ಹಿ : (ರಾಗವಾಗಿ) ರಾಜ ಊರಿಗೆಲ್ಲ ಪರೋಪಕಾರ ಪುಣ್ಯ ಮಾಡಿದಂಥೋರು.

ಕ : ಅತ್ತಕಡಿಗೆ ರಾಜನ ಕಣ್ಣು ಹೋದ್ವು!

ಹಿ : ಇತ್ತ ಕಡೀಗೆ,

ಕ : ಹೊತ್ತ ಮುಳುಗಿ ರಾತ್ರಿ ಆಗೋ ವ್ಯಾಳ್ಯಾದಲ್ಲಿ ಚಂದ್ರಾವತಿ ಅಮ್ಮ ಬ್ಯಾನಿ ತಿನ್ನುತ್ತಿದ್ದಾಳ. ಆ ಹೊತ್ತಿನೊಳಗ ಮಂತ್ರಿ, ರಾಣಿ ಒಡಹುಟ್ಟಿದ ತಮ್ಮ-ಅಲ್ಲಿಗೆ ಬಂದ.

ಹಿ : ಅಕ್ಕಾ ಏನಮ್ಮಾ ಮಹಂತ ದುಃಖ ಮಾಡ್ತೀ ಈ ವ್ಯಾಳ್ಯಾದಲ್ಲಿ.

ಕ : ತಮ್ಮಾ (ರಾಗವಾಗಿ) ತಮ್ಮಾ ನನಿಗೆ ಬ್ಯಾನಿ ತಗಲ್ಯಾದೋ…..

….ಬಾಣಂತನಾ ಮಾಡೋರು ಯಾರಿಲ್ಲ.

ಹಿ : ಅಕ್ಕಾ ಸೂಲಗಿತ್ತೇರ್ನ ಕರ ಕೊಂಬರ್ಲೇನು?

ಕ : ಬ್ಯಾಡಪ್ಪಾ ತಮ್ಮಾ; ಯಾರೂ ಬರೋದು ಬ್ಯಾಡ; ಒಬ್ಬಾಕೆ ಜನನ ಆಗತೀನಿ.

ಹಿ : ಹೌದೂ.

ಕ : ರಾತ್ರಿ ಕಳುದು ಬೆಳಗು ಹರಿಯೋದ್ರೊಳಗ ಅಂಡಾಂದದಿಂದ ಪಿಂಡಾಂಡವೇ ಹೊರಗ ಬಂತು ಅಂಬೂ ಹಾಂಗ ಆ ಯಮ್ಮ ಜನನಾದಳು.

ಹಿ : ಏನು ಜನನಾದಳು?

ಕ : ಚಂದ್ರಾವತೆಮ್ಮನ ಗರ್ಭದಲ್ಲಿ ಕುಲದೀಪಕ ಕುಲಪುತ್ರ ಕುಮಾರ, ಮುಂಗಾರಿ ಮುಗಿಲಿನ ಮಿಂಚು ಮಿಂಚಿನ್ಹಂಗ, ರಾತ್ರಿ ಕಾಣೋ ಚಿಕ್ಕೀಹಾಂಗ ಹುಟ್ಟಿದ.

|| ಪದ ||

ರಾಜಪಂಡಿತ ಗಂಡು ಮಗನೇ….ಹರಹರ ಮಾದೇವಾ
ತಾಯಿ ಜನನೇ ಆಗ್ಯಾಳಾ….ಹರಹರ ಮಾದೇವಾ
ಕುಲದೀಪದ ಗಂಡು ಮಗ….ಹರಹರ ಮಾದೇವಾ
ಏನು ಮಗನ ಹಡದೆವ್ವಾಶಿವಹರ ಮಾದೇವ
ಇರಬೇಕ ಇಂಥಾ ಮಗಾ….ಹರಹರ ಮಾದೇವ.

ಕ : (ರಾಗವಾಗಿ) ಆ ತಾಯಿ ಒಬ್ಬಾಕೇ ಜನನಾಗಿ ಮಗನ ಉರಿ ಕೊಯ್ದಾಳೀ….

ಹಿ : ಆಹಾ!

ಕ : ವೀರ ಕ್ಯಾಕಿ ಹೊಡದು ಹುಟ್ಟಿದ ಮಗನ್ನ ಮಂತ್ರಿ ನೋಡ್ತಾನೆ – ತಾಯೀ ಏನ ಮಗ ಇವನು! ರಾಜ ಪಂಡಿತ ಮಗ!

ಹಿ : ಹೌದೇ….

ಕ : ಕಣ್ಣಿಲ್ಲದ ಕುರುಡ ರಾಜ ಮಂತ್ರಿ ಕರಿಸ್ದಾ – ಮಂತ್ರೀ, ನಾಳೆ ಹನ್ನೊಂದು ದಿನದಾಗ ಅವಳಿ ಜವಳಿ ಮಕ್ಕಳಿಗೆ ಹೆಸರಿಡ್ಬೇಕು ತಕ್ಕ ಏರ್ಪಾಟು ಮಾಡು.

ಹಿ : ಆಗಲಿ ಮಹಾರಾಜ್.

ಕ : (ರಾಗವಾಗಿ) ಬ್ರಾಹ್ಮಣ ಚಿಂತಾಮಣಿ ಶಾಸ್ತ್ರಿ ಬಂದಾನೆ….

ಹಿ : (ರಾಗವಾಗಿ) ಹೌದ್ರೀ.

ಕ : ಚಿಂತಾಮಣಿ ಶಾಸ್ತ್ರೀ ತನ್ನ ವತ್ತಿಗಿ ತಗದು – ಮಹಾರಾಜಾ ಮೊದಲು ಹುಟ್ಟಿದ ಮಗನಿಗೆ ನೀಲಾಂಬುಜ ರಾಜ ಅಂತ ನಾಮಕರಣ ಮಾಡು,

ಹಿ : ಎರಡನೇ ಮಗನಿಗೆ?

