಂಡು ಬಂದು ಡೇರಾದಾಗ ಮಲಗಿಸಿದ ತನ್ನ ಡೇರಾಕ ತಾನು ಮಲಗಿದಾ.

ಹಿ : ಹೌದೂ.

ಕ : ಮುಂಜಾನೆ ಬೆಲಕಾದಾಗ ಆ ಊರ ಚಕ್ರೋಸೇನ ರಾಜನ ದಂಡು ಸಿಬ್ಬಂದಿ ಎಲ್ಲರೂ ನೋಡ್ತಾರೆ – ಹಿಡಂಬ ಬಿದ್ದೈತಿ ಪ್ರಾಣಬಿಟ್ಟು!

ಹಿ : ಯಾರು ಇದು ಹೊಡದದ್ದು ಮಹಾಶೂರ ಗಂಭೀರವಾದಂಥ ಪರಾಕ್ರಮಿ?

ಕ : || ಪದ ||

ಓಹೋ ಭಲೇ ಇರ್ಬೇಕ್ರೀ ನಿಮ್ಮ ಅಳಿಯ…..ಶಿವಹರ ಮಾದೇವ
ಮಗಳಿಗೆ ರತನಾವತಿಗೆ ಪಡದ……ಶಿವಹರ ಮಾದೇವ

ಕ : ನನ್ನ ಮಗಳಿಗೆ ಲಗ್ನವಾಗಬೇಕು ನೀನು.

ಹಿ : ಹೌದು ಆಗ್ಬೇಕು.

ಕ : ಬರ್ರೀ ನನ್ನ ಊರಾಗ ನನ್ನ ಲಗ್ನ ಮಾಡಿಕೊಟ್ಟು ಬರುಮಂತ್ರೀ – ಅಂತ ಅಂದು ಆ ರತ್ನಾವತಿಗೆ ಕರ್ಕೊಂಡು, ಕಮಲಾವತಿಗೆ ಕರ್ಕೊಂಡು, ತಾಯಿ ಮನಿಗೆ ಬಂದ ಮಗ ಪರಾಕ್ರಮಿ.

ಹಿ : ನಮಸ್ಕಾರ ಜನನೀ.

ಕ : ಅಪ್ಪಾ ಮಗನೇ ಯಾರು ಎತ್ತಿದ್ರು ಸಿಡಿ, ಕಮಲಾವತಿ ಗೆದ್ದವರು ಯಾರು?

ಹಿ : ನಾನು ಎತ್ತಿದೆನಮ್ಮಾ ಸಿಡಿ; ನಾನು ಗೆದ್ದೆನಮ್ಮಾ ಕಮ್ಲಾವತಿನಾ; ಎಲ್ಲಾ ರಾಜ್ರೂ ಫೇಲಾದ್ರು.

ಕ : ನಿನ್ನ ಮಗ ಮುವ್ವತ್ತು ಮಣದ ಸಿಡಿ; ಹನ್ನೆರಡು ಮಣದ ಗುಂಡು ಎತ್ತಿ ಈ ಕಮ್ಲಾವತಿಗೆ ಗೆದ್ದೆ ತಾಯೀ!

ಹಿ : ಹೌದು.

ಕ : ಬರೋ ದಾರೀ ಮಾರ್ಗದಲ್ಲಿ ವಸ್ತಿಯಾದ ಊರು ಘನಚಕ್ರವರ್ತಿ ಪಟ್ಣ ; ಅಲ್ಲಿ ಚಕ್ರೋಸೇನ ಮಹಾರಾಜನ ಮಗಳು ರತ್ನಾವತಿ ಹೆಣ್ಣು. ಹಿಡಂಬಾನ ಕೊಲ್ಲಿ ಆ ಎರಡ್ನೇ ಹೆಣ್ಣು ಗೆದ್ದುಕೊಂಡು ಬಂದೀನಮ್ಮಾ!

ಹಿ : ಭಪ್ಪರೇ ಮಗನೇ….ಭಲೇ ಮಗನೇ…..ನೋಡಿ ಬರ್ತೀನಿ ಅಂತ್ಹೇಳಿ ಎಲ್ಲಾ ಮಾಡಿಕೊಂಡೇ ಬಂದ್ಯಾ! ಇರ್ಬೇಕು ನಿನ್ನಂಥ ಮಗ!

