ಕ : ಒಂದು ಹರಿವಾಣದಾಗ ಮಹಾರಾಜರಿಗೆ ಒಂದು ಶಲ್ಯ ಮುಂಡಾಸ ತೊಗೊಂಡು ತಂಗಿಗೆ ಒಂದು ಸೀರಿ ಕುಬ್ಸ ತೊಗೊಂಡು-

ಹಿ : ಆಹಾ!

ಕ : (ರಾಗವಾಗಿ) ಭಜಂತ್ರಿಯಿಂದ ಮದುವಿ ಹಂದ್ರಕ್ಕೆ ಬರ್ತಾಳೆ-

ಹಿ : (ರಾಗವಾಗಿ) ಮಹಾರಾಣಿ ಹಿರೇಮಡದಿ ಚಂದ್ರಾವತಿ.

ಕ : ಭಜಂತ್ರಿಯೊಂದಿಗೆ ಬರುಬೇಕಿದ್ರೆ ರೈತರು, ಬ್ಯಾಡ್ರು, ಒಕ್ಕಲಿಗರು, ಶೆಟ್ರು, ಸಾಹುಕಾರ್ರು, ಭೋಗಾರರು, ಸಾಳೇರು, ಮಾಮ್ಲೆದಾರು, ಸುಬೇದಾರು, ಫೌಜುದಾರು, ಹೌಜ್‍ದಾರು ಎಲ್ಲಾ ಬಂದರು – ಮಹಾರಾಣಿ ಹಿಂದೆ.

ಹಿ : ಆಹಾ!

ಕ : ಮಂತ್ರೀ ಏನೋ ಗಲಾಟೆಯಾಗ್ತೈತಲ್ಲಾ? -ರಾಜ ಕೇಳ್ತಾನೆ.

ಹಿ : ಭಜಂತ್ರಿ ಸದ್ದು; ತಾಯಿ, ಚಂದ್ರಾವತಿ ನಮ್ಮ ಅಕ್ಕ ನಿಮಗೆ ನೋಡಾಕ ಬರ್ತಾಳೆ.

ಕ : || ಪದ ||

ಇವತ್ತೊಂದು ದಿನ ಬರಬ್ಯಾಡ ಅನ್ನೈ….
ಹಿಂದಕ ತಿರಿಗಿ ಹೋಗಂತ ಹೇಳಾ….ಹರಯನ್ನ ಮಾದೇವಾ.

ಕ : ಇವತ್ತೊಂದಿನ ಬರಬ್ಯಾಡ ಅನ್ನೋ ಮಂತ್ರೀ.

ಹಿ : ಹೇಳ್ತೀನಿ ಬಿಡ್ರಿ ಮಹಾರಾಜ್ರೆ.

ಕ : ಅಕ್ಕಾ ನಿಂದ್ರಮ್ಮಾ, ನೀನು ಬರ್ಬಾರದಂತೆ, ನಾಳೆ ಬರ್ಬೇಕಂತೆ ನಡೀ-

ಹಿ : ಏನಂದೆ ಮಂತ್ರೀ?

ಕ : ನಾಳೆ ಬರೋಣಂತೆ ತಾಯೀ.

ಹಿ : ಆಹಾ!

ಕ : ಆಹಾ ಕುಲ ಹದಿನೆಂಟು ಜಾತಿ ಊಟಕ್ಕೆ ಬಂದಾಗ ಈ ವ್ಯಾಳ್ಯಾದಲ್ಲಿ ಪಟ್ಟದರಾಣಿ ಬರಬಾರ್ದು ಅಂತೀಯಲ್ಲೋ ಮಂತ್ರೀ!

ಹಿ : ಖರ್ಯಾ, ಮಹಾರಾಜ್ರು ಹೇಳಿದ್ರು.

ಕ : ನಾನ್ಯಾಕ ಬರಬಾರ್ದು ಹಂದ್ರಕ್ಕ? ಅವರು ಇಬ್ರಿಗೆ ಸತಿ-ಪತಿಗೆ ಅಗಲಸ್ಬೇಕು ಅಂತ ಬಂದಿಲ್ಲ. ನೋಡ್ಲಿಕ್ಕಂತ ಬಂದೀನಿ. ಮಂತ್ರೀ!

ನೀನು ಬೇಕಾದ್ದು ಹೇಳು – ಬಿಡೋದಿಲ್ಲ, ನಾನು ಬಂದೇ ಬರ್ತೀನಿ ಅಂತ ಹಟ ಮಾಡಿ ಬಂದ್ಲು ಹಂದ್ರಕ್ಕ.

ಹಿ : ಹೌದು.

ಕ : ರಾಜಾಧಿರಾಜ ನೋಡ್ದ – ಸಾಸ್ವಿಕಟ್ಟಿ ಮ್ಯಾಗ ಕುಂತು; ಓಹೋ ಈಕಿ ಹೇಳಿ ಕಳಿಸಿದ್ರು ಮಾತು ಮೀರಿ ಬಂದ್ಲು!

ಹಿ : ರಗಳೀಗೆ ಬಂದ್ಲು!

ಕ : ಅಂತ ತಕ್ಷ್ಣಕ್ಕೆ ಕೈಯಾಗಿನ ಕಂಕಣ ಬಿಚ್ಚಿಟ್ಟು, ಬಾಸಿಂಗ ತಗದ, ಸಾಸ್ವಿಕಟ್ಟಿ ಇಳುದು, ಚಂದ್ರಾವತಿ ಮಡದಿ ಬಂದು ಹಂದ್ರದಾಗ ನಿಂತ ತಕ್ಷಣಕ್ಕೆ-

|| ಪದ ||

ಎದಿಗೆ ಬಕ್ಕನೆ ಒದ್ದಾನೇ….ಹರಯನ್ನ ಮಾದೇವಾ.
ಎದಕೆ ಬಂದೆ ಅರಜಾತಿ ರಂಡೆ….ಹರಯನ್ನ ಮಾದೇವಾ.
ಮಾತು ಮೀರಿ ಬಂದ್ಯಾ ನೀನು….ಹರಯನ್ನ ಮಾದೇವ.

