|| ಪದ ||

ಜಗನ್ಮಾಯೀ ಜಯತು ಜಗದಂಬಾ ಆಯಿಮಾ
ಜಗನ್ಮಾಯೀ ಜಯತು ಜಗದಂಬಾ ಪಾಹಿಮಾಂ
ಅಜಹರಿ ಪ್ರೀತೆ ಸುಗುಣ ಪ್ರಖ್ಯಾತೇ
ನಿಗಮಾತೀತೆ ನೀರಜಾಕ್ಷಿ ನಿರಂಜನ ದೇವಿ
ಜಗನ್ಮಾಯೀ ಜಯತು ಜಗದಂಬಾ ಪಾಹಿಮಾಂ
ಚಲ್ವ ಸುಗಾತ್ರೆ ಬಲ್ಲಿದ ಯಾತ್ರೆ
ಅಲ್ಮಾ ಶ್ರ್ರೀಗುರು ಗೋವಿಂದ ಲಾಸೇ
ಜಗನ್ಮಾಯೀ ಜಯತು ಜಗದಂಬಾ ಪಾಹಿಮಾಂ
ಶಿಶುನಾಳವಾಸ ದೋಷ ವಿನಾಶ
ಅಲ್ಮಾ ಶ್ರೀಗುರು ಗೋವಿಂದ ಲಾಸೇ
ಜಗನ್ಮಾಯೀ ಜಯತು ಜಗದಂಬಾ ಆಯಿಮಾ

ಕತೆಗಾರ : ಏನ್ರಿ.

ಹಿಮ್ಮೇಳಿಗ : ಆಹಾ!

ಕ : ಈ ಮಧ್ಯಲೋಕದಲ್ಲಿ ಚಿತ್ರಾವತಿ ಪಟ್ಣದಲ್ಲಿ ಚಿತ್ರೋಸೇನ್ ಮಹಾರಾಜ್-, ರಾಜಪಟ್ಟಾ ಆಳ್ತಾ ಇದ್ದಾನೆ.

ಹಿ : ಆಳ್ತಾನ್ರಿ ಆ ಮಾರಾಜ್.

ಕ : ಚಿತ್ರೋಸೇನ್ ರಾಜಗೆ ಮಹಾಬುದ್ಧಿವಂತ ಮಂತ್ರಿ.

ಹಿ : ಹೌದು.

ಕ : ರಾಜ ಒಳ್ಳೇ ಧರ್ಮಿಷ್ಠ, ಒಳ್ಳೇ ಪುಣ್ಯಾತ್ಮ.

ಹಿ : ರಾಜನ ಧರ್ಮಯಂಥಾದ್ದು-

ಕ : ಕೆರೆ ಬಾವಿಗಳನ್ನು ಕಟ್ಟಿಸ್ಬೇಕು. ಬಡವರನ ಕರಸ್ಬೇಕುಮ್ ಧರ್ಮದ ಲಗ್ನದ ಮೂರ್ತ ಮಾಡ್ಬೇಕು (ರಾಗವಾಗಿ) ತಡಿತಪ್ಪಡಿ, ಜೋಗಿ – ಜಂಗಮರು, ಹಕೀಮ ಫಕೀರರು ಸನ್ಯಾಸಿ ಬಾವಾಜಿಗಳು ಬಂದು ರಾಜನ ಮುಂದೆ ನಿಂತ್ಕೊಂಡು ದಯಾ ಅಂತ ಬೇಡಿದ್ರೆ ರಾಜ ಏನು ಧರ್ಮ ಕೊಡ್ತಾನ್ರೀ?

ಹಿ : ಏನ ಧರ್ಮ ಕೊಡ್ತಾನ್ರಿ ಮಹಾರಾಜಾ?

ಕ : (ರಾಗವಾಗಿ) ರಾಗಿದಾನ, ಅನ್ನದಾನ, ವಸ್ತ್ರದಾನ, ಗೋಪಿದಾನ, ಚಿನ್ನದಾನ, ವರದಾನ, ಇರುವೆಗೂ ಸಕ್ರಿ ಹಂಚಬೇಕು; ಪಕ್ಷಿಗಳಿಗೆ ಅನ್ನ ಹಾಕ್ಬೇಕು.

ಹಿ : ಹೌದೂ.

ಕ : ನೀರಿಲ್ಲದ ಜಾಗದಲ್ಲಿ ನೀರಿನ ಅರವಂಟಿಗಿ ಇಡಬೇಕು; ಅನ್ನಛತ್ರ ಕಟ್ಟಿಸ್ಬೇಕು- ಇದು ರಾಜನ ಪದ್ಧತಿ. ಇಂಥ ಪುಣ್ಯಮಾಡು+ವಂಥ ರಾಜಗೆ ಏಳು ಮಂದಿ ಮಡದಿಯರು.