ಕ : ನೀಲಾಂಜಿ ಅಂತ ಹೆಸರಿಡು – ಅಂತ್ಹೇಳಿದ.

ಹಿ : ಹೌದು.

ಕ : ಬ್ರಾಹ್ಮಣಗೆ ಸೇರು ರೂಪಾಯಿ ಕೊಟ್ಲು ಕಳಿಸಿದ ರಾಜ.

ಹಿ : ಸೂರ್ಯಕಾಂತಿ ಅರಮನಿಯಾಗ ತೊಟ್ಲ ಕಟ್ಯಾರೆ.

ಕ : (ರಾಗವಾಗಿ) ತೊಟ್ಲಿಗೆ ಮಕ್ಕಳಿಗೆ ಹಾಕಿ ಮಕ್ಕಳಿಗೆ ಹೆಸರಿಡಬೇಕೀಗಾ….

|| ಜೋಗಳಾ ||

ಜೋ ಜೋ ಜೋಯನ್ನ ಬಾಲಾ
ಸುಮ್ಮನ ಮಲಗೈ ದೇವಕಿ ಬಾಲಾ
ಜೋ ಜೋ ಜೋಯನ್ನ ಬಾಲಾ
ಸುಮ್ಮಮಲಗೈ ದೇವಕಿ ಬಾಲಾ
ಗಿಂಡೀಲೆ ನೊರೆ ಹಾಲು ಹಿಂಡಿ ತಂದೇವೋ ಬಾಲಾ
ಗಿಂಡೀಲೆ ನೊರೆ ಹಾಲು ಹಿಂಡಿ ತಂದೇವೋ ಬಾಲಾ
ಸುಮ್ಮನೆ ಕುಡುದು ಮಲಗೋ ಬಾಲಾ ಜೋ ಜೋ….
ಓಯನ್ನ ಬಾಲಾ ಸುಮ್ಮನೆ ಮಲಗೈ ದೇವಕಿ ಬಾಲಾ
ನನ್ನಯ ಉಡಿಯಲ್ಲಿ ಚಂದಾಗಿ ಆಡುವಾ
ನನ್ನಯ ಉಡಿಯಲ್ಲಿ ಚಂದಾಗಿ ಆಡುವಾ
ನನ್ನ ಗೋವಿಂದ ಮಲಗೈಯ ಬಾಲಾ ಜೋ ಜೋ….

ಕ : ಇತ್ತಕಡಿಗೆ (ರಾಗವಾಗಿ) ಅಕ್ಕನ ಮನಿಗೆ ಮಂತ್ರಿ ಬಂದಾನ….ಅರಮನಿಯೊಳಗ ತಾಯಿ ಕುಂತಾಳ….ಮಗನ್ನ ತೊಡಿಮ್ಯಾಲೆ ಹಾಕ್ಕೊಂಡು….ಅಕ್ಕಾ ನಿನ್ನ ತಂಗೀ ಮಗಳಿಗೆ ಹೆಸರಿಟ್ರವ್ವಾ ಇವತ್ತು ನೀಲಾಂಬುಜ, ನೀಲಾಂಜಿ ಅಂತಾ ಇಟ್ಟಾರವ್ವಾ.

ಹಿ : ಹೌದೇ?

ಕ : ನಿನ್ನ ಮಗನಿಗೆ ಹೆಸರಿಡ್ಲಿಕ್ಕೆ ಬ್ರಾಹ್ಮಣಗೆ ಕರ್ಕೊಂಡು ಬರ್ಲೇನಮ್ಮಾ?

ಹಿ : ಬ್ಯಾಡಪ್ಪಾ, ಯಾರೂ ಬ್ಯಾಡ ಮಂತ್ರೀ….ನೀನೇ ಹೆಸರಿಡು – ಸೋದರಮಾವ.

ಕ : ತೊಟ್ಲದಾಗ ಹಾಕಿ ಹೆಸರಿಡ್ತಾ ಇದ್ದಾನೆ.

|| ಪದ ||

ತೂಗಿರಿ ರಂಗನs ತೂಗಿರಿ ಕೃಷ್ಣನs ತೂಗಿರಿ ಅತುಲ ರಂಗನಾ
ತೂಗಿರಿ ರಂಗಾನs ತೂಗಿರಿ ಕೃಷ್ಣನs ತೂಗಿರಿ ಅತುಲ ರಂಗನಾ
ತೂಗಿರಿ ವರಗಿರಿ ವೆಂಕಟ ತಿಮ್ಮಪ್ಪಾನs ತೂಗಿರಿ ಕಾವೇರಿ ರಂಗನಾ
ತೂಗಿರಿ ರಂಗನs ತೂಗೀರಿ ಕೃಷ್ಣಾನs ತೂಗಿರಿ ಅತುಲ ರಂಗನಾ
ಆಲದ ಎಲಿಮ್ಯಾಲೆ ಮಲಗಿದ ಮಗನ ಬಂಧು ಬಳಗ ತೂಗಿರೇ
ತೂಗಿರಿ ರಂಗಾನ, ತೂಗಿರಿ ಕೃಷ್ಣಾನ ತೂಗಿರಿ ರಂಗನs
ಇಂದ್ರಗನ್ನಿಕೆಯರು ಮಂದಹಾಸದೆ ದೇವೇಂದ್ರನ ತೊಟ್ಲ ತೂಗಿರೇ
ತೂಗಿರಿ ರಂಗಾನs ತೂಗಿರಿ ಕೃಷ್ಣಾನ ತೂಗಿರಿ ಅತುಲ ರಂಗಾನs
ಪುರಂದರ ವಿಠಲ ಬಾಲ ಮಲಿಗ್ಯಾನ ವೈಕುಂಠ ವಾಸನ ತೂಗೀರೇ.

ಕ : ಈ ಮಗನ ಹೆಸರು ವೀರ ಪರಾಕ್ರಮ ಮಹಾರಾಜ ಅಂತ ಹೆಸರಿಟ್ಟು ಸೋದರಮಾವ.

ಹಿ : ಓಹೋ ವೀರಪರಾಕ್ರಮ!