ಕ : ಎಲೈ, ನನ್ನ ಮಾತು ಮೀರಿ ನೀನು ಈ ಹಂದ್ರಕ್ಕ ಬಂದ್ಯಾ? -ಅಂತ್ಹೇಳಿ, ಒಂದು ಕಳವು ಮಾಡಿದ ಕಳ್ಳಗೆ ಬಡುದ್ಹಾಂಗ ಬಡೀತಾ ಇದ್ದಾನೆ ಹಿರೇ ಮಡದಿಗೆ!

ಹಿ : ಆಹಾ ಹೌದೂ,

ಕ : ಅಂಗಾತ ತಾಯಿ ಬಿದ್ದಾಳೆ. ಕೈಯಾಗಿನ ಹರಿವಾಣ ದಿಕ್ಕಾಪಾಲಾಗಿ ಹೋಗಿ ಬಿದ್ದೈತಿ. (ರಾಗವಾಗಿ) ಹೊಡಿಬ್ಯಾಡ ಪತಿರಾಯ ಕೈಬಿಡ್ರೀ….ಬರ ಬಾರ್ದಾಗಿತ್ತು ಬಂದೀನಿ….ನಿನ್ನ ಮಾತು ಮೀರಿ ಬಂದದ್ದಕ್ಕೆ ಬಹಳ ಅಪರಾಧ ಆಯ್ತು; ಹೋಗ್ತೀನಿ ಕೈಬಿಡ್ರೀ…..

ಹಿ : ಆಹಾ!

ಕ : ಎಷ್ಟು ಬೇಡಿದ್ರೂ ರಾಜ ಬಿಡುವಲ್ಲ ಮಹಂತ ಬಡತ ಬಡಿತಾನ!-

ಹಿ : ಮಹಂತ ಬಡೀತಾನ!

ಕ : ಒಂದು ಪೆಟ್ಟು ತಿಂದಾಳು, ಎರಡು ಪೆಟ್ಟು ತಿಂದಾಳು, ರಾಮಾ ಅಂತ್ಹೇಳಿ ಮೂರ್ಛೆ ಗವಿದು ಬಿದ್ಲು!

ಹಿ : ಆಹಾ!

ಕ : ತಕ್ಷ್ಣಕ್ಕ ನೋಡಿದ ಮಂತ್ರಿ – ಒಡಹುಟ್ಟಿದ ತಮ್ಮ ಆತ!

ಹಿ : ಆಹಾ!

ಕ : (ರಾಗವಾಗಿ) ರಾಜಾ ಹೊಡಿಬ್ಯಾಡ್ರೀ ಮಹಾರಾಣಿ ತಾಯಿ ಸಾಯ್ತಾಳ್ರೀ…. ನಮ್ಮ ಅಕ್ಕನ್ನ ಹೊಡಿಬ್ಯಾಡ್ರಿ ಸಾಕು ಮಾಡ್ರೀ….

ಹಿ : ಏನು ಮಹಾರಾಜಾ ನಿಮ್ಮ ಬುದ್ಧಿಗೆ ಸುಡ್ಲಿ.

ಕ : ತಾಯಿಗೆ ಜನ್ಮವಿಲ್ಲ; ಮೂರ್ಛೆ ಹೋಗಿ ಬಿದ್ಲು!

ಹಿ : ಹೌದು.

ಕ : ಏನಂದ್ಲು ಈ ತಾಯಿ ಅನ್ಬಾರದ್ದು? ಏನಂದ್ಲು ಮಹಾರಾಜ? ಹೇಳ್ಬಾರದ್ದು ಏನ್ಹೇಳಿದ್ಲು? ಮಾಡಿದ ಅಪರಾಧ ಏನು? ಏನೋ ಶುಭಕಾರ್ಯ, ನೋಡ್ಬೇಕಂಬೋ ಅಪೇಕ್ಷೆಯಿಂದ ಬಂದಿರಬಹುದು!

ಹಿ : ಹೌದು.

ಕ : ಅಂಥಾ ತಾಯಿಗೆ ಸುಮ್ಮಸುಮ್ಮನೆ ನೀವು ಬಡುದು ಅನಾಹುತ ಮಾಡಿದ್ರಿ! ಇದೆಂಥಾ ಬುದ್ಧಿ ನಿಮ್ಮದು!

ಹಿ : ಮಂತ್ರೀ ಮಾತು ಕೇಳಿ ಸಿಟ್ಟಿಗೆದ್ದ ರಾಜ.

ಕ : ಏನೆಂದೇ ಮಂತ್ರಿ?

ಹಿ : ಆಹಾ!

ಕ : ಲೋ ಒಡಹುಟ್ಟಿದ ನಿಮ್ಮಕ್ಕನ್ನು ಬೆನ್ನು ಕಟ್ಟುತೀಯಾ? ಎಲೋ, ಎಪ್ಪತ್ತೇಳು ಮಾನ್ಯಕಾರ ಚಾಂಡಾಲರ್ಏ, ಬರ್ರೀ ಈ ಅರಜಾತಿ ಚಂದ್ರಾವತಿಗೆ ಊರ ಹೊರಗೆ ದೂಡ್ರಿ.

ಹಿ : ಹೌದು ಊರೊಳಗs ಇರಬಾರ್ದು ಈ ರಾಣಿ.

ಕ : ಊರ ಹೊರಗೆ ದೂಡ್ರಿ ಅಂದ ತಕ್ಷ್ಣನೇ ಚಾಂಡಾಲ್ರೆಲ್ಲಾ ಬಂದ್ರು, ಮಹಾರಾಣೀನ ಎಬ್ಸಿದ್ರು-ಅಮ್ಮಾ ಎದ್ದೇಳ್ರಿ, ನಡೀರಿ ಊರ ಹೊರಗ. ಮಹಾರಾಜ್ರ ಅಪ್ಪಣೆಯಾಗೇತಿ.