ಹಿ : ಓಹೋ ಏನು ಮಂದಿ ಮಡದಿಯರು!

ಕ : ಏಳುಮಂದಿ ಮಡದಿಯರೆಂದರೆ. ಅತನಾವತಿ, ಮುತನಾವತಿ, ರತನಾವತಿ, ಪೂಲಾವತಿ, ಸಯಾವತಿ, ಜಯಾವತಿ, ಚಿಕ್ಕಮಡದಿ ಪದ್ಮಾವತಿ – ಇವ್ರೆಲ್ಲಾ ಮಹಾ ಪತಿವ್ರತೆಯರು.

ಹಿ : ಆಹಾ!

ಕ : ಏಳು ಮಂದಿ ಮಡದಿಯರ್ನ ತೊಗೊಂಡು ರಾಜತ್ವ ಆಳೋ ಕಾಲದಲ್ಲಿ ಉಗಾದಿ ಪಾಡ್ಯ ಬಂತು.

ಹಿ : ಉಗಾದಿ ಹಬ್ಬ, – ಕರೀಬ್ಯಾಟಿ!

ಕ : ರಾಜ ಮಂತ್ರೀನ ಕರಿಸಿ ಹೇಳ್ತಾನೆ – ಮಂತ್ರೀ

ಹಿ : ನಮಸ್ಕಾರ ಏನ್ರಿ ಮಾರಾಜ್?

ಕ : ಕರೀಬ್ಯಾಟಿ ಆಡೋ ಪದ್ಧತಿ – ನಮ್ಮ ಕ್ಷತ್ರಿ ವಂಶದಲ್ಲಿ;

ಹಿ : ಹೌದು.

ಕ : ನಾವು ಘೋರಾರಣ್ಯದಲ್ಲಿ ಹುಲಿ, ಹೊನ್ನಿಗ, ಹೊಡದು ಬ್ಯಾಟಿ ಆಡೋದಕ ಹೋಗ್ಬೇಕು; ನಮ್ಮ ದಂಡಿಗೆಲ್ಲಾ ತಾಕೀತು ಕೊಟ್ಟು ಬಿಡು.

ಹಿ : ಆಗಲಿ ಮಹಾರಾಜ್!

ಕ : ಕನ್ನಕಾಳಿ, ನಗಾರಿ, ನೌಬತ್ತು, ತಂತು-ವಾದ್ಯ ಚಂದ್ರವಾದ್ಯ, ಭೈರುವಾದ್ಯ ಹನ್ನೆರಡುಸಾವಿರ ವಾಲ್ಮೀಕಿಯರು, ಬೇಡ್ಕಿಜನ ಮಂದಿಯೊಂದಿಗೆ ಮಹಾರಾಜ್ ಬ್ಯಾಟಿಗೆ ಹೊರಡ್ತಾ ಐದಾರೆ; ನಾಳೆ ನೀವೆಲ್ಲ ರಡಿಯಾಗಿ ಬರ್ರೀ ಅಂತ ತಾಕೀತು ಕೊಟ್ಟಾ;

ಹಿ : ಮಂತ್ರಿ ತಾಕೀತು ಕೊಟ್ಟದ್ದು ಕೇಳಿ ಮರುದಿನ-

ಕ : ಭಲ್ಲೇವು, ಭರ್ಚಿ, ಬಾಣಿ, ಬಡಗಿ, ಕತ್ತಿ, ಕಠಾರಿ, ಬಿಲ್ಲುಬಾಣ ತೋಘುಗುಂಡು ಹತಾರುಗಳು ತಯಾರು ಮಾಡಿಕೊಂಡು ಎಲ್ಲಾರು

ಹಿ : ಬಂದ್ರು ಅರಮನಿಗೆ!

ಕ : ಚಿತ್ರೋಸೇನ ಮಹಾರಾಜ್ ಅರಮನಿ ಬಿಡೋ ಕಾಲಕ್ಕೆ – ಬ್ಯಾಟಿ ಡ್ರಸ್ ಹಾಕ್ಕೊಂಡ.

ಹಿ : ಆಹಾ!

ಕ : ಕಾಶೀ ನಡುಕಟ್ಟು ಬಿಗದು, ಕೈಯಾಗ ಚಂದ್ರಾಯುಧ ತೊಗೊಂಡು,

ಹಿ : ಹೌದು! ಹತಾರ ತೊಗೊಂಡ ಚಿತ್ರೋಸೇನ ರಾಜ.