ಕ : ನೀಲಾಂಬುಜ ನೀಲಾಂಜಿಯರು ಅರಮನಿಯೊಳಗ, ಊರು ಬಾಜಾರದಾಗ ಬೆಳಿತಾ ಇದ್ದಾರೆ!

ಹಿ : ಊರ ಹೊರಗ ವೀರ ಪರಾಕ್ರಮ ಬೆಳೀತಾ ಇದ್ದಾನೆ.

|| ಪದ ||

ಸುವ್ವಯ್ಯ ಕುಟ್ಟುವೇ ಸುವ್ವಯ್ಯ ಬೀಸುವೆ
ಅವ್ವಯ್ಯ ಅಕ್ಕೀಯ ತಳಿಸಿದ್ದೆನೈ….
ನಿರ್ಮಲ ನುಡಿ ನೀರ ಹೆಸರಿಟ್ಟಿದ್ದೆನೈ
ನೆಪ್ಪೆಂಬು ಉಪ್ಹಾಕಿ ಜ್ಞಾನೆಂಬ ಅನ್ನವ ಬಸಿದಿದ್ದೆನೈ
ತನುವ ತಾಮಣಿ ಮಾಡಿ ತೊಳೆದಿದ್ದೆನೆ ಯವ್ವಾ
ನಂಬಿಗೆ ತಂಬಿಗೆ ತುಂಬಿದ್ದೆನೈ
ಮನವ ಮಡಿಯಾ ಮಾಡಿ
ಅನುಭವ ಎಡೆ ಮಾಡಿ ಅದ್ಚೆತ ಊಟವ ಮಾಡಿದ್ದೆನೈ
ಅಕಲೆಂಬ ಅಡಿಕ್ಯಾಕಿ ನಕಲೆಂಬ ಕಾಚ್ಹಾಕಿ
ಹೊಸರುಚಿ ಒಪ್ಪಂಥ ವೀಳ್ಯಾವ ಮಡಿಚಿದ್ದೆನೇ
ಭಯ ಭಕ್ತಿಲಿ ವಾಯೊಳಗೆ ಕೊಟ್ಟಿದ್ದೆನೈ
ಜನನ ಮರಣ ಭಯ ಮರೆತಿದ್ದೆನೈ
ಸರ್ವಕ್ಕೆ ಸದ್ಗುರು ಗುರುಗತ್ತಿ ಗಿರಿವಾಸ
ಗುರುರಾಯ ಹೇಳಿದ್ದು ತಿಳಿದದ್ದು ಪ್ರಸಾದ
ಗೋಪಾಳ ದುರುದುಂಡಿ ಹೇಳಿದನೇ

ಕ : ತಂದೆ ಕಣ್ಣಿಲ್ಲದ ಕುರುಡುತನದಿಂದ ಪ್ರಜೆಗಳ್ನ ಆಳ್ತಾ ಇರೋ ಕಾಲಕ್ಕೆ ಒಂದು ದಿವಸ ತನ್ನ ಮಂತ್ರೀನ ಕರದು ಹೇಳ್ತಾನೆ – ಮಂತ್ರೀ

ಹಿ : ಏನ್ರೀ ಮಹಾರಾಜ್ರೇ?

ಕ : ಮಕ್ಕಳಿಗೆ ಬುದ್ಧಿ ಜ್ಞಾನ ತಿಳಿತಾ ಬಂತು, ಸಾಲಿ ಓದ್ಲಿ ಕರ್ಕೊಂಡು ಹೋಗಿ ಸೇರಿಸಿ ಬಾ.

ಹಿ : ಮಂತ್ರಿ ರಾಜ ಹೇಳಿದಂತೆ ಮಾಡಿದs

ಕ : ಮಂತ್ರಿ ಅಕ್ಕನ ಮನಿಗೆ ಬಂದು ಎಲ್ಲಾ ತಿಳಿಸಿ ಅಕ್ಕಾ ನಿನ್ನ ಮಗನ್ನೂ ಕಳ್ಸಿ – ಕೊಡಮ್ಮಾ ನಾನು ಸಾಲಿಗೆ ಸೇರ್ಸಿ ಬರ್ತೀನಿ.

ಹಿ : ಬ್ಯಾಡಪ್ಪಾ

ಕ : ತಮ್ಮಾ ಇಲ್ಲೇ, ನನ್ನ ಮನಿಯಾಗ ನನ್ನ ಮಗ ಬುದ್ಧಿವಂತ ಆಗ್ಲಿ, ಓದು ಬರಹ, ಸಂಗೀತ; ಪುರಾಣ, ಶಾಸ್ತ್ರ ಎಲ್ಲಾ ಪರಾಕ್ರಮ ಮನೆಯಲ್ಲೆ ಓದಲಿ.

ಹಿ : ಹೌದು.

ಕ : ಮಾವಾ ನನಗಿವೆಲ್ಲಾ ಎದುರು ವಿದ್ಯಾ

ಹಿ : ಮತ್ತೆಂಥಾ ವಿದ್ಯಾಬೇಕು.

ಕ : || ಪದ ||

ನನಗೆ ಗರಡಿ ಸಾಧಕ ಬೇಕೋ ಮಾವಾ….
ಗರಡಿಯಾ ಮನಿಯೇ ಬೇಕೈ ಮಾವಾ….ಹರಹರ ಮಾದೇವಾ.

ಕ : ಗರಡಿ ಸಾಧಕ ಬೇಕು ಅಂದ ತಕ್ಷ್ಣಕ್ಕೇ ಮಾವ ಗಾಬರಿ ಆದ. -ಅಕ್ಕಾ ಇಂಥಾ ಚಿಕ್ಕ ಪ್ರಾಯದಲ್ಲಿ ಈ ಮಗ ಗರಡಿ ಮನಿ ನೆನಸ್ತಾನೇ ಅಂದ ಬಳಿಕ ಮಹಾ ಪರಾಕ್ರಮಿ ಇದಾನೆ ಇವನು.