ಹಿ : ಓಹೋ!

ಕ : (ರಾಗವಾಗಿ) ಒಳ್ಳೇದು ಹೋಗಿ ಬರ್ತೀನಿ ಪತೀ….

ಹಿ : (ರಾಗವಾಗಿ) ಆಹಾ….

ಕ : ದುಃಖ ಮಾಡಿಕೊಂತಾ ಇಬ್ರೂ ಅಕ್ಕ ತಮ್ಮ ಊರ ಹೊರಗ ಹೋಗ್ಯಾರ.

ಹಿ : ಹೌದು.

ಕ : ರಾಹಾಧಿರಾಜ ನಿಂತ್ಗೊಂಡು ಊರಿನ ಮಂದಿಗೆಲ್ಲಾ ಊಟಕೊಟ್ಟ. ಮೆರವಣಗೆ ಪ್ರಾರಂಭವಾಯ್ತು. (ರಾಗವಾಗಿ) ಆಂಜನೇಯನ ಗುಡಿಗೆ ಹೋಗಿ ಅರಮನಿಗೆ ಎಲ್ಲರು ಬಂದ್ರೂ-

ಹಿ : ಹೌದೇ….

ಕ : ಮಡದಿ ಸೂರ್ಯಕಾಂತಿ!

ಹಿ : ಏನು ಪತಿರಾಜಾ?

ಕ : ಅಡಿವ್ಯಾಗ ಒಂದು ಉತ್ಪತ್ತಿ ಹಣ್ಣು ಕೊಟ್ಟಿದ್ನೆಲ್ಲಾ – ಅದು ಏನಾತು?

ಹಿ : ನನ್ನ ಉಡಿಯಾಗೇ ಐತಿರೀ ಮಹಾರಾಜ್.

ಕ : ಅದು ಮಕ್ಕಳ ಫಲದ ಹಣ್ಣು. ಅದ್ನ ಸಣ್ಣಾಗಿ ಅರದು ಇಬ್ರೂ ಊಟಮಾಡ್ಬೇಕು ಅಂದ ಚಂದ್ರಸೇಕ.

ಹಿ : ಓಹೋ!

ಕ : ಆವಾಗ ಗುಂಡುಕಲ್ ತೊಗೊಂಡು ಜಜ್ಜಬೇಕಾದ್ರೆ ಉತ್ಪತ್ತಿ ಬೀಜ ಹೊರಾಗ ಬಂತು.

ಹಿ : ಓಹೋ!

ಕ : ಆ ಬೀಜ ಸೂರ್ಯಕಾಂತಿ ಒಗಿಬೇಕಾದ್ರೆ ಎಲ್ಲಿ ಹೋಗಿ ಬಿತ್ತು?

ಹಿ : ಅಕ್ಕಿ ಬಳಕದಾಗ ಬಿತ್ತು ; ಕಣಜದಾಗ ಬಿತ್ತು!

ಕ : ಆ ಮೇಗಳ ತೊಗಟಿ ಸತಿ-ಪತಿ ಊಟ ಮಾಡಿದ್ರು,

ಹಿ : ಹೌದು.

ಕ : ಹನ್ನೆರಡು ವರ್ಷದ ಬಂಜಿ ಈಕಿ, -ಸೂರ್ಯಕಾಂತಿ! ಆ ಉತ್ಪತ್ತಿ ಫಲ ತಿಂದದ್ದಕ್ಕೆ ಆ ಯಮ್ಮನ ಹೋಟ್ಟ್ಯಾಗ ನೋಡ್ರಿ – ಅದೇ ಗರ್ಭಧಾರಿಣಿ!

ಹಿ : ಓಹೋ!

ಕ : ಮುಂಜಾನೆ ರಾಜ ತನ್ನ ಕಛೇರಿಗೆ ಹೋದಾಗ ಸೂರ್ಯಕಾಂತಿ ಜಳಕ ಮಾಡ್ಕೊಂಡು ಏಳು ಅಂತಸ್ತಿನ ಅರಮನಿ ಮ್ಯಾಲೆ ನಿಂತು ನೋಡಿದ್ಲು-

ಹಿ : ಆಹಾ!

ಕ : ಊರ ಹೊರಗ ಬೈಲಾಗ ತಾಯಿ ಚಂದ್ರಾವತಿ ಕುಂತಾಳ – ಹಿರೇಮಡದಿ!

(ರಾಗವಾಗಿ) ಗೌಡೇರಾ ಊರ ಹೊರಗ ಆಯಮ್ಮ ಕಣ್ಣೀರು ತಂದ್ಕೊಂಡು ಕುಂತಾಳೇ…..ಆ ಹಂದ್ರದಹತ್ರ ಬಂದು ಹೊಡಿಸ್ಕೊಂಡಿದ್ಲಲ್ಲಾ ಆಯಮ್ಮ ಯಾರು?

ಹಿ : ಓ ತಾಯಿ ಮಹಾರಾಣಿ ನಿನಗೆ ಗೊತ್ತಿಲ್ಲೇನು?

ಕ : ನಿಮ್ಮ ರಾಜಾಧಿರಾಜ ಚಂದ್ರಶೇಕನ ಪಟ್ಟದ ಮಡದಿಯಮ್ಮಾ-ಆಯಮ್ಮ! ನಿನಗೆ ಲಗ್ನ ಆಗೋ ಸಲುವಾಗಿ ಮಹಾರಾಜ ನಿನಗೆ ಪ್ರೀತಿ ಮಾಡಿ ನಿಮ್ಮ ಅಕ್ಕಗೆ ಜುಟಾಸಿದಾರೆ.

ಹಿ : ಆಹಾ ಆಯಮ್ಮ ನಮ್ಮ ರಾಜರ ಮಡದಿ!