ಕ : ಪಟ್ಟದ ಕುದುರಿಗೆ ತಡಿಬಿಗುದ್ರು; ಕುದ್ರಿ ಬಾಯಾಗ ಲಗಾಮ್‍ಕೊಟ್ರು ; ಮಂತ್ರೀ ಕುದ್ರೀನು ತಯಾರಾಮಾಡಿದ್ರು. ಆ ಮಂತ್ರೀನೂ ರಾಜಾಧಿರಾಜನೂ ಬಂದು ಆ ಕುದಿರಿಮ್ಯಾಲೆ ಕೂತುಗೊಂಡು, ಹಿಂದೆ ಸಿಬ್ಬಂದಿ ಕರ್ಕೊಂಡು ಹೊರ್ಡೋ ಕಾಲಾಕ್ಕೆ ಚಿತ್ರೋಸೇನ ಮಹಾರಾಜನ ಸತಿಯರು,

ಹಿ : ಏಳು ಮಂದಿ ಮಡದಿಯರು.

ಕ : ಮಹಾರಾಜಗೆ ಆರುತಿ ಬೆಳಗುತ್ತ ಇದಾರೆ – ಏಳೂ ಮಂದಿ.

|| ಪದ ||

ಆರುತಿ ಬೆಳಗಾನು ಬಾರೇ ಸಖೀ
ಮೂರುತಿ ತಾಯಿ ಗುರುರಾಜ ಮುಖೀ
ಆರುತಿ ಬೆಳಗಾನು ಬಾರೇ ಸಖೀ
ಮೂರುತಿ ತಾಯಿ ಗುರುರಾಜ ಮುಖೀ

ಒಂದಿಟ್ಟು ಒಳನಿಟ್ಟು ಮಂಗಳವಾಗಲೀ….
ಒಂದಿಟ್ಟು ಒಳನಿಟ್ಟು ಮಂಗಳವಾಗಲೀ….
ಸರ್ಪಭೂಷಣಗೇ ಲೋಕರಕ್ಷಗೈ….
ಆರುತಿ ಬೆಳಗನು ಬಾರೇ ಸಖೀ.
ಮೂರುತಿ ತಾಯಿ, ಗಿರಿರಾಜ ಮುಖೀ

ಮಾನ್ಯಾಭಿ+ಮಾನ್ಯಗೆ ಶಾಂಭವಿ ಶೀಲಗೇ….
ಮಾನ್ಯಾಭಿ+ಮಾನ್ಯಗೆ ಶಾಂಭವಿ ಶೀಲಗೇ
ಸಂಗೀತ ಸುಗಣಾ ಸುಗಣಲೋಲಗೇ….
ದೇಶಕ್ಕೆ ದಿಟನಾದ ವಾಸುಳ್ಳ

ಚಿಗಟೇರಿ ಪೊಡವಿ ಚನಿವೀರಜ್ಜನ ಪಾದವ
ಪೂಜಿಸಿ ಆರುತಿ ಬೆಳಗಾನು ಬಾರೇ |

ಆರುತಿ ಬೆಳಗಾನು ಬಾರೇ ಸಖೀ
ಮೂರುತಿ ತಾಯಿ ಗುರುರಾಯ್ ಮುಖೀ||

ಕ : ಹನ್ನೆರಡುಸಾವಿರ ದಂಡಿಗೆ ಕರ್ಕೊಂಡು – ಸರೋವರದಲ್ಲಿ

|| ಪದ ||

ಬ್ಯಾಟಿಗೆ ನಡುದಾರಯ್ಯಹರಾ ಹರಯನ್ನ ಮಾದೇವ.
ಬ್ಯಾಟಿ ಆಡಾಕ ನಡುದಾರ….ಹರಾ ಹರಯನ್ನ ಮಾದೇವ.
ಸರೋವರದಲ್ಲಿ ಬರುವಾಗ….ಹರಯನ್ನ ಮಾದೇವ.
ಘೋರೇ ಅರಣ್ಯದ ಒಳಗೇ….ಹರಯನ್ನ ಮಾದೇವಾ.

ಕ : ಸರೋವರದಲ್ಲಿ ಬಲಗಡೆಗುಡ್ಡ, ಎಡಗಡೆಗುಡ್ಡ ದಂಡಿಗೆ ಕರ್ಕೊಂಡು ಮಹಾರಾಜ ಬ್ಯಾಟಿ ಆಡ್ತಾ ಇದಾನೆ….

ಹಿ : ಹೌದೂ!

ಕ : ಹುಲಿ, ಹೊನ್ನಿಗಾ, ಸಿಂಹ, ಶಾರ್ದೂಲ, ಕತ್ತಿ, ದುಪ್ಪಿ, ಚಿಗರಿ, ಮೊಲ ಬ್ಯಾಟಿ ಆಡ್ಕೊಂತಾ ಬ್ಯಾಟಿ ಆಡ್ಕೊಂತಾ ಎರಡು ಗಾವುದ ಎಂಟು ಹರ್ದಾರಿ ಹೋಗ್ಬೇಕಾರ, ನೋಡ್ರಿ-ಇವರಿಗೆ ಹೊತ್ತು ಮುಳಿಗಿತು ಅಡಿವ್ಯಾಗ!