ಹಿ : ಹೌದು.

ಕ : ವೀರ ಪರಾಕ್ರಮಿ – ಹುಡುಗ! ಉಕ್ಕಿನ ಲೋಡು ತಿರುವಬೇಕು; ಉಕ್ಕಿನ ಗುಂಡು ತಿರುವಬೇಕು, ವಡೇಕೈ, ಬಡೇಕೈ, ಉಣ್ಣೋಕೈ, ತಪ್ಸೋಕೈ, ಕತ್ತಿಕಠಾರಿ ಕೈ, ಬಿಲ್ಲು ಬಾಣದ ಕೈ, ಕುಸ್ತಿ ತಾಲೀಮು ಲೇಜೀಮು.

ಹಿ : ಪಟಾ ದಾಂಡ ಕಟಿಗಿ, ಹಿಂಗಾಣಿ, ಮುಂಗಾಣಿ ಸಾನ್‍ಶಕ್ತಿ ಮಾಡ್ತಾನ – ಪ್ರಾಯಕ್ಕ ಬರೋಮಟ.

ಕ : ನೀಲ ನೀಲಾಂಜಿ ಶಾಲಿ ಓದುತ್ತಾರೆ, ಒಳ್ಳೇ ಪ್ರಾಯಕ್ಕೆ ಬಂದಾರೆ.

ಹಿ : ಹೌದು.

ಕ : ಚಂದ್ರಸೇಕ ಮಹಾರಾಜನ ಕಣ್ಣುಹೋಗಿ ಹನ್ನೆರಡು ವರ್ಷ ಆದ ನಂತರ-

ಹಿ : ಆಹಾ.

ಕ : ಸಮುದ್ರ ದಂಡೀಲಿ ಬೆಳ್ಳಂ ಬೆಳ್ಳಕ್ಕಿ ಪಟ್ಟಣದಲ್ಲಿ ಹಿರೇದಂಪ ಚಿಕ್ಕದಂಪ – ಈ ಇಬ್ರೂ ಮಹಾರಾಜರು ದೇಶಕ್ಕೇ ದೊಡ್ಡ ರಾಜರು.

ಹಿ : ಹೌದು.

ಕ : ಎಲ್ಲಾ ರಾಜರೂ ಒಯ್ದು ಅವರಿಗೆ ಕಪ್ಪಾ ಕೊಡುತ್ತಿದ್ದರು.

ಹಿ : ಆಂ….

ಕ : ಹನ್ನೆರಡು ವರ್ಷ ಆಯ್ತು – ಅವರಿಗೆ ಕಪ್ಪಕಾಣಿಕಿ ಕೊಟ್ಟಿಲ್ಲ! ಚಂದ್ರಸೇಕ ರಾಜಾ

ಹಿ : ಹೌದು!

ಕ : ಆ ಹಿರೇದಂಪ ಚಿಕ್ಕದಂಪ ದಂಡಿಗೆ ಕರಕೊಂಡು ಬಂದು ಆ ರಾಜನ ಊರಿಗೆ ಮುತ್ತಿಗಿ ಹಾಕಿದರು.

ಹಿ : ಹೌದು.

ಕ : ಎಲೋ ಚಂದ್ರಸೇಕ ರಾಜಾ

ಹಿ : ಆಂ….

ಕ : ನಮಗ ನೀನು ಕಪ್ಪಕಾಣಿಕಿ ತಂದು ಕೊಡಲಾರದೆ ಹನ್ನೆರಡು ವರ್ಷ ಆಯ್ತು!

ಹಿ : ಹೌದು!

ಕ : ನಿನ್ನ ಹೆಡಮುರಿಗಿ ಕಟ್ಟಿ ನಮ್ಮೂರಿಗೆ ಒಯ್ದೇನೆಂದು ಬಂದಾನ ಮಾಡಿದರು.

ಹಿ : ಓಹೋ!

ಕ : ನೀಲ ನೀಲಾಂಜಿ ಶಾಲಿಯೊಳಗಿನ ಮಕ್ಕಳು ಓಡಿ ಬಂದರು.

ಹಿ : ಹೌದು.

ಕ : ನಮ್ಮ ತಂದಿಗೆ ಹೆಡಮುರಿಗಿ ಕಟ್ತೀರಾ? (ರಾಗವಾಗಿ) ಓ ಬರ್ರೀ….ಯುದ್ಧ ಮಾಡ್ರಿ ಅಂತ್ಹೇಳಿ ಆ ಇಬ್ರೂ ಮಕ್ಕಳು ಯುದ್ಧಕ್ಕ ನಿಂತಾಗ, ಇಬ್ರೂ ಸೋತಾರಾ….

ಹಿ : (ರಾಗವಾಗಿ) ಹೌದೂ.

ಕ : (ರಾಗವಾಗಿ) ಆ ಮೂವರು ತಂದಿ ಮಕ್ಕಳ ಹೆಡಮುರಿಗಿ ಬಿಗದು ಊರಿಗೆ ಒಯ್ಯಾ ಟೈಮಿನಾಗ ವೀರ ಪರಾಕ್ರಮಿ ಸಾಧಕ ಮಾಡಂಥ ಮಗ ನೋಡಿದ!

ಹಿ : ಆಹಾ….

ಕ : ಏನಿದು ಗಲಾಟೆ?- ನೋಡ್ಬೇಕು ಅಂತ ಹೋಗಿ ನೋಡ್ತಾನ ಯಾರು ಮಹಾರಾಜ್ರೇ ನೀವು?

ಹಿ : ಓಹೋ ತಮ್ಮಾ, ಸಮುದ್ರದಂಡಿ ಬೆಳ್ಳಂ ಬೆಳ್ಳಕ್ಕಿ ಮಹಾರಾಜ್ರು, ಹಿರೇದಂಪ ಚಿಕ್ಕದಂಪ ನಾವುಗಳು.

ಕ : ಕಪ್ಪಕಾಣಿಕಿ ಕೊಟ್ಟಿಲ್ಲಂತ ಇವರಿಗೆ ಒಯ್ತೀವಿ ನಾವು.