ಕ : ಪರಾಕ್ರಮಿ ಮಗ ಬಂದಂಥ ಎರಡೂ ಊರು ಬೀಗರಿಗೆ ಏನ್ಹೇಳ್ತಾನೆ?-

ಹಿ : ಏನೆಂತಾನೆ?

ಕ : ಲಗ್ನ ಮಾಡ ಬಂದವರೇ, ಈಗ ನನಗೆ ಲಗ್ನ ಬೇಕಿಲ್ಲ, ನಿಮ್ಮ ನಿಮ್ಮ ಊರಿಗೆ ಹೋಗಿಬಿಡ್ರಿ – ಅಂತ್ಹೇಳಿ ವಾಪಾಸು ಕಳಿಸಿಬಿಟ್ಟ!

ಹಿ : ಆಹಾ!

ಕ : ತಾನು ಗೆದ್ದುಕೊಂಡು ತಂದ ಎರಡೂ ಹೆಣ್ಣುಗಳನ್ನ ತನ್ನ ಮನಿಯಾಗs ಇಟ್ಕೊಂಡ.

ಹಿ : ಹೌದೂ.

ಕ : (ರಾಗವಾಗಿ) ಆಹಾ ನೀಲಾ ನೀಲಾಂಜಿಯರು ಬಂದು ತಂದೆಗೆ ನೋಡ್ತಾರೇ…. ಕಣ್ಣಿನ ಬಾಧೆ ತಡೀಲಾರೆ ಮಕ್ಕಳೇ…

ಹಿ : (ರಾಗವಾಗಿ) ಹೌದೈ….

ಕ : ಮಕ್ಕಳೇ ಯಾರು ಗೆದ್ರು ಹೆಣ್ಣನ್ನ?

ಹಿ : ಯಾರಿಲ್ಲ ತಂದೆ ಅಡಿವಿ ಸಿಪಾಯಿ ಅಂತ ಹೊಡೆದಿದ್ನಲ್ಲ – ಆ ವೈರಿಗಳಿಗೆ, ಅವನೇ ಅವರ್ನ ಸೋಲಿಸಿ ಗೆದ್ದ.

ಕ : (ರಾಗವಾಗಿ) ಆಹಾ ಗೆದ್ದಂಥ ಆ ಮಗ ನನಗಿರಬಾರದಿತ್ತೇ!-

ಹಿ : (ರಾಗವಾಗಿ) ಯಾ ತಾಯಿ ಹಡದಿದ್ದಾಳೆ ಆ ಮಗನಿಗೆ,

ಕ : ಕಣ್ಣಿನ ಬಾಧೆ ತಡಿಯಲಾರೆ ಮಕ್ಕಳೇ, ಚಿಂತಾಮಣಿ ಶಾಸ್ತ್ರೀ ಕರಿಸಿ ಕೇಳ್ಸಿ ನೋಡ್ರಿ.

ಹಿ : ಚಿಂತಾಮಣಿ ಭಟ್ರನ್ನ ಕರೆಸಿದ್ರು ಮಕ್ಕಳು.

ಕ : ಯಂಕಂಭಂಟ್ರೇ,

ಹಿ : ಏನ್ರೀ?

ಕ : ನಮ್ಮ ತಂದಿಗೆ ಕಣ್ಣು ಹೋಗಿ ಹನ್ನೆರಡು ವರ್ಷ ಆಯ್ತು.

ಹಿ : ಹೌದೂ.

ಕ : ಈ ಕಣ್ಣಿನ ಬಾಧೆ ತಡಿಲಾರೆ ಅಂತ್ಹೇಳಿ ದುಃಖಾ ಮಾಡ್ತಾರೆ; ನಾವು ಮಕ್ಕಳೇ ಹುಟ್ಟಿ ಆತನ ಕಣ್ಣು ಕಳದೀವಿ; ಏನು ಮಾಡಿದ್ರೆ ಕಣ್ಣು ಬಂದಾವು? ಶಾಸ್ತ್ರ ನೋಡಿ ಹೇಳ್ರಿ –

ಹಿ : ಎಲ್ಲಾ ನೋಡಿ ವಿಚಾರ ಮಾಡಿ ಹೇಳ್ರಿ.