ಹಿ : ಕತ್ಲಾತು!

ಕ : ಹೊತ್ತು ಮುಳಿಗಿದಾಗ ಮಹಾರಾಜ ಚಿತ್ರೋಸೇನ ನೋಡಿ – “ಮಂತ್ರೀ”

ಹಿ : ಅಪ್ಪಣೆ ಆಗ್ಲಿ.

ಕ : ಊರಿಗೆ ವಾಪಾಸು ಹೇಗ್ಬೇಕಿತ್ತು ಬ್ಯಾಟಿ ಆಡಿ.

ಹಿ : ಹೋಗಬೇಕಾಗಿತ್ತು.

ಕ : ಇಲ್ಲಿ ಒಂದು ವನಂತರ ಐತಿ ಅಡಿವ್ಯಾಗ – ಕಾಮ್ಮಕೀ ವನಂತರ.

ಹಿ : ಓಹೋ!

ಕ : ಸೂಜಿಮಲ್ಲಿಗೆ, ಜಾಜಿಮಲ್ಲಿಗೆ, ಇರುವಂತಿಗೆ, ಶಾವಂತಿಗೆ, ಚಂಡಮಲ್ಲಿಗೆ, ದುಂಡುಮಲ್ಲಿಗೆ, ದಂಡಪತ್ರಿ, ದ್ರಾಕ್ಷಿ, ದಾಳಂಬಿ,-

ಹಿ : ಆಹಾ!

ಕ : ಹಣ್ಣು ಹಂಪ್ಲ ಇರೋ ಅಂಥಾ ವನಂತರ ಐತಿ; ಇಲ್ಲಿ;….

ಹಿ : ಹೌದು.

ಕ : ಹೊತ್ತು ಮುಣಿಗಿ ಕತ್ತಲಾತು. ಮುಂಜಾನೆ ಊರಿಗೆ ಹೋಗಾನು. ಇಲ್ಲಿ ಡೇರಿ ಹೊಡೀರಿ. ಅಂದ ರಾಜ.

ಹಿ : ಮಹಾರಾಜ್! ಅಗತ್ಯ ಆಗಲಿ – ಅಂದ ಮಂತ್ರಿ.

ಕ : ಅಲ್ಲಿ ಮಹಾರಾಜ್ರ ಡೇರಿ ಹೊಡದುಕೊಟ್ರು.

ಹಿ : ಹೌದು.

ಕ : ಹಣ್ಣುಹಂಪಲು ಊಟ ಮಾಡ್ಕೊಂಡು ರಾಜ ಡೇರಿಯಲ್ಲಿ ನಿದ್ರಿಯಲ್ಲಿ ಮಲ್ಕೊಂಡ ಹನ್ನೆರಡುಸಾವಿರ ಜನ ದಂಡು ಹಣ್ಣು ಹಂಪಲ ಊಟ ಮಾಡಿ ಅವರೂ ಮಲ್ಕೊಂಡ್ರು – ಹತಾರಗಳ ತಲಿಗಿಂಬಿಗೆ ಇಟ್ಕೊಂಡು.

ಹಿ : ಹೌದು ಮಲ್ಕೊಂಡ್ರು.

ಕ : ಚಿತ್ರೋಸೇನ ರಾಜ ಮಲ್ಕೊಂಡು ನಿದ್ರೇ ಮಾಡೋ ಟೈಮಿನಾಗ, ಒಳ್ಳೆ ಸವರಾತ್ರಿ ವ್ಯಾಳ್ಯಾ ನೋಡ್ರಿ!

ಹಿ : ಆಹಾ.

ಕ : ಅಲ್ಲಿಗೆ ಎರಡರ್ದಾರಿ ಮ್ಯಾಗ ಯಾವೂರೈತ್ರಿ?

ಹಿ : ಏಣಾವತಿ ಪಟ್ಣ.

ಕ : ಆ ಊರಿಗೆ ನಾಲ್ಕು ಮಂದಿ ರಾಕ್ಷಸಗಳು ಬಂದು ಸೇರ್ಕೊಂಡಾವೆ!

ಹಿ : ಆಹಾ!

ಕ : ಬ್ರಹ್ಮರಾಕ್ಷಸ, ಅದರ ಹೆಂಡ್ತಿ ಕಮಲಾವತಿ ರಾಕ್ಷಸ, ಅವರಿಬ್ರ ಮಕ್ಕಳು ಎರಡು ಹೆಣ್ಣು ರಾಕ್ಷಸ ಆವೂರಾಗ ಐದಾವೆ!