ಕ : ಹಿರೇ ಮಡದಿ ತಾಯೀ!

ಕ : ಅಯ್ಯೋ ರಾಜನ ಬುದ್ಧಿ ಸುಡ್ಲೀ-

ಹಿ : ನನಗೆ ಪ್ರೀತಿ ಮಾಡಿ ಲಗ್ನಾದ ಮಡದಿಗೆ ಜುಟಾಸಿ ಮಾಡಿದ್ನೇ ಈ ಮಾರಾಜ?

ಕ : ಹೌದು!

ಹಿ : ನಮ್ಮಕ್ಕ-ಆಯಮ್ಮ! ಆಕಿಗೆ ನಾನು ಹೊರಗ ಹಾಕಿದ್ನೇ! ಗೌಡೇರುಗಳೇ, ಇದು ಮಹಾಪಾಪವಾಯಿತು.

ಕ : ಅಮ್ಮಾ ತಾಯೀ!

ಕ : ಎರಡು ಸೇರು ಅಕ್ಕಿ, ಬ್ಯಾಳಿ, ಎರಡು ತಪೇಲಿ, ಎರಡು ಸೀರಿ ಕುಬ್ಸ ತೊಗೊಂಡು

|| ಪದ ||

ಅಕ್ಕಗ ಕೊಟ್ಟು ಬರ್ರೇ ತಾಯಿ….ಹರಯನ್ನ ಮಾದೇವ.
ಅಡಿಗಿ ಮಾಡಿ ಊಟ ಮಾಡ್ಲೀ….ಹರಯನ್ನ ಮಾದೇವ.
ಅಕ್ಕಿ ಬ್ಯಾಳಿ ತೊಗೊಂಡಾರ…. ನಮಃ ಶಿವಾಯ.

ಕ : ಅಕ್ಕಿ ಬ್ಯಾಳಿ ಗಂಟು ಕಟ್ಕೊಂಡು ಊರ ಹೊರಗ ಬಂದ್ರು – ಗೌಡೇರು. ಚಮ್ದ್ರಾವತಿ ಕುಂತಿದ್ಲು ಒಂದು ಸಣ್ಣ ಗುಡಿಸಲ್ದಾಗ!

ಹಿ : ರೀ ಮಹಾರಾಣೀ

ಕ : ಆಹಾ ಏನ್ರಮ್ಮ?

ಹಿ : ತಗೊಳಮ್ಮ ನಿಮಗೆ ತಂಗಿ ಅಕ್ಕಿ ಕಳಿಸ್ಯಾಳ; ಈ ಅಕ್ಕಿ ಗಂಟು ತೊಗೊ ತಾಯೀ.

ಕ : ನಮ್ಮ ತಂಗೀಗೆ ಅಂತಃಕರಣ ಬಂತೇನಮ್ಮಾ! ಆಗಲಿ, ಕೊಟ್ಟು ಹೋಗರಿ.

ಹಿ : ಅಂದ್ಲು ; ಗೌಡೇರು ಕೊಟ್ಹೋದ್ರು.

ಕ : ನಮ್ಮ ತಮ್ಮ ಮನಿಗೆ ಹೋಗ್ಯಾನ ಬರ್ಲಿ ಅಂದ್ಕೊಂಡ್ಲು-

ಹಿ : ಎಲ್ಲಾ ಹೇಳೋಣು ಅಂತ್ಹೇಳಿ, ಒಂದು ತಪಾಲಿ ಒಳಗೆ ಅನ್ನಕ್ಕ ಎಸರು ಇಟ್ಲು. ಒಂದು ತಪಾಲಿಗೆ ಸಾರಿಗೆ ಇಟ್ಲು.

ಕ : ಅಕ್ಕಿ ಹಸ ಮಾಡಬೇಕಾರ, ಅದರಲ್ಲಿ ಒಂದು ಉತ್ಪತ್ತಿ ಬೀಜ ಇತ್ತು – ಅದು ಫಲದ ಬೀಜ! ಸೂರ್ಯಕಾಂತಿ ಕಳಿಸಿದ ಅಕ್ಕಿ ಜೊತೆಗೆ ಬಂದೈತಿ! ಅದನ್ನ ನೋಡಿ ತಕ್ಷ್ಣನೇ ಚಂದ್ರಾವತಿ ಹಿಗ್ಗಿದ್ಲು!

ಹಿ : ಏನಿದು ಇದು ಯಾಕ ಇಲ್ಲಿ ಬಂತು? ಕಾರಣ ಏನು?

ಕ : ನಮ್ಮ ತಮ್ಮಗ ತೋರ್ಸೋಣಾಂತ ಸೆರಗಿನ್ಯಾಗ ಕಟ್ಕೊಂಡು ಅಡಿಗಿ ರಡಿ ಮಾಡಿದ್ಲು – ರಾಣಿ.

ಹಿ : ಹೌದೂ ಬುದ್ಧಿವಂತ ಪ್ರಧಾನಿ ಸಂಜಿಗೆ ಅಲ್ಲಿಗೆ ಬಂದ!

ಕ : ತನ್ನ ಒಡಹುಟ್ಟಿದ ತಮ್ಮಗೆ ರಾಣಿ ಏನಂತಾಳೆ?

ಹಿ : ತಮ್ಮಾ.

ಕ : ಏನಕ್ಕಾ?

ಹಿ : ಅಕ್ಕಿಯಲ್ಲಿ ಬೀಜ ಬಂದೈತಿ! ಎದುರುದ್ದು ನೋಡಿದು.

ಕ : ನೋಡೋಣ ತಾ ತಾಯ್,

ಹಿ : ಆಹಾ!

ಕ : ಮಂತ್ರಿ ನೋಡ್ತಾನೆ! ಮಹಾಜ್ಞಾನಿ! (ರಾಗವಾಗಿ) ಯವ್ವಾ ದೇವಲೋಕದ ಉತ್ಪತ್ತಿಹಣ್ಣಿನ ಬೀಜ ಇದೂ.