ಹಿ : ಇಷ್ಟರ ಸಲುವಾಗಿ ಈ ಊರಿಗೆ ಬಂದು ಇವರಿಗೆ ಹಿಡ್ಕೊಂಡ್ಹೊಕ್ಕೀರಾ?

ಕ : ಹೌದಪ್ಪಾ.

ಹಿ : ಯುದ್ಧ ಮಾಡ್ಲಿಕ್ಕೆ ನಿಂತ ವೀರ ಪರಾಕ್ರಮಿ!

ಕ : (ರಾಗವಾಗಿ) ಅವನು ಹಿರೇದಂಪ – ಚಿಕ್ಕದಂಪರಿಗೆ ಯುದ್ಧದಾಗ ಸೋಲಿಸ್ತಾನೈ…. ಅವರ ದಂಡಿಗೆ ಹೊಡದು…. ಬಂಧನದ ಕೈಸೆರೆ ಬಿಡಿಸ್ಯಾನೊ….

ಹಿ : ತನ್ನ ತಂದಿ ಚಂದ್ರಸೇಕ ಹಾಗೂ ನೀಲಾ ನೀಲಾಂಬುಜಗೆ ಸೆರಿ ಬಿಡಿಸ್ಯಾನ ಪರಾಕ್ರಮಿ!

ಕ : ಅವರು ಹಿರೇದಂಪ – ಚಿಕ್ಕದಂಪ ಓಡಿಹೋದ್ರು – ಊರು ಬಿಟ್ಟು!

ಹಿ : ಹೌದು.

ಕ : ಇತ್ತಕಡಿಗೆ ಕಣ್ಣಿಲ್ಲದ ಕುರುಡ ರಾಜಾಧಿರಾಜ ಕೇಳಿದಾ-ಯಪ್ಪಾ ಯಾರು ಮಾರಾಯ ನೀನು? ನಮ್ಮನ್ನು ಹಿಡಕೊಂಡು ತಮ್ಮೂರಿಗೆ ಒಯ್ತಿದ್ದರು- ವೈರಿಗಳು! ನೀನು ಬಂದು ಸೆರೆ ಬಿಡಿಸಿದ್ಯಾ ಪುಣ್ಯಾತ್ಮ! ಕಣ್ಣಿಲ್ಲ ನಿನ್ನ ನೋಡಾಕ!

ಹಿ : ಓಹೋ! ಮಗ ಅನ್ನೋದು ತಂದಿಗೆ ಗೊತ್ತಿಲ್ಲ, ತಂದಿ ಅನ್ನೋದು ಮಗನಿಗೆ ಗೊತ್ತಿಲ್ಲ!

ಕ : ಚಂದ್ರಸೇಕ ಮಹಾರಾಜಾ, ನಾನು ಅಡವಿ ಕಾಯೋ ಅಡವಿ ಸಿಪಾಯಿ.

ಹಿ : ಪರಾಕ್ರಮಿ ಸೀದಾ ಮನಿಗೆ ಬಂದ.

ಕ : ಯವ್ವಾ ನನ್ನ ಚಂದ್ರಾವತಿ ತಾಯೀ-

ಹಿ : ಯಾಕಪ್ಪಾ?

ಕ : ಏನು ಬಾ ಮಗನೇ,

ಹಿ : ಈ ಊರಲ್ಲಿ ಒಂದು ಗದ್ಲಾಯಿತಮ್ಮಾ!

ಕ : ಎಂಥಾ ಗದ್ಲ ಅದು?

ಹಿ : ಯಾರೋ ಹಿರೇದಂಪ ಚಿಕ್ಕದಂಪ ಸಮುದ್ರದಂಡಿ ಮಹಾರಾಜರಂತೆ!

ಕ : ಈ ಊರ ರಾಜೇನೋ ಕಪ್ಪಕಾಣಿಕಿ ಕೊಡಬೇಕಿತ್ತಂತೆ; ಅವರಿಗೆ ಹೆಡಮುರಿಗಿ ಬಿಗದು ಒಯ್ತುದ್ರು, ನಾನು ಹೋಗಿ ಯುದ್ಧ ಮಾಡಿ ಅವರಿಗೆ ಸೋಲಿಸಿ ಸೆರೆ ಬಿಡ್ಸಿ ಬಂದೆ.

ಹಿ : ಹೌದು.

ಕ : ಅಪ್ಪಾ ಪರಾಕ್ರಮೀ, ಅವರ ಮ್ಯಾಲ್ಯಾಕೆ ಕೈ ಮಾಡಿದಿ? ದೇಶಕ್ಕೆ ದೊಡ್ಡರಾಜ್ರು ಅವರು.

ಹಿ : ಹೌದೇ?

ಕ : ರಾಜನು ತನ್ನ ತಂದೆ ಅಂಬೋದ ತಾಯಿ ಹೇಳ್ಲಿಲ್ಲ ನೋಡ್ರಿ; ಚಂದ್ರಾವತೀ ಮಗ ಸದಾ ಗರಡಿಮನಿ ಹಿಡದಾನs

ಹಿ : ಹೌದು.

ಕ : ನೀಲಾ ನೀಲಂಜಿ ಸಾಲಿ ಓದೋದು ಬಿಟ್ರು – ತಂದಿ ಎಡಕ್ಕ ಬಲಕ್ಕ ಕುಂತ್ಕೊಂಡು ಕಛೇರ್ಯಾಗ ಆದ್ರು.

ಹಿ : ಹೌದೂ.

ಕ : ಆ ಹಿರೇದಂಪ ಚಿಕ್ಕದಂಪ ಸೋತ್ಹೋಗಿದ್ರಲ್ಲ-

|| ಪದ ||

ಅವರ ತಂಗೀ ಕಮಲಾವತೀ….ಹರಯನ್ನ ಮಾದೇವಾ
ಅವರ ತಂಗೀ ಕಮಲಾವತೀ…. ನಮಃ ಶಿವಾಯ
ಅಪ್ಪಾ ಋತುವಾಗಿ ಒಂದು ವರ್ಷ…. ನಮಃ ಶಿವಾಯ
ಆಕೀಗೆ ಲಗ್ನಿಲ್ಲಾ ಮೂರ್ತಿಲ್ಲಾ…. ನಮಃ ಶಿವಾಯ.