ಹಿ : ಅಘ್ನಾವತಿ ಹಿರೇಮಗಳು, ಚಿಕ್ಕಮಗಳು ವಿಘ್ನಾವತಿ.

ಕ : ಆ ಅಕ್ಕ-ತಂಗಿ ಒಳ್ಳೇ ಪ್ರಾಯಕ್ಕ ಬಂದಾವು.

ಹಿ : ಆಹಾ!

ಕ : ಅಕ್ಕಾ ಅಘ್ನಾವತಿ-

ಹಿ : ಏನಮ್ಮಾ ತಾಯೀ?

ಕ : ನಮ್ಮ ತಂದೆ ಬ್ರಹ್ಮರಾಕ್ಷಸ, ನಮ್ಮ ತಾಯೀ ಕಮಲಾವತಿ ಮುಪ್ಪಾನ ಮುದುಕ್ರಾದ್ರು ;

ಹಿ : ಹೌದೂ.

ಕ : ಮಾಂಸದಾಹಾರ ಹುಲಿ, ಹೊನ್ನಿಗ ಹಿಡದು ತಿನ್ನೋದು ತಂದಿ-ತಾಯಿಗೆ ಯೋಗ್ಯತೆ ಇಲ್ಲ-

ಹಿ : ಚೈತನ್ಯ ಇಲ್ಲ!

ಕ : ನಾವು ಒಳ್ಳೇ ಪ್ರಾಯಕ್ಕೆ ಬಂದೇವಿ ಅಕ್ಕಾ ;

ಹಿ : ನಾವೇ ಹೋಗಿ ಆಹಾರ ತರಾನವ್ವಾ.

ಕ : ಈಗ ಮಧ್ಯರಾತ್ರಿ ಆಗೇತಿ.

ಹಿ : ಹೌದು!

ಕ : ಇಬ್ರೂ ಅಕ್ಕತಂಗಿ ಮಾತಾಡ್ಕೊಂಡು ಹೊಂಟ್ಲು-ತಾಯಿ-ತಂದೀನ ಏಣಾವತಿ ಪಟ್ಣದ ಅರಮನಿಯಾಗ ಬಿಟ್ವು.

ಹಿ : ಹೌದೂ.

ಕ : ಅಷ್ಟೊತ್ತಿಗೆ ಆ ಊರಾಗಿನ ಮಂದೀ, ಮಕ್ಕಳೂ ಎಲ್ಲಾ ತಿಂದಾವು ನೋಡ್ರಿ!-

ಹಿ : ಈ ರಾಕ್ಷಸಗಳು!

ಕ : ಇಡೀ ಊರ್ನೆ ಹಾಳುಗೆಡವ್ಯಾವೆ!

ಹಿ : ಆಹಾ!

ಕ : (ರಾಗವಾಗಿ) ಎರಡು ಮೈಲು ಬಂದಾವ ಅಡಿವ್ಯಾಗ!…ಹುಲಿ ಹಿಡಿತಾವೆ ತಿಂತಾವೆ; ಹೊನ್ನಿಗ ಹಿಡಿತಾವೆ ತಿಂತಾವೆ!

ಹಿ : ಆಹಾ!

ಕ : ಕಾಡೆಮ್ಮೆ, ಕಾಡ್ಕೋಣ ಹಿಡಿತಾವೆ-ಊಟ ಮಾಡ್ತಾವೆ. ಈ ಪ್ರಕಾರವಾಗಿ ಉಂಡ್ಕೊಂತಾ ಒಂದು ಅರ್ಧದಾರಿ ಬರ್ಬೇಕಾದ್ರೆ ಅಕ್ಕಗೆ ಒಳ್ಳೇ ನೀರಡಿಕೆ ಆಯಿತು.

ಹಿ : ಅಘ್ನಾವತಿ ಅಕ್ಕಗ!

ಕ : ತಂಗೀ ಈಗ ನಮಗೆ ನೀರಡಿಕೆ ಆಯಿತು; ಊರಿಗೆ ವಾಪಾಸು ಹೋಗಾನು ನಡೀ.

ಹಿ : ಯಂಗಮ್ಮಾ ತಾಯಿ ಹೋಗೋದು!

ಕ : ಅಕ್ಕಾ ನಿನ್ನ ಹೊಟ್ಟಿ ತುಂಬೇತಿ ಈಗ – ಹೋಗು ಅಕ್ಕ; ನಿನಿಗೆ ನೀರು ಬೇಕಾದ್ರೆ ಊರಿಗೆ ಹೋಗಮ್ಮ.

ಹಿ : ನೀನು ತಂಗೀ?