ಇದು ನಿನ್ನ ಮಕ್ಕಳ ಫಲದ ಹಣ್ಣಿನ ಬೀಜ, ಪರಮಾತ್ಮನ ಮಹಿಮಾ. ಇವತ್ತು ರಾತ್ರಿ ಅಂಬೋದರೊಳಗ ಏನಾಗ್ತೈತಿ ಅನ್ನೋದs ನೋಡ್ಕೊಳ್ಳೇ ತಾಯಿ.

ಹಿ : ಸೆರಗಿನ್ಯಾಗ ಮತ್ತೆ ಅದನ್ನು ಕಟ್ಟಿಕೊಂಡು ಊಟ ಮಾಡಿದ್ಲು ಆ ಯಮ್ಮಾ.

ಕ : ಆರು ತಾಸಿನೊಳಗs ಶಂಕರನ ಕೃಪಾ ಆತು ನೋಡ್ರಿ; ದೇವಲೋಕದಿಂದ ಈ ಧರ್ಮದ ಮಹಾ ಪತಿವ್ರತಾ ಶಿರೋಮಣಿಗೆ ಚಂದ್ರಸೇಕ ಮಹಾ ರಾಜಾಧಿರಾಜ ದೂರಾ ಮಾಡಿದ ಅಂತ್ಹೇಳಿ ನಾನು ಧಿಕ್ಕಾರ ಮಾಡಬಾರ್ದು – ಅಂದ ಪರಮಾತ್ಮ!

ಹಿ : ಹೌದೂ.

ಕ : ಜೋಳಿಗ್ಯಾಗಿನ ವಿಭೂತಿ ತಗದು ಬಯಲು ಗುಡಿಸಲು ಮನೆಯ ಮೇಲೆ ಚೆಲ್ಲಿ ಬಿಟ್ಟ!

ಹಿ : ವಿಭೂತಿ ಬಂದು ಆ ಬಟಾಬಯಲಾಗ ಬಿದ್ದ ತಕ್ಷ್ಣನೇ ಏನಾಗತೈತಿ ಚಂದ್ರಾವತಿಗೆ?

|| ಪದ ||

ಏಳು ಅಂತಸ್ತಿನ ಅರಮನೆಯೋ….ಹರಹರ ಮಾದೇವಾ
ಅರಮನಿ ಹುಟ್ಟಿತೇ….ಹರಹರ ಮಾದೇವಾ
ಮಂತ್ರಿ ಎದ್ದು ನೋಡ್ತಾನೇ ಯವ್ವಾ….ಹರಹರ ಮಾದೇವಾ
ಹ್ಯಾಗೈತಿ ನೋಡ್ತಾಯಿ ಮಹಿಮಾ….ಶಿವಹರ ಮಾದೇವ.

ಕ : ದೇವತಾ ಅರಮನಿ ನೋಡಮ್ಮಾ ಅದು! ಇಂದ್ರಲೋಕ, ಚಂದ್ರಲೋಕ, ಕುಬೇರ ಲೋಕ, ದೇವಲೋಕ ಈ ಮನಿಯೊಳಗೆ ಇಳದ್ಹಂಗ ಐತಿ ತಾಯಿ!

ಹಿ : ಇದು ಬೀಜದ ಮಹಿಮದ ಮನಿ ನೋಡ್ರಿ!

ಕ : ತಮ್ಮಾ ಚಲೋ ಮನಿ; ಪರಮಾತ್ಮ ಕೊಟ್ಟ!

ಹಿ : ಹೌದು!

ಕ : ದೇವತಾ ಧ್ಯಾನದಲ್ಲಿ ಕುಳಿತಂಥಾ ಈ ತಾಯಿ ಈಗ ಅರಮನಿಯಾಗ ಆಗ್ಯಾಳ!

ಹಿ : ಕಛೇರಿಯೊಳಗೆ ಮಂತ್ರಿ ಬಂದು ಹೇಳಿದ-

ಕ : ಮಹಾರಾಜಾ ಸಂಬ್ಳ ಕೊಡ್ಬೇಕು.

ಹಿ : ಓಹೋ.

ಕ : ದಂಡಿಗೆಲ್ಲಾ ಸಂಬ್ಳ ಕೊಟ್ಟು ಲೆಕ್ಕ ಬರ್ದಾ, ಅಲ್ಲಿ ಉಳಿದೋರು ಇಬ್ರೇ, ರಾಜಾ- ಮಂತ್ರಿ.

ಹಿ : ಆಹಾ!

ಕ : ಮಂತ್ರೀ ನಮ್ಮ ವನಾಂತ್ರದ ಕಡಿಗೆ ಹೋಗಿ ಬರೋನು ನಡಿ ಅಂದ ರಾಜ.

ಹಿ : ಹೋಗೋನು ನಡ್ರಿ ಮಹಾರಾಜ್ರೇ.

ಕ : ಕಛೇರಿಗೆ ಬಾಗಲ ಬಂದ ಮಾಡಿ.

ಹಿ : ಹೌದೂ-

ಕ : ರಾಜ ಮುಂದೆ ಮಂತ್ರಿ ಹಿಂದೆ ವನಂತ್ರಕ್ಕ ಹೋಗಿ ವಾಪಾಸು ಬರಬೇಕಾರ ರಾತ್ರಿ ಒಂಬತ್ತು ಗಂಟಿ ಆಗಿತ್ತು ನೋಡ್ರಿ!

ಹಿ : ಹೌದು.

ಕ : ಶಂಕರ ನೋಡಿದಾ-

ಹಿ : ನೋಡಿದ.

ಕ : ಪರಮಾತ್ಮ-ಪಾರ್ವತಿ, ಜೋಡು, ಭೂಮಿ-ಆಕಾಶ ಜೋಡು, ಮರ-ಗಿಡ ಜೋಡು, ತಾಯಿ-ಮಗ ಜೋಡು.