ಕ : ಹಿರೇದಂಪ ಚಿಕ್ಕದಂಪ ಇವರಿಗೆ ಒಬ್ಬಾಕೆ ತಂಗಿ; ಕಮಲಾವತಿ ಋತುವಾಗಿ ಒಂದು ವರ್ಷಾಗೇತಿ!

ಹಿ : ಹೌದೂ.

ಕ : ತಮ್ಮಾ ಚಿಕ್ಕದಂಪಾ ನಮಗೆ ಭಯಸ್ತರಾಗಿ ಯಾರೂ ಬರುವಲ್ರಲ್ಲ; ತಂಗಿ ಮದುವಿ ಮಾಡೋದು ಹೆಂಗs/

ಹಿ : ಐಡಿಯಾ!-

ಕ : ಮುವ್ವತ್ತು ಮಣದ ಸಿಡಿ ಐತಿ – ಅಣ್ಣಾ ನಮ್ಮ ಮನಿಯಾಗ; ಉಕ್ಕಿಂದು! ಯಾರು ಎತ್ತುತಾರೋ ಅವರಿಗೆ ನಮ್ಮ ತಂಗಿ ಕೊಟ್ಟು ಲಗ್ನ ಮಾಡ್ತೀವಿ ಅಂತ. ಪತ್ರ ಬರೀ ಬೇಕು ದೇಶದ ರಾಜ್ರುಗಳಿಗೆ.

ಹಿ : ಹೌದೂ, ರಾಜ್ರುಗಳಿಗೆಲ್ಲಾ ಪತ್ರ ಹೋದ್ವು.

ಕ : ಅರಿಖಂಡ, ಕರಿಖಂಡ, ಕಾಶೀಖಂಡ, ಭದ್ರಾವತಿ, ಪೂರ್ವ, ಪಶ್ಚಿಮ, ಉತ್ತರಾ ದಕ್ಷಿಣಾ ಈ ನಾಲ್ಕು ದಿಕ್ಕಿನೊಳಗ ಸುದ್ದಿ ಆತು ಹಿರೇದಂಪ ಚಿಕ್ಕದಂಪರ ತಂಗೀಗೆ ಸ್ವಯಂವರಾ.

ಹಿ : ದೇಶದ ರಾಜ್ರೆಲ್ಲಾ ಆ ಊರಿಗೆ ಬರ್ತಾರೆ.

ಕ : ನೀಲಾ ನೀಲಾಂಜಿಗೂ ಒಂದು ಪತ್ರ ಬರದ್ರು.

ಹಿ : ಹೌದು

ಕ : ಅಣ್ಣ ತಮ್ಮ ಕಣ್ಣಿಲ್ಲದ ತಂದೆಗೆ ಕೇಳ್ತಾರೆ – ಜನಕಾ ನಮ್ಮ ವೈರಿಗಳು ಕಾಗದಾ ಬರದಾರಲ್ಲ!

ಹಿ : ಏನು ಕಾಗದಾ?

ಕ : ಅವರ ತಂಗೀ ಸ್ವಯಂವರಕ್ಕೆ ಬರ್ರೀ ಅಂತ; ಹೋಗ್ತೀವಿ ತಂದೆ ನಾವು.

ಹಿ : ಮಕ್ಕಳಾ, ಆ ಊರಿಗೆ ಹೋಗಬ್ಯಾಡ್ರಿ. ಅವರೇನರ ಮೋಸ ಮಾಡ್ಯಾರು.

ಕ : ನಮಗೇನು ಮೋಸ ಮಾಡ್ತಾರೆ – ಜನಕಾ! ಕಮಲಾವತಿಗೆ ಗೆದ್ದುಕೊಂಡು ಬರ್ತೀವಿ ಅಂದ್ರು – ಇಬ್ಬರೂ.

ಹಿ : ಆಹಾ! ಸ್ವಯಂವರ!

ಕ : ಎರಡು ಕುದ್ರಿ ಮ್ಯಾಲೆ ಕುಂತ್ಗೊಂಡು ಸಿಬ್ಬಂದಿ ಕರಕೊಂಡು ಕಮಲಾವತಿ ಸ್ವಯಂವರಕ್ಕ ಹೊಂಟರು.

ಹಿ : ಹೌದು!

ಕ : ಗರಡಿ ಮನಿಯಾಗ ಇರೋ ಪರಾಕ್ರಮಿ ಮಗ ನೋಡಿದಾ-

ಹಿ : ಯವ್ವಾ ನೀಲಾ ನೀಲಂಜಿ ಎಲ್ಲಿಗೊ ಹೋಗತಾರಲ್ಲ?

ಕ : ಅವರ ಸುದ್ದಿ ನಿನಗ್ಯಾಕ ಮಗನೇ? ಕಮಲಾವತಿ ಸ್ವಯಂವರಕ್ಕ ಹೊರಟಾರ.

ಹಿ : ಹೌದೇ?

ಕ : (ರಾಗವಾಗಿ) ಅವ್ವಾ ನಾನು ಸ್ವಲ್ಪ ಹೋಗಿ ಬರ್ತೀನೀ.

ಹಿ : (ರಾಗವಾಗಿ) ಆಹಾ….

ಕ : ಬ್ಯಾಡ ಮಗನೇ ಬ್ಯಾಡ ಅವರ ಮ್ಯಾಲ ಯುದ್ಧ ಮಾಡಿದ್ದೀ ನೀನು!

ಹಿ : ಅಮ್ಮ ಯುದ್ಧ ಮಾಡಿದ್ರೇನಾಯಿತಮ್ಮಾ, ದೂರ ನಿಂತು ನೋಡಿ ಬರ್ತೀನಮ್ಮಾ ನಾನು.