ಕ : ಅಕ್ಕಾ ನಂದು ಹೊಟ್ಟಿ ತುಂಬಿಲ್ಲ; ಇನ್ನೂ ಸ್ವಲ್ಪದೂರ ಹೋಗಿ ಬ್ಯಾಟಿ ಆಡಿ ಮಾಂಸ ತಿಂದು-

ಹಿ : ಆಹಾ!

ಕ : ಆಮ್ಯಾಲೆ ಬರ್ತೀನಿ. ನೀನು ನಡೀ – ಅಂದ್ಲು ತಂಗಿ.

ಹಿ : ಓಹೋ!

ಕ : ಒಳ್ಳೇದಮ್ಮಾ ಅಂತ್ಹೇಳಿ, ಅಘ್ನಾವತಿ ಅಕ್ಕ ಎರಡೆಮ್ಮಿ, ಎರಡು ಕಾಡ್ಕೋಣ ಹಿಡುದು ಮಟ್ಟಿ ಕಟ್ಕೊಂಡು ತಲಿಮ್ಯಾಲೆ ಹೊತ್ಕೊಂಡು ಊರಿಗೆ ಬಂತು- ವಾಪಾಸು.

ಹಿ : ಹೌದು!

ಕ : ಅವ್ವಾ ಅಪ್ಪಾ ಮಾಂಸ ತಂದೀನಿ ಊಟ ಮಾಡು ಬರ್ರಿ.

ಹಿ : ಓಹೋ ಮಗಳೇ, ಚಿಕ್ಕ ಮಗಳು ವಿಘ್ನಾವತೀ ಬರ್ಲಿಲ್ಲ?

ಕ : ಇನ್ನೂ ಅರ್ಧಗಂಟಿ ಬ್ಯಾಟಿ ಆಡಿ ಬರ್ತೀನಿ ಅಂತ್ಹೇಳಿದ್ಲು ತಂಗಿ! ನಾನು ಬಂದೆ.

ಹಿ : ಅವು ಮೂರು ಮಾಂಸಾಹಾರ ಊಟ ಮಾಡಿ ಮೂರುಕೊಪ್ಪರಿಗಿ ನೀರ್ಕುಡುದು ಆರಾಮು ಆದಾವು.

ಕ : ಈ ಕಡಿಗೆ ವಿಘ್ನಾವತಿ ಬ್ಯಾಟಿ ಆಡ್ಕೊಂತಾ ಮುಂದೆ ಬರ್ತಿತ್ತು ನೋಡ್ರಿ!

ಹಿ : ಹೌದು!

ಕ: ಕಾಮ್ಮೀಕಿ ವನಾಂತರದಲ್ಲಿ ಚಿತ್ರೋಸೇನ ಮಾರಾಜ ಮತ್ತು ಆತನ ದಂಡು ಮಲ್ಕೊಂಡಾಅ ವಿಘ್ನಾವತಿ ನೋಡಿಬಿಟ್ಲು – ಓಹೋ ಏನಿದು ವಿಚಿತ್ರವಾದ ದಂಡು!

ಹಿ : ಸಮುದ್ರ!

ಕ : ನಮ್ಮಕ್ಕ ಎಂಥಾ ಟೈಮಿನಾಗ ಬಿಳ್ಕೊಟ್ಟು ಹೋಗಿಬಿಟ್ಲು! ನಮ್ಮಿಬ್ರಿಗಾಗಿದ್ರೆ ಅನುಕೂಲಾಗತಿತ್ತು ; ಈ ಮಂದಿಗೆಲ್ಲ ತಿಂದುಬಿಡ್ತಿದ್ವಿ.

ಹಿ : ಹೌದೂ.

ಕ : ನಾನೊಬ್ಬಾಕೆ ಆಗಿಬಿಟ್ಟೆ!

ಹಿ : ಆಹಾ!

ಕ : ಆದ್ರೂ ಪರ್ವಿಲ್ಲಾ ಆಹಾ! ನನ್ನ ಯೌವ್ವನ, ನನ್ನ ರೂಪ, ನನ ಲಾವಣ್ಯ – ನನ್ನ ಕಣ್ಣು ಬಂಡಿಗಾಲಿ, ಮೂಗು ಗುಂಬಿಗೆರಸಿ, ಹಲ್ಲು ಕುಂಟಿಕೂರ್ಗಿದಿಂಡು.

ಹಿ : ಹೌದೂ!

ಕ : ಅಗಸಿಯಂತಾ ಬಾಯಿ – ನನ್ನ ರೂಪ!

ಹಿ : ಆಹಾ!

ಕ : ಈಗ ನಾನು ಋತುಮತಿ ಆಗೀನಿ, ಯೌವ್ವನ ಪ್ರಾಯಕ್ಕೆ ಬಂದೀನಿ; ನನಗೆ ಲಗ್ನ ಇಲ್ಲ ಮೂರ್ತ ಇಲ್ಲ! ಈ ದಂಡಿನೊಳಗ ನನಗ ತಕ್ಕಂಥ ಒಡೆಯ ಇರಬಹುದೇ? ನನಗೆ ತಕ್ಕಂಥ ಮಹಾರಾಜ ಸಿಗಬಹುದೇ?