ಕ : ನೋಡ್ರಿ, ಪರಮಾತ್ಮನ ಶಾಪದಿಂದ ಹೋದ ಈ ಕಣ್ಣು ಬರ್ಲಿಕ್ಕೆ ಒಂದು ದಾರಿ ತೋರ್ಸೈತೆ ಪಂಚಾಂಗದಲ್ಲಿ,

ಹಿ : ಶಾಸ್ತ್ರೋಕ್ತದಲ್ಲಿ!

ಕ : ಈ ಊರು ಚಂದ್ರಾವತಿ ಪಟ್ಣ ಬಿಟ್ಟು ಒಂದು ಮೈಲು ದೂರದಲ್ಲಿ ಶಿವಚಿತ್ರ ವನಾಂತರ ಇದೆ. ಅದರಲ್ಲಿ ಇರೋ ಆಂಜನೇಯ ದೇವರಗುಡಿ ಎದುರಿಗೆ ಇರುವಂಥ ಪಾತಾಳ ಬಾವಿಯಲ್ಲಿ ಹೋದರೆ ಮಾತಾಡೋ ಅಡಕಿ, ನಗೋ ಎಲಿ, ಕಮಲದ ಹೂವು, ಕಲ್ಲು ಸುಣ್ಣ, ಕರೆ ಉಂಚಿ ತೊಪ್ಲ ಸಿಗ್ತಾವಪ್ಪಾ-

ಹಿ : ಆ ಬಾವಿ ಪಾತಾಳದಾಗ!

ಕ : ಅವು ಐದೂ ವಸ್ತು ತಂದು ಮಾತಾಡೊ ಅಡಕಿ, ನಗೋ ಎಲಿ, ಕಲ್ಲು ಸುಣ್ಣ ಮೂರೂ ಸಣ್ಣಾಗಿ ಅರದು ಕಣ್ಣಾಗ ಒಂದೊಂದೇ ಹನಿ ಬಿಡಬೇಕು;

ಹಿ : ಕಮಲದ ಹೂವಿನ ಬೆಳಕು ಕಣ್ಣಿಗೆ ತೋರಿಸ್ಬೇಕು, ಕರೇ ಉಂಚಿ ತೊಪ್ಲಾ ಬೆಂಕ್ಯಾಗ ಹಾಕಿ ಅದರ ಹೊಗಿ ನಿಮ್ಮ ತಂದಿ ಕಣ್ಣಿಗೆ ಕೊಟ್ರೆ ಅವರ ಕಣ್ಣು ಬರ್ತಾವೆ.

ಕ : ಅಷ್ಟು ಮಾತು ಕೇಳಿದ ಚಂದ್ರಸೇಕ ಮಾರಾಜ ಅಂತಾನೆ – ಮಕ್ಳಾ ಆ ಸಾಮಾನು ತಂದು ನನಗೆ ಕಣ್ಣು ಕೊಡೋರು ಯಾರೋ ಅವರಿಗೆ ಪಟ್ಟಾಭಿಷೇಕ.

ಹಿ : ಹೌದು ರಾಜ ಪದವಿ!

ಕ : ನಾವು ಹೋಗಿ ತರ್ತೀವಿ ಅಂತ ಸಿಬ್ಬಂದಿ ಕರ್ಕೊಂಡು ನೀಲಾ ನೀಲಂಜಿ ಮಕ್ಕಳು ಮೂರು ಮುತ್ತಿನ ತೊಟ್ಲ, ಒಂದು ರಣಕಂಭ, ಎರಡು ಅಡ್ಡಬೆಲಗು, ಅಕ್ಕಿಬ್ಯಾಳಿ ಬೆಲ್ಲ ತೊಗೊಂಡು ಒಂದು ಮೈಲು ದೂರದ ಆಂಜನೇಯನ ಗುಡಿಗೆ ಹೋಗ್ತಾ ಇದ್ದಾರೆ; ಐದು ವಸ್ತು, ಕಣ್ಣಿನ ಸಾಮಾನು ತರೋ ಸಲುವಾಗಿ (ರಾಗವಾಗಿ) ಪರಾಕ್ರಮಿ ಮಗ ನೋಡಿದನೈ ತಾಯೀ….

ಹಿ : ಆಹಾ!

ಕ : ಇವರು ಎಲ್ಲಿಗೆ ಹೋಗ್ತಾರೆ?

ಹಿ : (ರಾಗವಾಗಿ) ಹೌದೂ….

ಕ : (ರಾಗವಾಗಿ) ಅವರು ಯಾರೆಂದು ತಿಳಿದುಕೊಂಡೀಯಪ್ಪಾ….