ಕ : ಹಾಗಾದರೆ ದೂರ ನಿಂತು ನೋಡಿ ಬಾ ಮಗನೇ – ಅಂತ್ಹೇಳಿ ಅಪ್ಪಣೆ ಕೊಟ್ಲು ತಾಯಿ.

ಹಿ : ಹೌದು.

ಕ : ತಾಯಿಗೆ ನಮಸ್ಕಾರ ಮಾಡಿ, ಕೈಯಾಗ ಜಾಲಿ ಟೊಳಪಿ ತೊಗೊಂಡು ಹೊರಟ ಮಗ.

ಹಿ : ಮುಂದೆ ಮುಂದೆ ನೀಲಾ ನೀಲಾಂಜಿ ಹೋಗತಿದ್ರು ಮಾರ್ಗದಲ್ಲಿ ಮಗ ನಡದಾನ- ಅವರ ಹಿಂದ ಹಿಂದ.

ಕ : ವೀರ ಪರಾಕ್ರಮಿ ಕೂಗತಾನ – ಓ ನೀಲಾ ನೀಲಾಂಜಿ ಅವರೇ ನಿಂದ್ರರೀ…..

ಹಿ : ನಿಂದ್ರರೀ, ತಡೀರೀ.

ಕ : ಓ ತಮ್ಮಾ, ಅದವಿ ಸಿಪಾಯಿ ಬಂದ; ನಮ್ಮ ಸೆರೆ ಬಿಡಿಸಿದ್ನಲ್ಲ ಇವ್ನು! ನಮ್ಮ ಹಿಂದೆ ಇವನು ಬಂದ್ರೆ – ನಮಗೆ ಯಾರ ಭಯಾನು ಇರುವುದಿಲ್ಲ. ಬಾ ಅಡಿವಿ ಸಿಪಾಯಿ, ಬಾರಪ್ಪಾ.

ಹಿ : ಎಲ್ಲಿಗೆ ಹೊರಟ್ರೀ ನೀಲಾ ನೀಲಾಂಜಿಯರೇ?

ಕ : ಕಮಲಾವತಿ ಸ್ವಯಂವರಕ್ಕೆ. ಮುವ್ವತ್ತು ಮನ ಸಿಡಿ ನಾವು ಎತ್ತೋದು ನೋಡು; ಆಕೀಗೆ ಲಗ್ನ ಆಗೋದು ನೋಡು.

ಹಿ : ಹೌದು ನೋಡುವಂತೆ ಬಾ;

ಕ : ಮುವ್ವರೂ ಮಾತಾಡ್ಕೊಂತಾ ದಂಡಿಗೆ ಕರ್ಕೊಂಡು ಬೆಳ್ಳಂ ಬೆಳ್ಳಕ್ಕಿ ಪಟ್ಣಕ್ಕ ಬಂದ್ರು.

ಹಿ : ಓಹೋ!

ಕ : ಹಿರೇದಂಪ ಚಿಕ್ಕದಂಪಾ ದೇಶಕs ದೊಡ್ಡ ಅಧಿಪತಿಗಳು!

ಹಿ : ನೋಡಿದ್ರೆಲ್ಲಾ!

ಕ : ಕಮಲಾವತಿ ಸ್ವಯಂವರದ ಅಂಗಳದಾಗ ಇಟ್ಟಿದ್ರು – ಮುವ್ವತ್ತು ಮಣದ ಸಿಡಿ.

ಹಿ : ಮುವ್ವತ್ತು ಮಣದ ಸಿಡಿ ಎತ್ತಿದೋರಿಗೆ ನಮ್ಮ ತಂಗಿ ಲಗ್ನ ಅನ್ನೋದನ್ನ ತಿಳಿದು ಮುವ್ವತ್ತು ಮೂರು ದೇಶದ ರಾಜ್ರು ಬಂದಾರ!

ಕ : ಒಬ್ಬೊಬ್ರೇ ಬಂದು ಸಿಡಿ ಎತ್ತಿ ನೋಡಿದ್ರು; ಒಬ್ಬರ ಕೈಲೂ ಸಿಡಿ ಎತ್ತೋದಾಗ್ವಲ್ದು!

ಹಿ : ಓಹೋ ಮುವ್ವತ್ತು ಮಣದ ಸಿಡಿ ಅದು!

ಕ : ನೀಲಾ ನೀಲಾಂಜಿ ಬಂದು ಎತ್ತಿದ್ರು ಅವರ ಕೈಯಿಂದಲೂ ಸಾಧ್ಯವಾಗಲಿಲ್ಲ;

ಹಿ : ಸಾಧ್ಯವಾಗ್ಲೇ ಇಲ್ಲ!

ಕ : ಹಿರೇದಂಪ ಚಿಕ್ಕದಂಪ ಅಂದ್ರು – ಇನ್ನು ಯಾರಾದ್ರೂ ಎತ್ತಬಹುದು.

ಹಿ : ಅಂತ ಕೂಗಿದ್ರು!

ಕ : ಪರಾಕ್ರಮಿ ಮಗ ಎದ್ದ. ಎದ್ದು ನಿಂತ್ಕೊಂಡು ಎಲೋ ರಾಜಾಧಿರಾಜರೇ ಮುವ್ವತು ಮೂರು ಮಂದಿ ಸಿಡಿ ಎತ್ತಿದ್ರಿ ಒಬ್ರ ಕೈಲೂ ಆಗ್ಲಿಲ್ಲ. ಯದಕ ಬಂದೀರಿ ಈ ರಾಜ ಸಭಾಕ್ಕ ಅಂದ ಮಗ.

ಹಿ : ಹೌದು.