ಹಿ : ಆಹಾ!

ಕ : ಇದರಾಗ ನನಗೆ ತಕ್ಕಂಥ ರಾಜ ಸಿಕ್ಕ ಅಂದ್ರೆ ಆ ಮರಾಜನ ಹಿಂದೆ ಹೋಗಿ ಮಹಾರಾಣಿಯಾಗಿ ನಾಲ್ಕೊಪ್ಪತ್ತು ಕಾಲ ಕಳೀಬೇಕು;

ಹಿ : ಹೌದು.

ಕ : ನನಗೆ ತಕ್ಕಂಥ ಒಡೆಯ ಸಿಗಲಿಲ್ಲ ಅಂದ್ರೆ ಇವರಿಗೆಲ್ಲಾ ತಿಂದು ಉಳದ ಮಂದೀನೆಲ್ಲಾ ಮಟ್ಟಿ ಕಟ್ಕೊಂಡು ಊರಿಗೆ ಒಯ್ಯಬೇಕು -ಅಂತ ವಿಘ್ನಾವತಿ. ಎರಡು ಗಂಟಿ ಟೈಮಿನಾಗ, ರಾತ್ರಿಯೊಳಗೆ ಬಂದು ನೋಡ್ತೈತಿ, – ಸಿಬ್ಬಂದಿ ಸಿಪಾಯಿ ಮಲ್ಕೊಂಡಿದ್ರು;

ಹಿ : ಹೌದು

ಕ : ಇವರು ನನಗೆ ತಕ್ಕಂಥ ರಾಜ್ರಲ್ಲ. ಇವರು ಸಿಪಾಯಿಗಳು, ಇವರ ಬ್ಯಾಟಿಗಾರರು!

ಹಿ : ಹೌದೂ

ಕ : (ರಾಗವಾಗಿ) ದಂಡನೆಲ್ಲಾ ನೋಡ್ತೈತೇ ಹಿಡಂಬಿ….

ಹಿ : (ರಾಗ) ರಾಕ್ಷಸಿ ಮನಸ್ಸಿಗೆ ಯಾರೂ ಬರವಲ್ರೂ…..

ಕ : ರಾಜನಾ ಡೇರಾಕ ಬಂತು ನೋಡ್ರಿ ಹಿಡಂಬಿ!

ಹಿ : ಆಹಾ!

ಕ : ಡೇರ್ಯಾಗ ಯಾರಿರಬಹುದು, ಈ ದಂಡಿನ ಒಡಿಕಾರ ಇರಬಹುದು ನೋಡಾನು – ಅಂತ್ಹೇಳಿ ಒಳಗೆ ಪರದಿ ದಾಟಿ ಬಂದು ನೋಡ್ತೈತಿ – ಶಾಲು ಹೊದ್ಕೊಂಡು ಮಲ್ಕೊಂಡಾನs ರಾಜ!

ಹಿ : ಚಿತ್ರೋಸೇನ ಮಾರಾಜ!

ಕ : ಓಹೋ, ಇವರ್ಯಾರು? ಅಂತ್ಹೇಳಿ ಪಾದದೆಸಿಯಾಗ ಶಾಲು ಎಳದು ನೋಡ್ತು-

ಹಿ : ಆಹಾ-

ಕ : ಚಿತ್ರೋಸೇನ ಮಹಾರಾಜನ ರೂಪ!-

ಹಿ : ದೇವಕುಮಾರ!

ಕ : ಆಹಾ, ಇಲ್ಲಿ ಮಲಿಗ್ಯಾನ ನನ್ನ ಪತಿ, ಬಾಸಿಂಗ ಜೋಡಿ! ಇವ್ರೇ ನನ್ನ ಮದ್ವೀರಾಜ!

ಹಿ : ಓಹೋ,

ಕ : ಹಿಗ್ಗಿದ್ಲು ಹಿಡಂಬಿ ನನಿಗೆ ಮನಸ್ಕೊಡ್ತಾನೋ, ಕೊಡಾದಿಲ್ಲೋ, ನಿದ್ದಿಕೆಡಸ್ಬಾರ್ದು- ಅಂದ್ಲು, ಒಂದರ್ಥ ಗಂಟಿ ಕುಂತ್ಲು ನೋಡಿದ್ಲು ರಾಜಗೆ – ಎಚ್ಚರವಾಗಲಿಲ್ಲ!

ಹಿ : ರಾಜಗೆ ಎಚ್ಚರಾಗಲಿಲ್ಲ!]