ಹಿ : ಆಹಾ….

ಕ : (ರಾಗವಾಗಿ) ನಿಮ್ಮ ಮಲತಾಯೀ ಹೊಟ್ಟಿಯಲ್ಲಿ ಹುಟ್ಟಿದಂಥ ನೀಲಾ ನೀಲಂಜಿ; ನಿನ್ನ ಅಣ್ಣಂದಿರು ಅವರು.

ಹಿ : ಹೌದೇ, ಅಮ್ಮ ತಾಯೀ, ನನ್ನ ಅಣ್ಣನವರು!?

ಕ : ಕಛೇರಿಯೊಳಗೆ ಇದ್ದಂಥ ಕಣ್ಣಿಲ್ಲದ ಕುರುಡ ಚಂದ್ರಸೇಕ ರಾಜ ನಿನ್ನ ತಂದೆ, ನಿನ್ನನ್ನು ಜನಿಸಿದ ನಿನ್ನ ಜನಕ ಮಗನೇ.

ಹಿ : ಆಹಾ ಆ ಚಂದ್ರಸೇಕ ರಾಜ ನಮ್ಮ ತಂದೆ!

ಕ : ನಿಮ್ಮ ತಂದೆ ಕಣ್ಣು ಹೋಗಿ – ಹನ್ನೆರಡು ವರ್ಷ; ಪಾತಾಳ ಬಾವ್ಯಾಗ ಐದು ವಸ್ತು ತಂದು ತಂದಿಗೆ ಕಣ್ಣು ಬರಿಸಬೇಕಂತ ನಿಮ್ಮ ಅಣ್ಣನವರು ಹೊಂಟಾರೆ.

ಹಿ : ನಾನೂ ಸ್ವಲ್ಪ ಹೋಗಲ್ಯಾ? ನೋಡಿ ಬರ್ತೀನಿ ತಾಯೀ.

ಕ : (ರಾಗವಾಗಿ) ಮಗನಾ….ಲಗೂ ಬರಬೇಕಪ್ಪಾ……..ನಿನ್ನ ದಾರಿ ನೋಡಿ ಕೊಂಡಿರ್ತಿನೀ….ನಿನಗೆ ಏನಾರ ಅನಾಹುತ ಆದ್ರ ನನಗ ಹೆಂಗ ಗೊತ್ತಾಗಬೇಕು ಮಗನೇ….

ಹಿ : ಅಮ್ಮಾ ನಾನು ಹೋದ ಬಳಿಕ ನನ್ನ ಜನ್ಮಕ ಏನಾರ ಅಪಾಯ ಆದರೆ ಇಲ್ಲೊಂದು ಗುರ್ತು ತೋರಿಸಿ ಹೊಕ್ಕೀನಮ್ಮಾ ನಿನಗೆ.

ಕ : ಯಾವ ಗುರ್ತು?

ಹಿ : ಗುರ್ತು?

ಕ : ತಲಬಾಗಲಲ್ಲಿ ಎಡಕ್ಕೊಂದು ಬಲಕ್ಕೊಂದು ಹೂವಿನ ಗಿಡ ಐದಾವಲ್ಲ.

ಹಿ : ಹೌದು.

ಕ : ನಾನು ಹಿಂಗs ಇದ್ರ ಅವು ಹಚ್ಚಗ ಇರ್ತಾವ. ನನಿಗೆ ಏನಾರ ಅಲ್ಲಿ ಅಪಾಯ ಆತು ಅಂದ್ರ – ಗಿಡಗಳು ಒಣಗ್ತಾವು ನೋಡಮ್ಮಾ ; ಯಾವಾಗ ಗಿಡಗಳು ಒಣಗಿದ್ರೆ ನನ್ನ ಮಗನಿಗೆ ಏನೋ ಮೋಸ ಅಂತಾ ದುಃಖ ಮಾಡು. ಅಲ್ಲೀವರಿಗೂ ಅಳಬೇಡ – ಅಂತ ಗುರ್ತು ಹೇಳಿದ.

ಹಿ : ಸೀದಾ ಪಾತಾಳ ಬಾವಿ ಹತ್ರ ಬಂದ.