ಹಿ : ಹೌದು.

ಕ : ಜೋಡಿನಲ್ಲಿ ಜೋಡು ಸತಿ-ಪತಿ!

ಹಿ : ಆದ್ರೆ ಈ ಹಿರೇ ಮಡದಿ ಮತ್ತು ರಾಜನ್ನ ಕೂಡಿಸ್ಬೇಕ್ರಿ ಪರಮಾತ್ಮಾ.

ಕ : ಹೌದು ಈಗ ಸತಿ-ಪತಿ ಕಲಿಯ್ಹಾಂಗ ಮಾಡ್ಬೇಕು ಅಂದ ಪರಮಾತ್ಮ.

ಹಿ : ಹೆಂಗs ಮಾಡ್ಬೇಕ್ರಿ?

ಕ : ಆದ್ರೆ ಇದು ನಮ್ಮ ಕಡಿಯಿಂದ ಆಗ್ಲಾರ್ದು, ಒಂದು ಮಳೆರಾಯನ ಕೃಪೆ ಆಗಬೇಕು. ಒಂದು ಕಳಿಸಂದ್ರ ಆತನೇ ಹತ್ತು ಕಳಿಸ್ತಾನೆ-ಮಳೆರಾಯಗೆ ನೀನು ಈ ಕೂಡ್ಲೇ ಮರ್ತ್ಯಕ್ಕೆ ಹೋಗ್ಬೇಕು ಅಂದ ಶಂಕರ.

ಹಿ : ಅಗಲಿ ಪರ್ಮಾತ್ಮಾ ಅಂದ ಮಳಿರಾಯ.

ಕ : ಒಂದು ಅಂಗೈಯಷ್ಟು ಮಾಡಕಟ್ಟಿ ವನಾಂತರದಿಂದ ಮಂತ್ರಿ, ರಾಜಾ ಬರೋ ಕಾಲಕ್ಕೆ ಕತ್ತಲುಗೆಡವಿ, ಕಾರಾಂಧಕಾರ ಬಿದ್ದು ಮಹಂತ ಮಳಿ ಹಾಕ್ಕ್ಯ್ಂಡು ಸುರೀತೈತಿ ಊರಿಗೆ!

ಹಿ : ಓಹೋ!

ಕ : ಮಳೆ ಅಬ್ಬರದಾಗ ವನಾಂತರದೊಲಗ ನಿಂತು ನೋಡ್ತಾನೆ- ಮಂತ್ರಿ! ಊರು ಉದ್ಮಾನ ಕಾಣವಲ್ದು, ಏನು ಮಳಿ ಇದು! ಜಲ್ದೀ ಚಾಟು ನೋಡು ಯಾರ ಮನಿಗಾದ್ರೂ ಹೋಗಿ ನಿಲ್ಲೋನು ಬರ್ರೀ ಅಂತ್ಹೇಳಿ (ರಾಗವಾಗಿ) ಊರ ಹತ್ರಕ್ಕ ಕರ್ಕೊಂಡು ಬಂದ ಮಂತ್ರಿ.

ಹಿ : ಆಹಾ! ಚಂದ್ರಾವತೆಮ್ಮನ ಮನೀ ಬೆಳಕು ಕಾಣಿಸಿತು.

ಕ : ಚಂದ್ರಸೇಕ ನೋಡಿದಾ – “ಏನೋ ಮಂತ್ರೀ, ಇಲ್ಲೆ ಯಾರದೋ ಮನಿ ಐತಿ, ನಡಿ ಒಳಗೆ.

ಹಿ : ಹೌದು ನಡೀರಿ ಒಳಗೆ

ಕ : ಒಳಗೆ ಹೋಗಿ ನೋಡ್ತಾರೆ – ಚಂದ್ರಾವತಿ ಹಿರೇ ಮಡದಿ!

ಹಿ : ಆಹಾ! ಅಲೇಲೇ ಮಂತ್ರೀ….(ರಾಗವಾಗಿ) ಒಳ್ಳೇ ಚಾಟಿಗೆ ಬಂದಿವಲ್ಲಾ!

ಕ : ಹಿರೇ ಮಡದಿಗೆ ನಾನು ಚಂಡಿಗೆ ಕೈಕೊಟ್ಟು ಊರ ಹೊರಗೆ ದೂಡಿಸಿದ್ದೆ!

ಹಿ : ಹೌದು.

ಕ : ಆಕೀ ಮನಿಗೇ ಬಂದೆವಲ್ಲೋ ಈ ರಾತ್ರಿ!

ಹಿ : ಹೌದು ಮಹಾರಾಜಾ ನಮೀಗೆ ಊರು – ಉದಮಾನ ಕಾಣಿಸಲಿಲ್ಲ! ನಮ್ಮ ಚಂದ್ರಾವತೆಮ್ಮನ ಮನಿಗೇ ಬಂದೀವಿ.

ಕ : ರಾಜ ತನ್ನ ಅರಮನಿಗೆ ಬಂದು ಇಳಿದಾಗ ದೇವಲೋಕವೇ ಇಳುದಂಗಾತು-

ಹಿ : ಹಿರೇ ಮಡದಿಗೆ.

ಕ : ತನ್ನ ಮಹಾರಾಜ ತೊಯ್ದುಕೊಂಡು ಬಂದಾನಂತ್ಹೇಳಿ (ರಾಗವಾಗಿ) ಒಳಗೋಗಿ ಚರಿಗಿ ತುಂಬಾ ಬಿಸ್ನೀರು ತಂದು ಗಂಡನ ಪಾದಕ ಹಾಕಿ ಪಾದ ತಿಳಿತಾಳಾ…ತಾಯೀ

ಹಿ : (ರಾಗವಾಗಿ) ಹೌದೇ….

ಕ : ಬರ್ರೀ ಮಹಾರಾಜ ಏನೂ ಇಲ್ಲ ಬರ್ರೀ, ಮಹಂತ ಬಡತಾಬಡದು ಕಳಿಸಿದ್ರೂ ನನಗೆ ಸಿಟ್ಟಿಲ್ಲ ಪತೀ.