ಕ : ಎಚ್ಚರ ಮಾಡಿ ನೋಡೋನು ಅಂತ್ಹೇಳಿ ರಾಜನ ಕಿರಿಬೆಳ್ಳು ಚಿವಿಟಿಬಿಟ್ತು ಹಿಡಂಬಿ; ಯಾವ ರೂಪ ತಾಳೇತ್ರಿ ಅದು ಆವಾಗ!-

ಹಿ : ಆಹಾ!

ಕ : ಚಂದಾನ ಚಲುವಿ! ರೂಪದಲ್ಲಿ ಸೌಂದರ್ಯವತಿ ಆಗ್ಯಾಳ; ದೇವಲೋಕದ ದೇವಕನ್ಯೆ ರೂಪ ತಾಳ್ಯಾಳ!

ಹಿ : ಓಹೋ!

ಕ : ಕಣ್ಣು ಕವಳಿ ಹಣ್ಣು, ಮೂಗು ಸಂಪಿಗಿ ತೆನಿ, ಹಲ್ಲು ದಾಳಿಂಬ್ರಿ ಬೀಜ, ತುಟಿ ನಾಗರ ಹೆಡಿ, ಹುಬ್ಬು ಕಾಮನಬಿಲ್ಲು!

ಹಿ : ಹೌದು ಹೌದು!

ಕ : ದೇವಲೋಕದ ದೇವತಾ ಕನ್ನೆಯೋ, ತಿಲೋತ್ತಮೆಯೋ, ಊರ್ವಶಿಯೋ ರಂಭೆಯೋ, ರತಿಯೋ, ಸರಸ್ವತಿಯೋ!

ಹಿ : ಓಹೋ!

ಕ : ಅಂಥಾ ರೂಪಿಷ್ಠಳಾಗಿ ರಾಜನ ಪಾದದಡಿಯಲ್ಲಿ ನಿಗಿ ನಿಗಿ ಹೊಳಿತಾ ಇದ್ದಾಳೆ- ಪದ್ಮಜಾತಿ ಹೆಣ್ಣಾಗಿ!

ಹಿ : ಓಹೋ!

ಕ : ದಿಗ್ಗನೆ ರಾಜಗ ಎಚ್ರಾಗಿ ಕುಂತು ಡೇರಾದಾಗ ನೋಡಿದ – ಓಹೋ ಸ್ತ್ರೀಯಳೇ ಯಾರು ನೀನು?

ಹಿ : ಓ ನಾನು ಬರ್ರಿ ವನವಾಸಿಕಳು!

ಕ : ಈಗ ಅಪರಂಪಾರ ರಾತ್ರಿ; ಹೊತ್ತಲ್ಲ ವ್ಯಾಳ್ಯಾ ಅಲ್ಲ! ಊರಲ್ಲ – ಉದ್ಮಾನಲ್ಲ! ಇಲ್ಲಿ ಸರೋವರದಲ್ಲಿ ನಾನು ಬ್ಯಾಟಿಗೆ ಬಂದು ಮಲಗಿಕೊಂಡಾಗ ನೀನು ಒಬ್ಬಾಕೆ ಪರದೇಶಿಯಾಗಿ ಬಂದು ಡೇರಿಯಲ್ಲಿ ನಿಂತೀಯಲ್ಲ!

ಹಿ : ಯಾರು ಸ್ತ್ರೀಯಳೇ ನೀನು?

ಕ : ಆಹಾ ಹೇಳ್ತೀನಿ ಬರ್ರಿ ಮಹಾರಾಜಾ

ಹಿ : (ರಾಗವಾಗಿ) ಹೇಳು

ಕ : (ರಾಗವಾಗಿ) ನಾನು ವನವಾಸಿಕಳೂ…..ನನಗೆ ತಾಯಿ-ತಂದೆ, ಬಂಧು-ಬಳಗಾ ಎಲ್ಲಾ ಇದ್ದೂ ಇಲ್ಲದ್ಹಂಗ ಆಗೇತ್ರೀ..

ಹಿ : (ರಾಗವಾಗಿ) ಹೌದೇ!

ಕ : ಏಣಾವತಿ ಪಟ್ಣದಲ್ಲಿ ಬ್ರಹ್ಮಸೇಕ ನಮ್ಮ ತಂದೆ-ಮಹಾರಾಜ್.

ಹಿ : ಹೌದೂ.

ಕ : ಕಮಲಾವತಿ ನಮ್ಮ ತಾಯಿ;

ಹಿ : ಆಹಾ.

ಕ : ನಮ್ಮ ಅಕ್ಕ ಅಘ್ನಾವತಿ; ಅವರ ತಂಗಿ ನಾನಿ ವಿಘ್ನಾವತಿ.