ಕ : ನೀಲಾ ನೀಲಂಜಿ ಅಷ್ಟೊತ್ತಿಗೆ ಬಾವಿ ದಂಡಿಗೆ ಬಂದು ರಣಗಂಭ ಹೂಡ್ಯಾರ. ಅಡ್ಡ ಬೆಲಗ ಕಟ್ಟಿ ಮುತ್ತಿನ ತೊಟ್ಲ ಇಳೇ ಬಿಟ್ಟಾರೆ – ಬಾವ್ಯಾಗ ಎಳಿಯೋದಕ್ಕ!

ಹಿ : ಜೊತಿಗೆ ವಕ್ಕಳಘಂಟಿ ಕೂಡಾ ತೊಗೊಂಡಾರೆ!

ಕ : ಅವರಿಬ್ರೂ ಅಣ್ಣಾತಮ್ಮಗೆ ಬಾವಿಗೆ ಇಳಿಯೋದು ಸಾಧ್ಯಿಲ್ಲ – ಅಂತ ಗೊತ್ತಾತು,

ಹಿ : ಹೆದರ್ಕಿ ಆತು!

ಕ : ಮಾರಾಯ ಎಷ್ಟು ಹೊತ್ತಿನಿಂದ ಪ್ರಯತ್ನ ಮಾಡ್ತೀವಿ. ಬಾವ್ಯಾಗ ಇಳಿಯೋದು ಆಗ್ವಲ್ಲದು. ನೀನು ಹೋಗಿ ಆ ಐದೂ ವಸ್ತು ತಂದ್ರೆ ನಿನಗೇ ಪಟ್ಟಕಟ್ತೀವಿ ಅಂದ್ರು-

ಹಿ : ಪರಾಕ್ರಮಿಗೆ.

ಕ : ಆಹಾ ನಾನೇ ಹೋಗ್ಬೇಕಾಯ್ತಲ್ಲಾ ಅಂದ – ಪರಾಕ್ರಮಿ ಮನಸ್ಸಿನೊಳಗs!

ಹಿ : ಆಗಲಿ ನಾನೇ ಹೋಗ್ತೀನಿ.

ಕ : ನೀಲಾ ನೀಲಂಜಿ, ಒಂದೇ ತೊಟ್ಲ ಸಾಕು. ಇನ್ನೆರಡನ್ನೂ ತಗದುಬಿಡ್ರಿ ಅಂದ.

|| ಪದ ||

ಬಾವ್ಯಾಗ ನಡುದಾನೆಹರಯನ್ನ ಮಾದೇವ
ಬಾವ್ಯಾಗ ನಡುದಾನೆ…. ನಮಃ ಶಿವಾಯ
ಒಂದೇ ಹಗಲು ಒಂದೇ ರಾತ್ರಿ…. ನಮಃ ಶಿವಾಯ
ಎರಡೇ ಹಗಲು ಎರಡೇ ರಾತ್ರಿ…. ನಮಃ ಶಿವಾಯ
ಮೂರೇ ಹಗಲು ಮೂರೇ ರಾತ್ರಿ….. ನಮಃ ಶಿವಾಯ
ಏಳೇ ಹಗಲು ಏಳೇ ರಾತ್ರಿ….. ನಮಃ ಶಿವಾಯ
ಬಾವ್ಯಾಗ ಇಳುದಾನ ಬಾಳಾ….ಹರಯನ್ನ ಮಾದೇವ
ಆತ್ಹೋಗಿ ತಳ ಮುಟ್ಟ್ಯಾನಯ್ಯಾ…. ನಮಃ ಶಿವಾಯ.

ಕ : ಏಳು ಹಗಲು ಏಳು ರಾತ್ರಿ ಹೋದ ಮ್ಯಾಲೆ ತೊಟ್ಲು ಪಾತಾಳದ ತಳ ಮುಟ್ತು. ವಕ್ಕಳಘಂಟಿ ಧಡಲ್ ಅಂತ ಪಾತಾಳ ಲೋಕದಲ್ಲಿ ಬಾರಿಸ್ತು! ನೀಲಾ ನೀಲಂಜಿ ದಂಡೆಲ್ಲಾ ಕೇಳ್ತಾರೆ – ಮ್ಯಾಲೆ ನಿಂತು!

ಹಿ : ಓಹೋ ತಮ್ಮಾ ಈಗ ಹೋಗಿ ತೊಟ್ಲು ಮುಟ್ಟಿತು; ಈ ಏಳು ಹಗಲೂ ಏಳು ರಾತ್ರಿ ಅವನ ಊಟೇನು? ಉಪಚಾರೇನು?