ಹಿ : ಹೌದು.

ಕ : ಪತಿಯೇ ಒಂದು ಪರಮಾತ್ಮ! ಬರ್ರಿ ಅಂತ್ಹೇಳಿ ಒಳಗೆ ಕರ್ಕೊಂಡ್ಹೋಗಿ ರಾಜಗ ಸ್ನಾನ ಮಾಡಿಸಿ ಮಂಚದ ಮೇಲೆ ಕೂಡ್ರಿಸಿ ಉಡುಗೊರೆ ಕೊಟ್ಲು.

ಹಿ : ಮಂತ್ರೀನು ಜಳಕ ಮಾಡ್ಕೊಂಡ ರಾಜನ ಜತಿಗೆ ಊಟ ಉಪಚಾರ ಮುಗಿಸ್ಕೊಂಡ ವ್ಯಾಳ್ಯಾದಲ್ಲಿ ಚಂದ್ರಸೇಕ ಅಂತಾನೆ-

ಕ : ಮಂತ್ರೀ

ಹಿ : ಏನು ಮಹಾರಾಜ್ರೇ?

ಕ : ಮನೀಗೆ ನಡೀ ನೀನು.

ಹಿ : ಮಂತ್ರಿ ಹೊರಗಡೆ ಹೋದ.

ಕ : ಏನೇ ಮಡದೀ-

ಹಿ : ಏನ್ರೀ ರಾಜಾ?

ಕ : ಚಂಡಿಗೆ ಕೈಕೊಟ್ಟು ಊರ ಹೊರ್ಗೆ ಓಡಿಸಿದ್ದೆನಲ್ಲಾ ನಿನಗೆ – ಧಿಕ್ಕಾರ ಮಾಡಿ

ಹಿ : ಹೌದೂ.

ಕ : ಈ ಮನಿ ಹ್ಯಾಂಗ ಕಟ್ಟಿಸಿದ್ದಿ ನೀನು?

ಹಿ : ನಾನು ಕಟ್ಟಿಸ್ಲಿಲ್ಲ ಮಹಾರಾಜ, ಪತಿದೇವ, ಒಂದು ಉತ್ತತ್ತಿ ಫಲದಿಂದಾಗೈತಿ ಈ ಮನಿ.

ಕ : ಉತ್ತತ್ತಿ ಬೀಜ ಯಾವುದು – ಮಡದೀ ತೊಗೊಂಬಾ.

ಹಿ : ಸೆರಗಿನಾಗ ಇದ್ದದ್ದು ಬೀಜ ತೆಗೆದು ರಾಜನ ಕೈಯಾಗ ಕೊಟ್ಲು.

ಕ : ಓಹೋ ಪರಮಾತ್ಮ ಕೊಟ್ಟಿದ್ದಂಥಾ ಉತ್ತತ್ತಿ ಒಳಗಿನ ಬೀಜ ಇದು! ನಿನಗೆ ಹ್ಯಾಂಗ ಬಂತು?

ಹಿ : ನಮ್ಮ ತಂಗಿ ಅಕ್ಕಿ ಕಳಿಸಿದ್ಲು, ಆ ಅಕ್ಕಿ ಸಂಗಾಟ ಬಂತು!

ಕ : ಆಹಾ ಪತಿವ್ರತಾ ಚಂದ್ರಾ! ಇದು ಕಳಿಯೋ ಬೀಜ ಅಲ್ಲ; ನಾವಿಬ್ರೂ ಊಟ ಮಾಡಾನು ಅಂದ ರಾಜ.

ಹಿ : ಆಹಾ!

ಕ : ಸಣ್ಣಾಗಿ ಆ ಬೀಜ ಅರದು ಎರಡು ಬಟ್ಲಾಗ ರಸಮಾಡಿ ಇಬ್ರೂ ಸೇವಿಸಿದ್ರು.

ಹಿ : ಹೌದು!

ಕ : ಆಯಮ್ಮಾ ಹನ್ನೆರಡು ವರ್ಷದ ಬಂಜಿ ನೋಡ್ರಿ! ಆಕಿ ಹೊಟ್ಟಿಗೆ ಅದೇ ಗರ್ಭ ನಿಂತು ಬಿಟ್ಟಿತು.

ಹಿ : ಆಹಾ!

ಕ : ಮೊದಲ್ನೆ ಗರ್ಭ ಸೂರ್ಯಕಾಂತೀದು – ಒಂದು ದಿವ್ಸ ಮುಂದೆ; ಚಂದ್ರಾವತೆಮ್ಮನ ಗರ್ಭ ಒಂದು ದಿವ್ಸ ಹಿಂದೆ.

ಹಿ : ಓಹೋ!

ಕ : ಒಂದೇ ಹಣ್ಣಿನಾಗ ಪರಮಾತ್ನನ ಮಹಿಮಾದಿಂದ ಇಬ್ಬರು ಗರ್ಭದ ಸ್ತ್ರೀಯರು!

ಹಿ : ಹೌದೂ.

ಕ : ಮಹಾರಾಜ ಚಿಕ್ಕ ಮಡದಿ ಸೂರ್ಯಕಾಂತಿ ಮನಿಗೆ ಹೋದ-

|| ಪದ ||

ತಾಯ್ನೋರ ಗರ್ಭ ಬೆಳೀತಾವಯ್ಯ….ಹರಯನ್ನ ಮಾದೇವ
ಒಂದಾ ತಿಂಗಳಾ ಎರಡೇ ತಿಂಗಳೇ….ಹರಯನ್ನ ಮಾದೇವ
ಎರಡು ಮೂರು ತಿಂಗಳು ಹೋಗಾವೆ….ಶಿವಹರ ಮಾದೇವ

ಕ : (ರಾಗವಾಗಿ) ಒಂದು ತಿಂಗಳು ಎರಡು ತಿಂಗಳು ಗರ್ಭ ಬೆಳೀತಾವೆ.