ಕ : ಪರಾಕ್ರಮಿ ಮಗ ತನ್ನ ಡ್ರಸ್ ಬಿಚ್ಚಿಟ್ಟ, ಕುಂಡೀ ಚಣ್ಣ ತೊಟ್ಕೊಂಡು ಹಳದಿ ಮಣ್ಣು ಹಣಿಗೆ ಹಚ್ಕೊಂಡು, ರಣಕೂದ್ಲು ಚಲ್ಲ ಹೊಡದು ಉಟಾಸಿ ತೊಡಿ ಚಪ್ಪರಿಸಬೇಕಾದ್ರೆ

ಹಿ : ಆಹಾ

ಕ : (ರಾಗವಾಗಿ) ಕುಂತ ರಾತ್ರೆಲ್ಲಾ ಮೆಟ್ಟಿ ಬೀಳ್ತಾರೋ….ಆ ರಾಜ್ರೂ….

ಹಿ : ಹೌದೂ!

ಕ : ಮಗ ಬಂದು ನಿಂತ್ಕೊಂಡು ತಾಯಿ ಚಂದ್ರಾವತಿಗೆ-

|| ಪದ ||

ನೆನಸಿ ಹಿಡಿದೆತ್ಯಾನೆ……..ಶಿವಹರ ಮಾದೇವ.
ನೆತ್ತಿ ಮ್ಯಾಲೆ ತೂರ್ಯಾನಯ್ಯ………ಶಿವಹರ ಮಾದೇವ.
ಮುವ್ವತ್ತು ಮಣದ ಸಿಡಿಯಯ್ಯ……..ಶಿವಹರ ಮಾದೇವ.
ಎತ್ತಿ ತೂರಿ ಒಗದಾನಯ್ಯ……….ಶಿವಹರ ಮಾದೇವ.

ಕ : ಎಲ್ಲಾ ರಾಜ್ರು ನೋಡ್ತಾರೆ; ಹಿರೇದಂಪ ಚಿಕ್ಕದಂಪ ನೋಡ್ತಾರೆ – ತಮ್ಮಾ.

ಹಿ : ಏನಣ್ಣಾ?

ಕ : ಯುದ್ಧ ಮಾಡಿ ನಮಗೆ ಸೋಲಿಸಿದಂಥ ವೈರಿ ಬಂದು ಸಿಡಿ ಎತ್ತಿದ್ನಲ್ಲ!

ಹಿ : ತಂಗೀ ಹ್ಯಾಂಗs ಲಗ್ನ ಮಾಡಿಕೊಡ್ಬೇಕು ಇವನ್ಗೆ?

ಕ : ಅಣ್ಣಾ ಇದಕ್ಕೊಂದು ಉಪಾಯ ಮಾಡಿ ಇವನಿಗೆ ಕೊಲ್ಲೋ ರೀತಿ ಹುಡುಕಬೇಕು.

ಹಿ : ಹ್ಯಾಗs

ಕ : ನಮ್ಮ ಪಾತಾಳ ಬಾವಿಯೊಳಗ ಹನ್ನೆರಡು ಮಣದ ಗುಂಡೈತಲ್ಲ; ಬಾವಿಯೊಳುಗ ಇಳುದು ಅದನ್ನ ಎತ್ತಿ ಮೇಲಕ್ಕ

ಹಿ : ನೆಲದ ಮೇಲಕ್ಕ

ಕ : ಒಗದವರಿಗೆ ನಮ್ಮ ತಂಗೀ ಲಗ್ನ ಅಂತ ಹೇಳ್ಬೇಕು.

ಹಿ : ಹೌದು. ಹೇಳ್ಬೇಕು.

ಕ : ಯಾರಿಂದ್ಲೂ ಆಗೋದಿಲ್ಲ, ಬಾವಿಯೊಳಗೆ ಇವನೇ ಇಳಿಯೋದು, ಇಳದ ಮ್ಯಾಲೆ ಇವನ ತಲಿ ಮ್ಯಾಲೆ ದುಂಡಿ ಹಾಕಿ ಕೂಲಿ ಮಾಡ್ಬೇಕು ಅಂದ್ರು-

ಹಿ : ಹಿರೇದಂಪ – ಚಿಕ್ಕದಂಪ!

ಕ : ಪ್ರಜೆಗಳೇ ಮುವ್ವತ್ತು ಮಣದ ಸಿಡಿ ಎತ್ತಬೇಕು, ಇಷ್ಟೇ ಅಲ್ಲ ಬಾವ್ಯಾಗ ಇಳದು ಹನ್ನೆರ್ಡು ಮಣದ ಗುಂಡ ಎತ್ತಿ ಭೂಮಿ ಮೇಲೆ ಒಗದವರಿಗೆ ನಮ್ಮ ತಂಗೀ ಲಗ್ನ.

ಹಿ : ಎಲ್ಲಾ ಕಡೀಗೂ ಟಾಂ ಟಾಂ ಹಾಕ್ತಾರೆ.

ಕ : ಎಲ್ಲಾ ರಾಜ್ರೂ ಬಂದು ಬಾವ್ಯಾಗ ಇಳಿಬೇಕು ಅಂತ್ಹೇಳಿ ನೋಡ್ತಾರೆ, – ಒಬ್ರ ಕೈಲೂ ಆಗ್ವಲ್ದು.

ಹಿ : ಆಹಾ!

ಕ : (ರಾಗವಾಗಿ) ನೀಲಾ ನೀಲಾಂಜಿ ಕೂಡಾ ಇಳೀಬೇಕು ಅಂತಾರೆ – ಆಗ್ವಲ್ದೂ!

ಹಿ : (ರಾಗವಾಗಿ) ಹೌದೈ….

ಕ : (ರಾಗವಾಗಿ) ಬಾವ್ಯಾಗ ನೀರಿಲ್ಲ….ಪಾತಾಳದ ಬಾವೀ….ಮಗ ಪರಾಕ್ರಮಿ ಬಂದು ನೋಡ್ತಾನೆ…..ಬಾವ್ಯಾಗ ಇಳಿಯಾಕ ರೆಡಿಯಾಗ್ತಾನೆ….ಎಲ್ಲಾ ರಾಜರೂ ನೋಡ್ತಾ ಅದಾರೆ….

ಹಿ : ಹೌದೂ! (ರಾಗವಾಗಿ)