ಕ : ಆ ಪಾತಾಳ ಲೋಕದಲ್ಲಿ ಹುಲಿ ಹೊನ್ನಿಗ. ಸಿಂಹ ಶಾರ್ದೂಲ, ಕರಡಿ ಚಿರ್ತ –

ಹಿ : ಎಲೋ ನರಮಾನವಾ!

ಕ : ಈ ಪಾತಾಳ ಲೋಕದಲ್ಲಿ ನೀನು, ಮಾನವ ಬಂದೀ! ನಿನಗೆ ತುತ್ತು ಮಾಡಿ ನುಂಗ್ತೀವಿ; ಅಂತ್ಹೇಳಿ ಹುಲಿ ಹೊನ್ನಿಗ ಬಂದು ತಿನ್ನಬೇಕು ಅನ್ನೊ ಟೈಮಿನಾಗ ವೀರ ಕ್ಯಾಕಿ ಹೊಡದ ಮಗ!

ಹಿ : ಆಹಾ!

ಕ : ಈ ಪರಾಕ್ರಮಿ ಮಗ ಶಬ್ದ ಮಾಡಿದ್ದಕ್ಕೆ ಪಾತಾಳ ಲೋಕದಲ್ಲಿ ಅಲ್ಲೋಲ ಕಲ್ಲೋಲ ಆಯ್ತು! ಹುಲಿ, ಹೊನ್ನಿಗ, ಸಿಂಹ ದಿಕ್ಕಾಪಾಲಾಗಿ ಹೋದ್ವು!

ಹಿ : ಹೌದೂ!

ಕ : ವೀರ ಪರಾಕ್ರಮಿ ಮುಂದಕ್ಕ ಹೋಗಿ ನಿಂತ್ಕೊಂಡು ನೋಡ್ಬೇಕಾರೆ ಅಲ್ಲೊಂದು ಋಷಿಮಠ ಐತಿ ನೋಡ್ರಿ-

ಹಿ : ಹೌದು ಋಷಿಮಠ!

ಕ : ಆ ಋಷಿ ಏಳು ವರ್ಷ ತಪಸ್ಸು ಮಾಡಿ ಪರಮಾತ್ಮಗ ಒಲಿಸೋದಕ ಕುಂತಾನ!

ಹಿ : ಹೌದು.

ಕ : ಋಷಿಗಳೇ ನಮಸ್ಕಾರ

ಹಿ : ಯಾರಪ್ಪಾ ನೀನು?

ಕ : ಮರ್ತ್ಯಲೋಕದಲ್ಲಿ ಚಂದ್ರಾವತಿ ಪಟ್ಣದ ಮಹಾರಾಜ – ನಮ್ಮ ತಂದೆ; ಆತನಿಗೆ ಕಣ್ಣು ಹೋಗಿ ಹನ್ನೆರಡು ವರ್ಷಗಳೇ ಆದವು ಋಷಿಗಳೇ!

ಹಿ : ಹೌದು.

ಕ : ಆತನ ಸತಿ ಪತಿವ್ರತಾ ಚಂದ್ರಾವತೆಮ್ಮನ ಗರ್ಭದಲ್ಲಿ ಉದ್ಭವಿಸಿದ ಕುಮಾರ ನಾನು ಪರಾಕ್ರಮಿ.

ಹಿ : ಅಬಾಬಾ ಈ ಪಾತಾಳ ಲೋಕದಲ್ಲಿ ದೇವತೆಗಳು ಕೂಡಾ ಬರುವುದಕ್ಕೆ ಸಾಧ್ಯವಿಲ್ಲ ನೀನು ಹ್ಯಂಗ ಬಂದಿ ಇಲ್ಲ?

ಕ : ನಿಮ್ಮ ಕೃಪಾದಿಂದ ಬಂದೀನಿ ಜನಕ.

ಹಿ : ಏನು ಬೇಕು ಮಗನೇ?