ಹಿ : (ರಾಗವಾಗಿ) ಹೌದೇ…

ಕ : ದಿನಕ್ಕೆ ದಿನ ದಿವಸಕ್ಕ ದಿವಸ ಇಬ್ರೂ ಗರ್ಭದ ಸ್ತ್ರೀಯರಿಗೆ ಒಂಬತ್ತು ತಿಂಗಳು ಒಂಬತ್ತು ದಿವಸ ಆದವು.

ಹಿ : ಸೂರ್ಯಕಾಂತಿ ಚಿಕ್ಕ ಮಡದಿಗೆ ಬ್ಯಾನಿ ತಗಲಿದ್ವು.

ಕ : ಗೌಡೇರು ಹೋಗಿ ಇಬ್ಬರು ಸೂಲಗಿತ್ತೇರ್ನ ಕರ್ಕೊಂಡು ಬಂದ್ರು.

ಹಿ : ರಾಣಿಗೆ ದೊಡ್ಡ ಬ್ಯಾನಿ ಹತ್ಯಾವೇ….

|| ಪದ ||

ತಡಿಯಲಾರೆ ಬ್ಯಾನಿಗಳನೂ….
ನಡುವಿನ ಶೂಲೆಗಳೈ….ಹರಯನ್ನ ಮಾದೇವ
ಜಾವ ಜಾವದ ಬ್ಯಾನಿ ಭರ್ಚಿಲೆ ಇರದಂಗೈ….ಹರಯನ್ನ ಮಾದೇವ.
ನಾನು ಯಾರೀಗೆ ಹೇಳಲವ್ವ….ಬ್ಯಾನಿಗಳೈ
ತಾಸು ತಾಸೀನ ಬ್ಯಾನಿ ತಾಳಿಲೆ ಕಟುದ್ಹಂಗ
ನಾನು ಯಾರಿಗೆ ಹೇಳಲವ್ವಾ ಬ್ಯಾನಿಗಳೈ
ಕಣ್ಣ ತೆರಿಯೋ ನನ್ನ ಬಾಳಾ….

ಕ : ಸೂರ್ಯಕಾಂತಿ ಜನನ ಆತು! ಅವಳಿ ಜವಳಿ ಇಬ್ರು!

ಹಿ : ಓಹೋ ಗಂಡು ಮಕ್ಕಳಿಗೆ ಜನನ ಆದ್ಲು!

ಕ : ಚಂದ್ರಸೇಕ ಮಹಾರಾಜ ಆ ಟೈಮಿನಾಗ ಕಛೇರಿಯೊಳಗ ಕುಂತಿದ್ದ ನೋಡ್ರಿ, ಮಕ್ಕಳು ಹುಟ್ಟಿದ ಸುದ್ದಿ ಕಿವಿಗೆ ಬಿದ್ದಕೂಡ್ಲೆ-

ಹಿ : ಪರಮಾತ್ಮನ ಮಾತು ಮೀರಿ ಇವನು ವಸ್ತಿಯಾಗಿದ್ನಲ್ಲಾ-

ಕ : || ಪದ ||

ರಾಜಾನ ಕಣ್ಣೇ ಹೋಗ್ಯಾವ….ಹರಹರ ಮಾದೇವ
ರಾಜನ ಎರಡು ಕಣ್ಣು ಹೋದವಾ….ಹರಹರ ಮಹಾದೇವ
ರಾಜ ಜಕ್ಕನ ಜರುದಾನ….ಹರಯನ್ನ ಮಾದೇವ
ಇದೋ ಏನೋ ನನ್ನ ಮಂತ್ರೀ….ಹರಯನ್ನ ಮಾದೇವ
ನನ್ನ ಕಣ್ಣೇ ಹೋದ್ವಲ್ಲೋ….ಶಿವಹರ ಮಾದೇವ.

ಕ : ಕಣ್ಣು ಹೋದ ತಕ್ಷ್ಣಕ್ಕೆ ಹಣಿ ಹಣಿ ಬಡ್ಕೊಂಡು ಚಿಂತಿ ಮಾಡ್ತಾ ಇದ್ದಾನೆ ರಾಜ!

ಹಿ : ಹೌದು.

ಕ : ಮಂತ್ರೀ, ಒಮ್ಮಿಗೆಲೆ ಕಣ್ಣು ಹೋಗಲಿಕ್ಕೆ ಕಾರಣ?

ಹಿ : ಶಾಪ!

ಕ : ಹೌದು, ಶಾಪ! ಪರಮಾತ್ಮ! ಮಕ್ಕಳ ಫಲದ ಹಣ್ಣು ಇಟ್ಟುಗೊಂಡು ದಾರೀವಳಿಗೆ ಎಲ್ಲೀ ಕುಂದ್ರಬಾರ್ದು ಅಂತ ಹೇಳಿದ್ದಿ – ನೀನು! ಈ ನಿನ್ನ ಮಾತು ಮೀರಿ ಸೂರ್ಯಕಾಂತಿಗೆ ಕರಕೊಂಡು ಸರೋವರದ ಹತ್ತಿರದಲ್ಲಿ ವಸ್ತಿಯಾಗಿ ಬಂದೆ, ಇವತ್ತು ನಿನ್ನ ಶಾಪದಿಂದ ನನ್ನ ಕಣ್ಣು ಹೋದ್ವು, ಶಂಕರಾ! ಶಂಕರಾ ಕುರುಡನ್ನ ಮಾಡಿಟ್ಯಾ ಕಛೇರಿ ಒಳಗೆ -ನನ್ನ (ರಾಗವಾಗಿ) ಮಂತ್ರೀ ಕಣ್ಣು ಹೋಗಿ ಕುರುಡಾದೆನೈ…..ಇನ್ನು ಕಛೇರಿ ಮಾಡೋರು ಯಾರು?