ಕ : ನನಗೆ? ನನಗೇನು ಬೇಕಾಗಿಲ್ರಿ ; ಸಕಲ ಸಂಪತ್ತು ಐಶ್ವರ್ಯನೇ ಐತಿ. ನಮ್ಮ ತಂದಿ ಕಣ್ಣು ಹೋಗ್ಯಾವು ; ಆ ಕಣ್ಣು ಮತ್ತೆ ಪಡೆಯೋದ್ರ ಸಲುವಾಗಿ ಮಾತಾಡೋ ಅಡಿಕಿ, ನಗೋ ಎಲಿ; ಕಲ್ಲು ಸುಣ್ಣ, ಕಮಲದ ಹೂವು, ಕರೇ ಉಂಚಿ ತೊಪ್ಲ ಬೇಕಾಗ್ಯಾವು. ಅವು ಎಲ್ಲಿ ಅದಾವು ತೋರ್ಸಿ ಕೊಡಬೇಕ್ರಿ ಋಷೀ.

ಹಿ : ಸಾಧ್ಯವಿಲ್ಲ-

ಕ : ಸಾಧ್ಯವಿಲ್ಲ ಮಗನೇ!

ಹಿ : ಅಸದಳ!

ಕ : ಅವು ಎಲ್ಲಿವೆ ಅಂತ ತಿಳಿಕೊಂಡು ಈ ದಕ್ಷಿಣ ಮಾರ್ಗ ಹೋಗ್ಬೇಕು – ಹನ್ನೆರಡು ಗಾವುದ! ಈ ಹನ್ನೆರಡು ಗಾವುದದಲ್ಲಿ ಏಳು ಕಂದಕ ದಾಟಬೇಕು, ಒಂಟಿ ಹೂಡೇವು ದಾಟಬೇಕು, ಒಂಟಿ ಹೂಡೇವು ದಾಟಿದ ಬಳಿಕ, ಕಂಚಿನ ಕೋಟೆ, ಅದಕ್ಕೆ ಏಳು ಉಕ್ಕಿನ ಕದಗಳು; ಅವನ್ನ ಮುಚ್ಚಿ ಕಂಚಿ ಮುಖದ ರಾಕ್ಷಸ ಪಾರಾ ಕುಂತೈತ್ರಿ

ಹಿ : ಓಹೋ!

ಕ : ಆ ಕಂಚಿ ಮುಖದ ರಾಕ್ಷಸ ಪಾರಾದಾಟಿ, ಏಳು ಉಕ್ಕಿನ ಕದ ದಾಟಿ ಒಳಗ ಹೋದ್ರ ಏಳು ಅಂತಸ್ತಿ ಅರಮನಿ ಐತ್ ಒಳಗೆ. ಆ ಅರಮನಿಯೊಳಗೆ ದೇವಲೋಕದ ಕಮಲಗಂಧಿ ಅದಾಳೆ. ಆಕಿ ಋತುಮತಿಯಾಗಿ ಆರು ತಿಂಗಳು.

ಹಿ : ಆಹಾ!

ಕ : ಕಣ್ಣು ಕವಳಿ ಹಣ್ಣು, ಮೂಗು ಸಂಪಗಿ ತೆನಿ, ಹಲ್ಲು ದಾಳಿಂಬ್ರಿ ಬೀಜ; ತುಟಿ ನಾಗರ ಹೆಡಿ, ಹುಬ್ಬು ಕಾಮನ ಬಿಲ್ಲು!

ಹಿ : ಅಂಥಾ ಚಂದಾನ ಚಲುವಿ ಆಕಿ!

ಕ : ಆಕಿ ಮನಿಯಾಗ ಹೋದ್ರ ಮಾತಾಡೊ ಅಡಿಕಿ, ನಗೋ ಎಲಿ, ಕಲ್ಲು ಸುಣ್ಣ, ಕಮಲದ ಹೂವು ಕರೇ ಉಂಚಿ ತೊಪ್ಲ

ಸಿಗತೈತಿ!

ಹಿ : ಹೌದು!

ಕ : ಅಲ್ಲಿ ಹೋದೋರು ಯಾರೂ ಗೆದ್ದು ಬಂದಿಲ್ಲ; ವಾಪಾಸು ನಡಿ-

ಹಿ : ವಾಪಾಸು!

ಕ : ಆಹಾ ಬಾವಾಜಿಗಳೇ ವಾಪಾಸು ಹೋಗಬೇಕೆ!

ಹಿ : ಮುಂದಕ್ಕೆ ಇಟ್ಟ ಕಾಲು ಹಿಂದಕೆ ಇಡುವಂಥ ತಾಯಿಗಂಡ ನಾನಲ್ಲ – ಅಂತ್ಹೇಳಿ ತನ್ನ ಭಟ್ಟಂಗಿ ಸಾರ್ಕೊಂಡ ಮಗ!

ಕ : ನಿನ್ನ ಮಾತು ಕೇಳಿ ಹಿಂದಕ್ಕ ತಿರುಗಿ ಹೋಗಾಕ ನಿನ್ನಂತೆ (ರಾಗವಾಗಿ) ಬೂದಿಬಡುಕ ಅಲ್ಲೋ ಬಾವಾಜೀ….

ಹಿ : ಓಹೋ

ಕ : ಒಪ್ಪಿದೆ ನಿನ್ನ ಪರಾಕ್ರಮಕ್ಕೆ ಕುಮಾರಾ! ನಡಿ; ಅಂಬುಬಾಣ; ಕಲ್ಕೋರೇಬಾಣ; ಆಕಾಶಬಾಣ ಈ ಮೂರೂ ಬಾಣ ನನ್ನ ಜೋಲಿಗೆ ಒಳಗ ಅದಾವು, ತೊಗೋ ಬೆನ್ನಿಗೆ ಕಟ್ಟಿಗೋ.

ಹಿ : ಆಹಾ!

ಕ : ಘನಮಂತ್ರ, ನಿಜಮಂತ್ರ, ವೇಗಮಂತ್ರ ಈ ಮೂರು ಮಂತ್ರದ ಹಳ್ಳು ಕೊಡ್ತೀನಿ- ಮಂತ್ರಿಸಿ.

ಹಿ : ತೊಗೋ ಶಲ್ಯಕ್ಕೆ ಕಟ್ಕೊ.

ಕ : ಹನ್ನೆರಡು ಗಾವುದ ಮ್ಯಾಲೆ ಏಳು ಕಂದಕ ದಾಟಿ, ಒಂಟಿ ಹೂಡೇವು ದಾಟಿ, ಕಂಚಿನ ಕೋಟೆಗೆ ಹೋಗು. ಅಲ್ಲಿ ರಾಕ್ಷಸ ನಿನಗೆ ನುಂಗಾಕ ಬರ್ತೈತಿ. ಒಂದು ಮಂತ್ರದ ಹಳ್ಳು ಒಗದುಬಿಡು. ಮಲ್ಕೊಂಡು ಬಿದ್ಡತೈತಿ ಅದು.

ಹಿ : ಆಗಲಿ ಬಾವಾಜೀ.

ಕ : ಇನ್ನೊಂದು ಹಳ್ಳು ಒಗದು ಬಿಡು; ಏಳು ಉಕ್ಕಿನ ಕದಗಳು ಕಿರ‍್ ನೆ ಉಚ್ಚತಾವ, ಒಳಹೋಗಿ ಕಮಲಗಂಧಿ ಕೂಟಾಗ ಮಾತಾಡಿ ನಿನ್ನ ವಿಚಾರ ಹೇಳಿ ತಿಳ್ಕೊ.

ಹಿ : ಹೋಗಿ ಬರ್ತೀನ್ರಿ ಋಷಿ ಮಾರಾಜ್, ನಮೋ ನಮಃ

ಕ : ಮೂರು ಬಾಣ ಬೆನ್ನಿಗೆ ಕಟ್ಟಿಕೊಂಡು, ಮೂರು ಮಂತ್ರದ ಹಳ್ಳು ಶಲ್ಯದೊಳಗೆ ಕಟ್ಟಿಕೊಂಡು

|| ಪದ ||

ವನವಾಸಾ ನಡದಾನಾ…….ಹರಹರ ಮಾದೇವಾ
ಹನ್ನೆರಡು ಗಾವುದ ನದದಾನಾ……..ಶಿವಹರಯನ್ನ ಮಾದೇವ
ಅದೇ ಏಳು ಕಂದಕ ನೋಡ್ಯಾನ…….ಹರಯನ್ನ ಮಾದೇವ
ಅಂತರ ಲಾಗ ಜಂತ್ರಲಾಗ ಹೊಡಿತಾನಾ…… ನಮಃ ಶಿವಾಯ
ಕಂದಕ ದಾಟ್ಯಾನಾ……..ಹರಹರ ಮಾದೇವ
ಒಂಟಿ ಹೂಡೇವ ದಾಟ್ಯಾನಯ್ಯಾ……. ನಮಃ ಶಿವಾಯ